21 ಜೂನ್ 2010

ಅರ್ಘ್ಯಂ ನಲ್ಲಿ ಕಳೆದ ಸುಮಧುರ ಕ್ಷಣಗಳು!!!

ಯಾರೊಬ್ಬರ ಬಗೆಗೆ ಬರೆಯುವಾಗಲೂ, ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಯಾಕೆಂದರೇ ಬಹಳಷ್ಟು ಬಾರಿ ನಾವು ಅವರನ್ನು ಅತಿಯಾಗಿ ಹೊಗಳುವುದು ಅಥವಾ ಅತಿಯಾಗಿ ತೆಗಳುವುದನ್ನು ಮಾಡುತ್ತಿರುತ್ತೇವೆ. ಆದರೇ ಇದ್ದಕ್ಕಿದ್ದ ಹಾಗೆ ಒಂದು ಸಂಸ್ಥೆಯ ಬಗೆಗೆ ಬರೆಯುವಾಗ, ಬಹಳಷ್ಟೂ ಜಾಗೃತೆವಹಿಸಬೇಕಾಗುತ್ತದೆ. ಏಕೆಂದರೆ ಯಾವುದೇ ಸಂಸ್ಥೆಯೂ ತನ್ನದೇ ಆದ ಹಾದಿಯಲ್ಲಿ ಒಂದು ಜಾಡನ್ನು ನಿರ್ಮಿಸಿರುತ್ತದೆ. ನಾನು ಇಂದು ಬರೆಯುತ್ತಿರುವುದು ಅಂಥಹದೇ ಒಂದು ಸಂಸ್ಥೆಯ ಬಗ್ಗೆ. ಅರ್ಘ್ಯಂ ಎಂಬ ಹೆಸರನ್ನು ಬಹಳಷ್ಟು ಮಂದಿ ಕೇಳಿರುತ್ತಾರೆ. ಕೆಲವರು ಕೇಳದೇ ಇದ್ದರೂ ಇರಬಹುದು. ಅರ್ಘ್ಯಂ ಎಂಬುದು ನೀರು ಮತ್ತು ನೈರ್ಮಲ್ಯದ ಬಗೆಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ಐದು ವರ್ಷಗಳಿಂದ ಸತತವಾಗಿ, ಇದೇ ಕ್ಷೇತ್ರದಲ್ಲಿ ಕಣ್ಣುಬ್ಬು ಮೇಲೇರಿಸುವ ಕೆಲಸ ಮಾಡಿದೆ. ನಾನು ಸಂಸ್ಥೆಯ ಒಳಕ್ಕೆ ಬರುವ ಮುನ್ನ ಇದರ ಬಗೆಗೆ ಅಷ್ಟೇನೂ ತಿಳಿದಿರಲಿಲ್ಲ. ನನ್ನ ಕೆಲಸಕ್ಕಾಗಿ ಇಲ್ಲಿಗೆ ಬಂದು ೯ ತಿಂಗಳು ಕಾಲ ಕಳೆಯುವಾಗ ನಿಜಕ್ಕೂ ಬಹಳ ಆನಂದವೆನಿಸಿತು.

ಮೊದಲ ದಿನ ಬಂದಾಗಲೇ, ಇಲ್ಲಿನ ಜನರ ನಡುವಳಿಕೆ ನನ್ನನ್ನು ಬಹಳ ಖುಷಿ ಪಡಿಸಿತು. ಬಂದ ತಕ್ಷಣ ಅವರು ನಡೆದುಕೊಂಡ ರೀತಿ, ಯಾವೊಬ್ಬ ಅಪರಿಚಿತನು ಬಂದ ಕೆಲವೇ ಕ್ಷಣದಲ್ಲಿ, ಅರ್ಘ್ಯಂ ಸಂಸ್ಥೆಯವನಾಗಿ ಬಿಡುತ್ತಾನೆ. ಮಾತನಾಡಿಸುವ ರೀತಿ, ಬೆಣ್ಣೆಯ ಮೇಲೆ ಕೂದಲು ತೆಗೆದಷ್ಟು ಮಧುರತೆಯನ್ನು ಕೊಡುತ್ತದೆ. ಮೊದಲ ದಿನ ಹೋದಾಗ, ಗೋಪಾಲ್ ನನ್ನನ್ನು ಎಲ್ಲರಿಗೂ ಪರಿಚಯಿಸುವುದರಲ್ಲಿ ತೋರಿದ ತನ್ಮಯತೆ ನನ್ನನ್ನು ಬಹಳ ಅಚ್ಚರಿಗೊಳಿಸಿತು. ಅವರು ನನ್ನೊಡನೆ ಮಾತನಾಡಿದ ರೀತಿಯಲ್ಲಿಯೇ, ನಾನು ನಿಜಕ್ಕೂ ನಿಬ್ಬೆರಗಾದೆ. ಯಾವುದೇ ಸಂಸ್ಥೆಯಲ್ಲಿಯೂ ಹಿರಿಯ ವ್ಯಕ್ತಿಗಳು ಕಿರಿಯವರನ್ನು ಸ್ವಲ್ಪ ದೂರವೇ ಇಟ್ಟು ನಡೆಸಿಕೊಳ್ಳುವುದು ಸಾಮಾನ್ಯವಿದ್ದರೂ ಇದು ಇಲ್ಲಿ ಹೊಸತೆನಿಸಿತು. ಅದಾದ ನಂತರ, ಬಹಳ ಮೆಚ್ಚುಗೆಯಾದದ್ದು, ನಿತಿನ್ ಎಂಬವರ ವ್ಯಕ್ತಿತ್ವ.ಮಾತನಾಡಿಸಿದ ಕೆಲವೇ ಕ್ಷಣದಲ್ಲಿ ನಾನು ಬರುವುದು ಹೇಗೆ?ಎಲ್ಲಿಂದ ಎಂದು ವಿಚಾರಿಸಿ, ವಿಜಯನಗರ ಕಡೆಯಿಂದ ಬರುವ ಮನೋಹರ್ ಅವರಿಗೆ ನನ್ನನ್ನು ಪರಿಚಯಿಸಿದ್ದು, ಮತ್ತು ಮನೋಹರ್ ಅದೆಷ್ಟು ವಿನಯದಿಂದ ಮಾತನಾಡಿದರೆಂದರೇ ಒಬ್ಬ ವ್ಯಕ್ತಿ ಇದೇ ಕ್ಷೇತ್ರದಲ್ಲಿ ೧೫-೨೦ ವರ್ಷ ಅನುಭವ ಇರುವವರು, ಒಬ್ಬ ಕಿರಿಯನ ಜೊತೆಗೆ ಅಪರಿಚಿತನೊಂದಿಗೆ ಹೀಗೂ ಮಾತನಾಡುತ್ತಾರೆಂಬುದು ನನಗೆ ತಿಳಿಯಿತು. ಮೊದಲ ಕೆಲವು ದಿನಗಳು ನಾನು ಮನೋಹರ್ ಹಾಗೂ ಪರಮೇಶ್ವರ್ ಜೊತೆಯಲ್ಲಿ ಬರುತ್ತಿದ್ದೆವು. ಅವರು ಹೊರಡುವ ಸಮಯ ಅಲ್ಪ ಸ್ವಲ್ಪ ತಡವಾದರೇ/ಆಗುವುದಿದ್ದರೇ, ಎಸ್.ಎಂ,ಎಸ್ ಮೂಲಕ ಅಥವಾ ಕೆಲವೊಮ್ಮೆ ಅವರೇ ಬಂದು ತಿಳಿಸುತಿದ್ದರು.ಇಂಥಹ ಪರಿಸರ ನಿಜಕ್ಕೂ ಖುಷಿ ಎನಿಸುತ್ತಿತ್ತು.

