10 ಮಾರ್ಚ್ 2018

ಅಮ್ಮನಿಗಾಗಿ ನಾಲ್ಕು ಸಾಲುಗಳು!!!!!



ನಾನು ಈ ಬರವಣಿಗೆಯನ್ನು ದಿಡೀರನೇ ಬರೆಯುತ್ತಿದ್ದೇನೆ. ಏಕೆಂದರೆ ಈ ದಿನ ವಿಶ್ವ ಮಹಿಳೆಯರ ದಿನ. ಇದನ್ನು ಈ ದಿನವೇ ಬರೆದರೆ ಬರಹಕ್ಕೊಂದು ಬೆಲೆ ಸಿಗಬಹುದೆಂದು ಮತ್ತು ಮಹಿಳೆಯರಿಗೊಂದು ಕಿರು ಗೌರವವನ್ನು ನೀಡಬಹುದೆಂಬುದು ನನ್ನ ಬಯಕೆ. ಆತುರದಲ್ಲಿ ಬರೆಯುವುದರಿಂದ ಸ್ವಲ್ಪ ಚಿಕ್ಕದಾಗಿರುತ್ತದೆಂಬುದು ನನ್ನ ಭಾವನೆ ಮತ್ತು ಕೆಲವು ತಪ್ಪುಗಳು ಇರಬಹುದು, ಏಕೆಂದರೆ ಇದನ್ನು ಯಾವುದೇ ಮಾರ್ಪಾಡು ಮಾಡದೆ ಹಾಗೆಯೇ ಹಾಕುತ್ತೇನೆ. ಹೆಣ್ಣು ಗಂಡಿನ ನಡುವೆ ಬೇಧ ಭಾವವನ್ನು ಏಕೆ ಮಾಡಿದರು ಯಾರು ಮಾಡಿದರು ಎನ್ನುವುದು ನನಗೆ ಗೊತ್ತಿಲ್ಲ ಮತ್ತು ಆ ವಿಷಯದ ಕುರಿತು ಮಾತನಾಡುವಷ್ಟು ಪಾಂಡಿಂತ್ಯ ನನಗಿಲ್ಲ. ನಾನು ನನ್ನನುಭವವನ್ನು ಮಾತ್ರ ಹಂಚಿಕೊಳ್ಳಬಹುದು. ಇಲ್ಲಿ ಯಾವುದೇ ಸರಿ ತಪ್ಪಿಲ್ಲ ಇದು ನನ್ನನುಭವ ಮತ್ತು ನನ್ನನಿಸಿಕೆ ಕೂಡ.

ಮಹಿಳೆ ಎಂದ ಕೂಡಲೇ ನನಗೆ ನೆನಪಾಗುವುದು ನನ್ನ ತಾಯಿ. ನನ್ನ ತಾಯಿ ಎಂದ ಕೂಡಲೇ ನೆನಪಾಗುವುದು ಅಬಲೆ, ಸೂಕ್ಷ್ಮ ಮನಸ್ಸಿನವಳು, ಅಳುಬುರುಕಿ, ಎಲ್ಲದಕ್ಕೂ ಕಣ್ಣೀರು ಹಾಕುವವಳು, ಎಲ್ಲವನ್ನೂ ಮನಸ್ಸಿಗೆ ಹಾಕಿಕೊಂಡು ತನ್ನೊಳಗೆ ಕೊರಗುವವಳು. ಇದರಿಂದಾಚೆಗೆ ನೋಡಿದಾಗ ನನ್ನ ತಾಯಿಯ ಶಕ್ತಿ ನನಗೆ ತಿಳಿಯುತ್ತದೆ. ಆಚೇಗೆ ಮತ್ತೂ ಈಚೆಗೆಂದರೇನು? ನಮ್ಮೆದುರು ಕಾಣುವುದು ಒಂದು ಅದರ ಹಿಂದೆ ಇರುವುದು ಮತ್ತೊಂದು. ಅದನ್ನು ನೀವು ಗಮನಿಸಬೇಕಾದರೇ ತಾಳ್ಮೆ ಮತ್ತು ಅದರದ್ದೇ ಶ್ರದ್ದೆ ಮತ್ತು ಸಂಯಮವಿರಬೇಕು. ಹಿಂದಿನ ಅನೇಕ ಮಹಿಳೆಯರು ನನ್ನ ತಾಯಿತಂತೆಯೇ ಇದ್ದವರು ಕೆಲವರು ಒಗ್ಗಿಕೊಂಡರು, ಕೆಲವರು ಬೇಸತ್ತಿದರು. ಪ್ರತಿಯೊಂದು ವ್ಯಕ್ತಿಗೂ ಭಾವನೆಗಳಿರುತ್ತವೆ ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಅದು ಹೆಚ್ಚು. ಈ ಭಾವನೆಗಳು ಕೇಳುವುದು ಕೇವಲ ಒಂದು ಕಿವಿಯನ್ನು ಮಾತ್ರ. ಕಿವಿಯನ್ನು? ಹೌದು. ನಮಗೆ ಬೇಸರವಾದಗ, ಸಂತೋಷವಾದಗ ಅದನ್ನು ಕೇಳುವ ಎರಡು ಕಿವಿಗಳಿದ್ದರೆ ಸಾಕು. ಮನಸ್ಸು, ಹೃದಯ ಇವೆಲ್ಲವೂ ನಾವು ನೀಡುವ ವಿವರಣೆಗಳು ಮಾತ್ರ.

ನಾನು ಹೇಳುವುದನ್ನು ನೀನು ಕೇಳಿದರೆ ನನಗೆ ಸಮಾಧಾನ. ಅದೊಂದು ರೀತಿಯ ಸಮಾಧಾನ. ನೀನು ನನ್ನನ್ನು ಅಣಕಿಸಬಾರದು, ನನ್ನನ್ನು ಗೇಲಿ ಮಾಡಬಾರದು, ನನ್ನ ಬಗ್ಗೆ ಯಾರೊಂದಿಗೂ ಹೇಳಬಾರದು. ನಿನ್ನ ಪ್ರೀತಿ ಮಮತೆ ಅಕ್ಕರೆ ಇದ್ಯಾವುದು ಬೇಡ ನನಗೆ. ನೀನು ಕೇವಲ ಹೂಂ ಅನ್ನು ಸಾಕು ಅದು ನನಗೆ ಆನೆ ಬಲ ನೀಡುತ್ತದೆ. ಇದು ಎಲ್ಲರ ಮನಸ್ಥಿತಿ. ನನ್ನ ತಾಯಿಯೂ ಹಾಗೆಯೇ ಭಾವನೆಗಳ ಹೊತ್ತು ತಾನು ಬೆಳೆದ ಬಳಗವನ್ನು ಬಿಟ್ಟು ಮದುವೆಯಾಗಿ ನನ್ನೂರಿಗೆ ಬಂದವಳು. ತವರಲ್ಲಿ ಅವಳ ಮಾತಿಗೆ ಓಗೊಡುವ ಕಿವಿಗಳೇನು ಹೃದಯಗಳೇ ಇದ್ದವು, ಅಕ್ಕ, ತಂಗಿ, ಅಪ್ಪ, ಅಮ್ಮ, ತಮ್ಮಂದಿರು, ಅಕ್ಕ ಪಕ್ಕದ ಮನೆಯವರು, ಗೆಳತಿಯರು. ಆದರೇ ಬಂದ ಊರಲ್ಲಿ ಏನಿದೆ? ಹಳ್ಳಿ. ಗಂಡನಿಗೆ ದುಡಿಮೆಯ ಚಿಂತೆ, ತುಂಬಿದ ಮನೆ, ಸಣ್ಣ ಜನ. ಹಳ್ಳಿಗಳೆಂದರೆ ಅದರಲ್ಲಿಯೂ ಒಟ್ಟು ಕುಟುಂಬವನ್ನು ಸಿನೆಮಾದಲ್ಲಿ ತೋರಿಸುವುದೇ ಬೇರೆ ವಾಸ್ತವಿಕತೆಯೇ ಬೇರೆ. ಅದೊಂದು ರೀತಿಯಲ್ಲಿ ಒಬ್ಬರ ತಟ್ಟೆಯನ್ನು ಮತ್ತೊಬ್ಬರು ನೋಡಿ ಅಸೂಯೆಪಟ್ಟು ಊಟ ಮಾಡುವ ದೃಶ್ಯಗಳು ತುಂಬಿದ ಸಿನೆಮಾ.

