26 ಮೇ 2009







ನಿನ್ನ ಬೆನ್ನ ಹಿಂದೆ ನನ್ನತನವ ಹರಸುತ್ತಾ….






ಹತ್ತಾರು ದೇವಸ್ಥಾನಗಳಿಗೆ ಅಲೆದು ದೇವರಿಗೆ ಹರಕೆ ಹೊತ್ತಿ, ದೇವರನ್ನು ಕಾಡಿ, ಬೇಡಿ, ಹುಟ್ಟಿದ ಮಗನಂತೂ ನಾನಲ್ಲ. ನಮ್ಮ ಬಡತನವೇ ನಮಗಿರುವಾಗ ಇದೊಂದು ಬರಬೇಕಿತ್ತಾ ಎನ್ನುವ ಸನ್ನಿವೇಶದಲ್ಲಿ ಶನಿರಾಯನ ಕೃಪೆಯಿಂದ ಅವನ ಗುಣಗಳನ್ನು ತಂದುಬಂದವನೆಂದರೇ ಉಪೇಕ್ಷೆಯೇನಲ್ಲ. ಅಂತೂ ಹುಟ್ಟಿದ್ದಾಯಿತಲ್ಲ ಹೇಗಾದರೂ ಓದಿ ಹಾಳಾಗಿ ಈ ಕೊಳೆತು ನಾರುತ್ತಿರುವ ಸಮಾಜಕ್ಕೆ ಇದು ಒಂದು ಕಸವೂ ಸೇರಲಿ ಎಂದು ಬಯಸಿದ್ದ ತಂದೆಗೆ, ನಾನು ಬದುಕುವುದು ನನ್ನ ಶೈಲಿಯಲ್ಲಿಯೇ ಹೊರತು ಈ ಕೊಳಕು ಬಾಳೂ ಬೇಡ, ನಿಮ್ಮ ಈ ದರಿದ್ರ ಸಮಾಜದಲ್ಲಿ ನಾನು ಒಬ್ಬನೆಂದು ಬದುಕಲಾರೆನೆಂದು ಹೊರಟರೆ, ಮತ್ತದೇ ಸುಳಿಗೆ ಬಂದು ಸಿಳುಕಿದೆ. ಅದೆಂದರೇ ಯಾವುದು? ಸಮಜಾದ ಎಕೈಕ ಸಮಾನತೆಯ ಜಾಗ ನಮ್ಮೂರಿನ ಬಾರ್. ಬಾರ್ ಒಂದನ್ನು ಬಿಟ್ಟರೇ ಬೇರೆಲ್ಲೂ ಸಮಾನತೆ ದೊರೆಯುವುದೇ ಇಲ್ಲವೇನೋ ಈ ಭರತ ಭೂಮಿಯಲ್ಲಿ. ಅನ್ಯೋನ್ಯತೆಯ ಅತೀರೇಕವಿರುವುದು ಅದೊಂದೆ ಸ್ಥಳದಲ್ಲಿ, ಅಲ್ಲಿ ಸಿಗುವ ಮೋಜು, ವಿನೋದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲವೆನಿಸುತ್ತದೆ. ವಿಶ್ವದ ಸಮಗ್ರವನ್ನು ಚರ್ಚಿಸುತ್ತಾರೆ, ದೇಶಾಭಿಮಾನ ಮೆರೆಯುತ್ತದೆ. ಸ್ವಾಭಿಮಾನವನ್ನು ಬಿಟ್ಟು ಅಪರಿಚಿತನ ಸಿಗರೇಟಿಗೆ ಬೆಂಕಿಕೊಡುತ್ತಾರೆ. ವಿವಿಧತೆಯಲ್ಲಿ ಏಕತೆಯನ್ನ ಸಾರುತ್ತಾರೆ. ಇಷ್ಟೇಲ್ಲಾ ಕೇಳಿದಮೇಲೆ ಇವನೊಬ್ಬ ಕುಡುಕನೆಂಬುದು ನಿಮಗೆ ತಿಳಿದಿದೆ. ಕೊಟ್ಟಾರೆ ಕೊಡು ಶಿವನೆ ಕುಡುಕನಲ್ಲದ ಗಂಡನ ಅಂತಾ ಹೆಣ್ಣುಮಕ್ಕಳು ಬೇಡುವಾಗ ನಮ್ಮಂತವರ ಸ್ನೇಹದಿಂದ ದೂರ ಉಳಿದಿರುವುದು ತಪ್ಪೇನು ಇಲ್ಲ ಬಿಡಿ.



