25 ಏಪ್ರಿಲ್ 2020

ಸತ್ತು ಹೋದ ಸಿದ್ದಾಂತಗಳ ಮೆರವಣಿಗೆಯಲ್ಲಿ....




ಸ್ನೇಹಿತರೇ,
ಲೇಖನ ಉದ್ದವಿದೆ ಮತ್ತು ಗೊಂದಲವೂ ಎನಿಸಬಹುದು, ಸಾವಧಾನದಿಂದ ಓದಿ.

ಅನೇಕ ದಿನಗಳಿಂದ ಬರೆಯಬೇಕೆಂದಿದ್ದ ವಿಷಯಗಳನ್ನು ಈ ದಿನ ಪ್ರಸ್ತಾಪಿಸುತ್ತಿದ್ದೇನೆ. ಇವೆಲ್ಲವೂ ನನ್ನ ವೈಯಕ್ತಿಕ ಅಬಿಫ್ರಾಯಗಳೆಂಬು ಸತ್ಯ. ಇದನ್ನು ಅನೇಕರು ಒಪ್ಪುವುದಿಲ್ಲವೆಂಬುದು ಅಷ್ಟೇ ಸತ್ಯ ಮತ್ತು ಅವರನ್ನು ಒಪ್ಪಿಸಬೇಕೆಂಬ ಅನಿವಾರ್ಯತೆ ನನಗಿಲ್ಲವೆಂಬುದೂ ಸತ್ಯ. ಇಂದು, ಮಹೇಂದ್ರ ಕುಮಾರ್ ಕೊಪ್ಪರವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಕಸಿವಿಸಿಯಾಯಿತು. ನಾನು ನನ್ನ ಬಿ.ಎಸ್ಸಿ. ದಿನಗಳಿಂದಲೂ ಅವರನ್ನು ನೋಡುತ್ತಾ/ಕೇಳುತ್ತಾ ಬಂದಿದ್ದೇನೆ. ಒಬ್ಬ ತೀವ್ರವಾದ ಬಲಪಂಥೀಯ ಸಿದ್ದಾಂತದ ಅನುಯಾಯಿಯಾಗಿ ದಶಕಗಳು ದುಡಿದು, ಸಂಘಟಿಸಿ, ದಿಢೀರನೇ ಅಲ್ಲಿಂದ ಹೊರಬಂದು ಅದರ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದು ನಿಜಕ್ಕೂ ಅಚ್ಚರಿ ಮತ್ತು ಅಸಾಮಾನ್ಯ.


ಈ ಸಿದ್ದಾಂತಗಳು, ಇಸಂ ಗಳು ಎಂದಿಗೂ ಅಫೀಮು ಇದ್ದಂತೆ ಅಥವಾ ಚಟವೆಂದರೂ ತಪ್ಪಿಲ್ಲ. ಒಬ್ಬ ವ್ಯಕ್ತಿ ಒಂದು ಸಿದ್ದಾಂತಕ್ಕೆ, ಇಸಂ ಗೆ ಗಂಟು ಬಿದ್ದರೆ ಮುಗಿಯುತು, ಅಲ್ಲಿಂದ ಹೊರಬರುವುದು ಅಸಾಧ್ಯದ ಮಾತು. ಇಷ್ಟವಿದ್ದರೂ ಇಲ್ಲದಿದ್ದರೂ ಅಲ್ಲಿಯೇ ಇರಬೇಕು. ನಮ್ಮ ಕನ್ನಡ ಸಿನೆಮಾಗಳಲ್ಲಿ ಆಗ್ಗಾಗ್ಗೆ ಕೇಳುವ ಒಂದು ಡೈಲಾಗ್ ಇದೆ “ನಾವು ರೌಡಿಸಂ ಬಿಟ್ಟರೂ, ರೌಡಿಸಂ ನಮ್ಮನ್ನು ಬಿಡುವುದಿಲ್ಲವೆಂದು’. ಫೇಸ್‍ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಬರುವ ಪೋಸ್ಟ್‍ಗಳನ್ನು ಪಾರ್ವರ್ಡ್ ಮಾಡಿ ಭಕ್ತಿ ತೋರಿಸುವುದು, ನಿಷ್ಠಾವಂತ ಎಂದು ಬಿಂಬಿಸಿಕೊಳ್ಳುವುದು ಬೇರೆ. ಆದರೇ, ಅದರ ಒಳಗೆ ಆ ಸಿದ್ದಾಂತವನ್ನು ಸಾಧಿಸಲು ಪಣತೊಟ್ಟು ದುಡಿಯುವುದು ಬೇರೆ. ಈ ಅರ್ಥದಲ್ಲಿ ಮಹೇಂದ್ರರವರು ದುಡಿದಿದ್ದಾರೆ. ಅಲ್ಲಿಯೇ ಇದ್ದಿದ್ದರೇ ಈ ದಿನಕ್ಕೆ ನಿಜವಾಗಿಯೂ ಅತ್ಯುನ್ನತ ಪದವಿ ಸಿಕ್ಕೇ ಸಿಕ್ಕಿರುತ್ತಿತ್ತು. ಆದರೇ, ಆ ಕೊಂಡಿಯನ್ನು ಕಳಚಿ ಹೊರಕ್ಕೆ ಬಂದರು. ಅಲ್ಲಿಂದ ಬಂದ ನಂತರ ಅವರೇನು, ಎಡಪಂಥೀಯ ಸಿದ್ದಾಂತದ ಕಡೆಗೆ ಒಲಿಯಲಿಲ್ಲ. ಅಲ್ಲಿಂದಲೂ ದೂರ ಕಾಯ್ದಿರಿಸಿಕೊಂಡರು.

