07 ಮಾರ್ಚ್ 2012

ನಾನು ಬರವಣಿಗೆಯನ್ನು ಹವ್ಯಾಸಕ್ಕಾಗಲೀ ಮನರಂಜನೆಗಾಗಲೀ ಶುರು ಮಾಡಲಿಲ್ಲ. ಬರವಣಿಗೆಯಿಂದ ಅನ್ನ ಸಂಪಾದನೆಯ ಕನಸನ್ನೂ ಕಂಡಿಲ್ಲ. ಬರೆಯಲು ಶುರು ಮಾಡಿದ್ದು, ಸುಮ್ಮನೆ ಬರೆಯುವುದೇ ಒಂದು ಬಗೆಯ ಕಲೆಯಾಯಿತು. ಮನಕ್ಕೊಪ್ಪುವ ಬರವಣಿಗೆಯಾಯಿತು. ಅದೆಷ್ಟರ ಮಟ್ಟಿಗೆ ನಾನು ಅದಕ್ಕೆ ದಾಸನಾದನೆಂದರೇ ರಾತ್ರೋ ರಾತ್ರಿ ಎದ್ದು ಬರೆಯತೊಡಗಿದೆ, ನಾನು ಬರೆದಿದ್ದನ್ನು ಮತ್ತೊಮ್ಮೆ ನಾನೇ ಓದಲು ಆಗುವುದಿಲ್ಲ, ಅಷ್ಟೂ ಕೆಟ್ಟದ್ದಾಗಿರುತ್ತದೆ ನನ್ನ ಬರವಣಿಗೆಗಳು, ನಾನು ಸದಾ ಹೇಳುವಂತೆ ನನ್ನ ಮನಸ್ಸಿನೊಳಗಿರುವುದನ್ನು ನಿಮ್ಮ ಮುಂದಿಡುತ್ತೇನೆ, ಮುಚ್ಚು ಮರೆಯಿಲ್ಲದೇ. ನನ್ನ ಮನಸ್ಸು ಅಷ್ಟೇ ವಿಕಾರವಾಗಿರಬಹುದೇ? ನೀವೇ ಹೇಳುವಂತೆ ನಾನು ಹೇಳಿದ್ದನ್ನು ಮಾಡುವುದೇ ಇಲ್ಲಾ, ನಾನೊಬ್ಬ ಸುಳ್ಳನಾ ಎಂದರೇ ನಾನು ನಿರುತ್ತರ. ಮೋಸಗಾರನಾ? ಮಾತಿಗೆ ತಪ್ಪುವವನಾ? ಎಲ್ಲದ್ದಕ್ಕೂ ನಿರುತ್ತರ. ಮತ್ತೇ ದೇಶದ ಅಂಕು ಡೊಂಕುಗಳನ್ನು ತಿದ್ದಲೂ ಹೋಗುವ ನೀನು ನಿಮ್ಮ ಮನೆಯ ಅಡುಗೆಮನೆಯಲ್ಲಿನ ಹುಳುಕನ್ನು ಮುಚ್ಚಬೇಕೆನಿಸುವುದಿಲ್ಲವೇ? ನಿನ್ನ ತೆವಳಿಗೆ ದೇಶದವರನ್ನೆಲ್ಲಾ ಬೈಯ್ಯುತ್ತೀಯಲ್ಲ, ನೀನು ಕಡೆದು ಹಾಕಿರುವುದಾದರೂ ಏನು? ಒಂದು ಚಿಲ್ಲರೆ ಡಿಗ್ರೀ ಅನ್ನೋದನ್ನ ಬಿಟ್ಟರೇ ಬೇರೇನೂ ಇಲ್ಲ. ನಿನ್ನ ಥೀಸಿಸಿ ನೀನೆ ಬರೆದೆಯೋ ಅಥವಾ ಮತ್ತಾರ ಕೈಯಿಂದ ಬರೆಸಿದ್ದಿಯೋ ಯಾವನಿಗೆ ಗೊತ್ತು? ಕಾಸು ಕೊಟ್ಟರೇ ಬಕೇಟ್ ಹಿಡಿದರೇ ಏನು ಸಿಗುವುದಿಲ್ಲ ಈ ಲೋಕದಲ್ಲಿ? ನಿನ್ನದೇನು ಹೊರತಲ್ಲ ಬಿಡು.
ಎದೆ ಮುಟ್ಟಿಕೊಂಡು ಹೇಳು ನಿನ್ನದು ಒಂದು ಸಾರ್ಥಕತೆಯ ಬದುಕೆಂದು? ಇಂಥಹ ಪ್ರಶ್ನೆ ದಿಡೀರನೇ ಕನಸಿನಲ್ಲಿ ಕಾಡಿದರೇ ಏನಾಗಬೇಕು? ಕನಸಿನಲ್ಲಿ ಬಂದದ್ದು ನಾಳೆ ನೇರವಾಗಿ ಬಂದರೇ? ಉತ್ತರಿಸುವ ಧೈರ್ಯ ನನಗಿಲ್ಲ. ಉತ್ತರವಿದ್ದರೇ ತಾನೇ ಧೈರ್ಯ ಬರುವುದು? ತಾನು ಬದುಕಬೇಕು, ತಾನು ತನ್ನ ನೆಚ್ಚಿನ ಜೀವನವನ್ನು ಕಟ್ಟಿಕೊಳ್ಳಬೇಕು, ಬರೀ ಬೊಬ್ಬೆ ಇಕ್ಕಿದರೇ ಏನೂ ಸಿಗುವುದಿಲ್ಲ. ನಾನು ಇದುವರೆಗೂ ಮಾಡಿರುವುದು ಅದನ್ನೇ ನನ್ನ ಕೈಯ್ಯಾರೆ ನಾನು ಕಿಸಿದಿರುವುದು ಏನೇನೂ ಇಲ್ಲ. ದಂಡ ಪಿಂಡದ ಹಾಗೆ ಕುಳಿತು ಅನ್ನ ತಿಂದಿರುವುದನ್ನು ಬಿಟ್ಟರೇ ಹೇಳಿಕೊಳ್ಳುವ ಒಂದೇ ಒಂದು ಸಾಲು ಉಪಯುಕ್ತ ಜೀವನವಿಲ್ಲ. ಇಲ್ಲಿ ಸುಮ್ಮ ಸುಮ್ಮನೆ ಗೀಚುವುದು, ಅವರಿವರನ್ನು ಹಂಗಿಸುವುದು, ಚೇಡಿಸುವುದು ಇವೆಲ್ಲವೂ ಅರ್ಥಹೀನಾ ಆದ್ದರಿಂದ ನಾನು ನನ್ನ ಬರವಣಿಗೆಯನ್ನು ನಿಲ್ಲಿಸುತ್ತಿದ್ದೇನೆ. ಇಲ್ಲಿಯ ತನಕ ಓದಿ ಸಹಕರಿಸಿದ ನಿಮ್ಮೆಲ್ಲರಿಗೂ ನನ್ನ ನಮನಗಳು. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.

06 ಮಾರ್ಚ್ 2012

ಇಷ್ಟೊಂದು ಕ್ರೂರವಾಗಿ ಬರೆಯವ ಅವಶ್ಯಕತೆಯಿತ್ತಾ ಎಂಬುದು ಇದನ್ನು ಓದಿದ ಮೇಲೆ ನೀವು ಹೇಳುವ ಅಥವಾ ವ್ಯಕ್ತಪಡಿಸುವ ಪ್ರತಿಕ್ರಿಯೆ. ಆದರೇ ನನಗೆ ಬೇರೆ ಮಾರ್ಗ ಕಾಣದಿದ್ದರಿಂದ ಅಥವಾ ತೀರಾ ಬೇಸತ್ತಿರುವುದರಿಂದ ಈ ಬಗೆಯಾಗಿ ಸ್ಪಂದಿಸಿದ್ದೇನೆ. ಸ್ವಲ್ಪ ಭಾವನಾತ್ಮಕವಾಗಿ ಸ್ಪಂದಿಸಿರುವುದರಿಂದ ಬಹಳ ನಿಷ್ಟೂರವಾಗಿಯೇ ಬರೆಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಗಮನಿಸಿ ನೋಡಿ. ನಮ್ಮ ಸುತ್ತ ಮುತ್ತಲಿರುವ ಜನರನ್ನು, ನಮ್ಮ ಸಹಪಾಠಿಗಳನ್ನೂ, ಸಹದ್ಯೋಗಿಗಳನ್ನು, ಎಲ್ಲರ ಬಾಯಿಯಲ್ಲಿಯೂ ನಮ್ಮ ಸಮಾಜದ ಏಳಿಗೆ, ಸಮಾಜ ಸೇವೆ, ದೇಶೋದ್ದಾರದ ಬಗೆಗೆ ಉದ್ದುದ್ದುದ ಭಾಷಣಗಳು ಬರುತ್ತಿವೆ. ಅದರಲ್ಲಿಯೂ ಸಾರ್ವಜನಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಮತ್ತೂ ಬಿಟ್ಟೀ ಬಿ. ಮಕ್ಕಳ ಖಾಸಗಿ ಚಾನೆಲ್ ಗಳು ಹೆಚ್ಚಾದ ಮೇಲೆ ಕೇಳುವಂತಿಲ್ಲ. ಹಲವಾರು ಜನರು ಗಂಡಸರಾಗಿದ್ದು/ಆಗಿರುವುದು ಕೇವಲ ಫೇಸ್ ಬುಕ್ಕಿನಲ್ಲಿ ಮಾತ್ರವೆನಿಸಿದೆ. ಪೇಸ್ ಬುಕ್ಕಿನಲ್ಲಿ ತೋರಿಸುವ ದರ್ಪ, ಪೌರುಷ, ಗಂಡಸುತನ ಅದರಿಂದ ಹೊರಕ್ಕೆ ತೋರಿಸುವುದಿಲ್ಲ. ಸಮಾಜದ ಏಳಿಗೆಯ ಬಗ್ಗೆ ಉದ್ದುದ್ದ ಬರೆಯುವ ಇವರು ನಿಜ ಜೀವನದಲ್ಲಿ ನನ್ನಾನೆ ಹೇಳಬೇಕೆಂದರೇ ಕಿತ್ತಾಕಿರುವುದು ಅಷ್ಟಕ್ಕಷ್ಟೆ. ಕೆಲವು ಅಯೋಗ್ಯ ಅಧಿಕಾರಿಗಳು ಈ ರೀತಿಯಾಗಿ ಮಾಡುತ್ತಾರೆ, ಅವರ ಇಡೀ ಜೀವನದಲ್ಲಿ ಕೆಲಸ ಮಾಡಿರುವುದಿಲ್ಲ. ಅವರು ನಿವೃತ್ತಿಯಾದ ಬಳಿಕ ಖಾಸಗಿ ಸಂಸ್ಥೆಗಳೊಂದಿಗೆ ಸೇರಿ ದೇಶ ಬದಲಾಯಿಸುವಂತೆ ವರ್ತಿಸುತ್ತಾರೆ ಕೆಲವೊಮ್ಮೆ ನಟಿಸುತ್ತಾರೆ. ಅವರು ಮಾಡಬೇಕಿರುವ ಕೆಲಸಗಳಿಗೆ ಅವರು ಮರ್ಯಾದೆ ಕೊಟ್ಟು ಅವರ ಕರ್ತವ್ಯಗಳನ್ನು ಮಾಡಿದರೇ ಸಾಕಾಗುತ್ತದೆ. ಅದನ್ನು ಅವರೆಂದು ಮಾಡುವ ಪ್ರಯತ್ನದಲ್ಲಿಲ್ಲ.

ಮೊನ್ನೆ ನಡೆದ ವಕೀಲರ ಮತ್ತೂ ಪೋಲಿಸರ ನಡುವಿನ ಗಲಾಟೆಯಲ್ಲಿ ನಮ್ಮ ಸಮಾಜ ಸೇವಕರು, ಅಥವಾ ಸಮಾಜದ ಏಳಿಗೆಗೆ ಸ್ಪಂದಿಸುವ ಮಹಾನ್ ಚೇತನಗಳ ಕಾಮೆಂಟುಗಳನ್ನು ಒಮ್ಮೆ ಓದಿ ಬನ್ನಿ. ಅಬ್ಬಾಬ್ಬಾ ನಮ್ಮ ದೇಶದ ಇತಿಹಾಸವನ್ನೂ ಸ್ವಾತಂತ್ರ್ಯ ಪೂರ್ವದ ಕಥೆಯಲ್ಲಾ ಹರಿದಾಡಿದೆ ಪೇಸ್ ಬುಕ್ಕಿನಲ್ಲಿ. ಘಟನೆ ನಡೆದಿದ್ದು ಹೇಗೆ ಅದರಿಂದ ಯಾರಿಗೆಲ್ಲ ಎಷ್ಟು ನೋವಾಗಿದೆ, ಅನ್ಯಾಯವಾಗಿದೆ ಎಂಬುದರ ಬಗ್ಗೆ ಯಾವೊಬ್ಬ ಮಾಹಾನುಭಾವನೂ ಮಾತನಾಡಿಲ್ಲ. ಯಾರಾದರೂ ಒಬ್ಬ ಫೇಸ್ ಬುಕ್ಕಿನಲ್ಲಿ ಬರೆದರೇ ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲಿನಂತೆ, ಇವರು ಸದಾನಂದ ಗೌಡರನ್ನು ಬಿಡುವುದಿಲ್ಲ್., ಅಶೋಕರನ್ನೂ ಬಿಡುವುದಿಲ್ಲ, ವಕೀಲರನ್ನೂ ಬಿಡುವುದಿಲ್ಲ. ಅಷ್ಟೊಂದು ಆಸಕ್ತಿ ಇದ್ದರೇ ಕಾನೂನಿನ ಪ್ರಕಾರ ಹೊಡೆದಾಡಲಿ. ವಿಷಯ ಬದಲಾಯಿಸುವುದು ಬೇಡ, ಮೊದಲು ವಕೀಲರ ಗಲಾಟೆಯ ಬಗ್ಗೆ ಮಾತನಾಡೋಣ. ಗಲಾಟೆ ಶುರುವಾಗಿದ್ದನ್ನೂ ಹೇಳುತ್ತೇನೆ, ನನ್ನ ಮೂಗಿನ ನೇರದಲ್ಲಿ ಅದಕ್ಕೆ ಪರಿಹಾರವನ್ನು ಹೇಳುತ್ತೇನೆ ಒಪ್ಪುವುದು ಬಿಡುವುದು ನಿಮಗೆ ಬಿಟ್ಟದ್ದು. ಸಮಯ ಹತ್ತೂವರೆ ವೇಳೆಗೆ ವಕೀಲರು ಕೋರ್ಟ್ ಆವರಣಕ್ಕೆ ತೆರಳುವಾಗ ಅವರನ್ನು ಪೋಲಿಸರು ತಡೆದಿದ್ದಾರೆ, ಕಾರಣ ಕೇಳುವಾಗ ಜನಾರ್ದನ ರೆಡ್ಡಿ ಬರುತ್ತಿರುವುದರಿಂದ ಅದನ್ನು ಬ್ರೇಕಿಂಗ್ ನ್ಯೂಸ್ ಮಾಡಲು ಮಾಧ್ಯಮ ಲೋಕವೇ ಅಲ್ಲಿ ತುಂಬಿತ್ತು, ವಕೀಲರ ಗಾಡಿಗಳನ್ನು ನಿಲ್ಲಿಸಲು ಜಾಗವಿಲ್ಲ ಆದ್ದರಿಂದ ನಿಮ್ಮ ಗಾಡಿಗಳನ್ನು ಒಳಕ್ಕೆ ತರುವಂತಿಲ್ಲವೆಂಬುದು ಪೋಲಿಸರ ವಾದ. ಸರ್ವೇ ಸಾಮಾನ್ಯವಾಗಿ ವಕೀಲರು ಅವರ ಹಕ್ಕನ್ನು ಪ್ರತಿಪಾದಿಸಿದ್ದಾರೆ ಮತ್ತೂ ನಾವು ನಿಲ್ಲಿಸುವ ಜಾಗದಲ್ಲಿ ಮಾಧ್ಯಮದವರನ್ನು ಬಿಟ್ಟಿರುವುದು ತಪ್ಪು ಆದ್ದರಿಂದ ಅದನ್ನು ತೆರವು ಮಾಡಿಸಿಕೊಡಿ ಎಂದು ಪೋಲಿಸರನ್ನು ಕೇಳುವಾಗ ಮಾಧ್ಯಮದವರು ನವರಂಧ್ರಗಳು ಭದ್ರಪಡಿಸಿಕೊಂಡು ಇರಬೇಕಾಗಿತ್ತು. ಮಾತಿಗಿಳಿದಿದ್ದಾರೆ, ಮಾಧ್ಯಮದವರೆಂದರೇ ಜನ ಪ್ರತಿನಿಧಿಗಳು ಸಮಾಜವನ್ನು ಕತ್ತಲಿಂದ ಬೆಳಕಿಗೆ ಕರೆದೊಯ್ಯಲು ಬಂದಿರುವ ದೇವಧೂತರೂ ನೋಡಿ.

