30 ಡಿಸೆಂಬರ್ 2008







ಲಂಕಾ ಪ್ರವಾಸ
ನನಗಂತೂ ಪ್ರವಾಸ, ಪ್ರಯಾಣ, ಸುತ್ತಾಡೋದು ಅಂದರೇ ಎಲ್ಲಿಲ್ಲದ ಆನಂದ ಅಂತಾನೇ ಹೇಳ್ಬೇಕು. ಚಿಕ್ಕಂದಿನಲ್ಲಿ ನಮ್ಮೂರ ಹತ್ತಿರದ ರಾಮನಾಥಪುರದ ಜಾತ್ರೆಗೆ ಹೋಗುವುದು, ಕುಶಾಲನಗರ ಜಾತ್ರೆ, ಬೇಸಿಗೆಯಲ್ಲಿ ಬೇಲೂರು ನಮ್ಮ ಮನೆ ದೇವರಾದ್ದರಿಂದ ಅಲ್ಲಿಗೆ ಹೋಗುತ್ತಿದ್ದೆವು. ಬೇಲೂರಿಗೆ ಹೋದ ಮೇಲೆ ಹಳೆಬೀಡಿಗೂ ಹೋಗಲೇ ಬೇಕಾದ್ದರಿಂದ ಅಲ್ಲಿಗೂ ಹೋಗಿ ಬರುತ್ತಿದ್ದೆವು. ಅದೇ ರೀತಿ, ವರ್ಷಕ್ಕೊಮ್ಮೆ, ಧರ್ಮಸ್ಥಳ, ಸುಬ್ರಹ್ಮಣ್ಯ, ಇತ್ತಕಡೆ ಮೈಸೂರು, ನಂಜನಗೂಡು ಹೀಗೆ ದೇವಸ್ಥಾನಗಳಿಗೆ ಕರೆದೊಯ್ಯುತ್ತಿದ್ದರು. ನನಗೆ ನನ್ನೂರಿನಿಂದ ಹೊರಗೆ ಹೋಗುವುದೆಂದರೇ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. ಕಾರಣ ನನ್ನೂರಿನ ಬಗ್ಗೆ ನನಗೆ ಅಸಡ್ಡೆಯಾಗಲಿ, ದ್ವೇಷವಾಗಲಿ ಏನು ಇರಲಿಲ್ಲ. ಆದರೇ, ನಮ್ಮನೆಯಲ್ಲಿ ನಾನು ಒಬ್ಬನೆ ಇದ್ದದ್ದು. ಆಡಲು ಜೊತೆಗಾರರಿಲ್ಲ, ಎಲ್ಲರೂ ದನಕರುಗಳೆಂದು ಹೊಲಗಳಿಗೆ ಹೋಗುತಿದ್ದರು, ಹೊಳೆದಂಡೆಯಲ್ಲಿ ಅಲೆದಾಡುತಿದ್ದರು. ನಾನು ಅಲ್ಲಿಗೆ ಹೋದರು ಹೆಚ್ಚು ಹೊತ್ತು ಇರುವಂತಿರಲಿಲ್ಲ, ನನ್ನಮ್ಮ ಯಾರಾದರೂ ಕೈಯಲ್ಲಿ ಮನೆಗೆ ಬರಲು ಹೇಳಿ ಕಳುಹಿಸುತಿದ್ದಳು. ನೀರಲ್ಲಿದ್ದೆ ಎಂಬ ವಿಷಯ ತಿಳಿದರಂತೂ ಮುಗಿದೇ ಹೋಯಿತು, ಅಲ್ಲಿ ಜಾಗ ಸರಿಯಿಲ್ಲ, ದೆವ್ವ, ಭೂತ ಅದು ಇದು ಅಂತಾ ಹೆದರಿಸಿ ನಾಲ್ಕು ಬಾರಿಸುತಿದ್ದಳು. ಆಗ್ಗಾಗ್ಗೆ ನಮ್ಮೂರಲ್ಲಿ ದೆವ್ವ ಮೆಟ್ಟಿದೆ, ಭೂತ ಮೆಟ್ಟಿದೆ ಅಂತಾ ಹೇಳುತ್ತಿರುವುದು, ಮತ್ತು ಅವರನ್ನು ನಮ್ಮೂರಿನ ಶನಿದೇವರ ದೇವಸ್ಥಾನಕ್ಕೆ ಕರೆ ತರುತ್ತಿದ್ದನ್ನು ಕೇಳುತಿದ್ದೆ. ನನಗೆ ಇನ್ನಿಲ್ಲದ ಕುತೂಹಲ, ದೆವ್ವ ಹೇಗೆ ಬರುತ್ತದೆ, ಬಂದಾಗ ಹೇಗಿರುತ್ತಾರೆ, ಅವರು ಕಲ್ಲನ್ನು ತಿಂದು ಕಲ್ಲನ್ನು ಅರಗಿಸುವಷ್ಟ ಗಟ್ಟಿಗರಾಗುತ್ತಾರೆಂದು ಹೇಳಿದ್ದಾಗೆಲ್ಲ, ನನಗೂ ದೆವ್ವ ಹಿಡಿದು, ನಾನು ನೀರಿನಲ್ಲಿ ಆಡುವಾಗ ಹೆದರಿಸುವು, ಜೋರು ಮಾಡುವ, ದಡಿಯಂದಿರಿಗೆ ಹೊಡೆಯಬೇಕೆನಿಸುತಿತ್ತು. ಆದರೇ, ಕೆಲವೊಮ್ಮೆ, ದೆವ್ವ ಹಿಡಿದು ಸತ್ತೇ ಹೋದರೆಂದಾಗ ಇನ್ನಿಲ್ಲದ ಭಯ ಆವರಿಸುತ್ತಿತ್ತು. ಈ ಭೀಕರ ಕೊನೆಯನ್ನು ಕಂಡು ನಾನು ಎಷ್ಟೋ ಬಾರಿ ಬೆಚ್ಚಿ ಬಿದ್ದಿದ್ದೇನೆ. ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದ ಈ ಹಳ್ಳಿಯ ವಾತವರಣದಿಂದ ನನಗೆ ಬಿಡುಗಡೆ ಬೇಕೇಂದು ಹಾತೊರೆಯುತ್ತಿದ್ದದ್ದು ಇದೇ ಕಾರಣಕ್ಕೆ.


ಪ್ರತೀ ವರ್ಷವೂ ಹೋದ ಜಾಗಗಳಿಗೆ ಹೋಗುತ್ತಿದ್ದರೂ ನನಗೆ ಆಸಕ್ತಿ ಕಡಿಮೆಯಾಗಿರಲಿಲ್ಲ, ಇದಕ್ಕೆ ಕಾರಣ ಎಷ್ಟು ಬಾರಿ ನೋಡಿದರೂ ಅರ್ಥಮಾಡಿಕೊಳ್ಳದ ಮುಠ್ಠಾಳನೆಂಬುದಲ್ಲ. ನನ್ನ ಮನಸ್ಸು ಹೊರ ಪ್ರಪಂಚಕ್ಕೆ ಹಾತೊರೆಯುತಿತ್ತು ಮತ್ತು ಹೊಸತನ್ನು ಬೇಡುತಿತ್ತು. ಹೀಗೆ ಮೊದಲುಗೊಂಡ ನನ್ನ ಪ್ರವಾಸದ ಹುಚ್ಚು, ಕೆಲವೊಮ್ಮೆ ಎಂಥಹ ವೈಪರೀತ್ಯಕ್ಕೆ ಏರಿತಿದ್ದೆಂದರೇ, ನಾನು ನನ್ನ ಜೇಬಿನಲ್ಲಿ ೫೦೦ರೂಪಾಯಿಗಿಂತ ಹೆಚ್ಚಿದ್ದರೆ ಸಾಕು ಸುಮ್ಮನ್ನೆ ಯಾವುದೋ ಊರಿಗೆ ಹೊರಟು ಅಲ್ಲಿನ ಊರು ಕೇರಿಯನ್ನು ಸುತ್ತಾಡಿ ಬರುತ್ತಿದ್ದೆ. ಆ ಬಗೆಯಲ್ಲಿಯೇ ಕರ್ನಾಟಕದ ಹಲವಾರು ಸ್ಥಳಗಳನ್ನು ನೋಡಿ ಬಂದಿದ್ದೇನೆ. ನನ್ನ ಸ್ನೇಹಿತ ಒಮ್ಮೆ ನನಗೆ ಹೇಳಿದ್ದ, ನೀನು ಹೋಗುವುದು ಸರಿ ಆದರೇ, ಒಂದು ಕ್ಯಾಮೆರಾ ತೆಗೆದುಕೊಂಡು ಹೋದರೇ, ಅನೂಕೂಲವೆಂದು, ನಾನು ಅವನಿಗೆ ಹೇಳಿದ್ದೆ, ಕ್ಯಾಮೆರಾ, ಅದಕ್ಕೆ ಬೇಕಾದ ಬ್ಯಾಗು, ಬಟ್ಟೆ ಅಂತಾ ಕುಳಿತರೇ ಈ ಜನ್ಮದಲ್ಲಿ ನಾನು ಹೋಗುವುದೇ ಇಲ್ಲ, ಅದಕ್ಕೆ ಹಾಕುವ ೧೦-೨೦ ಸಾವಿರಗಳಿಗೆ ಹೆಚ್ಚು ಕಡಿಮೆ ಕರ್ನಾಟಕ ಮುಗಿಸೇ ಬರುತ್ತೇನೆಂದು. ನಮ್ಮ ಬಹಳ ಜನ ಇದನ್ನು ಆಗ್ಗಾಗ್ಗೆ ಮಾಡುತ್ತಿರುತ್ತಾರೆ, ಅವರಿಗೆ ಪ್ರವಾಸವೆಂದರೆ ಒಂದು ಕ್ರಮಪದ್ದ ಪ್ರಾರ್ಥಮಿಕ ಶಾಲೆಯ ಪ್ರವಾಸದಂತೇ ಇರಬೇಕು. ಅಲ್ಲಿ ಕಿಂಚಿಷ್ಟೂ ಏರು ಪೇರಾಗಬಾರದು. ಬಟ್ಟೆ ಬರಿ ಪ್ರತಿಯೊಂದು ಚೊಕ್ಕವಾಗಿರಬೇಕು. ಇದೆಲ್ಲಾ ನನ್ನ ಪ್ರವಾಸದಲ್ಲಿಲ್ಲ, ಆ ಊರಿನ ಬಗ್ಗೆ ಇಲ್ಲೇ ತಿಳಿದು ಅರಿತು ಪೂರ್ವಾಗ್ರಹ ಪೀಡಿತರಾಗಿ ಹೋದರೇ ಅಲ್ಲಿನ ನೈಜತೆ ತಿಳಿಯುವುದಿಲ್ಲ. ಅದಕ್ಕಾಗಿಯೇ ನಾನು ಎಷ್ಟೋ ಬಾರಿ ಹೋಗಿ ಬಂದ ಮೇಲೆ ಹೇಳುತಿದ್ದದ್ದು.

ಆದರೇ, ಕೊಲೊಂಬೊ ಪ್ರವಾಸ ಹಾಗಾಗಲಿಲ್ಲ, ಅದೊಂದನ್ನು ನನ್ನ ಜೀವನದ ಮಹತ್ತರ ಸಾಧನೆ ಅಂತಾ ತೋರಿಸುವ ಗುಂಗಿನಲ್ಲಿ ನನ್ನ ಅಹಂಕಾರವು ಆಟ ಆಡಿತ್ತು ಅನ್ನಿಸುತ್ತದೆ. ನಾನು ಹೋಗುವುದನ್ನು ಸಾಕಷ್ಟು ಮಂದಿಗೆ ತಿಳಿಸಿಯೇಬಿಟ್ಟಿದ್ದೆ. ಅದು ಘೋರ ಅಪರಾಧವೆಂಬುದು ಆಮೇಲೆ ತಿಳಿಯಿತು. ನನಗೆ ಮೊದಲು ಏನು ಎನಿಸದಿದ್ದರೂ, ಕೆಲವು ನನ್ನ ಸ್ನೇಹಿತರಂತೂ ನಾನೇ ಮೊದಲ ಬಾರಿಗೆ, ಕೊಲೊಂಬೊಗೆ ಹೋಗುತ್ತಿರುವುದೆನ್ನುವಂತೆಯೂ ಹೇಳಿ ನನ್ನ ಬಗ್ಗೆ ಅತೀ ಹೆಚ್ಚಿನ ಜಾಗೃತೆವಹಿಸಿದ್ದರು. ಅವರ ಆ ನೆರವಿಗೆ ನಾನು ಋಣಿಯಾಗಿದ್ದೇನೆ. ಅದರಂತೇಯೇ, ಹೋಗುವ ದಿನ ಬಂದಾಗ, ಏನೇನೊ ಕಲ್ಪನೆಗಳು ನನ್ನ ಕಣ್ಣಲ್ಲಿ, ಕೊಲೊಂಬೊ ಬಗ್ಗೆ, ನನ್ನ ಕಳೆದ ದಿನಗಳ ಬಗ್ಗೆ, ಅದನ್ನು ನನ್ನ ತೆವಳಿಗಾಗಿಯೇ, ಬಯಸದೇ ಬಂದ ಭಾಗ್ಯವೆಂಬ ಅಂಕಣವೊಂದನ್ನು ಬರೆದೆ. ಅದು, ನನಗೆ ಕೊನೆ ಕೊನೆಗೆ ಅದೆಷ್ಟು ಭಾಲಿಷವೆನಿಸಿತೆಂದರೆ, ಅಲ್ಪನಿಗೆ ಸಿರಿ ಬಂದರೇ ಮಧ್ಯ ರಾತ್ರಿಯಲ್ಲಿ ಕೊಡೆ ಹಿಡಿಯುವುದು ಎಂದರೇ ಇದೇ ಎನಿಸತೊಡಗಿತು. ನನ್ನ ಬಗ್ಗೆ ನನಗೆ, ಅಸಹ್ಯ ಹುಟ್ಟಿಸಿತೆಂದರೇ, ತಪ್ಪಾಗುವುದಿಲ್ಲ. ನಾನು