ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

25 November 2011

ಅವರವರ ನಂಬಿಕೆ ಅವರವರ ಭಾವಕ್ಕೆ ಬಿಟ್ಟಿದ್ದು!!!

ಕೆಲವೊಮ್ಮೆ  ಏನಾದರೂ ಬರೆಯಬೇಕೆನಿಸುತ್ತದೆ. ಆದರೇ ಏನು ಬರೆಯುವುದೆಂಬುದೇ ದೊಡ್ಡ ಚಿಂತೆಯಾಗುತ್ತದೆ. ಬರೆಯಲೇಬೇಕೆಂದು ನಿರ್ಧರಿಸಿದ ಮೇಲೆ ಬರೆಯಲೇಬೇಕಲ್ಲವೇ? ಏನನ್ನೋ ಗೀಚಿದರೇ, ಬರವಣಿಗೆಯನ್ನು ತಿರುವಿ ಹಾಕುವವರು ಸಿಗುವುದಿಲ್ಲ! ನನ್ನ ಬರವಣಿಗೆಯನ್ನು ಯಾರಾದರೂ ಓದುತ್ತಾರೆಂಬ ಭರವಸೆ ನನಗೂ ಇಲ್ಲ ಬಿಡಿ! ಆದರೂ ನಾಳೆ ನಾನು ಬರೆದ ಸಾಲುಗಳನ್ನು ನಾನೇ ಮೆಲಕು ಹಾಕುವಾಗ ಇದು ಯಾವ ತಲೆ ಕೆಟ್ಟವನು ಬರೆದಿದ್ದಾನೆ, ಅಥವಾ ನಾನು ಇಷ್ಟು ಕೆಟ್ಟದ್ದಾಗಿ ಬರೆಯುತ್ತೀನಾ? ಎಂದು ನನ್ನ ಮೇಲೆ ನನಗೆ ಜಿಗುಪ್ಸೆ ಬರಬಾರದಲ್ಲ. ಆದ್ದರಿಂದ, ಅಳೆದು ತೂಗಿ ಬರೆಯುತ್ತಿದ್ದೇನೆ. ಬರವಣಿಗೆಯ ತೂಕ ಓದಿದ ಮೇಲೆಯೇ ತಿಳಿಯುವುದು. ನಾನೆಂದು ಆ ಕೆಲಸ ಮಾಡಿದವನಲ್ಲವೆಂದು ತಮಗೂ ತಿಳಿದಿದೆ. ಇದ್ದಿದ್ದನ್ನು ನೇರವಾಗಿ ಹೇಳಿ ನಿಮ್ಮೆಲ್ಲರ ಹತ್ತಿರನೂ ಒಮ್ಮೊಮ್ಮೆಯಾದರೂ ಬೈಗುಳ ತಿಂದಿದ್ದೇನೆ. ಸರಿ ಈಗ ವಿಷಯಕ್ಕೆ ಬರುವ ಸಮಯ, ಇದ್ದಕ್ಕಿದ್ದ ಹಾಗೆ, ನನ್ನ ಬ್ಲಾಗ್ ನೋಡಿ, ಏನ್ರೀ, full acknowledgement ಹಾಕಿದ್ದೀರಾ ಎಂದರು. ನಾನು ಹೌದು ಎಂದೆ. ನನಗೆ ಇಷ್ಟ ಆಗಲಿಲ್ಲ, silly and unmatured ಅನ್ಸುತ್ತೆ  ಎಂದರು. ಏನು ಮಾಡುವುದು ನಾನೂ ಇನ್ನು ಮೆಚುರ್ ಆಗಿಲ್ಲವಲ್ಲ ಎಂದೆ

ನೀವು ಹಿಂದೆ ದೇವರನ್ನು ನಂಬುವುದಿಲ್ಲ ಅಂತಾ ಇದ್ರಿ ಅಲ್ವಾ ಎಂದರು. ನಾನು ಹೌದು ಎಂದೆ, ಅವರು ಮತ್ತೆ ಈಗ ಇದ್ದಕ್ಕಿದ್ದ ಹಾಗೆ ಭಕ್ತಿ ಉಕ್ಕಿ ಹರಿತಾ ಇದೆ. ಇದು ಕೇವಲ ಇವರೊಬ್ಬರು ಕೇಳಿದ ಪ್ರಶ್ನೆಯಲ್ಲ. ಬಹಳಷ್ಟು ಜನರು ನನ್ನನ್ನೇ ಕೇಳಿದ್ದಾರೆ, ಎದುರುಗಡೆ, ಹಿಂದುಗಡೆಯೂ ಮಾತನಾಡಿದ್ದಾರೆ. ನಾಟಕ ಆಡ್ತಾನೆ, ಎನ್ನುವಷ್ಟರ ಮಟ್ಟಿಗೆ ಮಾತುಗಳು ಬಂದಿವೆ. ಹೌದು ಮನುಷ್ಯನ ಜೀವನದಲ್ಲಿ ಬದಲಾವಣೆ ನಿರಂತರ. ದಿನ ದಿನಕ್ಕೂ ಬದಲಾಗಲೇ ಬೇಕು. ಕೆಲವರು ಅದನ್ನು ಅಬಿವೃದ್ದಿ ಎನ್ನುತ್ತಾರೆ ಮತ್ತೆ ಕೆಲವರು ಬದಲಾವಣೆ ಎನ್ನುತ್ತಾರೆ. ಅದೆಲ್ಲವೂ ಅವರವರ ಭಾವಕ್ಕೆ ಬಿಟ್ಟಿದ್ದು.

ನಾನು ನನ್ನನ್ನು ಬಹಳಷ್ಟು ಬಾರಿ ನನ್ನ ಕಣ್ಣುಗಳಿಂದ ನನ್ನ ಮನಸ್ಸಿನ ಕನ್ನಡಿಯಿಂದ ನೋಡಿಕೊಂಡಿದ್ದೇನೆ. ನನ್ನ ದಿನ ದಿನದ ನಡುವಳಿಕೆಗಳನ್ನು ಗಮನಿಸುತ್ತಾ ಬೆಳೆಯುತ್ತಿದ್ದೇನೆ/ಬದುಕುತಿದ್ದೇನೆ. ಏನಾದರೂ ಏರು ಪೇರಾದರೂ ನನಗಂತಹ ದೊಡ್ಡ ಪೆಟ್ಟು ಆಗುವುದಿಲ್ಲ. ಆದ್ದರಿಂದ ನಾನೇ ಗಮನಿಸಿದಂತೆ ನನ್ನ ಮನಸ್ಸಿಗೆ ಬೇಸರವಾದರೂ ಕೇವಲ ನಿಮಿಷಗಳಲ್ಲಿ ನಾನು ಅದರಿಂದ ಹೊರಕ್ಕೆ ಬಂದಿರುತ್ತೇನೆ. ನಿಮಗೆ ಮುಂಚಿತವಾಗಿಯೇ ಆಗುವುದರ ಅರಿವಿದ್ದರೇ ನೀವು ಹೆಚ್ಚು ದುಃಖ ಪಡುವುದಿಲ್ಲವೆಂಬುದು ನನ್ನ ವಾದ. ಯಾಕೆಂದರೇ ಬಹಳಷ್ಟು ಬಾರಿ ನಿಮ್ಮ ಮನಸ್ಸು ಅದಕ್ಕೆ ಹೊಂದಿಕೊಂಡಿರುತ್ತದೆ. ವಯಸ್ಸಿಗೆ ಬಂದ ಮಗ ಸತ್ತಾಗ ನೋವು ಅಧಿಕವಾಗಿರುತ್ತದೆ, ಯಾಕೆಂದರೇ ಅದು ಅನಿಶ್ಚಿತವಾಗಿ ಬಂದದ್ದು. ನಿನ್ನೆಯ ತನಕ ಜೊತೆಯಲ್ಲಿದ್ದ ಗೆಳತಿ ಇಂದು ಬೆಳ್ಳಿಗ್ಗೆ ಕಣ್ಮರೆಯಾದಾಗ ಹೃದಯ ಒಡೆದು ಬರುತ್ತದೆ. ಆದರೇ, ಕಾಲೇಜು ಮುಗಿದು ಹೋಗುವ ದಿನ ನಮಗೆ ಅಂಥಹ ನೋವಾಗುವುದಿಲ್ಲ, ನಾವೇ ಕೆಲಸ ಬಿಡುವಾಗ ನೋವಾಗುವುದಿಲ್ಲ. ಯಾಕೆಂದರೇ ನಾವು ಕೆಲಸ ಬಿಡುತ್ತಿದ್ದೇವೆಂಬುದು ನಮಗೆ ಮುಂಚಿತವಾಗಿಯೇ ತಿಳಿದಿರುತ್ತದೆ. ನಾನು ಬರೀ ಪೀಠಿಕೆಯಲ್ಲಿಯೇ ನಿಮ್ಮನ್ನು ಮುಗಿಸುತ್ತಿದ್ದೇನೆಂದು ಭಾವಿಸಬೇಡಿ.


ದೇವರ ವಿಷಯವನ್ನು ಕುರಿತು ಮಾತನಾಡುತ್ತೇನೆ. ಇದು ಸಂಪೂರ್ಣ ನನ್ನ ಈ ದಿನದ ನಂಬಿಕೆ, ಇಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಅಥವಾ ಅದರ ಬಗ್ಗೆ ಕೀಳರಿಮೆಯಾಗಲಿ ಅಥವಾ ಹೆಮ್ಮೆಯಾಗಲಿ ತೋರಿಸುವುದಿಲ್ಲ. ಚಿಕ್ಕವನಿದ್ದಾಗ ನಾನು ದೇವರಿಗೆ ಪೂಜೆ ಮಾಡುತ್ತಿದ್ದೆ, ಹೆಚ್ಚಿನ ಸಲ ಅಮ್ಮ ಅಪ್ಪನ ಒತ್ತಾಯಕ್ಕೆ, ನಮ್ಮ ಮನೆಗಳಲ್ಲಿ ದಿನ ನಿತ್ಯ ಪೂಜೆ ಮಾಡಲೇ ಬೇಕೆಂಬ ನಿಯಮವೇನು ಇಲ್ಲದಿದ್ದರೂ ಸಂಜೆ ದೀಪ ಹಚ್ಚಿ, ಓದುವುದಕ್ಕೆ ಕುಳಿತುಕೊಳ್ಳುವುದು ನಿಯಮವಾಗಿ ಮಾರ್ಪಾಡಾಯಿತು. ಆದರೂ ಪರೀಕ್ಷೆಯ ಸಮಯದಲ್ಲಿ ದೇವರಿಗೆ ಹರಕೆ ಕಟ್ಟುವುದು, ಪೂಜೆ ಮಾಡಿಸಿಕೊಂಡು ಬರುವುದು. ವರ್ಷಕ್ಕೊಮ್ಮೆ ಮನೆದೇವರಿಗೆ ಹೋಗಿ ಬರುವುದು, ಧರ್ಮಸ್ಥಳ ನೋಡುವುದು ಹೀಗೆ ನನಗೆ ಅರಿವಿಲ್ಲದಂತೆಯೇ ದೇವರೆನ್ನುವ  ದೇವರು ನನ್ನೊಳಗೆ ಪ್ರವೇಶ ಪಡೆದಿದ್ದ.


