30 ಜುಲೈ 2009

ನನ್ನೊಳಗೆ ನಾನಾಗೆ ಉಳಿದ ನಿನ್ನತನ........!!!

ಹಳೆಯ ನೆನಪುಗಳನ್ನು ಮರೆತವನು, ಅಥವಾ ನೆನಪುಗಳೆಂಬುದನ್ನೆ ಮನಸ್ಸಿಗೆ ತರದವನು ನಿಜಕ್ಕೂ ಸುಖಿಯೆನಿಸುತ್ತದೆ ನನಗೆ. ಸದಾ ಇಲ್ಲ ಸಲ್ಲದ ನೆನಪುಗಳಿಂದಲೇ ಮನಸ್ಸು ಹಗುರಾಗುತ್ತದೆ, ಮರುಗುತ್ತದೆ, ಕರಗುತ್ತದೆ, ಹಗುರಾಗುತ್ತದೆ, ಬಿಕ್ಕಳಿಸುತ್ತದೆ, ಆಕಳಿಸುತ್ತದೆ, ಹುಚ್ಚನಂತೆ ನಗುತ್ತದೆ, ನಗಿಸುತ್ತದೆ, ಎಲ್ಲವೂ ಅರೆ ಕ್ಷಣದಲ್ಲಿ, ಕ್ಷಣಾರ್ಧದಲ್ಲಿ, ಅರಿವಿಲ್ಲದಂತೆ ನಡೆದುಹೋಗುತ್ತದೆ, ಅಲ್ಲಿ ಚಿಂತಿಸುವುದಕ್ಕೂ ಸಮಯವಿಲ್ಲ, ಚಿಂತನೆಗೂ ಬಿಡುವಿಲ್ಲ. ಮುಂಜಾನೆ ಮೂರು ಮುಕ್ಕಾಲಿಗೆ ಎಚ್ಚರವಾಗಿ ಕಣ್ಣು ಬಿಟ್ಟು ನೋಡಿದರೇ ನಾ ಕಂಡದ್ದೆಲ್ಲಾ ಕನಸೆಂದು ಮಗ್ಗುಲು ಬದಲಾಯಿಸಿ ಮಲಗಬೇಕು. ಕನಸಿಗೂ, ನನಸಿನ ನೆನಪುಗಳಿಗೂ ಒಂದಕ್ಕೊಂದು ಸಂಬಂಧವಿದೆಯಾ? ಎರಡೂ ಒಂದೇಯಾಗಿದೆಯಾ? ನನಗದೊಂದು ತಿಳಿದಿಲ್ಲ.ನೆನೆಪಂದರೇನು, ಸದಾ ನನ್ನನ್ನು ಕಾಡುತ್ತದೆ ಎನಿಸಿದರೂ, ನನ್ನೊಳಗೆ ಹೊಸ ಹುರುಪನ್ನು ಹುಟ್ಟಿಸಿ ನನ್ನನ್ನು ಹೊಸ ಮನುಷ್ಯನನ್ನಾಗಿಸುತ್ತದೆ ಎನ್ನುವುದು ಸತ್ಯ. ಇವೆಲ್ಲಾ ಹೇಗೆ, ಸಾಧ್ಯವೆನ್ನುವುದೇ ನನ್ನ ಮುಂದಿರುವ ಅದನ್ನು ತಮ್ಮಗಳ ಮುಂದಕ್ಕಿಡುತ್ತಿರುವ ಪ್ರಶ್ನೆ. ಮೊನ್ನೆ ಎಲ್ಲಿಯೋ ಬರೆದಿದ್ದ ಒಂದು ಉಕ್ತಿಯನ್ನು ಓದಿದಾಗ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆಯಾಯಿತು. "ಕೊಲೆಗಾರನನ್ನು ಕ್ಷಮಿಸಬಲ್ಲೆ, ಆದರೇ ನಂಬಿಕೆ ದ್ರೋಹಿಯನ್ನು ಸಹಿಸಲಾರೆ".