ನಾನು ಅರ್ಘ್ಯಂ ಗೆ ಬರುವ ಮುನ್ನ ಅರ್ಘ್ಯಂ ಬಗ್ಗೆ ಕೆಲವು ನಕರಾತ್ಮಕ ಧೋರಣೆಗಳಿದ್ದವು. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಅವೆಲ್ಲವೂ ಬದಲಾದವು.ಆದರೇ, ನಾನು ಕೆಲಸ ಮಾಡುತ್ತಿದ್ದ, IUWM, ಮಾತ್ರ ಅದೆಕೋ ಅಷ್ಟೊಂದು ಒಳ್ಳೆಯ ಅಬಿವೃದ್ದಿ ಕಾಣಲಿಲ್ಲ. ಇದಕ್ಕೆ ಕಾರಣ ವೈಯಕ್ತಿಕ ಆತ್ಮ ಪ್ರತಿಷ್ಟೆ ಎನ್ನುವುದು ನನ್ನ ಸ್ವಂತ ಅಭಿಪ್ರಾಯ. ಯಾರು ಏನು ಹೇಳಿದರೂ, ಲಕ್ಷಾಂತರ ಹಣ ಸುರಿದು ಒಂದು ಸಂಶೋಧನೆ ಮಾಡಿಸುವಾಗ ಅದನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅರ್ಘ್ಯಂ ಗೆ ಇರಲಿಲ್ಲವೆನ್ನುವುದು ನಿಜಕ್ಕೂ ಶೋಚನಿಯ.ಎಂಬತ್ತು ಲಕ್ಷ ರೂಪಾಯಿಯನ್ನು ನಮಗೆ ನೀಡಿದ ಅರ್ಘ್ಯಂ ಗೆ ಅದರ ಜವಬ್ದಾರಿ ತೆಗೆದುಕೊಳ್ಳಲು, ಕನಿಷ್ಟ ೫-೧೦ ವರ್ಷ ಅನುಭವ ಇರುವವರು, ಅಥವಾ ಯೋಜನೆಯ ಮಹತ್ವ ತಿಳಿದವರು ಇದ್ದಿದ್ದರೇ ನಿಜಕ್ಕೂ ಅರ್ಥಪೂರ್ಣವಾಗುತ್ತಿತ್ತು. ಇವೆಲ್ಲವೂ ತೀರಾ ಖಾಸಗಿ ವಿಷಯವಾಗಿರುವುದರಿಂದ ನಾನು ಇಲ್ಲಿ ಚರ್ಚಿಸುವುದು ಸಮಂಜಸವಲ್ಲ. ಆದರೇ, ಸಂಸ್ತೆಯಲ್ಲಿ, ಕೋಟ್ಯಾಂತರ ರೂಪಾಯಿ ಇದ್ದು, ಸಮಾಜದ ಉನ್ನತಿಗೆ ಏನಾದರೂ ಮಾಡಬೇಕೆನ್ನುವ ಮನಸ್ಸು, ಧ್ಯೇಯವಿರುವುದು ಮೆಚ್ಚಲೇಬೇಕಾದ ವಿಷಯ. ಆದರೇ ನಿಜಕ್ಕೂ ನೀರು, ನೈರ್ಮಲ್ಯ, ಪರಿಸರ, ನಿರ್ವಹಣೆ ಇದಕ್ಕೆ ಅತಿ ಹೆಚ್ಚು ಅನಿವಾರ್ಯವಿರುವ ಮಾರ್ಗಗಳು ಯಾವುವು ಎಂಬುದು ಇನ್ನು ತಿಳಿಯಾಗಿಲ್ಲ.

ನನಗೆ ತಿಳಿದ ಮಟ್ಟಿಗೆ, ರಾಜ್ಯದ ಬಗೆಗೆ, ಭಾಷೆಯ ಬಗೆಗೆ, ಮತ್ತು ಸ್ಥಳೀಯತೆಯ ಜ್ನಾನವೇ ಇಲ್ಲದವರು, ಕರ್ನಾಟಕದ ಬಗೆಗೆ ಅದರಲ್ಲಿಯೂ ಮೂಲಭೂತ ಅವಶ್ಯಕತೆಗಳಾದ ನೀರು ನೈರ್ಮಲೀಕರಣದ ಬಗೆಗೆ ಕೆಲಸ ಮಾಡುತ್ತಿರುವುದು ಸ್ವಲ್ಪ ಮುಜುಗರವೆನಿಸುತ್ತದೆ. ಇಷ್ಟೇಲ್ಲಾ ದುಡ್ಡು ವೆಚ್ಚ ಮಾಡುವ ಸಂಸ್ಥೆ ಅದರಿಂದ ಆಗುತ್ತಿರುವ ಅನುಕೂಲವೆಷ್ಟು ಇನ್ನೂ ಹೆಚ್ಚು ಅನುಕೂಲಕರವಾಗಿ ಮಾಡುವುದು ಹೇಗೆ? ಇದರ ಬಗೆಗೆ ಚಿಂತನೆ ಮಾಡದೆ ಇರುವುದು ನನಗೆ ಅಗೋಚರವಾಗಿದೆ. ಕೇವಲ, ವಿವಿ ಗಳಿಂದ ಬರುವ ವಿದ್ಯಾರ್ಥಿಗಳಿಗೆ, ಒಂದು ವರ್ಷ ಉದ್ಯೋಗ ನೀಡಿ, ಕಡಿಮೆ ಎಂದರೇ, ೧೦ಸಾವಿರದಂತೆ ಸಂಬಳ ಕೊಟ್ಟು ಅವರನ್ನು ಪ್ರೋತ್ಸಾಹಿಸಿದ್ದಿದ್ದರೇ ಅದರ ಫಲಿತಾಂಶ ಎಲ್ಲಿಗೋ ಹೋಗಿ ಮುಟ್ಟುತ್ತಿತ್ತು.