ಆ ದೇವರ ಬಗ್ಗೆ ಒಂದು ಭಯ, ಮತ್ತೊಂದೆಡೆ ಬೇಡಿದ್ದನ್ನು ನೀಡುವವನು ಎನಿಸತೊಡಗಿತು. ಅದನ್ನೇ ನಂಬಿ ಬಹಳಷ್ಟು ದಿನ ಅಲೆದಿದ್ದು ಆಯಿತು. ಓದದೇ ಇದ್ದರೂ ಪಾಸು ಮಾಡು ಎಂದು ಹರಕೆ ಕಟ್ಟುವುದು, ಕ್ರಿಕೇಟ್ ಆಡಿಕೊಂಡು, ಬೇಡದ ಸಿನೆಮಾ ನೋಡಿಕೊಂಡು, ಹೆಂಡ ಸಿಗರೇಟು ಎಂದು ಕಾಲ ಕಳೆದು ಪರೀಕ್ಷೆಯ ಹಿಂದಿನ ದಿನ ಹರಕೆ ಕಟ್ಟುವುದು, ದೇವರು ಎಂಬುವನೊಬ್ಬನಿದ್ದರೇ ನನ್ನನ್ನು ಪಾಸ್ ಮಾಡಲಿ ಎಂದು ದೇವರಿಗೆ ಸವಾಲು ಹಾಕುವುದು. ಅಯ್ಯೋ ದೇವರೇ ನೀನೆ ನನ್ನ ಕೈ ಬಿಟ್ಟರೇ ಮತ್ತಾರು ಎಂದು ಗೋಗರೆಯುವುದು ಇವೆಲ್ಲವೂ ಮನಸ್ಸಿನೊಳಗೆ ಹರಿದಾಡತೊಡಗಿದವು.


ಇವೆಲ್ಲದರ ನಡುವೆ, ಒಮ್ಮೊಮ್ಮೆ ದೇವರೆಂಬುವನು ಎಲ್ಲಿದ್ದಾನೆಂಬ ದೊಡ್ಡ ಪ್ರಶ್ನೆ ಎದುರಾಗತೊಡಗಿತು. ನಾನು ಇಲ್ಲಿ ಯಾವುದೇ ಇಸ್ಂ ಆಗಲೀ ಐಡಿಯಾಲಾಜಿಯಿಂದಾಗಲಿ ಮಾತನಾಡುತ್ತಿಲ್ಲ. ಇಲ್ಲಿ ಬರೆಯುತ್ತಿರುವುದೆಲ್ಲವೂ ನನ್ನ ಸ್ವಂತ ಅನುಭವ. ಇಂಥಹ ಪ್ರಶ್ನೆಯನ್ನು ಹುಡುಕುವ ಸಮಯದಲ್ಲಿ, ದೇವರಿಗೆ ಪೂಜೆ ಮಾಡುವುದು, ಇಲ್ಲದ ದೇವರ ಬಗ್ಗೆ ಕಥೆ ಕಟ್ಟಿ ಜನರನ್ನು ಭಯ ಬೀಳಿಸಿವುದು ಬಹಳ ವಿಚಿತ್ರವೆನಿಸತೊಡಗಿತು. ಜೊತೆಯಲ್ಲಿ ಬದುಕುವ ಸ್ನೇಹಿತರನ್ನೇ ನಂಬದ ಜನರು ಕಾಣದ ದೇವರ ಮೇಲೆ ನಂಬಿಕೆಯಿಡುವುದು, ಅವನ ಮೇಲೆ ಆಣೆ ಮಾಡುವುದು. ಅವನು ನೋಡಿಕೊಳ್ಳಲಿ ಎನ್ನುವುದು. ದೇವರ ಗುಡಿ ಒಡೆಯುವಾಗ ದೇವರೇಕೆ ಬರುವುದಿಲ್ಲ, ಮಸೀದಿ ಒಡೆಯುವಾಗ ಅಲ್ಲಾ, ಚರ್ಚ್ ಒಡೆಯುವಾಗ ಏಸು ಯಾಕೆ ಬರಲಿಲ್ಲವೆಂದು ಎಲ್ಲ ಧರ್ಮದ ಎಲ್ಲ ದೇವರುಗಳ ಮೇಲೆ ಅನುಮಾನ ಬರತೊಡಗಿತು. ಅಂಧಕಾರದಲ್ಲಿ ಸಮಾಜ ಮುಳುಗಿದೆ ಎನಿಸತೊಡಗಿತು. ದೇವರ ಹೆಸರಿನಲ್ಲಿ, ಸಂಸ್ಕೃತಿ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡಿದ್ದಾರೆ. ದೇವರೆನ್ನುವವನೊಬ್ಬನಿದ್ದರೇ ಹೀಗೆ ಆಗುತ್ತಿರಲಿಲ್ಲವೆನಿಸಿತ್ತು. ಎಂದು ಪೂಜೆ ಪುರಸ್ಕಾರದಿಂದ ದೂರ ಹೋದೆ.

ಭೂಮಿ ಇರುವುದು ಮನುಷ್ಯನಿಂದ ಅವನ ಬುದ್ದಿವಂತಿಕೆಯಿಂದ ಯಾವ ದೇವರು ಆಚರಣೆಗಳೆಲ್ಲ ಮೋಸವೆನ್ನುವ ಸ್ಥಿತಿ ತಲುಪಿದೆ. ಕೆಲವೊಮ್ಮೆಯಂತು ಮನೆಯಲ್ಲಿ ಪೂಜೆ ಮಾಡೆಂದರೇ ದೂರ ನಡೆದು ನಿಲ್ಲುತ್ತಿದ್ದೆ. ಮನೆಯವರೆಲ್ಲರೂ ಕೋಪದಿಂದ,ಬೇಸರದಿಂದ ಅತಿ ಹೆಚ್ಚು ಓದಿದರೇ ಹೀಗೆ ಆಗುವುದು, ದುರಹಂಕಾರದ ಪರಮಾವಧಿ ಎನ್ನುವ ಮಟ್ಟಕ್ಕಿಳಿದೆ. ಇದೆಲ್ಲದಕ್ಕೂ ಥಿಯರಿಗಳಿವೆ, ಇಸಂ ಗಳಿವೆ. ಬಹಳ ನೇರ ನಡೆಯಲ್ಲಿ ಹೇಳುವುದಾದರೇ ಇದೆಲ್ಲವೂ ನನ್ನೊಳಗೆ ಮೂಡಿದ್ದು. ಇದರ ವಿಷಯವಾಗಿ ಹಲವಾರು ಬಾರಿ ನನ್ನ ಅನೇಕ ಸ್ನೇಹಿತರೊಡನೆ ಹಂಚಿಕೊಂಡಿದ್ದೇನೆ. ನನ್ನಿಂದಲೇ ಎಲ್ಲವೂ, ಮನುಷ್ಯನಿಂದಲೇ ದೇವರಿರುವುದು, ಮನುಷ್ಯನೇ ಇಲ್ಲದಿದ್ದಲ್ಲಿ ದೇವರನ್ನು ಪೂಜಿಸುವವರು, ಆರಾಧಿಸುವವರು ಎಲ್ಲಿದ್ದರು? ಯಾರಿದ್ದರು? ಎಂದು ಹುಂಬದಿಂದ ಬೀಗುತ್ತಿದ್ದೆ.


ಇಂಥಹ ಸಮಯದಲ್ಲಿ, ನನ್ನೊಳಗೆ ನನಗೆ ಕಾಡಿದ ಹಲವಾರು ಪ್ರಶ್ನೆಗಳು, ಇಡೀ ಭೂಮಂಡಲದಲ್ಲಿ ಅಥವಾ ಭಾರತದಲ್ಲಿ ಅದೆಷ್ಟೋ ಮಂದಿ ದೇವರನ್ನು ನಂಬಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇವರನ್ನೇ ನಂಬಿ ಬದುಕನ್ನು ಸಾಗಿಸುತ್ತಿದ್ದಾರೆ. ಅವರೆಲ್ಲರೂ ಮೂರ್ಖರ? ಯಾರೋ ಒಬ್ಬರು ಇಬ್ಬರು ಅಥವಾ ಒಂದು ಕೋಟಿ ಎರಡು ಕೋಟಿ ಜನರು ದಡ್ಡರಿರಬಹುದು, ಆದರೇ ಇಡೀ ಭೂಮಂಡಲವೇ, ಜಗತ್ತಿನ ವಿಸ್ಮಯಕ್ಕೆ ಬೆರಗಾಗಿದೆ ಎಂದರೇ? ಯಾವುದೋ ಶಕ್ತಿ ನಮ್ಮನ್ನು ಆಳುತ್ತಲೇ ಇರಬೇಕು ಅಥವಾ ಅದು ನಮ್ಮನ್ನು ನಡೆಸುತ್ತಲೇ ಇರಬೇಕು. ಇದೆಲ್ಲದರ ಹಿಂದೆ ಏನೋ ಇದೆ, ಅದನ್ನು ಅರಿಯಬೇಕೆಂದರೇ ಅದರ ಬಗ್ಗೆ ನಂಬಿಕೆ ಬೆಳೆಸಿಕೊಳ್ಳಬೇಕು. ನಂಬಿಕೆ ಮತ್ತು ಶ್ರದ್ದೆಯಿಲ್ಲದೇ ಏನನ್ನು ಕಲಿಯಲಾಗುವುದಿಲ್ಲ. ಅದರಂತೆಯೇ, ನಾನು ನನ್ನನ್ನೇ ಪ್ರಶ್ನಿಸತೊಡಗಿದೆ, ಎಲ್ಲವನ್ನೂ ಪ್ರಶ್ನಿಸುತ್ತಾ ಹೋದರೇ, ಸರಿ ತಪ್ಪೆಂದು ಅನುಮಾನಿಸುತ್ತಾ ಹೋದರೇ ನಿಮಗೆ ಅಲ್ಲಿರುವುದನ್ನು ಗಮನಿಸಲಾಗುವುದಿಲ್ಲ.

