ಯಾವುದನ್ನು ಬರೆಯುವುದು ಯಾವುದನ್ನು ಓದುವುದು ಯಾವುದನ್ನು ಆಡುವುದು ಯಾವುದನ್ನು ನೋಡುವುದು ಯಾವುದನ್ನು ಕೇಳುವುದು ಯಾವುದನ್ನು ಕಿವಿ ಮುಚ್ಚುವುದು. ಎಲ್ಲವು ತಲೆಯೊಳಗೆ ಹೋಗಲಾರದು, ಎಲ್ಲವನ್ನು ತಲೆಯಿಂದ ತೆಗೆಯಲಾರದು. ದೈವನ ಲೀಲೆಯೆಂಬುದೋ? ದೇವರ ಆಟವೆಂಬುದೋ? ಇಲ್ಲಾ ಕಾಟವೆಂಬುದೋ? ಪುಟ್ಟ ದ್ವೀಪದಲ್ಲಿ ತನ್ನದೇ ಜೀವನ ನಡೆಸುತ್ತಾ ಬದುಕುತ್ತಿದ್ದ ಜನರನ್ನು ಸುನಾಮಿ ಬಂದು ಬಡಿದೆಬ್ಬಿಸಿದರೇ? ಎಲ್ಲ ಜನರನ್ನೂ ಒಮ್ಮೆಗೆ ಯಮಲೋಕದ ರೈಲು ಹತ್ತಿಸಿದರೇ? ದ್ವೀಪವೆಂಬ ಕಗ್ಗಾಡಿನಲ್ಲಿದ್ದ ಜನ ದೇವರು ನಮ್ಮನ್ನು ಕರೆದೊಯ್ಯುತ್ತಿರುವುದು, ಯಮನ ಮನೆಗೆ, ಸ್ವರ್ಗಕ್ಕೆಂದು ನಲಿದಾಡಬೇಕೋ? ಇಲ್ಲಾ ಏನಾದರೂ ಹೇಗಿದ್ದರೂ ನಾವು ಹುಟ್ಟಿದ ನೆಲ ನಮಗೆ ಸ್ವರ್ಗವೆಂದು, ನಾವು ನಿನ್ನೂರಿಗೆ ಬರುವುದಿಲ್ಲವೆಂದು ದೇವರಿಗೆ ಮೊರೆಗೊಡಬೇಕಾ? ಹುಟ್ಟುವಾಗ ಯಾರನ್ನೂ ಕೇಳಿ ಬರಲಿಲ್ಲ, ಸಾಯುವಾಗಲೂ ಕೇಳುವುದಿಲ್ಲ! ಮತ್ತ್ಯಾಕೆ ಬಡತನ ಬೇಗೆಯಲ್ಲಿ ಬೆಂದು, ತಿನ್ನಲು ಅನ್ನವಿಲ್ಲದೇ, ಕೊರಗಬೇಕು. ಹಗಲಿರುಳ್ಳೆನ್ನದೇ ದುಡಿದರೂ ನೂರು ರೂಪಾಯಿ ಕೂಲಿ ಅಷ್ಟೇ? ಅಕ್ಕಿಯ ಬೆಲೆ ಐವತ್ತಾಯಿತು, ನೂರು ರೂಪಾಯಿ ದುಡಿದರೇ, ಆರು ಜನರು ತಿನ್ನಬೇಕು, ಉರುವಳಿಗೆಯಿಲ್ಲ ಬೇಯಿಸಲು, ಕಾಸಿಲ್ಲ, ಗ್ಯಾಸ್ ಕೊಳ್ಳಲು, ಸ್ವಂತ ಮನೆಯಿದ್ದರಲ್ಲವೇ ಗ್ಯಾಸ್ ಬೇಕಿರುವುದು. ಯಾವುದೋ ಪೈಪಿನ ಅಡಿಯಲ್ಲಿ ಮಲಗಿದರೂ ನಿದ್ದೆ ಬರುತ್ತದೆ, ನೆಮ್ಮದಿಯಿಂದಲ್ಲ, ಮುಂಜಾನೆಯಿಂದ ದುಡಿದ ನೋವಿನಿಂದ. ಇದ್ಯಾವ ನ್ಯಾಯ, ಬಡವನ ಜೀವಕ್ಕೆ ಬೆಲೆಯಿಲ್ಲವೇ? ಬಡವನಾಗಬೇಕೆಂದು ಬಯಸಿ ಹುಟ್ಟಲ್ಲಿಲ್ಲ, ಹುಟ್ಟಿದ್ದು ಆಯ್ತು, ಬದುಕಬೇಕೆಂದರೆ, ತಿನ್ನುವ ಅನ್ನವೇ, ಇಲ್ಲ, ಇರುವ ಸೂರಿಲ್ಲ, ರೋಗ ಬಂದರೇ ಗುಣವಾಗುವ ಸೂಚನೆಯಿಲ್ಲ, ದೇಶ ಬೆಳಗುತ್ತಿದೆಯೆಂದರೆ, ಯಾವುದು? ಬೀದಿ ದೀಪಗಳಿವೆ, ತಟ್ಟೆಗೆ ಕೈ ಹಾಕಿದರೇ ಅನ್ನ ಮುಟ್ಟುತ್ತಿರುವ ಭಾವನೆ ಮಾತ್ರ, ಕತ್ತಲಲ್ಲಿ ಕಣ್ಣಗಳಿಸಿದರೂ ಅನ್ನ ಕಾಣುವುದಿಲ್ಲ, ಹಸಿವು ಅದನ್ನೆಲ್ಲಾ ಯೋಚಿಸುವುದಿಲ್ಲ, ಅನ್ನವೋ ಕಲ್ಲೋ ಮಣ್ಣೋ ಮೊದಲು ಬಾಯಿಗೆ ಬೀಳಬೇಕು, ಅಷ್ಟೇ. ರುಚಿ ಎಂದರೇನೆಂಬ ಅರಿವೇ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ತಿನ್ನುವುದು ಒಂದು ಔಷಧಿ, ಬದುಕಲು ತಿನ್ನಬೇಕು, ಔಷಧಿ ಎಂದ ಮೇಲೆ ಹೆಚ್ಚು ತಿನ್ನುವ ಹಾಗಿಲ್ಲ, ಮಿತವಾಗಿರಬೇಕಲ್ಲವೇ? ನಾಲ್ಕೆ ತುತ್ತು, ಹೊಟ್ಟೆ ಕೂಗುತ್ತದೆ ಇನ್ನೂ ಬೇಕೆಂದು, ಇದ್ದರಲ್ಲವೇ, ಕೈಯಿಂದ ಬಾಯಿಗೆ ಹೋಗುವುದು, ನಾಳೆಯೂ ಬದುಕಿದ್ದರೇ ತಿನ್ನೋನವೆಂದ ಸಮಧಾನವಾಗುತ್ತದೆ, ಅನಿವಾರ್ಯತೆಯಲ್ಲವೇ, ಬದುಕುತ್ತೇನೆಂಬ ವಿಶ್ವಾಸವಲ್ಲ, ದೇವರು ಸಾಯಿಸುವುದಿಲ್ಲವೆಂಬ ನಂಬಿಕೆ.
ಇಲ್ಲಿ ಮೂಡಿರುವ ಅಕ್ಷರಗಳು ಕೇವಲ ಅಕ್ಷರಗಳಲ್ಲ, ನನ್ನಂತರಾಳದಿಂದ ಹೊಮ್ಮುತ್ತಿರುವ ಭಾವನೆಗಳ ಅಲೆಗಳು. ಒಂದೊಂದು ಪದವೂ ನನ್ನೊಳಗಿನಿಂದ ಅರಳುತ್ತಿರುವ ಪ್ರೀತಿಯ ಸುಮಧುರ ಸುಗಂಧದ ಪರಿಮಳವೂ. ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣವನ್ನು ಸೀಕೋ ಸಂಸ್ಥೆಯು ಕಲಿಸುತ್ತಿದೆ. ಅದರ ಜೊತೆಯಲ್ಲಿ ನೀರು ನಿರ್ವಹಣೆ, ಪರಿಸರ ಸಂರಕ್ಷಣೆ, ನೈರ್ಮಲ್ಯ, ಸಮಗ್ರ ಜಲಸಂರಕ್ಷಣೆ, ನದಿ ಆರೋಗ್ಯ, ಪರಿಸರ ಸಾಹಿತ್ಯ, ಸಮಗ್ರ ಗ್ರಾಮೀಣಾಭಿವೃದ್ಧಿಯ ಕುರಿತು ಸಮಾನ ಮನಸ್ಕರುಗಳ ಅಭಿಪ್ರಾಯ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಮೂಲಕ ಎಲ್ಲರನ್ನು ಒಳಗೊಂಡು ಸಂರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಬಿಟ್ಟು ಹೋಗೋಣ.
06 ಫೆಬ್ರವರಿ 2013
01 ಫೆಬ್ರವರಿ 2013
ಯಾವುದು ಸರಿ ಯಾವುದು ತಪ್ಪು, ಒಬ್ಬ ಹಾಲಿನಿಂದ ದೇವರಿಗೆ ಅಭಿಷೇಕ ಮಾಡ್ತಾನೆ, ಆ ದೇವರು ಸಸ್ಯಹಾರಿ ನೈವೇದ್ಯವನ್ನು ಮಾತ್ರ ಬಯಸುತ್ತೆ, ಅಲ್ಲಿ ಮಾಂಸಹಾರಕ್ಕೆ, ಹಿಂಸೆಗೆ ಸ್ಥಳವಿಲ್ಲ. ಅದು ಮುಂಜಾನೆಯ ಸ್ನಾನ ಮಡಿ ಗುಡಿಯಿಂದ ಶುರುವಾಗಬೇಕು. ಮಧ್ಯಾಹ್ನ ಪೂಜೆ ಇಲ್ಲ ಮತ್ತೇ ಸಂಜೆ ಪೂಜೆಯಾಗುತ್ತದೆ, ರಾತ್ರಿ ದೇವರು ಮಲಗುತ್ತಾನೆ, ತನ್ನದೇ ಸಮಸ್ಯೆಗಳನ್ನು ಹೊದ್ದಿಕೊಂಡು ಭಕ್ತರು ಮಲಗುತ್ತಾರೆ. ಮತ್ತೊಂದೆಡೆ, ಪೂಜಾರಿ ನಡುರಾತ್ರಿಯಲ್ಲಿ ಏಳುತ್ತಾನೆ. ಕತ್ತಲೂ, ಸುತ್ತಲೂ ಕತ್ತಲೂ, ಭಯಂಕರ ಜಡೆ, ಜಡೆಯೆಂದರೇ ನಿಜಕ್ಕೂ ಜಡೆಗೆಟ್ಟಿದೆ ಪೂಜಾರಿಯ ಕೂದಲು, ಎಣ್ಣೆ ಕಂಡಿಲ್ಲ, ಗಂಟು ಕಟ್ಟಿದೆ, ಮುಖವೂ ವಿಕಾರವೋ, ವಿರೂಪವೋ? ಭಯವನ್ನುಂಟು ಮಾಡುವ ಶಕ್ತಿಯಿದೆ. ಅಲ್ಲಿಗೆ ಬರುವ ಭಕ್ತರೂ ಅಷ್ಟೇ ಯಾವುದೋ ಪಾಪ ಮಾಡಿರಬಹುದು, ಇನ್ಯಾರಿಗೋ ಅನ್ಯಾಯ ಮಾಡಿರಬಹುದು, ಅಥವಾ ಮತ್ತಾರೋ ಮಾಡುತ್ತಿರುವ ಅನ್ಯಾಯದ ವಿರುದ್ದ ಹೋರಾಡುವ ಶಕ್ತಿ ಬೇಕೆಂದು ಬೇಡುತ್ತಿರಬಹುದು. ಒಂದೆಡೆ ಬೆಳಕು, ಮತ್ತೊಂದೆಡೆ ಕಡುಗಪ್ಪು. ದೇವರೆಲ್ಲರೂ ಒಂದೆ ಎಲ್ಲವೇ? ಅದು ಹೇಗೆ ಸಾಧ್ಯ ಮನುಷ್ಯರೆಲ್ಲರೂ ಒಂದೇ ಆಗಲು ಸಾಧ್ಯವೇ? ಇಷ್ಟ ಶಕ್ತಿ ದುಷ್ಟ ಶಕ್ತಿ ಇಲ್ಲವೇ? ಋಷಿಗಳೆಲ್ಲರೂ ಸಮಾನರೇ? ಅಘೋರಿಗಳು ಅರ್ಧ ಸುಟ್ಟ ಹೆಣಗಳನ್ನು ತಿನ್ನುವುದಿಲ್ಲವೇ? ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಿ ಇಲ್ಲಿ ಸತ್ತಿರುವುದನ್ನು ಮುಟ್ಟಲು ಹಿಂಜರಿಯುವುದಿಲ್ಲವೇ? ಇಬ್ಬರೂ ಹೇಗೆ ಸಮನಾದರು? ದುರ್ಯೋಧನ ಅಷ್ಟೊಂದು ಕ್ರೂರಿಯಾಗಿ ಸ್ವಾರ್ಥಿಯಾಗಿರಲಿಲ್ಲವೇ? ಧರ್ಮರಾಯ ಹುಲ್ಲು ಕಡ್ಡಿಗೆ ಅನ್ಯಾಯ ಮಾಡದೇ ಬದುಕು ನೀಗಲಿಲ್ಲವೇ? ಎಲ್ಲರೂ ಸಮನಾದರೇ, ವೈವಿಧ್ಯವೆಲ್ಲಿ? ನಿಂಬೆ ಹಣ್ಣಿಗೆ ಕುಂಕುಮ ಹಚ್ಚಿ ದೋಷ ನಿವಾರಣೆ ಮಾಡುವುದೊಂದೆಡೆಯಾದರೇ, ನರಬಲಿಯನ್ನು ಮಾಡಿ ದೋಷ ನೀಗಿಸುವುದು ಮತ್ತೊಂದು ವಿಧಿಯಲ್ಲವೇ? ವಿಧಿಯನ್ನು ನಡೆಸುವವನ ಮೇಲೆ ಅವಲಂಬಿತವಾಗಿರುತ್ತದೆ.
29 ಅಕ್ಟೋಬರ್ 2012
ಏನೋ ಗೀಚಬೇಕೂ ಮಾಸಿ ಹೋಗುವ ಮುನ್ನಾ!!
ಆಯುಧಪೂಜೆ ಮುಗಿಸಿಕೊಂಡು ಊರಿನಿಂದ ಆತುರಾತುರವಾಗಿ ಬೆಂಗಳೂರಿಗೆ ಬಂದು ತಲೆ ಹೋಗುವಷ್ಟು ಕೆಲಸವಿರುವಾಗಲೂ ನನ್ನ ಉಢಾಫೆತನದ ಕಥೆಯನ್ನು ಹೇಳಲು ನನ್ನ ಉಢಾಪೆಯನ್ನು ಪ್ರದರ್ಶಿಸುತ್ತಿದ್ದೇನೆ. ಕೆಟ್ಟ ಗಳಿಗೆಯೂ, ದುಷ್ಟ ಬುದ್ದಿಯೋ, ವಿನಾಶ ಕಾಲಕ್ಕೆ ವೀಪರೀತ ಬುದ್ದಿಯೆಂಬಂತೆಯೋ ಅಥವಾ ವಿನಾಶ ಕಾಲಕ್ಕೆ ಕೋತಿ ಮೊಟ್ಟೆ ಇಟ್ಟಿತೆಂಬಂತೆಯೋ ತಿಳಿದಿಲ್ಲ ಒಮ್ಮೊಮ್ಮೆ ದುಃಖಗಳು ಒಟ್ಟೋಟ್ಟಿಗೆ ಬರುತ್ತವೆ. ಕಷ್ಟವನ್ನು ಯಾರೂ ಪೇಟೇಂಟ್ ಮಾಡಿಕೊಂಡಿಲ್ಲ ಕಾಪಿ ರೈಟ್ಸ್ ಚಿಂತೆಯಯೂ ಇಲ್ಲ. ಇದು ಎಲ್ಲರಿಗೂ ಅತಿಯಾಗಿ ಉಚಿತವಾಗಿ ದೊರೆಯುತ್ತದೆ. ಮಧ್ಯಮ ವರ್ಗ ಮತ್ತು ಕೆಳವರ್ಗದವರಿಗೆ ಹೇರಳವಾಗಿಯೇ ಬರುತ್ತದೆ. ನಾನು ಕೆಳ ವರ್ಗಕ್ಕೆ ಸೇರಿದವನಾದ್ದರಿಂದ ಕಷ್ಟಗಳು ಅತಿಯಾಗಿಯೇ ಬಂದಿವೆ. ಊರಿಗೆ ಹಬ್ಬ ಮಾಡುವುದಕ್ಕೆಂದು ಹೋಗಲು ನಿರ್ಧರಿಸಿದೆ, ಹಾಗೆಯೇ ನನ್ನ ಕೆಲವು ಆತ್ಮೀಯ ಸ್ನೇಹಿತರನ್ನು ಕರೆದೆ. ನಂದ ಹೊಸದಾಗಿ, ಹತ್ತು ತಿಂಗಳ ಹಿಂದೆ ಒಂದು ಟೆಂಟ್ ತಂದು ಅದನ್ನು ಉದ್ಘಾಟನೆ ಮಾಡಲು ಸತತವಾಗಿ ಪ್ರಯತ್ನಿಸುತ್ತಿದ್ದರಿಂದ, ನಾವು ಭಾನುವಾರ ಬೆಂಗಳೂರಿನಿಂದ ಹೊರಟು ವಿರಾಜಪೇಟೆಯ ಹತ್ತಿರವಿರುವ ತಡಿಯಂಡಮೊಳ್ ಗೆ ಹೋಗಿ ರಾತ್ರಿ ಅಲ್ಲಿಯೇ ತಂಗುವುದಾಗಿ ನಿರ್ಧರಿಸಿದೆವು. ಕೆಲವೊಮ್ಮೆ ಯಾವೊಂದು ಕೆಲಸವೂ ಸರಿಯಾಗಿ ಆಗುವುದಿಲ್ಲ, ಏನನ್ನು ಮಾಡುವುದಕ್ಕೂ ಮನಸ್ಸು ಇರುವುದಿಲ್ಲ. ಈ ಬಾರಿಯೂ ಅಷ್ಟೇ ನನಗೆ ಊರಿಗೆ ಹೋಗುವುದಕ್ಕಾಗಲೀ, ತಡಿಯಂಡಮೋಳ್ ಗೆ ಹೋಗುವುದಕ್ಕಾಗಲೀ ಮನಸಿಲ್ಲದಿದ್ದರೂ, ಮುಂಚಿತವಾಗಿಯೇ ಅವರಿಗೆ ಹೇಳಿದ್ದೆ ಎಂಬ ಸೌಜನ್ಯಕ್ಕಾಗಿ ಹೊರಟೆ. ಕೆಲವೊಮ್ಮೆ ಈ ದಾಕ್ಷಿಣ್ಯ, ಸೌಜನ್ಯ ನಮಗೆ ಬಹಳಷ್ಟೂ ಇರಿಸು ಮುರಿಸು ಮಾಡುತ್ತವೆ. ಹಳ್ಳಿಯಲ್ಲಿಯಾದರೇ, ಸರಿಯಾಗಿ ಹೇಳುತ್ತಾರೆ, ಮುಲಾಜಿಗೆ ಬಸಿರಾಗೋಕೆ ಆಗುತ್ತಾ? ಎಂದು. ಅದೇನೆ ಇರಲಿ ವಿಷಯಕ್ಕೆ ಬರೋಣ.
ನಾನು ಮಧು, ನಂದ ಮತ್ತು ಸುಧಿ, ಕೆಂಗೆರಿ ನೈಸ್ ಕಾರಿಡಾರ್ ಬಳಿ ಸೇರಿ, ಎರಡು ಬೈಕ್ ಗಳಲ್ಲಿ ಸುಮಾರು ಎಂಟು ಮುವತ್ತಕ್ಕೆ ಹೊರಟೆವು. ಮೈಸೂರು ಬೆಂಗಳೂರು ರಸ್ತೆಯಲ್ಲಿ ಅದೆಷ್ಟು ವಾಹನಗಳು ಚಲಿಸುತ್ತವೆಂದರೆ ಹೇಳತೀರದು. ಇತ್ತೀಚೆಗೆ ಸ್ವಂತ ವಾಹನಗಳ ಸಂಖ್ಯೆ ಅತಿಯಾಗುತ್ತದೆ. ಇದು ಹೀಗೆ ಮುಂದುವರೆದರೆ, ದೇಶದ ರಸ್ತೆಗಳೆಲ್ಲ ವಾಹನ ನಿಲುಗಡೆಗೆ ಪಾರ್ಕಿಂಗ್ ಏರಿಯಾ ಆಗುತ್ತದೆ. ಬೆಂಗಳೂರು ಸಿಟಿ ಒಳಗೆ ಇರುವಷ್ಟೇ ದಟ್ಟನೆ ವಾರದ ಕೊನೆಯಲ್ಲಿ ಮತ್ತು ಈ ದಸರಾ ಸಮಯದಲ್ಲಿರುತ್ತದೆ. ಒಂದು ಕ್ಷಣಕ್ಕೆ ಕೂಡ ಆಚೇ ಈಚೆ ತಿರುಗುವ ಹಾಗಿಲ್ಲ, ಕನ್ನಡಿ ನೋಡದೇ ಗಾಡಿ ಓಡಿಸುವುದಕ್ಕೆ ಸಾಧ್ಯವೇ ಇಲ್ಲ. ಅದರಲ್ಲಿಯೂ ಬೈಕ್ ಗಳಲ್ಲಿ ಹೋಗುವಾಗ ಬಹಳ ಎಚ್ಚರಿಕೆಯಲ್ಲಿರಬೇಕಾಗುತ್ತದೆ. ಇತ್ತೀಚೆಗೆ ಬರುವ ಕಾರುಗಳಲ್ಲಿ ಪವರ್ ಸ್ಟೇರಿಂಗ್ ಇರುವುದರಿಂದ ಮತ್ತು ರಸ್ತೆಗಳು ಚೆನ್ನಾಗಿರುವುದರಿಂದ ರಾಕೇಟ್ ವೇಗದಲ್ಲಿ ಕಾರುಗಳನ್ನು ಚಲಿಸುತ್ತಾರೆ. ವಿಪರ್ಯಾಸವೆಂದರೇ ಅದನ್ನು ಕಂಟ್ರೋಲ್ ಮಾಡುವ ಮಟ್ಟಕ್ಕೆ ಅವರಿಗೆ ತರಬೇತಿ ಇರುವುದಿಲ್ಲ. ನೀವು ಸಾಮಾನ್ಯವಾಗಿ ಗಮನಿಸಿದರೇ, ವೈಟ್ ಬೋರ್ಡುಗಳೇ ಹೆಚ್ಚು ಆಕ್ಸಿಡೆಂಟ್ ಆಗುವುದು. ಕಾರಣ ಅವರಿಗೆ ಕಂಟ್ರೋಲಿಂಗ್ ಕೆಪಾಸಿಟಿ ಇರುವುದಿಲ್ಲ. ಚನ್ನಪಟ್ಟಣದ ಬಳಿಯಲ್ಲಿ ಎರಡು ಕಾರುಗಳು ಗುದ್ದಾಡಿಕೊಂಡು ನಿಂತಿದ್ದವು. ಪಾಪ ಎರಡು ದೊಡ್ಡ ಕಾರುಗಳೇ! ಆದರೇನೂ ಮಾಡುವುದು ವೇಗದಿಂದ ಬಂದು ಹಂಪ್ಸ್ ಬಳಿಯಲ್ಲಿ ಕಂಟ್ರೋಲಿಗೆ ಸಿಗದೆ ಮುಂದಿದ್ದ ಕಾರಿಗೆ ಗುದ್ದಿದ್ದ. ಒಂದು ನಿಮಿಷದ ತಪ್ಪಿಗೆ ಇಡೀ ದಿನವೇ ಹಾಳಾಗಿ ಹೊಗಿತ್ತು. ಇಂಥಹ ವೇಗ ಯಾಕೆ ಬೇಕು? ಹತ್ತು ನಿಮಿಷ ತಡವಾಗಿ ಹೋದರೇನು ತಪ್ಪು? ಮೈಸೂರು ಎಲ್ಲಿಗಾದರೂ ಓಡಿ ಹೋಗುತ್ತದೆಯೇ? ಅಂತು ನಿಂತು ನಾವು ಸ್ವಲ್ಪ ಎಚ್ಚರಿಕೆಯಿಂದಲೇ ನಿಧಾನವಾಗಿ ಮಂಡ್ಯ ತಲುಪಿದೆವು. ಜನರು ಅದೆಷ್ಟರ ಮಟ್ಟಿಗೆ ಸುಲಿಗೆ ಮಾಡುವುದಕ್ಕೆ ತಯರಾಗಿದ್ದಾರೆಂದರೇ, ಅಬ್ಬಾ ಎನಿಸುತ್ತದೆ. ಮಂಡ್ಯದಲ್ಲಿ ತಿಂಡಿಗಾಗಿ ನಿಲ್ಲಿಸಿ ತಿಂಡಿ ತಿಂದೆವು, ನಾಲ್ಕು ಜನರ ತಿಂಡಿಯ ಬೆಲೆ ಕೇವಲ ಮೂನ್ನೂರ ಮುವತ್ತು. ಭಗವಂತನೇ ಕಾಪಾಡಬೇಕೆಂದು ಬೇಡಿ ಹೊರಟೆವು.
ತಿನ್ನುವ ಊಟ ತಿಂಡಿ ಈ ಮಟ್ಟಕ್ಕೆ ದುಬಾರಿಯಾಗಿರುವುದು ಕಣ್ಣೀರು ತರಿಸುತ್ತದೆ. ರೂಪಾಯಿ, ನೂರಕ್ಕೆ ಹೋಗಲಿ ಸಾವಿರಕ್ಕೆ ಬೆಲೆ ಇಲ್ಲದ ಸ್ಥಿತಿ ಬಂದೊದಗಿದೆ. ಹೀಗೆ ಹೋದರೆ ನಾವೆಲ್ಲಿಗೆ ತಲುಪುತ್ತೇವೆಂಬುದು ಭಯ ಉಂಟು ಮಾಡುತ್ತದೆ. ಅದೇನೆ ಆಗಲಿ, ಜಗತ್ತೇ ಆ ಹಾದಿಯಲ್ಲಿ ನಡೆದಿರುವಾಗ ನಾನೊಬ್ಬ ಚಿಂತಿಸಿ ಸುಧಾರಣೆ ತರುವ ಅಗತ್ಯವಿಲ್ಲ ಬಿಡಿ. ಅಲ್ಲಿಂದ ಮುಂದೆ ಹೋಗುವಾಗ ನೆನಪಾಗಿದ್ದು, ಅಲ್ಲಿ ಅಡುಗೆ ಮಾಡಲು ಬೇಕಿರುವ ಪಾತ್ರೆ ಮತ್ತು ಸೌದೆ ಕಡಿಯಲು ಮಚ್ಚು. ಮೈಸೂರಿಗೆ ಹೋಗದೇ, ಇಲವಾಲ ಬೈಪಾಸಿನಲ್ಲಿ ಹೋಗೋಣವೆನ್ನುವ ಸಮಯಕ್ಕೆ ಕಿರಣನ ನೆನಪಾಗಿ, ಅವನ ಮನೆಗೆ ಹೋಗಿ ಒಂದು ದೊಡ್ಡ ಪಾತ್ರೆ ಮತ್ತೂ ಮಚ್ಚು ತರಲು ಸಿದ್ದವಾದೆವು. ಕಿರಣನ ಅಪ್ಪ ಅಮ್ಮ ಬಹಳ ಒಳ್ಳೆಯವರು. ಸಾಮಾನ್ಯವಾಗಿ ಎಲ್ಲ ಅಪ್ಪ ಅಮ್ಮಂದಿರು ಬೇರೆಯವರ ಮಕ್ಕಳ ವಿಷಯದಲ್ಲಿ ಬಹಳ ಒಳ್ಳೆಯವರು. ಇದು ಹಳೆಯ ಮಾತು, ನಮ್ಮ ಅಪ್ಪ ಅಮ್ಮನ ವಿಷಯದಲ್ಲಿಯೂ ಅಷ್ಟೇ ನನ್ನ ಸ್ನೇಹಿತರೆಲ್ಲರೂ ಒಳ್ಳೆಯವರಂತೆ ಕಾಣುತ್ತಾರೆ ನಾನು ಮಾತ್ರ ಕೆಟ್ಟವನು. ಆದರೇ, ಸಿಟಿಯಲ್ಲಿ ಹಾಗಿಲ್ಲ, ಇಲ್ಲಿ ಬೇರೆ ಮಕ್ಕಳೆಲ್ಲಾ ಕೆಟ್ಟವರು ತಮ್ಮ ಮಕ್ಕಳು ಮಾತ್ರ ದೇವರುಗಳು. ಸ್ವಾರ್ಥದ ಉತ್ತುಂಗವೆಂದರೇ ಇದು. ಪುಟ್ಟಾ ಅವನ ಜೊತೆ ಹೋಗಬೇಡ ಅವನು ಕೆಟ್ಟವನು ಎನ್ನುತಾರೆ, ಅದೇ ನನ್ನೂರಿನಲ್ಲಿ ನೋಡು ಅವನ ಜೊತೆ ಹೋಗಿ ಕಲಿ ಎನ್ನುತ್ತಾರೆ. ನಗರದ ಜನರಿಗೆ ಕಲಿಯುವುದೇನಿದ್ದರೂ ಪುಸ್ತಕದಲ್ಲಿ ಮಾತ್ರ, ಹಳ್ಳಿಯ ಜನರಿಗೆ ಜನರ ಜೊತೆ ಕಲಿಯಬೇಕು. ಪುಸ್ತಕ ಹಿಡಿದು ಕೂತವನಿಗೆ ಅಲ್ಲಿ ಬೆಲೆ ಇಲ್ಲ. ಅದೇನೆ ಇರಲಿ, ವಿಷಯಕ್ಕೆ ಬರೋಣ. ಕಿರಣನ ಮನೆಯಿಂದ ಒಂದು ದೊಡ್ಡ ಪಾತ್ರೆ ಅದಕ್ಕೊಂದು ಮುಚ್ಚುಳ ಮತ್ತು ಕಡಿದರೂ ಹರಿಯದ ಒಂದು ಮಚ್ಚನ್ನು ತೆಗೆದುಕೊಂಡು ಮೈಸೂರು ಬಿಟ್ಟೆವು.
ಬಿಳಿಕೆರೆಯ ಬಳಿಗೆ ನಮ್ಮ ವಿಜಿ ಬಂದು ಎರಡು ಗಂಟೆಗಳೇ ಕಳೆದಿದ್ದವು. ಅವನ ಕಾಲಡಿಯಲ್ಲಿದ್ದ ಸಿಗರೇಟು ತುಂಡುಗಳೇ ಹೇಳುತ್ತಿದ್ದವು. ಅವನು ಬಂದು ಬಹಳ ಸಮಯವಾಗಿದೆಯೆಂದು. ಎಲ್ಲರೂ ಮತ್ತೊಮ್ಮೆ ಅವನಿಗೆ ಕಂಪನಿ ಕೊಡುವುದಕ್ಕೆಂದು ಪರಿಸರಕ್ಕೆ ನಾಲ್ಕು ಸಿಗರೇಟು ಹೊಗೆಯನ್ನು ಸೇರಿಸಿದೆವು. ಬಹಳ ತಿಂಗಳುಗಳ ತರುವಾತ ನನ್ನ ಹಳೆಯ ಕುದುರೆ (ನನ್ನ ಬೈಕ್) ನನ್ನ ಕೈಗೆ ಸಿಕ್ಕಿತ್ತು. ಸಿಕ್ಕಿದ ಖುಷಿಯಲ್ಲಿ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಹುಣಸೂರು ತಲುಪಿದೆವು. ಅಲ್ಲಿಂದ ಗೋಣಿಕೊಪ್ಪ ತಲುಪುವುದಕ್ಕೆ ಸ್ವಲ್ಪ ಹೆಚ್ಚಿನ ಸಮಯವೇಬೇಕಾಯಿತು. ಕಾಡಿನೊಳಗಿನ ಆ ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಅದರ ಜೊತೆಗೆ ಕಾಡಿನ ನಡುವೆ ಹೋಗುವಾಗ ಯಾವುದಾದರೂ ಪ್ರಾಣಿ ಸಿಗಲೆಂಬ ಆಸೆ. ಗುಂಡಿಗಳೇ ರಸ್ತೆಯಾಗಿದ್ದ ಹಾದಿಯಲ್ಲಿ ಚಲಿಸಿ ಗೋಣಿಕೊಪ್ಪವನ್ನು ತಲುಪಿದೆವು. ಅಲ್ಲಿ, ಟೀ ಕುಡಿದು, ರಾತ್ರಿ ಊಟ ಮಾಡಲು ಬೇಕಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡೆವು. ಅಲ್ಲಿಂದ ವಿರಾಜಪೇಟೆ ತಲುಪಿ ಮೂರ‍್ನಾಲ್ಕು ಅಂಗಡಿಗಳಿಗೆ ಅಲೆದು ಒಂದೆರಡು ಒಲ್ಡ್ ಮಂಕ್, ಸ್ವಲ್ಪ ಥಮ್ಸ್ ಅಪ್, ಹತ್ತೆನ್ನರಡು ಲೀಟರ್ ನೀರು, ಒಂದೆರಡು ಕೆಜಿ ಕೋಳಿಯನ್ನು ಕೊಂಡು ಹೊರಟೆವು. ವಿರಾಜಪೇಟೆ ಬಿಡುವಾಗಲೇ ಸಂಜೆ ಐದು ದಾಟಿತ್ತು. ಕತ್ತಲಾಗುವ ಮುನ್ನಾ ಬೆಟ್ಟದ ತುದಿಯನ್ನಾದರೂ ತಲುಪುವ ಬಯಕೆ ನನ್ನದಿತ್ತು. ನನಗೊಬ್ಬನಿಗಿದ್ದರೆ ಬಂತೇ ಭಾಗ್ಯ? ಎಲ್ಲರಿಗೂ ಇರಬೇಕಲ್ಲ. ವಿರಾಜಪೇಟೆಯಲ್ಲಿ ಸಿಗರೇಟು ಕೊಳ್ಳದೇ, ತಡಿಯಂಡಮೋಳ್ ಬೆಟ್ಟದ ತುದಿಯಲ್ಲಿ ಅಂಗಡಿಗೆ ಹುಡುಕಲು ಯತ್ನಿಸತೊಡಗಿದರು ನಮ್ಮ ದಂಡಾಧಿಕಾರಿಗಳು. ಅಂತೂ ಇಂತೂ ತಡಿಯಂಡಮೋಳ್ ಬೆಟ್ಟದ ಪಾದಕ್ಕೆ ಹೋದಾಗ ಸಂಜೆ ಆರುವರೆಯಾಗಿತ್ತು. ಸೂರ‍್ಯ ನಮ್ಮ ಮುಖವನ್ನು ನೋಡಲು ಇಷ್ಟವಿಲ್ಲದೇ ಮರೆಯಾಗಿದ್ದ. ನಮ್ಮ ಮುಖವನ್ನು ನೋಡಲು ಯಾರು ತಾನೇ ಇಷ್ಟಪಡುತ್ತಾರೆ ಬಿಡಿ.
ನಾನು ಮುಂದುವರೆಯುವ ಮುನ್ನಾ ತಡಿಯಂಡಮೋಳ್ ಬಗ್ಗೆ ನಾಲ್ಕು ಸಾಲುಗಳನ್ನು ನಿಮಗೆ ಹೇಳಿಬಿಡುತ್ತೇನೆ. ತಡಿಯಂಡಮೋಳ್ ಕರ್ನಾಟಕದ ಎರಡನೇ ಎತ್ತರದ ಬೆಟ್ಟ. ಇದು ಸಮುದ್ರ ಮಟ್ಟದಿಂದ ಸುಮಾರು 5724 ಅಡಿಗಳಷ್ಟು ಎತ್ತರದಲ್ಲಿದೆ. ವಿರಾಜಪೇಟೆಯಿಂದ ಸುಮಾರು 25 ಕೀಮೀ ಮತ್ತು ಮಡಿಕೇರಿಯಿಂದ ಸುಮಾರು 35 ಕೀಮಿಯಷ್ಟು ದೂರವಿದೆ. ಇದನ್ನು ತಲುಪುವ ಮಾರ್ಗ ಮಧ್ಯದಲ್ಲಿ, ಮೈಸೂರು ಅರಸರು ಕಟ್ಟಿಸಿರುವ ಹತ್ತೊಂಬತ್ತನೇ ಶತಮಾನದ ನಾಲ್ಕ್ನಾಡು ಅರಮನೆಯಿದೆ. ಅರಮನೆಯ ಜಾಗದಿಂದ ಮೇಲಕ್ಕೆ ಸುಮಾರು ಆರು ಕೀಮಿಗಳಷ್ಟು ಎತ್ತರಕ್ಕೆ ಬೈಕಿನಲ್ಲಿ ಅಥವಾ ಜೀಪಿನಲ್ಲಿ ಹೋಗಬಹುದು. ಅಲ್ಲಿಗೆ ಹೋದರೆ, ಥಾರು ರಸ್ತೆ ಕೊನೆಗೊಳ್ಳುತ್ತದೆ. ಅಲ್ಲಿಂದ ನೀವು ಸುಮಾರು ಆರು ಕೀಮೀ ರಷ್ಟು ದೂರ ನಡೆದು ಬೆಟ್ಟವನ್ನು ಏರಿದ್ದಾದ್ದರೇ ಕೇರಳ ಗಡಿಯನ್ನು ದಾಟುತ್ತೀರ ಮತ್ತು ತಡಿಯಂಡಮೋಳಿನ ತುದಿಯಲ್ಲಿರುತ್ತೀರ. ದೂರಕ್ಕೆ ಎಲ್ಲೆಲ್ಲಿಯೋ ಒಂದೊಂದು ಮನೆಗಳಿದ್ದರೂ ಆ ಮನೆಯನ್ನು ತಲುಪುವುದು ಕಷ್ಟಕರ.
ನಾವು ಹೀಗೆಲ್ಲಾ ಸರ್ಕಸ್ ಮಾಡಿಕೊಂಡು ಬೆಟ್ಟದ ತಪ್ಪಲಿಗೆ ಬಂದಾಗ ಕತ್ತಲಾಗಿತ್ತು. ಇತ್ತೀಚೆಗೆ ನಾನು ಬಹಳ ಸೋಮಾರಿಯಾಗಿದ್ದೇನೆ. ಯಾವಾಗ ಸೋಮಾರಿಯಾಗಿರಲಿಲ್ಲವೆಂದು ಕೇಳಬೇಡಿ. ನಾನು ಸುತ್ತಾಡುವುದರಲ್ಲಿ ಸ್ವಲ್ಪ ಶ್ರಮ ವಹಿಸುತ್ತಿದ್ದೆ. ಈಗ ಅದಕ್ಕೂ ನಿರಾಸಕ್ತನಾಗಿದ್ದೇನೆ. ನಾನು ಈ ಬಗೆಯ ನಿರಾಸಕ್ತನಾದದ್ದು ಯಾವಾಗವೆಂಬುದೇ ತಿಳಿಯಲಿಲ್ಲ. ನಾವು ನಮ್ಮನ್ನು ಪ್ರತಿನಿತ್ಯ ಗಮನಿಸಬೇಕಾಗುತ್ತದೆ. ಇಲ್ಲದಿದ್ದರೇ ಒಂದು ದಿನ ನಾವು ಸಂಪೂರ್ಣ ಸರ್ವನಾಶಕ್ಕೆ ಬಂದಾಗ ಅಯ್ಯೋ ಭಗವಂತ ನಾನು ಮುಳುಗಿ ಹೋದೇನಾ? ಎನಿಸುತ್ತದೆ. ಹಡಗಿನಲ್ಲಿ ಕುಳಿತವ ಕ್ಷಣ ಕ್ಷಣಕ್ಕೂ ಎಚ್ಚರವಹಿಸಬೇಕಾಗುತ್ತದೆ. ಹಡಗಿನೊಳಕ್ಕೆ ನೀರು ನುಗ್ಗಿ ಬರುವ ಮುನ್ನವೇ ಅವನು ಎಚ್ಚರಿಕೆವಹಿಸಬೇಕು. ನಾನು ಅಷ್ಟೇ, ಅಲ್ಲಿಗೆ ಹೋದಾಗ ತಿಳಿದದ್ದು, ಚಾರಣಕ್ಕೆಂದು ಹೋಗಿದ್ದೇನೆ, ಒಂದು ಟಾರ್ಚ್ ಇಲ್ಲ, ಕಾಲಿಗೆ ಬೂಟ್ಸ್ ಇಲ್ಲ, ಜರ್ಕೀನ್ ಇಲ್ಲ, ಒಂದು ರಗ್ಗು ಇಲ್ಲ, ಸ್ವೆಟರ್ ಇಲ್ಲ, ಬೆಂಕಿಪೊಟ್ಟಣವಿಲ್ಲ, ಜಿಗಣೆಗಳ ತವರೂರಿಗೆ ಕಾಲಿಟ್ಟಿದ್ದೇನೆ, ಅದನ್ನು ಎದುರಿಸುವ ಯಾವೊಂದು ತಯಾರಿಯೂ ಆಗಿಲ್ಲ. ಒಂದು ಸಣ್ಣ ಹಿಟ್, ಚಿಕ್ಕ ಪುಟ್ಟ ಹೊಗೆಸೊಪ್ಪು, ಉಪ್ಪು, ಹೀಗೆ ಏನಾದರೂ ಇದ್ದಿದ್ದರೇ ಆಗುತ್ತಿತ್ತು ಇದಾವುದು ಇಲ್ಲ. ಹೀಗೆ ಯಾರದೋ ಸ್ನೇಹಿತರ ಮನೆಗೆ ಹೋಗುವ ಹಾಗೆ ಬರಿಗೈಯಲ್ಲಿ ಹೋಗಿದ್ದೇನೆಂದರೇ ನನ್ನ ಉಢಾಫೆತನಕ್ಕೆ ಹಿಡಿದ ಕೈಗನ್ನಡಿಯಲ್ಲವೇ? ದೇವರು ಸದಾ ನಮ್ಮೊಂದಿಗಿರುತ್ತಾನೆಂದು ಹೇಳಲಾಗುವುದಿಲ್ಲ. ಹಿಂದೆ ಬಹಳಷ್ಟೂ ಬಾರಿ ನಮ್ಮನ್ನು ಕಾಪಾಡಿದ್ದಾನೆ, ಯಡಕುಮೇರಿಯಲ್ಲಿ ಹೊಳೆದಾಟುವಾಗ ಯಮನ ಹಗ್ಗ ಕತ್ತಿಗೆ ಸುತ್ತಿದ್ದನ್ನು ತೆಗೆದಿದ್ದಾನೆ, ಒಂಬತ್ತು ಗುಡ್ಡದಲ್ಲಿ ಯಮನ ಮನೆಯ ಬಾಗಿಲಲ್ಲಿ ಮಲಗಿದ್ದವರನ್ನು ಎಬ್ಬಿಸಿ ಕರೆದು ತಂದಿದ್ದಾನೆ, ಅನೇಕ ಲಾಂಗ್ ರೈಡ್ ಗಳಲ್ಲಿ ಕೈಹಿಡಿದಿದ್ದಾನೆ, ಅದನ್ನೆ ನಾವು ಉಢಾಫೆತನದಿಂದ ನೋಡಿದರೆ, ಎತ್ತರದ ಬೆಟ್ಟಕ್ಕೆ ಏರಿಸಿ ಒಮ್ಮೆಗೆ ದೊಪ್ಪೆಂದು ಎಸೆಯುವುದಿಲ್ಲವೇ? ಅದು ಈ ಭಾರಿಯಾಗುತ್ತದೆಂಬ ಬಲವಾದ ನಂಬಿಕೆ ನನಗೆ ಬರಲಾರಂಬಿಸಿತು.
ಡಾಂಬರು ರಸ್ತೆ ಕೊನೆಯಾಗುವ ಸ್ಥಳದಲ್ಲಿ ಯಾರೊ, ಮನೆ ಕಟ್ಟಿಸುತ್ತಿದ್ದರು. ಮನೆ ಅರ್ಧ ಕಟ್ಟಿ ನಿಂತಿತ್ತು. ಎಲ್ಲರೂ ಇಲ್ಲಿಯೇ ಉಳಿಯಬಹುದೆಂದು ಸೂಚಿಸಿದರು. ಆದರೇ ನನಗೆ ಆ ಜಾಗ ಅಷ್ಟು ಸಮಂಜಸವೆನಿಸಲಿಲ್ಲ. ಕಾರಣ ಅದು ಅಂಥಹ ರಕ್ಷಿತ ಸ್ಥಳವಲ್ಲ. ಪ್ರಾಣಿಗಳು ಅಡ್ಡಾಡುವಂತಿತ್ತು. ಆನೆಗಳು ಹೆಚ್ಚಿರುವ ಸ್ಥಳವಾದ್ದರಿಂದ ನಾವು ಸೂಕ್ಷ್ಮವಾಗಿ ಪರಿಗಣಿಸಬೇಕಿತ್ತು. ಅಲ್ಲಿಯೇ ಗಾಡಿ ನಿಲ್ಲಿಸಿ ಅಲ್ಲಿ ಕೆಲವು ಮನೆಗಳಿವೆ ವಿಚಾರಿಸೋಣವೆಂದೆ. ಆದರೇ, ನಮ್ಮ ಸ್ನೇಹಿತ ವರ್ಗದವರು ಅಲ್ಲಿಯೇ ತಂಗೋಣವೆಂದರು. ನಾನು ಇಲ್ಲಿ ನೋಡುವುದಕ್ಕಿಂತ ಮೇಲೊಮ್ಮೆ ಹೋಗಿ ಯಾವುದಾದರೂ ಮನೆಯಲ್ಲಿ ನೋಡೋಣ, ಅವರು ನಮಗೆ ಅಡುಗೆ ಮಾಡಿಕೊಡಲು ಒಪ್ಪಿದರೇ ಅಥವಾ ನಾವೇ ಮಾಡಿಕೊಳ್ಳಲು ಅನುಮತಿ ನೀಡಿ ನಾಲ್ಕು ಸೌದೆ ನೀಡಿದರೆ ಒಲಿತೆಂದು ತಿಳಿಸಿದೆ. ಮಳೆ ಸುರಿದು ನಮಗೆ ಹೊರಗಡೆ ಸೌದೆ ಸಿಗುವುದು ಅಸಾಧ್ಯವಾಗಿತ್ತು, ಅದನ್ನು ಒತ್ತಿಸಲು ನಮ್ಮ ಬಳಿಯಲ್ಲಿ ಸೀಮೆ ಎಣ್ಣೆಯಾಗಲಿ ಹೆಚ್ಚಿನ ಪೇಪರ್ ಆಗಲಿ ಇರಲಿಲ್ಲ. ಸ್ವಲ್ಪ ಮೇಲಕ್ಕೆ ಗಾಡಿಯಲ್ಲಿ ಒಬ್ಬರೊಬ್ಬರೇ ಹೋದರು, ನಾನು ನಡೆದುಕೊಂಡು ಹೋದೆ. ಹೋಗಿ ಇನ್ನೂ ಮುಂದೆ ಹೋಗುವಾಗ ಕವಲು ದಾರಿ ಬಂತು ಮಳೆಯ ಹನಿಗಳು ಶುರುವಾಯಿತು. ಅದೇ ಸಮಯಕ್ಕೆ ಯಾರೋ ದಾರಿಹೋಕರು ಬಂದರು. ಅವನನ್ನು ವಿಚಾರಿಸಿದೆವು. ನಾವು ಯಾವೊಂದು ತೀರ್ಮಾನಕ್ಕೂ ಬರಲಾಗಲಿಲ್ಲ. ಕಡೆಯದಾಗಿ, ಅಲ್ಲೊಂದು ಅರಣ್ಯ ಇಲಾಖೆಯ , ಅಲ್ಲಿಗೆ ಹೋಗಿ ನೋಡೋಣವೆಂದು ಹೊರಟೆವು. ಕಷ್ಟಪಟ್ಟು, ಓಡೋಡಿ, ಗಾಡಿಯನ್ನು ಓಡಿಸಿಕೊಂಡು ಬಂದು ಅರಣ್ಯ ಇಲಾಖೆಯ ಕಚೇರಿಯನ್ನು ತಲುಪಿದೆವು.
