28 ಅಕ್ಟೋಬರ್ 2019

ದೀಪಾವಳಿಯೆಂದರೇ ಬರೀ ಪಟಾಕಿಯೇ?


ಇತ್ತೀಚೆಗೆ ಎಂದರೇ ಕಳೆದ ಹತ್ತು ವರ್ಷಗಳಿಂದ ನಾನು ಗಮನಿಸಿರುವುದನ್ನು ತಮ್ಮ ಮುಂದಿಡುತ್ತಿದ್ದೇನೆ, ಈ ಅಂಶಗಳು ತಮ್ಮ ಗಮನಕ್ಕೂ ಬಂದಿರುತ್ತದೆ. ಆದರೇ, ಅಷ್ಟು ಸೂಕ್ಷ್ಮವಾಗಿ ಗಮನಿಸಿರುವುದಿಲ್ಲವೆಂಬುದು ನನ್ನ ವಿಶ್ವಾಸ. ಹಾಗಾಗಿಯೇ, ತಮ್ಮ ಹತ್ತು ನಿಮಿಷಗಳನ್ನು ನನ್ನ ಮಾತಿಗೆ ಮೀಸಲಿಡಿ. ದೀಪಾವಳಿಯ ಆಚರನೆಯನ್ನೇ ತೆಗೆದುಕೊಂಡು ಪರಿಶೀಲಿಸೋಣ. ನೀವು ನಿಮ್ಮ ಬಾಲ್ಯದ ದೀಪವಾಳಿಯನ್ನೊಮ್ಮೆ ನೆನಪಿಸಿಕೊಳ್ಳಿ, ಅದನ್ನು ಈಗ ಆಚರಿಸುತ್ತಿರುವುದಕ್ಕೆ ಹೋಲಿಕೆ ಮಾಡಿನೋಡಿ.

ನನ್ನ ಬಾಲ್ಯದ ದೀಪಾವಳಿಯನ್ನೊಮ್ಮೆ ಹಂಚಿಕೊಳ್ಳುತ್ತೇನೆ. ನಮ್ಮಲ್ಲಿ ಆಯುಧ ಪೂಜೆ ದೊಡ್ಡ ಹಬ್ಬ ಹಾಗಾಗಿ, ದೀಪಾವಳಿಯೆಂದರೆ ಬೇರೆಯವರ ಅಂದರೆ ನೆಂಟರಿಷ್ಟರ ಮನೆಗೆ ಹೋಗುವುದು ವಾಡಿಕೆ. ಆಯುಧಪೂಜೆಗೆ ನಮ್ಮಲ್ಲಿಗೆ ಅವರೆಲ್ಲರೂ ಬಂದಿರುವ ಕಾರಣ ಕೂಡ ಒಂದು. ನಮ್ಮಲ್ಲಿ ದೀಪಾವಳಿಯ ಅಮವಾಸ್ಯೆಯ ದಿನದಂದು, ಸಂಜೆಯ ವೇಳೆಗೆ ಮದ್ದುಮೆಳೆ ಎಂಬುದನ್ನು ತರುತ್ತೇವೆ. ಅದರ ಕಾರಣವನ್ನು ಈ ಹಿಂದೆ ಒಮ್ಮೆ ಬರೆದಿದ್ದೆ, ದೀಪಾವಳಿ ಅಥವಾ ಕಾರ್ತಿಕ ಮಾಸ ಶುರುವಾದರೆ, ಕಾಲಗಳು ಬದಲಾಗುತ್ತವೆ. ಮುಂಗಾರು ಮುಗಿದು, ಹಿಂಗಾರಿನ ಜೊತೆಗೆ ಚಳಿಗಾಲವೂ ಆರಂಭವಾಗುತ್ತದೆ. ಎಲೆ ಉದುರುವ ಸಮಯವೂ ಬರುತ್ತದೆ. ಈ ಸಮಯದಲ್ಲಿ, ಸೂಕ್ಷ್ಮಜೀವಿಗಳು ಹೆಚ್ಚಾಗುತ್ತವೆ. ಆದ್ದರಿಂದ, ಹಿಂದಿನವರು, ವಿವಿಧ ಔಷಧಿಗುಣಗಳಿರುವ ಎಲೆಗಳನ್ನು ಅಮವಾಸ್ಯೆಯ ದಿನ ಕತ್ತರಿಸಿ, ಮನೆಯ ಸೂರಿಗೆ, ತಿಪ್ಪೆಗೆ, ಕೊಟ್ಟಿಗೆಗಳಿಗೆ ಕಟ್ಟುತ್ತಿದ್ದರು, ಆ ಗಿಡಗಳೆಂದರೇ, ನೇರಳೆ, ಮತ್ತಿ, ಈಚಲು, ಬಿದಿರು, ಸೀಬೆ, ಉತ್ತರಾಣಿ, ಗೌರಿ ಹೂವು, ಭೀಮನ ಹುಲ್ಲು, ಇತ್ಯಾದಿ.,

ಹಬ್ಬದ ದಿನ ದನಕರುಗಳನ್ನು ತೊಳೆದು, ಉಂಬ್ಲಿ ಹಂಬನ್ನು ದನಗಳಿಗೆ ಕಟ್ಟುತ್ತಾರೆ. ತದನಂತರ ಎಣ್ಣೆ ಹಚ್ಚಿ ಸ್ನಾನ ಮಾಡಿ ಕಜ್ಚಾಯ ಸಿಹಿ ಊಟಮಾಡುವುದು ವಾಡಿಕೆಯಾಗಿತ್ತು. ಪಟಾಕಿಯೆಂದರೆ, ಕಲ್ಲಿನಿಂದ ಕೆಚ್ಚುವ ಪಟಾಕಿ, ಸುರ್ ಸುರ್ ಬತ್ತಿ, ಹೆಚ್ಚೆಂದರೆ ಒಂದು ಲಕ್ಷ್ಮಿ ಪಟಾಕಿ, ಒಂದೆರಡು ಆನೆ ಪಟಾಕಿ, ಈ ಅಟಮ್ ಬಾಂಬ್, ರಾಕೆಟ್‍ಗಳ ಸುದ್ದಿಯೇ ಇರಲಿಲ್ಲ. ನಮ್ಮೂರು ಕೊಣನೂರಿನಿಂದ ಸುಮಾರು ನಾಲ್ಕು ಕಿಮಿ ಇತ್ತು. ಕೊಣನೂರು ಹೋಬಳಿಯ ಕೇಂದ್ರವಾದರೂ ಅಲ್ಲಿ ಬಸ್ ಸ್ಟಾಂಡ್ ಎದುರಿನ ಶೆಟ್ಟರ ಅಂಗಡಿಯಲ್ಲಿ ಬಿಟ್ಟರೇ ಬೇರೆಲ್ಲೂ ಪಟಾಕಿಗಳು ಸಿಗುತ್ತಿರಲಿಲ್ಲ. ನಮ್ಮೂರಿನ ಅಂಗಡಿಯವರು ಅಲ್ಲಿಂದ ಸ್ವಲ್ಪ ತಂದು ಮಾರುತ್ತಿದ್ದರು. ಪಟಾಕಿ ಹೊಡೆಯುವ ಕೋವಿಗೆ ಮೂರು ರೂಪಾಯಿ ಇರುತ್ತಿತ್ತು, ಅದಕ್ಕೆ ಮೂರು ರೂಪಾಯಿ ಕೊಡುವುದಕ್ಕಿಂತ ಕೆಚ್ಚುವ ಪಟಾಕಿಯನ್ನು ತೆಗೆದುಕೊಂಡು ಕಲ್ಲಲ್ಲಿ ಕೆಚ್ಚಿದರೆ ಆಯಿತೆಂದು ಕೆಚ್ಚುತ್ತಿದ್ದೆವು, ಕೆಲವೊಮ್ಮೆ ನಟ್ ಮತ್ತು ಬೋಲ್ಟ್ ನಡುವೆ ಪಟಾಕಿಯನ್ನು ಸೇರಿಸಿ ಕಲ್ಲಿನ ಅಥವಾ ಗಟ್ಟಿ ನೆಲಕ್ಕೆ ಕೆಚ್ಚುತ್ತಿದ್ದೆವು. ದೊಡ್ದವರು (ವಯಸ್ಸಿನಲ್ಲಿ) ಪಟಾಕಿ ಹೊಡೆದ್ದದ್ದನನ್ನು ನಾನು ಕಂಡೇ ಇಲ್ಲ. ಪಟಾಕಿ ಮಕ್ಕಳಿಗೆ ಮೀಸಲೆಂದರೂ ತಪ್ಪಿಲ್ಲ.