ಹೃದಯ ವಿಶಾಲತೆಯ ನಡುವೆ ಬೆಳೆದು ಬಂದ ನನ್ನಮ್ಮ. ಈ ಸಣ್ಣ ಜನರ, ಸಣ್ಣ ಮನಸ್ಥಿತಿಯವರ ನಡುವೆ ಕಂಗಾಳಾದಳು. ಅಪ್ಪನೋ ಆ ಕಾಲದಲ್ಲಿ ಬಿಎ ಓದಿದವರು ಉತ್ತಮ ಕೆಲಸ ಸಿಗಬಹುದೆಂದು ನಂಬಿದವರು. ಆದರೇ ಪರಿಸ್ಥಿತಿ ಇಂದಿನಂತೆಯೇ ಇತ್ತು. ಲಂಚ, ಶಿಫಾರಸ್ಸು ಇಲ್ಲದೇ ಕೆಲಸ ಗಿಟ್ಟಿಸುವುದು ಅಸಾಧ್ಯವಾಗಿತ್ತು. ಹೊಲದಲ್ಲಿ ದುಡಿಯಲು ಮನಸ್ಸಿಲ್ಲ ಆದರೇ ವಿಧಿಯಿಲ್ಲ. ಇನ್ನೂ ನನ್ನಮ್ಮನ ಮಾತು ಕೇಳುವ ಸಮಯವೆಲ್ಲಿ, ಭಾವನೆಗಳ ವ್ಯಕ್ತಪಡಿಸುವ ಸ್ವಾತಂತ್ರ್ಯವೆಲ್ಲಿ? ಸುಖವನ್ನೇ ಅನುಭವಿಸಿ ಬೆಳೆದ ನನ್ನಮ್ಮ ಗದ್ದೆ ಕೆಲಸ, ಹೊಲದ ಕೆಲಸಕ್ಕೂ ಹೋದಳು. ನಮ್ಮ ಅಜ್ಜನ ಮನೆ ದೊಡ್ಡ ಮನೆ, ಸಾಕಷ್ಟು ಜಮೀನು ಇಂದಿಗೂ ನನ್ನ ಸೋದರ ಮಾವಂದಿರು ಕೋಟ್ಯಾಧೀಶರು. ಆದರೆ ನನ್ನಜ್ಜಿ ಬಿಎ ಓದಿರುವುದರಿಂದ ಸರ್ಕಾರಿ ಕೆಲಸ ಸಿಗಬಹುದೆಂಬ ಆಸೆಯನ್ನಿಟ್ಟು ಮದುವೆ ಮಾಡಿಕೊಟ್ಟರು. ನನ್ನಜ್ಜನಿಗೆ ಇಷ್ಟವಿರಲಿಲ್ಲ ನನ್ನಮ್ಮನನ್ನು ಹಳ್ಳಿಗೆ ಮದುವೆ ಮಾಡಿಸಲು.

ಇದರ ನಡುವೆ ಮನೆ ವಿಭಾಗವಾಯಿತು. ಜವಬ್ದಾರಿ ಹೆಚ್ಚಾಯಿತೋ ಅಥವಾ ನೆಮ್ಮದಿಯಾಯಿತೋ! ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲವೆನ್ನುವ ಪರಿಸ್ಥಿತಿ. ದಿನದೂಡುತ್ತಾ ಹೋದರು ಕನಸುಗಳ ಬೆನ್ನತ್ತಿಯೋ ಅಥವಾ ನಂಬಿಕೆಯಿಟ್ಟೋ. ಅಪ್ಪನಿಗೆ ದುಡಿದು ತಂದು ಹಾಕುವ ಹೊಣೆ. ದೊಡ್ಡವರ ಮನೆಯಿಂದ ಬಂದವಳು ಕೂಲಿ ಕೆಲಸಕ್ಕೆ ಕಳುಹಿಸಬಾರದು, ತಾನು ಓದಿದವ, ವಿದ್ಯಾವಂತ ಅಡ್ಡದಾರಿ ಹಿಡಿಯಬಾರದು. ಅಷ್ಟೊತ್ತಿಗಾಗಲೇ ಮಲ್ಲಪ್ಪರವರ ಜೊತೆ ಗುರುತಿಸಿಕೊಂಡಿದ್ದರೂ ಎಂದೂ ಯಾವುದಕ್ಕೂ ಕೈಚಾಚಲಿಲ್ಲ. ಮಲ್ಲಪ್ಪನವರೆ ಕರೆದು ಹೋಗಿ ಹಾರಂಗಿ ಇಲಾಖೆಯಲ್ಲಿಯಾದರೂ ಕೆಲಸಕ್ಕೆ ಸೇರು. ಇದು ಸದ್ಯಕ್ಕೆ ಗುತ್ತಿಗೆ ಆಧಾರದ ಕೆಲಸ ಮುಂದೊಂದು ದಿನ ಖಾಯಂ ಆಗಬಹುದೆಂದರು. ಆದಿನ ಅವರ ಸಂಬಳ ತಿಂಗಳಿಗೆ 91 ರೂಪಾಯಿಗಳು. ಮಲ್ಲಪ್ಪರವರ ಜೊತೆಯಲ್ಲಿದ್ದವರೆಲ್ಲರೂ ಕಾಂಟ್ರ್ಯಾಕ್ಟ್‍ದಾರರಾದರು ಕೆಲವರು ಅವರನ್ನೇ ತುಳಿದು ರಾಜಕೀಯದಲ್ಲಿ ಮುಂದೆ ಬಂದರು. ಇರಲಿ, ನಮ್ಮಪ್ಪ ಹಾಕಿದ ಹೆಜ್ಜೆಯ ಬಹುಶಃ ನನ್ನನ್ನು ನೀತಿವಂತನಾಗಿಸಿದೆ. ನಮ್ಮಪ್ಪನಿಗೆ ದುಡಿಯುವುದೇ ಚಿಂತೆ ನಮ್ಮಮ್ಮನಿಗೆ ನನ್ನನ್ನು ಸಲುಹಬೇಕು. ಗದ್ದೆಯ ಕೆಲಸವನ್ನೂ ಮಾಡಬೇಕು. ನಮ್ಮಪ್ಪ ಬಹಳ ಸ್ವಾಭಿಮಾನಿ ಮತ್ತು ಮುಂಗೋಪಿ ಕೂಡ.