ಮಾತಿಗೆ ಮಾತು ಬೆಳೆಯುವಾಗ ಕೈ ಕೈ ಮಿಲಾಯಿಸಿದ್ದಾರೆ, ನಾವು ರಸ್ತೆಯಲ್ಲಿ ಹೋಗುವಾಗ ಅಪ್ಪಿ ತಪ್ಪಿ ನಮ್ಮ ಗಾಡಿಗೆ ಗಾಡಿ ಟಚ್ ಆದರೂ, ಆಗುವಂತಿದ್ದರೂ ಪಕ್ಕದವನಿಗೆ ಕೈ ಮಿಲಾಯಿಸುತ್ತೇವೆ, ನಾನು ಗಂಡಸಾಗಿರುವುದರಿಂದ ನನ್ನ ಕೈ ಮೊದಲು ಮಾತನಾಡುತ್ತದೆ. ವಕೀಲರು ಅದನ್ನೇ ಮಾಡಿದ್ದಾರೆ. ಆದರೇ ಆ ಮಟ್ಟಕ್ಕೆ ಇಳಿದಿದ್ದು ತಪ್ಪು ಅದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಅವರನ್ನು ಪೋಲಿಸರು ತಡೆಯಬಹುದಿತ್ತು. ಸಾಮಾನ್ಯ ಮನುಷ್ಯರಾಗಿ ಹಾದಿಯಲ್ಲಿ ಯಾರಾದರೂ ಅಪರಿಚಿತರು ಜಗಳವಾಡುತ್ತಿದ್ದರೇ ನಾವು ಬಿಡಿಸುವುದಿಲ್ಲವೇ? ಅಂಥಹದರಲ್ಲಿ ಮಾಧ್ಯಮದವರಿಗೆ ಅದು ಕೇವಲ ಒಬ್ಬನಿಗೆ ನಾಲ್ಕಾರು ಜನ ವಕೀಲರು ಹೊಡೆಯುವಾಗ ಮಾಧ್ಯಮದವರು ಸೇರಿ ವಿಡಿಯೋ ಚಿತ್ರಿಕರಣ ಮಾಡುತ್ತಾರೆಂದರೇ ಅವರಿಗೆ ಅವರ ಸಹದ್ಯೋಗಿ ಸತ್ತರೂ ಚಿಂತೆಯಿಲ್ಲ ವಿಷಯ ಬೇಕು, ನ್ಯೂಸ್ ಆಗಬೇಕು. ಮಾಧ್ಯಮದವರೆಂದರೂ ಸುಮಾರು ಇನ್ನೂರು ಮುನ್ನೂರು ಜನರಿರಲೇ ಬೇಕಲ್ಲವೇ ಅವರೆಲ್ಲರೂ ಏಕೆ ಜಗಳ ಬಿಡಿಸಲು ಮುಂದಾಗಲಿಲ್ಲ? ಅವರಿಗೆ ಜಗಳ ಬಿಡಿಸುವುದಕ್ಕಿಂತ ಅದೊಂದು ದೊಡ್ಡ ಸುದ್ದಿ ಮಾಡಬೇಕಿತ್ತು. ಸಮಾಜದಲ್ಲಿ ಸೌಮ್ಯತೆ, ಸಾಮರಸ್ಯ ಕಾಣಬೇಕೆಂಬುದು ನಿಜವಾದ ಉದ್ದೇಶವಾದ್ದಲ್ಲಿ ನಾವೆಲ್ಲರೂ ಜಗಳವನ್ನು ತಡೆಯಲ್ಲು ನೋಡುತ್ತೇವೆ ಹೊರತು ಅದನ್ನು ಚಿತ್ರಿಕರಿಸಲು ಅಲ್ಲವೆಂಬುದು ನನ್ನ ಅಭಿಪ್ರಾಯ. ನೀವು ಆ ವಿಡೀಯೋಗಳನ್ನು ನೋಡಿದರೂ ಪೋಲಿಸರು ಎಲ್ಲಿಯೂ ಜಗಳ ಬಿಡಿಸುವ ಪ್ರಯತ್ನ ಮಾಡಿಲ್ಲ. ಅವರಿಗೆ ಹೊಡೆಯುವುದು ಬಡಿಯುವುದು ಬಿಟ್ಟರೇ ಶಾಂತಿಯುತ ಜಗಳ ನಿವಾರಣೆ ತಿಳಿದಿಲ್ಲ.

ಅದಾದ ನಂತರದ ಬೆಳವಣಿಗೆಯನ್ನು ಗಮನಿಸಿ, ಪೋಲಿಸರಿಗೆ ಲಾಠಿ ಚಾರ್ಚ್ ಮಾಡುವುದಕ್ಕೆ ಅನುಮತಿ ಸಿಕ್ಕಿದೆ. ಸಿಕ್ಕಿ ಸಿಕ್ಕಿದವರನ್ನು ಮನ ಬಂದಂತೆ ಥಳಿಸಿದ್ದಾರೆ. ಕೋರ್ಟ್ ಆವರಣದೊಳಕ್ಕೆ ನುಂಗಿ ವಕೀಲರ ಸಂಘದ ಟಿವಿ ಗಳನ್ನು ಪುಡಿ ಪುಡೀ ಮಾಡಿದ್ದಾರೆ, ಐವತ್ತಕ್ಕೂ ಹೆಚ್ಚು ಕಾರುಗಳನ್ನು ಪುಡಿ ಪುಡೀ ಮಾಡಿದ್ದಾರೆ, ಬೈಕ್ ಗಳನ್ನು ನುಚ್ಚು ನೂರು ಮಾಡಿದ್ದಾರೆ, ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲಾ ಸ್ವಾಮಿ ಪೋಲಿಸರ ಕರ್ತವ್ಯವೇನೆಂಬುದ ಸಾಮಾನ್ಯ ಪ್ರಜ್ನೆ ಮರೆತು ಹೋಯಿತಾ? ಸಾಮಾನ್ಯ ಮನುಷ್ಯರಂತೇಯೂ ವರ್ತಿಸಲಾಗಲಿಲ್ಲವೇ ನಿಮಗೆ? ಮೂವತ್ತು ನಲ್ವತ್ತು ವಕೀಲರಿಗೆ ಏಟು ಬಿದ್ದಿದೆ, ದುರ್ವಿಧಿ ಎಂದರೇ ಜಗಳ ಶುರು ಮಾಡಿದ ಅಥವಾ ಜಗಳದಲ್ಲಿ ಭಾಗಿಯಾಗಿದ್ದ ಯಾವೊಬ್ಬ ವಕೀಲನಿಗೂ ಏಟು ಬಿದ್ದಿಲ್ಲ. ಪೋಲಿಸರು ಲಾಠಿ ಚಾರ್ಚ್ ಮಾಡಿರುವುದು ಮತ್ತೊಮ್ಮೆ ಏನೂ ತಿಳಿಯದ ಅಮಾಯಕ ವಕೀಲರ ಮೇಲೆ. ಕೋರ್ಟ್ ಗೆ ಆಗ ತಾನೆ ಬರುತ್ತಿದ್ದವರಿಗೆ ಹೊಡೆದಿದ್ದಾರೆ. ಯಾರೋ ನಾಲ್ಕು ಜನ ಅಯೋಗ್ಯ ವಕೀಲರು ಮಾಡಿದ ಪುಂಡಾಟಿಕೆಗೆ ಇಡೀ ವಕೀಲರ ಮೇಲೆ ಹಲ್ಲೆ ನಡೆಸುವ ಅಗತ್ಯವಿತ್ತಾ? ಮಾಧ್ಯಮದವರಿಗೆ ಸಹಕರಿಸಿದ್ದಾರೆಂಬ ಉದ್ದೇಶಕ್ಕೆ ಮಾಧ್ಯಮದವರು ವಕೀಲರ ಮೇಲೆ ಲಾಠಿ ಚಾರ್ಚ್ ಮಾಡಿ ಎಂದು ಒತ್ತಾಯಿಸುತ್ತೀರಲ್ಲ. ಆ ಸಮಯದಲ್ಲಿ ಮಾನವೀಯತೆ, ಮಾನವ ಹಕ್ಕುಗಳ ಉಲ್ಲಂಘನೆ ನಿಮ್ಮ ಕಣ್ಮುಂದೆ ಬರುವುದಿಲ್ಲವೇ? ವೀರಪ್ಪನ್ ಅಂತಾ ಕಳ್ಳನನ್ನು ಸಾಯಿಸಿದಾಗ ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವ ನೀವು ಅಮಾಯಕರ ಮೇಲೆ, ಲಾಠಿ ಚಾರ್ಚ್ ಮಾಡೀ ಎಂದು ಬೊಬ್ಬೆ ಹಾಕುತ್ತೀರಲ್ಲ. ನಿಮ್ಮ ಮನೆಗೆ ಬೆಂಕಿ ಬಿದ್ದಾಗ ಮಾತ್ರ ಬೆಂಕಿ ಕೆಟ್ಟದ್ದು ಬೇರೆಯವರ ಮನೆಗೆ ಬಿದ್ದಾಗ ನಿಮಗೆ ಅದು ಜ್ಯೋತಿಯಂತೆ ಕಾಣುತ್ತದೆ ಅಲ್ಲವೇ? ತಪ್ಪು ಮಾಡಿರುವ ವಕೀಲರನ್ನು ವಶಕ್ಕೆ ತೆಗೆದುಕೊಂಡು ನಾಲ್ಕು ಬಿಗಿದ್ದಿದ್ದರೇ ಖುಷಿಪಡಬಹುದಿತ್ತು, ಆದರೇ ಪೋಲಿಸರು ಅಮಾಯಕ ವಕೀಲರಿಗೆ ಲಾಠಿ ಬೀಸಿದ್ದಾರೆ. ಕೊರ್ಟ್ ನಿಂದ ಹೊರಕ್ಕೆ ಬರುವುದನ್ನೇ ಕಾಯ್ದು ಲಾಠಿ ಬೀಸಿದ್ದಾರೆ. ಮೈಸೂರು ಸರ್ಕಲ್ಲಿನ ಸಿಗ್ನಲ್ ನಲ್ಲಿ ಲಾಠಿ ಬೀಸಿದ್ದಾರೆ. ಕೋರ್ಟ್ ಆವರಣದಲ್ಲಿ ನಡೆದ ಗಲಭೆಯನ್ನು ಮೈಸೂರು ಸರ್ಕಲ್ಲಿನಲ್ಲಿ ಮುಂದುವರೆಸುವ ಅವಶ್ಯಕತೆ ಏನಿತ್ತು? ಒಬ್ಬ ಮನುಷ್ಯನಾಗಿ ಮತ್ತೊಬ್ಬನಿಗೆ ಯಾರೇ ಹೊಡೆದರೂ ಅದನ್ನು ಆನಂದಿಸುತ್ತೀರಲ್ಲಾ ನೀವು ಮನುಷ್ಯರೇನಾ? ವಕೀಲರು ತಪ್ಪು ಮಾಡಿರುವುದು ತಿಳಿದಿದೆ ಆದರೇ ಬಡ್ಡಿ ಮಕ್ಕಳ್ಳು ಲಾಯರ್ ಗಳನ್ನು ಹಾಕಿ ಚೆಚ್ಚಬೇಕು ಎನ್ನುತ್ತೀರಲ್ಲಾ? ಇದು ನಾಗರೀಕರು ವರ್ತಿಸುವ ರೀತಿ ನಾ? ತಪ್ಪು ಮಾಡಿದವರನ್ನೆಲ್ಲಾ ಸಾಯಿಸಬೇಕು, ಕೊಲ್ಲಬೇಕು, ಹೊಡೆಯಬೇಕು ಎನ್ನುತ್ತೀರಲ್ಲಾ, ಸಮಾಜವೆಂದರೇ ಸೇಡಿಗೆ ಸೇಡು ಎಂದ? ಹಾಗೆ ಆಗಿದ್ದ ಪಕ್ಷದಲ್ಲಿ ನೀವೇ ಹೋಗಿ ಹೊಡೆಯಿರಿ, ಹೊಡೆಯಬೇಕು ಎನ್ನುವ ಬದಲು, ಮಾಧ್ಯಮದಲ್ಲಿ ಅವರೆಲ್ಲರ ಹೆಸರನ್ನು ತೋರಿಸುತ್ತಿದ್ದಾರೆ, ನೀವು ಅವರ ಮನೆಗೆ ಹೋಗಿ ವಕೀಲರಿಗೆ ನಾಲ್ಕು ಬಿಗಿಯಿರಿ, ನೀವು ಗಂಡಸರು ತಾನೆ? ನಿಮಗೂ ಗಂಡಸ್ತನವಿದೆಯಲ್ಲಾ? ಸಮಾಜದ ಏಳಿಗೆಗೆ ನೀವು ಕಣ್ಣೀರಿಡುತ್ತೀರಲ್ಲಾ? ನಿಮ್ಮಂತೆಯೇ ಅನೇಕರೂ ರೋಷದಿಂದ ಶಪಥಗೈಯ್ಯುತ್ತಿದ್ದಾರಲ್ಲ ಹೋಗಿ ಅದನ್ನು ಸಾಧಿಸಿ. ಗುಂಪು ಘರ್ಷಣೆಯೊಂದನ್ನು ಬಿಟ್ಟರೇ ಮತ್ತೇನನ್ನೂ ಯಾರು ಮಾಡುವುದಿಲ್ಲ. ವಕೀಲರೂ ಅಷ್ಟೇ ಮೊನ್ನೆ ಗುಂಪಿದ್ದರಿಂದ ಮುನ್ನುಗ್ಗಿ ಹೊಡೆದರು. ವಕೀಲರು ಕಡಿಮೆ ಸಂಖ್ಯೆಯಲ್ಲಿದ್ದರೇ ಮಾಧ್ಯಮದವರೂ ಹೊಡೆದಿರುತ್ತಿದ್ದರು. ಇದು ನಮ್ಮೆಲ್ಲರ ಬೇಳೆಕಾಳು. ಸಂಘದಿಂದ ಅಥವಾ ಪಕ್ಷದಿಂದ ಹೊರಬಂದರೇ ಯಾವೊಬ್ಬನೂ ಹೊಡೆದಾಡುವುದಿಲ್ಲ ಇದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಇದಾದ ನಂತರದಲ್ಲಿ ನಮ್ಮು ಸಹೃದಯವಂತರು ಫೇಸ್ ಬುಕ್ಕಿನಲ್ಲಿ ಬರೆಯುವುದನ್ನು ಗಮನಿಸಬೇಕು. ವಕೀಲರು ಗುಂಪಿನಲ್ಲಿದ್ದಾಗ ಮಾತ್ರ ಗಂಡಸರೆಂದು ಒಬ್ಬ ಪ್ರಜೆ ಬರೆದಿದ್ದ, ನೀನೇನು ಮಹಾ ಯೋಧನೋ? ಫೇಸ್ ಬುಕ್ ಬಿಟ್ಟು ಹೊರಕ್ಕೆ ಬಂದರೇ ನೀನೇ ಅನುಮಾನ ಪಡುತ್ತೀಯಾ ನೀನು ಯಾವ ಲಿಂಗಕ್ಕೆ ಸೇರಿದವನೆಂದು. ಮಹಾನ್ ವ್ಯಕ್ತಿಗಳು ಬರೆಯುತ್ತಾರೆ. ನಮ್ಮ ರಾಜ್ಯದಲ್ಲಿ ಅಭದ್ರತೆಯಿದೆ, ಜನರು ನೆಮ್ಮದಿಯಿಂದ ಬದುಕಲು ಸಾಧ್ಯವೇ ಇಲ್ಲ. ಬಿಜೆಪಿ ಸರ್ಕಾರಕ್ಕೆ ಧೈರ್ಯವಿಲ್ಲವೆಂದು. ಅಲ್ಲಾ ಸ್ವಾಮಿ ಯಾರೋ ನಾಲ್ಕು ಜನ ಅಯೋಗ್ಯ ಅನಾಗರೀಕ ವಕೀಲರು ಕೋರ್ಟ್ ಆವರಣದಲ್ಲಿ ಗಲಭೆ ಮಾಡಿದರೇ, ಪೋಲಿಸರು ಜಗಳ ಆಗುವಾಗ ಕೈ ಕಟ್ಟಿ ಕುಳಿತರೇ ಗೃಹ ಸಚಿವ ಏನು ಮಾಡಬೇಕು ಸ್ವಾಮಿ. ಅಲ್ಲಿಂದ ಅನ್ನ ತಿನ್ನುವ ಪ್ರಜೆಗಳೇಕೆ ಮುಂದುವರೆದು ಬಿಡಿಸಬಾರದಿತ್ತು? ಪೋಲಿಸರೇಕೆ ಜಗಳವನ್ನು ಬಿಡಿಸಬಾರದಿತ್ತು. ಹೂಸಿದರೇ ಕೆಮ್ಮಿದರೇ ಸರ್ಕಾರವನ್ನು ದೂರುವುದನ್ನೇ ಜೀವನ ಮಾಡಿಕೊಂಡಿರಲ್ಲ ಏಕೆ? ನೀವು ವಿರೋಧ ಪಕ್ಷದವರಂತೆ ಮಾತನಾಡುತ್ತೀರಲ್ಲ ಏಕೆ? ಇದೆಲ್ಲವೂ ಮಾಧ್ಯಮದ ಪ್ರಭಾವ. ಕುರಿಯ ಮಂದೆಯಲ್ಲಿ ಸಿಂಹದ ಮರಿ ಇದ್ದರೂ ಅದು ಕುರಿಯಾಗುತ್ತದೆಂಬುದು ಒಂದು ಕಥೆ. ಅದರಂತೆಯೇ ಬೆಳೆಗಿನಿಂದ ರಾತ್ರಿಯವರೆಗೆ ಬರೀ ಕೆಟ್ಟದ್ದನ್ನೇ ಪ್ರಸಾರ ಮಾಡಿ ಮಾಡಿ ಅದನ್ನೇ ನೀವು ನೋಡೀ ನೋಡಿ ಈ ಸಮಾಜದಲ್ಲಿ ಒಳ್ಳೆಯದೇನೂ ಇಲ್ಲ, ಇಲ್ಲಿರುವುದೆಲ್ಲ ಕೆಟ್ಟದ್ದು, ಇದು ಬದುಕಲು ಯೋಗ್ಯವಲ್ಲದ ರಾಜ್ಯವೆಂಬ ಪಟ್ಟಿ ಕಟ್ಟಿದ್ದೀರ. ಬೆಂಗಳೂರಿನಲ್ಲಿ ಎಂಬತ್ತು ಲಕ್ಷ ಜನರಿದ್ದಾರೆ ಅದರಲ್ಲಿ ಸುಮಾರು ೭೫ ಲಕ್ಷ ಜನರಿಗೆ ಬೆಂಗಳೂರು ಸ್ವರ್ಗ. ಇಲ್ಲಿಯಂತಹ ವಾತವಾರಣ ಬೇರೆಲ್ಲೂ ಸಿಗುವುದಿಲ್ಲ. ಪಕ್ಕದ ರಾಜ್ಯಗಳಿಗೆ ಹಾಗೇಯೇ ಹೋಗಿ ಬನ್ನಿ, ಅಲ್ಲಿದ್ದು ಬನ್ನಿ, ಅಲ್ಲಿನ ಸರ್ಕಾರಗಳ ಕಾರ್ಯಕ್ರಮಗಳ ಜೊತಗೆ ನಮ್ಮನ್ನು ಹೋಲಿಸಿನೋಡಿ. ನಮ್ಮಲ್ಲಿರುವ ಯೋಜನೆಗಳನ್ನು ನೋಡಿ. ಬರೀ ಟಿವಿಯವರು ತೋರಿಸುವುದೇ ಪ್ರಪಂಚ ಅಲ್ಲಾ, ಅದು ಮಾತ್ರವೇ ಸರ್ಕಾರ ಅಲ್ಲಾ.

