ಈ ಲೇಖನವನ್ನು ಕಳೆದ
ವರ್ಷವೇ ಬರೆಯಬೇಕಿತ್ತು. ಕಾರಣಾಂತರಗಳಿಂದ ಬರೆದಿರಲಿಲ್ಲ ಅಥವಾ ಮತ್ತೊಮ್ಮೆ ವಿಶ್ಲೇಷಿಸಿ ಬರೆಯೋಣ
ಎಂಬುದು ಇರಬಹುದು. ಮಾರ್ಚ್ ತಿಂಗಳ ಮೂವತ್ತು ಮತ್ತು ಮೂವತ್ತೊಂದರಂದು ಶ್ರೀ. ಪಳ್ಳಿಯೋತ್ ಮಡಪರೆ
ಮುತ್ತಪ್ಪ ದೇವಸ್ಥಾನ ಪೊನ್ನಂಪೇಟೆಯಲ್ಲಿ ನಡೆದ ಶ್ರೀ ಮುತ್ತಪ್ಪ ದೇವರ ಉತ್ಸವದಲ್ಲಿ ಭಾಗಿಯಾಗಿದ್ದೆ.
ಅದರ ಕೆಲವು ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಯತ್ನಿಸಿದ್ದೇನೆ. ಇದು ದೇವರ ಅಥವ ಧರ್ಮದ ಪ್ರಚಾರಕ್ಕಾಗಿಯಲ್ಲ.
ಈ ಲೇಖನವನ್ನು ಮೂರು ಭಾಗವಾಗಿ ನೋಡಬೇಕು, ಮೊದಲನೆಯದು ದೈವದ ನಂಬಿಕೆ, ಎರಡನೆಯದು ಜನರ ಅಥವಾ ಭಕ್ತರ
ನಡುವಳಿಕೆ ಮತ್ತು ಮೂರನೆಯದು ಸಂಘಟನೆ ಹಾಗೂ ವ್ಯವಸ್ಥೆ.
ಪೀಠಿಕೆಗಾಗಿ ಅಥವಾ
ಬೇರೆ ಭಾಗದ ಓದುಗರಿಗಾಗಿ ಒಂದಿಷ್ಟು ಮಾಹಿತಿಯನ್ನು ದೇವಸ್ಥಾನ ಅಥವಾ ದೇವರ ಬಗ್ಗೆ ತಿಳಿಸಲು ಯತ್ನಿಸುತ್ತೇನೆ.
ಇದೆಲ್ಲವೂ ನಂಬಿಕೆ ಮತ್ತು ಆಚರಣೆಯ ಪ್ರಶ್ನೆ, ಇಲ್ಲಿ ವೈಚಾರಿಕತೆ, ವಿಜ್ಞಾನ ಮತ್ತಿತರೆ ಪ್ರಶ್ನೆಗಳ
ಅಗತ್ಯತೆಯಿಲ್ಲ. ಸಂಪ್ರದಾಯಗಳು ಹಾಗೆಯೆ ಅವುಗಳಿಗೆ ಅರ್ಥ ವ್ಯಾಖ್ಯಾನ ಮಾಡುವ ಅಥವ ಸಮರ್ಥನೆ ನೀಡುವುದು
ಬೇಕಿಲ್ಲ. ನನಗೆ ಆರು ವರ್ಷಗಳ ಹಿಂದೆ ಒಂದು ಬೀದಿ ನಾಯಿ ಕಚ್ಚಿತ್ತು. ನಾನು ಇಂಜೆಕ್ಷನ್ ತೆಗೆದುಕೊಂಡೆ.
ಆ ಸಮಯದಲ್ಲಿ ಒಂದು ಇಂಜೆಕ್ಷನ್ ಗೆ ಕೂಡ ಪರದಾಡುವಂತಿತ್ತು. ಏಕೆಂದರೆ, ಜನ್ ಔಷಧಿ ಒಳಗೆ ಈ ಇಂಜೆಕ್ಷನ್
ಕೂಡ ಸೇರಿಸಿರುವುದರಿಂದ ಇಂಜೆಕ್ಷನ್ ಸುಲಭವಾಗಿ ಸಿಗುತ್ತಿರಲಿಲ್ಲ, ಕೆಲವು ಸ್ನೇಹಿತರ ಸಹಾಯದಿಂದ
ಹೆಚ್.ಎಸ್. ಆರ್ ಲೇ ಔಟಿನಿಂದ ಕೂಡ ತರಿಸಿಕೊಂಡು ಲಸಿಕೆ ಹಾಕಿಸಿಕೊಂಡೆ. ಜನರಲ್ ಮೆಡಿಸಿನ್ ಅಡಿಯಲ್ಲಿ
ಬಂದರೆ ಇನ್ನೂರ ಐವತ್ತು ರೂಪಾಯಿ ದಾಟುವಂತಿರಲಿಲ್ಲ, ಔಷಧಿ ಕಂಪನಿಗಳು ಆ ಹಿನ್ನಲೆಯಲ್ಲಿ ಲಸಿಕೆಯನ್ನು
ಮಾರುಕಟ್ಟೆಗೆ ಬಿಡುತ್ತಿರಲಿಲ್ಲ. ರೇಬಿಸ್ ಅತ್ಯಂತ ಭಯಂಕರ ಕಾಯಿಲೆ. ನಾಯಿ ಕಚ್ಚಿದ ಆರು ವಾರದಲ್ಲಿ
ಸಾವನ್ನು ತರುವಂತದ್ದು.
ಲಸಿಕೆ ಹಾಕಿಸಿಕೊಳ್ಳುವ
ಸಮಯದಲ್ಲಿ ನನ್ನ ಸ್ನೇಹಿತ ಸಿನೆಮಾ ನಿರ್ದೇಶಕ ಫಣೀಶ್ ರಾಮನಾಥಪುರ ಅವನಿಗೆ ಈ ವಿಷಯವನ್ನು ತಿಳಿಸಿದೆ.
