19 ಜುಲೈ 2012

ಶ್ರಾವಣ ಮಾಸಕ್ಕೆ ಸುಸ್ವಾಗತ....ಬಾಲ್ಯದೆರಡು ಪುಟಗಳು!!!

ಶ್ರಾವಣ ಮಾಸಕ್ಕೆ ಸುಸ್ವಾಗತ....ಎಂದು ಬರೆದು ಫೇಸ್ ಬುಕ್ಕಿಗೆ ಹಾಕಲು ಹೋದೆ. ತಕ್ಷಣ ನನ್ನ ಬಾಲ್ಯದ ದಿನಗಳು ನೆನಪಾದವು. ಶ್ರಾವಣ ಆಚರಿಸುತ್ತಿದ್ದ ದಿನಗಳು. ನನಗೆ ನಗರದಲ್ಲಿ ಹೇಗೆ ಆಚರಿಸುತ್ತಾರೆಂಬುದರ ಅರಿವಿಲ್ಲ. ಆದರೇ, ನನ್ನೂರಿನಲ್ಲಿ ನನ್ನ ಬಾಲ್ಯದಲ್ಲಿ ಆಚರಿಸುತ್ತಿದ್ದ ಶ್ರಾವಣವಂತು ಬಹಳ ಚೆನ್ನಾಗಿ ನೆನಪಿದೆ. ಪ್ರತಿ ವರ್ಷವೂ ನಾಲ್ಕು ಶ್ರಾವಣ ಶನಿವಾರ ಮತ್ತು ನಾಲ್ಕು ಶ್ರಾವಣ ಸೋಮವಾರ ಬರುತ್ತದೆ. ನನ್ನೂರಿನ ಈ ಕಥೆಗಳು ಕೆಲವರಿಗೆ ಹೊಸದಾಗಿ ಕಾಣಿಸಬಹುದು. ಹಿಂದಿನ ದಿನಗಳಲ್ಲಿ ವಾರಕ್ಕೊಮ್ಮೆ ಮಾತ್ರ ಸ್ನಾನ ಮಾಡುತ್ತಿದ್ದೆವು. ನಮ್ಮ ಮನೆಯಲ್ಲಿ ನಮ್ಮಪ್ಪ ಸರ್ಕಾರಿ ಕೆಲಸದಲ್ಲಿದ್ದ ಕಾರಣ, ವಾರದಲ್ಲಿ ಎರಡು ದಿನ ರೂಢಿಯಾಗಿತ್ತು. ಶನಿವಾರ ನಮ್ಮ ಮನೆ ದೇವರ ವಾರವಾಗಿದ್ದು, ಬುಧವಾರ ಲಕ್ಷ್ಮೀ ದೇವಿಯ ವಾರವಾಗಿತ್ತು. ಗಂಡು ಮತ್ತು ಹೆಣ್ಣು ದೇವರಿಗೆ ಸಮಪಾಲು. ನಾವು ಮೊದಲಿದ್ದ ಮನೆ ಬಹಳ ಇಕ್ಕಟ್ಟಿನದ್ದು, ಚಿಕ್ಕ ಮನೆ. ಆ ದಿನಗಳಲ್ಲಿ, ಸೌದೆಗೆ ಬಹಳ ಕಷ್ಟವಿತ್ತು. ನನಗೆ ನೆನಪಿರುವ ಹಾಗೆ, ನಾನು ಅಮ್ಮ ಅದೆಷ್ಟೋ ದಿನ ಬೆರಣಿ ಎತ್ತಿದ್ದೀವಿ, ಊರಿನ ಪಕ್ಕದಲ್ಲಿಯೇ ಇದ್ದ ಗೋಮಾಳ, ಹೊಂಗೆ ತೋಪಿಗೆ ಹೋಗಿ, ಸಣ್ಣ ಸಣ್ಣ ಪುರುಳೆ (ಸೌದೆ ಕಡ್ಡಿ) ಗಳನ್ನು ಆಯ್ದು ತಂದಿದ್ದೇವೆ. ಅದನ್ನೆಲ್ಲಾ ನೆನಪು ಮಾಡಿಕೊಂಡರೇ ನಿಜಕ್ಕೂ ಕಣ್ಣು ತೇವವಾಗುತ್ತದೆ. ಒಲೆಗೆ ಬೆಂಕಿ ಹಾಕುವುದು ದೊಡ್ಡ ಕೆಲಸವಾಗುತ್ತಿತ್ತು, ಹೆಚ್ಚಿಗೆ ಸೀಮೆ ಎಣ್ಣೆ ಹಾಕುವಂತಿರಲಿಲ್ಲ, ಕೊಡುತ್ತಿದ್ದದ್ದು ಮೂರು ಲೀಟರ್, ಅದರಲ್ಲಿ ಅಡುಗೆಗೂ ಬೇಕಿತ್ತು.
ಬಹಳ ವಿಚಿತ್ರವೆನಿಸುತ್ತದೆ, ಸರ್ಕಾರದ ರೀತಿ ನೀತಿಗಳು. ನಮ್ಮಪ್ಪ ಸರ್ಕಾರಿ ಕೆಲಸದಲ್ಲಿದ್ದ ಕಾರಣ ನಮಗೆ ಹಸಿರು ಕಾರ್ಡ್ ಇರಲಿಲ್ಲ. ಈಗ ಬಿಪಿಎಲ್ ಅನ್ನುವುವು ಆ ದಿನಗಳಲ್ಲಿ ಹಸಿರು ಕಾರ್ಡ್, ಕೇಸರಿ ಕಾರ್ಡ್. ನಮ್ಮ ಮನೆಗೆ ಕೇಸರಿ ಕಾರ್ಡ್ ಕೊಟ್ಟಿದ್ದರು. ನಾವು ಮುಂದುವರೆದವರೆಂಬುದು ಅವರ ತಿರ್ಮಾನ. ನಮ್ಮ ಮನೆಯಲ್ಲಿ ಬಡತನ ಹಾಸು ಹೊಕ್ಕಿತ್ತು. ನಮ್ಮೂರಿನಲ್ಲಿ ಅದೆಷ್ಟೊ ಜನರಿಗೆ ಹತ್ತು ಇಪ್ಪತ್ತು ಎಕರೆ ಜಮೀನು ಇದ್ದರೂ, ಅವರೆಲ್ಲಾ ಹಸಿರು ಕಾರ್ಡ್ ಪಡೆದಿದ್ದರು. ಅವರಿಗೆ ಮೂರು ರೂಪಾಯಿಗೆ ಒಂದು ಲೀಟರ್ ಸೀಮೆ ಎಣ್ಣೆ, ನಮಗೆ ಏಳು ರೂಪಾಯಿ. ಮೊದಲ ಆದ್ಯತೆ ಹಸಿರು ಕಾರ್ಡಿದ್ದವರಿಗೆ, ನಮಗೆ ಕೊಡಲೇ ಬೇಕೆಂಬ ಕಡ್ಡಾಯವೂ ಇಲ್ಲ. ಒಂದೊಂದು ದಿನ ನಮ್ಮಮ್ಮ ಪಕ್ಕದ ಮನೆಯವರ ಕಾರ್ಡ್ ಗಳನ್ನೆಲ್ಲಾ ಕೊಡಿಸುತ್ತಿದ್ದರು. ನಾನು ಸೊಸೈಟಿಗೆ ಹೋದರೇ, ಅವನು ತರವಾರಿ ಕಾನೂನು ಮಾಡತೊಡಗಿದ. ಒಬ್ಬರಿಗೆ ಒಂದು ಕಾರ್ಡಿಗೆ ಮಾತ್ರ ಕೊಡುವುದು, ಕಾರ್ಡ್ ಇರುವ ಮನೆಯವರೇ ಬರಬೇಕು, ಹೀಗೆ ಏನೆಲ್ಲಾ ಕಾನೂನುಗಳು. ಸತ್ಯವಾಗಿಯೂ ಹೇಳುತ್ತೇನೆ, ಬಡವರು ಬದುಕಲು ಯೋಗ್ಯವಲ್ಲದ ಸಮಾಜ ಮತ್ತು ದೇಶ ಭಾರತ. ಬೇರೆ ದೇಶದಲ್ಲಿ ಹೇಗಿದೆಯೆಂಬುದು ಗೊತ್ತಿಲ್ಲ, ಆದರೇ ನಮ್ಮಲ್ಲಿ ಮಾತ್ರ ಬಹಳ ಕಷ್ಟ. ಅವರಿವರನ್ನು ಗೋಗರಿದುಕೊಂಡು, ಅವರನ್ನು ಕರೆದುಕೊಂಡು ಹೋಗಿ, ಸಾಲಿನಲ್ಲಿ ನಿಂತು ಅಂತೂ ಇಂತೂ ಸೀಮೆ ಎಣ್ಣೆ ತರುತ್ತಿದ್ದೆ. ಕೆಲವರ ಮನೆಗಳಲ್ಲಿ ಕರೆಂಟ್ ಇರಲಿಲ್ಲ, ಪಾಪ ಅವರು ದೀಪದಿಂದಲೇ ಜೀವನ ಸಾಗಿಸಬೇಕಿತ್ತು, ಸೀಮೆ ಎಣ್ಣೆ ಇಲ್ಲದೇ ಅದೆಷ್ಟೋ ಮನೆಯವರ ಮಕ್ಕಳು ಓದುತ್ತಿರಲಿಲ್ಲ, ನನ್ನ ಕೆಲವು ಸ್ನೇಹಿತರು ಬೇರೆಯವರ ಮನೆಗೆ ಹೋಗಿ ಹೋಂವರ್ಕ್ ಮಾಡುತ್ತಿದ್ದ ದಿನವೂ ಇದೆ. ವಿಷಯಕ್ಕೆ ಬರೋಣ.
ಆಗ ಕಷ್ಟಪಟ್ಟು ಕಣ್ಣೀರು ಸುರಿಸಿ ಒಲೆ ಉರಿಸುತ್ತಿದ್ದೆ. ನೀರು ಹಿಡಿಯುವ ಕಷ್ಟವನ್ನು ನಾನು ಹಿಂದಿನ ಬ್ಲಾಗಿನಲ್ಲಿ ಬರೆದಿದ್ದೆ, ಆದ್ದರಿಂದ ನೀರಿನ ಸಮಸ್ಯೆಯ ಬಗ್ಗೆ ಇಲ್ಲಿ ಮಾತನಾಡೋದು ಬೇಡ. ಕೆಲವು ಮನೆಯವರಿಗೆ ವಾರದಲ್ಲಿ ಒಮ್ಮೆಯೇ ಸ್ನಾನದ ಭಾಗ್ಯ. ನಮ್ಮೂರಿನಲ್ಲಿ ಮಡಕೆ ತೆಗೆಯುವುದು ಅಥವಾ ಸೂತಕ ತೆಗೆಯುವುದು ಅನ್ನೋ ಒಂದು ಸಂಪ್ರದಾಯವಿದೆ. ಇದು ಎಲ್ಲೆಡೆಯಲ್ಲಿಯೂ ಸಾಮಾನ್ಯವಾಗಿದೆ. ವರ್ಷದಲ್ಲಿ ಯುಗಾದಿಗೆ, ಶ್ರಾವಣಕ್ಕೆ ಮತ್ತು ಆಯುಧಪೂಜೆಗೆ ಸೂತಕ ತೆಗೆಯುವುದು ವಾಡಿಕೆ. ಕೆಲವೊಮ್ಮೆ ಹತ್ತಿರದ ಸಂಭಂಧಿಗಳು ಸತ್ತರೆ, ಹೆತ್ತರೆ ಸೂತಕ ತೆಗೆಯುವುದು ಉಂಟು. ಸೂತಕ ತೆಗೆಯುವ ಸಂಧರ್ಭದಲ್ಲಿ ಮನೆಯಲ್ಲಿರುವ ಎಲ್ಲಾ ಪಾತ್ರೆ ಪಗಡೆಗಳನ್ನು ತೊಳೆಯುತ್ತಿದ್ದರು. ಶ್ರಾವಣ ಶುರುವಾಗುವ ಮುನ್ನವೇ ನಮ್ಮಮ್ಮ ನಿರ್ಧರಿಸುತ್ತಿದ್ದರು, ಯಾವ ವಾರ ಮಾಡುವುದೆಂದು. ನಾಲ್ಕು ವಾರ ಶ್ರಾವಣವಿದ್ದರೂ, ಯಾವುದಾದರು ಒಂದು ದಿನ ಮಾತ್ರ ಮಾಡಬೇಕಿತ್ತು. ಅದಾದ ಮೇಲೆ ಮನೆಯಲ್ಲಿ ಧೂಳು ಹೊಡೆಯುವುದು, ತೊಳೆಯುವುದು, ಬಣ್ಣ ಬಳಿಯುವುದು