28 ಏಪ್ರಿಲ್ 2009

ನಿನ್ನ ನೆನಪಿಗಾಗಿ



ಬರವಣಿಗೆ ಅನ್ನೋದು ಜೀವನದ ಒಂದು ಭಾಗ ಆಗೋಕೆ ಶುರುವಾಗಿಬಿಟ್ಟಿದೆ, ಮೊದಲಲ್ಲಿ ಬರಿ ಓದುವುದೊಂದೇ ಗೀಳಾಗಿ ಬಿಟ್ಟಿತ್ತು, ಸುಮ್ಮನೆ ಸದಾ ಕಾಲ ಓದುತ್ತಾ ಕುಳಿತಿರುತ್ತಿದ್ದೆ, ಓದಿದ ಮೇಲೆ ಸುಮ್ಮನಿರಲಾರದೇ ಎಲ್ಲರಿಗೂ ಹೇಳಿಕೊಂಡು ಚರ್ಚಿಸುತ್ತಿದ್ದೆ. ಸ್ನೇಹಿತ ವರ್ಗ ಬಹಳ ವಿಶ್ವಾಸದಿಂದ, ಈ ನನ್ಮಗ ಓದೋದಲ್ಲದೇ ಅದನ್ನ ನಮ್ಮ ಕಿವಿಗೆ ತುಂಬಲ್ಲಿಕ್ಕೆ ಇಷ್ಟೇಲ್ಲಾ ಮಾಡ್ತಾನೆ ಅಂತಾ ದೂರೋಕೆ ಶುರುಮಾಡಿದ್ದರು. ಈಗ ಅಲ್ಲಾ ಮಾರಾಯಾ ನೀನಿ ಹೇಳಿದ್ದೇನೋ ಕೇಳಬಹುದು ಓದಿ ಅಂದರೇ ಹೇಗೆ ಆಗುತ್ತೋ ಅಂತಾ ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಹತ್ತಾರು ವರುಷಗಳ ನಂತರ ನಿನ್ನ ನೆನಪು ನನ್ನನ್ನು ಕಾಡುತ್ತಿವೆ, ಕಾಡುತ್ತಿಲ್ಲ ಮರುಕಳಿಸುತ್ತಿವೆ. ಕಾಡುವುದಕ್ಕೆ ನಾನಿಂದು ಅವಕಾಶಕೊಡುವ ಸ್ಥಿತಿಯಲಿಲ್ಲ. ಆದರೂ ಅವು ನನ್ನ ನೆನಪಿಗೆ ಬಂದು ಮತ್ತೆ ಮತ್ತೆ ನಿನ್ನೆಡೆಗೆ ನೀ ಬಿಟ್ಟುಹೋದ ನೆನಪುಗಳ ಖಜಾನೆಯೊಳಕ್ಕಿಳಿಸುತ್ತಿವೆ. ನನ್ನ ಜೀವನದ ದಿಕ್ಕನ್ನೆ ಬದಲಾಯಿಸಿದ ನಿನ್ನೆಡೆಗೆ, ನನ್ನಲ್ಲಿ ಉಳಿದಿರುವುದೇನು? ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿದೆ. ಪ್ರೇಮ ಪಾಷಣದಲ್ಲಿ ನನ್ನನ್ನು ಕಟ್ಟಿ ಹಾಕಿದ ನಿನ್ನ ಪ್ರೀತಿಯ ಮೊರೆತ ನನ್ನಲ್ಲಿ ಇನ್ನು ಹಸಿಯಾಗಿದೆ. ಈ ಪ್ರೇಮಿಗಳದ್ದು ಒಂದು ಬಗೆಯ ರೈತನ ಜೀವನವಿದ್ದ ಹಾಗೆ, ಮಳೆ ಬರಲಿ ಎಂದು ಬೇಡುವಾಗ ಪ್ರವಾಹ ಬಂದು ಇದು ಯಾಕಾದರೂ ಬಂತು ಎನ್ನುವ ಹಾಗೆ ಅನಿಸುತ್ತದೆ, ಮಳೆ ಹೋಗಲಿ ಎಂದಾಗ ಮಳೆ ಬಾರದೇ ಬರಗಾಲ ಬಂದು ಅಯ್ಯೊ ಭಗವಂತ ಎನ್ನುವಂತೆ ಮಾಡುತ್ತದೆ. ನಿನ್ನೊಂದಿಗೆ ನಾನಿದ್ದಾಗ ಅಯ್ಯೊ ಒಂದು ನಿಮಿಷಕ್ಕೂ ಬೇರೆಡೆಗೆ ಕಣ್ಣಾಡಿಸಲು ಬಿಡುವುದಿಲ್ಲವಲ್ಲ ಇವಳ ಪ್ರೀತಿ ಎನ್ನುತ್ತಿದ್ದೆ, ನೀನು ದೂರಾದ ಮೇಲೆ, ಅಯ್ಯೋ ಬರಡಾಯಿತೆ ನನ್ನ ಜೀವನವೆನ್ನತೊಡಗಿದೆ. ಪ್ರೀತಿಸಿದವರು ದೂರಾಗುವಾಗ ಇಬ್ಬರೂ ಕುಳಿತು ಮಾತನಾಡಿ ದೂರಾಗುವಂತಿದ್ದರೇ, ಅದೆಷ್ಟೂ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಎಲ್ಲ ಪ್ರೇಮಿಗಳು ತಾವು ಪ್ರೇಮಿಸಿದ ಮನಸ್ಸುಗಳು ದೂರಾದ ಮೇಲೆ, ಅವಳು/ನು ನನಗೆ ಮೋಸ ಮಾಡಿ ಹೋದಳು/ನು, ಎಂದು ಕೊರಗುತ್ತಾ ಕುಳಿತಿರುತ್ತಾರೆ. ಇಂದಿಗೂ ನನಗೆ ನನ್ನ ಮನಸ್ಸಿಗೆ ಅರ್ಥವಾಗದ್ದು ಎಂದರೇ, ನಿನ್ನ ಮನಸ್ಸಲ್ಲಿ ಏನಿತ್ತು? ನನ್ನನ್ನು ದೂರ ಮಾಡುವ ಅನಿವಾರ್ಯತೆಯಾದರೂ ಏನಿತ್ತು? ನಾನೆಂದು ನಿನ್ನ ಹಿಂದೆ ಬಂದವನಲ್ಲ, ಅದನ್ನು ನೀನು ಒಪ್ಪಿಕೊಂಡಿದ್ದೆ. ನೀನಾಗೆ ಬಂದೆ, ನನ್ನ ಸಂಗಾತಿಯಾಗು ನನ್ನ ಜೊತೆಯಿರು ಎಂದೆ, ನಿನ್ನ ಕನಸುಗಳೆಲ್ಲ ನನ್ನವೆಂದು ನನ್ನ ಕನಸ್ಸುಗಳನ್ನೆಲ್ಲಾ ಬಸಿದುಕೊಂಡೆ, ನಾನೆಂದು ಏನನ್ನು ಕೇಳಲ್ಲಿಲ್ಲ. ಪ್ರೀತಿಸುವ ಮನಸ್ಸನ್ನು ಪ್ರಶ್ನಿಸಿ ತಿಳಿಯದವನು ನಾನು, ನೀನು ಹೇಳುವುದನ್ನು ಕೇಳುವುದೊಂದೆ ನನ್ನ ಪಾಲಿನ ಕರ್ತವ್ಯ. ನಡು ಬೀದಿಯಲ್ಲಿ, ನಡುರಾತ್ರಿಯಲ್ಲಿ, ಕೊರೆಯುವ ಚಳಿಯಲ್ಲಿ ಒಂದು ರಾತ್ರಿ ಒಬ್ಬನೇ ನಿಲ್ಲುವ ಧೈರ್ಯವಿದೆಯಾ? ಎಂದು ಕೇಳಿದಾಗ ಯಾಕೆಂದು ಕೇಳದೇ ಸುಮ್ಮನೆ ನಿಂತೆ, ಅಲ್ಲಿ ಧೈರ್ಯದ ಮಾತೆಲ್ಲಿತ್ತು, ನಿನ್ನ ಸೇವಕ ನಾನು, ನಿನ್ನ ಸಂತೋಷವೇ ಮುಖ್ಯ ಅಲ್ಲಿ ಭಯವಿರಲಿಲ್ಲ, ನಂಬಿಕೆಯಿತ್ತು. ದೇವರನ್ನು ಪೂಜಿಸುವ ಪೂಜಾರಿಗೆ, ಭಯವಿರುವುದಿಲ್ಲ, ದೇವರನ್ನು ಪೂಜಿಸುವ ಭಕ್ತನಿಗೆ ಮಾತ್ರ ಭಯವಿರುತ್ತದೆ. ಪೂಜಾರಿಗೆ ಇರುವುದು ನಂಬಿಕೆ, ನಂಬಿಕೆ ಇರುವಲ್ಲಿ ಭಯ ಸುಳಿಯುವುದೇ ಇಲ್ಲ. ನನ್ನಲ್ಲಿ ಅಂದೆಂದೂ ಭಯ ಬರಲೇ ಇಲ್ಲ. ನಂಬಿಕೆಯೇ ದೇವರೆನ್ನಲ್ಲಿಲ್ಲ, ನಂಬಿಕೆಯೇ ನನ್ನುಸಿರಾಗಿತ್ತು, ಆ ನಂಬಿಕೆಯೇ ನೀನು, ನನ್ನುಸಿರೇ ನಿನ್ನಯ ಪ್ರೀತಿ. ಮೊದಲ ದಿನಗಳಲ್ಲಿ ನೀನು ಹೇಳುತ್ತಿದ್ದ ಮಾತುಗಳಿವು, ನನಗೆ ನಿನ್ನಯ ಪ್ರೀತಿಯ ಬೆಚ್ಚನೆಯ ಅಪ್ಪುಗೆಯೊಂದು ಸಾಕು, ಜಗತ್ತನ್ನೆ, ಜಯಿಸಿದಷ್ಟೂ, ಜಗತ್ತೇ ನನಗೆ ತಲೆಭಾಗಿದಷ್ಟು ಹೆಮ್ಮೆ ಪಡುತ್ತೇನೆ. ನೀನು ಯಾರಿಗೂ ತಲೆ ಬಾಗಿದವಲಲ್ಲ, ಅದು ನನಗೂ ಗೊತ್ತು, ನೀನು ತಲೆ ಬಾಗುವುದು, ಸುತರಾಂ ನನಗೇ ಇಷ್ಟವಿರಲಿಲ್ಲ, ಅದಕ್ಕೇ ಅಲ್ಲವೇ ನೀನು ಹೇಳುತ್ತಿದ್ದದ್ದು, ಈ ಮದುವೆಯಲ್ಲಿ ಹೆಂಗಸಿನ ಕೊರಳಿಗೆ ತಾಳಿ ಕಟ್ಟುವುದು, ಅವಳನ್ನು ಶಾಶ್ವತವಾಗಿ ತಲೆ ತಗ್ಗುವಂತೆ ಮಾಡಲು ಎಂದು, ಆ ದಿನವೇ ನಾನು ಹೇಳಿದ್ದೇ ನಿನಗೆ ಯೋಚಿಸಬೇಡ, ನಮ್ಮ ಮದುವೆಯಲ್ಲಿ ತಾಳಿ ಇರುವುದಿಲ್ಲ ನಮ್ಮದು ನಂಬಿಕೆಯ ಮೇಲೆ ನಡೆಯುವ ಸಂಸಾರ. ಮದುವೆಯ ಮಾತು ಅಲ್ಲಿಗಿರಲಿ ನಡಿ ಹೊರಡೋಣವೆಂದಿದ್ದೆ ನೆನಪಿದೆಯಾ? ಆ ದಿನ ನಾನು ಇದನ್ನು ಗಮನಿಸಲಿಲ್ಲ. ಆದರೇ, ನಿನಗೆ ಅದರ ಅರಿವು ಮೊದಲೇ ತಿಳಿದಿತ್ತಾ?

