15 ಡಿಸೆಂಬರ್ 2011

ಏನೋ ಹೇಳಲು ಹೋಗಿ ಏನೋ ಹೇಳಿದೆ ನಾನು!!!

ಬರೆಯಬೇಕೆನಿಸುತ್ತದೆ, ಸಮಯದ ಅಭಾವ, ಇತ್ತಿಚೆಗೆ ನಾನು ಹೆಚ್ಚು ಮಾತನಾಡುತ್ತೇನೆಂಬ ದೂರು ಬಂದಿದೆ, ಆದ್ದರಿಂದ ಮಾತು ಕಡಿಮೆ ಮಾಡಿ ಬರೆಯಬೇಕೆಂದು ತೀರ್ಮಾನಿಸಿದ್ದೇನೆ. ನಾನು ಬರೆದರೇ! ಓದುವವರು ಬೇಕಲ್ಲವೇ! ಓದುಗ ದೊರೆಗಳು ನೀವಿದ್ದೀರಲ್ಲಾ! ನನ್ನ ಒತ್ತಡಕ್ಕೋ, ಒತ್ತಾಯಕ್ಕೋ ಒಮ್ಮೆಯಾದರೂ ಓದಲೇಬೇಕು ಓದಿಸಿಯೇ ತೀರುತ್ತೇನೆ. ಇಲ್ಲದಿದ್ದರೇ ಹಠಮಾಡುತ್ತೇನೆ. ಓದುವುದೇವಿಲ್ಲವೆಂದು ಹಠ ಮಾಡಿದರೇ ನಾನೇನೂ ಮಾಡುವುದಿಲ್ಲ. ನನ್ನ ಬರವಣಿಗೆಗಳು ನನ್ನ ಜೀವನದ ಸಾರವನ್ನು ಹೇಳುತ್ತಿದ್ದರೂ ನನ್ನ ಜೀವನಕ್ಕೂ ನಿಮ್ಮಗಳ ಜೀವನಕ್ಕೂ ಅಂಥಹ ದೊಡ್ಡ ಪ್ರಮಾಣದ ವ್ಯತ್ಯಾಸವಿಲ್ಲ. ನಾವೆಲ್ಲರೂ ಒಂದೇ! ಎಲ್ಲರೂ ಸ್ವಲ್ಪ ಕೆಟ್ಟವರು ಹೆಚ್ಚು ಒಳ್ಳೆಯವರು. ನೀವೆಲ್ಲರೂ ಕೇಳುವಂತೆ, ಅದೇನು ನಿನಗೆ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತವೆ, ಬಸ್ಸಿನಲ್ಲಿ, ಆಟೋದಲ್ಲಿ, ಹಾದಿಯಲ್ಲಿ ಬೀದಿಯಲ್ಲಿ? ಸಣ್ಣ ಪುಟ್ಟ ವಿಷಯಗಳನ್ನು ಅದ್ಯಾಕೆ ಅಷ್ಟೊಂದು ಕೊರೆಯುವುದು? ಇದು ನಿಮ್ಮೆಲ್ಲರ ಅಭಿಪ್ರಾಯಗಳು. ಒಬ್ಬ ಮನುಷ್ಯನ ಮಾತುಗಳು ನಿಮಗೆ ಬೇಸರ ತರಿಸುವುದಿಲ್ಲ ಎನ್ನುವುದಾದರೇ ಕೇಳುವುದರಲ್ಲಿ ತಪ್ಪೇನು? ನನ್ನ ಗೆಳತಿ ಪ್ರಪಂಚದ ಯಾವ ವಿಷಯವನ್ನು ಹೇಳಿದರೂ ನನಗೆ ಬೇಸರವಾಗುವುದಿಲ್ಲ. ಅವಳ ಮನೆಯ ವಿಷಯದಿಂದ ಹಿಡಿದು, ಕೆಲಸದ, ಜೊತೆಗಾರರ ವಿಷಯವನ್ನು ಹೇಳಿದರೂ ನನಗೆಂದು ಸಾಕು ನಿಲ್ಲಿಸು ನಿನ್ನ ಪುರಾಣವೆನಿಸುವುದಿಲ್ಲ. ಅಲ್ಲಿ ಸುದ್ದಿ ಮುಖ್ಯವಲ್ಲ, ಕೇಳುವ ಮನಸ್ಸು ಮತ್ತು ಹೇಳುವ ಆ ಮಧುರ ಮಾತುಗಳು. ಹಾಗೆಯೇ, ನನ್ನ ಮಧುರ ಕಂಠದಿಂದ ನಿಮಗೆ ಮಾತುಗಳು ಕೇಳಿಸಿ, ನಿಮ್ಮ ಕಿವಿಯಲ್ಲಿ ರಕ್ತ ಬಾರದಿದ್ದಲ್ಲಿ ನಾನು ಮಾತನಾಡಿದರೇ ತಪ್ಪೇನು?