ನಡೆಯುತ್ತಿತ್ತು. ನಮ್ಮ ಮನೆ ಚಿಕ್ಕದ್ದಾದ್ದರಿಂದ ಮನೆಯ ಅರ್ಧ ಪಾತ್ರೆಗಳು ಅಟ್ಟದ ಮೇಲಿರುತ್ತಿದ್ದವು. ನಮ್ಮಮ್ಮನಿಗೆ ಪಾತ್ರೆ ತೆಗೆದುಕೊಳ್ಳುವುದೆಂದರೇ ಎಲ್ಲಿಲ್ಲದ ಅಕ್ಕರೆ. ನಾನು ಬಹಳ ಮನೆಗಳಲ್ಲಿ ನೋಡಿದ್ದೇನೆ, ಹೆಂಗಸರು ಅದೆಷ್ಟು ಪಾತ್ರೆ ಕೊಳ್ಳುತ್ತಾರೆಂದರೇ ಅಚ್ಚರಿಯಾಗುತ್ತದೆ. ಆದರೇ, ಅದ್ಯಾವುದನ್ನು ದಿನ ನಿತ್ಯವೂ ಬಳಸುವುದಿಲ್ಲ. ನಮ್ಮ ಮನೆಯಲ್ಲಿಯೇ ಹೇಳುವುದಾದರೇ, ಕನಿಷ್ಟವೆಂದರೂ ಮೂವತ್ತು ತಟ್ಟೆಗಳು, ಬೇರೆ ಬೇರೆ ಗಾತ್ರದ ಲೋಟಗಳಿವೆ. ಆದರೇ, ನಾವು ಊಟ ಮಾಡಲು ಕೊಡುವ ತಟ್ಟೆ ಬಹಳ ಹಳೆಯವು, ಚಿಕ್ಕವು. ಕುಡಿಯುವ ಲೋಟಗಳು ಅಷ್ಟೇ, ಎಲ್ಲವೂ ಅಟ್ಟದ ಮೇಲೆ ಅಧಿಕಾರ ನಡೆಸುತ್ತಿವೆ. ವರ್ಷಕ್ಕೊಮ್ಮೆ ಕೆಳಕ್ಕೆ ಇಳಿಸುವುದು ಸ್ನಾನ ಮಾಡಿಸಿ ಮಲಗಿಸುವುದು.
ಆ ದಿನಗಳಲ್ಲಿ ಅಟ್ಟದ ಮೇಲೆ ಹತ್ತಿ ಎಲ್ಲವನ್ನೂ ಇಳಿಸುವುದು, ತೊಳೆಯುವುದು ಮತ್ತೆ ಅಲ್ಲಿಗೇ ಜೊಡಿಸುವುದು ನನ್ನ ಕೆಲಸ. ಸುಣ್ಣ ಬಳಿಯುವುದಕ್ಕೆ ನಿಲ್ಲುತ್ತಿದ್ದೆ, ಆದರೇ ಗೆರೆಗೆರೆ ಬಳಿಯುತ್ತೀಯಾ ಎಂದು ಅಮ್ಮನೇ ಬಳಿಯುತ್ತಿದ್ದರು. ಸುಣ್ಣ ಬಳಿಯುವಾಗ, ಏಣಿಯನ್ನು ಇಡಿದು ನಿಲ್ಲಬೇಕಿತ್ತು. ಮತ್ತೆ ಒಂದು ಕೈಯಲ್ಲಿ ಸುಣ್ಣದ ಡಬ್ಬವನ್ನು ಎತ್ತಿ ಕೊಡಬೇಕಿತ್ತು. ಅಮ್ಮಾ, ಏಣಿಯ ಮೇಲೆ ನಿಂತು, ಬಳಿಯುತ್ತಿದ್ದರು. ಸ್ವಲ್ಪ ಆಚೆ ಈಚೆ ಆದರೇ ಅಮ್ಮನಿಂದ ಸಹಸ್ರನಾಮವಾಗುತ್ತಿತ್ತು. ಅದೆಷ್ಟು ಕಷ್ಟಪಡುತ್ತಿದರು ನಮ್ಮಮ್ಮ ಎನಿಸುತ್ತದೆ. ಎಲ್ಲ ಪಾತ್ರೆಯನ್ನು ತೊಳೆದ ಮೇಲೆ, ಬಿಸಿಲಲ್ಲಿ ಒಣಗಿಸಿ, ಮಡಿ ಬಟ್ಟೆಯಿಂದ ಒರೆಸಿ, ಕುಕ್ಕೆಯಲ್ಲಿ ತುಂಬಿ ಮತ್ತೆ ಅಟ್ಟದ ಮೇಲೆ ಇರಿಸುತ್ತಿದ್ದರು. ನಮ್ಮದು ಇದ್ದದ್ದು ಅಡುಗೆ ಮನೆ, ನಡುಮನೆ ಮತ್ತು ಬಚ್ಚಲು ಮನೆ ಮಾತ್ರ. ನಡು ಮನೆ ಕ್ಲೀನು ಮಾಡುವಾಗ ನಮ್ಮ ಬಿಡಾರ ಅಡುಗೆ ಮನೆಗೆ, ಅಡುಗೆ ಮನೆ ಬಳಿಯುವಾಗ ನಡುಮನೆಗೆ, ಅದೆಷ್ಟೋ ದಿನಗಳು, ವಕ್ರ ವಕ್ರವಾಗಿ ಮಲಗಿ ದಿನ ಕಳೆದಿದ್ದೇವೆ. ನಮ್ಮಮ್ಮ ಮುಂಜಾನೆ ಆರರಿಂದ ರಾತ್ರಿ ಹನ್ನೊಂದರ ತನಕ ಕೆಲಸ ಮಾಡಿ ಸುಸ್ತಾಗಿ ಅಡುಗೆ ಮಾಡುವುದಕ್ಕೂ ತ್ರಾಸವಿಲ್ಲದೇ ಹಾಗೆ ಮಲಗುತ್ತಿದ್ದರು. ಆ ಸಮಯದಲ್ಲಿ ನಾನು ಸ್ವಲ್ಪ ಅನ್ನ ಮಾಡಿ ಅಥವಾ ನಮ್ಮಪ್ಪ ಸ್ವಲ್ಪ ಟೋಮಾಟೋ ಸಾರು ಮಾಡಿ ಉಂಡು ಮಲಗುತ್ತಿದ್ದೆವು. ಕೆಲವೊಮ್ಮೆ ಪಕ್ಕದ ಮನೆಯವರಿಂದ ಸಾರು ತರುತ್ತಿದ್ದೆವು. ನಮ್ಮಪ್ಪನಿಗೆ ಬೇರೆಯವರ ಮನೆ ಸಾರು ಹಿಡಿಸುತ್ತಿರಲಿಲ್ಲ. ನನಗೆ ಆನಂದ, ವಿಭಿನ್ನ ರುಚಿಯಾಗಿರುತ್ತಿತ್ತು. ಪಾಪ ಕೆಲವು ಮನೆಯವರು ಕಾಯಿ ಹಾಕುತ್ತಿರಲಿಲ್ಲ. ಆಗ ಅಮ್ಮ ಹೇಳುತ್ತಿದ್ದರು, ಅಲ್ಲಾ, ಮನೆಯಲ್ಲಿರುವ ಕಾಯಿ ಹಾಕೋಕು ಕಷ್ಟನಾ? ಇನ್ನು ದುಡ್ಡು ಕೊಟ್ಟು ತರೋ ಹಾಗಿದ್ದರೇ ಏನು ಮಾಡುತ್ತಿದ್ದರೋ? ಎಂದು.
ಶ್ರಾವಣದ ಸಮಯದಲ್ಲಿ ಹಾರಂಗಿ ನಾಲಾ ನೀರು, ಊರೊಳಗೆ ಬರುತ್ತಿದ್ದರಿಂದ ಅಂಥಹ ಸಮಸ್ಯೆ ಆಗುತ್ತಿರಲಿಲ್ಲ. ಆದರೂ ನಮ್ಮಮ್ಮ ಸ್ವಲ್ಪ ಮಡಿವಂತಿಕೆ, ಕ್ಲೀನ್ ಜಾಸ್ತಿಯಾದ್ದರಿಂದ, ಕಾವೇರಿ ನಾಲೆಗೆ ಹೋಗಬೇಕು, ಅಲ್ಲಿ ನೀರು ಜೋರಾಗಿ ಹರಿಯುತ್ತದೆ. ಈ ನಾಲೆಯಲ್ಲಿ, ಗಲೀಜು ಮಾಡುತ್ತಾರೆ. ಈ ನೀರಿನಲ್ಲಿ ಎಲ್ಲವನ್ನೂ ತೊಳೆದಿರುತ್ತಾರೆ ಎನ್ನುತ್ತಿದ್ದರು. ಆಗ ನನಗೆ ವಿಪರೀತ ಕೋಪ ಬರುತ್ತಿತ್ತು. ಮನೆಯಿಂದ ಹತ್ತು ಹೆಜ್ಜೆಯಲ್ಲಿ ಹರಿಯುತ್ತಿರುವ ನೀರನ್ನು ಬಿಟ್ಟು ಒಂದು ಮೈಲಿ ದೂರದಲ್ಲಿರುವ ಕಾಲುವೆಗೆ ಹೋಗುವುದು ಯಾವ ಮೂರ್ಖತನ ಎನಿಸುತಿತ್ತು. ನಾನು ಪಾತ್ರೆ ಹೊರುವುದು, ಬಟ್ಟೆ ತೊಳೆಯುವುದು ಮಾಮೂಲಿಯಾಗಿತ್ತು. ನಮ್ಮಮ್ಮ ಬಟ್ಟೆ ತೊಳೆಯುವಾಗ ನಾನು ಪಾತ್ರೆ ತೊಳೆಯಬೇಕಿತ್ತು. ನನ್ನ ಅವಮಾನ ನನ್ನ ಮುಜುಗರ ನಮ್ಮಮ್ಮನಿಗೆ ಅರ್ಥವೇ ಆಗಲಿಲ್ಲ. ಕಾಲುವೆಗೆ ಬಂದ ಹೆಂಗಸರೆಲ್ಲಾ ನನ್ನನ್ನು ನೋಡಿ ಪರವಾಗಿಲ್ಲ ಹರಿ ಚೆನ್ನಾಗೆ ತೊಳಿತ್ತೀಯಾ ಪಾತ್ರೆಯಾ ಎಂದು ನಗುತ್ತಿದ್ದರು. ಬಟ್ಟೆ ಹೊರುವುದಕ್ಕೆ ಅಡ್ಡಿ ಇರಲಿಲ್ಲ, ಯಾಕೆಂದರೆ ಅದನ್ನು ಬೇಸಿನ್ ನಲ್ಲಿ ತುಂಬಿ ಕೊಡುತ್ತಿದ್ದರು. ಪಾತ್ರೆ ಮಾತ್ರ, ಕುಕ್ಕೆಯಲ್ಲಿ ನೀರೆಲ್ಲ ಸುರಿದು ಅಂಗಿ ಒದ್ದೆಯಾಗಿರುತ್ತಿತ್ತು.
