ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

08 June 2009


ಮರಳಿ ಮಣ್ಣಿಗೆಯೆಂದರೂ ಸರಿಯೇ? ನಿಸರ್ಗದ ಸೆಳೆತಕ್ಕೆಂದರೂ ಸರಿಯೇ....!


ಪರಿಸರ ದಿನವೆಂಬುದು ಪರವಾಗಿಲ್ಲ, ಮಹತ್ತರ ಹಬ್ಬದಂತೆಯೇ ಬೀಗುತ್ತಿದೆ. ಅಥವಾ ನಾವೇ ಅದನ್ನು ಬೀಗುವಂತೆ ಮಾಡಿದ್ದೆವೆ. ಬೆಳಗಿನಿಂದಲೂ ಪರಿಸರದ ಬಗ್ಗೆ ಎಫ್.ಎಂ ನಲ್ಲಂತೂ ಕೇಳುವುದೇ ಬೇಡ ಅದರ ಆರ್ಭಟವನ್ನು. ಪರಿಸರ ಸ್ನೇಹಿ ಪದಾರ್ಥಗಳು, ಪರಿಸರ ಸಂರಕ್ಷಣೆ, ಗಿಡಗಳನ್ನು ನೆಡುವುದು, ಹಸಿರು ವೃದ್ದಿಸುವುದು, ಗಿಡಮೂಲಿಕೆಗಳನ್ನು ಉಪಯೋಗಿಸುವುದು, ಮಳೆ ನೀರನ್ನು ಶೇಕರಿಸುವುದು, ಸಾವಯವ ಗೊಬ್ಬರ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಪ್ಲಾಸ್ಟಿಕ್ ತ್ಯಜಿಸುವುದು, ವಸ್ತುಗಳ ಪುನರ್ ಉಪಯೋಗ, ನೀರಿನ ಮಿತಬಳಕೆ, ತಂತ್ರಜ್ನಾನ ಹೀಗೆ ಬಿಡುವಿಲ್ಲದೇ ಒದುರಿದ್ದೇ ಒದರಿದ್ದು.ಆದರೇ, ಪ್ರತಿಯೊಂದನ್ನು ನಾನು ಕೇಳುವಾಗ ನನಗೆ ನನ್ನ ಬಾಲ್ಯದ ದಿನಗಳು ನನ್ನ ಹಳ್ಳಿಯ ಜೀವನವೇ ನೆನಪಾಗುತ್ತಿತ್ತು. ಇವರು ಮಾತನಾಡುತ್ತಿರುವುದೆಲ್ಲವೂ ಮತ್ತೆ ಹಿಂದಕ್ಕೆ ಹೆಜ್ಜೆ ಇಡಲು ಸಿದ್ದರಾಗಿ ಎನ್ನುವಂತಿದೆ. ಪರಿಸರ ಸ್ನೇಹಿ, ಹಸಿರು, ಉಸಿರು ಎನ್ನುವಾಗ, ನನ್ನೂರಿನಲ್ಲಿದ್ದ ಹಸಿರು ನನಗೆ ನೆನಪಾಗುತ್ತದೆ. ನನ್ನ ಅಜ್ಜಿಯ ಮುಂದೆ ಕುಳಿತು ಕೇಳಿದರೇ, ಅವಳು ಇಲ್ಲಿ ನಮ್ಮ ಮನೆಯಿರುವ ಸ್ಥಳ ಭರ್ಜರಿ ಕಾಡಾಗಿತ್ತು ಎನ್ನುತ್ತಾಳೆ. ಅವಳು