ವಿಚಿತ್ರವೆಂದರೇ, ನಮ್ಮಲ್ಲಿ ಒಂದು ಹೊಗಳಬೇಕು ಇಲ್ಲವೇ ದೂಷಿಸಬೇಕೆಂಬ ಅಲಿಖಿತ ನಿಯಮವೊಂದಿದೆ. ನೀನು ಬಲಪಂಥೀಯನಾಗಬೇಕು ಇಲ್ಲವೇ ಬಲಕ್ಕೆ ಬರಬೇಕು. ಮಧ್ಯದಲ್ಲಿರುತ್ತೇನೆಂದರೇ ಒಪ್ಪುವುದಿಲ್ಲ. ಒಂದರ್ಥದಲ್ಲಿ, ಮಹೇಂದ್ರರವರದ್ದೂ ಅದೇ ಆಯಿತೆನಿಸುತ್ತದೆ. ಮಾನವೀಯತೆಯ ಅಡಿಯಲ್ಲಿ ಸಮಾಜ ಕಟ್ಟೋಣ, ಜಾಗೃತೆ ಮೂಡಿಸೋಣವೆಂದು ಹೊರಟದ್ದು ಎರಡು ಪಂಥದವರಿಗೂ ಹಿಡಿಸಲಿಲ್ಲ. ಆದರೂ, ಅವರ ಇತ್ತೀಚಿನ ಹೋರಾಟಗಳನ್ನು ಮೆಚ್ಚಲೇಬೇಕು. ಯಾವುದೇ ಪಂಥವನ್ನು ಪಾಲಿಸದೇ ಕೇವಲ ಮಾನವೀಯತೆಯ ದೃಷ್ಠಯಿಂದ ಸಮಾಜವನ್ನು, ದೇಶವನ್ನು ನೋಡಲು ಬಯಸುತ್ತಿರುವ ಅನೇಕ ಮನಸ್ಸುಗಳಿಗೆ ಅವರು ಆಲೋಚನೆಗಳು ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ.

