22 ನವೆಂಬರ್ 2021

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

 

ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಿಗೆ ಬರ ಎದುರಾಗುವ ಮುನ್ಸೂಚನೆಯಿದೆ. 


ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ನವದೆಹಲಿಯ ‘ಕೌನ್ಸಿಲ್ ಆನ್ ಎನರ್ಜಿ ಎನ್ವಿರಾನ್ಮೆಂಟ್ ಆಂಡ್ ವಾಟರ್ (ಸಿ.ಇ.ಇ.ಡಬ್ಲ್ಯು)' ಎಂಬ ಸ್ವಯಂ ಸೇವಾ ಸಂಸ್ಥೆ ತಯಾರಿಸಿರುವ ಇತ್ತೀಚಿನ ಸಂಶೋಧನ ವರದಿಯಲ್ಲಿ ಹಾಸನ ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಮುಂಬರುವ ಬೇಸಿಗೆಯಲ್ಲಿ ಬಿಸಿಲಿನ ಧಗೆ ಹೆಚ್ಚಾಗುವ ಬಗ್ಗೆ ಪ್ರಸ್ತಾಪಿಸಲಾಗಿದೆ. 


ವರದಿಯ ಪ್ರಕಾರ ಅತಿ ಹೆಚ್ಚು ರಿಸ್ಕ್ ಇರುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೆಯ ಸ್ಥಾನದಲ್ಲಿದೆ. ಮೊದಲನೆಯ ಸ್ಥಾನದಲ್ಲಿ ಅಸ್ಸಾಂ, ಎರಡನೆಯದರಲ್ಲಿ ಆಂಧ್ರಪ್ರದೇಶ ಹಾಗೂ ಮೂರನೆಯ ಸ್ಥಾನದಲ್ಲಿ ಮಹರಾಷ್ಟ್ರ ರಾಜ್ಯಗಳಿವೆ. 


ಈ ವರದಿಯಲ್ಲಿ ಬಿಸಿಲು ಹೆಚ್ಚಿರುವ ಅತಿ ಹೆಚ್ಚು ರಿಸ್ಕ್ ಪ್ರದೇಶಗಳಿಂದ ಕಡಿಮೆ ರಿಸ್ಕ್ ಇರುವ ಪ್ರದೇಶಗಳ ಮಾಹಿತಿಯನ್ನು ಒದಗಿಸಲಾಗಿದೆ. ಹಾಸನ ಜಿಲ್ಲೆ  ರಿಸ್ಕ್ ಇರುವ ಪ್ರದೇಶದಲ್ಲಿ ಸ್ಥಾನ ಪಡೆದಿದೆ. ರಾಜ್ಯದ ಅತೀ ಹೆಚ್ಚು ರಿಸ್ಕ್ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ, ಚಾಮರಾಜನಗರ, ಕೋಲಾರ, ದಾವಣಗೆರೆ, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಿವೆ. 


ಇದು ರಾಜ್ಯದ ಜನತೆಗೆ ಹವಮಾನ ವೈಪರಿತ್ಯದ ಕುರಿತು ಎಚ್ಚರಿಕೆ ಗಂಟೆಯಾಗಿದ್ದು, ಮುಂಬರುವ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಬರಗಾಲ ಬೀರುವ ಮತ್ತು ಉಷ್ಣಾಂಶ ಹೆಚ್ಚಾಗುವ ಮುನ್ನೆಚ್ಚರಿಕೆಯನ್ನು ನೀಡಿದೆ. ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾದರೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ, ಬರದ ಭೀತಿ ಎದುರಾಗಲಿದೆ ಎಂಬ ಆತಂಕವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಬಡವರ ಊಟಿ ಎಂದು ಹೆಸರನ್ನು ಪಡೆದಿದ್ದ ಹಾಸನ ಜಿಲ್ಲೆಯು ಈಗ ಸನ್‍ಸಿಟಿಯಾಗಿ ಬದಲಾಗುತ್ತಿರುವುದು ಆತಂಕ ಮೂಡಿಸಿದೆ. ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಿಸುವುದು ಸಮೀಪದಲ್ಲಿಯೇ ಇದೆ. ಬಿಸಿಲು ಹೆಚ್ಚಿ ಮಳೆ ಬರದೇ ಇದ್ದರೆ ಬರ ಎದುರಾಗಿ ರೈತರ ಬದುಕು ದುಸ್ತರವಾಗುತ್ತದೆ. ಮಾನವ ಸಂಪನ್ಮೂಲ ಸದ್ಬಳಕೆ ಆಗುವುದಿಲ್ಲ. ದುಡಿಮೆಯ ಅವಧಿ ಕಡಿಮೆಯಾಗಿ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳುತ್ತದೆ. ಅದಕ್ಕಾಗಿ ಬಿಸಿಲು ತಾಪ ಹೆಚ್ಚಾಗುವುದನ್ನು ತಡೆಯಬೇಕಿದೆ. 


ಬಿಸಿಲು ತಾಪ ನಿಯಂತ್ರಣ ಮಾಡಲು ತಕ್ಷಣವೇ ಜಿಲ್ಲಾಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ರೂಪಿಸಬೇಕು. ಹಸಿರು ಹಾಸನ ಯೋಜನೆ ರೂಪಿಸಬೇಕು. ಅಂತರ್ಜಲ ವೃದ್ಧಿಗೆ ಒತ್ತನ್ನು ನೀಡಬೇಕು. ಬಂಜರು ಭೂಮಿಯನ್ನು ಅರಣ್ಯೀಕರಣ ಮಾಡಬೇಕು. ಏಕವಿಧದ ಮರಗಳನ್ನು ನೆಡದೆ ಬಹುವಿಧದ ಗಿಡಗಳನ್ನು ನೆಡಬೇಕು. ನದಿ ದಂಡೆಯಲ್ಲಿನ ಮರಗಿಡಗಳ ವೈವಿದ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ನದಿ ಆರೋಗ್ಯ ತಜ್ಞ ಮತ್ತು ಪರಿಸರ ವಿಜ್ಞಾನಿ ಡಾ. ಬಿ.ಕೆ.ಹರೀಶ್ ಕುಮಾರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳು ಹಾಗು ವರದಿಗಳಿಗಾಗಿ ಸಂಸ್ಥೆಯ ವೆಬ್ ಸೈಟ್ https://www.ceew.in/ ಗೆ ಭೇಟಿ ನೀಡಿ. 


28 ಅಕ್ಟೋಬರ್ 2021

ನನ್ನ ಚಾರಣದ ಹೊತ್ತಿಗೆಗೆ ಜೊತೆಯಾದ ಇನ್ನೊಂದು ಪುಟ: ಜಂಗ್ಲಿ ನಂಗ್ಲಿ ಆಯಾಮದ ಚಾರಣ -ಭಾಗ 01






ನಾನು ಬರೆಯುವುದು, ಬರೆದಿರುವುದು ನನ್ನ ಅನುಭವಗಳನ್ನು ಕುರಿತು, ಇದು ನನ್ನ ಅನುಭವವಷ್ಟೆ. ಇದನ್ನು ಮತ್ತೊಬ್ಬ ಓದುಗನ ಮನದಲ್ಲಿಟ್ಟು ಬರೆಯುವುದಿಲ್ಲ. ಹಾಗೆ ಬರೆಯ ಹೊರಟರೆ ಅವನ ಮೆಚ್ಚಿಸಲು ಹೋಗಿ ನನಗೆ ದ್ರೋಹ ಬಗೆದಂತಾಗುತ್ತದೆ. ನೇರವಾಗಿ ಸ್ವಲ್ಪ ಉದ್ದವಾದರೂ, ಓದಿಕೊಳ್ಳುವ ಆಸ್ಥೆಯಿದ್ದವರು ಓದಬಹುದು, ಓದಿಸಿಕೊಳ್ಳುವ ಯೋಗ್ಯತೆಯಿದ್ದರೆ ಅನುಭವವೇ ಓದಿಸಿಕೊಳ್ಳುತ್ತದೆ. ಆದರೂ ಒಂದು ವಿಷಯನ್ನು ಹೇಳುತ್ತೇನೆ. ಈ ಲೇಖನದಲಲಿ ನಾವು ತಿಂದಿರುವ ಊಟೋಪಾಚಾರ/ ಆಹಾರಗಳ ವಿವರವನ್ನು ನೀಡಿದ್ದೇನೆ. ಶುದ್ಧ ಶಾಖಾಹಾರಿಗಳಾಗಿದ್ದರೆ ಸ್ವಲ್ಪ ಇರಿಸುಮುರಿಸಾಗಬಹುದು. ನಮ್ಮ ಅನುಭವದ ಕಥನ ಮುಕ್ತವಾಗಿರಲಿ ಎಂಬ ಉದ್ಧೇಶದಿಂದ ಅದನ್ನು ಹಂಚಿಕೊಂಡಿದ್ದೇನೆ. ಅದಕ್ಕೆ ಹೆಚ್ಚಿನ ಮಹತ್ವ ನೀಡದೆ ಓದಿಕೊಳ್ಳಿ. ಪ್ರಮುಖ ಕಥೆಗಿಂತ ಮುಂಚಿತವಾಗಿ ಸಣ್ಣ ಪೀಠಿಕೆಯೊಂದಿರಲಿ.


ಪ್ರೋ. ಚಂದ್ರಶೇಖರ ನಂಗಲಿ ಎಂಬ ಹೆಸರು ಸಾಹಿತ್ಯ ಲೋಕಕ್ಕೆ ಚಿರಪರಿಚಿತ. ಅದರಲ್ಲಿಯೂ ಕುವೆಂಪು, ತೇಜಸ್ವಿ, ಅಲ್ಲಮ, ಪರಿಸರ, ಚಾರಣ, ವಿಮರ್ಶೆ ವಿಚಾರಕ್ಕೆ ಬರುವುದಾದರೇ ಕರುನಾಡಿನ ಎಲ್ಲಾ ಸಾಹಿತ್ಯಾಸಕ್ತರು ಖುಷಿಪಡುವ ಜೀವಿ. ಸೀಕೋ ಸಂಸ್ಥೆ ಕೋವಿಡ್-19ರ ಲಾಕ್ ಡೌನ್ ಸಮಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಪರಿಸರ ಗ್ರಹಿಕೆ ಸರಣಿ ವೆಬಿನಾರ್ ಆಯೋಜಿಸಿತ್ತು. ಆಗ ನೇರ ಪರಿಚಯವಾಗಿದ್ದು ಪ್ರೊ. ಚಂದ್ರಶೇಖರ ನಂಗಲಿ. ಪತ್ರಕರ್ತ ಸ್ನೇಹಿತ ರಾಘವೇಂದ್ರ ತೊಗರ್ಸಿಯವರು ನಂಗಲಿಯವರ ಹೆಸರನ್ನು ಸೂಚಿಸಿದರು. ನಾನು ಅವರಿಗೆ ಹೇಳಿದ್ದೆ, ನಮ್ಮದು ಚಿಕ್ಕ ಸಂಸ್ಥೆ, ಸಣ್ಣ ಕಾರ್ಯಕ್ರಮ, ಅಂತಹ ದೊಡ್ಡ ವ್ಯಕ್ತಿಗಳು ಒಪ್ಪುತ್ತಾರಾ? ಅದೇ ಸಮಯಕ್ಕೆ ಸುರಾನ ಕಾಲೇಜಿನ ಡಾ. ಸತ್ಯನಾರಾಯಣರವರನ್ನು ವಿಚಾರಿಸಿದೆ. ಅವರಿಬ್ಬರ ಅನಿಸಿಕೆ ಒಂದೇ ಆಗಿತ್ತು. ನಂಗಲಿಯವರು ತೇಜಸ್ವಿ, ಕುವೆಂಪು, ಚಾರಣ ಸಾಹಿತ್ಯ ಕುರಿತಂತೆ ಆಳವಾಗಿ ಮತ್ತು ಅನುಭವದಿಂದ ಮಾತಾಡುವವರು ಹಾಗೂ ದೊಡ್ಡ ವೇದಿಕೆ, ಸಣ್ಣ ವೇದಿಕೆ ಎಂಬ ತಾರತಮ್ಯವಿರುವುದಿಲ್ಲ. ನಿಮ್ಮ ಗಂಬೀರತೆ ಅವರಿಗೆ ಅರಿವಾದರೆ ಸಾಕು, ಅದನ್ನು ನೀವು ಮಾಡಿ ಎಂದರು. ಅದರಂತೆಯೇ ವೆಬಿನಾರ್ ಆಹ್ವಾನ, ಕರೆಗಳು, ಸಿದ್ಧತೆ ಇತ್ಯಾದಿ ನಡೆಯಿತು. ಆ ಸಮಯದಲ್ಲಿ ನನಗೆ ಬಹಳ ಇಷ್ಟವಾದದ್ದು ಅವರ ವ್ಯಕ್ತಿತ್ವ. ಸರಳ ನಿರೂಪಣೆ, ನೇರವಾಗಿ ನಿಷ್ಠುರವಾಗಿ ಹಾಗೂ ಅಚ್ಚುಕಟ್ಟಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಗಮನಿಸಿ ತಿಳಿಸುವುದು. 


ಈ ಮೇಲಿನ ಮಾತುಗಳನ್ನು ಸ್ವಲ್ಪ ವಿವರಣೆಯೊಂದಿಗೆ ತಿಳಿಸಬಯಸುತ್ತೇನೆ. ನಾಲ್ಕೈದು ಸ್ಲೈಡ್‍ಗಳು ಬೇಕು ಎಂದರು. ಸಾಹಿತ್ಯಕ್ಕೆ? ಎಂತಹ ಸ್ಲೈಡ್ ಎಂದುಕೊಂಡೆ. ಅದು ಸಾಹಿತ್ಯದ ವೆಬಿನಾರ್ ಎನ್ನುವುದಕ್ಕಿಂತ ಪರಿಸರ ವಿಜ್ಞಾನದ್ದು ಎನ್ನುವ ಮಟ್ಟಕ್ಕೆ ನಡೆಯಿತು. ಒಂದೊಂದು ಸ್ಲೈಡ್‍ಗಳಲ್ಲಿ ಅಕ್ಷರಗಳನ್ನೂ, ಚಿತ್ರಗಳ ಗಾತ್ರಗಳ ಸಮೇತ ಸಮವಾಗಿರುವಂತೆ ನೋಡಿಕೊಂಡು ತಿದ್ದಿಸಿದರು. ಸಮಯ ಪಾಲನೆ, ಶಿಸ್ತು ಒಂದು ಬಗೆಯಾದರೇ ಮತ್ತೊಂದು ಔಪಚಾರಿಕೆಯಿಂದ ದೂರವಿರುವುದು. ನನ್ನ ಪರಿಚಯ ಅಂತೆಲ್ಲಾ ಮಾಡೋಕೆ ಹೋಗ್ಬೇಡಿ ಸುಮ್ಮನೆ ಟೈಮ್ ವೇಸ್ಟ್ ಅಂದ್ರು. ನಮ್ಮ ಸಂಸ್ಥೆಯೂ ಕೂಡ ಔಪಚಾರಿಕತೆಗೆ ಹೆಚ್ಚು ಒತ್ತು ನೀಡುವುದಿಲ್ಲ. ಅಲ್ಲಿಂದ ಬೆಳೆದ ಮಾತುಕತೆ, ಅವರ ಪೋಸ್ಟ್‍ಗಳು, ಬರಹಗಳು, ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದೆ. ನಾನು ಒಬ್ಬ ಚಾರಣಿಗನಾಗಿ ಅವರ ಚಾರಣದ ಕುರಿತು ತಿಳಿದುಕೊಳ್ಳುವ ಆಸೆಯಿತ್ತು. ನಾನು ಒಮ್ಮೊಮ್ಮೆ 20-30 ಕಿಮೀ ಒಂದೇ ದಿನ ನಡೆಯುವಾಗ, ಅವರು ನನಗೆ ಹೇಳಿದ ಮಾತು ಹೀಗಿದೆ, ಹರೀಶ್ ನೀವು ಅಷ್ಟೆಲ್ಲಾ ಯಾಕೆ ನಡೀತೀರಿ? ಅಷ್ಟೆಲ್ಲಾ ನಡೀಬೇಡಿ. ಮೂರು ವೇಗಯಿದೆ, ಮೊಲದ ವೇಗ, ಆಮೆಯ ವೇಗ ಮತ್ತು ಬಸವಿನ ಹುಳು (ಶಂಖದ ಹುಳು/ ಸ್ನೈಲ್) ವೇಗ. ನನ್ನದು ಸ್ನೈಲ್ ವೇಗ ನಿಧಾನಗತಿ. ನಿಧಾನ ನಡೆಯುವಾಗ ನಿಮಗೆ ಸುತ್ತಮುತ್ತಲಿನ ಪರಿಸರ ಪರಿಚಯವಾಗುತ್ತೆ. ಇಲ್ಲಂದ್ರೆ ಏನ್ ನೋಡ್ತೀರಿ, ಏನ್ ಅಬ್ಸರ್ವ್ ಮಾಡೋಕೆ ಆಗುತ್ತೆ ಅಂದ್ರು. ನನಗೂ ಅದು ಸರಿಯೆನಿಸಿ, ವೇಗ ಕಡಿಮೆ ಮಾಡಿಕೊಂಡೆ. 


ಇದರ ಜೊತೆಗೆ ಅವರ ಚಾರಣದ ಕುರಿತು ಬಹಳ ಕೇಳಿದ್ದೆ. ಒಂದುವರೆ ವರ್ಷದಿಂದ ಅವರನ್ನು ಪೀಡಿಸುತ್ತಿದ್ದೆ. ಸರ್, ನೀವು ಕಾಡಿಗೆ ಚಾರಣ ಹೋಗ್ತಿರಲ್ಲ, ನಾನು ಬರ್ತೀನಿ. ಹರೀಶ್ ನಮ್ಮದು ಅರೇಂಜ್ ಟ್ರೆಕ್ ತರಹ ಇರಲ್ಲ. ನಮ್ದು ಬೇರೆ ರೀತಿ ಅದು ತುಂಬಾ ಜನಕ್ಕೆ ಹಿಡಿಸಲ್ಲ. ನಮ್ದೇ ಟೀಮ್ ಇದೆ, ನಾವು ಹೊಸಬರನ್ನ ಕರ್ಕೊಂಡ್ ಹೋಗಲ್ಲ ಅನ್ನೋರು. ಒಟ್ಟಾರೆಯಾಗಿ ನನ್ನ ಕರ್ಕೊಂಡ್ ಹೋಗೋಕೆ ಅವರಿಗೆ ಮನಸ್ಸಿರಲಿಲ್ಲ. ನಾನು ಬಿಡ್ಬೇಕಲ್ಲ. ಅವರು ಪ್ರತಿ ಚಾರಣದ ಪೋಸ್ಟ್ ಹಾಕಿದಾಗಲೂ ನಂದು ಅದೇ ಮನವಿ, ಸಾರ್ ಒಂದ್ ಸಲ ಕಕೊರ್ಂಂಡ್ ಹೋಗಿ ಸಾರ್, ಅನುಭವಕ್ಕೆ ಅಂತಾ ಆದ್ರೂ ಸಾರ್. ಇಲ್ಲಂದರೆ ಅಲ್ಲಿನ ಮಾಹಿತಿ ಕೊಡಿ ಸಾರ್, ನಾವೇ ಹೋಗಿ ಬರ್ತೀವಿ ಅಂದ್ರು. ಹಾಗೆಲ್ಲ ಹೊರಗಡೆಯವರು ಹೋಗೋಕೆ ಆಗಲ್ಲ. ನಾವು ಅಲ್ಲಿರೋ ಆದಿವಾಸಿಗಳನ್ನ ಕರ್ಕೊಂಡ್ ಹೋಗೊದು, ಹೊಸಬರನ್ನ ಅವರು ಹೇಗೆ ಕರ್ಕೊಂಡ್ ಹೋಗ್ತಾರೆ? ಅದೆಲ್ಲಾ ಆಗಲ್ಲ ಅಂದ್ರು. ನಾನು ಗೂಗಲ್ ನೋಡಿದೆ, ಕೆಲವರನ್ನ ಕೇಳಿದೆ. ಒಂದು ದಿನದ್ದು ಕೈಗಲ್ ಫಾಲ್ಸ್ ಬಗ್ಗೆ ಒಂದಿಷ್ಟು ಮಾಹಿತಿ ಸಿಕ್ತು, ಕೌಂಡಿನ್ಯ ವನ್ಯಜೀವಿ ಧಾಮದ ಬಗ್ಗೆ ಸಿಕ್ತು. ಆದ್ರೂ ಬೇರೆ ರಾಜ್ಯಕ್ಕೆ ಸೇರಿದ ಕಾಡು, ಹೋಗೋದು ಕಷ್ಟ ಅಂತ ಸುಮ್ಮನಾಗಿದ್ದೆ. ಇತ್ತೀಚೆಗೆ ಕರೆ ಮಾಡಿ ಕೇಳುವಾಗ ಒಪ್ಕೊಂಡ್ರು. ಅಕ್ಟೋಬರ್ ಎರಡನೆಯ ವಾರದಲ್ಲಿ ಮಾತಾಡುವಾಗ ಹರೀಶ್ ಈ ಸಲ ಹುಣ್ಣಿಮೆಗೆ ಹೋಗ್ತಾ ಇದ್ದೀನಿ ನಡುಮಂತ್ರಮ್ ಗೆ ನೀವು ಬರೋದಾದ್ರೆ ಬರಬಹುದು, ನಿಮಗೆ ಬಿಡುವು ಇರುತ್ತಾ? ಐದು ದಿನ ಆಗುತ್ತೆ ಅಂದ್ರು. ನಾನು ಹಿಂದೆ ಮುಂದೆ ಯೋಚನೆ ಮಾಡ್ಲೇಯಿಲ್ಲ. ಖಂಡಿತಾ ಸರ್ ಎಂದೆ. 


ಅಸಲಿ ಕಥೆ ಶುರುವಾಗೋದು ಇಲ್ಲಿಂದ. ನಾನು ಬರುತ್ತೇನೆ ಎಂದ ದಿನದಿಂದ ನಿರಂತರವಾಗಿ ಕರೆ ಮಾಡಿ ಎಲ್ಲಾ ಮಾಹಿತಿ, ತಯಾರಿಯ ವಿವರಗಳನ್ನು ಹಂಚಿಕೊಂಡರು. ಹರೀಶ್, ಈ ದಿನ ದಿನಸಿ ತಗೊಂಡ್ ಬಂದೆ, ನನ್ನ ತಮ್ಮ ಅಮರ್ ಅಲ್ಲೆ ಇದ್ದಾನೆ, ಅವನು ನಮ್ ಜೊತೆಗೆ ಸೇರ್ತಾನೆ, ನಮ್ ಗೈಡ್ ವೆಂಕಟೇಶ್ ಕಾಡಲ್ಲಿದ್ದಾನೆ, ಅವನನ್ನು ಕಾಂಟಾಕ್ಟ್ ಮಾಡಿದ್ದೀನಿ, ಇತ್ಯಾದಿ. ಅದರ ನಡುವೆ, ಹರೀಶ್ ನನ್ನ ಸ್ನೇಹಿತ ಬಾಲರಾಜ್ ಅಂತಾ ಮಾಗಡಿ ರೋಡ್ ಅಲ್ಲಿದ್ದಾನೆ, ಅವನು ನಮ್ ಜೊತೆಗೆ ಬರ್ತಾ ಇರ್ತಾನೆ, ಅವನು ನಿಮ್ ಜೊತೆಗೆ ಕರ್ಕೊಂಡ್ ಬರೋಕೆ ಆಗುತ್ತಾ ಅಂದ್ರು. ಖಂಡಿತಾ ಸರ್, ಅವರ ನಂಬರ್ ಕೊಡಿ ಎಂದೆ. ನೀವು ಕಾಲ್ ಮಾಡೋದು ಬೇಡ, ಅವನಿಗೆ ನಂಬರ್ ಕೊಟ್ಟಿದ್ದೀನಿ, ಅವನೇ ಕಾಲ್ ಮಾಡ್ತಾನೆ, ನಿಮಗೆ ಎಲ್ಲಿಗೆ ಅನುಕೂಲ ಆಗುತ್ತೆ ಅಲ್ಲಿಗೆ ಬರಲಿ, ನೀವು ಹೋಗಿ ಪಿಕ್ ಮಾಡೋದೇನು ಬೇಡ ಅಂದ್ರು. ನನಗೆ ಆಶ್ಚರ್ಯ ಆಯ್ತು. ನಾನು ಚಿಕ್ಕವನು, ಅವರು ದೊಡ್ಡವರು, ನಾನೇ ಹೋಗಿ ಪಿಕ್ ಮಾಡೋಕೆ ರೆಡಿ. ಸರ್, ಯಾಕೆ ಹೀಗೆ ಹೇಳ್ತಾ ಇದ್ದಾರೆ ಅಂತ. ಪೂರ್ತಿ ಚರ್ಚೆ, ಸಂಭಾಷಣೆಯ ನಂತರ ಅರ್ಥವಾಗಿದ್ದು, ಅವರಿಗೆ ಆಸಕ್ತಿ ಇದ್ರೆ ಅವರೇ ಕಾಲ್ ಮಾಡ್ಕೊಂಡು, ಕೇಳ್ಕೊಂಡ್ ಬರ್ಬೇಕು. ಒತ್ತಡ, ಬಲವಂತ, ಹೇರಿಕೆ ಇರಬಾರದು. ಎಂಥಹ ಮುಖ್ಯ ಮತ್ತು ಸೂಕ್ಷ್ಮ ವಿಚಾರ ಅಲ್ವಾ? ನಾವು ಏಕೆ ಬಲವಂತ ಮಾಡ್ಬೇಕು? ಸುಲಭವಾಗಿ ಅವರು ಇರೋ ಜಾಗಕ್ಕೆ ಹೋಗಿ ಯಾವುದೇ ಶ್ರಮವಿಲ್ಲದೆ ಹೋದ್ರೆ ಅದಕ್ಕೆ ಮೌಲ್ಯ ಇರಲ್ಲ. 