ಕಚೇರಿಯ ಮುಂದೆ ನಿಂತು ಒಳಕ್ಕೆ ಹೋಗಬೇಕೋ ಬೇಡವೋ? ಎಂದು ಯೋಚಿಸುತ್ತಿದ್ದೆವು. ಆಫೀಸಿನ ಮುಂಬಾಗದಲ್ಲಿ ಮೈದಾನವಿದ್ದು ಇಲ್ಲಿ ಟೆಂಟ್ ಹೊಡೆಯಬಹುದೆಂಬ ಲೆಕ್ಕಾಚಾರದಲ್ಲಿದ್ದಾಗಲೇ ಜೋರು ಮಳೆ ಬಂತು. ಮಳೆ ನಮ್ಮನ್ನು ಬಲವಂತವಾಗಿ ಕಚೇರಿಯ ಹತ್ತಿರಕ್ಕೆ ಹೋಗುವಂತೆ ಪ್ರೇರೇಪಿಸಿತು. ನಾವು ಕಚೇರಿಯ ಹೊರಾಂಡಕ್ಕೆ ಬಂದು ಕುಳಿತೆವು. ಕುಳಿತು ಸೇದಲು ಸಿಗರೇಟು ಇಲ್ಲದಿದ್ದರಿಂದ, ನಾಲ್ಕ್ನಾಡು ಅರಮನೆಯ ಬಳಿಯಲ್ಲಿ ತಂದಿದ್ದ ಬೀಡಿಯನ್ನು ಸೇದಿದೆವು. ಸೇದಿ ಸ್ವಲ್ಪ ಸಮಯದ ನಂತರ ಅಥವಾ ಸೇದುವಾಗಲೇ ನಮ್ಮ ಮುಂದಿನ ಯೋಜನೆಯನ್ನು ರೂಪಿಸತೊಡಗಿದೆವು. ಹತ್ತು ಹದಿನೈದು ನಿಮಿಷಗಳ ಬ್ರೈನ್ ಸ್ಟಾರ್ಮಿಂಗ್ ಆದಮೇಲೆ ಒಂದು ತೀರ್ಮಾನಕ್ಕೆ ಬಂದೆವು. ಇದು ಅರಣ್ಯ ಇಲಾಖೆಯವರ ಆಫೀಸು, ಅವರ ಅನುಮತಿಯಿಲ್ಲದೆ ಇಲ್ಲಿ ತಂಗುವುದು ಸೂಕ್ತವಲ್ಲ. ನಕ್ಷಲರ ಸಮಸ್ಯೆ ಇರುವುದರಿಂದ ನಮ್ಮನ್ನು ಅವರು ಹೇಗೆ ಪರಿಗಣಿಸುತ್ತಾರೆಂದು ಹೇಳಲಾರದು. ಇಲ್ಲಿಗೆ ಬಂದೆವು ಮಳೆ ಬರುತ್ತಿತ್ತು ನೀವ್ಯಾರು ಇರಲಿಲ್ಲ ಅದಕ್ಕೆ ನಾವು ಇಲ್ಲಿ ಉಳಿದೆವೆಂದರೇ ಯಾರಾದರು ಒಪ್ಪಿಯಾರೆ? ನಮ್ಮ ಮನೆ ಬೀಗ ಹಾಕಿರುವ ಸಮಯದಲ್ಲಿ ಯಾರಾದರು ದಾರಿ ಹೋಕರು ನಮ್ಮ ಮನೆಗೆ ಬಂದು ನೀವ್ಯಾರು ಇರಲಿಲ್ಲ ಅದಕ್ಕೆ ಬಂದು ಉಳಿದೆವೆಂದರೇ? ನಾವು ಒಪ್ಪುತ್ತೇವಾ? ಇದು ಯಾಕೋ ಮನಸ್ಸಿಗೆ ಬಹಳವಾಗಿ ಕೊರೆಯತೊಡಗಿತು. ಇಲ್ಲಿ ನ್ಯಾಯ ಅನ್ಯಾಯ ಎನ್ನುವುದಕಿಂತ ನೀತಿ ಮುಖ್ಯವೆನಿಸಿತು. ಮನೆಯ ಸುತ್ತ ಒಮ್ಮೆ ಸುತ್ತಾಡಿ ಬಂದೆವು. ಹೇಳುವುದಕ್ಕೆ ಆಫೀಸಾದರೂ, ಇದು ಮನೆಯಂತೆಯೇ ಇತ್ತು. ಮನೆಯ ಹಿಂಬದಿಯಲ್ಲಿ, ಒಂದು ಸ್ನಾನದ ಮನೆಯಂತೆ, ಅದಕ್ಕೊಂದು ಒಲೆಯೂ ಇತ್ತು. ಮನೆಯ ಕಿಟಕಿ ತೆಗೆದು ನೋಡಿದಾಗ, ಯಾರೋ ಆಗ ತಾನೆ, ಬಿಸಿ ನೀರು ಕಾಯಿಸಿಕೊಂಡು, ಸ್ನಾನ ಮಾಡಿ ಪೂಜೆ ಮಾಡಿರುವಂತೆ ಕಾಣಿಸಿತು. ಅದಕ್ಕೆ ಸಾಕ್ಷಿಯಂತೆ, ಒಲೆಯಲ್ಲಿ ಬೆಂಕಿಯಿತ್ತು, ಮನೆಯೊಳಗೆ ದೇವರ ದೀಪ ಉರಿಯುತಿತ್ತು.
ಇದೆಲ್ಲವನ್ನೂ ಗಮನಿಸಿದ ಮೇಲೆ ಒಂದು ತೀರ್ಮಾನಕ್ಕೆ ಬಂದೆವು. ಹೇಗೂ ನಾವು ಈ ಜಡಿ ಮಳೆಯಲ್ಲಿ ಹೊರಗಡೆ ಅಡುಗೆ ಮಾಡುವುದಕ್ಕೆ ಸಾಧ್ಯವಿಲ್ಲ, ಟೆಂಟ್ ಇರುವುದರಿಂದ ಮಲಗಲು ಪ್ರಯತ್ನಿಸಬಹುದು. ಮೊದಲು ಹೊಟ್ಟೆಗೆ ಬಿದ್ದರೆ ನಂತರ ನಿದ್ದೆಯ ಬಗ್ಗೆ ಯೋಚಿಸಬಹುದು. ಯಾರೂ ಇಲ್ಲದ ಮನೆಗೆ ಹೋಗಿ ಅಡುಗೆ ಮಾಡಿಕೊಂಡು ಊಟಮಾಡುವುದು ನೈತಿಕವಾಗಿ ಸರಿಯಿಲ್ಲ. ಇದು ಕೇವಲ ಸಿನೆಮಾದಲ್ಲಿ ಮಾತ್ರ ಕಾಮೆಡಿಯಾಗುತ್ತದೆ, ನಿಜ ಜೀವನದಲ್ಲಿ ಕಂಬಿಯ ಹಿಂದೆ ಗಾನ ಬಜಾನ ಹಾಡಬೇಕಾಗುತ್ತದೆ. ಆದ್ದರಿಂದ, ಮೊದಲು ಹಿಂದಿನ ಅವರ ಸ್ನಾನದ ಮನೆಯ ಒಲೆಯಲ್ಲಿ ಅಡುಗೆ ಮಾಡಿ ಮುಗಿಸೋಣ. ಚೆನ್ನಾಗಿ ಒಣಗಿರುವ ಸೌದೆಗಳಿವೆ, ಒಂದು ಗಂಟೆಯಲ್ಲಿ ತಂದಿರುವ ಕೋಳಿ ಮತ್ತು ಅಕ್ಕಿಯಿಂದ ಅನ್ನವನ್ನೂ ಬೆಯಿಸಬಹುದು. ಮೊದಲು ಹೋಗಿ ನಮ್ಮ ಪಾತ್ರೆಯ ಅಳತೆಗೆ ಒಲೆಯನ್ನು ಸಿದ್ದ ಮಾಡಿದೆವು. ಅಲ್ಲಿದ್ದ ಒಲೆಯು ನೀರು ಕಾಯಿಸುವ ಅಂಡೆಯನ್ನು ಇಡುವುದಕ್ಕಾದ್ದರಿಂದ ಅಲ್ಲಿಯೇ ಸುತ್ತ ಇದ್ದ ಮೂರು ಕಲ್ಲುಗಳನ್ನು ತಂದು ನಮ್ಮಲ್ಲಿದ್ದ ಪಾತ್ರೆಯ ಅಳತೆಗೆ ಸಿದ್ದಮಾಡಿದೆವು. ವಿಜಿ ಮತ್ತು ಮಧು ಅಡುಗೆ ಉಸ್ತುವಾರಿ ತೆಗೆದುಕೊಂಡರು. ನಾನು ಮತ್ತು ನಂದ ಅವರಿಗೆ ಬೇಕಿರುವ ಸಹಾಯಕ್ಕೆ ಸಹಾಯಕರಾದೆವು. ನಾನು ಅಲ್ಲಿಯೇ ಇದ್ದ ಕಲ್ಲುಗಳಿಂದ ಒಲೆಯನ್ನು ಸಿದ್ದ ಮಾಡಿದೆ. ಇನ್ನೂ ನಮ್ಮ ಜೊತೆ ಬಂದಿದ್ದ ನಂದನ ತಮ್ಮ ಸುಧಿ, ಅಮಾಯಕನಂತೆಯೋ ಅಥವಾ ತಾನು ಈ ಜಗತ್ತಿಗೆ ಸಂಬಂಧಿಸಿದವನಲ್ಲವೆನ್ನುವಂತೆಯೋ, ತನ್ನ ಪಾಡಿಗೆ ತಾನು ಐಪೋಡ್ ಹಿಡಿದು ಹಾಡು ಕೇಳಲು ಕುಳಿತ. ನಾವು ಅವನಿಗೆ ಜವಬ್ದಾರಿ ಹೊರಿಸುವ ಧೈರ್ಯ ಮಾಡಲಿಲ್ಲ.
ನಾನು ಅಕ್ಕಿಯನ್ನು ತೊಳೆದುಕೊಟ್ಟು, ಅನ್ನಕ್ಕೆ ಇಟ್ಟೆ. ವಿಜಿ ನಳ ಮಹರಾಜನಾದ. ಮಧು, ಈರುಳ್ಳಿ, ಟೋಮೋಟೋ, ಇತ್ಯಾದಿಗಳನ್ನು ಕೋಳಿ ಸಾರಿಗೆ ತಯಾರು ಮಾಡತೊಡಗಿದ. ಇದರ ನಡುವೆ ನನಗೆ ಸ್ವಲ್ಪ ಅಂಜಿಕೆಯಾಗತೊಡಗಿತು. ಯಾರಾದರೂ ಬಂದರೇ ಏನು ಹೇಳುವುದು? ಯಾರದೋ ಮನೆಯಲ್ಲಿ ಹೀಗೆ ಕದ್ದು ಅಡುಗೆ ಮಾಡುವುದು ಅದೆಷ್ಟೂ ನಾಚಿಕೆಗೇಡುತನ ಎನಿಸಿತ್ತು. ಇದನ್ನು ಹೇಳಿದಾಗ ಎಲ್ಲರೂ ನನ್ನ ಮಾತಿಗೆ ಒಪ್ಪಿದರೂ, ಮತ್ತೊಮ್ಮೆ ಬಂದರೇ 200-300 ಕೊಟ್ಟರೆ ಆಯ್ತು ಬಿಡು ಎಂದರು. ಇದು ಹಣ ಕೊಡುವ ಮಾತಲ್ಲ, ಮಾನ ಮರ‍್ಯಾದೆಯ ಮಾತೆಂಬುದನ್ನು ಅವರಿಗೆ ಅರ್ಥ ಮಾಡಿಸಬೇಕಾಯಿತು. ಅನ್ನ ತಯಾರಾಯಿತು. ಅಲ್ಲಿಯೇ ಇದ್ದ ಒಂದು ಬಾಳೆ ಎಲೆಯನ್ನು ತಂದೆವು, ಅದರ ಮೇಲೆ ಅನ್ನ ಸುರಿದು. ಕೋಳಿ ಸಾರು ಮಾಡಲು ತಯಾರಾದೆವು. ನನಗೆ ಅಂಥಹ ಸಮಯದಲ್ಲಿ ಸ್ವಲ್ಪ ತಾಳ್ಮೆ ಕಡಿಮೆ. ಎಲ್ಲವೂ ಬೇಗ ಆಗಬೇಕೆನ್ನುವವನು. ಇತರೆ ಸಮಯದಲ್ಲಿಯೂ ಅಷ್ಟೇ ತಾಳ್ಮೆಗೇಡಿ ನಾನು. ಇದರಿಂದಲೇ ಎಲ್ಲರೊಡನೆ ಜಗಳವಾಡುತ್ತೇನೆ. ಅದೇ ಸಮಯಕ್ಕೆ ಮಧು, ಈರುಳ್ಳಿಯನ್ನು ಅಳತೆ ಇಟ್ಟು ಕತ್ತರಿಸುತ್ತಿದ್ದ, ನಾನು ನೋಡಿ ಬೇಸತ್ತಿ ಹೋದೆ. ಗುರು ಇದು ಮನೆಯಲ್ಲ, ಬೇಗ ಮುಗಿಸು ಎಂದರೂ ಕೆಳಲಿಲ್ಲ. ಅದರ ಜೊತೆಗೆ ಸುಧಿ, ಅದೇನೋ ಮಾತಾಡುವುದು, ಇದರ ಮಧ್ಯದಲ್ಲಿ ನಂದ ಜಿಗಣೆಯ ಜೊತೆ ಆಟವಾಡಲು ನಿಂತ. ಮೊದಲೇ ಇದ್ದದ್ದು ಒಂದೇ ಒಂದು ಟಾರ್ಚ್. ಅದಕ್ಕೆ ಮೂರು ಬ್ಯಾಟರಿ ಬೇಕೆಂದು ತಿಳಿದಿದ್ದರೂ ಅವನು ಕೇವಲ ಎರಡೂ ಬ್ಯಾಟರಿ ತಂದಿದ್ದ. ದೇವರ ದಯೆಯಿಂದ ನನ್ನ ಕ್ಯಾಮೆರಾಗೆ ನಾಲ್ಕು ಬ್ಯಾಟರಿ ಬೇಕಿದ್ದರಿಂದ ಚಾರ್ಜರ್ ಬ್ಯಾಟರಿಯನ್ನು ಅದಕ್ಕೆಂದು ಉಪಯೋಗಿಸಿದೆವು. ಅದನ್ನು ಇವನು ಅಡುಗೆ ಮಾಡುವ ಸಮಯದಲ್ಲಿ ನನಗೆ ಜಿಗಣೆ ಹತ್ತಿದೆ, ಇರು ನೋಡೋಣ ಅದೆಷ್ಟು ದಪ್ಪವಾಗಬಹುದೆಂದು ಪರೀಕ್ಷೀಸತೊಡಗಿದ. ನಾನಂತೂ ಅದೆಷ್ಟರ ಮಟ್ಟಿಗೆ ತಾಳೆ ಕಳೆದುಕೊಂಡಿದ್ದೆಯೆಂದರೇ ಮನ ಬಂದಂತೆ ಬೈಯ್ಯತೊಡಗಿದೆ.
ಕೋಳಿ ಸಾರು ಬೇಯ್ಯುತ್ತಿದೆ, ಸಮಯ ಸುಮಾರು ಎಂಟೂವರೆ, ಯಾವುದೋ ಶಬ್ದ ಗುರ‍್ರ‍್ ಗುರ‍್ರ‍್ ಎಂದಂತೆ ಬರತೊಡಗಿತು. ಇರುವುದೊಂದೆ ಟಾರ್ಚ್, ಐದು ಜನರು ಎತ್ತ ನೋಡುವುದು. ಸುತ್ತಲೂ ಕತ್ತಲು, ಮಳೆ ಸುರಿದು ನಿಂತಿದೆ ಆದರೂ ಹನಿ ಬೀಳುತ್ತಿವೆ. ಇದೆಂಥಹ ಶಬ್ದವೆಂಬುದನ್ನು ಅರಿಯಲಾಗುತ್ತಿಲ್ಲ. ಯಾವುದೋ ಪ್ರಾಣಿ ಬಂದಿದೆಯೆಂಬುದು ಖಾತರಿ ಮಾಡಿಕೊಂಡರು. ನಾನು ಮುಂದೆ ಹೋಗಿ ನೋಡೋಣವೆಂದು ಒಂದೆಜ್ಜೆ ಮುಂದಿಟ್ಟೆ, ಹರೀ ಹೋಗಬೇಡ! ಎಂದರು. ಯಾರೆಂದರೆಂಬುದು ಅರಿವಿಲ್ಲ. ಮೂವರ ಬಾಯಿಂದಲೂ ಬಂದಿತ್ತು ಮಾತು. ನಾನು ಕ್ಷಣಕ್ಕೆ ಬೆಚ್ಚಿ ಬಿದ್ದೆ. ಅಯ್ಯೋ! ಯಾವ ಪ್ರಾಣಿ ಇರಬಹುದು?! ಪ್ರಶ್ನಾಚಕ, ಆಶ್ಚರ್ಯಸೂಚಕ! ಭಯ! ಆತಂಕ!ನಿಶಬ್ದತೆ! ಅಳುಕು! ಯಾವುದಿಲ್ಲ ನಮ್ಮ ಮೊಗದಲ್ಲಿ? ಎಲ್ಲಾ ಭಾವನೆಗಳ ಮಿಶ್ರಿತ. ನಗುವೊಂದು ಬಿಟ್ಟು ಮಿಕ್ಕಿದ್ದೆಲ್ಲಾ ಇದೆ. ನಗು ಬರುವ ಸಮಯವಲ್ಲ. ಚಾರ್ಲೀ ಚಾಪ್ಲೀನ್ ಅಲ್ಲಾ, ಮತ್ತೊಬ್ಬ ಹುಟ್ಟಿ ಬಂದರೂ ನಮ್ಮನ್ನು ನಗಿಸಲು ಸಾಧ್ಯವಿಲ್ಲ ಬಿಡಿ. ನಗಿಸಿವುದಿರಲಿ, ನಮ್ಮೊಳಗಿದ್ದ ಭಯವನ್ನು ಕಡಿಮೆ ಮಾಡುವ ಶಕ್ತಿಯೂ ಇರಲಿಲ್ಲ. ಅದು ಇದ್ದಿದ್ದರೇ ಆ ದೇವರಿಗೆ ಮಾತ್ರ. ಆತನಿಗೆ ಮಾತ್ರವೇ ಸಾಧ್ಯವಿತ್ತು. ಇದೆಲ್ಲವೂ ನಡೆಯುವಾಗ, ಯಾವುದೋ ಪ್ರಾಣಿ ಕೋಳಿ ಮಾಂಸದ ವಾಸನೆಯನ್ನು ಹಿಡಿದು ಬಂದಿದೆಯೆಂಬುದು ಖಾತ್ರಿಯಾಗಿತ್ತು. ಆದರೇ, ಆ ಪ್ರಾಣಿ ಯಾವುದು? ಚಿರತೆಗಳಿವೆಯೆಂಬುದು ನಂದನ ಅನಿಸಿಕೆ, ಚಿರತೆ ಬಂದಿರಬಹುದೇ? ಬಂದಿದ್ದರೇ? ನರಿಗಳಿವೆಯೆಂಬುದು ವಿಜಿಯ ಅಭಿಪ್ರಾಯ, ನರಿಗಳೆಂದರೇ ಎಷ್ಟಿರಬಹುದು? ಅದರ ಜೊತೆಗೆ ಕಾಳಿಂಗ ಸರ್ಪಗಳು ಹೆಚ್ಚಿರುವ ಸ್ಥಳ ಕೂಡ ಹೌದು. ಕಾಳಿಂಗ ಸರ್ಪವೂ ಪಾಲು ಕೇಳಿ ಬಂದರೇ? ಎರಡು ಕೆಜಿ ಕೋಳಿ ಮಾಂಸ ನಮಗೆ ಈ ಮಟ್ಟಕ್ಕೆ ಹಿಂಸೆ ಕೊಡುವುದೇ? ಮೂರಿಂಚು ಮಾಂಸಕ್ಕೆ ಅದೆಷ್ಟೋ ಜನರು ಬಲಿಯಾಗಿದ್ದಾರೆ, ಇನ್ನೂ ಕೋಳಿಗೆ ಪ್ರಾಣ ಕಳೆದುಕೊಳ್ಳುವುದು ದೊಡ್ಡದೇನಲ್ಲ ಎನಿಸಿತು.
ಕೋಳಿ ಮಾಂಸಕ್ಕೆ ಈ ಬಗೆಯೆಂದರೇ, ಇನ್ನೂ ಹಂದಿ ಮಾಂಸ ತೆಗೆದುಕೊಂಡು ಹೋಗೋಣವೆನ್ನುತ್ತಿದ್ದೆವಲ್ಲಾ? ಎಂಬ ಭಯದ ಜೊತೆಗೆ ಸಮಾಧಾನವಾಯಿತು. ದೆವ್ವಗಳು ಇರಬಹುದೆಂಬ ಊಹಾಪೋಹಗಳು ನಮ್ಮ ಖಾಕ್ ಬ್ರದರ್ಸ್ ಕಡೆಯಿಂದ ಬಂದಿತು. ಇಷ್ಟೇಲ್ಲಾ ನಡೆಯುವಾಗಲೂ ಆ ಶಬ್ದ ಕಡಿಮೆಯಾಗಲಿಲ್ಲ. ನಾನು ಟಾರ್ಚ್ ಹಿಡಿದು ಆ ಕಡೆಗೆ ಈ ಕಡೆಗೆ ಹಿಡಿಯುವುದು ತಪ್ಪಲಿಲ್ಲ. ಒಂದೆಡೆ, ಯಾರಾದರೂ ಬಂದರೆಂಬ ಭಯವಿತ್ತು, ಮತ್ತೊಂದೆಡೆಗೆ ಅಲ್ಲಿ ಯಾವುದೋ ಪ್ರಾಣಿ ಬಂದಿದೆಯಲ್ಲಾ ಎಂಬ ಆತಂಕ, ಯಾವುದಕ್ಕೆ ಗಮನಕೊಡಬೇಕೆಂಬುದೇ ಚಿಂತೆಯಾಯಿತು. ಈ ಭಯ ಈ ಆತಂಕದಲ್ಲಿ ಜೀವನ ಮಾಡುವುದು ದುಸ್ತರ. ಚಿಕನ್ ಶೇ.90 ರಷ್ಟು ಬೆಂದಿತ್ತು. ನಾನು ವಿಜಿ ಇಲ್ಲಿಯೇ ಬೆಂಕಿಯ ಬಳಿಯಲ್ಲಿ ಕುಳಿತು ಊಟ ಮುಗಿಸಿದರೆ ನಮಗೆ ಒಳ್ಳೆಯದೆಂದು ವಾದಿಸಿದೆವು. ಮಿಕ್ಕಿದವರು ಇಲ್ಲಿ ಕೂರುವುದು ಕಷ್ಟ ಮನೆಯ ಮುಂಬಾಗಕ್ಕೆ ಹೋಗೋಣ, ಇಲ್ಲಿದ್ದರೆ ನಾವು ನಾಲ್ಕು ಕಡೆಗೂ ಗಮನವಿಡಬೇಕು, ಮುಂದೆ ಇದ್ದರೆ ಒಂದು ಕಡೆಗೆ ಸಾಕೆಂದರು. ಸರಿಯಾಗಿ ಒಂಬತ್ತು ಗಂಟೆಗೆ ಅಡುಗೆ ಸಿದ್ದವಾಯಿತು. ನಾವು ಅಲ್ಲಿ ಅಡುಗೆ ಮಾಡಿದ್ದೇವೆಂಬ ಯಾವ ಸುಳಿವು ಸಿಗದಂತೆ ಎಲ್ಲವನ್ನು ಶುಚಿಗೊಳಿಸಿದೆವು. ಒಲೆಗೆಂದು ಇಟ್ಟಿದ್ದ ಕಲ್ಲುಗಳನ್ನು ಎಸೆದೆವು. ನನಗೆ ಒಂದು ನಂಬಿಕೆಯಿತ್ತು, ಬ್ಯಾಗಿನಲ್ಲಿ ಎರಡು ಫುಲ್ ಬಾಟಲಿ ಒಲ್ಡ್ ಮಂಕ್ ಇದೆ, ಅದು ಒಂದು ಸುತ್ತು ನಮ್ಮ ದೇಹಕ್ಕೆ ಸೇರಿದರೇ ಸಾಕು, ಚಿರತೆಯ ಮೊಲೆಯಲ್ಲಿ ಹಾಲು ಕರೆದು ಕುಡಿಯುವ ಧೈರ್ಯ ನಮ್ಮ ಹುಡುಗರಿಗೆ ಬಂದೇ ಬರುತ್ತದೆ ಎಂದು.