ಎರಡನೆಯದಾಗಿ, ಈ ಮೇಲಿನ ವಿಚಾರಗಳನ್ನೇ ಸ್ವಲ್ಪ ವಿವರಿಸಲು ಬಯಸುತ್ತೇನೆ. ಲೇಖನ ಉದ್ದವಾದರೂ ಸಹನೆಯಿಂದ ಓದಬೇಕೆಂಬುದು ನನ್ನ ಕೋರಿಕೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಒಮ್ಮೊಮ್ಮೆ ಬಹಳ ಆತಂಕವಾಗುತ್ತದೆ. ಅವೆಲ್ಲವನ್ನೂ ಉದಾಹರಣೆಗಳೊಂದಿಗೆ ವಿವರಿಸುತ್ತೇನೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹಲಗನಹಳ್ಳಿಯೆಂಬ ಒಂದು ದೊಡ್ಡ ಊರಿದೆ. ಅಲ್ಲಿರುವವರೆಲ್ಲರೂ ಮುಸಲ್ಮಾನರು. ನನ್ನ ಹೈಸ್ಕೂಲ್ ಕ್ಲಾಸ್‍ಮೇಟ್ ಕೂಡ ಇದ್ದಾರೆ. ಅವರಿಗೆ, ಹೀಗೆಯೇ ಫೋನ್ ಮಾಡಿ ಮಾತನಾಡುತ್ತಿದ್ದೆ. ಏನ್ರಪ್ಪಾ, ಹೇಗಿದೆ ಜೀವನ ಅಂತಾ ಎಲ್ಲಾ. ಆಗ ತಿಳಿದು ಬಂದ ಸುದ್ದಿ ಏನೆಂದರೇ, ಅವರ ಹೊಲ ಗದ್ದೆ ಕೆಲಸಗಳಿಗೆ ಅಕ್ಕ ಪಕ್ಕದ ಊರುಗಳಿಂದ ಕೂಲಿ ಕೆಲಸಕ್ಕೆ ಜನರು ಬರುತ್ತಿದ್ದರು. ಅವರುಗಳನ್ನೆಲ್ಲಾ ಆ ಊರಿನ ಜನರು ತಡೆದಿದ್ದಾರೆ, ಸಾಬ್ರುಗಳ ಮನೆಗೆ ಕೆಲಸಕ್ಕೆ ಹೋಗಬಾರದೆಂದು, ಹೋದರೇ ದಂಡ ವಿಧಿಸಲಾಗುವುದೆಂದು. ಇದು ನಮ್ಮ ಮಾಧ್ಯಮಗಳ ಕೊಡುಗೆ. ಇದನ್ನು ನನ್ನ ಸ್ವಂತ ಅನುಭವದಲ್ಲಿಯೇ ಹೇಳಿದರೆ ನಿಮಗೆ ತಿಳಿಯುವುದು. ಅದಕ್ಕೊಂದು ಹಿನ್ನಲೆಯನ್ನು ತಿಳಿಸುತ್ತೇನೆ. ಇತ್ತೀಚೆಗೆ ನನ್ನ ಒಂದಿಬ್ಬರು ಸ್ನೇಹಿತರು, ನಾನು ಮುಸಲ್ಮಾನರ ಪರವಾಗಿ ಪೋಸ್ಟ್ ಹಾಕುತ್ತೇನೆ, ನಾನು ಹಿಂದೂ ವಿರೋಧಿ ಮತ್ತು ಸುಳ್ಳು ಜ್ಯಾತ್ಯಾತೀತವಾದಿ ಎಂದು ಹಿಯಾಳಿಸಿದರು. ಆ ವಾಟ್ಸಾಪ್ ಚಾಟ್ ಅನ್ನು ಸಮಯ ಬಂದಾಗ ಪೋಸ್ಟ್ ಮಾಡುತ್ತೇನೆ. ಅವರು ಅಂಧಕಾರ ಅಳಿಯಲಿ ಎಂದು ಕೋರುತ್ತೇನೆ.

ಇರಲಿ, ನಾನು ಹುಟ್ಟಿದ್ದು ಬಾನುಗೊಂದಿ, ಬೆಳೆದಿದ್ದು, ಬಾನುಗೊಂದಿ, ಕೊಣನೂರು, ಕುಶಾಲನಗರ, ಮೈಸೂರು, ಬೆಂಗಳೂರು ಹೀಗೆ. ಹಳ್ಳಿಯಲ್ಲಿ ಜಾತಿಗೆ ಬಳಸುವ ಪದಗಳನ್ನೇ ಬಳಸುತ್ತೇನೆ, ಅದು ತಪ್ಪೆನಿಸಿದರೆ ಕ್ಷಮೆಯಿರಲಿ. ನಾನು ಯಾವುದೇ ಸಿದ್ದಾಂತಗಳನ್ನು ಪಾಲಿಸುವುದಿಲ್ಲ. ನನಗೆ ಮಾನವೀಯತೆ ಮಾತ್ರವೇ ಮುಖ್ಯ ಅದು ಬಿಟ್ಟರೇ ಇಕಾಲಜಿಯೊಂದೆ ನನ್ನ ಸಿದ್ದಾಂತ. ನಾನು ಪರಿಸರದ ಕುರಿತು, ನಿಸರ್ಗದ ಕುರಿತು ಆಲೋಚಿಸುತ್ತೇನೆ. ಅದರ ಸಿದ್ದಾಂತದ ಮುಂದೆ, ಮಿಕ್ಕ ಸಿದ್ದಾಂತಗಳೆಲ್ಲಾ ತೃಣ.

