30 ಡಿಸೆಂಬರ್ 2009

ಇದೊಂದು ಸಾರ್ಥಕತೆಯೋ? ಅಥವಾ ಸ್ವಾರ್ಥವೋ?



ಇಂಥಹದೊಂದು ಯೋಚನೆ ನನ್ನ ತಲೆಗೆ ಬಂದದ್ದು ಇಂದು ಬೆಳ್ಳಿಗ್ಗೆ ವಿಷ್ಣುವರ್ಧನ್ ತೀರಿಕೊಂಡ ಸುದ್ದಿ ತಿಳಿದ ಮೇಲೆ. ಅಯ್ಯೊ ಪಾಪ ಹೋಗಬಾರದಿತ್ತು, ಚಿನ್ನದಂತಹ ಮನುಷ್ಯ, ಎಂಥಹ ಅದ್ಬುತ ನಟ, ಇತ್ತೀಚೆಗೆ ಆಧ್ಯಾತ್ಮಿಕತೆ ಕಡೆಗೆ ಬಹಳ ಬದಲಾಗಿದ್ದರು. ಅವರ ವ್ಯಕ್ತಿತ್ವ ಬಗೆಗೆ ಅವರ ಬಗೆಗೆ ನಮಗೆ ನಮ್ಮವರೆ, ನಮ್ಮ ಮನೆಯವರೇ ಕಳೆದುಹೋದರೆಂಬಷ್ಟು ನೋವಾಗುತ್ತದೆ.ಮುಂಜಾನೆದ್ದು ಟಿ.ವಿ.ಮುಂದೆ ಕುಳಿತು ಅಲ್ಲಿರುವ ದೃಶ್ಯ ನೋಡುವಾಗ ನಮಗೆ ತಿಳಿಯದಂತೆ ಕಣ್ಣು ಒದ್ದೆಯಾಗುತ್ತವೆ. ಅಯ್ಯೋ ಇನ್ನಷ್ಟು ವರ್ಷವಿರಬಾರದಾಗಿತ್ತೆ ಎನಿಸುತ್ತದೆ. ನಿನ್ನೆ ಮಧ್ಯಾಹ್ನ ನನ್ನ ಸ್ನೇಹಿತ ಅಶ್ವತ್ ಅವರು ಹೋದರು ಎಂದು ತಿಳಿಸಿದಾಗ, ನಮ್ಮವರೇ ನಮ್ಮ ಮನೆಯವರೇ ಕಳೆದುಹೋದರೆಂಬಂತೆ ಮಂಕಾಗಿಬಿಟ್ಟೆ. ನಾನು ಅವರನೆಂದು ಕಂಡಿಲ್ಲ, ಮಾತನಾಡಿಸಿಲ್ಲ, ಅವರ ಬಗ್ಗೆ ಅತಿ ಹೆಚ್ಚು ಗೊತ್ತಿಲ್ಲ, ನಾನು ಆನಂದಿಸಿರುವುದು ಅವರ ಗಾಯನವನ್ನು ಮಾತ್ರ. ನನಗೆ ತಿಳಿದಿರುವುದು ಅವರ ಗಾಯನ ಮತ್ತು ಕನ್ನಡಕ್ಕೆ ಅವರು ಸಲ್ಲಿಸಿದ ಕೊಡುಗೆ. ವೈಯಕ್ತಿಕವಾಗಿ ನಾವೆಂದು ಆತ್ಮೀಯರಲ್ಲ, ಆದರೂ ಇಂಥಹದ್ದು ಆಗುವುದು ಯಾಕೆ? ಗೆಳೆಯ ಗೆಳತಿಯರನ್ನು ಕಳೆದುಕೊಂಡಷ್ಟೆ ನೋವಾಗುವುದಾದರೂ ಏಕೆ? ದಿನಕ್ಕೊಮೆಯಾದರೂ ಅಶ್ವತ್ ಅವರ ಗಾಯನ ಕೇಳುವಂತೆ ಮಾಡಿದ ಅವರ ಕಂಚಿನ ಕಂಠ ನಮ್ಮನ್ನು ಸಂಪೂರ್ಣ ಆವರಿಸಿತ್ತೆ? ಅಯ್ಯೋ ಈ ಜನರು ಯಾಕಾದರೂ ಸಾಯುತ್ತಾರೆ, ಅಭಿಮಾನಿಗಳು ಎಂದಾಕ್ಷಣ ಸಾಯಬೇಕೆ? ಅವರೇನು ಮಾಡಿದ್ದರು ನಮಗೆ ನಮ್ಮ ಸಮಾಜಕ್ಕೆ ಎನ್ನುವ ಅನೇಕ ಜನಸಮೂಹಕ್ಕೆ ನನ್ನ ಬಳಿ ಉತ್ತರವಿದೆ. ಅವರು ನನಗೆ ನೇರ ಸಂಬಂಧವಿಲ್ಲದಿದ್ದರೂ ನನಗೆ ಸಹಾಯ ಮಾಡಿರುವುದು ಅತಿ ಹೆಚ್ಚು, ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳತಿ ನನ್ನನಗಳಿ ದೂರಾದಾಗ ನನಗೆ ನೆರವಾಗಿ ಸಾಂತ್ವಾನ ಹೇಳಿದ್ದು ಅವರ ಆ ಗೀತೆಗಳು. ಮೌನ ತಬ್ಬೀತು ಎನ್ನುವಾಗ ನನ್ನೊಳಗೆ ಅಡಗಿರುವ ಅದೆಷ್ಟೋ ನೋವುಗಳು ಹರಿದು ಬರುತ್ತವೆ, ಸಮಧಾನ ಗೊಳಿಸುತ್ತವೆ. ಅದರಂತೆಯೇ, ಹೇಳಿ ಹೋಗು ಕಾರಣ ಎಂದು ಅವರ ಗಾನ ಬಂದೊಡನೆ ನಾನು ಕಳೆದುಹೋದ ದಿನಗಳ ನೆನೆದು ಮರುಗುತ್ತೇನೆ ನಂತರ ಪ್ರೀತಿಯಲ್ಲಿ ಸೋಲೆಂಬುದಾಗಲಿ ನೋವಾಗಲಿ ಇಂದಿನದಲ್ಲವೆಂದು ಸಮಧಾನವಾಗುತ್ತದೆ. ಎಲ್ಲರೂ ಎಲ್ಲಾ ಕಾಲದಲ್ಲಿಯೂ ಅನಿಭವಿಸುತ್ತಿರುವುದನ್ನು ನಾವು ಇಂದು ಅನುಭವಿಸುತ್ತಿದ್ದೇವೆ, ಮೋಸ ವಂಚನೆ, ಸುಖ, ದುಃಖ ಇವೆಲ್ಲವೂ ಎಂದೆಂದಿಗೂ ಇದ್ದವು ಇಂದು ನಾಳೆಯೂ ಇರುತ್ತವೆಂಬುದನ್ನು ನಾವು ಅರಿಯಲು ಸಹಾಯ ಮಾಡುವುದೇ ಅಶ್ವತ್ ರವರ ಗಾನಸುಧೆ.

ಸಂಗೀತವೆಂಬುದು ಬರಿಯ ಸಂತೋಷಕ್ಕೆ ಮಾತ್ರವಲ್ಲ ಅದರಿಂದ ಗುಣವಾಗದ ರೋಗವಿಲ್ಲ, ಮನುಷ್ಯನ ನೆಮ್ಮದಿಯ ಬದುಕಿಗೆ, ನೋವಿನಿಂದ ಹೊರಬರಲು ಸಂಗೀತ ಬಹಳ ಮುಖ್ಯವಾದದ್ದು, ನನ್ನಂತಹ ಸಾವಿರಾರು ನೊಂದ ಮನಗಳಿಗೆ ಶಕ್ತಿ ತುಂಬವ ಗಾಯನಗಳು ಕಡಿಮೆ ಅಲ್ಲ. ಆದರೇ, ರಾಜಕಾರಣಿಗಳು ತಿವಾರಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳದ ಬಗ್ಗೆಗೆ ದೂರಾದಾಗ, ಅಯ್ಯೋ ಇಂಥಹ ನನ್ಮಕ್ಕಳು ಸಾಯಬಾರದೇ ಎನಿಸುತ್ತದೆ.ದೇವೇಗೌಡರು ಪದೇ ಪದೇ ಗಾನ ಹಾಡುವಾಗ ಈ ಮುದುಕನಿಗೆ ಸಾವು ಬರುವುದೆಂದು ಎನಿಸುತ್ತದೆ? ನಮ್ಮ ಅನೇಕ ಪ್ರೋಫೆಸರ್ ಗಳು ವಯಸ್ಸಿನ ಮಿತಿಯಿಲ್ಲದೇ ಕೆಟ್ಟದ್ದಾಗಿ ವರ್ತಿಸಿದ್ದಾಗ ಛೀ ಥೂ ಅನಿಸುತ್ತದೆ. ಅದರಂತೆಯೇ ಮೊನ್ನೆ ಎಂ.ಪಿ.ಪ್ರಕಾಶ್ ಅವರು ಬರೆದ ಒಂದು ಕಥೆ ಓದುತ್ತಿದ್ದಾಗ ಅಯ್ಯೊ ಇವರು ಇರಬೇಕಿತ್ತು ರಾಜಕೀಯದಲ್ಲಿ ಎನಿಸುತ್ತಿತ್ತು, ನನ್ನ ನೆಚ್ಚಿನ ಬರಹಗಾರರಾದ ತೇಜಸ್ವಿ ಅವರು ಹೋದಾಗ ನಿಜಕ್ಕೂ ಅದೆಷ್ಟು ವ್ಯತೆಯಾಯಿತೆಂದರೇ ಹೇಳತೀರದು. ರಾಜಶೇಖರ್ ರೆಡ್ಡಿ ಹೋದಾಗಲೂ ಅಷ್ಟೇ.ಯಾರ ಸಾವು ನಮಗೆ ಸಂತೋಷ ಕೊಡುವುದಿಲ್ಲ, ಅಂಥಹ ವೀರಪ್ಪನ್ ಸತ್ತಾಗಲೂ, ಪ್ರಭಾಕರನ್ ಹೋದಾಗಲೂ, ನಮಗೆ ನೋವಾಗಿತ್ತು. ಸತ್ತಾಗ ನಾವು ಅವರನ್ನು ಕಾಣುವುದು ಕೇವಲ ಮನುಷ್ಯರಾಗಿ, ಅಲ್ಲಿ ಒಳ್ಳೆಯವರು ಕೆಟ್ಟವರೆಂಬ ಭೇಧವಿರುವುದಿಲ್ಲ. ಎಲ್ಲ ಜೀವವೂ ಒಂದೆ ಎಂದು ನೆನೆಯುತ್ತೇವೆ. ಬದುಕಿದ್ದಾಗ ನೋವು ಕೊಡುವವರನ್ನು, ಮೋಸ ಮಾಡುವವರನ್ನು ಅವರಿಗೆ ಕೆಟ್ಟದ್ದಾಗಲೀ ಎಂದು ಬಯಸಿದರೂ, ಅವರಿಗೆ ಕೆಟ್ಟದ್ದಾದಾಗ ಮರುಗುತ್ತೇವೆ, ಕೊರಗುತ್ತೇವೆ. ನನ್ನ ಜೀವದ ಗೆಳತಿ ಹೋದಾಗ ನನ್ನ ಜೀವವೇ ಹೋದಂತಾಗಿ ಅವಳಿಗೆ ಶಾಪವಿತ್ತರೂ ಅವಳ ಕಣ್ಣಲ್ಲಿ ನೀರು ಬಂದರೇ ನಾನು ಕರಗುತ್ತೇನೆ ಕಳೆದೇಹೋಗುತ್ತೇನೆ, ಕಾರಣ ನಾನು ಮನುಷ್ಯನೇ!!! ಇದೆಲ್ಲವೂ ನಮ್ಮ ಸ್ವಾರ್ಥಕ್ಕೆ ಅನಿಸುತ್ತದೆ ನಮ್ಮವರಾಗಿರುವ ತನಕ ಅವರಿಗೆ ಏನು ಆಗದಿರಲಿ ಎನ್ನುವ ಬಯಕೆ ನಮ್ಮವರಲ್ಲದೇ ಹೋದರೇ ಹಾಳಾಗಲೀ ಎನ್ನುವ ತವಕ. ಇದು ಸ್ವಾರ್ಥವೋ? ಅಥವಾ ಸಾರ್ಥಕತೆಯೋ? ಒಳ್ಳೆಯವರು ಮಾತ್ರ ಇರಲಿ ಎಂಬ ಬಯಕೆ ಇರಬಹುದೇ? ಅದಕ್ಕಾಗಿಯೇ ನಾವು ಅಂಥವರನ್ನು ಬಹಳ ಕಾಲ ಇರಲಿ ಎಂದು ಹಾರೈಸುತಿರುವುದೇ? ಉತ್ತರ ನಿಮಗೆ ಬಿಟ್ಟದ್ದು...

24 ಡಿಸೆಂಬರ್ 2009

ದುರ್ಜನರೆಂದರೆ ಒಂದೇ ಜಾತಿಯ ಮೃಗಗಳಲ್ಲವೇ???

ನಾನು ಇಲ್ಲಿ ನಮ್ಮ ಸಮಾಜದಲ್ಲಿರುವ ಜಾತಿಯ ಬಗೆಯಾಗಲಿ ಅದರ ಪರಿಣಾಮದ ಬಗೆಯಾಗಲಿ ಮಾತನಾಡುತ್ತಿಲ್ಲ. ಇದೊಂದು ಸತ್ಯ ಮತ್ತು ನೈಜ ಘಟನೆ, ನಾನು ಓದಿದ ಪರಿಸರ ವಿಜ್ನಾನ ವಿಭಾಗದಲ್ಲಿ ಇಂದಿಗೂ ನಡೆಯುತ್ತಿರುವ ದಾರುಣ ಕಥೆ. ಸಮಾಜದ ಏಳಿಗೆಯ ಬಗ್ಗೆ ತಿಳುವಳಿಕೆ ನೀಡಬೇಕಿದ್ದ ವಿವಿಯಲ್ಲಿ, ನಡೆಯುತ್ತಿರುವ ಜಾತಿಯತೆ, ಶೋಷಣೆ, ಅಧಿಕಾರ ದುರ್ಬಲತೆ, ದುರ್ನಡತೆಯ ಬಗ್ಗೆ ಬರೆಯತೊಡಗಿದ್ದೇನೆ. ಇದೂ ಯಾರ ಮೇಲಿನ ವಿರುದ್ದವೂ ಅಲ್ಲ ಇರುವುದನ್ನು ನೇರ ಹೇಳಿ ಮುಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದೇನೆ.ಯುನಿವರ್ಸಿಟಿಯಲ್ಲಿನ ಕೊಳಕು ವ್ಯವಸ್ಥೆ ಓದಿರುವ ಸರ್ವರಿಗೂ ತಿಳಿದಿರುತ್ತದೆ, ಅದರ ಆಳ ಅಗಲ ಮಾತ್ರ ತಿಳಿದಿರುವುದಿಲ್ಲ. ಅದರ ಸಂಪೂರ್ಣ ಚಿತ್ರಣ ನಿಮ್ಮ ಮುಂದಿಡುತ್ತೇನೆ. ನಿರ್ಧಾರ ನಿಮಗೆ ಬಿಟ್ಟದ್ದು. ಪರಿಸರ ವಿಜ್ನಾನವೆಂಬ ವಿಷಯ ಇತ್ತಿಚೆಗೆ ಬಾರಿ ಚರ್ಚೆಯಲ್ಲಿದೆ.ಅದು, ಜಾಗತಿಕ ತಾಪಮಾನದಿಂದ ಇರಬಹುದು, ಅರಣ್ಯನಾಶದಿಂದ ಇರಬಹುದು, ಕಳೆದು ಹೋದ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಇರಬಹುದು, ಹೀಗೆ ಏನು ಹೇಳಿದರೂ ಪರಿಸರ ಸರ್ವನಾಶವೆನ್ನುವುದರಿಂದ ಬದಲಾವಣೆಯ ತನಕ ಬೊಬ್ಬೆ ಹೊಡೆಯುತ್ತಿದ್ದೇವೆ. ಆದರೇ ಅದನ್ನೇ ಐದಾರು ವರ್ಷ ಓದಿದವರು, ಅದರಲ್ಲೇ ಡಾಕ್ಟರೇಟ್ ತೆಗೆದುಕೊಂಡವರ ಬದುಕು ಹೇಗಿದೆ, ಓದಲು ಅವರು ಪಡುತ್ತಿರುವ ಪಾಡೇನು ಎಂಬುದು ಅಲ್ಪ ಜನರಿಗೂ ತಿಳಿದಿಲ್ಲ. ಪರಿಸರ ವಿಜ್ನಾನ ವಿಷಯವು ಕರ್ನಾಟಕದ ಎಲ್ಲ ವಿವಿ ಗಳಲ್ಲಿಯೂ ೧೯೯೨ರಿಂದ ನಡೆಯುತ್ತಿದೆ. ಪ್ರತಿ ವರ್ಷವೂ ಕನಿಷ್ಟ ೨೦ ವಿಧ್ಯಾರ್ಥಿಗಳು ಓದಿ ಹೊರಗೆ ಬರುತ್ತಿದ್ದಾರೆ. ೫೦-೧೦೦ ರ ತನಕ ಪಿ.ಎಚ್.ಡಿ ಪದವಿಗಳು ಹೊರಬಂದಿವೆ. ಆದರೇ ಉನ್ನತ ಉದ್ದೆಯಲ್ಲಿರುವವರ ಸಂಖ್ಯೆ ಒಂದೂ ಸಿಗುವುದಿಲ್ಲ. ಸರ್ಕಾರಿ ಕೆಲಸ ಸಿಗುವ ಅವಕಾಶವಿಲ್ಲದೇ, ಒದ್ದಾಡಿ ತಮ್ಮ ವಿಷಯದ ಬಗ್ಗೆ ಕೆಲಸ ಮಾಡದೇ ಬೇರೆ ಕ್ಷೇತ್ರಗಳಲ್ಲಿ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಬೆಂಗಳೂರು ವಿವಿ ಯಲ್ಲಿ ನಡೆಯುತ್ತಿರುವ ಅಸಹ್ಯಕರ ಸಂಗತಿಯನ್ನು ನಿಮ್ಮ ಮುಂದಿಡುತೇನೆ.
ವಿಭಾಗವನ್ನು ಪ್ರೊಫೆಸರ್ ಸೋಮಶೇಖರ್ ಕಳೆದ ಆರೇಳು ವರ್ಷಗಳಿಂದಲೂ ಆಳುತ್ತಾ ಬಂದಿದ್ದರು. ಇದರ ನಡುವೆ ಅವರ ವಿದ್ಯಾರ್ಥಿನಿಯಾದ ನಂದಿನಿಯನ್ನು ಅವರೇ ಆಯ್ಕೆ ಮಾಡಿ, ಪಿ.ಎಚ್.ಡಿ ಕೊಡಿಸಿ ತಂದು ಕುರಿಸಿದರು. ರೀಡರ್ ಆಗಲು ಅರ್ಹತೆ ಇಲ್ಲದವರನ್ನು ಆಯ್ಕೆ ಮಾಡಿರುವುದನ್ನು ಚರ್ಚಿಸಿ, ಅದೇ ವಿಭಾಗದ ವಿಶ್ವನಾಥ್ ಎಂಬವರು, ಕೋರ್ಟಿಗೆ ಹೋಗಿದ್ದರು. ಕೋರ್ಟ್ ಎಂದ ಮೇಲೆ ಅದು ಒಂದೆರಡು ವರ್ಷಕ್ಕೆ ಮುಗಿಯುವಂತೆ ಕಾಣಲಿಲ್ಲ ಅದು ಮುಂದುವರೆಸಲು ಆಗದೇ ಅವರು ಅದನ್ನು ಹಿಂದಕ್ಕೆ ಪಡೆಯುವಂತೆ ಮಾಡಲಾಯಿತು.ಅಲ್ಲಿಯೂ ಜಾತಿಯತೆ ನಡೆಯಿತೆಂಬುದನ್ನು ನೀವು ಒಪ್ಪಲೇಬೇಕು. ನಮ್ಮ ಇಂದಿನ ಸಮಾಜದಲ್ಲಿ ಕೊಲೆಗಾರನಾಗಿದ್ದರೂ, ನಮ್ಮ ಜಾತಿಯವೆನೆಂದೊಡನೆ ಅವನನ್ನು ಕ್ಷಮಿಸುವ, ಅಥವಾ ತಪ್ಪಿತಸ್ಥನಲ್ಲನೆನ್ನುವ ಮನಸ್ಥಿತಿ ಬಹಳಷ್ಟು ಮಂದಿಗಿದೆ.ಅದರಂತೆಯೇ ನಮ್ಮ ಜಾತಿಯಲ್ಲಿಯೇ ಒಡಕಿದ್ದರೇ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುತ್ತಾರೆಂಬುದನ್ನು ಅರಿತ ಇಬ್ಬರೂ ರಾಜಿಯಾದರು. ಒಮ್ಮೆಗೆ ನಂದಿನಿಯವರ ಪ್ರೊಬೆಶನರಿ ಮುಗಿದ ತಕ್ಷಣ ಹಿಂದಿನಿಂದ ಆಳ್ವಿಕೆಯಲ್ಲಿದ್ದ ಸೋಮಶೇಖರ್ ವಿರುದ್ದ ಹೋಗಿ ಅವರ ಚೇರ್ ಪದವಿಯನ್ನು ಕಬಳಿಸಿದರು.ಅಲ್ಲಿಂದ ಶುರುವಾದ ಇವರ ಕಥೆಗಳು ರಣರಂಗವಾಗಿದ್ದು ಬಹಳ ಕಡಿಮೆ ಸಮಯದಲ್ಲಿ. ಅವರಿಗೆ ಅಷ್ಟು ವರ್ಷದಿಂದ ಇದ್ದ ಕುರ್ಚಿ ಹೋಯಿತಲ್ಲಾ ಎಂದು ಚಿಂತೆ. ಇವರಿಗೆ ನನ್ನ ಅಧಿಕಾರ ತೋರಿಸಬೇಕೆನ್ನುವ ಹಟ. ಸಣ್ಣ ಪುಟ್ಟ ವಿಷಯಗಳಿಗೆ ಕುಲ ಸಚಿವರ ಬಳಿಗೆ ಹೋಗುವುದು, ಕೋರ್ಟಿಗೆ ಹೋಗುವುದು, ಜಾತಿ ನಿಂದನೆ ಎನ್ನುವುದು, ಮಹಿಳೆಯ ಮೇಲೆ ದೌರ್ಜನ್ಯವೆನ್ನುವುದು, ಹೀಗೆ ಇವರಿಬ್ಬರೂ ಸೇರಿ ತಯಾರಿಸಿದ ಪಟ್ಟಿಗಳ ರಿಪೋರ್ಟ್ ಪುಟಗಳ ಸಂಖ್ಯೆ ೧೩೦. ನೂರ ಮೂವತ್ತು ಪುಟಗಳಿಗೆ ಒಂದು ಪಿ.ಎಚ್.ಡಿ ಪ್ರಬಂದ ಬರೆಯಬಹುದಿತ್ತು. ಈ ರಿಪೋರ್ಟ್ ತಯಾರಿಸಲು ಇವರ ಸಮಯ ಎಷ್ಟು ವ್ಯಯಿಸಿರಬಹುದು ನೀವೆ ಯೋಚಿಸಿ. ೫೦-೬೦ ಸಾವಿರ ರೂಪಾಯಿ ಸಂಬಳ ಪಡೆದು ಇವರು ಮಾಡುತ್ತಿರುವ ಕೆಲಸ ಇದು.ಇದನ್ನು ಬರೆಯಲು ಇವರು ತಮ್ಮ ಕೈಕೆಳಗಿರುವ ಪಿ.ಎಚ್.ಡಿ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ, ಹಲವು ದೂರುಗಳನ್ನು ಕೊಡಿಸಿದ್ದಾರೆ, ವಿದ್ಯಾರ್ಥಿಗಳ ಸಹಿ ಸಂಗ್ರಹ ಮಾಡಿದ್ದಾರೆ. ಹೆದರಿಸಿ ಬೆದರಿದ್ದಾರೆ.ಯಾವ ವಿದ್ಯಾರ್ಥಿಯು ತನ್ನ ವಿದ್ಯಾಬ್ಯಾಸ ಕೆಡಿಸಿಕೊಳ್ಳಲು ಬಯಸುವುದಿಲ್ಲ, ಅವರು ಹೇಳಿದಂತೆ ಪತ್ರ ಬರೆದಿದ್ದಾರೆ. ಅವರ ಜೊತೆ ಹೋಗಿ ಪೋಲಿಸ್ ಮುಂದೆ ನಿಂತಿದ್ದಾರೆ. ಕೆಲವು ವಿದ್ಯಾರ್ಥಿಗಳು ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಮೊನ್ನೆ ಶನಿವಾರ ನನ್ನ ಪಿಎಚ್.ಡಿ ಕೆಲಸಕ್ಕೆಂದು ಅಲ್ಲಿನ ಲ್ಯಾಬ್ ಗೆ ಹೋದಾಗ ನಡೆದ ಕಥೆಯನ್ನು ಕೇಳಿ. ಎರಡನೇ ಬಾರಿಗೆ, ನಂದಿನಿ ಮುಖ್ಯಸ್ಥೆಯಾಗಿದ್ದಾರೆ, ಆದ್ದರಿಂದ ಅವರು ಸ್ಟಾಕ್ ಚೆಕಿಂಗ್ ಮಾಡಲು ಹೊರಟಿದ್ದಾರೆ, ಆ ಸಮಯಕ್ಕೆ ಸರಿಯಾಗಿ, ಸೋಮಶೇಖರ್ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಸೋಮಶೇಖರ್ ಅದನ್ನು ಕೇಳಲು ಬರುವ ಸಮಯಕ್ಕೆ ನಡೆದ ವಾಗ್ವಾದ ಹೀಗಿದೆ, ನಂದಿನಿ ನೀನು ಮಾಡುತ್ತಾ ಇರುವುದು ಸರಿಯಿಲ್ಲ, ಸ್ವಲ್ಪ ನೋಡಿ ನಡೆದುಕೊ. ಅದಕ್ಕೆ ಪ್ರತ್ಯುತ್ತರ, ನೀನು ಅರಚುಬೇಡ, ನನಗೂ ನಿನಗಿಂತ ಜೋರಾಗಿ ಕಿರುಚೋಕೆ ಬರುತ್ತದೆ. ಇವೆಲ್ಲಾ ಅವರು ಬಳಸಿರುವ ಪದಗಳು. ಅದು ವಿಭಾಗದ ಕಾರಿಡಾರ್ ನಲ್ಲಿ ನಿಂತು. ವಿದ್ಯಾರ್ಥಿಗಳ ಸಮ್ಮುಖದಲ್ಲಿ. ಇಲ್ಲಿ ನಿಮಗೆ ಒಂದು ಬಹುಮುಖ್ಯ ಸಂಗತಿ ಹೇಳಲೇ ಬೇಕಾಗುತ್ತದೆ, ಸಾಯಿನಾಥ್ ಎಂಬ ಮನುಷ್ಯ ನಂದಿನಿಯವರ ಪತಿದೇವರು, ನಮ್ಮಲ್ಲಿ ಹೆಂಡತಿ ಅಧಿಕಾರದಲ್ಲಿದ್ದರೆ ಗಂಡ ಮೂಗು ತೂರಿಸುವುದು ರಾಜಕೀಯದಲ್ಲಿ ಸಾಮಾನ್ಯ ಆದರೇ, ಒಂದು ವಿವಿ ಮಟ್ಟದಲ್ಲಿ ಇದು ನಡೆಯುತ್ತದೆಯೆಂದರೇ ನಮ್ಮ ವ್ಯವಸ್ಥೆಯ ಬಗ್ಗೆ ವಾಕರಿಕೆ ಬರುತ್ತದೆ. ಇವರು, ವಿಭಾಗಕ್ಕೆ ಬರುವುದು, ಅವರ ಹೆಂಡತಿಯ ರೂಮಿನಲ್ಲಿ ಗಂಟೆಗಟ್ಟಲೇ ಕೂರುವುದು, ಇದು ದಿನ ನಿತ್ಯದ ಚಟುವಟಿಕೆ. ಬರುವುದು ತಪ್ಪಲ್ಲ, ಆದರೇ ಸದಾ ಅಲ್ಲೇ ಕುಳಿತಿರುವುದು ಅವಶ್ಯಕತೆಯೇ? ಅದರಂತೆಯೇ, ನಾನು ನಿಮಗೆ ನಮ್ಮ ವಿಭಾಗದಲ್ಲಿದ್ದ ಕೆಲವು ಪ್ರೊಫೆಸರ್ ಎಂಬ ಮಹಾಶಯರ ಬಗ್ಗೆಯೂ ತಿಳಿಸಿಕೊಡಬೇಕಾಗುತ್ತದೆ. ಹುಡುಗಿಯರ ಮೈ ಮುಟ್ಟಿ, ಅವರ ಮೈ ಸವರಿ ಪಾಠ ಮಾಡುವ ಒಬ್ಬ ಪ್ರೋಫೆಸರ್ ಇದ್ದರು. ಹುಡುಗರನ್ನು ಆದಷ್ಟೂ ಗೇಲಿ ಮಾಡುತ್ತಿದ್ದ ಮಹಾಶಯರವರು. ಹುಡುಗರನ್ನು ಬೈಯ್ಯುವುದು, ಅವರನ್ನು ಉಗಿಯುವುದು, ಉತ್ತರ ಪತ್ರಿಕೆಯಲ್ಲಿ ತಪ್ಪಾಗಿ ಬರೆದಿದ್ದರೇ ಅದನ್ನು ಎಲ್ಲರ ಮುಂದೆ ಓದಿ ಹಂಗಿಸುವುದು, ಹೀಗೆ ಅವರ ತರಗತಿಯಲ್ಲಿ ಕುಳಿತುಕೊಳ್ಳುವುದಕ್ಕೆ ಬಹಳ ಮುಜುಗರಪಡಬೇಕಾಗಿತ್ತು. ಅದರಂತೆಯೇ ಪಿ.ಎಚ್.ಡಿ ವಿದ್ಯಾರ್ಥಿಗಳು ಇವರ ವಿದ್ಯಾರ್ಥಿಗಳು ಅವರ ವಿದ್ಯಾರ್ಥಿಗಳ ನಡುವೆ ಕೂಡ ಮಾತುಕತೆ ನಡೆಯದಂತೆ ಹೇಳಿದ್ದಾರೆ.ಸರ್ವರಿಗೂ ಶಿಕ್ಷಕರಾಗಬೇಕಿದ್ದ ಇವರುಗಳು, ಇರುವ ಹತ್ತು ವಿದ್ಯಾರ್ಥಿಗಳನ್ನು ಬೇರ್ಪಡಿಸಿ ಆಳುತ್ತಿರುವುದು ದುರದೃಷ್ಟಕರ. ಪತ್ರ ಬರೆಸುವುದು, ಅದನ್ನು ಪೋಸ್ಟ್ ಮಾಡಿಸುವುದು. ಇದು ಇದೊಂದೆ ಯುನಿವರ್ಸಿಟಿ ಕಥೆಯಲ್ಲ, ಕುವೆಂಪು, ಮೈಸೂರು ವಿವಿಯಲ್ಲಿಯೂ ಇದೆ.