ಸಂಭಂಧಗಳು ಗಾಳಿಪಟದಂತೆ ಜಂಗಾಡುವುದು ನನಗೂ ಇಷ್ಟವಿರಲಿಲ್ಲ, ನಾನೆಂದು ನಿನ್ನ ಇಷ್ಟಕ್ಕೆ, ಅಥವಾ ನಿನ್ನ ತೀರ್ಮಾನಕ್ಕೆ ನೀನು ಹೋದ ದಾರಿಗೆ ಬರಲೇ ಇಲ್ಲ. ನಿನ್ನ ಮೇಲಿನ ವಿಶ್ವಾಸ ನೀನು ಸಾಧಿಸುತ್ತೀಯ, ಹಿಡಿದ ಕೆಲಸವನ್ನು ಮಾಡಿ ತೀರುತ್ತೀಯ ಎಂಬುದು ನನ್ನ ಮನದಲ್ಲಿ ಗಟ್ಟಿಯಾಗಿತ್ತು. ಆ ದಿನ ನೀನು ಊರಿಗೆ ಹೋಗುವ ಹಿಂದಿನ ದಿನ, ರೈಲಿಗೆ ಟಿಕೆಟ್ ಮಾಡಿಸಿಕೊ ಎಂದಾಗ, ನನಗೆ ಅದೆಲ್ಲಾ ಗೊತ್ತಾಗುವುದಿಲ್ಲವೆಂದೆ. ನೀನು ಕಲಿಯುವುದೆಂದು ನೀನೆ, ಹೋಗಿ ಕೇಳು ಎಂದಾಗ, ನಿನಗೆ ನನ್ನ ಕೆಲಸ ಮಾಡಲು ಇಷ್ಟವಿಲ್ಲ, ಆದ್ದರಿಂದ ಇವೆಲ್ಲಾ ಕಾರಣಗಳನ್ನು ಕೊಡುತ್ತೀಯಾ. ಇದೆಂತ ಇಕ್ಕಟ್ಟು ನನ್ನದು, ಎನಿಸಿತು. ಅದಾದ ಮೇಲೆ, ನಾನೆಂದು ನಿನ್ನನ್ನು ಒಂಟಿಯಾಗಿ ಬಿಡಲೇ ಇಲ್ಲ. ನಿನ್ನ ನೆರಳಾಗಿ ಕಾದೆ. ಅಂದು ನೀನು ಪ್ರವಾಸ ಹೋಗಿ ಮಧ್ಯರಾತ್ರಿ ಬರಬಹುದೆಂದಾಗ, ಕೊರೆಯುವ ಚಳಿಯಲ್ಲಿ, ಮುಂಜಾನೆಯವರೆಗೂ ನಿನ್ನ ಕಾಲೇಜಿನ ಬಳಿಯಲ್ಲಿಯೇ ನಿಂತಿದ್ದೆ. ವಾಚ್ ಮಾನ್ ಅವರು ಬಂದರೇ ಇಲ್ಲಿ, ಮಲಗಿರುತ್ತಾರೆ ಬೆಳ್ಳಿಗ್ಗೆ ಕರೆದೊಯ್ಯಬಹುದು ಎಂದರೂ ನಾನು ಕಾಯುತ್ತಲ್ಲೇ ಇದ್ದೇ ಅದಕ್ಕೆ ನಿನ್ನ್ನಿಂದ ಬಂದ ಉತ್ತರ, ಅನುಮಾನ. ನನ್ನ ಮೇಲೆ ಅನುಮಾನ ನಿನಗೆ ಆದ್ದರಿಂದ ನೀನು ಇದುವರೆಗೂ ಕಾಯ್ತುತ್ತಿದ್ದೀಯಾ? ದಿನ ನಿತ್ಯ ೯ಗಂಟೆಯವರೆಗೂ ಮಲಗುವ ನೀನು, ಇಂದು ಮಾತ್ರ ನಿದ್ದೆಗೆಟ್ಟು ಕಾಯುತ್ತಿರುವುದು ಏನಕ್ಕೆ? ಏನು ಮಾಡಿದರೂ ತಪ್ಪು ಹಿಡಿಯತೊಡಗಿದೆ, ನಿನಗಂದೆ ಅನಿಸಿತ್ತಾ? ಅಥವಾ ನಿರ್ಧಾರ ಮಾಡಿದ್ದ?

ವಾರಗಟ್ಟಲೇ ಹೇಳದೇ ಕೇಳದೇ, ಒಂದು ಫೋನ್ ಕೂಡ ಮಾಡಿರಲಿಲ್ಲ, ನಾನು ನನ್ನ ಉಸಿರನ್ನು ಬಿಗಿ ಹಿಡಿದುಕೊಂಡು ಎಲ್ಲ ಸ್ನೇಹಿತರಿಗೂ ಫೋನ್ ಮಾಡಿ, ಅಲೆದಾಡಿ ಸುತ್ತಾಡಿ, ಕೊನೆಗೆ ನಿಮ್ಮ ಮನೆಗೂ ಫೋಣ್ ಮಾಡಿ ಕೇಳಿದಾಗ ಅವರು ನಿಶ್ಚಿಂತೆಯಿಂದ ಅವಳು ಅಂಡಮಾನ್ ಗೆ ಪ್ರವಾಸ ಹೋಗಿದ್ದಾಳೆನ್ನುವುದು ನಿನಗೆ ಗೊತ್ತಿಲ್ಲವಾ? ನನ್ನ ತಲೆ ಗಿರ್ ಎನ್ನತೊಡಗಿತ್ತು. ನಾನು ಪ್ರೀತಿಸಿದ ನಿಸರ್ಗಳೆಲ್ಲಿ ಮರೆಯಾದಳು? ಬಂದ ನಂತರ ನಾನು ಒಂದೇ ಒಂದು ಪ್ರಶ್ನೆ ಕೇಳಲಿಲ್ಲ, ಹೇಗಿತ್ತು ಪ್ರವಾಸ? ನೀನಿರಲಿಲ್ಲವಲ್ಲಾ ಸಮಧಾನ, ಸಂತೃಪ್ತಿಯಿತ್ತು. ನೀನು ಬದಲಾಗುತ್ತಿದ್ದೀಯಾ! ಎಂದು ಒಂದು ದಿನ ನಾನು ನಿನ್ನನ್ನು ಕೇಳಿದ್ದೆ, ಅದಕ್ಕೆ ನಿನ್ನಿಂದ ನಿರೀಕ್ಷಿತ ಉತ್ತರವೇ ಬಂದಿತ್ತು, ಜೀವನ ನಿಂತ ನೀರಲ್ಲ, ಅದು ಹರಿಯುವ ನದಿ, ಅಲ್ಲಿ ಹರಿಯುವ ನೀರಿಗೆ ಮಾತ್ರ ಬೆಲೆ, ನಿಂತ ನೀರಲ್ಲಿ ಸೊಳ್ಳೆಗಳು ಸೇರಿ ಕೊಳಚೆಯಾಗುತ್ತದೆ. ನಾನು ನನ್ನ ಜೀವನವನ್ನು ನಿಧಾನಗತಿಯಲ್ಲಿ ನಡೆಸಹೊರಟರೇ, ನೀನು ನಿನ್ನ ಭಾವನೆಗಳ ವಿಷಯಗಳನ್ನೆಬ್ಬಿಸಿ ನನ್ನನ್ನು ಅಲ್ಲೇ ಕೊಳೆಯುವ ಹಾಗೆ ಮಾಡುತ್ತೀಯ.