ಇದೆಲ್ಲವನ್ನು ಬದಿಗಿಟ್ಟು ವಿಷಯಕ್ಕೆ ಬರೋಣ! ಕಳೆದ ಬಾರಿ ಊರಿಗೆ ಹೋಗಿ ಬಂದ ವಿಷಯವನ್ನು ನಿಮಗೆ ತಿಳಿಸುವುದಕ್ಕೆ ಪ್ರಯತ್ನಿಸುತ್ತೇನೆ. ಏನು ಸೀಮೆಗಿಲ್ಲದ ಊರು ಇವನದ್ದು ಎಂದರೇ ಹೌದೆನ್ನುತ್ತೇನೆ ನಾನು. ನನ್ನದು ಇಡೀ ಭೂಮಂಡಲಕ್ಕೆ ಒಂದೇ ಊರು ಅದು ನನ್ನೂರು ಬಾನುಗೊಂದಿ. ವಿಷಯ ಊರಿನ ಬಗ್ಗೆ ಪ್ರಶಸ್ತಿ ಕೊಡುವುದಲ್ಲ. ನಾನು ಡೆವಲಪ್ ಮೆಂಟ್ ಫೌಂಡೇಶನ್ ಗೆ ಸೇರಿದ ಮೇಲೆ ಯಾರೊಂದಿಗೂ ಹೆಚ್ಚು ಮಾತನಾಡಿಲ್ಲ. ಕಾರಣ ಕೆಲಸದ ಒತ್ತಡ. ನಾನು ಮುಂಜಾನೆಯಿಂದ ರಾತ್ರಿ ಒಂಬತ್ತರ ತನಕ ಕೆಲಸ ಮಾಡಿದರೂ ಹಿಡಿ ಮಣ್ಣೀನಷ್ಟು ಕೆಲಸ ಮಾಡಿರುವುದಿಲ್ಲ. ಆದರೂ ಸದಾ ಬಿಡುವಿಲ್ಲದೇ ದುಡಿಯುತ್ತಿರುತ್ತೇನೆ. ನಾಯಿಗೆ ಮಾಡುವುದಕ್ಕೆ ಕೆಲಸವಿಲ್ಲ, ಕೂರುವುದಕ್ಕೆ ಬಿಡುವಿಲ್ಲವೆಂಬಂತೆ ನನ್ನ ಜೀವನ. ಏನೂ ಕೆಲಸ ಮಾಡುವುದಿಲ್ಲ ಆದರೂ ಬಿಡುವಿಲ್ಲ. ಆ ಬಿಡುವಿಲ್ಲದ ಜೀವನದಿಂದ ಸ್ವಲ್ಪ ಬಿಡುವು ಮಾಡಿಕೊಂಡು, ನನ್ನ ಸ್ನೇಹಿತನ ತಂಗಿಯ ಮದುವೆಗೆ ಹೋಗಿ ಬರಲು ಹೊರಟೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡಿದೆ. ಆ ಪ್ರಯಾಣದ ವಿವರಣೆ ಇಲ್ಲಿ ಅಪ್ರಸ್ತುತ. ಬಸ್ಸಿನಿಂದ ಇಳಿದವನು ಸಿಕ್ಕಿದ ಬಸ್ಸನ್ನು ಹತ್ತದೇ, ನನಗೆ ಡಿಲಕ್ಸ್ ಬೇಕು, ವೋಲ್ವೋ ಬೇಕೆಂದು ಕಾಯುತ್ತಾ ನಿಂತೆ. ಅಂತು ಇಂತೂ ಒಂದು ರಾಜಹಂಸ ಹೆಸರಿನ ಬಸ್ಸು ಹೊರಡಲು ಅಣಿಯಾಯಿತು. ಸರಿ ಸುಮಾರು ಒಂದು ಗಂಟೆ ಕಳೆದಮೇಲೆ ಹೊರಟಂತಾಯಿತು. ಮದುವೆ ಮನೆಯಲ್ಲಿ ನನ್ನ ಸ್ನೇಹಿತರು ಕಾಯ್ದು ಕಾಯ್ದು, ಜೀವನದಲ್ಲಿ ಒಮ್ಮೆಯಾದರೂ ಸರಿಯಾದ ಸಮಯಕ್ಕೆ ಬರುವುದನ್ನು ಕಲಿ ಎಂದು ಫೋನಿನಲ್ಲಿಯೇ ಬೋಧನೆಮಾಡಿದರು. ನಾಯಿ ಬಾಲಕ್ಕೆ ದಬ್ಬೆ ಕಟ್ಟುವ ಪ್ರಯತ್ನ. ನಾನು ಬದಲಾಗುವುದುಂಟೇ! ಸಮಯ ಪಾಲನೆ ನನ್ನ ಜೀವನಕ್ಕೆ ಅಂಟುವ ಮಾತಲ್ಲ ಬಿಡಿ. ಬಸ್ಸು ಹತ್ತುವಾಗ ಬಸ್ ಸ್ಟಾಂಡಿನಲ್ಲಿ, ನಾಲ್ಕು ಜನರು ಒಬ್ಬನನ್ನು ಕೈ ಹಿಡಿದುಕೊಂಡು ಬಂದರು. ಬಂದವರು, ಭಟ್ಕಳಕ್ಕೆ ಹೋಗುವ ಬಸ್ಸಿಗೆ ಹತ್ತಿಸಿದರು. ಹತ್ತಿಸಿದ ಬಸ್ಸಿನ ಡ್ರೈವರ್ ಸ್ವಲ್ಪ ಸಮಯ ನೋಡಿದ ಮೇಲೆ, ನಮ್ಮ ಬಸ್ಸು ಹೊರಡುವುದು ತಡವಾಗುತ್ತದೆ, ಪಕ್ಕದಲ್ಲಿ ನಿಂತಿರುವ ಬಸ್ಸಿನಲ್ಲಿ ಕಳುಹಿಸಿ ಎಂದ.ಸರಿ ಎಂದು ನಾನು ಕುಳಿತ ಬಸ್ಸಿಗೆ ಕಳುಹಿಸಿದರು. ನಮ್ಮ ಬಸ್ಸಿನ ಕಂಡಕ್ಟರ್ ಕುಡಿದು ಹಣ್ಣಾಗಿದ್ದವನನ್ನು ನೋಡೀ ಗಾಬರಿಯಾದ. ಅದರ ಜೊತೆಗೆ ಅವನ ನಮ್ಮ ಬಸ್ಸಿನಲ್ಲಿ ಕುಳಿತುಕೊಳ್ಳಲು ಕಾರಣವಾದದ್ದು, ಪಕ್ಕದ ಬಸ್ಸಿನ ಡ್ರೈವರ್ ಎಂದು ತಿಳಿದ ತಕ್ಷಣ ಅವನ ಜೊತೆಗೆ ಜಗಳಕ್ಕೆ ಇಳಿದ. ದಕ್ಷಿಣ ಕನ್ನಡದವರು ಜಗಳವಾಡುವುದೇ ಒಂದು ಸೊಗಸು, ಎಂಥ ಮಾರಯರೇ ನೀವು ಹೀಗೆ ಮಾಡಿದ್ದು, .....ಹೀಗೆ ನಡೆಯಿತು.