ನಮ್ಮಮ್ಮ ಅದೆಷ್ಟು ಸಹನಾಮೂರ್ತಿಯೆಂದರೆ ಅವರು ಯಾರೊಂದಿಗೂ ಜಗಳವಾಡಿದ್ದನ್ನು ಕಂಡಿಲ್ಲ. ಎಲ್ಲರನ್ನೂ ಬಹಳ ಅಕ್ಕರೆಯಿಂದ ಪ್ರೀತಿಯಿಂದ ಕಾಣುತ್ತಾರೆ. ನಮ್ಮದು ಊರೋಳಗೆ ಹಳೆಯ ಮನೆಯಿತ್ತು. ಆ ಬೀದಿಯಲ್ಲಿರುವಾಗ ನಮ್ಮ ಬೀದಿಯ ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದರು. ಆ ದಿನಗಳೇ ಬೇರೆ. ನಾವೆಲ್ಲರೂ ಒಂದೇ ಮನೆಯವರಂತೆ ಬೆಳೆದೆವು. ಅಲ್ಲಿ ಹಿರಿಯ ಕಿರಿಯ ಮಕ್ಕಳಿದ್ದರೂ ಯಾರೂ ಜಗಳವಾಡುತ್ತಿರಲಿಲ್ಲ. ಕೆಲವರು ನಮ್ಮ ಸಹಾಯದಿಂದ ಇಂದು ಉನ್ನತ ಹುದ್ದೆಯಲ್ಲಿದ್ದಾರೆ ಅವರಿಗೆ ಅದೆಲ್ಲವೂ ನೆನಪಿಲ್ಲ ಅಥವಾ ಅದೇನೂ ಮಹಾವೆನಿಸಿರಬಹುದು. ನಮ್ಮಮ್ಮ ನಮಗೆ ಇಲ್ಲದ ಕಾಲದಲ್ಲಿಯೂ ಬೇರೆಯವರಿಗೆ ನೀಡಿದ್ದಾರೆ. ಇದು ನನ್ನೊಳಗೆ ನನಗೆ ತಿಳಿಯದೇ ಬಂದಿರುವ ಗುಣ. ನಾನೂ ಅನೇಕ ಬಾರಿ ಯೋಚಿಸಿದ್ದೇನೆ, ನನ್ನ ಬಳಿಯೇ ಇಲ್ಲ ನಾನೇಕೆ ಬೇರೆಯವರಿಗೆ ಸಹಾಯ ಮಾಡಲು ಹಾತೊರೆಯುತ್ತಿದ್ದೇನೆಂದು. ಇದಕ್ಕೆ ಕಾರಣ ನನ್ನ ತಾಯಿ.

ಇದೆಲ್ಲವೂ ನಿಮಗೆ ಕೇವಲವೆನಿಸಬಹುದು. ಆದರೇ ಮೌಲ್ಯಗಳು ಎಂದಾಗ ಹೆಚ್ಚೆನಿಸುತ್ತದೆ. ಹಲವಾರು ರಾತ್ರಿಗಳು ನನಗಿನ್ನೂ ನೆನಪಿವೆ. ರಾತ್ರಿ ಊಟ ಮಾಡುವ ಸಮಯದಲ್ಲಿ ಅಮ್ಮ ಮೊಸರಲ್ಲಿಯೋ ಮಜ್ಜಿಗೆಯಲ್ಲಿಯೋ ಊಟ ಮಾಡಿದ್ದು. ನಾನು ಕೆಲವೊಮ್ಮೆ ರೇಗಿದ್ದು ಇದೆ. ಅಲ್ಲಮ್ಮ ನೀವು ಅವರ ಮನೆಗೆ ಸಾರು ಕೊಟ್ಟು ನೀವ್ಯಾಕೆ ಮೊಸರಲ್ಲಿ ಊಟ ಮಾಡೋದು ಅಂತಾ? ಆಗೆಲ್ಲಾ ನಮ್ಮಮ್ಮ ಅಯ್ಯೋ ಪಾಪಾ ಸಾರು ಮಾಡಿರಲಿಲ್ಲವಂತೆ ಬಿಡು. ಒಂದೊತ್ತು ಮೊಸರಲ್ಲಿ ಉಂಡರೇನು ಎಂದಿದ್ದಾರೆ. ನನಗೆ ಮೊದಲೆಲ್ಲಾ ಸಹಾಯದ ಕಲ್ಪನೆಯಿದ್ದದ್ದು ಹಾಗೆಯೇ. ಮೊದಲು ನಾವು ಚೆನ್ನಾಗಿದ್ದು ನಂತರ ಬೇರೆಯವರಿಗೆ ಸಹಾಯ ಮಾಡಬೇಕೆಂದು. ಆದರೆ ಅದು ಇಂದಿಗೂ ಯಶಸ್ವಿಯಾಗಿಲ್ಲ. ನಾನು ಸಹಾಯ ಮಾಡುವುದನ್ನು ನಿಲ್ಲಿಸಿಲ್ಲ ಅದರ ಜೊತೆಗೆ ನನ್ನ ಸಮಸ್ಯೆಗಳು ಪರಿಹಾರವಾಗಿಲ್ಲ. ಆದರೂ ಕೈಲಾದ ಸಹಾಯ ಮಾಡಬೇಕೆಂದು ಹಾತೊರೆಯುತ್ತದೆ ಮನಸ್ಸು ಇದೆಲ್ಲವೂ ನನ್ನಮ್ಮನಿಂದ ಬಂದ ಬಳುವಳಿ ಎನಿಸಿದೆ ನನಗೆ.

ಅಮ್ಮನೊಂದಿಗೆ ನಾನು ಕಳೆದ ದಿನಗಳು ಮಹತ್ವದವು. ಅವು ಪ್ರಮುಖವಾಗಿ ನನ್ನ ಬಾಲ್ಯದ ದಿನಗಳು, ಅಂದರೆ ಪ್ರೈಮರಿ ಮತ್ತು ಹೈಸ್ಕೂಲ್ ದಿನಗಳು. ಅಮ್ಮನೊಂದಿಗೆ ನಾನು ಗೋಮಾಳದಲ್ಲಿ ಸೌದೆ ಪುರಳೆಗಳನ್ನು ಆಯ್ದ ದಿನಗಳ ನೆನಪಿದೆ. ಅದೆಲ್ಲವನ್ನು ನನ್ನ ಹಳೆಯ ಬರಹಗಳಲ್ಲಿ ಬರೆದಿದ್ದೇನೆ ಆದರೂ ಅದನ್ನೊಮ್ಮೆ ಮೆಲುಕು ಹಾಕಿದರೆ ತಪ್ಪಿಲ್ಲವೆಂದು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ನನ್ನ ತಾಯಿ ಅದೆಂತಹ ಸಂಯಮ ದೇವತೆಯೆಂದರೆ ನನಗೆ ಆಶ್ಚರ್ಯವಾಗುತ್ತದೆ. ನನ್ನನ್ನು ಹೆತ್ತು ಹೊತ್ತು ಬೆಳೆಸಿದ ನನ್ನ ತಾಯಿ ನನ್ನನ್ನು ಕೇಳುತ್ತಾಳೆ, ನಿನಗೆ ಬೇಜಾರಿಲ್ಲವೆಂದರೆ ಒಂದು ಮಾತು ಹೇಳಬೇಕು ಅಂತಾ? ಏನಮ್ಮಾ? ಏನಿಲ್ಲಾ ಮುಂದಿನ ಸಲ ಬರುವಾಗ ಮನೆಗೆ ಮನೆ ಒರೆಸುವ ಕಡ್ಡಿಯನ್ನು ತರಬಹುದೇ? ಮೈಬಗ್ಗಿ ಒವರೆಸಲು ಕಷ್ಟವಾಗುತ್ತದೆ, ಅಣ್ಣನನ್ನು ಕೇಳಿದರೆ ತರುವುದಿಲ್ಲ. ಅಣ್ಣ ತರುವುದಿಲ್ಲವೆಂದಲ್ಲ, ಕೇಳಲು ಮನವೊಪ್ಪುವುದಿಲ್ಲ, ಮತ್ತೊಂದು ಮಗನು ತಂದರೇ! ಎನ್ನುವ ಪ್ರೀತಿ.