ಜೀವನದಲ್ಲಿ ಮುಂದೆ ಬರುವುದನ್ನು ಕಲಿ, ಸಾಧನೆಯೆಂಬುದು ಬರೀ ಪ್ರೀತಿ ಪ್ರೇಮಕ್ಕೆ ಬರುವಂತಹದ್ದಲ್ಲ, ಭಾವನೆಗಳಿಂದ ಹೊಟ್ಟೆ ತುಂಬುವುದಿಲ್ಲಾ. ಪ್ರೀತೀಯೇ ಏನು? ನಿನ್ನ ತಂದೆ ತಾಯಿಯೂ ಕೂಡ ನಿನ್ನನ್ನು ಪ್ರೀತಿಸುವುದಿಲ್ಲ. ತಂದೆ ತಾಯಿಯರು ಹುಟ್ಟಿದ ಕೂಡಲೇ ಏಣಿಸಲಾರಂಬಿಸುತ್ತಾರೆ, ಹೆಣ್ಣನ್ನು ಆದಷ್ಟೂ ಬೇಗ ಮನೆಯಿಂದ ಹೊರದಬ್ಬಲು ನಮಗೊಂದು ಮದುವೆ. ನಿಮಗೆ ಅತ್ತ್ಯುನ್ನತ ವಿದ್ಯಾಭ್ಯಾಸ, ಕಾರಣ ದುಡಿಯಬೇಕಲ್ಲ ಎನ್ನುವ ನೆಪ. ಕೇಳಿದರೇ ನಾವೆಲ್ಲ ಕ್ರಾಂತಿಕಾರಿಗಳು, ಸಂಪ್ರದಾಯ ವಿರೋಧಿಗಳು. ನೀವು ಮಾತ್ರ ನಮ್ಮ ಮೇಲೆ ಸವಾರಿ ಮಾಡಬೇಕು. ನೀನು ನನ್ನ ಮುಂದೆ ಬೇಡುತ್ತಿದ್ದೀಯಾ? ಪ್ರೀತಿಗಾಗಿ. ಪ್ರೀತಿಸು ಎಂದು. ಪ್ರೀತಿಗಾಗಿ ಬೇಡುವ ನೀನು ಜೀವನದಲ್ಲಿ ಇನ್ನೇನು ಸಾಧಿಸುತ್ತೀಯಾ? ನಿನ್ನ ಮೇಲೆ, ನಿನ್ನ ಪ್ರೀತಿಯ ಮೇಲೆ ನಂಬಿಕೆ ಇಲ್ಲದ ನಿನ್ನನ್ನು ನಾನು ಹೇಗೆ ನಂಬಲಿ? ನಾನಿಲ್ಲದಿದ್ದರೇ ಕುಡಿದು ಸಾಯುತ್ತೇನೆಂದು ಹೇಳುತ್ತಿದ್ದೀಯಾ? ಈಗಾಗಲೇ ಅರ್ಧ ಸತ್ತಿರುವ ನಿನ್ನನ್ನು ನಂಬಿ ನಿನ್ನ ಹಿಂದೆ ನಾನು ಬಂದು ಮೂರು ದಿನಕ್ಕೆ ನನ್ನ ಜೀವನವನ್ನು ಹಾಳು ಮಾಡಿಕೊ ಬೇಕಾ? ಜೀವನದ ಮಹತ್ವವೇ ತಿಳಿಯದ ನಿನಗೆ ಪ್ರೀತಿಯ ಮಹತ್ವ ಹೇಗಾದರೂ ತಿಳಿದೀತು ಹೇಳು? ಜೀವನ ಬಂದ ನಂತರ ಬಂದದ್ದಲ್ಲವೇ ಪ್ರೀತಿ? ಪ್ರೀತಿಗಾಗಿ ಜೀವನವನ್ನೇ ಧಾರೆಯೆರೆಯುತ್ತೇನೆಂದರೇ? ಈ ಜೀವನ ನಿನ್ನದು ಎನ್ನುವುದಕ್ಕೆ ಸಾಕ್ಷಿ ಏನು ಹೇಳು? ಬಹಳ ಹರಟುತಿದ್ದೇನೆ ಎಂದುಕೊಳ್ಳಬೇಡ. ಇವೆಲ್ಲಾ ಇರುವ ವಿಷಯಗಳೆ, ಆದರೇ ಒಂದೇ ಒಂದು ಬಾರಿ, ನಿನ್ನನ್ನು ನೀನು ಕೇಳಿಕೋ. ನಿನ್ನ ಜೀವನವೆನ್ನುವ ನೀನು ಮಾಡಿರುವುದಾದರು ಏನು? ಅಪ್ಪ ಅಮ್ಮನಿಂದ ನಿನ್ನ ಹುಟ್ಟು ಬಂತು, ಅಮ್ಮ ಹೋಂ ವರ್ಕ್ ಮಾಡಿ ಶಾಲೆಗೆ ಕಳುಹಿಸಿದಳು. ಅಪ್ಪ ಸಾಲ ಮಾಡಿ ಹಣ ಕಟ್ಟಿದ, ನೀನು ಓದಿದೆ. ಓದದಿದ್ದರೇ, ಧನ ಕಾಯಬೇಕಾಗುತ್ತದೆಂಬ ಭಯದಿಂದ ಓದಿದೆ. ಸಮಾಜ ಒಳ್ಳೆಯ ನಡತೆ ಕಲಿಸಿತು. ಇಲ್ಲಿ ನಿನ್ನದೇನಿದೆ? ಅದಕ್ಕೆ ಮರಳಿ ನೀನು ಕೊಟ್ಟಿರುವುದಾದರೂ ಏನು? ಅಪ್ಪನ ಹಣದಿಂದ ಕುಡಿದು, ಕುಣಿದಾಡುವ ನಿನ್ನನ್ನು ನಾನು ನಂಬಿ ಬರಬೇಕು. ಒಂದು ಹೊಸ ಬಟ್ಟೆ ತೆಗೆದರೂ ನಿನಗೆ ಹೇಳಬೇಕು, ಇದು ಎಲ್ಲಿಂದ ಬಂತು, ಯಾರು ಕೊಡಿಸಿದ್ದು ಅಂತಾ. ಒಂದು ಹೊಸ ಚಪ್ಪಲಿ ಮೆಟ್ಟಿದರೂ ಅಷ್ಟೆ. ಒಂದು ನಿಮಿಷ ಮೊಬೈಲ್ ಬ್ಯುಸಿ ಇದ್ದರೇ, ನೂರೆಂಟು ಪ್ರಶ್ನೆಗಳು, ನೀನೇ ಹೇಳಿದ ಇ-ಮೇಲ್ ವಿಳಾಸ, ನೀನು ಕೊಡಿಸಿದ ಮೊಬೈಲ್ ಸಿಮ್, ನೀನು ಕೊಡಿಸಿದ ಮೊಬೈಲ್, ಇಮೇಲ್-ಪಾಸ್ ವರ್ಡ್ ಕೂಡ ನಿನ್ನದೇ ಆಗಬೇಕಾ? ನನಗೊಂದು ಸ್ವಂತಿಕೆ ಇಲ್ಲವಾ? ನನ್ನ ಮನಸ್ಸಿನಲ್ಲಿ ನನ್ನದೇ ಆದ ಕನಸುಗಳಿರಲಿಲ್ಲವಾ? ಅವನ್ನೆಲ್ಲಾ ಕೊಂದು ನಿನ್ನೆಡೆಗೆ ಬಾ ಎನ್ನುವುದಕಿಂತ ನನ್ನ ದೇಹವನ್ನು ತೆಗೆದುಕೊಂಡು ನಿನ್ನಿಷ್ಟದಂತೆ ತಿದ್ದಿಸು. ನಿನಗೆ ಆಸೆ ಇರುವುದು ನನ್ನ ಮೇಲಲ್ಲ, ಈ ನನ್ನ ದೇಹದ ಮೇಲೆ. ಮನಸ್ಸನ್ನು ಗೆಲ್ಲಲ್ಲು ನೀನೆಂದು ಪ್ರಯತ್ನಿಸಿಲ್ಲ. ನನ್ನ ಅಂದ ಸೌಂದರ್ಯದ ಬಗ್ಗೆ ನೀನು ಮಾತನಾಡಿದ್ದೀಯೇ ಹೊರತು ನನ್ನ ಮನಸ್ಸಿನ ಬಗ್ಗೆ ನನ್ನ ಭಾವನೆಗಳ ಬಗ್ಗೆ ನೀನೆಂದು ಮಾತನಾಡಿಲ್ಲ. ನನಗೆ ಆರೋಗ್ಯ ಸರಿಯಿಲ್ಲವೆಂದರೂ ಸರಿಯೇ, ನಿನ್ನನ್ನ್ ಭೇಟಿಯಾಗಬೇಕು, ನಿನ್ನೊಡನೆ ಬೈಕಿನಲ್ಲಿ ಕುಳೀತು ಊರು ಸುತ್ತಾಡಬೇಕು. ಮೈ ಕೈ ಮುಟ್ಟಬೇಕು. ಕಾಮ ಚೇಷ್ಟೆಯನ್ನು ಸಹಿಸ್ಕೊಂಡು ನಾನು ಇರಬೇಕು. ಆ ರೀತಿ ನನ್ನ ಬಗ್ಗೆ ಹೇಳುವಾಗೆಲ್ಲ ನನಗೆ ನೆನಪಾಗುತಿದ್ದದ್ದು ಒಂದು ವ್ಯವಹಾರವಷ್ಟೇ. ಕೇವಲ ಕಾಮ ತೃಷೆಗಾಗಿ ನೀನು ನನ್ನನ್ನು ಬಳಸುತಿದ್ದೀಯಾ ಎಂಬುದು ನನಗೆ ಮೊದಲೇ ಗೊತ್ತಾಯಿತು ಆದರೂ ಕಾಯುತ್ತಲೇ ಇದ್ದೇ ನೀನು ಹೇಳಿದ ಮಾತನ್ನೆಲ್ಲಾ ನಂಬಿ ಇಂದಲ್ಲಾ ನಾಳೆ ನೀನು ಬದಲಾಗುತ್ತೀಯಾ ಎಂದು. ಇಲ್ಲ, ಇಲ್ಲವೇ ಇಲ್ಲ, ನೀನೆಂದಿಗೂ ಬದಲಾಗಲಿಲ್ಲ, ನೀನು ನೀನಾಗೆ ಉಳಿದೆ. ನಾನು ನಿನ್ನನ್ನು ದಿಕ್ಕರಿಸಲಿಲ್ಲ, ನೀನು ನನ್ನಿಂದ ದೂರಾದೆ. ದೂರಾದೆ ಎಂದರೇ ತಪ್ಪಾದೀತು ನೀನೆಂದು ನನ್ನ ಹತ್ತಿರಕ್ಕೆ ಬರಲೇ ಇಲ್ಲ.