ನಾನು ಹುಟ್ಟಿದ್ದು ನನಗೆ ತಿಳಿದಿಲ್ಲ ಬೆಳೆದು ಬಂದ ರೀತಿ ತಿಳಿದಿದೆ. ನನ್ನಲ್ಲಿ ನನಗೆ ತಿಳಿಯದೇ ಆದ ಬದಲಾವಣೆಗಳು ನಂತರ ನನಗೆ ಸ್ವಲ್ಪ ತಡವಾಗಿ ಗೋಚರಿಸಿದರೂ ಅದರಿಂದ ಅಂಥಹ ಅನಾಹುತಾಗಳೇನೂ ಆಗಿಲ್ಲ. ಆಗಿದ್ದರೂ ಅದನ್ನು ನಾನು ಗಣನೆಗೆ ತೆಗೆದುಕೊಂಡಿಲ್ಲ. ತಾತ್ಸಾರವಾಗಿಯೇ ತೆಗೆದುಕೊಂಡೆ ಅದರಿಂದ ಆದದ್ದು ಕೇವಲ ಆರ್ಥಿಕ ತೊಂದರೆಯಷ್ಟೆ. ಅದಕಿಂತ ಎಂದರೇ ಏನಾದೀತು ಒಂದಿಷ್ಟೂ ಸಮಯವೆರ್ಥ! ಪಟ್ಟಣವಾಸಿಗಳಿಗೆ ಹಳ್ಳಿಯೆಂದರೆ ಒಂದು ಸುಂದರತಾಣವಷ್ಟೇ, ಅಲ್ಲಿನ ನಿಸರ್ಗ, ನೇಸರ, ಹಸಿರು ಇದಷ್ಟೇ ಅವರ ಕಣ್ಣಿಗೆ ಗೋಚರಿಸುವುದು. ಅವರು ಹಳ್ಳಿಯನ್ನು ಕಾಣುವುದು ಒಬ್ಬ ಪ್ರವಾಸಿಯಾಗಿಯೇ ಹೊರತು ಅಲ್ಲಿನವನಾಗಿಯಲ್ಲ. ಸುಮಾರು ಮೂರು ವರ್ಷದವನಾಗಿದ್ದಲಿಂದಲೂ ನಿಸರ್ಗದೊಂದಿಗೆ ಸ್ನೇಹ ಬೆಳೆಸಿಕೊಂಡುಬೆಳೆದೆ. ಅದೂ ಅನಿವಾರ್ಯವೂ ಇತ್ತು, ನಮ್ಮಲ್ಲಿ ದಿನಕ್ಕೆರಡು ಬಾರಿ ಗದ್ದೆ ತೋಟ ಬಳಸಿಕೊಂಡು ಬರಲೇ ಬೇಕಿತ್ತು. ರಜಾದಿನದಲ್ಲಿ ಬೆಳಗಿನಿಂದ ಸಂಜೆಯವರೆಗೂ ಜಮೀನಿನಲ್ಲೇ ಇರಬೇಕಾದಿತ್ತು. ನಮ್ಮೂರ ನದಿ ದಂಡೆ, ಅದಕ್ಕೆ ಅಡ್ಡಲಾಗಿ ಕಟ್ಟಿರುವ ಕಟ್ಟೆ, ಅಲ್ಲಿನ ಮಾವಿನ ತೋಪು, ಹೊಂಗೆಯ ತೋಪು ಇವೆಲ್ಲಾ ಈಗ ಮಾಯವಾಗಿವೆ. ಅಂದಿಗೆ ಅಲ್ಲಿಗೆ ಚಿಕ್ಕ ಮಕ್ಕಳು ಹೋಗುವಂತಿರಲಿಲ್ಲ, ದೆವ್ವ ಭೂತ ಇರುತ್ತವೆಂದು ನಂಬಿಸಿದ್ದರು. ಬಾಲ್ಯವೆಂದರೇ ಒಂದು ಹುಚ್ಚು ಕುತೂಹಲಭರಿತ ಜೀವನ, ಬಾಲ್ಯದಲ್ಲಿ ಕುತೂಹಲವಿಲ್ಲದೇ ಬೆಳೆದ ಯಾವ ಮಕ್ಕಳು ಮುಂದೆ ಜೀವನದಲ್ಲಿ ಕುತೂಹಲವಿಲ್ಲದೇ ಬದುಕುತ್ತಾರೆ. ಗದ್ದೆಗೆಂದೂ ಹೋದ ನಾವುಗಳು ಸ್ನೇಹಿತರೆಲ್ಲ ಕೂಡಿ ಒಟ್ಟಿಗೆ ನದಿದಂಡೆಗೆ, ಸ್ಮಶಾನವಿದ್ದಲ್ಲಿಗೆ ಹೋಗುವುದು ನೋಡುವುದು ಮಾಡುತ್ತಿದ್ದೇವು. ಅಪ್ಪಿ ತಪ್ಪಿ ಯಾರಿಗಾದರೂ ಮಾರನೇದಿನ ಕಾಯಿಲೆ ಬಂದರೇ ಅದು ಅಲ್ಲಿಗೆ ಹೊದದ್ದರಿಂದಲೇ ಬಂದದೆಂದು ನಿರ್ಧರಿಸುತಿದ್ದೇವು. ಹೀಗೆ ಶುರುವಾದ ನನ್ನ ಅಲೆದಾಟ ಇಂದಿಗೂ ನಿಂತೇ ಇಲ್ಲ.



ಆದರೂ ನಾನು ನನ್ನೂರಿನ ನದಿ ತೀರಕ್ಕೇ ಇಷ್ಟೊಂದು ಅಂತಿಕೊಳ್ಳಲು ಕಾರಣವೇನೆಂದು ಅನೇಕ ಬಾರಿ ಆಲೋಚಿಸಿದ್ದು ಇದೆ. ಉತ್ತರವೆನೆಂದು ತಿಳಿದಿಲ್ಲ. ಆ ಉತ್ತರವನ್ನು ಹುಡುಕುತ್ತಾ ಹೊರಟ ನಾನು, ಎಲ್ಲೆಲ್ಲಿ ಎಷ್ಟೆಷ್ಟ್ ಅಲೆದೆನೆಂದರೇ ಹೇಳತೀರದು. ನದಿ ದಂಡೆ, ಅಲ್ಲಿನ ಮರಳಿನ ಮೇಲಿನ ನನ್ನ ಕಾಲ್ಗುರುತುಗಳು, ಒಮ್ಮೊಮ್ಮೆ ಸ್ನೇಹಿತರನ್ನು ಮಲಗಿಸಿ ಅವರ ಚಿತ್ರ ಗೀಚಿದ್ದು, ಏನೋ ಒಂದು ಸೆಳೆತ ನಿನ್ನಲ್ಲಿಗೆ ಎಳೆಯುತ್ತಿತ್ತು. ಮನೆಗೆ ಬಂದರೂ ಕೂಡ ನಾಳೆ ಹೇಗೆ ಬರೆಯಲಿ, ಏನು ಬರೆಯಲಿ ಬರೀ ಇವೇ ಚಿಂತನೆಗಳು ಮನದಲ್ಲಿ ಅರಿದಾಡುತಿದ್ದವು. ಮುಖ ಗಟ್ಟಿಮಾಡಿಕೊಂಡು ಯಾವದೋ ಚಿಂತನೆಯಲ್ಲಿ ಮುಳುಗಿದ್ದ ಮಕ್ಕಳನ್ನು ನೆನೆದಾಗ ಅವೆಲ್ಲಾ ನೆನಪಾದರೂ ತುಂಟಾಟವಿಲ್ಲದ ಮಕ್ಕಳು ನನಗೆ ಅಷ್ಟು ಹಿಡಿಸುವುದಿಲ್ಲ. ಪೋಷಕರೂ ಅಷ್ಟೇ ಮಕ್ಕಳೆಂದರೇ ಅವರ ರೀತಿಯಲ್ಲಿಯೇ ಸ್ಮಶಾನ ಮೌನದಲ್ಲಿರಬೇಕು, ಟಿವಿ ನೋಡುವಾಗ ಶಬ್ದ ಮಾಡಬಾರದು , ಮಾತನಾಡಬಾರದು ಅದು ಇದು ಅಂಥಹ ಪೋಷಕವರ್ಗವೆಂದರೇ ನನಗೆ ಎಲ್ಲಿಲ್ಲದ ಅಸಹ್ಯ. ಬಾಲ್ಯದ ಮೌಲ್ಯ ಅವರಿಗೆಲ್ಲಿ ತಿಳಿದೀತು, ಅದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದನ್ನು ಸಾಬೀತು ಪಡಿಸುತ್ತದೆ. ನನ್ನ ಬಾಲ್ಯವೂ ಅಷ್ಟೇ ಬೇಡವೆಂದದ್ದನ್ನು ಮಾಡಿ ಮಾಡಿ ಬೆಳೆದು ಇಂದಿಗೂ ಬೇಡ ಅನ್ನುವುದನ್ನೆ ಮಾಡುತ್ತೇನೆ. ಇದೊಂದು ಚಾಲಿಯಾಗಿದೆ ನನಗೆ.