ಅದನ್ನು ಹೇಳುವಾಗ ನೀವು ಹುಸಿ ನಕ್ಕರೂ ತಪ್ಪಿಲ್ಲ. ಯಾಕೆಂದರೇ ನನ್ನ ಮನೆಯ ಸುತ್ತಾ ಮುತ್ತಾ ನಾಲ್ಕಾರು ಹುಣಸೆ ಮರಗಳನ್ನು ಬಿಟ್ಟರೇ ದೂರ ಒಂದು ಮೈಲಿನವರೆಗೂ ಬಯಲಾಗಿದೆ. ಈಗ ಮತ್ತೆ ಅದೇ ಸ್ಥಳಕ್ಕೇ ಮರಗಿಡಗಳನ್ನು ನೆಟ್ಟು ಹಸಿರು ತರೆಬೇಕೆಂದರೇ, ಅದು ಸಾಧ್ಯವಾದೀತೆ? ಗಿಡ ನೆಡಬೇಕೆಂಬುದು ಮೆಚ್ಚಲೇ ಬೇಕಾದ ವಿಷಯ ಅದರಲ್ಲಿ ಮತ್ತೊಂದು ಮಾತಿಲ್ಲ. ನೆಡುವುದೆಲ್ಲಿ? ಸಾರ್ವಜನಿಕ ಸ್ಥಳಗಳಲ್ಲಿ ನೆಡಲಿ ಎಂದರೇ, ಮುಗಿದೇ ಹೋಯಿತು, ಹುಚ್ಚಿ ಮದುವೆಯಲ್ಲಿ ಉಂಡೋನೆ ಜಾಣ ಅನ್ನೋ ತರಹ ಆಗುತ್ತೆ. ಬೆಟ್ಟದ ಮೇಲೆ ಬಿಟ್ಟಿ ಅಂದರೇ ನನ್ನದು ಒಂದು ಪಾರ್ಸಲ್ ಅನ್ನುವ ಜನರೇ ಹೆಚ್ಚಿದ್ದಾರೆ. ಇನ್ನೂ ನಮ್ಮ ರೈತರ ಬಳಿಗೆ ಹೋದರೆಂದರೇ ಮುಗಿದೇ ಹೋಯಿತು, ಗಿಡ ನೆಟ್ಟು ಏನು ಮಾಡೋದು, ಅದರ ಬೇರು ಗದ್ದೆಗೆ ಬಂದರೇ, ಬೆಳೆ ಬರುವುದಿಲ್ಲವೆನ್ನುತ್ತಾರೆ. ಆದರೂ ನಮ್ಮ ಕೆಲವು ಶಿಕ್ಷಕರು, ಆಗ್ಗಾಗ್ಗೆ ಕೆಲವು ಸಸಿಗಳನ್ನು ಅಲ್ಲಿ ಇಲ್ಲಿ ನೆಡುತ್ತಾರೆ, ಆದರೆ, ಅವುಗಳಿಗೆ ನೀರು ಹಾಕುವವರು ಗತಿಯಿಲ್ಲದೆ ಶಿಶುಹತ್ಯೆಯೆಂತಾಗುತ್ತದೆ.


ಕೆಲವು ಇಲಾಖೆಗಳಲ್ಲಿ, ಅಷ್ಟೇ ಯಾಕೆ ಇತ್ತೀಚೆಗಂತೂ ಗ್ರಾಮ ಪಂಚಾಯಿತಿಗಳಿಗೂ ಸಾಮಾಜಿಕ ಅರಣ್ಯಕರಣವೆಂಬುದನ್ನು ತಂದಿದ್ದಾರೆ. ನುಂಗಲು ನೀರು ಸದಾ ದೊರೆತಂತಾಯಿತು. ನಾನು ಮೊನ್ನೆ ಊರಿಗೆ ಬಂದಾಗ ಏನಪ್ಪಾ ಸಮಾಚಾರವೆಂದು ನನ್ನ ಸ್ನೇಹಿತನೊಬ್ಬನನ್ನು ಮಾತನಾಡಿಸಿದೆ. ಅವನ ತಾಯಿ ಗ್ರಾಮ ಪಂಚಾಯಿತಿ ಸದಸ್ಯೆ, ಅವರೆಂದು ಬಾಯಿ ತುಂಬಾ ಮಾತನಾಡಿದ್ದು ಕಂಡಿಲ್ಲ, ಇನ್ನು ಅಧಿಕಾರವೇನು ಮಾಡಿಯಾರು? ಅದಕ್ಕಾಗಿ ಅವರ ಪುತ್ರರತ್ನ ಅಧಿಕಾರ ನಡೆಸುತ್ತಿದ್ದಾನೆ. ಇದು ಅಂಥವಾ ವಿಶೇಷ ಸಂಗತಿಯೇನಲ್ಲ ಬಿಡಿ. ಬಲಗೈಯ್ಯಿನಲ್ಲಿ ತಿಂದರೇನು ಎಡಗೈಯ್ಯಿಯಲ್ಲಿ ತಿಂದರೇನು ಹೊಟ್ಟೆ ತುಂಬಬೇಕಷ್ಟೆ, ಅಲ್ಲವೇ. ಹೆಣ್ಣು, ಅಲ್ಪಸಂಖ್ಯಾತರು, ದುರ್ಬಲವರ್ಗದವರು,ಅವ್ಯವಸ್ಥಿತ ವರ್ಗದವರು, ಹಿಂದುಳಿದ ಜಾತಿಯವರು ಇವರೆಲ್ಲರನ್ನು ಮೇಲಕ್ಕೆ ತರಬೇಕೆಂದು ಮಹಾನ್ ಚೇತನಗಳು ಮೇಲಕ್ಕೆ ಹೋದವು. ಆದರೇ ಮೇಲಕ್ಕೆ ಬರಲು ಮನಸ್ಸಿಲ್ಲದೇ ನನ್ನಂತ ಅವಿವೇಕಿಗಳು ಅಲ್ಲೇ ಉಳಿದವು. ಹಾಗೇ, ನೋಡಿ, ಹೆಸರಿಗೆ ಹೆಂಗಸು ಅಧಿಕಾರದಲ್ಲಿರುತ್ತಾಳೆ, ಅಧಿಕಾರ ನಡೆಸುವುದೆಲ್ಲವೂ ಗಂಡನೇ. ನಮ್ಮೂರಲ್ಲಿ ನಾನು ಕಂಡಂತೆ, ಜವರೇಗೌಡರ ಹೆಂಡತಿ ಎನ್ನುತ್ತಾರೆ ಹೊರತು ಇನ್ನೂ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯೆ ಎನ್ನುವುದನ್ನು ಒಪ್ಪಿಲ್ಲ. ಅದೂ ಹಾಳು ಬೀಳಲಿ ಎಂದರೇ, ಇದುವರೆಗೂ ಗ್ರಾಮ ಪಂಚಾಯಿತಿಯಿಂದ ನಮಗೆ ಬರುವ ಯೋಜನೆಗಳ ಬಗ್ಗೆ ಸಾಮಾನ್ಯ ಜನತೆಗೆ ತಿಳಿದಿಲ್ಲ. ಅವರಿಗೆ ಬೇಡದಿದ್ದರೂ ಆಯ್ಕೆಯಾದ ಸದಸ್ಯೆರಿಗೆ ತಿಳಿದಿಲ್ಲ. ಇದರ ಕುರಿತು ಸಂಕ್ಷಿಪ್ತವಾಗಿ ಹೇಳುತ್ತೇನೆ ಕೇಳಿ. ನಾನು ಕಾಲೇಜಿಗೆ ಬಂದ ಶುರುವಿನಲ್ಲಿ, ನಮ್ಮೂರಿನಲ್ಲಿ ಚುನಾವಣೆ ನಡೆದಿತ್ತು, ಆ ಬಾರಿ ಇದ್ದ ಮೂರು ಸೀಟುಗಳಲ್ಲಿ, ಎರಡು