ಅಡುಗೆ ಮನೆಯಿಂದ (ಸ್ನಾನದ ಮನೆಯಿಂದ) ಅನ್ನ, ಸಾರು ಎಲ್ಲವನ್ನು ತಂದು ಊಟಕ್ಕೆ ತಯಾರು ಮಾಡಿದೆವು. ವಿಚಿತ್ರವೆನಿಸಿದ್ದು ಮತ್ತೊಂದು. ನಾವು ವಿರಾಜಪೇಟೆಯಿಂದ ಹತ್ತು ಲೀಟರು ನೀರು ತಂದೆವು. ಅಲ್ಲಿ ನೀರು ಸಿಗದಿದ್ದರೆ ಸಮಸ್ಯೆಯಾಗಬಾರದೆಂದು. ಆದರೇ, ಇಲ್ಲಿ ಮಳೆ ಸುರಿದು ಹೆಜ್ಜೆ ಇಟ್ಟಲೆಲ್ಲ ಶುದ್ದ ನೀರು ಹರಿಯುತ್ತಿತ್ತು. ಹೆಚ್ಚಿದ್ದರೇ ತೊಂದರೆ ಇಲ್ಲ ನೀರಿಲ್ಲದ್ದಿದ್ದರೇ? ಒಂಬತ್ತು ಗುಡ್ಡ ಬಾಗ -2 ಆಗುತ್ತಿತ್ತು. ಎಲ್ಲವನ್ನು ತಯಾರಿ ಮಾಡಿ, ಮಾಮೂಲಿ ಕಾಡಿನಲ್ಲಿ ಕೂರುವಂತೆಯೇ, ಸುತ್ತಲೂ ಗಮನಿಸುವ ನಿಟ್ಟಿನಲ್ಲಿ ಕುಳಿತೆವು. ಸುಧಿಯನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲವಾದ್ದರಿಂದ, ನಾನು, ವಿಜಿ, ಮಧು ಮತ್ತು ನಂದ ನಾಲ್ಕು ದಿಕ್ಕುಗಳನ್ನು ಗಮನಿಸುವ ಜವಬ್ದಾರಿ ವಹಿಸಿಕೊಂಡೆವು. ಕುಳಿತು ಹತ್ತು ನಿಮಿಷ ಸುತ್ತಲೂ ಟಾರ್ಚ್ ಬಿಡುವುದು ನೋಡುವುದು ಮಾಡಿದೆವು. ಎಣ್ಣೆ ಹೊಟ್ಟೆ ಸೇರಿದಮೇಲೆ ಅದರ ಅರಿವೇ ಬರಲಿಲ್ಲ. ಆದರೂ, ಆ ಶಬ್ದ ಮಾಡಿದ್ದು ಏನು? ಎನ್ನುವಾಗ ಅದು ಮರಗಳ ನಡುವೆ ವೇಗವಾಗಿ ಚಲಿಸುತ್ತಿದ್ದ ಗಾಳಿ ಮಾಡುತ್ತಿದ್ದ ಶಬ್ದ. ಅದಕ್ಕೆ ತಕ್ಕಂತೆ ಮೇಳೆ ಒದಗಸಿಕೊಡುತ್ತಿದ್ದದ್ದು, ಗುಡುಗು ಮತ್ತು ಮಿಂಚು. ಅದೇನೆ, ಆಗಲಿ ಸಮಯ ಹತ್ತಾಯಿತು, ಅರಣ್ಯ ಇಲಾಖೆಯವರು ಬರುವಂತೇ ಕಾಣುತ್ತಿಲ್ಲ, ಇದೇ ಜಗಲಿಯ ಮೇಲೆ ಮಲಗೋಣ. ಮುಂಜಾನೆ ಐದಕ್ಕೆ ಎದ್ದು ಬೆಟ್ಟ ಏರಲು ಹೋಗೋಣವೆಂದು ತೀರ್ಮಾನಿಸಿದೆವು. ಎಣ್ಣೆ ಖಾಲಿಯಾಗಿತ್ತು, ಚಿಕನ್ ಅಂತೂ ಅದ್ಬುತಾವಾಗಿತ್ತು. ಎಲ್ಲವೂ ಸಮರ್ಪಕವಾಗಿತ್ತು. ಮುಗಿಸಿ ಎದ್ದು, ತೊಳೆದು ಇಡುವ ಸಮಯವೂ ಬಂತು. ಇನ್ನೂ ಎಣ್ಣೆ ಇದ್ದಿದ್ದರೇ, ಚಿಕನ್ ಇದ್ದಿದ್ದರೇ ಎಂದು ಮುಗಿಸಿದೆವು.
ಇಷ್ಟೇಲ್ಲಾ ಮೋಜು ಇರುವಾಗ, ನಾವು ನಾಲ್ಕು ಹೆಜ್ಜೆ ಕುಣಿಯಬಾರದೇ? ಕುಣಿಯೋಣವೆಂದು ಮೊಬೈಲ್ ನಿಂದ ಹಾಡು ಹಾಕಿದೆವು. ನಂತರ ಲಾಪಟಾಪಿನಲ್ಲಿ ಹಾಡು ಹಾಕಿ ಕುಣಿಯಬೇಕು, ಯಾರೊ ಬರುವ ಶಬ್ದ ಮತ್ತು ಟಾರ್ಚ್ ಬೆಳಕು ಬಿತ್ತು. ಯಾರು ಕುಡಿದ್ದಿದ್ದವರು? ಎಲ್ಲವೂ ಇಳಿದು ಹೋಗಿತ್ತು. ಎರಡೇ ಕ್ಷಣಕ್ಕೆ ನಾವ್ಯಾರು ಕುಡಿದೇ ಇಲ್ಲವೆನ್ನುವಂತಾದರು. ಬಂದವರಿಗೂ ನಮ್ಮನ್ನು ಕಂಡು ಭಯವಾಗಿತ್ತು. ಬಂದವರು ಕೇವಲ್ ಇಬ್ಬರು, ತುಂಬಾ ತೆಳ್ಳಗಿದ್ದರು. ನಾವು ದಢೂತಿಗಳು ಐದು ಜನರು! ಮಾತಿಗೆ ಇಳಿಯಲು ಸ್ವಲ್ಪ ಅಂಜಿದರು. ನಂತರ ಯಾರಿಗೋ ಫೋನ್ ಮಾಡಿ ಮಾತನಾಡಿದರು. ಆ ಕಡೆಯಿದ್ದ ವ್ಯಕ್ತಿ ಕೇಳಿತು, ಹೇಗಿದ್ದಾರೆ? ನಾನು ಬರಲೇ ಬೇಕಾ? ಎಂದು. ನಂತರ ಅವರು ಹೊರಗೆ ಬಂದು ಖಾಲಿಯಾಗಿದ್ದ ಬಾಟಲಿಗಳನ್ನು ಎರಡೆರಡು ಬಾರಿ ಟಾರ್ಚ್ ಬಿಟ್ಟು ನೋಡಿದರು. ಎಲ್ಲವನ್ನೂ ಕುಡಿದು ಮುಗಿಸಿದ್ದಾರೆಂಬ ಬೇಸರ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಮೊದಲಿಗೆ ಅವರು ಹೊರಗಡೆ ಟೆಂಟ್ ಹೊಡೆದು ಮಲಗಿ ಎಂದರೂ, ನಂತರ ಅಲ್ಲಿಯೇ ಮಲಗಿ ಎಂದರು. ಬೇಕೆಂದರೇ ಒಳಗೆ ಬಂದು ಮಲಗಬಹುದೆಂಬುದನ್ನು ಹೇಳಿದರು. ನಾವು ಹೊರಗಡೆ ಜಗಲಿಯಲ್ಲಿಯೇ ಮಲಗಿದೆವು. ಕೊನೆಗೂ ನಂದನ ಟೆಂಟ್ ಮೇಲೇರಲಿಲ್ಲ. ಅದನ್ನೇ ಹಾಸಿಕೊಂಡು ಮಲಗಿದೆವು. ಭರ್ಜರಿ ಗಾಳಿ, ಭಯಂಕರ ಚಳಿ ಆದರೂ ಮಲಗಿದೆವು, ಮುಂಜಾನೆ ಕಣ್ಣು ತೆರೆದಾಗ ಗಂಟೆ ಆರಾಗಿತ್ತು.
ನಾನು ವಿಜಿ ಹೊರಗೆ ಬಂದು ಹಿಂದಿನ ದಿನ ಬಚ್ಚಿಟ್ಟುಕೊಂಡಿದ್ದ ಸಿಗರೇಟು ಸೇದಿದೆವು. ಸುತ್ತೆಲ್ಲಾ ಮಂಜು ಮುಸುಕಿದೆ, ಅದ್ಬುತಾವಾಗಿದೆ ಪರಿಸರ. ನನ್ನಾಕೆ ನಿಸರ್ಗ ನನ್ನನ್ನು ಬಿಗಿದಪ್ಪುತ್ತಿದ್ದಾಳೆ. ಸ್ವರ್ಗಕ್ಕೆ ನಾಲ್ಕೇ ಗೇಣು. ಎಲ್ಲರೂ ಎದ್ದು ಹೊರಟೆವು. ಸುಮಾರು ಏಳು ಗಂಟೆಗೆ ಬೆಟ ಏರಳು ಶುರು ಮಾಡಿದೆವು. ಏನೂ ಕಾಣಿಸುತ್ತಲ್ಲ. ಬರೀ ಮಂಜು ಮಾತ್ರ. ನಮ್ಮ ಜೊತೆಗೆ ಅಲ್ಲಿಯೇ ಇದ್ದ ಎರಡು ನಾಯಿಗಳು ಬಂದವು. ಈ ನಾಯಿಗಳು ಬಹಳ ಬುದ್ದಿವಂತರು. ಒಂದು ಕಪ್ಪನೆಯ ನಾಯಿ ಮತ್ತೊಂದು ಕೆಂಚ ನಾಯಿ. ಒಂದು ಮುಂದೆ ಹೋಗುತ್ತಿತ್ತು ಮತ್ತೊಂದು ಹಿಂದೆ ಬರುತ್ತಿತ್ತು. ನಮ್ಮನ್ನು ಅದೆಷ್ಟು ಹುಷಾರಾಗಿ ಕರೆದೊಯ್ದೆವೆಂದರೇ ಹೇಳತೀರದು. ಸ್ವಲ್ಪ ಆಚೀಚೆ ಸದ್ದಾದರೂ ಸರಿಯೇ ಓಡಿ ಹೋಗುತ್ತಿದ್ದೋ, ಬೊಗಳುತ್ತಿದ್ದವು. ಒಟ್ಟಾರೆಯಾಗಿ ಎರಡು ಉತ್ತಮ ಭೇಟೆ ನಾಯಿಗಳೆಂಬುದನ್ನು ಒಪ್ಪಬೇಕು. ಬೆಟ್ಟದ ತುತ್ತ ತುದಿಗೆ ಹೋದಾಗ ಸುಮಾರು ಒಂಬತ್ತು ಗಂಟೆಯಾಗಿತ್ತು. ಕಡಿಮೆಯೆಂದರೂ 80ಕೀಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಹತ್ತುವರೆ ತನಕವೂ ಕಾಯ್ದೆವು. ಮಂಜು ಕಡಿಮೆಯಾಗಲಿಲ್ಲ ಹಾಗೆಯೇ ಇಳಿದು ಬಂದೆವು.
19 ಜುಲೈ 2012
ಶ್ರಾವಣ ಮಾಸಕ್ಕೆ ಸುಸ್ವಾಗತ....ಬಾಲ್ಯದೆರಡು ಪುಟಗಳು!!!
ಶ್ರಾವಣ ಮಾಸಕ್ಕೆ ಸುಸ್ವಾಗತ....ಎಂದು ಬರೆದು ಫೇಸ್ ಬುಕ್ಕಿಗೆ ಹಾಕಲು ಹೋದೆ. ತಕ್ಷಣ ನನ್ನ ಬಾಲ್ಯದ ದಿನಗಳು ನೆನಪಾದವು. ಶ್ರಾವಣ ಆಚರಿಸುತ್ತಿದ್ದ ದಿನಗಳು. ನನಗೆ ನಗರದಲ್ಲಿ ಹೇಗೆ ಆಚರಿಸುತ್ತಾರೆಂಬುದರ ಅರಿವಿಲ್ಲ. ಆದರೇ, ನನ್ನೂರಿನಲ್ಲಿ ನನ್ನ ಬಾಲ್ಯದಲ್ಲಿ ಆಚರಿಸುತ್ತಿದ್ದ ಶ್ರಾವಣವಂತು ಬಹಳ ಚೆನ್ನಾಗಿ ನೆನಪಿದೆ. ಪ್ರತಿ ವರ್ಷವೂ ನಾಲ್ಕು ಶ್ರಾವಣ ಶನಿವಾರ ಮತ್ತು ನಾಲ್ಕು ಶ್ರಾವಣ ಸೋಮವಾರ ಬರುತ್ತದೆ. ನನ್ನೂರಿನ ಈ ಕಥೆಗಳು ಕೆಲವರಿಗೆ ಹೊಸದಾಗಿ ಕಾಣಿಸಬಹುದು. ಹಿಂದಿನ ದಿನಗಳಲ್ಲಿ ವಾರಕ್ಕೊಮ್ಮೆ ಮಾತ್ರ ಸ್ನಾನ ಮಾಡುತ್ತಿದ್ದೆವು. ನಮ್ಮ ಮನೆಯಲ್ಲಿ ನಮ್ಮಪ್ಪ ಸರ್ಕಾರಿ ಕೆಲಸದಲ್ಲಿದ್ದ ಕಾರಣ, ವಾರದಲ್ಲಿ ಎರಡು ದಿನ ರೂಢಿಯಾಗಿತ್ತು. ಶನಿವಾರ ನಮ್ಮ ಮನೆ ದೇವರ ವಾರವಾಗಿದ್ದು, ಬುಧವಾರ ಲಕ್ಷ್ಮೀ ದೇವಿಯ ವಾರವಾಗಿತ್ತು. ಗಂಡು ಮತ್ತು ಹೆಣ್ಣು ದೇವರಿಗೆ ಸಮಪಾಲು. ನಾವು ಮೊದಲಿದ್ದ ಮನೆ ಬಹಳ ಇಕ್ಕಟ್ಟಿನದ್ದು, ಚಿಕ್ಕ ಮನೆ. ಆ ದಿನಗಳಲ್ಲಿ, ಸೌದೆಗೆ ಬಹಳ ಕಷ್ಟವಿತ್ತು. ನನಗೆ ನೆನಪಿರುವ ಹಾಗೆ, ನಾನು ಅಮ್ಮ ಅದೆಷ್ಟೋ ದಿನ ಬೆರಣಿ ಎತ್ತಿದ್ದೀವಿ, ಊರಿನ ಪಕ್ಕದಲ್ಲಿಯೇ ಇದ್ದ ಗೋಮಾಳ, ಹೊಂಗೆ ತೋಪಿಗೆ ಹೋಗಿ, ಸಣ್ಣ ಸಣ್ಣ ಪುರುಳೆ (ಸೌದೆ ಕಡ್ಡಿ) ಗಳನ್ನು ಆಯ್ದು ತಂದಿದ್ದೇವೆ. ಅದನ್ನೆಲ್ಲಾ ನೆನಪು ಮಾಡಿಕೊಂಡರೇ ನಿಜಕ್ಕೂ ಕಣ್ಣು ತೇವವಾಗುತ್ತದೆ. ಒಲೆಗೆ ಬೆಂಕಿ ಹಾಕುವುದು ದೊಡ್ಡ ಕೆಲಸವಾಗುತ್ತಿತ್ತು, ಹೆಚ್ಚಿಗೆ ಸೀಮೆ ಎಣ್ಣೆ ಹಾಕುವಂತಿರಲಿಲ್ಲ, ಕೊಡುತ್ತಿದ್ದದ್ದು ಮೂರು ಲೀಟರ್, ಅದರಲ್ಲಿ ಅಡುಗೆಗೂ ಬೇಕಿತ್ತು.
ಬಹಳ ವಿಚಿತ್ರವೆನಿಸುತ್ತದೆ, ಸರ್ಕಾರದ ರೀತಿ ನೀತಿಗಳು. ನಮ್ಮಪ್ಪ ಸರ್ಕಾರಿ ಕೆಲಸದಲ್ಲಿದ್ದ ಕಾರಣ ನಮಗೆ ಹಸಿರು ಕಾರ್ಡ್ ಇರಲಿಲ್ಲ. ಈಗ ಬಿಪಿಎಲ್ ಅನ್ನುವುವು ಆ ದಿನಗಳಲ್ಲಿ ಹಸಿರು ಕಾರ್ಡ್, ಕೇಸರಿ ಕಾರ್ಡ್. ನಮ್ಮ ಮನೆಗೆ ಕೇಸರಿ ಕಾರ್ಡ್ ಕೊಟ್ಟಿದ್ದರು. ನಾವು ಮುಂದುವರೆದವರೆಂಬುದು ಅವರ ತಿರ್ಮಾನ. ನಮ್ಮ ಮನೆಯಲ್ಲಿ ಬಡತನ ಹಾಸು ಹೊಕ್ಕಿತ್ತು. ನಮ್ಮೂರಿನಲ್ಲಿ ಅದೆಷ್ಟೊ ಜನರಿಗೆ ಹತ್ತು ಇಪ್ಪತ್ತು ಎಕರೆ ಜಮೀನು ಇದ್ದರೂ, ಅವರೆಲ್ಲಾ ಹಸಿರು ಕಾರ್ಡ್ ಪಡೆದಿದ್ದರು. ಅವರಿಗೆ ಮೂರು ರೂಪಾಯಿಗೆ ಒಂದು ಲೀಟರ್ ಸೀಮೆ ಎಣ್ಣೆ, ನಮಗೆ ಏಳು ರೂಪಾಯಿ. ಮೊದಲ ಆದ್ಯತೆ ಹಸಿರು ಕಾರ್ಡಿದ್ದವರಿಗೆ, ನಮಗೆ ಕೊಡಲೇ ಬೇಕೆಂಬ ಕಡ್ಡಾಯವೂ ಇಲ್ಲ. ಒಂದೊಂದು ದಿನ ನಮ್ಮಮ್ಮ ಪಕ್ಕದ ಮನೆಯವರ ಕಾರ್ಡ್ ಗಳನ್ನೆಲ್ಲಾ ಕೊಡಿಸುತ್ತಿದ್ದರು. ನಾನು ಸೊಸೈಟಿಗೆ ಹೋದರೇ, ಅವನು ತರವಾರಿ ಕಾನೂನು ಮಾಡತೊಡಗಿದ. ಒಬ್ಬರಿಗೆ ಒಂದು ಕಾರ್ಡಿಗೆ ಮಾತ್ರ ಕೊಡುವುದು, ಕಾರ್ಡ್ ಇರುವ ಮನೆಯವರೇ ಬರಬೇಕು, ಹೀಗೆ ಏನೆಲ್ಲಾ ಕಾನೂನುಗಳು. ಸತ್ಯವಾಗಿಯೂ ಹೇಳುತ್ತೇನೆ, ಬಡವರು ಬದುಕಲು ಯೋಗ್ಯವಲ್ಲದ ಸಮಾಜ ಮತ್ತು ದೇಶ ಭಾರತ. ಬೇರೆ ದೇಶದಲ್ಲಿ ಹೇಗಿದೆಯೆಂಬುದು ಗೊತ್ತಿಲ್ಲ, ಆದರೇ ನಮ್ಮಲ್ಲಿ ಮಾತ್ರ ಬಹಳ ಕಷ್ಟ. ಅವರಿವರನ್ನು ಗೋಗರಿದುಕೊಂಡು, ಅವರನ್ನು ಕರೆದುಕೊಂಡು ಹೋಗಿ, ಸಾಲಿನಲ್ಲಿ ನಿಂತು ಅಂತೂ ಇಂತೂ ಸೀಮೆ ಎಣ್ಣೆ ತರುತ್ತಿದ್ದೆ. ಕೆಲವರ ಮನೆಗಳಲ್ಲಿ ಕರೆಂಟ್ ಇರಲಿಲ್ಲ, ಪಾಪ ಅವರು ದೀಪದಿಂದಲೇ ಜೀವನ ಸಾಗಿಸಬೇಕಿತ್ತು, ಸೀಮೆ ಎಣ್ಣೆ ಇಲ್ಲದೇ ಅದೆಷ್ಟೋ ಮನೆಯವರ ಮಕ್ಕಳು ಓದುತ್ತಿರಲಿಲ್ಲ, ನನ್ನ ಕೆಲವು ಸ್ನೇಹಿತರು ಬೇರೆಯವರ ಮನೆಗೆ ಹೋಗಿ ಹೋಂವರ್ಕ್ ಮಾಡುತ್ತಿದ್ದ ದಿನವೂ ಇದೆ. ವಿಷಯಕ್ಕೆ ಬರೋಣ.