ಅವನು, “ಮಗಾ ನಾಯಿ ಕಚ್ಚಬಾರದು ಕಣೋ, ರಾಹು ದೋಷ ಬರುತ್ತೆ, ನಮ್ಮ ರಿಲೇಷನ್ ಗೆ ಹೀಗೆ ಆಗಿತ್ತು,
ಬೇಗ ಒಂದು ಪೂಜೆ ಮಾಡಿಸು ಎಂದ”. ನಾನು, ಲೋ, ಬೀದಿ ನಾಯಿ, ಬರುತ್ತಿದ್ದೆ, ಅದು ಕಚ್ಚಿದೆ, ಅದಕ್ಕೆಲ್ಲ
ಪೂಜೆನಾ? ಎಂದೆ. ನೆಗ್ಲೆಕ್ಟ್ ಮಾಡಬೇಡ ಅಂತ, ತಲೆಗೆ ಹುಳು ಬಿಟ್ಟ. ನನಗೋ ಯೋಚನೆ ಶುರುವಾಯಿತು. ಇರಲಿ
ಅಂತಾ ನಮ್ಮ ಮನೆ ಬಳಿಯಲ್ಲಿಯೇ ಇದ್ದ ಶನಿ ದೇವರ ದೇವಸ್ಥಾನಕ್ಕೆ ಹೋದೆ. ಅಲ್ಲಿ ನೋಡಿ ಕೇಳಿ ಆಶ್ಚರ್ಯವಾಯಿತು,
ಹೋಮ ಮಾಡಬೇಕ? ಶಾಂತಿ ನಾ? ದೋಷ ನಿವಾರಣೆ ನಾ? ನನಗೆ ಈ ಹಿಂದೆ ತಿಳಿದಿದ್ದು, ನವಗ್ರಹ ಪೂಜೆ, ನವಗ್ರಹ
ದಾನ, ಶನಿ ದೇವರ ಕಥೆ ಓದಿಸುವುದು, ಇವೆಲ್ಲವೂ ನಮ್ಮ ಮನೆಯಲ್ಲಿ ಮಾಡಿಸುತ್ತಿದ್ದರು. ರಾಹು ಶಾಂತಿ
ಎಂದೆ. ಇಲ್ಲಿ ಬೇಡ, ನೀವು ಅಮ್ಮ ಆಶ್ರಮದ ಹತ್ತಿರ ದುರ್ಗಾ ಪರಮೇಶ್ವರಿ ದೇವಸ್ಥಾನ ಇದೆ, ನನ್ನ ಹೆಸರು
ಹೇಳಿ ಅವರು ಮಾಡಿಸುತ್ತಾರೆ, ಎಂದರು. ನಾನು ನೇರವಾಗಿ, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ
ಹೋದೆ. ಮೊದಲ ಬಾರಿಗೆ ಆ ದೇವಸ್ಥಾನವನ್ನು ನೋಡಿದ್ದು. ಅವರಿಗೆ ವಿವರಿಸಿದೆ, ನನ್ನ ನಕ್ಷತ್ರ, ರಾಶಿ
ಇತ್ಯಾದಿ ಕೇಳಿದರು. ನಂತರ, ನಿಮ್ಮ ನಕ್ಷತ್ರ ಇರುವ ದಿನ ಮಾಡುವುದು ಒಳ್ಳೆಯದು, ಮುಂಜಾನೆ ಐದು ಗಂಟೆಗೆ
ಬರಬೇಕು, ಮಧ್ಯಾಹ್ನ ತನಕ ಆಗುತ್ತದೆ, ಸಾಮಾಗ್ರಿಗಳನ್ನು ನೀವೇ ತರುತ್ತೀರಾ? ನಮ್ಮದು ಸುಮಾರು ಹದಿನೈದು
ಸಾವಿರ ಆಗುತ್ತದೆ, ನಲ್ಲವತ್ತೆಂಟು ದಿವಸಗಳ ಕಾಲ ಬೆಳ್ಳುಳ್ಳಿ ಸಮೇತ ತಿನ್ನದೆ ನಿಷ್ಠೆ ಪಾಲಿಸಬೇಕೆಂದರು.
ಇದೊಳ್ಳೆ ರಾಮಾಯಣವಾಯಿತಲ್ಲ
ಎನಿಸಿತು. ಇದರ ನಡುವೆ ಗೂಗಲ್ ನಲ್ಲಿ ಹುಡುಕಾಡತೊಡಗಿದೆ. ಅಲ್ಲಿ ಏನಿಲ್ಲ? ಬೇಕಿದ್ದು ಬೇಡವಾಗಿದ್ದು
ಎಲ್ಲವೂ ಸಿಕ್ಕಿತು. ರಾಹು ದೋಷ ಪರಿಹಾರಕ್ಕೆ ಏನೆಲ್ಲಾ ಮಾಡಬೇಕು. ರಾಹುವಿನ ಬಗ್ಗೆ ದೊಡ್ಡ ಸಂಶೋಧನೆಯನ್ನೇ
ಮಾಡಿಬಿಟ್ಟೆ. ರಾಹು ಯಾರು? ಅವನಿಗೆ ಯಾವಾಗ ಕೋಪ ಬರುತ್ತದೆ, ಅವನನ್ನು ಶಾಂತಗೊಳಿಸುವುದು ಹೇಗೆ? ಫಣೀಶ
ನನ್ನ ತಲೆಗೆ ಹುಳು ಬಿಟ್ಟಿದ್ದು ದೊಡ್ಡದಾಗಿ ಬೆಳೆಯತೊಡಗಿತು. ಕೆಲವೊಮ್ಮೆ ಕೆಲವು ನಕರಾತ್ಮಕ ಆಲೋಚನೆಗಳು
ಬಂದರೆ, ಮುಗಿದೇ ಹೋಯಿತು, ನಮ್ಮನ್ನು ನೆಮ್ಮದಿಯಾಗಿರಿಸಲು ಬಿಡುವುದಿಲ್ಲ. ಈ ಪೂಜೆ, ಜ್ಯೋತಿಷ್ಯ,
ದೇವರು, ಭಕ್ತಿ, ನಂಬಿಕೆ ಇವೆಲ್ಲವೂ ಹಾಗೆಯೇ. ಅದೇ ರೀತಿ ಅನಾರೋಗ್ಯವೂ ಅಷ್ಟೆ, ಯಾರು ಯಾವ ಆಸ್ಪತ್ರೆ,
ಡಾಕ್ಟರ್ ಹೆಸರು ಹೇಳಿದರೂ ಒಮ್ಮೆ ಹೋಗಿ ಬರೋಣ ಎನಿಸುತ್ತದೆ. ಶುಗರ್, ಬಿಪಿ, ಥೈರಾಯಿಡ್, ತೂಕ
ಇಳಿಸುವುದು, ಇವರೆಲ್ಲರ ಕಥೆಯೂ ಅಷ್ಟೆ. ಏನೆಲ್ಲಾ ತಿನ್ನುವುದು, ಕುಡಿಯುವುದು, ಪಥ್ಯೆ ಎಲ್ಲವನ್ನೂ
ಮಾಡುತ್ತಾರೆ. ನಾನು ಹಾಗೆಯೇ ಆಲೋಚಿಸತೊಡಗಿದೆ ಎನ್ನುವುದಕ್ಕಿಂತ ಚಿಂತಿಸತೊಡಗಿದೆ. ಇದಕ್ಕೆ ಪ್ರಮುಖ
ಕಾರಣ, ಈ ಹಿಂದೆ ಕೂಡ ನಾಯಿ ಕಚ್ಚಿತ್ತು ಆಗ ಹುಡುಗಾಟಿಕೆ, ನಾಯಿ ಕಚ್ಚಿದ ನಂತರ ಕಾಡಿನಲ್ಲಿ ಚಾರಣಕ್ಕೆ
ಹೋಗಿ ಸತ್ತು ಬದುಕಿ ಬಂದಿದ್ದು ನೆನಪಾಯಿತ್ತು. ಅದು ನನ್ನ ಭಯವನ್ನು ಇನ್ನಷ್ಟು ಹೆಚ್ಚಿಸಿತ್ತು.