ಇದಕ್ಕೆಲ್ಲಾ ನ್ಯಾಯ ಸಿಗುವುದು ಎಂದು? ಅಧಿಕಾರದ ಮೋಹದಲ್ಲಿ, ವಿದ್ಯಾರ್ಥಿಗಳನ್ನು ದುರುಪಯೋಗ ಪಡಿಸಿಕೊಂಡು, ಮಾತೆತ್ತಿದರೆ ನಿನ್ನ ಪಿ.ಎಚ್.ಡಿ ಮಣ್ಣು ಪಾಲಾಗುತ್ತದೆ, ನಿನ್ನ ಮಾರ್ಕ್ಸ್ ಹೋಗುತ್ತದೆ, ನಿನ್ನ ಡಿಗ್ರಿ ಹೋಗುತ್ತದೆ ಎಂದು ಹೆದರಿಸಿದಾಗ ವಿದ್ಯಾರ್ಥಿಗಳು ಹೆದರಿ ಅವರಿಗೆ ಬೇಕಾದ ಪತ್ರವನ್ನು ಬರೆಯುತ್ತಾರೆ, ದೂರನ್ನು ನೀಡುತ್ತಾರೆ, ಅದನ್ನು ಯಾರು ಗಂಬೀರವಾಗಿ ಸ್ವೀಕರಿಸುವ ಅವಶ್ಯಕತೆಯಿರುವುದಿಲ್ಲ.ಜಾತಿಯತೆಯ ಹೆಸರಿನಲ್ಲಿ ದೂರು ನೀಡಿಸುವುದು, ಜಾತಿ ನಿಂದನೆ ಮಾಡಿದ ಎಂದು ದೂರು ನೀಡುವುದು, ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದಾರೆಂದು ದೂರು ನೀಡುವುದು ಹೀಗೆ, ನ್ಯಾಯ ನೀಡಬೇಕಾದವರು ಅದನ್ನು ದುರುಪಯೋಗ ಪಡಿಸಿಕೊಂಡು, ನಿಜಕ್ಕೂ ಶೋಷಿತ ಹೆಣ್ಣು ಮಕ್ಕಳನ್ನು ಅನುಮಾನದಿಂದ ಕಾಣುವಂತಾಗಿದೆ. ತಮ್ಮ ಜಾತಿಯವರನ್ನೇ ಇಟ್ಟುಕೊಂಡು ಅಧಿಕಾರ ನಡೆಸುವುದು, ಸಂಶೋಧನೆಯ ಗಂಧವೇ ತಿಳಿಯದ ಮೂರ್ಖ ಶೀಖಾಮಣಿಗಳಿಗೂ ಪಿ.ಎಚ್.ಡಿ ಕೊಡಿಸುವುದು, ಇರುವ ಒಂದೊಂದು ಪ್ರಾಜೆಕ್ಟ್ ನಲ್ಲಿನ ಡಾಟಾ ಬಳಸಿಕೊಂಡೂ ೨೦-೩೦ ಪೇಪರ್ ಮಾಡುವುದು, ಐದಾರು ಡಾಕ್ಟರೇಟ್ ಕೊಡಿಸುವುದು, ಹಿಂದಿನ ವಿದ್ಯಾರ್ಥಿಯ ಪ್ರಬಂದವನ್ನೇ ಸ್ವಲ್ಪ ಅದುಲು ಬದಲು ಮಾಡಿ ಒಪ್ಪಿಸುವುದು. ಒಂದಾ ಎರಡಾ, ಇವಕ್ಕೆಲ್ಲಾ ಕೊನೆಯೊಂದಿದೆಯಾ? ಇದರ ಹಿಂದೆ ಅತಿ ಬುದ್ದಿವಂತರೆನಿಸಿಕೊಂಡ ಬಹಳಷ್ಟು ಜನರ ಕೈವಾಡವಿದೆ, ಸರ್ಕಾರವಿದೆ, ಲೋಕಾಯುಕ್ತರನ್ನೆ ದಡ್ಡರನ್ನಾಗಿಸಿ, ಒಬ್ಬರ ವಿರುದ್ದ ಒಬ್ಬರು ದೂರು ನೀಡಿದ್ದಾರೆಂದರೆ ಅವರ ಕೈಚಳಕ ನಿಮಗೆ ತಿಳಿಯುತ್ತದೆ. ಕಳ್ಳರ ಸಂತೆ ಸಿನೆಮಾದಂತೆ, ಇವರೆಲ್ಲರೂ ಒಂದೇ ಯಾರನ್ನು ಕೊಳೆತು ನಾರುತ್ತಿರುವ ಸಮಾಜದಿಂದ ಪಾರುಮಾಡಲಾಗುವುದಿಲ್ಲ. ನೀವು ಅವರ ವಿರುದ್ದ ಹೋದರೇ ಒಂದು ನೀವು ಹುಚ್ಚರು, ಕೆಲಸಕ್ಕೆ ಬಾರದವರು, ಅಥವಾ ನಕ್ಸಲರು ಎಂದಾರು. ಇಲ್ಲದಿದ್ದರೇ ಜಾತಿಯತೆಯಿಂದ ಬಂದಿದ್ದಾನೆ, ಎನ್ನುವರು. ಜಾತಿ ಧರ್ಮ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಒಂದೆರಡಲ್ಲ. ಜಗತ್ತು ಪ್ರಳಯ, ತಾಪಮಾನವೆಂದು ಬೊಬ್ಬೆ ಹೊಡೆಯುತ್ತಿರುವಾಗ ಇವರುಗಳು ಹೀಗೆ ಲಜ್ಜೆ ಗೆಟ್ಟು ಕುಣೀಯುತ್ತಿರುವುದನ್ನು ತಡೆಯುವುದು ಹೇಗೆ?

ಮತ್ತೆ ಮತ್ತದೇಕೋ ಸುತ್ತುವ ಹಂಬಲ !!!!!!!!!!

ಇದೇನು ಕಥೆನಪ್ಪಾ ಈ ನನ್ಮಗ ಬರೆದಿರೋದನ್ನೆ ಓದೋಕೆ ಆಗಿಲ್ಲಾ ಓದಿ ಉಗಿಯೋಕೂ ಸಮಯ ಸಿಕ್ತಿಲ್ಲ, ಆದರೂ ಬರೆದು ಬರೆದು ಓದಿ ಓದಿ ಅಂತಾ ಜೀವ ತಿನ್ನೋಕೆ ಬರ್ತಾನೆ ಎಂದುಕೊಳ್ಳಬೇಡಿ.ಇದು ಮತ್ತೊಮ್ಮೆ ಚಾರಣದ ಬಲಿಗೆ ಸಿಕ್ಕಿ ನಲಿದು ನಲುಕಿದ ಕಥೆ. ಹಿಮಾಲಯದಂತಹ ಪರ್ವತಗಳನ್ನೇರಿ ಬರುವ ಕಾಲದಲ್ಲಿ ನಮ್ಮೂರಿನ ಅಕ್ಕ ಪಕ್ಕದ ಊರಿನ ಬೆಟ್ಟ ಗುಡ್ಡ ಹತ್ತಿ ಬಂದು ಅಯ್ಯೋ ಎನ್ನುವ ಮಟ್ಟಕ್ಕೆ ಬರೆಯುತೇನೆಂದು ದೂರಬೇಡಿ.ನೀವು ಯಾವ ದೇಶದ ಯಾವ ಮೂಲೆಗೆ ಹೋಗಿ ಬಂದರೂ ನಿಮ್ಮ ಮನಸ್ಥಿತಿಯಂತೂ ಬದಲಾಗುವುದಿಲ್ಲ. ಯೂರೋಪ್ ದೇಶಕ್ಕೆ ನಮ್ಮೂರಿನ ಕಂಡಕ್ಟರ್ ಹೋದರೇ ಅಥವಾ ಡ್ರೈವರ್ ಹೋದರೇ ಅಲ್ಲಿನ ಬಸ್ಸುಗಳು ಮತ್ತು ಅಲ್ಲಿನ ಡ್ರೈವರ್ ಗಳನ್ನು ಮಾತನಾಡಿಸಲು ಇಚ್ಚಿಸುತ್ತಾರೆ ವಿನಾಃ ಅಲ್ಲಿನ ದೇಶದ ಇನ್ನುಳಿದವರನ್ನಲ್ಲಾ!ಹಾಗೆಯೇ ನನ್ನಂಥಹ ಸೋಮಾರಿಗಳು ಯಾವ ಬೆಟ್ಟ ಏರಿದರೂ ಊರಿಗೆ ಮರಳಿ ಬಂದ ಮೇಲೆ ಒಂಬತ್ತು ಗಂಟೆಗೆ ಏಳುವುದು ತಪ್ಪುವುದಿಲ್ಲ. ನನ್ನ ಸೋಮಾರಿತನ ಕಡಿಮೆಯಾಗುವುದಿಲ್ಲ.ಕಳೆದ ವಾರ ಹಾಗೆಯೇ ಮನಸ್ಸಿಗೆ ಬೇಸರವಾಗಿದ್ದರಿಂದ ಎಲ್ಲಾದರೂ ಹೋಗಿಬರಬೇಕೆಂದು ನಿರ್ಧರಿಸಿದೆ, ನೆಂಟರ ಮನೆಗಳಿಗೆ ಹೋಗುವ ಖಾಯಿಲೆ ನನಗೆ ಇಲ್ಲದಿರುವುದರಿಂದ ನನ್ನ ಸ್ನೇಹಿತ ನವೀನನ ಊರಿಗೆ ಹೋಗಿ ಬರಲು ನಿರ್ಧರಿಸಿದೆ, ಅವನಿಗೆ ಫೋನ್ ಮಾಡಿ ಶನಿವಾರ ನಿಮ್ಮೂರಿಗೆ ಪಯಣವೆಂದೆ ಅದಕ್ಕೆ ಅವನು ಒಪ್ಪಿದ. ನಾನು, ವಿಜಿ, ಕಿರಣ ಮತ್ತು ನವಿನ ಎರಡು ಬೈಕ್ ಗಳಲ್ಲಿ ಹೋಗುವುದು ಎಂದು ತೀರ್ಮಾನಿಸಿ ಹೊರಟೆವು. ಒಬ್ಬನೇ ಹೋಗಿ ಇದ್ದು ಬರೋಣವೆಂದರೇ ಮೂರು ಜನ ಸೇರಿದೆವು. ನಾಲ್ಕು ಜನರು ನಾಲ್ಕು ದಿಕ್ಕಿನಂತೆ ಅರ್ಥವಿಲ್ಲದ ಚರ್ಚೆ ಮಾಡಿಕೊಂಡು, ಒಬ್ಬ ಕೋಳಿ ಬೇಕು, ಒಬ್ಬ ಹಂದಿ ಮಾಂಸ ಬೇಕು, ಒಬ್ಬ ಹೆಂಡ ಬೇಕು, ಒಬ್ಬನಿಗೆ ಸಿಗರೇಟು ಮತ್ತೊಬ್ಬನಿಗೆ ಅದು ಇದು ಅಂತಾ ಇಲ್ಲಿಂದ ಹೊರಡುವಾಗಲೇ ಮಧ್ಯಾಹ್ನ ಮೂರಾಯಿತು.

ಮನೆಯಿಂದ ಬ್ಯಾಗು ಕ್ಯಾಮೆರಾ ರಗ್ಗು ಬಟ್ಟೆ ಬರಿ ಅಂತಾ ಹಾಕಿಕೊಂಡು ಹೊರಟೆವು. ಇಲ್ಲಿಂದಾ ಯಲಹಂಕ ದಾಟಿ, ದೊಡ್ಡ ಬಳ್ಳಾಪುರ ಬಳಸಿಕೊಂಡು, ಚಿಕ್ಕಬಳ್ಳಾಪುರ ದಾರಿಯಲ್ಲಿ ಹೊರಟರೆ, ಹತ್ತು ಕಿಲೋಮೀಟರ್ ಕಳೆದ ಮೇಲೆ ಎಡಕ್ಕೆ ತಿರುಗಿಸಿಕೊಂಡು ನಾಲ್ಕು ಕೀಮಿ ಹೋದ ನಂತರ ಕಾಣುವುದೇ ದೊಡ್ಡರಾಯಪ್ಪನ ಹಳ್ಳಿ.ಊರು ನಮ್ಮೂರ ಹಳ್ಳಿಗಳಂತೆಯೇ ಇದ್ದರೂ ಊರಿಗಿಂತ ಊರಿನ ಹಿಂದಿರುವ ಗುಡ್ಡಗಳು ಸುಂದರವಾಗಿವೆ.ಅವುಗಳು ನಿಮ್ಮ ಕಣ್ಣುಗಳನ್ನು ಆಕರ್ಷಿಸುತ್ತವೆ ಎಂದರೇ ತಪ್ಪಾಗದು.ಊರಿನ ಹಿಂದೆ ಸಣ್ಣ ಪುಟ್ಟ ನಾಲ್ಕಾರು ಗುಡ್ಡಗಳಿವೆ, ಅಲ್ಲಿರುವ ಗುಡ್ಡಗಳು, ಹಸಿರಿದಿದ್ದರೇ ನಮ್ಮೂರಿನ ಕಡೆ ಇರುವ ಬೆಟ್ಟಗಳಂತೇಯೇ ಕಾಣುತಿದ್ದವು.ಊರಿಗೆ ಪ್ರವೇಶಿಸುತ್ತಿದಂತೆ ವಯಸ್ಸಾದ ಮುದುಕು ಮುದುಕಿಯರು ದನ, ಕುರಿ, ಮೇಕೆಗಳ ಹಿಂಡಿನೊಂದಿಗೆ ಬರುತ್ತಿರುವುದು ಸಾಮಾನ್ಯವಾಗಿತ್ತು.ವಯಸ್ಸಾದವರು ಹಳ್ಳಿಗಳಲ್ಲಿ ಅಡ್ಡಾಡುವುದರ ಸಂಕೇತ ಹಳ್ಳಿಯಲ್ಲಿನ ವಲಸೆ ಸಂಖ್ಯೆ ಏರಿದೆ ಎಂದು ಅಥವಾ ಶ್ರಮಜೀವಿಗಳೆಂದು. ನಮ್ಮೂರಿಗೆ ಬಂದರೇ ಬರುವ ಮುನ್ನವೇ ಸಾಲು ಸಾಲಾಗಿ ನನ್ನಂತಹ ಕೆಲಸಕ್ಕೆ ಬಾರದ ಸೋಮಾರಿಗಳು ಕೈನಲ್ಲಿ ಮೋಬೈಲ್ ಹಿಡಿದು ರಿಂಗ್ ಟೋನ್ ಕೇಳುತ್ತಾ ಕುಳಿತಿರುತ್ತಾರೆ, ಇಲ್ಲವೆಂದರೇ ದೇವೇಗೌಡ, ಯಡ್ಯೂರಪ್ಪ ಅಂತಾ ರಾಜಕೀಯದ ಗುಂಗಿನಲ್ಲಿರುತ್ತಾರೆ.ಅದೂ ಇಲ್ಲದಿದ್ದರೇ ಜಾತಿ ರಾಜಕಾರಣದಲ್ಲಿರುತ್ತಾರೆ.ಈ ಊರಿನಲ್ಲಿ ಅಂತಹ ಸನ್ನಿವೇಶಗಳು ಕಾಣಲಿಲ್ಲ. ಕಾರಣ ಕುಳಿತು ಹರಟೆ ಹೊಡೆಯುವಷ್ಟು ಪ್ರಕೃತಿ ಅವರಿಗೆ ಸಂಪೂರ್ಣ ಬೆಂಬಲ ನೀಡಿಲ್ಲ.ಸಾವಿರ ಅಡಿ ಆಳದಲ್ಲಿ ಬೋರ್ ಕೊರೆದರೆ ಅವರಿಗೆ ನೀರು ಸಿಗುವ ನಂಬಿಕೆ ಇರುವುದಿಲ್ಲ, ಅದಲ್ಲದೇ ಎಲ್ಲರಿಗೂ ಬೋರ್ ಕೊರೆದು ವ್ಯವಸಾಯ ಮಾಡುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸವಲ್ಲ, ಬಹಳಷ್ಟು ರೈತರು ಮಳೆರಾಯನನ್ನು ನಂಬಿ ಬದುಕುತ್ತಿರುವುದರಿಂದ ಸಮಯ ಪ್ರಜ್ನೆ, ಸಮಯಕ್ಕೆ ತಕ್ಕ ತೀರ್ಮಾನಗಳು ಬಹುಮುಖ್ಯವಾಗುತ್ತವೆ.ಅವರು ನಮ್ಮ ನೀರಾವರಿ ಜಮೀನಿನ ರೈತರಂತೆ ಟೀ ಅಂಗಡಿ ಮುಂದೆ ಕುಳಿತು ಕಾಲಹರಣ ಮಾಡುವ ಸಾಹಸ ಮಾಡಲಾಗುವುದಿಲ್ಲ. ಅವರ ಮನೆಗೆ ಬಂದೊಡನೆ ನಮ್ಮ ಪರಿಚಯವಾಯಿತು, ಅವರ ಪರಿಚಯ ನಮಗಾಯಿತು. ನಾವು ಮಾಡಹೊರಟಿರುವ ಕಾರ್ಯಪ್ರಲಾಪವನ್ನು ಅಜ್ಜಿಯ ಮುಂದಿಟ್ಟೊಡನೆ, ಅವರು, ಬೆಟ್ಟದ ಮೇಲೆ ಕರಡಿ ಬಂದಿದೆಯಂತೆ, ಒಬ್ಬ ದನ ಕಾಯುವ ಹುಡುಗನಿಗೆ ಪರಚಿ ಗಾಯ ಮಾಡಿದೆಯಂತೆ!! ಜೋಪಾನವೆಂದರು!! ನಾವೇ ನಾಲ್ಕು ಜನ ನಾಡು ಮೃಗಗಳಿರುವಾಗ ಕರಡಿ ಏನು ಮಾಡಲಾದೀತು ಎಂದು ಹಾಸ್ಯ ಮಾಡಿ ಹೊರಟವು. ಇದ್ದ ನಾಲ್ಕು ಜನರಲ್ಲಿ, ಸಂಪೂರ್ಣ ನಾಸ್ತಿಕತೆ, ಅಪೂರ್ಣ ನಾಸ್ಕಿಕತೆ, ಆಸ್ತಿಕತೆ ,ಸಂಪೂರ್ಣ ಆಸ್ತಿಕತೆ ಎಲ್ಲವೂ ಇದ್ದವು. ಬೆಟ್ಟದ ಮೇಲಿರುವ ದೇವರ ಗುಡಿ ಯಾವುದು, ಯಾವ ಉತ್ಸವ ನಡೆಯುತ್ತದೆ, ಅಲ್ಲಿ ಮಾಂಸ ಮಾಡಬಹುದೇ, ಹಂದಿಮಾಂಸ ಮಾಡುವುದು ಸರಿಯೇ? ಅಲ್ಲೇ ಮಾಡುವುದೇ, ಅಲ್ಲಿಂದ ಸ್ವಲ್ಪ ದೂರದಲ್ಲಿ ಮಾಡುವುದೇ?? ಹೀಗೆ ಹತ್ತು ಹಲವು ಬಾರಿ ಚರ್ಚೆಗಳಾಗಿ, ಅಲ್ಲಿಗೆ ಹೋದ ಮೇಲೆ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಮಾಡುವುದೆಂದು ಹೊರಟೆವು.

