06 ನವೆಂಬರ್ 2019

ಅಗರ್ತದೊಳಗೊಂದು ಒಳನೋಟ!!!


ಒಬ್ಬ ಓದುಗನಾಗಿ ನಾನು ಕೆಲವೊಮ್ಮೆ ಯೋಚಿಸುವಾಗ, ನನ್ನನ್ನು ಕಾಡುವ ಕೆಲವು ಪ್ರಶ್ನೆಗಳಿವು. ನಾನು ಏಕೆ ಓದುತ್ತೇನೆ? ಯಾವ ರೀತಿಯ ಪುಸ್ತಕ ನನಗೆ ಹಿಡಿಸುತ್ತದೆ? ಯಾವು ಹಿಡಿಸುವುದಿಲ್ಲ? ಯಾವ ಸಾಹಿತಿಯನ್ನು ಮೆಚ್ಚುತ್ತೇನೆ? ನಾನೆಷ್ಟೆ ತಲೆ ಕೆಡಿಸಿಕೊಂಡು ಓದಿದರೂ ನನಗೆ ಕಾವ್ಯ, ಕವನ, ಕವಿತೆಗಳು ನೆನಪಲ್ಲಿ ಉಳಿಯುವುದಿಲ್ಲ. ಕೆಲವೊಂದು ತಲೆಗೆ ಹತ್ತುವುದಿಲ್ಲ. ಆದರೇ, ಗದ್ಯ, ಕಥೆ, ಕಾದಂಬರಿ ಆ ರೀತಿಯಲ್ಲ. ಅದರಲ್ಲಿಯೂ ಪರಿಸರ, ಪ್ರಕೃತಿ, ನಿಗೂಢತೆಯಿರುವ ಬರವಣಿಗೆಗಳು ಸೆಳೆಯುತ್ತವೆ. ಬಿಡುವಿಲ್ಲದ ಸಮಯದಲ್ಲಿಯೂ, ಸುಸ್ತಾದ ಹೊತ್ತಿನಲ್ಲಿಯೂ ಓದಿಸಿಕೊಂಡು ಹೋಗುವ ಸಾಮರ್ಥ್ಯ ಕೆಲವರಿಗೆ ಇರುತ್ತದೆ.

ನನ್ನ ಹಿಂದಿನ ಬರಹದಲ್ಲಿ, ಶ್ರೀಯುತ ಗುರುಪಾದ ಬೇಲೂರುರವರ ಬರವಣಿಗೆಯ ಕುರಿತು ಬರೆದಿದ್ದು, ಅದರ ವಿಸ್ತೃತ ರೂಪವಾಗಿ ಈ ಲೇಖನವನ್ನು ಅಥವ ನನ್ನ ಅಭಿಪ್ರಾಯವನ್ನು ತಮ್ಮ ಮುಂದಿಡುತ್ತಿದ್ದೇನೆ. ಅವರ ದೇವರ ಕಾಡು ಕಥಾಸಂಕಲನವನ್ನು ಓದಿದ ಮೇಲೆ, ಅವರ ಇನ್ನಷ್ಟು ಕಥೆಗಳನ್ನು ಓದಬೇಕೆಂಬ ಹಂಬಲ ಬಂದದ್ದು ಸತ್ಯ. ಅದಕ್ಕೆ ಮೂಲ ಕಾರಣ, ಅವರು ಆಯ್ಕೆ ಮಾಡಿಕೊಳ್ಳುವ ವಿಷಯ ಒಂದಾದರೆ ಅದನ್ನು ಪ್ರಸ್ತುತ ಪಡಿಸುವ ರೀತಿ ಮತ್ತೊಂದು. ಎರಡನೆಯ ಕಥಾಸಂಕಲನವನ್ನು ಓದಲು ಶುರು ಮಾಡಿದ್ದೇನೆ. ಅದರಲ್ಲಿನ ಅಗರ್ತ ಎಂಬ ನೀಲ್ಗತೆಯನ್ನು ಈಗಾಗಲೇ ಓದಿದ್ದೇನೆ. ಅಲ್ಲಿನ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.