ಮಾತಿನ ಪ್ರಕಾರ, ನಾನು ಬೆಂಗಳೂರಿನಿಂದ ಮುಂಜಾನೆ 7 ಗಂಟೆಗೆ ಹೊರಟು, ಹೊಸಕೋಟೆಯಲ್ಲಿ ನಂಗಲಿಯವರನ್ನು ಪಿಕ್ ಮಾಡಿ, ಮಾಲೂರಿನಲ್ಲಿ ಅವರದ್ದು ನಟರಾಜ ಬೂದಾಳರ ಪುಸ್ತಕ ಕುರಿತು ಸಂವಾದ ಕಾರ್ಯಕ್ರಮವನ್ನು ಮುಗಿಸಿ ಹೊಟ್ಟೆಗೆ ಸ್ವಲ್ಪ ಹಾಕೊಂಡು ಹೊರಡೋದು. ಕೊನೆಯ ಅವಧಿಯಲ್ಲಿ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಯಾಯ್ತು. ಸಂವಾದ ಕಾರ್ಯಕ್ರಮ ಕಾರಣಾಂತರಗಳಿಂದ ಮೂದೂಡಲ್ಪಟ್ಟಿತ್ತು. ಆದರೆ, ಮಾತಿನಂತೆ ನೇರವಾಗಿ ಹೋಗೋದು ಅಂತಾ ಆಯ್ತು. ನನಗೆ ಶನಿವಾರ ಸ್ವಲ್ಪ ಕೆಲಸವಿತ್ತು ಮತ್ತು ಭಾನುವಾರ ಕೆಲವೊಂದು ರಿಪೋರ್ಟ್ ಮಾಡೋದು ಇದ್ದಿದ್ದರಿಂದ ಮುಂಜಾನೆ 5 ಗಂಟೆಗೆ ಮೆಸೆಜ್ ಮಾಡಿದೆ. ಸರ್, 9.30-10 ಗಂಟೆ ಸಮಯಕ್ಕೆ ಹೊಸಕೋಟೆ ತಲುಪುತ್ತೇನೆ ಅಂತ. ನಾನು ತಲುಪುವಾಗ 10.30 ಆಯ್ತು. ಮೊದಲ ಬಾರಿಗೆ ಹೋಗ್ತಾ ಇದ್ದೀನಿ, ಹೇಳಿದ ಸಮಯಕ್ಕೆ ಹೋಗ್ತಾ ಇಲ್ವಲ್ಲ ಅನ್ನೋ ಆತಂಕ ಬೇರೆ ಇತ್ತು. ಈ ನಡುವೆ ಕರೆ ಮಾಡಿ, ಎಲ್ಲಿದ್ದೀರಿ, ತೊಂದರೆಯಿಲ್ಲ ಆರಾಮಾಗಿ ಬನ್ನಿ, ನಾನು ಹೊಸಕೋಟೆ ಟೋಲ್ ದಾಟಿದ ತಕ್ಚಣ ಸರ್ವೀಸ್ ರೋಡ್ ಇರುತ್ತೆ, ಪೋಲಿಸ್ ಸ್ಟೇಷನ್ ಇದೆ, ಅದರ ಪಕ್ಕದಲ್ಲಿಯೇ ಬಸ್ ಸ್ಟಾಪ್ ಇದೆ ಅಲ್ಲಿ ಕಾಯ್ತಾ ಇರ್ತೀನಿ, ಸರಿ ಸರ್, ನಾನು ಕೆ. ಆರ್. ಪುರಂ ದಾಟಿದ ಮೇಲೆ ಕಾಲ್ ಮಾಡ್ತೀನಿ. ಸುಮಾರು 9.45ಕ್ಕೆ ಕಾಲ್ ಬಂತು. ಹರೀಶ್ ಎಲ್ಲಿದ್ದೀರಿ, ನಾನು ನಿಮಗೆ ತಿಳಿಸಿದ ಜಾಗದಲ್ಲಿದ್ದೀನಿ. ಸರ್, ಇಷ್ಟು ಬೇಗ ಬಂದ್ಬಿಟ್ರಾ? ನಾನು ಇನ್ನೂ ಬೈಯಪ್ಪನಹಳ್ಳಿ ಹತ್ರ ಇದ್ದೀನಿ. ಪರ್ವಾಗಿಲ್ಲ ನೀವು ಆರಾಮಾಗಿ ಬನ್ನಿ, ನಾನು ಹೇಳಿದ್ದು ಗೊತ್ತಾಯ್ತಲ್ಲ? ಟೋಲ್ ಆದ ತಕ್ಷಣ ಸವೀರ್ಸ್ ರೋಡ್ ತಗೊಳ್ಳಿ. ಓಕೆ ಸರ್. ಅಯ್ಯೋ ಸುಮಾರು ಒಂದು ಗಂಟೆ ಕಾಲ ಕಾಯಿಸಬೇಕಲ್ಲ ಅನ್ನೋ ಗಿಲ್ಟ್ ನನಗೆ. ಟೋಲ್ ದಾಟಿ, ಅಲ್ಲಿಗೆ ತಲುಪಿದೆ. ಕಾರ್ ನಿಲ್ಲಿಸಿ ನೋಡಿದೆ. ಡಿಕ್ಕಿ ತೆಗೀರಿ. ಒಂದು, ಎರಡು, ಮೂರು ಬ್ಯಾಗ್‍ಗಳು ಡಿಕ್ಕಿ ತುಂಬಿಸಿದ್ರು. ಸಾರಿ ಸರ್, ತುಂಬಾ ಲೇಟ್ ಆಯ್ತು, ಕೆ.ಆರ್.ಪುರಂ ಬಿಟ್ಟ ಮೇಲೆ ಬರ್ಬೇಕಿತ್ತು ನೀವು, ಮುಂಚೆನೇ ಬಂದ್ರಿ ಅಂದೆ. ಪರ್ವಾಗಿಲ್ಲ ಬಿಡಿ. ನಡಿರಿ. 


ಸುಮಾರು 2500 ರೂಪಾಯಿಯಷ್ಟು ದಿನಸಿ ಸಾಮಾಗ್ರಿ ಕೊಂಡಾಗಿತ್ತು. ಸ್ವತಃ ಅವರೇ ಹೋಗಿ ಅವೆಲ್ಲವನ್ನು ತಂದಿದ್ದರು. ನಾನು ಒಂದು ಮುದ್ದೆ ಊಟ ಮಾಡ್ಕೊಂಡ್ ಬಂದೆ ನೀವ್ ಏನ್ ತಿಂದ್ರಿ? ಸರ್, ನಾನು ನಿನ್ನೆ ಊರಿಂದ ಬಂದೆ ರಾತಿ ಅನ್ನ ಇತ್ತು, ಹಬ್ಬದ್ದು ಮಟನ್, ಚಿಕನ್ ಇತ್ತು ಅದನ್ನ ಬಿಸಿ ಮಾಡ್ಕೊಂಡ್ ತಿಂದು ಬರೋಕೆ ತಡ ಆಯ್ತು ಅಂದೆ. ಇರಲಿ ಬಿಡಿ, ಅವೆಲ್ಲಾ ಮಾಮೂಲಿ, ಈಗ ನಡಿರಿ. ಹೀಗೆ ಹತ್ತು ಹಲವು ವಿಚಾರಗಳು, ಮಾತುಕತೆಗಳು, ಅನುಭವ ಇತ್ಯಾದಿ ಆಗಿ, ಬೇತುಮಂಗಲ ತಲುಪಿ, ಅಲ್ಲೊಂದು ತರಕಾರಿ ಅಂಗಡಿ. ಸರ್, ಇಲ್ಲೇ ಏಕೆ, ಸರ್, ಹೊಸಕೋಟೆಲೇ ತಗೊಳ್ಳೋದಲ್ವ? ನಾನು ಒಂದು ಕಡೆಗೆ ಅಂತ ಮಾಮೂಲಿಯಾಗಿರುತ್ತೆ, ಬದಲಾಯಿಸೋಕೆ ಹೋಗಲ್ಲ. ಸರಿ ಸರ್, ಇಷ್ಟೊಂದು ತರಕಾರಿ ನಾ? ಮೂರು ದಿನಕ್ಕೆ? ಬೇಕಾಗುತ್ತೆ, ನೋಡಿವ್ರಿ ಬನ್ನಿ. ಎಲ್ಲವನ್ನು ಪಟ್ಟಿ ಮಾಡ್ಕೊಂಡು ಬಂದಿದ್ದಾರೆ. ಅಂಗಡಿಯವನು ತನ್ನ ಅಂಗಡಿಲಿ ಸೀಮೆ ಬದನೆಕಾಯಿ ಚೆನ್ನಾಗಿಲ್ಲ ಅಂತಾ ಬೇರೆ ಅಂಗಡಿಯಿಂದ ತಂದುಕೊಟ್ಟ, 715 ರೂಪಾಯಿ ಆದ ಜಾಗದಲ್ಲಿ 15ರೂಪಾಯಿ ಬಿಟ್ಟ, ಉಚಿತವಾಗಿ ಕರಿಬೇವು, ಒಂದೆರಡು ನಿಂಬೆ ಹಣ್ಣು ನಮ್ಮ ಬ್ಯಾಗು ಅಲ್ಲಿಂದ ಕಾರಿನ ಡಿಕ್ಕಿಗೆ ಹೋದವು. ಇದು ನಂಗಲಿರವರು ಸಂಪಾದಿಸಿರುವ ಆತ್ಮೀಯತೆ. ಅವರ ತಮ್ಮನಿಗೆ ಕರೆ ಮಾಡಿ, ಅಮ್ರ, ತರಕಾರಿ ತಗೊಂಡ್ವಿ, ಬೇತುಮಂಗಲ ಬಿಟ್ವಿ, ಹರೀಶ್ ನನ್ ಜೊತೆಗೆ ಇದ್ದಾರೆ ಏನ್ ತರ್ಬೇಕು? ಆಕಡೆಯಿಂದ, ಇವತ್ತು ಕೆರೆಕೋಡಿ ಬಿತ್ತು ಅಂತಾ ಮೇಕೆ ಹೊಡೆದ್ರು, ನಂದು ಒಂದು ಭಾಗ/ಪಾಲು ಸಿಕ್ಕಿದೆ, ಮೀನು ಇದೆ ಅಂತಾ ತಗೊಂಡಿದ್ದೀನಿ, ನೀನು ಪೋರ್ಕ್ ತಗೊಂಡ್ ಬಾ. ಎಷ್ಟು ಬೇಕು? ಒಂದ? ಎರಡ? ಒಂದೆರಡು ಇರಲಿ. 


ವಿ.ಕೋಟೆ ತಲುಪಿದೆವು. ಎಪಿಎಂಸಿ ಯಾರ್ಡ್ ಎದುರು ಒಂದು ಎನ್.ಟಿ.ಆರ್. ಪ್ರತಿಮೆ ಸುಂದರವಾಗಿದೆ. ಅದರ ಎದುರುಗಡೆ ಗಲ್ಲಿಯಲ್ಲಿ ಒಂದು ಪೋರ್ಕ್ ಹೋಟೆಲ್, ನನಗೆ ಅದು ಹೋಟೆಲ್ ನಿಮಗದು ಗುಡಿಸಲು. ಅಲ್ಲೊಂದು ಅಜ್ಜಿ, ಅವರೇ ಅಲ್ಲಿನ ಮಾಲಿಕಿ. ಸರ್, ಕಾರಿನಿಂದ ಇಲಿದಾಕ್ಷಣ ನಮಸ್ಕಾರಮು ಸರ್, ಬಾಹುನ್ನಾರಾ? ನೇನು ಬಾಹುನ್ನೇನು, ನುವ್ವು ಬಾಹುನ್ನೇನಮ್ಮ? ಹೀಗೆ ಇದು ತೆಲುಗಿನಲ್ಲಿ ಸಂಭಾಷಣೆ ಮುಂದುವರೆಯಿತು. ಅಲ್ಲಿ ಪೋರ್ಕ್ ಬೋಟಿ ಫೇಮಸ್, ನಾನು ಇಲ್ಲಿಯವರೆಗೂ ತಿಂದಿಲ್ಲ, ಆ ದಿನವೂ ತಿನ್ನಲಿಲ್ಲ, ಸಾರಿ ಸಿಗಲಿಲ್ಲ. ನಾನು ಮಟನ್ ಕಟ್ ಮಾಡಿಸೋದ್ರಲ್ಲಿ ಸ್ವಲ್ಪ ಬುದ್ದಿವಂತ, ಆ ಬುದ್ದಿವಂತಿಕೆ ತೋರಿಸೋದಕ್ಕೆ ಅಂತಾ ಬೇಗ ಇಳಿದು ಹೋದೆ. ಅವರು ನಾನು ತೋರಿಸುವುದಕ್ಕಿಂತಲೂ ಒಳ್ಳೆಯ ಮಟನ್ ಕಟ್ ಮಾಡಿ ಕೊಟ್ಟರು. ನನಗೆ ಆಶ್ಚರ್ಯ! ನಂಗಲಿಯವರಿಗೆ ಆ ಅಂಗಡಿ ಪರಿಚಯಿಸಿದ್ದು ಅವರ ತಮ್ಮ ಅಮರ ನಾರಾಯಣ ನಂಗಲಿ. ಅವರಿಗೆ ಎಂದಾಕ್ಷಣ, ಅಜ್ಜಿ, ಚೆನ್ನಾಗಿರುವ ಮಟನ್ ಕೊಡುತ್ತಾರೆ. ಈ ಮಟನ್ ಅಲ್ಲಿ ಚೆನ್ನಾಗಿರೋದು ಅಂದ್ರೇ ಏನು? ಇದಕ್ಕೆ ಮುಂದಿನ ಪ್ಯಾರಾದಲ್ಲಿ ಉತ್ತರ ಕೊಡ್ತಿನಿ. ಇಬ್ಬರೂ ತಲಾ ಒಂದೊಂದು ಪ್ಲೇಟ್ ಪೋರ್ಕ್ ಫ್ರೈ ತಿಂದೆವು. ಎಷ್ಟು ಸರಳವಾಗಿ, ರುಚಿಯಾಗಿತ್ತು ಅನ್ನೋದನ್ನ ನೀವೇ ಹೋಗಿ ತಿನ್ನಬೇಕು. ಯಾವುದೇ ಅತಿಯಾದ ಮಸಾಲವಿಲ್ಲ, ಎಣ್ಣೆಯಿಲ್ಲ. ಸಿಂಪಲ್, ಟೇಸ್ಟಿ ಆಂಡ್ ಯಮ್ಮಿ. ಅಲ್ಲಿಂದ ಒಂದೂವರೆ ಕೆ.ಜಿ. ಪೋರ್ಕ್ ತಗೊಂಡ್ ಹೊರಟೋ. ಹರೀಶ್, ನಿಮ್ ಸ್ಟೈಲ್ ಅಲ್ಲೇ ಮಾಡಿ. ಸಾರ್, ನಂದು ಕೂರ್ಗ್ ಸ್ಟೈಲ್ ಪೆಪ್ಪರ್ ಡ್ರೈ, ಮೆಣಸಿನಕಾಯಿ ಮತ್ತು ಪೆಪ್ಪರ್ ಪೌಟರ್ ಬೇಕು. ಬನ್ನಿ ಮುಂದೆ ತಗೊಳ್ಳೊಣ.


ವಿ.ಕೋಟೆ. ಹಳೆ ಬಸ್ ಸ್ಟಾಂಡ್ ಹತ್ತಿರ ಬಂದ್ವಿ. ಸ್ವಲ್ಪ ಸೈಡ್ ಗೆ ಹಾಕಿ. ಯಾಕೆ ಸರ್, ಸ್ವಲ್ಪ ಸ್ವೀಟ್ ಮತ್ತೆ ಮಿಕ್ಷ್ಚರ್ ತಗೋತಿನಿ. ನಾವು ಚಾರಣಕ್ಕೆ ಹೋಗ್ತಾ ಇದ್ದೀವಾ? ನೆಂಟರ ಮನೆಗಾ? ಸರಿ ಸರ್ ಅಂದೆ. ಅಲ್ಲಿಯೇ ಅಂಗಡಿಗೆ ಹೋಗಿ ಪೆಪ್ಪರ್ ಪೌಡರ್ ಕೇಳಿದೆ. ವೈಟ್ ಪೆಪ್ಪರ್? ಬ್ಲಾಕ್ ಪೆಪ್ಪರ್? ಮೊದಲ ಬಾರಿಗೆ ನಾನು ಈ ಪದ ಕೇಳಿದ್ದು, ವೈಟ್ ಪೆಪ್ಪರ್. ಕುತೂಹಲದಿಂದ ವೈಟ್ ಪೆಪ್ಪರ್ ಪ್ಯಾಕೇಟ್ ತೋರಿಸಿ ಎಂದೆ. ಅದು ಧನಿಯಾ ಪುಡಿ. ಅದೇ ಅಂಗಡಿಯಲ್ಲಿ ಎರಡು ಪ್ಯಾಕೆಟ್ ಪೆಪ್ಪರ್ ಪೌಡರ್ ತಗೊಂಡೆ. ನಂಗಲಿಯವರು ಅರ್ಧ ಗಂಟೆಯಾದರೂ ಬರಲಿಲ್ಲ. ರಸ್ತೆ ಕಿರುದಾಗಿತ್ತು, ಸಾಕಷ್ಟು ದೊಡ್ಡ ಗಾಡಿಗಳು ಓಡಾಡೋ ಹೈವೇ. ಏನ್ ಸರ್ ಇಷ್ಟೊಂದು ಲೇಟ್? ಏನ್ ಗೊತ್ತಾ ಹರೀಶ್, ನಾನು ಯಾವಾಗಲೂ ಇದೇ ಅಂಗಡೀಲಿ ತಗೊಳ್ಳೋದು. ಅವನು, ಹಳೇ ಮಿಕ್ಷ್ಚರ್ ಬೇಡ, ಇರಿ ಸರ್, ಹೊಸದಾಗಿ ಹಾಕೊಡ್ತೀನಿ ಅಂತಾ ಈಗ ತಾನೇ ಮಾಡಿದ ಮಿಕ್ಷ್ಚರ್ ಕೊಟ್ಟ ಅಂದ್ರು. ಇರೋ ಹಳೇ ಸ್ಟಾಕ್ ಖಾಲಿ ಆಗಲೀ ಅಂತಾ ಕಾಯೋ ಜನರ ನಡುವೆ ಇವನು ಹೊಸದಾಗಿ ಮಾಡಿಕೊಟ್ಟ ಅಂದ್ರೇ ನಂಗಲಿಯವರ ಕಳೆದ ಮೂವತ್ತು ವರ್ಷಗಳಿಂದ ಈ ಹಳ್ಳಿಗಳಲ್ಲಿ ಸಂಪಾದಿಸಿರುವ ಸಂಬಂಧಗಳಿಗೆ ಸಾಕ್ಷಿ. ಸರ್, ಈಗ ದಾರಿ? ಹೀಗೆ ಅಂಬೇಡ್ಕರ್ ಪ್ರತಿಮೆ ಹತ್ರ ರೈಟ್ ತಗೊಳ್ಳಿ. ಎಡಕ್ಕೆ ಹೋದ್ರ ಪಲಮ್ನೇರ್, ತಮಿಳ್ನಾಡು, ಹಿಂದಕ್ಕೆ ಕೆ.ಜಿ.ಎಫ್. ಈಗ ನಾವಿರೋದು ಆಂಧ್ರ. ಓಕೆ ಸರ್. 


ಇಲ್ಲಿಂದ ಹನ್ನೆರಡು ಕಿಲೋಮೀಟರ್ ನಡುಮಂತ್ರಮ್, ಅಲ್ಲಿಗೆ ಐದು ರಸ್ತೆಗಳಿವೆ. ನಾನು ಅದಕ್ಕೆ ಐದು ಹೆಸರಿಟ್ಟಿದ್ದೀನಿ. ಧರ್ಮರಾಯ, ಭೀಮಸೇನ, ಮಧ್ಯಮ, ನಕುಲ, ಸಹದೇವ, ಈ ಐದು ರಸ್ತೆಗಳು ನಡುಮಂತ್ರಮ್ ತಲುಪುತ್ತೆ. ಈಗ ಯಾವ ಮಾರ್ಗ ಅನುಸರಿಸೋದು ಸರ್. ಮಧ್ಯಮ ಮಾರ್ಗ, ಮೂರನೆದು. ಸರಿ ಸರ್. ಎಡಕ್ಕೆ ಒಂದು ಕೆಇಬಿ ಆಫೀಸ್ ಪಕ್ಕದಲ್ಲಿ ಹೋದೆವು. ಕರ್ನಾಟಕದಲ್ಲಿ ಕೆಇಬಿ, ಆಂಧ್ರದಲ್ಲಿ ಏನ್ ಹೇಳ್ತಾರೋ ಏನೋ, ನಮಗ್ಯಾಕೆ ಬಿಡಿ. ಅಲ್ಲಿಂದ ಸುಮಾರು ಐದಾರು ಕಿಲೋಮೀಟರ್ ದೂರಕ್ಕೆ ಒಂದು ಊರು, ಅದೇ ನಡುಮಂತ್ರಮ್. ಕಾಡಿಗೂ ನಾಡಿಗೂ ನಡುವೆಯಿರುವ ಹಳ್ಳಿ. ಊರಿನ ನಡುವೆ, ಮನೆಗಳೊಂದಿಗೆ ಮನೆಯೊಂದರ ಮುಂದಕ್ಕೆ ಹೋಗಿ ನಿಂತೆವು. ಕಾಂಪೌಂಡ್ ದಾಟಿ ಒಳಕ್ಕೆ ಹೋದಾಕ್ಷಣ, ದಪ್ಪ ಮೀಸೆಯ, ರಾಜ ಗಾಂಭೀರ್ಯದ ಗಡಸು ಧನಿಯ ಒಬ್ಬ ವ್ಯಕ್ತಿಯ ಆಗಮನ. ನಮಸ್ಕಾರ ಬನ್ನಿ, ನಾನು ನಮ್ಮಣ್ಣನ ಸ್ನೇಹಿತರು ಅಂದ್ರೆ ನಮ್ಮ ವಯಸ್ಸ್ನೋರು ಅಂದುಕೊಂಡಿದ್ದೆ!? ಒಳಗೊಳಗೆ ಮೂರ್ನಾಲ್ಕು ಪ್ರಶ್ನೆ ನನಗೆ. ಇದು ಸ್ವಾಗತನಾ? ತಿರಸ್ಕಾರನಾ? ಒಪ್ಪಿಗೆನಾ? ಹೀಗೆ ಕುಶೋಲೋಪಾಚಾರ ನಡೆಯಿತು. ನಾವು ನೇರ ಬ್ಯಾಟಿಂಗ್ ಇಳಿಯೋ ಜನ, ಅದರೊಂದಿಗೆ ನಂಗಲಿ ಸರ್ ನಮ್ ಕೋಚ್. ಹರೀಶ್ ನಿಮ್ ಸ್ಟೈಲ್ ಅಲ್ಲಿ ಪೋರ್ಕ್ ಮಾಡಿ, ಏನ್ ಬೇಕೋ ತಗೊಳ್ಳಿ. ಅಮ್ರ ಅವರು ಅವರ ಪಾಡಿಗೆ ಮಾಡ್ಲಿ, ಆಜ್ಞೆಯಾಯ್ತು. 