ಅದೇ ಸಮಯಕ್ಕೆ, ಸ್ನೇಹಿತ
ಮಂಜೇಶನೊಂದಿಗೆ ಮಾತನಾಡುತ್ತ ನನ್ನ ಸಂಕಟವನ್ನು ಹಂಚಿಕೊಂಡೆ. ಮಂಜೇಶನ ಹೆಂಡತಿ ನಿತ್ಯಾ ಕೊಡಗು ಜಿಲ್ಲೆಯ
ಪೊನ್ನಂಪೇಟೆಯವರು. ಅವರು ನನ್ನ ಮಾತನ್ನು ಕೇಳಿಕೊಳ್ಳುತ್ತ, ಅಮ್ಮನ ಜೊತೆ ಮಾತನಾಡಿ ನಂತರ ತಿಳಿಸುತ್ತೇನೆ
ಎಂದರಂತೆ. ನಂತರ ಕರೆ ಮಾಡಿ, ʼಅಣ್ಣ, ಏನೂ ಪೂಜೆ ಬೇಡ ಅಣ್ಣ, ನಮ್ಮ
ಮನೆಯಲ್ಲಿ, ಅಣ್ಣಂದಿರು ಮುತ್ತಪ್ಪನ ಪೂಜೆ ಮಾಡ್ತಾರೆ, ನಮ್ಮಲ್ಲಿ ಕೂಡ ದೇವಸ್ಥಾನ ಇದೆ, ನೀವು ಒಮ್ಮೆ ಶ್ರೀ ಮುತ್ತಪ್ಪನ ದೇವಸ್ಥಾನಕ್ಕೆ ಹೋಗಿ ಬನ್ನಿ
ಸಾಕು, ಕೈ ಮುಗಿದು ಬಂದರೆ ಸಾಕು, ಅಲ್ಲಿಯೇ ಬೆಂಗಳೂರಿನಲ್ಲೂ ಇರಬಹುದು, ಎಂದರು. ಅಯ್ಯೋ ಅಮ್ಮ, ಬೇಡ
ಅಲ್ಲಿಯೇ ಹೇಳು, ಯಾವಾಗ ಹೋಗಬೇಕು ಅಂತಾ, ನಾನು ಹೋಗ್ತೀನಿ, ಎಂದೆ. ನಂತರ ಮಂಜೇಶ್ ನಿತ್ಯಾ ಅವರ ಅಣ್ಣ,
ಸುದೀಶಣ್ಣರವರಿಗೆ ಮಾತಾಡಿ, ನನಗೆ ತಿಳಿಸಿದ, ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ಪಯ್ಯಂಗುತ್ತಿ (ಪೂಜೆ)
ಆ ದಿನಕ್ಕೆ ಈ ಹೆಸರು ನನಗೆ ಅರ್ಥವಾಗಿರಲಿಲ್ಲ. ಪೂಜೆಗೆ ಹೋಗಿ ಬರಬಹುದು, ಎಂದ. ಸುದೀಶಣ್ಣರವರ ನಂಬರ್
ಕೂಡ ಕಳುಹಿಸಿದ.
ನಾನು ಸುದೀಶಣ್ಣರವರಿಗೆ
ಕರೆ ಮಾಡಿದೆ. ಅವರು ಹೇಳಿದರು, ಅಲ್ಲಿಯೇ ಬೆಂಗಳೂರಿನಲ್ಲಿಯೆ ಇದೆ, ಇಲ್ಲಿ ತನಕ ಬರುವುದೇನೂ ಬೇಡ,
ಅಲ್ಲಿಂದಲೇ ನಮಸ್ಕರಿಸಿ, ಒಂದು ಹರಕೆ ಮಾಡಿಕೊಳ್ಳಿ ಎಂದರು. ಅಯ್ಯೋ ಅದೆಲ್ಲಾ ಬೇಡ ನಾನು ಅಲ್ಲಿಗೆ
ಬರುತ್ತೇನೆ ಎಂದೆ, ಸರಿ ಶುಕ್ರವಾರ ಹನ್ನೆರಡು ಗಂಟೆ ಸಮಯಕ್ಕೆ ಬನ್ನಿ ಎಂದರು. ನಾನು ಆತುರಗಾರ ಜೊತೆಗೆ
ಆತಂಕ ಬೇರೆ ಬೆರೆತಿತ್ತು. ಮುಂಜಾನೆ ಕಾವೇರಿ ರೈಲಿನಲ್ಲಿ ಹೊರಟು ಸುಮಾರು ಹತ್ತೂವರೆ ಸಮಯಕ್ಕೆ ಪೊನ್ನೊಂಪೇಟೆ
ಶ್ರೀ ಮುತ್ತಪ್ಪ ದೇವಸ್ಥಾನ ತಲುಪಿದೆ. ಹೋಗಿ ಪರಿಚಯ ಮಾಡಿಕೊಂಡೆ, ಅವರು ದೇವಸ್ಥಾನ ಸ್ವಚ್ಛತೆ ಮತ್ತು
ಪೂಜೆಗೆ ಸಿದ್ಧ ಮಾಡಿಕೊಳ್ಳುತ್ತಿದ್ದರು. ನಿತ್ಯಾ ಅವರ ಅಮ್ಮನನ್ನು ಮಾತನಾಡಿಸಿದೆ. ಟೀ ಕೊಟ್ಟರು,
ಹನ್ನೆರಡುವರೆ ಆಗುತ್ತದೆ ಇಷ್ಟು ಬೇಗ ಏನೂ ಬರಬೇಕಿರಲಿಲ್ಲ ಎಂದರು. ನಂತರ ನನ್ನ ಆತಂಕವನ್ನು ತಿಳಿಸಿದೆ.
ಆಗ ಅವರು ದೇವಸ್ಥಾನ ಮತ್ತು ಶ್ರೀ ಮುತ್ತಪ್ಪನ ಕುರಿತು ತಿಳಿಸಿದರು.
ಶ್ರೀ ಮುತ್ತಪ್ಪನ ಇತಿಹಾಸ/ಚರಿತ್ರೆಯನ್ನು
ಗೂಗಲ್ ನಲ್ಲಿ ಸಿಗುತ್ತದೆ ತಾವು ಅಲ್ಲಿಯೇ ಓದಿಕೊಂಡರೆ ಉತ್ತಮ. ಉತ್ತರ ಕೇರಳ ಅದರಲ್ಲಿಯೂ ಕಣ್ಣೂರು,
ಕೊಡಗಿನಲ್ಲಿ ಬಹಳ ಭಕ್ತಿ ಮತ್ತು ನಂಬಿಕೆಯಿಟ್ಟಿರುವ ದೈವ. ಶಿವನ ಅವತಾರವೆಂಬುದು ನಂಬಿಕೆ. ಶ್ರೀ ಮುತ್ತಪ್ಪನಿಗೆ
ನಾಯಿಗಳೆಂದರೆ ಬಹಳ ಪ್ರೀತಿ. ಈ ಪೊನ್ನಂಪೇಟೆ ದೇವಸ್ಥಾನಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸವಿದೆ.
