18 ನವೆಂಬರ್ 2019

ಫೋರ್ಡಿ ನಾಲ್ಕನೇ ಆಯಾಮದ ಸುತ್ತಾ!!!


ಕೆಲವೊಂದು ಹವ್ಯಾಸಗಳು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುವುದು ನೂರಕ್ಕೆ ನೂರು ಸತ್ಯ. ನಾನು ನಂಬಿರುವ ಹವ್ಯಾಸಗಳಲ್ಲಿ ಓದಿಗೆ ಮತ್ತು ಬರವಣಿಗೆಗೆ ಆ ಶಕ್ತಿಯಿದೆ. ಈ ಹವ್ಯಾಸಗಳ ಕುರಿತು ಎರಡು ಸಾಲು ಹೆಚ್ಚಿಗೆ ಹೇಳುತ್ತೇನೆ. ಒಳ್ಳೆಯದು ಕೆಟ್ಟದ್ದು ಎಂಬುದನ್ನು ಮಾನವ ನಿರ್ಮಿತವಷ್ಟೆ. ಅದನ್ನು ಕೆಲವರು ಹಣಕಾಸಿನ ಲಾಭಕ್ಕೆ ನೋಡಿ ಉತ್ತಮ ಹವ್ಯಾಸವೆಂದರೇ ಕೆಲವರು ಆರೋಗ್ಯದ ದೃಷ್ಠಿಯಿಂದ ಕೆಟ್ಟದ್ದು ಎನ್ನುತ್ತಾರೆ. ಉದಾಹರಣೆಗೆ: ಸಿನೇಮಾ ನೋಡುವುದು, ನಾಟಕ ನೋಡುವುದು, ಓದುವುದು, ಬರೆಯುವುದು, ಸುತ್ತಾಟ, ಇತ್ಯಾದಿಗಳ ಜೊತೆಗೆ ಕುಡಿಯುವುದು, ಸೇದುವುದು, ಜೂಜಾಡುವುದು ಹೀಗೆ ಸಾಲು ಬೆಳೆಯುತ್ತಾ ಹೋಗುತ್ತದೆ. ಕೆಲವರು ಕಥೆ ಕಾದಂಬರಿಗಳನ್ನು ಓದುವುದನ್ನು ಸಮಯ ವ್ಯರ್ಥವೆನ್ನುತ್ತಾರೆ, ಅವರಿಗೆ ಓದುವುದರಿಂದ ಕಣ್ಣಿಗೆ ಕಾಣುವಂತಹ ಭೌತಿಕ ಲಾಭ ಬರಬೇಕು. ಅಂದರೆ, ಪರೀಕ್ಷಾ ದೃಷ್ಟಿಯಿಂದ, ಪ್ರಮೋಶನ್ ಸಿಗಬೇಕು, ಆಗ ಆ ಓದಿಗೆ ಒಂದು ಅರ್ಥವೆಂದು ನಂಬುತ್ತಾರೆ.

ಸಿನೇಮಾ ಹುಚ್ಚು, ನಾಟಕದ ಅಭಿಮಾನವೆಲ್ಲಾ ಸಮಯ ವ್ಯರ್ಥವೆನ್ನುತ್ತಾರೆ. ಆದರೇ, ಅದೇ ರಂಗದಲ್ಲಿರುವವರು ನೋಡಲೇಬೇಕು ಅದರಿಂದ ಅವರಿಗೆ ಲಾಭವೆನ್ನುತ್ತಾರೆ. ಹಾಗೆಯೇ ಟಿವಿ ನೋಡುವುದು ಅಷ್ಠೇ, ಅಲ್ಲಿಯೂ ರಸಪ್ರಶ್ನೆಯಂತಹ ಜ್ಞಾನಾರ್ಜನೆಯಾಗಬೇಕಿರುವ ಕಾರ್ಯಕ್ರಮಗಳು ಮಾತ್ರವೇ ಇರಬೇಕು. ಅಷ್ಟೆಲ್ಲಾ ಏಕೆ? ಪ್ರೀತಿಯಲ್ಲಿ ಕೂಡ, ಪ್ರೇಮದಲ್ಲಿ ಕೂಡ ಲಾಭಾಂಶ ಹುಡುಕುತ್ತಾರೆ. ಈ ಪ್ರೀತಿ ಎಲ್ಲಾ ಸಮಯ ಹಾಳು, ಅದನ್ನು ಬಿಟ್ಟು ಉಪಯೋಗಕ್ಕೆ ಬರುವಂತಹ ಕೆಲಸವನ್ನಾದರೂ ಮಾಡಿ ಎಂದು ಉಪನ್ಯಾಸವನ್ನು ಕೊಡುತ್ತಾರೆ.