ಕಳೆದ ಐದು ವರ್ಷಗಳಿಂದ ಟಿವಿಗಳಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮಗಳೆಲ್ಲವನ್ನೂ ಗಮನಿಸಿ, ಒಂದೇ ಒಂದು ಚಾನೆಲ್ ನಲ್ಲಿ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಸಾರವಾಗಿದ್ದನ್ನೂ ತೋರಿಸಿ. ಟಿವಿ ಗಳಲ್ಲಿ ರಾಜಕೀಯ ಬಿಟ್ಟರೇ ಆಡಳಿತದ ಬಗೆಗೆ ಏನನ್ನೂ ತೋರಿಸುವುದಿಲ್ಲ. ಸರ್ಕಾರದ ಯೋಜನೆಯ ಬಗೆಗೆ ವಿರೋಧ ಪಕ್ಷದವರು ಮಾಡುವ ಟೀಕೆಗಳನ್ನು ತೋರಿಸುವ ನೀವು, ಸರ್ಕಾರವನ್ನೇ ಏಕೆ ಕೇಳುವುದಿಲ್ಲ. ಕೃಷಿ ಬಜೆಟ್ ನಡೆದರೇ ನೀವು ವಿರೋಧ ಪಕ್ಷದವರನ್ನು ಕೇಳುತ್ತೀರಾ? ಅದನ್ನೇ ತೆಗೆದುಕೊಂಡೂ ಹೋಗಿ ರೈತರ ಮಧ್ಯೆ ಕುಳಿತು ಚರ್ಚಿಸಿ. ರೈತ ಮುಖಂಡರನ್ನಲ್ಲ, ಹೆಗಲ ಮೇಲೆ ಹಸಿರು ಶಾಲು ಹೊದ್ದಿರುವವರೆಲ್ಲಾ ರೈತರಲ್ಲ ಗಮನವಿರಲಿ.

ಇಂಥಹ ಚಾನೆಲ್ ಗಳನ್ನು ನೋಡೀ ನೋಡಿ ಜನರೆಲ್ಲಾ ವಿರೋಧ ಪಕ್ಷದವರಂತಾಗಿದ್ದಾರೆ. ಅವರ ಜವಬ್ದಾರಿಗಳ ಬಗ್ಗೆ ಮಾತ್ರ ಅವರ‍್ಯಾರು ಮಾತನಾಡುವುದಿಲ್ಲ, ಗಮನ ಹರಿಸುವುದಿಲ್ಲ. ಫೇಸ್ ಬುಕ್ಕಿನಲ್ಲಿ ಸರ್ಕಾರದ ವಿರುದ್ದ ಹರಿಹಾಯ್ದಿರುವ ಎಲ್ಲರನ್ನೂ ಮಾತನಾಡಿಸೋಣ. ಅದರಲ್ಲಿ ಶೇ.೯೦ ಜನರು ಓಟು ಹಾಕಿರುವುದಿಲ್ಲ, ಕೇಳಿದರೇ ಯೋಗ್ಯ ಜನರಿಲ್ಲ ಎಂಬ ಉತ್ತರ. ಎದೆ ಮುಟ್ಟಿ ಅವರು ಹೇಳಲಿ ಅವರ ಜೀವನದಲ್ಲಿ ಲಂಚ ಕೊಟ್ಟಿಲ್ಲವೆಂದು ನಾನು ಅವರ ಮನೆಯಲ್ಲಿ ಗುಲಾಮನಾಗಿರುತ್ತೇನೆ. ರೇಷನ್ ಕಾರ್ಡಿಗೆ, ಗ್ಯಾಸಿಗೆ, ಅಷ್ಟೆಲ್ಲಾ ಏಕೆ ಮನೆಗೆ ಒಂದು ಛಾಪ ಕಾಗದ ತೆಗೆದುಕೊಳ್ಳಲು ಲಂಚ ಕೊಟ್ಟಿರುತ್ತಾರೆ. ಸಂಭಳ ಎರಡು ದಿನ ತಡವಾದರೇ ಅವರ ಕಂಪನಿಯ ಮುಖ್ಯಸ್ಥನ ಬಳಿಗೆ ಹೋಗಿರುತ್ತಾರೆ. ಮೂರ‍್ನಾಲ್ಕು ತಿಂಗಳು ಸಂಭಳ ಬಾರದಿದ್ದರೂ ಕೆಲಸ ಮಾಡುವ ಶಾಲ ಶಿಕ್ಷಕರ ಕಷ್ಟ ಇವರಿಗೆ ತಿಳಿದಿರುವುದಿಲ್ಲ. ಒಬ್ಬ ರಾಜಕಾರಣಿ ಆ ಮಟ್ಟಕ್ಕೆ ಬೆಳೆದು ಬರಲು ಅವನು ಪಟ್ಟಿರುವ ಕಷ್ಟ ಇವರಿಗೆ ತಿಳಿಯುವುದಿಲ್ಲ. ನಮ್ಮ ನೇರಕ್ಕೆ ನಮ್ಮನ್ನು ಆಳುವುದಕ್ಕೆ ಗಾಂಧಿಯೇ ಬೇಕು, ಆದರೇ ನಾವು ನಮ್ಮ ತಪ್ಪನ್ನು ತಿಳಿಯಲು ತಯಾರಿಲ್ಲ. ನಿಜವಾಗಿಯೂ ಓಟು ಹಾಕಿರುವ ಜನರು ತೆಪ್ಪಗಿದ್ದಾರೆ. ಏಕೆಂದರೇ ಅವರಿಗೆ ಗೊತ್ತು ಅವರ ಜವಬ್ದಾರಿ ಏನೆಂದು. ಫೇಸ್ ಬುಕ್ಕಿನಲ್ಲಿ ಬೊಬ್ಬೆ ಇಕ್ಕುವ ನೀವು, ಕಾನೂನು ರೀತಿ ಹೋರಾಟ ನಡೆಸಿ.