ಕೇವಲ ದೇಹಗಳಿಂದ ಏನನ್ನು ಸೃಷ್ಟಿಸಲಾಗುವುದಿಲ್ಲ, ಎರಡು ದೇಹಗಳು ಸೇರಿದರೆ ಮತ್ತೊಂದು ರಕ್ತದ ಮುದ್ದೆಯನ್ನು ಸೃಷ್ಟಿಸಬಹುದೇ ವಿನಾಃ ಮತ್ತೇನೂ ಸಾಧ್ಯವಾಗುವುದಿಲ್ಲ. ನಾನು ನಿನ್ನೊಡನೆ ಹರಸಿ ಬಂದದ್ದು, ನನ್ನ ಕನಸಿಗೆ ಒಬ್ಬ ವಾರಸ್ದಾರನಾಗು ಎಂದು. ನನ್ನ ದೇಹಕ್ಕಲ್ಲ. ಒಂದು ಹೆಂಗಸು ಕತ್ತೆತ್ತಿ ಒಮ್ಮೆ ನೋಡಿದರೂ ಅವಳಿಂದೆ ಹತ್ತು ಜನ ಗಂಡಸರಿರುತ್ತಾರೆ. ಅವರೆಲ್ಲಾ ಮಾಂಸದ ದೇಹಕ್ಕೆ ಹಾತೊರೆಯುವ ರಣಹದ್ದುಗಳು. ನನಗೆ ಬೇಕಿರುವುದು, ನನ್ನನ್ನು ಕಿತ್ತು ತಿನ್ನುವ ರಣಹದ್ದುಗಳಲ್ಲ. ನನ್ನ ಮಾತಿಗೆ ಹೂಂಕರಿಸುವ ಪಾರಿವಾಳಗಳಲ್ಲ. ನನ್ನೊಡನೆ ಸದಾ ಈಜುವ ಹಂಸ. ನನ್ನ ಕನಸನ್ನು ಸಾಕಾರಗೊಳಿಸಲು ನಿದ್ದೆಗೆಡುವ ಗೂಬೆಯಂಥಹ ಸಂಗಾತಿ. ಸಂಗಾತಿಯೊಡನೆ ಒಮ್ಮೆಯೂ ಸೇರದಿದ್ದರೂ ಅವಳ ನೆಮ್ಮದಿಗೆ ಪರದಾಡುವ ಕಟ್ಟಿರುವೆಯಂತಹ ಮನಸ್ಸು. ನಿನ್ನೊಳಗಿರುವ ತಪ್ಪನ್ನು ಮುಚ್ಚಿಟ್ಟು ಮೋಸ ಮಾಡಿ ಹೋದಳೆಂದು ಕೂಗಾಡಬೇಡ. ನಿನ್ನ ಬದುಕನ್ನು ಮೊದಲು ಪ್ರೀತಿಸು ನಿನ್ನ ಪ್ರೀತಿಸುವ ಜೀವಗಳು ತಾನಾಗೆ ಬರುತ್ತವೆ.

ಹೌದು ನೀನು ಹೇಳಿದ್ದೆಲ್ಲವನ್ನು ಒಪ್ಪುತ್ತೇನೆ, ನಾನು ನಿನ್ನ ಹಿಂದೆ ಹಂಬಲಿಸಿದ್ದು, ನಿನ್ನ ಹಿಂದೆ ಸುತ್ತಾಡಿದ್ದು, ಗೋಗರೆದದ್ದು ಇವೆಲ್ಲವೂ ಸತ್ಯಾ. ನೀನು ನನ್ನೊಡನಿರಬೇಕೆಂಬ ಒಂದೇ ಬಯಕೆಯಿಂದ ನಾನು ಹೀಗೆ ನಡೆದುಕೊಂಡೆ. ನಿನ್ನನ್ನು ಅನುಮಾನಿಸಲಿಲ್ಲ, ನಂಬಿಕೆಯೇ ದೇವರು, ನಂಬಿಕೆ ಮಾನವೀಯತೆಯ ಬುನಾದಿ. ಆದರೇ, ನಿನಗೆ ಕಿಂಚಿತ್ತೂ ತೊಂದರೆಯಾದರೂ ಅದು ನನ್ನು ಕೊಲ್ಲುತದೆಂಬ ಭಯದಿಂದ, ನಿನ್ನ ಬೆಂಗಾವಲಾದೆ. ನೀನು ಹಾರಾಡುವುದನ್ನು ತಡೆಯಲಿಲ್ಲ ನಿನ್ನ ಹಿಂದೆಯೇ ನಾನು ಹಾರುತ್ತಿದ್ದೆ. ನಿನ್ನ ರಕ್ಷಣೆಗಾಗಿ, ಅದನ್ನೇ ನೀನು ಅನುಮಾನವೆಂದರೇ ಅದು ನನ್ನ ತಪ್ಪಾ? ನಿನ್ನ ಮುಂಗೋಪಕ್ಕೆ ಹೆದರಿ ನಿನ್ನ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತಿದ್ದೆ, ಮೊಬೈಲ್ ನಲ್ಲಿ ಯಾರ ಜೊತೆಯಾದರೂ ಜಗಳವಾಡಿ ರಂಪ ಮಾಡಿಕೊಳ್ಳುತ್ತೀಯಾ ಎಂದು ಹೆದರಿ ಪದೇ ಪದೇ ಪ್ರಶ್ನಿಸುತ್ತಿದ್ದೆ. ನಿನ್ನ ಜೀವನವನ್ನು ನೀನೆ ರೂಪಿಸಿಕೊಳ್ಳುತ್ತೇನೆಂದಾಗ ಅದಕ್ಕೆ ಬೇಕಾದ ಬೆರವೆಲ್ಲಾ ನೀಡಲು ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೂ ನಾನು ಹಿಂಜರಿಯಲಿಲ್ಲ. ನನ್ನ ಬಳಿಗೆ ಬಂದದ್ದು ನೀನೆ ತಾನೆ, ಬರಲು ನನ್ನ ಅನುಮತಿ ಬೇಕಿತ್ತು ನಿನಗೆ, ಆದರೇ ಹೋಗುವಾಗ ನಿನ್ನ ತೀರ್ಮಾನ ಹೇಳಿ ಹೋಗಲು ಬಂದಿದ್ದೆ? ನನ್ನದೊಂದು ಜೀವವೆನ್ನುವ ನನ್ನದೊಂದು ಮನಸ್ಸೆಂದು ನಿನಗೆ ಅನಿಸಲಿಲ್ಲವೇ? ನಿನ್ನ ಸೌಂದರ್ಯವನ್ನು ಆರಾಧಿಸುತ್ತಿದ್ದೆ, ಅದನ್ನು ವರ್ಣಿಸುತಿದ್ದೆ, ಅಪೇಕ್ಷಿಸಲಿಲ್ಲ. ಬಯಸಲಿಲ್ಲ. ನನ್ನದು ಕಾಮದಾಹವೇ ಆಗಿದ್ದರೇ, ಅದಕ್ಕಾಗಿ ೫-೬ ವರುಷಗಳು ನಿನ್ನ ಜೊತೆ ಅಲೆದಾಡುವ ಕಾರ್ಯವೇನಿತ್ತು?