ಇದು ಕೇವಲ ನನ್ನಮ್ಮನ ಪ್ರೀತಿಯ ಮಾತಲ್ಲ. ನಿಮ್ಮೆಲ್ಲರ ಅಮ್ಮಂದಿರನ್ನು ಗಮನಿಸಿ. ಅವರೆಲ್ಲರೂ ಹಾಗೆ ಇರೋದು. ತನಗಿಲ್ಲದೇಯಿದ್ದರೂ ಹಸಿದವರಿಗೆ ಮೊದಲು ಕೊಡುವುದು ಅವರ ಪ್ರೀತಿ. ನೀವು ಈ ದಿನ ವಿಶ್ವ ಮಹಿಳಾ ದಿನಾಚರನೆಯನ್ನು ಆಚರಿಸುತ್ತಿದ್ದೇವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸಂದೇಶವನ್ನು ನೋಡಿ, ಬಹುತೇಕ ಸಂದೇಶಗಳು ಮಹಿಳೆಯೆಂದರೇ ಕೇವಲ ತಾಯಿ ಮಾತ್ರವೆನ್ನುವಂತಿವೆ. ಇದರಲ್ಲಿ ತಪ್ಪೇನು ಇಲ್ಲ. ಏಕೆಂದರೆ ನಾವು ನಮ್ಮ ತಾಯಿಯನ್ನು ನೋಡಿಯೇ ಹೆಣ್ಣೆಂದರೇ ನನ್ನ ತಾಯಿ ಮತ್ತು ತಾಯಿ ಮಾತ್ರವೆನ್ನುವಂತೆ ಬೆಳೆದೆವು. ಹೆಣ್ಣನ್ನು ಏನೆಲ್ಲಾ ರೀತಿಯಲ್ಲಿ ಹೊಗಳಿದರೋ ಅದೆಲ್ಲವೂ ನಮ್ಮ ತಾಯಂದಿರಲ್ಲಿದೆ. ಆದ್ದರಿಂದ ಹೆಣ್ಣೆಂದರೆ ತಾಯಿ, ತಾಯಿ ಎಂದರೆ ಹೆಣ್ಣವಂತಿದೆ.

ಈ ದಿನಕ್ಕೂ ನಮ್ಮಮ್ಮ ಒಂದು ವಾರದಲ್ಲಿ ಮೂರ್ನಾಲ್ಕು ದಿನಗಳು ಪೂಜೆ ಪುನಸ್ಕಾರವಾಗುವ ತನಕ ತಿನ್ನುವುದಿಲ್ಲ. ಹಸಿವಿದ್ದು ಪೂಜೆ ಮಾಡುವುದರ ಕಷ್ಟ ನನಗೆ ಅರಿವಿದೆ. ವರ್ಷಕ್ಕೊಮ್ಮೆ ನಾನು ಉಪವಾಸವಿರುವುದುಂಟು. ಮನೆಗೆ ಅದೆಷ್ಟೆ ಜನರು ಬರಲಿ ತಾಳ್ಮೆಯಿಂದ ಅವರಿಗೆಲ್ಲರಿಗೂ ಉಪಚರಿಸುತ್ತಾಳೆ. ನಮ್ಮಲ್ಲಿ ಅಂದರೆ ಗೌಡರಲ್ಲಿ ಮಾಂಸ ಮಾಡದೇ ಬಂದವರನ್ನು ಕಳುಹಿಸುವುದಿಲ್ಲ. ಅದರಲ್ಲಿಯೂ ನದಿ ದಂಡೆಯ ಊರಾಗಿರುವುದರಿಂದ ಬಂದವರು ಮೀನನ್ನು ಇಷ್ಟಪಡುತ್ತಾರೆಂದು ಮೀನು ಮಾಡುವುದು, ನಮ್ಮಲ್ಲಿ ಒಳ್ಳೆಯ ದೇಸಿ ತಳಿ ಆಡು/ಮೇಕೆ ಸಿಗುತ್ತದೆಯೆಂದು ಮೇಕೆ ಮಾಂಸ, ಜೊತೆಗೆ ಕೋಳಿ ಫ್ರೈ ಚೆನ್ನಾಗಿರುತ್ತದೆಯೆಂದು ಅದನ್ನು ಮಾಡುವುದು. ಒಮ್ಮೊಮ್ಮೆ ನಾನೇ ರೇಗುತ್ತೇನೆ. ಮಾಡೋಕೆ ಕೆಲಸವಿಲ್ಲವೇ, ಇದೆಲ್ಲವನ್ನು ಮಾಡಬೇಕಾ? ಎಂದು. ನಮ್ಮಪ್ಪನೂ ಹಾಗೆಯೇ ಅವರಿಗೆ ಮನೆಗೆ ಯಾರಾದರೂ ಬಂದರೇ ಅವರಿಗ ಉಪಚರಿಸುವುದರಲ್ಲಿ ಅದೇನೋ ಒಂದು ಬಗೆಯ ಖುಷಿ. ನಾನು ನಮ್ಮ ಹಳೆಯ ಮನೆ ಬಹಳ ಚಿಕ್ಕ ಮನೆಯಾಗಿತ್ತು ಆ ದಿನಗಳಲ್ಲಿಯೂ ಅಷ್ಟೆ, ಹಬ್ಬಯೆಂದರೆ ಕನಿಷ್ಟ ನೂರು, ನೂರೈವತ್ತು ಜನರು ಬರುತ್ತಿದ್ದರು. ಅವರೆಲ್ಲರಿಗೂ ಸಂತೋಷದಿಂದಲೇ ಉಪಚರಿಸುತ್ತಿದ್ದಳು ನನ್ನಮ್ಮ.