ನೀವುಗಳೇಕೆ, ಸಾರ್ವಜನಿಕ ಹಿತಾಸಕ್ತಿ ಹಾಕಬಾರದು. ನೀವೇಕೆ ಒಂದು ಕ್ರಾಂತಿಯನ್ನು ನಡೆಸಬಾರದು. ಆಫೀಸಿನಲ್ಲಿ ನೆಟ್ಟಗೆ ಆಫೀಸು ಕೆಲಸವನ್ನು ಮಾಡುವುದಿಲ್ಲ. ನಮ್ಮ ಜನರಿಗೆ ಒಂದು ತೆವಳು ಬಂದಿದೆ. ಎಲ್ಲವೂ ಮೆಷಿನ್ ರೀತಿ ನಡೆಯಬೇಕು. ಕೈ ಮುಂದಕ್ಕೆ ಬರಬೇಕು. ಮುಂಜಾನೆ ಎದ್ದೊಡನೆ ಮನೆ ಬಾಗಿಲಿಗೆ ಹಾಲು, ಕೈಗೆ ಕಾಫ್ಹಿ, ಟವೆಲ್, ಐರನ್ ಆಗಿರುವ ಬಟ್ಟೆ, ನೇರ ಆಫೀಸಿಗೆ, ಸಾಮಾನ್ಯ ಜನರ ಸಂಪರ್ಕವೇ ಇಲ್ಲ ಇವರಿಗೆ. ಇವರಿಗೆ ರೋಲ್ ಮಾಡೆಲ್ ಗಳಾಗಿ, ಮಾಧ್ಯಮದವರು. ಅವರು ಎಂಥೆಂಥ ರಾಜಕಾರಣಿಗಳಿಗೆ ಚೇಲಾಗಳಾಗಿ ಬಕೆಟ್ ಹಾಕಿ ಆ ಹುದ್ದೆಗೆ ಬಂದಿದ್ದಾರೆ, ಪ್ರಶಸ್ತಿಗಿಟ್ಟಿಸುತ್ತಿದ್ದಾರೆಂಬುದು ನಿಮಗೇಕೆ ಅರಿವಾಗುವುದಿಲ್ಲ. ನಾನು ಇಲ್ಲಿ ವಿದ್ಯೆಯನ್ನು ಮಾನದಂಡವಾಗಿಸುತ್ತಿಲ್ಲ, ಆದರೇ ಅದರ ಇತಿಮಿತಿಗಳನ್ನು ತಿಳಿಸುತ್ತಿದ್ದೇನೆ. ಐವತ್ತು ವರ್ಷದ ಹಿಂದೆ ಒಬ್ಬ ಎಸ್.ಎಸ್.ಎಲ್.ಸಿ ಮಾಡಿದರೇ ಅದಕ್ಕೆ ಅಷ್ಟೇ ಮಟ್ಟದ ಬೆಲೆ ಇರುತ್ತಿತ್ತು. ಆದರೀಗ ಹತ್ತನೇ ತರಗತಿ ಓದು ಯಾವುದಕ್ಕೂ ಪ್ರಯೋಜನವಿಲ್ಲ. ಹತ್ತು ವರ್ಷದಲ್ಲಿ ಆ ಹುಡುಗ ಏನನ್ನೂ ಕಲಿತಿರುವುದಿಲ್ಲ. ಕೇವಲ ಒಂದು ಪಧವಿ ಹಿಡಿದು ಬಂದು, ಇಡೀ ಜಗತ್ತನ್ನೇ ಜರಿಯುತ್ತಿರುವುದು ಮಾಧ್ಯಮ ಪ್ರತಿನಿಧಿಗಳು. ಕ್ರಿಕೇಟ್ ಆಟದ ಗಮ್ಮತ್ತೇ ಗೊತ್ತಿಲ್ಲದವನು ಕುಳಿತು ಹೇಳುತ್ತಾನೆ, ಮೂವತ್ತೊಂಬತ್ತನೇ ಓವರಿನಲ್ಲಿ ಒಂದು ಬಾಲ್ ಕಡಿಮೆಯಾದರೇ ಐವತ್ತನೇ ಓವರಿನಲ್ಲಿ ಹಾಕಿಸಬಹುದಿತ್ತು ಅಲ್ವಾ? ಎಂದು ಇಂಥ ಅವಿವೇಕಿಗಳು ಒಂದು ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಇವರುಗಳನ್ನು ನೀವು ನಮ್ಮ ಪ್ರತಿನಿಧಿಗಳು ಎನ್ನುತ್ತಿರಿ. ಸುದ್ದಿಗಾಗಿ ಮಂತ್ರಿಗಳ ಮುಖಕ್ಕೆ ಮಸಿ ಬಳಿಸುವ ಪತ್ರಕರ್ತ ನಿಮ್ಮ ಪ್ರತಿನಿಧಿ. ಸುದ್ದಿಗಾಗಿ ಬೆಂಕಿ ಹಾಕಿಸುವವನು ಸಮಾಜ ಉದ್ದಾರ ಮಾಡುವವನು ಅಲ್ವೇ?

ಮಾನ ಮರ್ಯಾದೆ ಇಲ್ಲದಿರುವವರು ಸ್ವಾಮಿ ಮಾಧ್ಯಮದವರು. ನ್ಯೂಸ್ ಓದುವಾಗ ಒಬ್ಬ ರಾಜ್ಯದ ಮುಖ್ಯಮಂತ್ರಿಯನ್ನಾ ಸದಾ ಎನ್ನುತ್ತಾರೆ ಅವರಿಗೆ ಮರ್ಯಾದೆ ಕೊಡಬೇಕೆನ್ನುವ ಸೌಜನ್ಯ ಬೇಡವೇ? ಯಡ್ಡೀ, ಕುಮಾರ, ಸಿದ್ದು, ಹೀಗೆ ಎಲ್ಲರನ್ನೂ ಏಕವಚನದಲ್ಲಿ ಪ್ರಸಾರ ಮಾಡುತ್ತೀರಾ ನೀವು. ಜನರಲ್ಲಿ ಆರೋಗ್ಯಕರ ಪರಿಸರವನ್ನು ಸೃಷ್ಟಿಸಲು ಎಂದಾದರೂ ಪ್ರಯತ್ನಿಸಿದ್ದೀರಾ? ಸಮಾಜದ ಏಳಿಗೆ ಅಥವಾ ಒಳಿತಿಗೆ ಪ್ರತಿಯೊಬ್ಬನ ಪಾತ್ರವಿದೆ. ಕೇವಲ ರಾಜಕಾರಣಿಗಳಲ್ಲ, ಅಧಿಕಾರಿಗಳಲ್ಲ, ಪೋಲಿಸರಲ್ಲ, ಮಾಧ್ಯಮದವರಲ್ಲ, ನಾವೂ ನೀವೂಗಳೂ ಹೌದು. ರಾಜ್ಯದ ೬ ಕೋಟಿ ಜನರು ಅವರ ಬದುಕನ್ನು ಅವರು ಕಟ್ಟಿಕೊಂಡು ರಾಜ್ಯದ ಒಳಿತಿಗೆ ತಮ್ಮದೇ ಸೇವೆಯನ್ನು ನೀಡುತ್ತಿದ್ದಾರೆ. ಉಳಿದ ಇಪ್ಪತ್ತು ಲಕ್ಷ ಜನರು, ರಾಜಕಾರಣದ ಹೆಸರಿನಲ್ಲಿ, ಮಾಧ್ಯಮದ ಹೆಸರಿನಲ್ಲಿ, ಸಮಾಜ ಸೇವೆಯ, ಸಮಾಜದ ಬಗ್ಗೆ ಕಾಳಜಿಯ ಹೆಸರಿನಲ್ಲಿ ಅವರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಅಥವಾ ಒಳ್ಳೆಯವರೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನೀವು ರಾತ್ರಿ ಉಂಡು ಮಲಗುವಾಗ ನಿಮಗೆ ನೆಮ್ಮದಿ ಸಿಕ್ಕರೇ ಸಾಕು, ನೆಮ್ಮದಿಯ ನಿದ್ದೆ ನಿಮಗೆ ಬಂದರೇ ಸಾಕು, ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ. ದೂರುವುದನ್ನು ನಿಲ್ಲಿಸಿ ಇಡೀ ಸಮಾಜವೇ ಒಂದು ಎಂಬುದನ್ನು ಒಪ್ಪಿಕೊಳ್ಳಿ.

01 ಮಾರ್ಚ್ 2012


ನನ್ನ ಮನಸ್ಸಿನೊಳಗಿರುವ ನಾಲ್ಕು ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಸಮಯ ಸಿಕ್ಕರೆ, ನಿಮಗೆ ನಾನು ಮಾತನಾಡುತ್ತಿರುವುದರಲ್ಲಿ ಅರ್ಥವಿದೆ ಎನಿಸಿದರೇ, ಅಥವಾ ತೀರಾ ತಪ್ಪಾಗಿ ಕಂಡರೇ ನನಗೆ ಸಲಹೆ ನೀಡಿ. ಚರ್ಚಿಸೋಣ. ನಮ್ಮ ಇಂದಿನ ಭಾರತದ ಅಥವಾ ಕರ್ನಾಟಕದ ಸಮಸ್ಯೆಗಳೇನು? ದಿನ ನಿತ್ಯ ನಮ್ಮ ಕಿವಿಯಲ್ಲಿ ಹರಿದಾಡುವ ಮಾತುಗಳನ್ನು ಸ್ವಲ್ಪ ಗಂಬೀರವಾಗಿ ಗಮನಿಸಿ. ನಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯಲ್ಲಿ ನೋಡಿ ನಮಗೆ ಅಂಥಹ ದೊಡ್ಡ ಸಮಸ್ಯೆಗಳಿವೆ ಎನಿಸುತ್ತಿಲ್ಲ, ಹತ್ತು ಹದಿನೈದು ವರ್ಷದ ಹಿಂದೆ ಇದ್ದಷ್ಟೂ ಸಮಸ್ಯೆಗಳು ನಮ್ಮನೆಯಲಿಲ್ಲ. ನನ್ನ ಅನೇಕ ಸ್ನೇಹಿತರ ಮನೆಯಲ್ಲಿಯೂ ಇಲ್ಲ. ಅಂದ ಮೇಲೆ ಸಮಾಜದಲ್ಲಿ ಸಮಸ್ಯೆಯಿದೆ ಎಂದು ಬೊಬ್ಬೆ ಹೊಡೆಯುತ್ತಿರುವುದು ಸುಳ್ಳಾ? ಮನೆಗೆ ಹೋದರೇ ಟಿವಿ ಹಾಕಿದ ಕೂಡಲೇ ಗಮನಿಸಿ, ಒಂದು ಗಂಟೆ ಸತತವಾಗಿ ನ್ಯೂಸ್ ಚಾನೆಲ್ ಗಳನ್ನು ನೋಡಿ, ಅಲ್ಲಿಂದ ನಿಮ್ಮ ಮನಸ್ಸಿಗೆ ಮುದ ನೀಡುವ ಅಥವಾ ಬೇಸರವಾಗದ ಒಂದೇ ಒಂದು ವಿಷಯವನ್ನು ಅವರು ಪ್ರಸಾರ ಮಾಡುವುದಿಲ್ಲ. ರಾಜಕೀಯ ದೊಂಬರಾಟ, ದ್ವೇಷ, ಹೋರಾಟ, ಕೊಲೆ, ಅತ್ಯಾಚಾರ, ಲಂಚ, ಸಿನೆಮಾ ತಾರೆಯರ ಸಂಭಂಧಗಳು, ಮುನಿಸು, ಕೇಸು, ಇಂಥವುಗಳೇ ಆಗಿರುತ್ತವೆ. ನಾನು ಇದನ್ನು ಸ್ವಲ್ಪ ಸಂಖ್ಯೆಯ ರೂಪದಲ್ಲಿಡುತ್ತೇನೆ.