ನಾನು ಈ ಸಾಲನ್ನು ನೆನೆದು ಮನೆಗೆ ಬಂದರೇ, ನನಗೆ ಇದೇನೆಂಬುದು ಅರ್ಥವಾಗುತ್ತಿಲ್ಲ, ಆದರೂ ನನ್ನನ್ನು ಬಾಧಿಸತೊಡಗಿತ್ತು. ಇದು, ಕೊಲೆಗಿಂತ ಘೋರ ಅಪರಾಧ ಮತ್ತೊಂದಿಲ್ಲವೆಂದರೇ, ನಂಬಿಕೆ ದ್ರೋಹ ಅದಕ್ಕಿಂತ ದೊಡ್ಡದು. ಕಾರಣವಿಷ್ಟೇ, ಕೊಲೆ ಮಾಡಿದ ಮೇಲೆ ಆ ಜೀವ ಕೊಲೆಗಾರನನ್ನು ಎಂದೆಂದಿಗೂ ತಿರುಗಿ ಕಾಣುವುದಿಲ್ಲ. ಆದರೇ, ಮೋಸ ಮಾಡಿದವನು, ಬೆನ್ನಿಗೆ ಚೂರಿ ಹಾಗಿದವನು, ನಂಬಿಸಿ ಕೈಕೊಟ್ಟು ಹೋದವನು, ನಂಬಿಕೆಯ ಮೇಲೆ ಭಾವನೆಗಳ ಜೊತೆ ಆಟವಾಡಿ ದೂರಾದವನು, ಇವರೆಲ್ಲರೂ ಅಷ್ಟೇ, ಕ್ಷಮೆಗೆ ಅನರ್ಹರು. ಇಲ್ಲಿ, ಆಗುವ ಬದಲಾವಣೆ ರಾತ್ರೋ ರಾತ್ರಿ ಆಗುತ್ತದೆ. ನಿನ್ನೆಯವರೆಗೂ ಚೆನ್ನಾಗಿದ್ದ ಗೆಳತಿ, ಮಾರನೆ ಬೆಳ್ಳಿಗೆ ಹೊತ್ತಿಗೆ ಮಾತನ್ನೇ ನಿಲ್ಲಿಸಿರುತ್ತಾಳೆ. ನನ್ನೊಂದಿಗೆ, ಕಳೆದ ನನ್ನಲ್ಲಿದ್ದ ನನ್ನ ಎಲ್ಲಾ ಕನಸುಗಳನ್ನು ದೋಚಿ ಹೋದಳೇನೋ, ನಾನು ಎಂಬ ಇಷ್ಟೆತ್ತರದ ದೇಹ ಒಮ್ಮೆಗೆ ಹೇಳ ಹೆಸರಿಲ್ಲದಂತೆ, ಕರಗಿ, ಕರಕಲು ಮಸಿಯಾಗಿ ಮಣ್ಣಾಗಿ ಹೋಗುತ್ತದೆ. ಇವೆಲ್ಲವೂ ಆಗುವುದು ಕೇವಲ ಅರೆಗಳಿಗೆಯಲ್ಲಿ. ಜೊತೆಯಲ್ಲಿ ಹೆಣೆದ ಕನಸುಗಳು, ಕುಳಿತು ಒಟ್ಟಿಗೆ ನೆಕ್ಕಿದ ಐಸ್ ಕ್ರೀಂ, ದೂರದ ಬೆಟ್ಟದಿಂದ ಸೂರ್ಯಹುಟ್ಟುವಾಗಿನಿಂದ ದಿಗಂತದಲ್ಲಿ ಅವನು ಕಣ್ಮರೆಯಾಗುವ ತನಕ, ಕಣ್ಣಲ್ಲಿ ಕಣ್ಣಿಟ್ಟು ನಾನೆಂಬುದನ್ನು ಮರೆತು ನಿನ್ನೊಳಗೆ ಬೆರೆತು ಹೋದ ದಿನಗಗಳವೆಲ್ಲವೂ ಮಾಸಿಹೋಗುವುದಕ್ಕೆ ಇಲ್ಲಾ ನೀನು ಅವುಗಳನ್ನು ದೋಚಿಹೋಗುವುದಕ್ಕೆ ಹಿಡಿದಿದ್ದು ಕೇವಲ ಅರೆಗಳಿಗೆ. ಇಂತಹದ್ದು ಉಂಟಾ? ಅಥವಾ ಹೀಗೂ ಉಂಟೇ? ಎಂದು ನನ್ನನ್ನು ನಾನು ಕೇಳಲು ತ್ರಾಣವಿಲ್ಲದೇ, ನಿಂತ ನಿಲ್ಲಲ್ಲೇ ಸತ್ತು ಹೋಗಿದ್ದಾಗ ಎಚ್ಚರಾದೀತೆ. ಸತ್ತಮೇಲೆ ಉಳಿಯುವುದೇನು ಇಲ್ಲವೆನ್ನುವುದು ನಂಬುಗೆ, ಬದುಕಿಯೂ ಸತ್ತಂತೆ ಬದುಕುವುದಿದೆಯಲ್ಲ ಅದಕ್ಕಿಂತ ನರಕಯಾತನೆ ಮತ್ತೊಂದಿಲ್ಲ, ಮೋಸ ಹೋದ ಮನಸ್ಸು, ಕಳೆದು ಹೋದ ಕನಸುಗಳು, ನಂಜಿಹೋದ ಭರವಸೆಗಳು, ಎಲ್ಲದರೊಂದಿಗೆ ಹೊಡೆದಾಡುತ್ತಿದ್ದ ಮನಸ್ಸು ಎಲ್ಲದಕ್ಕೂ ಹೊಂದಿಕೊಳ್ಳುವಂತೆ ತಿರುಗಿದ ದಿನವಂತೂ ಹೇಳತೀರದು. ಸತ್ತರೂ ಸರಿಯೇ, ಸೋತರೂ ಸರಿಯೇ ಆದರೇ, ನಮ್ಮ ವಿರುದ್ದ ಮನಸ್ಸುಗಳೊಂದಿಗೆ, ಹೊಂದದ ಪರಿಸ್ಥಿತಿಯೊಂದಿಗೆ ಬದುಕುವುದು ಅಸಾಧ್ಯ ಸಾಧನೆ. ಅಥವ ನಿರರ್ಥಕ ಬದುಕು.
