13 ಅಕ್ಟೋಬರ್ 2009

ಬರವಣಿಗೆಯ ಬದುಕಿನಲ್ಲಿ ಉಳಿಯುವುದೇನು??

ಸದಾ ಕೆಲಸದ ಒತ್ತಡದಲ್ಲಿ, ಅಥವಾ ಇಲ್ಲ ಸಲ್ಲದ ಸುತ್ತಾಟದಲ್ಲಿ ಬರವಣಿಗೆಯನ್ನ ಕಡೆಗಣಿಸಿ ಕುಳಿತಿರುತ್ತೇನೆ ಎನಿಸುತ್ತದೆ. ನಾನೊಬ್ಬ ಹವ್ಯಾಸಿ ಬರವಣಿಗೆಗಾರನಲ್ಲದಿದ್ದರೂ ಬರವಣಿಗೆಯೆಂಬುದೊಂದು ನನ್ನ ಸ್ನೇಹಿತ, ನಾನದರ ಶತ್ರುವೆಂಬುದು ಸತ್ಯ.ಮನಸ್ಸಿಗೆ ಬಂದದ್ದನ್ನು ಬರೆದು ಬರವಣಿಗೆಯ ಮೇಲೆ ಸೇಡು ತೀರಿಸಿಕೊಳ್ಳುವುದೆಂದರೂ ತಪ್ಪಿಲ್ಲ. ಬರವಣಿಗೆ ಎಂಬುದರ ಗೀಳು ನನಗೆ ಹೇಗೆ ಬಂತು ಅದನ್ನು ಯಾಕೆ ಬರೆಯುತ್ತಿದ್ದೇನೆಂಬುದಂತೂ ನನಗೆ ತಿಳಿದಿಲ್ಲ. ಕುಳಿತಾಗ ನಾಲ್ಕು ಅಕ್ಷರ ಗೀಚುವುದು, ಅದನ್ನು ನಿಮ್ಮ ಮುಂದಿಟ್ಟು ಬೈಗುಳವನ್ನು ಪಡೆಯುವುದು ಎಂದಿನ ದಿನಚರಿಯಾಗಿದೆ. ಒಮ್ಮೊಮ್ಮೆ ಹುಚ್ಚನಂತೆ ಅಥವ ಹುಚ್ಚುಹಿಡಿದವನಂತೆ ಮಾತನಾಡುವುದು ನನ್ನ ಚಾಲಿಯಾಗಿದೆ. ಯಾರು ಕಿವಿ ಮುಚ್ಚಿದರೂ, ಮಾತನಾಡುವುದೇ ನನ್ನ ಕಸುಬೆಂದರೆ ಮುಖದ ಮೇಲೆ ಬೇರೆಯವರ ಎಂಜಲು ಬಿದ್ದಿರುತ್ತದೆ. ನೈಸರ್ಗಿಕ ವಿಕೋಪಕ್ಕೆ ತುತ್ತಾದ ಉತ್ತರ ಕರ್ನಾಟಕದ ಬಗ್ಗೆ ನೆನೆದು ಮಾತೆಂಬುದು ಬಾಯಿಂದ ಮುಂದೆ ಬರುತ್ತಲೇ ಇಲ್ಲ. ಸಾವು ಎನ್ನುವ ಪದ ಸದಾ ನಮ್ಮ ಬಾಯಿಯ ತುದಿಯಲ್ಲಿಯೇ ಇರುತ್ತದೆ, ಎಂತೆಂಥವರಿಗೆಲ್ಲಾ ಸಾವು ಬಂತು ನಿನಗೆ ಬರಲಿಲ್ಲವೇ ಅಂತಾ ಬೈಯ್ಯುವುದಿರಲಿ, ನಾನು ಬದುಕಿದ್ದೇನು ಬಂತು ಸಾಯಬಾರದೇ, ಹೀಗೆ ಸಾವಿನ ಬಗ್ಗೆ ಬಹಳ ಹಗುರವಾಗಿ ಮಾತನಾಡುವವರೆಲ್ಲಾ ಅಥವಾ ಜೀವನವನ್ನು ಹಗುರವಾಗಿ ಪರಿಗಣಿಸಿರುವವರೆಲ್ಲಾ ಒಮ್ಮೆ ಉತ್ತರ ಕರ್ನಾಟಕವನ್ನು ನೆನೆದರೇ ಮತ್ತೆಂದೂ ಆ ಬಗ್ಗೆ ಮಾತನಾಡಲಾರೆವು.

ಈ ಭೂಮಿ ನನ್ನದು ಈ ಮನೆ ನನ್ನದು ಇದು ನನ್ನದು ಅದು ನನ್ನದು ಎಂದು ಬೊಬ್ಬೆ ಹೊಡೆಯುತ್ತಿರುವ ನಾವುಗಳು, ಒಮ್ಮೆ ಒಂದೇ ಬಾರಿಗೆ ಉಟ್ಟುಡುಗೆಯನ್ನು ಬಿಟ್ಟು ಸಾವಿಗೆ ಅಂಜಿ ಅಥವಾ ನಿಸರ್ಗದ ಕೋಪಕ್ಕೆ ಬೆದರಿ ಊರು ಬಿಟ್ಟು, ಮನೆ ಮಠವನ್ನೆಲ್ಲಾ ತೊರೆದು ಬಂದು ಯಾವುದೋ ಊರು, ಯಾರೋ ನೀಡಿದ ಗಂಜಿಯನ್ನು ಕುಡಿಯುತ್ತಾ ಕುಳಿತಾಗ ಆಗುವ ಮಾನಸಿಕ ವೇದನೆ ಮತ್ತೊಂದಿಲ್ಲ. ತನಗೆಂದು ಕೂಡಿಟ್ಟ ಹಣ, ಆಸ್ತಿ, ಬಂಗಾರ ಎಲ್ಲವೂ ಒಂದೇ ಕ್ಷಣದಲ್ಲಿ ಕರಗಿ ನನಗೂ ಸಿಗದೇ ಪರರಿಗೂ ಸಿಗದೇ ಹೋಯಿತ್ತಲ್ಲವೆನ್ನುವ ಆಘಾತದಿಂದ ಹೊರಬರುವುದು ನಾವು ನೆನೆದಷ್ಟು ಸುಲಭವಲ್ಲ. ಉಳ್ಳವರು, ಹೊಸ ಮನೆ ಮಠ ಕಟ್ಟಿಕೊಳ್ಳಬಹುದು, ಇಲ್ಲದೇ ಇರುವವರೇನಾಗಬೇಕು?