ನಮ್ಮದು ಕೆಳ ಮಧ್ಯಮ ವರ್ಗ ನನ್ನ ತಂದೆ ಶ್ರಮಜೀವಿ, ನಿಷ್ಠಾವಂತ. ನಮ್ಮ ತಾಯಿ ಹೃದಯವಂತೆ. ಇವರ ಒಳ್ಳೆಯತನ ಮತ್ತು ಒಳ್ಳೆಯ ಗುಣ ಮತ್ತು ಅವರು ಮಾಡಿದ ದಾನ ಧರ್ಮವೇ ನನ್ನನ್ನು ಬೆಳೆಸಿದೆಯೆಂದರೆ ತಪ್ಪಿಲ್ಲ. ಈ ಜೀವನ ಅವರಿಬ್ಬರ ಶ್ರಮದ ಫಲ. ನೀವು ಗಮನಿಸಿ ನೋಡಿ, ನಾವು ಯಾವುದಾದರೂ ಕಾರ್ಯಕ್ರಮವಾದಾಗ ಸುಸ್ತಾಗಿದೆಯೆಂದು ಬೇಗ ಮಲಗುತ್ತೇವೆ. ಆದರೇ, ಕೊನೆಯಲ್ಲಿ ಮಲಗುವುದು ಅಮ್ಮ, ಬೇಗ ಏಳುವುದು ಅಮ್ಮ. ಬಂದವರೆಲ್ಲರನ್ನೂ ವಿಚಾರಿಸಿಕೊಳ್ಳುವುದು ಅಮ್ಮ. ಅಮ್ಮ ನಾನು ಮನೆಗೆ ತಡವಾಗಿ ಬಂದರೆ ಬೈಯುತ್ತಾಳೆ ಅದಕ್ಕೆ ಮೊದಲ ಕಾರಣ ಎಷ್ಟೊತ್ತಲ್ಲಿ ಊಟ ಮಾಡೋದು ಅಂತಾ. ಅಂದರೆ ನಾನು ಊಟ ಮಾಡಿಲ್ಲವಲ್ಲವೆಂಬುದು ಅವಳ ಕೊರಗು. ನಾನು ಕೆಲಸ ಮಾಡುವ ಶೈಲಿಯೇ ವಿಚಿತ್ರ. ಏಕೆಂದರೆ ನನ್ನ ಕೆಲಸ ನನ್ನ ತಲೆಯನ್ನು ನಂಬಿರುತ್ತದೆ. ಅದಕ್ಕೆ ನೆಮ್ಮದಿ ಮತ್ತು ಮನಸ್ಸಿದ್ದಾಗ ಮಾತ್ರ ಮಾಡಬೇಕು. ಒಮ್ಮೊಮ್ಮೆ ಮುಂಜಾನೆ ನಾಲ್ಕಕ್ಕೆ ಎದ್ದು ಬರೆಯತೊಡಗುತ್ತೇನೆ. ಒಮ್ಮೊಮ್ಮೆ ಕೆಲಸದಲ್ಲಿ ಮಗ್ನನಾಗಿ ಮಧ್ಯಾಹ್ನ ಮೂರಾದರೂ ಏನನ್ನು ತಿಂದಿರುವುದಿಲ್ಲ. ಆಗೆಲ್ಲಾ ನಮ್ಮಮ್ಮ ನಾನೆಷ್ಟೇ ರೇಗಿದರೂ ಹಟಕ್ಕೆ ಬಿದ್ದವಳಂತೆ ತಿನ್ನಿಸಿಯೇ ಕೆಲಸ ಮಾಡಲು ಬಿಡುವುದು.

ಇದು ನನಗೆ ಮಾತ್ರ ಮಾಡುತ್ತಾಳಾ? ಇಲ್ಲಾ ನನ್ನಪ್ಪನಿಗೂ ಅಷ್ಟೆ. ಮೊದಲು ತಿನ್ನಬನ್ನಿ ಅಮೇಲೆ ಕೆಲಸ ಮಾಡಿದರಾಯ್ತು. ಎನ್ನುತ್ತಾಳೆ. ಅಮ್ಮಾ ನಿಮ್ಮದು ಆಯ್ತಾ? ನೀವು ತಿಂದಿರಾ? ಎಂದರೆ, ಸಂಪೂರ್ಣ ನಿಶಬ್ದ. ನನ್ನ ಬಾಲ್ಯದ ದಿನಗಳನ್ನು ಬರೆಯಲು ಹೊರಟು ಬೇರೇನೋ ಹೇಳಿದೆ. ಎಲ್ಲವೂ ನನ್ನ ಜೀವನವೇ ಅಲ್ಲವೇ ಎಲ್ಲವನ್ನು ತಿಳಿದುಕೊಳ್ಳಿ ತಪ್ಪೇನು? ನನ್ನ ಬಾಲ್ಯದಲ್ಲಿ ನಮ್ಮಮ್ಮನಿಗೆ ನಾನೇ ಹೆಣ್ಣು ಮಗಳು ನಾನೇ ಗಂಡು ಮಗ. ನಮ್ಮಮ್ಮ ಬಹಳ ಸ್ವಚ್ಚತೆಯನ್ನು ಇಷ್ಟಪಡುವ ಮತ್ತು ಪಾಲಿಸುವ ತಾಯಿ. ಒಂದು ಚೂರು ಧೂಳಿರಬಾರದು. ಪಾತ್ರೆಗಳು ಹೊಳೆಯುತ್ತಿರಬೇಕು. ನನಗೆ ಇಂದಿಗೂ ಬಹಳ ಖುಷಿ ಕೊಡುವುದು ನನ್ನಮ್ಮ ನೀಲಿ ಹಾಕಿರುವ ಬನಿಯನ್ ಹಾಕಿಕೊಳ್ಳುವಾಗ. ಅದನ್ನು ನಾನು ಅನೇಕ ಬಾರಿ ಅಮ್ಮನಿಗೆ ಹೇಳಿದ್ದೇನೆ ಕೂಡ. ಅಮ್ಮ ನೀವು ನೀಲಿ ಹಾಕಿರುವ ಬನಿಯನ್ ಹಾಕೋದೆ ಒಂದು ರೀತಿಯ ಖುಷಿಯೆಂದು. ನಾವು ಬಟ್ಟೆ ತೊಳೆಯಲು ಎರಡು ಮೈಲಿ ದೂರ ನದಿ ದಂಡೆಗೆ ಹೋಗಬೇಕು. ಅಲ್ಲಿ ಚೆನ್ನಾಗಿರುವ ಕಲ್ಲಿಗೆ ಪೈಪೋಟಿ. ನಮ್ಮಮ್ಮ ಮುಂಜಾನೆ ಐದು ಗಂಟೆಗೆ ನನ್ನನ್ನು ಎಬ್ಬಿಸಿಕೊಂಡು ಹೊಗುತ್ತಿದ್ದಳು. ಅವರ ಬಾಲ್ಯದ ದಿನಗಳನ್ನು ನನ್ನೊಂದಿಗೆ ಹಂಚಿಕೊಂಡು. ಅವಳ ಕಷ್ಟ ಕಾರ್ಪಣ್ಯಗಳನ್ನು ಹೇಳುತ್ತಿದ್ದಳು, ಅವಳ ಕಣ್ಣೋದ್ದೆಯಾಗುವುದು ನನಗೆ ತಿಳಿಯುತ್ತಿತ್ತು. ಆದರೇ ನಾನೇನು ಮಾಡಲು ಸಾಧ್ಯ?