ಊರೆಂಬುದು ವಿನಾಶದ ಹಾದಿಯಲಿ!!!

ನಮಗೆ ಬಹಳಷ್ಟು ಸಾರಿ ಕಾಡುವ ಏಕೈಕ ಪ್ರಶ್ನೆ ನಾವು ಬದುಕುತ್ತಿರುವುದು ಎಲ್ಲಿ?ಎಂಥಹ ದೇಶದಲ್ಲಿ? ಎಂಥಹ ಸಮಾಜದಲ್ಲಿ?ಜನತೆ ಏಕೆ ಈ ಮಟ್ಟಿಗಿನ ಅಧೋಗತಿಗೆ ಇಳಿದಿದ್ದಾರೆ? ಅಲ್ಪ ಸ್ವಲ್ಪವೂ ಕೂಡ ನೈತಿಕತೆ, ಜವಬ್ದಾರಿ, ನೀತಿ ನಿಯತ್ತು ಇಲ್ಲದೇ ಹೀಗೆಕೆ? ಅದರಲ್ಲಿಯೂ ಹಳ್ಳಿಯ ಜನತೆಯಲ್ಲಿ ಇದು ಇಷ್ಟೊಂದು ತೀವ್ರತೆಯಲ್ಲಿ ಆಗುವುದಕ್ಕೆ ಕಾರಣವೇನು? ಇಂಥಹ ಸರಳ ಕೊಳಕು ಪ್ರಶ್ನೆ ನನಗೆ ಬಹಳಷ್ಟು ಬಾರಿ ಕಾಡಿದ್ದರೂ ಇತ್ತೀಚೆಗೆ, ಊರಿಗೆ ಹೋಗಿ ಬಂದಮೇಲೆ ಕಾಡುತ್ತಿರುವುದು ಹೆಚ್ಚು.ನನ್ನೂರಿನ ಬಗ್ಗೆ ಬಹಳ ಹಿಂದೆ ಸುಂದರವಾಗಿ ಬಣ್ಣಿಸಿದ್ದೆ, ಅದರ ಮತ್ತೊಂದು ರೂಪವೇ ಇಂದಿನ ಬಾನುಗೊಂದಿ.ನಮ್ಮೂರಿನ ಸೌಂದರ್ಯಕ್ಕೆ ಅತಿಮುಖ್ಯವಾಗಿದ್ದ, ನನ್ನೂರಿನ ಕಟ್ಟೆ, ಕಾವೇರಿ ನದಿಗೆ ೧೯೦೩ರಲ್ಲಿ ಕಟ್ಟಿದ್ದು, ಅದರ ಹಿನ್ನೀರಿನಲ್ಲಿ ಬಹಳ ರುಚಿಕರವಾದ ಮೀನುಗಳು ಸಿಗುತ್ತಿದ್ದವು, ಹಾಗೆಯೇ ಪಕ್ಕದಲ್ಲಿಯೇ ಇದ್ದ, ಚಿಕ್ಕಹೊಳೆ, ಹಳ್ಳ, ಹಳೆ ಕಾಲುವೆಯಲ್ಲಿ, ಕಣ್ಣಿಗೆ ಬಹಳ ಮುದು ನೀಡುವ ಪಕ್ಷಿಗಳು ಇದ್ದವು. ಇತ್ತೀಚೆಗೆ ನಾನು ಹಿಂದೆಂದೂ ಕಾಣದ ಪಕ್ಷಿಗಳು ಬರುತ್ತಿದ್ದವು.ಇದೆಲ್ಲದರ ಸವಿಯನ್ನು ನನ್ನ ಹಲವಾರು ಮಿತ್ರರು ಆನಂದಿಸಿದ್ದಾರೆ, ಅವರು ನನ್ನೂರಿಗೆ ಬಂದಾಗ ನಮ್ಮ ಮನೆಗಿಂತಲೂ ನದಿ ದಂಡೆಯಲ್ಲಿ, ಕಟ್ಟೆಯ ಮೇಲೆ ಕಾಲ ಕಳೆದು ಅದನ್ನುಉ ಸವಿದಿರುವುದೇ ಹೆಚ್ಚು. ಇಂಥಹ ಸೊಬಗಿದ್ದ ಊರು, ಇದ್ದಕ್ಕಿದ್ದ ಹಾಗೆ ಅಧೋಗತಿಗೆ ಇಳಿದಿದೆ ಎಂದರೇ, ನಂಬಲು ಅಸಾಧ್ಯ. ಮೊದಲನೆಯದಾಗಿ, ನಮ್ಮೂರಿನಲ್ಲಿ ಮರಳು ಎತ್ತುವುದು ಅತಿರೇಕಕ್ಕೆ ಹೋದದ್ದು. ನಾವು ಚಿಕ್ಕವರಿದ್ದಾಗಿನಿಂದಲೂ ಮರಳು ತೆಗೆಯುತ್ತಿದ್ದರೂ, ಅದು ಕೇವಲ ಬೇಸಿಗೆಯ ನಾಲ್ಕು ತಿಂಗಳಿನಲ್ಲಿ ನಡೆಯುತ್ತಿತ್ತು, ಆದರೇ, ಈಗ ೩೬೫ ದಿನಗಳು, ದೋಣಿಗಳಿಂದ ತೆಗೆಯಲಾರಂಬಿಸಿದರು.

ಮೊದಲಿನ ದಿನಗಳಲ್ಲಿ ಮರಳಿನ ಬೇಡಿಕೆ ಹೆಚ್ಚಾದ್ದರಿಂದ, ಜನರೇ ಮುಳುಗಿ ಮರಳು ಎತ್ತುತ್ತಿದ್ದರು. ಅದು ಆರೋಗ್ಯಕ್ಕೆ ಅದೆಷ್ಟು ಹಾನಿಕರವೆಂಬುದನ್ನು ಮರೆತು ಕೇವಲ ದುಡ್ಡಿನ ಆಸೆಗೆ ಬಲಿಯಾಗುತ್ತಿದ್ದರು.ಕಳೆದ ಎರಡು ವರ್ಷದಿಂದ ದೋಣಿಯಲ್ಲಿ ಹೋಗಿ ತೆಗೆಯುವುದು ಸಾಮಾನ್ಯವಾಗಿತ್ತು, ಆದರೇ ಈ ಬಾರಿ ನೋಡುವಾಗ, ದೋಣಿಗೆ ಮೋಟಾರು ಇರಿಸಿ ಮರಳು ಎತ್ತುವುದನ್ನು ಕಂಡು ನಿಬ್ಬೆರಗಾದೆ. ಇಂಥಹ ದುಸ್ಸಾಹಸಕ್ಕೆ ಕೈ ಹಾಕುವ ಮನಸ್ಸು ಹೇಗೆ ಬಂತು, ಇಡೀ ಮರಳನ್ನು ಒಂದೇ ಬಾರಿಗೆ ತೆಗೆದು ಬಿಡಬೇಕೆಂಬ ದುರಾಸೆ ಆದರೂ ಏಕೆ?ಚಿನ್ನದ ಮೊಟ್ಟೆಯ ಕಥೆಯಂತೆ, ಇಡೀ ನದಿಯನ್ನು ಸರ್ವನಾಶ ಮಾಡುತ್ತಿರುವುದನ್ನು ಕಂಡು ಬಹಳ ಬೇಸರಗೊಂಡೆ. ಕೇವಲ ಒಂದು ತಿಂಗಳಲ್ಲಿ ನದಿಯಲ್ಲಿದ್ದ ಅಷ್ಟೂ ಮರಳನ್ನು ಖಾಲಿ ಮಾಡಬಹುದೆಂದರೇ ನೀವೆ ಊಹಿಸಿಕೊಳ್ಳಿ ಅದರ ದುಷ್ಪರಿಣಾಮ. ಇದೆಲ್ಲದರ ಜೊತೆಗೆ, ನಮ್ಮೂರಿನ ಕಟ್ಟೆಯಲ್ಲಿ ಒಂದು ಜಲವಿದ್ಯುತ್ ಕಾರ್ಯಗಾರ ಶುರುವಾಗಲಿದೆ. ಜಲವಿದ್ಯುತ್ ಮಾಡುವುದು ಅನುಕೂಲಕರವಾದ ಸಂಗತಿ, ಆದರೇ ಅದರ ಲಾಭ ನಷ್ಟವನ್ನೂ ತಿಳಿಯಬೇಕಲ್ಲವೇ? ಇದರ ಕುರಿತು ಯಾರಲ್ಲಿಯೂ ಸಂಪೂರ್ಣ ಚಿತ್ರಣವಿಲ್ಲ. ಒಬ್ಬರೂ ೩ಮೆಗಾ ವ್ಯಾಟ್ ಎಂದರೇ, ಮತ್ತೊಬ್ಬರೂ, ೪, ಮಗದೊಬ್ಬ ೧೪, ೧೩ ಹೀಗೆ ಒಬ್ಬೊಬ್ಬರ ಬಾಯಿಯಲ್ಲಿಯೂ ಒಂದೊಂದು ಅಂಕಿಗಳು ಉದುರುತ್ತವೆ. ಹೋಗಲಿ, ಸಾಮಾನ್ಯರಿಗೆ ತಿಳಿಸುವ ಕಾಳಜಿಯೂ ಇಲ್ಲದ ಕಂಪನಿಯವರು.

ನಾನು ಅಲ್ಲಿದ್ದವರನ್ನು ಕೇಳಿದರೇ, ಯಾರಿಗೂ ಅದರ ಬಗ್ಗೆ ಅರಿವಿಲ್ಲ. ಊರಿನ ನಾಲ್ಕು ಜನರನ್ನು ಕೇಳೋಣವೆಂದು ಬಂದರೇ, ಇವರ ಮನೆಯಿಂದಲೇ ವಿದ್ಯುತ್ ತಯಾರಿಸುವವರಂತೆ, ದೇಶಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ವಿದ್ಯುತ್ ಬರಲಿ ಬಿಡಿ ಎನ್ನುತ್ತಾರೆ. ಅಲ್ಲಾ ಮಾರಾಯ ವಿದ್ಯುತ್ ಬರಲಿ ಬೇಡ ಅಂತ ಅಲ್ಲ, ಎಷ್ಟು ವಿದ್ಯುತ್ ಬರುತ್ತೇ? ಅದರಿಂದ ಊರಿಗೆ ಏನು ಲಾಭ? ಆ ವಿದ್ಯುತ್ ಅನ್ನು ಯಾರಿಗೆ ಮಾರುತ್ತಾರೆ?ಏನ್ ಕಥೆ? ಎಂದರೇ ಯಾರಿಗೋ ಒಳ್ಳೆದು ಆಗಲಿ ಬಿಡು, ಎನ್ನುತ್ತಾರೆ. ಇಂಥಹ ಮಹಾನ್ ಪುರುಷರು ಸಿಗುತ್ತಾರಾ? ಅದೇ ಜನ ಒಂದು ದಿನ ತಡವಾಗಿ ಗದ್ದೆಗೆ ನೀರು ಹಾಯಿಸು ಎಂದರೇ ಅಥವಾ ನಾನು ನೀರು ಬಿಟ್ಟ ಮೇಲೆ ನೀನು ನೀರು ಬಿಡು ಎಂದರೇ ಪಕ್ಕದ ಮನೆಯವನ ಜೊತೆಯಲ್ಲಿ ದಿನಗಟ್ಟಲೇ ಜಗಳ ಮಾಡುತ್ತಾನೆ. ಇಂಥಹ ಜನ, ತಾವೆಲ್ಲರೂ ಒಗ್ಗಟ್ಟಾಗಿ ನಿಂತು ಉತ್ಪಾದಿಸುವ ವಿದ್ಯುತ್ ಅನ್ನು ನಮಗೂ ನೀಡಬೇಕೆಂದು ಕೇಳುವುದಿಲ್ಲ, ಆಗುವ ಹಾನಿಗೆ ನಷ್ಟ ತುಂಬಿಕೊಡು ಎಂದು ಕೇಳುವುದಿಲ್ಲ, ಯಾಕೆಂದರೇ, ಅಲ್ಲಿರುವ ಜಮೀನು ಯಾರದ್ದೊ ಆಗಿರುತ್ತದೆ, ಅವನು ಬಡವನಾಗಿರುತ್ತಾನೆ. ಅರ್ಧ ಎಕರೆ ಜಮೀನು ಇರುವ ಹಿಡುವಳಿದಾರ ಇಂಥವರ ವಿರುದ್ದ ದನಿಯೆತ್ತಲಾರ.ಅದೆಲ್ಲಾ ಹೋಗಲಿ ಎಂದರೇ, ಎರಡು ಲಕ್ಷ ರೂಪಾಯಿಗೆ, ನಾಲ್ಕೈದು ಎಕರೆ ಊರಿನ ಜಮೀನು, ಗೋಮಾಳ, ಅಲ್ಲಿದ್ದ ಮರಮುಟ್ಟು ಎಲ್ಲವನ್ನು ಕಳೆದುಕೊಳ್ಳಲು ತಯಾರಿದ್ದಾರೆ. ಇದಕ್ಕೆ ಮುಖ್ಯ ಕಾರಣ ನನ್ನ ಬಳಿಯಲ್ಲಿ ದನವಿಲ್ಲ, ಅಥವಾ ಆ ಸ್ಥಳದಲ್ಲಿ ನಾನು ದನ ಮೇಯಿಸುವುದಿಲ್ಲ, ಯಾರಿಗೋ ಆಗುವುದರ ಬದಲು ಮುಳುಗಡೆಯಾಗಲಿ ಎನ್ನುವ ನೀಚತನವೂ ತುಂಬಿರುತ್ತದೆ.