ಶ್ರೀ ಮುತ್ತಪ್ಪನಿಗೆ ಪ್ರಮುಖವಾಗಿ ನಾಯಿಗಳ ಕುರಿತು ಭಯ ಇರುವವರು, ಸ್ವಪ್ನದಲ್ಲಿ ನಾಯಿಗಳು ಕಂಡು
ಬೆಚ್ಚುವವರು, ನಾಯಿ ಕಚ್ಚಿದ್ದಕ್ಕೆ ಭಯ ಪಟ್ಟವರು, ಹೀಗೆ ಇಂತಹವರು ಬಂದು ಒಂದು ನಮಸ್ಕಾರ ಮಾಡಿ ನಿವಾರಣೆಯನ್ನು
ಬೇಡುತ್ತಾರೆ. ನಾಯಿಗಳ ರೂಪದಲ್ಲಿ ಮಣ್ಣಿನ ರೂಪದ್ದು, ಕೆಲವರು ಕಂಚಿನಲ್ಲಿ ಬೆಳ್ಳಿಯಲ್ಲಿ ಕೂಡ ಪ್ರತಿಮೆಯನ್ನು
ಮಾಡಿಸಿ ದೇವಸ್ಥಾನದಲ್ಲಿ ಇಟ್ಟು ಬೇಡಿಕೊಳ್ಳುತ್ತಾರೆ. ಅಮ್ಮ ಹೇಳಿದರು, ಇದಕ್ಕೆಲ್ಲ ಏನು ಯೋಚನೆ,
ಬೇಡ, ಸಾವರವೂ ಬೇಡ ಲಕ್ಷವೂ ಬೇಡ, ದೇವರಿಗೆ ನಮಸ್ಕಾರ ಮಾಡಿದರೆ ಸಾಕು, ಬೇಡಿಕೊಂಡರೆ ಸಾಕು, ನೀವು
ಬೆಂಗಳೂರಿನಿಂದ ನೆನೆದರೂ ಸಾಕಿತ್ತು. ಈಗ ಅಲ್ಲಿಯೇ ಇದ್ದು ಪೂಜೆಯಲ್ಲಿ ಭಾಗವಹಿಸಿ, ಆಮೇಲೆ ಬನ್ನಿ
ಎಂದರು.
ಅಲ್ಲಿಯೇ ಕುಳಿತು ಏನು
ಮಾಡುವುದೆಂದು, ಫಾರೆಸ್ಟ್ರಿ ಕಾಲೇಜಿಗೆ ಹೋಗಿ ಪ್ರೊ. ಜಡೇಗೌಡ ಮತ್ತು ಇತರರನ್ನು ಭೇಟಿಯಾಗಿ ಬಂದೆ.
ಪ್ರೊ. ಜಡೇಗೌಡ ಮೊದಲ ಸೋಲಿಗ ಆದಿವಾಸಿ ವಿದ್ಯಾರ್ಥಿ. ಅವರು ಮೂಲತಃ ಬಿಳಿಗಿರಿ ರಂಗನ ಬೆಟ್ಟದವರು.
ಎಂಎಸ್ಸಿ, ಪಿ.ಎಚ್.ಡಿ. ಮಾಡಿ ಈಗ ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ.
ಹನ್ನೆರಡು ಗಂಟೆಗೆ ಬಂದು ದೇವಸ್ಥಾನದ ಮುಂದೆ ಕುಳಿತೆ. ಜನರು, ಒಬ್ಬೊಬ್ಬರಾಗಿ ಬರುತ್ತಿದ್ದರು. ಬಂದವರೆಲ್ಲ
ನಮಸ್ಕರಿಸಿ ಒಂದು ಸುತ್ತು ಬಂದು, ಕುಳಿತುಕೊಂಡು ಕೊಡವ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪಕ್ಕದಲ್ಲಿಯೇ
ಇದ್ದ ಒಬ್ಬರು ನನ್ನನ್ನು ವಿಚಾರಿಸಿದರು. ನಾನು ಬೆಂಗಳೂರು ಎಂದೆ. ಭಯಂಕರ ಶಕ್ತಿ ದೇವರು, ನಂಬಿದ್ರೆ
ಕೈ ಬಿಡದಿಲ್ಲ, ಆದ್ರೇ ಹೇಳಿದಂಗೆ ನಡ್ಕೋಬೇಕು. ಒಮ್ಮೆ ಕೇಳಿದ್ರೆ ಸಾಕು, ಎಂದರು. ನೋಡ ನೋಡುತ್ತಿದ್ದೆಯೇ
ಸುದೀಶಣ್ಣ ಕರೆದರು, ಬಂದವರೆಲ್ಲ ಕೆಲವರು ದಕ್ಷಿಣೆಯಿಟ್ಟು ನಮಸ್ಕರಿಸಿ, ಅವರು ನೀಡುತ್ತಿದ್ದ ಅವಲಕ್ಕಿ
ತೆಂಗಿನಕಾಯಿ ಚೂರು ಪಡೆದುಕೊಂಡು ಬಂದು ತಿನ್ನುತ್ತಿದ್ದರು. ನಂತರ ಎಲ್ಲರೂ ಹೊರಟರು. ಸುಮಾರು ಒಂದೂವರೆಯಾಗಿತ್ತು,
ಎಲ್ಲರೂ ಖಾಲಿಯಾದ ಮೇಲೆ ನಾನು ಸುದೀಶಣ್ಣನ ಬಳಿ ಹೋದೆ. ಅಣ್ಣ ನನ್ನದು ಪೂಜೆ ಎಂದೆ.
ಆಯ್ತಲ್ಲ ಎಂದರು. ಬೇಡಿಕೊಂಡ್ರಾ?
ನನಗೆ ಏನೂ ತಿಳಿಯಲಿಲ್ಲ. ನನ್ನ ಕಲ್ಪನೆ, ಅರ್ಚನೆ, ಪೂಜೆ, ಮಂಗಳಾರತಿ, ಸಂಕಲ್ಪ ಇದೆಲ್ಲವೂ ಇತ್ತು.
ಇಲ್ಲಿ ಅದ್ಯಾವುದೂ ಇರಲಿಲ್ಲ. ನಂತರ ಹೇಳಿದರು, ನಮಸ್ಕಾರ ಮಾಡಿ, ಒಳ್ಳೆಯದು ಆಗುತ್ತೆ, ವರೀಸ್ (ಚಿಂತೆ)
ಬೇಡ ಎಂದರು. ಮನೆಗೆ ಹೋಗಿ ಅಮ್ಮ ಕೇಳ್ತಾ ಇದ್ರು. ಮನೆಗೆ ಹೋದೆ, ಊಟ ಮಾಡಿದೆ. ಅಮ್ಮನಿಗೆ ನಮಸ್ಕರಿಸಿ
ಹೊರಟೆ. ಹೊರಡುವಾಗ ಸುದೀಶಣ್ಣರವರ ತಮ್ಮ ದಿನೇಶಣ್ಣ ಬಂದರು. ಹರೀಶಣ್ಣ ಮುತ್ತಪ್ಪನ ಶಕ್ತಿ ಬೇರೆ ತರಹ,
ನೀವು ಏನೂ ಯೋಚನೆ ಮಾಡಬೇಡಿ. ಯಾವ ಪೂಜೆಯೂ ಬೇಡ, ಯಾವ ಹೋಮನೂ ಬೇಡ ದೈವನನ್ನು ನಂಬಿದರೆ ಸಾಕು. ನೀವು
ಏನಾದರೂ ಆಗಬೇಕು ಅಂದ್ರೆ ಅಲ್ಲಿಂದನೇ ಪ್ರಾರ್ಥನೆ ಮಾಡಿದ್ರೆ ಸಾಕು. ಇಲ್ಲಿಯ ತನಕ ಬರೋದು ಬೇಡ. ಅಷ್ಟು
ಕೊಡು ಇಷ್ಟು ಕೊಡು ಅಂತ ಕೇಳೋ ದೇವರಲ್ಲ ಮುತ್ತಪ್ಪ, ನಂಬಿಕೆ ಅಷ್ಟೆ ಮುಖ್ಯ. ಒಂದು ಲೀಟರ್ ಎಣ್ಣೆ
ಇಟ್ಟರೂ ಸಾಕು ಎಂದರು.
ಅಲ್ಲಿಂದ ಶುರವಾದ ಭಕ್ತಿಯ
ಪಯಣ ಇಲ್ಲಿಯ ತನಕ ನಡೆಯುತ್ತಿದೆ. ಪರಸಿನಿಕಡವು ಎಂಬದು ಶ್ರೀ ಮುತ್ತಪ್ಪ ದೇವರ ಮೂಲ ಸ್ಥಾನ ಅಲ್ಲಿಯೂ
ಅಷ್ಟೆ, ಯಾವ ಅರ್ಚನೆಯಿಲ್ಲ, ಸಂಕಲ್ಪಯಿಲ್ಲ, ಹೋಮ ಹವನವಿಲ್ಲ. ಬೆಳ್ಳಿಗ್ಗೆ ಮತ್ತು ಸಂಜೆ ವೆಳ್ಳಾಟಂ
ಇರುತ್ತದೆ, ಅಲ್ಲಿಯೂ ಅಷ್ಟೆ ಮುಂಜಾನೆಯಿಂದ ಸಂಜೆಯ ತನಕ ಬೇಯಿಸಿದ ಅಳಸಂದೆ ಕಾಳು ತೆಂಗಿನಕಾಯಿ ಚೂರು
ಹಾಗೂ ಟೀ ಕೊಡುತ್ತಿರುತ್ತಾರೆ. ಮಧ್ಯಾಹ್ನ ಹಾಗೂ ರಾತ್ರಿ ಉತ್ತಮ ಅನ್ನದಾನವಿರುತ್ತದೆ. ರಾತ್ರಿ ತಂಗುವುದಕ್ಕೆ
ಉಚಿತವಾಗಿ ಹೊರಾಂಡದಲ್ಲಿ ವ್ಯವಸ್ಥೆಯಿರುತ್ತದೆ. ಭಕ್ತಿ ಮತ್ತು ನಂಬಿಕೆ ಮಾತ್ರವೇ ಇಲ್ಲಿ ನಡೆಯುವುದು,
ಮೇಲೂ ಕೀಳೆಂಬುದಿಲ್ಲ.
ಶ್ರೀ ಮುತ್ತಪ್ಪ ದೇವರ ಉತ್ಸವ
ಈಗ ಮುಖ್ಯ ವಿಷಯಕ್ಕೆ
ಬರುತ್ತೇನೆ, ಇದು ಪೊನ್ನಂಪೇಟೆಯಲ್ಲಿ ನಡೆಯುವ ಶ್ರೀ ಮುತ್ತಪ್ಪ ದೇವರ ಉತ್ವವದ ಕುರಿತು. ಇದನ್ನು ನನ್ನ
ಅನುಭವದ ಮೇಲೆ ಬರೆಯುತ್ತಿದ್ದೇನೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು ಅಲ್ಲಿನ ವಿಶೇಷತೆ ಜನರ
ಪಾಲ್ಗೊಳ್ಳುವಿಕೆ ಎರಡನೆಯದು ಸಂಘಟನೆ. ಈ ಲೇಖನವನ್ನು ಬರೆಯುವುದಕ್ಕೆ ಮೂಲ ಕಾರಣ, ನಿಮಗೆ ಓದುವಾಗಲೇ
ಬರುತ್ತದೆ ಮತ್ತು ನಾನು ತಿಳಿಸುವ ವಿವರಣೆಯೊಂದಿಗೆ ನಿಮ್ಮ ಊರುಗಳಲ್ಲಿ ಅಥವಾ ನಿಮ್ಮ ಅನುಭವವನ್ನು
ಹೋಲಿಕೆ ಮಾಡಿಕೊಳ್ಳಿ. ನಾನು ಮೊದಲೇ ತಿಳಿಸಿದಂತೆ ಈ ದೇವಸ್ಥಾನಕ್ಕೆ ನಾಲ್ಕು ನೂರು ವರ್ಷಗಳ ಇತಿಹಾಸವಿದೆ.
ಪ್ರತಿ ಶುಕ್ರವಾರ ಒಂದು ಪೂಜೆ ನಡೆಯುತ್ತದೆ. ನೀವು ನಿಮ್ಮೂರಿನಲ್ಲಿ ಅಥವಾ ಬೇರೆಡೆ ನೋಡಿರುವಂತೆ ಅಲ್ಲಿ
ಅರ್ಚಕರು, ಅಭಿಷೇಕ, ಅರ್ಚನೆ ಇತ್ಯಾದಿ ಇರುವುದಿಲ್ಲ. ಹೂವು ಹಣ್ಣು ಕಾಯಿ ಇತರೆ ಕೂಡ ಇರುವುದಿಲ್ಲ.
ಆಸಕ್ತರು ಬಯಸಿದ್ದಲ್ಲಿ ಅವರ ಇಚ್ಛೆಯಂತೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಲೂಬಹುದು. ಕಡ್ಡಾಯವಲ್ಲ.