ನಾನು ಪುಸ್ತಕ ಪಡೆದಾಗ ಮೊದಲಿಗೆ ಮುನ್ನುಡಿಯನ್ನು ಓದಿದೆ. ಸುಂದರವಾಗಿ ಮತ್ತು ಸೂಕ್ಷö್ಮವಾಗಿ ಗ್ರಹಿಸಿ ಮುನ್ನುಡಿ ಬರೆದಿರುವುದು ಪುಸ್ತಕದಲ್ಲಿ ಪ್ರಮುಖ ಅಂಶ. ಮುನ್ನುಡಿಗಳು ಅದೆಷ್ಟೋ ಬಾರಿ ಆಸಕ್ತಿಯನ್ನು ಕೆರಳಿಸುತ್ತವೆ. ಅದರಂತೆಯೇ, ಕಂನಾಡಿಗ ನಾರಯಣ (ವೈಯಕ್ತಿಕವಾಗಿ ತಿಳಿದಿಲ್ಲ), ಅವರು ಬರೆದಿರುವ ಮುನ್ನುಡಿ ನನ್ನಲ್ಲಿ ಆಸಕ್ತಿ ಮೂಡಿಸಿದಂತೂ ಸತ್ಯ. ಅದರಂತೆಯೇ, ನಾನು ಓದಲು ಶುರು ಮಾಡಿಕೊಂಡಾಗ, ರೈಲಿನಲ್ಲಿ ಮನೆ ತಲುಪುವ ತನಕ ಒಂದು ಗಂಟೆಗಳು ಸುಮಾರು ಅರ್ಧದಷ್ಟು ಕಥೆಯನ್ನು ಓದಿಸಿಕೊಂಡಿತು. ಮನೆಗೆ ಹೋದ ತಕ್ಷಣ, ಎಲ್ಲವನ್ನು ಬದಿಗಿಟ್ಟು ಮತ್ತೆ ಓದಲು ಶುರುಮಾಡಿದೆ. ಕಥೆಯಲ್ಲಿ ರೋಚಕತೆ, ಪ್ರಕೃತಿಯ ವಿಸ್ಮಯಗಳನ್ನು ಕಣ್ಣಿಗೆ ಕಟ್ಟಿದಂತೆ, ನಮ್ಮ ಕಣ್ಣೆದುರೇ ನಡೆಯುತ್ತಿದೆ ಎನ್ನುವಂತೆ ತೆರೆದಿಟ್ಟಿರುವುದು ಲೇಖಕರಿಗೆ ಸಾಹಿತ್ಯ, ವಿಜ್ಞಾನ, ಸಂಶೋಧನೆ ಮತ್ತು ಸಾಹಸಮಯದ ಕಡೆಗಿರುವ ಹಿಡಿತವನ್ನು ತೋರಿಸುತ್ತದೆ.

ಭೂಗರ್ಭದಲ್ಲೊಂದು ಲೋಕವಿದೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದು, ಅಲ್ಲೊಂದು ದೇವಲೋಕಕ್ಕೆ ಸಮನಾಗಿರುವುದು, ಸ್ವಾರ್ಥವಿಲ್ಲದ ಮನಸ್ಸಿನವರು ಅಲ್ಲಿಗೆ ತಲುಪಬಹುದು. ನಿಸರ್ಗಮಾತೆ ನೀಗೂಢತೆಯ ಜೊತೆಗೆ ಪ್ರೀತಿಯನ್ನು ಹಂಚುವ ದೈವತ್ವವನ್ನು ತೋರಿಸಿರುವುದು, ನಮಗೆ ಅರಿಯದಂತೆ ಯಾವುದೋ ಸಿನೆಮಾ ನೋಡಿದಂತೆ ಭಾಸವಾಗುತ್ತದೆ. ನನಗೆ ಇಲ್ಲಿ ನೆನಪಾದದ್ದು, ಬಬ್ರುವಾಹನ ಸಿನೆಮಾ ನೋಡುವಾಗ ಡಾ. ರಾಜ್ ಕುಮಾರ್ (ಅರ್ಜುನ) ನಾಗಾಲೋಕಕ್ಕೆ ಹೋಗುವುದು. ಅಲ್ಲೊಂದು ಲೋಕವಿದ್ದು, ಅಲ್ಲೊಂದು ಸಾಮ್ರಾಜ್ಯವೇ ಇರುತ್ತದೆ. ಅದು, ಕಲ್ಪನೆಯೋ, ಸತ್ಯವೋ ಅದರ ಅವಶ್ಯಕತೆಯಿರುವುದಿಲ್ಲ. ಕಥೆಯಲ್ಲಿ ರೋಚಕತೆ ಮುಖ್ಯವಾಗುತ್ತದೆ.