ಮೀಸಲಾಗಿದ್ದು, ಒಂದು ಸಾಮಾನ್ಯ ವರ್ಗಕ್ಕೆ ಸೇರಿತ್ತು. ಮಡಿವಾಳ ಜನಾಂಗದವರೊಬ್ಬರು ಆಯ್ಕೆಯಾಗಿದ್ದರು, ಆಯ್ಕೆ ಎನ್ನುವುದಕ್ಕಿಂತ ತಂದು ಕುರಿಸಿದ್ದರು. ಅದು ಹೇಗೆ ಈ ಸರ್ಕಾರ ಮೀಸಲಾತಿ ಕೋಡುತ್ತದೆಂಬುದು ನನಗೆ ಅರ್ಥವಾಗಿಲ್ಲ. ಮಡಿವಾಳ ಜನಾಂಗದವರು ಇದ್ದದ್ದು ಮೂರು ಮನೆಗಳು, ಅದರಲ್ಲಿ ಎರಡೂ ಪಾರ್ಟಿಗಳು ಒಬ್ಬೊಬ್ಬರ ಮನೆಯವರನ್ನು ಅಂಕಣಕ್ಕೆ ಇಳಿಸಿದರು. ಅಣ್ಣತಮ್ಮಂದಿರಾದ ಎರಡು ಮನೆಯವರನ್ನು ಚುನಾವಣೆಯ ನೆಪದಲ್ಲಿ ವೈರಿಗಳಾದರು. ಇಂದಿಗೂ ಅವೆರಡು ಮನೆಯವರು ಮಾತನಾಡುತ್ತಿಲ್ಲ. ಇನ್ನೊಂದು ವರ್ಗಕ್ಕೆ ಹೋದ ಸೀಟೂ ಅದೇ ತೆರನದ್ದು. ಅವರಲ್ಲಿಯೂ ಕೇವಲ ಏಳೆಂಟು ಮನೆಗಳಿದ್ದು ಅವರನ್ನು ಒಡೆದು ಆಳಿದರು. ಇದನ್ನು ನೆನೆದರೆ, ನನಗೆ ಈ ಚುನಾವಣೆಯೆಂಬುದು ನೆಮ್ಮದಿಯಾಗಿದ್ದವರನ್ನು ಗಬ್ಬೆಬ್ಬಿಸಲು ಬರುವ ಒಂದು ಸೈರಾನು ಎನಿಸುತ್ತದೆ. ಹೀಗೆ ಒಮ್ಮೆ ಬಂದು ಹೋದರು ಕಿವಿಯಲ್ಲಿ ಅದರ ಕೂಗು ಇದ್ದೇ ಇರುತ್ತದೆ.


ಗೆದ್ದ ಮಹಿಳೆ ಮತ್ತು ಗಂಡಸು ಇಬ್ಬರೂ ಕಾರ್ಮಿಕವರ್ಗದವರಾಗಿದ್ದರು. ಅವರು ನಮ್ಮ ಮನೆಯ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದರು. ನಾನು ಆ ವೇಳೆಗೆ, ಪಟ್ಟಣಗಳಲ್ಲಿ, ಚುನಾಯಿತ ಅಭ್ಯರ್ಥಿಗಳ ದರ್ಪಗಳನ್ನು ನೋಡಿದ್ದರಿಂದ ಅವರನ್ನು ಕೇಳುತ್ತಿದ್ದೆ. ಅಣ್ಣ ನೀವು ಈಗ ರಾಜಕಾರಣಿಗಳು ನೀವು ಇನ್ನೂ ಕೆಲಸಕ್ಕೆ ಬರಬೇಕಾ? ಅಕ್ಕಾ ನೀವು ಅಲ್ಲಿ ಪಂಚಾಯಿತಿಗೆ ಹೋದಾಗ ಭಾಷಣ ಮಾಡುತ್ತೀರಾ ಎಂದು. ಆಗ ಈಗಿನಷ್ಟು ಕೆಟ್ಟಬುದ್ದಿ ಇಲ್ಲದೇ ಇದ್ದದ್ದರಿಂದ ಈ ಹೆಂಗಸಿಗೆ ಏನು ಗೊತ್ತಿಲ್ಲ ಇವರೆನ್ನೆಲ್ಲಾ ಹೇಗೆ ಗೆಲ್ಲಿಸಿದರೋ ಎನ್ನುತ್ತಿದ್ದೆ. ಈಗ ಅಲ್ಪಸ್ವಲ್ಪ ಅರ್ಥವಾಗುತ್ತಿದೆ. ಹೆಂಗಸಾಗಲೀ ಗಂಡಸಾಗಲೀ ಅಲ್ಲಿ ಗೆದ್ದದ್ದು ಹಿಂದಿನಿಂದಲೂ ಆಳುತ್ತಿರುವ ಒಂದು ವರ್ಗವಷ್ಟೆ. ನಾಮಾಕಾವಸ್ಥೆಗೆ ಇವರನ್ನು ನಿಲ್ಲಿಸಿ ಗೆಲ್ಲಿಸಿದರೂ ಅದರಿಂದ ಇವರ ಅಧಿಕಾರ ಸ್ಥಾಪನೆಯಾಗಲಿಲ್ಲ. ಅದರ ಬದಲು ವಂಚಕರ ಹಾವಳಿ ಮುಂದುವರೆಯಿತು. ಇದು ಎಲ್ಲ ವರ್ಗದಲ್ಲಿಯೂ ಇದೆ, ಸುಮ್ಮನೆ ಒಬ್ಬನನ್ನು ನಿಲ್ಲಿಸಿ ಗೆಲ್ಲಿಸಿ ಅವನಿಂದ ಕೆಲಸ ಮಾಡಿಸಿಕೊಳ್ಳೂವುದು. ಬಡವನಾದವನು ಬಡವನಾಗೇ ಇರಬೇಕು, ತುಳಿಯುವವನು ತುಳೀಯುತ್ತಲೇ ಇರಬೇಕು. ತಿರುಗಿ ಬೀಳುವ ಮನಸ್ಸು ತುಳಿಸಿಕೊಳ್ಳುವ ದಡ್ಡಶಿಖಾಮನಿಗಳಿಗೆ ಬರಲೇ ಇಲ್ಲ. ಅಯ್ಯೊ ನಿಮ್ಮ ಕೈಯಲ್ಲಿ ಅಧಿಕಾರವಿದೆಯೆಂದರೇ, ಅವೆಲ್ಲಾ ನಮಗೇಕೆ, ನಮ್ಮ ಚುನಾವಣೆಗೆ ನಿಲ್ಲಿಸಿ ಹಣ ಸುರಿದು ಗೆಲ್ಲಿಸಿದವರು ಅವರು ನಮ್ಮ ಮುಖನೋಡಿ ಯಾರು ವೋಟು ಹಾಕುತ್ತಿದ್ದರೆಂದು ನನಗೆ ಮರುಪ್ರಶ್ನೆ ಹಾಕಿದರು. ಇದು ಸರಿಯೇ ಅಲ್ಲವೇ, ನಾನು ನನ್ನನ್ನೇ ಬಹಳ ಸಲ ಪ್ರಶ್ನಿಸಿ, ಈಗ ಅದೆಲ್ಲಾವೂ ಸಾಮಾನ್ಯವೆನಿಸಿ ಸುಮ್ಮನಾಗಿಬಿಟ್ಟಿದ್ದೆನೆ. ಅದೂ ಸರಿನೇ ಅಲ್ವಾ ನಾವು ವೋಟ್ ಹಾಕೋ ಎಷ್ಟೋ ಜನ ನಮಗೆ ಗೊತ್ತೇ ಇರಲ್ಲ, ಅವರ ಬಗ್ಗೆ ನಮ್ಮ ಪತ್ರಕರ್ತರೂ ಬರೆಯುವುದು ಅಷ್ಟಕಷ್ಟೆ, ಅದು ಬರೆದರೂ ಓದುವವರೂ ಬೇಕಲ್ಲ.