ನಮ್ಮಲ್ಲಿ ಜಾತಿ ಅನ್ನೋದು ಇರುವುದು ಹೌದಾದರೂ ಅದ್ಯಾವತ್ತೂ ನಮಗೆ ಸಮಸ್ಯೆಯನ್ನು ತಂದೊಡ್ಡಿಲ್ಲ. ಉದಾಹರಣೆಗೆ: ಹಿಂದೂ ಮುಸ್ಲಿಮ್, ಅವರನ್ನು ನಾನು ಕರೆಯುವುದು ಸಾಬ್ರುಗಳು ಅಂತಾ, ಅವರಿಗೆ ಯಾವುದೇ ಸಮಸ್ಯೆಯಿಲ್ಲ. ನನ್ನನ್ನು ಅವರುಗಳು ಕರೆಯುವುದು ನೀವು ಗೌಡ್ರುಗಳು. ನಮ್ಮಲ್ಲಿ ಸಾಬ್ರು ಅನ್ನೋದು ಒಂದು ಜಾತಿ, ಅದು ಧರ್ಮ ಅಂತಾ ತಿಳಿದೇ ಇಲ್ಲ. ನಮ್ಮಜ್ಜಿ ಕೇಳಿದ್ರೂ ಅದನ್ನೇ ಹೇಳೋದು ಸಾಬ್ರು ಜಾತಿಯವರು ಅಂತಾ. ಅಂದರೇ, ಅವರು ನಮ್ಮವರೇ ಅವರದ್ದು ಬೇರೋಂದು ಜಾತಿ ಅನ್ನೋ ರೀತಿಯಲ್ಲಿಯೇ ಬದುಕಿರೋದು. ಹೆಚ್ಚೂ ಕಡಿಮೆ ಪ್ರತಿಯೊಂದು ರಂಜಾನ್‍ನಲ್ಲಿ ನಾನು ಯಾರಾದರೂ ಒಬ್ಬ ಮುಸಲ್ಮಾನ್ ಸ್ನೇಹಿತನ ಮನೆಯಲ್ಲಿ ಊಟ ಮಾಡಿರುತ್ತೇನೆ. ಹಲಗನಹಳ್ಳಿ ಕಡೆಗೆ ಹೋಗುವಾಗೆಲ್ಲ, ನದೀಮ್ ಅಥವಾ ಮುಜಾಹಿದ್‍ಗೆ ಕಾಲ್ ಮಾಡಿ, ನಾನು ಬರ್ತಾಯಿದ್ದೀನಿ, ಬಿರಿಯಾನಿ ಮಾಡಿಸು ಅಂತಾ ಹೇಳಿ, ಬಿರಿಯಾನಿ ತಿಂದು ಬರ್ತೀನಿ. ಈ ಹಿನ್ನಲೆಯಲ್ಲಿ, ಯಾವುದೋ ಮೂಲೆಯಲ್ಲಿ ಯಾವನೋ ಸಾಬ್ರ ಜಾತಿಗೆ ಸೇರಿದವನು ತಪ್ಪು ಮಾಡಿದ್ದಕ್ಕೆ ಎಲ್ಲರನ್ನೂ ಸೇರಿಸಿ ದೂಷಿಸಿದರೇ ಸರ್ವೇಸಾಮಾನ್ಯವಾಗಿ ಕೋಪ ಬರುತ್ತದೆ. ಅದನ್ನು ನಾನು ಸಹಿಸುವುದಿಲ್ಲ. ನಾನೊಬ್ಬ ಗೌಡ್ರ ಜಾತಿಯವನಾಗಿ, ಯಾರೋ ನಾಲ್ಕು ಜನ ಗೌಡ್ರು ಜಾತಿಯವರು ಮಾಡಿದ್ದಕ್ಕೆ ಇಡೀ ಗೌಡ್ರ ಜಾತಿಯನ್ನೇ ಬೈದರೇ ಹೇಗೆ?