ಕರಡಿಯ ಬಗ್ಗೆ ನಾವು ಅಜ್ಜಿಯ ಎದುರು ಸ್ವಲ್ಪ ಹಗುರವಾಗಿ ಮಾತನಾಡಿ ಬಂದಿದ್ದರೂ ನಮ್ಮೊಳಗೆ ಕರಡಿಯನ್ನು ಅಟ್ಟಿ ಓಡಿಸುವಷ್ಟು ಧೈರ್ಯವಿದೆ ಎಂದಾಗಲಿ, ಅದು ಬರಲಿ ನೋಡೆ ಬಿಡುವ ಎನ್ನುವ ಮನಸ್ಥೈರ್ಯವಾಗಲಿ ಇರಲಿಲ್ಲ. ಕರಡಿಯ ಬಗ್ಗೆ ಬಹಳಷ್ಟು ಚರ್ಚೆಯಾಗತೊಡಗಿತು, ಕಾಡು ಪ್ರಾಣಿಗಳಲ್ಲಿ, ಬಹಳ ಕುಚೇಷ್ಟೆ ಪ್ರಾಣಿ ಎಂದರೇ ಕರಡಿ, ಅದು ಮನುಷ್ಯನನ್ನು ತಿನ್ನುವುದಿಲ್ಲ ಆದರೆ ನಮ್ಮ ಉಮೇಶ್ ರೆಡಿಯಂತೆ, ಒಂದು ಬಗೆಯ ಮೋಜು ಪಡೆಯುತ್ತದೆ, ಮನುಷ್ಯನ ದೇಹದ ಮೇಲೆ ಆಟವಾಡಿ ಕಿರುಕುಳು ಕೊಟ್ಟು ಸಾಯಿಸಲು ಬಯಸುತ್ತದೆ. ಪ್ರೀತಿಯಿಂದ ಮಾಡುತ್ತದೋ ಅಥವಾ ಮೋಜಿನಿಂದಲೋ ಅಥವಾ ಇನ್ನೆನು ಇರುತ್ತದೆಯೋ ಅದರ ಅಂತರಾಳ ಅದಕ್ಕೆ ಗೊತ್ತು. ನಾನು ಆಗ್ಗಾಗ್ಗೆ ಕರಡಿಯನ್ನು ನಮ್ಮ ಕನ್ನಡದ ಕೆಲವು ನಟರಿಗೆ ಮತ್ತು ನಿರ್ದೇಶಕರಿಗೆ ಹೋಲಿಸುತ್ತೇನೆ. ಅವರು ತೆಗೆಯುವ ಸಾಕಷ್ಟು ಸಿನೆಮಾಗಳು ಹಾಗೆಯೇ, ಅದನ್ನು ನಮ್ಮ ಮೇಲೆ ಅಥವಾ ಕನ್ನಡದ ಮೇಲೆ ಸೇಡು ತೀರಿಸಲು ತೆಗೆಯುತ್ತಾರೋ ಅಥವಾ ಪ್ರೀತಿಯಿಂದಲೋ ತಿಳಿಯುವುದಿಲ್ಲ.ಕುಳಿತು ನೋಡುತ್ತಿದ್ದರೆ ಸಹಿಸಲಾರದ ಅಸಹನೆ ಮೂಡುತ್ತದೆ.ಅಂತೂ ನವೀನ ನಮ್ಮನ್ನು ನವೀನ ದಾರಿಯಲ್ಲಿ ಕರೆದೊಯ್ಯುವ ಸಾಹಸ ಮಾಡಿ ದಾರಿ ತಪ್ಪಿಸಿ, ಸಂಜೆ ಐದು ಮೂವತ್ತಕ್ಕೆ ಮನೆ ಬಿಟ್ಟವರು ರಾತ್ರಿ ಎಂಟು ಗಂಟೆಯ ತನಕ ದಾರಿ ಹುಡುಕುವುದರಲ್ಲಿಯೇ ಕಳೆದೆವು. ನಾನು ಒಮ್ಮೊಮ್ಮೆ ಬಹಳ ನಿರಾಸಕ್ತಿಯಿಂದ ವರ್ತಿಸುತ್ತೇನೆ, ಅದಕ್ಕೆ ಇದೊಂದು ನಿದರ್ಶನ. ಅವನು ಬೆಟ್ಟಕ್ಕೆ ಹೋಗುತ್ತಿದ್ದೇವೆ ರಾತ್ರಿ ಅಲ್ಲಿ ಇರಬೇಕೆಂದು ಹೇಳಿದರು, ನಮ್ಮ ಕೈಯಲ್ಲಿ ಒಂದೇ ಒಂದು ಟಾರ್ಚ್ ಇರಲಿಲ್ಲ, ಪೆಟ್ರೋಲ್, ಅಥವಾ ಡೀಸೇಲ್ ಇರಲಿಲ್ಲ, ಮೂಲಭೂತವಾಗಿ ಬೇಕಿದ್ದ ಔಷಧಿಗಳು ಇರಲಿಲ್ಲ, ಕೊನೆ ಪಕ್ಷ ಒಂದು ಬಾಟಲಿ ನೀರು ಇರಲಿಲ್ಲ. ನನ್ನ ದಡ್ಡತನದಿಂದಾಗಿ ಎಲ್ಲರೂ ವ್ಯಥೆ ಪಡುವಂತಾಯಿತು. ಕೊನೆಗೆ ನಡೆಯಲಾಗದೇ, ನಡೆದ ದಣಿವನ್ನು ತಣಿಸಲು ನೀರಿಲ್ಲದೇ ಕೊರಗುವಂತಾಯಿತು. ಅಷ್ಟು ಸುತ್ತಿಬಳಸಿ ಕೊನೆಗೆ ಬೆಟ್ಟಕ್ಕೆ ಹತ್ತುವ ದಾರಿ ಸಿಕ್ಕಿತು. ಆ ಊರಿಗೆ ನಾನು ಹೊಸಬ, ನವೀನನಿಗೆ ಅಲ್ಲಿನ ಬಗ್ಗೆ ತಿಳಿದಿದ್ದರೂ ಅವನು ಅಪರೂಪಕ್ಕೊಮ್ಮೆ ಹೋಗುವುದರಿಂದ ಸದ್ಯದಲ್ಲಾದ ದಾರಿ ಬದಲಾವಣೆಗಳು ಅವನನ್ನು ದಾರಿ ತಪ್ಪುವಂತೆ ಮಾಡಿದೆವು. ಮೊದಲೇ ನಮ್ಮ ಕಿರಣನಿಗೆ ದೇವಸ್ಥಾನದಲ್ಲಿ ಹಂದಿಮಾಂಸ ಬೇಯಿಸುವುದು ಇಷ್ಟವಿರಲಿಲ್ಲ, ನನಗೋ ಹೊಟ್ಟೆ ಹಸಿದು ಸುಸ್ತಾಗಿದ್ದೆ, ಇನ್ನೂ ವಿಜಿಯಂತೂ ಅನ್ನ ಕಂಡು ಶತಮಾನವಾದವನಂತೆ ಹಂಬಲಿಸುತ್ತಿದ್ದ. ಬಹುಸಂಖ್ಯಾಂತರ ಮುಂದೆ ನವೀನನ ಉತ್ಸಾಹ ಉಡುಗಿ ಹೋಯಿತು. ನೀರು ಸಿಕ್ಕಿದ್ದಲ್ಲಿ ಅಡುಗೆ ಮಾಡಿ, ಊಟ ಮಾಡಿದ ನಂತರ ಹೋಗುವುದೆಂದು ತೀರ್ಮಾನಿಸಿದೆವು.ಸ್ವಲ್ಪ ದೂರ ನಡೆದ ಮೇಲೆ, ಸ್ವಲ್ಪ ಮಟ್ಟದಲ್ಲಿ ಹರಿಯುವ ನೀರು ಕಂಡಿತು. ಅಲ್ಲಿಯೇ ಎಂದು ತೀರ್ಮಾನವೂ ಆಯಿತು.ನವೀನ ನಮಗೆ ಇನ್ನೂ ಸ್ವಲ್ಪ ದೂರ ನಡೆದರೇ ಅಲ್ಲಿ ಸುಂದರವಾದ ಹೊಂಡವಿದೆ ಅಲ್ಲಿಯೇ ಹೋಗಿ ಅಡುಗೆ ಮಾಡೋಣವೆಂದು ತಿಳಿಸಿದ. ನವೀನ ಎನ್ನುವ ವ್ಯಕ್ತಿಯ ಮೇಲೆ ನಂಬಿಕೆ ಕಳೆದುಕೊಂಡಿದ್ದ ಮೂವರು ಬಕಾಸುರರಿಗೆ ಅವನ ಮಾತಿನಲ್ಲಿ ನಂಬಿಕೆ ಬರಲಿಲ್ಲ.ನೀರು ಸರಿಯಿಲ್ಲವೆಂದರೂ ಕೇಳದೇ ಅಯ್ಯೊ ಇದೆಲ್ಲಾ ನೈಸರ್ಗಿಕ ನೀರು, ಇಲ್ಲಿ ಸರ್ವವೂ ಶುಭ್ರವಾಗಿರುತ್ತದೆ, ಯಾವುದೇ ಕಲ್ಮಶವಿರುವುದಿಲ್ಲವೆಂದು ವಾದಿಸಿ, ನೀರನ್ನು ಮೊಗೆದು, ಅದನ್ನು ಸೋಸಿ ತುಂಬಿಸಿಕೊಂಡು ಅಡುಗೆ ಮಾಡೋಣವೆಂದು ನೆನೆದೆವು. ಕಡೆಗೂ ಅಲ್ಲಿಯೇ ಅಡುಗೆ ಮಾಡುವುದೆಂದು, ಮಾಡಿದ ನಂತರ ಹೊರಡುವುದೆಂದು ಮೇಲಕ್ಕೆ ಹೋಗಿ ಮಲಗುವುದೆಂದು ತೀರ್ಮಾನವಾಯಿತು.ಅಡುಗೆ ಮಾಡಲು ಶುರುಮಾಡುವ ಮುನ್ನವೇ ಕಿರಣ ಮಲಗುವ ಯೋಜನೆಯ ಬಗ್ಗೆ ಚರ್ಚಿಸತೊಡಗಿದ. ಇಲ್ಲೇ ಮಲಗೋಣ ಊಟವಾದ ಮೇಲೆ ಅಲ್ಲಿಗೆ ಹೋಗುವುದು ಬೇಡ, ಹಂದಿ ತಿಂದು ದೇವಸ್ಥಾನಕ್ಕೆ ಹೋಗುವುದು ಸರಿಯಿಲ್ಲ, ಅದು ಇದು ಎಂದು ಕಥೆ ಹೇಳತೊಡಗಿದ.