ಒಬ್ಬ ಗಂಡಸು, ಏನು ಬೇಕಾದರೂ ಸಹಿಸುತ್ತಾನೆ, ಹೆಂಡತಿ ಸತ್ತರೂ ಮರು ಮದುವೆಯಾಗದೇ ಬದುಕುತ್ತಾನೆ. ಆದರೇ ಪ್ರೀತಿಸಿದ ಹುಡುಗಿ ಬೇರೆಯವನೊಡನೆ ಹೋಗುವುದನ್ನು ಮಾತ್ರ ಸಹಿಸಲಾರ. ಅದು ಅವನ ಗಂಡಸ್ತನಕ್ಕೆ ಎದುರಾದ ಪ್ರಶ್ನೆ. ಅದರಿಂದ ಹೊರಬರಲಾರದೇ ಹೆಣಗುವವನ ಕಷ್ಟ ಯಾರು ತಿಳಿಯುವುದಿಲ್ಲ. ಅವನ ಗಂಡಸ್ತನವನ್ನೇ ಪ್ರಶ್ನಿಸುತ್ತದೇ ಸಮಾಜ. ಅಂತಹ ಪ್ರಶ್ನೆಯನ್ನು ನನ್ನ ಮಡಿಲಿಗೆ ಹಾಕಿ ನೀನು ದೂರಾದಾಗ, ನನ್ನ ಗಂಡಸ್ತನದ ಬಗ್ಗೆ ನಾನೆ ಅನುಮಾನ ಪಟ್ಟು ಕುಳಿತಿದ್ದೇನೆ. ಕತ್ತಲ ಕೋಣೆಯಲ್ಲಿ ನನ್ನ ನೆರಳು ಬಾರದ ಸ್ಥಳದಲ್ಲಿದ್ದೇನೆ.


14 ಏಪ್ರಿಲ್ 2009

ನನ್ನೆರಡು ಮಾತು


ಬಹಳ ದಿನಗಳ ನಂತರ ಸರಿ ಸುಮಾರು ನಾಲ್ಕೈದು ತಿಂಗಳುಗಳ ನಂತರ ಏನಾದರೊಂದಿಷ್ಟನ್ನು ಗೀಚಿಬಿಡಲೆಂದು ಕುಳಿತಿದ್ದೇನೆ. ಬರೆಯುವುದು ನನ್ನ ಹಕ್ಕು, ಓದಿ ತಿರಸ್ಕರಿಸುವುದು ನಿಮ್ಮ ಪಾಲಿನ ಕರ್ಮ. ಯಾರಾದರು ಓದಲೇಬೇಕೆಂದು ನಾನು ಬರೆಯುವುದಿಲ್ಲ. ಬರವಣಿಗೆ ನನ್ನೊಳಗಿರುವ ಹಲವಾರು ತಲೆಗೆಟ್ಟ ಊಹಾಪೋಹಗಳನ್ನು ಹೊರಹಾಕಲು ನಾನು ಬಳಸುವ ಒಂದು ಸಾಧನವಷ್ಟೆ. ನಾನು ಇಂದು ಬರೆಯಲು ಹೊರಟಿರುವ ವಿಷಯ ತುಂಬ ಸೂಕ್ಷ್ಮವೆನಿಸಿದರೂ ಅಷ್ಟೂ ಹಗುರವೆನಿಸುವಂತದ್ದಲ್ಲ. ಇಲ್ಲಿ ನಿಮ್ಮ ಮುಂದಿಡುತ್ತಿರುವ ವಿಚಾರಗಳು ನನ್ನ ತಲೆಯೊಳಗೆ ಕಳೆದ ೧೦-೧೫ ವರ್ಷಗಳಿಂದ ಕೊರೆಯುತ್ತಿದ್ದವು. ಕೆಲವು ದಿನಗಳ ಹಿಂದೆ ನಾನು ನನಗೆ ಬಂದಿದ್ದ ಒಂದು ಇಮೇಲ್ ಅನ್ನು ನನ್ನ ಸ್ನೇಹಿತರಿಗೆ ಕಳುಹಿಸಿದ್ದರಿಂದ ಉಂಟಾದ ಒಂದು ಪರಿಸ್ತಿತಿಯ ಬಗ್ಗೆ ಯೋಚಿಸುವಾಗ ನನ್ನೊಳಗೆ ಬಂದು ಅಳಿಸಿಹೋದ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುತಿದ್ದೇನೆ. ದೇಶಾಭಿಮಾನವೆಂದರೇನು? ಇದನ್ನು ಆ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಪಾಲಿಸಬೇಕೆಂಬ ನಿಯಮವೆಷ್ಟು ಸರಿ, ಆ ದೇಶ ಹೇಗಿದ್ದರೂ ಸರಿ ಹಾಗೆ ಪ್ರೀತಿಸಬೇಕೆಂಬುದು ಇದರ ಅರ್ಥವೇ? ಅದನ್ನು ಉತ್ತಮಗೊಳಿಸುವುದು ಅದರ ಹಿಂದಿನ ಉದ್ದೇಶವೇ? ದೇಶದ ವಿರುದ್ದ ಮಾತನಾಡಿದರೇ ತಪ್ಪೇ? ಅಲ್ಲಿರುವು ಕೊರತೆ ಅನಿಷ್ಟತನದ ಬಗ್ಗೆ ಮಾತನಾಡುವುದು ಅಪಮಾನವೇ? ಹೀಗೆ ಹುಟ್ಟಿಕೊಂಡ ನನ್ನ ಪ್ರಶ್ನೆಗಳು ಕಡೆಗೆ, ಪ್ರೀತಿ, ಪ್ರೇಮ, ವಿವಾಹ, ಮಾನವೀಯ ಮೌಲ್ಯಗಳನ್ನೆಲ್ಲ ಒಮ್ಮೆ ಪ್ರಶ್ನಿಸತೊಡಗಿತು.


ಗಂಡ ಮಾಡಿದ್ದನ್ನೆಲ್ಲಾ ಸಹಿಸಬೇಕಾದದ್ದು ಪತ್ನಿಯ ಧರ್ಮವಂತೆ, ಇದು ಸರಿಯಾ? ಅಥವಾ ಹೆಂಡತಿಯನ್ನು ಪ್ರೀತಿಸುವ ಗಂಡ ತನ್ನ ಹೆಂಡತಿ ಏನು ಮಾಡಿ ಬಂದರೂ ಅವಳನ್ನು ಪ್ರೀತಿಸಬೇಕೆಂಬುದೆಷ್ಟು ಸರಿ? ದಿಡೀರನೆ ನನಗನಿಸಿದ್ದು ಇಷ್ಟು, ಒಬ್ಬ ವ್ಯಕ್ತಿ, ಭಾರತದಲ್ಲಿ ಹುಟ್ಟಿದ್ದಾನೆಂದರೇ ಅವನು ಭಾರತೀಯನೆಂಬುದನ್ನು ಅವನ ಹೆಸರಿನ ಮುಂದೆ ಬಳಸಬಹುದೇ ವಿನಾಃ ಅವನು ಭಾರತೀಯತೆಯ ಪ್ರತೀಕವೆಂದು ಭಾವಿಸಲಾಗುವುದಿಲ್ಲ. ಇದು ಮನುಷ್ಯನಲ್ಲಿ ಮಾತ್ರ ಹುಟ್ಟುವ ಅಥವಾ ಕಂಡುಬರುವ ಒಂದು ಗುಣ. ಒಬ್ಬ ಮನುಷ್ಯನನ್ನು ಜೈವಿಕವಾಗಿ (bilologically) ಪರೀಕ್ಷೀಸಿದಾಗ ಎಲ್ಲ ಭಾರತೀಯನ ದೈಹಿಕ ಮಟ್ಟ, ನೋಟಗಳು ಒಂದೇ ರೀತಿ ಎನಿಸಬಹುದು ಆದರೇ ಅವನ ಮನಸ್ತಿತಿಯ ವಿಷಯಕ್ಕೆ ಬಂದಾಗ ಇದು ಸತ್ಯಕ್ಕೆ ಬಹಳ ದೂರವಿರುತ್ತದೆ. ಇದಕ್ಕೆ ಸಾಮಾಜಿಕ ಪರಿಸರದ ಜೊತೆಗೆ ಆಂತರಿಕ ಬೆಳವಣಿಗೆಗಳು ಬಹು ಮುಖ್ಯವಾಗುತ್ತವೆ. ಒಂದೇ ಮನೆಯಲ್ಲಿ ಹುಟ್ಟಿದ ಅಷ್ಟೂ ಜನ ಬೇರೆ ಬೇರೆ ಯೋಚಿಸುವುದೇಕೆಂದಾಗ ಸಿಗುವ ಉತ್ತರವೇ ಇದು. ಅದೇ individualism. ಒಂದು ವ್ಯಕ್ತಿಯಲ್ಲಿಯೇ ಎಷ್ಟೋಂದು ಬದಲಾವಣೆಗಳಿರುವಾಗ, ವಿಭಿನ್ನತೆಗಳು ಇರುವಾಗ ಇಡೀ ದೇಶದ ಪ್ರತೀಕ ನೀನೆಂದರೇ ಅದು ಹೇಗೆ ಸಾಧ್ಯ? ಚಂದ್ರಲೋಕಕ್ಕೆ ಹೋಗಿ ಬಂದ ಆರ್ಮ್ಸ್ಟ್ರಾಂಗ್ ಮತ್ತು ಚಂದ್ರನನ್ನು ಚಂದ್ರದೇವನೆಂದು ಪೂಜಿಸುವ ನನ್ನೂರಿನ ಒಬ್ಬ ರೈತನನ್ನು ಒಂದೇ ಎಂದು ಪರಿಗಣಿಸುವುದು ಎಷ್ಟೂ ಸರಿ?ಅದು ಅವನ ವೈಯಕ್ತಿಕ ಆಸಕ್ತಿಗೆ ಸಂಬಂಧಪಟ್ಟದೆಂಬುದನ್ನು ನಮ್ಮ ಹಲವಾರು ಮಿತ್ರರೇಕೆ ಅರ್ಥೈಸಿಕೊಳ್ಳುತ್ತಿಲ್ಲ?