ನಮ್ಮೂರಿನಲ್ಲಿ ಇಂದಿಗೂ ೧ಮೈಲು ದೂರ ನದಿಗೆ ಹೋಗಿ ಬಟ್ಟೆ ತೊಳೆದು ಬರುತ್ತಾರೆ. ಇದು ಹೆಂಗಸರ ಕರ್ಮವೆಂದು ಗಂಡಸು ತಿಳಿದಿರುವುದರಿಂದ ಅದರ ಬಗ್ಗೆ ಅವನಿಗೆ ಗಮನವಿಲ್ಲ. ನಾನು ಚಿಕ್ಕವನಿದ್ದಾಗ ನಮ್ಮ ಅಮ್ಮನೂ ಸಹ ನದಿಗೆ ಹೋಗುತ್ತಿದ್ದದ್ದು ನೆನಪಿದೆ. ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲದರಿಂದ ನಾನೇ ಹೆಣ್ಣು ಗಂಡು ಎರಡು ಆಗಿ ಬೆಳೆದೆ. ಎರಡು ಎಂದರೇ ತಪ್ಪು ತಿಳಿಯಬಾರದು. ಅಡುಗೆ ಮಾಡುವುದನ್ನು ಅಮ್ಮನಿಂದ ಕಲಿತಿದ್ದರಿಂದ ಇಂದು ಗೊತ್ತು ಗುರಿಯಿಲ್ಲದ ಊರಿನಲ್ಲಿ ನೆಮ್ಮದಿಯಾಗಿ ಬದುಕಲು ಬರುತ್ತಿದೆ. ನದಿಗೆ ಬಟ್ಟೆ ತೊಳೆಯಲು ಹೋಗುವುದೆಂದರೇ ಅದೊಂದು ಮಹಾಪುರವೇ ಸರಿ, ಅದು ಮುಂಜಾನೆ ೫ಗಂಟೆಗೆ ಎದ್ದು, ಬಟ್ಟೆ ಬರಿಯನ್ನೆಲ್ಲಾ ತುಂಬಿಕೊಂಡು ಹೋಗಿ ಸೂರ್ಯ ಮೇಲೆರುವುದರೊಳಗೆ ಮನೆ ಸೇರಬೇಕಿತ್ತು. ಅಮ್ಮನ್ನ ನನ್ನನ್ನು ಕರೆದೊಯ್ಯುತ್ತಿದ್ದಳು. ಅದು ನಾನು ೧೦ನೇ ಕ್ಲಾಸು ಮುಗಿಯುವ ತನಕವೂ ಹೋಗುತ್ತಿದ್ದೆ. ಬಹಳ ಸಂಕೋಚವೆನಿಸುತ್ತಿತ್ತು. ಅದು ನನ್ನ ಕೆಲಸವಲ್ಲ, ಹೆಣ್ಣುಮಕ್ಕಳದ್ದು ಎನಿಸುತ್ತಿತ್ತು. ಆದರೇ, ಅಮ್ಮ ನನ್ನ ಕೆಲಸಗಳನ್ನು ಮೆಚ್ಚಿ ನನ್ನ ಬಗ್ಗೆ ಹೇಳುವಾಗ ಅವೆಲ್ಲಾ ಮರೆತುಹೋಗುತಿತ್ತು. ಅಮ್ಮನ ಜೊತೆಗೆ ನದಿಯಲ್ಲಿ ಕುಳಿತು ಬಟ್ಟೆ ತೊಳೆದು ಮನೆಗೆ ಬರುವಾಗ ಇವೆಲ್ಲಾ ಜೀವನವಾ? ಅಥವಾ ಪಟ್ಟಣದಲ್ಲಿನ ನೆಟ್ಟರೂ ಮನೆಯವರೂ ಎಂದು ನದಿಯ ಮುಖವನ್ನೆ ಕಾಣದೇ ನೆರಳಲ್ಲಿ ಕುಳಿತು ಬಟ್ಟೆ ತೊಳೆಯುವಾಗ ನಮಗೇಕೆ ಇಂಥಹದ್ದು ಎಣಿಸುತ್ತಿತ್ತು. ಆದರೇ ಅಲ್ಲಿಯವರು ನದಿಯಲ್ಲಿ ಬಟ್ಟೆತೊಳೆದಾಗ ಇರುವ ಮಡಿಯೇ ಬೇರೆ ಎಂದಾಗ ಯಾವುದು ಸರಿ ಯಾವುದು ತಪ್ಪು ಎಣಿಸುತ್ತಿತ್ತು. ಅದು ಕಾಲ ಕಳೆದಮೇಲೆ ಇರುವುದೆಲ್ಲವಾ ಬಿಟ್ಟು ಇರದಿದರೆಡೆಗೆ ತುಡಿವುದೇ ಜೀವನ ಎನಿಸತೊಡಗಿತ್ತು.