ಅಗರ್ತದಲ್ಲಿಯೂ ಕೂಡ ಒಮ್ಮೊಮ್ಮೆ ಆಧ್ಯಾತ್ಮದ ಕಡೆಗೆ ಎಳೆದರೆ, ಮತ್ತೊಮ್ಮೆ ವಿಜ್ಞಾನದ ಕಡೆಗೆ, ತಾಂತ್ರಿಕತೆಯ ಕಡೆಗೆ, ಗುಹೆಗಳ ಸಂಶೋಧನೆಯ ಕಡೆಗೆ, ಮತ್ತೊಮ್ಮೆ ಇತಿಹಾಸ, ಪುರಾಣ ಹೀಗೆ ಎಲ್ಲಾ ಆಯಾಮಗಳಿಂದ ಎಲ್ಲಿಯೂ ಅತಿರೇಕವೆನಿಸದೆ ರೂಪಿಸಿರುವುದು ಖುಷಿಕೊಡುತ್ತದೆ. ಅದರಂತೆಯೇ, ಮುಂದಿನ ಕಥೆ ಒಡಲಾನಲ ಕಥೆಯು ರೋಚಕತೆಯ ಹಾದಿಯಲ್ಲಿದೆ. ಸದ್ಯದಲ್ಲಿ ಅರ್ಧ ಓದಿರುತ್ತೇನೆ, ಓದುತ್ತಿರುತ್ತೇನೆ. ಭೂಗರ್ಭದಲ್ಲಿರುವ ಶಾಖಾವನ್ನು ಬಳಸಿ ಪ್ರಪಂಚಕ್ಕೆ ಇಂಧನವನ್ನು (ಶಕ್ತಿಯನ್ನು) ಒದಗಿಸಬಹುದೆಂಬ ಕೌತುಕತೆಯನ್ನು ಲೇಖಕರು ಮುಂದಿಡುತ್ತಿದ್ದಾರೆ. ಅದರಲ್ಲಿಯೂ, ಪುರಾಣದ ಕಥೆ, ಆರ್ಯರು ಮತ್ತು ದ್ರಾವಿಡರು, ಘಟ್ಟಗಳು, ಮಿಲಿಯನ್ ವರ್ಷಗಳ ಹಿಂದೆ ಆಗಿರುವ ಬದಲಾವಣೆಗಳು, ಭೂವಿಜ್ಞಾನದ ಅನೇಕ ಮಾಹಿತಿಗಳು ಕಥಯೊಳಗೆ ಬೆಸೆದಿರುವುದು, ಇದು ಕಥೆಯೋ, ವಿಜ್ಞಾನದ ಸಿನೆಮಾವೋ, ಸಂಶೋಧನಾ ಕಥೆಯೋ ಹೀಗೆ ಅನಿಸುವುದು ಹೌದು.

ನಾನು ಅನೇಕ ಬಾರಿ, ಹಲವರೊಂದಿಗೆ ಚರ್ಚಿಸಿದ್ದು ಹೌದು. ತೇಜಸ್ಚಿ ಮತ್ತು ಕಾರಂತರನ್ನು ಬಿಟ್ಟರೇ ಕನ್ನಡದಲ್ಲಿ ವಿಜ್ಞಾನವನ್ನು ಕಥೆಯೊಳಗೆ ಹೆಣೆದು ಆಸಕ್ತಿಮೂಡಿಸುವ ಬರಹಗಾರರು ಸಿಕ್ಕಿಲ್ಲ. ಅನೇಕರು, ಇಂಟರ್‌ನೆಟ್‌ನಲ್ಲಿ ಸಿಗುವ ಮಾಹಿತಿಯನ್ನೇ ಬರೆದು ಬೋರಾಗಿಸುತ್ತಾರೆ, ಆಗಿಸುತ್ತಾ ಬಂದಿದ್ದಾರೆ ಕೂಡ. ಆ ಹಿನ್ನಲೆಯಲ್ಲಿ ಶ್ರೀಯುತರ ಬರವಣಿಗೆ ಮತ್ತಷ್ಟು ಹೆಚ್ಚಲಿ. ಪುಸ್ತಕ ಶುರುವಿನಲ್ಲಿ ಹೇಳುವಂತೆ, ಕಥೆಗಾರ ಕಥೆಯನ್ನು ಸೃಷ್ಟಿಸುವುದಿಲ್ಲ, ಕಥ ತಾನಾಗಿಯೇ ಬರೆಸಿಕೊಳ್ಳುತ್ತದೆ. ಅದರಂತೆಯೇ, ಪರಿಸರ, ಪ್ರಕೃತಿಯ ಒಡಲಿನ ಕಥೆಗಳೆಲ್ಲಾ ಹೊರಬರಲಿ, ಓದುಗ ಮನಸ್ಸುಗಳು ಮುದವಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...