ಆಗ ಕಷ್ಟಪಟ್ಟು ಕಣ್ಣೀರು ಸುರಿಸಿ ಒಲೆ ಉರಿಸುತ್ತಿದ್ದೆ. ನೀರು ಹಿಡಿಯುವ ಕಷ್ಟವನ್ನು ನಾನು ಹಿಂದಿನ ಬ್ಲಾಗಿನಲ್ಲಿ ಬರೆದಿದ್ದೆ, ಆದ್ದರಿಂದ ನೀರಿನ ಸಮಸ್ಯೆಯ ಬಗ್ಗೆ ಇಲ್ಲಿ ಮಾತನಾಡೋದು ಬೇಡ. ಕೆಲವು ಮನೆಯವರಿಗೆ ವಾರದಲ್ಲಿ ಒಮ್ಮೆಯೇ ಸ್ನಾನದ ಭಾಗ್ಯ. ನಮ್ಮೂರಿನಲ್ಲಿ ಮಡಕೆ ತೆಗೆಯುವುದು ಅಥವಾ ಸೂತಕ ತೆಗೆಯುವುದು ಅನ್ನೋ ಒಂದು ಸಂಪ್ರದಾಯವಿದೆ. ಇದು ಎಲ್ಲೆಡೆಯಲ್ಲಿಯೂ ಸಾಮಾನ್ಯವಾಗಿದೆ. ವರ್ಷದಲ್ಲಿ ಯುಗಾದಿಗೆ, ಶ್ರಾವಣಕ್ಕೆ ಮತ್ತು ಆಯುಧಪೂಜೆಗೆ ಸೂತಕ ತೆಗೆಯುವುದು ವಾಡಿಕೆ. ಕೆಲವೊಮ್ಮೆ ಹತ್ತಿರದ ಸಂಭಂಧಿಗಳು ಸತ್ತರೆ, ಹೆತ್ತರೆ ಸೂತಕ ತೆಗೆಯುವುದು ಉಂಟು. ಸೂತಕ ತೆಗೆಯುವ ಸಂಧರ್ಭದಲ್ಲಿ ಮನೆಯಲ್ಲಿರುವ ಎಲ್ಲಾ ಪಾತ್ರೆ ಪಗಡೆಗಳನ್ನು ತೊಳೆಯುತ್ತಿದ್ದರು. ಶ್ರಾವಣ ಶುರುವಾಗುವ ಮುನ್ನವೇ ನಮ್ಮಮ್ಮ ನಿರ್ಧರಿಸುತ್ತಿದ್ದರು, ಯಾವ ವಾರ ಮಾಡುವುದೆಂದು. ನಾಲ್ಕು ವಾರ ಶ್ರಾವಣವಿದ್ದರೂ, ಯಾವುದಾದರು ಒಂದು ದಿನ ಮಾತ್ರ ಮಾಡಬೇಕಿತ್ತು. ಅದಾದ ಮೇಲೆ ಮನೆಯಲ್ಲಿ ಧೂಳು ಹೊಡೆಯುವುದು, ತೊಳೆಯುವುದು, ಬಣ್ಣ ಬಳಿಯುವುದು ನಡೆಯುತ್ತಿತ್ತು. ನಮ್ಮ ಮನೆ ಚಿಕ್ಕದ್ದಾದ್ದರಿಂದ ಮನೆಯ ಅರ್ಧ ಪಾತ್ರೆಗಳು ಅಟ್ಟದ ಮೇಲಿರುತ್ತಿದ್ದವು. ನಮ್ಮಮ್ಮನಿಗೆ ಪಾತ್ರೆ ತೆಗೆದುಕೊಳ್ಳುವುದೆಂದರೇ ಎಲ್ಲಿಲ್ಲದ ಅಕ್ಕರೆ. ನಾನು ಬಹಳ ಮನೆಗಳಲ್ಲಿ ನೋಡಿದ್ದೇನೆ, ಹೆಂಗಸರು ಅದೆಷ್ಟು ಪಾತ್ರೆ ಕೊಳ್ಳುತ್ತಾರೆಂದರೇ ಅಚ್ಚರಿಯಾಗುತ್ತದೆ. ಆದರೇ, ಅದ್ಯಾವುದನ್ನು ದಿನ ನಿತ್ಯವೂ ಬಳಸುವುದಿಲ್ಲ. ನಮ್ಮ ಮನೆಯಲ್ಲಿಯೇ ಹೇಳುವುದಾದರೇ, ಕನಿಷ್ಟವೆಂದರೂ ಮೂವತ್ತು ತಟ್ಟೆಗಳು, ಬೇರೆ ಬೇರೆ ಗಾತ್ರದ ಲೋಟಗಳಿವೆ. ಆದರೇ, ನಾವು ಊಟ ಮಾಡಲು ಕೊಡುವ ತಟ್ಟೆ ಬಹಳ ಹಳೆಯವು, ಚಿಕ್ಕವು. ಕುಡಿಯುವ ಲೋಟಗಳು ಅಷ್ಟೇ, ಎಲ್ಲವೂ ಅಟ್ಟದ ಮೇಲೆ ಅಧಿಕಾರ ನಡೆಸುತ್ತಿವೆ. ವರ್ಷಕ್ಕೊಮ್ಮೆ ಕೆಳಕ್ಕೆ ಇಳಿಸುವುದು ಸ್ನಾನ ಮಾಡಿಸಿ ಮಲಗಿಸುವುದು.
ಆ ದಿನಗಳಲ್ಲಿ ಅಟ್ಟದ ಮೇಲೆ ಹತ್ತಿ ಎಲ್ಲವನ್ನೂ ಇಳಿಸುವುದು, ತೊಳೆಯುವುದು ಮತ್ತೆ ಅಲ್ಲಿಗೇ ಜೊಡಿಸುವುದು ನನ್ನ ಕೆಲಸ. ಸುಣ್ಣ ಬಳಿಯುವುದಕ್ಕೆ ನಿಲ್ಲುತ್ತಿದ್ದೆ, ಆದರೇ ಗೆರೆಗೆರೆ ಬಳಿಯುತ್ತೀಯಾ ಎಂದು ಅಮ್ಮನೇ ಬಳಿಯುತ್ತಿದ್ದರು. ಸುಣ್ಣ ಬಳಿಯುವಾಗ, ಏಣಿಯನ್ನು ಇಡಿದು ನಿಲ್ಲಬೇಕಿತ್ತು. ಮತ್ತೆ ಒಂದು ಕೈಯಲ್ಲಿ ಸುಣ್ಣದ ಡಬ್ಬವನ್ನು ಎತ್ತಿ ಕೊಡಬೇಕಿತ್ತು. ಅಮ್ಮಾ, ಏಣಿಯ ಮೇಲೆ ನಿಂತು, ಬಳಿಯುತ್ತಿದ್ದರು. ಸ್ವಲ್ಪ ಆಚೆ ಈಚೆ ಆದರೇ ಅಮ್ಮನಿಂದ ಸಹಸ್ರನಾಮವಾಗುತ್ತಿತ್ತು. ಅದೆಷ್ಟು ಕಷ್ಟಪಡುತ್ತಿದರು ನಮ್ಮಮ್ಮ ಎನಿಸುತ್ತದೆ. ಎಲ್ಲ ಪಾತ್ರೆಯನ್ನು ತೊಳೆದ ಮೇಲೆ, ಬಿಸಿಲಲ್ಲಿ ಒಣಗಿಸಿ, ಮಡಿ ಬಟ್ಟೆಯಿಂದ ಒರೆಸಿ, ಕುಕ್ಕೆಯಲ್ಲಿ ತುಂಬಿ ಮತ್ತೆ ಅಟ್ಟದ ಮೇಲೆ ಇರಿಸುತ್ತಿದ್ದರು. ನಮ್ಮದು ಇದ್ದದ್ದು ಅಡುಗೆ ಮನೆ, ನಡುಮನೆ ಮತ್ತು ಬಚ್ಚಲು ಮನೆ ಮಾತ್ರ. ನಡು ಮನೆ ಕ್ಲೀನು ಮಾಡುವಾಗ ನಮ್ಮ ಬಿಡಾರ ಅಡುಗೆ ಮನೆಗೆ, ಅಡುಗೆ ಮನೆ ಬಳಿಯುವಾಗ ನಡುಮನೆಗೆ, ಅದೆಷ್ಟೋ ದಿನಗಳು, ವಕ್ರ ವಕ್ರವಾಗಿ ಮಲಗಿ ದಿನ ಕಳೆದಿದ್ದೇವೆ. ನಮ್ಮಮ್ಮ ಮುಂಜಾನೆ ಆರರಿಂದ ರಾತ್ರಿ ಹನ್ನೊಂದರ ತನಕ ಕೆಲಸ ಮಾಡಿ ಸುಸ್ತಾಗಿ ಅಡುಗೆ ಮಾಡುವುದಕ್ಕೂ ತ್ರಾಸವಿಲ್ಲದೇ ಹಾಗೆ ಮಲಗುತ್ತಿದ್ದರು. ಆ ಸಮಯದಲ್ಲಿ ನಾನು ಸ್ವಲ್ಪ ಅನ್ನ ಮಾಡಿ ಅಥವಾ ನಮ್ಮಪ್ಪ ಸ್ವಲ್ಪ ಟೋಮಾಟೋ ಸಾರು ಮಾಡಿ ಉಂಡು ಮಲಗುತ್ತಿದ್ದೆವು. ಕೆಲವೊಮ್ಮೆ ಪಕ್ಕದ ಮನೆಯವರಿಂದ ಸಾರು ತರುತ್ತಿದ್ದೆವು. ನಮ್ಮಪ್ಪನಿಗೆ ಬೇರೆಯವರ ಮನೆ ಸಾರು ಹಿಡಿಸುತ್ತಿರಲಿಲ್ಲ. ನನಗೆ ಆನಂದ, ವಿಭಿನ್ನ ರುಚಿಯಾಗಿರುತ್ತಿತ್ತು. ಪಾಪ ಕೆಲವು ಮನೆಯವರು ಕಾಯಿ ಹಾಕುತ್ತಿರಲಿಲ್ಲ. ಆಗ ಅಮ್ಮ ಹೇಳುತ್ತಿದ್ದರು, ಅಲ್ಲಾ, ಮನೆಯಲ್ಲಿರುವ ಕಾಯಿ ಹಾಕೋಕು ಕಷ್ಟನಾ? ಇನ್ನು ದುಡ್ಡು ಕೊಟ್ಟು ತರೋ ಹಾಗಿದ್ದರೇ ಏನು ಮಾಡುತ್ತಿದ್ದರೋ? ಎಂದು.
ಶ್ರಾವಣದ ಸಮಯದಲ್ಲಿ ಹಾರಂಗಿ ನಾಲಾ ನೀರು, ಊರೊಳಗೆ ಬರುತ್ತಿದ್ದರಿಂದ ಅಂಥಹ ಸಮಸ್ಯೆ ಆಗುತ್ತಿರಲಿಲ್ಲ. ಆದರೂ ನಮ್ಮಮ್ಮ ಸ್ವಲ್ಪ ಮಡಿವಂತಿಕೆ, ಕ್ಲೀನ್ ಜಾಸ್ತಿಯಾದ್ದರಿಂದ, ಕಾವೇರಿ ನಾಲೆಗೆ ಹೋಗಬೇಕು, ಅಲ್ಲಿ ನೀರು ಜೋರಾಗಿ ಹರಿಯುತ್ತದೆ. ಈ ನಾಲೆಯಲ್ಲಿ, ಗಲೀಜು ಮಾಡುತ್ತಾರೆ. ಈ ನೀರಿನಲ್ಲಿ ಎಲ್ಲವನ್ನೂ ತೊಳೆದಿರುತ್ತಾರೆ ಎನ್ನುತ್ತಿದ್ದರು. ಆಗ ನನಗೆ ವಿಪರೀತ ಕೋಪ ಬರುತ್ತಿತ್ತು. ಮನೆಯಿಂದ ಹತ್ತು ಹೆಜ್ಜೆಯಲ್ಲಿ ಹರಿಯುತ್ತಿರುವ ನೀರನ್ನು ಬಿಟ್ಟು ಒಂದು ಮೈಲಿ ದೂರದಲ್ಲಿರುವ ಕಾಲುವೆಗೆ ಹೋಗುವುದು ಯಾವ ಮೂರ್ಖತನ ಎನಿಸುತಿತ್ತು. ನಾನು ಪಾತ್ರೆ ಹೊರುವುದು, ಬಟ್ಟೆ ತೊಳೆಯುವುದು ಮಾಮೂಲಿಯಾಗಿತ್ತು. ನಮ್ಮಮ್ಮ ಬಟ್ಟೆ ತೊಳೆಯುವಾಗ ನಾನು ಪಾತ್ರೆ ತೊಳೆಯಬೇಕಿತ್ತು. ನನ್ನ ಅವಮಾನ ನನ್ನ ಮುಜುಗರ ನಮ್ಮಮ್ಮನಿಗೆ ಅರ್ಥವೇ ಆಗಲಿಲ್ಲ. ಕಾಲುವೆಗೆ ಬಂದ ಹೆಂಗಸರೆಲ್ಲಾ ನನ್ನನ್ನು ನೋಡಿ ಪರವಾಗಿಲ್ಲ ಹರಿ ಚೆನ್ನಾಗೆ ತೊಳಿತ್ತೀಯಾ ಪಾತ್ರೆಯಾ ಎಂದು ನಗುತ್ತಿದ್ದರು. ಬಟ್ಟೆ ಹೊರುವುದಕ್ಕೆ ಅಡ್ಡಿ ಇರಲಿಲ್ಲ, ಯಾಕೆಂದರೆ ಅದನ್ನು ಬೇಸಿನ್ ನಲ್ಲಿ ತುಂಬಿ ಕೊಡುತ್ತಿದ್ದರು. ಪಾತ್ರೆ ಮಾತ್ರ, ಕುಕ್ಕೆಯಲ್ಲಿ ನೀರೆಲ್ಲ ಸುರಿದು ಅಂಗಿ ಒದ್ದೆಯಾಗಿರುತ್ತಿತ್ತು.
ನಮ್ಮೂರಿನಲ್ಲಿ ಶ್ರಾವಣದ ವಿಶೇಷವೆಂದರೇ, ಎಲ್ಲರನ್ನು ಊಟಕ್ಕೆ ಕರೆಯುವುದು. ಊರಿನ ಅರ್ಧ ಜನರನ್ನು ಊಟಕ್ಕೆ ಕರೆಯಬೇಕಿತ್ತು. ಕೆಲವು ಮನೆಗಳಿಗೆ ಎಲ್ಲರೂ ನಮ್ಮ ಮನೆಯಲ್ಲಿಯೇ ಊಟಕ್ಕೆ ಬನ್ನಿ ಎನ್ನಬೇಕಿತ್ತು. ಇನ್ನು ಕೆಲವು ಮನೆಗಳಿಗೆ ಮನೆಗೆ ಒಬ್ಬರಂತೆ ಹೇಳುತ್ತಿದ್ದೆವು. ಅದರಲ್ಲಿ ಒಂದು ಮಜವಿದೆ, ನಮ್ಮ ಮನೆಗೆ ಯಾರಾದರೂ ಊಟಕ್ಕೆ ಹೇಳಲು ಬರುವಾಗ, ಅಕ್ಕಾ ಅಡುಗೆ ಮಾಡಬೇಡಿ ಎನ್ನುತ್ತಿದ್ದರು. ನಮ್ಮಪ್ಪು ಕುಳಿತಲ್ಲಿ ಅಡುಗೆ ಮಾಡಿಲ್ಲ ಅಂದ್ರೇ? ಎನುತ್ತಿದ್ದರು. ಊಟಕ್ಕೆ ಹೇಳಲು ಬಂದ ಹುಡುಗ ತಬ್ಬಿಬಾಗುತ್ತಿದ್ದ. ಬೇರೆ ಮನೆಯವರು ಆಯ್ತಪ್ಪ ಎನ್ನುತ್ತಿದ್ದರು, ನಮ್ಮನೆಯಲ್ಲಿ ತಲಹರಟೆ ಪ್ರಶ್ನೆ. ಹಾಗೆ ಮನೆಗೆ ಒಬ್ಬರಿಗೆ ಹೇಳುವಾಗ, ಅಕ್ಕಾ, ಅಣ್ಣ ಅಲ್ಲೇ ಊಟ ಮಾಡುತ್ತೇ ಎನ್ನುತ್ತಿದ್ದರು. ಆ ಸಮಯದಲ್ಲಿ ನಮ್ಮಪ್ಪ ನಾನ್ಯಾವಾಗ ಹೇಳ್ದೆ ನಿಂಗೆ ಅಲ್ಲೇ ಊಟ ಮಾಡ್ತೀನಿ ಅಂತಾ? ಎನ್ನುತ್ತಿದ್ದರು. ಊಟಕ್ಕೆ ಹೇಳಲು ಬಂದ ಹುಡುಗರು, ಹಣೆ ಬರಹವೇ ಎಂದುಕೊಂಡು ಹೋಗುತ್ತಿದ್ದರು. ಒಂದು ದಿನ ಕಡಿಮೆಯೆಂದರೂ 20-30 ಮನೆಯವರು ಊಟಕ್ಕೆ ಹೇಳುತ್ತಿದ್ದರು. ಎಲ್ಲರ ಮನೆಗೂ ಹೋಗಲೇಬೇಕಿತ್ತು. ಊಟ ಮಾಡದೇ ಇದ್ದರೂ ಸ್ವಲ್ಪ ಪಾಯಸವನ್ನಾದರೂ ಕುಡಿಯಲೇ ಬೇಕಿತ್ತು. ಕೆಲವರ ಮನೆಯವರು ಕರೆಯುತ್ತಾರೆಂದು ಕಾಯ್ದು ಕಾಯ್ದು ನಿದ್ದೆ ಬರುತ್ತಿತ್ತು. ಹತ್ತು ಹನ್ನೊಂದು ಹನ್ನೆರಡಾಗುತ್ತಿತ್ತು. ಆ ದಿನಗಳಲ್ಲಿ ನಮ್ಮನೆಯಲ್ಲಿ ಟಿವಿ ಇರಲಿಲ್ಲ, ನಾನು ಒಂಬತ್ತು ಗಂಟೆಗೆ ತಾಚಿ ಮಾಡುತ್ತಿದ್ದೆ. ನಮ್ಮಲ್ಲಿ ಸ್ನೇಹಿತರ ಮನೆಗೆ ಹೋಗಲೇ ಬೇಕಿತ್ತು, ಹಾಗೆಯೇ ಅವರುಗಳು ಬರುತ್ತಿದ್ದರು.
ಶ್ರಾವಣದ ಶನಿವಾರ ಉಪವಾಸವಿರಬೇಕಿತ್ತು. ಮುಂಜಾನೆ ಎಂಟು ಗಂಟೆಯ ಒಳಗೆ ಸ್ನಾನ ಮಾಡಿ ಶಾಲೆಗೆ ಹೋಗುತ್ತಿದ್ದೆ. ಮನೆಗೆ ಬರುವ ವೇಳೆ ಮನೆಯೆಲ್ಲಾ ತೊಳೆದು, ಶುಚಿಯಾಗಿರುತ್ತಿತ್ತು. ಅದನ್ನು ನೆನೆದರೆ ಇಂದಿಗೂ ಮನಸ್ಸು ಉಲ್ಲಾಸವಾಗುತ್ತದೆ. ನನಗೆ ಮುಂಜಾನೆ ಎದ್ದು ಮನೆಯಲ್ಲಿ ಉರಿಯುತ್ತಿರುವ ದೀಪವನ್ನು ನೋಡುವುದೆಂದರೆ ಎಲ್ಲಿಲ್ಲದ ಆಸೆ. ಮನೆ ಶುಚಿಯಾಗಿದ್ದಾಗ ಮನಸ್ಸು ಹಸನಾಗಿರುತ್ತದೆ. ನಾನು ಒಳಕ್ಕೆ ಕಾಲಿಡುವಾಗ ಬಹಳ ಖುಷಿ ಎನಿಸುತ್ತಿತ್ತು. ಶ್ರಾವಣದ ಸಾರು ಮಾಡುತ್ತಾರೆ. ಹೊಸ್ತಿಲಿಗೆ ಕುಂಬಳಕಾಯಿ ಒಡೆದು, ಕುಂಬಳಕಾಯಿ, ಆಲೊಗೆಡ್ಡೆ, ಬೀನ್ಸ್ ಕಾಳು, ಸಂಪಂಗಿ ಸೊಪ್ಪು ಹಾಕಿ ಮಾಡಿದರೇ ಬರುವ ಗಮ ಗಮ ವಾಸನೆ ಮೈ ಕಂಪಿಸುವಂತೆ ಮಾಡುತ್ತಿತ್ತು. ಸಂಜೆಯ ವೇಳೆ ಎಡೆ ಇಟ್ಟು, ದಾಸಯ್ಯನನ್ನು ಕರೆದು ತೀರ್ಥ ಹಾಕಿದರೇ ಶ್ರಾವಣ ಆಚರಿಸಿದಂತೆ. ಇಡೀ ಊರಿಗೆಲ್ಲಾ ಒಬ್ಬನೇ ದಾಸಯ್ಯ ಇದ್ದ ಕಾರಣ, ಅವರಿಗೆ ಬಹಳ ಡಿಮಾಂಡು. ಆ ಬೇಡಿಕೆಯ ನಡುವೆ ನಮ್ಮ ಮನೆಗೆ ಬೇಗ ಬರಲೆಂದು ನಮ್ಮಮ್ಮ ಅವರಿಗೆ ಕಾಫಿ, ಟೀ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇದು ತಮಾಷೆಗೆ ಮಾತ್ರ, ನಾನು ಹಾಗೆ ರೇಗಿಸುತ್ತಿದ್ದೆ. ನಮ್ಮಮ್ಮನನ್ನು ಕಂಡರೇ, ಬಹುತೇಕ ಇಡೀ ಬಾನುಗೊಂದಿಯೇ ಬಹಳ ಗೌರವದಿಂದ ಕಾಣುತ್ತದೆ. ಇದುವರೆಗೂ ನಮ್ಮಮ್ಮ ಒಬ್ಬರಿಗೆ ಬೈದದ್ದನ್ನು ನಾನು ಕಂಡಿಲ್ಲ. ಒಬ್ಬರ ಜೊತೆಗೆ ಜಗಳವಾಡಿಲ್ಲ. ಬಂದವರೆಲ್ಲರಿಗೂ, ಕುಡಿಯಲು ತಿನ್ನಲು ಕೊಡದ ದಿನಗಳಿರಲಿಲ್ಲ. ಇತ್ತೀಚೇಗೆ, ಬಹಳ ನೋವಿನಿಂದ ಜೀವನ ಮಾಡುತ್ತಾರೆ. ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿದೆ. ನಾನು ನಮ್ಮಮ್ಮನನ್ನು ಕಂಡಾಗಲೆಲ್ಲ, ನನ್ನ ಕಣ್ಣುಗಳು ತೇವವಾಗುತ್ತವೆ. ಅಷ್ಟೊಂದು ಲವಲವಿಕೆಯಿಂದ ಇದ್ದ ನಮ್ಮಮ್ಮು, ಈಗ ದಿನ ಪೂರ್ತಿ ಹಾಸಿಗೆ ಹಿಡಿದು, ಯಾವುದೋ ಲೋಕದಲ್ಲಿರುವಂತೆ ಚಿಂತಿಸುತ್ತಿರುತ್ತಾರೆ. ಈಗಲೂ ಕಣ್ಣು ಒದ್ದೆಯಾಗುತ್ತಿವೆ.