ಯಥಾ ಪ್ರಕಾರ ಬೆಳ್ಳುಳ್ಳಿ, ಶುಂಠಿ, ಮುಖ್ಯವಾಗಿ ಪೆಪ್ಪರ್, ಧನಿಯಾ ಪುಡಿ, ಹೀಗೆ ಅಡುಗೆ ಅರಮನೆಯಲ್ಲಿ ಮಾತುಕತೆಯ ನಡುವೆ ಕಂಡುಕೊಂಡ ಒಂದಿಷ್ಟು ಸತ್ಯಾತೆಯನ್ನು ಮುಕ್ತವಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಇದು ಮಧ್ಯಾಹ್ನ ಸುಮಾರು ಎರಡು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ನಡೆದ ಮಾತುಕತೆಗಳು, ಸಂಭಾಷಣೆಗಳು, ಚರ್ಚೆಗಳ ಉಪಸಂಹಾರವನ್ನ ಕೊಡ್ತೀನಿ. ಹರೀಶ್, ನೀವು ಹಂದಿ ಮಾಂಸ ಹೇಗೆ ಮಾಡ್ತೀರಿ? ಸರ್, ನಾನು ಧನಿಯಾ, ಹಸಿ ಮೆಣಸಿನಕಾಯಿ, ಕರಿಮೆಣಸು, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಉಪ್ಪು, ಸಿಕ್ಕಿದ್ರೆ ಕಾಚಂಪುಳಿ, ಇದಕ್ಕೆ ಮೀರಿ ಇನ್ನೇನು ಬೇಡ ಎಂದೆ. ಅದರಂತೆಯೆ, ಎಲ್ಲವೂ ಸಿದ್ಧವಾಯ್ತು. ಖಾರ ಹೆಚ್ಚಿರಬೇಕ? ನಮ್ಮಣ್ಣ ಹಸಿರು ಮೆಣಸಿನಕಾಯಿ ಇಷ್ಟಪಡಲ್ಲ. ಓಕೆ. ಸರ್. ಅಂತೂ ಇಂತೂ ಪೋಕ್ ರೆಡಿಯಾಯ್ತು. ಅವರು, ಪೋಕ್ ಮಾಡುವ ಮುಂಚೆ ಮ್ಯಾರಿನೇಟ್ (ಉಪ್ಪಿಗೆ ನೆನೆಹಾಕುವುದು) ಮಾಡುವುದು ವಾಡಿ. ಮ್ಯಾರಿನೇಟ್ ಎಂದರೆ, ಉಪ್ಪು, ಖಾರಪುಡಿ, ಮಸಲಾಪುಡಿ, ಮೊಸರು, ಇತ್ಯಾದಿ ಹಾಕಿ ಮಾಂಸಕ್ಕೆ ರುಚಿ ಹಿಡಿಯುವಂತೆ ನೆನೆಸಿ ಗಂಟೆಗಟ್ಟಲೆ ಇಡುವುದು. 


ಅಂತೂ ಆಯುಧ ತೆಗೆದುಕೊಂಡು ಹೊರಟೆ. ನಮಗೆ ಕೆಲಸವನ್ನೆ ಕೊಡದಂತೆ, ಅಮರ್ ಸಾಹೇಬ್ರು ಮತ್ತು ಅವರ ಶಿಷ್ಯ ನಾಗರಾಜ ಎಲ್ಲವನ್ನೂ (ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಧನಿಯಾ ಪುಡಿ ಹುರಿಯುವುದು, ಆಡಿಸುವುದು, ಇತ್ಯಾದಿ) ಮಾಡಿ ಮುಗಿಸಿದರು. ಆ ಮನೆಯ ಅಡುಗೆ ಮನೆಯ ಕುರಿತು ಹೇಳಬೇಕು. ಅಮರ್ ಅವರು, ಒಬ್ಬರೇ ತಿಂಗಳಲ್ಲಿ ಒಂದು ವಾರ ಇರುತ್ತಾರೆ, ಆದರೇ, ಯಾವ ಸಂಸಾರದ ಮನೆಗೂ ಕಡಿಮೆಯಿಲ್ಲದಂತೆ ಅಡುಗೆ ಮನೆಯನ್ನಿಟ್ಟಿದ್ದಾರೆ. ಆ ಕ್ಷಣದ ಪಾತ್ರೆಗಳನ್ನು ಆಗಲೇ ತೊಳೆಯುತ್ತಾರೆ. ಬಹುಶಃ, ಈ ಕಾಲದ ಸೊಸೆಯಂದಿರಿಗೆ ಒಂದು ತರಬೇತಿ ಶಾಲೆಯನ್ನಾರಂಭಿಸುವ ಅರ್ಹತೆ ಅವರಿಗಿದೆ.  ಮಾಂಸವನ್ನು ನಾಗರಾಜನೇ ತೊಳೆದ. ನನ್ನದೇನು? ಅಳತೆಗೋಲು ಮಾತ್ರ. ಇದೊಂದು ರೀತಿ ಪಿ.ಎಚ್.ಡಿ. ವಿದ್ಯಾರ್ಥಿಗಳು ತಮ್ಮ ಗೈಡ್ ಗಳಿಗೆ ಪ್ರಬಂಧ, ಪಿಪಿಟಿ ಮಾಡಿಕೊಟ್ಟಂತೆ. ಅಂತೂ ಕೂರ್ಗಿ ಸ್ಟೈಲ್ ಪೋರ್ಕ್ ರೆಡಿಯಾಯ್ತು. ಸ್ವಲ್ಪ ಖಾರ ಕಮ್ಮಿಯಾಗಿತ್ತು. ಆದರೂ ಎಲ್ಲರೂ ಪ್ರಶಂಸೆ ನೀಡಿದರು. ಅದರಲ್ಲಿಯೂ ನಂಗಲಿ ಸರ್ ಮಾತ್ರ, ನನ್ನ ಸ್ನೇಹಿತ ಹರೀಸ್ ಚೇಸಿಂದು (ಹರೀಶ್ ಮಾಡಿದ್ದು) ಎಂದು ಹೊಗಳಿ ಮುಜುಗರಕ್ಕೀಡು ಮಾಡಿದರು. ಅದರ ನಡುವೆ ನಮ್ಮ ಗೈಡ್ ವೆಂಕಟೇಶ್ ಎಲ್ಲಿದ್ದಾರೆ, ಎಷ್ಟೊತ್ತಿಗೆ ಬರುತ್ತಾರೆಂಬುದರ ಚರ್ಚೆಗಳು. ಅದರ ಕುರಿತು ಮುಂದಿನ ಅಧ್ಯಾಯದಲ್ಲಿ ಬರೆಯುವುದು ಲೇಸು. ಇಲ್ಲಿಂದ ತೆಗೆದುಕೊಂಡು ಹೋದ ದಿನಸಿ, ತರಕಾರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದೆವು. 


ನಂಗಲಿ ಯವರ ಒಂದು ಪುಟ್ಟ ಮನೆಯಿದೆ, ಮನೆ ಎನ್ನುವುದಕ್ಕಿಂತ ಸುಂದರ ಪ್ರಪಂಚವಿದೆ. ಒಂದು ಖಾಲಿ ಸೈಟ್ ಇದೆ. ಅದರ ಬಗ್ಗೆ ನಾನು ಫೋಟೋ ಹಾಕುವೆ, ನೋಡಿದರೆ ನಿಮಗೆ ತಕ್ಕ ಮಟ್ಟಕ್ಕೆ ಅರ್ಥವಾಗಬಹುದು. ಇರಲಿ, ವಿವರಿಸುವ ಪ್ರಯತ್ನಿಸುವೆ. ಕೆರೆಯೊಂದಿದೆ ವಿಶಾಲವಾಗಿ, ಅದರ ತಟದಲ್ಲಿ ಇವರದೊಂದು ಖಾಲಿ ಸೈಟ್, ಅದರ ಎದುರಿಗೆ ಒಂದು ಚಿಕ್ಕ ಸೈಟಿನಲ್ಲಿ ಒಂದು ಪುಟ್ಟ ಮನೆ. ಅದಕ್ಕೊಂದು ಕಾಪೌಂಡ್, ಅಲ್ಲಿಗೆ ಗೇಟ್ ತೆಗೆದು ಒಳಗೆ ಬನ್ನಿ. ತರ ತರವಾದ ಗಿಡಗಳು, ಕೂರುವುದಕ್ಕೆ ಕಲ್ಲಿನ ಬೆಂಚುಗಳು, ಮನೆಯೊಳಗೆ ಇಣುಕಿಸಿ ನೋಡಿದರೆ, ಏನನ್ನು ನೋಡಬೇಕು? ಪುಸ್ತಕವನ್ನೋ? ಪ್ರಶಸ್ತಿ ಪತ್ರಗಳು, ಹಾರಗಳು, ಫೋಟೋಗಳು, ಒಂದು ಮಂಚ, ಒಂದು ಬೀರು. ಅದರೊಳಗೆ ಚಾರಣಕ್ಕೆ ಬೇಕಿರುವ ವಸ್ತುಗಳು. ಒಂದು ಸಂಸಾರ ನಡೆಸಬಹುದಾದ ದಿನಸಿ ವಸ್ತುಗಳು. ಮೂರ್ನಾಲ್ಕು ಖಾಲಿ ಬ್ಯಾಗುಗಳು, ಚೀಲಗಳು, ಟಾರ್ಪಲ್, ಖಾಲಿ ಬಾಟಲಿಗಳನ್ನು ತೆಗೆದುಕೊಂಡು ಅಮರ್ ನಂಗಲಿಯವರ ಮನೆಗೆ ಬಂದೆವು. 

ಇದೊಂದು ಕಲಿತು ನಲಿಯಲೇ ಬೇಕಾದ ಅನುಭವ. ನಾವುಗಳು ತಂದ ದಿನಸಿ ಸಾಮಾಗ್ರಿಗಳು, ತರಕಾರಿಗಳನ್ನು ಬ್ಯಾಗುಗಳಿಗೆ ಜೋಡಿಸುವುದು. ಅದೆಷ್ಟು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿತ್ತೆಂದರೆ ಹೇಳುವುದಕ್ಕೆ ಅಸಾಧ್ಯ, ನಾನು ಆ ಸಮಯದಲ್ಲೊಂದು ವಿಡಿಯೋ ಮಾಡಲೇಬೇಕಿತ್ತು. ತಪ್ಪಾಯಿತು ಕ್ಷಮೆಯಿರಲಿ. ಅಡಿಯಲ್ಲಿ ಗಟ್ಟಿ ಪದಾರ್ಥಗಳು ಸೇರಿದಂತೆ ಒಂದೇ ಒಂದೂ ಇಂಚೂ ಜಾಗವನ್ನು ಬಿಡದಂತೆ ಬ್ಯಾಗುಗಳನ್ನು ತುಂಬಲಾಯಿತು. ಅಕ್ಕಿಯನ್ನು ತೂಕ ಮಾಡಿಸಿ, ಒಂದು ಪ್ಲಾಸ್ಟಿಕ್ ಚೀಲಕ್ಕೆ ಒಂದು ಕೆ.ಜಿ.ಯುಂತೆ ಪ್ಯಾಕ್ ಮಾಡಿಸಲಾಗಿತ್ತು. ಒಂದು ಬ್ಯಾಗ್ ಅಕ್ಕಿ, ಮತ್ತೊಂದರಲ್ಲಿ ತರಕಾರಿ, ಮತ್ತೊಂದರಲ್ಲಿ ದಿನಸಿ (ಮಸಾಲೆ ಐಟೆಮ್), ಇನ್ನೊಂದು ಪಾತ್ರೆಯದ್ದು ಅದು ಗೈಡ್ ವೆಂಕಟೇಶ್ ಮನೆಯಲ್ಲಿತ್ತು. ಆ ಸಮಯಕ್ಕೆ ಅಮರ್ ಅವರ ಆತ್ಮೀಯರಾದ ನೀಲಕಂಠ ಸೇರ್ಪಡೆಯಾದರು. ಆ ನಡುವೆ ಒಬ್ಬ ಸ್ಥಳೀಯ ರೈತ ರೆಡ್ಡಿಯ ಮಾತುಗಳು ಅದ್ಭುತವಾದವು. ಮುಂದಿನ ಭಾಗದಲ್ಲಿ ಅಮರ್ ರವರ ಮನೆಯಲ್ಲಿ ಮಧ್ಯಾಹ್ನ ಎರಡರಿಂದರ ರಾತ್ರಿ ಹನ್ನೆರಡರ ತನಕ ನಡೆದ ಪ್ರಮುಖ ಚರ್ಚೆಗಳ ವಿವರಗಳನ್ನು ನೀಡುತ್ತೇನೆ, ಕೆಲವೊಂದು ಪುನಾರಾವರ್ತನೆಯಾಗಲೂಬಹುದು. 


ಮೊದಲಿಗೆ ಪೋರ್ಕ್ ತಿಂದು ಸುಧಾರಿಸಿಕೊಂಡೆವು. ಕೆಲವು ಗಂಟೆಗಳ ಕಾಲ ಕಳೆದು ನಾನಂತೂ ಮೇಕೆ ಮಾಂಸವನ್ನು ಆನಂದಿಸಿ ತಿಂದೆ. ಅನ್ನವನ್ನೂ ಉಂಡು ಮಲಗಲೆತ್ನಿಸಿದೆ. ಈ ನಡುವೆ ಎನ್.ಟಿ.ಆರ್. ಅವರ ಕುರಿತು ಹತ್ತಾರು ಹೊಸ ವಿಚಾರಗಳು ನನ್ನ ಮೆದುಳಿಗೆ ತಲುಪಿದೆವು. ಅವೆಲ್ಲವನ್ನೂ ಹೇಳಬಹುದು, ನೀವು ಕೇಳಲೂಬಹುದು, ಆದರೇ ನಾನು ಈಗ ವಿವರಿಸುವುದಿಲ್ಲ. ಮುಂದಿನ ಭಾಗಕ್ಕೆ ಮೀಸಲಿಡೋನ. 

ಸುಮಾರು ಹನ್ನೆರಡರ ಸಮಯಕ್ಕೆ ಮಲಗಿದೆವು. ಮುಂದಿನದ್ದು ಮುಂದಿನ ಸಂಚಿಕೆಗೆ ಇರಲಿ ಬಿಡಿ. ಆತುರವೇಕೆ? 


ಮುಂದುವರೆಯುವುದು......


15 ಸೆಪ್ಟೆಂಬರ್ 2021

ಕೊಡಗಿನ ಕುಶಾಲನಗರದಲ್ಲಿ ಅರಿಶಿಣ ಗಣೇಶ ಮೂರ್ತಿ ಅಭಿಯಾನಕ್ಕೆ ಕೈಜೋಡಿಸಿದ ಶಾಲಾ ಮಕ್ಕಳು!!!



 ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಪರಿಸರ ಸ್ನೇಹಿ ಅರಿಶಿಣ ಗಣೇಶ ಅಭಿಯಾನಕ್ಕೆ ಸ್ಪಂದಿಸಿರುವ ಈ ಬಡಾವಣೆಯ ಶಾಲಾ ಮಕ್ಕಳು  ಗಣೇಶ ಚತುರ್ಥಿ ಸಂದರ್ಭದಲ್ಲಿ ಮಕ್ಕಳ ಪ್ರತಿಭೆ ಬಳಗ ರಚಿಸಿಕೊಂಡು ಮನೆಯಲ್ಲೇ ಸ್ವತಃ ಅರಿಶಿಣ ಗಣೇಶ ಮೂರ್ತಿಗಳನ್ನು ತಯಾರಿಸಿ ಖುಷಿ ಪಟ್ಟರು. 

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಇನ್ನೂ ಶಾಲೆ ಆರಂಭವಾಗದಿದ್ದರೂ ಮಕ್ಕಳು ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಾಯದಿಂದ ಸ್ವ ಕಲ್ಪನೆಯೊಂದಿಗೆ ಗೋಧಿ ಮತ್ತು ಅರಿಶಿಣ ಮಿಶ್ರಿತ ಗಣೇಶ ಮೂರ್ತಿಗಳನ್ನು  ಮನೆಯಲ್ಲೇ ತಯಾರಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ಈ ಮಕ್ಕಳ ಪರಿಸರ ಚಟುವಟಿಕೆ ಹಾಗೂ ಅವರ ಪ್ರತಿಭೆಗೆ ಪೋಷಕರು ಕೂಡ ಸಾಥ್ ನೀಡಿದ್ದಾರೆ.‌

ಆದಿಶಂಕರಾಚಾರ್ಯ ಬಡಾವಣೆಯ ಉದ್ಯಮಿಯಾದ ಟಿ.ಕೆ.ಮಧು ಅವರು ಮಕ್ಕಳ ಪ್ರತಿಭೆಗೆ ಪೋಷಣೆ ನೀಡುವ ಮೂಲಕ ಮಕ್ಕಳು ಒಂದೆಡೆ ಸೇರಿ ತಾವು ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರದರ್ಶಿಸಲು ಬಳಗದ ವತಿಯಿಂದ ಅವಕಾಶ ಕಲ್ಪಿಸಿದ್ದಾರೆ.

ಮಕ್ಕಳ ಈ ಪ್ರತಿಭೆಗೆ ಹೆಚ್ಚು ಉತ್ತೇಜನ ನೀಡಿದ ಮಧು,  ಅರಿಶಿಣ ಗಣೇಶ ಅಭಿಯಾನಕ್ಕೆ ಮಕ್ಕಳಿಗೆ ಬೇಕಾದ ಪೂರಕ ಸಾಮಾಗ್ರಿಗಳನ್ನು ಒದಗಿಸುವುದರೊಂದಿಗೆ ಅವರ ಪ್ರತಿಭೆಗೆ ಒಂದು ವೇದಿಕೆಯನ್ನು ಸೃಷ್ಟಿಸುವ ಮೂಲಕ ಮಕ್ಕಳ ಪರಿಸರ ಕಾಳಜಿಗೆ ಬೆಂಬಲ ನೀಡಿರುವುದು ಅನುಕರಣೆಯವಾದುದು.

ಮಕ್ಕಳು ಅರಿಶಿಣ ಗಣೇಶ ಅಭಿಯಾನಕ್ಕೆ ಸ್ವಯಂ ಪ್ರೇರಿತರಾಗಿ ಕೈಜೋಡಿಸಿದ್ದು, ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ಲಭಿಸಿದ್ದು ಮಕ್ಕಳು ಭವಿಷ್ಯದಲ್ಲಿ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಂತಹ ಪರಿಸರ ಜಾಗೃತಿ ಅಭಿಯಾನ ಸಹಕಾರಿಯಾಗಿದೆ ಎಂದು ಪರಿಸರ ಸ್ನೇಹಿ ಗಣೇಶ  ಅಭಿಯಾನದ ಸಂಚಾಲಕರೂ ಆದ ಕೂಡಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

  ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಅವರು ಉತ್ತಮ ಪರಿಸರ ಸಂರಕ್ಷಕರಾಗಿ ತೊಡಗಿಸಿಕೊಳ್ಳಲು ಸಾಧ್ಯ. ಈ ರೀತಿ ಈ ಬಾರಿ ಶಾಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಈ ಅಭಿಯಾನಕ್ಕೆ ಕೈಜೋಡಿಸುವ ಮೂಲಕ ರಾಜ್ಯದಲ್ಲಿ 10 ಲಕ್ಚ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್ ಗೆ ಅರಿಶಿಣ ಗಣೇಶ ಮೂರ್ತಿಯೊಂದಿಗೆ ತಮ್ಮ ಸೆಲ್ಫಿಯೊಂದಿಗೆ  ಫೋಟೋ ಅಪ್ ಲೋಡ್ ಮಾಡಿರುವುದು ಸಂತಸ ತಂದಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

ಈ ಬಡಾವಣೆಯ ಎಲ್ಲಾ ಮಕ್ಕಳು ತಮ್ಮ ಮನೆಯಲ್ಲೇ ಅರಿಶಿಣ ಗಣೇಶ ಮೂರ್ತಿ ತಯಾರಿಸುವ ಮೂಲಕ ಜನರಿಗೆ ರಾಸಾಯನಿಕ ಬಣ್ಣ ರಹಿತ ಹಾಗೂ ಪಿ.ಓ.ಪಿ.ಮುಕ್ತ  ಗಣೇಶ ಮೂರ್ತಿ ತಯಾರಿಸುವ ಮೂಲಕ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಉಂಟಾಗುವ ಜಲಮಾಲಿನ್ಯ ತಡೆಗೆ ಈ ಅಭಿಯಾನ ಸಹಕಾರಿಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅಭಿಪ್ರಾಯಪಟ್ಟರು.

  ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಮಧು ಅವರೊಂದಿಗೆ ಬಡಾವಣೆಯ ಟಿ.ಕೆ.ಪ್ರಸಾದ್, ಪ್ರದೀಪ್, ಟಿ.ಎಂ.ಅನಿತ,ಅಂಬಿಕಾ ಅವರು ಕೂಡ ಹೆಚ್ಚಿನ ಬೆಂಬಲ ನೀಡಿದ್ದಾರೆ .

 ಮಕ್ಕಳ ಪ್ರತಿಭೆ ಬಳಗದ 8 ನೇ ತರಗತಿ ವಿದ್ಯಾರ್ಥಿನಿ ತಂಡದ ನಾಯಕಿ ಬಿ.ವಿ.ಪ್ರತಿಕ್ಷಾ, ನಾವು ಸ್ವತಃ ಅರಿಶಿಣ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು ತುಂಬಾ ಖುಷಿ ತಂದಿದೆ ಎಂದು ಅಭಿಪ್ರಾಯಪಟ್ಟರೆ,  ನಾವು ಅರಿಶಿಣ ಗಣೇಶ ಮೂರ್ತಿ ತಯಾರಿಸುವ ಮೂಲಕ ನಾವು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಲು ಸಹಕಾರಿಯಾಗಿದೆ.ಎಲ್ಲರೂ ಇದೇ ರೀತಿಯಲ್ಲಿ ಪರಿಸರ ಪೂರಕ ಅರಿಶಿಣ ಗಣೇಶ ಮೂರ್ತಿ ತಯಾರಿಸಿದರೆ ನಾವು ಪರಿಸರ ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದು 7 ನೇ ತರಗತಿಯ ತಂಡದ ಉಪ ನಾಯಕಿ ಕೆ.ಯು.ಶ್ರಾವಣಿ 

ಅಭಿಪ್ರಾಯ ಪಟ್ಟಿದ್ದಾಳೆ.

ಈ ಅಭಿಯಾನಕ್ಕೆ ಬಡಾವಣೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಸ್ವಯಂಪ್ರೇರಿತರಾಗಿ ತೊಡಗಿದ್ದು, ಜಿಲ್ಲೆ & ರಾಜ್ಯಕ್ಕೆ ಮಾದರಿಯಾದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿದ್ದು ಪೋಷಕ ಸಮುದಾಯಕ್ಕೆ ಖುಷಿ ತಂದಿದೆ ಎಂದು ಅಭಿಯಾನಕ್ಕೆ ಕೈಜೋಡಿಸಿದ ಉದ್ಯಮಿ ಟಿ.ಕೆ.ಮಧು ಸಂತಸ ವ್ಯಕ್ತಪಡಿಸಿದರು.  ಈ ಅಭಿಯಾನಕ್ಕೆ ಬಡಾವಣೆಯ ಶಾಲಾ ವಿದ್ಯಾರ್ಥಿಗಳಾದ ಪ್ರತಿಕ್ಷಾ, ಶ್ರಾವಣಿ, ಟಿ.ಎಂ.ನಿವೇದಿತಾ, ಕೆ.ಎಸ್.ನಿತ್ಯ, ಟಿ.ಎಂ.ನಿತಿನ್, ಕೆ.ಮೋಹಿತ್, ಮಹಾತ್ಮ ರವೀಂದ್ರ, ಹರ್ಷಿತ್ ಮೊದಲಾದ ಮಕ್ಕಳು ಖುಷಿಯಿಂದ ಅರಿಶಿಣ ಗಣೇಧ ಮೂರ್ತಿ ತಯಾರಿಸಿ ಕುಶಾಲನಗರ ಪಟ್ಟಣದ ನಾಗರಿಕರಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವದ ಮಹತ್ವ ಸಾರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಕ್ಕಳ ಅಭಿಯಾನಕ್ಕೆ ಶಿಕ್ಷಕರಾದ ವೆಂಕಟೇಶ್, ಉಷಾ, ಆರೋಗ್ಯ ಇಲಾಖೆಯ ಉಮೇಶ್, ರವೀಂದ್ರ ಇತರರು ಸಹಕರಿಸಿದ್ದಾರೆ.

'ವಿಶ್ವ ಓಝೋನ್ ಪದರ ಸಂರಕ್ಷಣಾ ದಿನ’ -2021 (World Ozone Layer Conservation Day : 2021)

      ಓಝೋನ್ ಪದರ ರಕ್ಷಿಸಿ ಜೀವ ಸಂಕುಲ  ಸಂರಕ್ಷಿಸಿ

    ಪ್ರತಿವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ಪದರ ಸಂರಕ್ಷಣಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಓಝೋನ್ ದಿನವು ಓಝೋನ್ ಪದರದ ಮಹತ್ವ , ಅದರ ಸವಕಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದನ್ನು ಸಂರಕ್ಷಿಸಲು ನಾವು ಕೈಗೊಳ್ಳಬೇಕಾದ ಸಂಭವನೀಯ ಪರಿಹಾರಗಳನ್ನು ಕಂಡುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ಮತ್ತು ಇದು ಪರಿಸರ ವ್ಯವಸ್ಥೆ ಹಾಗೂ ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.