ನನಗೆ ಆ ಸಮಯದಲ್ಲಿ ಒಂದು ಧರ್ಮ ಸಂಕಟ. ಮುಂಜಾನೆ ಐದಕ್ಕೆ ಹೋಗುವುದು ಓಕೆ ಆದರೆ ಬರುವಾಗ ಎಂಟೋ ಒಂಬತ್ತೋ ಆಗಿರುತ್ತಿತ್ತು. ತಲೆಯ ಮೇಲೆ ಮಂಕ್ರಿಯನ್ನೋ, ಬೋಸಿಯನ್ನೋ ಹೊತ್ತುಕೊಂಡು ಊರೊಳಗೆ ಬರಬೇಕು. ಹೆಣ್ಣು ಮಕ್ಕಳು ನನ್ನನ್ನು ನೋಡುತ್ತಾರೆ. ಮುಜುಗರ. ಆದರೆ ನನ್ನಮ್ಮ ಮುಗ್ಧೆ ಅವಳಿಗೆ ಅದ್ಯಾವುದು ತಿಳಿಯುವುದಿಲ್ಲ. ಕೆಲವು ಅಮ್ಮಂದಿರು ಹಾಗೆಯೇ ಅವರಿಗೆ ಎಂದಿಗೂ ತನ್ನ ಮಕ್ಕಳು ಚಿಕ್ಕ ಮಕ್ಕಳಂತೆಯೇ ಎಂದು ಭಾವಿಸುತ್ತಾರೆ. ಹತ್ತನೆ ವಯಸ್ಸಿನ ಮಗುವನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಅದೇ ರೀತಿ ನೋಡಿಕೊಳ್ಳುತ್ತಾರೆ, ಅದೇ ರೀತಿ ಮಾತನಾಡಿಸುತ್ತಾರೆ. ಅವರಲ್ಲಿ ಸ್ವಲ್ಪವೂ ಬದಲಾಗಿರುವುದಿಲ್ಲ. ನಾನು ಮದುವೆಯಾಗಿ ನಾಲ್ಕು ವರ್ಷವಾಗಿದೆ ಮಗಳು ಇದ್ದಾಳೆ, ಆದರೆ ಇಂದಿಗೂ ನಾನು ಊರಿಗೆ ಹೋದಾಗ ಗಡ್ಡ ತೆಗೆಸಿಲ್ಲವಾದರೇ ಗದರುತ್ತಾರೆ. ಶೇವ್ ಮಾಡಿಸಿಕೋ ಎನ್ನುತ್ತಾರೆ. ಅವರಿಗೆ ನಾವು ಗಡ್ಡ ಬಿಡುವುದು ಸ್ಟೈಲ್ ಎಂಬುದು ಒಪ್ಪುವುದಿಲ್ಲ. ನಾನು ಇತ್ತೀಚೆಗೆ, ಸೀಕೋ ಸಂಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ನಂತರವಷ್ಟೆ ಫಾರ್ಮಲ್ಸ್ ಹಾಕುತ್ತಿರುವುದು, ಮುಂಚೆ ಎಲ್ಲಾ ಯಾವುದೋ ಜುಬ್ಬಾ ಇನ್ಯಾವುದೋ ಜೀನ್ಸ್ ಹಾಕಿ ಸುತ್ತಾಡುತ್ತಿದ್ದೆ. ನನ್ನಮ್ಮ ದಿನ ನಿತ್ಯ ನನಗೆ ಉಪದೇಶ ನೀಡುತ್ತಿದ್ದರು. ಅದೆಷ್ಟರ ಮಟ್ಟಿಗೆ ಎಂದರೇ ನಿಮ್ಮಪ್ಪ ಇರುವಷ್ಟು ನೀಟಾಗಿ ನೀನು ಇರುವುದಿಲ್ಲವಲ್ಲವೆಂದು. ಅಂದರೆ ನನ್ನ ತಾಯಿಯ ಮುಗ್ಧತೆ ಹಾಗೆಯೇ ಉಳಿದಿದೆ.

ನಾನು ನನ್ನ ಸ್ನೇಹಿತರ ಅನೇಕ ತಾಯಂದಿಯರನ್ನು ನೋಡಿದ್ದೇನೆ. ಅವರಲ್ಲಿ, ಕೆಲವರು ತಮ್ಮ ಮಕ್ಕಳು ವಯಸ್ಸಿಗೆ ಬಂದ ನಂತರ ಹೆಚ್ಚು ಗೌರವವನ್ನೋ ಮರ್ಯಾದೆಯನ್ನೋ ನೀಡುವಂತೆ ಕಾಣಿಸುತ್ತದೆ. ಅದರಲ್ಲಿ ತಪ್ಪಿಲ್ಲ. ಆದರೇ ಕೆಲವು ತಾಯಂದಿರು ಮಕ್ಕಳಿಗೆ ಹೆದರುವುದು ಇದೆ. ನನ್ನಜ್ಜಿಯೇ ಅದಕ್ಕೊಂದು ಉದಾಹರಣೆ. ಅವರು ಒಮ್ಮೊಮ್ಮೆ ನನ್ನೊಂದಿಗೆ ಕೆಲವೊಂದು ವಿಷಯವನ್ನು ನೇರವಾಗಿ ಹೇಳದೇ ಪೀಠಿಕೆ ಹಾಕಿ ಹೇಳುತ್ತಾರೆ. ಆ ಸಮಯದಲ್ಲಿ ನಾನು ಹೇಳುವುದು ಅವ್ವಾ ನೀನು ಬೇರೆ ಮೊಮ್ಮೊಕ್ಕಳ ಜೊತೆ ಹಾಗೆ ಮಾತನಾಡು. ನನ್ನ ಬಳಿಯಲ್ಲಿ ಬೇಡ, ನೇರವಾಗಿ ಹೇಳು. ನೀನು ಎತ್ತಿ ಆಡಿಸಿ ಬೆಳೆಸಿದ ಮಗು ನಾನು ಎಂದು. ಸ್ನೇಹಿತರೆ, ಜೀವನದಲ್ಲಿ ಪ್ರತಿಯೊಬ್ಬನ ಪಾತ್ರವೂ ಮುಖ್ಯ. ಕೇವಲ ಕಛೇರಿಗೆ ಹೋಗಿ ಹಣ ಸಂಪಾದನೆ ಮಾಡಿದರೆ ಮಾತ್ರ ದುಡಿಮೆಯಲ್ಲ. ಮನೆಯಲ್ಲಿ ಮಾಡುವುದು ದುಡಿಮೆಯೆ. ಹಾಗೆಯೇ ನಮ್ಮನ್ನು ಬೆಳೆಸಲು ನಮ್ಮ ತಂದೆ ತಾಯಂದರು ದುಡಿದರು. ಈಗ ನಾವು ದುಡಿಯಬೇಕು, ನಾಳೆ ನಮ್ಮ ಮಕ್ಕಳು. ಇದು ಅವರವರ ಕರ್ತವ್ಯ ಅಷ್ಟೆ. ಸನ್ನಿವೇಶಗಳು ಬದಲಾಗುತ್ತವೆ, ಉದ್ದೇಶವೊಂದೆ.