ಭಾರತದಲ್ಲಿದ್ದರೂ ಪಾಕಿಸ್ತಾನ ಗೆದ್ದಾಗ ಕುಣಿದಾಡುವವರ ಬಗ್ಗೆ ನಮ್ಮಲ್ಲಿ ಸಹಿಸಲಸಾಧ್ಯವಾದ ಒಂದು ಕೋಪ ಅಸಹ್ಯಮೂಡುತ್ತದೆ. ಮಸೀದಿಯಲ್ಲಿ ಲಾಡೇನ್ ಫೋಟೋ ನೋಡಿದಾಗ ಅವರನ್ನು ಕೊಂದು ಬಿಡಲು ಹೊರಡುತ್ತೇವೆ. ಮಿಸನರೀಸ್ ಎಂದಾಕ್ಷಣ ಪಾಶ್ಚಿಮಾತ್ಯದ ಬಗ್ಗೆ ಇನ್ನಿಲ್ಲದ ಒಂದು ಅಸೂಯೆ ನಮ್ಮಲ್ಲಿದೆ. ಇರಾನ್ ಮೇಲೆ ಬಾಂಬ್ ಹಾಕಿದಾಗ ನಮ್ಮ ಊರುಗಳಲ್ಲಿ ಅಯ್ಯೋ ಎನ್ನುತ್ತೇವೆ. ನಮ್ಮೂರಿಗೆ ಬೆಂಕಿ ಬಿದ್ದು ಸತ್ತಾಗ ಅಮೇರಿಕಾದವರು, ಪಾಕಿಸ್ತಾನದವರು, ನಮ್ಮ ಬಗ್ಗೆ ಕೊರಗುತ್ತಾರಾ? ನಾನಿಲ್ಲಿ ನನ್ನ ದೇಶವನ್ನು ಹಿಯಾಳಿಸುತ್ತಿಲ್ಲ ಅಂತೇಯೇ ಬೇರಾವ ದೇಶವನ್ನು ಹೊಗಳುತ್ತಲೂ ಇಲ್ಲ. ನಮ್ಮವರು ಅಮೇರಿಕಾದಲ್ಲಿ ಹೋಗಿ ನೆಲೆಸಿ ಅಲ್ಲಿ ಕನ್ನಡ ರಾಜ್ಯೋತ್ಸವ ಮಾಡುವಾಗ ಕುಣಿದು ಕುಪ್ಪಳಿಸುತ್ತೇವೆ. ಆದರೇ ತಮಿಳಿಗರು ಕರ್ನಾಟಕದಲ್ಲಿ ತಮಿಳು ಮಾತನಾಡಿದ ತಕ್ಷಣ ಹೊಡೆದು ಬೀಳಿಸಬೇಕೆಂದು ಕೂಗಾಡುತ್ತೇವೆ. ನನ್ನ ನೇರ ಪ್ರಶ್ನೆ ಇಷ್ಟೇ, ಕನ್ನಡ ಮಾತನಾಡಿದವನೆಲ್ಲಾ ಕನ್ನಡಿಗನಾಗಲೂ ಸಾಧ್ಯವಾ? ಭಾರತದಲ್ಲಿದ್ದ ಮಾತ್ರಕ್ಕೆ ಅವನಲ್ಲಿ ಭಾರತೀಯತೆ ಇದೆಯಾ? ಮನುಷ್ಯತ್ವವನ್ನರಿಯದ ಹೊರತು ಯಾರನ್ನು ಪ್ರೀತಿಸಲಾರ. ಒಂದು ಭಾಷೆ, ದೇಶ, ಧರ್ಮ ಇವೆಲ್ಲಾ ಜೀವನದ ಮಾರ್ಗ. ಅದು ಬರೀ ಮಾತಿನಿಂದ ಬರುವಂತದ್ದಲ್ಲ. ವಿದ್ಯೆಗೂ, ಶಿಕ್ಷಣಕ್ಕೂ, ಶೈಕ್ಷಣಿಕ ಅರ್ಹತೆಗೂ ಬಹಳ ವ್ಯತ್ಯಾಸವಿದೆ. ಒಂದೇ ಶಾಲೆಯಲ್ಲಿ ಪಾಠ ಮಾಡುವ ಹತ್ತು ಮೇಶ್ಟ್ರುಗಳಲ್ಲಿ ನಮಗಿಷ್ಟವಾಗುವವರು ಒಬ್ಬರೋ ಇಬ್ಬರೋ ಅಷ್ಟೇ. ಎಲ್ಲರೂ ಸಮಾನ ವಿದ್ಯೆ, ಬುದ್ದಿಯೊಂದಿಗೆ ಇದ್ದರೂ ಕೂಡ, ನಮ್ಮ ಪ್ರೀತಿಗಳಿಸುವಲ್ಲಿ ಸಫಲರಾಗುವವರೂ ಕಡಿಮೆ ಜನ. ಒಂದೊಂದು ಜಾತಿಗೆ ಹತ್ತು ಹಲವು ಮಠ, ಮಂದಿರಗಳನ್ನು ಮಾಡಿಕೊಂಡು, ಹೊಡೆದಾಡಿಸಿ ಕಲೆಗೈಯ್ಯುವುದು ನಮ್ಮಲ್ಲಿ ಕಾಣುವಷ್ಟು ಹೊರಗೆಲ್ಲು ಇಲ್ಲವೆನಿಸುತ್ತದೆ. ಪೆಸಿಫಿಕ್ ದೀಪದಲ್ಲಿ ಮನುಷ್ಯರನ್ನು ತಿಂದು ಬದುಕುತಿದ್ದ ಲಕ್ಷಾಂತರ ಅಲೆಮಾರಿಗಳನ್ನು ನಾಗರೀಕ ಸಮಾಜಕ್ಕೆ ತಂದು ನಿಲ್ಲಿಸಿದವರು ಅಮೇರಿಕಾದವರು. ಅವರಿಂದ ನಾವು ಇಂಥಹದನ್ನು ಮಾಡಬಹುದೆಂಬುದನ್ನು ಕಲಿಯಲೇ ಇಲ್ಲ. ಅವರಿಂದ ಬರೀ ಕೆಟ್ಟದ್ದನ್ನು ಮಾತ್ರ ಕಲಿತಿ, ಧೋಭಿಯ ನಾಯಿ ಮನೆಯಲ್ಲಿಯೂ ಇಲ್ಲ, ನದಿ ಹತ್ತಿರನೂ ಇಲ್ಲ ಅನ್ನೋ ಹಾಗೆ ಆಗಿದೆ ನಮ್ಮ ಕಥೆ.