ಆ ಅಂಕಣ ಬರೆದು ವಿಮಾನ ನಿಲ್ದಾಣಕ್ಕೆ ಹೊರಡುವಾಗ, ನನ್ನಲ್ಲಿ ಮಿಂಚಿನಂತೆ ಎಲ್ಲವೂ ಬಂದು ಹೋದವು. ನನ್ನ ಹುಟ್ಟೂರು, ನನ್ನೂರಿನ ಸಾರಿಗೆ ವ್ಯವಸ್ಥೆ, ವಿದ್ಯಾಬ್ಯಾಸ, ನನ್ನ ಆ ದಿನದ ಸ್ತಿತಿಗತಿ, ಇಂದಿನ ವೇದಿಕೆ, ಹೀಗೆ ಹತ್ತು ಹಲವು. ನಾನು ಯಾವ ಅಂಧಶ್ರದ್ದೆಯಲ್ಲಿದ್ದೆನೆಂದರೇ, ನಾನು ಚಿಕ್ಕವನಿದ್ದಾಗ, ನಾಳೆ ಬೆಳಿಗ್ಗೆ, ಶಾಲೆಯಿಂದ ಪ್ರವಾಸ ಹೋಗುತ್ತಿದ್ದೆನೆಂದು ನಮ್ಮ ಬೀದಿಯ ಎಲ್ಲ ಹುಡುಗರಿಗೂ ಹೇಳಿ, ನೆಂಟರಿಗೆಲ್ಲಾ ಹೇಳಿ ಅವರಿಂದ ೫-೧೦ ರೂಪಾಯಿಯನ್ನು ಪಡೆದು, ರಾತ್ರಿಯಿಡಿ ನಿದ್ದೆ ಮಾಡದೇ, ಅಮ್ಮ ಬಂದು, ಮಲಗು ಬೆಳ್ಳಿಗ್ಗೆ ನಾನು ಏಳಿಸ್ತಿನಿ, ಇಲ್ಲಂದ್ರೆ ಬಸ ನಲ್ಲಿ ಮಲಗಿ ಬಿಡ್ತೀಯಾ ಏನು ನೋಡೋದಿಲ್ಲ ಎಂದು ಹೇಳಿ ಮಲಗಿಸುತಿದ್ದಳು. ಆ ರಾತ್ರಿಯೂ ಅಷ್ಟೇ ಎಲ್ಲರಿಗೂ ಮಿಸ್ ಕಾಲ್ ಕೊಟ್ಟು ನಾಳೆ ನಾನು ಕೊಲೊಂಬೊ ಹೋಗುತ್ತಿದ್ದೆನೆಂದು ಹೇಳತೊಡಗಿದೆ. ಕೆಲವರು, ಈ ನನ್ ಮಗ ಅಲ್ಲೇ ಸತ್ತರೇ ಸಾಕು ಎನಿಸುವಷ್ಟು ಇದನ್ನು ಮೇಲಕ್ಕೆ ತೆಗೆದು ಕೊಂಡು ಹೋದೆ.

ವಿಮಾನ ನಿಲ್ದಾನದ ಬಳಿ ಬಂದಾಗ, ಅಲ್ಲಿನ ಬೆಳಕು, ಅಲ್ಲಿನ ಸಿರಿ, ನನ್ನೂರಿನ ಚಿತ್ರ ಹಾಗೆ ಬಂದು ತೀರಾ ಮಂಕಾಗತೊಡಗಿತ್ತು. ನನ್ನೂರೆಲ್ಲಿ, ಈ ವಿಮಾನ ನಿಲ್ದಾನವೆಲ್ಲಿ? ನಮ್ಮೂರಿಗೆ ಬರುವ ಬಸಗಳನ್ನು, ಕಂಡರೇ, ಒಂದು ವಾರ ಅನ್ನ ಸೇರುವುದಿಲ್ಲ, ಹೊರಗಡೆ, ಬಸ್ ಬಣ್ಣ ಮಾಸಿ ಹೋಗಿ, ಮಣ್ಣು ಮೆತ್ತಿರುತ್ತದೆ, ಕಂಡಕ್ಟರ್ ಗಳಂತೂ ಅವರ ಬಟ್ಟೆ ತೊಳೆಯುವುದು ಅಕ್ಷಮ್ಯ ಅಪರಾಧವೆಂದು ಭಾವಿಸಿ ಅವರು ಅದನ್ನು ತೊಳೆಯದೇ ಆ ಖಾಕಿ ಬಟ್ಟೆ ಅದರ ಬಣ್ಣವನ್ನೆ ಬದಲಾಯಿಸಿರುತ್ತದೆ. ವಿಮಾನ ನಿಲ್ದಾಣದ ಹೊರಗೆ, ಕಿವಿ ಕಿತ್ತು ಹೋಗುವಂತೆ ಅಬ್ಬರಿಸುವ ಈ ವಿಮಾನಗಳು ನಿಲ್ದಾನದ ಒಳಗಿದ್ದಾಗ ಸದ್ದೇ ಮಾಡುವುದಿಲ್ಲ. ಮಾಡುವುದಿಲ್ಲವೆನ್ನುವುದಕಿಂತ ಕೇಳುವುದೇ ಇಲ್ಲ. ನಮ್ಮೂರ ಬಸ್ ಸ್ಟ್ಯಾಂಡ್ ನಲ್ಲಿ ಸುತ್ತಾಡುವ ಪೋಲಿ ಹುಡುಗರು ಇಲ್ಲಿರುವುದಿಲ್ಲ. ಕಂಡ ಕಂಡ ಉಗಿಯುವ ಚಿತ್ರವೇ ಕಾಣುವುದಿಲ್ಲ. ಪರಿಸರವೆಷ್ಟು ತಂಪಾಗಿರುತದೆಂದರೇ, ಟಿಕೆಟ್ ಕೌಂಟರಿನಲ್ಲಿ ಕುಳಿತಿರುವ ಆ ಸೌಂದರ್ಯದ ಗಣಿಗಳಿಂದ ಹೊರಸೂಸುವ ಮುತ್ತಿನಂತ ದಂತಪಂಕ್ತಿ, ಎಂಥಹ ಅರಸಿಕನನ್ನು ರಸಿಕತೆಯ ಉನ್ಮಾತೆಗೆ ಕರೆದೊಯ್ಯುತ್ತವೆ. ನಾನು ಒಳಗೆ ಹೋಗಿ, ಅಲ್ಲಿ ವಲಸಿಗರ ಪರವಾನಗಿ ಪಡೆಯಲು ಅರ್ಜಿ ತುಂಬಿಸುವಾಗ, ನನ್ನೆಡೆಗೆ ನಾಲ್ಕಾರು ಜನರು ಬಂದು ತುಂಬಿಕೊಡಲು ಕೇಳಿದರು. ನಾನು ನನ್ನ ಹರಕು ಮುರುಕು ತೆಲುಗನ್ನು ಬಳಸಿ, ಅವರ ಅರ್ಜಿಗಳನ್ನು ತುಂಬಿಸಲೆತ್ನಿಸಿದೆ. ನಂತರವಷ್ಟೆ ಗೊತ್ತಾದದ್ದು ಅವರು ನನ್ನೊಡನೆ ಕೊಲೊಂಬೊಗೆ ಪ್ರಯಾಣಿಸುತಿದ್ದಾರೆಂದು. ನನಗೆ ಕುತೂಹಲ ತಡೆಯಲಾರದೆ, ಅವರನ್ನು ಪ್ರಶ್ನಿಸತೊಡಗಿದೆ, ಅವರು ಈ ನನ್ಮಗ ಬರೆದಿರೋ ನಾಲ್ಕು ಸಾಲಿಗೆ, ನಲ್ವತ್ತು ಪ್ರಶ್ನೆ ಕೇಳ್ತಾನೆಂದು ಭಾವಿಸಿಕೊಂಡು ನನ್ನಿಂದ ಹೊರಟೆ ಹೋದರು. ಅವರ ನನ್ನ ನಡುವೆ ನಡೆದ ೨೦-೩೦ ನಿಮಿಷಗಳ ತಾತ್ಪರ್ಯವಿಷ್ಟೆ, ಅವರು ಆಂಧ್ರಪ್ರದೇಶದ, ತೀರಾ ಪ್ರದೇಶದವರು, ಅಲ್ಲಿಂದ ಕೊಲೊಂಬೊಗೆ ಗಾರೆ, ಕೆಲಸ, ಕಬ್ಬಿಣದ ಕೆಲಸಗಳಿಗೆ ಹೋಗುತ್ತಿದ್ದರು. ಅಲ್ಲಿಗೆ ಅವರು ಹೋಗಿ ಬರಲು ವಿಮಾನವನ್ನೆ ಬಳಸುತಿದ್ದರು. ಅವರ ಊರುಗಳಿಂದ ಬಹಳ ಮಂದಿ ಅಲ್ಲಿಗೆ ಹೋಗಿ ನೆಲೆಸಿದ್ದರು ಕೂಡ. ಇದು ನನ್ನನ್ನು ಒಮ್ಮೆಲೆ ಮನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿತು. ಮೊದಲ ಬಾರಿ ವಿಮಾನಯಾನವೆಂದು ಬೀಗುತ್ತಿದ್ದ ನನ್ನ ಮನಸ್ಸು ಹಾಗೆ ತಣ್ಣಗಾಗತೊಡಗಿತು. ವಿಮಾನಯಾನವನ್ನು ನನ್ನ ಅದೃಷ್ಟದ ಸಂಕೇತವೆಂದು ಭಾವಿಸಿದ್ದ ನನಗೆ ಇದೆಲ್ಲಾ ಇಂದಿನ ದಿನದಲ್ಲಿ ದಿನನಿತ್ಯ ಅವಶ್ಯಕತೆಗಳು, ನಾನಿರುವ ಕೂಪದಲ್ಲಿ ವಿಮಾನಯಾನ ದೊಡ್ಡದೆನಿಸಿದರೂ ಇದು ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನಿಗೂ ಯಾವ ರೀತಿಯ ಉನ್ಮಾದವನ್ನು ನೀಡಿರಲಿಲ್ಲ. ಅವರೆಲ್ಲರೂ, ಸಾಮಾನ್ಯ ಒಂದು ಬಸ್ಸನಲ್ಲಿ ಪ್ರಯಾಣಿಸುತ್ತಿರುವಂತೆಯೋ ಅಥವಾ ಆಟೋದಲ್ಲಿ ಹೋಗುತ್ತಿರುವಂತೆಯೋ ಭಾವಿಸಿದ್ದರು. ಇದು ನನ್ನ ಮುಠ್ಠಾಳತನದ ಪರಮಾವಧಿಯೆನಿಸತೊಡಗಿತು. ನಾನು ನನ್ನೊಡನೆ ನನ್ನ ಬಗ್ಗೆ, ಈ ಪ್ರಯಾಣದ ಬಗ್ಗೆ ಕಟ್ಟಿದ್ದ ಎಲ್ಲ ಗೋಪುರಗಳು ತಲೆಕೆಳಗಾಗಿ, ನನ್ನ ಕ್ಯಾಮೆರಾ ತೆಗೆದು ಫೋಟೋ ತೆಗೆದರೇ ನಾನೆಲ್ಲಿ ಯಾವುದೋ ಕಾಡಿನಿಂದ ಬಂದವನಾಗಿ ಕಲ್ಪಿಸಿಕೊಳ್ಳುತಾರೆನಿಸತೊಡಗಿತು. ಆದರೂ, ನನ್ನನ್ನ್ನು ಬೆರಗುಗೊಳಿಸುವಂಥಹ ಹಲವಾರು ವಿಷಯಗಳು ಅಲ್ಲಿದ್ದವು, ಅವುಗಳಲ್ಲ್ಲಿ ನನ್ನನ್ನು ಬಿಡದೇ ಕಾಡಿದ್ದು, ಗಗನಸಖಿಯರ ರೂಪು ರೇಷೆಗಳು. ಪ್ರತಿಯೊಂದು ಕಂಪನಿಯೂ ತನ್ನ ವಿಮಾನದ ಅಥವಾ ತನ್ನ ಕಂಪನಿಯ ಬಣ್ಣವನ್ನು ಬಿಂಬಿಸುವ ಧರಿಸುಗಳನ್ನು ಅವರದೇ ಶೈಲಿಯಲ್ಲಿ ಮಾರ್ಪಾಡುಮಾಡಿರುತ್ತವೆ. ಕೆಲವರು ಮಂಡಿತನಕ ತುಂಡುಲಂಗ ಉಟ್ಟು, ಅಲ್ಲಿಂದ ಕೆಳಕ್ಕೆ, ಉದ್ದ ಕಾಲು ಚೀಲಗಳನ್ನು ತೊಟ್ಟ ಸ್ವಲ್ಪ ನಿರಾಸೆ ಮಾಡಿದರೇ, ಇನ್ನು ಕೆಲವರೂ ಇವ್ಯಾವುದರ ಗೋಜಿಗೆ ಹೋಗದೇ ಸೀರೆ ಸುತ್ತಿಸಿ ಕಳುಹಿಸಿರುತ್ತಾರೆ. ಸೀರೆಯುಡುವುದು ಹೆಂಗಸಿನ ಅಂದವನ್ನು ಹೆಚ್ಚಿಸುತ್ತದೆಂದು ಎಲ್ಲರೂ ಹೇಳುತ್ತಾರೆ, ನನಗೇನೋ ಹಾಗೆ ಅನಿಸುವುದಿಲ್ಲ, ನಮ್ಮ ಉಡುಪುಗಳು ಎಲ್ಲರಿಗೂ ಹೊಂದುವುದಿಲ್ಲ. ನಮ್ಮ ಭಾರತೀಯ ಸೀರೆಯನ್ನು ಬಿಳಿ ಚರ್ಮದ ಹೆಂಗಸು ಉಟ್ಟರೇ ಅವಳು ಸುಂದರವಾಗಿ ಕಾಣುತ್ತಾಳಾ! ಆದರೇ, ಈ ಗಗನ ಸಖಿಯರನ್ನು ನೋಡಿದಾಗ, ಅಥವಾ ಹೋಟೆಲ್ ಗಳಲ್ಲಿ, ಕೆಲಸ ಮಾಡುವ ಹುಡುಗಿಯರನ್ನೆಲ್ಲಾ ಕಂಡಾಗ ನನಗೆ ಬಹಳ ಅಸೂಯೆಯೆನಿಸುತ್ತದೆ. ಅವರಲ್ಲಿರುವ ಆ ಸೌಮ್ಯ ಸ್ಮಾಭಾವ, ಆ ತಾಳ್ಮೆ, ನನ್ನಂಥ ತಿಳಿಗೆಡಿಯ ಅರಿವಿಗೆ ಸಿಗುವುದೇ ಇಲ್ಲಾ. ನೀವು ಏನನ್ನೆ ಕೇಳುತ್ತಿರಿ ಅವರು ಅಷ್ಟೇ ನಗು ಮುಖದಿಂದ ಉತ್ತರಿಸಿ ನಿಮ್ಮನ್ನು ಸಾಗುಹಾಕುತ್ತಾರೆ. ನಾನು ನೋಡಿದಂತೆ ಕೆಲವೊಮ್ಮೆ ಕಚ್ಚೆ ಬದ್ರವಿರದ ಎಷ್ಟೋ ಗಂಡಸರು ಅವರ ಸಂಸಾರಿಕ ವಿಚಾರಗಳನ್ನು ಕೆಣುಕುತ್ತಿರುತ್ತಾರೆ, ಆದರೆ ಇವರೆಂದು ಕೋಪಿಸಿ ಕೊಂಡು ರೇಗಾಡಿದ್ದನ್ನು ನಾನು ಕಂಡಿಲ್ಲ. ಮೌನವನ್ನು ನಮ್ಮ ದೌರ್ಬಲ್ಯವೆಂದೂ ತೀರ್ಮಾನಿಸುವವರೇ ಹೆಚ್ಚು. ನಾನು ವಿಮಾನದ ಒಳಕ್ಕೆ ಹೋದಾಗ, ಬಾಗಿಲಲ್ಲಿಯೇ ನಮಸ್ತೆ ಮಾಡಿ ಬರಮಾಡಿಕೊಂಡರು. ನಾನು ಹೋಗಿ ಕುಳಿತ ನಂತರ, ಸ್ವಲ್ಪ ಸಮಯದ ನಂತರ, ಇಬ್ಬರು ಗಗನ ಸಖಿಯರು ನಾವು ಕುಳಿತುಕೊಳ್ಳುವಾಗ ಎಚ್ಚರವಹಿಸಬೇಕು, ಅಪಾಯ ಸಂಭವಿಸಿದರೆ ಮಾಡಬೇಕಾದುದರ ಬಗ್ಗೆ ಹೇಳತೊಡಗಿದರು. ಅವರು ಬಾನುವಾರ ಬರುತ್ತಿದ್ದ ಮೂಖಿವಾರ್ತೆಯ ರೀತಿ ವಿವರಿಸುತ್ತಿದ್ದದ್ದು ಏನು ಅರ್ಥವಾಗದಿದ್ದರೂ ಅವರ ಬೆಡಗು ಬಿನ್ನಾನ ಮಾತ್ರ ಅವರೆಡೆಗೆ ಆಕರ್ಷಿಸುತಿತ್ತು. ಅವರುಟ್ಟಿದ್ದ ಹಸಿರು ಬಣ್ಣದ ಸೀರೆ ಅದರ ಮೇಲಿದ್ದ ಚಿಕ್ಕ ಚಿಕ್ಕ ಹೂವಿನ ಆಕಾರಗಳು, “ಲಂಗದ ಮೇಲಿದೆ ಚಿಟ್ಟೆ, ಚಿಟ್ಟೆಗೆ ಮನಸನು ಕೊಟ್ಟೆಯೆನಿಸತೊಡಗಿತು”. ನನಗೆ ಇವರೆಲ್ಲಾ ಮೊದಲು ಕೆಲಸಕ್ಕೆ ಅರ್ಜಿ ಹಾಕಿ ನಂತರ ಅದಕ್ಕೆ ಸಂಬಂಧಪಟ್ಟ ಕೋರ್ಸುಗಳನ್ನು ಮಾಡಿಬರುತ್ತಾರೆನಿಸಿತು. ಯಾಕೆಂದರೇ, ಅವರು ವಿಮಾನದಲ್ಲಿರುವಷ್ಟು ಸಮಯ ಯಾವ ಮೂರ್ಖನು ಅತ್ತಿತ್ತ ತಿರುಗುವುದಿಲ್ಲ, ಅಂಥಹ ಸೌಂದರ್ಯ ಅವರಲ್ಲಿರುತ್ತದೆ, ಅಷ್ಟೇ ಮೋಹಕತೆ ಅವರೆಡೆಗೆ ಸೆಲೆಯುತ್ತದೆ. ನಾನು ಹಾಗೆ ಯೋಚಿಸತೊಡಗಿದೆ, ನನ್ನೂರಲ್ಲಿ, ನಾನು ಶಾಲೆಗೆ ಹೋಗುವ ಸಮಯದಲ್ಲಿ, ಹೆಣ್ಣನ್ನು ರೇಗಿಸಿ, ಹೊಡೆತ ತಿಂದ, ಇವನು ಹಿಂದೆ ಹೋಗಿದ್ದಕ್ಕ್ ಅವಳ್ಯ್ ಉಗಿದು ಹೋದಳು, ಹೀಗೆ ಹತ್ತು ಹಲವು ಮನಸ್ಸಿಗೆ ಬರತೊಡಗಿದವು. ನಾನು ಚಿಕ್ಕವನಿದ್ದಾಗಲೂ ಅಷ್ಟೇ, ಗಲಾಟೆ ಮಾಡಿದವರನ್ನು, ಹೆಣ್ಣು ಮಕ್ಕಳ ಮಧ್ಯೆ ಕೂರಿಸಿಬಿಡುತಿದ್ದರೂ ನಮಗಂತೂ ಯಾವುದೋ ಪರಲೋಕಕ್ಕೆ ಹೋಗಿ ಬಂದವರಂತೆ ಅನಿಸುವುದಲ್ಲದೇ ಅದಕ್ಕಿಂತ ಅವಮಾನ ಮತ್ತೊಂದಿಲ್ಲವೆನಿಸುತಿತ್ತು. ಆದರೇ, ನಾವು ಬೆಳೆ ಬೆಳೆಯುತ್ತಾ, ಹೆಣ್ಣಿನ ಕಡೆಗೆ ವಾಲುವುದನ್ನು ನೆನೆದರೇ ಇದೆಂಥ ವಿಚಿತ್ರವೆನಿಸುತ್ತದೆ. ನಾನು ಆ ಕಲ್ಪನಾ ಲೋಕದಿಂದ ಬರುತ್ತಿದ್ದಂತೆ, ಆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಅವಳನ್ನು ಮಾತನಾಡಿಸತೊಡಗಿದ್ದ. ಅದು, ಇಳಿಯುವಾಗ ಅವಳಿಗೆ ಇವನ ವಿಳಾಸವನ್ನು ಕೊಟ್ಟು ಇಳಿದ ಅದಿಲ್ಲೆ ಬೇಕಿಲ್ಲದ ವಿಚಾರ.

ಸ್ವಲ್ಪ ಸಮಯದ ನಂತರ, ವಿಮಾನ ನಿಧಾನಕ್ಕೆ, ತಿರುಗಿಸಿ ಹೊರತಿತು, ನನಗೆ ಮೊದಲಲ್ಲಿದ್ದ, ಎಲ್ಲ ಬಗೆಯ ಆಸಕ್ತಿಗಳು ಕುಗ್ಗಿ, ನಾನು ಸಾಮಾನ್ಯ ಎ.ಸಿ.ಬಸ್ಸಿನಲ್ಲಿ ಕುಳಿತಿರುವಂತೆ ಭಾಸವಾಯಿತು. ಒಮ್ಮೆಲೇ, ನಮ್ಮ ಜಾತ್ರೆಯಲ್ಲಿ ಬರುವ ಕೊಲೊಂಬಸ್ ರೀತಿ ಮೇಲಕ್ಕೇರಿತು ಎನ್ನುವುದನ್ನು ಬಿಟ್ಟರೇ, ಮಿಕ್ಕಾವ ಸಂತೋಷವೂ ಆಗಲಿಲ್ಲ. ನನ್ನ ಮಿತ್ರವೃಂದ, ನೀನು ಅರಬ್ಬಿ ಸಮುದ್ರದ ಕಡೆಯಿಂದ ಹೋಗುವುದರಿಂದ ಆದಷ್ಟು ಫೋಟೋಗಳನ್ನು ತೆಗೆದುಕೊಂಡು ಬರಬೇಕೆಂದು, ಕಟ್ಟಪ್ಪಣೆ ಮಾಡಿತು. ದುರ್ವಿದಿಯೆಂಬಂತೆ, ನಾನು ಕುಳಿತ ಎಡಬದಿಯಲ್ಲಿ ವಿಮಾನದ ರೆಕ್ಕೆಯಿದ್ದುದರಿಂದ ಏನೇನೂ ಕಾಣುತ್ತಿರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...