ಸದಾ ಶಿಸ್ತಿನ ಸಿಪಾಯಿಯಾಗಿರುವ ಕಿರಣ, ಅಡುಗೆ ಮಾಡುವಾಗ ನಡೆಸಿದ ತಂತ್ರಗಳಂತೂ ನಮ್ಮ ಸಹನೆಯನ್ನು ಪರೀಕ್ಷಿಸುತ್ತಿರುವಂತೆ ಎನಿಸುತ್ತಿತ್ತು. ಈರುಳ್ಳಿಯನ್ನು ಸಮನಾಗಿ ಹೆಚ್ಚಿ ಹಾಕುವ ತನಕ ಬಿಡಲಿಲ್ಲ, ಮೆಣಸಿನ ಕಾಯಿಯನ್ನು ಉದ್ದುದ್ದ ಕತ್ತರಿಸಿ, ಅದನ್ನು ನಾಲ್ಕು ಸಮನಾದ ಭಾಗವಾಗಿ ಕತ್ತರಿಸಿ,ಟೋಮೋಟೋ ಅನ್ನು ಆದಷ್ಟೂ ಕ್ರಮವಾಗಿ ಉತ್ತರಿಸಿ ಹಾಕತೊಡಗಿದ. ಅದೆಲ್ಲವೂ ಸರಿ ಬೇಗ ಪಾತ್ರೆಗೆ ಹಾಕಿ ಒಮ್ಮೆ ಬೇಯಿಸಿ ತಿಂದರೇ ಸಾಕೆನ್ನುವ ನನ್ನ ಬಯಕೆಯಂತೂ ಆದಷ್ಟೂ ನಿಧಾನವಾಗತೊಡಗಿತು. ಕೊನೆಗೊಮ್ಮೆ ಎಣ್ಣೆ ಹಾಕಿ ಒಗ್ಗರಣೆ ಹಾಕೋಣವೆಂದರೂ ಕೇಳದೆ, ಇಲ್ಲ ಮೊದಲು ಈರುಳ್ಳಿ, ಮೆಣಸಿನಕಾಯಿ ಎಣ್ಣೆಯಲ್ಲಿ ಬೇಯಲಿ, ನೀರಿಲ್ಲದೇ ಮಾಂಸ ಉಪ್ಪು ಹಿಡಿದರೇ ಮಾತ್ರ ರುಚಿ, ಅದು ಇದೂ ಎಂದು ನಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸಿದ. ಅಯ್ಯೊ ನಿನಗೆ ಇಷ್ಟ ಬಂದಂತೆ ಮಾಡಿ ನಮ್ಮ ಜೀವ ಉಳಿಸಿಕೊಡು ಎಂದು ಗೊಗರೆದ ಮೇಲೆ, ಅಡುಗೆ ಕಾರ್ಯದಿಂದ ನಮ್ಮನ್ನು ಮುಕ್ತಿಗೊಳಿಸಿದ. ಅಂತೂ ಇಂತೂ ಹೊಟ್ಟೆ ಭರ್ತಿ ಆಗುವಷ್ಟು ಹಂದಿ ಮಾಂಸ, ಕೋಳಿ ಮಾಂಸ ಹೆಂಡ ಸಿಗರೇಟ್ ಸೇರಿದ ಮೇಲೆ ಇನ್ನೂ ಬೆಟ್ಟದ ಮೇಲಾದರೇನು, ಕೇಳಗಾದರೇನು ವ್ಯತ್ಯಾಸ ಸರಿ ಇಲ್ಲೇ ಮಲಗುವುದೆಂದು ನಿರ್ಧರಿಸಿ ಕಾಲು ನೀಡಿದೆವು. ಅನುಭವಸ್ಥ ನವಿನನ ಮಾತು ಉಪಯೋಗಕ್ಕೆ ಬರಲಿಲ್ಲ.ಮುಂಜಾನೆ ಸಮಯದಲ್ಲಿ ತಡೆಯಲಾರದಷ್ಟು ಚಳಿಯಾಗುವುದು, ತಣ್ಣನೆ ಗಾಳಿ ಬೀಸುವುದು, ನಮ್ಮನ್ನು ತತ್ತರಿಸುವಂತೆ ಮಾಡುವುದೆಂಬ ಅವನ ಮಾತುಗಳು ನಮ್ಮನ್ನು ಬ್ಲಾಕ್ ಮೆಲ್ ಮಾಡುತ್ತಿರುವಂತೆ ಕಾಣಿಸಿತು. ಅದೇನೆ ಆಗಲಿ ಕಂಬಳಿಯಿದೆ, ರಗ್ಗುಗಳಿವೆ, ಜರ್ಕಿನ್ ಗಳಿವೆ, ಶ್ವೆಟರ್ ಗಳಿವೆ ನೋಡೆ ಬಿಡೋಣವೆಂದು, ನೈಸರ್ಗಿಕ ಚಳಿಗೆ ಸವಾಲೆಸೆದು ಮಲಗಿದೆವು. ಮಲಗಿದೆವು ಎನ್ನುವ ಪದ ಇಲ್ಲಿ ಅನರ್ಥವಾಗುತ್ತದೆ.ಕಣ್ಣು ಮುಚ್ಚಿ ಅರೆಗಳಿಗೆಯೂ ಆಗಿರಲಿಲ್ಲ, ಗಾಳಿ ಬೀಸತೊಡಗಿತು, ಅದೊಂದು ಗಾಳಿಯಲ್ಲ, ಶೀತಲ ಮಾರುತ, ಅದರ ಬಿರುಸಿಗೆ ನಮ್ಮ ಪಾತ್ರೆಗಳು, ನಮ್ಮ ಬಾಟಲಿಗಳು ಎತ್ತೆಲ್ಲಾ ಓಡಾಡತೊಡಗಿದವು, ನಾವು ಹಾಕಿದ ಬೆಂಕಿ ಉರಿ ನಿಲ್ಲಲ್ಲಿಲ್ಲ. ಅದನ್ನು ಉರಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ನಾನು ನೆಮ್ಮದಿಯಾಗಿ ಕಿರಣನ ರಗ್ಗನ್ನು ಕಿತ್ತುಕೊಂಡು ಕಾಲು ಚಾಚಿದೆ.ಕಿರಣ ಚಳಿ ತಡೆಯಲಾರದೇ ಅಲ್ಲಿ ಸುತ್ತ ಮುತ್ತಲಿಂದ ಸೌದೆಯನ್ನು ತಂದು, ಇದ್ದ ಸೀಮೆ ಎಣ್ಣೆಯನ್ನು ಸುರಿದು, ಸುತ್ತ ಮರೆ ಮಾಡಿ ಬೆಂಕಿಯ ಶಾಖ ಪಡೆಯಲು ಪ್ರಯತ್ನಿಸುತ್ತಲೇ ಇದ್ದ, ಅದೆಷ್ಟು ಹೊತ್ತು ಹಾಗೆ ಮಾಡಿದನೋ ತಿಳಿಯದು, ಬೆಳ್ಳಿಗ್ಗೆ ಎದ್ದು ಅವನ ಕಣ್ಣುಗಳನ್ನು ಕಂಡಾಗಲೇ ಅರ್ಥವಾದದ್ದು ಅವನು ರಾತ್ರಿಯಿಡಿ ಮಾಡಿದ ನಿದ್ದೆಯ ಸೊಬಗು.ಕಣ್ಣು ಕೆಂಪಾಗಿ, ಅರಳಿದ್ದವು. ಎಷ್ಟು ಹೊತ್ತಿಗೆ ಮಲಗಿದರೂ ಮುಂಜಾನೆ ಐದು ಗಂಟೆಗೆ ಏಳುವ ಚಾಳಿ ಅವನಿಗಿದೆ. ಎದ್ದವನು ಸುಮ್ಮನೆ ಇರುವ ಜಾಯಮಾನದವನೂ ಅಲ್ಲ, ಜೊತೆಗಿದ್ದವರ ಮೇಲೆ ಅವನು ಸೇಡು ತೀರಿಸಿಕೊಳ್ಳುವ ಸುಸಮಯವೇ ಮುಂಜಾನೆ. ನಮಗೆ ಮುಂಜಾನೆಯ ನಿದ್ದೆಯೇ ಬದುಕು ಅವನಿಗೆ ಅದನ್ನು ಸರ್ವನಾಶ ಮಾಡುವುದೇ ನಿತ್ಯ ಕ್ರಿಯೆ. ಬೆಳಿಗ್ಗೆ ಅವನು ಮತ್ತು ನವಿನ ಇಬ್ಬರೂ ಎದ್ದು, ಕೈಯಲ್ಲಿದ್ದ ಕ್ಯಾಮೆರಾ ಹಿಡಿದು ಬಗೆ ಬಗೆಯ ಭಂಗಿಯ ಫೋಟೋ ತೆಗೆಯುವದರಲ್ಲಿ ತಲ್ಲೀನರಾಗಿದ್ದರು. ನನಗೆ ಅವರ ಮಾತುಗಳು ಎಲ್ಲಿಂದಲೊ ಬರುತ್ತಿರುವಂತೆ ಕೇಳುತ್ತಿದ್ದವು. ಅಂತೂ ನನ್ನನ್ನು ಕೂಡ ಎಬ್ಬಿಸಿದರು. ಮಗಾ ಒಂದು ಸಲ ನೋಡು ಹೇಗಿದೆ ನೋಡೂ, ಮೋಡ ನೋಡು, ಸೀನರಿ ನೋಡು ಅದು ಇದು ಎಂದು ಕಥೆ ಹೇಳತೊಡಗಿದರು. ನಾನು ಕಂಬಳಿಯ ಒಳಗಿಂದಲೇ ಕ್ಯಾಮೆರಾದಲ್ಲಿ ಫೋಟೋ ತೆಗೆದಿರಿ, ನಂತರ ನೋಡುತ್ತೇನೆ ಎಂದೆ.ನಂತರ ಬಹಳ ಕಷ್ಟ ಪಟ್ಟು ಎದ್ದು ನೋಡಿದೆ, ಕಣ್ಣು ಬಿಟ್ಟ ಒಂದೆರಡು ನಿಮಿಷ ಏನು ಕಾಣದಿದ್ದರೂ ನಂತರ ನೋಡಿದೆ. ಅದೊಂದು ಬರಿ ಗುಡ್ಡವಲ್ಲ, ಮೋಡವೇ ಕೈಗೆಟಗಿದಂತೆ ಭಾವಿಸುವಂತಹ ಸುಂದರ ಲೋಕ. ಅದೆಂಥಹ ಸುಂದರ ತಂಗಾಳಿ, ಅದೆಂಥಹ ಸೊಬಗು, ಅಬ್ಬಬ್ಬಾ ನಿಜಕ್ಕೂ ನಾವು ಬೆಟ್ಟದ ಮೇಲೆ ಹೋಗಿ ಮಲಗಬೇಕಿತ್ತು ಎನಿಸಿತು. ಸುತ್ತಣ ಗುಡ್ಡಗಳು ಸೂರ್ಯನ ಕಿರಣಗಳಿಂದ ಮಿಂಚುತ್ತಿದ್ದವು. ಬೆಟ್ಟದ ತಳಭಾಗದಲ್ಲಿದ್ದ ಕೆರೆಯ ಸೊಬಗಂತೂ ಹೇಳಲು ಸಾಲದು, ಅದೊಂದು ಅದ್ಬುತ ಅನುಭವ, ಅಲ್ಲಿಂದ ಕೆಳಗಿಳಿಯಲು ಮನಸ್ಸು ಬರುತ್ತಿರಲಿಲ್ಲ, ಆದರೇ ಹೊಟ್ಟೆಯದೇ ಬೇರೆಯ ಯೋಚನೆ. ಅದು ನಮ್ಮ ಕಣ್ಣಿನ ಮಾತಿಗೆ ಸ್ಪಂದಿಸಲು ಸಿದ್ದವಿರಲಿಲ್ಲ. ನಂತರ ಅಲ್ಲಿಂದ ಸ್ವಲ್ಪ ಮೇಲೆ ಹತ್ತಿ ಹೋದೆವು, ಅಲ್ಲಿಯೆ ಒಂದು ಆಲದ ಮರವಿದೆ, ಬಂಡೆಯ ಮೇಲಿನ ಆಲದ ಮರದಡಿಯಲ್ಲಿ ಸುಂದರ ಹೊಂಡ, ಮರದ ನೆರಳು ಆ ನೀರಿನಲ್ಲಿ ಕಾಣುತ್ತಿರುವುದನ್ನು ಕಂಡರೇ ಅದೆಂಥಹ ಸೊಗಸು ನೋಡಿಯೇ ಅನುಭವಿಅಸಬೇಕು. ಸ್ವಲ್ಪ ಹೊತ್ತು ಅಲ್ಲೆಲ್ಲಾ ಅಡ್ಡಾಡಿ ಕೆಳಗೆ ಇಳಿಯಲು ನಿರ್ಧರಿಸಿದೆವು. ಇಳಿಯುವ ದಾರಿಯುದ್ದಕ್ಕೂ ಆ ಬಂಡೆಯನ್ನು ಒಡೆಯಲು, ಪ್ರಯತ್ನಿಸಿದ ಕುರುಹುಗಳಿದ್ದವು.

ಕೆಳಗಿಳಿದ ಮೇಲೆ ಅಜ್ಜಿಯೊಂದಿಗಿನ ಮಾತುಕತೆಯಿಂದ ತಿಳಿದ ವಿಷಯೆಂದರೇ ಆ ಬೆಟ್ಟದಲ್ಲಿ ದಶಕಗಳ ಹಿಂದೆಲ್ಲಾ ದನಗಳ ಜಾತ್ರೆ, ಉತ್ಸವಗಳು, ಬಹಳಷ್ಟು ನಡೆಯುತ್ತಿದ್ದವು. ಕಾಲ ಕ್ರಮೇಣ ಅವೆಲ್ಲಾ ಕರಗಿದವು. ಅಲ್ಲಿ ದೊರೆಯುತ್ತಿದ್ದ ಔಷದಿ ಸಸ್ಯಗಳು ಮರೆಯಾದವು. ಕಲ್ಲು ಒಡೆಯುವುದು, ಸಾಮಾನ್ಯವಾಯಿತು. ಇದು ಎಲ್ಲ ಊರಿನ ದುರಂತ ಇದ್ದದ್ದನ್ನು ಕಳೆದುಕೊಂಡು ಹೀಗೆತ್ತೆಂಬ ಕನಸಿನ ಗೋಪುರವನ್ನು ಬಣ್ಣಿಸುವುದು ನಮ್ಮ ಅಜ್ಜಿಯರ ಗುಣ, ಹಾಗಿದಿದ್ದರೆ ಅದೆಷ್ಟು ಚೆನ್ನಾಗಿರುತ್ತಿದೆಂಬುದು ನಮ್ಮ ಅನಿಸಿಕೆ, ನಾವು ನಮ್ಮತನವನ್ನು ನಿಜಕ್ಕೂ ಉಳಿಸಲು ಪ್ರಯತ್ನಿಸಿದ್ದೇವಾ?

16 ಡಿಸೆಂಬರ್ 2009

ಬದುಕಿನ ಸಾರ್ಥಕತೆಗೆ ಅರ್ಥವಿದೆಯಾ!!!!

ಬದುಕು ಒಮ್ಮೊಮ್ಮೆ ಒಂದೊಂದು ಬಗೆಯಾಗಿ ಹರಿದು ಹಂಚಿಹೋಗುವುದನ್ನು ನೋಡುತ್ತಿದ್ದರೆ ಬದುಕಿನ ಅರ್ಥವೇನು? ಸಾರ್ಥಕತೆಯ ಅರ್ಥವೇನು?ಇವೆಲ್ಲವೂ ಆಗುವುದರ ಹಿಂದಿನ ರಹಸ್ಯವೇನು ಹೀಗೆ ಹತ್ತು ಹಲವಾರು ಒಮ್ಮೊಮ್ಮೆ ಸಾವಿರಾರು ಪ್ರಶ್ನೆಗಳು ತಾನೇ ತಾನಾಗಿ ಉದ್ಬವಿಸುತ್ತವೆ. ಪ್ರಶ್ನೆಗಳೇ ಜೀವನವಾಗಿ ನಡೆಯುವಾಗ ನಮಗೆ ಜೀವನವೆಂಬುದು ನಿಜಕ್ಕೂ ಅಸಹನೀಯವೆನಿಸುತ್ತದೆ. ಓದುವಾಗ ಪರೀಕ್ಷೆಯ ಕಾಟಕ್ಕೆ ಕೊರಗುತ್ತಿದ್ದ ನಾವು ಓದಿದ ಮೇಲೆ ಕೆಲಸ ಹುಡುಕಲು ಪರದಾಡುತ್ತ ನಮ್ಮನ್ನು ನಾವೆ ಕೊಲೆಗೈಯ್ಯುತ್ತಾ ಹೋಗುತ್ತೇವೆ.ಕೆಲಸ ಸಿಕ್ಕಿದ ಮೇಲೆ ನಮ್ಮ ಮತ್ತು ನಮ್ಮ ಜೊತೆಯವರೊಂದಿಗೆ ಇಲ್ಲಸಲ್ಲದ ವಿಷಯಕ್ಕೆ ಮನಸು ಬೇಸರಗೊಳ್ಳುತ್ತದೆ. ನಮ್ಮ ಮೇಲಧಿಕಾರಿಯೆಂಬ ಮನುಷ್ಯ ನಮ್ಮ ಸ್ವಾತಂತ್ರ್ಯವನ್ನೆಲ್ಲಾ ಕಸಿದುಕೊಂಡವನಂತೆ ನಮ್ಮ ಮೇಲೆ ಸದಾ ಸವಾರಿ ಮಾಡುವವನಂತೆ ಕಾಣುತ್ತಾನೆ. ಮನುಷ್ಯ ತಾನೊಂದು ಬಗೆದರೆ ದೇವವೊಂದು ಬಗೆಯುತ್ತಾನೆಂಬುದು ಬಹಳಷ್ಟು ಬಾರಿ ಸತ್ಯವೆನಿಸುತ್ತದೆ. ನಾವು ಬಯಸುವುದೇನೆಂಬುದೆ ನಮ್ಮ ಮುಂದಿರುವ ಸವಾಲು!!! ನಿಜಕ್ಕೂ ನಮಗೆ ಇರುವ ಅಗತ್ಯತೆ ಏನೆಂಬುದು ನಮಗೆ ಅದೆಷ್ಟೋ ಬಾರಿ ತಿಳಿದಿರುವುದಿಲ್ಲ. ಇರುವುದರಲ್ಲಿ ಸಂತೋಷಪಡುವುದಿಲ್ಲವೆನ್ನುವುದಕ್ಕಿಂತ ನಮಗೆ ಬೇಕಿರುವುದನ್ನು ತಿಳಿಯುವ ಸಾಮರ್ಥ್ಯ ನಮಗಿರುವುದಿಲ್ಲ. ಕಾರಣಗಳು ಹಲವಿರಬಹುದು, ನನಗೆ ತಿಳಿದಂತೆ ಜೀವನಕ್ಕೆ ಬೇಕಿರುವ ಅವಶ್ಯಕತೆಗಳು ಮತ್ತು ಅನಿವಾರ್ಯತೆಗಳ ನಡುವೆ ಇರುವ ತೆಳ್ಳನೆಯ ವ್ಯತ್ಯಾಸವನ್ನು ಅರಿತಿರುವುದಿಲ್ಲ. ನಮಗೊಂದು ಕೆಲಸದ ಅನಿವಾರ್ಯತೆ ಇರುತ್ತದೆ, ಅದರೆ ನಮಗೆ ನಮ್ಮ ಆಸಕ್ತಿಯುಳ್ಳ ವಿಷಯದಲ್ಲಿ ನಮಗೆ ಕೆಲಸ ಬೇಕಿರುವ ಅವಶ್ಯಕತೆಯಿರುತ್ತದೆ. ಆದರೆ ನಮಗೆ ಆಸಕ್ತಿಯಿರುವ ವಿಷಯದಲ್ಲಿ ನಾವು ಕಾಯ್ದು ಉದ್ದಾರವಾಗುವ ತಾಳ್ಮೆ ಸಹನೆ ನಮಗಿರುವುದಿಲ್ಲ ಅಥವಾ ನಮ್ಮ ಸಮಾಜ ನಮ್ಮ ಸುತ್ತ ಮುತ್ತಲಿನ ಪರಿಸರ ಅದಕ್ಕೆ ಅನಿವು ಮಾಡಿಕೊಡುವುದಿಲ್ಲ. ಉದಾಹರಣೆಗೆ ಬಹಳಷ್ಟೂ ಮಕ್ಕಳು ಚಿಕ್ಕವರಿರುವಾಗ ನಾಟಕ, ಅಭಿನಯದಲ್ಲಿ ಆಸಕ್ತಿಯಾಗಿರುತ್ತಾರೆ ಅತ್ತುತ್ತಮ ಗಾಯಕರಾಗುವ ಎಲ್ಲ ಲಕ್ಷಣಗಳು ಇರುತ್ತವೆ, ಆದರೆ ಪೋಷಕರ ಮುಂಜಾಗೃತೆಯಿಂದಾಗಿ, ಅಥವಾ ಅವರ ಕಹಿ ಅನುಭವದಿಂದಾಗಿ ಅವರನ್ನು ದೂರವಿಡುತ್ತದೆ. ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಮನೆಯ ಮಗನಾಗಿ ಅವನಿಗೆ ಅವನದೆ ಹಲವಾರು ಜವಬ್ದಾರಿಗಳಿದ್ದು ಅವನ ಆಸೆ ಕನಸುಗಳನ್ನು ಬಲಿ ಕೊಡಬೇಕಾಗುವುದು.