ಹಳ್ಳಿಯವನು ಎಂದಿಗೂ ವಿಶಾಲ ಹೃದಯದಿಂದ ನೋಡುವುದಿಲ್ಲ. ಅವನದು ಬಹಳ ಸಣ್ಣತನದ ಬುದ್ದಿ, ಅವನಿಗೆ, ಅವನು ಮತ್ತು ಪಕ್ಕದ ಮನೆಯವನು ಅಷ್ಟೇ ಪ್ರಪಂಚ. ಊರು ಮುಳುಗಿದರೂ, ಹಾಳಾದರೂ ಸರಿ ಪಕ್ಕದ ಮನೆಯವನು ನನಗಿಂತ ೫ ನಿಮಿಷ ಮುಂಚಿತವಾಗಿ ಸತ್ತರೆ ಸಾಕೆಂದು ಬಯಸುತ್ತಾನೆ. ಇಂಥಹ ನೀಚ ಬುದ್ದಿ, ಬಂದಿದ್ದಾದರೂ ಹೇಗೆ? ಇಡೀ ಊರು ಒಂದು ಎಂದು ಬೀಗುತ್ತಿದ್ದವ ರಾತ್ರೋ ರಾತ್ರಿ ಈ ಕೆಳಮಟ್ಟಗಿನ ಕೊಳಕುತನಕ್ಕೆ ಇಳಿಯಲು ಕಾರಣ? ಸ್ವಾರ್ಥವೆಂಬುದು ಉತ್ತುಂಗಕ್ಕೆ ಏರಿದ್ದ? ನಾನು ಕಂಡಂತೆ ನಮ್ಮೂರು ಎಂದರೇ ಒಗ್ಗಟ್ಟು ಊರಿಗಾಗಿ ಏನು ಬೇಕಾದರೂ ಮಾಡುವ ಜನ ಎನ್ನುತ್ತಿದ್ದವರು, ಊರನ್ನು ಮಾರಿಕೊಳ್ಳಲು ನಿಂತಿದ್ದು, ವಿನಾಶಕ್ಕೆ ವಿಪರೀತಿ ಬುದ್ದಿ ಎನ್ನುವುದನ್ನು ಸಾಬೀತುಪಡೀಸಲೇ??

09 ಜೂನ್ 2010

ಉಢಾಫೆತನವೆಂಬುದು ನನ್ನೊಳಗಿರುವ ನನ್ನದೇ ಆಸ್ತಿ????


ಬರಗಾಲದಲ್ಲಿ ಅಧಿಕ ಮಾಸವೆಂಬುದೊಂದು ಮಾತು ಅಂತೆಯೇ, ನಂಬಿದವನು ಕೈ ಬಿಡುವುದಿಲ್ಲವೆನ್ನುವುದೊಂದು ನಂಬಿಕೆ. ಇವೆರಡರಲ್ಲಿ ಯಾವುದು ಸರಿ, ಅಥವಾ ಯಾವುದು ಅತಿ ಹೆಚ್ಚು ಸರಿ ಎನ್ನುವ ಪ್ರಶ್ನೆ ನಮ್ಮನ್ನು ಬಹಳಷ್ಟೂ ಕಾಡುತ್ತದೆ. ಇದಕ್ಕೊಂದು ನಿದರ್ಶನ, ನಿನ್ನೆ ನಡೆದ ಘಟನೆ. ನಾನು ನನ್ನೂರಿಗೆ ಹೋಗಿದ್ದೆ, ಅಲ್ಲಿದ್ದ ಒಂದು ಹೋಂಡಾ ಆಕ್ಟಿವಾ ವನ್ನು ಬೆಂಗಳೂರಿಗೆ ತರಬೇಕಿತ್ತು, ಪಟ್ಟಣಕ್ಕೆಂದು ಮಾಡಿಟ್ಟ ಬೈಕು ನಮ್ಮಪ್ಪನ ಕೈಯ್ಯಿಗೆ ಸಿಕ್ಕಿ, ಹಳ್ಳಿಗಾಡಿನ ರಸ್ತೆಯಲ್ಲಿ ಸದ್ದು ಗದ್ದಲವೆಂಬಿಸಿಕೊಂಡು ಸುಸ್ತಾಗಿ ಹೈರಾಣವಾಗಿತ್ತು.ಅದನ್ನು ಇಲ್ಲಿಗೆ ತರುವುದು ದುಸ್ತರವೆಂದು ತಿಳಿದಿದ್ದರೂ ತರಲೇಬೇಕೆಂಬ ಅನಿವಾರ್ಯತೆಗೆ ಗಂಟು ಬಿದ್ದು, ವಿಜಿ ಯೊಂದಿಗೆ ಬರುವುದಾಗಿ ತೀರ್ಮಾನವಾಯಿತು. ಮನೆಯಿಂದ ಹೊರಟವನು ದುರ್ಗೇಶ್ ಮದುವೆ ಮುಗಿಸಿಕೊಂಡು ಹೊರಡುವ ನಿರ್ಧಾರ ಮಾಡಿದೆ.ಅತಿ ಸಂತೋಷದಿಂದ ಬೀಗುತ್ತಿದ್ದ, ದುರ್ಗೇಶ್ ನನ್ನು ಕಂಡು, ಈ ಸಂತೋಷಕ್ಕಾದರೂ ಒಂದು ನೂರು ರೂಪಾಯಿ ಮುಯ್ಯಿ ಹಾಕೋಣವೆಂದು ಹಾಕಿದೆ, ಆದರೇ ಆ ನೂರು ರೂಪಾಯಿ ನನ್ನ ಪಾಲಿಗೆ ಅಷ್ಟೋಂದು ಮಹತ್ವ ವಹಿಸುತ್ತದೆಂಬ ಸಣ್ಣ ಕಲ್ಪನೆಯೂ ಇರಲಿಲ್ಲ.ಮದುವೆ ಮುಗಿಯುವುದು ತಡವಾದ್ದರಿಂದ, ಮಳೆಗೆ ಸಿಕ್ಕಿಕೊಳ್ಳುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿದವು. ಅರಕಲಗೂಡಿಗೆ ಬಂದವನು ಪೆಟ್ರೋಲ್ ಹಾಕಿಸಲು ನೋಡಿದೆ, ಜೇಬಿನಲ್ಲಿ ೧೪೦ ರೂಪಾಯಿ ಮಾತ್ರವಿದ್ದರಿಂದು ಮುಂದೆ, ಹೊನ ಪುರದಲ್ಲಿ, ಎಟಿಎಂ ನಿಂದ ತೆಗೆದು ಹಾಕಿಸುವ ನಿರ್ಧಾರ ಮಾಡಿ ಮುನ್ನೆಡೆದೆ.ನಮ್ಮ ಜೊತೆಯಲ್ಲಿ ಮದುವೆಗೆ ಬಂದಿದ್ದ ಸ್ನೇಹಿತರಿಗೆ ದಾರಿ ತೋರಿಸುವು ಭರದಲ್ಲಿ, ನಾನು ಎಟಿಎಂ ನಿಂದ ಹಣ ತೆಗೆಯುವುದನ್ನು ಮರೆತು ಬಿಟ್ಟೆ.