  ಓಝೋನ್ ಪದರವು ಭೂಮಿಯನ್ನು ಸೂರ್ಯನ ಕಿರಣಗಳ ಹಾನಿಕಾರಕ ಭಾಗದಿಂದ ರಕ್ಷಿಸುತ್ತದೆ.ಇದರಿಂದ ಭೂ ಗ್ರಹದ ಜೀವಿಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    ವಿಶ್ವ ಓಝೋನ್ ಪದರದ ರಕ್ಷಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ 16 ನ್ನು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲು ಕರೆ ನೀಡಿದೆ. ಈ ಆಚರಣೆಯು 1987 ರಲ್ಲಿ ಓಝೋನ್ ಪದರಕ್ಕೆ ಹಾನಿ ಉಂಟುಮಾಡುತ್ತಿರುವ ಪದಾರ್ಥಗಳ ವಿರುದ್ಧ ಮಾಂಟ್ರಿಯಲ್ ಪ್ರೋಟೊಕಾಲ್‌ಗೆ ಸಹಿಹಾಕಿದ ದಿನವನ್ನು ನೆನಪಿಸುತ್ತದೆ. 24 ರಾಷ್ಟ್ರಗಳ ಪ್ರತಿನಿಧಿಗಳು  1987 ರಲ್ಲಿ ಮಾಂಟ್ರಿಯಲ್‌ನಲ್ಲಿ ಸಭೆ ಸೇರಿ ಓಝೋನ್ ಪದರದ ನಾಶವನ್ನು ತಡೆಯಲು ಇದು ಸರಿಯಾದ ಸಮಯ ಎಂದು ಪ್ರಪಂಚಕ್ಕೆ ಘೋಷಿಸಿದರು. ಈ ರಾಷ್ಟçಗಳು ಮಾಂಟ್ರಿಯಲ್ ಪ್ರೋಟೊಕಾಲ್ ಮೂಲಕ ಓಝೋನ್ ಪದರಕ್ಕೆ ಹಾನಿ ಉಂಟುಮಾಡುವ ಪದಾರ್ಥಗಳನ್ನು ವಿಮುಕ್ತಿಗೊಳಿಸುವಲ್ಲಿ ಬದ್ಧವಾಗಿವೆ.

 ವಿಶ್ವ ಓಝೋನ್ ದಿನ 2021 ರ ಥೀಮ್ :  ಓಝೋನ್ ಫಾರ್ ಲೈಫ್ : 36 ವರ್ಷಗಳ ಓಝೋನ್ ಲೇಯರ್ ಭದ್ರತೆ ಎಂಬುದು ವಿಶ್ವ ಓಝೋನ್ ದಿನ 2021 ರ ಘೋಷಣೆಯಾಗಿದೆ. ಈ ವರ್ಷ ನಾವು 36 ವರ್ಷಗಳ ಜಾಗತಿಕ ಓಝೋನ್ ಪದರ ರಕ್ಷಣೆಯ ದಿನವನ್ನಾಗಿ ಆಚರಿಸುತ್ತಿದ್ದೇವೆ.

  19 ನೇ ಡಿಸೆಂಬರ್  1994ರಂದು ವಿಶ್ವಸಂಸ್ಥೆಯ ಮಹಾ ಸಭೆಯು ಓಝೋನ್ ಪದರದ ರಕ್ಷಣೆಗೆ ಸಂಬಂಧಿಸಿದಂತೆ ಮಾಂಟ್ರಿಯಲ್ ಪ್ರೋಟೊಕಾಲ್‌ಗೆ ಸಹಿಹಾಕಿದ ದಿನದ ನೆನಪಿಗಾಗಿ ಸೆಪ್ಟೆಂಬರ್ 26 ನ್ನು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲು ಕರೆ ನೀಡಿತು. ಈ ದಿನವನ್ನು 1995 ರ ಸೆಪ್ಟೆಂಬರ್ 16 ರಂದು ಮೊದಲ ಬಾರಿಗೆ ಆಚರಿಸಲಾಯಿತು.

  ವಿಶ್ವ ಓಝೋನ್ ದಿನವು ಓಝೋನ್ ಪದರದ ಮಹತ್ವ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ. ಈ ದಿಸೆಯಲ್ಲಿ ಓಜೋನ್ ಪದರ ರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಸಕಲ ಜೀವರಾಶಿಗಳ ರಕ್ಷಾ ಕವಚ ಓಝೋನ್ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿದೆ.  ಮನುಷ್ಯನ ಅಟ್ಟಹಾಸಕ್ಕೆ ಬಲಿಯಾದ ವಸ್ತು – ವಿಶೇಷಗಳ ಪಟ್ಟಿಯಲ್ಲಿ ಓಝೋನ್ ಪದರವು ಒಂದು. 

ಓಝೋನ್ ಪದರ ಇಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ನೇರಳಾತೀತ ಕಿರಣಗಳ ನೇರ ಸ್ಪರ್ಶಕ್ಕೆ ಸಿಲುಕಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ  ಸಿಲುಕುತ್ತಿದ್ದವು ಎಂಬ ಆತಂಕವಿದೆ.

  ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಮಾತಿನಂತೆ, ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಝೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಝೋನ್ ರಕ್ಷನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ಪದರ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. 

    ಭೂಮಿ ಬದುಕಲು ಓಝೋನ್ ಬೇಕೇ -ಬೇಕು. ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ಹೇಗೆ ರಕ್ಷಿಸುತ್ತದೋ ಹಾಗೆ, ಓಝೋನ್ ಪದರ ಕೂಡ ನಮ್ಮನ್ನು ಸೂರ್ಯನಿಂದ ಬರುವ ನೇರಾಳತೀತ (ಅಲ್ಟ್ರಾ ವೈಲೆಟ್ ರೇ ಗಳು) ಕಿರಣಗಳಿಂದ ರಕ್ಷಿಸುತ್ತದೆ. 

  ಭೂಮಿಯ ಓಝೋನ್ ಪದರವೂ ಸೂರ್ಯನಿಂದ ಬರುವ ಕಾಸ್ಮಿಕ್ ಕಿರಣಗಳನ್ನು ಶೋಧಿಸಿ, ವಾತಾವರಣವನ್ನು  ಶುದ್ಧವಾಗಿರಿಸಿದೆ. ಆದರೆ ನಾವು ವಾತಾವರಣಕ್ಕೆ ಹೆಚ್ಚಿನ ಕಾರ್ಬನ್ ಡೈ ಆಕ್ಸೆಡ್ ಅನ್ನು ಬಿಟ್ಟು ವಾಯುಮಂಡಲವನ್ನು ಮಲಿನಗೊಳಿಸುತ್ತಿದ್ದೇವೆ. 

ಓಝೋನ್ ಪದರದ ಅಪಾಯಗಳು :

1980ಮತ್ತು  1990 ರಲ್ಲಿ ವಿಜ್ಞಾನಿಗಳು ಓಝೋನ್ ಪದರದಲ್ಲಿ ರಂಧ್ರಗಳಾಗಿರುವುದನ್ನು ಗಮನಿಸಿದರು. ನಂತರದ ದಿನಗಳಲ್ಲಿ ವಿಜ್ಞಾನಿಗಳು ಇದು ಕೇವಲ ರಂಧ್ರವಲ್ಲ ವಾಸ್ತವವಾಗಿ ಓಝೋನ್ ಸಂಪೂರ್ಣವಾಗಿ ಖಾಲಿಯಾಗಿರುವ ಓಝೋನ್ ಪದರದ ಪ್ರದೇಶ ಎಂದು ಅರಿತುಕೊಂಡರು. ಓಝೋನ್ ಪದರದ ಪ್ರದೇಶವು ಸೂರ್ಯನ ಕಿರಣವನ್ನು ಹೆಚ್ಚು ಹೀರದೆ ಅಥವಾ ಪ್ರತಿಫಲಿಸದೆ ನೇರವಾಗಿ ಭೂಮಿಗೆ ತಲುಪಿಸಿ ಭವಿಷ್ಯದಲ್ಲಿ ಮಾರಕವಾಗಿ ಪರಿಣಾಮ ಆಗಬಹುದೆನ್ನುವುದನ್ನು ಅರಿತರು.ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಓಝೋನ್ ಪದರದ ಕ್ಷಿಪ್ರ ನಾಶಕ್ಕೆ ಕ್ಲೋರಿನ್ ಮತ್ತು ಬ್ರೋಮಿನ್‌ಗಳ ರಾಸಾಯನಿಕ ಕ್ರಿಯೆ ಕಾರಣವಾಗಿದೆ.2006 ರಿಂದ ಓಝೋನ್ ಪದರದಲ್ಲಿನ ರಂಧ್ರಗಳು ಕ್ರಮೇಣ ಕುಗ್ಗುತ್ತಿವೆ. 

   2009 ರ ನಂತರ ಓಝೋನ್ ಪದರದ ನಾಶಕ್ಕೆ ಕಾರಣವಾದ ೯೮% ರಷ್ಟು ಪದಾರ್ಥಗಳನ್ನು ನಿಷೇಧಿಸುವಲ್ಲಿ ಸಫಲವಾಯಿತು. ಆಗ ಎಲ್ಲಾ ದೇಶಗಳು ಒಟ್ಟಿಗೆ ಕೈ ಜೋಡಿಸಿ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಒಪ್ಪಿದಾಗ ಈ ಕಾರ್ಯ ಸಂಭವನೀಯವೆನಿಸಿತು. ಇಲ್ಲಿಂದ ‘ಗ್ರಹದ ರಕ್ಷಣೆಗೆ ಹಸಿರನ್ನು ಬೆಳೆಯಿರಿ’ ಎಂಬ ಘೋಷಣೆ ಪ್ರಚಲಿತವಾಯಿತು. 

   ದಿನದ ಮಹತ್ವ : ವಿಶ್ವ ಓಝೋನ್ ಪದರ ಸಂರಕ್ಷಣಾ ದಿನದಂದು ವಿಶಿಷ್ಠವಾಗಿ ಪರಿಸರ ಸಂರಕ್ಷಣೆಯಲ್ಲಿ ಓಝೋನ್ ಪದರ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಮೂಲಕ ಸೂರ್ಯ, ಆಕಾಶ ಅಥವಾ ಭೂಮಿಯ ನೈಸರ್ಗಿಕ ಪರಿಸರದ ಚಿತ್ರಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಬೇಕಾಗಿದೆ.

ವಿಷಯ/ಉದ್ಘೋಷಣೆ :  2012  ರಲ್ಲಿ ಮಾಂಟ್ರಿಯಲ್ ಪ್ರೋಟೊಕಾಲ್ ತನ್ನ 25  ನೇ ವಾರ್ಷಿಕೋತ್ಸವವನ್ನು ಪೂರೈಸಿತು. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ 2012 ರ ಕೇಂದ್ರ ವಿಷಯ ‘ಮುಂದಿನ ಪೀಳಿಗೆಗಾಗಿ ನಮ್ಮ ವಾಯುಮಂಡಲ ರಕ್ಷಿಸಿ’ ಎನ್ನುವುದಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕೇಂದ್ರ ವಿಷಯವು ಆಗಿರುತ್ತದೆ.

 ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು ರಾಷ್ಟ್ರ ಹಾಗೂ ಜನರಲ್ಲಿ ಜೀವನಮಟ್ಟವನ್ನು ಸ್ಪೂರ್ತಿದಾಯಕವಾಗಿ ಸುಧಾರಿಸಿ ಮುಂದಿನ ಪೀಳಿಗೆಗಾಗಿ ಶ್ರಮಿಸುವಲ್ಲಿ ಕಾರ್ಯ ನಿರತವಾಗಿದೆ. 

 ಓಝೋನ್ ಪದರ ಹಾನಿಯಿಂದ ಮಾನವನ ದೇಹಕ್ಕೆ, ಜೀವಸಂಕುಲಕ್ಕೆ ಜಲಚರಗಳಿಗೆ ಮಾರಕವಾಗಲಿದೆ. ಹಾಗೂ ಸಕಲ ಜೀವಿಗಳಿಗೆ ತೊಂದರೆ ಆಗಲಿದೆ. ಇದರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ.

  ಆದ್ದರಿಂದ ನಾವು ಸಿ.ಎಫ್.ಸಿ. (CFC) ರಹಿತ ರೆಫ್ರಿರೇಟರ್‌ಅನ್ನು ಉಪಯೋಗಿಸಬೇಕು. ಸೂರ್ಯನಿಂದ ಬರುವ ನೇರಾಳತೀತ ನೀಲ ಕಿರಣ (Ultra Violet Rays) ಗಳನ್ನು ತಡೆದು ಅಪಾಯವನ್ನು ತಪ್ಪಿಸುವಂತ ಓಝೋನ್ ಪದರ (Ozone layer) ಕ್ಕೆ ಧಕ್ಕೆ ಬರುತ್ತದೆ. ಅದಕ್ಕೆ ರಂಧ್ರವಾದರೆ ಕ್ಯಾನ್ಸರ್‌ನಂತಹ ಚರ್ಮರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಾವು ಓಝೋನ್ ಪದರವನ್ನು ಸಂರಕ್ಷಿಸಬೇಕು. ಇದು ನಮ್ಮನ್ನು ರಕ್ಷಿಸುತ್ತದೆ. 

  ಓಝೋನ್ ಪದರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ನಾವು ಜಾಗ್ರತೆ ವಹಿಸಬೇಕಿದೆ.  ಓಝೋನ್ ಪದರದ ನಾಶವನ್ನು ತಡೆಯಲು ಎಲ್ಲಾ ರಾಷ್ಟçಗಳು ಸಂಘಟಿತರಾಗಿ ಪರಿಸರ ಮಾಲಿನ್ಯ ನಿಯಂತ್ರಣದೊಂದಿಗೆ ಜಾಗತಿಕ ತಾಪಮಾನ ತಡೆಗಟ್ಟುವ ಮೂಲಕ ಓಝೋನ್ ಪದರ ಸಂರಕ್ಷಿಸಬೇಕಿದೆ.

ಓಝೋನ್ ಪದರದ ಕ್ಷಿಪ್ರ ನಾಶಕ್ಕೆ ಕಾರಣವಾದ ಮಾಲಿನ್ಯಕಾರಕ ಪದಾರ್ಥಗಳು ವಾಯುಮಂಡಲಕ್ಕೆ ಸೇರದಂತೆ ನಾವು ಜಾಗ್ರತೆ ವಹಿಸಬೇಕು. ಇಲ್ಲದಿದ್ದಲ್ಲಿ ಓಜೋನ್ ಪದರ ಸಂಪೂರ್ಣ ನಾಶವಾದರೆ ಇಡೀ ಜೀವ ಸಂಕುಲಕ್ಕೆ ತೊಂದರೆಯಾಗುವ ಅಪಾಯವಿದೆ. 

   ಮುಂದಿನ ಪೀಳಿಗೆಗಾಗಿ ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟುಮಾಡದೆ ನಾವು ವಾಯುಮಂಡಲ ರಕ್ಷಿಸಬೇಕಾಗಿದೆ.  

ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪರಿಸರ ಮಾಲಿನ್ಯ ತಡೆಗಟ್ಟಲು ಎಲ್ಲರೂ ಪ್ರಯತ್ನಿಸಬೇಕು ಓಜೋನ್ ಪದರದ ರಕ್ಷಣೆಯಲ್ಲಿ ನಾವು ವಹಿಸಬೇಕಾದ ಜವಾಬ್ದಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. 

  ಈ ದಿಸೆಯಲ್ಲಿ ನಾವು ವಾತಾವರಣದಲ್ಲಿ ಯಾವುದೇ ಮಾಲಿನ್ಯವನ್ನುಂಟು ಮಾಡದೆ ಪರಿಸರವನ್ನು ಸಂರಕ್ಷಿಸೋಣ. ಈ ಮೂಲಕ ನಾವು ಜಾಗತಿಕ ತಾಪಮಾನ ತಡೆಯುವ ಮೂಲಕ ಓಝೋನ್ ಪದರ ರಕ್ಷಿಸಿ ಭೂಮಂಡಲ ಹಾಗೂ ಜೀವಸಂಕುಲಗಳನ್ನು ಸಂರಕ್ಷಿಸಬೇಕಿದೆ.

   ಬನ್ನಿ, ನಾವೆಲ್ಲ ಜತೆಗೂಡಿ ಓಝೋನ್ ಪದರ ಸಂರಕ್ಷಿಸಲು ಮಾಲಿನ್ಯರಹಿತ ಹಾಗೂ ಹಚ್ಚ ಹಸಿರು ಪರಿಸರ ನಿರ್ಮಿಸಲು ನಾವೆಲ್ಲರೂ ಪಣತೋಡೋಣ. 



- ---------------

ಟಿ.ಜಿ.ಪ್ರೇಮಕುಮಾರ್,

 ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,

 ಕೂಡುಮಂಗಳೂರು, ಕೊಡಗು ಜಿಲ್ಲೆ

 (ಮೊಬೈಲ್ : 94485 88352)

28 ಜುಲೈ 2021

ಪ್ರೋ. ಜಿ.ಎಸ್. ಜಯದೇವರವರ "ಸೋಲಿಗ ಚಿತ್ರಗಳು" ಪುಸ್ತಕ ಕುರಿತು ಬುಕ್ ಟಾಕ್ ಕಾರ್ಯಕ್ರಮ!!!

 





ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪರವ ಪುತ್ರ ಹಾಗೂ  ದೀನಬಂಧು ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಜಿ. ಎಸ್. ಜಯದೇವರವರಸೋಲಿಗ ಚಿತ್ರಗಳುಹೊಸ ಪುಸ್ತಕದ ಕುರಿತು ಆನ್ಲೈನ್ ಬುಕ್ ಟಾಕ್ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮವು ಜುಲೈ 31ನೇ ಶನಿವಾರ ಸಂಜೆ 6.30ಕ್ಕೆ ಝೂಮ್ ವೇದಿಕೆಯಲ್ಲಿ ನಡೆಯುತ್ತದೆ.

ಕಾರ್ಯಕ್ರಮದಲ್ಲಿ ಲೇಖಕರಾದ ಪ್ರೊ. ಜಿ. ಎಸ್. ಜಯದೇವ ರವರ ಘನಉಪಸ್ಥಿತಿಯಿದ್ದು, ಹಿರಿಯ ಸಾಹಿತಿಗಳಾದ ಡಾ. ನಟರಾಜ ಬೂದಾಳು ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಹರಿಪ್ರಸಾದ್ ಜಿ.ವಿ., ಹಿರಿಯ ಉಪನ್ಯಾಸಕರು, ಡಯಟ್ ಶಿವಮೊಗ್ಗ, ಡಾ. ಚಂದ್ರಶೇಖರ್ ಹೆಚ್.ಬಿ., ಹಿರಿಯ ಸಹಾಯಕ ನಿರ್ದೇಶಕರು, ಡಿಎಸ್ಇಆರ್ಟಿ, ಬೆಂಗಳೂರು ಮತ್ತು ಶ್ರೀ. ಭಾನು ಕುಮಾರ್ ಆರ್., ಉಪನ್ಯಾಸಕರು, ಡಯಟ್ ಮಂಡ್ಯ ರವರು ಮಾತನಾಡಲಿದ್ದಾರೆ.

 

ಲೇಖಕರು ನಲವತ್ತು ವರ್ಷಗಳ ಸೋಲಿಗರೊಂದಿಗಿನ ಒಡನಾಟ, ನಂಬಿಕೆ, ಪರಿಸರ ಜ್ಞಾನ, ಕಾಳಜಿ, ಸಂರಕ್ಷಣೆ, ಪಾರಂಪಾರಿಕ ಜ್ಞಾನ, ಸಂಸ್ಕøತಿ, ಸೋಲಿಗರ ಬದುಕಿನಲ್ಲಾದ ಬದಲಾವಣೆಗಳು, ಸಮಸ್ಯೆಗಳು ಎಲ್ಲವನ್ನೂ ಇಂಚಿಂಚಾಗಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಪುಸ್ತಕವನ್ನು ಅನೇಕ ಆಯಮಾಗಳಿಂದ ಓದಬೇಕಾಗಿದೆ. ಹಿನ್ನಲೆಯಲ್ಲಿ  ಬುಕ್ ಟಾಕ್ ಆಯೋಜಿಸಲಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರುತ್ತೇನೆ.

ಭಾಗವಹಿಸಲು: ಜೂಮ್ ವೇದಿಕೆಯಲ್ಲಿ ಮೀಟಿಂಗ್ ಐಡಿ: 473 190 7076 ಪಾಸ್ ಕೋಡ್:ceeco

23 ಜುಲೈ 2021

ಸೀಕೋ ಸಂಸ್ಥೆಯ ಆನ್ ಲೈನ್ ಕಾರ್ಯಕ್ರಮ ಯಶಸ್ವಿ: ಲಾಕ್‍ಡೌನ್ ಸಮಯ ಸದುಪಯೋಗ!!!

 ಸೀಕೋ ಸಂಸ್ಥೆ, ಹಾಸನ ಜಿಲ್ಲೆ, ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಲಾಕ್‍ಡೌನ್ ಸಮಯದಲ್ಲಿ  ಹತ್ತನೆಯ ತರಗತಿ ಕನ್ನಡ ಮತ್ತು ಇಂಗ್ಲೀಷ್ ವಿದ್ಯಾರ್ಥಿಗಳಿಗೆ 2ನೇ ಮೇ 2021 ರಿಂದ 20ನೇ ಜುಲೈ 2021 ರವರೆಗೆ ಸತತ ಎರಡೂವರೆ ತಿಂಗಳು ಕಾಲ ಆನ್‍ಲೈನ್ ರಸಪ್ರಶ್ನಾವಳಿಯನ್ನು ಏರ್ಪಡಿಸಿತ್ತು. 

ರಾಜ್ಯದ ಬಹುತೇಕ ಜಿಲ್ಲೆಗಳಿಂದ ಸುಮಾರು 23 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಈ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರುಗಳು, ವಿದ್ಯಾರ್ಥಿಗಳು, ಪೋಷಕರು, ಮಾಧ್ಯಮ ಮಿತ್ರರು, ಸೀಕೋ ಸಂಸ್ಥೆಯ ಸ್ವಯಂಸೇವಕರುಗಳು, ಸಂಘ ಸಂಸ್ಥೆಗಳಿಗೆ ಹೃದಯಪೂರ್ವಕ ಧನ್ಯವಾದಗಳು.  

1. ಶ್ರೀ. ರವಿಕುಮಾರ್ ಕೆ.ಎನ್., ಸಮಾಜವಿಜ್ಞಾನ ಶಿಕ್ಷಕರು, ಬಿ.ಎಸ್.ಎಸ್.ಸ.ಪ.ಪೂ.ಕಾಲೇಜು ಕೊಣನೂರು, ಹಾಸನ ಜಿಲ್ಲೆ, 

2. ಶ್ರೀಮತಿ. ಲತಾ ವೆಂಕಟೇಶ್ ಪೈ, ಗಣಿತ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

3. ಶ್ರೀಮತಿ. ಮಾಲಾದೇವಿ ಎನ್.ಕೆ., ವಿಜ್ಞಾನ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

4. ಶ್ರೀ. ದಿನೇಶ್ ಕೆ.ಎನ್., ಕನ್ನಡ ಭಾಷಾ ಶಿಕ್ಷಕರು, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

5. ಶ್ರೀಮತಿ. ಜ್ಯೋತಿ ಬಿ.ಎಸ್., ಇಂಗ್ಲೀಷ್ ಭಾಷಾ ಶಿಕ್ಷಕಿ, ಸ.ಪ್ರೌ.ಶಾಲೆ, ಹಾಸನ ಜಿಲ್ಲೆ, 

6. ಶ್ರೀಮತಿ. ಮೇಘರಾಣಿ ಎಂ.ಜಿ., ವಿಜ್ಞಾನ ಶಿಕ್ಷಕಿ, ಸ.ಪ.ಪೂ. ಕಾಲೇಜು (ಬಾಲಕಿಯರ) ಅರಕಲಗೂಡು

7. ಶ್ರೀ. ತಿಪ್ಪೇಸ್ವಾಮಿ ಕೆ.ಸಿ., ಸಮಾಜವಿಜ್ಞಾನ ಶಿಕ್ಷಕರು, ಶ್ರೀ.ದೊರೆ ವೀರರಾಜೇಂದ್ರ ಪ್ರೌಢ ಶಾಲೆ, ಬೇಳೂರು, ಕೊಡಗು ಜಿಲ್ಲೆ

8. ಶ್ರೀ. ಬಾಲಸುಬ್ರಹ್ಮಣ್ಯ ಎಸ್., ಸಮಾಜವಿಜ್ಞಾನ ಶಿಕ್ಷಕರು, ಸ.ಪ.ಪೂ.ಕಾಲೇಜು ಕುಶಾಲನಗರ, ಕೊಡಗು ಜಿಲ್ಲೆ

9. ಶ್ರೀಮತಿ. ಸವಿತ ಹೆಚ್.ಎಲ್. ಇಂಗ್ಲೀಷ್ ಭಾಷಾ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ 


ಧನ್ಯವಾದಗಳೊಂದಿಗೆ,

 

ಡಾ. ಹರೀಶ್ ಕುಮಾರ ಬಿ.ಕೆ.