ನಮ್ಮೂರಿನಲ್ಲಿ ಶ್ರಾವಣದ ವಿಶೇಷವೆಂದರೇ, ಎಲ್ಲರನ್ನು ಊಟಕ್ಕೆ ಕರೆಯುವುದು. ಊರಿನ ಅರ್ಧ ಜನರನ್ನು ಊಟಕ್ಕೆ ಕರೆಯಬೇಕಿತ್ತು. ಕೆಲವು ಮನೆಗಳಿಗೆ ಎಲ್ಲರೂ ನಮ್ಮ ಮನೆಯಲ್ಲಿಯೇ ಊಟಕ್ಕೆ ಬನ್ನಿ ಎನ್ನಬೇಕಿತ್ತು. ಇನ್ನು ಕೆಲವು ಮನೆಗಳಿಗೆ ಮನೆಗೆ ಒಬ್ಬರಂತೆ ಹೇಳುತ್ತಿದ್ದೆವು. ಅದರಲ್ಲಿ ಒಂದು ಮಜವಿದೆ, ನಮ್ಮ ಮನೆಗೆ ಯಾರಾದರೂ ಊಟಕ್ಕೆ ಹೇಳಲು ಬರುವಾಗ, ಅಕ್ಕಾ ಅಡುಗೆ ಮಾಡಬೇಡಿ ಎನ್ನುತ್ತಿದ್ದರು. ನಮ್ಮಪ್ಪು ಕುಳಿತಲ್ಲಿ ಅಡುಗೆ ಮಾಡಿಲ್ಲ ಅಂದ್ರೇ? ಎನುತ್ತಿದ್ದರು. ಊಟಕ್ಕೆ ಹೇಳಲು ಬಂದ ಹುಡುಗ ತಬ್ಬಿಬಾಗುತ್ತಿದ್ದ. ಬೇರೆ ಮನೆಯವರು ಆಯ್ತಪ್ಪ ಎನ್ನುತ್ತಿದ್ದರು, ನಮ್ಮನೆಯಲ್ಲಿ ತಲಹರಟೆ ಪ್ರಶ್ನೆ. ಹಾಗೆ ಮನೆಗೆ ಒಬ್ಬರಿಗೆ ಹೇಳುವಾಗ, ಅಕ್ಕಾ, ಅಣ್ಣ ಅಲ್ಲೇ ಊಟ ಮಾಡುತ್ತೇ ಎನ್ನುತ್ತಿದ್ದರು. ಆ ಸಮಯದಲ್ಲಿ ನಮ್ಮಪ್ಪ ನಾನ್ಯಾವಾಗ ಹೇಳ್ದೆ ನಿಂಗೆ ಅಲ್ಲೇ ಊಟ ಮಾಡ್ತೀನಿ ಅಂತಾ? ಎನ್ನುತ್ತಿದ್ದರು. ಊಟಕ್ಕೆ ಹೇಳಲು ಬಂದ ಹುಡುಗರು, ಹಣೆ ಬರಹವೇ ಎಂದುಕೊಂಡು ಹೋಗುತ್ತಿದ್ದರು. ಒಂದು ದಿನ ಕಡಿಮೆಯೆಂದರೂ 20-30 ಮನೆಯವರು ಊಟಕ್ಕೆ ಹೇಳುತ್ತಿದ್ದರು. ಎಲ್ಲರ ಮನೆಗೂ ಹೋಗಲೇಬೇಕಿತ್ತು. ಊಟ ಮಾಡದೇ ಇದ್ದರೂ ಸ್ವಲ್ಪ ಪಾಯಸವನ್ನಾದರೂ ಕುಡಿಯಲೇ ಬೇಕಿತ್ತು. ಕೆಲವರ ಮನೆಯವರು ಕರೆಯುತ್ತಾರೆಂದು ಕಾಯ್ದು ಕಾಯ್ದು ನಿದ್ದೆ ಬರುತ್ತಿತ್ತು. ಹತ್ತು ಹನ್ನೊಂದು ಹನ್ನೆರಡಾಗುತ್ತಿತ್ತು. ಆ ದಿನಗಳಲ್ಲಿ ನಮ್ಮನೆಯಲ್ಲಿ ಟಿವಿ ಇರಲಿಲ್ಲ, ನಾನು ಒಂಬತ್ತು ಗಂಟೆಗೆ ತಾಚಿ ಮಾಡುತ್ತಿದ್ದೆ. ನಮ್ಮಲ್ಲಿ ಸ್ನೇಹಿತರ ಮನೆಗೆ ಹೋಗಲೇ ಬೇಕಿತ್ತು, ಹಾಗೆಯೇ ಅವರುಗಳು ಬರುತ್ತಿದ್ದರು.
ಶ್ರಾವಣದ ಶನಿವಾರ ಉಪವಾಸವಿರಬೇಕಿತ್ತು. ಮುಂಜಾನೆ ಎಂಟು ಗಂಟೆಯ ಒಳಗೆ ಸ್ನಾನ ಮಾಡಿ ಶಾಲೆಗೆ ಹೋಗುತ್ತಿದ್ದೆ. ಮನೆಗೆ ಬರುವ ವೇಳೆ ಮನೆಯೆಲ್ಲಾ ತೊಳೆದು, ಶುಚಿಯಾಗಿರುತ್ತಿತ್ತು. ಅದನ್ನು ನೆನೆದರೆ ಇಂದಿಗೂ ಮನಸ್ಸು ಉಲ್ಲಾಸವಾಗುತ್ತದೆ. ನನಗೆ ಮುಂಜಾನೆ ಎದ್ದು ಮನೆಯಲ್ಲಿ ಉರಿಯುತ್ತಿರುವ ದೀಪವನ್ನು ನೋಡುವುದೆಂದರೆ ಎಲ್ಲಿಲ್ಲದ ಆಸೆ. ಮನೆ ಶುಚಿಯಾಗಿದ್ದಾಗ ಮನಸ್ಸು ಹಸನಾಗಿರುತ್ತದೆ. ನಾನು ಒಳಕ್ಕೆ ಕಾಲಿಡುವಾಗ ಬಹಳ ಖುಷಿ ಎನಿಸುತ್ತಿತ್ತು. ಶ್ರಾವಣದ ಸಾರು ಮಾಡುತ್ತಾರೆ. ಹೊಸ್ತಿಲಿಗೆ ಕುಂಬಳಕಾಯಿ ಒಡೆದು, ಕುಂಬಳಕಾಯಿ, ಆಲೊಗೆಡ್ಡೆ, ಬೀನ್ಸ್ ಕಾಳು, ಸಂಪಂಗಿ ಸೊಪ್ಪು ಹಾಕಿ ಮಾಡಿದರೇ ಬರುವ ಗಮ ಗಮ ವಾಸನೆ ಮೈ ಕಂಪಿಸುವಂತೆ ಮಾಡುತ್ತಿತ್ತು. ಸಂಜೆಯ ವೇಳೆ ಎಡೆ ಇಟ್ಟು, ದಾಸಯ್ಯನನ್ನು ಕರೆದು ತೀರ್ಥ ಹಾಕಿದರೇ ಶ್ರಾವಣ ಆಚರಿಸಿದಂತೆ. ಇಡೀ ಊರಿಗೆಲ್ಲಾ ಒಬ್ಬನೇ ದಾಸಯ್ಯ ಇದ್ದ ಕಾರಣ, ಅವರಿಗೆ ಬಹಳ ಡಿಮಾಂಡು. ಆ ಬೇಡಿಕೆಯ ನಡುವೆ ನಮ್ಮ ಮನೆಗೆ ಬೇಗ ಬರಲೆಂದು ನಮ್ಮಮ್ಮ ಅವರಿಗೆ ಕಾಫಿ, ಟೀ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇದು ತಮಾಷೆಗೆ ಮಾತ್ರ, ನಾನು ಹಾಗೆ ರೇಗಿಸುತ್ತಿದ್ದೆ. ನಮ್ಮಮ್ಮನನ್ನು ಕಂಡರೇ, ಬಹುತೇಕ ಇಡೀ ಬಾನುಗೊಂದಿಯೇ ಬಹಳ ಗೌರವದಿಂದ ಕಾಣುತ್ತದೆ. ಇದುವರೆಗೂ ನಮ್ಮಮ್ಮ ಒಬ್ಬರಿಗೆ ಬೈದದ್ದನ್ನು ನಾನು ಕಂಡಿಲ್ಲ. ಒಬ್ಬರ ಜೊತೆಗೆ ಜಗಳವಾಡಿಲ್ಲ. ಬಂದವರೆಲ್ಲರಿಗೂ, ಕುಡಿಯಲು ತಿನ್ನಲು ಕೊಡದ ದಿನಗಳಿರಲಿಲ್ಲ. ಇತ್ತೀಚೇಗೆ, ಬಹಳ ನೋವಿನಿಂದ ಜೀವನ ಮಾಡುತ್ತಾರೆ. ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿದೆ. ನಾನು ನಮ್ಮಮ್ಮನನ್ನು ಕಂಡಾಗಲೆಲ್ಲ, ನನ್ನ ಕಣ್ಣುಗಳು ತೇವವಾಗುತ್ತವೆ. ಅಷ್ಟೊಂದು ಲವಲವಿಕೆಯಿಂದ ಇದ್ದ ನಮ್ಮಮ್ಮು, ಈಗ ದಿನ ಪೂರ್ತಿ ಹಾಸಿಗೆ ಹಿಡಿದು, ಯಾವುದೋ ಲೋಕದಲ್ಲಿರುವಂತೆ ಚಿಂತಿಸುತ್ತಿರುತ್ತಾರೆ. ಈಗಲೂ ಕಣ್ಣು ಒದ್ದೆಯಾಗುತ್ತಿವೆ.
ಈ ಎಲ್ಲಾ ಆವರಣೆಗಳು ಈಗ ನನ್ನೂರಿನಿಂದ ಬಲು ದೂರಕ್ಕೆ ಹೋಗಿವೆ. ಸಂಪೂರ್ಣ ಚಿತ್ರಣವೇ ಬದಲಾಗಿದೆ. ಶ್ರಾವಣವೆಂದರೇ ಬರುವ ದಿನಗಳಲ್ಲಿ ಅದು ಒಂದು ಎನ್ನುವಂತಾಗಿದೆ. ಸೂತಕ ತೆಗೆಯುವುದು, ಊಟಕ್ಕೆ ಕರೆಯುವುದು ಮಾಯವಾಗಿದೆ. ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದ ನಾವುಗಳು ದಿನ ನಿತ್ಯ ಮಾಡಲಾಗಿದ್ದೇವೆ. ಆದರೂ ಶ್ರಾವಣವೆಂದಾಗ ನನ್ನೆಲ್ಲಾ ಬಾಲ್ಯ ನಗು ತರಿಸುತ್ತದೆ. ಸ್ನೇಹಿತರೆಲ್ಲರನ್ನು ಕರೆದು ಊಟ ಮಾಡಿಸುತ್ತಿದ್ದ ದಿನ, ನಾನು ಬಡವನೆಂಬ ಕೀಳರಿಮೆಯಲ್ಲಿಯೂ ನಗುತ್ತಿದ್ದ ದಿನಗಳು, ದೊಡ್ಡವರ ಮನೆಯರು ಊಟಕ್ಕೆ ಹೇಳಿದ ದಿನ, ಅವರು ಕರೆಯುವ ತನಕ ಕಾಯ್ದು ಊಟ ಮಾಡುತ್ತಿದ್ದ ದಿನಗಳು. ಐದು ನಿಮಿಷ ತಡವಾದರೂ ಸಹಿಸದ ನಾನು, ಹನ್ನೆರಡಾದರೂ ಹೋಗಿ ಉಂಡು ಬರುತ್ತಿದ್ದೆ. ಯಾರದ್ದೊ ಮನೆಯ ಮೂಲೆಯಲ್ಲಿ ಸದ್ದಿಲ್ಲದೇ ಊಟ ಮಾಡಿ ಬರುತ್ತಿದ್ದೆ. ಇಡೀ ಬಾಲ್ಯದ ಶ್ರಾವಣದಲ್ಲಿ ನೂರು ಮನೆಯಲ್ಲಿಯಾದರೂ ಊಟ ಮಾಡಿದ್ದೇನೆ, ಯಾರ ಮನೆಗೆ ಹೋದಾಗಲೂ ಹರಿ ಬಂದಾ ಬಾರಪ್ಪ, ಚೆನ್ನಾಗಿದ್ದೀಯಾ ಎಂದಿಲ್ಲ. ಒಳಕ್ಕೆ ಹೋಗುವುದು ಎಲ್ಲರು ಕುಳಿತಿರುವ ಪಂಕ್ತಿಯಲ್ಲಿ ಕುಳಿತುಕೊಳ್ಳುವುದು ಉಂಡು ಬರುವುದು. ಕೆಲವರ ಮನೆಯ ಹತ್ತಿರಕ್ಕೆ ಹೋದಾಗ, ಊಟ ನಡಿತಾ ಇದೇ ಇರ್ರೋ ಕುತ್ಕೊಳ್ಳಿವ್ರೀ, ಎನ್ನುತ್ತಿದ್ದರು. ಅರ್ಧ ಗಂಟೆ ಅವರ ಮನೆ ಮುಂದೆ ನಿಂತು ಉಂಡು ಬರುತ್ತಿದ್ದೆ. ಅಲ್ಪ ಮಟ್ಟದ ಹಣ ದುರಹಂಕಾರವನ್ನು ತುಂಬಿಸಿತು. ಇನ್ನೊಬ್ಬರ ಮನೆಗೆ ಹೋಗುವುದು ಅವಮಾನವೆನ್ನುವಂತಾಯಿತು. ಅಲ್ಲೊಂದು ಅಭಿಮಾನ ಅಕ್ಕರೆ, ಸಂಪ್ರದಾಯವಿತ್ತೆಂಬುದನ್ನೇ ಅಳಿಸಿಹಾಕಿದೆ.