ಇಂದು ಸರಿ ಹೋದಾನು ನಾಳೆ ಸರಿ ಹೋದಾನು ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರೂ ನಾನು ಸರಿ ಹೋಗಲೇ ಇಲ್ಲ. ಯಾವುದನ್ನೋ ಹರಸಿ ಹೊರಟಿದ್ದೇ. ಅದು ಯಾವುದೆಂಬುದು ನನಗೆ ತಿಳಿಯಲೇ ಇಲ್ಲ. ಜೇಬಿಗೆ ಒಮ್ಮೆ ೫೦೦ರೂ ದೊರೆತರೆ ಮುಗಿಯಿತು, ಎರಡು ದಿನ ತಿಳಿಯದ ಊರಿಗೆ ಓಡಿ ಹೋಗಿ ಬರುತ್ತಿದ್ದೆ. ನೆನಪಿಗೆ ಇರದ ಯಾರದ್ದೋ ನೆಂಟರು ಅಥವಾ ಸ್ನೇಹಿತರ ಹೆಸರು ಹೇಳಿ ಹೋಗುತ್ತಿದ್ದೆ. ಒಂದು ಬಗೆಯ ನೆಮ್ಮದಿ ಸಂತೋಷ ನನಗರಿಯದೇ ಸಿಗುತ್ತಿತ್ತು. ನಮ್ಮೂರ ನದಿ ದಂಡೆಯಲ್ಲಿ ಕುಳಿತಾಗಲೂ ಅಷ್ಟೆ, ದೂರ ದಿಗಂತ ನೋಡುತ್ತಾ ನನ್ನನ್ನೇ ನಾನು ಮರೆತುಹೊಗುತ್ತಿದ್ದೆ. ಇವೆಲ್ಲಾ ಹುಚ್ಚು ಮನಸ್ಸಿನ ಭಾವನೆಗಳು, ಭಾವನೆಗಳೆಂದಿಗೂ ಹೊಟ್ಟೆ ತುಂಬಿಸುವುದಿಲ್ಲ. ನನ್ನ ಶಾಲಾ ದಿನಗಳಲ್ಲಿ ನದಿದಂಡೆಗೆ ಹೋಗಿ ಕುಳಿತುಕೊಳ್ಳುವುದು ಕಾಲಹರಣ ಮಾಡುವುದಕ್ಕೊಂದು ಮಾರ್ಗವೆಂದು ನನ್ನ ಸಹಪಾಠಿಗಳು ತಿಳಿದಿದ್ದರು.ಅವರ ಪ್ರಕಾರ ಶಾಲೆ ಮುಗಿದು ಬಂದು ನದಿಯಿಂದ ಬರುವ ವೇಳೆಗೆ ಸಂಜೆ ಆಗಿರುತ್ತದೆ ಸ್ವಲ್ಪ ಪುಸ್ತಕ ತಿರುವಿ ಹಾಕಿ ಮಲಗಿದರೆ ಮುಗಿಯಿತು. ಆದರೇ ನನ್ನೊಳಗಿದ್ದ ಬೇಕುಗಳು ಅವಲ್ಲ ಎಂಬುದನ್ನು ನಾನು ಅವರಿಗೆ ಮನವರಿಕೆ ಮಾಡಿಕೊಡಲಿಲ್ಲ. ನಾನು ತೆಪ್ಪನಾದೆ, ಇಂದಿಗೂ ನಾನು ಊರಿಗೆ ಹೋಗಿ ನದಿಬಳಿಯಲ್ಲಿದ್ದರೇ ಸಿಗರೆಟು ಸೇದಲು ಜಾಗವಿಲ್ಲದಿದ್ದರಿಂದ ಅಲ್ಲಿಗೆ ಹೋಗಿದ್ದಾನೆ ಎನ್ನುತಾರೆ ಹೊರತು ನಿಸರ್ಗದ ಮೇಲಿನ ಮೋಹವೆನ್ನುವುದಿಲ್ಲ. ಇದು ಎಲ್ಲರಿಗೂ ಸರ್ವೇ ಸಾಮಾನ್ಯವೆನಿಸುತ್ತದೆ. ನಾವು ನಮ್ಮಲ್ಲಿಲ್ಲದ ಏನನ್ನೂ ಹರಸುತ್ತಾ ಅಲೆಯುತ್ತೇವೆ, ಅದು ಏನೆಂಬುದು ತಿಳಿದರೆ ನನಗೆ ಬೇಕಿರುವುದು ಇದೇ, ಇದನ್ನೇ ನಾನು ಹುಡುಕತಿದ್ದದ್ದು ಎನ್ನಬಹುದು. ಆದರೇ ನಾನು ಹುಡುಕುತ್ತಿರುವ ವಸ್ತುವೆನೆಂದು ನನಗೆ ಗೊತ್ತಿಲ್ಲದಿದ್ದರೇ ಬೇರೆಯವರ ಸಹಾಯಪಡೆಯುವುದೆಂತು? ಊರು ಸುತ್ತುವಾಗ, ಕೆಲವರೊಂದಿಗೆಗೆ ಹರಟುವಾಗ ನನಗೆ ಬೇಕಿದ್ದು ಸಿಕ್ಕಿದೆ ಎನಿಸಿದರೂ ಮತ್ತೇನನ್ನೋ ಬಯಸತೊಡಗುತ್ತದೆ ಮನಸ್ಸು.

ಅದು ಎಲ್ಲಿ ಸಿಗುತ್ತದೇ, ಎಲ್ಲರೂ ಹುಡುಕುತ್ತಾ ಹರಸುತ್ತಾ ಅಲೆಯುವ ಆ ವಸ್ತು ಎಲ್ಲಿದೆ? ಅದರ ಹೆಸರೇನು? ಆತ್ಮ ತೃಪ್ತಿ!!!!