ನನ್ನ ಜೀವನದಲ್ಲಿ ನಾನೆಂದು ನನ್ನ ಕುಟುಂಬದವರ ಬಗ್ಗೆ ಹೆಮ್ಮೆಪಡುವುದಾಗಲೀ ಅಥವಾ ಕೀಳರಿಮೆಯನ್ನುಂಟು ಮಾಡಿಕೊಳ್ಳುವುದಾಗಲಿ ಮಾಡಿಲ್ಲ. ಇದಕ್ಕೆ ಮೂಲ ಕಾರಣ ನಾನು ಬೆಳೆದು ಬಂದ ರೀತಿಯೆಂದರೆ ತಪ್ಪಾಗದು. ಹಳ್ಳಿಗಳಿಂದ ಬೆಳೆದು ಬರುವ ಅಥವಾ ಬಂದಿರುವ ಹಲವಾರು ಸ್ನೇಹಿತರಿಗೆ ಹಳ್ಳಿಗಾಡಿನ ಜನಸಾಮಾನ್ಯರ ಬದುಕು ಅರಿವಾಗಿರುತ್ತದೆ. ಆದರೆ, ಪಟ್ಟಣ್ಣದಲ್ಲೇ ಬೆಳೆದು ಬಂದು ನಗರವಾಸಿಗಳಿಗೆ ಹಳ್ಳಿಯೆಂದರೆ ಒಂದು ಚಿಕ್ಕ ಊರು, ಅಲ್ಲಿ ತಂಪಾಗಿ ಹರಿಯುವ ನದಿ, ಸೊಂಪಾಗಿ ಬೆಳೆದ ಮರಗಳು, ಹೀಗೆ ಎಲ್ಲವೂ ಅವರ ಕಾಲ್ಪನಿಕ ಚಿತ್ರಗಳಷ್ಟೆ. ಅಲ್ಲಿನ ಬದುಕು ಅವರ ಮನಸ್ಥಿತಿಯನ್ನು ಅರಿಯಲು ಹೋಗಿರುವುದಿಲ್ಲ ಮತ್ತು ಅದರ ಅವಶ್ಯಕತೆಯೂ ತಲೆದೋರಿರುವುದಿಲ್ಲ. ಇನ್ನು ಬಹಳ ಮಂದಿ ಹಳ್ಳಿಗಳಿಗೆ ಹೋದಾಗ ಅಲ್ಲಿನ ಭೌತಿಕ ವ್ಯವಸ್ಥೆ ಕಂಡು ಬೆಚ್ಚಿದ್ದಾರೆ. ಅವರಿಗೆ ಹಳ್ಳಿಗಳು ನಗರದಲ್ಲಿನ ಕೊಳಚೆ ಪ್ರದೇಶಗಳಂತೆ ಕಂಡಿರುತ್ತವೆ ಹೊರತು ಮಿಕ್ಕಾವ ಅಂಶಗಳು ಗಣನೆಗೆ ಬರುವುದಿಲ್ಲ. ಹಾಗೇಯೇ, ಧರ್ಮದ ಬಗ್ಗೆ, ದೇಶದ ಬಗ್ಗೆ ಕೂಗಾಡುವ ನಮ್ಮ ಹಲವಾರು ಮಿತ್ರರು ಅದರ ಒಳವನ್ನು ಕಂಡಿರುವುದಿಲ್ಲ. ಅಲ್ಲಿರುವ ಭಯಾನಕತೆಯ ಬಿಸಿ ಅವರಿಗೆ ತಾಕಿರುವುದಿಲ್ಲ. ಕುಡಿಯಲು ನೀರಿಲ್ಲದೇ, ತಿನ್ನಲು ಅನ್ನವಿಲ್ಲದೇ, ಅನಾರೋಗ್ಯದಿಂದ ಸಾಯುತ್ತಿರುವ ನಮ್ಮ ಭಾರತ ಅವರಿಗೆಂದು ಕಾಣುವುದೇ ಇಲ್ಲ. ಅದನ್ನ್ನೆಲ್ಲಾ ಹೇಳಿದರೇ ನಮ್ಮ ದೇಶದವನಾಗಿ ನಮ್ಮ ಬಗ್ಗೆಯೇ ಹಿಯಾಳಿಸುವುದು ನೀಚತನವೆನಿಸುತ್ತದೆ. ನಂಬಿಕೆಯ ಹೆಸರಿನಲ್ಲಿ, ಸ್ವಾತಂತ್ರ್ಯದ ಹೆಸರಿನಲ್ಲಿ, ಸುಳಿಗೆ ಮಾಡುವ ಪವೃತ್ತಿ ಹೆಚ್ಚಾಗಿರುವುದು ಅವರಿಗೆ ಕಾಣುವುದಿಲ್ಲ. ಸ್ವಾಭಿಮಾನದ ಬಗ್ಗೆ ಮಾತನಾಡುವವರೂ ಪ್ರತಿಯೊಬ್ಬನು ದುಡಿದಾಗ ಮಾತ್ರ ಉದ್ದಾರವೆಂಬುದನ್ನು ಅರಿಯುವುದೇ ಇಲ್ಲ. ೨೦-೨೨ ವರ್ಷಗಳು ಕಾಲೇಜಿಗೆ ಹೋಗಿ ಓದಿದದವರೂ ಕೂಡ, ನಂತರ ಕೈಕಟ್ಟಿ ಕುಳಿತು ಗಂಡನ ಸಂಪಾದನೆಯಲ್ಲಿ ಕಾಲಹರಣ ಮಾಡುವುದು, ಇವೆಲ್ಲಾ ಅವರಿಗೆ ಕಾಣುವುದಿಲ್ಲ.


ಅನೈತಿಕತೆ ನಡುವೇ ಜೀವನದ ಜೋಕಾಲಿಯ ಕುಣಿಕೆ ಮುರಿದು ಬೀಳುವಷ್ಟು ವೇಗವಾಗಿ ನಮ್ಮ ಜೀವನ ಚಕ್ರ ನಡೆಯುತ್ತಿದೆ. ಯಾರನ್ನೂ ನಂಬಲಾರದ ಮನಸ್ತಿತಿಯೊಂದಿಗೆ ಬದುಕುತಿದ್ದೇವೆ. ಧರ್ಮ, ಜಾತಿ, ಸ್ವಾರ್ಥ, ಭಾಷೆ, ಲಿಂಗ ತಾರತಮ್ಯ, ಅತ್ಯಾಚಾರ, ಅನಾಚಾರ ಇವೆಲ್ಲಾ ನಮ್ಮನ್ನು ಕಿತ್ತು ತಿನ್ನುತ್ತಾ, ಸಾಮಾನ್ಯ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳಲು ಸ್ವಾತಂತ್ರವಿಲ್ಲದಂತೆ ಬಂದು ನಿಂತಿದೆ. ವ್ಯಕ್ತಿ ಸ್ವಾತಂತ್ರ್ಯ ಎನ್ನುವ ಪದ ಎಲ್ಲ ಕಡೆ ಸುಳಿದು, ಸಾಂಸಾರಿಕ ನೌಕೆ ಯಾವಾಗೆಂದರೇ ಆಗ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ಬಂದ ನನ್ನ ತಾಯಿಗೆ, ಪಟ್ಟಣದಲ್ಲಿ ಇರುವ ಹುಡುಗಿಯರ ರೀತಿ ಆಸೆ ಆಕಾಂಕ್ಷೆಗಳು ಇರುವುದಿಲ್ಲವಾ! ಇರಲಿಲ್ಲವಾ! ನನ್ನಮ್ಮನನ್ನು ಬಹಳ ಸಾರಿ ಈ ಮಾತು ಕೇಳಿದ್ದೇನೆ. ಅವಳೆಂದು ತನ್ನದೂ ಗುಲಾಮ ಕೆಲಸವೆನ್ನುವುದಿಲ್ಲ . ಅಪ್ಪ ಇಷ್ಟೇಲ್ಲಾ ಕಷ್ಟಪಟ್ಟು ನಮಗೆ ಅಂತಾ ಮಾಡುತ್ತಿರುವಾಗ ನನಗೆ ಗುಲಾಮಗಿರಿ ಅಂತಾ ಯಾಕೆ ಅನ್ನಿಸುತ್ತೇ ಹೇಳು? ನಿನಗೆ, ನಿನ್ನನ್ನು ಪ್ರೀತಿಸುವ ಮನಸ್ಸು ಸಿಕ್ಕಿದೇ ,ಎನಿಸಿದರೇ, ಅದಕ್ಕೆ ಸಮನಾದದ್ದು ಇಡೀ ಜಗತ್ತಿನಲ್ಲೇ ಇಲ್ಲ. ಒಂದು ಪ್ರೀತಿಸುವುವ ಮನಸ್ಸಿದ್ದರೇ ಸಾಕು, ಬೇರೆ ಏನು ಬೇಕು ಎನಿಸುವುದಿಲ್ಲ. ನಿನ್ನನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವ ಮನಸ್ಸಿಗಾಗಿ ಬದುಕಿ ನೋಡು, ಅದರಲ್ಲಿ ಸಿಗುವ ಸುಖ ಬೇರೆಲ್ಲೂ ಸಿಗುವುದಿಲ್ಲ. ಆದರೇ, ಆ ಮಾತು ನಮ್ಮಮ್ಮನಿಗೆ ಮಾತ್ರ ಇಷ್ಟ ಅನಿಸುತ್ತದೆ. ನನಗೆ ಆ ಭಾಗ್ಯ ಸ್ವಲ್ಪ ದೂರಾನೇ ಉಳಿಯಿತು. ಸದಾ ಭಯದ ನೆರಳಲ್ಲಿ ಬದುಕುವ ದಿನ ಹತ್ತಿರಾಗಿ ಬಿಟ್ಟಿತ್ತು.. ಅಭದ್ರತೆ ಅನ್ನೋದು ಅಂದರೇ,ಎನಿಸುತ್ತದೆ.