ಈ ಎಲ್ಲಾ ಆವರಣೆಗಳು ಈಗ ನನ್ನೂರಿನಿಂದ ಬಲು ದೂರಕ್ಕೆ ಹೋಗಿವೆ. ಸಂಪೂರ್ಣ ಚಿತ್ರಣವೇ ಬದಲಾಗಿದೆ. ಶ್ರಾವಣವೆಂದರೇ ಬರುವ ದಿನಗಳಲ್ಲಿ ಅದು ಒಂದು ಎನ್ನುವಂತಾಗಿದೆ. ಸೂತಕ ತೆಗೆಯುವುದು, ಊಟಕ್ಕೆ ಕರೆಯುವುದು ಮಾಯವಾಗಿದೆ. ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದ ನಾವುಗಳು ದಿನ ನಿತ್ಯ ಮಾಡಲಾಗಿದ್ದೇವೆ. ಆದರೂ ಶ್ರಾವಣವೆಂದಾಗ ನನ್ನೆಲ್ಲಾ ಬಾಲ್ಯ ನಗು ತರಿಸುತ್ತದೆ. ಸ್ನೇಹಿತರೆಲ್ಲರನ್ನು ಕರೆದು ಊಟ ಮಾಡಿಸುತ್ತಿದ್ದ ದಿನ, ನಾನು ಬಡವನೆಂಬ ಕೀಳರಿಮೆಯಲ್ಲಿಯೂ ನಗುತ್ತಿದ್ದ ದಿನಗಳು, ದೊಡ್ಡವರ ಮನೆಯರು ಊಟಕ್ಕೆ ಹೇಳಿದ ದಿನ, ಅವರು ಕರೆಯುವ ತನಕ ಕಾಯ್ದು ಊಟ ಮಾಡುತ್ತಿದ್ದ ದಿನಗಳು. ಐದು ನಿಮಿಷ ತಡವಾದರೂ ಸಹಿಸದ ನಾನು, ಹನ್ನೆರಡಾದರೂ ಹೋಗಿ ಉಂಡು ಬರುತ್ತಿದ್ದೆ. ಯಾರದ್ದೊ ಮನೆಯ ಮೂಲೆಯಲ್ಲಿ ಸದ್ದಿಲ್ಲದೇ ಊಟ ಮಾಡಿ ಬರುತ್ತಿದ್ದೆ. ಇಡೀ ಬಾಲ್ಯದ ಶ್ರಾವಣದಲ್ಲಿ ನೂರು ಮನೆಯಲ್ಲಿಯಾದರೂ ಊಟ ಮಾಡಿದ್ದೇನೆ, ಯಾರ ಮನೆಗೆ ಹೋದಾಗಲೂ ಹರಿ ಬಂದಾ ಬಾರಪ್ಪ, ಚೆನ್ನಾಗಿದ್ದೀಯಾ ಎಂದಿಲ್ಲ. ಒಳಕ್ಕೆ ಹೋಗುವುದು ಎಲ್ಲರು ಕುಳಿತಿರುವ ಪಂಕ್ತಿಯಲ್ಲಿ ಕುಳಿತುಕೊಳ್ಳುವುದು ಉಂಡು ಬರುವುದು. ಕೆಲವರ ಮನೆಯ ಹತ್ತಿರಕ್ಕೆ ಹೋದಾಗ, ಊಟ ನಡಿತಾ ಇದೇ ಇರ್ರೋ ಕುತ್ಕೊಳ್ಳಿವ್ರೀ, ಎನ್ನುತ್ತಿದ್ದರು. ಅರ್ಧ ಗಂಟೆ ಅವರ ಮನೆ ಮುಂದೆ ನಿಂತು ಉಂಡು ಬರುತ್ತಿದ್ದೆ. ಅಲ್ಪ ಮಟ್ಟದ ಹಣ ದುರಹಂಕಾರವನ್ನು ತುಂಬಿಸಿತು. ಇನ್ನೊಬ್ಬರ ಮನೆಗೆ ಹೋಗುವುದು ಅವಮಾನವೆನ್ನುವಂತಾಯಿತು. ಅಲ್ಲೊಂದು ಅಭಿಮಾನ ಅಕ್ಕರೆ, ಸಂಪ್ರದಾಯವಿತ್ತೆಂಬುದನ್ನೇ ಅಳಿಸಿಹಾಕಿದೆ.
18 ಜುಲೈ 2012
ಮೊಬೈಲ್ ಮಾಯೆ!!!
ನಾನು ಹಿಂದಿನ ಬ್ಲಾಗ್ ನಲ್ಲಿ ಬರೆದಿದ್ದೆ, ಮೊಬೈಲ್ ಮತ್ತು ನನ್ನ ಸಂಭಂಧವನ್ನು ಹೇಳುತ್ತೇನೆಂದು. ನಾನು ಮೊದಲ ಬಾರಿಗೆ ಮೊಬೈಲ್ ಎಂಬುದನ್ನು ಹಿಡಿದಿದ್ದು ಅಥವಾ ಕೊಂಡಿದ್ದು ಬಿಎಸ್ಸಿ ಮುಗಿದ ದಿನಗಳಲ್ಲಿ. ಬಿಎಸ್ಸಿ ಮುಗಿಸಿದ ನಂತರ ನಾನು ಬೆಂಗಳೂರಿಗೆ ಬಂದು ಇಲ್ಲಿ ಕೆಲಸಕ್ಕೆ ಸೇರುವುದೆಂದು ನಿರ್ಧರಿಸಿದೆ. ಆ ಸಮಯದಲ್ಲಿ ನಮ್ಮ ಭಾವನ ಮನೆಯಲ್ಲಿದ್ದು ಕೆಲಸ ಹುಡುಕುತ್ತಿದ್ದೆ. ನಮ್ಮ ಭಾವನ ಬಳಿಯಲ್ಲಿ ಹಳೆಯ ಸೀಮಾನ್ಸ್ ಮೊಬೈಲ್ ಇತ್ತು, ಅದು ರಿಂಗ್ ಆಗುವುದನ್ನು ಕೇಳಿದರೇ ಕಣ್ಣೀರು ಸುರಿಯುವಂತಿತ್ತು. ಕಿರೋ ಎನ್ನುವ ಕೀರಳು ಧ್ವನಿ. ಆ ಸಮಯಕ್ಕೆ ಭಾವನ ನಂಬರ್ ಅನ್ನು ನಾನು ಎಲ್ಲಾ ಕಡೆಯಲ್ಲಿಯೂ ಕೊಟ್ಟಿದ್ದೆ. ಬೆಂಗಳೂರೆಂಬ ದರಿದ್ರ ನಾಡಿಗೆ ಮೊದಲ ಬಾರಿ ಬಂದವನು ಬೇಗ ಬಹುಬೇಗ ಇಲ್ಲಿಂದ ದಾಟಬೇಕೆನಿಸುತ್ತದೆ. ನಾನು ಈಗ ಹೆಮ್ಮೆಯಿಂದ ಎಲ್ಲರಿಗೂ ಹೇಳುತ್ತೇನೆ, ನಮ್ಮ ಬೆಂಗಳೂರು ಎಂದು. ಸತ್ಯವಾಗಿಯೂ ಹೇಳುತ್ತೇನೆ, 2004ರಲ್ಲಿ ನಾನು ಬೆಂಗಳೂರನ್ನು ಬೈಯ್ದಷ್ಟನ್ನೂ ಇನ್ನಾರು ಬೈಯ್ದಿರಲಾರರು. ಬೆಂಗಳೂರು ನಮಗೆ ಬಹಳ ಭಯ ಹುಟ್ಟಿಸುತ್ತದೆ. ಎಂಟನೂರು ಜನರಿರುವ ಬಾನುಗೊಂದಿಯೆಂಬ ಸಣ್ಣ ಸುಂದರ ಹಳ್ಳಿಯಿಂದ ಬಂದ ನಾನು ದಿಡೀರನೇ ಅರವತ್ತು ಲಕ್ಷ ಜನರ ಈ ಸುಡುಗಾಡಿಗೆ ಬಂದರೇ, ಇಲ್ಲಿನ ಜನ, ಇಲ್ಲಿ ಏರಿಯಾಗಳು ಚೀ ಎನಿಸಿತ್ತು. ಬೆಂಗಳೂರನ್ನು ನೋಡುವುದಕ್ಕೆ ಬರುವುದಾದರೆ ಪರವಾಗಿಲ್ಲ, ಕೆಲಸ ಹುಡುಕಿಕೊಂಡು ಜೀವನ ಕಟ್ಟಿಕೊಳ್ಳಲು ಬರುವ ಹೊಸಬರು ಹುಚ್ಚಾಸ್ಪತ್ರೆ ಸೇರುವುದು ಗ್ಯಾರಂಟೀ.
ಬೆಂಗಳೂರಿಗೆ ಬಂದ ದಿನಗಳಲ್ಲಿ ನಮ್ಮ ಅಕ್ಕನ ಮನೆ ವಿಜಯನಗರದ ಪೈಪ್ ಲೈನ್ ನಲ್ಲಿತ್ತು. 87ನೇ ನಂಬರಿನ ಬಸ್ಸಿನಲ್ಲಿ ಮೆಜೆಸ್ಟಿಕ್ ಗೆ ಹೋಗುವುದು ಅಲ್ಲಿಂದ ಸುತ್ತಾಡಬೇಕಿತ್ತು. ಸತ್ಯವಾಗಿಯೂ ಹೇಳುತ್ತೇನೆ, ನಮ್ಮ ಭಾವನಿಗೆ ಇದ್ದ ತಾಳ್ಮೆ, ಸಹನೆ ನನಗೆ ಇಲ್ಲ, ಅದು ಬರುವುದೂ ಇಲ್ಲ. ನಾನು ಎಲ್ಲಿಗೆ ಹೋಗಬೇಕೆಂದರೂ ಅವರಿಗೆ ಒಂದು ರೂಪಾಯಿ ಕಾಯಿನ್ ಹಾಕಿ ಫೋನ್ ಮಾಡಿ ಕೇಳುತ್ತಿದ್ದೆ. ಬಹಳ ತಾಳ್ಮೆಯಿಂದ ವಿಳಾಸವನ್ನು ಹೇಳುತ್ತಿದ್ದರು. ಕೆಲವೊಮ್ಮೆ ಬೈಕ್ ಅನ್ನು ಕೊಟ್ಟು ಕಳುಹಿಸುತ್ತಿದ್ದರು. ಹತ್ತು ಹಲವು ಕಂಪನಿಗಳಿಗೆ ಅರ್ಜಿ ಹಾಕಿ ಇಂಟರ್ವ್ಯೂಗೆ ಹೋಗಿ ಬಂದು ಬೇಸತ್ತಿದೆ. ಅದೇ ಸಮಯಕ್ಕೆ ಬೆಂಗಳೂರು ವಿವಿಗೆ ಸೇರುವ ತೀರ್ಮಾನ ಮಾಡಿ ಕೆಲಸದ ವಿಷಯ ಕೈಬಿಟ್ಟೆ, ಅದು ಮುಂದೆ ಯಾವಾಗದರೂ ಹೇಳುತ್ತೇನೆ. ಈಗ ಮೊಬೈಲ್ ವಿಷಯವನ್ನು ಮಾತನಾಡೋಣ. ನನಗೆ ಬೆಂಗಳೂರಿಗೆ ಬಂದ ದಿನಗಳಲ್ಲಿ ಸುನೀಲ್ ಸಿಕ್ಕಿದ. ಸುನೀಲ್ ನಾನು ಮೈಸೂರಿನಲ್ಲಿ ಜೊತೆಯಲ್ಲಿಯೇ ಓದಿದ್ದೇವು. ಇಲ್ಲಿಗೆ ಬಂದಾಗ ಅವನ ಸ್ನೇಹಿತ ಶ್ರೀಕಂಠನನ್ನು ಪರಿಚಯಿಸಿದ. ಶ್ರೀಕಂಠ ಆ ಸಮಯಕ್ಕೆ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದ. ಅವನು ಸಂಜೆ ಕಾಲೇಜಿಗೆ ಹೋಗುತ್ತಿದ್ದರಿಂದ ಬೆಳ್ಳಿಗ್ಗೆ ಆರಾಮಾಗಿರುತ್ತಿದ್ದ. ಹೊಸಕೆರೆ ಹಳ್ಳಿಯಲ್ಲಿನ ಸಾಂಕೇತಿ ಹಾಸ್ಟೇಲ್ ನಮ್ಮ ಮೀಟೀಂಗ್ ಪಾಯಿಂಟ್ ಆಯ್ತು. ಅವನು ನಮಗೆ ಗೈಡ್ ಮಾಡುತ್ತಿದ್ದ. ಅವನ ಬಳಿಯಲ್ಲಿಯೂ ಮೊಬೈಲ್ ಇಲ್ಲದಿದ್ದರಿಂದ ಅವನ ಹಾಸ್ಟೇಲ್ ಗೆ ಫೋನ್ ಮಾಡಿ ಹೋಗುತ್ತಿದ್ದೆ.
ಎರಡನೇಯ ಎಂಎಸ್ಸಿ ಸಮಯಕ್ಕೆ ಮೊದಲ ಬಾರಿಗೆ ಮೊಬೈಲ್ ತೆಗೆದುಕೊಂಡೆ. ಎರಡು ವರ್ಷ ಕಷ್ಟಪಟ್ಟು ಹಣ ಉಳಿಸಿ, ನೋಕಿಯಾ 3315 ಮೊಬೈಲ್ ತೆಗೆದುಕೊಂಡೆ. ಅದನ್ನು geometry box ಎಂದೇ ಕರೆಯುತ್ತಿದ್ದೆವು. ನಮ್ಮೂರಿಗೆ ನನ್ನದೇ ಮೊದಲನೆಯ ಮೊಬೈಲ್ ಎಂಬ ಹೆಮ್ಮೆ. AIRTEL ಊರಿನಲ್ಲಿರಲಿಲ್ಲ. ಊರಿಗೆ ಹೋದರೇ, ಊರಿಂದ ಆಚೆಗೆ, ನಮ್ಮ ಗದ್ದೆಯ ಬಳಿಗೆಹೋಗಿ ಫೋನ್ ಬಳಸಬೇಕಿತ್ತು. ಫೋನ್ ಕರೆಗಳೇನು ಬರುತ್ತಿರಲಿಲ್ಲ, ಆದರೂ ನೆಟವರ್ಕ್ ಹುಡುಕಿಕೊಂಡು, ನಾನು, ಪಾಂಡು, ಪುರುಷೋತ್ತಮ ಹೋಗುತ್ತಿದ್ದೆವು. ಸಿಗರೇಟು ಸೇದುವ ಕಾರ್ಯವೂ ಜೊತೆಯಲ್ಲಿಯೇ ಮುಗಿಯುತ್ತಿತ್ತು. ನನಗೆ ಬಹಳ ನಗು ತರಿಸುತ್ತದೆ, ಆ ಸಮಯದಲ್ಲಿ ನನಗೆ ಮೊಬೈಲ್ ಅವಶ್ಯಕತೆಯಿಲ್ಲದಿದ್ದರೂ ಕೊಂಡುಕೊಂಡಿದ್ದೆ. ಅದೇ ಸಮಯದಲ್ಲಿ ನಮ್ಮ ಭಾವ ಮೊಬೈಲ್ ಬದಲಾಯಿಸುವುದಕ್ಕೆ ನಿರ್ಧರಿಸಿದ್ದರು. ಒಂದು ಮೊಬೈಲ್ ತೆಗೆದುಕೊಳ್ಳುವುದಕ್ಕೆ ಕನಿಷ್ಟ ಒಂದೆರಡು ತಿಂಗಳಾದರೂ ಚರ್ಚೆ ಮಾಡಿದ್ದೇವೆ. ಗಾಂಧೀನಗರವನ್ನೆಲ್ಲಾ ಸುತ್ತಾಡಿ ಕಡೆಗೆ, ಐದು ಸಾವಿರ ಕೊಟ್ಟು ಸಾಮ್ಸಂಗ್ ತೆಗೆದುಕೊಂಡರು. ಕಲರ್ ಸೆಟ್ ಚೆನ್ನಾಗಿತ್ತು, ಆದರೇ ಜೋರಾಗಿ ಕೇಳುತ್ತಿರಲಿಲ್ಲ. ನನ್ನ ಮೊಬೈಲ್ ಸ್ವಲ್ಪ ಸಮಸ್ಯೆ ಕೊಡುವುದಕ್ಕೆ ಶುರುವಾಯಿತು. ಅದಲ್ಲದೇ, ಆ ಸಮಯದಲ್ಲಿ ನಾನು ನನ್ನ ಕ್ಲಾಸ್ ಮೇಟ್ಸ್ ಗಳ ಹತ್ತಿರ ಜಗಳವಾಡಿದ್ದೆ. ಹುಡುಗಿಯರೆಲ್ಲಾ, ನೋಕಿಯಾ 1100, 1108, ಹಿಡಿದು ಬರುವಾಗ ನಾನು ಹಳೇ ಮೊಬೈಲ್ ಹಿಡಿಯುವುದು ನಾಚಿಕೆ ಎನಿಸಿತ್ತು. ಅದಲ್ಲದೇ, ಪೋಸ್ಟ್ ಪೈಡ್ ಹಚ್ ನಂಬರು ತೆಗೆದುಕೊಂಡು ಸಾವಿರಾರು ರೂಪಾಯಿ ಬಿಲ್ ಬಂದಿತ್ತು. ಆ ಸಮಯದಲ್ಲಿ ಕಿರಣ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ, ಕೈತುಂಬಾ ಸಂಪಾದನೆಯಿತ್ತು. ಮೊಬೈಲ್ ತೆಗೆದುಕೊಳ್ಳುವುದಕ್ಕೆ ಸಾಲ ಕೇಳಿದೆ. ಅವನು ಮೂರು ಸಾವಿರ ಕೊಟ್ಟ.
ನಾನು ಉಮೇಶನಿಗೆ ಹೇಳಿದ್ದೆ, ಒಂದು ಮೊಬೈಲ್ ಕೊಡಿಸು ಎಂದು. ಅವನು ಯಾರ ಬಳಿಯಲ್ಲಿಯೂ ಕಡಿಮೆ ದುಡ್ಡಿಗೆ ಕೊಡಿಸುವುದಾಗಿ ಹೇಳಿ ಶಾಂತಿನಗರಕ್ಕೆ ಕರೆದೊಯ್ದ. ನಾನು ನೋಕಿಯಾ 1100 ತೆಗೆದುಕೊಂಡು ಖುಷಿಯಲ್ಲಿ ಬಂದೆ. ಬಂದವನು, ಕಿರಣನಿಗೆ ಮೆಜೆಸ್ಟಿಕ್ ನಲ್ಲಿ ತೋರಿಸಿದೆ. ಅವನು ನೋಡಿದ ತಕ್ಷಣ ಈ ಮೊಬೈಲ್ ಗೆ ಮೂರು ಸಾವಿರ ಕೊಟ್ಟ, ವೇಸ್ಟ್ ಎಂದ. ನನ್ನೆದೆ ಕುಸಿಯಿತು. ಯಾಕೋ? ಎಂದೆ. ಮಗಾ ಇದು ಹಳೆದು ಕನೋ? ಬೇಡ ವಾಪಸ್ಸು ಕೊಟ್ಟು ಬಿಡು ಎಂದ. ಕಿರಣನಲ್ಲಿ ನನಗೆ ಇಂದಿಗೂ ಬಹಳ ಖುಷಿ ಆಗುವ ವಿಷಯವೇ ಇದು. ಇಷ್ಟವಿಲ್ಲವೆಂದರೇ ನೇರವಾಗಿ ಹೇಳುತ್ತಾನೆ. ಯಾವತ್ತೂ ಮುಚ್ಚು ಮರೆ ಮಾಡುವುದಿಲ್ಲ, ಕಳ್ಳಾಟವಿಲ್ಲ. ಮತ್ತೇ ಉಮೇಶನಿಗೆ ಫೋನ್ ಮಾಡಿ, ನನಗೆ ಬೇಡವೆಂದೆ. ಅವನು ಸಾಕಷ್ಟು ಬೈದ. ಅವನೂ ಅಷ್ಟೇ, ಅಂದಿನಿಂದ ಇಂದಿನ ತನಕವೂ ಅದೇ ಡೈಲಾಗ್. ವಾಪಾಸ್ಸು ಹೋಗಿ ಕೊಟ್ಟವನು, ಮೆಜೆಸ್ಟಿಕ್ ನಲ್ಲಿ ರಿಲಾಯನ್ಸ್ ಜಾಹಿರಾತು ನೋಡಿದೆ. 2500 ರೂಪಾಯಿಗೆ ಹ್ಯಾಂಡ್ ಸೆಟ್ ಮತ್ತು ಕರೆ ದರಗಳು 50ಪೈಸೆ ಮಾತ್ರ. ನಿರ್ಧಾರ ಮಾಡಿಬಿಟ್ಟೇ, ನನ್ನ ಕಾಟ ತಡೆಯಲಾರದೇ, ಕಿರಣ ಮತ್ತು ಉಮೇಶ ಇಬ್ಬರೂ ನಿನಗೆ ರಿಲಾಯನ್ಸ್ ಸರಿ ಅದನ್ನೇ ತೆಗೆದುಕೋ ಎಂದರು. 2006 ಏಪ್ರಿಲ್ ಹದಿನೇಳನೇ ತಾರೀಖಿನಂದು ಕೊಂಡದ್ದು ನಾನು ಈಗ ಬಳಸುತ್ತಿರುವ ನಂಬರು. ಬಹಳ ಬಾರಿ ಬದಲಾಯಿಸುವ ಪ್ರಯತ್ನ ಪಟ್ಟರೂ ಆಗಿಲ್ಲ.
ಇದಾದ ಮೇಲೆ, ಮೂರ್ನಾಲ್ಕು ಬಾರಿ ರಿಲಾಯನ್ಸ್ ಮೊಬೈಲ್ ಕಳೆದು ಹೋಯಿತು. ಹೈದರಾಬಾದಿಗೆ ಹೋದಾಗ ಅಲ್ಲಿ ಮೂರು ಮೊಬೈಲ್ ಕಳೆದು ಹೋಯಿತು. ಕಳೆದ ವರ್ಷ ಫೀಲ್ಡ್ ಗೆ ಹೋಗಿದ್ದಾಗ, ಹೊನ್ನಾಳಿಯಲ್ಲಿ ಮೊಬೈಲ್ ಕಳೆದು ಹೋಯ್ತು, ವರ್ಷದ ಆರಂಬದ ದಿನಗಳಲ್ಲಿ, ಮತ್ತೊಂದು ಮೊಬೈಲ್ ಬಿದ್ದು ಚೂರಾಯಿತು, ಕಡೆಗೆ ಈಗಿರುವ ದರಿದ್ರ ಮೊಬೈಲ್ ಬಂದಿದೆ. ಈ ಮೊಬೈಲ್ ಬಂದಾದ ಮೇಲೆ, ಅದ್ಯಾಕೋ ದಿನವೇ ಸರಿಯಿಲ್ಲವೆನಿಸಿದೆ. ಯಾರಾದರು ಕದ್ದರೂ ಸರಿ, ಇಲ್ಲದಿದ್ದಲ್ಲಿ ತೆಗೆದು ಎಸೆಯುವ ದಿನಗಳು ದೂರವಿಲ್ಲ.
ಹಾವಿಗೆ ಹಾಲೆರೆಯುವುದ ನಿಲ್ಲಿಸು, ಕಚ್ಚೊ ನಾಯಿಯಿಂದ ದೂರವಿದ್ದು, ಪ್ರೀತಿಸು ಕಾಮಧೇನುವನ್ನು!!!