(ಕಾರ್ಯಕಾರಿ ನಿರ್ದೇಶಕರು)


ಕೊಣನೂರು ಜುಲೈ 23. ಕೋವಿಡ್-19ರ ಎರಡನೆಯ ಅಲೆಯ ಲಾಕ್ ಡೌನ್ ಸಮಯದಲ್ಲಿ ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ಹತ್ತನೆಯ ತರಗತಿ ವಿದ್ಯಾರ್ಥಿಗಳಿ ಮೇ 2 ರಿಂದ ಜುಲೈ 20 ರವರೆಗೆ ಸತತ ಆನ್ ಲೈನ್ ರಸಪ್ರಶ್ನಾವಳಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಇಂಗ್ಲೀಷ್ ಎರಡು ಮಾಧ್ಯಮದಲ್ಲಿ ಪ್ರಶ್ನಾವಳಿ ಕಾರ್ಯಕ್ರಮಗಳು ನಡೆದಿದ್ದವು. ಪರೀಕ್ಷೆಗೆ ಅನುಕೂಲವಾಗುವಂತೆ ಎಲ್ಲಾ ವಿಷಯಗಳಲ್ಲಿ ಎಲ್ಲಾ ಘಟಕಗಳನ್ನು ಒಳಗೊಂಡಂತೆ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿತ್ತು. ಶೇ. 100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸೀಕೋ ಸಂಸ್ಥೆಯು ವಾಟ್ಸಪ್ ಮೂಲಕ ಇ-ಪ್ರಮಾಣ ಪತ್ರವನ್ನು ವಿತರಿಸಿತ್ತು. ರಸಪ್ರಶ್ನಾವಳಿಯಲ್ಲಿ 23 ಸಾವಿರಕ್ಕೂ ಹೆಚ್ಚೂ (23766) ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯು ಆಯೋಜಿಸಿದ್ದ ಪ್ರಶ್ನೆಗಳು ವಾರ್ಷಿಕ ಪರೀಕ್ಷೆಯಲ್ಲಿಯೂ ಬಂದಿದ್ದರಿಂದ, ಪರೀಕ್ಷಾ ತಯಾರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತಲುಪಿ ಯಶಸ್ವಿಯಾಗಲು ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರುಗಳು, ಪೋಷಕರು, ಮಾಧ್ಯಮ ಮಿತ್ರರು, ಸೀಕೋ ಸಂಸ್ಥೆಯ ಸ್ವಯಂಸೇವಕರುಗಳು, ಸಂಘಸಂಸ್ಥೆಗಳಿಗೆ ಸೀಕೋ ಸಂಸ್ಥೆಯ ಮುಖ್ಯಸ್ಥ ಡಾ. ಹರೀಶ್ ಕುಮಾರ ಬಿ.ಕೆ. ರವರು ಧನ್ಯವಾದಗಳನ್ನು ಅರ್ಪಿಸಿದರು. ಇದೇ ರೀತಿಯ ಸಹಕಾರ ಮುಂದಿನ ಕಾರ್ಯಕ್ರಮಗಳಲ್ಲಿಯೂ ಮುಂದುವರೆಯಲಿ ಎಂದು ವಿನಂತಿಸಿದರು.


22 ಜುಲೈ 2021

ಜಿ.ಎಸ್. ಜಯದೇವರವರ ಸೋಲಿಗ ಚಿತ್ರಗಳ ಒಳನೋಟ!!!




ಈ ಲೇಖನವನ್ನು ಬರೆದ ನಂತರ ಮೂಡಿಬಂದ ನಾಲ್ಕು ಸಾಲುಗಳನ್ನು ಹೇಳುತ್ತೇನೆ. ಇದನ್ನು ಪೀಠಿಕೆಗೆ ಪೀಠಿಕೆಯೆಂದು ಓದಿಕೊಳ್ಳಿ. ಪುಸ್ತಕ ಪರಿಚಯ ಮಾಡಹೊರಟವನ್ನು, ಇಡೀ ಪುಸ್ತಕದಲ್ಲಿರುವ ಪ್ರಮುಖ ನಾಲ್ಕೈದು ವಿಷಯಗಳನ್ನು ತಿಳಿಸೋಣವೆಂದು ಬರೆದೆ. ಅಂದರೇ, ಯಾವುದೆಲ್ಲಾ ಆಯಾಮಗಳಿಂದ ನೋಡಬಹುದೆಂದು. ಮೊದಲಿಗೆ, ಸೋಲಿಗರಲ್ಲಿರುವ ಪರಿಸರ ಜ್ಞಾನ ಮತ್ತು ಸಂರಕ್ಷಣೆಯ ಪ್ರಜ್ಞೆ, ಎರಡನೆಯದಾಗಿ ನಾವುಗಳು ಅವರ ಬಗ್ಗೆ ಇರುವ ತಪ್ಪು ಕಲ್ಪನೆ ಅಥವಾ ಕೀಳರಿಮೆಯ ದೃಷ್ಟಿಕೋನ (ದಡ್ಡರು, ನಾಗರೀಕತೆಯಿಲ್ಲದವರು), ಮೂರನೆಯದು ಅವರಿಂದ ಕಾಡಿಗೆ ನಷ್ಟ/ವಂಚನೆ/ಕಳ್ಳತನ, ನಾಲ್ಕನೆಯದು ಸರ್ಕಾರ ಸಕಲ ಸವಲತ್ತುಗಳನ್ನು ನೀಡಿದೆ ಅವರಿಗೆ ಕಾಡಿನ ಮೋಹವೇಕೆ? ಸಂಶೋಧಕರಿಂದ ಉದ್ದಾರದ ಮಾತುಕತೆಗಳು, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕ ಪ್ರತಿನಿಧಿಗಳಾನ್ನಾಗಿ ಈ ಪುಸ್ತಕದಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ತಿಳಿಸಬೇಕೆಂಬುದು ನನ್ನ ಉದ್ದೇಶವಿತ್ತು. ಆದರೇ, ಹಾಗೆ ಹತ್ತು ಸಾಲುಗಳಲ್ಲಿ ಹೇಳಿ ಮುಗಿಸುವುದಕ್ಕಿಂತ, ಒಂದು ಲೇಖನವಾಗಿಯೇ ಇರಲಿ, ಮುಂದೊಮ್ಮೆ ನನಗೂ ಪುಸ್ತಕವನ್ನು ತಿರುವು ಹಾಕುವ ಸಮಯ ಬಂದಾಗ ಅನುಕೂಲವಾಗಬಹುದೆಂದು ಬರೆದಿದ್ದೇನೆ. ಕೊನೆಯ ಐದಾರು (ಪುಟ್ಟರಂಗ, ಡಾ.ಮಾದೇಗೌಡ, ಡಾ.ಜಡೇಗೌಡ, ಡಾ.ರತ್ನಮ್ಮ, ನಿರ್ಮಲಾನಂದ ಸ್ವಾಮಿಜಿ) ಅಧ್ಯಾಯಗಳನ್ನು ನೇರವಾಗಿಯೇ ಓದಬೇಕಾಗಿರುವುದರಿಂದ ಅವುಗಳ ಪರಿಚಯವನ್ನು ಮೊಟಕುಗೊಳಿಸಿದ್ದೇನೆ. ಉಳಿದಂತೆ ನನ್ನ ಅನಿಸಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ನನ್ನ ಅನಿಸಿಕೆ ಏನೇ ಇದ್ದರೂ ತಾವುಗಳು ಈ ಪುಸ್ತಕವನ್ನು ಕಡ್ಡಾಯವಾಗಿ ಓದಲೇಬೇಕಿದೆ. ಹತ್ತಾರು ಆಯಾಮಗಳಿಂದ ಓದಲೇಬೇಕಾದ ಪುಸ್ತಕ. ನಲವತ್ತು ವರ್ಷಗಳ ಸತತ ಒಡನಾಟ, ಹೋರಾಟ, ಇದೊಂದು ಸಂಶೋಧನಾ ಮತ್ತು ಆತ್ಮಕಥೆಯ ಮಿಶ್ರಣದಂತಿದೆ. 


ಈ ಬರವಣಿಗೆಯನ್ನು ತಾವುಗಳ ವಿಮರ್ಶೆಯೆಂದು ಭಾವಿಸಬಾರದಾಗಿ ಮೊದಲ ಕೋರಿಕೆ. ಎರಡು ತಿಂಗಳ ಹಿಂದೆ ಸ್ನೇಹಿತರಾದ ಗಿರೀಶ್ ತರಿಕೆರೆಯವರು ಮಾತನಾಡುತ್ತಾ, ಜಯದೇವಣ್ಣರವರ ಹೊಸಪುಸ್ತಕ ಬಂದಿದೆ ನಿಮಗೆ ಇಷ್ಟ ಆಗುತ್ತೆ, ಕಳುಹಿಸಿಸುತ್ತೇನೆ, ಎಂದರು. ಅದು, ಹೇಳಿ ತಿಂಗಳು ಕಳೆದರು ಅದರ ಬಗ್ಗೆ ಸುದ್ದಿ ಇರಲಿಲ್ಲ, ಕಳೆದ ತಿಂಗಳು, ನಿಮ್ಮ ವಿಳಾಸ ಕಳುಹಿಸಿಕೊಡಿ, ಪುಸ್ತಕ ಕಳ್ಸೋದನ್ನ ಮರೆತುಬಿಟ್ಟೆ ಎಂದರು. ಅದಾದ, ಮೂರೇ ದಿನಕ್ಕೆ ಪುಸ್ತಕ ಬಂತು, ಆದರೇ, ಸಂಚಾರಿ ವಿಜಯ್ ಸಾವಿನ ಸುದ್ದಿ ಕೇಳಿ, ಪುಸ್ತಕ ತೆರೆಯುವ ಮನಸ್ಸು ಮಾಡಿರಲಿಲ್ಲ. ಮೂರ್ನಾಲ್ಕು ದಿನಗಳ ನಂತರ ಕಣ್ನಾಡಿಸಿದೆ ಮತ್ತು ಇದು ಓದಿಸಿಕೊಳ್ಳುವ ಪುಸ್ತಕವೆಂಬ ತೀರ್ಮಾನಕ್ಕೆ ಬಂದೆ. ಹಾಗೆಯೇ ಓದಿಸಿಕೊಂಡು ಹೋದ ಪುಸ್ತಕ ಕೂಡ ಹೌದು. ಪುಸ್ತಕ ಓದುವುದು ನಾಲ್ಕು ಸಾಲು ಬರೆದು ನೀವು ಇದನ್ನು ಓದಿ ಎನ್ನುವುದು ರೂಢಿ. ಆದರೇ, ಈ ಪುಸ್ತಕದ ವಿಚಾರದಲ್ಲಿ ಅದನ್ನು ಮಾಡಲು ಮನಸ್ಸು ಒಪ್ಪುತ್ತಿಲ್ಲ. ಅದನ್ನು ಸವಿವರವಾಗಿ ಹೇಳಬಯಸುತ್ತೇನೆ. ಇದು, ನನ್ನ ಅನಿಸಿಕೆ, ಅಭಿಪ್ರಾಯಗಳು ಮಾತ್ರ. ನನ್ನಯ ಮಸೂರದಲ್ಲಿ ಸೆರೆಸಿಕ್ಕ ಆಲೋಚನೆಗಳು, ಇದು ತಮ್ಮ ಅನುಭವಕ್ಕೂ ಬರಬೇಕೆಂಬ ನಿಯಮವಿಲ್ಲ. 


ನಾನು ಈ ಪುಸ್ತಕವನ್ನು ಪರಿಚಯ ಮಾಡಿಸುತ್ತಿದ್ದೇನೆ. ಒಬ್ಬ ಓದುಗನಾಗಿ. ನಾನು ಪ್ರೋ. ಜಯದೇವರವರ ಬಗ್ಗೆ ಸಾಕಷ್ಟೂ ಕೇಳಿದ್ದೆ, ಆದರೇ ಭೇಟಿಯಾಗಿಲ್ಲ. ಪ್ರತಿಯೊಂದು ಪುಸ್ತಕವೂ ಅನೇಕ ಆಯಾಮಗಳಿಂದ ಕೂಡಿರುತ್ತದೆ. ಸೋಲಿಗ ಚಿತ್ರಗಳು, ಲೇಖಕರ ನಲ್ವತ್ತು ವರ್ಷಗಳ ಅನುಭವ, ಒಡನಾಟ, ಗುದ್ದಾಟ, ತೊಳಲಾಟ, ಸಾಧನೆ, ಸಂಯಮ, ಶಕ್ತಿ, ಯುಕ್ತಿ ಎಲ್ಲವನ್ನೂ ಪಡೆದು ರೂಪಿತವಾಗಿರುವ ಪ್ರಬಂಧವೇ ಸರಿ. ಏನಿದೇ, ಏನಿಲ್ಲವೆನ್ನುವುದು ಒಂದು ಬಗೆಯಾದರೇ, ಇದನ್ನು ಹೇಗೆಲ್ಲಾ ಸ್ವೀಕರಿಸಬಹುದೆಂಬುದು ಮತ್ತೊಂದು ಆಯಾಮ. ನಾನು ಈ ಪುಸ್ತಕದಲ್ಲಿ ಬಂದು ಹೋಗಿರುವ ಘಟನೆಗಳನ್ನು, ಮೊದಲನೆಯದಾಗಿ, ಪರಿಸರಶಾಸ್ತ್ರದ (ಇಕಾಲಜಿ) ಆಯಾಮದಿಂದ ನೋಡಬಯುಸುತ್ತೇನೆ, ಅದರಂತೆಯೇ ಸಾಮಾಜಿಕ ಆಯಾಮದಿಂದ ಮೇಲ್ನೋಟ ಅಥವಾ ಪಕ್ಷಿನೋಟವನ್ನು ನೀಡಲು ಪ್ರಯತ್ನಿಸುತ್ತೇನೆ. 


ಇಡೀ ಪುಸ್ತಕವನ್ನು ಒಟ್ಟಾರೆಯಾಗಿ ಪರಿಚಯಿಸುವುದಕ್ಕಿಂತ, ಪ್ರತಿ ಅಧ್ಯಾಯದಲ್ಲಿಯೂ ನನಗೆ ತೋಚಿದ್ದನ್ನು ಹಂಚಿಕೊಳ್ಳುವುದು ಸೂಕ್ತವೆಂಬುದು ನನ್ನ ಅನಿಸಿಕೆ. ಪುಸ್ತಕವು ಒಟ್ಟು 19 ಅಧ್ಯಾಯಗಳನ್ನು ಒಳಗೊಂಡಿದೆ. 


ಮೊದಲನೆಯ ಅಧ್ಯಾಯವು ಮಸಣಮ್ಮ ಬಿಚ್ಚಿಟ್ಟ ಮಹಾರಾಜರ ನೆನಪುಗಳೊಂದಿಗೆ ಪ್ರಾರಂಭವಾಗುತ್ತದೆ. ಮಸಣಮ್ಮನ ಮತ್ತು ಅವರ ಮಗಳಿಂದ ಕೇಳಿದ ಅನುಭವದ ಕಥೆಗಳು ನಮ್ಮ ಮೈಸೂರು ಮಹಾರಾಜರ ಬಗ್ಗೆ ನಮ(ನ)ಗೆ ಇದ್ದ ಅನೇಕ ದೋಷಾರೋಪಗಳನ್ನು ದೂರಪಡಿಸಿತು. ನಾವುಗಳು, ಸಿನೆಮಾ, ಕಥೆ, ಕಾದಂಬರಿ, ಪುಸ್ತಕಗಳಲ್ಲಿ ಓದಿರುವುದು ರಾಜರುಗಳು ಕಾಡಿಗೆ ಬೇಟೆಯಾಡಲು ಹೋಗುತ್ತಿದ್ದರು ಎಂದು. ಆದರೇ, ಮಸಣಮ್ಮನ ನೆನಪುಗಳ ಪ್ರಕಾರ, ಮಹಾರಾಜರು ಕಾಡಿನ ಸೌಂದರ್ಯವನ್ನು ಆನಂದಿಸಲು ಹೋಗುತ್ತಿದ್ದರು, ಕಾಡಿನ ಕೌತುಕಗಳನ್ನು ಕಲಿಯಲು ಬಯಸುತ್ತಿದ್ದರು. “ಏನು ಮಸಣಮ್ಮ, ಗುಡಿಹಟ್ಟಿ ಕಾಡಿನಲ್ಲಿ ಬೇಕಾದಷ್ಟು ಹುಲಿಗಳಿವೆ ಅಂತಾರೆ; ಮಹಾರಾಜರು ಎಷ್ಟು ಹುಲಿ ಹೊಡೆದರು?”. “ಚೀಚೀ..... ನಮ್ಮ ಮಾರಾಜ ಕೊಲೆಗಾರ ಅಲ್ಲಪ್ಪ, ಅವರು ಒಂದು ಹುಲೀನೂ ಕೊಂದಿಲ್ಲ”, ಮುಂದುವರೆದು ಹೇಳ್ತಾರೆ, “ತುಪಾಕಿ ಇದೆ ಅಂತ ಹುಲಿನ್ಯಾಕಪ್ಪ ಹೊಡೀಬೇಕು? ಇಲ್ಲಪ್ಪ, ಅವರು ಕೊಲೆಗಾರ ಅಲ್ಲ, ಅವರು ಹುಲೀನ ಕೊಲೆ ಮಾಡಲಿಲ್ಲ”. ಈ ಮೇಲಿನ ಸಂಭಾಷಣೆ, ಎರಡು ವಿಚಾರಗಳನ್ನು ತಿಳಿಸಿಕೊಡುತ್ತಿದೆ, ಒಂದು ಮಹಾರಾಜರ ವ್ಯಕ್ತಿತ್ವ, ಮತ್ತೊಂದು ಹುಲಿ ಕೊಲ್ಲುವುದನ್ನು ವೀರತನ, ಶೂರತನ ಎಂದು ಕಲಿತಿರುವ ನಾವು ಮತ್ತು ಮಸಣಮ್ಮ. ಮಸಣಮ್ಮ, ಹುಲಿ ಕೊಲ್ಲುವುದನ್ನು ಕೊಲೆ ಎನ್ನುತ್ತಿದ್ದಾಳೆ. ಬೇಟೆ, ಎನ್ನುವ ಪದವನ್ನು ಬಳಸಿಲ್ಲ. 


ಅದರಂತೆಯೇ, ಸೋಲಿಗರ ಜೀವನವನ್ನು ಬದಲಾಯಿಸಲು (ಅಭಿವೃದ್ಧಿ ಪಡಿಸಲು), ಮಹರಾಜರು ಅನೇಕ ಯೋಜನೆಗಳನ್ನು ಕೈಗೊಂಡು ಸೋತ್ತಿದ್ದನ್ನು ನೆನಪಿಸಿಕೊಳ್ಳಬಹುದು. ಅರಮನೆಗೆ ಅವರಲ್ಲಿ ಕೆಲವರನ್ನು ಕರೆತಂದು, ಶಿಕ್ಷಣ ಕೊಡಿಸುವ ಯೋಜನೆಯನ್ನು ರೂಪಿಸುತ್ತಾರೆ. ಆದರೇ, ಸೋಲಿಗರಿಗೆ ತಮ್ಮ ಕಾಡೇ ಪ್ರಪಂಚ, ಸ್ವರ್ಗ, ಅವರಿಗೆ ಈ ನಗರ ಜೀವನ ಹಿಡಿಸುವುದಿಲ್ಲ. ಹಾಗಾಗಿಯೇ, ಅವರನ್ನು ಅವರ ಪಾಡಿಗೆ ಬಿಡಬೇಕು, ಸ್ವಚ್ಛಂದವಾಗಿರಲಿ ಎಂದು “ನೀರ ಮೀನು ನೀರಲ್ಲೇ ಇರಬೇಕು” ಎಂಬ ತೀರ್ಮಾನಕ್ಕೆ ಬರುತ್ತಾರೆ. ಈ ಅಧ್ಯಾಯದಲ್ಲಿ ಮಹಾರಾಜರು ಸೋಲಿಗರನ್ನು ಪ್ರೀತಿಸುತ್ತಿದ್ದ ರೀತಿ ಮತ್ತು ಸೋಲಿಗರು ಮಹಾರಾಜರ ಮೇಲಿನ ಗೌರವಗಳು ನಮ್ಮ ಅರಿವಿಗೂ ಮೀರಿ ಕಾಣಸಿಗುತ್ತವೆ. ಬಹಳ ಮುಖ್ಯವಾಗಿ, ಕಾಡಿನ ಬಗ್ಗೆಯ ಒಲವು, ನಾಳೆಗೆ ಕೂಡಿಡಬೇಕೆಂಬ ಆತಂಕವಿಲ್ಲದ ಸಾಮಾನ್ಯ ಬದುಕು ನಮ್ಮನ್ನು ಆಕರ್ಷಿಸುತ್ತದೆ. 


ಎರಡನೆಯ ಅಧ್ಯಾಯ, ಪೊಟರೆಯಲ್ಲಿ ಭೂಲೋಕ ಶೆಟ್ಟಿ, ಈ ಅಧ್ಯಾಯವು ವಿದ್ಯಾರ್ಥಿಗಳ ಪಠ್ಯ ಪುಸ್ತಕಕ್ಕೆ ಸೇರ್ಪಡೆಯಾಗಬೇಕೆಂಬುದು ನನ್ನ ಬಯಕೆ. ತಿಳಿ ಹಾಸ್ಯ, ಒಬ್ಬರೇ ಕುಳಿತು ಓದುತ್ತಿದ್ದರೂ ಅಥವಾ ನೆನಪಿಸಿಕೊಂಡರೂ ನಗುವಂತೆ ಮಾಡುತ್ತದೆ. ನಾವು ಚಿಕ್ಕವರಿದ್ದಾಗ ಈ ರೀತಿಯ ಅನೇಕ ಕಥೆಗಳನ್ನು ಕೇಳಿದ ನೆನಪು ಬರುತ್ತದೆ. ಈ ಅಧ್ಯಾಯದಲ್ಲಿ, ಭೂಲೋಕ ಶೆಟ್ಟಿಯ ಕಥೆಯೊಂದಿಗೆ, ಸೋಲಿಗರ ಪೂಜೆ, ನಂಬಿಕೆ, ಶ್ರಧ್ಧೆಗಳು ಅನಾವರಣಗೊಳ್ಳುತ್ತವೆ. ದೇವರ ಮೇಲಿನ ನಂಬಿಕೆ ಎಷ್ಟು ನಿಸ್ವಾರ್ಥದಿಂದ ಇರುತ್ತದೆ, ಮತ್ತು ಅಲ್ಲಿನ ಮುಗ್ದತೆ ಕೆಲವೊಮ್ಮೆ ನಾವು ಮಾಡುವ ಆಡಂಬರದ, ಅಬ್ಬರದ ಪೂಜೆಗಳು ಏಕೆ ಎನ್ನುವ ಹಂತಕ್ಕೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. 


ಚಿಕ್ಕಣ್ಣೆನ ಡ್ರೈವಿಂಗ್ ಮಹಾತ್ಮೆ ಮೂರನೆಯ ಅಧ್ಯಾಯವಾಗಿದೆ. ಚಿಕ್ಕಣ್ಣನನ್ನು ನೆನೆಯುವಾಗ ನನಗೆ ತೇಜಸ್ವಿಯವರ ಅಣ್ಣನ ನೆನಪುಗಳು ಬಂದವು. ಚಿಕ್ಕಣ್ಣ ಸೋಲಿಗ ಹುಡುಗನಾಗಿ, ಅವನಿಗೆ, ಜೀಪಿಗೆ ಜೀವವಿದೆ ಎನ್ನುವ ಮಟ್ಟಕ್ಕೆ ಭಾವುಕನಾಗುತ್ತಾನೆ. ಅಥವಾ ಅದೊಂದು ನಂಬಿಕೆಯಿಂದ, ವ್ಯವಹರಿಸಲು ಯತ್ನಿಸುತ್ತಾನೆ. ನಮಗೆಲ್ಲರಿಗೂ ವಾಹನಗಳು ವಸ್ತುಗಳು, ಆದರೇ, ಮುಗ್ಧ ಜನರಿಗೆ ಅದು ನಮ್ಮಂತೆಯೇ ಜೀವವಿರುವ/ವಿಲ್ಲದೆಯಿರುವ ಮತ್ತೊಂದು ಜೀವಿ. ಇದನ್ನು, ನಾನು ನನ್ನೂರಿನಲ್ಲಿಯೂ ಹಿಂದೆ ಕೇಳಿಸಿಕೊಳ್ಳುತ್ತಿದ್ದೆ. ಅಯ್ಯೋ ಆ ಸೈಕಲ್ ಗೆ ಯಾಕೆ ಹಂಗೆ ಜೀವ ತಿನ್ನುತ್ತೀಯೋ ಮಾರಾಯಾ? ಅಂತಾ. ಕೇವಲ ಕೆಲವು ದಿನಗಳು ಚಿಕ್ಕಣ್ಣ ಬೆಟ್ಟದಿಂದ ಮೈಸೂರಿಗೆ ಬಂದಾಗ ಅವನ್ನಾಲ್ಲಾದ ಬದಲಾವಣೆಗಳು, ನಾಗರೀಕತೆಯ ವೇಗವನ್ನು ನಮಗೆ ತಿಳಿಸುತ್ತದೆ. 