18 ಜುಲೈ 2012

ಮೊಬೈಲ್ ಮಾಯೆ!!!

ನಾನು ಹಿಂದಿನ ಬ್ಲಾಗ್ ನಲ್ಲಿ ಬರೆದಿದ್ದೆ, ಮೊಬೈಲ್ ಮತ್ತು ನನ್ನ ಸಂಭಂಧವನ್ನು ಹೇಳುತ್ತೇನೆಂದು. ನಾನು ಮೊದಲ ಬಾರಿಗೆ ಮೊಬೈಲ್ ಎಂಬುದನ್ನು ಹಿಡಿದಿದ್ದು ಅಥವಾ ಕೊಂಡಿದ್ದು ಬಿಎಸ್ಸಿ ಮುಗಿದ ದಿನಗಳಲ್ಲಿ. ಬಿಎಸ್ಸಿ ಮುಗಿಸಿದ ನಂತರ ನಾನು ಬೆಂಗಳೂರಿಗೆ ಬಂದು ಇಲ್ಲಿ ಕೆಲಸಕ್ಕೆ ಸೇರುವುದೆಂದು ನಿರ್ಧರಿಸಿದೆ. ಆ ಸಮಯದಲ್ಲಿ ನಮ್ಮ ಭಾವನ ಮನೆಯಲ್ಲಿದ್ದು ಕೆಲಸ ಹುಡುಕುತ್ತಿದ್ದೆ. ನಮ್ಮ ಭಾವನ ಬಳಿಯಲ್ಲಿ ಹಳೆಯ ಸೀಮಾನ್ಸ್ ಮೊಬೈಲ್ ಇತ್ತು, ಅದು ರಿಂಗ್ ಆಗುವುದನ್ನು ಕೇಳಿದರೇ ಕಣ್ಣೀರು ಸುರಿಯುವಂತಿತ್ತು. ಕಿರೋ ಎನ್ನುವ ಕೀರಳು ಧ್ವನಿ. ಆ ಸಮಯಕ್ಕೆ ಭಾವನ ನಂಬರ್ ಅನ್ನು ನಾನು ಎಲ್ಲಾ ಕಡೆಯಲ್ಲಿಯೂ ಕೊಟ್ಟಿದ್ದೆ. ಬೆಂಗಳೂರೆಂಬ ದರಿದ್ರ ನಾಡಿಗೆ ಮೊದಲ ಬಾರಿ ಬಂದವನು ಬೇಗ ಬಹುಬೇಗ ಇಲ್ಲಿಂದ ದಾಟಬೇಕೆನಿಸುತ್ತದೆ. ನಾನು ಈಗ ಹೆಮ್ಮೆಯಿಂದ ಎಲ್ಲರಿಗೂ ಹೇಳುತ್ತೇನೆ, ನಮ್ಮ ಬೆಂಗಳೂರು ಎಂದು. ಸತ್ಯವಾಗಿಯೂ ಹೇಳುತ್ತೇನೆ, 2004ರಲ್ಲಿ ನಾನು ಬೆಂಗಳೂರನ್ನು ಬೈಯ್ದಷ್ಟನ್ನೂ ಇನ್ನಾರು ಬೈಯ್ದಿರಲಾರರು. ಬೆಂಗಳೂರು ನಮಗೆ ಬಹಳ ಭಯ ಹುಟ್ಟಿಸುತ್ತದೆ. ಎಂಟನೂರು ಜನರಿರುವ ಬಾನುಗೊಂದಿಯೆಂಬ ಸಣ್ಣ ಸುಂದರ ಹಳ್ಳಿಯಿಂದ ಬಂದ ನಾನು ದಿಡೀರನೇ ಅರವತ್ತು ಲಕ್ಷ ಜನರ ಈ ಸುಡುಗಾಡಿಗೆ ಬಂದರೇ, ಇಲ್ಲಿನ ಜನ, ಇಲ್ಲಿ ಏರಿಯಾಗಳು ಚೀ ಎನಿಸಿತ್ತು. ಬೆಂಗಳೂರನ್ನು ನೋಡುವುದಕ್ಕೆ ಬರುವುದಾದರೆ ಪರವಾಗಿಲ್ಲ, ಕೆಲಸ ಹುಡುಕಿಕೊಂಡು ಜೀವನ ಕಟ್ಟಿಕೊಳ್ಳಲು ಬರುವ ಹೊಸಬರು ಹುಚ್ಚಾಸ್ಪತ್ರೆ ಸೇರುವುದು ಗ್ಯಾರಂಟೀ.

ಬೆಂಗಳೂರಿಗೆ ಬಂದ ದಿನಗಳಲ್ಲಿ ನಮ್ಮ ಅಕ್ಕನ ಮನೆ ವಿಜಯನಗರದ ಪೈಪ್ ಲೈನ್ ನಲ್ಲಿತ್ತು. 87ನೇ ನಂಬರಿನ ಬಸ್ಸಿನಲ್ಲಿ ಮೆಜೆಸ್ಟಿಕ್ ಗೆ ಹೋಗುವುದು ಅಲ್ಲಿಂದ ಸುತ್ತಾಡಬೇಕಿತ್ತು. ಸತ್ಯವಾಗಿಯೂ ಹೇಳುತ್ತೇನೆ, ನಮ್ಮ ಭಾವನಿಗೆ ಇದ್ದ ತಾಳ್ಮೆ, ಸಹನೆ ನನಗೆ ಇಲ್ಲ, ಅದು ಬರುವುದೂ ಇಲ್ಲ. ನಾನು ಎಲ್ಲಿಗೆ ಹೋಗಬೇಕೆಂದರೂ ಅವರಿಗೆ ಒಂದು ರೂಪಾಯಿ ಕಾಯಿನ್ ಹಾಕಿ ಫೋನ್ ಮಾಡಿ ಕೇಳುತ್ತಿದ್ದೆ. ಬಹಳ ತಾಳ್ಮೆಯಿಂದ ವಿಳಾಸವನ್ನು ಹೇಳುತ್ತಿದ್ದರು. ಕೆಲವೊಮ್ಮೆ ಬೈಕ್ ಅನ್ನು ಕೊಟ್ಟು ಕಳುಹಿಸುತ್ತಿದ್ದರು. ಹತ್ತು ಹಲವು ಕಂಪನಿಗಳಿಗೆ ಅರ್ಜಿ ಹಾಕಿ ಇಂಟರ್ವ್ಯೂಗೆ ಹೋಗಿ ಬಂದು ಬೇಸತ್ತಿದೆ. ಅದೇ ಸಮಯಕ್ಕೆ ಬೆಂಗಳೂರು ವಿವಿಗೆ ಸೇರುವ ತೀರ್ಮಾನ ಮಾಡಿ ಕೆಲಸದ ವಿಷಯ ಕೈಬಿಟ್ಟೆ, ಅದು ಮುಂದೆ ಯಾವಾಗದರೂ ಹೇಳುತ್ತೇನೆ. ಈಗ ಮೊಬೈಲ್ ವಿಷಯವನ್ನು ಮಾತನಾಡೋಣ. ನನಗೆ ಬೆಂಗಳೂರಿಗೆ ಬಂದ ದಿನಗಳಲ್ಲಿ ಸುನೀಲ್ ಸಿಕ್ಕಿದ. ಸುನೀಲ್ ನಾನು ಮೈಸೂರಿನಲ್ಲಿ ಜೊತೆಯಲ್ಲಿಯೇ ಓದಿದ್ದೇವು. ಇಲ್ಲಿಗೆ ಬಂದಾಗ ಅವನ ಸ್ನೇಹಿತ ಶ್ರೀಕಂಠನನ್ನು ಪರಿಚಯಿಸಿದ. ಶ್ರೀಕಂಠ ಆ ಸಮಯಕ್ಕೆ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದ. ಅವನು ಸಂಜೆ ಕಾಲೇಜಿಗೆ ಹೋಗುತ್ತಿದ್ದರಿಂದ ಬೆಳ್ಳಿಗ್ಗೆ ಆರಾಮಾಗಿರುತ್ತಿದ್ದ. ಹೊಸಕೆರೆ ಹಳ್ಳಿಯಲ್ಲಿನ ಸಾಂಕೇತಿ ಹಾಸ್ಟೇಲ್ ನಮ್ಮ ಮೀಟೀಂಗ್ ಪಾಯಿಂಟ್ ಆಯ್ತು. ಅವನು ನಮಗೆ ಗೈಡ್ ಮಾಡುತ್ತಿದ್ದ. ಅವನ ಬಳಿಯಲ್ಲಿಯೂ ಮೊಬೈಲ್ ಇಲ್ಲದಿದ್ದರಿಂದ ಅವನ ಹಾಸ್ಟೇಲ್ ಗೆ ಫೋನ್ ಮಾಡಿ ಹೋಗುತ್ತಿದ್ದೆ.

ಎರಡನೇಯ ಎಂಎಸ್ಸಿ ಸಮಯಕ್ಕೆ ಮೊದಲ ಬಾರಿಗೆ ಮೊಬೈಲ್ ತೆಗೆದುಕೊಂಡೆ. ಎರಡು ವರ್ಷ ಕಷ್ಟಪಟ್ಟು ಹಣ ಉಳಿಸಿ, ನೋಕಿಯಾ 3315 ಮೊಬೈಲ್ ತೆಗೆದುಕೊಂಡೆ. ಅದನ್ನು geometry box ಎಂದೇ ಕರೆಯುತ್ತಿದ್ದೆವು. ನಮ್ಮೂರಿಗೆ ನನ್ನದೇ ಮೊದಲನೆಯ ಮೊಬೈಲ್ ಎಂಬ ಹೆಮ್ಮೆ. AIRTEL ಊರಿನಲ್ಲಿರಲಿಲ್ಲ. ಊರಿಗೆ ಹೋದರೇ, ಊರಿಂದ ಆಚೆಗೆ, ನಮ್ಮ ಗದ್ದೆಯ ಬಳಿಗೆಹೋಗಿ ಫೋನ್ ಬಳಸಬೇಕಿತ್ತು. ಫೋನ್ ಕರೆಗಳೇನು ಬರುತ್ತಿರಲಿಲ್ಲ, ಆದರೂ ನೆಟವರ್ಕ್ ಹುಡುಕಿಕೊಂಡು, ನಾನು, ಪಾಂಡು, ಪುರುಷೋತ್ತಮ ಹೋಗುತ್ತಿದ್ದೆವು. ಸಿಗರೇಟು ಸೇದುವ ಕಾರ್ಯವೂ ಜೊತೆಯಲ್ಲಿಯೇ ಮುಗಿಯುತ್ತಿತ್ತು. ನನಗೆ ಬಹಳ ನಗು ತರಿಸುತ್ತದೆ, ಆ ಸಮಯದಲ್ಲಿ ನನಗೆ ಮೊಬೈಲ್ ಅವಶ್ಯಕತೆಯಿಲ್ಲದಿದ್ದರೂ ಕೊಂಡುಕೊಂಡಿದ್ದೆ. ಅದೇ ಸಮಯದಲ್ಲಿ ನಮ್ಮ ಭಾವ ಮೊಬೈಲ್ ಬದಲಾಯಿಸುವುದಕ್ಕೆ ನಿರ್ಧರಿಸಿದ್ದರು. ಒಂದು ಮೊಬೈಲ್ ತೆಗೆದುಕೊಳ್ಳುವುದಕ್ಕೆ ಕನಿಷ್ಟ ಒಂದೆರಡು ತಿಂಗಳಾದರೂ ಚರ್ಚೆ ಮಾಡಿದ್ದೇವೆ. ಗಾಂಧೀನಗರವನ್ನೆಲ್ಲಾ ಸುತ್ತಾಡಿ ಕಡೆಗೆ, ಐದು ಸಾವಿರ ಕೊಟ್ಟು ಸಾಮ್ಸಂಗ್ ತೆಗೆದುಕೊಂಡರು. ಕಲರ್ ಸೆಟ್ ಚೆನ್ನಾಗಿತ್ತು, ಆದರೇ ಜೋರಾಗಿ ಕೇಳುತ್ತಿರಲಿಲ್ಲ. ನನ್ನ ಮೊಬೈಲ್ ಸ್ವಲ್ಪ ಸಮಸ್ಯೆ ಕೊಡುವುದಕ್ಕೆ ಶುರುವಾಯಿತು. ಅದಲ್ಲದೇ, ಆ ಸಮಯದಲ್ಲಿ ನಾನು ನನ್ನ ಕ್ಲಾಸ್ ಮೇಟ್ಸ್ ಗಳ ಹತ್ತಿರ ಜಗಳವಾಡಿದ್ದೆ. ಹುಡುಗಿಯರೆಲ್ಲಾ, ನೋಕಿಯಾ 1100, 1108, ಹಿಡಿದು ಬರುವಾಗ ನಾನು ಹಳೇ ಮೊಬೈಲ್ ಹಿಡಿಯುವುದು ನಾಚಿಕೆ ಎನಿಸಿತ್ತು. ಅದಲ್ಲದೇ, ಪೋಸ್ಟ್ ಪೈಡ್ ಹಚ್ ನಂಬರು ತೆಗೆದುಕೊಂಡು ಸಾವಿರಾರು ರೂಪಾಯಿ ಬಿಲ್ ಬಂದಿತ್ತು. ಆ ಸಮಯದಲ್ಲಿ ಕಿರಣ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ, ಕೈತುಂಬಾ ಸಂಪಾದನೆಯಿತ್ತು. ಮೊಬೈಲ್ ತೆಗೆದುಕೊಳ್ಳುವುದಕ್ಕೆ ಸಾಲ ಕೇಳಿದೆ. ಅವನು ಮೂರು ಸಾವಿರ ಕೊಟ್ಟ.

