ಬರೆಯ ಹೊರಟವನಲ್ಲ ನಾನು, ಬರೆಸಿಕೊಂಡವಳು ನೀನು, ಮನದಾಳದ ಕನಸಿಗೆ ಅಕ್ಷರದ ಬಣ್ಣ ಬಳಿಸಿದವಳು ನೀನು...

ಬರೆಯ ಹೊರಟವನಲ್ಲ ನಾನು, ಬರೆಸಿಕೊಂಡವಳು ನೀನು, ಬದುಕ ಹೊರಟವನಲ್ಲ ನಾನು ನಡೆಸಿದವಳು ನೀನು, ಪ್ರೀತಿಯ ಧಾರೆ ಎರೆದವಳು ನೀನು, ಪ್ರೀತಿಗೆ ಬಣ್ಣ ಬಳಿದು, ಕನಸಿಗೆ ಬಣ್ಣ ಕಟ್ಟಿಸಿದವಳು ನೀನು, ನನ್ನ ಕನ್ನಡಕ್ಷರ ಅದೇ ನನ್ನುಸಿರು ಅವಳಲ್ಲವೇ ನೀನು.

29 July 2011

ಹೇಡಿತನಕ್ಕೆ ಮುಖವಾಡ!!

ಕುಡಿತಕ್ಕೆ ಸಮನಾದದ್ದು ಬೇರೊಂದಿಲ್ಲ, ಇದು ನಾನು ನಂಬಿರುವ ಸತ್ಯ. ಅದೆಷ್ಟು ಬಾರಿ ಯೋಚಿಸಿದರೂ, ಚಿಂತಿಸಿದರೂ ಕೊರಗಿದರೂ ನೆಮ್ಮದಿಯ ಉಸಿರು ಬಿಡಿಸುವುದು ಒಂದಿಷ್ಟು ಕುಡಿದ ಮೇಲೆ. ಸರ್ವ ರೋಗಕ್ಕೂ ಸಾರಾಯಿ ಮದ್ದು, ನಾನು ಕುಡಿಯುವುದು ಮೋಜಿಗಲ್ಲ, ಮನರಂಜನೆಗಲ್ಲ, ಚಟವೂ ಅಲ್ಲಾ, ನನ್ನೊಳಗಿರುವ ಸೋಮಾರಿತನ, ನೋವು ದುಃಖಗಳನ್ನು ಮರೆಮಾಚಲು ಕುಡಿಯುತಿದ್ದೇನೆ. ಕುಡಿದು ನಾ ಅಳಬಲ್ಲೇ, ನೋಡಿದವರು ಕುಡಿದು ಅಳುತ್ತಿದ್ದಾನೆಂದು ಸುಮ್ಮನಾಗುತ್ತಾರೆ. ಕುಡಿದು ನನ್ನ ಮೈ ನಾನೇ ಪರಚಿಕೊಳ್ಳಬಲ್ಲೆ, ನನ್ನೊಳಗೇ ನಾನೇ ಅಳಬಲ್ಲೆ, ನಗಬಲ್ಲೆ, ತಮಾಷೆ, ನಗು, ನೋವು ದುಃಖ ದುಮ್ಮಾನ ಎಲ್ಲವೂ ಸೇರುತ್ತವೆ. ಆದರೂ ಯಾರು ಗಂಭೀರವಾಗಿ ಪರಿಗಣಿಸುವುದಿಲ್ಲ. ಕುಡಿದು ನಾನು ಯಾರೊಂದಿಗೂ ಜಗಳವಾಡುವುದಿಲ್ಲ, ಯಾರು ನನ್ನೊಂದಿಗೂ ಆಡುವುದಿಲ್ಲ, ಕುಡಿದಾಗ ನಾನು ಹೊಡೆದಾಡುವುದು ನನ್ನೊಂದಿಗೆ, ಕೇವಲ ನನ್ನೊಂದಿಗೆ. ನಾನು ಕುಡುಕನಾಗಿದ್ದು ನನ್ನಿಂದ, ನಾನು ಕುಡಿಯುತ್ತಿರುವುದು ನನ್ನಿಂದ, ಕುಡಿದು ಕೊರಗುವುದು ನನ್ನ ಮೇಲೆ. ಇದು ನನ್ನಯ ಮೇಲಿನ ಪ್ರೀತಿ, ಪ್ರೇಮ, ಅತಿಯಾದ ಅಬಿಮಾನ, ಇವೆಲ್ಲದರ ಮಿಶ್ರಣದಲ್ಲಿ ಮಿಂದೇಳುವುದೇ ನಾ ಕುಡಿದಾಗ, ನಾ ಕುಡಿಯುವುದೇ ಮಿಂದೇಳಲು.