ಆದರೇ ಈಗ ಆಗುತ್ತಿರುವ ವಿದ್ಯಾಮಾನಗಳೇ ಬೇರೆ. ನಾನು ಅದರಲ್ಲಿಯೂ ಬೆಂಗಳೂರಿನಲ್ಲಿ ನೋಡುವಾಗ ಮಕ್ಕಳಿಗಿಂತ ದಾಂಡಿಗರೇ ಮುಕ್ಕಾಲು ಚಡ್ಡಿ ಹಾಕಿಕೊಂಡು ಉದ್ದುದ್ದ ರಾಕೇಟ್, ದೊಡ್ಡದಾಗಿ ಶಬ್ಧ ಬರುವ ಪಟಾಕಿ ಹೊಡೆಯುತ್ತಿದ್ದಾರೆ. ಪಟಾಕಿಯನ್ನು ನಾನು ಮಾಲಿನ್ಯದ ಕುರಿತಾಗಿ ಹೇಳಿದರೇ ಕೆಲವರಿಗೆ ಕೋಪ ಬರುತ್ತದೆ ಮತ್ತು ವಾದಕ್ಕಿಳಿಯುತ್ತಾರೆ. ಬೆಂಗಳೂರಿನಂತಹ ಹೊಗೆ ನಗರದಲ್ಲಿ ದೀಪಾವಳಿಯ ಸಮಯದಲ್ಲಿ ನಾಲ್ಕೈದು ದಿನ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುತ್ತದೆ. ಮತ್ತೊಂದು ವಾದವೆಂದರೇ, ಧರ್ಮ ವಿರೋಧಿಗಳು ಎಂಬಂತೆ ಬಿಂಬಿಸುವುದು, ಅಥವಾ ಬೇರೆ ಧರ್ಮದವರು ಮಾಡುವ ಮಾಲಿನ್ಯಕ್ಕೆ ನಿಮ್ಮ ಉತ್ತರವೇನು? ಎನ್ನುವುದು. ಪರಿಸರ ಮಾಲಿನ್ಯ ಒಂದೆಡೆಗೆ ಆದರೇ, ಸುರಕ್ಷತೆ ಮತ್ತೊಂದು. ನಾನು ಕಳೆದ ಮೂರು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ನನ್ನ ಮಗಳಿಗೆ 2 ವರ್ಷ ತುಂಬಿದೆ, ಮೊದಲನೆ ದೀಪಾವಳಿಯಲ್ಲಿ ಅವಳಿಗೆ ಕೇವಲ 3 ತಿಂಗಳಾಗಿತ್ತು. ಈ ಮೂರು ವರ್ಷದಲ್ಲಿಯೂ ಈ ಹಬ್ಬದ ಸಮಯದಲ್ಲಿ ಕಣ್ಮುಚ್ಚಿ ಮಲಗುತ್ತಿಲ್ಲ. ಶಬ್ದಕ್ಕೆ ಬೆಚ್ಚಿ ಬೀಳುತ್ತಾಳೆ. ಇದೇ ರೀತಿ ವಯಸ್ಸಾದವರ ಕಥೆಯೂ ಹೌದು. ಪಕ್ಕದ ಮನೆಯವ ನಾಯಿಯ ಗೋಳಂತೂ ಹೇಳುವಂತಿಲ್ಲ. ಪಟಾಕಿ ಸದ್ದಿಲ್ಲದೇ ಕೂಡ ಹೊಡೆಯಬಹುದು, ಮನೆ ಮೇಲಕ್ಕೆ ಯುದ್ದ ವಿಮಾನ ಬಂದು ಅಪ್ಪಳಿಸಿದಂತೆ ಸದ್ದು ಮಾಡುವುದು ಯಾವ ಧರ್ಮಾಚಾರಣೆ? ಮುಂಜಾನೆ ಐದು ಗಂಟೆಗೆ ಎದ್ದು ಪಟಾಕಿ ಹೊಡೆಯಬೇಕೇ? ರಾತ್ರಿ ಹನ್ನೆರಡಾದರೂ ಹೊಡೆಯುತ್ತಿರಬೇಕೆ? ರಸ್ತೆಯಲ್ಲಿ ನಡೆಯುವಾಗ ಯಾವ ಕಡೆಯಿಂದ ಬಂದು ಅಪ್ಪಳಿಸುತ್ತದೆ ಎಂಬ ಭಯದಿಂದ ನಡೆಯಬೇಕು. ಪಟಾಕಿ ಹೊಡೆದು ರಸ್ತೆಯಲ್ಲ ಗಲೀಜು ಮಾಡಿದವರು, ಕನಿಷ್ಟ ಸೌಜನ್ಯವೂ ಇಲ್ಲದೇ ಇರುವುದು ವಿಪರ್ಯಾಸ. ಮುಂಜಾನೆ ಪೌರಕಾರ್ಮಿಕರು ರಸ್ತೆ ಗುಡಿಸುವಾಗ ಯೋಚನೆ ಬಂತು. ಅವರ ಮನೆಯಲ್ಲಿ ಪಟಾಕಿ ಹೊಡೆದಿದ್ದರೋ ಇಲ್ಲವೋ ಉಳ್ಳವರು ಹೊಡೆದ ಪಟಾಕಿಯ ಕಸವನ್ನು ಗುಡಿಸಬೇಕು.

ದೀಪಗಳು ಕೂಡ ಮರೆಯಾಗಿ ಸಿರಿಯಲ್ ಸೆಟ್ ಹಾಕಿ ಅದೇ ಬೆಳಕು ಎಂದು ಭ್ರಮಿಸುತ್ತಿದ್ದೇವೆ. ದೀಪಗಳು ಕೂಡ ಚೈನಾದಿಂದ ಬಂದಿರುವುದು ದುರಂತವಾಗಿದೆ. ಮಣ್ಣಿನ ದೀಪಗಳನ್ನು ಅಮ್ಮ ಕಾರ್ತಿಕ ಮುಗಿದ ತಕ್ಷಣ ತೆಗೆದಿಟ್ಟು, ಮುಂದಿನ ವರ್ಷದ ತನಕ ಜೋಪಾನವಾಗಿರಿಸುತ್ತಿದ್ದರು. ಪ್ರತಿ ಧರ್ಮವೂ ಪರಿಸರಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಅದನ್ನು ಮರೆತು ಅದನ್ನೇ ನಾಶ ಮಾಡುವ ಹಬ್ಬಗಳು ಕಡಿಮೆಯಾಗಲಿ. ವಿವಿಧತೆಯಲ್ಲಿ ಏಕತೆ ಎಂಬಂತೆ ನಮ್ಮೂರಿನಲ್ಲಿ ಈ ಹಬ್ಬದಂದು, ಆಚಾರರು, ಮಡಿವಾಳರು, ದಾಸಯ್ಯನ ಮನೆಯಿಂದ ಬೂದಿ ತಂದು ಮಿಶ್ರಣ ಮಾಡಿ ರಂಗೋಲಿ ಬಿಡುತ್ತೇವೆ. ನಮ್ಮಲ್ಲಿದ್ದ ಸಂಪ್ರದಾಯಗಳನ್ನು ಮೂಲೆಗುಂಪಾಗಿಸಿ ನಮಗೆ ಬೇಕಿರುವ ಮೋಜುಮಸ್ತಿಗೆ ಧರ್ಮದ ಬಣ್ಣ ಹಚ್ಚುತ್ತಿರುವುದಕ್ಕೆ ಏನು ಹೇಳಬೇಕು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...