ನಾನು ಇವೆಲ್ಲವನ್ನು ಸಂವೇದನಾ, ಭಾವನಾತ್ಮಕವಾಗಿ ಹೇಳುವುದಕ್ಕೆ ಬಯಸುತ್ತೇನೆ. ಮನುಷ್ಯ ತನ್ನ ಜೀವನವನ್ನು ಎರಡು ವಿಧವಾಗಿ ನೋಡಬಹುದು, ಮೊದಲನೆಯದಾಗಿ ತನ್ನ ಭೌತಿಕವಾಗಿ ಅಂದರೇ ಕೈಗೆಟುಕುವ ಲಾಭಾಂಶದ ಆಧಾರದಲ್ಲಿ. ಒಂದು ಕ್ರಿಯೆಯಿಂದ ಲಾಭ ಬರಬೇಕು ಅಥವಾ ನಷ್ಟವಾಗಬಾರದು ಎಂದು. ಮತ್ತೊಂದು ಭಾವನಾತ್ಮಕವಾಗಿ ತನ್ನೊಳಗಿನ ಆನಂದಕ್ಕಾಗಿ. ಈ ಆನಂದ, ಆತ್ಮ, ಸಂತೋಷ ಇವೆಲ್ಲವೂ ತನ್ನೊಳಗಿನ ವಿಚಾರ. ಇದು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ. ಒಂದೇ ನದಿ ದಂಡೆಯಲ್ಲಿ ಸಾವಿರಾರು ಜನರಿದ್ದರೂ ಒಬ್ಬೊಬ್ಬರಿಗೂ ಒಂದೊಂದು ಬಗೆಯಾಗಿ ಆ ಪರಿಸರ ಕಾಣುತ್ತದೆ ಮತ್ತು ತಾನು ಕಾಣುತ್ತಿರುವುದೇ ಅಂತಿಮವೆಂದು ಮನಸ್ಸು ಹೇಳುತ್ತದೆ ಅದನ್ನು ವ್ಯಕ್ತಿ ಸಾಬೀತುಪಡಿಸಲು ತೊಡಗುತ್ತಾನೆ.

ಮರಳಿ ವಿಷಯಕ್ಕೆ ಬರುತ್ತೇನೆ. ನನಗೆ ಅತಿ ಅಚ್ಚು ಮೆಚ್ಚಿನ ಹವ್ಯಾಸವೆಂದರೇ ಓದುವುದು. ಈ ಹಿಂದೆಯೇ ಹೇಳಿದ್ದೇನೆ, ಅದೆಷ್ಟು ಓದುತ್ತಾ ಸಮಯ ಕಳೆದಿದ್ದೇನೆಂದರೇ, ಈ ಕಥೆ ಕಾದಂಬರಿ ಓದುವುದನ್ನು ಬಿಟ್ಟು ಯುಜಿಸಿ ಎನ್‍ಇಟಿ ಆದರೂ ಮಾಡೋದಲ್ವ ಅಂತಾ ನಮ್ಮಪ್ಪ ಬೈದಿರುವುದು ಇದೆ. ಆದರೇ, ಇತ್ತೀಚೆಗೆ ಅದರಲ್ಲಿಯೂ ಕಳೆದ ಒಂದೆರಡು ವರ್ಷದಲ್ಲಿ ನನ್ನ ದಿನಚರಿಯಲ್ಲಿ ಅನೇಕ ಬದಲಾವಣೆಗಳಾದವು. ನೆಪ ಮಾತ್ರಕ್ಕೆ ಹೇಳುವುದಾದರೇ ಕೆಲಸದ ಒತ್ತಡ, ಆರ್ಥಿಕ ಸಂಕಷ್ಟಗಳು, ಹೊಣೆಗಾರಿಕೆ, ಸಂಸಾರ ಮಣ್ಣು ಮಸಿ. ಆದರೇ, ಅವೆಲ್ಲವೂ ನೆಪಗಳು ಮಾತ್ರ. ನಿಜವೇನೆಂದರೇ, ನಾನು ಬಹಳ ಸೋಮಾರಿಯಾದೆ. ನಾನು ಯಾವಾಗ ಶ್ರಮಜೀವಿಯಾಗಿದ್ದೇ? ಈ ಪ್ರಶ್ನೆಯೂ ನಿಜವೇ. ನಾನು ಈ ಹಿಂದಿನಿಂದಲೂ ಬಹಳ ಸೋಮಾರಿತನದ, ಬೇಜವಾಬ್ದಾರಿಯ ವ್ಯಕ್ತಿ, ಅದರಲ್ಲಿ ಎರಡು ಮಾತಿಲ್ಲ. ಅದನ್ನು ಸಮಜಾಯಿಸುವಷ್ಟು ಶ್ರಮವನ್ನು ವಹಿಸಿದ್ದೇನೆ. ಆನೆ ನಡೆದದ್ದೇ ಹಾದಿ, ನಾನು ಬಯಸಿದ್ದೇ ಬದುಕು ಎಂದು ಬದುಕ ಹೊರಟವನು ನಾನು. ಅದರಿಂದ ಅನೇಕರು ನನ್ನನ್ನು ಗೇಲಿ ಮಾಡಿದ್ದು ಇದ್ದೆ, ಕೆಲವರು ನೇರವಾಗಿ, ಅನೇಕರು ಪರೋಕ್ಷವಾಗಿ. ಅದು ಅವರಿಗಿರುವ ವ್ಯಕ್ತಿ ಸ್ವಾತಂತ್ರ್ಯ, ಅದಕ್ಕೆ ನಾನೇಕೆ ಅಡ್ಡಬರಲಿ.