ಎಲ್ಲವನ್ನೂ ನೈಸರ್ಗಿಕ ವಿಕೋಪವೆನ್ನಲಾಗುತ್ತದೆಯೇ? ಆಗುವುದೆಲ್ಲವೂ ಶನೀಶ್ವರನಿಂದ ಎನ್ನುವುದು ಯಾವ ನ್ಯಾಯ? ಯಾವುದೂ ಶಾಶ್ವತವಲ್ಲವೆನ್ನುವುದು ಬಹಳ ಸಾರಿ ನಮಗೆ ತಾತ್ವಿಕ ಬದುಕನ್ನು ಕಲಿಸುತ್ತದೆ ಆದರೂ, ನಾವು ದಿನ ನಿತ್ಯ ಹೊಡೆದಾಡುವು ಅಥವಾ ಮೋಸಮಾಡುವಾಗ ಅವೆಲ್ಲವೂ ನಮ್ಮ ಮನಸ್ಸಿಗೆ ಬರಲಾರದು. ಹೆತ್ತ ತಂದೆತಾಯಿಯರನ್ನು ಶತ್ರುಗಳಂತೆ ಕಾಣುವ ಮಕ್ಕಳ ಕಣ್ಣಿಗೆ ಜೀವನ ಅಲ್ಪವೆನಿಸುವುದಿಲ್ಲ. ಮಕ್ಕಳ ಜೀವನದೊಂದಿಗೆ ಆಟವಾಡಿ ತಮ್ಮ ಪ್ರತಿಷ್ಠೆ ಮೆರೆಯಲೆತ್ನಿಸುವ ತಂದೆತಾಯಿಯರಿಗೆ ಮಕ್ಕಳ ಜೀವನ ಚಿಕ್ಕದು ಅದನ್ನು ಅವರು ಆನಂದದಿಂದ ಆನದಿಸಲೆನಿಸುವುದಿಲ್ಲ. ಒಮ್ಮೆ ಕುಳಿತು ಚಿಂತಿಸಿದರೆ, ಈ ಬದುಕು, ಈ ದುಡಿಮೆ, ಈ ಜಂಜಾಟ, ಈ ಹೋರಾಟ, ಇವೆಲ್ಲವೂ ಯಾಕೆಂಬುದರ ಅರ್ಥ ಸಿಗುವುದಿಲ್ಲ. ಹಗಲು ರಾತ್ರಿ ಓದಿ, ಪುಸ್ತಕ ಬಿಟ್ಟರೇ ಮತ್ತೇನೂ ತಿಳಿಯದೆಂಬಂತೆ ಹಟ ಬಿದ್ದು ರಾಂಕ್ ಪಡೆದ ವಿದ್ಯಾರ್ಥಿಗೆ ಕೆಲಸ ಸಿಕ್ಕ ಕೆಲವೇ ದಿನಗಳಲ್ಲಿ, ನಾನು ನನ್ನ ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಮಜ ಮಾಡಲಿಲ್ಲ, ಅದನ್ನು ಆನಂದಿಸಲಿಲ್ಲವೆಂಬ ಕೊರಗುಂಟಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕೊನೆಯ ಸಾಲಿನಲ್ಲಿ ಕುಳಿತು ಬೊಬ್ಬೆ ಹೊಡೆಯುತ್ತಿದ್ದ ಸ್ನೇಹಿತರೂ ಕೊನೆಗೊಮ್ಮೆ ಅಯ್ಯೋ ಓದದೇ ಬರೆಯದೇ ಹಾಳಾಗಿ ಹೋದೆವಲ್ಲವೆನ್ನುವಾಗ ಪಶ್ಚತ್ತಾಪ ಉಕ್ಕಿ ಬರುತ್ತದೆ. ಇಂಥಹ ಸನ್ನಿವೇಶದಲ್ಲಿ ಯಾರು ಸರಿ ಯಾರು ತಪ್ಪು? ಯಾವುದು ಸರಿ ಯಾವುದು ತಪ್ಪು? ಅಸಲಿಗೆ ಸರಿ ತಪ್ಪು ಎಂಬುದನ್ನು ಅರಿಯುವ ಅಥವಾ ಅಳೆಯುವ ಮಾಪನ ಯಾವುದು? ಸಂತೋಷವೆಂದರೇನು? ಆತ್ಮ ತೃಪ್ತಿ ಎಂದರೇನು? ಸಂತೋಷ ಬೇರೆ ಆತ್ಮತೃಪ್ತಿ ಬೇರೆಯೇ? ಅಥವಾ ಎರಡು ಒಂದೇ? ಇಂಥ ನೂರಾರು ಮೂರ್ಖ ಪ್ರಶ್ನೆಗಳು ನನ್ನ ತಲೆಯಲ್ಲಿ ಎಂದೆಂದಿಗೂ ಜೀವಂತವಾಗಿರುತ್ತವೆ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...