ನಾನು ಉಮೇಶನಿಗೆ ಹೇಳಿದ್ದೆ, ಒಂದು ಮೊಬೈಲ್ ಕೊಡಿಸು ಎಂದು. ಅವನು ಯಾರ ಬಳಿಯಲ್ಲಿಯೂ ಕಡಿಮೆ ದುಡ್ಡಿಗೆ ಕೊಡಿಸುವುದಾಗಿ ಹೇಳಿ ಶಾಂತಿನಗರಕ್ಕೆ ಕರೆದೊಯ್ದ. ನಾನು ನೋಕಿಯಾ 1100 ತೆಗೆದುಕೊಂಡು ಖುಷಿಯಲ್ಲಿ ಬಂದೆ. ಬಂದವನು, ಕಿರಣನಿಗೆ ಮೆಜೆಸ್ಟಿಕ್ ನಲ್ಲಿ ತೋರಿಸಿದೆ. ಅವನು ನೋಡಿದ ತಕ್ಷಣ ಈ ಮೊಬೈಲ್ ಗೆ ಮೂರು ಸಾವಿರ ಕೊಟ್ಟ, ವೇಸ್ಟ್ ಎಂದ. ನನ್ನೆದೆ ಕುಸಿಯಿತು. ಯಾಕೋ? ಎಂದೆ. ಮಗಾ ಇದು ಹಳೆದು ಕನೋ? ಬೇಡ ವಾಪಸ್ಸು ಕೊಟ್ಟು ಬಿಡು ಎಂದ. ಕಿರಣನಲ್ಲಿ ನನಗೆ ಇಂದಿಗೂ ಬಹಳ ಖುಷಿ ಆಗುವ ವಿಷಯವೇ ಇದು. ಇಷ್ಟವಿಲ್ಲವೆಂದರೇ ನೇರವಾಗಿ ಹೇಳುತ್ತಾನೆ. ಯಾವತ್ತೂ ಮುಚ್ಚು ಮರೆ ಮಾಡುವುದಿಲ್ಲ, ಕಳ್ಳಾಟವಿಲ್ಲ. ಮತ್ತೇ ಉಮೇಶನಿಗೆ ಫೋನ್ ಮಾಡಿ, ನನಗೆ ಬೇಡವೆಂದೆ. ಅವನು ಸಾಕಷ್ಟು ಬೈದ. ಅವನೂ ಅಷ್ಟೇ, ಅಂದಿನಿಂದ ಇಂದಿನ ತನಕವೂ ಅದೇ ಡೈಲಾಗ್. ವಾಪಾಸ್ಸು ಹೋಗಿ ಕೊಟ್ಟವನು, ಮೆಜೆಸ್ಟಿಕ್ ನಲ್ಲಿ ರಿಲಾಯನ್ಸ್ ಜಾಹಿರಾತು ನೋಡಿದೆ. 2500 ರೂಪಾಯಿಗೆ ಹ್ಯಾಂಡ್ ಸೆಟ್ ಮತ್ತು ಕರೆ ದರಗಳು 50ಪೈಸೆ ಮಾತ್ರ. ನಿರ್ಧಾರ ಮಾಡಿಬಿಟ್ಟೇ, ನನ್ನ ಕಾಟ ತಡೆಯಲಾರದೇ, ಕಿರಣ ಮತ್ತು ಉಮೇಶ ಇಬ್ಬರೂ ನಿನಗೆ ರಿಲಾಯನ್ಸ್ ಸರಿ ಅದನ್ನೇ ತೆಗೆದುಕೋ ಎಂದರು. 2006 ಏಪ್ರಿಲ್ ಹದಿನೇಳನೇ ತಾರೀಖಿನಂದು ಕೊಂಡದ್ದು ನಾನು ಈಗ ಬಳಸುತ್ತಿರುವ ನಂಬರು. ಬಹಳ ಬಾರಿ ಬದಲಾಯಿಸುವ ಪ್ರಯತ್ನ ಪಟ್ಟರೂ ಆಗಿಲ್ಲ.

ಇದಾದ ಮೇಲೆ, ಮೂರ್ನಾಲ್ಕು ಬಾರಿ ರಿಲಾಯನ್ಸ್ ಮೊಬೈಲ್ ಕಳೆದು ಹೋಯಿತು. ಹೈದರಾಬಾದಿಗೆ ಹೋದಾಗ ಅಲ್ಲಿ ಮೂರು ಮೊಬೈಲ್ ಕಳೆದು ಹೋಯಿತು. ಕಳೆದ ವರ್ಷ ಫೀಲ್ಡ್ ಗೆ ಹೋಗಿದ್ದಾಗ, ಹೊನ್ನಾಳಿಯಲ್ಲಿ ಮೊಬೈಲ್ ಕಳೆದು ಹೋಯ್ತು, ವರ್ಷದ ಆರಂಬದ ದಿನಗಳಲ್ಲಿ, ಮತ್ತೊಂದು ಮೊಬೈಲ್ ಬಿದ್ದು ಚೂರಾಯಿತು, ಕಡೆಗೆ ಈಗಿರುವ ದರಿದ್ರ ಮೊಬೈಲ್ ಬಂದಿದೆ. ಈ ಮೊಬೈಲ್ ಬಂದಾದ ಮೇಲೆ, ಅದ್ಯಾಕೋ ದಿನವೇ ಸರಿಯಿಲ್ಲವೆನಿಸಿದೆ. ಯಾರಾದರು ಕದ್ದರೂ ಸರಿ, ಇಲ್ಲದಿದ್ದಲ್ಲಿ ತೆಗೆದು ಎಸೆಯುವ ದಿನಗಳು ದೂರವಿಲ್ಲ.

ಹಾವಿಗೆ ಹಾಲೆರೆಯುವುದ ನಿಲ್ಲಿಸು, ಕಚ್ಚೊ ನಾಯಿಯಿಂದ ದೂರವಿದ್ದು, ಪ್ರೀತಿಸು ಕಾಮಧೇನುವನ್ನು!!!