ಇಂಥಹ ಸನ್ನಿವೇಶಗಳು ಹೆಣ್ಣು ಗಂಡುಗಳಿಬ್ಬರಿಗೂ ಅನ್ವಯಿಸುತ್ತದೆ. ಇಲ್ಲಿ ಭೇಧ ಭಾವವಿರುವುದಿಲ್ಲ.ಒಳ್ಳೆಯ ಗಾಯಕರು, ಡ್ಯಾನ್ಸ್ ಮಾಡುತ್ತಿದ್ದ, ಕ್ರ‍ಿಕೇಟ್, ಫುಟ್ ಬಾಲ್, ಅಥವಾ ಪ್ರಥಮ ರ‍್ಯಾಂಕ್ ಬಂದ ಬಹಳಷ್ಟು ನನ್ನ ಸ್ನೇಹಿತರು ತಮಗೆ ಹೊಂದದ ಅಥವಾ ಆಸಕ್ತಿಯಿಲ್ಲದ ಉದ್ಯೋಗದಲ್ಲಿ ಸೋಮಾರಿಗಳಾಗುವಂತೆ ಮಾಡಿಬಿಟ್ಟಿದೆ. ಹೈಸ್ಕೂಲಿನ ಜೀವನದಲ್ಲಿದ್ದ ಬಹಳಷ್ಟು ಬುದ್ದಿವಂತರೆನಿಸಿಕೊಂಡ ಸ್ನೇಹಿತರು ಸರ್ಕಾರಿ ಉದ್ಯೋಗದಲ್ಲಿದ್ದರೂ ಅವರಲ್ಲಿ ಸಮಾಜದ ಬಗ್ಗೆ ಬಹಳಷ್ಟು ಕಾಳಜಿಯಿದ್ದರೂ ಅವರ ಕೈಗಳನ್ನು ಕಟ್ಟಿ ಹಾಕಿ, ಸಾಕಪ್ಪ ಈ ಉದ್ಯೋಗ ಈ ಸಮಾಜ ಈ ಜನತೆ ಎನ್ನುವಂತೆ ಮಾಡುವ ಈ ಜೀವನದ ಅರ್ಥವೇನು? ಪ್ರತಿಯೊಬ್ಬ ಯುವಕನು ತನ್ನ ಸಮಾಜ ತನ್ನ ದೇಶದ ಏಳಿಗೆಗಾಗಿ ಏನಾದರೊಂದು ಮಾಡಬೇಕು ನನ್ನ ಜನತೆಯನ್ನು ನನ್ನ ಪ್ರಾಣಕಿಂತ ಪ್ರೀತಿಸಿ ಅದರ ಉನ್ನತಿಯ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತಾನೆ. ಯಾವೊಬ್ಬ ಯುವಕನೂ ಕೇವಲ ತನ್ನ ಏಳಿಗೆಯಾದರೆ ಸಾಕೆಂದು ಬಯಸುವುದಿಲ್ಲ, ಹಾಗೆ ಬಯಸಿದ್ದೇ ಆದ್ದಲ್ಲಿ ಅವನು ಯುವಕನೇ ಅಲ್ಲ ಅವನೊಬ್ಬ ವಯಸ್ಸಾದ ತನ್ನ ಜೀವನ ಮುಗಿಯುತ್ತಿದೆಯೆಂದು ನಿರ್ಧರಿಸಿ ತನ್ನ ಸ್ಥಿರತೆಗಾಗಿ ಪ್ರಯತ್ನಿಸುವ ಮಧ್ಯಮ ವಯಸ್ಕ.ತನ್ನಯ ಬಗ್ಗೆ ತನಗೆ ನಂಬಿಕೆ ಇಲ್ಲದವನು ಮಾತ್ರ ತನ್ನ ವೈಯಕ್ತಿಕ ಏಳಿಗೆಗೆ ಪ್ರಯತ್ನಿಸುತ್ತಾನೆ ಅಥವಾ ಅದರ ಬಗ್ಗೆ ಶ್ರಮಿಸುತ್ತಾನೆ.ತನ್ನತನದಲ್ಲಿ ತನ್ನ ಆದರ್ಶಗಳಲ್ಲಿ ನಂಬಿಕೆ ಉಳ್ಳವನು ತಾನು ಬೆಳೆದು ತನ್ನವರನ್ನು ತನ್ನ ಸಮಾಜ, ತನ್ನ ದೇಶವನ್ನು ಮೇಲೆತ್ತಲು ಅಥವಾ ತನ್ನ ಕೈಮೀರಿ ಅದಕ್ಕೆ ಋಣ ತೀರಿಸಲು ಚಿಂತಿಸುತ್ತಾನೆ. ಕೇವಲ ಚಿಂತಿಸಿದರೇ ಬಂದ ಫಲವೇನು? ಅದನ್ನು ಕಾರ್ಯರೂಪಕ್ಕೆ ತರುವ ಮಾರ್ಗವೇನು? ಕಾರ್ಯರೂಪಕ್ಕೆ ತರಲು ನಿಜಕ್ಕೂ ಸಾಧ್ಯವಿದೆಯಾ? ಇದ್ದರೇ ಅದರ ಮಾರ್ಗವೇನು? ಪ್ರತಿಯೊಬ್ಬ ಭಾರತೀಯನು ತನ್ನ ಅಂತರಾಳಕ್ಕೆ ಒಪ್ಪುವ ಕೆಲಸ ಮಾಡಿದರೇ ಮಾತ್ರ ಅದರ ಕನಸು ನನಸಾಗಲು ಸಾಧ್ಯ. ಪಿ.ಎಚ್.ಡಿ ಮಾಡುವ ವಯಸ್ಸಿಗೆ ಇಲ್ಲಸಲ್ಲದ ರಾಜಕೀಯ ನಮ್ಮನ್ನು ಸುತ್ತಿರುತ್ತದೆ. ಐದಾರು ವರ್ಷಗಳು ಯುನಿವರ್ಸಿಟಿಗಳಲ್ಲಿ ಕುಳಿತು ಗೈಡ್ ಗಳ ಗುಲಾಮಗಿರಿ ಮಾಡಿದವನು ಹೊರಬಂದೊಡನೆ ತನಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸುವಲ್ಲಿ, ತನ್ನ ಶಿಷ್ಯ ವೃಂದವನ್ನು ಗುಲಾಮರನ್ನಾಗಿಸಿಕೊಳ್ಳುತ್ತಾನೆ. ಅವನೊಂದಿಗೆ ಅವನ ಆದರ್ಶಗಳು ನೆಲ ಕಚ್ಚುತ್ತವೆ.ಇದರಂತೆಯೇ ಎಲ್ಲ ಸರ್ಕಾರಿ ಇಲಾಖೆಗಳಲ್ಲಿಯೂ ನೀವು ನಮ್ಮ ಮಹರಾಜರನ್ನು ಕಾಣಬಹುದು. ಅದಕ್ಕೊಂದು ನಿದರ್ಶನವೆಂದರೆ, ನಮ್ಮ ಮಾಲಿನ್ಯ ನಿಯಂತ್ರಣ ಇಲಾಖೆ, ವಿಜ್ನಾನದ ಗಂಧವೇ ಇಲ್ಲದವರನ್ನೂ ನೀವು ಅಲ್ಲಿ ವೈಜ್ನಾನಿಕ ಅಧಿಕಾರಿಗಳಾಗಿ ಕಾಣಬಹುದು, ಒಮ್ಮೆ ಅವರಲ್ಲಿಗೆ ಹೋಗಿ ಮಾಲಿನ್ಯದ ಬಗ್ಗೆ ಕುರಿತು ಕೇಳಿ ನೋಡಿ, ಅದೊಂದು ವಿಷಯ ಬಿಟ್ಟು ಇಲಾಖೆಯಲ್ಲಿರುವ ಎಲ್ಲಾ ರಾಜಕೀಯವನ್ನು, ಜಾತಿಯತೆಯನ್ನು ನಿಮ್ಮ ಕಿವಿಗೆ ಊದುತ್ತಾರೆ. ಸಾಮಾನ್ಯ ಜ್ನಾನವೂ ಇರುವುದಿಲ್ಲ. ಇನ್ನೂ ಕೆಲವು ಅಧಿಕಾರಿಗಳಂತೂ ಅವರಲ್ಲಿಗೆ ಮಾಹಿತಿ ಕೇಳಿ ಹೋದರೆ ಹಾವು ಕಡಿದಂತೆ ಆಡುತ್ತಾರೆ. ಅವರ ಬಳಿಗೆ ಹೋಗಿ ನೀವು ನಮ್ಮ ಜನತೆಯ ಸೇವೆಗೆ ಇರುವವರು ನಮಗೆ ಬೇಕಿರುವ ಮಾಹಿತಿ ನೀಡಿ ಸೇವೆ ನೀಡಬೇಕೆಂದರೆ, ನಿಮ್ಮ ತಿಥಿಯ ದಿನಾಂಕ ನಿಗದಿಪಡಿಸಿಬಿಟ್ಟಾರು ಜೋಕೆ. ಎಲ್ಲರೂ ಹೀಗಿರುತ್ತಾರೆನ್ನುವುದಿಲ್ಲ, ಆದರೆ ಬಹಳಷ್ಟೂ ಮಂದಿ ಹೀಗೆಯೇ ಇರುತ್ತಾರೆ,ನಾನು ನನಗೆ ಅತಿ ಮೆಚ್ಚುಗೆಯಾದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲೇಬೇಕು, ಅವರು ನೀರಾವರಿ ಇಲಾಖೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ದ್ವಿತೀಯ ದರ್ಜೆಯ ಗುಮಾಸ್ತೆಯಾಗಿದ್ದಾರೆ, ಅವರ ಬಳಿಯಲ್ಲಿ ಅರ್ಧ ಗಂಟೆಯಷ್ಟು ಕುಳಿತರೆ ನಿಮ್ಮ ಕಾಲೆಜಿನಲ್ಲಿ ತಿಳಿಸದ ಅದೆಷ್ಟೋ ನಿರಾವರಿಗೆ, ಡ್ಯಾಂ ಗಳಿಗೆ ಸಂಬಂದಪಟ್ಟ ವಿಷಯಗಳನ್ನು ನಿಮಗೆ ಹೇಳಿಕೊಡುತ್ತಾರೆ.ಯಾವ ಇಂಜಿನಿಯರುಗಳಿಗೂ ಕಡಿಮೆಯೆನಿಸುವುದಿಲ್ಲ. ಆದರೇ ಮೊದಲು ಹೇಳಿದ ಅಧಿಕಾರಿಗಳಿಗೆ, ನಮ್ಮಂತೆಯೇ ಒಲ್ಲದ ಮನಸ್ಸಿನಿಂದ ಕೆಲಸ ಮಾಡುವ ಕರ್ಮ ಬಂದಿರುವುದೆನ್ನುವುದು ನನ್ನ ಅನಿಸಿಕೆ.ಆದರೇ ಇವರ ಅಚ್ಚು ಮೆಚ್ಚಿನ ವಿಷಯವೆಂದರೇ, ರಾಜಕೀಯ, ಜಾತಿಯತೇ, ಮತೀಯತ, ಪ್ರಾಂತೀಯತೆ, ಸಂಬಳ ಹೆಚ್ಚಳ ಕೊರತೆ,ಅದರಲ್ಲಿನ ಲೋಪ ದೋಷಗಳು.

ನಾನು ಕಂಡಂತೆ ಎಲ್ಲರೂ ರಾಜಕೀಯದ ಬಗ್ಗೆ ಮಾತನಾಡುತ್ತಾರೆ, ಈಗ ಇರುವ ಮಹನೀಯರನ್ನೇ ತಡೆಯಲಾಗುತ್ತಿಲ್ಲ ಇನ್ನೂ ಇವರನ್ನೂ ಅವರೊಂದಿಗೆ ಸೇರಿಸಿದರೆ ನಮ್ಮ ಬದುಕಿನ ಗತಿ ಏನು?ಜಾತಿಯತೆಯ ಬಗ್ಗೆ ಎಂದರೇ ಪ್ರತಿಯೊಂದು ಜಾತಿಗೂ ನಾಲ್ಕು ಜನರು ಮಠಾಧೀಶರಿದ್ದಾರೆ, ಅವರು ಇರುವ ಜಾತಿಯನ್ನು ಮತ್ತೆ ಒಳ ಪಂಗಡಗಳಾಗಿ ಹಂಚಿ ಹರಿದಿದ್ದಾರೆ ಇನ್ನು ಇವರನ್ನೂ ಸೇರಿಸಿದರೆ ನಮ್ಮ ಗೋಳನ್ನು ಕೇಳಲು ಭೂಮಿಯ ಮೇಲೆ ಜನರೇ ಇಲ್ಲದಂತೆ ಮಾಡಿ ಬಿಡುತ್ತಾರೆ.ಇಂಥವುಗಳನ್ನು ತಗ್ಗಿಸುವ ಮಾರ್ಗವದರೂ ಯಾವುದು??

10 ಡಿಸೆಂಬರ್ 2009

ಬೇಸತ್ತ ಬದುಕಿಗೊಂದು ಪರ್ಯಾಯ ಪಯಣ!!!