ಎಲ್ಲಿಯೋ ಕೇಳಿದ ಪದವಿದು ಅನುಭವಕ್ಕೆಂದು ಬಂದಿಲ್ಲ. ಇದು ಹೇಗಿದೆ? ಒಮ್ಮೊಮ್ಮೆ ನಾನು ಪ್ರೀತಿಸಿದ ಗೆಳತಿಯ ರೂಪದಲ್ಲಿ ನನಗೆ ದೊರೆತದ್ದು ಇದೆನಾ? ಇಲ್ಲ ಅದು ಇದಲ್ಲ ಅದು ಇದರ ಒಂದು ಭಾಗವಷ್ಟೆ. ಮತ್ತೆ ನನ್ನ ಇಂದ್ರೀಯಗಳಿಗೆ ಆಗ್ಗಾಗ್ಗೆ ಬೇಕೆನಿಸುವುದು ಇದೆನಾ? ಇಲ್ಲ ಅದು ಇದರ ಇನ್ನೊಂದು ಮುಖವಿರಬಹುಹುದು, ಆದರೇ ಅದೇ ಇದು ಎನ್ನಬೇಡ. ನನಗೆ ಅದು ಬೇಕಿದೆ ಎಂದರೇ ಹುಡುಕುವುದೆಲ್ಲಿ? ನನಗೆ ಅದೆಂದಿಗೂ ಸಿಗುವುದಿಲ್ಲವೆ? ಯಾವದರ ಹಿಂದೆ ಹೋದಾಗಲೂ ನನಗಿದು ಪೂರ್ತಿಪ್ರಮಾಣದಲ್ಲಿ ಸಿಕ್ಕಿಲ್ಲ. ಅಂದರೇ ಅದಕ್ಕೇ ನನಗೆ ತಕ್ಕ ಯೋಗ್ಯತೆಯಿಲ್ಲವೆಂದೇ? ಅಥವಾ ಅದೂ ಯಾರಿಗೂ ಸಿಗುವುದೇ ಇಲ್ಲವೇ? ಪ್ರತಿಯೊಬ್ಬ ಮನುಷ್ಯನು ತಾನು ತನಗೆ ಅರಿವಿಲ್ಲದಂತೆ ಯಾವುದಾದರೂ ಒಂದರ ಹಿಂದೆ ಹೋಗುವುದು ಸಾಮಾನ್ಯ ಸಂಗತಿ. ಹೆಣ್ಣಿನ ಹಿಂದೆ ಹೋದವನನ್ನು ಅವನಿಗೆ ಹೆಣ್ಣಿನ ಮೋಹವಿದೆಯೆನ್ನುತ್ತಾರೆ ಅವನ್ನು ಕಂಡ ಕಂಡ ಹೆಣ್ಣಿನ ಹಿಂದೆ ಹೋದರೇ ರಸಿಕವೆನ್ನುತಿದ್ದ ಕಾಲವಿತ್ತು ಆದರೀಗ ಅದು ಕಚ್ಚೆ ಹರುಕುತನವೆನಿಸಿದೆ. ಒಬ್ಬಳ ಹಿಂದೆ ಹೋಗಿ ಅವನ ಜೀವನ ಮತ್ತೆಂದು ಸರಿ ಮಾಡಲಾರದಂತೆ ಹೊಗೆಯಾಡಿಸಿಕೊಂಡವರನ್ನು ನೋಡಿದ್ದೇವೆ. ಹಾಗೆ ನೋಡಿದ್ದವರನ್ನು ಗಮನಿಸಿ, ಅವನಿಗೆ ಕೊಟ್ಟ ಕೆಲಸವನ್ನು ನಿಯತ್ತಾಗಿ ಮಾಡಿ ಮುಗಿಸಲು ಬಾರದು, ಆದರೇ ತಾನು ಪ್ರೀತಿಸಿದ ಹೆಣ್ಣಿನ ಹಿಂದೆ ನಾಯಿಯಂತೆ ಅಲೆದು, ತನ್ನ ಜೀವನವನ್ನೆ ನಿರ್ನಾಮ ಮಾಡಿಕೊಳ್ಳುವ ಮಟ್ಟಕ್ಕೇರುತ್ತಾನೆ. ಆಸಿಡ್ ಹಾಕುವವನು, ಅತ್ಯಾಚಾರ ಮಾಡುವವನು, ಮಾನಭಂಗ ಮಾಡಿದವನು ಎಲ್ಲರೂ ಅಷ್ಟೇ ಅದೇನನ್ನೋ ಹರಸಿ ಹೋಗಿ ಉತ್ತರ ಸಿಗದೇ ಉಳಿದ ಚಿರ ಪಾಪಿಗಳು. ಆಸ್ತಿ ಮಾಡಲು ಹೊರಟ ಜನರು, ಹೆಸರು ಗಳಿಸಹೊರಟ ಜನರು ಎಲ್ಲರೂ ಅಷ್ಟೇ. ಅಲೆಮಾರಿಗಳಂತೆ ಅಲೆದು ಸುಳಿದಾಡುವ ಪರಿಸರ ಪ್ರೇಮಿಗಳೆಂದು ಬೊಬ್ಬೆ ಹೊಡೆಯುವವರೂ ಅಷ್ಟೇ ವಿಲಾಸಿಗಳೂ ಅಷ್ಟೇ. ಅಂದರೇ ಎಲ್ಲಿಯೂ ಹೋಗದೆ ತನ್ನೂರಿನಲ್ಲೇ ಹುಟ್ಟಿ ಅಲ್ಲೇ ಜೀವನ ಕಟ್ಟಿಕೊಂಡು ಬದುಕಿದ ನನ್ನ ತಂದೆ ತಾಯಿಗಳಿಗೆ ಇವುಗಳ ಮೇಲೆ ಮೋಹವಿರಲಿಲ್ಲವೇ! ಅವರೆಂದೂ ಯಾಕೆ ತನ್ನೂರಿನಿಂದ ಆಚೆಗೆ ಯೋಚಿಸಲಿಲ್ಲ. ಅವರು ತಮ್ಮ ಶಕ್ತಿಯನ್ನು ಅರಿತಿದ್ದರೇ? ಅಥವಾ ಅದನ್ನು ತ್ಯಾಗ ಮಾಡಿಬಿಟ್ಟರೇ? ನಾನು ಪ್ರವಾಸಕ್ಕೆಂದು ಡಾರ್ಜಿಲಿಂಗ್ ಹೊರಡುತ್ತೇನೆಂದರೇ ಅಲ್ಲೇನಿದೆ, ಎಂದಾಗ ನಿಸರ್ಗ, ಹಸಿರು ಎಂದು ಬಣ್ಣಿಸತೊಡಗಿದೆ. ಅದನ್ನ್ ಕೇಳಿದ ಮರುಕ್ಷಣವೇ ಕಾಡು ನೋಡಲು ಅಲ್ಲಿಯ ತನಕ ಹೋಗಬೇಕೇ? ಎಂದು ನನ್ನಮ್ಮ ಹೇಳಿದ್ದು ನನಗೆ ನೆನಪಿದೆ. ಮೂರು ವರ್ಷದ ಹಿಂದೆ ನನ್ನಜ್ಜಿಯೂ ಇದೇ ಮಾತು ಹೇಳಿದ್ದಳು. ಪರಿಸರದ ಬಗ್ಗೆ ಓದಲು ನೀನ್ಯಾಕೆ ಬೆಂಗಳೂರಿಗೆ ಹೋದೆ? ಇಷ್ಟೇಲ್ಲಾ ಓದಿದ ಮೇಲೆ ನೀನು ನನ್ನ ಔಷಧಿಯ ಬಗ್ಗೆ ಕೇಳುವುದೆಂತಕ್ಕೆ? ಒಮ್ಮೊಮ್ಮೆ ತಿಳಿದಿಲ್ಲ ಉತ್ತರ ಗೊತ್ತಿಲ್ಲ. ಅಲ್ಲಿಯೇ ಅಜ್ಜಿಯೊಡನೆ ಸೇರಿ ನಾನು ಔಷಧಿ ಗಿಡಗಳ ಬಗ್ಗೆ ಓದಬಹುದಿತ್ತು, ಅವಳಿಗೆ ಎಲ್ಲಾ ಔಷಧೀಯ ಸಸ್ಯಗಳ ಬಗ್ಗೆ ಗೊತ್ತಿದೆ. ಒಂದು ವ್ಯತ್ಯಾಸ ಭಾಷೆ. ಅಮೇರಿಕಾದವನು ಇಂಗ್ಲೀಷ್ ಆಡುವುದು ಹೆಮ್ಮೆಯ ವಿಷಯವೇ?