ನನ್ನ ಮನಸ್ಸಿಗೆ ಆ ದಿನಗಳಲ್ಲಿ ತಟ್ಟನೇ ಹೊಳೆದಿದ್ದು, ಮದರ್ ತೆರೆಸಾರವರ ಒಂದು ಮಾತು ದೊಡ್ಡ ಮಟ್ಟಿಗೆ ನನ್ನೊಳಗೆ ನಾಟಿತ್ತು, ನೀವು ಯಾರನ್ನಾದರೂ ಸರಿ ತಪ್ಪೆಂದು ತಿರ್ಮಾನಿಸುತ್ತಾ ಹೋದರೇ ಅವರನ್ನು ಪ್ರೀತಿಸಲು ಸಮಯವಿರುವುದಿಲ್ಲವೆಂದು. ಹೌದು ನನ್ನ ವಿಷಯದಲ್ಲಿ ಅದು ನೂರಕ್ಕೆ ನೂರು ಸತ್ಯವೆನಿಸಿತು. ನಾವು ಮನುಷ್ಯರು, ಒಬ್ಬರನ್ನು ಮತ್ತೊಬ್ಬರು ಪ್ರೀತಿಸಬೇಕು, ಅದನ್ನು ಯಾವುದೇ ಬೈಬಲ್ ಆಗಲಿ, ಕುರಾನ್ ಆಗಲೀ ಗೀತಾಸಾರವಾಗಲಿ ಬರೆದು ತೋರಿಸಬೇಕಿಲ್ಲ. ನಾನು ಯಾರಿಗೂ ಮೋಸ ಮಾಡುವುದಿಲ್ಲ, ಎಲ್ಲರನ್ನೂ ಪ್ರೀತಿಸುತ್ತೇನೆಂಬುದನ್ನು ನಾನು ಅರಿಯುವಂತೆ ಮಾಡುತ್ತಿರುವುದು ಆ ದೇವರೊಬ್ಬನೆ. ಅವನನ್ನು ನಂಬು ನಿನಗೆ ನೆಮ್ಮದಿ ಕೊಡುವ ದೇವಸ್ಥಾನಕ್ಕೆ ಹೋಗು, ಅದು ನಿನ್ನ ಹಿಂದಿನಿಂದ ಬಂದಿರುವ ಪದ್ದತಿ. ನಾನು ಓದಿದ ಮಾತ್ರಕ್ಕೆ, ಬೆಳೆದ ಮಾತ್ರಕ್ಕೆ ನಮ್ಮ ಮನೆಯಲ್ಲಿ ಹಿಂದಿನಿಂದ ಬಂದಿರುವ ಆಚರಣೆಯನ್ನು ದೂರ ಮಾಡಲಾಗುವುದಿಲ್ಲ. ಈ ವಿಷಯದಲ್ಲಿ ನಾನು ಬಹಳ ಸ್ಪಷ್ಟವಾಗಿದ್ದೇನೆ.


ಎಲ್ಲರೂ ಒಂದೇ ರೀತಿಯಲ್ಲಿರಬೇಕೆನ್ನುವುದನ್ನು ನಾನು ಒಪ್ಪುವುದಿಲ್ಲ, ನಾಗರೀಕತೆ, ಅನಾಗರೀಕತೆ, ನಂಬಿಕೆ, ವಿಶ್ವಾಸ ಇವೆಲ್ಲವೂ ಅವರವರ ಭಾವಕ್ಕೆ ಬಿಟ್ಟಿರುದು. ಆದರೇ, ಅದು ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಾರದು. ಇದು ಜಾತಿಯ, ಧರ್ಮದ ವಿಷಯದಲ್ಲಿಯೂ ಅಷ್ಟೇ! ಜಾತಿಯನ್ನು ಯಾರೂ ಮೇಲಿಟ್ಟಿ ನೋಡಬಾರದು, ಅದು ಅವರವರ ಆಚರಣೆಗೆ ಬಿಟ್ಟಿದ್ದು. ಜಾತಿಯತೆ ಮಾಡುವುದು ಅಥವಾ ಧರ್ಮದಿಂದ ಮತ್ತೊಬ್ಬನನ್ನು ನೋಡುವುದು ಮಹಪರಾಧ. ನಾನು ದೇವಸ್ಥಾನಕ್ಕೆ ಹೋಗುವುದು ನನ್ನ ವ್ಯಕ್ತಿಗತ ಅಭಿಪ್ರಾಯ, ಅದನ್ನು ನನ್ನ ಹೆತ್ತವರು ಕೇಳುವ ಹಾಗಿಲ್ಲ. ಆದರೇ, ನಾನು ಯಾವುದೋ ಧರ್ಮದ ವಿರುದ್ದ ಮಾತನಾಡುವುದಕ್ಕೆ ನನಗೆ ಹಕ್ಕಿಲ್ಲ, ನನ್ನ ಸ್ನೇಹಿತನಾದವನು ನನಗೆ ಉಗಿದು ಹೇಳಬಹುದು. ವಿಷಯ ವ್ಯಾಪ್ತಿಗೆ ಮೀರಿದೆ ಎನಿಸುತ್ತದೆ. ನಾನು ಹೇಳ ಹೊರಟಿದ್ದು, ದೇವರ ಮೇಲೆ ನನಗೆ ನಂಬಿಕೆ ಯಾಕೆ ಬಂತೆನ್ನುವುದಕ್ಕೆ.

ನಾನು, ಮೊದಲೇ ಹೇಳಿರುವಂತೆ ಎಲ್ಲಾ ದೇವಸ್ಥಾನಗಳು, ನನಗೆ ಖುಷಿ ನೀಡುವುದಿಲ್ಲ. ನನಗೆ ಧರ್ಮಸ್ಥಳ, ಬೇಲೂರು ಸಂತೋಷ ಕೊಡುವಷ್ಟು ಬೇರೆಲ್ಲೂ ಕೊಡುವುದಿಲ್ಲ. ಅದರಂತೆಯೇ ನಮ್ಮೂರ ಪಕ್ಕದಲ್ಲಿರುವ ರಾಮನಾಥಪುರ ದೇವಸ್ಥಾನದ ಪೂಜಾರಿಗಳನ್ನು ಕಂಡರೇ ಬರುವಷ್ಟೂ ಕೋಪ ಮತ್ತೆಲ್ಲೂ ಬರುವುದಿಲ್ಲ. ಅಯೋಗ್ಯರೆಂದರೇ, ಥೂ ಎನಿಸುವಷ್ಟು ಅಯೋಗ್ಯರು. ದೇವರಿಲ್ಲ, ಎಲ್ಲವೂ ನಾನೇ ಅಥವಾ ನನ್ನ ಆತ್ಮಭಿಮಾನ, ನನ್ನ ಮೇಲೆ ನನಗಿರುವ ಆತ್ಮ ವಿಶ್ವಾಸದಿಂದ ಪ್ರಪಂಚವನ್ನೇ ಅಲ್ಲಾಡಿಸಬಹುದೆಂಬುದು ಬಹಳ ನಿರ್ದಿಷ್ಟವಾಗಿ ಭ್ರಮೆ ಎನಿಸಿದೆ. ನಾನು ಇದನ್ನು ನಿಮಗೆ ಹೇಳಿದರೇ, ಉಪದೇಶವೆನಿಸುತ್ತದೆ. ಆದರೇ, ಕುಳಿತು ಆಲೋಚಿಸಿ ನೋಡಿ, ನಮ್ಮ ಕೈಯ್ಯಾರೆ ನಾವು ಏನನ್ನು ಮಾಡಲಾಗುವುದಿಲ್ಲ. ಹತ್ತು ವರ್ಷ ಓದಿರುವು ಮನುಷ್ಯ ಪರೀಕ್ಷೆ ದಿನ ಆರೋಗ್ಯ ತಪ್ಪಿ ಬಿದ್ದರೇ, ನಿಮ್ಮ ಕೈಯಲ್ಲಿ ಎಲ್ಲವೂ ಇದ್ದಿದ್ದರೇ ಅದನ್ನು ತಪ್ಪಿಸಬಹುದಿತ್ತು!

ನಾನು ಇಲ್ಲಿ ದೇವರ ಪರವಾಗಿಯೋ ಅಥವಾ ಯಾವುದೋ ಒಂದು ವರ್ಗದ ಪರವಾಗಿಯೋ ವಾದ ಮಾಡುತ್ತಿಲ್ಲ. ನಾವೆಷ್ಟೇ ಮೇಲೆ ಹೋದರೂ, ನಮ್ಮ ಬೇರು ಬಹಳ ಮುಖ್ಯವಾಗುತ್ತದೆ. ಅಂತಿಮವಾಗಿ ನಿಮ್ಮ ಆತ್ಮ ತೃಪ್ತಿ ಮುಖ್ಯವಾಗುತ್ತದೆ. ಎಲ್ಲವನ್ನೂ ವಸ್ತುವಿನಿಂದಲೇ ಗೆಲ್ಲುತ್ತೇನೆಂಬುದು ಶುದ್ದ ಮೂರ್ಖತನ. ಹಣ, ಆಸ್ತಿ, ಹೆಸರು ಗಳಿಕೆ ನಿಮಗೆ ನೆಮ್ಮದಿ ಕೊಡುವುದಿಲ್ಲ. ನೆಮ್ಮದಿ ಕೊಡುವುದು ಒಬ್ಬರಿಗೆ ಸಹಾಯ ಮಾಡಿದಾಗ ಮಾತ್ರ. ಒಬ್ಬರೂ ಯಾವುದೇ ಸಂಕೋಚವಿಲ್ಲದೆ ನೀವು ಮಾಡಿದ ಸಹಾಯವನ್ನು ನೆನೆದಾಗ ಮಾತ್ರ. ನಾನು ನನ್ನ ನೆಮ್ಮದಿಯ ಬದುಕನ್ನು ಆ ನಿಟ್ಟಿನಲ್ಲಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

22 November 2011

ದೈನತೆಯ ಬದುಕಿಗೆ ಧನ್ಯತೆ ಇದ್ದೇ ಇರುತ್ತದೆ!!

ನಾನು ಈ ಕ್ಷಣದಲ್ಲಿ ಈ ಬರವಣಿಗೆಯನ್ನು ಬರೆಯಲೇ ಬೇಕಾದದ್ದು, ಅವಶ್ಯಕತೆ ಮತ್ತು ಅನಿವಾರ್ಯತೆ ಕೂಡ ಹೌದು. ನನಗೆ ಇಂದು ಪಿ ಎಚ್ ಡಿ ಸಿಕ್ಕಿರುವ ಸಂಭ್ರಮವೊಂದೆಡೆಯಾದರೆ, ಮತ್ತೊಂದೆಡೆ ಇದೆಲ್ಲವೂ ಆಗಿದ್ದು ಒಂದು ಕನಸೆಂಬಂತೆ ನನ್ನ ಕಣ್ಣುಗಳನ್ನು ನಾನೆ ನಂಬಲಾರದೇ ಕುಳಿತಿದ್ದೇನೆ. ಈ ದಿನಗಳಲ್ಲಿ ಯಾವುದೂ ಸಾಧನೆಯಲ್ಲ, ಎಲ್ಲವೂ ಸಾಧನೆ. ಪಿ ಎಚ್ ಡಿ ಮಾಡುವುದು ಅಂಥಹ ವೀಶೇಷವೇನಲ್ಲ. ಆದರೂ ಒಮ್ಮೊಮ್ಮೆ ಇದೊಂದು ಜೀವನದ ಸಾಧನೆಯ ಮೆಟ್ಟಿಲು ಎನಿಸುತ್ತದೆ. ಬಂದ ಡಾಕ್ಟರೇಟ್ ನಿಂದ ಬೀಗುವುದಕ್ಕಲ್ಲ. ಆದರೇ ಒಂದು ಪಿ ಎಚ್ ಡಿ ಅದೆಷ್ಟೋ ಜನರ ಮನಸ್ಸಿಗೆ ಮುದ ನೀಡುತ್ತದೆಂಬ ಒಲವಿನಿಂದ. ನಾನು ಪಿ ಎಚ್ ಡಿ ಮಾಡಲು ಹೋರಟಾಗ ಅನೇಕ ಮಂದಿ ಬೇಡವೆಂದಿದ್ದರೂ ಕೆಲವರು ಮಾಡೆಂದು ಪ್ರೋತ್ಸಾಹಿಸಿದ್ದರು. ಅವರವರ ಭಾವಕ್ಕೆ ತಕ್ಕಂತೆ ನನಗೂ ಅವರ ಅಭಿಪ್ರಾಯಗಳನ್ನು ಹಂಚಿದ್ದರು. ಕೆಲವರು ಮೈಸೂರು ವಿವಿ ಯಾಕೆ? ವಿದೇಶ ನೋಡು ಎಂದಿದ್ದರು, ಇನ್ನೂ ಕೆಲವರು ಆ ಗೈಡ್ ಯಾಕೆ ಎಂದಿದ್ದರು? ಟಾಪಿಕ್ ಬದಲಾಯಿಸು ಎಂದಿದ್ದರು! ಹೀಗೆ ಎಲ್ಲ ಬಗೆಯ ಉಚಿತ ಸಲಹೆಗಳು ಬಂದಿದ್ದವು. ಹೊಸದರಲ್ಲಿ ನಾನು ಎರಡು ವರ್ಷಕ್ಕೆ ಮುಗಿಸಬಹುದೆಂಬ ನಿರೀಕ್ಷೆಯಲ್ಲಿದ್ದೆ ಆದರೇ ಮುಗಿಯುವಾಗ ನಾಲ್ಕು ವರ್ಷ ತುಂಬಿತ್ತು.