ಸಾರಿ ಮಾದಮ್ಮನ ಕಥೆ, ಅದೊಂದು ನಡೆದಾಡುವ ಲೈಬ್ರರಿಯಂತಲೇ ಕರೆಯಬಹುದು. ಈ ಮಾತು ಪ್ರಬಂಧದಲ್ಲಿ ಹೆಸರಿಸಿರುವ ಎಲ್ಲಾ ಸೋಲಿಗ ಹಿರಿಯರಿಗೂ ಅನ್ವಯವಾಗುತ್ತದೆ. ಅಷ್ಟು ನೇರವಾಗಿ ನಮಗೆ ಮಾತನಾಡಲು ಅಸಾಧ್ಯವೇ ಸರಿ. ಲೇಖಕರ ಮಾತಲ್ಲೇ ಕೇಳುವುದಾದರೇ, “ತಲೆಯಲ್ಲಿ ಯಾವುದೇ ಗೊಂದಲಮಯವಾದ ಚಿಂತನೆಗಳು ಇಲ್ಲದ್ದರಿಂದ ತನಗೆ ಅನಿಸಿದ್ದನ್ನು ತಪ್ಪು-ಸರಿಗಳ ಬೇಧವಿಲ್ಲದೆ ತನ್ನ ಮಾತಿನಲ್ಲೇ ಪಟಪಟನೆ ಹೇಳಿಬಿಡುತ್ತಿದ್ದಳು”. “ಅನಿಸಿದ್ದನ್ನು ನೇರವಾಗಿ ಹೇಳುವ ಅವಳಿಗೆ ತರ್ಕ-ರುಜುವಾತುಗಳು ಅಸಹಜವಾಗಿ ಕಂಡಿರಬೇಕು. ಕಂಡದ್ದನ್ನು ಕಂಡಂತೆ ಹೇಳುವುದೇ ಸಹಜ ಪ್ರವೃತ್ತಿಯಾಗಿರುವಾಗ ಪರ್ಯಾಯಗಳ ಪ್ರಶ್ನೆ ಎಲ್ಲಿದೆ? ಇಂತಹ ಸಹಜ ಬದುಕಿಗೆ ಬೇಕಾಗುವಷ್ಟು ಮುಗ್ಧತೆಯನ್ನು ಹೇಗೆ ತಾನೆ ಕಾಪಾಡಿಕೊಂಡಿದ್ದಾಳೋ ದೇವರೇ ಬಲ್ಲ”. 


ಅಚ್ಚುಗೆಗೌಡನ ಕಾಡುಶುಂಠಿಪಾಠ, ಪರಿಸರ ಸಂರಕ್ಷಣೆ, ಭೂ ಗುಣಮಟ್ಟದ ಬದಲಾವಣೆ, ರೈತರ ದೃಷ್ಠಿಕೋನ ಇತ್ಯಾದಿಗಳಿಗೆ ಪ್ರಶ್ನೆ ಹುಡುಕಲು ಮುನ್ನುಡಿಯಾಗಿ ಬಳಸಬಹುದು. ಅದರ ಜೊತೆಗೆ, ಸೋಲಿಗರ ಜೀವನ ಶೈಲಿ ಬದಲಾಗಿರುವುದನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. ಚಪ್ಪಲಿಗಳನ್ನು ಹಾಕಿಕೊಂಡು ಮನೆಯಂಗಳದ ತನಕ ಬರುವ ಸಡಿಲಿಕೆ, ಪ್ಲಾಸ್ಟಿಕ್ ಚಾಪೆಗಳು, ಬೈಕ್, ಕಾರು, ಟಿವಿ, ಇತ್ಯಾದಿಗಳು. ಇಪ್ಪತ್ತು ವರ್ಷದ ಹಿಂದೆ ಫಾರೆಸ್ಟ್ ಆಫೀಸರ್ ಒಬ್ಬರು ಶೂ ಹಾಕಿ ಮನೆಯೊಂದಕ್ಕೆ ನುಗ್ಗಿದರು, ಎನ್ನುವ ಕಾರಣಕ್ಕೆ ಐ.ಎಫ್.ಎಸ್ ಅಧಿಕಾರಿಯ ಮೇಲೆ ಕೈಯೆತ್ತಿದ್ದ ಸೋಲಿಗರು, ಈಗ ಚಪ್ಪಲಿ ಶೂ ಮಾಮೂಲಿಯಂತೆ ಬದಲಾಗಿರುವುದು ಮತ್ತು ಅದರ ವೇಗ! ಅಚ್ಚರಿಯನ್ನು ಮತ್ತು ಆತಂಕವನ್ನು ಹುಟಿಸುತ್ತದೆ. ಅಚ್ಚುಗೆಗೌಡರು ಶುಂಠಿ ಮತ್ತು ಅರಿಶಿನವನ್ನು ಯಾವುದೇ ಖರ್ಚಿಲ್ಲದೇ ಬೆಳೆಯುತ್ತಿರುವುದನ್ನು ದಾಖಲಾಗಿಸಲಾಗಿದೆ. 


ಲೇಖಕರು ಮತ್ತು ಅಚ್ಚುಗೌಡನ ನಡುವೆ ನಡೆಯುವ ಕೆಲವು ಸಂಭಾಷಣೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. “ಇವೆಲ್ಲಾ ಯಾವ ಕಾಡಿನಲ್ಲಿ ಸಿಗುತ್ತಯ್ಯ?” “ಅಯ್ಯೋ ಈ ಕಾಡು ಶುಂಟಿ ಕಾಡು ಅರಿಶಿನ ಮೊದಲು ನಮ್ಮ ಸುತ್ತಮುತ್ತಲ ಕಾಡ್ನಲ್ಲೇ ಸಿಕ್ತಾ ಇತ್ತು. ಆದರೆ ಈಗ ಕಾಡಿನ ಒಳಾಕ್ಕೆ ಹೋಗಬೇಕು”. “ಈ ಯಾವ ಖರ್ಚು ಇಲ್ಲದೆ ಇವು ಕಾಡಿನಲ್ಲಿ ಸಲೀಸಾಗೇ ಬೆಳೀತಾ ಇದೆಯಲ್ಲ ಇದು ಹೇಗೆ?” “ಇವು ಕಾಡು ಜಾತಿಸ್ವಾಮಿ, ಇವುನ್ನ ನೀವು ತಗೊಂಡ್ಹೋಗಿ ಊರುಜಾತಿ ಮಾಡ್ಕೊಂಡ್ರೆ ರೋಗ ಬರ್ದೆ ಇರುತ್ತ? ಇಲ್ಲಿ ರೈತರ ಸಮಸ್ಯೆಗಳು ಎನ್ನುವುದಕ್ಕಿಂತ, ಅವರ ಆಲೋಚನೆಗಳಲ್ಲಿರುವ ಸಮಸ್ಯೆಗಳ ಕಡೆಗೆ ಬೆಳಕು ಚೆಲ್ಲಲಾಗಿದೆ. ಗೌಡನು ತನ್ನ ತೋಟದಲ್ಲಿ ಬೆಳೆಯುವ ಬೆಳೆಗೆ ಬಳಸುವ ಗೊಬ್ಬರಗಳ ವಿಚಾರ ಬಂದಾಗ, “ಅಯ್ಯೋ ನಾನ್ಯಾವ ಗೊಬ್ಬರ ತರ್ಲಿ ಸ್ವಾಮಿ, ಮರದ ಎಲೆಗಳೇ ಬಿದ್ದೂ ಬಿದ್ದೂ ಗೊಬ್ಬರ ಆಗಿದೆ; ನಂದೂ ಒಂದೋ ಎರಡೋ ಮೂರೋ ಹಸುಗಳಿವೆ, ಮೇಕೆ ಇದೆ. ಗೊಬ್ಬರನೆ ಹಾಕ್ತೀನಿ”. “ಭೂಮಿತಾಯಿ ಪಾಲನ್ನು ಭೂಮಿತಾಯಿಗ್ ಕೊಡ್ತೀನಿ, ಅವಳು ಕೊಟ್ಟಷ್ಟು ಇಸ್ಕೊತಿನಿ; ಚಿಕ್ಕಪುಟ್ಟ ಖರ್ಚುಗಳೆಲ್ಲ ಇದರಲ್ಲೆ ಕಳೆಯುತ್ತೆ ಅನ್ನಿ”.


ಇಡೀ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಲಾಂಟಾನದ ಕುರಿತು ಇಲ್ಲಿಯೇ ಹೇಳಬಯಸುತ್ತೇನೆ. ಇದು ಬಹಳ ಸೂಕ್ಷ್ಮ ಮತ್ತು ಪ್ರಮುಖವಾದ ವಿಚಾರ. ತಮ್ಮ ಕಾಡು ನಾಶವಾಗುತ್ತಿರುವುದರ ಕುರಿತು ಸೋಲಿಗ ಹಿರಿಯರಲ್ಲಿರುವ ಆತಂಕವನ್ನು ಲೇಖಕರು ಬಹಳ ಚೆನ್ನಾಗಿ ಗ್ರಹಿಸಿದ್ದಾರೆ. ಗ್ರಹಿಸಿದ್ದಾರೆನ್ನುವುದಕ್ಕಿಂತ ಅವರು ಅದಕ್ಕೆ ಸಾಕ್ಷಿಯಾಗಿದ್ದಾರೆ. ಕಳೆದ ನಲವತ್ತು ವರ್ಷಗಳಲ್ಲಿ ಬದಲಾಗಿರುವ ಕಾಡಿನ ಸೂಕ್ಷ್ಮತೆಯನ್ನು ಸೋಲಿಗರ ಕನ್ನಡಿಯಿಂದಲೇ ಲೇಖಕರ ಅನುಭವಕ್ಕೆ ಬಂದಿದೆ ಎನ್ನಬಹುದು. ಸೋಲಿಗರಿಗೆ ಸಣ್ಣಪುಟ್ಟ ಬದಲಾವಣೆಗಳನ್ನು ಗಮನಿಸುವ ಶಕ್ತಿಯಿದೆ. ಅದು ಅವರು ಕಾಡಿನೊಂದಿಗೆ ಒಂದಾಗಿ ಬೆರೆತಿರುವುದಕ್ಕೆ ಕೈಗನ್ನಡಿ. ಲಾಂಟಾನದಿಂದ ಕೇವಲ ಪ್ರಾಣಿಗಳಲ್ಲ, ಚಿಟ್ಟೆಗಳ ಸಂತತಿ ಕಡಿಮೆಯಾಗುತ್ತಿರುವುದನ್ನು ಅಚ್ಚುಗೌಡ ಗಮನಿಸಿರುವುದು ಮತ್ತು ದಿಗ್ಬ್ರಮೆಗೊಂಡಿರುವುದು ಕಾಣುತ್ತದೆ. ನಾವು ವಿವಿಗಳಲ್ಲಿ ಕಲಿಸಲು ಒದ್ದಾಡುತ್ತಿರುವ ಇಕಾಲಾಜಿಕಲ್ ಬ್ಯಾಲೆನ್ಸ್ ಎಂಬ ಸಂಕೀರ್ಣತೆಯನ್ನು ಅಚ್ಚುಗೌಡ ಅಚ್ಚುಕಟ್ಟಾಗಿ ಹೇಳಿದ್ದಾನೆ. ಆನೆಗಳ ಆಹಾರ ಪದ್ದತಿಯನ್ನು, ಮೀನುಗಾರಿಕೆ, ಮರಗಿಡಗಳ, ಕೊನೆಗೆ ಭೂಮಿಗೆ/ಪರಿಸರಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿಯಿದೆ, ಅದನ್ನು ಇಲಾಖೆವತಿಯಿಂದ ಮಾಡುವ ಅವಶ್ಯಕತೆಯಿಲ್ಲವೆನ್ನುವುದು ಸತ್ಯವೂ ಆಗಿದೆ. 


ಇಕಾಲಾಜಿಕಲ್ ಬ್ಯಾಲೆನ್ಸ್ ಕುರಿತು “ಏನಯ್ಯ ಉದುರುಂಬೆ ಬಳ್ಳಿ ಹೂ ಕಚ್ಚಿದಾಗ ಕಣಜ ಸಾಯ್ತವಂತೆ ನಿಜಾನಾ?” “ದಿಟ ಸ್ವಾಮಿ, ಉದುರುಂಬೆ ಹೂಬಿಟ್ಟರೆ ಕಣಜಗಳು ಸಾಯ್ತಾವೆ, ಉಳಿಕೊಂಡಿರೋವ್ರು ಮರದ ಗೋಗಿನಲ್ಲಿ (ಪೊಟರೆ) ಜಾಸ್ತಿ ತ್ಯಾವ ಇರೊ ಕಡೆಗೆ ಅಡಕ್ಕೊತಾವೆ. ಉದುರುಂಬೆ ಹೂಗಳು ಬಿದ್ದೊದ್ ಮ್ಯೇಲೆ ಅವು ಹೊರಾ ಬರ್ತಾವೆ”. ಅದೇ ರೀತಿ ತರಗು ಬೆಂಕಿ ಮತ್ತು ಕಾಡಿನ ನಿರ್ವಹಣೆ ಬಗ್ಗೆ ಅನೇಕ ವಿಚಾರಗಳು, ವಿವಿಯಲ್ಲಿ ಕುಳಿತು ಲಕ್ಷಾಂತರ ಸಂಬಳ ಪಡೆದು ಊದಿದ್ದೇ ಪುಂಗಿ ಊದುತ್ತಿರುವರು ಕಲಿಯಬೇಕಿದೆ, ಅದು ಆಗದ ಮಾತು. 


ಕುನ್ನೇಗೌಡನ ಹುಲಿಗಣತಿಯ ಕಥೆಗಳು ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯ ದುರಂತಕ್ಕೆ ಸಾಕ್ಷಿಯಾಗಿದೆ. ಹುಲಿಯನ್ನು ಕುರಿತು, ಅದರ ಅಧ್ಯಯನದಿಂದ ಕೋಟ್ಯಾಂತರ ಕೊಳ್ಳೆಹೊಡೆದು, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡ ಮೇಧಾವಿಗಳನ್ನು ನೇರವಾಗಿ ಹೆಸರಿಸದೇ ಇದ್ದರೂ, ನನ್ನ ಅನುಭವಕ್ಕೆ ಬಂದ ಹಾಗೆ ಕೆಲವೊಂದು ವಿಷಯಗಳನ್ನು ಮುಂದೊಮ್ಮೆ ಹಂಚಿಕೊಳ್ಳಬಯಸುತ್ತೇನೆ. ಕುನ್ನೇಗೌಡನ ಮಾತಲ್ಲಿ ಅವರ ಬಗ್ಗೆ ಕೇಳಿ, “ಅಯ್ ಕನ್ನಡಕ ಹಾಕಿ ಬೂಟು ಮೆಟ್ಟಿ ಬರ್ತಾವೆ, ಅವ್ರಿಗೆ ನಾನ್ ತಾನೆ ತೋರಿಸ್ಬೇಕು ಹುಲಿಹೆಜ್ಜೆನ, ಅವರಿಗೇನ್ ಹುಲಿ ಕಂಡಾವ; ಮೈಸೂರು ಜೂನಲ್ಲಿ ನೋಡ್ಬೇಕಷ್ಟೆ”. ಸೋಲಿಗರು ತಮ್ಮ ಪೋಡುಗಳ ಆಯ್ಕೆಯ ವಿಧಾನ ನಿಜಕ್ಕೂ ಅಚ್ಚರಿ ಮತ್ತು ಅದೆಷ್ಟು ವೈಜ್ಞಾನಿಕ ಲೆಕ್ಕಾಚಾರಗಳಿವೆ ಎನಿಸುತ್ತದೆ. ಆನೆಗಳಿಗೆ ಇಷ್ಟವಾಗುವ ಬಾಣೆಹುಲ್ಲು ಸಿಗದೆಯಿರುವುದರಿಂದ ಈಗ ಆನೆಗಳು, ಯಾವ್ಯಾವುದೋ ಮರಗಳ ತೊಗಟೆಗಳನ್ನು ತಿನ್ನುತ್ತಿರುವುದು ದುರಂತ. ಕುನ್ನೇಗೌಡರು ವಿವರಿಸಿದ ಹಂಬುಗಳ ಪಟ್ಟಿಯನ್ನು ನೆನೆದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಈ ಹಿಂದೆಯೇ ಹೇಳಿದಂತೆ ಕಾಡುಪ್ರಾಣಿಗಳ ಹತ್ಯೆಯ ಕುರಿತು ಈ ಮಾತುಗಳನ್ನು ಕೇಳಿ. ಹುಲಿಯನ್ನು ಹೊಡೆದುರುಳಿಸುವುದು ನಾಡಜನಕ್ಕೆ ಒಂದು ಸಾಹಸ ಕಥೆ, ಸಾಧನೆಯ ಹೆಗ್ಗುರುತು. ಆದರೆ, ಸೋಲಿಗರಿಗೆ ಕಾಡಿನ ಯಾವುದೇ ಪ್ರಾಣಿಯನ್ನು ಕಾರಣವೇ ಇಲ್ಲದೆ ಸಾಯಿಸುವುದು ಕೊಲೆಗೆ ಸಮಾನ. ಇದೊಂದು ಸಾಲು ಸಾಕಾಗುತ್ತದೆ, ಸೋಲಿಗರು ಕಾಡನ್ನು ಹೇಗೆ ಆರಾಧಿಸಿ, ಪ್ರೀತಿಸಿ, ಗೌರವಿಸುತ್ತಾರೆನ್ನುವುದಕ್ಕೆ. ಸರ್ಕಾರ ಎಲ್ಲಾ ಸಪ್ಲೈ ಆಗ್ತಾ ಅದೆ ಆದ್ರೆ ಹಿಂದೆ ಇದ್ದ ಸಂತೋಷ ಈಗ ಇಲ್ಲ ಎನ್ನುತ್ತಾನೆ ಕುನ್ನೇಗೌಡ. 


ರೊಟಿಹಬ್ಬದ ಸಂಭ್ರಮವೇ ಸಂಭ್ರಮ. ಸಂಭ್ರಮಿಸುವುದಕ್ಕೆ ಕಾರಣ ಬೇಕೆ? ಸೋಲಿಗರಲ್ಲಿ ಅಂತಹ ಅನೇಕ ಹಬ್ಬಗಳಲ್ಲಿ ಮುಖ್ಯವಾಗಿರುವುದು ರೊಟ್ಟಿ ಹಬ್ಬ. ಇಲ್ಲಿ ಪರಿಸರ ದೃಷ್ಠಿಯಿಂದ ನೋಡುವಾಗ, ನೇರಳೆ ಸೊಪ್ಪಿನ ಚಪ್ಪರ ನನಗೆ ಆಕರ್ಷಕವೆನಿಸಿತು. ಒಂದು ರೀತಿಯಲ್ಲಿ ಅದು ಬೇಗ ಬಾಡುವುದಿಲ್ಲವೆನ್ನುದು ಸರಿಯೆನಿಸಿದರೂ, ನೇರಳೆ ಹಣ್ಣಿಗೆ/ಮರಕ್ಕೆ ವಿಶೇಷ ಔಷಧಿ ಗುಣಗಳಿವೆ. ಅದು ಒಂದು ಕಾರಣವಿರಬಹುದೆ? ಚಪ್ಪರ ಕಟ್ಟಲು ಬಳಸುವ ಹಂಬುಗಳು ಅಷ್ಟೆ, ನಗರವಾಸಿಗಳಿಗೆ ಹಂಬು ಎಂಬುದರ ಕಲ್ಪನೆಯಿರುವುದು (ಕ್ಲೈಂಬರ್) ಕೆಲವು ಗಿಡಗಳಿಗೆ ಮೀಸಲು. ಇದೇ ಸಂಧರ್ಭದಲ್ಲಿ ಪುಟ್ಟರಂಗ ಹೇಳುವ ಒಂದು ಮಾತು ಚೆನ್ನಾಗಿದೆ, “ಅನ್ನದಲ್ಲೇನಿದೆ ಸಾರ್, ರೊಟ್ಟಿ ಮುದ್ದೆ ತಿಂದ್ರೆ ಹೊಟ್ಟೆ ತುಂಬೊ ಹಂಗೆ ಅನ್ನ ತಿಂದ್ರೆ ಹೊಟ್ಟೆ ತುಂಬುತ್ತ?”. ಮತ್ತೊಂದು ವಿಚಾರವನ್ನು ತಮ್ಮ ವಿವೇಚನೆಗೆ ಬಿಡುತ್ತಿದ್ದೇನೆ, 80ರ ದಶಕದಲ್ಲಿ ಹಾಲು ಮೊಸರನ್ನು ಕುಡಿಯಲು ಇಷ್ಟಪಡದ ಸೋಲಿಗರು, ಇಂದು ದನ ಎಮ್ಮೆ ಕಟ್ಟುತ್ತಿದ್ದಾರೆ ಮತ್ತು ಹಾಲು ಮೊಸರಿಗೆ ಒಗ್ಗಿಹೋಗಿದ್ದಾರೆ. ಇಲ್ಲಿ ಆಗಿರುವ ಬದಲಾವಣೆಯನ್ನು ನಾಲ್ಕಾರು ಆಯಾಮಗಳಿಂದ ನೋಡಬಹುದು. ಮತ್ತೊಂದು ಪ್ರಮುಖ ಆಕರ್ಷಣೆ ‘ಜಾಲದ ಹೂ’. ಕೆಲವು ಸಸ್ಯಸಂಕುಲಗಳು ಸ್ಥಳೀಯ ವಾಯುಗುಣವನ್ನು ಪ್ರತಿನಿಧಿಸುತ್ತವೆ, ಅಂತಹ ಗುಂಪಿಗೆ ಸೇರುವುದು ಈ ಜಾಲದ ಹೂ. ಸೋಲಿಗರ ಪ್ರಧಾನ ಬೆಳೆ ರಾಗಿ, ಎಡ್ಡ (ದಂಟು). ಈ ದಂಟನ್ನು/ದಂಟಿನ ಬೀಜವನ್ನು 5-6 ಸಾವಿರ ವರ್ಷಗಳಿಂದ ಬಳಸುತ್ತಿದ್ದಾರೆಂದರೆ ಆದಿವಾಸಿಗಳ ಕೊಡುಗೆ ಎಷ್ಟಿರಬೇಕು? 