ಕರ್ನಾಟಕದ ಜನಸಂಖ್ಯೆ (6,11,30,704) ಆರು ಕೋಟಿ ದಾಟಿದೆ, ಸುಮಾರು ತೊಂಬತ್ತು ಸಾವಿರ ಹಳ್ಳಿಗಳಿವೆ. ಊರಿಗೊಬ್ಬ ರಾಜಕಾರಣಿ ಎಂದರೂ ಒಂದು ಲಕ್ಷ ರಾಜಕಾರಣಿಗಳಿದ್ದಾರೆಂಬುದು ನನ್ನ ನಂಬಿಕೆ. ಆರು ಕೋಟಿಯಲ್ಲಿ ಶೇಕಡವಾರು ವಿಂಗಡಿಸಿದರೇ, 0.1% ಆಗುತ್ತದೆ. ನನ್ನೂರು ಬಾನುಗೊಂದಿಯಲ್ಲಿ ನಾನು ಹುಟ್ಟಿದಾಗಿನಿಂದ ಇಲ್ಲಿಯ ತನಕವೂ ಒಂದೇ ಒಂದು ಕೊಲೆಯನ್ನು ನೋಡಿಲ್ಲ, ಕೇಳಿಲ್ಲ. ಹಾದಿಯಲ್ಲಿ ಹೋಗುತ್ತಿದ್ದ ಅಪರಿಚಿತನಿಗೆ ಥಳಿಸಿ ದೋಚಿರುವುದನ್ನು ಕೇಳಿಲ್ಲ. ಇದು ಕೇವಲ ನನ್ನೂರಿನ ಕಥೆಯಲ್ಲ, ನಮ್ಮೆಲ್ಲರ ಊರುಗಳಲ್ಲಿಯೂ ಅಷ್ಟೇ. ಶೇಕಡ ೯೯.೯೯ ರಷ್ಟು ಜನರು ನೆಮ್ಮದಿಯಿಂದ ಅವರವರ ಜೀವನ ನಡೆಸುತ್ತಿದ್ದಾರೆ. ನಂತರದ ವಿಷಯ ಮಾಧ್ಯಮದವರು ತೋರಿಸುವುದು, ಕರ್ನಾಟಕದಲ್ಲಿರುವುದು ಇಪ್ಪತ್ತು ಚಾನೆಲ್ ಎಂದರೂ ಸುಮಾರು ಎರಡು ಸಾವಿರ ಮಾಧ್ಯಮದವರಿರಬಹುದೆಂಬುದು ನನ್ನ ಲೆಕ್ಕಚಾರ. ಈ ಎರಡು ಸಾವಿರ ಜನರು ಇಡೀ ರಾಜ್ಯದ ಆರು ಕೋಟಿ ಜನರ ಉಸಿರು ಎನ್ನುವ ಮಟ್ಟಕ್ಕೆ ಮಾತನಾಡುವುದು ಎಷ್ಟು ಸರಿ. ನನ್ನ ಒಬ್ಬನ ಜೀವನದಲ್ಲಿ ಇದುವರೆಗೆ ಹೆಚ್ಚೆಂದರೆ ಎರಡು ಸಾವಿರ ಜನರ ಜೊತೆ ಮಾತನಾಡಿರಬಹುದು, ಅತಿ ಹೆಚ್ಚು ಎಂದರೂ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಪಾಠ ಮಾಡುವ ಮೇಷ್ಟ್ರು ಬಿಟ್ಟರೆ ಮತ್ತಾರು ಒಂದು ಲಕ್ಷ ಜನರ ಜೊತೆಗೆ ಕೂಡ ಮಾತನಾಡಿರುವುದಿಲ್ಲ. ಹಾಗಿದ್ದ ಮೇಲೆ ಇಡೀ ಸಮಾಜವೇ ಹೀಗೆ ಎನ್ನುವುದು ಎಷ್ಟು ಸರಿ? ಅನೈತಿಕ ಸಂಭಂಧಗಳ ಬಗೆಗೆ ನಾಗರೀಕ ಸಮಾಜ ಬಾರಿ ತಲೆ ಕೆಡಿಸಿಕೊಳ್ಳುತ್ತದೆ, ನಾನು ನನ್ನೂರಿನಲ್ಲಿ ಕಂಡಿರುವ ಮಟ್ಟಕ್ಕೆ ಹೇಳುವುದಾದರೇ ಅದನ್ನೇಲ್ಲ ಅಲ್ಲಿನ ಜನರು ಸಮಸ್ಯೆ ಅಂಥಾಗಲೀ, ಕೆಟ್ಟದ್ದು ಅಂತಾಗಲೀ, ದ್ರೋಹವೆಂದಾಗಲೀ ತಿಳಿದೇ ಇರಲಿಲ್ಲ. ಅವರೇನೂ ಮಾನ ಮರ್ಯಾದೆ ಬಿಟ್ಟು ನಿಂತಿರುವವರಾ? ದಿನಕ್ಕೊಂದು ಎಪಿಸೋಡ್ ಹಿಡಿದುಕೊಂಡು ಬರುವುದಕ್ಕಾಗಿ ನೀವು ಈ ರೀತಿ ವರ್ತಿಸಿವುದು ಎಷ್ಟು ಸರಿ. ಜನರ ಮನಸ್ಸಿನಲ್ಲಿ ಕ್ರೌರ್ಯ ಇರುವುದಿಲ್ಲ ಅದು ಬರುತ್ತಿರುವುದು, ಈ ಮಾಧ್ಯಮಗಳಿಂದ ಅಷ್ಟೇ. ಒಂದೇ ಒಂದು ಚಾನೆಲ್ ಕೂಡ ಸಮಾಜದ ಏಳಿಗೆಗೆ ಅಂಥ ಕಾರ್ಯಕ್ರಮಗಳನ್ನು ತೋರಿಸುವುದಿಲ್ಲ.