ಮುಂದೆ ಚರಾ ಪಟ್ನದಲ್ಲಿ ತೆಗೆದರಾಯಿತೆಂಬ ವಿಜಿಯ ಸಲಹೆಗೆ ಬೆಲೆ ಕೊಟ್ಟು ನೂರು ರೂಗಳಿಗೆ ಪೆಟ್ರೋಲ್ ಹಾಕಿಸಿದೆವು.ಅಲ್ಲಿಂದ ಹೊರಟು, ಕೇವಲ ಹೈದಿನೈದು ನಿಮಿಷಗಳಿಗೆ ನೋಡಿದ ಸನ್ನಿವೇಶಗಳು ನಮ್ಮನ್ನು ಮೈ ರೋಮಾಂಚನಗೊಳಿಸಿದೆವು.ನೇರ ಸುಡುತಿದ್ದ ಸೂರ್ಯ, ದಿಡೀರನೆ ಅವನ ಬಣ್ಣ ಬದಲಾಯಿಸತೊಡಗಿದ. ನಾವು ಕಾಣುತ್ತಿರುವುದು ನಿಜವೂ, ಸುಳ್ಳೋ, ಕನಸೋ, ಯಾರೋ ಬರೆದಿರುವ ಚಿತ್ರವೋ, ಫೋಟೋವೋ? ಹೀಗೆ ಹತ್ತು ಹಲವು ಅನುಮಾನಗಳು ಒಟ್ಟೋಟ್ಟಿಗೆ ಬಂದವು. ಬೆಳ್ಳನೆಯ ಮೋಡ, ನೀಲಿಗೆ ತಿರುಗಿ, ನಂತರ ಕಡುಗಪ್ಪಾಗತೊಡಗಿತು. ಸಣ್ಣ ಮಗುವು ಕೂಡ ಆ ಬದಲಾವಣೆಯನ್ನು ಗಮನಿಸಬಹುದಾಗಿತ್ತು. ಸ್ವಲ್ಪವೂ ಗಾಳಿಯಿಲ್ಲದೇ ಬರಿ ಮೋಡ ಚಲಿಸುವುದು ಬದಲಾಗುವುದು, ಅದರಡಿಯಲ್ಲಿ ದೂರದ ಗುಡ್ಡಗಳು, ನಿಜಕ್ಕೂ ನಮ್ಮನ್ನು ಆನಂದದ ಪರಮಾವಧಿಗೆ ಕರೆದೊಯ್ದವು.ಆದರೇ ಆ ನಗು ಕೆಲವೇ ಕ್ಷಣಗಳಲ್ಲಿ ಮರೆಯಾಗುವುದೆಂಬ ಸುಳಿವು ನಮಗಿರಲಿಲ್ಲ.

ಹಾಗೆಯೇ ಮುಂಬರುವಾಗ ನಿರೀಕ್ಷೆಗೂ ಮೀರಿ ಮಳೆ ಸುರಿಯಲಾರಂಬಿಸಿತು. ಮುಂದಕ್ಕೆ ಚಲಿಸಲಾರದೇ, ಅಲ್ಲಿಯೇ ನಿಂತು ಹೋಗುವುದಾಗಿ ತೀರ್ಮಾನಿಸಿ, ಒಂದು ಮನೆಯ ಕೊಟ್ಟಿಗೆ ಸೇರಿದೆವು.ನಿಂತು ಹಾಡು ಕೇಳಿ ಬೇಸರವಾದಗ ಮಳೆಯಲ್ಲಿಯೇ ನೆನೆದು ಹೋಗೋಣವೆಂದು ಮುನ್ನೆಡೆದೆವು. ಚರಾ ಪಟ್ನ ಸೇರುವಷ್ಟಕ್ಕೆ ನಮ್ಮ ಅಂಗಾಂಗವೆಲ್ಲಾ ಮಳೆಯೊಂದಿಗೆ ಮಿಲನ ಸಾಧಿಸಿದ್ದವು.ಅಲ್ಲಿ ಬಂದ ತಕ್ಷಣ ಎಟಿಎಂ ಕಂಡರೂ ಅದು ರಸ್ತೆ ದಾಟೀ ಹೋಗಬೇಕೆಂಬ ಕಾರಣಕ್ಕೆ ಮುಂದೆ ನೋಡಲು ಬಂದೆವು. ನಾವು ತೀರ್ಮಾನಿಸಿದ್ದರ ವಿರುದ್ದ ತೀರ್ಪು ತಯಾರಾಗಿತ್ತು. ಮುಂದೆ ಎಟಿಎಂ ಸಿಗಲೇ ಇಲ್ಲ, ಮಳೆ ಮತ್ತೂ ಜೋರಾಗಿ ಸುರಿಯಲಾರಂಬಿಸಿತು. ವಿಧಿಯಿಲ್ಲದೇ ಅಲ್ಲೇ ಒಂದು ಮನೆಯ ಬಳಿಯಲ್ಲಿ ಟಿಕಾಣಿ ಹಾಕಿದೆವು. ಸತತ ಒಂದು ಗಂಟೆಗೂ ಹೆಚ್ಚು ಸಮಯ ಸುರಿದು ಜೀವನವನ್ನು ಮಂಕಾಗಿಸಿ ಬಿಟ್ಟಿತು. ಅಲ್ಲಿಂದ ಮುಂದೆ ಬರುವಾಗ, ಹಿರಿಸಾವೆಯಲ್ಲಿಯೂ ಇರಲಿಲ್ಲ, ಬೆಳ್ಳೂರಿನಲ್ಲಿಯು ಎಟಿಎಂ ಸಿಗಲೇ ಇಲ್ಲ, ಪೆಟ್ರೋಲ್ ಹಾಗಲೇ ತಳ ಮುಟ್ಟಿತ್ತು, ಮುಂದಕ್ಕೇ ಹೋಗುವ ಭರವಸೆ ಕಾಣದೆ ಕಂಗಳಾಗಿದ್ದಾಗಲೇ, ನನ್ನ ಸ್ನೇಹಿತ ಪ್ರಿಯ ವಿಜಿ, ಗಾಡಿಯ ಆಕ್ಷಿಲರೇಟರ್ ಅನ್ನು ಹೆಚ್ಚು ನುಳಿದು ನುಳಿದು, ಅದು ಜಾಮ್ ಆಗಿ ಹೋಯಿತು.ಗಾಡಿ ನಿಲ್ಲದೇ ಸುಮನೇ ಓಡುತ್ತಿತ್ತು, ಇದರಿಂದಾಗಿ ಹೆಚ್ಚು ಹೆಚ್ಚು ಪೆಟ್ರೋಲ್ ಕುಡಿದು ನಮ್ಮನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡುವುದು ನಿಶ್ಚಯವಾಯಿತು.ಅದೂ ಅಲ್ಲದೇ, ನಮ್ಮ ಕಣ್ಣೆದುರು ನಡೆದ ಅಪಘಾತಗಳು ನಮ್ಮನ್ನು ಬೆಚ್ಚಿ ಬೀಳುವಂತೆ ಮಾಡಿದವು. ನಮ್ಮ ಮುಂದೆ ಕೇವಲ ನೂರು ಅಡಿ ಅಂತರದಲ್ಲಿ, ಇಬ್ಬರು ಯುವಕರು ಬೈಕ್ ನಿಂದ ಬಿದ್ದು ಹೋದರು, ನೋಡಿದ ತಕ್ಷಣ ನಾವು ಮುಂದೊಂದು ಜಾಗದಲ್ಲಿ ಹೀಗೆ ಬೀಳುತ್ತೆವೆನ್ನಿಸಿತು. ಜೇಬಿನಲ್ಲಿದ್ದ ಇನ್ನು ಮೂವತ್ತು ರೂಪಾಯಿಗೆ, ಪೆಟ್ರೋಲ್ ಹಾಕಿಸಿ ಎಡಿಯೂರು ತಲುಪಿದರೇ ಅಲ್ಲಿ ಎಟಿಎಂ ಸಿಗುಬಹುದೆಂದು ನಡೆದೆವು.