ಮೋಸಕ್ಕೆ ಹುಟ್ಟಿಲ್ಲಾ, ಮೋಸಕ್ಕೆ ಸಾವಿಲ್ಲ, ಇದು ಇಂದು ನಿನ್ನೆಯದಲ್ಲ, ನನಗೊಬ್ಬನಿಗೆ ಮೀಸಲಾದುದು ಅಲ್ಲಾ, ಸರ್ವರಿಗೂ ಸಮಪಾಲು ಎನಿಸಿದರೂ ಒಬ್ಬೊಬ್ಬರಿಗೆ ಹೆಚ್ಚು ನನಗೆ ಸಿಕ್ಕಂತೆ ಬಂಪರ್ ಸಿಕ್ಕರೂ ಸಿಗಬಹುದು, ಕೆಲವೊಬ್ಬರಿಗೆ ಕಡಿಮೆ ಸಿಗಬಹುದು, ಕೆಲವರಿಗೆ ಸಿಗದೇ ಇದ್ದರೂ ಇರಬಹುದು. ಮೋಸಕ್ಕೆ ಮೋಸವುಂಟಾ? ಮೋಸ ಮಾಡುವವರಿಗೂ ಮೋಸವಾಗುತ್ತದೆಯಾ? ಆಗಲೇ ಬೇಕು, ಅವರಿಗೆ ಮೋಸ ಮಾಡಲು ಭೂಲೋಕದಲ್ಲಿ ಇಲ್ಲದಿದ್ದರೂ ಪರಲೋಕದಲ್ಲಿರುವ ದೇವರಿಲ್ಲವೇ, ಎಂದು ಮನಸ್ಸಿಗೆ ನೆಮ್ಮದಿ ತರಲು ಪ್ರಯತ್ನಿಸುತ್ತೇನೆ. ಇಲ್ಲಾ, ಅದು ಆಗುವುದೆಂತು, ಆಗುವುದಾದರೂ ಹೇಗೆ, ದಿನ ನಿತ್ಯ ನಿನ್ನಯ ಪೂಜೆ ಮಾಡಿಯೇ, ಅವಳನ್ನು ಕಾಣಲು ಹೊರಡುತ್ತಿದ್ದದ್ದು, ಮರಳಿ ದಿನ ಮುಗಿಯುವ ಮುನ್ನ ನಿನ್ನಯ ಮುಂದೆ ಪ್ರಾರ್ಥನೆ ಮಾಡಿ ಮಲಗುತ್ತಿದ್ದೆ. ಒಮ್ಮೊಮ್ಮೆ ಅವಳು ತಡವಾಗಿ ಬಂದರೇ, ನನ್ನ ಮೊಬೈಲ್ ತೆಗೆಯದಿದ್ದರೂ ನಿನ್ನನ್ನೇ ಕೇಳುತ್ತಿದ್ದೆ, ಅಯ್ಯೊ ದೇವರೇ, ಏನಾಯಿತು ಅವಳಿಗೆ, ಅಪ್ಪ ಅಮ್ಮನ ಭಯದಿಂದ ಹೀಗಿರಬಹುದೆಂದು ಸುಮ್ಮನಿರುತಿದ್ದೆ. ಹುಡುಕಾಟಿಕೆಗೆ, ಇಂದು ಸಿಗುವುದಿಲ್ಲವೆಂದರೂ, ದೇವರೆ ಅವಳಿಗೆ ಒಮ್ಮೆ ನನ್ನೊಂದಿಗೆ ಬರುವ ಮನಸ್ಸು ಕೊಡು ಎನ್ನುತ್ತಿದ್ದೆ. ನಿನ್ನಿಂದಲೇ ಅವಳು ನನಗೆ ದೊರೆತದ್ದು ಎಂದು, ನಿನಗೆ ವಾರಕ್ಕೊಮ್ಮೆ ಪೂಜೆ ಮಾಡಿಸಿ, ಬರಿಗಾಲಲ್ಲಿ ನಡೆದು ಬರುತ್ತಿದೆ, ಆ ದಿನಕ್ಕೆಂದು ಕುಡಿಯುವುದು, ಸೇದುವುದು, ಮಾಂಸಹಾರಿ ಇವೆಲ್ಲವನ್ನೂ ದೂರವಿಟ್ಟಿದ್ದೆ. ಆದರೇ, ಇಂದು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಲೂ ನೀನು ಅವಳನ್ನು ಬೆಂಬಲಿಸಿರಬೇಕು. ನನಗೆ ಕೇಡುಗಾಲ ಶುರುವಾಯಿತೆಂಬುದನ್ನು ನೀನು ಅವಳಿಗೆ ತಿಳಿಸಿರಲೇಬೇಕು, ಮನುಷ್ಯರ ಕೇಡುಗಾಲ ಅರಿಯಲು ನಿನ್ನನ್ನು ಬಿಟ್ಟರೇ, ಮತ್ತ್ಯಾರಿಗೆ ಸಾಧ್ಯ?
ಇದಾದ ಮರುಕ್ಷಣವೇ, ಯೋಚನೆ ಬದಲಾಗುತ್ತದೆ, ದೇವರು ಎಲ್ಲಿದ್ದಾನೆ? ಯಾರು ದೇವರು? ಯಾರಿಗೆ ಯಾರು ಶಿಕ್ಷೆ ಕೊಡುವವರು? ಸಹಸ್ರ ಸಹಸ್ರ ಅಮಾಯಕರನ್ನು ಬಾಂಬ್ ಹಾಕಿ ಕೊಲೆಗೈಯ್ಯುವವರಿಗೆ, ಪಾಪ ಪ್ರಜ್ನೆಯೆಂಬುದಿದೆಯೇ? ಸತ್ತ ಹೆಣವನ್ನು ಮುಂದಿಟ್ಟುಕೊಂಡು, ಲಂಚಕೋರುವ ಡಾಕ್ಟರುಗಳು, ಪೋಲಿಸರು, ಬಸ್ ಗಳಲ್ಲಿ, ಹೆಂಗಸಿನ ಕೊರಳಲ್ಲಿ ಮಾಂಗಲ್ಯ ಸರ ಕದಿಯುವ ಕದೀಮರು, ತಿಂಗಳಿಡಿ ದುಡಿದು ಬರುತ್ತಿರುವಾಗ ಸಂಬಳದ ಹಣವನ್ನೆಲ್ಲಾ ಕದ್ದು ಹೋಗುವ ಕಳ್ಳರು, ಲಂಚವೇ ದೇವರೆಂದು ಬಡವರ ರಕ್ತ ಹೀರುವ ಅಧಿಕಾರಿಗಳು, ಹೆಂಡತಿಗೆ ಹೊಡೆದು ಬಡಿದು ಹಿಂಸೆ ಕೊಟ್ಟು ಸಾಯಿಸಲು ಹಿಂದೆ ಮುಂದೆ ನೋಡದ ಪಾಪಿಗಳು, ನ್ಯಾಯ ಕೇಳಲು ಅಥವಾ ಆದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ಬರುವ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವವರು, ಏನೂ ಅರಿಯದ ನಾಲ್ಕಾರು ವರ್ಷದ ಮಕ್ಕಳ ಮೇಲೆ ಎಸಗುವ ಅತ್ಯಾಚಾರ, ಗಂಡ ಕಳೆದು ಹೆಣ್ಣುಮಗಳನ್ನು ಒಂಟಿಯಾಗಿ ಬಿಡಲು ಬಯಸದ ನೀಚ ಗಂಡಸುತನವುಳ್ಳವರು, ಪರೀಕ್ಷೆಯೆಂಬುದನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳನ್ನು ಗುಲಾಮರಾಗಿಸಿಕೊಳ್ಳುವ ಪ್ರೋಫೆಸರ್ ಗಳು, ಗುರು ದೇವೋ ಭವವೆನಿಸಿಕೊಳ್ಳುವವರು, ಮಳೆಯಿಂದಾಗಿ ಜಮೀನು ಮುಳುಗಡೆಯಾಗಿದೆಯೆಂದು ಹೋದಾಗ ಲಂಚ ಕೇಳುವ ಅಧಿಕಾರಿಗಳು, ಮುಳುಗಡೆಯಾದ ಜಮೀನಿನಲ್ಲಿ ಏನೇನು ಇಲ್ಲದಿದ್ದರೂ ಹಣಕೊಟ್ಟವರ ಭೂಮಿಯಲ್ಲಿ ಬಂಗಾರವೇ ಹೋಯಿತೆಂದು ಬರೆದು ಕೊಡುವವರು, ಹಣ ಕೊಟ್ಟರೇ ಬೇಕಾದಷ್ಟು ಮಾರ್ಕ್ಸ್ ಹಾಕಿಸಿಕೊಡುವ ಬ್ರೋಕರ್ ಗಳು, ಹೋಟೆಲ್ ನಲ್ಲಿ ಕ್ಯಾಮೆರಾ ಇಟ್ಟು ಸಿ.ಡಿ.ಮಾಡಿ ಧಂದೆ ನಡೆಸುವವರು, ಆಪತ್ತಿನಲ್ಲಿ, ಮಧ್ಯರಾತ್ರಿಯಲ್ಲಿ ಪರದಾಡುತ್ತ ಆಟೋ ಹುಡುಕುವಾಗ ಹತ್ತು ಪಟ್ಟು ಹೆಚ್ಚು ಕೇಳುವ ಆಟೋ ಡ್ರೈವರ್ ಗಳು, ಕಾಲೇಜು ಹುಡುಗರೆಂದಾಕ್ಷಣ ಬಸ್ ನಿಲ್ಲಿಸದೇ ಹೋಗುವ ಬಸ್ ಡ್ರೈವರ್ ಗಳು, ಸಾಲದ ಭಾಧೆಯಿಂದ ಸತ್ತ ರೈತರ ಹೆಸರನ್ನು ನೂರಾರು ಬಾರಿ ತೋರಿಸಿ ಅವರ ಮನೆ ಮಂದಿಯೆಲ್ಲಾ ತಲೆ ತಗ್ಗಿಸುವ ಹಾಗೆ ಮಾಡುವ ನಮ್ಮ ಟಿ.ವಿ.