              ಕೆಲಸದ ಒತ್ತಡದ ನಡುವೆಯೂ, ಮಾನಸಿಕ ನೋವಿನ ನಡುವೆಯೂ ಇದೊಂದು ಬರವಣಿಗೆಯನ್ನು ಬರೆದು ಮುಗಿಸಲು ಪಣ ತೊಟ್ಟಿದ್ದೇನೆ. ನಾನು ಬರೆಯುತ್ತಿರುವುದು ನನ್ನ ಓದುಗ ದೇವರನ್ನು ಮೆಚ್ಚಿಸಲೂ ಅಲ್ಲಾ ಓದುಗರನ್ನು ಹಿಡಿದು ಓದಿಸಲೂ ಅಲ್ಲಾ, ಕೆಲವೊಂದು ನೋವುಗಳು ಭಾವನೆಗಳು ಆರಿ ಹೋಗುವ ಮುನ್ನಾ, ಬರೆದಿಡಬೇಕು. ಮಲಗಿದ್ದಾಗ ಕನಸು ಬಂದಾಗಲೇ ಅದನ್ನು ಬರೆದಿಡಬೇಕು, ನಿದ್ದೆ ಬಂತು ಎಂದು ಮುಖ ತಿರುಗಿಸಿ ಮಲಗಿದರೇ, ಕನಸಿನ ಅರ್ಥ, ಸೌಂದರ್ಯ ನಿಮಗೆ ಸಿಗುವುದಿಲ್ಲ. ನಾನು ಮಧ್ಯಾಹ್ನ ನಮ್ಮ ಅಜ್ಜಿಗೆಂದು ಮೊಬೈಲ್ ತರುವುದಕ್ಕಿ ಹೋಗಿದ್ದೆ. ನಮ್ಮ ಅಜ್ಜಿ ಬಹಳ ದಿನಗಳ ಹಿಂದೆಯೇ ನನಗೊಂದು ಮೊಬೈಲ್ ಕೊಡಿಸು ಎಂದು ಕೇಳಿದ್ದರು. ನನ್ನ ಎತ್ತಿ ಆಡಿಸಿ ಪೋಷಿಸಿದ ನನ್ನಜ್ಜಿ ಮೊಬೈಲ್ ಕೇಳಿದ ಕೂಡಲೇ ತೆಗೆದುಕೊಡುವ ಮನಸ್ಸು ಮಾಡಲಿಲ್ಲ. ತೆಗೆಯುವೇ ತೆಗೆಯುವೇ ಎಂದು ಹತ್ತು ತಿಂಗಳುಗಳನ್ನೇ ಕಳೆದೆ. ಇಂದು ತೆಗೆಯಲೇ ಬೇಕೆಂದು ಅಂಗಡಿಗೆ ಹೋದೆ. ಹೋದವನು ಯಥಾ ಪ್ರಕಾರ ನನ್ನ ಕುಬ್ಜ ಮನಸ್ಸಿಗೆ ಕೆಲಸ ಕೊಟ್ಟೆ. ಅಂಗಡಿಗೆ ಹೋಗುವುದಕ್ಕೇ ಮುಂಚೆಯೇ ಇಂಟರ್ನೆಟ್ ನಲ್ಲಿ ಮೊಬೈಲ್ ಮಾಡೆಲ್ ನೋಡಿದೆ. ನಾನು ಮೊಬೈಲ್ ಕೊಳ್ಳುವ ಮುನ್ನಾ ಕನಿಷ್ಠ ಹತ್ತು ಜನರಿಗೆ ಫೋನ್ ಮಾಡಿದ್ದೆ. ಮೂರ್ನಾಲ್ಕು ದಿನ ಪರದಾಡಿ, ನಂತರ ನಿಧಾರ ಮಾಡಿದ್ದೆ. ಆದರೇ ಅಜ್ಜಿಗೆ ಮೊಬೈಲ್ ತೆಗೆಯುವಾಗ ಇಂಥಹ ಯಾವೊಂದು ಚರ್ಚೆ ನಡೆಯಲಿಲ್ಲ.
                  ಯಾವುದೋ ಒಂದು ಬೇಸಿಕ್ ಮಾಡೆಲ್ ತೆಗೆದರೇ ಆಯಿತೆಂದು ನಿರ್ಧರಿಸಿದೆ. ಅಂಗಡಿಗೆ ಹೋದವನೇ, ನೋಕಿಯಾದಲ್ಲಿ ಬೆಸಿಕ್ ಮಾಡೆಲ್ ಕೊಡಿ ಎಂದೆ. ಸರ್, ಬೇಸಿಕ್ ಮಾಡೆಲ್ ಅಂದ್ರೇ ಎಂಪಿತ್ರೀ, ರೇಡಿಯೋ ಬೇಕಾ? ಎಂದಾಗ ಇಲ್ಲ ಇಲ್ಲ ಪ್ಯೂರ್ ಬೇಸಿಕ್ ಮಾಡೆಲ್ ಎಂದು ನಗುನಗುತಾ ಹೇಳಿದೆ. ಒಂದು ಮೊಬೈಲ್ ಕೊಳ್ಳುವುದಕ್ಕೆ ಎರಡು ನಿಮಿಷ ಸಾಕಾಯ್ತು. ವಿಷಯ ಎರಡು ರೀತಿಯದ್ದಿದೆ. ಮೊದಲನೆಯದು ನಾನು ಇಲ್ಲಿಯ ತನಕ ಮೊಬೈಲ್ ಗಳ ಬಗ್ಗೆ ಮತ್ತು ಮೊಬೈಲ್ ನನ್ನ ಜೀವನದಲ್ಲಿ ಆಟವಾಡಿರುವುದರ ಬಗ್ಗೆ ಹೇಳುತ್ತೇನೆ. ಎರಡನೇಯದಾಗಿ ನಾನು ನಮ್ಮ ಅಜ್ಜಿಯ ವಿಷಯದಲ್ಲಿ ನಡೆದುಕೊಂಡ ರೀತಿಯದನ್ನು ವಿವರಿಸುತ್ತೇನೆ. ನಾವು ನಮ್ಮ ತಂದೆ ತಾಯಿಯ ಅಥವಾ ಹಿರಿಯರ ವಿಷಯದಲ್ಲಿ ನಡೆದುಕೊಳ್ಳುವ ರೀತಿ ನಿಜಕ್ಕೂ ಬೇಸರವನ್ನು ತರಿಸುತ್ತದೆ. ನಿನ್ನೆ ನಾನು ಮೊಬೈಲ್ ಕೊಳ್ಳುವ ಸಮಯದಲ್ಲಿ ಕಡಿಮೆ ದುಡ್ಡಿನ ಮೊಬೈಲ್ ಅನ್ನೇ ಹುಡುಕಿದೆ ಎನಿಸುತ್ತದೆ. ಅದು ಬಳಸಲು ಸುಲಭವೆನಿಸಿದರೂ, ಜೊತೆಯಲ್ಲಿಯೇ, ಅಜ್ಜಿಗೆ ಅಲ್ವಾ? ಮಾತನಾಡುವುದಕ್ಕೇ ಮಾತ್ರ ಇರುವುದು, ಅವರಿಗೆ ರೇಡಿಯೋ, ಕ್ಯಾಮೆರಾ, ಎಂಪಿತ್ರ‍ಿ ಏನೂ ಬೇಡವೆಂದು ನಿರ್ಧರಿಸಿದೆ. ಅದೆಲ್ಲವೂ ಇರುವ ಮೊಬೈಲ್ ಕೊಡಿಸಿದರೆ ತಪ್ಪೇನು? ಉಪಯೋಗಿಸದಿದ್ದರೇ ಇರಲಿ, ಒಳ್ಳೆಯ ಮೊಬೈಲ್ ಹಿಡಿದುಕೊಂಡು ಹೋದರೆ ತಪ್ಪಿಲ್ಲವಲ್ಲ. ನಾನು ಬ್ಲಾಕ್ ಆಂಡ್ ವೈಟ್ ಅಥವಾ ಕಡಿಮೆ ಮಟ್ಟದ ಮೊಬೈಲ್ ಹಿಡಿದುಕೊಂಡು ಹೋಗಲು ಮನಸ್ಸು ಒಪ್ಪುವುದಿಲ್ಲ. ಆದರೇ, ಅಪ್ಪ ಅಮ್ಮ ಅಜ್ಜಿಯ ವಿಷಯದಲ್ಲಿ ಮಾತ್ರ ಅವರಿಗೆ ಇದು ಸಾಕು, ಅದು ಸಾಕು ಎನ್ನುತ್ತೇವೆ. ನಾನು ಒಂದು ಜೊತೆ ಚಪ್ಪಲಿಗೆ ಮೂರು ಸಾವಿರ ಕೊಡುವುದಕ್ಕೆ ಹಿಂದೂ ಮುಂದೂ ನೋಡುವುದಿಲ್ಲ ಆದರೇ ಒಂದು ಮೊಬೈಲ್ ಗೆ ಹೀಗೆ ನೋಡಬೇಕಿತ್ತಾ? ಉಪಯೋಗಕ್ಕೇ ಬಾರದವರ ಜೊತೆ ಗಂಟೆಗಟ್ಟಲೇ ಹರಟೆ ಹೊಡೆಯುದಕ್ಕೆ ಹಣ ವ್ಯಯ ಮಾಡುತ್ತೇವೆ, ಮೂರು ಕಾಸಿಗೂ ಉಪಯೋಗಕ್ಕೆ ಬಾರದವರಿಗೆ ಉಣ್ಣಿಸಿ, ತಿನ್ನಿಸಿ, ಕುಡಿಸಿ ಕಳುಹಿಸುತ್ತೇವೆ. ನಮ್ಮನ್ನು ಹೆತ್ತು ಹೊತ್ತು ನಮಗೆ ಎಲ್ಲವನ್ನೂ ಕೊಟ್ಟವರ ಮೇಲೇಕೆ ಈ ಬಗೆಯ ಅಸಡ್ಡೆ ಎನಿಸಿತು.
                    ಮೂವತ್ತು ವರ್ಷ ನಮ್ಮನ್ನು ನೋಡಿಕೊಂಡವರನ್ನು ನಾವೇಕೆ ಹೀಗೆ ವಯಸ್ಸಾಯಿತೆನ್ನುವ ಕಾರಣಕ್ಕೆ ಕಡೆಗಣಿಸುತ್ತೇವೆ. ಮೂವತ್ತು ವರ್ಷ ಕಣ್ಣಿಗೆ ಎಣ್ಣೆ ಬಿಟ್ಟು ಕಾಯ್ದ ಅವರಿಗೆ ಮೂರು ವರ್ಷ ಸೇವೆ ಮಾಡುವುದಿಲ್ಲ. ಎಲ್ಲವನ್ನೂ ಹಣದಿಂದ ತೂಗುತ್ತೇವೆ. ಎಲ್ಲರೂ ಹೀಗೆ ಮಾಡುವುದಿಲ್ಲ ಆದರೇ ನಾನು ಮಾಡಿದ್ದೇನೆ. ಇದರ ಬಗ್ಗೆ ನನಗೆ ನನ್ನ ಬಗ್ಗೆ ತೀವ್ರ ಅಸಮಾಧಾನವಿದೆ. ಬೈಕ್ ಹತ್ತಿ ಊರೂರು ಸುತ್ತುವುದಕ್ಕೆ ಸಾವಿರಾರು ಕಳೆದಿದ್ದೇನೆ, ನಾಯಿ ನರಿಗಳಿಗೆ ಹಣ ವ್ಯಯ ಮಾಡಿದ್ದೇನೆ. ನಂಬಿಸಿ ಕೈಕೊಟ್ಟ ಅನೇಕರಿಗೆ ಸಾಲತೆತ್ತಿ ಕೈ ಸುಟ್ಟುಕೊಂಡಿದ್ದೇನೆ. ಐದು ರೂಪಾಯಿ ಟೀ ಕುಡಿಸುವುದಕ್ಕೆ ಲೆಕ್ಕ ಹಾಕುವವರಿಗೆ ಸಾವಿರ ಸಾವಿರ ಚೆಲ್ಲಿದ್ದೇನೆ. ಮೋಸಗಾರರನ್ನು ಸಾಕುವ ಮನಸ್ಸು ನಮ್ಮನ್ನು ಸಾಕಿದವರನ್ನು ಯಾಕೆ ಇಷ್ಟೊಂದು ಕೆಟ್ಟದ್ದಾಗಿ ನಡೆಸಿಕೊಡುತ್ತದೆ. ದಿನಕ್ಕೆ ಒಂದು ಸಿಗರೇಟು ಕಡಿಮೆ ಮಾಡಿದರೂ, 300 ರೂಪಾಯಿ ಉಳಿಯುತ್ತದೆ, ಅದನ್ನು ಮೂರು ಜನರ ಮೊಬೈಲ್ ಗೆ ರೀಚಾರ್ಜ್ ಮಾಡಿಸಿದರೇ ತಿಂಗಳಿಡೀ ಮಾತನಾಡುತ್ತಾರೆ, ಸಂತೋಷದಿಂದಿರುತ್ತಾರೆ. ನಾವು ಬೇಕಿಲ್ಲದ ಮೂರನೇ ದರ್ಜೆ ಸಿನೆಮಾ ನೋಡುವ ದುಡ್ಡನ್ನು ನಮ್ಮ ಪೋಷಕರೆಡೆಗೆ ಹಾಕಿದರೂ ಸಾಕು ಆನಂದ ಸಾಗರದಲ್ಲಿ ಮಿಯ್ಯುತ್ತಾರೆ. ನಾನು ಮನೆಗೆಂದು ಏನನ್ನು ತೆಗೆದುಕೊಂಡು ಹೋದಾಗಲೂ ನಮ್ಮಪ್ಪ ಅಮ್ಮ ಹೇಳಿರುವುದು ಒಂದೇ ಮಾತು, ಅಯ್ಯೋ ಇದನ್ನೆಲ್ಲಾ ಯಾಕೆ ತರುತ್ತೀಯಾ? ಸುಮ್ಮನೆ ದುಂದು ವೆಚ್ಚ ಮಾಡಬೇಡ, ನೀನು ಉಳಿಸಿಕೋ ಎಂದು. ಒಂದು ಸೀರೆ ಕೊಂಡೊಯ್ದರೂ ಅಷ್ಟೇ, ನನಗೆ ಯಾಕೆ ಮನೆಯಲ್ಲೇ ಇಷ್ಟೊಂಡು ಸೀರೆ ಇಲ್ವಾ? ಎನ್ನುತ್ತಾರೆ. ಮರುಕ್ಷಣವೇ ಅರ್ಧ ಊರಿಗೆ ತೋರಿಸಿರುತ್ತಾರೆ ನಮ್ಮ ಹರಿ ತಂದಿದ್ದು, ಎಂದು.
           ನನ್ನ ಅನೇಕಾ ಮಹಾನುಭಾವರಿದ್ದಾರೆ, ಜೊತೆಯಲ್ಲಿಯೇ ಕುಡಿದಿರುತ್ತಾರೆ, ಆಮೇಲೆ ಹೇಳುತ್ತಾರೆ, ಅಯ್ಯೋ ಆ ನನ್ಮಗನ, ಅವನು ನಾಲ್ಕು ಕಾಸು ಬಿಚ್ಚಲ್ಲ, ಕಂಜ್ಯೂಸ್, ಕೇಳಿದರೇ ಕುಡಿಸಬೇಕಾಗುತ್ತೆ ಅಂತಾ ಕುಡಿಯೋದನ್ನೇ ಬಿಟ್ಟಿದ್ದೀನಿ ಅಂತಾ ನಾಟಕ ಆಡ್ತಾನೆ ಎಂದವರು ಇದ್ದಾರೆ. ನಿಯತ್ತಿಲ್ಲದ ನಾಯಿಗಳನ್ನು ಸಾಕುವುದಕ್ಕಿಂತ ಕಾಮಧೇನುವಿನಂಥಹ ಅಪ್ಪ ಅಮ್ಮನ ಬಗ್ಗೆ ಒಲವು ತೋರಿಸುವುದು ಉತ್ತಮವಲ್ಲವೇ? ನಾನು ಇಲ್ಲಿ ಯಾರನ್ನೂ ಬೆರಳು ಮಾಡಿ ತೋರಿಸುತ್ತಿಲ್ಲಾ. ಓದಿದವರಾರು ಇದು ನನಗೆ ಇವನು ಹೇಳುತ್ತಿದ್ದಾನೆಂದು ಭಾವಿಸುವುದು ಬೇಡ. ನನ್ನ ಅನೇಕ ಸ್ನೇಹಿತರು, ಗೆಳತಿಯರು ನನಗೆ ಪ್ರಾಣಕಿಂತ ಮಿಗಿಲು. ಆದರೇ, ಕೆಲವರು ದ್ರೋಹಿಗಳು ಅಷ್ಟೇ. ಜಗತ್ತನ್ನು ದುಡ್ಡಿನಿಂದಲೇ ಅಳೆದವರಿದ್ದಾರೆ ಅಂಥವರ ಬಗ್ಗೆ ಹೇಳಿದ್ದೇನು. ಅವರಿಂದ ದೂರವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ ಕೂಡ. ಆದರೂ, ಬೆನ್ನತ್ತಿ ಬರುವ ಭೂತದಂತೆ ಒಮ್ಮೊಮ್ಮೆ ಕಾಡುತ್ತಾರೆ. ಒಮ್ಮೆ ರುಚಿ ನೋಡಿದ ಬೆಕ್ಕು ಪದೇ ಪದೇ ಬರುವ ಹಾಗೆ. ಜೀವನದಲ್ಲಿ ಹಣ ಮುಖ್ಯವಾಗುವುದಿಲ್ಲ, ಕೇವಲ ಅಪ್ಪ ಅಮ್ಮ, ಮತ್ತೂ ಸತ್ಯವಾದ ನಾಲ್ಕು ಜನ ಸ್ನೇಹಿತರು. ನಿಮ್ಮ ಇರುವಿಕೆಗಾಗಿ ಬರುವವರು ನಿಮ್ಮಲ್ಲಿರುವುದನ್ನು ದೋಚುವ ತನಕ ಮಾತ್ರ. ಪ್ರೀತಿಗೆ ಬರುವವರ ನಿಮ್ಮಲ್ಲಿ ಏನೂ ಇಲ್ಲದಿದ್ದರೂ ಬರುತ್ತಾರೆ, ಜೊತೆಗಿರುತ್ತಾರೆ. ಹಾವಿಗೆ ವಿಷ ಎರೆಯುವ ಬುದ್ದಿಯನ್ನು ಬಿಡಬೇಕು ನಾವು. ಯಾವುದೋ ಮೋಹಕ್ಕೆ ಬಲಿಯಾಗಿ, ಬೇಡದ ನಾಯಿಯನ್ನು ಸಾಕಿ ಸಾಲ ಮಾಡುವುದಕ್ಕಿಂತ ಪ್ರೀತಿಯ ಅರಮನೆ ಕಟ್ಟುವುದು ಲೇಸು.

06 ಜುಲೈ 2012

ತಳ ಬುಡವಿಲ್ಲದ ಬರವಣಿಗೆ!! ಓದುವುದು ವ್ಯರ್ಥ!!!


ಎಕನಾಮಿಕ್ ಹಿಸ್ಟರಿ ಪೇಪರ್ ಮುಗಿಸಬೇಕು, ಪರಿಸರಕ್ಕೆ ಸಂಬಂದಿಸಿದ ಪೇಪರ್ ಮುಗಿಸಬೇಕು, ಡಿಎಫ಼್ ಗೆ ಕೆಲವು ನಿಯಮಗಳನ್ನು ಬರೆದು ಮುಗಿಸಬೇಕು. ಅಲ್ಲಾಡದೇ ಕೂತು ಮಾಡಿದರೂ ಮೂರು ವಾರಕ್ಕೆ ಆಗುವಷ್ಟು ಕೆಲಸವಿದೆ. ಇದರ ನಡುವೆ ಆಫೀಸಿನಲ್ಲಿ ಇಂಟರನೆಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲವಲ್ಲವೆಂದು ಯೋಚಿಸುವಾಗ ಇಂದು ಬೆಳ್ಳಗ್ಗೆ ತಲೆಯಲ್ಲಿ ಒಡಾಡಿದ ಹುಳುಗಳು ನೆನಪಿಗೆ ಬಂದೆವು. ಬೆಳ್ಳಿಗ್ಗೆ ನಳಪಾಕ ಮಾಡುವ ಸಮಯದಲ್ಲಿ, ಆ ದೇವಿಯ ಅನುಗ್ರಹದಂತೆ ಟೊಮೋಟೊ ಬಾತ್ ಮಾಡಿದೆ. ದೇವಿಯನ್ನು ನೆನಪಿಸಿಕೊಂಡು ಮಾಡಿದ್ದರಿಂದ ಅದ್ಬುತವಾಗಿಯೇ ಬಂತು. ಅದಾದ ಮೇಲೆ ಎಣ್ಣೆ ಅಂಟಿದ್ದ ಪಾತ್ರೆಗಳನ್ನು ತೊಳೆಯುತ್ತಿದ್ದೆ. ವಿಮ್ ಕಂಪನಿಯವರ ಲಿಕ್ವಿಡ್ ಹಾಕಿ ಉಜ್ಜಿದ ತಕ್ಷಣ ಎಣ್ಣೆಯಲ್ಲ ಮಾಯವಾಯಿತು. ನನಗೆ ಅನೇಕ ವಸ್ತುಗಳ ಹೆಸರು ಗೊತ್ತಿಲ್ಲ. ಅನೇಕ ಹೋಟೆಲುಗಳಿಗೆ ಹೋದಾಗಲೂ ಅಷ್ಟೇ, ಏನು ಚೆನ್ನಾಗಿದೆ ನಿಮ್ಮಲ್ಲಿ ಎಂದು ಕೇಳುತ್ತೇನೆ. ಆ ಮೆನು ನೋಡಿ ನಿರ್ಧರಿಸಿದರೇ ನಮ್ಮ ಗತಿ ಅಷ್ಟೇ. ನಾನು ವಿಜಿ ಒಮ್ಮೆ ಹೋಟೆಲಿನಲ್ಲಿ ಕುಳಿತಾಗ ಅವನು ಆರ್ಡರ್ ಮಾಡಿದ, ಹರಿಯಾಲಿನೋ ಹಳಿಯಾಲೀನೋ ಕಬಾಬ್ ಅಂತೆ, ಬಂದ ಮೇಲೆ ನೋಡಿದರೇ ವಡೆ, ಸ್ವಲ್ಪ ಪುದಿನ ಗಿದಿನ ಚೆನ್ನಾಗಿ ಹಾಕಿದ್ದರು. ಈ ವಿಷಯ ಬಂದದ್ದು ಯಾಕೆಂದರೇ, ನನಗೆ ಆ ಪಾತ್ರೆ ತೊಳೆಯುವ ಲಿಕ್ವಿಡ್ ಹೆಸರು ಗೊತ್ತಿಲ್ಲ, ಈಗೆಲ್ಲಾ ಮಾಲುಗಳಾಗಿರುವುದರಿಂದ ಕೇಳುವ ಅವಶ್ಯಕತೆ ಇಲ್ಲ. ಅಲ್ಲಿರುವುದನ್ನು ಎತ್ತು ಕೊಂಡು ಬಂದು ಬಿಲ್ ಪಾವತಿ ಮಾಡಿಬರುವುದಷ್ಟೆ.

ನನಗೆ ಚೆನ್ನಾಗಿಯೇ ನೆನಪಿದೆ, ನಾವು ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಇಡೀ ತಿಂಗಳಿಗೆ ಬೇಕಾಗಿರುವ ಸಾಮಾನುಗಳನ್ನು ತರಬೇಕಿತ್ತು, ಅದರಲ್ಲೇನು ವಿಶೇಷ ಎನ್ನಬೇಡಿ. ಅದನ್ನು ಬರೆಯುವುದಕ್ಕೆ ಕೂರುವುದು, ಪಟ್ಟಿ ತಯಾರಿಸುವುದು ಅದ್ಬುತಾವೆನಿಸುತ್ತದೆ. ನಾನು ಹೈಸ್ಕೂಲಿಗೆ ಹೋದಮೇಲೆ ನಾನೇ ಬರೆಯುವುದು ತರುವುದು ಆಯ್ತು. ಬರೆಯುವ ಸಮಯದಲ್ಲಿ ನಾನು ಅಪ್ಪ ಅಮ್ಮ ಮೂವರು ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೇವು. ಅಮ್ಮಾ ಅಡುಗೆ ಮನೆಯಲ್ಲಿ ಎಲ್ಲಾ ಡಬ್ಬಿಗಳನ್ನು ನೋಡಿ ನೋಡಿ ಹೇಳುತ್ತಿದ್ದರೇ, ನಾನು ಬರೆಯುವುದು, ಅಪ್ಪ ಎಷ್ಟು ಬೇಕೆಂದು ಹೇಳುವುದು ನಡೆಯುತ್ತಿತ್ತು. ಅಮ್ಮನ ಸರದಿ ಮುಗಿದ ಮೇಲೆ, ಅಪ್ಪನ ಸರದಿ, ಬ್ಲೇಡ್, ಶೇವಿಂಗ್ ಕ್ರ‍ೀಂ ಹೀಗೆ, ಅದಾದ ನಂತರ ನನಗೆ ಬೇಕಿರುವ ಪೆನ್ನು ಪೆನ್ಸಿಲ್ ಹೀಗೆ ನಡೆಯುತ್ತಿತ್ತು. ಒಂದು ತಿಂಗಳಿಗೆ ಆಗುವಷ್ಟು ಒಮ್ಮೆ ತಂದರೇ ಮುಂದಿನ ತಿಂಗಳು ಐದನೇಯ ತಾರೀಖಿನ ತನಕ ಆ ಅಂಗಡಿಗೆ ಕಾಲು ಇಡುತ್ತಿರಲಿಲ್ಲ. ಅದಲ್ಲದೇ, ಅದೆಲ್ಲವೂ ಸಾಲದ ಲೆಕ್ಕದಲ್ಲಿ ತರುತ್ತಿದ್ದೆ. ಒಂದು ಸಾಮಾನು ಹೆಚ್ಚು ಕಡಿಮೆಯಾಗಿದ್ದರೇ ನಾಳೆ ಸ್ಕೂಲಿಗೆ ಹೋದಾಗ ಕೇಳಿಕೊಂಡು ಬರಬೇಕಿತ್ತು. ಇದಾದ ನಂತರ ಪ್ರತಿ ಗುರುವಾರ ಕೊಣನೂರಿನಲ್ಲಿ ಸಂತೆ ಇರುತ್ತಿತ್ತು. ತರಕಾರಿ ತರುವ ಜವಬ್ದಾರಿ ನನ್ನ ತಲೆಯ ಮೇಲೆ ಬಿತ್ತು. ಇಪ್ಪತ್ತು ರೂಪಾಯಿ ಕೊಡುತ್ತಿದ್ದರು, ಅದರಲ್ಲಿ ಮನೆಗೆ ಬೇಕಿರುವ ಎಲ್ಲಾ ಸಾಮಾನುಗಳನ್ನು ತೆಗೆದುಕೊಳ್ಳುತ್ತಿದ್ದೆ. ನನಗೆ ಅಚ್ಚರಿ ಏನೆಂದರೇ, ನಾನು ಈಗ ತರುವ ಅದೇ ತರಕಾರಿಯನ್ನೇ ಅಂದೂ ತರುತ್ತಿದ್ದೆ. ಹಾಗಲಕಾಯಿ, ತೊಂಡೆಕಾಯಿ, ಬದನೆಕಾಯಿ, ಆಲೂಗೆಡ್ಡೆ. ಇದರ ನಡುವೆ ನನಗೆ ಇಷ್ಟವಾಗುವ ಕರೀಮೀನು, ಒಣಗಿದ ಮೀನು, ಉಪ್ಪು ಮೀನನ್ನು ತರುತ್ತಿದ್ದೆ, ಕಡೆಯದಾಗಿ ಕಡ್ಲೆಪುರಿ ಇರಲೇಬೇಕಿತ್ತು. ಇಷ್ಟೇಲ್ಲವೂ ಇಪ್ಪತ್ತು ರೂಪಾಯಿಗೆ, ಅದರಲ್ಲಿಯೇ ಎರಡು ರೂಪಾಯಿ ಉಳಿಸಿ ಅರ್ಧ ಮಸಾಲ ಪೂರಿ ತಿಂದಿರುವ ದಿನಗಳಿವೆ.

ಇಷ್ಟೊಂದು ಪೈಸಾ ಟೂ ಪೈಸಾ ತರಕಾರಿ ತರುತ್ತಿದ್ದ ನಾನು ಈಗ ಖರ್ಚು ಮಾಡುವ ರೀತಿ ನೋಡಿ ನನ್ನ ಗೆಳತಿಯೇ ಕೇಳಿದ್ದಾಳೆ, ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೆಂದು. ಆಗ ನನ್ನ ವಾದ ಸರಣಿಯೂ ಇರುತ್ತದೆ ಬಿಡಿ. ಅದೆಲ್ಲವೂ ಬಾಯಿಯಿಂದ ಅವಳನ್ನು ಗೆಲ್ಲಲೂ ಮಾತ್ರ, ಒಳ ಮನಸ್ಸು ಹೇಳುತ್ತಿರುತ್ತದೆ ಹೌದು ನಾನು ಮಾಡುತ್ತಿರುವುದು ತಪ್ಪೆಂದು, ಒಪ್ಪಿದರೇ ಅವಳು ಇನ್ನೂ ಮೇಲೆ ಹೋಗುತ್ತಾಳೆಂಬ ಆತಂಕ. ನಾನು ಹೇಳಹೊರಟದ್ದು ಬದಲಾದ ಜೀವನ ಮತ್ತು ಜೀವನ ಪದ್ದತಿಯ ಬಗ್ಗೆ. ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ ನಾನು ಇಂಥಹ ಒಂದು ಜಗತ್ತಿದೆ ಬರುತ್ತೇನೆಂದು. ಚಿಕ್ಕವನಿದ್ದಾಗ ಅಮ್ಮ ಪಾತ್ರೆ ತೊಳೆಯುವುದಕ್ಕೆ ಪರದಾಡುತ್ತಿದ್ದ ರೀತಿ ಅಯ್ಯೋ ಎನಿಸುತ್ತದೆ. ನಮ್ಮ ಮನೆಗೆ ನಲ್ಲಿಯೂ ಇರದ ಸಮಯದಲ್ಲಿ, ಪಕ್ಕದ ಮನೆಯವರ ನಲ್ಲಿಯಲ್ಲಿ ನೀರು ಹಿಡಿಯಬೇಕಿತ್ತು, ಆಗ ಊರಿಗೆ ಟ್ಯಾಂಕ್ ಇರಲಿಲ್ಲ ಆದ್ದರಿಂದ ಕರೆಂಟ್ ಬಂದ ಸಮಯದಲ್ಲಿ ನೀರು ಬರುತ್ತಿತ್ತು, ರಾತ್ರಿ ಒಂದು ಗಂಟೆ ಎರಡು ಗಂಟೆ ಎನ್ನುವುದನ್ನು ಲೆಕ್ಕಿಸದೇ ಅಮ್ಮಾ ನೀರು ಹಿಡಿಯುತ್ತಿದ್ದರು. ನನಗೆ ಖುಷಿ ಎನಿಸುವುದು ಆ ಸಮಯದಲ್ಲಿ ನಾನು ಮಲಗಿರುತ್ತಿದ್ದೆ, ಆದರೇ ನಮ್ಮಪ್ಪ ನೀರು ಹಿಡಿಯುವುದಕ್ಕೆ ಸಹಾಯ ಮಾಡುತ್ತಿದ್ದರು. ನಮ್ಮಪ್ಪನ ಬಗ್ಗೆ ಬೇರೇನೇ ಹೇಳಿದರೂ ಅವರು ಮನೆಯ ಕೆಲಸದ ವಿಚಾರದಲ್ಲಿ ಬಹಳ ಒಳ್ಳೆಯವರು. ಅಡುಗೆ ಮಾಡಲು ಸಹಾಯ ಮಾಡಿದ ದಿನಗಳು ಇವೆ, ಅಡುಗೆ ಮಾಡಿದ ದಿನಗಳು ಇವೆ.