ನಾನು ಪಿ.ಯು.ಸಿ.ಗೆ ಬಂದಾಗ, ಆ ವಯಸ್ಸಿನಲ್ಲೇ ಅನಿಸುತ್ತೆ, ನಾವು ಬಹಳ ನೇರ ನಡೆ ನುಡಿಗಳನ್ನು ಎಂದು ಮುಂಚಿಡದೇ ವ್ಯಕ್ತಪಡಿಸೋದು. ಒಮ್ಮೆ ಬಸ್ಸಿನಲ್ಲಿ ಕಂಡಕ್ಟರ್ ಟಿಕೆಟ್ ಕೊಡದೇ ಇದ್ದು, ಒಬ್ಬ ಹೆಂಗಸು ಚೆಕಿಂಗ್ ನವರು ಬಂದಾಗ ನಾನು ದುಡ್ಡು ಕೊಟ್ಟರೂ ಇವನೇ ಕೊಡಲಿಲ್ಲವೆಂದಳು. ಆ ಹೆಂಗಸಿನ ರೂಪ ವೇಷ ನೋಡಿದ ಯಾರೂ ತಾನೇ, ಇವಳ ಬಳಿಯಲ್ಲಿ ದುಡ್ಡಿಲ್ಲವೆನ್ನುತ್ತಿದ್ದರಲ್ಲದೇ ಟಿಕೇಟ್ ತೆಗೆದುಕೊಂಡೇಯಿಲ್ಲವೆಂಬುದನ್ನು ನಂಬುತ್ತಿದ್ದರು. ವೇಷ ಭೂಷಣಗಳೇ ತಾನೇ, ನಮ್ಮ ಸಮಾಜದ ಅಂಗ. ಒಳ್ಳೆಯ ಬಟ್ಟೆ ಹಾಕಿ ಮೆರೆಯುವವರೆಲ್ಲಾ ಸತ್ಯವಂತರು, ನೀತಿವಂತರು. ಸಾಧಾರಣ ಬಟ್ಟೆ ತೊಡುವವರೆಲ್ಲರೂ ಮೋಸಗಾರರು. ನಾನು ಆ ಹೆಂಗಸು ದುಡ್ಡು ಕೊಟ್ಟರೂ ಕಂಡಕ್ಟರ್ ಟಿಕೆಟ್ ಕೊಟ್ಟಿಲ್ಲವೆಂದರೇ ನನ್ನನ್ನು ತಿನ್ನುವ ಹಾಗೇ ಇಡೀ ಬಸ್ ಪ್ರಯಾಣಿಕರೇ ನೋಡಿದರು. ನನ್ನ ಸ್ನೇಹಿತರಂತೂ ನನ್ನನ್ನೆ ದಬಾಯಿಸತೊಡಗಿದರು. ನಿನಗ್ಯಾಕೆ ಬೇಕೋ ಊರ ಉಸಾಬಾರಿ, ನಾಳೆ ದಿನ ಕಂಡಕ್ಟರ್ ನಿಮ್ಮೂರಿನ ಬಳಿ ಬಸ್ ನಿಲ್ಲಿಸದೇ ಹೋದಾಗ ಗೊತ್ತಾಗುತ್ತದೆ ಎಂದರು. ಅದೂ ಸರಿಯೇ, ನನ್ನೂರಿನ ಬಳಿಯಲ್ಲಿ ಯಾವುದೇ, ವೇಗದೂತ ಬಸ್ ಗಳು ನಿಲ್ಲಿಸುತ್ತಿರಲಿಲ್ಲ, ನಾನು ಕೊಣನೂರಿಗೆ ಹೋಗಿ ಅಲ್ಲಿಂದ ನಾಲ್ಕು ಕಿಲೋಮೀಟರು ದೂರ ನಡೆದು ಬರಬೇಕಿತ್ತು. ಒಮ್ಮೊಮ್ಮೆ ಪರಿಚಯಸ್ಥ ಕಂಡಕ್ಟರ್ ಗಳು ನಿಲ್ಲಿಸಿ ಸಹಾಯ ಮಾಡುತ್ತಿದ್ದರು. ನಡೆಯುವುದೆಂದರೇ, ನಿಮ್ಮೂರಿನ ಟ್ರಾಫಿಕ್ ರಸ್ತೆಗಳಂತೇನೂ ಇರಲಿಲ್ಲ, ನದಿ ದಂಡೆಯ ಮೇಲೆ ಒಂದು ಸಣ್ಣದಾರಿಯಿತ್ತು, ಅದು ಆ ಕಾಲಕ್ಕೆ ಕೆಟ್ಟ ಸ್ಥಳವಾಗಿತ್ತು. ಆದರೇ, ನಾನೆಂದು ಆ ರಸ್ತೆಯಲ್ಲಿ ನಡೆಯುವುದನ್ನು ದ್ವೇಷಿಸಲಿಲ್ಲ, ಅದಕ್ಕೆ ಎರಡು ಮುಖ್ಯಕಾರಣಗಳು, ಒಂದು ನನ್ನಂತೆಯೇ ನಾನು ಆಡಿಕೊಂಡು ಬರಬಹುದು,ಅಲ್ಲಿ ಓಡಾಡುವ ಜನರೇ ಇರುತ್ತಿರಲಿಲ್ಲ. ಮುಖ್ಯ ರಸ್ತೆಯಲ್ಲಿ ನಡೆದು ಬಂದರೇ ಮುಗಿದೇ ಹೋಯಿತು ಹತ್ತಾರು ಜನರು ಹತ್ತಾರು ಜನರೂ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಮನೆಯಲ್ಲಿನ ಅಪ್ಪ ಅಮ್ಮನಿಂದ ಹಿಡಿದು ನಮ್ಮ ಕಾಲೇಜಿನ ವಿಷಯದವರೆಗೂ ವಿಚಾರಿಸುತ್ತಿದ್ದರು. ಇನ್ನೊಂದು ವಿಷಯವೆಂದರೇ ನದಿದಂಡೆಯಲ್ಲಿ ಸಂಜೆ ಹೊತ್ತಿನಲ್ಲಿ ನಡೆಯುವ ಸೊಗಸೇ ಬೇರೆ ಅದನ್ನು ನಾನು ವಿವರಿಸಿದರೂ ಅನುಭವಕ್ಕೆ ಬರುವುದಿಲ್ಲ ಅದನ್ನು ಅನುಭವಿಸಿಯೇ ತೀರಬೇಕು.


ಹೀಗೆ ಶುರುವಾದ ಸಮಾಜದ ಬಗ್ಗೆ ಅನುಚಿತ ಗೊಂದಲ ಇಂದಿಗೂ ಮುಂದುವರೆದಿದೆ. ಸುಮ್ಮನೆ ಇರಲಾರದೇ ಏನಾದರೂ ಮಾಡಿ ನಮ್ಮ ಸಮಾಜದಲ್ಲಿನ ತೊಡುಕುಗಳನ್ನು ತೊಡೆದುಹಾಕಬೇಕೆಂದು ಹೊರಟು, ಅನ್ಯರ ಚಿಂತೆ ನಿನಗೇಕೆ ನಿನ್ನದೇ ಬೆಟ್ಟದಂತಿರುವಾಗ! ಎನಿಸಿಕೊಂಡು ಬರುತ್ತೇನೆ. ಇದು, ನನ್ನ ಕಾಲೇಜಿನ ಸಮಯದಲ್ಲಿ, ಭಾಗವಹಿಸಿದ್ದ, ಕೆಲವು ಕಾಲೇಜು ಬಂದ್ ಗಳಲ್ಲಿರಬಹುದು, ಜ್ನಾನಭಾರತಿಯಲ್ಲಿರುವಾಗ ಪ್ರೋಫೆಸರ್ ಗಳ ವಿರುದ್ದ, ಹಾಸ್ಟೆಲ್ ವಾರ್ಡನ್ ವಿರುದ್ದ, ಕೆಲಸ ಮಾಡುವ ಜಾಗದಲ್ಲಿ ನಮ್ಮ ಹಿರಿಯ ಅಧಿಕಾರಿಗಳೊಡನೆಯಿರಬಹುದು, ಹೀಗೆ ಕಂಡಕಂಡಲ್ಲಿ, ನುಗ್ಗಿ ನಿಮ್ಮ ಬದುಕು ನೀವು ನೋಡಿ ಸ್ವಾಮಿ ಎನಿಸಿಕೊಂಡಂತವು ಸಾವಿರಾರು ಸಿಕ್ಕವು.