ನನ್ನ ಕುಡಿತ, ನನ್ನ ದುಷ್ಟ ಬಾಳು, ನನ್ನ ಈ ಹೇಯ ಜೀವನ ಸ್ಥಿತಿ ಇವೆಲ್ಲವೂ ನಾನೇ ನನ್ನಿಂದ ಸೃಷ್ಟಿಸಿಕೊಂಡಿರುವುದು. ನಾನೊಬ್ಬ ಹೇಯ, ನಾನೊಬ್ಬ ಸೋಮಾರಿ, ನಾನೊಬ್ಬ ಕುಡುಕ, ನನ್ನಳೊಗೆ ಕಳ್ಳತನವಿಲ್ಲ, ದ್ರೋಹವೆಂಬುದಿಲ್ಲ, ಅದಿದ್ದರೇ ನಾ ಕುಡಿದು ನನ್ನೊಳಗೆ ನಾನು ಸಾಯುತ್ತಿರಲಿಲ್ಲ. ನಾನು ಕುಡಿಯುವುದಕ್ಕೆ ಕಾರಣವಿಲ್ಲ. ಕಾರಣವಿದ್ದು ಕುಡಿಯುವಷ್ಟು ಯೊಗ್ಯನಲ್ಲ. ನಾನೇಕೆ ಕುಡುಕನಾದೆ? ನೀ ನೇಕೆ ಕುಡೀಯುತ್ತೀಯಾ? ಕುಡಿತವನ್ನು ಬಿಡುವುದಕ್ಕೆ ನಾ ಸಹಾಯ ಮಾಡಲೇ ಎನ್ನುವ ಹತ್ತು ಹಲವು ಬುದ್ದಿವಂತರಿದ್ದಾರೆ, ಒಳ್ಳೆಯ ಸ್ನೇಹಿತರು ಅನುಮಾನವಿಲ್ಲ. ಆದರೇ ನಾನು ಒಳ್ಳೆಯವನಾಗಲಿಲ್ಲ. ಇದು ನನ್ನೊಳಗೆ ಇರುವ ದುಷ್ಟ ಮನಸ್ಥಿತಿ. ಕುಡುಕನ ಪರಿಸ್ಥಿತಿ ಯಾವ ನನ್ನ ಶತ್ರುವಿಗೂ ಬೇಡ. ಕುಡುಕನೆಂಬುವನು ನೆಪ ಮಾತ್ರಕ್ಕೆ ಮನುಷ್ಯ ಅವನ ಒಳಗೆ ಅತಿರೇಕಕ್ಕೇರಿದ ಹುಚ್ಚಾಸ್ಪತ್ರೆ ಇರುತ್ತದೆ. ಅದು ಸಾಮಾನ್ಯ ಹುಚ್ಚರ ಸಂತೆಯಲ್ಲ, ಅಲ್ಲಿರುವವರೆಲ್ಲರೂ ವಿಕೃತ ಮನಸ್ಸಿನವರೇ! ನಾನು ಕುಡಿದಾಗ ನನ್ನೊಳಗೆ ಆಗುವ ಬದಲಾವಣೆಯನ್ನೂ ನಾನು ನಡೆದುಕೊಳ್ಳುವುದನ್ನು ನೆನೆ ನೆನೆದು ಮತ್ತೆ ಕುಡಿಯುತ್ತೇನೆ.
ಕುಡಿಯುವವರಿಗೊಂದು ನೆಪ ಬೇಕು ಅಷ್ಟೇ, ಇಂಥಹ ಸಾವಿರಾರು ಬೊಗಳೆ ಮಾತುಗಳನ್ನು ನಾನು ಕಂಡಿದ್ದೇನೆ. ನಾನು ನಾನಾಗಿದ್ದರೇ ಚೆನ್ನಾಗಿರುತ್ತದೆ ಹೊರತು ಬೇರಯವರ ಪಾತ್ರ ಮಾಡಲು ಹೋದರೇ ಅದೆಂದಿಗೂ ಸಾದ್ಯವಿಲ್ಲ. ಇವೆಲ್ಲಾ ಮಾತುಗಳು ನನ್ನ ಸ್ವಂತದಲ್ಲ, ನನ್ನ ತಾತ ಹತ್ತು ವರ್ಷದ ಹಿಂದೆ ಹೇಳಿದ ಮಾತುಗಳು. ಅವುಗಳು ಇನ್ನು ಗುಯ್ಂ ಎನ್ನುತಿವೆ.