ಪ್ರಯಾಣ ಮಾಡುವಾಗ ತಿಳಿದು ಬಂದ ವಿಷಯವೇನೆಂದರೇ, ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮನುಷ್ಯ ಸುಮಾರು ಅರವತ್ತು ವರ್ಷ ವಯಸ್ಸಾಗಿರಬಹುದು. ಅವನು ಭಟ್ಕಳದವನು, ಮನಸ್ಸಿಗೆ ಬೇಸರವಾಗಿ ಮನೆಯವರ ಜೊತೆಯಲ್ಲಿ ಜಗಳವಾಡಿಕೊಂಡು ಜೇಬಿಗೆ ಒಂದೈದತ್ತು ಸಾವಿರ ದುಡ್ಡು ಇಟ್ಟುಕೊಂಡು ಮೈಸೂರಿಗೆ ಬಂದಿದ್ದಾನೆ. ಬಂದವನೇ ಯಾವುದೋ ಬಾರಿನಲ್ಲಿ ಕುಳಿತು ಕುಡಿಯತೊಡಗಿದ್ದಾನೆ. ಪಕ್ಕದ ಸೀಟಿನಲ್ಲಿ ಕುಳಿತು ಕುಡಿಯುತ್ತಿದ್ದವರು ಇವನ ಜೊತೆ ಮಾತನಾಡಿ, ಪರಿಚಯ ಮಾಡಿಕೊಂಡಿದ್ದಾರೆ, ಇವನ ದುಡ್ಡಿನಲ್ಲಿಯೇ ಐದು ಜನ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದ ಮೇಲೆ ಜೇಬಿನಲ್ಲಿದ್ದ ಸ್ವಲ್ಪ ಹಣವನ್ನು ಅವರು ತೆಗೆದುಕೊಂಡು, ಇವನನ್ನು ಬಸ್ಸಿಗೆ ತಂದು ಬಿಟ್ಟಿದ್ದಾರೆ. ಅವರು ಸ್ವತ: ಮೋಸಗಾರರಲ್ಲ ಆದರೇ ಒಳ್ಳೆಯವರು ಅಲ್ಲಾ! ಜನರು ಸುಲಭವಾಗಿ ಸಿಗುವುದನ್ನು ದೋಚುವುದಕ್ಕೆ ಕಾಯುತ್ತಿರುವುದಿಲ್ಲ, ಆದರೇ ಸಿಕ್ಕಿದನ್ನು ಯಾವತ್ತು ಬಿಡುವುದಿಲ್ಲ. ಉಚಿತವಾಗಿ ಉಪ್ಪು ಕೊಟ್ಟರೂ ತಿನ್ನುತ್ತಾರೆ. ಕುಡಿದ ನಶೆ ಇಳಿದ ಮೇಲೆ ಅವನು ಚಿಂತಿಸತೊಡಗಿದ್ದ, ಬೆಳ್ಳಿಗ್ಗೆಯಿಂದ ಊಟ ಮಾಡಿಲ್ಲ, ಹೊಟ್ಟೆ ಹಸಿವು ಎನ್ನುತ್ತಿದ್ದ. ನಂತರ, ಮನೆಯವರು ಇವನ ಫೋನಿಗೆ ಕರೆ ಮಾಡುತ್ತಿದ್ದರು ಇವನು ನಿರ್ಲಕ್ಷಿಸುತ್ತಿದ್ದ. ಪಕ್ಕದ್ದಲ್ಲಿದ್ದವನು ಕೇಳಿದ್ದಕ್ಕೇ! ಅಯ್ಯೋ ಬೇಜಾರು ಅವರ ಜೊತೆ ಮಾತನಾಡುವುದಕ್ಕೆ ಎಂದ. ಅಂತೂ ಇಂತೂ ಇವರಿಬ್ಬರ ಸಂಭಾಷಣೆಯನ್ನು ಆಲಿಸುತ್ತಾ ಕುಶಾಲನಗರಕ್ಕೆ ತಲುಪಿದ್ದು ತಿಳಿಯಲೇ ಇಲ್ಲ. ಅಲ್ಲಿಂದ ಹೋಗಿ, ಮದುವೆ ಮನೆಗೆ ಹೋಗಿ ಸ್ವಲ್ಪ ಊಟ ಮಾಡಿ, ನಂತರ ಹರಟೆ ಹೊಡೆದವು. ಕುಳಿತ ಜಾಗದಲ್ಲಿಯೇ ಮೂರು ಗಂಟೆಯ ತನಕ ಹರಟೆ ಕಾರ್ಯಕ್ರಮ ನಡೆದಿತ್ತು. ಮುಂಜಾನೆ ಎದ್ದು, ಮದುವೆ ಮನೆಗೆ ಹೋಗಿ, ಅಲ್ಲಿಯೂ ನಮ್ಮ ಹರಟೆ ಚರ್ಚೆ ನಡೆದವು. ವಯಸ್ಸಿಗೆ ಬರ ಬರುತ್ತಾ ಎಷ್ಟೇಲ್ಲಾ ವಿಷಯಗಳಿರುತ್ತವೆ ಎನಿಸುತ್ತದೆ. ಮೊದಲೆಲ್ಲ ಮಾತನಾಡುವಾಗ ಮತ್ತೆ ಇನ್ನೇನು ಸಮಾಚಾರವೆನ್ನುತ್ತಿದ್ದೆ. ಈಗ ಮಾತನಾಡುವುದಕ್ಕೆ ವಿಷಯದ ಕೊರತೆಯಿಲ್ಲವೆನಿಸುತ್ತದೆ. ಆದರೇ,, ಕೇಳುಗರ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರವಹಿಸಬೇಕಾಗುತ್ತದೆ.

ಮದುವೆ ಮುಗಿದ ಮೇಲೆ, ಬಸ್ಸ್ ಹಿಡಿದು ಊರಿಗೆ ಹೊರಟೆವು. ಕುಶಾಲನಗರದಿಂದ ಕೊಣನೂರಿಗೆ ಇರುವ ರಸ್ತೆಯನ್ನು ನೋಡಿದರೇ ಹೃದಯಾಘಾತವಾಗುವುದು ಖಚಿತ. ಹದಿನಾಲ್ಕು ಕೀಮೀ ದೂರವನ್ನು ತಲುಪಲು ನಿಮಗೆ ಒಂದು ಗಂಟೆ ಬೇಕು. ಅದೊಂದು ರಸ್ತೆಯಲ್ಲ ಹೊಂಡಗಳು ಇರುವ ಕೆರೆ. ಆದರೂ ದಿನ ನಿತ್ಯ ಅದೇ ರಸ್ತೆಯಲ್ಲಿ ಓಡಾಡುವವರ ಪರಿಸ್ಥಿತಿ ಚಿಂತಾಜನಕ. ಬಹಳ ವರ್ಷಗಳ ನಂತರ ನಾನು ಬಸ್ಸು ಇಳಿದ ಮೇಲೆ ನನ್ನೂರಿಗೆ ನಡೆದುಕೊಂಡು ಹೋದದ್ದು. ಊರಿನ ಬೀದಿಗಳಲ್ಲಿ ನಡೆಯುವುದು ನನಗೆ ಹೆಚ್ಚಿನ ಮುಜುಗರ ಕೊಡಿಸುತ್ತದೆ. ದಾರಿಉದ್ದಕ್ಕೂ ಊರಿನವರು