ಅದೇನೇ ಇರಲಿ, ಶುರುವಾಗಿದ್ದ ಉತ್ಸಾಹ ಮುಗಿಯುವ ಹಂತದಲ್ಲಿರಲಿಲ್ಲ. ಕನಸುಗಳನ್ನು ಹೊತ್ತು ಹೋದ ನನಗೆ ಅಂತಿಮವಾಗಿ ಒಂದು ಪದವಿ ಸಿಕ್ಕಿದೆಂಬ ಸಮಧಾನ ಒಂದನ್ನು ಬಿಟ್ಟರೆ ನಾನು ಮಾಡ ಹೋರಟಿದ್ದನ್ನು ಮಾಡಲಿಲ್ಲವೆಂಬ ಕೊರಗು ಇದ್ದೇ ಇದೆ. ನಾನು ಶುರುವಿನಲ್ಲಿ ನನ್ನ ಪಿ ಎಚ್ ಡಿ ಒಂದು ಮಾದರಿಯಾಗಬೇಕು, ವಿಜ್ನಾನಕ್ಕೆ ಪರಿಸರಕ್ಕೆ ಒಂದು ಉತ್ತಮ ಕೊಡುಗೆಯಾಗಬೇಕೆಂದು ಬಯಸಿದ್ದೆ. ಕಡೆ ಕಡೆಗೆ ನನಗೆ ನನ್ನ ಡಿಗ್ರಿ ಸಿಕ್ಕರೇ ಸಾಕೆನ್ನುವ ಮಟ್ಟಕ್ಕೆ ತಲುಪಿದ್ದೆ. ಕೆಲವೊಮ್ಮೆ ಈ ಡಿಗ್ರಿಯೂ ಸಾಕು, ಈ ಜೀವನವೂ ಸಾಕೆನ್ನುವ ಜಿಗುಪ್ಸೆ ಮೂಡಿತ್ತು. ಬೇಡವೇ ಬೇಡವೆಂದು ಬಿಟ್ಟು ಬಿಡಲು ನಿರ್ಧರಿಸಿದ್ದೆ. ಆದರೇ ಆ ಕ್ಷಣದಲ್ಲಿ ನನ್ನ ಕೈ ಬಿಡದೆ ಕೆಲವರು ಸಹಾಯ ಮಾಡಿದರು. ನಾನು ಯಾವುದೇ ಕೆಲಸ ಮಾಡುವ ಮುನ್ನ, ಧರ್ಮಸ್ಥಳಕ್ಕೆ ಹೋಗಿ ಬರುವುದು ನನ್ನ ನಂಬಿಕೆ. ನಾನು ನಂಬಿರುವ ದೇವರು ನನಗೆ ಉತ್ತಮ ಮಾರ್ಗವನ್ನು ತೋರಿಸುತ್ತಾನೆ, ಶಕ್ತಿಯನ್ನು ನೀಡುತ್ತಾನೆಂಬುದು ನನ್ನ ವಿಶ್ವಾಸ. ಆ ದೇವರು ನನ್ನನೆಂದು ಕೈ ಬಿಟ್ಟಿಲ್ಲ. ದೇವರು ಇಡಿಸುವ ಹೆಜ್ಜೆ ನನ್ನದು ಅವನ ಅನುಮತಿಯಿಲ್ಲದೆ ಒಂದು ಹುಳ್ಳುಕಡ್ಡಿಯೂ ಸರಿಯದೆಂಬ ನಂಬಿಕೆ ನನ್ನದು. ದೇವರು ಎಲ್ಲರಿಗೂ ಇದ್ದಾನೆ, ವೀರಪ್ಪನ್ ಅಂಥಹ ಕ್ರೂರಿಯೂ ದೇವರನ್ನು ನಂಬುತಿದ್ದನೆಂಬುದು ಕೆಲವರ ವಾದವಾಗುತ್ತದೆ. ಅದೇನೆ ಇರಲಿ, ನನಗೆ ಪಿ ಎಚ್ ಡಿ ಬಂದಿರುವುದು ಹೆಮ್ಮೆಯ ವಿಷಯವಂತೂ ಅನಿಸಿಲ್ಲ. ಇದು ನಾನು ನಂಬಿದ ದೇವರು ಕೊಟ್ಟ ಭಿಕ್ಷೆ, ನನ್ನ ಸ್ನೇಹಿತರು ನನಗೆ ಮಾಡಿದ ಸಹಾಯ. ಆ ಸಹಾಯಕ್ಕೆ ನಾನು ಚಿರ ಋಣಿ. ಒಂದು ಒಳ್ಳೆಯ ಮನಸ್ಸಿನಿಂದ ನಿಸ್ವಾರ್ಥದಿಂದ ಸಹಾಯವನ್ನು ಬೇಡಿದಾಗ ಸರ್ವರು ನಿಮಗೆ ಸಹಾಯ ಮಾಡುತ್ತಾರೆಂಬುದಕ್ಕೆ ನನ್ನ ಪಿ ಎಚ್ ಡಿಯೊಂದು ನಿದರ್ಶನ.

ನಾನು ಎರಡು ವರ್ಷ ಕಳೆದ ಮೇಲೂ ಪಿ ಎಚ್ ಡಿ ಮಾಡುವುದನ್ನು ನಿಲ್ಲಿಸುವ ತೀರ್ಮಾನ ಕೈಗೊಂಡಿದ್ದೆ. ಮನಸ್ಸಿನ ಯಾವುದೋ ಮೂಲೆಯಲ್ಲಿ ಎನೋ ಒಂದು ಬಗೆಯ ಕೊರಗು ನೋವು ನನ್ನನ್ನು ಕಾಡುತ್ತಲೇ ಇತ್ತು. ಕೇವಲ ಡಿಗ್ರಿಗಾಗಿ, ಮಾನವೀಯತೆ, ಸ್ವಾಭಿಮಾನ ಬಿಟ್ಟು ಉಪಯೋಗಕ್ಕೇ ಬಾರದ, ನಾಲ್ಕು ಜನರಿಗೆ ಅನುಕೂಲವಾಗದ ನಿನ್ನ ಡಿಗ್ರಿಗೆ ಏನು ಬೆಲೆಯೆಂಬುದು ನನ್ನಂತರಳಾವನ್ನು ಕೆದುಕುತ್ತಲೇ ಇತ್ತು. ನಾನು ಹೊರಗೆಷ್ಟೇ ಖುಷಿಯಾಗಿದ್ದರೂ ಪಿ ಎಚ್ ಡಿ ವಿಷಯ ಬಂದಾಗ ನನಗೆ ಪಾಪ ಪ್ರಜ್ನೆ ಕಾಡುತ್ತಿತ್ತು. ಎಲ್ಲರನ್ನೂ ಆಡಿಕೊಳ್ಳುವ ಗೇಲಿ ಮಾಡುವ ನಾನು, ಮಾಡುತ್ತಿರುವುದಾದರೂ ಏನೆಂಬುದು, ನನ್ನನ್ನು ಕುಬ್ಜನನ್ನಾಗಿಸುತ್ತಿತ್ತು. ಮೊದಲಿಗೆ ಎನ್ವಿರಾನ್ ಮೆಂಟಲ್ ಫ಼್ಲೋಸ್ ಎಂಬ ವಿಷಯವನ್ನು ಕೈಗೆತ್ತಿಕೊಂಡಾಗ, ದೇಶದಲ್ಲಿಯೇ ಯಾರೂ ಮಾಡದ ವಿಷಯದ ಮೇಲೆ, ಎಲ್ಲರೂ ಕಷ್ಟವೆನ್ನುವ ವಿಷಯದ ಮೇಲೆ ನಾನು ಸಂಶೋಧನೆ ಮಾಡಲು ಹೊರಟಿರುವುದು ಹೆಮ್ಮೆಯ ವಿಷಯವೆನಿಸಿತ್ತು. ಆದರೇ ಆ ಹೆಮ್ಮೆಯಾಗಿದ್ದ ವಿಷಯ ಕೇವಲ ಆರು ತಿಂಗಳಿನಲ್ಲಿಯೇ ನನ್ನ ಕನಸಿನ ಗೋಪುರವನ್ನು ಒಡೆದುಹಾಕಿತ್ತು. ನಾನು ಇಂದು ಮೆಟ್ಟಿಲು ಏರಿದ ಮೇಲೆ ಯಾರನ್ನಾದರೂ ಗೇಲಿ ಮಾಡಿದರೇ ಅದು ನಂಬಿಕೆ ದ್ರೋಹವಾದೀತು. ಆದ್ದರಿಂದ ಇಲ್ಲಿ ಯಾರನ್ನು ಗೇಲಿ ಮಾಡುವುದಿಲ್ಲ, ಅನೇಕರಿಂದ ನನಗೆ ಅನ್ಯಾಯವಾಗಿದೆ, ಕೆಲವರು ನಾನು ಏನನ್ನು ಮಾಡುವುದು ಬೇಡವೆನ್ನುವ ಮಟ್ಟಿಗೆ ವಿಷ ಕಾರಿದ್ದಾರೆ. ಅಂಥವರ ಹೆಸರನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ, ಅವರೆಲ್ಲರನ್ನು ಆ ದೇವರು ನೋಡಿಕೊಳ್ಳಲಿ.