ಇಲ್ಲಿ ಪ್ರತಿ ವರ್ಷವೂ
ಮೂರು ದಿನಗಳ ಕಾಲ ಶ್ರೀ ಮುತ್ತಪ್ಪ ದೇವರ ಉತ್ಸವ ನಡೆಯುತ್ತದೆ. ಕೊಡಗು ಮತ್ತು ತುಳುನಾಡಿನ ಉತ್ಸವಗಳೇ
ಬೇರೆ ರೀತಿಯವು. ಅವುಗಳನ್ನು ವಿವರಿಸುವುದು ಕಷ್ಟ. ಬಯಲು ಸೀಮೆಯಲ್ಲಿಯಾದರೆ ಉತ್ಸವವೆಂದರೆ ಒಂದು ಉತ್ಸವ
ಮೂರ್ತಿ, ತೇರು (ರಥ), ಪಲ್ಲಕ್ಕಿ ಇತ್ಯಾದಿ ನೆನಪಿಗೆ ಬರುತ್ತವೆ. ಅಲ್ಲಿ ಅದು ಬೇರೆಯದೇ ರೀತಿಯಲ್ಲಿ
ನಡೆಯುತ್ತವೆ. ಅದರ ಕುರಿತು ಬರೆಯುವಷ್ಟು ಜ್ಞಾನವಾಗಲೀ ಪರಿಣತಿಯಾಗಲಿ ನನಗಿಲ್ಲ, ಹಾಗಾಗಿ ಅದರ ಕುರಿತು
ಹೆಚ್ಚಿಗೆ ಹೇಳುವುದಿಲ್ಲ. ಅಲ್ಲಿ ಸಾಕಷ್ಟು ದೇವರುಗಳಿಗೆ ಗುಡಿಗಳಿರುವುದಿಲ್ಲ, ಆದರೆ ಸ್ಥಳ ಅಥವಾ
ಸ್ಥಾನವೆಂದು ಒಂದು ಜಾಗದಲ್ಲಿ ಪೂಜೆ ಸಲ್ಲಿಸುತ್ತಾರೆ. ಮೂರ್ತಿ ಪೂಜೆಯಿರುವುದಿಲ್ಲ ಬದಲಾಗಿ ಅದರ ಸ್ಥಳವೆಂದು
ದೀಪ ಹಚ್ಚುವುದು ವಾಡಿಕೆ.
ಈ ಮೂರು ದಿನಗಳ ಉತ್ಸವದಲ್ಲಿ
ಶ್ರೀ ಮುತ್ತಪ್ಪರವರ ವೆಳ್ಳಾಟಂ, ತಾವುಗಳು ಕಾಂತಾರ ಸಿನೆಮಾ ನೋಡಿದ್ದರೆ ಸ್ವಲ್ಪ ಕಲ್ಪನೆಯಾಗಬಹುದು.
ಶ್ರೀ ಮುತ್ತಪ್ಪರವರ ಜೊತೆಗೆ ಇತರೆ ದೇವರುಗಳ ವೆಳ್ಳಾಟಂ ಮತು ಕೋಲ ಕಟ್ಟುವುದು ಕೂಡ ನಡೆಯುತ್ತದೆ.
ಕೆಲವರು ಹರಕೆ ಹೊತ್ತಿ ದೇವರನ್ನು ಆ ದಿನದಲ್ಲಿ ಕರೆಸುತ್ತಾರೆ. ಶ್ರೀ ಮುತ್ತಪ್ಪ ಜೊತೆಗೆ ತಿರುವಪ್ಪನ್,
ಗುರು ಕಾರಣ, ಕುಟ್ಟಿಚಾತ, ಗುಡಿವಿರನ್, ವಸೂರಿ ಮಾಲ, ಶ್ರೀ ಭಗವತಿ, ಗುಳಿಗ ದೇವರ ವೆಳ್ಳಾಟಂ ಪ್ರಮುಖರಾಗಿರುತ್ತಾರೆ.
ಇದರಲ್ಲಿ ಗಮನಿಸಬೇಕಾಗಿರುವುದು ಕುಟ್ಟಿಚಾತ ದೇವರು, ವಸೂರಿ ಮಾಲ, ಶ್ರೀ ಭಗವತಿ ದೇವರುಗಳ ವೆಳ್ಳಾಟಂ
ನಡೆಯುವಾಗ ಮಕ್ಕಳ ಕಿರುಚಾಟವನ್ನು ಕೇಳುವಂತಿಲ್ಲ. ಆ ದೇವರುಗಳಿಗೆ ಇವರುಗಳು ಕಿರುಚುವುದನ್ನು ಕಂಡರೆ
ಇಷ್ಟವಂತೆ. ಗುರುವಿನ ಕೋಲ ನಡೆದ ನಂತರ ಗುರು ತನಗೆ ಬಂದಿದ್ದ ಕಾಣಿಕೆಯ ದುಡ್ಡಿನ್ನು ಮಕ್ಕಳಿಗೆ ಕೊಡುವುದು
ಮಕ್ಕಳನ್ನು ಕರೆದೊಯ್ದು ಅವರಿಗೆ ಆಟಿಕೆಗಳನ್ನು ಕೊಡಿಸುತ್ತ ಸಂತಸಪಡಿಸುತ್ತಾರೆ. ಆದರೇ, ಗುಳಿಗ ದೇವರನ್ನು
ಅತಿ ಭಯ ಮತ್ತು ಶ್ರದ್ಧೆಯಿಂದ ನಡೆಸಿಕೊಳ್ಳುತ್ತಾರೆ. ಗುಳಿಗ ದೇವರ ವೆಳ್ಳಾಟಂ ನಡೆಯುವಾಗ ಒಂದು ರೀತಿಯ
ಪ್ರಿನ್ಸಿಪಾಲ್ ಬಂದರೆ ನಡುಗುವ ವಿದ್ಯಾರ್ಥಿಗಳಾಗುತ್ತಾರೆ. ಕಾಂತಾರ ಸಿನೆಮಾದಲ್ಲಿ ಕೊನೆಯ ಭಾಗದಲ್ಲಿ
ನಡೆದುಕೊಳ್ಳುವುದೆ ಗುಳಿಗ ದೇವರು.
ಮೇಲಿನದು, ಹಿನ್ನಲೆ
ತಮಗೆ ಅರ್ಥೈಸಲು. ಈ ಉತ್ಸವ ಈಗಿನ ಹೊಸ ಸಮಿತಿಯಿಂದ ಕಳೆದ ಹನ್ನೊಂದು ವರ್ಷದಿಂದ ನಡೆದುಕೊಂಡು ಬರುತ್ತಿದೆ.
ಆದರೇ, ಇದೇ ರೀತಿಯ ವಿಜೃಂಭನೆಯ ಉತ್ಸವ ಹಿಂದಿನ ಸಮಿತಿಯವರು ಸೇರಿ ಕಳೆದ ಐವತ್ತು ವರ್ಷಗಳಿಂದ ನಡೆಯುತ್ತಿದೆ.
ಮೊದಲಿಗರು ಹಾಕಿ ಕೊಟ್ಟ ಹಾದಿಯಲ್ಲಿ ಈಗಿನ ಸಮಿತಿಯು ನಡೆಯುತ್ತಿರುವುದು ಪ್ರಶಂಸನೀಯ. ಮೊದಲ ದಿನ ಸಂಜೆ
ಐದರ ಸಮಯಕ್ಕೆ ಶುರುವಾಗುತ್ತದೆ ಮತ್ತು ಸುಮಾರು ರಾತ್ರಿ ಹತ್ತಕ್ಕೆ ಕೊನೆಗೊಳ್ಳುತ್ತದೆ. ಎರಡನೆಯ ದಿನ
ಸಂಜೆ ಐದು ಗಂಟೆಗೆ ಶುರುವಾದರೆ ಮೂರನೆಯ ದಿನ ಸಂಜೆ ಆರು ಅಥವಾ ಏಳು ಗಂಟೆಯ ತನಕ ನಡೆಯುತ್ತದೆ. ಎರಡು
ಮತ್ತು ಮೂರು ದಿನ ಕಡಿಮೆಯೆಂದರೂ ಇಪ್ಪತ್ತು ಸಾವಿರ ಜನರು ಸೇರುತ್ತಾರೆ. ಬಂದವರೆಲ್ಲರಿಗೂ ರಾತ್ರಿ
ಊಟದ ವ್ಯವಸ್ಥೆ ಇರುತ್ತದೆ. ಅನ್ನ ತರಕಾರಿ ಸಾಂಬಾರ್ ಒಣಗಿದ ಮೀನು ಸೀಗಡಿ ಸಾರು ಮತ್ತು ರುಚಿಯಾದ
ಪಾಯಸವಿರುತ್ತದೆ. ಒಂದು ಸರತಿ ಸಾಲು ಹೆಂಗಸರಿಗಾಗಿ ಮತ್ತೊಂದು ಸರತಿ ಸಾಲು ಗಂಡಸರಿಗಾಗಿ ಮೀಸಲಿರುತ್ತದೆ.
ಮತ್ತೊಮ್ಮೆ ಬೇಕೆಂದರೆ ಅದಕ್ಕೆ ಮತ್ತೊಂದು ಕೌಂಟರ್ ಇರುತ್ತದೆ. ಇದು ತಾತ್ಕಾಲಿಕವಾಗಿ ನಿರ್ಮಿಸಿದ್ದರೂ
ಅದೆಷ್ಟು ಅಚ್ಚುಕಟ್ಟಾಗಿ ವ್ಯವಸ್ಥೆಯಾಗಿರುತ್ತದೆ ಎನ್ನುವುದನ್ನು ನೋಡಿದವರಿಗೆ ಮಾತ್ರ ಅರಿವಾಗುವುದು.
ಊಟ ಮಾಡಿದ ಅಡಿಕೆ ತಟ್ಟೆಯನ್ನು ಹಾಕುವುದಕ್ಕೆ ಅಲ್ಲಿಯೇ ಟ್ರಾಕ್ಟರ್ ನಿಲ್ಲಿಸಿರುತಾರೆ. ಕುಡಿಯುವುದಕ್ಕೆ
ಸಾಕಷ್ಟು ನೀರಿನ ವ್ಯವಸ್ಥೆ, ಕೈ ತೊಳೆಯುವುದಕ್ಕೆ ವ್ಯವಸ್ಥೆ ಇರುತ್ತದೆ.
ಇದು ಎಲ್ಲಾ ಕಡೆ ಆಗುವಂತದ್ದೆ
ಇಲ್ಲೇನು ವಿಶೇಷ ಎನ್ನಬಹುದು. ಗಮನಿಸಬೇಕಾದ ವಿಷಯವೆಂದರೆ ಊಟ/ತಿಂಡಿ ತಿಳಿಸಿದ ಸಮಯಕ್ಕೆ ಸರಿಯಾಗಿ
ರೆಡಿಯಾಗಿರುತ್ತದೆ. ಇಪ್ಪತ್ತು ಸಾವಿರ ಜನರು ಬಂದರೂ ಕೂಡ ಒಂದೇ ಒಂದು ಅವ್ಯವಸ್ಥೆ ಕಾಣುವುದಿಲ್ಲ.
ಸಾಲಿನಲ್ಲಿ ಬರುವ ಜನರು ಅಷ್ಟೆ ಒಂದೇ ಒಂದು ನೂಕು ನುಗ್ಗಲಿರುವುದಿಲ್ಲ. ಬಡಿಸುವವರು ಒಂದು ಚೂರು ರೇಗುವುದಿಲ್ಲ,
ನಗುನಗುತ್ತ ಕೇಳಿ ಕೇಳಿ ಬಡಿಸುತ್ತಾರೆ. ಎಲೆಯನ್ನು ಆಚೀಚೆ ಹಾಕುವುದಿಲ್ಲ, ಎಲ್ಲೆಂದರಲ್ಲಿ ಚೆಲ್ಲುವುದಿಲ್ಲ,
ಊಟ ವೇಸ್ಟ್ ಮಾಡುವುದಿಲ್ಲ. ಮಧ್ಯ ರಾತ್ರಿ ಎರಡು ಮೂರು ಗಂಟೆಯ ತನಕವೂ ಅನ್ನ ಬೇಯಿಸುತ್ತ ಬಡಿಸುತ್ತಲೇ
ಇದ್ದರು, ಇವರ್ಯಾರು ದುಡ್ಡು ಕೊಟ್ಟು ಬಂದವರಲ್ಲ, ಎಲ್ಲರೂ ಸಮಿತಿಯವರು ಮತ್ತು ಸ್ವಯಂಸೇವಕರು. ನಾನು
ಅನೇಕ ದೇವಸ್ಥಾನಗಳಲ್ಲಿ ನೋಡಿದ್ದೇನೆ ಸಮಿತಿಯವರು ಒಳ್ಳೆ ಗರಿ ಗರಿ ಬಟ್ಟೆ ಹಾಕಿಕೊಂಡು ಬೇರೆಯವರಿಗೆ
ಕೆಲಸ ಹೇಳುತ್ತಿರುವುದನ್ನು. ಆದರೇ ಇಲ್ಲಿ ಹಾಗಿಲ್ಲ, ಬೇರೆಯವರಿಗೆ ಕೆಲಸ ಹೇಳುವುದನ್ನು ನಾನು ಕಾಣಲಿಲ್ಲ.
ಊಟದ ವ್ಯವಸ್ಥೆಗೆ ಸ್ವಯಂಪ್ರೇರಿತರಾಗಿ ತರಕಾರಿ ಮೀನು ಅಕ್ಕಿ ಬೇಳೆ ಇತ್ಯಾದಿ ಎಲ್ಲವನ್ನು ನೀಡಿದ್ದಾರೆ.