ಮಾನವ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ, ಅಧ್ಯಯನಗಳ ಹೆಸರಲ್ಲಿ, ಯೋಜನೆಗಳ ಹೆಸರಲ್ಲಿ ಸರ್ಕಾರ ಕೋಟ್ಯಾಂತರ ರೂಗಳನ್ನು ಚೆಲ್ಲಿದ್ದು ಆಯ್ತು, ಅನೇಕ ಬೃಹಸ್ಪತಿಗಳು, ಪ್ರಮೋಷನ್ ತೆಗೆದುಕೊಂಡು, ವಿಚಾರಸಂಕಿರಣ, ಸಮ್ಮೇಳನ ಅಂತಾ ವಿದೇಶಗಳನ್ನು ಸುತ್ತಿದ್ದು ಆಯ್ತು. ಗಮನಿಸಬೇಕಾಗಿದ್ದು, ಈ ಹಿಂದೆಲ್ಲಾ ರಾಗಿ, ಎಡ್ಡ, ಕುಂಬಳ, ಬಾಳೆ ಬೆಳೆಯುತ್ತಿದ್ದ ಸೋಲಿಗರು, ಯಾವುದೇ ಬೇಲಿ, ವಿದ್ಯುತ್, ಕಂದಕಗಳು ಇಲ್ಲದೇ ಅವರ ಬೆಳೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದರು. ಹಿಂದೆಲ್ಲಾ ಆನೆಗಳಿಗೆ ಪ್ರಮುಖ ಆಹಾರ ಬಾಣೆಹುಲ್ಲು ಮತ್ತು ಎಲ್ಲಾ ಕೆರೆಗಳು ತುಂಬಿರುತ್ತಿದ್ದದ್ದು. ಈಗ ಈ ಎರಡೂ ಮರೆಯಾಗಿವೆ. ಲಾಂಟಾನ ಅತಿಯಾಗಿ ಆವರಿಸಿಕೊಂಡಿದೆ. ಅದರೆ ಜೊತೆಯಲ್ಲಿ ಗಮನಿಸಬೇಕಾದದ್ದು ವಿವಿಧ ರೀತಿಯ ಬಾಳೆಹಣ್ಣುಗಳ ತಳಿಯನ್ನು ಕಳೆದುಕೊಂಡಿರುವುದು, ದುರ್ಗಾಬಾಳೆ, ಉದರಬಾಳೆ, ಪುಟ್ಟಬಾಳೆ, ಕೆಂದುಬಾಳೆ, ಬೆಟ್ಟದಬಾಳೆ, ಅದೆಲ್ಲದ್ದಕ್ಕೂ ಮಿಗಿಲಾಗಿ ನಮ್ಮ ನಂಜನಗೂಡು ಬಾಳೆಯೆ ಕಣ್ಮರೆಯಾದ್ದದ್ದು. ಅತಿಯಾದ ರಾಸಾಯನಿಕ ಬಳಸಿ ಬಾಳೆ ಬೆಳೆದು, ಅದರ ರುಚಿ ಮತ್ತು ನಮ್ಮ ಆರೋಗ್ಯ ಎರಡನ್ನು ಹಾಳು ಮಾಡಿಕೊಂಡಿದ್ದೇವೆ. ರೊಟ್ಟಿ ಹಬ್ಬದಂತೆಯೆ ಹೊಸರಾಗಿ ಹಬ್ಬವೂ ಪ್ರಾಮುಖ್ಯತೆ ಗಳಿಸಿದೆ, ಹಬ್ಬದ ಹೆಸರೆ ಹೇಳುವಂತೆ, ಹೊಸರಾಗಿ ಬೆಳೆದು ಅದನ್ನು ಆಚರಿಸುವುದು. ಆದರೆ, ಇಂದು ಅಂಗಡಿಯಿಂದ ರಾಗಿ ತಂದು ಹಬ್ಬ ಮಾಡುವ ಮಟ್ಟಕ್ಕೆ ಸೋಲಿಗರನ್ನು ಬದಲಾಯಿಸಿದೆ. 


ರೊಟ್ಟಿ ಸುಡಲು ಬಳಸುವ ಕೂಗೆಲೆ, ಎರಕನ ಎಲೆ, ಮುರುಕಿ ಎಲೆಯ ಚರ್ಚೆಗಳಾಗಿವೆ. ಸೋಲಿಗರು ಬಳಸುವ ಪ್ರತಿಯೊಂದು ಎಲೆಗಳು, ಗಿಡಗಳು ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿರುತ್ತವೆ. ತೆಂಗಿನಕಾಯಿ ಮತ್ತು ಅಡುಗೆ ಎಣ್ಣೆ ಬಳಸದೇ ಅಡುಗೆ ಮಾಡುವುದು. ವಿಭೂತಿ ಮರದ ಪ್ರಸ್ತಾಪವೂ ಇದೆ, ಅಂಗಡಿಯಲ್ಲಿ ಸಿಗುವ ವಿಭೂತಿಯನ್ನು ಬಳಸುವುದಿಲ್ಲ. ಅದು ಅಷ್ಟು ಶ್ರೇಷ್ಠವಲ್ಲ, ದೇವರೇ ಕೊಟ್ಟ ವಿಭೂತಿ ‘ವಿಭೂತಿ ಬೆಟ್ಟ’ದಲ್ಲಿ ಸಿಗುತ್ತದೆ. ಅದನ್ನು ಕಷ್ಟಪಟ್ಟು ತರಬೇಕು, ಹಾಗಾಗಿ ಅದು ಶ್ರೇಷ್ಠವೂ ಆಗಿದೆ. ಸೋಲಿಗರನ್ನು ಸಾಂಸ್ಕøತಿಕವಾಗಿ ನೋಡುವಾಗ ಅವರ ಹಾಡು ಕುಣಿತ ಮುಖ್ಯ. ಎಲ್ಲವನ್ನೂ ಹಾಡಿನ ಮೂಲಕ ಹೇಳುವುದು, ಅಲ್ಲಿ ಹಾಡಿನ ಮೂಲಕ ಪರಿಸರದ ಹೆಬ್ಬಾಗಿಲನ್ನೇ ತೆರದಿಟ್ಟಿದ್ದಾರೆ. ಹೂವುಗಳ ಬಗ್ಗೆ, ಎಲೆಗಳ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ., ಅದೆಲ್ಲವೂ ಮರೆಯಾಗಿ, ಸಿನೆಮಾ ಹಾಡು, ಡಿಜೆ ಗೆ ವಾಲಿರುವುದನ್ನು ಲೇಖಕರು ಮೂಕಪ್ರೇಕ್ಷಕರಾಗಿ ನೋಡಿದ್ದಾರೆ. 


ಮಂಜಿಗುಂಡಿ ಕೇತಮ್ಮನ ಬಗ್ಗೆ ಮಾತನಾಡುವಾಗ, ಲೇಖಕರು ಬಳಸಿರುವ ‘ಸರ್ವಾಂಗ ಸೋಲಿಗ ಸಂಜಾತೆ’ ನನಗೆ ಇಡೀ ಸೋಲಿಗರ ಚರಿತ್ರೆಯನ್ನು ಕೇತಮ್ಮನ ಮೂಲಕ ಹಿಡಿದಿಡಲು ಮಾಡಿರುವ ಪ್ರಯತ್ನ ಎನಿಸಿತು.   ಈ ಅಧ್ಯಾಯದಲ್ಲಿ ಗಮನಿಸಬೇಕಾದ ಅಂಶಗಳಲ್ಲಿ, ಮೊದಲನೆಯದು, ಲಿಂಗ ಸಮಾನತೆ, ‘ನಗರ ನಾಗರಿಕತೆಯ ಸೋಂಕಿಲ್ಲದೆ ಪ್ರಕೃತಿಯಲ್ಲಿ ಒಂದಾಗಿ ಬದುಕುವ ಇವರ ಜೀವನಶೈಲಿಗೆ ಲಿಂಗಸಮಾನತೆ ಅನಿವಾರ್ಯವಾಗಿ ಕೂಡಿಕೊಂಡಿರುವ ಮೌಲ್ಯ ಎನ್ನಿಸಿತು ನನಗೆ’ ಇದು ಲೇಖಕರ ಅಭಿಪ್ರಾಯ. ಎರಡನೆಯದಾಗಿ, ಪ್ರಾಣಿ ಸಂಕುಲಗಳ ಮೇಲೆ ಅವರಿಗಿರುವ ಅಪಾರ ಪ್ರೀತಿ ಮತ್ತು ಕಾಳಜಿ. ಇದನ್ನು ಎರಡು ಪ್ರಸಂಗಳ ಮೂಲಕ ವಿವರಿಸಲಾಗಿದೆ. ಕೇತಮ್ಮನ ಮನೆ ಮುಂದಕ್ಕೆ ಪ್ರತಿ ಶುಕ್ರವಾರ ಬಿಳಿಗಿರಿ ದೆವಸ್ಥಾನಕ್ಕೆ ಬಿಟ್ಟಿರುವ ಗೂಳಿಯೊಂದು ಬರುತ್ತಿತ್ತು ನಂತರ ಮಾರಿದ್ದು ಆಕೆಗೆ ಬೇಸರವಾದದ್ದು, ಅದನ್ನು ವ್ಯಕ್ತಿಪಡಿಸಿರುವ ರೀತಿ, ಯಾವ ಧರ್ಮ ಅಥವಾ ಸಿದ್ಧಾಂತದಿಂದ ಬಂದಿರುವುದಲ್ಲ. ಅದೇ ರೀತಿ ಮತ್ತೊಂದ ಘಟನೆ ಆಕೆ, ಸಾಕಿದ್ದ ಒಂದು ಕೆಂಪು ಅಳಿಲು. ಕೇತಮ್ಮನ ಮಾತಿನಲ್ಲಿಯೇ ಕೇಳೋಣ “ನನ್ ಕೂಗು ಕೇಳ್ಸಿದ್ರೆ ಸಾಕು ಸಾರ್, ಎಲ್ಲಿದ್ರು ಓಡ್‍ಬಂದು ಮನೆ ಸೇರ್ಕೊತಿದ್ದ, ಅವನ್ನ ನನ್ ಮಗನ್ ತರಾನೇ ಸಾಕಿದ್ದೆ, ಬಿಸಿನೀರ್ ಕಾಯಿಸಿ ಸ್ನಾನಮಾಡುಸ್ತಾ ಇದ್ದೆ. ಆದ್ರೆ ಏನ್ ಮಾಡೋದು ಸಾರ್, ಇದ್ದಕ್ಕಿದ್ದಂಗೆ ಸತ್ತೋದ’. ಮೂರನೆಯದು, ಪ್ರಾಣಿಗಳ ಆಹಾರ ಆಯ್ಕೆ, ಆಕರ್ಷಣೆಯ ಕುರಿತು ಮತ್ತು ನಾಲ್ಕನೆಯದು ಸೌದೆಯ ಆಯ್ಕೆ. ನಮಗೆ ಎಲ್ಲಾ ಸೌದೆಯೂ ಸೌದೆ. ಸೋಲಿಗರಿಗೆ ಸೌದೆಯ ಆಯ್ಕೆ, ಅದೊಂದು ಜ್ಞಾನ. ಯಾವುದೋ ಸೌದೆಯನ್ನು ತಂದು ಬೆಂಕಿಗೆ ಹಾಕುವಂತಿಲ್ಲ. ಲೇಖಕರು ಉಲ್ಲೇಖಿಸಿರುವಂತೆ, ತೊಂಡೆ ಸೌದೆ ಕೆಟ್ಟ ವಾಸನೆ ಬೀರುವುದರಿಂದ ಅದನ್ನು ಬಳಸಬಾರದು, ಆದರೆ ಅದರ ಹಂಬು ಬಳಕೆಗೆ ಅನಿವಾರ್ಯವಾಗಿದೆ. ಕೇತಮ್ಮನ ಮಾತು ನೋಡಿ ‘ಹೋಗಿ ಸಾರ್, ಅಂಗೇನಾದ್ರು ಮಾಡಿದ್ರೆ, ಸುತ್ ಮುತ್ತಲ ಸೋಲಿಗರು ಬಂದು ಉಗಿತಾರೆ, ಸೋಲಿಗರವಳಾಗಿ ಇಂತಾ ಸೌದೇನ ನೀನ್ ಬೆಂಕಿಗಾಕಾದು ಅಂತಾರೆ’. 


ಸೋಲಿಗರು ಮೀನು ಹಿಡಿಯುತ್ತಿದ್ದದ್ದು ಮಗ್ಗಾರೆ ಕಾಯಿಗಳನ್ನು ಅರೆದು ಅದರ ಜೊತೆಗೆ ಸೀಗೆ ಪಟ್ಟಿಯನ್ನು ಜಜ್ಜಿ ಎರಡನ್ನು ಬೆರೆಸಿ ಹಾಕುತ್ತಿದ್ದರು. ಸೋಲಿಗರಲ್ಲಿ ಮೀನಿನ ಬಗ್ಗೆ ಅಂತಹ ಮಹತ್ವ ಅಥವಾ ಆಕರ್ಷಣೆಯಿಲ್ಲ. ಕೇತಮ್ಮನ ಮೈಮೇಲೆ ದೇವರು ಬರೋದು ಅಂತಾ ಇದೆ. ನಾವು ಎಲ್ಲವನ್ನೂ ವೈಜ್ಞಾನಿಕ (ಪುಸ್ತಕದಲ್ಲಿ ಓದಿರೋದು) ಅಥವಾ ತರ್ಕವಾಗಿಯೇ ನೋಡಬೇಕೆಂದೇನಿಲ್ಲ. ಅದೊಂದು ನಂಬಿಕಯಷ್ಟೆ. ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಎಸಿ ರೂಮಿನಲ್ಲಿ ಕುಳಿತು ದೇವಮಾನವರಾಗಿರುವರನ್ನು ಪ್ರಶ್ನಿಸದ ನಾವುಗಳು ಅಮಾಯಕ ಮುಗ್ಧ ಜನರ ನಂಬಿಕೆಯನ್ನು ಮೂಢನಂಬಿಕೆಯಾಗಿ ನಿಯಂತ್ರಿಸಲು  ಪ್ರಯತ್ನಿಸುತ್ತೇವೆ (ಇದು ನನ್ನ ಅನಿಸಿಕೆ, ಲೇಖಕರದ್ದಲ್ಲ). 


ವಿಜಿಕೆಕೆ ಮತ್ತು ಡಾ. ಸುದರ್ಶನ್ ರವರ ಕುರಿತಾಗಿ ಆ ದಿನಗಳಿಂದ ಈ ದಿನಗಳವರೆಗಿನ ಪ್ರಯಾಣ, ಪ್ರಯಾಸ, ಸಾಹಸಗಳನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ನಾಲ್ಕೈದು ಬಾರಿ ನಾನು ಡಾ. ಸುದರ್ಶನ್ ರವರನ್ನು ಭೇಟಿ ಮಾಡಿದ್ದೆ. ಅದರ ಕುರಿತು ಒಂದೆರಡು ಸಾಲುಗಳಲ್ಲಿ ಹೇಳಬಯಸುತ್ತೇನೆ. ಮಿಕ್ಕಿದ್ದನ್ನು ಪುಸ್ತಕ ಓದಿಯೇ ತಿಳಿಯಬೇಕು, ನಲ್ವತ್ತು ವರ್ಷಗಳ ಒಡನಾಡಿ ಹೇಳುವುದಕ್ಕಿಂತ ನಾನು ಹೇಳುವುದು ಹೆಚ್ಚೇನೂ ಇರುವುದಿಲ್ಲ. ಈ ಘಟನೆ ನಡೆದದ್ದು 2006-07ರಲ್ಲಿ, ನಾನು ಆಗ ಐಸೆಕ್‍ನಲ್ಲಿ ಕೆಲಸ ಮಾಡುತ್ತಿದ್ದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ (ಡಿಎಸ್‍ಟಿ) ಒಂದು ಸಂಶೋಧನ ಯೋಜನೆಗೆ ಅನುದಾನ ಸಿಕ್ಕಿತ್ತು, ಅದೇ ಸಮಯದಲ್ಲಿ ಡಾ. ಯಲ್ಲಪ್ಪರೆಡ್ಡಿಯವರು ಹಾಗೂ ಡಾ. ಸುದರ್ಶನ್ ರವರು, ಪ್ರೋ. ಕೆ.ವಿ.ರಾಜುರವರೊಂದಿಗೆ ಚರ್ಚಿಸಿ, ಬೆಟ್ಟದಲ್ಲಿ ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧರಾದರು. 


ಇದರ ಮುಂದುವರೆದ ಭಾಗವಾಗಿ, ನಾವುಗಳು ಬೆಂಗಳೂರು ವಿಶ್ವವಿದ್ಯಾಲಯದ ಪಂಡಿತರೆಲ್ಲರನ್ನೂ ಸಭೆಗೆ ಕರೆದೆವು. ಪರಿಸರ ವಿಜ್ಞಾನ, ಭೂವಿಜ್ಞಾನ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಭೂಗೋಳಶಾಸ್ತ್ರ, ಎಲ್ಲಾ ಶಾಸ್ತ್ರಿಗಳನ್ನು ಕರೆದು, ವಿಷಯ ಮಂಡನೆ ಮಾಡಿದೆವು. ಪತ್ರವ್ಯವಹರಿಸಲು (ಇಮೇಲ್/ಫೋನ್) ನನ್ನನ್ನು ನೇಮಿಸಲಾಗಿತ್ತು. ನಾನು ಮೊದಲ ದಿನವೇ ಪ್ರೋ. ರಾಜುರವರಿಗೆ ಹೇಳಿದ್ದೆ, ಸರ್ ಅವರೆಲ್ಲಾ ಬಿಳಿ ಆನೆಗಳು, ಪಾಠ ಮಾಡೋಕೆ ತಯಾರಿಲ್ಲ, ಅವರ ಸಂಶೋಧನ ವಿದ್ಯಾರ್ಥಿಗಳ ಹತ್ತಿರ ಮಾಡಿಸ್ತಾರೆ. ಇನ್ನೂ ಫೀಲ್ಡ್ ಅಲ್ಲಿ!? ಅಂತೂ ಒಂದು ದಿನ ಎಲ್ಲ ಪ್ರೊಫೆಸರ್ ಗಳು ಬಂದರು, ಡಾ. ಸುದರ್ಶನ್ ಅವರು ಕೂಡ ಬಂದ್ರು. ನಾನು ಮತ್ತು ಡಾ. ಜಡೇಗೌಡ (ಆಗ ಇನ್ನೂ ಪಿಎಚ್‍ಡಿ ಮುಗಿದಿರಲಿಲ್ಲ) ತಯಾರಿ ಮಾಡಿಕೊಂಡು, ಬೆಟ್ಟದ ಕುರಿತು ವಿಜಿಕೆಕೆ ಏನು ಮಾಡಿದೆ, ಏನೆಲ್ಲಾ ಸಮಸ್ಯೆಗಳು ಅಥವಾ ಅದನ್ನು ಅಬಿವೃದ್ಧಿಯ ಹಂತ ಹೇಗೆ ಎಂತೆಲ್ಲಾ ಮಾಡಿದ್ದೆವು. ಡಾ. ಸುದರ್ಶನ್, ಪ್ರೊ. ರಾಜು ಮತ್ತು ಡಾ. ಯಲ್ಲಪ್ಪ ರೆಡ್ಡಿಯವರು ಸಭೆಗೆ “ವಿಜಿಕೆಕೆ, ಒಂದಿಷ್ಟು ಕೆಲಸ ಮಾಡಿದೆ ಇಲ್ಲಿ ತನಕ, ಸೋಲಿಗರ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಒಂದು ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು ಅಂತಾ ಇದ್ದೀವಿ, ತಾವುಗಳು ಪರಿಣಿತರು, ತಜ್ಞರು, ನಿಮ್ಮ ಹತ್ತಿರ ಸಾಕಷ್ಟು ಜ್ಞಾನ, ಅನುಭವ, ವಿದ್ಯಾರ್ಥಿಗಳು ಇದ್ದಾರೆ, ಒಂದು ಪ್ರೊಪೋಸಲ್ ರೀತಿಯಲ್ಲಿ ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿ”. ನಾವುಗಳು ಸ್ವಲ್ಪ ಸಮಯ ನೀಡಿದ್ದೆವು. ಇದರ ನಡುವೆ ನಾನು ಬೆಟ್ಟಕ್ಕೆ ಹೋಗಿ ನೋಡಿಕೊಂಡು ಬಂದಿದ್ದೆ. ಎರಡನೆಯ ಸಭೆ ಸಿದ್ಧವಾಯಿತು. 


ಹೆಸರುಗಳ ಪ್ರಸ್ತಾಪಬೇಡ, ಜೇನು ಸಾಕಾಣಿಕೆ ಮಾಡೋಣ, ಜೇನಿನ ಬಗ್ಗೆ ಸೋಲಿಗರಿಗೆ ಅರಿವು ಮೂಡಿಸೋಣ. ಮರ ಗಣತಿ ಮಾಡೋಣ, ಜಲಾನಯನ ಅಧ್ಯಯನ ಮಾಡೋಣ, ಅಂತರ್ಜಲ ನೀರಿನ ಆಳ ಮತ್ತು ಗುಣಮಟ್ಟವನ್ನು ಪರೀಕ್ಷೀಸೋಣ, ಚೆಕ್ ಡ್ಯಾಮ್ ಕಟ್ಟಿಸೋಣ, ಅದೆಲ್ಲ ಹಾಳಾಗಿ ಹೋಗಲಿ, ಅಲ್ಲಿ ಒಂದು ತ್ಯಾಜ್ಯ ನಿರ್ವಹಣ ಘಟಕ ಮಾಡೋಣ, ಎರೆಹುಳು ಗೊಬ್ಬರ ತಯಾರಿಸೋಣ. ಒಬ್ಬೊಬ್ಬರು ಇಟ್ಟ ಅನುದಾನದ ಬೇಡಿಕೆ ನನಗೆ ತಲೆತಿರುಗುವಂತೆ ಮಾಡಿತ್ತು.  ಡಾ. ಸುದರ್ಶನ್‍ರವರಿಗೆ ಕೋಪ ಬಂತು. ಸಾವಿರಾರು ವರ್ಷಗಳಿಂದ ಅದೆಲ್ಲವನ್ನೂ ಸೋಲಿಗರು ಮಾಡ್ತಾ ಬಂದಿದ್ದಾರೆ, ಅವರಿಗೆ ಕಾಡಿನ ಬಗ್ಗೆ ಕಾಡಿನ ಸಂರಕ್ಷಣೆಯ ಬಗ್ಗೆ ನಾವು ಹೇಳಿಕೊಡೋದು ಏನು ಬಾಕಿಯಿಲ್ಲ, ಅವರಿಂದ ನಾವು ಕಲಿಯಬೇಕು, ಒಳ್ಳೆ ಪ್ಲಾನ್ ಮಾಡ್ಕೊಂಡು ಬನ್ನಿ ಅಂದರು. ಇದೇ ರೀತಿ ಎರಡು ಮೂರು ಸಭೆಗಳು ನಡೆದು ಕೊನೆಗೆ ಇವ್ರೆಲ್ಲರನ್ನ ಕಟ್ಕೊಂಡು ಆಗಲ್ಲ ಬಿಡಿ ಅಂದ್ರು. ಇದು ನಮ್ಮ ವಿವಿಗಳ ಕಥೆ. 


ಇದೇ ವಿಷಯದ ಬಗ್ಗೆ ಲೇಖಕರು ಪ್ರಸ್ತಾಪ ಮಾಡಿದ್ದಾರೆ. ಅದೆಲ್ಲವನ್ನೂ ಇಲ್ಲಿಯೇ ಹೇಳಿ ಮುಗಿಸುತ್ತೇನೆ. ಸಂಶೋಧನೆ, ಅಧ್ಯಯನ ಎಂಬ ಹೆಸರಲ್ಲಿ ಅನೇಕ ಸಂಘ ಸಂಸ್ಥೆಗಳು ಕೋಟ್ಯಾಂತರ ಹಣವನ್ನು ಸಂಪಾದನೆ ಮಾಡಿದರು. ಈ ಹಿಂದೆಯೇ ಹೇಳಿರುವ ಹಾಗೆ, ದೇಶ ವಿದೇಶಗಳನ್ನು ಸುತ್ತಾಡಿ ಬಂದ್ರು. ನೀವು ಒಮ್ಮೆ ಗೂಗಲ್ ನಲ್ಲಿ ಬಿ.ಆರ್. ಹಿಲ್ಸ್ ಅಂತಾ ಟೈಪ್ ಮಾಡಿ ನೋಡಿ, ಆ ಸಾಧನೆ ಮಾಡಿದವರ ಪಟ್ಟಿ ಹಾಗೆಯೇ ಉದುರುತ್ತದೆ. ಪುಟ್ಟರಂಗನಿಗೆ 500-1000 ಕೊಟ್ಟು ಅವರಿಂದ ಮಾಹಿತಿ ಪಡೆದು ಹತ್ತಾರು ಪ್ರಬಂಧಗಳನ್ನು ಮಂಡಿಸಿ ದುಡ್ಡು ಮಾಡಿರುವ ಮಹಾಶಯರನ್ನು ನಾನು ನೇರವಾಗಿ ಪ್ರಶ್ನಿಸಿದ್ದೇನೆ. ಏಟ್ರೀ ಸಂಸೈಯವರು ಹತ್ತಾರು ವರ್ಷ ಇದೇ ಬೆಟ್ಟದ ಹೆಸರಲ್ಲಿ ಅನುದಾನಗಳನ್ನು ಪಡೆದು, ಅಲ್ಲಿನ ಸೋಲಿಗರಿಗೆ ನಯಾ ಪೈಸೆ ಉಪಕಾರವನ್ನೂ ಮಾಡಲಿಲ್ಲ. ಐಸೆಕ್ ನಲ್ಲಿರುವ ಮೇಧಾವಿಯೊಬ್ಬರು ಆದಿವಾಸಿಗಳು/ಸೋಲಿಗರ ಹೆಸರಲ್ಲಿ ಒಂದರ ಹಿಂದೊಂದರಂತೆ ಪ್ರಾಜೆಕ್ಟ್ ಮಾಡಿ ತನ್ನ ಬಯೋಡೇಟಾ ದೊಡ್ಡದು ಮಾಡಿಕೊಂಡದ್ದಾಯಿತು. ಇದು ನಮ್ಮ ಇಂದಿನ ನಾಗರೀಕ ವಿದ್ಯಾವಂತರ ಬಂಡವಾಳ. “ಮನೆಗೆ ಬೆಂಕಿ ಬಿದ್ದಾಗ ಗಳ ಇರಿಯೋದು ಅನ್ನೊ ಮಾತಿದೆ.” ಹುಲಿ ಸಂರಕ್ಷಣೆಯ ಹೆಸರಲ್ಲಿ, ಆನೆ ಯೋಜನೆಯಲ್ಲಿ, ಸೋಲಿಗರ ಅಭಿವೃದ್ಧಿಯ ಹೆಸರಲ್ಲಿ, ಹಣ ಮಾಡುವುದು, ಸಂಶೋಧನ ಗ್ರಂಥಗಳನ್ನು ರಚಿಸುವುದು ಅಂತರಾಷ್ಟ್ರೀಯ ಕಮ್ಮಟಗಳಿಗೆ ಹೋಗಿ ಕುಡಿದು ತಿಂದು ಸುತ್ತಾಡಿ ಬರುವುದು, ಅಸಹ್ಯಕರವೆನಿಸಿದರೂ ವಾಸ್ತವ. ಲೇಖಕರು ಹತ್ತಿರದಿಂದ ಗಮನಿಸಿದ್ದಾರೆ, ಅದನ್ನು ನೇರವಾಗಿ ತೋಡಿಕೊಳ್ಳಲು ಸಾಧ್ಯವಾಗದೆ, ಪರೋಕ್ಷವಾಗಿ ತಿಳಿಸಲು ಯತ್ನಿಸಿದ್ದಾರೆ. ಆದರೇ, ಎಮ್ಮೆ ಚರ್ಮದ ಅವರುಗಳಿಗೆ ಇವೆಲ್ಲವೂ ತಟ್ಟುವುದಿಲ್ಲ. 