ನಮ್ಮ ಜೀವನವನ್ನು ತಿದ್ದುವಲ್ಲಿ, ಸ್ನೇಹಿತೆಯರ/ಗೆಳತಿಯರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ನೀವು ಹೆಚ್ಚು ಹೆಣ್ಣು ಮಕ್ಕಳನ್ನು ಸ್ನೇಹಿತೆಯರಾಗಿ ಪಡೆದಿದ್ದರೆ, ನಿಮಗೆ ತಿಳಿಯದೆ ಹೆಣ್ಣು ಮಕ್ಕಳನ್ನು ಗೌರವಿಸುವುದು, ಸಭ್ಯಸ್ಥರಾಗಿ ಬದುಕುವುದು ಬರುತ್ತದೆ. ನನ್ನ ಎಂಎಸ್ಸಿ ಜೀವನದಲ್ಲಿ ಹೆಣ್ಣು ಮಕ್ಕಳು ಹೆಚ್ಚಿದ್ದರು. ನಾವು ಹದಿನೆಂಟು ಜನ ವಿದ್ಯಾರ್ಥಿಗಳಿದ್ದರೆ ಹುಡುಗಿಯರು ಹನ್ನೆರಡು ಜನರಿದ್ದರು. ಅವರೊಂದಿಗೆ ಬೆರೆತಾಗಿನಿಂದ ನನಗೆ ತಿಳಿಯದೇ ಹೆಣ್ಣು ಮಕ್ಕಳಿಗೆ ಗೌರವ ನೀಡುವುದು ಬಂತು. ಅದಕ್ಕೂ ಮುಂಚೆ ನನ್ನ ಬಿಎಸ್ಸಿ ಜೀವನದಲ್ಲಿಯೂ ನನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಆದರೆ, ಪಿಯುಸಿ ಜೀವನದಲ್ಲಿ ನಾನು ಈಗಿರುವಷ್ಟರ ಮಟ್ಟಿಗೆ ಸೂಕ್ಷ್ಮತೆಯಿರಲಿಲ್ಲವೆನಿಸುತ್ತೆ. ಈಗ ನನ್ನ ಪಿಯುಸಿ ಗೆಳತಿಯರೆಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ ಮತ್ತು ಅಚ್ಚರಿಯನ್ನು ತಿಳಿಸುತ್ತಾರೆ. ನೀನು ಪಿಯುಸಿಯಲ್ಲಿ ಹೇಗಿದ್ದೆ. ಈಗ ಅದೆಷ್ಟು ಬದಲಾವಣೆಯೆಂದು. ಆ ಸಮಯದಲ್ಲಿ ಸ್ವಲ್ಪ ಒರಟು ಸ್ವಭಾವದವನು ನಾನು. ಕಾಲೇಜಿಗೆ ಚಕ್ಕರ್ ಹಾಕಿ ಬೆಟ್ಟ ಗುಡ್ಡ ಹತ್ತುವುದೇ ಖಯಾಲಿಯಾಗಿತ್ತು. ಸಾಲದಕ್ಕೆ ಸಿಗರೇಟು ಸೇದುವುದೊಂದು ಒಳ್ಳೆಯ ಗುಣ ಸೇರಿತ್ತು. ಇದಕ್ಕೆ ಎರಡು ಕಾರಣಗಳು. ಮೊದಲನೆಯದಾಗಿ ನನ್ನ ವಯಸ್ಸು ಮತ್ತು ಎರಡನೆಯದಾಗಿ ಊರಿನ ಹಿನ್ನಲೆಯೂ ಇರಬಹುದು. ಹಳ್ಳಿಗಳಲ್ಲಿ ಹೆಣ್ಣನ್ನು ಅದರಲ್ಲಿಯೂ ವಯಸ್ಸಿನ ಹುಡುಗರು ಹೆಣ್ಣುಮಕ್ಕಳ ಕುರಿತು ಅಂಥಹ ಉತ್ತಮ ಭಾವನೆಗಳನ್ನು ಹೊಂದಿಲ್ಲವೆನ್ನುವುದು ಇಂದಿಗೂ ನನ್ನ ಅನುಭವ. ಅದೇನೆ ಇರಲಿ ಅವರನ್ನು ಪುಸ್ತಕಗಳಿಗೆ ಒರೆ ಹಚ್ಚಿದರೆ ಮಾತ್ರ ಸುಧಾರಣೆ ತರಬಹುದೆಂಬುದು ನನ್ನ ನಂಬಿಕೆ. ಪುಸ್ತಕಳು ನಮಗೆ ತಿಳಿಯದೇ ನಮ್ಮನ್ನು ಸಭ್ಯಸ್ಥರಾನ್ನಾಗಿಸುತ್ತವೆ.

ಗೆಳತಿಯರ ವಿಷಯಕ್ಕೆ ಬಂದಾಗ ನನ್ನ ಪಿಎಚ್‍ಡಿಯಲ್ಲಿ ಪವಿತ್ರಳ ಪಾತ್ರವೂ ದೊಡ್ಡದಿದೆ. ಪವಿತ್ರ ಅವರ ಅಮ್ಮ ಇಂದಿಗೆ ನಮ್ಮೊಂದಿಗಿಲ್ಲ. ಆದರೇ, ನಾನು ಎಂಎಸ್ಸಿ ದಿನಗಳಿಂದ ಇತ್ತೀಚಿನ ಅಂದರೆ 2012-13 ರ ತನಕವೂ ಅವರಿಗೆ ಫೋನ್ ಮಾಡಿ ಮನೆಗೆ ಬರ್ತಾ ಇದ್ದೀನಿ, ಚಿಕನ್ ಮಾಡಿ, ಬಿರ್ಯಾನಿ ಮಾಡಿ ಎಂದು ಹೇಳಿ ಮಾಡಿಸಿಕೊಂಡು ತಿಂದು ಬರುತ್ತಿದ್ದೆ. ಅವರು ಬೆಂಗಳೂರು ವಿವಿಗೆ ಬರುವಂತಿದ್ದರೆ ನನಗಿಷ್ಟವೆಂದು ಬಿರ್ಯಾನಿ ಮಾಡಿ ತರುತ್ತಿದ್ದರು. ಆ ನಿಸ್ವಾರ್ಥ ಸೇವೆ, ಮಮತೆಯೇ ಹೆಣ್ಣನ್ನು ಅತಿ ಎತ್ತರಕ್ಕೆ ಕೂರಿಸಿದೆ. ಈಗಲೂ ನನ್ನ ಅನೇಕಾ ಎಂಎಸ್ಸಿ ಗೆಳತಿಯರು ಸಲಹೆ ಸೂಚನೆಗಳಿಗೆ ಕರೆ ಮಾಡುತ್ತಾರೆ, ಅವರ ಮನದೊಳಗೆ ನಾನು ಒಬ್ಬ ಅಣ್ಣನೋ ತಮ್ಮನೋ ಆಗಿ ಅವರಿಗೆ ನೆರವಾಗಬಹುದೆಂಬ ಭರವಸೆಯನ್ನು ಮೂಡಿಸಿರುವುದು ಹೆಮ್ಮೆಯ ಸಂಗತಿ.

ಜೀವನದಲ್ಲಿ ಬರುವ ಮತ್ತೊಬ್ಬ ಪ್ರಮುಖಳೆಂದರೆ ಅದು ಹೆಂಡತಿ. ಅಮ್ಮನ ಸ್ಥಾನವನ್ನು ತುಂಬುವವಳೇ ಹೆಂಡತಿ. ಹೆಂಡತಿಯೇ ತಾಯಿಯಾಗಿ, ತಾಯಿಯ ಪಾತ್ರವನ್ನು ಮುಂದುವರೆಸುತ್ತಾ ಹೋಗುತ್ತಾಳೆ. ನನ್ನ ಹೆಂಡತಿ ಮಾಡುವ ಶೇ.10ರಷ್ಟು ಕೆಲಸವನ್ನು ನಾನು ಮಾಡುವುದಿಲ್ಲ. ಅವಳು ಎಲ್ಲವನ್ನೂ ನಿಭಾಯಿಸುವ ರೀತಿ ಹೆಮ್ಮೆ ಎನಿಸುತ್ತದೆ. ನನ್ನ ಈ ದಿನದ ಯಶಸ್ವಿಗೆ ಅಥವಾ ಅಲ್ಪ ಸ್ವಲ್ಪ ಹೆಸರಿಗೆ ನನ್ನ ಹೆಂಡಿತಿಯ ಕೊಡುಗೆ ಅಪಾರ. ನಾನು ಎರಡು ವಾರದ ನನ್ನ ಮಗಳನ್ನು ಬಿಟ್ಟು ಒಂದು ತಿಂಗಳು ರಾಜಾಸ್ಥಾನಕ್ಕೆ ಹೋಗಿದ್ದೆ. ಈಗಲೂ ನನ್ನ ಮಗಳು ಆರು ತಿಂಗಳ ಕೂಸು, ಆದರೇ ನನ್ನ ಹೆಂಡತಿ ಸಂಸಾರವನ್ನು ಸಲಹುತ್ತಿರುವುದರಿಂದ ನಾನು ಸುತ್ತಾಡುತ್ತೇನೆ. ಆ ಬೆಂಬಲ, ಸಹಕಾರವಿಲ್ಲದೇ ಇದ್ದರೆ ಏನನ್ನು ಮಾಡಲಾಗುತ್ತಿರಲಿಲ್ಲ.

ತಾಯಿ, ಹೆಂಡತಿ, ಅಕ್ಕ, ತಂಗಿ, ಮಗಳು, ಸ್ನೇಹಿತೆ ಇವೆಲ್ಲವೂ ಕೇವಲ ಪಾತ್ರಗಳು. ಅಲ್ಲಿ ಯಾರೇ ಬಂದರೂ ಅವರು ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಇದರಲ್ಲಿ ಅತಿಶಯೋಕ್ತಿಯಿಲ್ಲ.ಹೆಣ್ಣು ತಪ್ಪು ಮಾಡಿದರೂ ಅದರ ಹಿಂದೆ ಗಂಡಸಿನ ಪಾತ್ರವಿದ್ದೇಯಿರುತ್ತದೆ. ಯಾವುದೇ ಹೆಣ್ಣನ್ನು ಅವಮಾನಿಸಿದರೆ ಅದು ಕೇವಲ ಹೆಣ್ಣನ್ನು ಅವಮಾನಿಸಿದ್ದಲ್ಲ. ಒಬ್ಬ ತಾಯಿ, ಒಬ್ಬ ಅಕ್ಕ, ಒಬ್ಬ ತಂಗಿ, ಒಬ್ಬ ಸ್ನೇಹಿತೆ, ಒಬ್ಬ ಹೆಂಡತಿ, ಒಬ್ಬ ಮಗಳು ಇವರೆಲ್ಲರನ್ನೂ ಅವಮಾನಿಸಿದ ಹಾಗೆ. ನಾನು ಶಾಲೆಗಳ ವಿಷಯದಲ್ಲಿ ಈ ಮಾತನ್ನು ಹೇಳುತ್ತಿರುತ್ತೇನೆ. ಪ್ರತಿಯೊಂದು ಶಾಲೆಗೂ ಶಿಕ್ಷಕಿಯರಿರಬೇಕೆಂದು. ಶಿಕ್ಷಕಿಯರಿರುವ ಶಾಲೆಗೂ ಕೇವಲ ಶಿಕ್ಷಕರಿರುವ ಶಾಲೆಗೂ ಬಹಳ ವ್ಯತ್ಯಾಸವಿದೆ ಮತ್ತು ಅದನ್ನು ನಾನು ಬಹಳ ಸೂಕ್ಷ್ಮತೆಯಿಂದ ಗಮನಿಸಿದ್ದೇನೆ.

ನಮ್ಮ ಸಂಸ್ಕøತಿಯಲ್ಲಿ ಹೆಣ್ಣಿಗೆ ದೇವತೆಯ ಸ್ಥಾನ ನೀಡಿದ್ದೇವೆಂದು ಬೊಬ್ಬೆ ಹೊಡೆಯುವ ಕೆಲವರಿಗೆ ನನ್ನದೊಂದು ಕಿವಿಮಾತು. ಸ್ಥಾನ ನೀವು ನೀಡಿದ್ದಲ್ಲ, ಅದು ಅವಳು ಪಡೆದದ್ದು ಮತ್ತು ಅದಕ್ಕೆ ಅವಳು ಸಂಪೂರ್ಣ ಅರ್ಹಳು. ನೀವು ಕೊಡುವಂತಹದ್ದು ಏನು ಇಲ್ಲ. ಎಲ್ಲಾ ಅವಳ ಸಂಪಾದನೆ. ಜಗತ್ತಿನಲ್ಲಿ ಪ್ರತಿಯೊಂದಕ್ಕೂ ತನ್ನದೇ ಸ್ಥಾನಮಾನಗಳು, ಮಹತ್ವಗಳಿವೆ. ಸಣ್ಣ ಇರುವೆಯಿಂದ ಹಿಡಿದು ದೊಡ್ಡ ತಿಮಿಂಗಿಲಗಳ ತನಕ ಎಲ್ಲವೂ ಬೇಕು. ಜೇನ್ನೊಣಗಳ ಸಂತತಿ ಕಡಿಮೆಯಾದರೇ ಇಡೀ ಪರಿಸರ ವ್ಯವಸ್ಥೆಯೇ ಹಾಳಾಗುತ್ತದೆಯೆಂಬುದನ್ನು ತಿಳಿದಿದ್ದೇವೆ. ಆದ್ದರಿಂದ ಹೆಣ್ಣು ಗಂಡು ಎಂಬ ಬೇಧವೂ ಬೇಡ. ಅವರ ಗೌರವವನ್ನೂ ಅವರಿಗೆ ನೀಡೋಣ. ಅವರ ಹಕ್ಕನ್ನು ಅವರಿಗೆ ನೀಡೋಣ. ಮೀಸಲಾತಿ ಎನ್ನುವ ಕಣ್ಣೊರೆಸುವ ತಂತ್ರ ಬೇಡವೇ ಬೇಡ. ಹೆಸರಿಗೆ ಮಾತ್ರ ಮಹಿಳೆಯರು ಸದಸ್ಯರು, ಅಧ್ಯಕ್ಷರು ನಿಜವಾದ ಅಧಿಕಾರ ಅವರ ಗಂಡನೋ ಅಥವಾ ಅಧಿಕಾರಿಯೋ ಅಥವಾ ಅವರ ಪಕ್ಷದ ಮುಖಂಡನೋ ನಡೆಸುತ್ತಾನೆ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...