ಅಭದ್ರತೆಯ ಭಯದ ನೆರಳಲ್ಲಿ ಬದುಕುವುದೆಂದರೇ ಅದಕ್ಕಿಂತ ಧುರ್ವಿಧಿ ಮತ್ತೊಂದಿಲ್ಲ. ನಾಳೇ ಸಾವು ನನ್ನನ್ನು ಕೊಲ್ಲುತ್ತದೆಂಬ ಭಯ, ನಾಳೆ ನನ್ನ ಕೆಲಸ ಹೋಗೇ ಹೋಗುತ್ತದೆಂಬ ಭಯ, ಮುಂದಿನ ತಿಂಗಳು ಮನೆ ಖಾಲಿ ಮಾಡಿ ಹೋಗುತ್ತೇನೆಂದಾಗ ಮನೆ ಮಾಲಿಕ ನಡೆದುಕೊಳ್ಳುವ ರೀತಿ ಇವೆಲ್ಲ ನಮ್ಮ ಜೀವನದ ಅಭದ್ರತೆಯ ಪ್ರತೀಕಗಳು. ಅಲ್ಲಿ ಉಂಟಾಗುವ ಭಯವೆಂದರೆ ಅದೊಂದು ಭಯಂಕರ ಯಾತನೆಯ ಕ್ಷಣಗಳು. ಜೀವದ ಗೆಳತಿ ಎನಿಸಿಕೊಂಡಿದ್ದವಳು, ನಾನಿದ್ದು, ಇನ್ನೊಬ್ಬನೊಡನೆ ಸುತ್ತಾಡುತ್ತಾ ಪ್ರೀತಿಯ ನಾಟಕವಾಡುವಾಗ ಆಗುವ ವ್ಯಥೆಯಿದೆಯಲ್ಲಾ ಅದಕ್ಕಿಂತ ಇನ್ನೊಂದು ನರಕವನ್ನು ಆ ಭಗವಂತನಿಂದಲೂ ಸೃಷ್ಟಿಸಲಾಗುವುದಿಲ್ಲ. ಅದನ್ನು ತಿಳಿದು, ಅವಳು ಪ್ರೀತಿಯ ನಾಟಕವಾಡುತ್ತಿರುವುದನ್ನು ಕಂಡು, ಅವಳಿಂದ ದೂರಾಗಲು ಸಿದ್ದವಿಲ್ಲದ ಮನಸ್ತಿತಿಯಿದೆಯೆಲ್ಲಾ ಅದೊಂದು ಜೀವಂತ ಶವದ ಪ್ರತಿರೂಪ. ಯಾರನ್ನೂ ನಂಬದ, ಯಾರ ಜೊತೆಗೂ ಹೋಗದ, ಒಬ್ಬಂಟಿಯಾಗಿಯೂ ಜೀವಿಸಲಾರದ ಯಾತನೆಯೆಂದರೇ, ಜೀವಿಯ ಕೊನೆ ಕ್ಷಣಗಳೆನಿಸುವಂತಹುಗಳು. ಪ್ರೀತಿಯ ಮೊಸಕ್ಕೆ ಸಿಳುಕದ ಮುನ್ನ ನನ್ನಲ್ಲಿ ಹಲವಾರು ಆಲೋಚನೆಗಳಿದ್ದವು. ಪ್ರೀತಿ ಎಂದ ಕೂಡಲೇ, ಪ್ರತಿಯೊಬ್ಬನೂ ಪೊಸ್ಸೆಸ್ಸಿವ್ ಆಗಲೂ ಕಾರಣವೇನೆಂದು ನಾನು ಬಹಳ ಯೋಚಿಸುತಿದ್ದೆ. ನನಗೆಂದೂ ಅದರ ಅರ್ಥ ಹುಡುಕುವ ಗೋಜು ಬರಲೇಯಿಲ್ಲ. ಪ್ರೀತಿಸುವ ವ್ಯಕ್ತಿಯೆಂದರೇ ಎಲ್ಲವನ್ನೂ ಅವನಿಗೆ ಅಥವಾ ಅವಳಿಗೆ ಯಾಕೆ ಹೇಳಬೇಕು? ಅವಳಿಗೂ ತನ್ನ ಸ್ವಂತಿಕೆಯ ಬದುಕು ಬೇಡವೇ? ಅವಳನ್ನು ಪ್ರೀತಿಯ ನೆಪಹೇಳಿ ತಡೆಯುವುದು ಏಕೆಂದು? ಆದರೇ ನನ್ನ ನಂಬಿಕೆಗೆ ಕಲ್ಲು ಬಿದ್ದ ದಿನ ಮಾತ್ರ ನನಗೆ ಅರ್ಥವಾಗಿದ್ದು, ಪೊಸ್ಸೆಸ್ಸಿವ್ ಎಂಬುವುದು ಎಷ್ಟು ಅವಶ್ಯಕತೆಯೆಂದು. ಒಬ್ಬ ವ್ಯಕ್ತಿಗೆ ನೀವು ಸರ್ವಸ್ವವನ್ನು ಕೊಟ್ಟರೂ ಅವರಲ್ಲಿ ಕಿಂಚಿತ್ತೂ ಪ್ರೀತಿ ಹುಟ್ಟಿಸಲಾಗುವುದಿಲ್ಲ, ಅದು ಅವರ ಮನಸ್ಸು ಬಲವಂತದಿಂದ ಅಲ್ಲಿ ಏನು ಹುಟ್ಟುವುದಿಲ್ಲ, ಹುಟ್ಟಿದರೂ ಅದು ಬೆಳೆಯುವುದಿಲ್ಲ, ಬೆಳೆದರೂ ಅದು ನಿಮಗೆ ನೆರಳಾಗುವುದಿಲ್ಲ. ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ದೇಶದ ವಿಷಯದಲ್ಲಿಯೂ ಅಷ್ಟೇ, ಧರ್ಮದ ವಿಷಯದಲ್ಲಿಯೂ ಅಷ್ಟೇ. ತನ್ನಲ್ಲಿ ನಂಬಿಕೆಯಿಲ್ಲದವನಿಗೆ ಬೇರಾವುದರ ಮೇಲೂ ನಂಬಿಕೆ ಇರುವುದಿಲ್ಲ, ತನ್ನಲ್ಲಿ ಪ್ರೀತಿಯಿಲ್ಲದವನಿಗೆ ಬೇರಾವುದರಲ್ಲೂ ಪ್ರೀತಿಯಿರುವುದಿಲ್ಲ. ನೀವು ಇನ್ನೊಬ್ಬನನ್ನು ಹೊಡೆದು ಬಡಿದು ನಿಮ್ಮ ಧರ್ಮದಲ್ಲೇ ಉಳಿ ಎಂದರೇ ಅವನು ಉಳಿಯಬಹುದು, ಹೆಸರೂ ಬದಲಾಯಿಸಬಹುದು ಆದರೇ ಅವನಿಂದ ಅದರ ಪಾಲನೆಯಾಗುವುದಿಲ್ಲ. ಪ್ರೀತಿಯಲ್ಲಿಯೂ ಅಷ್ಟೇ, ನೀವು ನಿಮ್ಮತನವನ್ನೆಲ್ಲಾ ಧಾರೆ ಎರೆದರೂ ಪ್ರೀತಿಸುವ ಮನಸ್ಸಿಲ್ಲದವರು ಅಲ್ಲಿ ಉಳಿಯುವುದಿಲ್ಲ. ಅವರ ಗಮನ ಮತ್ತೊಬ್ಬನ/ಳ ಕಡೆಗೆ ಹೋಗುತ್ತದೆ. ಅದಕ್ಕೆ ಕಾರಣಗಳು ಸಾವಿರಾರು. Possessiveness, freedom, independent life, self respect, self earning, ಹೀಗೆ……..


ಯಾವುದನ್ನು ಬಲವಂತದಿಂದ ಪಡೆಯಲಾಗುವುದಿಲ್ಲ, ಎಲ್ಲವೂ ತನ್ನೊಳಗಿನಿಂದ ಹುಟ್ಟಿ ಬರಬೇಕು. ಅಭಿಮಾನ ಪ್ರೀತಿ, ಭಾವನೆಗಳೆಲ್ಲಾ ತನ್ನೊಳಗೆ ಹುಟ್ಟುವಂತವುಗಳು. ಕನ್ನಡ ಮಾತನಾಡಿದ ಮಾತ್ರಕ್ಕೆ ಕನಡದ ಸಂಸ್ಕೃತಿಯ ಪ್ರತೀಕವೆಂದು ಬಯಸಬೇಡಿ. ಕನ್ನಡದ ಬಗ್ಗೆ ಇತಿಹಾಸದ ಬಗ್ಗೆ ನಮ್ಮ ಆಗುಹೋಗುಗಳ ಬಗ್ಗೆ ಮೊದಲು ತಿಳಿದು ನಂತರ ತಮ್ಮ ಅಭಿಮಾನ ತೋರಿಸಿ. ಭಾರತವೆಂದ ಮಾತ್ರಕ್ಕೇ ಅದೂ ಅಂದಿನಿಂದ ಇಂದಿನವರೆಗೂ ಹಾಗೆ ಇದೆಯೆಂದಲ್ಲ. ಕೋಟ್ಯಂತರ ರಾಜ ಮಹರಾಜರೂ ಆಳಿದ್ದಾರೆ. ಅವರಿಗೆ ತಕ್ಕಂತೆ ಬದಲಾಯಿಸಿದ್ದಾರೆ, ಯಾವುದು ಶಾಶ್ವತವಲ್ಲ. ಶಾಶ್ವತವೆಂಬುದೆರಡೇ, ಮೊದಲ ಪ್ರೀತಿಯ ನೆನಪು. ಮೊದಲ ಪ್ರೀತಿಯ ಸೋಲು. ಅವೆರಡೂ ಶಾಶ್ವತ. ಅದೆಂದಿಗೂ ಮಾಸುವುದಿಲ್ಲ.




ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...