ಪಾತ್ರೆ ತೊಳೆಯುವುದಕ್ಕೆ ನೀರಿಗೆ ಸಮಸ್ಯೆ ಇದ್ದಾಗ, ನಮ್ಮಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಹರಿಯುತ್ತಿದ್ದ ಹಾರಂಗಿ ನಾಲೆಗೋ ಅಥವಾ ಒಮ್ಮೊಮ್ಮೆ ಮನೆಯಿಂದ ಒಂದು ಕೀಮಿ ದೂರದಲ್ಲಿ ಹರಿಯುತ್ತಿದ್ದ ಕಟ್ಟೇಪುರ ಕಾಲುವೆಗೋ ಹೋಗುತ್ತಿದ್ದರು. ಇಡೀ ದಿನದ ಪಾತ್ರೆಯಲ್ಲವನ್ನೂ ತುಂಬಿಕೊಂಡು ಕಾಲುವೆಗೆ ಹೋಗಿ ತೊಳೆದುಕೊಂಡು ಬರುವುದು ನಮ್ಮಮ್ಮ ಅನುಸರಿಸಿದ ರೀತಿ. ಇದರಲ್ಲಿ ನನಗೆ ಬಹಳ ಸಮಸ್ಯೆಯಾಗುತ್ತಿತ್ತು, ಮುಸ್ಸಂಜೆಯ ಸಮಯದಲ್ಲಿಯೂ ಅಥವಾ ಮುಂಜಾನೆಯಲ್ಲಿಯೋ ಹೋಗುತ್ತಿದ್ದರಿಂದ ನಾನು ಅವರ ಜೊತೆಗೆ ಹೋಗಬೇಕಿತ್ತು. ನಮ್ಮಪ್ಪ ಅಮ್ಮನಿಗೆ ಬೈಯ್ಯುತ್ತಿದ್ದರು, ಅದೇನು ನಿಮಗೆ ಸಂಜೆ ಸಮಯದಲ್ಲಿ ಹೋಗುತ್ತಿರಾ? ಸ್ವಲ್ಪ ಮುಂಚಿತವಾಗಿ ಹೋಗಿ ಬಂದರೇನು? ಮುಸ್ಸಂಜೆ ಹೊತ್ತು ಹೇಗಿರುತ್ತದೆಯೋ ಹೇಗೋ? ಎಂದು. ಹೆಣ್ಣು ಮಕ್ಕಳು ಮುಸ್ಸಂಜೆಯ ಸಮಯದಲ್ಲಿ ಕಾಲುವೆ ಕಡೆಗೆ ಅಥವಾ ಕಟ್ಟೆಯ ಕಡೆಗೆ ಹೋಗುತ್ತಿರಲಿಲ್ಲ. ನಮ್ಮೂರಿನ ಸುತ್ತಲೂ ಕಾವೇರಿ ಹರಿಯುತ್ತದೆ. ಅದನ್ನು ನಿಮಗೆ ಬಣ್ಣಿಸಬೇಕೆಂದರೇ, ನೀವು ಒಂದು ಹುರುಳಿ ಬೀಜವನ್ನು ತೆಗೆದುಕೊಂಡರೇ, ಅದರ ಬಲಭಾಗದಿಂದ ಬಂದು ಎಡಭಾಗದಿಂದ ಹೊರಕ್ಕೆ ಹೋಗುತ್ತಿತ್ತು, ಗೊಂದಲವಾಗಬೇಡಿ. ಸರಿಯಾಗಿ ಹೇಳುತ್ತೇನೆ. ನಮ್ಮೂರಿಗೆ ಕಾವೇರಿ ನದಿ ಬಲಕ್ಕೆ ಹರಿದು ಬಂದು ಊರಿನ ಜಮೀನನ್ನು ಬಳಸಿ ಎಡಕ್ಕೆ ಹಾದು ಹೋಗುತ್ತಿತ್ತು. ಬಲಭಾಗದಲ್ಲಿ ಹರಿಯುವ ಕಡೆ, ಊರಿನವರು ಹೋಗಿ ಬಟ್ಟೆ ಬರೆಗಳನ್ನು ತೊಳೆಯುತ್ತಿದ್ದರು, ಅಲ್ಲಿಯೇ ಹೊಳೆ ಬಸಪ್ಪನ ಗುಡಿ ಇದ್ದಿದ್ದರಿಂದ, ದೇವರು ನಮ್ಮನ್ನು ಕಾಪಾಡುತ್ತಾನೆಂಬುದು ನಂಬಿಕೆ. ಆದರೇ, ಎಡಭಾಗದಲ್ಲಿ ಅರ್ಧ ವಯಸ್ಸಿಗೆ ಸತ್ತವರನ್ನು ಸುಡುವುದು, ಊಳುವುದು ವಾಡಿಕೆಯಾಗಿತ್ತು. ಆದ್ದರಿಂದ ಕಟ್ಟೆ ಕಡೆಗೆ ಹೋಗುವುದು, ಆ ಹಾದಿಯಲ್ಲಿ ನಡೆದಾಡುವುದು ಒಳ್ಳೆಯದಲ್ಲವೆಂಬ ನಂಬಿಕೆ ಬಲವಾಗಿತ್ತು. ನಮ್ಮಮ್ಮ ಮುಸ್ಸಂಜೆಯಲ್ಲಿ ಪಾತ್ರೆ ತೊಳೆಯಲು ಹೋಗುವುದು, ಮುಂಜಾನೆಯ ಸಮಯಕ್ಕೆ ಹೋಗುವುದು ನಮ್ಮಪ್ಪನಿಗೆ ಹಿಡಿಸುತ್ತಿರಲಿಲ್ಲ. ಮೊದಲಿನಿಂದಲೂ ನಮ್ಮಮ್ಮನ ಆರೋಗ್ಯ ಸರಿ ಇಲ್ಲದಿದ್ದರಿಂದಲೂ ಸ್ವಲ್ಪ ಜಾಸ್ತಿ ಕೆಲಸ ಮಾಡಿದ ದಿನಗಳು ಸುಸ್ತಾಗಿ ಮಲಗುತಿದ್ದರು. ಆ ದಿನಗಳಲ್ಲಿ ನಮ್ಮಪ್ಪನ ಹರಿಕಥೆ ಶುರುವಾಗುತ್ತಿತ್ತು, ಬೇಡವೆಂದರೂ ಕೇಳುವುದಿಲ್ಲ, ಮುಸ್ಸಂಜೆ, ಮುಂಜಾನೆ ಹೊಳೆಗೆ ಹೋಗುವುದು ಒಳ್ಳೆಯದಲ್ಲ ಅದಕ್ಕೆ ಹೀಗೆ ಆಗುವುದು, ಅದು ಇದು ಎಂದು ಬೈಯ್ಯುತ್ತಿದ್ದರು. ಬೈಗುಳಕ್ಕೆ ಪ್ರತಿಯಾಗಿ ನಮ್ಮಮ್ಮ ಹೋಗುವುದನ್ನೇನು ನಿಲ್ಲಿಸಲಿಲ್ಲ, ಆದರೇ, ನನ್ನನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಶುರುಮಾಡಿಕೊಂಡರು.

ನಾನು ಮನೆಗೆ ಸಾಮಾನು ತರುವಾಗ, ಸಬೀನಾ ಪೌಡರ್ ಮತ್ತು ವಿಮ್ ಬಾರನ್ನು ತರುತ್ತಿದ್ದೆ. ನನಗಿಂದಿಗೂ ತಿಳಿಯದ ವಿಷಯವೆಂದರೇ, ನಮ್ಮಮ್ಮ ಅವುಗಳನ್ನು ಮಿತವಾಗಿ ಬಳಸುತ್ತಿದ್ದರು. ಅದರ ಜೊತೆಗೆ, ಸಾಮಾನ್ಯವಾಗಿ ಬೂದಿ ಮತ್ತು ಹೊಳೆ ದಂಡೆಯ ಮಣ್ಣನ್ನು ಬಳಸುತ್ತಿದ್ದರು. ನಾನು ನಮ್ಮಮ್ಮನಿಗೆ ಬೈಯ್ಯುತ್ತಿದ್ದೆ, ಅಲ್ಲಾ, ಚೆನ್ನಾಗಿರುವ ಸಬೀನಾ ಇರುವಾಗ, ವಿಮ್ ಬಾರ್ ಇರುವಾಗ ನೀವು ಈ ಬೂದಿಯಲ್ಲಿ, ಆ ಮಣ್ಣಿನಲ್ಲಿ ಪಾತ್ರೆಯನ್ನು ಉಜ್ಜುತ್ತೀರಲ್ಲಾ? ಎಂದರೇ, ಅಮ್ಮ ಸಾವಧಾನದಿಂದ ಹೇಳುತ್ತಿದ್ದರು, ವಿಮ್ ಬಾರಿಗೆ ಏನು ಕಡಿಮೆ ದುಡ್ಡಾ? ಏಳು ರೂಪಾಯಿ. ಮಣ್ಣಿಗೆ ಬೂದಿಗೆ ದುಡ್ಡು ಕೊಡಬೇಕಾ? ಸಬೀನಾ ಪುಡಿ ಜೊತೆಗೆ ಬೂದಿ ಹಾಕಿ ತೊಳೆದರೇ ಪಾತ್ರೆ ಫಳ ಫಳವೆನ್ನುತ್ತದೆ, ಎನ್ನುತ್ತಿದ್ದರು. ಇಂದಿಗೂ ಅಷ್ಟೇ ನಮ್ಮ ಮನೆಯಲ್ಲಿ ಪಾತ್ರೆ ತೊಳೆಯುವ ಜಾಗದಲ್ಲಿ, ಬೂದಿ, ಮಣ್ಣು, ವಿಮ್ ಬಾರ್, ಜೊತೆಗೆ ತೆಂಗಿನ ನಾರು ಇರುತ್ತದೆ. ನಾವು ಪರಿಸರ ಸ್ನೇಹಿ, ಮರುಪಯೋಗದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತೇವೆ, ಆದರೇ ನಿಜಕ್ಕೂ ಅದನ್ನು ಪಾಲಿಸುತ್ತಿರುವುದು, ಹಳ್ಳಿಯವರು ಮಾತ್ರ. ನನ್ನೂರಿನಲ್ಲಿ ಪಾತ್ರೆ ತೊಳೆಯುವುದಕ್ಕೆ ದಾರಿಯಲ್ಲಿ ಬಿದ್ದಿರುತ್ತಿದ್ದ ಭತ್ತದ ಹುಲ್ಲನ್ನು ಬಳಸುತ್ತಿದ್ದರು, ತೆಂಗಿನ ನಾರು, ತೆಂಗಿನ ಕಾಯಿಯ ಜುಟ್ಟನ್ನು ಬಳಸುತ್ತಿದ್ದರು. ಇಂದಿಗೂ ಅಷ್ಟೇ, ಹಬ್ಬದ ದಿನ ಹೆಚ್ಚು ಜನರಿಗೆ ಅಡುಗೆ ಮಾಡಬೇಕಾದ್ದ ಸಂದರ್ಭದಲ್ಲಿ ಪಾತ್ರೆಗಳಿಗೆ ಹೊರಗಿನಿಂದ ಮಣ್ಣಿನಲ್ಲಿ ಸಾರಿಸುತ್ತಾರೆ, ಹಾಗೆ ಮಾಡಿದರೆ ಮಸಿ/ಕಪ್ಪಾಗುವುದಿಲ್ಲವೆಂದು. ಮನೆಯಲ್ಲಿ ಇಡ್ಲಿ ಮಾಡುವಾಗ ಇಡ್ಲಿ ಪಾತ್ರೆಗೆ ಅಮ್ಮಾ ನೀರಿಗೆ ಬೂದಿಯನ್ನಿ ಮಿಕ್ಸ್ ಮಾಡಿ ವರೆಸುತ್ತಿದ್ದರು.

ನಾನು ಇದನ್ನೆಲ್ಲಾ ಯಾಕೆ, ಹೇಳಿದನೆಂದರೇ, ನಾನು ಮುಂಜಾನೆ ಪಾತ್ರೆ ತೊಳೆಯುವಾಗ ನನಗೆ ಕಿಂಚಿಷ್ಟೂ ಶ್ರಮವೆನಿಸಲಿಲ್ಲ. ನಾಲ್ಕು ಹನಿ ವಿಮ್ ಲಿಕ್ವಿಡ್ ನಿಂದ, ಉಜ್ಜಿದೆ, ನಲ್ಲಿಯಿಂದ ನೀರಿಗೆ ಹಿಡಿದೆ, ಮುಕ್ತಾಯವಾಯಿತು. ಐದು ನಿಮಿಷದಲ್ಲಿ ಹತ್ತು ಹನ್ನೆರಡು ಪಾತ್ರೆಗಳನ್ನು ತೊಳೆದೆ. ಪಾತ್ರೆಗಳಲ್ಲಿ ಮಸಿ ಇರಲಿಲ್ಲ, ಹೆಚ್ಚು ಕೊಳಕು ಇರಲಿಲ್ಲ. ಆ ದಿನಗಳಲ್ಲಿ ಪಾತ್ರೆಗಳೆಲ್ಲಾ ಕಪ್ಪಾಗಿರುತ್ತಿದ್ದವು, ಸೌದೆಯಲ್ಲಿ ಅಡುಗೆ ಮಾಡುತ್ತಿದ್ದರಿಂದ, ಅಡುಗೆ ಮಾಡುವಾಗ ಮಾಡಿದ ಮೇಲೆ ಎಲ್ಲ ಸಮಯದಲ್ಲಿಯೂ ಕಷ್ಟವೆನಿಸುತ್ತಿತ್ತು. ಈಗ ಎಲ್ಲವೂ ಸರಾಗವಾಗಿದೆ. ಅಂಗಡಿಗೆ ಹೋಗಿ ಅಲ್ಲಿಂದ ಫೋನ್ ಮಾಡಿ, ಎಸ್ ಎಂಎಸ್ ಮಾಡಿ ಕೇಳಬಹುದು, ಬೇಕಿರುವುದನ್ನು ಆಯ್ಕೆ ಮಾಡಿಕೊಂಡು ತೆಗೆದುಕೊಂಡು ಬರಬಹುದು. ದುಡ್ಡಿಗೆ ಮಾತ್ರ ಬೆಲೆಯಿಲ್ಲ. ಇಪ್ಪತ್ತು ರೂಪಾಯಿಗೆ ಅಷ್ಟೆಲ್ಲಾ ತರುತ್ತಿದ್ದ ನಾನು, ಈಗ ಅರ್ಧ ಲೀಟರ್ ಹಾಲು, ಒಂದು ಸಿಗರೇಟು ಮತ್ತೊಂದು ಮಿಂಟ್ ತೆಗೆದುಕೊಂಡು ಬರುತ್ತೇನೆ. ಇಪ್ಪತ್ತು ರೂಪಾಯಿಗೆ ಬರುವುದು ಅಷ್ಟು ಮಾತ್ರ. ಪಟ್ಟಣದ ಅನೇಕರಿಗೆ ನಾನು ಮೇಲೆ ಹೇಳಿದ ಮಾತುಗಳು ಒಪ್ಪುವುದಿಲ್ಲ, ಹಿಡಿಸುವುದು ಇಲ್ಲ.

ಇಷ್ಟೆಲ್ಲಾ ಬರೆದ ಮೇಲೆ ನನಗೆ ಅನಿಸಿದ್ದು, ಈ ಬರವಣಿಗೆಯನ್ನು ಬರೆದಿದ್ದು ವ್ಯರ್ಥ ನೀವು ಓದಿದ್ದು ವ್ಯರ್ಥ, ತಳವಿಲ್ಲ ಬುಡವಿಲ್ಲ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...