ಹತ್ತು ಹದಿನೈದು ವಿವಿಗಳಿವೆ, ಆ ವಿವಿಗಳಲ್ಲಿ ನಡೆಯುತ್ತಿರುವ ಸಂಶೋಧನೆಯ ಬಗ್ಗೆ ಜನರಿಗೆ ಯಾಕೆ ತಿಳಿಸಿಕೊಡುವುದಿಲ್ಲ. ಒಂದು ಕಾಲೇಜಿನಲ್ಲಿ ನಡೆಯುವ ಫ್ಯಾಷನ್ ಶೋ ತೊರಿಸುವ ಚಾನೆಲ್ ಗಳು, ಅಲ್ಲಿನ ಲೈಂಗಿಕ ದೌರ್ಜನ್ಯ ತೋರಿಸುವ ನೀವು ಅವರ ಸಾಧನೆಗಳನ್ನು ತೋರಿಸಿ. ಲಂಚದ ವಿಷಯಕ್ಕೆ ಬರೋಣ, ನಾನು ಜಾತಿ ಪ್ರಮಾಣ ಪತ್ರ ಪಡೆಯುವುದಕ್ಕೆ ದುಡ್ಡು ಕೊಟ್ಟಿದ್ದೇನೆ, ನನಗೆ ಅದು ಸಮಸ್ಯೆ ಅನಿಸಿಲ್ಲ, ಪಿಡುಗು ಅನಿಸಿಲ್ಲ. ನನ್ನೂರಿನ ಎಲ್ಲರೂ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ ಅವರ‍್ಯಾರು ಅದನ್ನು ಪಿಡುಗು ಎಂದು ತಿಳಿದಿಲ್ಲ, ಜನರೇನು ಹುಚ್ಚರೇ? ಸಾಲ ಮಾಡಿ ಲಂಚ ಕೊಡುವುದಕ್ಕೆ? ಜನರು ದಡ್ಡರು ಅವರಿಗೆ ಅವರ ಹಕ್ಕುಗಳ ಬಗ್ಗೆ ತಿಳಿದಿಲ್ಲ, ಅವರನ್ನು ಜಾಗೃತಗೊಳಿಸಬೇಕೆಂಬುದು ಬುದ್ದಿವಂತ ಸಮಾಜದ ಆಜನ್ಮ ವಾದ. ನೇರ ವಿಷಯವನ್ನೇ ಗಮನಿಸೋಣ, ನಾನು ನೀವು ಸೇರಿದಂತೆ ಅದೆಷ್ಟು ಜನರು ಸರ್ಕಾರದ ಮೇಲೆ ಅವಲಂಬಿತರಾಗಿದ್ದೇವೆ. ನನ್ನ ಇಡೀ ಜೀವನದಲ್ಲಿ ಎರಡೇ ಎರಡು ಬಾರಿ ನಮ್ಮ ಕ್ಷೇತ್ರದ ಶಾಸಕನನ್ನು ಭೇಟಿಯಾಗಿರುವುದು. ಪ್ರತಿ ಚುನಾವಣೆಯಲ್ಲಿಯೂ ಓಟು ಹಾಕಿದ್ದೇನೆ. ಆದರೇ ಅವರಿಂದ ನನಗೆ ಕೆಲಸ ಆಗಬೇಕಿರುವುದು ಏನೂ ಇಲ್ಲ. ಇದರಂತೆಯೇ ನಮ್ಮೂರಿನ ಶೇಕಡ ೯೫ ಜನರು ಅವರನ್ನು ಭೇಟಿಯಾಗಿಲ್ಲ, ಆಗುವುದೂ ಇಲ್ಲ. ಅಷ್ಟೂ ಜನರು ದುಡಿಯುತ್ತಿದ್ದಾರೆ, ಮನೆಗೆ ಕನಿಷ್ಟವೆಂದರೂ ಐದು ಲಕ್ಷಗಳನ್ನು ದುಡಿಯುತ್ತಾರೆ. ಸರಿ ಸುಮಾರು ಮೂರು ಕೋಟಿಯಷ್ಟು ಕುಟುಂಬಗಳಿವೆ ಅವರೆಲ್ಲರೂ ಸ್ವಂತ ದುಡಿಮೆಯಿಂದಲೇ ಬದುಕುತ್ತಿದ್ದಾರೆ. ಅವರ‍್ಯಾರು ಸರ್ಕಾರ ಬಂದು ನಮ್ಮ ಮನೆಯನ್ನು ಉದ್ದಾರ ಮಾಡಲೆಂದು ಕೇಳುತ್ತಿಲ್ಲ. ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು, ಜನರಿಗೆ ಅವರ ಕರ್ತವ್ಯದ ಅರಿವಿದೆ. ಮಾಧ್ಯಮದವರು ಜನರಿಗೆ ಅದು ಬೇಕು ಇದು ಬೇಕೆಂದು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ಮಾಧ್ಯಮದವರ ದೃಷ್ಟಿಯಲ್ಲಿ ಜನತೆ ಮನೆ ಬಿಟ್ಟು, ಅವರ ಜವಬ್ದಾರಿಯುತ ಕೆಲಸಗಳನ್ನು ಬಿಟ್ಟು ಬೀದಿಗಿಳಿಯಬೇಕು, ಜನರು ನೆಮ್ಮದಿಯಿಂದಿರುವುದನ್ನು ಇವರು ಇಷ್ಟಪಡುವುದಿಲ್ಲ, ಅದರಿಂದ ಸುದ್ದಿ ಸಿಗುವುದಿಲ್ಲ.
ಅದರಂತೆಯೇ ರಾಜಕಾರಣಿಗಳು ಅಷ್ಟೇ ಸರ್ಕಾರ ಹಾಕುವ ಯೋಜನೆಗಳಿಂದ ಎಲ್ಲರ ಬದುಕನ್ನು ಹಸನಾಗಿಸುತ್ತೇವೆಂಬ ಭ್ರಮೆಯನ್ನು ಬಿಡಬೇಕು. ಅದೆಷ್ಟು ಜನರು ರಾಜಕಾರಣಿಗಳನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ ಹೇಳಿ? ನಾನು ನೀವು ಇವರನ್ನು ಗಂಬೀರವಾಗಿ ಪರಿಗಣಿಸಿದ್ದೇವಾ? ಅಥವಾ ನಮ್ಮ ಅಕ್ಕಪಕ್ಕದ ಮನೆಯರು ಪರಿಗಣಿಸಿದ್ದಾರಾ ಇಲ್ಲ ತಾನೇ? ಮತ್ತೇಕೆ ಮಾಧ್ಯಮದವರು ಹೀಗೆ ಬೂಟಾಟಿಕೆ ನಡೆಸುವುದು. ನಮ್ಮನ್ನು ದಾರಿ ತಪ್ಪಿಸಿರುವುದು ಈ ದರಿದ್ರ ಮಾಧ್ಯಮದವರು ಮಾತ್ರ. ಬ್ರಿಟೀಷರು ಭಾರತಕ್ಕೆ ಬಂದಾಗ ಅವರಿಗೆ ಇದೆಲ್ಲ ಕೆಟ್ಟದ್ದಾಗಿ ಕಂಡೀತು. ಯಾಕೆಂದರೇ ಭಾರತಕ್ಕೆ ಅವರು ಹೊಸಬರು ನಮ್ಮ ಜನ ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆಂಬುದನ್ನು ಅವರಿಂದ ಅರ್ಥ ಮಾಡಿಕೊಳ್ಳಲಾಗಲಿಲ್ಲ ಆದ್ದರಿಂದ ಇಲ್ಲಿರುವುದೆಲ್ಲ ಮೂಢನಂಬಿಕೆ ಎಂದರು. ಅದರಂತೆಯೇ ಸ್ವಾತಂತ್ರ್ಯ ಬಂದಮೇಲೇ ನಮ್ಮ ಜನ ನಾಯಕರೆನಿಸಿಕೊಂಡವರು, ನಮ್ಮ ದೇಶವನ್ನು ಬ್ರಿಟೀಷರು ಕೊಳ್ಳೆಹೊಡೆದು ಹೋಗಿದ್ದಾರೆ ಇದನ್ನು ನಾವೇ ಉದ್ದಾರ ಮಾಡಬೇಕು, ನಾವೆಲ್ಲ ಅವತಾರ ಪುರುಷರು ಎಂಬ ಭ್ರಮೆಯಿಂದ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರು. ಮುಂದುವರೆಯಬೇಕು, ಉದ್ದಾರ, ಅಬಿವೃದ್ದಿಮಾಡಬೇಕು, ಭಾರತವನ್ನು ಅಮೇರಿಕಾದಂತೆ ಮಾಡಬೇಕೆಂಬುದು ಇವರ ಆಶಯವಾಗಿತ್ತು. ಭಾರತವನ್ನು ಭಾರತವನ್ನಾಗಿರಲು ಬಿಡಿ, ಮುಠಾಳ ದೊರೆಗಳು ಇವರು, ನಾನು ನಾನಾಗಿಯೇ ಇರಬೇಕೆ ಹೊರತು, ನಾನು ಬೇರೆಯವನಾಗಲು ಸಾಧ್ಯವಿಲ್ಲ, ಕಾಗೆಯನ್ನು ಕೋಗಿಲೆ ಮಾಡಬೇಕೆಂದರೇ? ಈಡೀ ಭೂಮಂಡಲವೆಲ್ಲಾ ಬರೀ ಕೋಗಿಲೆಗಳಿಂದಲೇ ತುಂಬಿದ್ದರೇ ಅಲ್ಲಿ ವೈವಿದ್ಯ ಇರುತ್ತಿತ್ತಾ? ಹೊಸ ನಿಟ್ಟಿನಲ್ಲಿ ಅರ್ಥ ಮಾಡಿಕೊಳ್ಳೋಣ. ಜನರು ಏನನ್ನು ಬಯಸುತ್ತಾರೆಂಬುದನ್ನು ಜನರ ಮಧ್ಯೆ ಇದ್ದು ಅರಿತುಕೊಳ್ಳಬೇಕೇ ಹೊರತು ಹೊರಗಿನಿಂದಲ್ಲ.
ನನ್ನ ಅಳತೆಯ ಅಂಗಿಯನ್ನು ನಾನೇ ತೊಡಬೇಕು, ಇಡೀ ಸಮಾಜಕ್ಕೆ ಒಂದೇ ಬಗೆಯ ಅಂಗಿ ಹೊಂದುವುದಿಲ್ಲ. ಒಬ್ಬೊನ ಜೀವನ ಶೈಲಿ ಬೇರೆ ಇರುತ್ತದೆ. ಯಾರೂ ದಡ್ಡರಲ್ಲ, ಯಾರೂ ಜವಬ್ದಾರಿಯಿಂದ ದೂರ ಸರಿದಿಲ್ಲ. ಬುದ್ದಿವಂತರೆಂದು ಬಿಂಬಿಸಿಕೊಂಡಿರುವ ಒಂದು ಪರ್ಸೆಂಟ್ ಜನರನ್ನು ೯೯ ಪರ್ಸೆಂಟ್ ಜನರು ಸೀರಿಯಸ್ಸಾಗಿ ಸ್ವೀಕರಿಸಿಲ್ಲ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...