ಮಾತನಾಡಿಸುತ್ತಾರೆ, ಕೆಲಸದ ಬಗ್ಗೆ ಓದಿನ ಬಗ್ಗೆ ಕೇಳುತ್ತಾರೆ ಅವರಿಗೆ ಅರ್ಥ ಮಾಡಿಸುವುದು ತುಂಬಾ ಕಷ್ಟದ ಕೆಲಸ. ಸಂಶೋಧನೆ ಎನ್ನುವುದನ್ನು ಅವರಿಗೆ ಅರ್ಥ ಮಾಡಿಸುವುದು ಅಸಾಧ್ಯ. ಅಂತೂ ಹೋಗುವಾಗ ಯಾರೋ ಕೂಗಿದ ಹಾಗೆ ಆಯಿತು. ನೋಡಿದರೇ ರಂಗ! ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಅವನು ನನಗಿಂತ ಎರಡು ಕ್ಲಾಸು ಮುಂದೆ ಇದ್ದಹಾಗೆ ನೆನಪು! ಅವನು ಮಾತನಾಡಿಸತೊಡಗಿದ. ಹರಿ ಗವರ್ನ್ ಮೆಂಟ್ ಆಯ್ತಾ ನಿನಗೆ ?ಎಂದ. ಅಂದ್ರೇ? ನಿಮ್ಮ ಅಣ್ಣ ಹೇಳ್ತಾ ಇತ್ತು ಹರಿಗೆ ಗವರ್ನ್ ಮೆಂಟ್ ಆಯ್ತು ಅಂತಾ ಎಂದ. ಇಲ್ಲಪ್ಪ ಗವರ್ನ್ ಮೆಂಟ್ ಕೆಲ್ಸ ಏನೂ ಇಲ್ಲ ಎಂದೆ. ಹೌದಾ? ಮತ್ತೇ ನಿಮ್ಮಣ್ಣ ಹೇಳಿದ್ದು ಸುಳ್ಳಾ? ಹೌದು ಎಂದು ತಪ್ಪಿಸಿಕೊಳ್ಳೂವುದಕ್ಕೆ ನೋಡಿದರೆ ಬಿಡುತ್ತಿಲ್ಲ ಮನುಷ್ಯ. ಹರಿ ನಾನು ಊರು ಬಿಡಬೇಕು, ಎಂದ. ಊರು ಯಾಕೆ ಬಿಡಬೇಕು ನೀನು ಎಂದೆ. ದೇಶ ಸುತ್ತಬೇಕು ಎಂದ, ದೇಶ ಸುತ್ತಿ? ತಿಳ್ಕೊಬೇಕು ಎಂದ. ತಿಳ್ಕೊಂಡು ಏನು ಮಾಡ್ತೀಯಾ ಎಂದೆ. ಏನು ಮಾಡೋದು ತಿಳ್ಕೊಬೇಕು ಅಷ್ಟೇ. ಸರಿನಪ್ಪಾ ಯಾಕೆ ತಿಳ್ಕೊಬೇಕು, ಈಗ ಏನಾಗಿದೆ ಊರು, ಜೀವನ ನಡಿತಾ ಇಲ್ವಾ? ನೀನು ಡ್ರೈವಿಂಗ್ ಕಲ್ತಿದ್ದಿಯಾ ಅಲ್ವಾ? ಯಾಕೆ ಕಲಿತೆ, ಏನೋ ಒಂದು ಕಡೆ ಡ್ರೈವರ್ ಆಗಿರಬಹುದು ಅಂತಾ ತಾನೇ? ಹೌದು ಎಂದ. ಉಪಯೋಗಕ್ಕೆ ಬಾರದಿದ್ದ ಮೇಲೆ ನೀನು ಕಲಿತು ಏನು ಮಾಡ್ತೀಯಾ ಎಂದೆ. ಅವನಲ್ಲಿ ಉತ್ತರ ಇರಲಿಲ್ಲ.