ಸೆಂಟೆಣ್ಣೆ ಮಾದೇಗೌಡರನ್ನು ಪರಿಚಯ ಮಾಡುವಾಗ ಗಮನಿಸಬೇಕಾದ ಒಂದಿಷ್ಟನ್ನು ನೋಡೋಣ. ಸೆಂಟೆಣ್ಣೆ ಮಾದೇಗೌಡರ ಕಥೆ, ಅಮಾಯಕ ಸೋಲಿಗರನ್ನು ನಾಗರೀಕ ಸಮಾಜದ ದುರುಳರು ಹೇಗೆ ದುರುಪಯೋಗಪಡಿಸಿಕೊಂಡಿದ್ದರು ಎನ್ನುವುದಕ್ಕೆ ನಿದರ್ಶನ.  ಅದೇ ಅಧ್ಯಾಯದಲ್ಲಿ, ಒಬ್ಬ ಶಾಲಾ ಮಾಸ್ಟರಿನ ಕಥೆಯೂ ಬರುತ್ತದೆ, ಅಂದಿನ ಕಾಲದಲ್ಲಿ ಆ ರೀತಿ ಸಂಬಳ ಪಡೆದು ಶಾಲೆಗೆ ಬಾರದೇ ಇದ್ದ ಶಿಕ್ಷಕರ ಸಂಖ್ಯೆ ಕಮ್ಮಿಯಿತ್ತು, ಹಾಗಾಗಿ ಅದು ಲೇಖಕರಿಗೆ ದೊಡ್ಡ ವಿಷಯವೇ ಸರಿ. ಆದರೇ, ಸರ್ಕಾರಿ ಶಾಲೆಗಳನ್ನು ಹತ್ತಿರದಿಂದ ಬಲ್ಲ ನನಗೆ, ಇಂದಿನ ಕೆಲವು ಶಿಕ್ಷಕರ ರಾಜಕೀಯದ ಗೀಳು, ಅನೈತಿಕತೆಯ ಪರಮಾವಧಿಯ ಮುಂದೆ ಏನೇನೂ ಅಲ್ಲ ಬಿಡಿ. ಬಂಗಿ ಸೇದುವುದ ಪ್ರಸ್ತಾಪವೂ ಬಂದಿದೆ. ಆದರೇ, ಯಾವುದನ್ನು ಅತಿ ಮಾಡಿಕೊಳ್ಳದೆ ಬದುಕಿದ್ದನ್ನು ನಾವು ಸ್ಮರಿಸಬೇಕು. ಅದರ ಜೊತೆಗೆ ವಾತಾವರಣಕ್ಕೆ ಅಥವಾ ಕಾಲಮಾನಕ್ಕೆ ತಕ್ಕನಾಗಿ ದೊರೆಯುತ್ತಿದ್ದ ಆಹಾರಗಳ ಮೇಲೆ ಅವಲಂಬಿತವಾಗಿದ್ದದ್ದು ಸೋಲಿಗರ ಆರೋಗ್ಯದ ಗುಟ್ಟು ಎನ್ನಲೂಬಹುದು. ಮಾಂಸ ಬೇಯಿಸುವುದು, ತಿನ್ನುವುದು, ಇದ್ದರೆ ತಿನ್ನುವುದು ಇಲ್ಲದೆ ಇದ್ದರೆ ಇರುವುದು. ಊಟದ ವಿಚಾರದಲ್ಲಿ ಒಂದೊತ್ತು ಊಟ ಮಾಡುವವರು, ಎರಡು ಹೊತ್ತು ಊಟಕ್ಕೆ ಒಗ್ಗಿಕೊಂಡಿರುವವರು ಸಿಗುತ್ತಾರೆ. ಎಣ್ಣೆಯ ವಿಷಯಕ್ಕೆ ಬರೋದಾದರೆ ಅಳ್ಳೆಣ್ಣೆ (ಹರಳೆಣ್ಣೆ), ಅದನ್ನು ಮನೆಯಲ್ಲಿ ಕಾಯಿಸುತ್ತಿದ್ದ ದಿನಗಳಿದ್ದವು. ಅಣಬೆಯ ವಿಷಯದಲ್ಲಿಯೂ ಕೂಡ, ಅನೇಕ ವಿಧದ ಅಣಬೆಗಳು ಮತ್ತು ಅದರ ಸಮಯ ಅವರಿಗೆ ತಿಳಿದಿರುತ್ತಿತ್ತು. ಸೆಂಟೆಣ್ಣೆಯನ್ನು ಒಮ್ಮೆ ಪೋಲಿಸರು ಅರೆಸ್ಟ್ ಮಾಡಿದಾಗ ‘ಮೈಲಿಗೆಯಾಗಿದೆ’ ಅಂತ ತೊಪ್ಪೆ ಗಂಜಲದ ಶಾಸ್ತ್ರ ಮಾಡಿದ್ದು, ಸೋಲಿಗರ ನಂಬುಗೆಯ ಜೀವನಕ್ಕೆ ಸಾಕ್ಷಿ. 


ಕಾರನ ಕೇತೇಗೌಡ ಧೂಪದ ಮರಗಳ ಬಗ್ಗೆ ವಿವರಿಸುವಾಗ, ಅಂದರೇ ಧೂಪದ ಮರಗಳ ಸಂಖ್ಯೆ ಕಡಿಮೆ ಏಕೆ? ಎನ್ನುವುದಕ್ಕೆ ಅವನ ವ್ಯಾಖ್ಯಾನ ಆಸಕ್ತಿ ಮೂಡಿಸುವಂತದ್ದು ‘ದೇವರ ಸೃಷ್ಠಿನೆ ಹಂಗೆ ಸ್ವಾಮಿ; ಸಿಕ್ಕಸಿಕ್ಕಲ್ಲೆಲ್ಲ ಧೂಪದ ಮರ ಬೆಳೆದ್ರೆ ದೇವರ್ಗೇ ಬೆಲೆ ಇಲ್ದಂಗ್ ಮಾಡ್‍ಬಿಡ್ತಾನೆ ಈ ಮನುಷ, ಜನ ಕಷ್ಟಪಟ್ಟು ಹುಡುಕಿ ಮಾಡಿ ತಂದು ಕೆಂಡದ ಮೇಲೆ ಹಾಕಿದ್ರೆನೇ ಘಮಲು ಜಾಸ್ತಿ, ಅಪ್ಪ, ನಮ್ಮಪ್ಪಾ ನಿನಗಾಗಿ ಕಾಡೆಲ್ಲ ಹುಡುಕಿ ತಂದಿವ್ನಿ, ಒಪ್ಪುಸ್‍ಕಳಪ್ಪಾ ಅಂತಾನೆ ಮನುಷ, ಆಗ ದೇವರಿಗೆ ಸಂತೋಷ ಆಗ್ತದೆ’. ಹಾಗೆ ಮುಂದುವರೆದು ‘ದೇವರು ಎಲ್ಲಕ್ಕೂ ಕಡಿವಾಣ ಆಕ್ತಾನೆ ಸ್ವಾಮಿ; ಕಾಡ್ನಾಗೆಲ್ಲೆಲ್ ನೋಡಿದ್ರು ಜಿಂಕೆ-ಕಡವೆಗಳು ನೆಗೆದಾಡ್ತಾವೆ, ಆನೆಗಳು ಅಂಗೆ ಇರ್ತಾವಾ? ಹತ್ತು ಮೈಲಿ ನಡೆಯೋದ್ರಲ್ಲಿ ನಾಲ್ಕ್ ಸಾರಿ ನಾಯಿಗಳು ಕಾಣ್ತಾವೆ, ಹುಲಿ ಕಂಡೀದ ಹೇಳಿ’? ಇದನ್ನು ಪಿಎಚ್‍ಡಿ ಮಾಡಿರೋ ಪುಣ್ಯಾತ್ಮರನ್ನ ಕೇಳಿ ನೋಡಿ. ಇದು ಪರಿಸರದ ಮೂಲ ಮಂತ್ರ, ಅದೇ ಬ್ಯಾಲೆನ್ಸ್ ಅಂತಾ ಅನ್ನೋದು. ಇಕಾಲಾಜಿಕಲ್ ಬ್ಯಾಲೆನ್ಸ್, ಅಥವಾ ಪರಿಸರ ಸಮತೋಲನ. ಇಷ್ಟು ಸರಳವಾಗಿ ವಿವರಿಸೋಕೆ ಸಾಧ್ಯವಿದೆಯಾ? ಅದು ಅವರ ಅರಿವಿನಿಂದ ಬಂದಿರುವುದು. ಕಾಡು ಎಂದರೇ ಕೇವಲ ಮರಗಿಡಗಳಲ್ಲ ಎನ್ನುವುದನ್ನು ಅವರು ಗ್ರಹಿಸಿದ್ದಾರೆ. ನಿಲಗಿರಿ ತೋಪನ್ನು ಕಾಡು ಎಂದು ಭ್ರಮಿಸುವ ಸಾಕ್ಷರ ಬಂಧುಗಳಿಗೆ ಏನು ಹೇಳಬೇಕು? ಈ ಮಾತಿನ ಆಳವನ್ನು ಗಮನಿಸಬೇಕು ‘ನಾಡಿನ ಜನ ನಮ್ಮ ಕಾಡಿಗೆ ಬಹಳ ಗಾಯ ಮಾಡ್ ಬುಟ್ರು ಸ್ವಾಮಿ; ನಾನು ಚಿಕ್ಕವನಾಗಿದ್ದಾಗ ಕಾಡು ಬಾಳ ಚೆನ್ನಾಗಿತ್ತು’. ಗಾಯ ಎಂದರೇನು? ಅದರ ಆಯಾಮಗಳನ್ನು ಅರ್ಥೈಸಿಕೊಳ್ಳುವ ಚರ್ಚಿಸುವ ಅನಿವಾರ್ಯತೆಯಿದೆ. ಕಾಡು ಎಂಬುದು ಕೇವಲ ಮರಗಿಡಗಳಿಗೆ ಮೀಸಲಲ್ಲವೆನ್ನುವುದು ಕೇತಗೌಡನ ನಂಬಿಕೆ. ‘ದೇವರು ಕಡಿವಾಣ ಹಾಕುತ್ತಾನೆ, ದೇವರ ಸೃಷ್ಠಿಯೆ ಹೀಗೆ’ ಎನ್ನುವುದರಲ್ಲಿ ಕೇವಲ ನಂಬಿಕೆಗಳಷ್ಟೆ ಕೆಲಸಮಾಡುತ್ತಿಲ್ಲ. ಒಂದು ಆಳವಾದ ಸಂವೇದನಾಶೀಲ ಜ್ಞಾನದ ಅಂತಃಸ್ರೋತ ಪ್ರವಹಿಸುತ್ತಿದೆ. ಈ ಜ್ಞಾನ ಗಿರಿಜನರ ವಿವೇಕದ ಮೂಲ. ಕಾಡುಗಳ ವರ್ಗೀಕರಣದ ಕುರಿತ ಸಂಭಾಷಣೆಯನ್ನು ಗಮನಿಸಿ, ‘ಎಲ್ಲಯ್ಯ ಈಗ ಇಪ್ಪತ್ತೈದು ವರ್ಷದಿಂದಲೂ ಕಾಡು ಸುತ್ತುತ್ತ ಇದೀನಿ, ನನಗೆ ಇಡೀ ಕಾಡೆಲ್ಲ ಒಂದೇ ಥರ ಕಾಣುತ್ತಲ್ಲ’. “ಅದೇಕ ಸಾಮಿ, ನೀವು ಸರಿಯಾಗಿ ಕಣ್‍ಬಿಟ್ಟು ಕಾಡನ್ನ ನೋಡಿಲ್ಲ, ಕಾಡು ಗೊತ್ತಾಗ್‍ಬೇಕು ಎಂದರೆ ಬೇರೆ ಬೇರೆ ಕಾಡಲ್ಲಿ ರಾತ್ರಿ ಬೆಂಕಿ ಹಾಕ್ಕಂಡು ತಂಗಬೇಕು”. ಕಾಡಿನ ಬಗ್ಗೆ ಸಂಶೋಧನೆ ಮಾಡುವವರ ಮತ್ತು ಇಲಾಖೆಯವರ ಕುರಿತು ಅನೇಕ ಮಾತುಕಥೆಗಳಿದ್ದರೂ ಇದೆರಡು ಸಾಲುಗಳಲ್ಲಿ ಹೇಳಿ ಮುಗಿಸುತ್ತೇನೆ, ‘ಏನ್ ನೋಡ್‍ಬ್ಯಾಕೋ ಅದನ್ ನೋಡಾದಿಲ್ಲ ಸ್ವಾಮಿ ಇವರು; ಜೀಪ್ ಹತ್ಕಂಡ್, ಗೇಮ್‍ರೋಡ್‍ನಲ್ಲಿ ಬುರ್ ಅಂತ ಹೋಗಿ ಬಂದ್ ಬಿಡ್ತಾರೆ, ತಿಂಗಳ್‍ಗೋ ವರ್ಸಕ್ಕೊ ಒಂದ್ ಸಲ ಕಾಡ್ ಸುತ್‍ಕಂಡ್ ಬಂದ್ರೆ ಏನ್ ಗೊತ್ತಾಗುತ್ತೆ ಇವರಿಗೆ’. 


ಪುಟ್ಟರಂಗನ ಸಸ್ಯರಂಗ ಅಧ್ಯಾಯದ ಬಗ್ಗೆ ನಾನು ಎಷ್ಟು ಬರೆದರು, ಎಷ್ಟು ಹೇಳಿದರು ಅದು ಕಡಿಮೆಯಾಗುತ್ತದೆ. ಒಬ್ಬ ಸೋಲಿಗನಾಗಿ ಅವನಿಗಿರುವ ಜ್ಞಾನಭಂಡಾರಕ್ಕೆ ಪ್ರತಿಯೊಬ್ಬರೂ ತಲೆದೂಗಲೇಬೇಕು. ಪುಟ್ಟರಂಗನ ಸಹಾಯದಿಂದ ಅದೆಷ್ಟೋ ಸಂಶೋಧನ ಯೋಜನೆಗಳು ಮುಗಿದಿವೆ, ಕೇವಲ ಒಂದೆರಡು ಸಂಸ್ಥೆಯಲ್ಲ, ಬಿಳಿಗಿರಿರಂಗನ ಬೆಟ್ಟ ಮತ್ತು ಮಹದೇಶ್ವರ ಬೆಟ್ಟದಲ್ಲಿ ಕಾರ್ಯನಿರ್ವಹಿಸಬಯಸುವ ಪ್ರತಿಯೊಬ್ಬ ಸಂಶೋಧನಾರ್ಥಿಯೂ ಅವರ ಸಹಾಯಪಡೆದುಕೊಂಡಿದ್ದಾರೆ. ಅದರಂತೆಯೇ, ಡಾ. ಮಾದೇಗೌಡ, ಡಾ. ಜಡೇಗೌಡ ಮತ್ತು ಡಾ.ರತ್ನಮ್ಮರವರ ಕುರಿತು ಈ ಮಾತುಗಳ ಜೊತೆಗೆ ಅವರ ಸಮುದಾಯಕ್ಕೆ ಅವರುಗಳು ಹಾತೊರೆಯುವುದನ್ನು ನೀವುಗಳೇ ಓದಿ ತಿಳಿದುಕೊಳ್ಳಬೇಕು. ಸೋಲಿಗ ಸಮುದಾಯದಿಂದ ಮೊದಲ ವಿದ್ಯಾವಂತರಾಗಿ ಜೊತೆಗೆ ಪಿಎಚ್‍ಡಿ ಮಾಡಿ ಕೂಡ, ಉದ್ಯೋಗ ಸಿಗದೆ ಪರದಾಡುತ್ತಿರುವುದು. ನಿಜವಾದ ಬುಡಕಟ್ಟು ಸಮುದಾಯಕ್ಕೆ ನಿಜವಾದ ಪ್ರಾತಿನಿಧ್ಯ ಸಿಗದೆ ಅವಕಾಶವಂಚಿತರಾಗಿರುವುದು. ಈ ಅಧ್ಯಾಯಗಳಲ್ಲಿ ಬರುವ ಆಧುನಿಕ ಆಶ್ರಮ ಶಾಲೆಗಳ ಘಟನೆಗಳು, ನಮ್ಮನ್ನು ಬೇರೊಂದು ರೀತಿಯಲ್ಲಿ ಚಿಂತನೆ ನಡೆಸಲು ಪ್ರೇರೇಪಿಸುತ್ತದೆ. ರಾಜಕೀಯ ಪ್ರೇರಿತವಾಗಿ ನಿಜವಾದ ಆದಿವಾಸಿಗಳು/ಬುಡಕಟ್ಟು ಜನರನ್ನು ಬದಿಗಿಟ್ಟು ಮೀಸಲಾತಿಗಾಗಿ ನಾಗರೀಕ ಸಮುದಾಯದವರನ್ನು ಒಲೈಸಿರುವುದು ದುರಂತವೇ ಸರಿ. ಒಮ್ಮೆ ಸಮ್ಮೇಳನದಲ್ಲಿ ಸೋಲಿಗರ ಅಡುಗೆ ವಿಶೇಷತೆಗಳನ್ನು ತಿಳಿಯಲು ತಾಜ್ ಹೋಟೆಲ್‍ನವರು ಬಂದು ಸೋಲಿಗರ ಭೋಜನವನ್ನು ಪಂಚಾತಾರ ಹೋಟೆಲ್‍ನಲ್ಲಿ ಪರಿಚಯಿಸಲು ಹೋದದ್ದು ಅಥವಾ ಪರಿಚಯಿಸುರುವುದನ್ನು ಏನು ಹೇಳಬೇಕೋ ಅರಿವಿಲ್ಲ. ಅದಕ್ಕೆ ಮತ್ತೊಂದು ಉದಾಹರಣೆ, ಅನೇಕ ಕಡೆಗಳಲ್ಲಿ ಬ್ಯಾಂಬೂ ಬಿರಿಯಾನಿ ಸಿಗುತ್ತದೆ. ಇದು ಪಾತ್ರೆಪಗಡೆಗಳು ಇಲ್ಲದ ಕಾಲದಲ್ಲಿ ಸೋಲಿಗರು ಬಳಸುತ್ತಿದ್ದದ್ದು. ಆದರೇ ಈಗ ನಗರಿಗರಿಗೆ ಸೋಲಿಗರಾಗಬೇಕೆನ್ನುವ ಬಯಕೆ. ಸೋಲಿಗರು ನಾಡಿನ ಸೆಳೆತಕ್ಕೆ ಬಲಿಯಾಗುವ ಬಯಕೆ. 


ರಕ್ತಚಂದನ ತಪಸ್ವಿ ಓದುವುದಕ್ಕೆ ಹಾಸ್ಯಭರಿತ, ತಮಾಷೆಯೆನಿಸಿದರು, ಮಾನವನ ಹುಚ್ಚಾಟಕ್ಕೆ ಕೊನೆ ಮೊದಲಿಲ್ಲ. ಅದರಲ್ಲಿಯೂ ಕಾಡಿನ ಜ್ಞಾನವೇ ಇಲ್ಲದೆ ತಪಸ್ಸು ಮಾಡಲು ಇಂಥಹದ್ದೆ ಮರಬೇಕು, ಅಲ್ಲಿಯೇ ಮಾಡಬೇಕು ಎಂದು ದೇಶ ಸುತ್ತುವ ದೇವಮಾನವರು ಇಂದಿಗೂ ಇದ್ದಾರೆ, ಅವರ ಸಂಖ್ಯೆ ಅತಿಯಾಗಿಯೇ ಇದೆ. ಮದುವೆ, ಬ್ರಹ್ಮಚರ್ಯದ ಕುರಿತು ಸೋಲಿಗರು ಪ್ರೊ. ಜಯದೇವರವರನ್ನು ಕಾಡಿರಬಹುದಾದ ಘಟನೆಗಳನ್ನು ನಾನು ಊಹಿಸಬಲ್ಲೆ. ಮದುವೆಯೇ ಅಂತಿಮಗುರಿಯೆಂದು ಅಥವಾ ಮದುವೆಯಿಲ್ಲದೆ ಇದ್ದರೆ ಬದುಕಿಲ್ಲವೆನ್ನುವ ಕಲ್ಪನೆಯಲ್ಲಿರುವ ಜನರ ಮಾತುಗಳನ್ನು ಸಹಿಸಿಕೊಂಡು ಮುಂದುವರೆದು, ಅದನ್ನು ನಮ್ಮೊಂದಿಗೆ ಹಂಚಿಕೊಂಡಿರುವುದು ಲೇಖಕರ ಬಗ್ಗೆ ಗೌರವವನ್ನು ಹೆಚ್ಚಿಸಿದೆ. 


ಬಿಳಿಗಿರಿಯ ಬನದಲ್ಲಿ ಸ್ವಾಮಿ ನಿರ್ಮಲಾನಂದರವರ ಬದುಕಿನ ಬಗ್ಗೆ ಹೆಚ್ಚಿನ ಕುತೂಹಲ ಹುಟ್ಟಿಸುತ್ತದೆ. ಮತ್ತೊಂದು ಆಯಾಮದಿಂದ ನೋಡಿದಾಗ ಅವರು ಜಿಂಕೆಯ ಮೇಲೆ ಬೆಳೆಸಿಕೊಳ್ಳುವ ಪ್ರೀತಿ, ಎಂಥಹ ಸಿದ್ದಿಯನ್ನು ಪಡೆದರೂ ಯಾವುದೋ ಸೆಳೆತಕ್ಕೆ ಒಳಗಾಗುತ್ತೇವೆ ಎನ್ನುವದನ್ನು ತಿಳಿಸುತ್ತದೆ. ಅದರಂತೆಯೇ, ಹೂವುಗಳನ್ನು ಭಕ್ತರು ಕೀಳುವಾಗ ಗದರಿಸುವ ರೀತಿ, ಅವರಿಗೆ ಪರಿಸರ, ಪರಿಸರಕ್ಕೆ ಅಂತಹ ಯೋಗಿಗಳು ಬೇಕೆನಿಸುತ್ತದೆ. ಚೆದುರಿದ ಚಿತ್ರಗಳು ಕೊನೆಯ ಅಧ್ಯಾಯವಾಗಿರುವುದು ಉತ್ತಮವೇ ಎನಿಸಿತು ನನಗೆ. ಮೊದಲ ದಿನಗಳ ಶ್ರಮ, ನಿರಾಸೆಯನ್ನು ಲೇಖಕರು ಮೊದಲಿಗೆ ಹೇಳದೆ, ಕೊನೆಯಲ್ಲಿ ಹೇಳಿರುವುದು, ಅವರ ಸಾಧನೆಯ ದಿನಗಳು. ಅದರಲ್ಲಿಯೂ ಆನೆ ಕಂದಕವನ್ನು ನಿರ್ಮಿಸುವಾಗ ಸೋಲಿಗರು ಅವರನ್ನು ಕಂಡ ರೀತಿ, ನಮ್ಮ ಜನರು ಜವಬ್ದಾರಿಯಿಂದ ದೂರ ಉಳಿಯುವುದಕ್ಕೆ ಪ್ರಯತ್ನಿಸುತ್ತಾರೆ. ಅದೆಲ್ಲವನ್ನೂ ಮೀರಿ, ಸೇವೆ ನೀಡುತ್ತಿರುವ ಪ್ರೊ. ಜಯದೇವರವರಿಗೆ ಶುಭವಾಗಲಿ. 


ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...