ಈ ಸಿದ್ದಾಂತಗಳ ವಿಚಾರಕ್ಕೆ ಬರೋಣ, ಯಾವುದೇ ಸಿದ್ದಾಂತಗಳು ಪರಿಪೂರ್ಣವಲ್ಲವೆಂಬುದನ್ನು ಮೊದಲು ಅರಿಯಬೇಕು ಮತ್ತು ಒಪ್ಪಿಕೊಳ್ಳಬೇಕು. ಸಿದ್ದಾಂತಗಳು ಆ ಸಮಯಕ್ಕೆ ಮತ್ತು ಸನ್ನಿವೇಶಕ್ಕೆ ರೂಪುಗೊಂಡಿರುತ್ತವೆ. ಎಲ್ಲಾ ಸಿದ್ದಾಂತಗಳು ಮಾನವ ನಿರ್ಮಿತವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿದ್ದಾಂತವನ್ನು ಬರೆದವನೇ ಶಾಸ್ವತವಲ್ಲವೆಂದ ಮೇಲೆ, ಇನ್ನೂ ಸಿದ್ದಾಂತಗಳು ಶಾಸ್ವತವಾಗಲು ಸಾಧ್ಯವೇ? ಅದನ್ನು ಅರಿಯದೇ ಹೋದರೇ ಆ ಸುಳಿಯಲ್ಲಿ ಸಿಲುಕಿಕೊಂಡು ಸಾಯುವುದು ಸತ್ಯ. ನಾವು ಸಿದ್ದಾಂತಗಳನ್ನು ನಂಬಬೇಕು, ಆದರೆ ಅದೊಂದೆ ಸತ್ಯ ಆ ಸಿದ್ದಾಂತಗಳನ್ನು ಬಿಟ್ಟು ಮಿಕ್ಕಿದೆಲ್ಲವೂ ಮಿತ್ಯವೆನ್ನುವ ಭ್ರಮೆಯಿಂದ ಹೊರಬರಬೇಕು. ಪ್ರತಿಯೊಂದು ಸಿದ್ದಾಂತವೂ ಅವರವರ ನಂಬಿಕೆ. ಯಾವುದರಲ್ಲಿ ಶ್ರದ್ದೆ ಇದೆಯೋ ಅದನ್ನು ಪಾಲಿಸಲಿ ಎಂಬುದನ್ನು ಮನಗಾನಬೇಕು.