ನಾನು ಡ್ರವಿಂಗ್ ಲೈಸೆನ್ಸ್ ಮಾಡಿಸಬೇಕು ಎಂದ. ಮಾಡಿಸು ಎಂದೆ. ಮಾಡಿಸ್ತಿನಿ ಹೇಗೆ ಮಾಡಿಸೋದು ಹೇಳು. ಬಸ್ ಡ್ರೈವರ್ ಆಗೋದು ಹೇಗೆ ಹೇಳು ಎಂದ. ನಾನು ಲೈಸೆನ್ಸ್ ಮಾಡಿಸುವ ರ್ರೀತಿಯನ್ನು ವಿವರಿಸಿದೆ, ಬೇಕಿರುವ ಸರ್ಟಿಫಿಕೇಟ್, ಬಗ್ಗೆ ಹೇಳಿದೆ. ಏಳನೇ ಕ್ಲಾಸೇನು ಎಂಟನೇ ಕ್ಲಾಸಿನದ್ದೇ ತರ್ಸೊಣ ಟಿಸಿ ನ ಎಂದ. ಅದಾದ ಮೇಲೆ, ಸರಿ ನೀನೇ ಮಾಡಿಸಿಕೊಡು ಎಂದ. ಅಪ್ಪಾ ದೇವರೇ, ದಯವಿಟ್ಟು ಹೋಗಿ ಕೆಲಸ ನೋಡು ಸುಮ್ಮನೇ ಟೈಮ್ ಪಾಸ್ಸಿಗೆ ಮಾತಾಡಬೇಡ ಎಂದೆ. ದಾರಿಯಲ್ಲಿ ಬೇರೆಯವರೆಲ್ಲರೂ ಕುಳಿತ್ತಿದ್ದರು, ಅವರು ನನ್ನನ್ನು ಮಾತನಾಡಿಸಿ ರಂಗ ಏನೋ ಹೇಳ್ತಾ ಇದ್ದಾನೆ ಎಂದರು. ಅದಕ್ಕೆ ರಂಗ, ಹರಿ ಕೊಣನೂರಲ್ಲಿ ಸಿಕ್ಕಿದ, ಅರ್ಧ ಬಾಟಲಿ ಎಣ್ಣೆ ಕುಡಿಸಿದ, ಅದಕ್ಕೆ ಅವರ ಮನೆ ತನಕ ಬಿಟ್ಟು ಬರೋಣ ಅಂತ ಹೋಗ್ತಾ ಇದ್ದೀನಿ ಎಂದ. ಸದ್ಯ ಅಲ್ಲಿದ್ದ ಯಾರೂ ಅದನ್ನು ಗಂಬೀರವಾಗಿ ಪರಿಗಣಿಸಲಿಲ್ಲ. ನನಗೆ ಸಂಪೂರ್ಣವಾಗಿ ಅರ್ಥವಾಗಿದೆ ನಿಮಗೆಲ್ಲರಿಗೂ ಇದು ಖಂಡಿತವಾಗಿಯೂ ಇಷ್ಟವಾಗಿಲ್ಲ. ನಾನು ಏನನ್ನೋ ಹೇಳಲು ಹೋಗಿ ಮತ್ತೇನನ್ನೋ ಹೇಳಿದ್ದೇನೆ, ದಯವಿಟ್ಟು ಕ್ಷಮಿಸಿ, ಮುಂದಿನದನ್ನು ನಂತರ ಬರೆಯುತ್ತೇನೆ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...