ನಾನು ಕೆಲಸ ಬಿಟ್ಟು ಸೀಕೋ ಕಟ್ಟಲು ಬಂದಾಗ ನಕ್ಕವರು ಅನೇಕರು. ಸಹಕರಿಸಿದವರು ಕೆಲವರು. ಮತ್ತೆ ಕೆಲಸ ಅಂತಾ ದೇಶ ಸುತ್ತಾಡುವಾಗ ಪೈಪೋಟಿಗೆ ಬಿದ್ದವರಂತೆ ಅಸೂಯೆಪಟ್ಟವರ ಸಂಖ್ಯೆ ಏನು ಕಡಿಮೆಯಿಲ್ಲ. ಈಗಲೂ ನನ್ನ ವಿರುದ್ಧ ಕತ್ತಿ ಮಸೆಯುತ್ತಿರುವವರು, ಅಸೂಯೆಪಡುವವರ ಸಂಖ್ಯೆ ಅತಿಯಾಗಿಯೇ ಇದೆ. ನಾನು ಏನು ಇಲ್ಲದ, ಏನನ್ನು ಸಾಧಿಸದ, ಕೇವಲ ನನ್ನ ಸಂತೋಷಕ್ಕಾಗಿ ಕೆಲವೊಂದು ಕೆಲಸ ಮಾಡುತ್ತಾ ಇರುವಾಗಲೇ ಇಷ್ಟೊಂದು ವೈರತ್ವ ಸಾಧಿಸುವವರು ಇನ್ನೂ ಏನಾದರೂ ಸಾಧಿಸಿದರೇ? ಪಾಪ ಅವರುಗಳು ಆತ್ಮ ಹತ್ಯೆ ಮಾಡಿಕೊಳ್ಳುವುದು ಖಚಿತ. ವಿಷಯಾಂತರವಾಗಿದೆ, ಇರಲಿ ಹೇಳಬೇಕೆಂದಿರುವುದೆಲ್ಲಾ ಬರಲಿ, ಬರೆಯುವ ಮನಸ್ಸಿರುವಾಗ, ಹೇಳುವ ಸನ್ನಿವೇಶದಲ್ಲಿ ಹೇಳಬೇಕು. ಕಾಲ ಕಳೆದಂತೆ ವಿಷಯಗಳು ಸಾಯುತ್ತವೆ.