ಹುಟ್ಟಿನಿಂದ ಸಾಯುವ ತನಕವೂ ಅಥವಾ ಜೀವನವೆಲ್ಲವೂ ಇರುವುದರಲ್ಲಿ ಸಂತೋಷಪಡುವುದನ್ನು ಇಂದಿನ ಪೀಳಿಗೆ ಕಲಿಯಲಿಲ್ಲ. ನಿರಂತರ ಒಂದೇ ಬಗೆಯ ಆಟೋಟಗಳು ನಮ್ಮನ್ನು ಬೇಸರಗೊಳಿಸುತ್ತವೆ. ಅದು ತಿಳಿದ ಸಂಗತಿ. ಅದನ್ನು ನಿಂತಲ್ಲಿಯೇ ಬದಲಾಯಿಸಬಹುದಿತ್ತು. ನಮ್ಮೂರಿನ ನದಿಯನ್ನು ಕುರಿತು ಅಧ್ಯಯನ ಮಾಡುವ ಬದಲು ನಾನು ತುಂಗಭದ್ರೆಯ ತನಕ್ ಹೋದದ್ದು ಯಾಕೆ? ಇವೆಲ್ಲಾ ನಮಗರಿಯದೇ ನಾವು ಸಿಳುಕಿಕೊಳ್ಳುವ ಸುಳಿಗಳು. ಅಲ್ಲಿಂದ ಮತ್ತೆಂದೂ ಬರಲಾರದೇ ಸಾಯುವೆವು. ಆತ್ಮ ತೃಪ್ತಿಯೆಂಬ ವಿಷಯ ಎಲ್ಲರನ್ನು ಬೆಂಬಿಡದೇ ಕಾಡುತ್ತದೆ. ಅದು, ಓದಿನ ಹೆಸರಿನಲ್ಲಿ ಓದು ಓದು ಎಂದು ಬೆನ್ನತ್ತುತದೆ. ಉದ್ಯೋಗ, ಸಿರಿವಂತಿಗೆ, ಹೆಸರು, ಕಾಮ, ಪ್ರೇಮ, ಪ್ರೀತಿ ಗೆಳೆತನ ಎಲ್ಲದರಲ್ಲಿಯೂ ಅಷ್ಟೇ ಒಂದಲ್ಲ ಒಂದು ಬಗೆಯಲ್ಲಿ ನಮ್ಮನ್ನು ಆಳುತ್ತದೆ.

ಆದ್ದರಿಂದ ಒಬ್ಬನಿಗೆ ಇಷ್ಟವಾದದ್ದು ಸಾರ್ವಂತ್ರಿಕವೆನ್ನುವಂತಿಲ್ಲ. ಇನ್ನೊಬ್ಬನಿಗೆ ಅದು ಏನೂ ಇಲ್ಲವೆನಿಸಬಹುದು. ಅದಕ್ಕಾಗಿಯೇ ಭಾವನೆಗಳ ವಿಷಯದಲ್ಲಿ ಇವೆಲ್ಲಾ ಗುದ್ದುಮುರಿ ವಿಷಯವಾಗುವುದು. ಕಣ್ಣುಬ್ಬು ಸರಿ ಮಾಡಿಸಿಕೊಂಡು ಬರುವುದು ಹೆಂಗಸಿಗೆ ಅಮೂಲ್ಯ ಕಾರ್ಯಗಳಲ್ಲಿ ಒಂದೆನಿಸಿದರೇ ಗಂಡಸಿಗೆ ಇವೆಲ್ಲಾ ಹೆಂಗಸರ ಸಮಯ ಕೊಳ್ಳುವ ಚಟುವಟಿಕೆಗಳು ಎನಿಸುತ್ತವೆ. ನಾನು ಅಮ್ಮನಿಗೆ ಆಗ್ಗಾಗ್ಗೆ ಹೇಳುತ್ತಿದ್ದೆ, ಅಮ್ಮ ಈ ತಿಂಡಿ, ಆ ಚಕ್ಕಲೀ, ಕೋಡುಬಳೆ, ಖರ್ಜಿಕಾಯಿ ಇವೆಲ್ಲಾ ಯಾರಿಗೆ ಬೇಕು ಸಮಯ ದಂಡ ನಿಮ್ಮ ಆರೋಗ್ಯ ದಂಡ ಬೇಕರಿಯಲ್ಲಿ ಕೊಂಡರೇನು ಅಂತಾ. ಅದು ಅವಳ ಭಾವನೆಗೆ ಬಿಟ್ಟ ವಿಷಯ ಅದನ್ನೊಂದು ದೊಡ್ಡ ರಾದ್ದಾಂತ ಮಾಡಿದರೂ ಸರಿಯೇ ತಿಂಡಿ ಬೇಯಿಸಿಯೇ ನೆಂಟರ ಮನೆಗೆ ಹೊರಡುವುದು. ಇವೆಲ್ಲಾ ಆತ್ಮತೃಪ್ತಿಗೆ ಉದಾಹರಣೆಗಳು. ಆತ್ಮತೃಪ್ತಿ ವೈಯಕ್ತಿಕತೆಗೆ ಬಿಟ್ಟ ವಿಚಾರ ಅದನ್ನು ನಮ್ಮ ಹಳದಿ ಕಣ್ಣಿನಿಂದ ನೋಡಿ ಇನ್ನೊಬ್ಬರನ್ನು ನಿಂದಿಸಬಾರದು. ತನಗೆ ಸಂತೋಷಕೊಂಡುವುದನ್ನು ತಾನು ಮಾಡುತ್ತಾ ಮತ್ತೊಬ್ಬರ ಭಾವನೆಗಳಿಗೆ ಕೊಳ್ಳಿ ಇರಿಸಬಾರದು.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...