ಕೆಲಸದ ಒತ್ತಡದ ನಡುವೆಯೂ, ಮಾನಸಿಕ ನೋವಿನ ನಡುವೆಯೂ ಇದೊಂದು ಬರವಣಿಗೆಯನ್ನು ಬರೆದು ಮುಗಿಸಲು ಪಣ ತೊಟ್ಟಿದ್ದೇನೆ. ನಾನು ಬರೆಯುತ್ತಿರುವುದು ನನ್ನ ಓದುಗ ದೇವರನ್ನು ಮೆಚ್ಚಿಸಲೂ ಅಲ್ಲಾ ಓದುಗರನ್ನು ಹಿಡಿದು ಓದಿಸಲೂ ಅಲ್ಲಾ, ಕೆಲವೊಂದು ನೋವುಗಳು ಭಾವನೆಗಳು ಆರಿ ಹೋಗುವ ಮುನ್ನಾ, ಬರೆದಿಡಬೇಕು. ಮಲಗಿದ್ದಾಗ ಕನಸು ಬಂದಾಗಲೇ ಅದನ್ನು ಬರೆದಿಡಬೇಕು, ನಿದ್ದೆ ಬಂತು ಎಂದು ಮುಖ ತಿರುಗಿಸಿ ಮಲಗಿದರೇ, ಕನಸಿನ ಅರ್ಥ, ಸೌಂದರ್ಯ ನಿಮಗೆ ಸಿಗುವುದಿಲ್ಲ. ನಾನು ಮಧ್ಯಾಹ್ನ ನಮ್ಮ ಅಜ್ಜಿಗೆಂದು ಮೊಬೈಲ್ ತರುವುದಕ್ಕಿ ಹೋಗಿದ್ದೆ. ನಮ್ಮ ಅಜ್ಜಿ ಬಹಳ ದಿನಗಳ ಹಿಂದೆಯೇ ನನಗೊಂದು ಮೊಬೈಲ್ ಕೊಡಿಸು ಎಂದು ಕೇಳಿದ್ದರು. ನನ್ನ ಎತ್ತಿ ಆಡಿಸಿ ಪೋಷಿಸಿದ ನನ್ನಜ್ಜಿ ಮೊಬೈಲ್ ಕೇಳಿದ ಕೂಡಲೇ ತೆಗೆದುಕೊಡುವ ಮನಸ್ಸು ಮಾಡಲಿಲ್ಲ. ತೆಗೆಯುವೇ ತೆಗೆಯುವೇ ಎಂದು ಹತ್ತು ತಿಂಗಳುಗಳನ್ನೇ ಕಳೆದೆ. ಇಂದು ತೆಗೆಯಲೇ ಬೇಕೆಂದು ಅಂಗಡಿಗೆ ಹೋದೆ. ಹೋದವನು ಯಥಾ ಪ್ರಕಾರ ನನ್ನ ಕುಬ್ಜ ಮನಸ್ಸಿಗೆ ಕೆಲಸ ಕೊಟ್ಟೆ. ಅಂಗಡಿಗೆ ಹೋಗುವುದಕ್ಕೇ ಮುಂಚೆಯೇ ಇಂಟರ್ನೆಟ್ ನಲ್ಲಿ ಮೊಬೈಲ್ ಮಾಡೆಲ್ ನೋಡಿದೆ. ನಾನು ಮೊಬೈಲ್ ಕೊಳ್ಳುವ ಮುನ್ನಾ ಕನಿಷ್ಠ ಹತ್ತು ಜನರಿಗೆ ಫೋನ್ ಮಾಡಿದ್ದೆ. ಮೂರ್ನಾಲ್ಕು ದಿನ ಪರದಾಡಿ, ನಂತರ ನಿಧಾರ ಮಾಡಿದ್ದೆ. ಆದರೇ ಅಜ್ಜಿಗೆ ಮೊಬೈಲ್ ತೆಗೆಯುವಾಗ ಇಂಥಹ ಯಾವೊಂದು ಚರ್ಚೆ ನಡೆಯಲಿಲ್ಲ.
ಯಾವುದೋ ಒಂದು ಬೇಸಿಕ್ ಮಾಡೆಲ್ ತೆಗೆದರೇ ಆಯಿತೆಂದು ನಿರ್ಧರಿಸಿದೆ. ಅಂಗಡಿಗೆ ಹೋದವನೇ, ನೋಕಿಯಾದಲ್ಲಿ ಬೆಸಿಕ್ ಮಾಡೆಲ್ ಕೊಡಿ ಎಂದೆ. ಸರ್, ಬೇಸಿಕ್ ಮಾಡೆಲ್ ಅಂದ್ರೇ ಎಂಪಿತ್ರೀ, ರೇಡಿಯೋ ಬೇಕಾ? ಎಂದಾಗ ಇಲ್ಲ ಇಲ್ಲ ಪ್ಯೂರ್ ಬೇಸಿಕ್ ಮಾಡೆಲ್ ಎಂದು ನಗುನಗುತಾ ಹೇಳಿದೆ. ಒಂದು ಮೊಬೈಲ್ ಕೊಳ್ಳುವುದಕ್ಕೆ ಎರಡು ನಿಮಿಷ ಸಾಕಾಯ್ತು. ವಿಷಯ ಎರಡು ರೀತಿಯದ್ದಿದೆ. ಮೊದಲನೆಯದು ನಾನು ಇಲ್ಲಿಯ ತನಕ ಮೊಬೈಲ್ ಗಳ ಬಗ್ಗೆ ಮತ್ತು ಮೊಬೈಲ್ ನನ್ನ ಜೀವನದಲ್ಲಿ ಆಟವಾಡಿರುವುದರ ಬಗ್ಗೆ ಹೇಳುತ್ತೇನೆ. ಎರಡನೇಯದಾಗಿ ನಾನು ನಮ್ಮ ಅಜ್ಜಿಯ ವಿಷಯದಲ್ಲಿ ನಡೆದುಕೊಂಡ ರೀತಿಯದನ್ನು ವಿವರಿಸುತ್ತೇನೆ. ನಾವು ನಮ್ಮ ತಂದೆ ತಾಯಿಯ ಅಥವಾ ಹಿರಿಯರ ವಿಷಯದಲ್ಲಿ ನಡೆದುಕೊಳ್ಳುವ ರೀತಿ ನಿಜಕ್ಕೂ ಬೇಸರವನ್ನು ತರಿಸುತ್ತದೆ. ನಿನ್ನೆ ನಾನು ಮೊಬೈಲ್ ಕೊಳ್ಳುವ ಸಮಯದಲ್ಲಿ ಕಡಿಮೆ ದುಡ್ಡಿನ ಮೊಬೈಲ್ ಅನ್ನೇ ಹುಡುಕಿದೆ ಎನಿಸುತ್ತದೆ. ಅದು ಬಳಸಲು ಸುಲಭವೆನಿಸಿದರೂ, ಜೊತೆಯಲ್ಲಿಯೇ, ಅಜ್ಜಿಗೆ ಅಲ್ವಾ? ಮಾತನಾಡುವುದಕ್ಕೇ ಮಾತ್ರ ಇರುವುದು, ಅವರಿಗೆ ರೇಡಿಯೋ, ಕ್ಯಾಮೆರಾ, ಎಂಪಿತ್ರಿ ಏನೂ ಬೇಡವೆಂದು ನಿರ್ಧರಿಸಿದೆ. ಅದೆಲ್ಲವೂ ಇರುವ ಮೊಬೈಲ್ ಕೊಡಿಸಿದರೆ ತಪ್ಪೇನು? ಉಪಯೋಗಿಸದಿದ್ದರೇ ಇರಲಿ, ಒಳ್ಳೆಯ ಮೊಬೈಲ್ ಹಿಡಿದುಕೊಂಡು ಹೋದರೆ ತಪ್ಪಿಲ್ಲವಲ್ಲ. ನಾನು ಬ್ಲಾಕ್ ಆಂಡ್ ವೈಟ್ ಅಥವಾ ಕಡಿಮೆ ಮಟ್ಟದ ಮೊಬೈಲ್ ಹಿಡಿದುಕೊಂಡು ಹೋಗಲು ಮನಸ್ಸು ಒಪ್ಪುವುದಿಲ್ಲ. ಆದರೇ, ಅಪ್ಪ ಅಮ್ಮ ಅಜ್ಜಿಯ ವಿಷಯದಲ್ಲಿ ಮಾತ್ರ ಅವರಿಗೆ ಇದು ಸಾಕು, ಅದು ಸಾಕು ಎನ್ನುತ್ತೇವೆ. ನಾನು ಒಂದು ಜೊತೆ ಚಪ್ಪಲಿಗೆ ಮೂರು ಸಾವಿರ ಕೊಡುವುದಕ್ಕೆ ಹಿಂದೂ ಮುಂದೂ ನೋಡುವುದಿಲ್ಲ ಆದರೇ ಒಂದು ಮೊಬೈಲ್ ಗೆ ಹೀಗೆ ನೋಡಬೇಕಿತ್ತಾ? ಉಪಯೋಗಕ್ಕೇ ಬಾರದವರ ಜೊತೆ ಗಂಟೆಗಟ್ಟಲೇ ಹರಟೆ ಹೊಡೆಯುದಕ್ಕೆ ಹಣ ವ್ಯಯ ಮಾಡುತ್ತೇವೆ, ಮೂರು ಕಾಸಿಗೂ ಉಪಯೋಗಕ್ಕೆ ಬಾರದವರಿಗೆ ಉಣ್ಣಿಸಿ, ತಿನ್ನಿಸಿ, ಕುಡಿಸಿ ಕಳುಹಿಸುತ್ತೇವೆ. ನಮ್ಮನ್ನು ಹೆತ್ತು ಹೊತ್ತು ನಮಗೆ ಎಲ್ಲವನ್ನೂ ಕೊಟ್ಟವರ ಮೇಲೇಕೆ ಈ ಬಗೆಯ ಅಸಡ್ಡೆ ಎನಿಸಿತು.
ಮೂವತ್ತು ವರ್ಷ ನಮ್ಮನ್ನು ನೋಡಿಕೊಂಡವರನ್ನು ನಾವೇಕೆ ಹೀಗೆ ವಯಸ್ಸಾಯಿತೆನ್ನುವ ಕಾರಣಕ್ಕೆ ಕಡೆಗಣಿಸುತ್ತೇವೆ. ಮೂವತ್ತು ವರ್ಷ ಕಣ್ಣಿಗೆ ಎಣ್ಣೆ ಬಿಟ್ಟು ಕಾಯ್ದ ಅವರಿಗೆ ಮೂರು ವರ್ಷ ಸೇವೆ ಮಾಡುವುದಿಲ್ಲ. ಎಲ್ಲವನ್ನೂ ಹಣದಿಂದ ತೂಗುತ್ತೇವೆ. ಎಲ್ಲರೂ ಹೀಗೆ ಮಾಡುವುದಿಲ್ಲ ಆದರೇ ನಾನು ಮಾಡಿದ್ದೇನೆ. ಇದರ ಬಗ್ಗೆ ನನಗೆ ನನ್ನ ಬಗ್ಗೆ ತೀವ್ರ ಅಸಮಾಧಾನವಿದೆ. ಬೈಕ್ ಹತ್ತಿ ಊರೂರು ಸುತ್ತುವುದಕ್ಕೆ ಸಾವಿರಾರು ಕಳೆದಿದ್ದೇನೆ, ನಾಯಿ ನರಿಗಳಿಗೆ ಹಣ ವ್ಯಯ ಮಾಡಿದ್ದೇನೆ. ನಂಬಿಸಿ ಕೈಕೊಟ್ಟ ಅನೇಕರಿಗೆ ಸಾಲತೆತ್ತಿ ಕೈ ಸುಟ್ಟುಕೊಂಡಿದ್ದೇನೆ. ಐದು ರೂಪಾಯಿ ಟೀ ಕುಡಿಸುವುದಕ್ಕೆ ಲೆಕ್ಕ ಹಾಕುವವರಿಗೆ ಸಾವಿರ ಸಾವಿರ ಚೆಲ್ಲಿದ್ದೇನೆ. ಮೋಸಗಾರರನ್ನು ಸಾಕುವ ಮನಸ್ಸು ನಮ್ಮನ್ನು ಸಾಕಿದವರನ್ನು ಯಾಕೆ ಇಷ್ಟೊಂದು ಕೆಟ್ಟದ್ದಾಗಿ ನಡೆಸಿಕೊಡುತ್ತದೆ. ದಿನಕ್ಕೆ ಒಂದು ಸಿಗರೇಟು ಕಡಿಮೆ ಮಾಡಿದರೂ, 300 ರೂಪಾಯಿ ಉಳಿಯುತ್ತದೆ, ಅದನ್ನು ಮೂರು ಜನರ ಮೊಬೈಲ್ ಗೆ ರೀಚಾರ್ಜ್ ಮಾಡಿಸಿದರೇ ತಿಂಗಳಿಡೀ ಮಾತನಾಡುತ್ತಾರೆ, ಸಂತೋಷದಿಂದಿರುತ್ತಾರೆ. ನಾವು ಬೇಕಿಲ್ಲದ ಮೂರನೇ ದರ್ಜೆ ಸಿನೆಮಾ ನೋಡುವ ದುಡ್ಡನ್ನು ನಮ್ಮ ಪೋಷಕರೆಡೆಗೆ ಹಾಕಿದರೂ ಸಾಕು ಆನಂದ ಸಾಗರದಲ್ಲಿ ಮಿಯ್ಯುತ್ತಾರೆ. ನಾನು ಮನೆಗೆಂದು ಏನನ್ನು ತೆಗೆದುಕೊಂಡು ಹೋದಾಗಲೂ ನಮ್ಮಪ್ಪ ಅಮ್ಮ ಹೇಳಿರುವುದು ಒಂದೇ ಮಾತು, ಅಯ್ಯೋ ಇದನ್ನೆಲ್ಲಾ ಯಾಕೆ ತರುತ್ತೀಯಾ? ಸುಮ್ಮನೆ ದುಂದು ವೆಚ್ಚ ಮಾಡಬೇಡ, ನೀನು ಉಳಿಸಿಕೋ ಎಂದು. ಒಂದು ಸೀರೆ ಕೊಂಡೊಯ್ದರೂ ಅಷ್ಟೇ, ನನಗೆ ಯಾಕೆ ಮನೆಯಲ್ಲೇ ಇಷ್ಟೊಂಡು ಸೀರೆ ಇಲ್ವಾ? ಎನ್ನುತ್ತಾರೆ. ಮರುಕ್ಷಣವೇ ಅರ್ಧ ಊರಿಗೆ ತೋರಿಸಿರುತ್ತಾರೆ ನಮ್ಮ ಹರಿ ತಂದಿದ್ದು, ಎಂದು.
ನನ್ನ ಅನೇಕಾ ಮಹಾನುಭಾವರಿದ್ದಾರೆ, ಜೊತೆಯಲ್ಲಿಯೇ ಕುಡಿದಿರುತ್ತಾರೆ, ಆಮೇಲೆ ಹೇಳುತ್ತಾರೆ, ಅಯ್ಯೋ ಆ ನನ್ಮಗನ, ಅವನು ನಾಲ್ಕು ಕಾಸು ಬಿಚ್ಚಲ್ಲ, ಕಂಜ್ಯೂಸ್, ಕೇಳಿದರೇ ಕುಡಿಸಬೇಕಾಗುತ್ತೆ ಅಂತಾ ಕುಡಿಯೋದನ್ನೇ ಬಿಟ್ಟಿದ್ದೀನಿ ಅಂತಾ ನಾಟಕ ಆಡ್ತಾನೆ ಎಂದವರು ಇದ್ದಾರೆ. ನಿಯತ್ತಿಲ್ಲದ ನಾಯಿಗಳನ್ನು ಸಾಕುವುದಕ್ಕಿಂತ ಕಾಮಧೇನುವಿನಂಥಹ ಅಪ್ಪ ಅಮ್ಮನ ಬಗ್ಗೆ ಒಲವು ತೋರಿಸುವುದು ಉತ್ತಮವಲ್ಲವೇ? ನಾನು ಇಲ್ಲಿ ಯಾರನ್ನೂ ಬೆರಳು ಮಾಡಿ ತೋರಿಸುತ್ತಿಲ್ಲಾ. ಓದಿದವರಾರು ಇದು ನನಗೆ ಇವನು ಹೇಳುತ್ತಿದ್ದಾನೆಂದು ಭಾವಿಸುವುದು ಬೇಡ. ನನ್ನ ಅನೇಕ ಸ್ನೇಹಿತರು, ಗೆಳತಿಯರು ನನಗೆ ಪ್ರಾಣಕಿಂತ ಮಿಗಿಲು. ಆದರೇ, ಕೆಲವರು ದ್ರೋಹಿಗಳು ಅಷ್ಟೇ. ಜಗತ್ತನ್ನು ದುಡ್ಡಿನಿಂದಲೇ ಅಳೆದವರಿದ್ದಾರೆ ಅಂಥವರ ಬಗ್ಗೆ ಹೇಳಿದ್ದೇನು. ಅವರಿಂದ ದೂರವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ ಕೂಡ. ಆದರೂ, ಬೆನ್ನತ್ತಿ ಬರುವ ಭೂತದಂತೆ ಒಮ್ಮೊಮ್ಮೆ ಕಾಡುತ್ತಾರೆ. ಒಮ್ಮೆ ರುಚಿ ನೋಡಿದ ಬೆಕ್ಕು ಪದೇ ಪದೇ ಬರುವ ಹಾಗೆ. ಜೀವನದಲ್ಲಿ ಹಣ ಮುಖ್ಯವಾಗುವುದಿಲ್ಲ, ಕೇವಲ ಅಪ್ಪ ಅಮ್ಮ, ಮತ್ತೂ ಸತ್ಯವಾದ ನಾಲ್ಕು ಜನ ಸ್ನೇಹಿತರು. ನಿಮ್ಮ ಇರುವಿಕೆಗಾಗಿ ಬರುವವರು ನಿಮ್ಮಲ್ಲಿರುವುದನ್ನು ದೋಚುವ ತನಕ ಮಾತ್ರ. ಪ್ರೀತಿಗೆ ಬರುವವರ ನಿಮ್ಮಲ್ಲಿ ಏನೂ ಇಲ್ಲದಿದ್ದರೂ ಬರುತ್ತಾರೆ, ಜೊತೆಗಿರುತ್ತಾರೆ. ಹಾವಿಗೆ ವಿಷ ಎರೆಯುವ ಬುದ್ದಿಯನ್ನು ಬಿಡಬೇಕು ನಾವು. ಯಾವುದೋ ಮೋಹಕ್ಕೆ ಬಲಿಯಾಗಿ, ಬೇಡದ ನಾಯಿಯನ್ನು ಸಾಕಿ ಸಾಲ ಮಾಡುವುದಕ್ಕಿಂತ ಪ್ರೀತಿಯ ಅರಮನೆ ಕಟ್ಟುವುದು ಲೇಸು.
06 ಜುಲೈ 2012
ತಳ ಬುಡವಿಲ್ಲದ ಬರವಣಿಗೆ!! ಓದುವುದು ವ್ಯರ್ಥ!!!
ಎಕನಾಮಿಕ್ ಹಿಸ್ಟರಿ ಪೇಪರ್ ಮುಗಿಸಬೇಕು, ಪರಿಸರಕ್ಕೆ ಸಂಬಂದಿಸಿದ ಪೇಪರ್
ಮುಗಿಸಬೇಕು, ಡಿಎಫ಼್ ಗೆ ಕೆಲವು ನಿಯಮಗಳನ್ನು ಬರೆದು ಮುಗಿಸಬೇಕು. ಅಲ್ಲಾಡದೇ
ಕೂತು ಮಾಡಿದರೂ ಮೂರು ವಾರಕ್ಕೆ ಆಗುವಷ್ಟು ಕೆಲಸವಿದೆ. ಇದರ ನಡುವೆ ಆಫೀಸಿನಲ್ಲಿ ಇಂಟರನೆಟ್ ಸರಿಯಾಗಿ
ಕೆಲಸ ಮಾಡುತ್ತಿಲ್ಲವಲ್ಲವೆಂದು ಯೋಚಿಸುವಾಗ ಇಂದು ಬೆಳ್ಳಗ್ಗೆ ತಲೆಯಲ್ಲಿ ಒಡಾಡಿದ ಹುಳುಗಳು ನೆನಪಿಗೆ
ಬಂದೆವು. ಬೆಳ್ಳಿಗ್ಗೆ ನಳಪಾಕ ಮಾಡುವ ಸಮಯದಲ್ಲಿ, ಆ ದೇವಿಯ ಅನುಗ್ರಹದಂತೆ
ಟೊಮೋಟೊ ಬಾತ್ ಮಾಡಿದೆ. ದೇವಿಯನ್ನು ನೆನಪಿಸಿಕೊಂಡು ಮಾಡಿದ್ದರಿಂದ ಅದ್ಬುತವಾಗಿಯೇ ಬಂತು. ಅದಾದ ಮೇಲೆ
ಎಣ್ಣೆ ಅಂಟಿದ್ದ ಪಾತ್ರೆಗಳನ್ನು ತೊಳೆಯುತ್ತಿದ್ದೆ. ವಿಮ್ ಕಂಪನಿಯವರ ಲಿಕ್ವಿಡ್ ಹಾಕಿ ಉಜ್ಜಿದ ತಕ್ಷಣ
ಎಣ್ಣೆಯಲ್ಲ ಮಾಯವಾಯಿತು. ನನಗೆ ಅನೇಕ ವಸ್ತುಗಳ ಹೆಸರು ಗೊತ್ತಿಲ್ಲ. ಅನೇಕ ಹೋಟೆಲುಗಳಿಗೆ ಹೋದಾಗಲೂ
ಅಷ್ಟೇ, ಏನು ಚೆನ್ನಾಗಿದೆ ನಿಮ್ಮಲ್ಲಿ ಎಂದು ಕೇಳುತ್ತೇನೆ. ಆ ಮೆನು ನೋಡಿ
ನಿರ್ಧರಿಸಿದರೇ ನಮ್ಮ ಗತಿ ಅಷ್ಟೇ. ನಾನು ವಿಜಿ ಒಮ್ಮೆ ಹೋಟೆಲಿನಲ್ಲಿ ಕುಳಿತಾಗ ಅವನು ಆರ್ಡರ್ ಮಾಡಿದ,
ಹರಿಯಾಲಿನೋ ಹಳಿಯಾಲೀನೋ ಕಬಾಬ್ ಅಂತೆ, ಬಂದ ಮೇಲೆ ನೋಡಿದರೇ
ವಡೆ, ಸ್ವಲ್ಪ ಪುದಿನ ಗಿದಿನ ಚೆನ್ನಾಗಿ ಹಾಕಿದ್ದರು. ಈ ವಿಷಯ ಬಂದದ್ದು
ಯಾಕೆಂದರೇ, ನನಗೆ ಆ ಪಾತ್ರೆ ತೊಳೆಯುವ ಲಿಕ್ವಿಡ್ ಹೆಸರು ಗೊತ್ತಿಲ್ಲ,
ಈಗೆಲ್ಲಾ ಮಾಲುಗಳಾಗಿರುವುದರಿಂದ ಕೇಳುವ ಅವಶ್ಯಕತೆ ಇಲ್ಲ. ಅಲ್ಲಿರುವುದನ್ನು ಎತ್ತು
ಕೊಂಡು ಬಂದು ಬಿಲ್ ಪಾವತಿ ಮಾಡಿಬರುವುದಷ್ಟೆ.
ನನಗೆ ಚೆನ್ನಾಗಿಯೇ ನೆನಪಿದೆ, ನಾವು ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಇಡೀ ತಿಂಗಳಿಗೆ
ಬೇಕಾಗಿರುವ ಸಾಮಾನುಗಳನ್ನು ತರಬೇಕಿತ್ತು, ಅದರಲ್ಲೇನು ವಿಶೇಷ ಎನ್ನಬೇಡಿ.
ಅದನ್ನು ಬರೆಯುವುದಕ್ಕೆ ಕೂರುವುದು, ಪಟ್ಟಿ ತಯಾರಿಸುವುದು ಅದ್ಬುತಾವೆನಿಸುತ್ತದೆ.
ನಾನು ಹೈಸ್ಕೂಲಿಗೆ ಹೋದಮೇಲೆ ನಾನೇ ಬರೆಯುವುದು ತರುವುದು ಆಯ್ತು. ಬರೆಯುವ ಸಮಯದಲ್ಲಿ ನಾನು ಅಪ್ಪ
ಅಮ್ಮ ಮೂವರು ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೇವು. ಅಮ್ಮಾ ಅಡುಗೆ ಮನೆಯಲ್ಲಿ ಎಲ್ಲಾ
ಡಬ್ಬಿಗಳನ್ನು ನೋಡಿ ನೋಡಿ ಹೇಳುತ್ತಿದ್ದರೇ, ನಾನು ಬರೆಯುವುದು,
ಅಪ್ಪ ಎಷ್ಟು ಬೇಕೆಂದು ಹೇಳುವುದು ನಡೆಯುತ್ತಿತ್ತು. ಅಮ್ಮನ ಸರದಿ ಮುಗಿದ ಮೇಲೆ,
ಅಪ್ಪನ ಸರದಿ, ಬ್ಲೇಡ್, ಶೇವಿಂಗ್
ಕ್ರೀಂ ಹೀಗೆ, ಅದಾದ ನಂತರ ನನಗೆ ಬೇಕಿರುವ ಪೆನ್ನು ಪೆನ್ಸಿಲ್ ಹೀಗೆ ನಡೆಯುತ್ತಿತ್ತು.