ಈ ವಿಚಾರವನ್ನು ಮತ್ತೊಷ್ಟು ಆಳಕ್ಕೆ ಇಳಿದು ಚರ್ಚಿಸೋಣ. ಇದನ್ನು ಸ್ವಲ್ಪ ರಾಜಕೀಯಕ್ಕೂ, ರಾóಷ್ಟ್ರೀಯಕ್ಕೂ, ಧರ್ಮಕ್ಕೂ ವಿಸ್ತರಿಸೋಣ. ಮೊದಲನೆಯದಾಗಿ ರಾಜಕೀಯವನ್ನು ನೋಡೋಣ. ಅದರಲ್ಲಿಯೂ ಭಾರತೀಯ ರಾಜಕೀಯ ಪಕ್ಷಗಳನ್ನು ನೋಡೋಣ ಮತ್ತು ಅವುಗಳ ಸಿದ್ದಾಂತಗಳನ್ನೂ ನೋಡೋಣ. ಕಾಂಗ್ರೇಸ್ ಪಕ್ಷ ಅತಿ ಹೆಚ್ಚು ಕಾಲ ಆಡಳಿತ ನಡೆಸಿದೆ. ಆಡಳಿತದ ವಿಚಾರಗಳು ಬೇಡ, ರಾಜಕಾರಣವನ್ನು ಮಾತ್ರ ನೋಡೋಣ. ನೆಹರೂ ಕಾಲದ ಪಕ್ಷಕ್ಕೂ, ಇಂದಿರಾ ಗಾಂಧೀ ಕಾಲಕ್ಕೂ, ರಾಜೀವ್ ಗಾಂಧೀ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧೀ ಕಾಲಕ್ಕೂ ಅಜಗಜಾಂತರವಿದೆ. ಪಕ್ಷದ ಸಿದ್ದಾಂತಗಳು ಹಾಗೇಯೇ ಇದೆ ಮತ್ತು ಇರುತ್ತದೆ. ಅವುಗಳಲ್ಲಿ ಅಂತಹ ಬೃಹತ್ತ ಬದಲಾವಣೆಗಳು ಆಗಿರುವುದಿಲ್ಲ, ಪ್ರತಿಯೊಂದು ಕಂಪನಿಗಳಿಗೂ ಇರುವ ಬೈಲಾ ರೀತಿ, ಆ ಉಪನಿಯಮಗಳು ಇರುತ್ತವೆ, ಆದರೇ ನಡುವಳಿಕೆ ಬದಲಾಗುತ್ತಿರುತ್ತದೆ. ಇದೊಂದು ರೀತಿಯಲ್ಲಿ, ಕಾಲೇಜಿನ ಪ್ರಗತಿ ಪ್ರತಿಯೊಬ್ಬ ಪ್ರಾಂಶುಪಾಲರು ಬಂದಾಗ ಬದಲಾಗುವ ರೀತಿ.

ಅದೇ ರೀತಿಯಲ್ಲಿ, ಬಿಜೆಪಿ ಪಕ್ಷವನ್ನು ಗಮನಿಸುತ್ತಾ ಬನ್ನಿ. ಪಕ್ಷಾತೀತವಾಗಿ ವಾಜಪೇಯಿಯವರನ್ನು ಆರಾಧಿಸಿ, ಗೌರವಿಸಿದ್ದಾರೆ. ಅವರ ನೇತೃತ್ವದ ಬಿಜೆಪಿಗೂ, ಅಡ್ವಾನಿಯವರ ನೇತೃತ್ವದ ಬಿಜೆಪಿಗೂ, ಗಡ್ಕರಿಯವರ ಬಿಜೆಪಿಗೂ, ಅಮಿತ್ ಶಾ ಅವರ ನೇತೃತ್ವದ ಬಿಜೆಪಿಗೂ ಎಂತಹ ವ್ಯತ್ಯಾಸವೆಂಬುದು ಕಣ್ಣಿಗೆ ಕಂಡಿದೆ. ತೊಂಬತ್ತರ ದಶಕದಲ್ಲಿ ಪ್ರತಿಯೊಬ್ಬರು ರಾಮ ಮಂದಿರ ನಿರ್ಮಿಸಲೇಬೇಕೆಂದು ಆಸೆ ಪಟ್ಟಿದ್ದು ಹೌದು, ಆದರೇ, ಈಗ ಬಹುತೇಕರಲ್ಲಿ ಅದರ ಬಗ್ಗೆ ಆಸಕ್ತಿಯೇ ಇಲ್ಲ. ಅದು ಪ್ರಮುಖವೆನಿಸುತ್ತಿಲ್ಲ. ಕಾಲ ಬದಲಾಗುತ್ತಿದೆ. ಇದು, ಪ್ರಾದೇಶಿಕ ಪಕ್ಷಗಳಿಗೂ ಅನ್ವಯವಾಗುತ್ತದೆ. ದೇವೇಗೌಡರ ಜನತಾದಳಕ್ಕೂ ಕುಮಾರಸ್ವಾಮಿಯವರ ಪಕ್ಷಕ್ಕೂ ಅಂತರವಿದೆ. ಕಮ್ಯೂನಿಸ್ಟ್ ಪಕ್ಷವೂ ಅಷ್ಟೆ, ಜ್ಯೋತಿ ಬಸುವಿಗೂ ಕಾರಟ್‍ರಿಗೂ ವ್ಯತ್ಯಾಸವವಿದೆ. ಬದಲಾಗುತ್ತಿವೆ. ಸಿದ್ದಾಂತಗಳು ಪುಸ್ತಕಕ್ಕೆ ಮಾತ್ರ ಸೀಮಿತವಾಗಿವೆ, ಆಡಳಿತದ ಚುಕ್ಕಾಣಿ ಹಿಡಿಯುವುದೊಂದೆ ಮುಖ್ಯವೆಂಬುದರಲ್ಲಿ ತೊಡಗಿವೆ. ಸೂಕ್ಷ್ಮತೆ ಮಣ್ಣಾಗಿರುವು ಅಕ್ಷರಶಃ ಸತ್ಯ. ಯಡ್ಯೂರಪ್ಪರವರು ಮೊನ್ನೆ ಯಾವುದೇ ಕೋಮಿನ ವಿರುದ್ದ ದ್ವೇಷ ಕಾರಬಾರದೆಂಬ ಒಂದೇ ಒಂದು ಮಾತಿಗೆ ಸ್ವತಃ ಅವರ ಪಕ್ಷದವರೇ ತಿರುಗಿಬಿದ್ದದ್ದು ಕಂಡಿಲ್ಲವೇ?