ಪ್ರಮುಖ ವಿಷಯವೆಂದರೆ
ಮೂರು ದಿನಗಳಲ್ಲಿ ಐವತ್ತು ಸಾವಿರದಷ್ಟು ಜನರು ಸೇರುವ ಇಂತಹ ದೊಡ್ಡ ಉತ್ಸವದಲ್ಲಿ ಯಾವುದೇ ವ್ಯಕ್ತಿಯ
ಒಂದೇ ಒಂದು ಫ್ಲೆಕ್ಸ್ ಬ್ಯಾನರ್ ಇಲ್ಲ. ಭಿತ್ತಿ ಪತ್ರದಲ್ಲಿ ಕೂಡ ಒಬ್ಬರೇ ಒಬ್ಬರ ಹೆಸರಿಲ್ಲ. ಭಕ್ತಾದಿಗಳು
ಏನೇ ನೀಡಿದರೂ ಕೂಡ ಯಾರೂ ಹೆಸರನ್ನು ಬಯಸುವುದಿಲ್ಲ. ಇದು ದೇವರ ಕೆಲಸ ಅಲ್ಲಿ ನಮ್ಮ ಹೆಸರನ್ನು ಹಾಕಿಸಿಕೊಳ್ಳುವುದು
ತಪ್ಪು ಎನ್ನುವುದು ಪ್ರತಿಯೊಬ್ಬರ ನಂಬಿಕೆ. ನಾನು ಐವತ್ತು ರೂಪಾಯಿ ಕೊಟ್ಟು ಕೆಲವೊಮ್ಮೆ ಏನೂ ಕೊಡದೆ
ಇದ್ದರೂ ನಮ್ಮ ಹೆಸರನ್ನು ಹಾಕಬೇಕೆಂದು ಹಠ ಹಿಡಿದವರನ್ನು ನೋಡಿದ್ದೇನೆ. ನಮ್ಮ ಬೆಂಗಳೂರಲ್ಲಿ ಅಣ್ಣಮ್ಮ,
ಹನುಮ ಜಯಂತಿ, ಶ್ರೀ ರಾಮ ನವಮಿ, ಗಣೇಶೋತ್ಸವ ನಡೆದಾಗ ದೇವರ ಫೋಟೋಗಳಿಗಿಂತ ಪುಢಾರಿಗಳು ಮತ್ತು ಸಮಿತಿಯವರ
ಹೆಸರು ಫೋಟೋಗಳು ದೊಡ್ಡದಿರುತ್ತವೆ.
ನಮ್ಮೂರಿನಲ್ಲಿ ನಾನು
ಪ್ರತಿ ವರ್ಷವೂ ಗಣೇಶ ವಿಸರ್ಜನೆ ಸಮಯದಲ್ಲಿ ನೋಡುತ್ತ ಬಂದಿದ್ದೇನೆ ದೊಡ್ಡ ಫ್ಲೆಕ್ಸ್, ಹೆಸರು, ಫೋಟೋಗಳು.
ಒಂದು ದಿನದ ಆ ಕಾರ್ಯಕ್ರಮ ಮಾಡಿ ಮುಗಿಸುವ ವೇಳೆಗೆ ಜಗಳವಾಡಿ ಕಚ್ಚಾಡಿ ಹೊಡೆದಾಡಿಕೊಂಡಿರುತ್ತಾರೆ.
ಆದರೆ, ಈ ಉತ್ಸವ ಕೊಡಗಿನಲ್ಲಿ ನಡೆಯುವುದು. ಎಲ್ಲಾ ವರ್ಗದ ಜನರು ಇರುತ್ತಾರೆ. ಅರ್ಧದಷ್ಟು ಜನರು ಕುಡಿದು
ಬಂದಿರುತ್ತಾರೆ, ಆದರೇ ಒಂದು ಕೆಟ್ಟ ಘಟನೆ ನಡೆಯುವುದಿಲ್ಲ. ಕೆಟ್ಟ ಮಾತುಗಳು ಕಿವಿಗೆ ಬೀಳುವುದಿಲ್ಲ.
ಇದು ಅಲ್ಲಿನ ಜನರ ನಡತೆ ಮತ್ತು ದೇವರ ಮೇಲಿನ ಶ್ರದ್ಧೆ. ಶ್ರೀಮಂತರು ಬಡವರು ಎಲ್ಲರೂ ಒಂದೇ ರೀತಿಯಲ್ಲಿ
ದೇವರಿಗೆ ನಡೆದುಕೊಳ್ಳುತ್ತಾರೆ. ಸಮಿತಿಯವರು ಕೂಡ ಯಾರಿಗೂ ಹೆಚ್ಚು ಕಡಿಮೆ ಮಾಡಿದ್ದನ್ನು ನಾನು ಈ
ಎರಡು ವರ್ಷದಲ್ಲಿ ಭಾಗವಹಿಸಿದ ಉತ್ಸವದಲ್ಲಿ ಕಾಣಲಿಲ್ಲ. ಈ ಉತ್ಸವದಲ್ಲಿ ಯಾರೂ ದೊಡ್ಡವರಲ್ಲ ಅಥವಾ
ಯಾರೂ ಸಣ್ಣವರಲ್ಲ ಎಂಬುದನ್ನು ನೇರವಾಗಿ ಕಾಣಬಹುದು.
ಈ ಮೇಲಿನ ವಿಷಯಗಳನ್ನು
ನಿಮ್ಮೂರಿನಲ್ಲಿ ಆಯೋಜಿಸುವ ಹಬ್ಬ, ಉತ್ಸವ, ನಾಟಕ ಅಥವಾ ಬೇರೆ ಕಾರ್ಯಕ್ರಮಗಳ ಆಯೋಜಕರೊಂದಿಗೆ ಒಮ್ಮೆ
ಹೋಲಿಕೆ ಮಾಡಿನೋಡಿ. ಅವಲೋಕಿಸಿ.
ಈ ಹಿನ್ನಲೆಯಲ್ಲಿ ಇದನ್ನು
ತಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿ ಹೇಳಿದ್ದೇನೆ. ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿರುವ ದೇವಸ್ಥಾನದ
ಕುಟುಂಬ ಸಮಿತಿಯ ಅಧ್ಯಕ್ಷರಾದ ಸುದೀಶಣ್ಣ ಮತ್ತು ಸದಸ್ಯರಾದ ದಿನೇಶಣ್ಣ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ
ಅಧ್ಯಕ್ಷರಾದ ಶ್ರೀ ಕಲಿಚಂಡ ಅಯ್ಯಪ್ಪರವರ ತಂಡದವರಿಗೆ ಮತ್ತಷ್ಟು ಉತ್ಸವವನ್ನು ಆಯೋಜಿಸುವ ಶಕ್ತಿ ತುಂಬಲಿ.