ಇವುಗಳನ್ನೆಲ್ಲಾ ಮಾಡಿ ನಾನು ದೊಡ್ಡ ಬುದ್ದಿವಂತ ತೋರಿಸಲೂ ಹೋಗಿಲ್ಲ. ಸುಮ್ಮನೆ ನನ್ನ ಪಾಡಿಗಿದ್ದರೂ ನನ್ನನ್ನು ಅದರ ಸುಳಿಗೆ ಸಿಕ್ಕಿಸಿದವರನ್ನು ನನ್ನ ಆತ್ಮೀಯ ಮಿತ್ರರೆನ್ನಬಹುದು. ಸಾವಿರಾರು ರೂಪಾಯಿಗಳು ನನ್ನಂಥಹ ಅವಿವೇಕಿಯ ಜೇಬಿನಿಂದ ಖಾಲಿಯಾಗಿದೆ. ಅದಕ್ಕಾಗಿಯೇ ನಾವು ಏನೇ ಮಾಡಲೂ ಸಾಧ್ಯವಾದರೇ, ನಮ್ಮ ಕೈಲಾದದ್ದು ಮಾಡಬೇಕು ಇಲ್ಲವೇ ಸುಮ್ಮನೆ ತೆಪ್ಪಗಿರಬೇಕೆಂದು ಕಲಿತಿದ್ದೇನೆ. ಅದಕ್ಕಾಗಿಯೇ, ನಾನು ಯಾರಾದರೂ ಸಭೆ ಸಮಾರಂಭವೆಂದರೇ ಇರಿಸುಮುರಿಸಾಗುತ್ತದೆ. ಆದರೂ ಕೆಲವೊಮ್ಮೆ ಈ ನಗರವಾಸಿಗಳ ಸಹವಾಸವೇ ಬೇಡ ನನ್ನ ಪಾಡಿಗೆ ನಾನು ಒಂದು ಊರಿನಲ್ಲಿ ಒಂದಿಷ್ಟೂ ಮನೆ ಮಠ ಅಂತಾ ಮಾಡಿಕೊಂಡು ಇರಬೇಕೆನಿಸಿ ಅವರ ಮುಂದೆ ಹೇಳಿದರೆ ಹೋಹೋ ಮರಳಿ ಮಣ್ಣಿಗೆ ಎನ್ನುತ್ತಾರೆ, ಇಲ್ಲವೇ ತೇಜಸ್ವಿ ಅವರ ರೀತಿ ಆಗಬೇಕಾ? ಇಲ್ಲಂದರೇ ಇನ್ನೂ ಒಂದು ಹೆಜ್ಜೆ ಮುಂದುವರೆದು ಇಷ್ಟೆಲ್ಲಾ ಮಾಡಿದ್ದು ವ್ಯರ್ಥ ಎನಿಸುವುದಿಲ್ಲವೇ ಎನ್ನುತ್ತಾರೆ ಇಷ್ಟೆಲ್ಲಾ ಎಂದರೇ ಏನು ಎಂದು ತಿಳಿಯದೇ ಮರಳಿ ಮಣ್ಣಿಗೇಯೋ! ನಿಸರ್ಗದ ಸೆಳೆತಕ್ಕೊ ಮತ್ಯಾವುದಕ್ಕೋ ಗೊತ್ತಿಲ್ಲವೆಂದು ಮರಳಿ ನನ್ನ ನಿತ್ಯದ ಕಾರ್ಯಚಟುವಟಿಕೆಗೆ ತಿರುಗುತ್ತೇನೆ.

2 comments:

  1. halliya chitrana kannige kattidantide.nimma baraha heege sagali

    ReplyDelete