ನಾನು ಇಲ್ಲಿ ಬರೆಯುವುದು ನನ್ನ ವಿದ್ಯಾಬ್ಯಾಸಕ್ಕೆ ಸಹಾಯ ಮಾಡಿದವರ ಬಗೆಗೆ ಮಾತ್ರ. ನಾನು ಮೊದಲೇ ಹೆಳಿದಂತೆ ನನಗೆ ಬಂದಿರುವ ಈ ಡಿಗ್ರಿ ಸಲ್ಲಬೇಕಿರುವುದು, ನನ್ನ ದೇವರಿಗೆ ಮತ್ತು ನನ್ನ ಸ್ನೇಹಿತರಿಗೆ. ನಾನು ಕೈಚೆಲ್ಲಿ ಕುಳಿತ ಸಮಯದಲ್ಲಿ, ನನ್ನ ನೆರವಿಗೆ ಬಂದವರು, ನಂದ ಮತ್ತು ವಿಜಯ್, ಅವರಿಬ್ಬರೂ ಪ್ರೋತ್ಸಾಹಿಸಿ ನನ್ನ ಫೀಲ್ಡ್ ಸರ್ವೇ ಮಾಡದೇ ಇದ್ದಿದ್ದರೇ ನನಗೆ ಇಂದಿಗೆ ನಿಮ್ಮ ಮುಂದಿರುವ ಅರ್ಹತೆ ಇರುತ್ತಿರಲಿಲ್ಲ. ನಂತರ ನನ್ನ ಡಿಗ್ರಿಗೆ ಮುಖ್ಯ ಕಾರಣರಾದವರು, ಬೆಂಗಳೂರು ವಿವಿಯ ರಿಸರ್ಚ್ ವರ್ಗ. ಪವಿತ್ರ, ದುರ್ಗೇಶ್, ಕುಮಾರ್, ಖಯೂಮ್ ಮತ್ತು ವಿಜಯ್. ಎಷ್ಟರ ಮಟ್ಟಿಗೆ ಸಹಾಯ ಮಾಡಿದರೆಂದರೇ ಅವರ ಪದವಿಗೆ ಕೆಲಸ ಮಾಡುತ್ತಿರುವ ಮಟ್ಟಿಗೆ ನನಗೆ ಸಹಾಯ ಮಾಡಿದ್ದಾರೆ. ಅವರನ್ನು ನಾನೆಂದು ಮರೆಯುವಂತಿಲ್ಲ. ಅದಾದ ನಂತರ ನನಗೆ ಅತಿಯಾಗಿ ಸಹಾಯ ಮಾಡಿದ್ದು, ಡಾ|| ಲೆನಿನ್ ಬಾಬು, ನಾನು ಬರೆಯುತ್ತಿದ ಹಾಗೇಯೇ ಅವರು ಅದನ್ನು ಓದಿ, ತಿದ್ದಿಕೊಡುತ್ತಿದ್ದರು, ಅವರ ಜೊತೆಯಲ್ಲಿಯೇ ಡಾ|| ರೆಜಿನಾ ಅವರು ಸಹ ಅತಿ ಹೆಚ್ಚಿನ ಮಟ್ಟದಲ್ಲಿ ನನಗೆ ಸಹಾಯ ಮಾಡಿದರು. ಡಾ|| ಬೇಲಾ ಅವರು ನನಗೆ ಅದೆಷ್ಟರ ಮಟ್ಟಿಗೆ ವಿಷಯವನ್ನು ಅರ್ಥೈಸಿದರೆಂದರೇ ಪ್ಲಾಂಕ್ಟನ್ ವಿಷಯದಲ್ಲಿ ಎಬಿಸಿಡಿ ಬಾರದ ನನಗೆ ಕೊನೆಯಲ್ಲಿ ನಾಲ್ಕು ಸಾಲು ಬರೆಯುವ ಮಟ್ಟಿಗೆ ಪ್ರೋತ್ಸಾಹಿಸಿದರು. ಈ ಎಲ್ಲದರ ನಡುವೆ, ಸವಿತಾ ನನ್ನ ಥೀಸಿಸ್ ಓದುವುದರಿಂದ, ಎಲ್ಲ ಸಲಹೆಗಳನ್ನು ಕೊಟ್ಟು ಸಹಕರಿಸಿದರು. ಇದೆಲ್ಲದರ ನಡುವೆ, ಮೀನುಗಾರಿಕೆ ಇಲಾಖೆಯಲ್ಲಿ ಪರಿಚಯರಾದ ಅದರಲ್ಲೂ ನನ್ನ ಸ್ನೇಹಿತ ದ್ವಾರಕೀಶ್, ನನ್ನ ಅಣ್ಣನ ಸ್ಥಾನದಲ್ಲಿ ನಿಂತು ಎಲ್ಲರನ್ನು ಪರಿಚಯ ಮಾಡಿಸಿ ಸಹಾಯ ಮಾಡಿಸಿದರು, ಅವರ ಜೊತೆಗೆ ಕಿರಣ್, ನವೀನ, ಸೀನಪ್ಪ, ಮಗದ ಹೀಗೆ ಅದೆಷ್ಟೋ ಮಂದಿ ಮೀನುಗಾರಿಕೆ ಇಲಾಖೆಯವರು ನನಗೆ ಸ್ನೇಹಿತರಾದರು. ಜೊತೆಜೊತೆಯಲ್ಲಿಯೇ ನನಗೆ ಆರ್ಥಿಕ ಸಹಾಯವನ್ನು, ನನ್ನ ಸ್ನೇಹಿತ ಮಂಜೇಶ್, ನಮ್ಮಪ್ಪ ನಮ್ಮ ಅಕ್ಕ ಭಾವ ನೀಡಿ ಸಹಕರಿಸಿದರು. ಶ್ರ‍ೀಕಂಠಸ್ವಾಮಿಯ ಶಿಷ್ಯರಾದ ಶಿವಕುಮಾರ್ ಮತ್ತು ವಿವೇಕ್ ಬಹಳಷ್ಟು ಸಹಾಯ ಮಾಡಿದರು. ನಾನು ಮೈಸೂರಿನಲ್ಲಿದ್ದಷ್ಟು ದಿನ ಆಶ್ರಯ ನೀಡಿದವರು ಅನಿಲ್ ಮತ್ತು ರಾಜಣ್ಣ. ನಾನು ನನ್ನ ಥೀಸಿಸ್ ಗೆ ಮ್ಯಾಪ್ ಗಳು ಬೇಕೆಂದು ಒದ್ದಾಡುತ್ತಿರುವಾಗ ಸಹಾಯಕ್ಕೆ ಬಂದವನು ಕೃಷ್ಣಮೂರ್ತಿ, ಅವನಿಗೂ ನನಗೂ ದೊಡ್ಡ ಮಟ್ಟದ ಸ್ನೇಹವಿರಲಿಲ್ಲ, ನಮ್ಮ ಹಾಸ್ಟೇಲ್ ನಲ್ಲಿದ್ದ ಎನ್ನುವ ಸಲುಗೆಯಿದ್ದ, ಸಹಾಯ ಬೇಡಿದೆ, ಅರ್ಧ ದಿನದಲ್ಲಿ ಕುಳಿತು ಹತ್ತು ಮ್ಯಾಪ್ ಗಳನ್ನು ಮಾಡಿಕೊಟ್ಟ.

ಮೇಲೆ ಹೆಸರಿಸಿದ ಯಾರೊಬ್ಬರಿಗೂ, ನನ್ನ ಟಾಪಿಕ್ ಬಗ್ಗೆ ಏನೂ ತಿಳಿದಿರಲಿಲ್ಲ, ಇದಕ್ಕೆ ಮುಂಚೆ ನಾನು ಅವರಿಗೆ ಯಾವೊಂದು ಸಹಾಯವನ್ನು ಮಾಡಿದವನಲ್ಲ. ಆದರೂ ಇವರೆಲ್ಲರೂ ತಮ್ಮದೇ ಥೀಸಿಸ್ ಎನ್ನುವ ಮಟ್ಟಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು, ಇದು ಇಂದಿಗೂ ನನಗೆ ಕೌತುಕದ ವಿಷಯ. ಇವರೆಲ್ಲರೂ ನನಗೇಕೆ ಇಷ್ಟೊಂದು ಸಹಾಯ ಮಾಡಿದರು? ಆ ದೇವರು ಇವರಿಗೆ ಆ ಮನಸ್ಸನ್ನು ನೀಡಿದನಾ? ಅಥವಾ ಇವರಲ್ಲಿರುವ ದೊಡ್ಡಗುಣವಾ? ನನ್ನ ಬಗೆಗೆ ಇವರಲ್ಲಿರುವ ಸ್ನೇಹವಾ? ನಾನು ಡಿಗ್ರಿ ಬಂದಾಗಿನಿಂದ ನಾನು ಅನುಭವಿಸಿದ ಕಹಿ ನೆನಪುಗಳ ಬಗ್ಗೆ ಚಿಂತಿಸುತ್ತಲೇ ಇಲ್ಲಾ, ಇವರೆಲ್ಲರೂ ಮಾಡಿದ ಸಹಾಯದ ಬಗೆಗೆ ಚಿಂತಿಸುತ್ತಿದ್ದೇನೆ. ನನ್ನ ಅಜ್ಜಿ ಹೇಳುವಂತೆ, ಅವನು ಬರೆದಂತೆ ಎಲ್ಲವೂ ನಡೆಯಲೇ ಬೇಕು, ಎಲ್ಲವೂ ನಿರ್ಧಾರವಾಗಿರುತ್ತದೆ. ನಾವು ಕೇವಲ ನಟನೆಗೆ ಮಾತ್ರ. ಎಲ್ಲವನ್ನೂ ಅವನು ಕೊಟ್ಟಮೇಲೂ ಅವನನ್ನು ಬೇಡುವುದೇಕೆ, ನಮ್ಮ ಸುತ್ತಮುತ್ತಲಿರುವ ಅದೆಷ್ಟೋ ಸಹೃದಯವಂತರು ನಮ್ಮ ನೆರವಿಗಿರುತ್ತಾರೆ ಅವರೆಲ್ಲರನ್ನೂ ದೇವರೇ ನಮ್ಮಲ್ಲಿಗೆ ಅಟ್ಟಿರುತ್ತಾನೆ, ಅವರ ಸಹಾಯವನ್ನು ಒಳ್ಳೆಯ ಕಾರ್ಯಕ್ಕೆ ಮಾತ್ರ ಬೇಡಬೇಕು.