ಮರಳಿ ವಿಷಯಕ್ಕೆ ಬರುತ್ತೇನೆ. ಕಳೆದ ಒಂದೆರಡು ತಿಂಗಳಿಂದ ನಾನು ಸ್ವಲ್ಪ ಬೇಸರವಾಗಿದ್ದೆ. ಕಾರಣವನ್ನು ಮತ್ತೊಮ್ಮೆ ತಿಳಿಸುತ್ತೇನೆ. ನನ್ನ ಸುತ್ತ ಮುತ್ತಲಿನ ವಿಚಾರಗಳು ನನ್ನನ್ನು ಹೆಚ್ಚಿನ ಮಟ್ಟಕ್ಕೆ ನೋವುಂಟು ಮಾಡಿದ್ದು ಸತ್ಯ. ಇದರ ಕುರಿತು ಮುಂದಿನ ಲೇಖನದಲ್ಲಿ ಹಂಚಿಕೊಳ್ಳುತ್ತೇನೆ. ಅದೇ ಸಮಯದಲ್ಲಿ ನನಗೆ ಸಿಕ್ಕಿದ್ದು, ಶ್ರೀ ಗುರುಪಾದ ಬೇಲೂರುರವರ ಮೂರು ಪುಸ್ತಕಗಳು. ಎರಡು ಪುಸ್ತಕಗಳ ಕುರಿತು ಈಗಾಗಲೇ ಹಂಚಿಕೊಂಡಿದ್ದೇನೆ. ಆದರೇ, ಮಾನಸಿಕವಾಗಿ ವಿಚಲಿತನಾಗಿದ್ದ ನನಗೆ ಅದರಿಂದ ಹೊರಕ್ಕೆ ಬರುವುದಕ್ಕೆ, ಈ ಫೋರ್ಡಿ ಎಂಬ ಪುಸ್ತಕ ಸಹಾಯ ಮಾಡಿತು ಎನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ನಾವು ಬೇಸರದಲ್ಲಿದ್ದಾಗ ನಾವು ಮೆಚ್ಚುವ ತಾಣಗಳೇ ಬೇಸರವೆನಿಸುತ್ತವೆ, ನಮ್ಮ ನೆಚ್ಚಿನ ಅಭ್ಯಾಸಗಳೇ ಛೇ ಎನಿಸುತ್ತವೆ. ನಮ್ಮ ಮೆಚ್ಚಿನ ಸಂಗೀತ ಕೂಡ ಸಾಕು ಎನಿಸುತ್ತದೆ. ಕುಳಿತಲ್ಲಿ ಕೂರಲಾಗದೇ, ಮಲಗಿದರೆ ನಿದ್ದೆ ಬಾರದೇ ಯಾಕೀ ಬದುಕು ಎನಿಸುವ ಹಂತಕ್ಕೂ ಹೋಗುತ್ತದೆ.

ಸಿಕ್ಕ ಸಿಕ್ಕವರ ಮೇಲೆ ರೇಗುವುದು, ಅಥವಾ ಬೇರೆ ಯಾವುದೋ ಅಂಶಗಳಿಗೆ ದಾಸ್ಯನಾಗುವುದು ಸರ್ವೇ ಸಾಮಾನ್ಯ. ಫೋರ್ಡಿ ಏಕೆ ನನಗೆ ಹಿಡಿಸಿತು ಅಥವಾ ಅಷ್ಟೊಂದು ಮೆಚ್ಚುಗೆಯಾಗುವ ಅಂಶಗಳೇನಿತ್ತು? ಈಗಾಗಲೇ ಹೇಳಿರುವ ಹಾಗೆ, ಪ್ರತಿಯೊಂದು ಪುಸ್ತಕಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಅದಕ್ಕೆ ಮುಖ್ಯ ಕಾರಣ, ಪ್ರತಿಯೊಬ್ಬ ಲೇಖಕನು ತನ್ನೊಳಗೆ ಹರಿದಾಡುವ ಆಲೋಚನೆಗಳನ್ನು ಪದಜೋಡನೆಯಿಂದ ಓದುಗನ ಮಡಿಲಿಗೆ ಹಾಕಿರುತ್ತಾನೆ. ಎಲ್ಲವೂ ನಮಗೆ ಮುದ ನೀಡುವುದಿಲ್ಲ, ಕೆಲವೊಂದು ಬೇಸರವನ್ನು ತರಿಸಬಹುದು, ಇನ್ನು ಹಲವು ಬಾರಿ ಇದೆಂತಹ ಬರವಣಿಗೆ ಅಥವಾ ಇದೆಂತಹ ಯೋಚನೆ ಅನಿಸಲೂಬಹುದು.