ಚಾನೆಲ್ ಗಳು, ಅಪ್ಪಿ ತಪ್ಪಿ ರಾತ್ರಿ ಸಿಕ್ಕರೇ ಜೇಬಿನಲ್ಲಿರುವ ಹಣವೆಲ್ಲವನ್ನು ಕಿತ್ತು ಕಳುಹಿಸುವ ಪೋಲಿಸರು, ಮನ ಬಂದಂತೆ ಸೇಡು ತೀರಿಸಿಕೊಳ್ಳಲು, ಸ್ವಪ್ರತಿಷ್ಠೆ ಮೆರೆಯುಲು ಬರೆಯುವ ಲೇಖಕರು, ಹಣ ಕೊಟ್ಟರೇ ಯಾರೀಗೂ ಕೆಲಸ ಕೊಡಿಸುವ ರಾಜಕಾರಣಿಗಳು, ಎಲೆ ಬದಲಾಯಿಸುವಂತೆ ಪಕ್ಷ ಬದಲಾಯಿಸಿ ಮರು ಚುನಾವಣೆ ಮಾಡುವ ನೀಚ ರಾಜಕಾರಣಿಗಳು, ಜೊತೆಯಲ್ಲಿ ಕೆಲಸ ಮಾಡುವವರ ವಿರುದ್ದ ಇಲ್ಲಸಲ್ಲದ ದೂರನ್ನು, ಚಾಡಿಯನ್ನು ಹಬ್ಬಿಸುವವರು, ಸದಾ ಪಕ್ಕದ ಮನೆಯವರ ಕೆಡುಕನ್ನೆ ಬಯಸುವವರು, ಬಿಟ್ಟಿ ದುಡ್ಡಿಗೆ ಕನಸುಕಾಣುವವರು, ಅನಾಥಾಶ್ರಮವೆಂದು ದುಡ್ಡು ಹೊಡೆಯುವವರು, ವಿಧವಾ ಪಿಂಚೆಣಿಯನ್ನು ನುಂಗಿ ನೀರು ಕುಡಿಯುವವರು, ಇಪ್ಪತ್ತು ಮೂವತ್ತು ವರ್ಷ ಸಾಕಿ ಸಲಹಿದ ಅಪ್ಪ ಅಮ್ಮಂದಿರನ್ನು ದಿಕ್ಕರಿಸಿ ದೂರ ಹೋಗುವ ಮಕ್ಕಳಿಗೆ, ಅಣ್ಣ ತಮ್ಮ ಎಂದು ಹಣ ಪಡೆದು ಹಿಂದುರಿಗಿಸದೇ ಹೋಗುವ ಆಪ್ತ ಶತ್ರುಗಳು, ಇರುವ ತನಕ ಪ್ರಾಣ ಕೊಟ್ಟು ಕಾಪಾಡಿದ ಗೆಳೆಯನನ್ನು ನೀಚನೆಂದು ದೂರಿ ಹೋಗುವ ಗೆಳತಿಯರು, ಅವರ ಮನೆಯಲ್ಲೇ ಉಂಡು ತಿಂದು ಬೆಳೆದು ಕಡೆಗೆ ಅವರ ಮನೆಯಲ್ಲಿದ್ದುದ್ದೆಲ್ಲವನ್ನೂ ದೋಚುವ ಪರಮ ಪಾಪಿಗಳು, ಅಪ್ಪನ ಜೇಬಿನಲ್ಲಿ ಹಣ ಕದ್ದು,ಕದ್ದೇ ಇಲ್ಲವೆಂದು, ಕದ್ದಿದ್ದರೂ, ಅದು ನನಗಲ್ಲದೇ ಮತ್ತಾರಿಗೆ ಆ ಹಣವೆಂದು ವಾದಿಸುವ ನೀಚ ಮಕ್ಕಳು,ಒಂದು ಗಂಟೇಯೂ ಪಾಠ ಮಾಡದೇ, ನಲ್ವತ್ತು ಸಾವಿರದಷ್ಟು ಸಂಬಳವನ್ನು ದೋಚುತ್ತಿರುವ ಕೆಲವು ಪ್ರೋಫೆಸರ್ ಗಳು, ಏನೇನೂ ಮಾಡದೇ, ಲಕ್ಷಾಂತರ ರೂಪಾಯಿಯನ್ನು ಯೋಜನೆಗೆಂದು ಸಂಶೋಧನೆಗೆಂದು ಪಡೆಯುತ್ತಿರುವವರು, ಅಣ್ಣ ತಮಂದಿರೆಂದು ಬೊಗಳೆ ಹೊಡೆದರೂ, ಸದಾ ಅವರ ಮನೆ ಹಾಳಾಗಲಿ ಎಂದು ಹಾರೈಸುವ ಸಹೋದರರು, ಇವರಾರಿಗೂ ಇಲ್ಲವೇ ಪಾಪ ಪ್ರಜ್ನೆ?
ಪಾಪಪ್ರಜ್ನೆ ಇದ್ದರೂ ಮಾಡುತ್ತಿರಬೇಕೆಂದರೇ ಅದಕ್ಕೆ ಅವರು ನಂಬಿರುವ ದೇವರ ಕುಮ್ಮಕ್ಕು ಇರಲೇಬೇಕಲ್ಲವೆ? ದೇವರಿಲ್ಲವೆಂದು ಬೀಗುವವರು ಕಡಿಮೆ ಮಂದಿ. ದೇವರಿದ್ದಾನೆಂದು ಕೊಂಡಾಡುವರು ಅತಿ ಹೆಚ್ಚು, ನಾನಾ ಹೆಸರಿರಲಿ, ಎಲ್ಲರಿಗೂ ದೇವರೆಂಬುವನಿದ್ದಾನೆ ಅವನು ಹೇಳಿಯೇ ಈ ಕೆಲಸಗಳನ್ನು ಮಾಡಿಸುತ್ತಿದ್ದಾನೆಂಬುದು ಅವರ ವಾದ. ತಾವು