ಧರ್ಮದ ವಿಚಾರಕ್ಕೆ ಬರೋಣ, ಪರಕೀಯರ ಧಾಳಿಗಳನ್ನು ಬದಿಗಿಟ್ಟು ನೋಡಿದರೂ ಅಷ್ಟೇ ಸಿಗುವುದು. ಬೌದ್ಧ, ಜೈನ, ಶೈವ, ವೈಷ್ಣವ, ಅದರೊಳಗೆ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಹೀಗೆ ಪ್ರತಿಯೊಬ್ಬ ರಾಜ ಅಧಿಕಾರಕ್ಕೆ ಬಂದಾಗ ಅವನು ನಂಬುವ ಸಿದ್ದಾಂತ, ದೇವರನ್ನು ಮುಂದಕ್ಕೆ ತರುವುದು ಇತರೆಯರನ್ನು ಕೀಳಾಗಿ ಕಾಣುವುದು ಸಾಮಾನ್ಯವಾಗಿದೆ. ಮೊಘಲರ ಕಾಲದಲ್ಲಿಯಾದರೂ ಅಷ್ಟೇ, ಮತ್ತೊಬ್ಬರಾದರೂ ಅಷ್ಟೆ. ಯುಡ್ಯೂರಪ್ಪರವರು ಅವರ ಜಾತಿಗೆ, ಕುಮಾರಸ್ವಾಮಿ ತಮ್ಮ ಜಾತಿಗೆ, ಸಿದ್ದರಾಮಯ್ಯ ಅವರ ಜಾತಿಗೆ, ಹೀಗೆ ಇಷ್ಟೆಲ್ಲಾ ವಿದ್ಯಾವಂತ ಸಮಾಜವಿದ್ದೇ ಈ ತಾರತಮ್ಯವಿರುವಾಗ ಇನ್ನೂ ನೂರಾರು ವರ್ಷಗಳ ಕೆಳಗೆ ಆಗಿರುವುದು ತಪ್ಪಾ? ಎಂದೋ ಇತಿಹಾಸದಲ್ಲಿ ಸೇರಿರುವುದನ್ನು ಕೆದಕಿ ಇಂದಿನ ಮತ್ತು ಮುಂದಿನ ನೆಮ್ಮದಿಯನ್ನು ಹಾಳು ಮಾಡುವುದು ಏಕೆ? ಅದರಲ್ಲಿಯೂ ಧರ್ಮದ ಹೆಸರಲ್ಲಿ. ಯಾರಿಗೆ ಗೊತ್ತು ಮುಂದೊಂದು ದಿನ ಬೇರೆ ಧರ್ಮದವರು ಅಧಿಕಾರಕ್ಕೆ ಬರಬಹುದು! ಆಗ ಮತ್ತದೇ ಪುನಾರಾವರ್ತನೆ?