ಸೋಮಾರಿತನ ಅನ್ನೋದು ಎಷ್ಟರಮಟ್ಟಿಗೆ ಬೆನ್ನತ್ತಿದೆಯೆಂದರೇ, ಸದಾ ಮಲಗಿದಿದ್ದರೇ ಚೆನ್ನಾಗಿರುತಿತ್ತು ಅನ್ಸುತ್ತೆ. ಜಗತ್ತು ಬರಿ ರಾತ್ರಿಗಳಿಂದಲೇ ತುಂಬಿದಿದ್ದರೇ ಸೊಗಸಾಗಿರುತ್ತಿತ್ತು. ಮುಂಜಾನೆ ಏಳುವುದು, ಹತ್ತಾರು ಮೈಲಿ ತನಕ ಬೈಕ್ ಹತ್ತಿ ಹೊಗೆ ಕುಡಿದು ಆಫೀಸಿಗೆ ಹೋಗುವುದು,ಆಫೀಸಿಗೆ ಬಂದರೇ ಬೆಳ್ಳಿಗ್ಗೆಯಿಂದ ರಾತ್ರಿವರೆಗೆ ಬರೀ ಮೀಟೀಂಗೂ ಮೀಟೀಂಗೂ ಅಬ್ಬಬ್ಬಾ ಜೀವನದ ಬಗ್ಗೆ ತಾತ್ಸಾರ ಮೂಡುವುದಕ್ಕೆ ಇದಕ್ಕಿಂತ ಬೇರೇನೂ ಬೇಡವೆನಿಸುತ್ತದೆ. ಜಗತ್ತಿನ ಬಗ್ಗೆ ತಿಳಿಯುವುದಕ್ಕೆ ಅಂತ ಒಮ್ಮೊಮ್ಮೆ ಪ್ರಯತ್ನಿಸಿ ನೋಡಿ! ನಿಮ್ಮ ತಲೆ ಕೆಟ್ಟಿರುವುದು ಸಾಬಿತಾಗುತ್ತದೆ. ಕುಳಿತು ಮಲಗಿ ಸಾಕಾಗಿ ಕೊನೆಗೆ ಒಮ್ಮೆ ಅರಣ್ಯವಾಸ ಮಾಡಿಬರೋಣ ಅಂತಾ ಹೊರಟೆವು. ನಾನು ಮತ್ತೆ ನನ್ನ ಗೆಳೆಯರಾದ, ನಂದ, ಮಹೇಶ, ಯೋಗಿ ಮತ್ತು ವಿಜಿ ಚಾರಣ ಮಾಡೊಣವೆಂದು ನಿರ್ಧರಿಸಿದೆವು. ಬೆಂಗಳೂರಿನಿಂದ ಹೊರಡುವಾಗ ರಾತ್ರಿ ಸುಮಾರು ಹನ್ನೆರಡಾಗಿತ್ತು. ಬಸ್ಸಿನಲ್ಲಿ ಕುಳಿತು ಹೊರಟೆವು, ನಮ್ಮ ಮೊದಲನೆ ಪ್ಲಾನ್ ಪ್ರಕಾರ ನಾವು ಮುಂಜಾನೆ ೫-ಅಥವಾ ೬ ಗಂಟೆಗೆ ಸಕಲೇಶಪುರದಿಂದ ಚಾರಣ ಆರಂಭಿಸಬೇಕಿತ್ತು. ಆದರೇ ನಮ್ಮ ತಂಡದಲ್ಲಿದ್ದ ಬಕಾಸುರ ಭಕ್ತಾದಿಗಳು ಕೋಳಿ ತೆಗೆದುಕೊಳ್ಳದೇ ಹೋಗಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿ, ಕೋಳಿ ತೆಗೆದುಕೊಂಡು ಸಕಲೇಶಪುರ ಬಿಡುವಾಗ ಹತ್ತು ಗಂಟೆಯಾಯಿತು. ನಾನು ಭರ್ಜರಿಯಾಗಿ ಮೂರ್ನಾಲ್ಕು ಇಡ್ಲಿ ಮತ್ತು ಚಿತ್ರಾನ್ನ ತಿಂದು ನನ್ನ ದೇಹಕ್ಕೆ ಬೇಕಿದ್ದ ಇಂಧನವನ್ನು ಭರ್ತಿಮಾಡಿಕೊಂಡೆ. ಅಂತೇಯೇ ನಮ್ಮ ತಂಡದಲ್ಲಿದ್ದವರೆಲ್ಲರೂ ಬಕಾಸುರನಿಗೆ ಪ್ರತಿಸ್ಪರ್ಧಿಗಳಾಗಿದ್ದರಿಂದ ಅವರ ಇಂಧನದ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.ಮೊದಲೇ ತಡವಾಗಿದ್ದರಿಂದ ರಾತ್ರಿಯ ನಮ್ಮ ತಂಗುವ ತಾಣಕ್ಕೆ ಹೋಗಲು ತಡವಾಗುತ್ತದೆಂದು ಬಸ್ಸು ಹಿಡಿದು ಕಾಡುಮನೆ ಎಸ್ಟೆಟ್ ಹತ್ತಿರಕ್ಕೆ ಹೋಗಿ ಅಲ್ಲಿದ್ದ ರೈಲಿನ ಹಳಿಯನ್ನು ತಲುಪಿದೆವು. ಬಸ್ಸು ಇಳಿದ ತಕ್ಷಣವೇ ನಾವು ಚಾರಣಕ್ಕೆ ಹೊರಟವರೆಂದು ಅಲ್ಲಿದ್ದ ತೋಟದವರೊಬ್ಬರು ನಮ್ಮೊಡನೆ ಸ್ವಲ್ಪ ದೂರ ಬಂದು ಚಾರಣದ ಬಗ್ಗೆ ಸ್ವಲ್ಪ ಹೇಳಿ ನಮ್ಮಯ ಬಗ್ಗೆ ಕೇಳಿ ತಿಳಿದು ಹೋದರು. ಅವರ ನನ್ನ ನಡುವೆ ನಡೆದ ಮಾತಿನ ಸಾರಾಂಶವಿಷ್ಟೆ, ಅಲ್ಲಿರುವ ಎಲ್ಲ ಸಣ್ಣಪುಟ್ಟ ತೊರೆಗಳಿಗೂ ಒಂದಲ್ಲ ಒಂದು ಡ್ಯಾಂ ಕಟ್ಟುತ್ತಿದ್ದಾರೆ, ಅದರಿಂದ ಆಗುವ ಅನೂಕಲ ಅನಾನೂಕೂಲತೆಯ ಬಗ್ಗೆ ಏನು ತಿಳಿಸಿಲ್ಲ.
ಇದು ಎಲ್ಲರ ಬದುಕಿನಲ್ಲಿಯೂ ಆಗುವಂತಹದ್ದೆ, ಹಳ್ಳಿಯಾದರೇನು, ಪಟ್ಟಣವಾದರೇನು? ಸರ್ಕಾರ ಮಾಡುವ ಕಾರ್ಯಗಳ ಬಗ್ಗೆ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಲುಪುವುದು ತೀರಾ ವಿರಳ. ನಮ್ಮ ಜನತೆಯೂ ಅಷ್ಟೆ ಅದರ ಬಗ್ಗೆ ತಿಳಿಯಲು ಹೋಗುವುದು ಅತಿ ವಿರಳ. ನಾನು ಇದನ್ನು ಹಲವಾರು ಬಗ್ಗೆ ಪರೀಕ್ಷಿಸಿದ್ದೇನೆ. ಯಾವ ಅಧಿಕಾರಿಗಳು ಜನತೆಗೆ ಬೇಕಿರುವ ಬಗ್ಗೆ ಮಾಹಿತಿ ಕೊಟ್ಟು ಸಹಕರಿಸುವಂತೆ ಕಾಣುವುದಿಲ್ಲ.ಅಂತೂ ಇಂತೂ ರೈಲ್ವೇ ಹಳಿಗಳ ಮೇಲೆ ಕಾಲಿರಿಸಿದ್ದೇ ತಡ ನನ್ನ ಮಿತ್ರರೂ ಕ್ಯಾಮೇರಾ ತೆಗೆದು ಫೋಟೋ ತೆಗೆಯಲು ಆರಂಭಿಸಿದರು. ಬನ್ನಿ ಬನ್ನಿ ನಾವು ಬಹಳ ದೂರ ಹೋಗಬೇಕು ನಾಳೆ ಸಂಜೆ ತನಕ ಫೋಟೋ ತೆಗೆಯಬಹುದು ಎಂದರೇ, ಅಯ್ಯೊ ಸುಮ್ಮನೆ ಇರಪ್ಪ ಮೊದಲನೆ ಸಾರಿ ಬಂದಿದ್ದೇವೆ ಆದಷ್ಟೂ ಫೋಟೋ ತೆಗಿಬೇಕು ಎಂದರು. ಏನೋ ಮಾಡಿಕೊಂಡು ಹಾಳಾಗಿ ಎಂದು ಮುನ್ನೆಡೆದೆ. ಹಳಿಯ ಕೆಲಸ ಮಾಡುತ್ತಿದ್ದವರೊಡನೆ ಮಾತನಾಡಲು ನೊಡಿದರೆ ಅಲ್ಲಿದ್ದವರೆಲ್ಲರೂ ತೆಲುಗು ನಾಡಿನವರು.ನನ್ನ ಹರುಕು ಮುರುಕು ತೆಲುಗು ಬಳಸಿ ಮಾತನಾಡುತ್ತ ಮುನ್ನೆಡೆದೆ. ನಿಜವಾಗಿಯೂ ಶ್ರಮಜೀವಿಗಳು ತೆಲುಗು ನಾಡೀನವರು.ರಾಜ್ಯ ಬಿಟ್ಟು ರಾಜ್ಯಕ್ಕೆ ಕೇವಲ ಕೂಲಿ ಕೆಲಸಕ್ಕೆ ಬರುವುದು ಸಾಮಾನ್ಯ ಸಂಗತಿಯಲ್ಲ. ಅನಿವಾರ್ಯತೆ ಅನ್ನದ ಮಹಿಮೆಯೆಂದರೇ ಇದು ಎನ್ನುವುದಕ್ಕೆ ಇದೊಂದು ಉದಾಹರಣೆ. ಗದ್ದೆ ಕೆಲಸಕ್ಕೂ ಸೋಮಾರಿತನ ಬಂದು ನಮ್ಮ ಜನರನ್ನು ಗದ್ದೆಗೆ ಕರೆದು ಹೋಗಬೇಕೆಂದರೆ ಎರಡು ಬಾಟಲ್ ಓ ಸಿ ತೋರಿಸಲೇಬೇಕು. ಎಷ್ಟು ನಡೆದರೂ ಉದ್ದಕ್ಕೂ ಬರೀ ರೈಲ್ವೆ ಹಳಿಗಳೇ ಕಾಣುತಿದ್ದವು. ಆದರೂ ರಲ್ವೇ ಅನ್ನೋದು ನಿಜಕ್ಕೂ ಶ್ಲಾಘನೀಯ. ಅಂಥಹ ಕಾಡಿನ ಮಧ್ಯೆಯಲ್ಲಿಯೂ ಕೂಡ ರೈಲ್ವೇ ತೆಗೆದುಕೊಂಡು ಹೋಗಿರುವುದು ಹೆಮ್ಮೆಯ ವಿಚಾರ. ಬಹಳಷ್ಟೂ ಕೆಲಸಗಳು, ರೈಲ್ವೆ ಕಾಮಗಾರಿ, ರಸ್ತೆಗಳು ಅಂದಿನ ಕಾಲದಲ್ಲಿ ಮರ ಸಾಗಣೆ ಮಾಡಲು ಇಂಗ್ಲೀಷರು ಬಳಸಿರುವುದು ಸತ್ಯವಾದರೂ ನಮ್ಮ ಈಗಿನ ಪರಿಸ್ತಿಯಲ್ಲಿ ಕೇವಲ ಅವುಗಳನ್ನು ಸುಸ್ಥಿತಿಗೆ ತರಲು ಪರದಾಡಬೇಕಿದೆ. ನಾವು ಅದರಲ್ಲಿ ಮುಂದೆ ಇದ್ದಿವಿ, ಇದರಲ್ಲಿ ಮುಂದೆ ಇದ್ದಿವಿ, ಎಂದು ನಮ್ಮ ಬೆನ್ನನ್ನು ನಾವೇ ಚಪ್ಪರಿಸುತ್ತಾ ಓಡಾಡುವುದು ನಮ್ಮನ್ನು ನಮ್ಮ ನೈಜ ಸ್ಥಿತಿಯ ಬಗ್ಗೆ ಕಣ್ಣು ಮುಚ್ಚುವಂತಾಗಿಸಿದೆ. ನಮ್ಮ ಅಹಂ ನಿಂದಾಗಿ ಅಂಧತೆಯಲ್ಲಿ ಮುಳುಗಿರುವುದು ಸತ್ಯವಾದರೂ, ಅವುಗಳೆಲ್ಲವನ್ನು ನಾವು ಒಪ್ಪುವುದಿಲ್ಲ. ಕೇವಲ ಮಂಗಳೂರು ಬೆಂಗಳೂರು ನಡುವೆ ರೈಲು ಓಡಾಡಿದರೇ ಆಗಬುಹುದಾದ ಅನೂಕೂಲತೆಯ ಬಗ್ಗೆ ನಮ್ಮ ರಾಜ ದೊರೆಗಳು ಪ್ರಸ್ತಾಪಿಸುವುದಿಲ್ಲ.
ಅದೇನೆ ಇರಲಿ, ನಮ್ಮ ಚಾರಣದ ಬಗ್ಗೆ ತಮಗೆ ಹೆಚ್ಚು ತಿಳಿಸೋಣ, ಅಲ್ಲಿಂದ ಹೋಗುವಾಗ ಹಲವಾರು ಬಾರಿ ರೈಲನ್ನು ಕಂಡೆವು. ಎರಡು ರೈಲು ಪ್ರಯಾಣಿಕರನ್ನು ಕರೆದೋಯ್ದದ್ದನ್ನು ಬಿಟ್ಟರೆ ಮಿಕ್ಕೆಲ್ಲಾ ರೈಲುಗಳು ಗೂಡ್ಸ್ ರೈಲುಗಳು.ಕಬ್ಬಿಣದ ಅದಿರನ್ನು ತುಂಬಿಕೊಂಡು ಹೋಗುವ ರೈಲನ್ನು ಕಂಡಾಗ ನನಗೆ ನೆನಪಾದದ್ದು, ನಮ್ಮ ಹಾಸನ ಮಂಗಳೂರು ರಾಷ್ಟ್ರೀಯ ಹೆದ್ದಾರಿ. ಅದೆಷ್ಟೂ ಬಾರಿ ಅದನ್ನು ದುರಸ್ತಿಗೊಳಿಸಿದರೂ ಅದು ಸರಿಯಾಗುತ್ತಲೇ ಇಲ್ಲ, ಅಂಥಹ ಸಮಯದಲ್ಲಿ ನಮ್ಮ ರೈಲಿನಲ್ಲಿ ಸಾಗಿಸಿದರೇ, ವಾಯು ಮಾಲಿನ್ಯ, ಮತ್ತು ಆರ್ಥಿಕ ತೊಂದರೆಯನ್ನು ತಪ್ಪಿಸಬಹುದು. ವರ್ಷಕ್ಕೆ ನಾಲ್ಕಾರು ಬಾರಿ ರಸ್ತೆಗೆ ತಾರು ಬಳಿಯುವುದನ್ನಾದರೂ ತಪ್ಪಿಸಬಹುದೇನೋ!! ರಸ್ತೆಯುದ್ದಕ್ಕೂ ನಾವು ಸಕಲೇಶಪುರದಿಂದ ಫ್ಲಾಸ್ಕ್ ಗೆ ತುಂಬಿಸಿದ್ದ ಓಂದು ಲೀಟರ್ ಟೀ ಸವಿಯುವುದು ಜೊತೆಗೊಂದು ಸಿಗರೇಟು ಸೇದಿ ವಾಯುಮಾಲಿನ್ಯದ ಬಗ್ಗೆ ಭಾಷಣ ಬಾರಿಸುತ್ತಾ ಹೊರಟೆವು. ಅಂತೂ ಇಂತೂ ನಡೆದು ಓಡೋಡಿ ಮಳೆ ಬರುವ ಮುನ್ನಾ ಎಡುಕುಮೇರಿ ಎಂಬ ರೈಲ್ವೆ ನಿಲ್ದಾಣ ತಲುಪಿದೆವು. ಉದ್ದುದ್ದ ಸೇತುವೆಗಳು ೧೦೦ರಿಂದ ೨೦೦ ಅಡಿಗಳಷ್ಟೂ ಆಳವಾಗಿದ್ದವು, ಒಂದೊಂದು ಸೇತುವೆಗಳು ಅರ್ಧ ಕೀಮೀ ಅಷ್ಟೂ ಉದ್ದವಿದ್ದವು. ಮಧ್ಯದಲ್ಲಿ ರೈಲು ಬಂದರೇ ನಮ್ಮ ಗತಿ ಏನು? ಎನ್ನುವ ಪ್ರಶ್ನೆಯೂ ಬಹಳ ಸಾರಿ ನಮ್ಮ ಮುಂದೆ ಬಂದಿತ್ತು. ಆದರೂ ಆರು ವರ್ಷದಿಂದ ಹಿಂದೆ ನಾನು ಹೋಗಿದ್ದಾಗ ಇದ್ದ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ.ಹಿಂದೆ ನಾವು ಹೋದಾಗ ಹೆಚ್ಚೆಂದರೆ, ಹತ್ತು ಜನರನ್ನು ಕಂಡಿರಲಿಲ್ಲ. ಆದರೇ ಈ ಬಾರಿ ದಾರಿ ಉದ್ದಕ್ಕೂ ಜನರೇ ತುಂಬಿದ್ದರು. ನಾವು ಕಾಡಿನ ಮಧ್ಯೆ ಇದ್ದಿವೆಂಬ ಅರಿವು ಇಡೀ ದಿನ ಬರಲೇ ಇಲ್ಲ.ಒಂದು ಮಂಡಲದ ಹಾವನ್ನು ಬಿಟ್ಟರೇ ಮಿಕ್ಕಿದ್ದೇನೂ ಕಾಣಲಿಲ್ಲ. ರಾತ್ರಿ ನಾವು ತೆಗೆದುಕೊಂಡು ಹೋಗಿದ್ದ ಕೋಳೀ ಮಾಂಸವನ್ನು ಮಾಡಲು ಸಿದ್ದತೆ ಮಾಡುವಾಗ ಬರೋ ಅಂತಾ ಮಳೆ ಶುರುವಾಯಿತು.ಕುಮಾರಣ್ಣ ಅನ್ನೋ ಒಬ್ಬ ಮಹಾಸ್ವಾಮಿ ನಮ್ಮ ಕಡೆಗೆ ಕರುಣೆ ತೋರಿಸಿ, ನಮಗೆ ಅನ್ನದಾನ ನೀಡಿ, ಜೊತೆಗೆ ರಾತ್ರಿ ಇಡಿ ನಮ್ಮ ಜೊತೆ ಹರಟೆ ಹೊಡೆದು ನಮಗೆ ಜೊತೆಗಾರನಾಗಿದ್ದ.ಕುಡಿತ ಎಂತವನನ್ನು ಮೂಢನಾಗಿಸುತ್ತೆ ಅನ್ನೋದಕ್ಕೆ ನಮ್ಮ ಕುಮಾರನ್ನ ಒಂದು ಸೂಕ್ತ ಉದಾಹರಣೆ, ನಮ್ಮ ಜೊತೆ ಕುಡಿದು ಅವರ ಬಾಸ್ ಬಗ್ಗೆ ಕೆಟ್ಟದ್ದಾಗಿ ಮಾತನಾಡಿ ಕಡೆಗೆ ಉಗಿಸಿಕೊಂಡು ಹೋದ. ಕುಡಿದಾಗ ಜಗತ್ತಿಗೆ ನಾನೇ ದೊಡ್ಡವನೆಂಬ ಭಾವನೆ ಮೂಡುವುದು ನಿಜಕ್ಕೂ ಹೆಮ್ಮೆಯ ವಿಷಯ.ಅಂಥಹ ಆತ್ಮವಿಶ್ವಾಸ ಬರುವುದಾದರೂ ಹೇಗೆಂಬುದು ನನಗೆ ಅರಿಯದ ವಿಷಯ.
ದಿನವಿಡಿ ನಡೆದು ಹೋದದ್ದಕ್ಕೆ ನಿದ್ದೆ ಬಂದಿರುವುದು ಅರಿವಾಗಲಿಲ್ಲ. ಮುಂಜಾನೆ ನಾಲ್ಕು ಗಂಟೆಗೆ ರೈಲಿನಲ್ಲಿ ಹೋಗೋಣವೆಂದು ಎದ್ದೆವು ರೈಲು ಅಲ್ಲಿ ನಿಲ್ಲಿಸುವುದಿಲ್ಲವಾದರೂ ಅಲ್ಲಿನ ರೈಲ್ವೆ ಸಿಬ್ಬಂದಿ ನಿಲ್ಲಿಸಿಕೊಡುವ ಭರವಸೆಯಿತ್ತರು. ಹತ್ತಲು ಪರದಾಡಿದಾಗ ರೈಲಿನಲ್ಲಿದ್ದವರೆಲ್ಲರೂ ಗಾಬರಿಗೊಂಡು ರೈಲಿನ ಬಾಗಿಲು ತೆಗೆಯಲೇ ಇಲ್ಲ.ಅಂತೂ ಐದು ನಿಮಿಷ ನಿಂತಿದ್ದ ರೈಲು ಹೊರಟು ಹೊಯಿತು. ಮುಂದೆನೂ ಎಂದು ಅಲ್ಪ ಸ್ವಲ್ಪ ದೂರ ನಡೆದು ಕುಳಿತೆವು. ಸುತ್ತಲೂ ಕತ್ತಲಾಗಿತ್ತು, ಕುಳಿತ ಸ್ವಲ್ಪ ಸಮಯದಲ್ಲಿಯೇ ಸುತ್ತಣ ಮೋಡದ ಬಣ್ಣ ಬದಲಾಗತೊಡಗಿತ್ತು, ಆ ಸುಂದರ ತಾಣದ ಬಗ್ಗೆ ಹೊಗಳುವ ಅವಶ್ಯಕತೆಯಿಲ್ಲ ಅದನ್ನು ಅನುಭವಿಸಿಯೇ ತೀರಬೇಕು.ಊರು ಬಿಟ್ಟು ಮುಂಜಾನೆ ಸಮಯದಲ್ಲಿ ಅಥವಾ ಮುಸ್ಸಂಜೆಯಲ್ಲಿ ಕಾಡಿನಲ್ಲಿ, ಬೆಟ್ಟದ ಮೇಲೆ, ನದಿ ದಂಡೆಯಲ್ಲಿ, ಸೇತುವೆಯ ಮೇಲೆ, ಮಳೆಯಲ್ಲಿ, ಮಂಜಿನಲ್ಲಿ, ಇವುಗಳ ಅನುಭವಗಳು ಬೆಂಗಾಡಿನ ಬದುಕಿಗೆ ಹಸಿರು ಛಾವಣಿಯಿದ್ದ ಹಾಗೆ.ಬೆಂಗಳೂರು ಟ್ರಾಫಿಕ್ ನಲ್ಲಿ ಬೇಸತ್ತಿದ್ದ ನನಗಂತೂ ಎಲ್ಲಿಲ್ಲದ ಆನಂದ ಉಕ್ಕಿ ಬಂತು. ಅಲ್ಲೇ ಇರೋಣವೆನ್ನುವಷ್ಟು.ಆದರೂ ಹೊರಡಬೇಕಿತ್ತಲ್ಲ ರೈಲಿನ ಹಳಿಯ ಮೇಲೆ ನಡೆಯಲು ಯಾರಿಗೂ ಇಷ್ಟವಿರಲಿಲ್ಲ, ಅಲ್ಲಿಂದ ದೂರದ ಒಂದು ಹಾದಿಯನ್ನು ಗುರಿಯಾಗಿಟ್ಟುಕೊಂಡು ನಡೆದೆವು. ರೈಲಿನ ಹಳಿಯಿಂದ ದಿಡೀರನೆ, ಕೆಳಕ್ಕೆ ಹೆಚ್ಚು ಕಡಿಮೆ ನೂರು ಅಡಿಗಳಷ್ಟು ಆಳಕ್ಕೆ ಒಮ್ಮೆಗೆ ಜಾರಿ ಇಳಿದೆವು. ನಾವಿದ್ದ ವೇಷ ಭೂಷಣಗಳು ಬಣ್ಣ ಬದಲಾದವು.ಕೆಳಗೆ ದಣಿವು ತಣಿಸಲು ಕುಳೀತು ಟೀ ಕಾಯಿಸಿ ಕುಡಿದು, ಹೊರಡಲು ಸಿದ್ದರಿದ್ದಾಗ ಮೇಲಿನಿಂದ ಯಾರೋ ಅಪರಿಚಿತರ ಆ ದಾರಿಯಲ್ಲಿ ಹೋಗಬೇಡಿ, ನದಿ ತುಂಬಿ ಹರಿಯುತ್ತಿದೆ, ದಾಟಲಾಗುವುದಿಲ್ಲವೆಂದರು. ನಮ್ಮ ನಮ್ಮಲ್ಲೇ ವಾದ ವಿವಾದಗಳು ಆಗಿ, ಕಡೆಗೆ ಒಮ್ಮೆ ನದಿ ದಂಡೆಗೆ ಹೋಗಿ ನೋಡುವ ತೀರ್ಮಾನವಾಯಿತು. ಹೊರಟ ಐದಾರು ನಿಮಿಷದಲ್ಲಿಯೇ, ಅದೇ ದಾರಿಯಲ್ಲಿ ಒಂದು ಕಾಡೆಮ್ಮೆ ನಡೆದ ಹೆಜ್ಜೆ ಗುರುತು ಕಂಡಿತು. ಅದು ಒಂದೇ ಹೋಗಿರುವುದರಿಂದ ಕಾಡುಕೋಣವಿರಬಹುದೆಂಬುದನ್ನು ಊಹಿಸಿ ಬಹಳ ಹೆಚ್ಚರವಾಗಿ ಮುನ್ನೆಡೆದೆವು. ದಾರಿ ಉದ್ದಕ್ಕೂ ಕಾಲಿಗೆ ನೂರಾರು ಜಿಗಣೆಗಳು ಹತ್ತುತ್ತಿದ್ದವು, ಅವುಗಳನ್ನು ಕೀಳುವುದಕ್ಕೆ ಅಂತಾ ನಿಂತರೂ ಮುಗಿದೇ ಹೋಯಿತು, ಕೈಗಳಿಗೆ ಹತ್ತಿ ಬಿಡುತ್ತಿದ್ದವು. ಮುಂದುವರೆದು ಹೋದರೇ, ದಾರಿಯಲ್ಲಿ ಆನೆಯ ಲದ್ದಿಯ ಸಾಲು ಸಾಲು, ಒಂದೆಡೆಗೆ ಭಯ ಶುರುವಾಯಿತು. ಬಲಗಡೆಗೆ ಎತ್ತರದ ಬೆಟ್ಟವಿದೆ, ಎಡಕ್ಕೆ ಪ್ರಪಾತವಿದೆ, ಹಿಂದೆ ಓಡಲು ಆಗುವುದಿಲ್ಲ, ಆನೆ ಬಂದರೇ ಅಥವಾ ಯಾವುದೇ ಮೃಗ ಸಿಕ್ಕರೂ ನಮ್ಮ ಅಂದಿನ ಅಥವಾ ಈ ಜನ್ಮದಿನವನ್ನು ಕಾಣುವುದು ನಿಶ್ಚಯವೆನಿಸಿತು.ಇರುವುದು ಐದು ಜನ ವನ್ಯಮೃಗಗಳು ನಮಗೆ ಹಾನಿ ಮಾಡಲೇಬೇಕೆಂದು ಮಾಡದಿದ್ದರೂ ಅವುಗಳ ಕ್ಷೇಮಕ್ಕಾಗಿಯಾದರೂ ನಮ್ಮ ಮೇಲೆ ಧಾಳಿ ಮಾಡಬಹುದಲ್ಲವೇ?ಏನಾದರೊಂದು ಆಗಲಿ ಎಂದು ಬಹಳ ಎಚ್ಚರದಿಂದ ಮುನ್ನೆಡೆದೆವು ಅದೆಷ್ಟೂ ದೂರ ನಡೆದೆವೂ ಅತೀ ವೇಗದಿಂದ ನಡೆದೆವು. ಕನಿಷ್ಟ ಹದಿನೈದು ಕೀಲೋಮೀಟರ್ ನಷ್ಟಾದರೂ ನಡೆದಿದ್ದೇವೆಂಬುದು ನಮ್ಮ ಅನಿಸಿಕೆ. ನದಿಯ ಸದ್ದು ಕೇಳುತ್ತಿತ್ತೇ ವಿನಾಃ ಅದರ ಸುಳಿವು ಸಿಗುತ್ತಲೇ ಇರಲಿಲ್ಲ, ನಮಗೆ ಒಂದೆಡೆಗೆ ಆನೆಯ ಭಯ ಮತ್ತೊಂದೆಡೆಗೆ ನದಿ ತುಂಬಿ ಹರಿಯುತ್ತಿದ್ದರೇ ಮತ್ತೆ ಇದೇ ದಾರಿಯಲ್ಲಿ ನಡೆಯುವುದು ಅಸಾಧ್ಯ.ನಾವು ನಡೆಯುತ್ತಿದ್ದ ದಾರಿಯೂ ಆನೆ ದಿನ ನಿತ್ಯ ನದಿಗೆ ಹೋಗುವ ಹಾದಿ, ಆನೆ ಕೆಳಗೆ ನಮಗೆ ಸಿಗದಿದ್ದರೇ ಮೇಲಿನಿಂದ ಅಲ್ಲಿಗೆ ಮತ್ತೆ ಬಂದೇ ಬರುತ್ತದೆ. ಕೇಳಗೆ ಇದ್ದರೇ ಮೇಲಕ್ಕೆ ಹೋಗಲೇ ಬೇಕು, ಇದೆಂಥಹ ಹಣೆಬರಹವಾಯಿತ್ತಲ್ಲ. ಕಾಡು, ನೋಡುವುದಕ್ಕೆ ಸೊಗಸು, ಅಲ್ಲಿನ ಮೃಗಗಳ ನೆನಪಾದರೇ, ಜೀವದ ಜೊತೆಗೆ ಆಡುವ ಸೆಣಸಾಟ ಯಾರಿಗೂ ಬೇಡದ ವಸ್ತು.ಕಾಡಿಗೆ ಹೋಗುವವರು ಪ್ರಾಣಿಗಳನ್ನು ಎದುರಿಸಲು ಎಲ್ಲ ಸಿದ್ದತೆ ಮಾಡಿ ಹೋದರೆ ಅದು ಸಾರ್ಥಕ ಇಲ್ಲದೇ ಇದ್ದರೆ ಒಂದು ಭಯ ಇಲ್ಲವೇ ನಮ್ಮ ಶವವೂ ಸಿಗುವುದಿಲ್ಲ. ಅಂತೂ ಇಂತೂ ನದಿಯ ದಂಡೆಗೆ ಬಂದೆವು, ಇತ್ತ ಕಡೆಯಿಂದ ನೋಡಿದರೇ ಆ ಬದಿಯಲ್ಲಿ, ರಾಷ್ಟ್ರೀಯ ಹೆದ್ದಾರಿ ೪೮ ಇದೆ, ಅಬ್ಬಾ ಎನಿಸಿತು. ನದಿ ಅಂಥ ವೇಗದಲ್ಲೇನೂ ಹರಿಯುತ್ತಿಲ್ಲವೆಂದು ತೀರ್ಮಾನಿಸಿ ಕುಳಿತೆವು.ಇಲ್ಲಿ ಕೂರುವುದು ಬೇಡ ಬಂದ ವೇಗದಲ್ಲಿಯೇ ನದಿಯನ್ನು ದಾಟಿ ಬಿಡುವುದು ಉತ್ತಮವೆಂದು ತೀರ್ಮಾನಿಸಿ ನದಿ ದಾಟಲು ಸಿದ್ದರಾದೆವು. ನದಿಗೆ ಇಳಿದು ಸ್ವಲ್ಪ ದೂರ ನಡೆದಾಕ್ಷಣ ತಿಳಿಯುತು ನದಿಯ ವೇಗ ಬಹಳ ಹೆಚ್ಚಿತ್ತು. ನಮಗೆ ಎಲ್ಲಿಲ್ಲದ ನಿರಾಶೆ ಮೂಡಿತು. ಮಾಡುವುದೇನು?ಯಾರೊಬ್ಬರೂ ಹಿನ್ನೆಡೆಯಲು ಸಿದ್ದರಿರಲಿಲ್ಲ.ಅಂತೆಯೇ ಮುನ್ನೆಡೆಯಲು ಆಗುತ್ತಿರಲಿಲ್ಲ. ಬದಿಯಲ್ಲಿ ಇಪ್ಪತ್ತು ಅಡಿಗಳಷ್ಟು ಉದ್ದದು ಒಂದು ಮರದ ಬಡಿ ಬಿದ್ದಿತ್ತು, ಅದನ್ನು ಹಿಡಿದು ದಾಟಲು ಯತ್ನಿಸಿದೆವು, ಬಡಿಯು ಹಸಿವಾಗಿತ್ತು, ಕನಿಷ್ಟ ಮುವತ್ತು ಕೆಜಿಯಷ್ಟಾದರೂ ಇದ್ದಿರಬೇಕು. ಅದನ್ನು ಬಳಸಿ ಎದ್ದು ಬಿದ್ದು ಎರಡು ಗಂಟೆಗಳ ಸತತ ಪ್ರಯತ್ನದಿಂದ ನದಿ ದಂಡೆಯನ್ನು ತಲುಪಿದೆವು.ತಲುಪಿದ ಕೂಡಲೇ ಪೂರ್ತಿ ಒದ್ದೆಯಾಗಿದ್ದ ನಮ್ಮ ಬ್ಯಾಗುಗಳನ್ನು ಬಿಸಿಲಿಗೆ ಇಟ್ಟು ನೀರಿನಲ್ಲಿ ಕಾಲು ಬಿಟ್ಟು ಮಲಗಿದೆವು.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...