ಮಾಡಿದ ಪಾಪವೆಲ್ಲವನ್ನು ಕಳೆದುಕೊಳ್ಳುವುದಕ್ಕೆಂದು ಒಂದೊಂದು ಪಶ್ಚತ್ತಾಪದ ದಾರಿಯನ್ನು ತೋರಿಸಿದ ಭಗವಂತ ಯಾರೆಂಬುದು ನನಗಂತೂ ತಿಳಿದಿಲ್ಲ. ಆದರೂ, ಈ ಭಗವಂತನನ್ನು ಸೃಷ್ಟಿಸಿದಾತನೇ, ಪಶ್ಚತಾಪವನ್ನು ಸೃಷ್ಟಿಸಿರಬೇಕು. ತಪ್ಪು ಮಾಡುವುದು ಹರಕೆ ಕಟ್ಟುವುದು ಅದನ್ನು ತೀರಿಸುವುದು ಮತ್ತದೇ ತಪ್ಪುಗಳನ್ನು ಮಾಡುವುದು ನಿವಾರಣೆ ಮಾಡಿಸುವುದು. ನಾನಿಲ್ಲಿ ಸರಿ ತಪ್ಪು ಎನ್ನುವುದನ್ನು ಯಾವುದೇ ಮಾನದಂಡವನ್ನಿರಿಸಿಕೊಂಡು ಹೇಳುತ್ತಿಲ್ಲ, ನನ್ನ ಪೂರ್ತಿ ಮಾತುಗಳು, ಕೇವಲ ಪಾಪ ಪ್ರಜ್ನೆ ಎನ್ನುವ ಅಥವಾ ಬೇರೆಯವರ ಜೀವನದ ಜೊತೆಗೆ ಆಡುವ, ಆಡಿದರೂ ಅದನ್ನು ಒಪ್ಪಿಕೊಳ್ಳದ ಬಿಗಿವಂತ ನಾಗರೀಕರಿಗೆ ಮಾತ್ರ. ಅಪರೂಪಕ್ಕೊಮ್ಮೆ ತಪ್ಪು ಮಾಡುವವರಿಗೆ, ಅಥವಾ ಮೋಸ ಹೋಗುವವರಿಗೆ ಅದರಿಂದ ನೋವಾಗಬಹುದು, ಸದಾ ತಪ್ಪನ್ನೆ ಮಾಡುವವರು, ಅಥವಾ ತಪ್ಪೇ ಜೀವನವನ್ನು ರೂಡಿಸಿಕೊಂಡವರಿಗೆ ನೋವಾದಿತೆ? ಮೊದಲ ಬಾರಿ ಪಿ.ಯು.ಸಿಯಲ್ಲಿ ಫೇಲಾದಾಗ ಮುಖ ತೋರಿಸುವುದಕ್ಕೆ, ಹಿಂಜರಿಯುತ್ತಿದ್ದೆ, ಫೇಲಾದೆನೆಂಬ ಕೊರಗಿತ್ತು. ಎರಡನೇ ಬಾರಿಗೆ ಅದರ ಅರಿವೇ ಮರೆತುಹೋಗಿತ್ತು, ಅದು ಅಲ್ಲದೇ, ನನ್ನ ಡಿಗ್ರೀ ಸಮಯದಲ್ಲಿ, ನನ್ನ ಸ್ನೇಹಿತರಿಗೆ ಫೇಲಾಗಿದ್ದೇವೆಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿಯಾಗಿತ್ತು. ಕೆಲವೊಮ್ಮೆ, ನನ್ನಂಥಹ ಕುಡುಕರಿಗೆ, ಕುಡಿತವೇ, ಜೀವನದ ಅತಿ ಅಗಮ್ಯ ವೃತ್ತಿಯೆಂದು ಬಿಂಬಿಸಿ ಮೆರೆಸುವ ಚಟವುಂಟಾಗುತ್ತದೆ. ನನ್ನಂಥ ಮುಟ್ಠಾಳರಿಗೆ, ಕುಡಿತದಿಂದ, ಮನೆ ಮಠ, ಕಳೆದುಕೊಂಡ, ಹೆಂಡತಿ ಮಕ್ಕಳು ಬೀದಿಗೆ ಬಂದ ದೃಶ್ಯಗಳು ಕಾಣುವುದಿಲ್ಲ, ಕಂಡರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮನ್ನು ಅವುಗಳು ಕಾಡುವುದಿಲ್ಲವೇಕೆ, ಸಮಜಾಯಿಸಿ ಕೆಲವೊಮ್ಮೆ ಉತ್ತರ ಕೊಡುತ್ತೇವೆ, ಮತ್ತೊಮ್ಮೆ, ಅದು ನಮ್ಮ ಆಂತರಿಕ ವಿಷಯವೆನ್ನುತ್ತೇವೆ. ನನ್ನ ಕುಡಿತ, ನನ್ನು ಮೋಜು, ನನ್ನ ಮೋಹ, ವ್ಯಾಮೋಹ, ದಾಹ ಪ್ರತಿಯೊಂದು ನನಗರಿಯದ, ಅಥವ ನನ್ನ ಜೊತೆ ಬೆರೆತು ಬಾಳುವ ಹಲವಾರು ಜೀವಗಳಿಗೆ ಕೆಡುಕನ್ನು ತರುತ್ತದೆಂಬುದನ್ನು ನೆನೆಯುವುದಿಲ್ಲ.