21 November 2011


ಒಮ್ಮೊಮ್ಮೆ ಜನರ ನಡುವಳಿಕೆಗಳು ನಮ್ಮನ್ನು ಬಹಳ ಬೇಸರಗೊಳಿಸುತ್ತವೆ. ಸಹಾಯಮಾಡುವುದಕ್ಕೆ ಹೋದವರು ಮತ್ತೊಮ್ಮೆ ಸಹಾಯವನ್ನೇ ಮಾಡಬಾರದೆಂಬಂತೆ ಮಾಡಿಬಿಡುತ್ತವೆ. ನೀರಲ್ಲಿ ಮುಳುಗುತ್ತಿರುವವನನ್ನು ಉಳಿಸಲು ಹೋಗಿ ತಾನು ಸಾಯುವಂತೆಯೋ, ಹಾದಿಯಲ್ಲಿ ಹೋಗುವ ಮಾರಮ್ಮನನ್ನು ಮನೆಗೆ ಕರೆದಂತೆಯೋ ಆಗಿ ಬಿಡುತ್ತದೆ. ಮೊನ್ನೆ ಇಂಥಹದ್ದೆ ಒಂದು ಸನ್ನಿವೇಶ ನನಗೂ ಒದಗಿಬಂತು, ಅನುಭವಿಸಿದೆ, ಅದನ್ನು ಆನಂದಿಸುವ ಸರದಿ ತಮ್ಮದು. ಆಫೀಸಿಗೆಂದು ಬರುತ್ತಿದ್ದೆ, ಮಲ್ಲೇಶ್ವರದ ಹದಿನೇಳನೆ ಕ್ರಾಸಿನಿಂದ ಬರುವುದು ನಂತರ, ಎಂಈಎಸ್ ಕಾಲೇಜು ಪಕ್ಕದಲ್ಲಿ ಬರುವುದು ನನ್ನ ದಿನಚರಿ. ಬರುವ ದಾರಿಯಲ್ಲಿ ಒಬ್ಬ ಅಜ್ಜ ನನ್ನ ಬೈಕ್ ಅನ್ನು ಅಡ್ಡ ಹಾಕಿದರು. ಆರೋಗ್ಯ ಸರಿಯಿಲ್ಲ ಅಲ್ಲಿಯ ತನಕ ಬಿಡಿ ಎಂದರು. ನಾನು ಹೋಗುವುದು ಹದಿನಾಲ್ಕನೇ ಕ್ರಾಸಿನ ತನಕ ಮಾತ್ರವೆಂದೆ. ನಾನು ಗೀತಾಂಜಲಿ ಹತ್ತಿರ ಹೋಗಬೇಕೆಂದರು. ನಾನು ಆ ಮಾರ್ಗವಾಗಿ ಹೋಗುವುದಿಲ್ಲ ನನ್ನ ಆಫೀಸಿರುವುದು ಇಲ್ಲೇ ಮುಂದಿನ ರಸ್ತೆಯಲ್ಲಿ ಎಂದೆ. ಆ ಮನುಷ್ಯ ದೇವರ ಹೆಸರನ್ನು ಹೇಳುತ್ತಾ ಕುಳಿತೇ ಬಿಟ್ಟರು. ರಾಘವೇಂದ್ರ ಕಾಪಾಡು ತಂದೆ ಎಂದರು. ದೇವರ ಹೆಸರು ಹೇಳಿ ಕುಳಿತಿದ್ದರಿಂದ ನನಗು ಸ್ವಲ್ಪ ಕನಿಕರ ಬಂದಿರಬಹುದು. ಕುಳಿತ ಎರಡೇ ನಿಮಿಷದಲ್ಲಿ, ನನಗೆ ಸರ್ಜರಿಯಾಗಿದೆ, ಎದೆಯಲ್ಲಿ ನೋವಿದೆ ಎನ್ನತೊಡಗಿದರು. ಅಯ್ಯೋ ಹಣೆಬರಹವೇ! ಈ ಮನುಷ್ಯನಿಗೆ ಏನಾದರೂ ಆದರೇ? ಭಯವೆನಿಸತೊಡಗಿತು. ರಸ್ತೆ ಬೇರೆ ಚೆನ್ನಾಗಿರಲಿಲ್ಲ. ಆ ವಿಷಯಕ್ಕೆ ಬಂದರೇ, ಬೆಂಗಳೂರಿನಲ್ಲಿ ಯಾವ ರಸ್ತೆ ಚೆನ್ನಾಗಿದೆ! ಎನ್ನುವ ಪ್ರಶ್ನೆಯೂ ಹುಟ್ಟಬಹುದು. ನಾನು ಅವರಿಗೆ ಹೇಳತೊಡಗಿದೆ, ಮುಂದಿನ ಬಸ್ ಸ್ಟಾಪ್ ವರೆಗೆ ಬಿಡುತ್ತೇನೆ. ಆನಂತರ ನೀವು ಬಸ್ಸಿನಲ್ಲಿ ಹೋಗಿ ಎಂದು. ಆ ಮನುಷ್ಯ ತನ್ನ ಎದೆಯಲ್ಲಿರುವ ಗಾಯವನ್ನೇ ತೋರುವಂತೆ ಮಾಡತೊಡಗಿದರು!!

ನನಗಂತೂ ಆ ಕ್ಷಣ ಅಸಹ್ಯ, ಭಯ ಬೇಸರ ಎಲ್ಲವೂ ಒಮ್ಮೇಗೆ ಬಂದಹಾಗಾಯಿತು. ದಾರಿ ಹೋಕನಿಗೆ ಸಹಾಯ ಮಾಡಲು ಹೋಗಿ, ಈಗ ಅವನನ್ನು ಅವನಿಗೆ ಕೆಲಸವಿರುವಲ್ಲಿಗೇ ಕರೆದೊಯ್ಯಬೇಕಾ? ಮಾನವನ ದುರಾಸೆಗೆ, ದುರುಪಯೋಗಕ್ಕೆ, ಇದಕ್ಕಿಂತ ಒಳ್ಳೆಯ ಉದಾಹರಣೆ ಸಿಗಲಾರದೆನಿಸಿತು. ಜನರು ಬೆಂಗಳೂರಿನಂಥಹ ನಗರಗಳಲ್ಲಿ ಜನರಿಗೆ ಸಹಾಯ ಮಾಡುವುದಕ್ಕೆ ಯಾಕೆ ಹಿಂಜರಯುತ್ತಾರೆಂಬುದಕ್ಕೆ ಕ್ಷಣಾರ್ಧದಲ್ಲಿಯೇ ಉತ್ತರೆ ದೊರಕಿತು. ಅಲ್ಲಾ ಮಾರಾಯರೇ, ಆಟೋದಲ್ಲಿ ಹೋಗಬಹುದಲ್ಲ ಎನ್ನುವ ನನ್ನ ಪ್ರಶ್ನೆಗೆ ಮನುಷ್ಯ ಮೌನವಹಿಸಿದ್ದರು. ಇದು ಯಾಕೋ ಅತಿಯಾಯಿತೆನಿಸಿ, ಸ್ವಾಮಿ ಆಟೋದಲ್ಲಿ ಹೋಗಿ ಎಂದರೇ, ಇಲ್ಲ ಆಟೋ ಅಲ್ಲಿಯ ತನಕ ಬರುವುದಿಲ್ಲವೆಂದರು. ನಾನು ನಿಮ್ಮನ್ನು ಆಟೋಗೆ ಹತ್ತಿಸುತ್ತೇನೆ, ಇಳಿಯಿರಿ ಎಂದರೇ ಇಳಿಯುವುದಿಲ್ಲವೆಂದು ಹಠಮಾಡತೊಡಗಿದರು.

ಅಯ್ಯೋ ನನ್ನ ಹಣೆಬರಹವೇ! ಎಂದು ಸ್ವಲ್ಪ ದೂರ ಮುನ್ನುಗ್ಗುವ ಮುಂಚೆಯೇ ದಾರಿ ತೋರಿಸಲು ಶುರು ಮಾಡಿದರು. ಹೀಗೆ ಹೋಗಿ, ಇಲ್ಲಿ ಎಡಕ್ಕೆ ಅಲ್ಲಿ ಬಲಕ್ಕೆ, ಕಡೆಯದಾಗಿ ನಾನು ನಿಮ್ಮನ್ನು ಎಲ್ಲಿಗೆ ಬಿಡಬೇಕು ಸ್ವಾಮಿ ಎನ್ನುವಾಗ, ಗೀತಾಂಜಲಿ ಹತ್ತಿರವೆಂದರು. ದೇವರೇ! ಸ್ವಾಮಿ ನನ್ನ ಆಫೀಸಿರುವುದು, ಹದಿನಾಲ್ಕನೇಯ ಕ್ರಾಸಿನಲ್ಲಿ ನೀವು ಹೇಳುತ್ತಿರುವಲ್ಲಿಗೆ ಇಲ್ಲಿಂದ ಮೂರು ಕೀಲೋಮೀಟರ್ ನಾನು ಆಫೀಸಿಗೆ ಹೋಗಬೇಕು. ಯಾಕೆ ಹೀಗೆ ಮತ್ತೊಬ್ಬರಿಗೆ ತೊಂದರೆ ಕೊಡುತ್ತೀರಾ? ಅರ್ಥವಾಗುವುದಿಲ್ಲವೇ? ಎಂದರೇ ಮತ್ತೆ ನಿರಾಳ ಮೌನ. ಸ್ವಾಮಿ ನಾನೇ ನಿಮಗೆ ಆಟೋಗೆ ದುಡ್ಡು ಕೊಡುತ್ತೇನೆ ಇಳಿಯಿರಿ ಎಂದರೂ ಇಳಿಯುವುದಿಲ್ಲವೆಂದರು. ಅಯ್ಯೋ, ಯಾಕ್ರಿ ಇಳಿದು ಆಟೋದಲ್ಲಿ ಹೋದರೇನು ಬಂತು ನಾನೇ ನಿಮಗೆ ದುಡ್ಡೂ ಕೋಡುತ್ತೇನಲ್ಲ. ಇಲ್ಲಾ ಆಟೋಗೆಲ್ಲಾ ದುಡ್ಡೂ ಬೇಡ, ನೀವು ಅಲ್ಲಿಗೆ ಬಿಟ್ಟು ಹೋಗಿ ಎಂದರು. ಎಲ್ಲಿಗೆ ಎಂದೆ. ಮಲ್ಲೇಶ್ವರಂ ಸರ್ಕಲ್ ತನಕ ಬಿಡಿ ಸಾಕೆಂದರು. ನಾನು ನನ್ನ ಮೂರ್ಖತನವನ್ನು ಶಪಿಸುತ್ತಾ, ಗಾಡಿ ಓಡಿಸತೊಡಗಿದೆ. ಸ್ವಲ್ಪವೇ ದೂರ ಹೋದಾಕ್ಷಣ, ಮನುಷ್ಯ ಕಿರುಚತೊಡಗಿದ, ನಿಧಾನವೆನ್ನತೊಡಗಿದರು. ಇನ್ನೆಷ್ಟು ನಿಧಾನ, ಹಿಂದುಗಡೆಯಿಂದ ಗಾಡಿಗಳು ಹಾರ್ನ್ ಮಾಡತೊಡಗಿದರು. ಒಂದು ಗುಂಡಿಯನ್ನು ಇಳಿಸುವಂತಿಲ್ಲ, ನನ್ನ ಭುಜದ ಮೇಲೆ ಕೈಹಾಕಿ ಅದುಮತೊಡಗಿದರು.