ನಾವು ನಿರೀಕ್ಷಿಸಿದಂತೆ ಎಟಿಎಂ ಇತ್ತು, ಒಳಕ್ಕೆ ಹೋಗಿ ನನ್ನಲ್ಲಿದ್ದ ಎಲ್ಲಾ ಎಟಿಎಂ ಕಾರ್ಡುಗಳನ್ನು ಹಾಕಿ ನೋಡಿದರೂ ಅದು ಕಾರ್ಯ ನಿರ್ವಹಿಸುತ್ತಿರಲಿಲ್ಲ.ಇಂಥಹ ಚಿಂತಾಜನಕ ಸ್ತಿತಿಯಲ್ಲಿ ಜೇಬಿನಲ್ಲಿ ಒಂದೇ ಒಂದು ರೂಪಾಯಿ ಇಲ್ಲದೇ ಗುರುತಿಲ್ಲದ ಊರಿನಲ್ಲಿ ಅನಾಥ ಪ್ರಜ್ನೆ ಕಾಡುವಂತಾಯಿತು. ಇರುವ ಪೆಟ್ರೋಲ್ ನಲ್ಲಿ, ಕುಣಿಗಲ್ ತಲುಪಿ ಅಲ್ಲಿ ಸಿಕ್ಕೇ ಸಿಗುತ್ತದೆಂಬ ಭರವಸೆಯಿಂದ ಹೊರಟೆವು. ಕುಣಿಗಲ್ ತಲುಪುವ ವೇಳೆಗೆ ಸಂಪೂರ್ಣ ಒದ್ದೆಯಾಗಿದ್ದೇವು.ಬಂದು ನೋಡಿದರೇ, ಅಲ್ಲಿದ್ದ ಮೂರು ಎಟಿಎಂ ಗಳು ಬಾಗಿಲು ಹಾಕಿ ನಮ್ಮನ್ನು ಅಣಕಿಸಿದವು. ಒಂದು ಸಣ್ಣ ತಪ್ಪು ಒಂದು ಸಣ್ಣ ಉಢಾಫೆತನ ನನ್ನನ್ನು ಇಂಥಹ ಸ್ಥಿತಿಗೆ ತಂದಿತಲ್ಲ ಎಂದು ಮುಖ ಬಾಡಿಸಿದೆ.ಇದ್ದ ಪೆಟ್ರೋಲ್ ಬಂಕುಗಳಿಗೆ ಹೋಗಿ, ಕಾರ್ಡು ಉಜ್ಜಬಹುದಾ ಎಂದು ಕೇಳಿದೆ, ಎಲ್ಲಿಂದಲೂ ಸಕರಾತ್ಮಕ ಉತ್ತರ ಸಿಗಲಿಲ್ಲ. ಆ ಊರಿನಲ್ಲಿ ಯಾವೊಬ್ಬನೂ ಪರಿಚಯವಿಲ್ಲ. ಹಿಂದೆ ಅಗಸ್ತ್ಯ ಸಂಸ್ಥೆಯ ಕೆಲಸಕ್ಕೆಂದು ಹೋದಾಗ ಒಬ್ಬರ ಪರಿಚಯವಿತ್ತು, ಅವರ ನಂಬರ್ ಇಲ್ಲದೇ, ಲೆನಿನ್ ಅವರಿಗೆ ಕರೆ ಮಾಡಿ ಕೇಳಿದೆ ಅವರ ಬಳಿ ನಂಬರ್ ಇರಲಿಲ್ಲ.ಮುಂದೇನು? ಆ ದುರ್ಗೇಶ್ ಗೆ ಮುಯ್ಯಿ ಹಾಕದೇ ಇದ್ದಿದ್ದರೇ ಆ ನೂರು ರೂಪಾಯಿ ಇದ್ದಿದ್ದರೇ ಅದು ಈ ಸಮಯಕ್ಕೆ ಉಪಯೋಗಕ್ಕೆ ಬರುತ್ತಿತ್ತು. ಎಂದೂ ಮುಯ್ಯಿ ಹಾಕದ ನಾನು ಮೊದಲ ಬಾರಿಗೆ ಮಾಡಬಾರದು ಮಾಡಿದಂತಾಯಿತೆನ್ನುವಾಗ, ನೆನಪಿಗೆ ಬಂದವನು ಸ್ನೇಹಿತ ಮೋಹನ್, ಅವನಿಗೆ ಕರೆ ಮಾಡಿ ವಿಚಾರಿಸಿದೆ, ಅವನು ಅವನ ಸ್ನೇಹಿತನಿಗೆ ಕರೆ ಮಾಡಿ, ವಿಷಯ ತಿಳಿಸಿ ಎಲ್ಲ ಆಗಲು ಅರ್ಧ ಗಂಟೆ ಹಿಡಿಯಿತು. ಆ ಸಮಯದಲ್ಲಿ ನನ್ನೊಳಗೆ ಆಗುತ್ತಿದ್ದ ಸಂಚಲನವೇ ಬೇರೆ ಇತ್ತು, ದುಡ್ಡೂ ಸಿಗುವುದೋ ಇಲ್ಲವೋ, ಇಲ್ಲದಿದ್ದರೇ ಮಾಡುವುದೇನು?ಆಗಲೇ ಊರೆಲ್ಲಾ ಮಲಗುತಿತ್ತು. ಎಲ್ಲವೂ ಸುಸೂತ್ರವಾಗಿ, ಅವನ ಸ್ನೇಹಿತನ ಸ್ನೇಹಿತ ನೂರು ರೂಪಾಯಿ ಕೊಟ್ಟನು. ಅವನು ಬಂದು ನನ್ನನ್ನು ದಿಟ್ಟಿಸಿದಾಗ ನನಗೆ ನಿಜಕ್ಕೂ ಅವಮಾನವಾಯಿತು. ಪೆಟ್ರೋಲ್ ಗೆ ಕಾಸಿಲ್ಲ ಅಂತ ಅಂದರೇ, ಗಾಡಿ ಯಾಕೋ ಓಡಿಸಬೇಕು ಲೋಫರ್? ಎನ್ನುವಂತಿತ್ತು ಅವನ ನೋಟ. ನೀನು ಏನು ಹೇಳಿಕೊಂಡರೂ ನಾನವನಲ್ಲ ನಾನವನಲ್ಲ ಎಂದು ೭೦ ರೂಪಾಯಿಗಳಿಗೆ ಪೆಟ್ರೋಲ್ ಹಾಕಿಸಿ ಹೊರಟೆವು. ಅಲ್ಲಿಂದ ತಾವರೆಕೆರೆಗೆ ಬಂದು, ಎಟಿಎಂ ನಿಂದ ದುಡ್ಡು ತೆಗೆದು, ಮುಂಬರುವಾಗ ಸರಿಯಾಗಿ ಪೆಟ್ರೋಲ್ ಬಂಕ್ ಮುಂದಕ್ಕೆ ಬಂದು ಗಾಡಿ ನಿಂತಿತು. ಇದೊಂದು ಅದೃಷ್ಟವಾ? ಕಗ್ಗತ್ತಲಿನಿಲ್ಲಿ ಅರ್ಧ ಕಿಮೀ ಕೂಡ ನಡೆಯಲಾಗುತ್ತಿರಲಿಲ್ಲ, ಮೊದಲೇ ಕಳ್ಳ ಕಾಕರ ಭಯವಿರುವ ರಸ್ತೆ.ದರೋಡೆಕೋರರು ಬಹಳಷ್ಟು ಜನ ಇರುವಲ್ಲಿ ನಾವು ನೇರ ಬಂಕಿನ ಹತ್ತಿರ ಬಂದು ನಿಂತಿದ್ದು ಸಮಧಾನವೆನಿಸಿತು.ಅಲ್ಲಿಂದ ಜ್ನಾನ ಭಾರತಿ ಆವರಣದೊಳಕ್ಕೆ ಬರುವ ವೇಳೆಗೆ, ಗಾಡಿ ಸರಿ ಹೋಯಿತು, ಆಕ್ಷಿಲರೇಟರ್ ಸಮಸ್ಯೆ ಪರಿಹಾರವಾಯಿತು.