ತಪ್ಪು ಮಾಡುವುದನ್ನು ನಿಲ್ಲಿಸಲು ಬಯಸುವುದಿಲ್ಲ ಮನಸ್ಸು, ಅದರಲ್ಲಿ ನಮಗೆ ಅರಿಯದ ನಮ್ಮ ಅಹಂ ತುಂಬಿರುತ್ತದೆ, ನಾನು ಎಂಬ ನಾನತ್ವ ಹೆಚ್ಚಿರುತ್ತದೆ. ಏನು ಮಾಡಿದರೂ ನಾನು ಎಂಬುವನು ಕಿರೀಟದಿಂದ ಕೆಳಗಿಳಿಯುವುದಿಲ್ಲ, ನಾನು ಸೋಲುವುದೇ? ನಾನು ಬಾಗುವುದೇ? ಅಸಾಧ್ಯವೆನಿಸುತ್ತದೆ. ಕೆಟ್ಟದ್ದಾದರೂ ಸರಿಯೇ, ಒಲಿತಾದರೂ ಸರಿಯೇ, ನಾನು ಜಯಿಸಲೇಬೇಕು. ಅಹಂ ನಿಂದಾಗಿ ಇದುವರೆಗೆ ಎಂಥೆಂಥವರೂ ಏನಾದರೆಂಬುದನ್ನು ತಿಳಿದಿದ್ದರೂ, ಅಹಂ ನಿಂದ ಹೊರಬರುವ ಸಾಹಸ ಮಾಡುವುದಿಲ್ಲ. ಇಷ್ಟಕ್ಕೂ ಅಹಂನೊಂದಿಗೆ ಬದುಕುವಾಗ ಏನನ್ನು ಸಾಧಿಸುತ್ತಾರೆಂಬುದು ನನಗೆ ತಿಳಿದಿಲ್ಲ. ಮನ ಬಿಚ್ಚಿ ನಗುವುದಿಲ್ಲ, ಮನ ಬಿಚ್ಚಿ ಅಳುವುದಿಲ್ಲ, ಒಳ್ಳೆಯದನ್ನು ಮನಸಾರೆ ಪ್ರೀತಿಸಿ ಆನಂದಿಸುವುದಿಲ್ಲ, ಸುಂದರವಾಗಿದ್ದರೇ ಅದನ್ನು ಹೊಗಳುವುದಿಲ್ಲ, ಪ್ರಶಂಸಿಸುವುದಿಲ್ಲ. ನಾನು ಮಾಡಿದ್ದೇ ಸರಿಯೆಂದು ಮುನ್ನುಗುವುದನ್ನು ಬಿಟ್ಟರೇ ಮತ್ತೇನು ಮಾಡುವುದಿಲ್ಲ. ನಾನು ನನ್ನ ಜೀವನದಲ್ಲಿ ಹತ್ತು ಹುಡುಗನನ್ನು ಪ್ರೀತಿಸಿದೆ, ಕಾಡಿಸಿದೆ, ಮೋಹಿಸಿದೆ, ನಾನು ಹತ್ತಾರು ಹುಡುಗಿಯರ ಜೊತೆ ಅಲೆದಾಡಿದೆ, ಮೋಹಿಸಿದೆ, ಎಂದು ಮೆಚ್ಚಿ ಮೆರೆದಾಡುವವರಿಗೆ, ಆಂತರಿಕೆ ಪ್ರೀತಿಯೆಂಬುದು, ಅಥವಾ ಮೋಸದ ಎಳೆಯಲ್ಲಿನ ನೋವಿನ ಶಬ್ದ ಕೇಳುವುದುಂಟೇ? ಪ್ಲರ್ಟಿಂಗ್ ಎನ್ನುವುದೇ ಸ್ವೆಚ್ಚೆ ಎನ್ನುವುದನ್ನು, ಅಥವಾ ಸ್ವಾತಂತ್ರ್ಯದ ಪ್ರತೀಕ ಎನ್ನುವಂತೆ ಬಿಂಬಿಸುವ ಜನರಿರುವ ತನಕ, ಭಾವನ ಲೋಕದಲ್ಲಿ ನೆಮ್ಮದಿ ನೆಲೆಸಲು ಬಂದೀತೆ? ಏನು ಮಹಾ ಆದದ್ದು, ಎನ್ನುವಂತೆ, ಅಥವಾ ಏನೂ ಆಗಿಲ್ಲವೆನ್ನುವಂತೆ, ಈ ಬೀದಿಯಲ್ಲಿ ಹೊಡೆದರೇ ಆ ಬೀದಿಯಲ್ಲಿ ಹೊಸ ಮನುಷ್ಯನಾಗಿ ಬರುವವಂತವನಿಗೆ, ಈ ಮೇಲಿನ ಸಾಲುಗಳು ಅರ್ಥವಿಲದಂತವಾಗುವುದು ಸರಿಯೇ? ಆದರೇ, ತಿಂಡಿ ತಿನ್ನಲು ಕುಳಿತ ತಟ್ಟೆಯಲ್ಲಿ ಉಳಿದ ನೀರನ್ನು ಟೇಬಲ್ಲಿನ ಮೇಲೆ ಚೆಲ್ಲಿ ಅದರಿಂದ ಅಂದ ಚೆಂದದ ರಂಗೋಲಿ ಬಿಡಿಸಲು ಹಾತೊರೆಯುವ ಮನಸ್ಸುಳ್ಳ ವ್ಯಕ್ತಿಗಳಿಗೆ ಸಾಮಾನ್ಯವೆಂದು ಒಪ್ಪಲು ಸಾಧ್ಯವಾಗುವುದಿಲ್ಲ. ಒಂದು ಮಧ್ಯರಾತ್ರಿ, ಎರಡು ಗಂಟೆಯ ವೇಳೆಗೆ ನಿನಗೆ ನಾನು ಫೋನ್ ಮಾಡಿ ನನಗೆ ಒಂದು ಕೆಟ್ಟ ಸ್ವಪ್ನ ಬಿತ್ತು ಅಂತಾ ಹೇಳಿದೆ, ನೆನಪಿದೆಯಾ? ನಾನು ನೀನು ದೇವರ ಬಳಿ ಹೋಗಿ, ದೇವರೇ, ನಮಗೆ ಈ ಜನ, ಈ ಜಿಗಿಜಿಗಿ, ಸದಾ ಗುಯ್ಯ್ ಎನ್ನುವ ಟ್ರಾಫಿಕ್, ಬೆಳಿಗ್ಗೆ ರಾತ್ರಿ ದುಡಿಮೆ, ಹಸಿವು, ನರಕ, ಮೋಸ, ವಂಚನೆ, ಮರುಕ, ದುಃಖ, ಯಾರೋ ಮಾಡುವ ತಪ್ಪಿಗೆ ನಾವು ತೆರುವೆ ದಂಡ, ಅಳು, ಸಾಮಾಜಿಕ ಪ್ರತಿಷ್ಟೆ, ಹೆಸರು, ಮರ್ಯಾದೆಯೆಂಬ ಮುಖವಾಡ, ಇವೆಲ್ಲವೂ ಇಲ್ಲದ ಸ್ಥಳಕ್ಕೆ ನಮ್ಮನ್ನು ಬಿಡು, ನಮಗೆ ಹಸಿವು ಆಗಬಾರದು, ದಾಹವೆನಿಸಬಾರದು, ನಿನ್ನಂತೆಯೇ, ಇರಬೇಕು, ಆದರೇ, ಕನಸುಗಳು ಇರಬೇಕು, ದನಿವಾಗಬಾರದು, ದುಡಿಮೆಯಿರಬಾರದು, ಒಂದು ಬಗೆಯ ಮಕ್ಕಳಾಟವೆನಿಸಿದರೂ ಸರಿಯೇ ಇದು ನಮಗೆ ಬೇಕು ಎಂದು ಕೇಳಿದೆವು.
ದೇವರು, ಈ ಬಗೆಯ ಅರ್ಜಿ ಇದುವರೆಗೂ ಒಂದು ಬಂದಿರಲಿಲ್ಲ, ನಿಮ್ಮದೇ ಮೊದಲದ್ದು, ಆಗಲಿ ತಪಸ್ಸು, ನೀವು ಸ್ವರ್ಗಕ್ಕೆ ಬರಬೇಡಿ, ಅಲ್ಲಿಯೂ ಇತ್ತೀಚೆಗೆ, ಲಂಚ, ಮಂಚ, ಹೆಚ್ಚಾಗಿದೆ, ನಿಮಗೆ ನನ್ನ ಸೂಚನೆಯೆಂದರೇ, ಒಂದು ಸುಂದರವಾದ ಮರುಭೂಮಿ, ಜನಜಂಗುಳಿಯಿಲ್ಲ, ಪಕ್ಕದಲ್ಲಿಯೇ ಸುಂದರವಾದ ಓಯಾಸಿಸ್, ನಿಮಗೆ ಬೇಕಾದ ಮರುಭೂಮಿಯ ಹಣ್ಣುಗಳು ಹಸಿವೆ ಇಲ್ಲವೆಂದಾಗ ಉನ್ನಲು ತಿನ್ನಲು ಏನು ಬೇಕು? ಎಂದನು. ನಮಗೂ ಅದು ಸರಿಯೆಂದು ಅಲ್ಲಿಗೆ, ಹೋದೆವು, ನನಗೆ ಮರಳಲ್ಲಿ ಆಡುವುದು, ಗೂಡು ಕಟ್ಟುವುದು, ನನ್ನವಳ ಮುಖವನ್ನೇ ನೋಡುತ್ತಾ ಇರುವುದು. ಒಂದು ದಿನ ಗೂಡು ಕಟ್ಟಲು ನನ್ನನು ಬಿಟ್ಟು ನಮ್ಮ ಓಯಾಸಿಸ್ ಬಿಟ್ಟು ಇನ್ನೊಂದು ಓಯಾಸಿಸ್ ಬಳಿಗೆ ನನ್ನವಳು ಹೋಗಿದ್ದಳು. ನಾನು ಹುಡುಕಿ ಹುಡುಕಿ ಬಂದಾಗ, ಅಲ್ಲಿಗೆ ಹೋದದ್ದು ಯಾಕೆ ಎನ್ನಲು, ಅಯ್ಯೊ ಅಲ್ಲಿ ಕುಳಿತು ಕುಳಿತು ಬೇಸರವಾಗಿತ್ತು ಅದಕ್ಕೆ ಬಂದೆ ಎಂದಳು. ಅಷ್ಟೊತ್ತಿಗೆ ಎಚ್ಚರವಾಯಿತು. ಇದನ್ನು ಅವಳಿಗೆ ಹೇಳಿದ ತಕ್ಷಣ, ಅಯ್ಯೊ ಕರ್ಮವೇ, ಎಂಥಹ ಘೋರ ಕನಸು, ಮರುಭೂಮಿಯಲ್ಲಿ ಅದು ಬರಿ ನಿನ್ನ ಮುಖವನ್ನು ನೋಡಿ ಬದುಕೋದಾ ಇದಕ್ಕಿಂತ ನರಕ ಮತ್ತೊಂದು ಇದ್ಯಾ? ಈ ಮಾತು ಇಂದು ಸತ್ಯವಾಯಿತು. ನನ್ನ ಜೊತೆ ಬದುಕುವುದಕ್ಕಿಂತ ಮಹಾ ಪಾಪ ಮತ್ತೊಂದಿಲ್ಲವೆನ್ನುವುದನ್ನು ನಿರೂಪಿಸಿ ಹೋದಳು.

2 ಕಾಮೆಂಟ್‌ಗಳು:

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...