ಒಂದು ತಿಂಗಳಿಗೆ ಆಗುವಷ್ಟು ಒಮ್ಮೆ ತಂದರೇ ಮುಂದಿನ ತಿಂಗಳು ಐದನೇಯ ತಾರೀಖಿನ ತನಕ ಆ ಅಂಗಡಿಗೆ ಕಾಲು
ಇಡುತ್ತಿರಲಿಲ್ಲ. ಅದಲ್ಲದೇ, ಅದೆಲ್ಲವೂ ಸಾಲದ ಲೆಕ್ಕದಲ್ಲಿ ತರುತ್ತಿದ್ದೆ.
ಒಂದು ಸಾಮಾನು ಹೆಚ್ಚು ಕಡಿಮೆಯಾಗಿದ್ದರೇ ನಾಳೆ ಸ್ಕೂಲಿಗೆ ಹೋದಾಗ ಕೇಳಿಕೊಂಡು ಬರಬೇಕಿತ್ತು. ಇದಾದ
ನಂತರ ಪ್ರತಿ ಗುರುವಾರ ಕೊಣನೂರಿನಲ್ಲಿ ಸಂತೆ ಇರುತ್ತಿತ್ತು. ತರಕಾರಿ ತರುವ ಜವಬ್ದಾರಿ ನನ್ನ ತಲೆಯ
ಮೇಲೆ ಬಿತ್ತು. ಇಪ್ಪತ್ತು ರೂಪಾಯಿ ಕೊಡುತ್ತಿದ್ದರು, ಅದರಲ್ಲಿ ಮನೆಗೆ ಬೇಕಿರುವ
ಎಲ್ಲಾ ಸಾಮಾನುಗಳನ್ನು ತೆಗೆದುಕೊಳ್ಳುತ್ತಿದ್ದೆ. ನನಗೆ ಅಚ್ಚರಿ ಏನೆಂದರೇ, ನಾನು ಈಗ ತರುವ ಅದೇ ತರಕಾರಿಯನ್ನೇ ಅಂದೂ ತರುತ್ತಿದ್ದೆ. ಹಾಗಲಕಾಯಿ, ತೊಂಡೆಕಾಯಿ, ಬದನೆಕಾಯಿ, ಆಲೂಗೆಡ್ಡೆ.
ಇದರ ನಡುವೆ ನನಗೆ ಇಷ್ಟವಾಗುವ ಕರೀಮೀನು, ಒಣಗಿದ ಮೀನು, ಉಪ್ಪು ಮೀನನ್ನು ತರುತ್ತಿದ್ದೆ, ಕಡೆಯದಾಗಿ ಕಡ್ಲೆಪುರಿ ಇರಲೇಬೇಕಿತ್ತು.
ಇಷ್ಟೇಲ್ಲವೂ ಇಪ್ಪತ್ತು ರೂಪಾಯಿಗೆ, ಅದರಲ್ಲಿಯೇ ಎರಡು ರೂಪಾಯಿ ಉಳಿಸಿ ಅರ್ಧ
ಮಸಾಲ ಪೂರಿ ತಿಂದಿರುವ ದಿನಗಳಿವೆ.
ಇಷ್ಟೊಂದು ಪೈಸಾ ಟೂ ಪೈಸಾ ತರಕಾರಿ ತರುತ್ತಿದ್ದ ನಾನು ಈಗ ಖರ್ಚು
ಮಾಡುವ ರೀತಿ ನೋಡಿ ನನ್ನ ಗೆಳತಿಯೇ ಕೇಳಿದ್ದಾಳೆ, ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೆಂದು. ಆಗ ನನ್ನ ವಾದ
ಸರಣಿಯೂ ಇರುತ್ತದೆ ಬಿಡಿ. ಅದೆಲ್ಲವೂ ಬಾಯಿಯಿಂದ ಅವಳನ್ನು ಗೆಲ್ಲಲೂ ಮಾತ್ರ, ಒಳ ಮನಸ್ಸು ಹೇಳುತ್ತಿರುತ್ತದೆ ಹೌದು ನಾನು ಮಾಡುತ್ತಿರುವುದು ತಪ್ಪೆಂದು, ಒಪ್ಪಿದರೇ ಅವಳು ಇನ್ನೂ ಮೇಲೆ ಹೋಗುತ್ತಾಳೆಂಬ ಆತಂಕ. ನಾನು ಹೇಳಹೊರಟದ್ದು ಬದಲಾದ ಜೀವನ
ಮತ್ತು ಜೀವನ ಪದ್ದತಿಯ ಬಗ್ಗೆ. ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ ನಾನು ಇಂಥಹ ಒಂದು ಜಗತ್ತಿದೆ ಬರುತ್ತೇನೆಂದು.
ಚಿಕ್ಕವನಿದ್ದಾಗ ಅಮ್ಮ ಪಾತ್ರೆ ತೊಳೆಯುವುದಕ್ಕೆ ಪರದಾಡುತ್ತಿದ್ದ ರೀತಿ ಅಯ್ಯೋ ಎನಿಸುತ್ತದೆ. ನಮ್ಮ
ಮನೆಗೆ ನಲ್ಲಿಯೂ ಇರದ ಸಮಯದಲ್ಲಿ, ಪಕ್ಕದ ಮನೆಯವರ ನಲ್ಲಿಯಲ್ಲಿ ನೀರು ಹಿಡಿಯಬೇಕಿತ್ತು,
ಆಗ ಊರಿಗೆ ಟ್ಯಾಂಕ್ ಇರಲಿಲ್ಲ ಆದ್ದರಿಂದ ಕರೆಂಟ್ ಬಂದ ಸಮಯದಲ್ಲಿ ನೀರು ಬರುತ್ತಿತ್ತು,
ರಾತ್ರಿ ಒಂದು ಗಂಟೆ ಎರಡು ಗಂಟೆ ಎನ್ನುವುದನ್ನು ಲೆಕ್ಕಿಸದೇ ಅಮ್ಮಾ ನೀರು ಹಿಡಿಯುತ್ತಿದ್ದರು.
ನನಗೆ ಖುಷಿ ಎನಿಸುವುದು ಆ ಸಮಯದಲ್ಲಿ ನಾನು ಮಲಗಿರುತ್ತಿದ್ದೆ, ಆದರೇ ನಮ್ಮಪ್ಪ
ನೀರು ಹಿಡಿಯುವುದಕ್ಕೆ ಸಹಾಯ ಮಾಡುತ್ತಿದ್ದರು. ನಮ್ಮಪ್ಪನ ಬಗ್ಗೆ ಬೇರೇನೇ ಹೇಳಿದರೂ ಅವರು ಮನೆಯ ಕೆಲಸದ
ವಿಚಾರದಲ್ಲಿ ಬಹಳ ಒಳ್ಳೆಯವರು. ಅಡುಗೆ ಮಾಡಲು ಸಹಾಯ ಮಾಡಿದ ದಿನಗಳು ಇವೆ, ಅಡುಗೆ ಮಾಡಿದ ದಿನಗಳು ಇವೆ.
ಪಾತ್ರೆ ತೊಳೆಯುವುದಕ್ಕೆ ನೀರಿಗೆ ಸಮಸ್ಯೆ ಇದ್ದಾಗ, ನಮ್ಮಮ್ಮ ಮನೆಯಿಂದ ಸ್ವಲ್ಪ
ದೂರದಲ್ಲಿ ಹರಿಯುತ್ತಿದ್ದ ಹಾರಂಗಿ ನಾಲೆಗೋ ಅಥವಾ ಒಮ್ಮೊಮ್ಮೆ ಮನೆಯಿಂದ ಒಂದು ಕೀಮಿ ದೂರದಲ್ಲಿ ಹರಿಯುತ್ತಿದ್ದ
ಕಟ್ಟೇಪುರ ಕಾಲುವೆಗೋ ಹೋಗುತ್ತಿದ್ದರು. ಇಡೀ ದಿನದ ಪಾತ್ರೆಯಲ್ಲವನ್ನೂ ತುಂಬಿಕೊಂಡು ಕಾಲುವೆಗೆ ಹೋಗಿ
ತೊಳೆದುಕೊಂಡು ಬರುವುದು ನಮ್ಮಮ್ಮ ಅನುಸರಿಸಿದ ರೀತಿ. ಇದರಲ್ಲಿ ನನಗೆ ಬಹಳ ಸಮಸ್ಯೆಯಾಗುತ್ತಿತ್ತು,
ಮುಸ್ಸಂಜೆಯ ಸಮಯದಲ್ಲಿಯೂ ಅಥವಾ ಮುಂಜಾನೆಯಲ್ಲಿಯೋ ಹೋಗುತ್ತಿದ್ದರಿಂದ ನಾನು ಅವರ
ಜೊತೆಗೆ ಹೋಗಬೇಕಿತ್ತು. ನಮ್ಮಪ್ಪ ಅಮ್ಮನಿಗೆ ಬೈಯ್ಯುತ್ತಿದ್ದರು, ಅದೇನು
ನಿಮಗೆ ಸಂಜೆ ಸಮಯದಲ್ಲಿ ಹೋಗುತ್ತಿರಾ? ಸ್ವಲ್ಪ ಮುಂಚಿತವಾಗಿ ಹೋಗಿ ಬಂದರೇನು?
ಮುಸ್ಸಂಜೆ ಹೊತ್ತು ಹೇಗಿರುತ್ತದೆಯೋ ಹೇಗೋ? ಎಂದು. ಹೆಣ್ಣು
ಮಕ್ಕಳು ಮುಸ್ಸಂಜೆಯ ಸಮಯದಲ್ಲಿ ಕಾಲುವೆ ಕಡೆಗೆ ಅಥವಾ ಕಟ್ಟೆಯ ಕಡೆಗೆ ಹೋಗುತ್ತಿರಲಿಲ್ಲ. ನಮ್ಮೂರಿನ
ಸುತ್ತಲೂ ಕಾವೇರಿ ಹರಿಯುತ್ತದೆ. ಅದನ್ನು ನಿಮಗೆ ಬಣ್ಣಿಸಬೇಕೆಂದರೇ, ನೀವು
ಒಂದು ಹುರುಳಿ ಬೀಜವನ್ನು ತೆಗೆದುಕೊಂಡರೇ, ಅದರ ಬಲಭಾಗದಿಂದ ಬಂದು ಎಡಭಾಗದಿಂದ
ಹೊರಕ್ಕೆ ಹೋಗುತ್ತಿತ್ತು, ಗೊಂದಲವಾಗಬೇಡಿ. ಸರಿಯಾಗಿ ಹೇಳುತ್ತೇನೆ. ನಮ್ಮೂರಿಗೆ
ಕಾವೇರಿ ನದಿ ಬಲಕ್ಕೆ ಹರಿದು ಬಂದು ಊರಿನ ಜಮೀನನ್ನು ಬಳಸಿ ಎಡಕ್ಕೆ ಹಾದು ಹೋಗುತ್ತಿತ್ತು. ಬಲಭಾಗದಲ್ಲಿ
ಹರಿಯುವ ಕಡೆ, ಊರಿನವರು ಹೋಗಿ ಬಟ್ಟೆ ಬರೆಗಳನ್ನು ತೊಳೆಯುತ್ತಿದ್ದರು,
ಅಲ್ಲಿಯೇ ಹೊಳೆ ಬಸಪ್ಪನ ಗುಡಿ ಇದ್ದಿದ್ದರಿಂದ, ದೇವರು
ನಮ್ಮನ್ನು ಕಾಪಾಡುತ್ತಾನೆಂಬುದು ನಂಬಿಕೆ. ಆದರೇ, ಎಡಭಾಗದಲ್ಲಿ ಅರ್ಧ ವಯಸ್ಸಿಗೆ
ಸತ್ತವರನ್ನು ಸುಡುವುದು, ಊಳುವುದು ವಾಡಿಕೆಯಾಗಿತ್ತು. ಆದ್ದರಿಂದ ಕಟ್ಟೆ
ಕಡೆಗೆ ಹೋಗುವುದು, ಆ ಹಾದಿಯಲ್ಲಿ ನಡೆದಾಡುವುದು ಒಳ್ಳೆಯದಲ್ಲವೆಂಬ ನಂಬಿಕೆ
ಬಲವಾಗಿತ್ತು. ನಮ್ಮಮ್ಮ ಮುಸ್ಸಂಜೆಯಲ್ಲಿ ಪಾತ್ರೆ ತೊಳೆಯಲು ಹೋಗುವುದು, ಮುಂಜಾನೆಯ ಸಮಯಕ್ಕೆ ಹೋಗುವುದು ನಮ್ಮಪ್ಪನಿಗೆ ಹಿಡಿಸುತ್ತಿರಲಿಲ್ಲ. ಮೊದಲಿನಿಂದಲೂ ನಮ್ಮಮ್ಮನ
ಆರೋಗ್ಯ ಸರಿ ಇಲ್ಲದಿದ್ದರಿಂದಲೂ ಸ್ವಲ್ಪ ಜಾಸ್ತಿ ಕೆಲಸ ಮಾಡಿದ ದಿನಗಳು ಸುಸ್ತಾಗಿ ಮಲಗುತಿದ್ದರು.
ಆ ದಿನಗಳಲ್ಲಿ ನಮ್ಮಪ್ಪನ ಹರಿಕಥೆ ಶುರುವಾಗುತ್ತಿತ್ತು, ಬೇಡವೆಂದರೂ ಕೇಳುವುದಿಲ್ಲ,
ಮುಸ್ಸಂಜೆ, ಮುಂಜಾನೆ ಹೊಳೆಗೆ ಹೋಗುವುದು ಒಳ್ಳೆಯದಲ್ಲ
ಅದಕ್ಕೆ ಹೀಗೆ ಆಗುವುದು, ಅದು ಇದು ಎಂದು ಬೈಯ್ಯುತ್ತಿದ್ದರು. ಬೈಗುಳಕ್ಕೆ
ಪ್ರತಿಯಾಗಿ ನಮ್ಮಮ್ಮ ಹೋಗುವುದನ್ನೇನು ನಿಲ್ಲಿಸಲಿಲ್ಲ, ಆದರೇ,
ನನ್ನನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಶುರುಮಾಡಿಕೊಂಡರು.
ನಾನು ಮನೆಗೆ ಸಾಮಾನು ತರುವಾಗ, ಸಬೀನಾ ಪೌಡರ್ ಮತ್ತು ವಿಮ್
ಬಾರನ್ನು ತರುತ್ತಿದ್ದೆ. ನನಗಿಂದಿಗೂ ತಿಳಿಯದ ವಿಷಯವೆಂದರೇ, ನಮ್ಮಮ್ಮ ಅವುಗಳನ್ನು
ಮಿತವಾಗಿ ಬಳಸುತ್ತಿದ್ದರು. ಅದರ ಜೊತೆಗೆ, ಸಾಮಾನ್ಯವಾಗಿ ಬೂದಿ ಮತ್ತು ಹೊಳೆ
ದಂಡೆಯ ಮಣ್ಣನ್ನು ಬಳಸುತ್ತಿದ್ದರು. ನಾನು ನಮ್ಮಮ್ಮನಿಗೆ ಬೈಯ್ಯುತ್ತಿದ್ದೆ, ಅಲ್ಲಾ, ಚೆನ್ನಾಗಿರುವ ಸಬೀನಾ ಇರುವಾಗ, ವಿಮ್ ಬಾರ್ ಇರುವಾಗ ನೀವು ಈ ಬೂದಿಯಲ್ಲಿ, ಆ ಮಣ್ಣಿನಲ್ಲಿ ಪಾತ್ರೆಯನ್ನು
ಉಜ್ಜುತ್ತೀರಲ್ಲಾ? ಎಂದರೇ, ಅಮ್ಮ ಸಾವಧಾನದಿಂದ
ಹೇಳುತ್ತಿದ್ದರು, ವಿಮ್ ಬಾರಿಗೆ ಏನು ಕಡಿಮೆ ದುಡ್ಡಾ? ಏಳು ರೂಪಾಯಿ. ಮಣ್ಣಿಗೆ ಬೂದಿಗೆ ದುಡ್ಡು ಕೊಡಬೇಕಾ? ಸಬೀನಾ ಪುಡಿ
ಜೊತೆಗೆ ಬೂದಿ ಹಾಕಿ ತೊಳೆದರೇ ಪಾತ್ರೆ ಫಳ ಫಳವೆನ್ನುತ್ತದೆ, ಎನ್ನುತ್ತಿದ್ದರು.
ಇಂದಿಗೂ ಅಷ್ಟೇ ನಮ್ಮ ಮನೆಯಲ್ಲಿ ಪಾತ್ರೆ ತೊಳೆಯುವ ಜಾಗದಲ್ಲಿ, ಬೂದಿ,
ಮಣ್ಣು, ವಿಮ್ ಬಾರ್, ಜೊತೆಗೆ
ತೆಂಗಿನ ನಾರು ಇರುತ್ತದೆ. ನಾವು ಪರಿಸರ ಸ್ನೇಹಿ, ಮರುಪಯೋಗದ ಬಗ್ಗೆ ಉದ್ದುದ್ದ
ಭಾಷಣ ಮಾಡುತ್ತೇವೆ, ಆದರೇ ನಿಜಕ್ಕೂ ಅದನ್ನು ಪಾಲಿಸುತ್ತಿರುವುದು,
ಹಳ್ಳಿಯವರು ಮಾತ್ರ. ನನ್ನೂರಿನಲ್ಲಿ ಪಾತ್ರೆ ತೊಳೆಯುವುದಕ್ಕೆ ದಾರಿಯಲ್ಲಿ ಬಿದ್ದಿರುತ್ತಿದ್ದ
ಭತ್ತದ ಹುಲ್ಲನ್ನು ಬಳಸುತ್ತಿದ್ದರು, ತೆಂಗಿನ ನಾರು, ತೆಂಗಿನ ಕಾಯಿಯ ಜುಟ್ಟನ್ನು ಬಳಸುತ್ತಿದ್ದರು. ಇಂದಿಗೂ ಅಷ್ಟೇ, ಹಬ್ಬದ ದಿನ ಹೆಚ್ಚು ಜನರಿಗೆ ಅಡುಗೆ ಮಾಡಬೇಕಾದ್ದ ಸಂದರ್ಭದಲ್ಲಿ ಪಾತ್ರೆಗಳಿಗೆ ಹೊರಗಿನಿಂದ
ಮಣ್ಣಿನಲ್ಲಿ ಸಾರಿಸುತ್ತಾರೆ, ಹಾಗೆ ಮಾಡಿದರೆ ಮಸಿ/ಕಪ್ಪಾಗುವುದಿಲ್ಲವೆಂದು.
ಮನೆಯಲ್ಲಿ ಇಡ್ಲಿ ಮಾಡುವಾಗ ಇಡ್ಲಿ ಪಾತ್ರೆಗೆ ಅಮ್ಮಾ ನೀರಿಗೆ ಬೂದಿಯನ್ನಿ ಮಿಕ್ಸ್ ಮಾಡಿ ವರೆಸುತ್ತಿದ್ದರು.
ನಾನು ಇದನ್ನೆಲ್ಲಾ ಯಾಕೆ, ಹೇಳಿದನೆಂದರೇ, ನಾನು
ಮುಂಜಾನೆ ಪಾತ್ರೆ ತೊಳೆಯುವಾಗ ನನಗೆ ಕಿಂಚಿಷ್ಟೂ ಶ್ರಮವೆನಿಸಲಿಲ್ಲ. ನಾಲ್ಕು ಹನಿ ವಿಮ್ ಲಿಕ್ವಿಡ್
ನಿಂದ, ಉಜ್ಜಿದೆ, ನಲ್ಲಿಯಿಂದ ನೀರಿಗೆ ಹಿಡಿದೆ,
ಮುಕ್ತಾಯವಾಯಿತು. ಐದು ನಿಮಿಷದಲ್ಲಿ ಹತ್ತು ಹನ್ನೆರಡು ಪಾತ್ರೆಗಳನ್ನು ತೊಳೆದೆ.
ಪಾತ್ರೆಗಳಲ್ಲಿ ಮಸಿ ಇರಲಿಲ್ಲ, ಹೆಚ್ಚು ಕೊಳಕು ಇರಲಿಲ್ಲ. ಆ ದಿನಗಳಲ್ಲಿ
ಪಾತ್ರೆಗಳೆಲ್ಲಾ ಕಪ್ಪಾಗಿರುತ್ತಿದ್ದವು, ಸೌದೆಯಲ್ಲಿ ಅಡುಗೆ ಮಾಡುತ್ತಿದ್ದರಿಂದ,
ಅಡುಗೆ ಮಾಡುವಾಗ ಮಾಡಿದ ಮೇಲೆ ಎಲ್ಲ ಸಮಯದಲ್ಲಿಯೂ ಕಷ್ಟವೆನಿಸುತ್ತಿತ್ತು. ಈಗ ಎಲ್ಲವೂ
ಸರಾಗವಾಗಿದೆ. ಅಂಗಡಿಗೆ ಹೋಗಿ ಅಲ್ಲಿಂದ ಫೋನ್ ಮಾಡಿ, ಎಸ್ ಎಂಎಸ್ ಮಾಡಿ
ಕೇಳಬಹುದು, ಬೇಕಿರುವುದನ್ನು ಆಯ್ಕೆ ಮಾಡಿಕೊಂಡು ತೆಗೆದುಕೊಂಡು ಬರಬಹುದು.
ದುಡ್ಡಿಗೆ ಮಾತ್ರ ಬೆಲೆಯಿಲ್ಲ. ಇಪ್ಪತ್ತು ರೂಪಾಯಿಗೆ ಅಷ್ಟೆಲ್ಲಾ ತರುತ್ತಿದ್ದ ನಾನು, ಈಗ ಅರ್ಧ ಲೀಟರ್ ಹಾಲು, ಒಂದು ಸಿಗರೇಟು ಮತ್ತೊಂದು ಮಿಂಟ್ ತೆಗೆದುಕೊಂಡು
ಬರುತ್ತೇನೆ. ಇಪ್ಪತ್ತು ರೂಪಾಯಿಗೆ ಬರುವುದು ಅಷ್ಟು ಮಾತ್ರ. ಪಟ್ಟಣದ ಅನೇಕರಿಗೆ ನಾನು ಮೇಲೆ ಹೇಳಿದ
ಮಾತುಗಳು ಒಪ್ಪುವುದಿಲ್ಲ, ಹಿಡಿಸುವುದು ಇಲ್ಲ.
ಇಷ್ಟೆಲ್ಲಾ ಬರೆದ ಮೇಲೆ ನನಗೆ ಅನಿಸಿದ್ದು, ಈ ಬರವಣಿಗೆಯನ್ನು ಬರೆದಿದ್ದು
ವ್ಯರ್ಥ ನೀವು ಓದಿದ್ದು ವ್ಯರ್ಥ, ತಳವಿಲ್ಲ ಬುಡವಿಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಅನ್ಯವಾರ್ತೆ: ಬಿಡುವ ಹಾದಿಯಲಿ!!
ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...
-
ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...
-
ಈ ಲೇಖನವನ್ನು ಕಳೆದ ವರ್ಷವೇ ಬರೆಯಬೇಕಿತ್ತು. ಕಾರಣಾಂತರಗಳಿಂದ ಬರೆದಿರಲಿಲ್ಲ ಅಥವಾ ಮತ್ತೊಮ್ಮೆ ವಿಶ್ಲೇಷಿಸಿ ಬರೆಯೋಣ ಎಂಬುದು ಇರಬಹುದು. ಮಾರ್ಚ್ ತಿಂಗಳ ಮೂವತ್ತು ಮತ್...
-
ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...