ಬಂದ ಮೇಲೆ ಎನಿಸಿದ್ದು, ಇದು ಸಮಸ್ಯೆಯ ಮೇಲೆ ಸಮಸ್ಯೆ ಕೊಡುವುದು, ಬರಗಾಲದಲ್ಲಿ ಅಧಿಕ ಮಾಸವೆಂಬಂತೆ ಅಲ್ಲವೇ? ಅಥವಾ ನಾವು ಅಂಥಹ ಸಮಸ್ಯೆಯಲ್ಲಿದ್ದರೂ ಸ್ವಲ್ಪವೂ ಅಡಚನೆಯಾಗದೇ, ತೊಂದರೇ ಆಗದೇ, ತಲುಪಿದೆವಲ್ಲ? ಇದಲ್ಲವೇ ಸಮಸ್ಯೆ ಬಂದಾಗ ಅದಕ್ಕೆ ಪರಿಹಾರವಿರುತ್ತದೆ ಎನ್ನುವುದು.ಇದಕ್ಕೂ ಮೀರಿ ನನಗೆ ಬೇಸರ ತರಿಸಿದ್ದು, ಎಲ್ಲದ್ದಕ್ಕೂ ದುಡ್ಡು ಮುಖ್ಯವಲ್ಲ, ಎಟಿಎಂ ಕಾರ್ಡುಗಳು ಸಾಕು ಎಂದು ಯಾವನೋ ಮುಟ್ಠಾಳ ಕಳುಹಿಸಿದ್ದ ಎಸ್ ಎಂ ಎಸ್. ಕಾರ್ಡುಗಳಿದ್ದರೂ, ಒಂದು ಲೀಟರ್ ಪೆಟ್ರೋಲ್ ಹಾಕಿಸಲಾಗಲಿಲ್ಲ, ಮೂರು ತಾಲೂಕು ಕೇಂದ್ರಗಳನ್ನು ದಾಟಿ ಬಂದರೂ, ಸರಿ ಸುಮಾರು ೧೫೦ ಕಿಮೀ ಪಯಣ ಮಾಡಿದರೂ ಒಂದೇ ಒಂದೂ ಎಟಿಎಂ ಸಿಗಲಿಲ್ಲವೆಂದರೇ? ನಾವು ಬದುಕಿರುವುದು ಎಲ್ಲಿ? ಸಾವಿರಾರು ಜನರು ಈ ಎಟಿಎಂ ಗಳನ್ನು ನಂಬಿ ಬರುತ್ತಾರೆ ಅವರಿಗೆಲ್ಲಾ ನಮ್ಮ ಗತಿಯೇ??

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...