ಅದೇ ರೀತಿ, ಕಮ್ಯೂನಿಸಂ, ಕ್ಯಾಪಿಟಲಿಸಂ, ಇವೆಲ್ಲವೂ ಅಷ್ಟೇ. ಎಲ್ಲವೂ ರಸಹೀನವಾಗಿವೆ. ಅಲ್ಲಿ ಯಾವ ರಸವೂ ಇಲ್ಲ, ಸತ್ವವೂ ಇಲ್ಲ. ತಂತ್ರಜ್ಞಾನ ಜನರನ್ನು ಸೋಮಾರಿಗಳಾಗಿಸಿದ್ದು ಸತ್ಯ. ವಿಚಾರಧಾರೆಯನ್ನು ತಿಳಿಯಲು, ಇನ್ನೂರು ಮುನ್ನೂರು ಪುಟಗಳ ಪುಸ್ತಕಗಳನ್ನು ಓದಬೇಕಿತ್ತು.  ನಂತರ ಭಾಷಣ, ಭಜನೆಗಳನ್ನು ಕೇಳಿ ಜ್ಞಾನಪಡೆಯುತ್ತಿದ್ದರು. ಈಗ ಅದ್ಯಾವುದು ಇಲ್ಲ, ಕೇವಲ ಒಂದೇ ಒಂದು ಪೋಸ್ಟ್ ಅದು ಸರಿ ತಪ್ಪೆಂಬ ಗೋಜಿಗೆ ಹೋಗುವುದಿಲ್ಲ. ನನ್ನ ಅನೇಕ ಸ್ನೇಹಿತರು ಅದರಲ್ಲಿಯೂ ಫೇಸ್‍ಬುಕ್ ಯುನಿವರ್ಸಿಟಿಯವರು, ಬಳಸುವ ಪದಗಳ ಅರ್ಥ ಕೇಳಬೇಕು, ಬುದ್ದಿಜೀವಿಗಳು, ಜ್ಯಾತ್ಯಾತೀತರು, ಪ್ರಗತಿಪರರು – ಇವರೆಲ್ಲರೂ ಯಾರು?

ಯಾರೋ ಎಲ್ಲಿಯೂ ಗುಂಪಿನಲ್ಲಿ ಹೇಳಿದ್ದನ್ನು ಪ್ರಚಾರ ಮಾಡುತಿರುವುದು ಸೋಜುಗ. ಅವೆಲ್ಲರ ಸಂತತಿ ನಶಿಸಿ ದಶಕಗಳಾಗಿವೆ. ಈಗ ಏನಿದ್ದರೂ ಸ್ವಾಮಿ ಪೂಜೆ ಅಷ್ಟೆ. ಅದು, ಮೋದಿಯಾಗಿರಬಹುದು, ರಾಹುಲ್ ಗಾಂಧಿಯಾಗಿರಬಹುದು.

ಅದನ್ನು ಬಿಟ್ಟರೇ, ಸದ್ಯದಲ್ಲಿರುವುದು. ಕಾರ್ಪೋರೇಟ್ ದುನಿಯಾ. ಶೇಕಡ ಒಂದಕ್ಕಿಂತಲೂ ಕಡಿಮೆ ಜನಸಂಖ್ಯೆಯ ಉದ್ಯಮಿಗಳು ಎಲ್ಲದರಲ್ಲಿಯೂ ಬಂಡವಾಳ ಹಾಕಿ, ಜಗತ್ತನ್ನು ತಮ್ಮ ಕೈ ವಶ ಮಾಡಿಕೊಂಡಿದ್ದಾರೆ. ಯಾವ ಪಕ್ಷ ಬರಬೇಕು, ಏನು ಸುದ್ದಿಯಾಗಬೇಕು, ಯಾವುದು ಪ್ರಚಾರ ಪಡೆಯಬೇಕು ಇವೆಲ್ಲವೂ ಇರುವುದು ಅವರ ಕೈಯಲ್ಲಿ. ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಮತ್ತು ಇಷ್ಟವಾಗದೇ ಇದ್ದರೇ ಬೀಳಿಸಲು ಅವರಿಗೆ ಮಾತ್ರವೇ ಸಾಧ್ಯ. ನಾವು ನಮ್ಮ ಮಾನಸಿಕ ನೆಮ್ಮದಿಗಾಗಿ, ಮಾಧ್ಯಮಗಳನ್ನು, ರಾಜಕಾರಣಿಗಳನ್ನು ಬೈದು ಸಮಧಾನ ಪಟ್ಟಿಕೊಳ್ಳಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...