ಫೋರ್ಡಿಯನ್ನು ಓದಲು ಶುರು ಮಾಡಿದಾಗ ಇದೊಂದು ದೆವ್ವ ಭೂತದ ಕಥೆಯಿರಬೇಕು ಎನಿಸುತ್ತದೆ. ಆ ಹಿನ್ನಲೆಯಲ್ಲಿ ಕೆಲವೊಂದು ಪುಟಗಳನ್ನು ಮತ್ತೊಮ್ಮೆ ಓದಿದೆ. ಲೇಖಕರು ವಿಜ್ಞಾನವನ್ನು ವಿವರಿಸಲು ಬಳಸಿರುವ ತಂತ್ರಗಾರಿಗೆ ಈ ಕಾದಂಬರಿಯಲ್ಲಿ ಗೆದ್ದಿದೆ. ಸತ್ಯಕಾಮರವರ ಅನೇಕ ಕಥೆಗಳು ನೆನಪಿಗೆ ಬಂದು ಹೋದವು. ಅಂದಹಾಗೆ ಸತ್ಯಕಾಮರನ್ನು ಇತ್ತೀಚೆಗೆ ಓದಿರುವವರು ಬಹಳ ಕಡಿಮೆಯಾಗಿದ್ದಾರೆ. ದಯವಿಟ್ಟು ಒಂದೆರಡು ಪುಸ್ತಕಗಳನ್ನು ಓದಿ ನೀವು ಅವರ ಅಭಿಮಾನಿಯಾಗದೇ ಇದ್ದರೆ ಹೇಳಿ. ಒಂದೊಂದು ಆಯಾಮವನ್ನು ವಿವರಿಸುತ್ತಾ ಹೋಗುವ ಜೊತೆ ಜೊತೆಗೆ ಪ್ರಪಂಚದಲ್ಲಿ ಆಗುತ್ತಿರುವ ಆವಿಷ್ಕಾರಗಳು, ಬದಲಾಗುತ್ತಿರುವ ವಿದ್ಯಮಾನಗಳನ್ನು ಬಹಳ ಅಚ್ಚುಕಟ್ಟಾಗಿ ಮುಂದಿಟ್ಟಿದ್ದಾರೆ.

ವಿಶೇಷವಾಗಿ ಗಮನಿಸಿದ್ದು, ಲೇಖಕರ ಬರವಣಿಗೆಯ ಶೈಲಿ ಮತ್ತು ವಿವರಣೆಗಳು. ಮೊದಲ ಪುಸ್ತಕದಲ್ಲಿ ಅವರು ಸ್ವಲ್ಪ ಮಡಿವಂತಿಕೆಯಿಂದ ಹೊರಬಂದಿರಲಿಲ್ಲ. ಆದರೇ, ಇಲ್ಲಿ ಪ್ರೇಮಿಗಳ ನಡುವೆ ನಡೆಯುವ ಸಂಭಾಷಣೆ ಸನ್ನಿವೇಶಗಳನ್ನು ಹದಿಹರಯಕ್ಕೆ (ವಯಸ್ಸಿನ ಮಿತಿಯಾಕೆ?) ಕರೆದೊಯ್ದು ಅಲ್ಲಿ ಓದುಗನೇ ಪ್ರೇಮಿಯಾಗಿ ಜೋಗದ ಸುತ್ತಣ ಪರಿಸರವನ್ನು ಅನುಭವಿಸಲು ಬಿಡುತ್ತಾರೆ. ಪ್ರೇಯಸಿಯನ್ನು ಕಳೆದುಕೊಂಡವ£ (ವಿರಹಿಯ) ಭಾವನೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಿರುವುದು ಲೇಖಕರ ಸೂಕ್ಷ್ಮಸಂವೇದನೆಯನ್ನು ಎತ್ತಿ ತೋರಿಸುತ್ತದೆ. ಒಟ್ಟಾರೆಯಾಗಿ ಬೇರೆ ಬೇರೆ ಆಯಾಮಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಜೀವಿಗಳು ಇರಬಹುದು, ಅವುಗಳು ನಮಗಿಂತಲೂ ಮುಂದುವರೆದಿರಬಹುದು ಎಂಬ ಕಲ್ಪನೆಯೇ ಅದ್ಬುತ. ಏಕೆಂದರೇ, ಮನುಷ್ಯ ತಾನೇ ಬುದ್ದಿವಂತ ತನಗಿಂತ ಬೇರಾರು ಇಲ್ಲವೇ ಇಲ್ಲ ಎನ್ನುವ ಅಹಂಮಿನೊಳಗೆ ಮುಳುಗಿರುವ ಸಮಯದಲ್ಲಿ ಇಂತಹದೊಂದು ವಿಭಿನ್ನ ಆಲೋಚನೆ, ಮುಂದೊಂದು ದಿನ ನಿಜವೂ ಆಗಬಹುದು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...