ನನ್ನೊಳಗೆ ಕೋಪ ಕುದಿಯತೊಡಗಿತು, ಅದೇನೋ ಗೊತ್ತಿಲ್ಲ, ಇತ್ತೀಚೆಗೆ ಕೋಪವೇ ಬರುವುದಿಲ್ಲ. ಬಂದರೂ ಹಿಂದಿನಷ್ಟು ವೇಗವಾಗಿಯೂ ಅಥವಾ ದಿಡೀರನೇ ಬರುವುದಿಲ್ಲ. ಅದೆಷ್ಟು ನಿಧಾನವಾಗಿ ಗಾಡಿ ಓಡಿಸಿಕೊಂಡು ಬಂದೆನೆಂದರೇ, ಹೂವಿಗೂ ನೋವಾಗದಷ್ಟೂ ಮೃದುವಾಗಿ ಬಂದೆ, ಬಂದವನು, ಅಲ್ಲಿ ಕಾಣುತ್ತಿರುವುದೇ ಮಲ್ಲೇಶ್ವರಂ ಸರ್ಕಲ್ ಎಂದರೇ, ಆಗಲೂ ಮನುಷ್ಯ ಇಳಿಯುತ್ತಿಲ್ಲ. ಇಲ್ಲಾ, ಇಲ್ಲಿಯವರೆಗೂ ಬಂದಿರುವ ನೀವು, ಅಲ್ಲಿ ಗೀತಾಂಜಲಿಯ ಹತ್ತಿರಕ್ಕೆ ಬಿಡಿ ಎಂದರು. ನನಗಂತು ಮೈಕೈಯೆಲ್ಲಾ ಉರಿದು ಹೋಯಿತು. ಥೂ ದರಿದ್ರ ಬದುಕೇ, ಮಾಡುವ ಕೆಲಸ ಬಿಟ್ಟು ಹೀಗೆ ಮಾಡಿಕೊಂಡು ಓಡಾಡುತ್ತೀಯಾ? ಎನಿಸಿತು.ಅಲ್ಲಿಂದ ಸೇತುವೆಯ ಅಡಿಯಿಂದ ಮುನ್ನುಗ್ಗಿ, ಗೀತಾಂಜಲಿಯ ಹತ್ತಿರಕ್ಕೆ ಬಿಟ್ಟೆ.

ಅವರು ಅಲ್ಲಿಯೇ ಒಂದು ಆಸ್ಪತ್ರೆಯನ್ನು ತೋರಿಸಿದರು, ಅದರ ಬಾಗಿಲಿಗೆ ನಿಲ್ಲಿಸುವಂತೆ ಕೇಳಿದರೂ, ನಾನು ನಾಲ್ಕು ಹೆಜ್ಜೆ ಮುಂದಕ್ಕೆ ನಿಲ್ಲಿಸಿದೆ. ಮನುಷ್ಯ ಕೋಪಗೊಂಡಂತೆ ಕಾಣಿಸಿತು. ದೇವರೇ! ಎಲ್ಲವನ್ನೂ ನೀನೆ ಮಾಡಿಸುತ್ತಿರುವೆಂಬುದು ನನ್ನ ಬಲವಾದ ನಂಬಿಕೆ. ಆದರೇ, ಇಂಥಹ ಕೆಲಸವನ್ನೇಕೆ ಮಾಡಿಸುತ್ತೀಯಾ??? ಜನರು, ಅದೆಷ್ಟು ಬಾರಿ ನಮ್ಮ ಒಳ್ಳೆತನವನ್ನು ದುರುಪಯೋಗಪಡಿಸಿಕೊಳ್ಳುತಾರೆಂಬುದಕ್ಕೆ ಇದೊಂದು ನಿದರ್ಶನ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂಬುದು ಸಹಾಯದ ವಿಷಯದಲ್ಲಿ, ಅಪ್ಪಟ ಸತ್ಯ, ನಾನು ಅದನ್ನೇ ನಂಬಿ ಬದುಕುವವನು. ಆದರೇ, ಈ ಬಗೆಯ ಸಹಾಯ ಮಾಡಿದಾಗ, ಅಥವ ಅವರು ನಮ್ಮನ್ನು ದುರುಪಯೋಗ ಪಡಿಸಿಕೊಂಡಾಗ ಎಲ್ಲಿಲ್ಲದ ಅಸಮಾಧಾನವುಂಟಾಗುತ್ತದೆ. ನನ್ನ ಶ್ರಮಕ್ಕೆ, ಅಥವಾ ಒಳ್ಳೆಯವರಿಗೆ ಒಳ್ಳೆಯತನಕ್ಕೆ ಸಹಾಯ ಮಾಡುವ ಯೊಗ್ಯತೆ ನನಗಿಲ್ಲವೆಂಬ ಕೊರಗುಂಟಾಗುತ್ತದೆ.

 
ಇಂಥಹದ್ದೇ, ಸನ್ನಿವೇಶಗಳು, ಬೆಂಗಳೂರು ವಿವಿಯಿಂದ ನಾಗರಭಾವಿಗೆ ಬರುವ ಹಾದಿಯಲ್ಲಿ ನಡೆಯುತ್ತವೆ, ನೀವು ಆ ರಸ್ತೆಯಲ್ಲಿ ಗಮನಿಸಿದ್ದೇ ಆದರೇ, ಜ್ನಾನಭಾರತಿಯಿಂದ ಬರುವಾಗ, ಮೊದಲು ಗಾಂಧಿಭವನ ಸಿಗುತ್ತದೆ. ಆದಾದ ನಂತರ ಮೊದಲಿಗೆ ಲಾ ಕಾಲೇಜು ಹಾಸ್ಟೇಲು ಸಿಗುತ್ತದೆ. ಹಾಸ್ಟೇಲ್ ದಾಟಿ ಬಂದರೇ, ನಂತರ ಕಾಲೇಜು ಸಿಗುತ್ತದೆ. ಕ್ಯಾಂಪಸ್ಸಿನ ಒಳಗೆ ಎಲ್ಲವೂ ಇದೆ. ಆದರೇ ಹಾಸ್ಟಲ್ಲಿಗೆ ಒಂದು ಗೇಟು, ಕಾಲೇಜಿಗೆ ಮತ್ತೊಂದು ಗೇಟಿದೆ. ಎರಡು ಗೇಟಿಗೆ, ಹೆಚ್ಚೆಂದರೇ, ಇನ್ನೂರು ಮೀಟರು ದೂರವಿರಬಹುದೆನ್ನಿ. ಅನೇಕ ಬಾರಿ, ಅಲ್ಲಿನ ವಿದ್ಯಾರ್ಥಿಗಳು, ಹೋಗಿ ಬರುವ ಗಾಡಿಗಳಲ್ಲಿ, ಡ್ರಾಪ್ ಕೇಳುತ್ತಾರೆ. ಹತ್ತಿ ಮೂರು ನಿಮಿಷದೊಳಗೆ ಅವರು ಇಳಿಯುವ ಸ್ಥಳ ಬಂದಿರುತ್ತದೆ. ಕೇವಲ ಇನ್ನೂರು ಮೀಟರು ದೂರಕ್ಕೆ, ನೀವು ನಿಮ್ಮ ಗಾಡಿಯನ್ನು ಎರಡು ಬಾರಿ ನಿಲ್ಲಿಸಿ ಅವರಿಗೆ ಸಹಾಯ ಮಾಡಬೇಕು. ಜನರನ್ನು ದುರುಪಯೋಗ ಪಡಿಸಿಕೊಳ್ಳುವುದೆಂದರೇ ಇದೇಯಲ್ಲವೇ? ನಾನು ಮೊದಲಿನ ದಿನಗಳಲ್ಲಿ ಅವರಿಗೆ ಗಾಡಿ ನಿಲ್ಲಿಸುತ್ತಿದ್ದೆ. ಪಾಪ ನಾಗರಭಾವಿ ಸರ್ಕಲ್ಲಿಗಿರಬೇಕೆಂದು. ನಂತರ ಅದನ್ನು ಮಾಡುವುದಿಲ್ಲವೆಂದು ತೀರ್ಮಾನಿಸಿದೆ. ಈಗ ಅದೆಷ್ಟೋ ಮಂದಿ, ನಾಗರಭಾವಿಗೆ ಬರುವವರಿದ್ದರೂ ಅವರು ಇದರಿಂದ ವಂಚಿತರಾಗುತ್ತಾರೆ.

14 November 2011

ಈ ಮಾತುಗಳನ್ನು ಹೇಳಲು ಅಥವಾ ಬರೆಯಲು ನಾನೆಷ್ಟು ಯೋಗ್ಯನೆಂದು ನನಗೆ ತಿಳಿದಿಲ್ಲ
, ಆದರೂ ಸ್ವಾತಂತ್ರ್ಯದ ಹೆಸರನ್ನು ಬಳಸಿಕೊಂಡು, ನನಗೂ ಬರೆಯುವ ಹಕ್ಕಿದೆಯೆಂದು ಬರೆಯುತಿದ್ದೇನೆ. ನಾವು, ಭಾರತೀಯರಾಗಿ ಬಹಳಷ್ಟು ಮೆರೆಯುತ್ತೇವೆ, ಹೆಮ್ಮೆ ಪಡುತ್ತೇವೆ, ನಮ್ಮಲ್ಲಿ ಹಿಂದೆ ಅದಿತ್ತಂತೆ, ಇದಿತ್ತಂದೆ ಎಂದು. ನನ್ನೂರಿನಲ್ಲಿಯೂ ಬಹಳಷ್ಟು ಬಾರಿ ನಾನು ಕೇಳಿದ್ದೇನೆ, ಇದೆಲ್ಲವೂ ನಮ್ಮ ತಾತನ ಆಸ್ತಿಯಂತೆ, ಅವರು ಕಳೆದರಂತೆ! ನಮ್ಮೂರಿನಲ್ಲಿ ಅಗಾಧ ಸಂಪತಿತ್ತಂತೆ, ಕಳೆದರಂತೆ, ದೋಚಿದರಂತೆ. ಈ ಅಂತೆ ಕಂತೆಗಳ ಮಾತನ್ನು ನಾವು ಸ್ವಲ್ಪ ಬದಿಗಿಟ್ಟು ನೋಡಬೇಕಾಗುತ್ತದೆ. ನಮ್ಮಲ್ಲಿರುವುದಕ್ಕೊಂದು ಲೆಕ್ಕ ಪತ್ರ ಬೇಡವೇ? ಹಿಂದೆ ಇರಲಿಲ್ಲ ಬೇಡ ಆದರೇ ಇವತ್ತಿಗೂ ಅದನ್ನು ಇಟ್ಟಿಕೊಳ್ಳಬಾರದೇ? ಅದಕ್ಕೂ ಮೀರಿ ನಮ್ಮಲ್ಲಿ ನಡೆಯುವ ಯಾವೊಂದು ಆಚರಣೆಗಳನ್ನು ಎಲ್ಲಿಯೂ ದಾಖಲಿಸದೇ ಹೋದದ್ದು ಒಂದು ದುರಂತ. ನಮ್ಮಲ್ಲಿ ಪುರಾಣಗಳ ಬಗ್ಗೆ, ಇತಿಹಾಸದ ಬಗ್ಗೆ, ಕಥೆಗಳನ್ನು ಹೇಳುವವರು ಹೆಚ್ಚು, ಆದರೇ ಬರೆದವರು ಬಹಳ ಕಡಿಮೆ. ನಾವೆಷ್ಟೇ ಮಾತನಾಡಿದರೂ ಕೇಳಿಸಿಕೊಂಡವರು ಅದನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ಪೀಳಿಗೆಗೆ ರವಾನಿಸುವುದು ಅಷ್ಟಕಷ್ಟೇ! ಮುಂದಿನ ಪೀಳಿಗೆಯ ವಿಚಾರ ಬದಿಗಿಡಿ, ಕೆಲವರು ಅವರ ಮೇಲಧಿಕಾರಿ, ಅವರ ಬಾಸ್ ಹೇಳಿದ ಮಾತನ್ನೇ ಜೊತೆಯವರಿಗೆ ತಿಳಿಸುವುದಿಲ್ಲ. ಜೊತೆಯಲ್ಲಿರುವವರು ಬುದ್ದಿವಂತರಾಗುವುದು ಅದೆಷ್ಟೊ ಮಂದಿಗೆ ಇಷ್ಟವೇ ಆಗುವುದಿಲ್ಲ. ನನ್ನ ಪಿ ಎಚ್ ಡಿಯ ಸಮಯದಲ್ಲಿ ಕೆಲವು ಮಂದಿ ಆ ರೀತಿ ವರ್ತಿಸಿದ್ದಾರೆ. ನಾನು ನನ್ನ ಥೀಸಿಸ್ ಮೈಸೂರು ವಿವಿಗೆ ಕೊಡುವ ಮುನ್ನವೇ ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೆ. ಜ್ನಾನ ಎಂದಿಗೂ ಒಬ್ಬರಿಂದ ಒಬ್ಬರಿಗೆ ಪಸರಬೇಕು. ಇನ್ನೊಬ್ಬರನ್ನು ಗೇಲಿ ಮಾಡುವುದೇ ಬದುಕಾಗಬಾರದು. ಇರುವ ಒಳ್ಳೆಯದನ್ನು ಕಲಿಯೋಣ, ಕಲಿತಿರುವುದನ್ನು ಇತರರೊಂದಿಗೆ ಹಂಚಿ ಬದುಕೋಣ.
ನಾನು ಎಲ್ಲಿಯೋ ಶುರು ಮಾಡಿ ಮತ್ತೆಲ್ಲಿಗೋ ಕರೆದೊಯ್ದದಕ್ಕೆ ಕ್ಷಮೆಯಿರಲಿ. ಈಗ ಹೇಳ ಹೊರಟದ್ದು, ನಾವು ದಿನ ನಿತ್ಯನ ಕಾಣುವ ಅನುಭವಿಸುವ ವಿಷಯಗಳನ್ನು, ವಿಚಾರಗಳನ್ನು ಬರೆದಿಡುವುದರ ಬಗೆಗೆ. ನನ್ನೂರು ನನ್ನ ಬಾಲ್ಯದಲ್ಲಿ ಹೇಗಿತ್ತೆಂಬುದನ್ನು ನನ್ನ ಒಂದು ಬರಹದಲ್ಲಿ ಸಂಪೂರ್ಣವಾಗಿ ಹೇಳಿದ್ದೇನೆ. ಆದರೇ ನಾನು ಮಾತನಾಡುವಾಗ ಅದೆಷ್ಟೋ ವಿಚಾರಗಳನ್ನು ಮರೆತು ಹೇಳುವುದುಂಟು. ನನ್ನೂರಿನ ಬಗ್ಗೆ ನನ್ನ ಸ್ನೇಹಿತರಿಗೆ ಹೇಳಿರುವುದಕಿಂತ ಅವರು ಓದಿ ತಿಳಿದುಕೊಂಡಿರುವವರು ನನ್ನೂರಿಗೆ ಬಂದೊಡನೆಯೇ ಕೇಳುತ್ತಾರೆ, ಮತ್ತು ಅದನ್ನು ಅಲ್ಲಿನ ಸ್ಥಳ ಪುರಾಣಕ್ಕೆ ನಂಟುಮಾಡಿಕೊಳ್ಳುತ್ತಾರೆ. ಇತಿಹಾಸವನ್ನು ಹೆಕ್ಕಿ ನೋಡಿದರೇ ಭಾರತದ ಬಗೆಗೆ ಭಾರತೀಯರು ಬರೆದಿರುವುದು ಬಹಳ ಕಡಿಮೆ. ಹೊರಗಿನಿಂದ ಬಂದವರು ಬರೆದಿರುವುದೇ ಹೆಚ್ಚು. ಹೊರಗಿನವನು, ಅವನ ದೃಷ್ಟಿಕೋನದಿಂದ ನೋಡಿರುತ್ತಾನೆ. ಆದ್ದರಿಂದಲೇ ಬಹುತೇಕ ವಿದೇಶಿ ಚರಿತ್ರಕಾರರಿಗೆ ಭಾರತ ಅಂಧಕಾರದಲ್ಲಿ ಮುಳುಗಿದ್ದ ದೇಶವೆನಿಸುತ್ತದೆ. ನನ್ನೂರು ಹೊರಗಿನಿಂದ ಬಂದವನಿಗೆ ಹಳ್ಳಿ, ಹಿಂದುವರೆದ ಗ್ರಾಮವೆನಿಸುತ್ತದೆ. ಏಕೆಂದರೇ ನೀವು ಬಾನುಗೊಂದಿಯನ್ನು, ಬೆಂಗಳೂರಿಗೆ ಹೋಲಿಕೆ ಮಾಡಿ ನೋಡಿರುತ್ತೀರಾ! ಅದಕ್ಕಾಗಿಯೇ ಒಬ್ಬರು ಇನ್ನೊಬ್ಬರನ್ನು ಹೋಲಿಸಿ ನೋಡುವಾಗ ಬೇಸರವಾಗುವುದು. ತಂದೆ ತಾಯಂದಿರು ತಮ್ಮ ಮಕ್ಕಳನ್ನು ಪಕ್ಕದ ಮನೆಯವರ ಮಕ್ಕಳೊಂದಿಗೆ ಹೋಲಿಸಿದಾಗ ಬೇಸರ ಉಂಟಾಗುತ್ತದೆ. ತಾನು ತನ್ನ ಜೀವನವನ್ನು ತನ್ನ ಅನುಭವದಿಂದಲೇ ಅನುಭವಿಸಬೇಕು, ಇದು ಭಾರತ. ಆದರೇ ಅವನ ಅನುಭವಗಳನ್ನು ಪುಸ್ತಕದಲ್ಲಿಟ್ಟರೇ ಮುಂದೆಂದೊ ಯಾರಿಗಾದರೂ ಅನುಕೂಲವಾಗಬಹುದು.
ಪುಸ್ತಕಗಳು ಎಲ್ಲ ಸಮಯದಲ್ಲಿಯೂ ಉಪಯೋಗಕ್ಕೆ ಬರುವುದಿಲ್ಲ. ಅವರು ಅವರ ಯೋಗ್ಯತೆಗೆ ತಕ್ಕಂತೆ, ಅನುಭವಕ್ಕೆ ತಕ್ಕಂತೆ ಬರೆದಿಡುತ್ತಾರೆ. ಆದರೇ ಸಮಯದಲ್ಲಿದ್ದ, ಕ್ಷಣಗಳು ಮಾತ್ರ ನಮ್ಮ ಆ ದಿನಗಳಿಗೆ ಕರೆದೊಯ್ಯಬಹುದು. ಆದ್ದರಿಂದ, ನಾವು ಮಾತನಾಡುವ ವಿಷಯಗಳು ಬರವಣಿಗೆಯಾಗಿ ಮಾರ್ಪಾಡಾಗಳೆಂದು ಬಯಸುತ್ತೇನೆ. ಬ್ಲಾಗ್ ಯುಗದಲ್ಲಿ ಬರವಣಿಗೆಗಳಿಗೆ ಬರವಿಲ್ಲವಾದರೂ, ವಿಷಯಗಳಿಗೆ ನೀಡುವ ಮನ್ನಣೆ ಮುಖ್ಯವಾಗುತ್ತದೆ.
ದೇವಲೋಕದ ಪಾರಿಜಾತ ಭೂಮಿಗೆ ಜಾರಿದೆ
ಅದು ನೀನೆಂದು ನಾ ಹೇಳಿದೆ,
ಹೇಳಲು ಭಯ ನನಗೆ ದೇವರು ಕಿತ್ತುಕೊಂಡಾನೆಂಬ ದುಗುಡ
ನೀನೆಂದರೇ ನೀನು ನಂಬಳು ನನ್ನ ಮಾತನು,
ಆ ದೇವನಿಗೆ ತಿಳಿದಿದೆ ನನ್ನ ಮಾತಿನ ಅರ್ಥ
ಹುಡುಗಾಟ ಸಾಕು ಕೆಲಸ ಮಾಡೆಂಬುದು ನಿನ್ನಯ ತರ್ಕ
ನಿನ್ನ ಬಗ್ಗೆ ಬರೆವುದೇ ನನ್ನ ಕಾರ್ಯವೆಂದರೇ ನಗುವೇ ನೀನು
ಬರೆವುದು ಸುಲಭ ಬರೆಸಿಕೊಳ್ಳುವ ಮನಸ್ಸು ಬೇಕು
ಬರೆವ ಮನಸ್ಸಿದೆ ಬರೆಸಿಕೊಳ್ಳುವ ಹಾಳೆಯಾಗಬಾರದೇ ನೀನು
ಹಾಳೆಯಲ್ಲ, ಪದಗಳಾಗು, ಪದಗಳೆಲ್ಲಾ ಉದುರಳಲಿ ಮುತ್ತಿನಂತೆ
ಮುತ್ತಿನ ಮಳೆ ಸುರಿಯಲಿ ಮುತ್ತಿನ ಹಾರವಾಗಲಿ ಈ ನನ್ನ ಬರವಣಿಗೆ
ನೀ ಕವಿಯಾ?ಎಂದರೇ ಉತ್ತರವಿಲ್ಲ, ನಾನೆಂದು ಕವಿಯಾಗಲು ಬರೆದವನಲ್ಲ
ನನ್ನ ಬರವಣಿಗೆ ಏನಿದ್ದರೂ ನಿನಗೋಸ್ಕರ ಕೇವಲ ನಿನಗೋಸ್ಕರ
ನನ್ನ ಪದಗಳಲ್ಲಿರುವುದು ನೀ ಮಾತ್ರ ನನ್ನ ಪ್ರತಿಯೊಂದು ಅಕ್ಷರವಿರುವುದು ನಿನಗೊಸ್ಕರ
ಬರೆವುದು ನಾನಲ್ಲ ಬರೆಸುತ್ತಿರುವುದು ನೀನು, ಬರೆಸಿಕೊಳ್ಳುತ್ತಿರುವುದು ಆ ನಿನ್ನ ಚೆಲುವು
ಮರುಭೂಮಿಯಲ್ಲಿ ನದಿ ಹರಿದಂತೆ ನಿನ್ನಯ ಚೆಲುವು
ಬರಡಾಗಿರುವ ಈ ಬದುಕಿಗೆ ನೀನೇ ಹರಿವ ತೊರೆ