10 ಡಿಸೆಂಬರ್ 2009

ಬೇಸತ್ತ ಬದುಕಿಗೊಂದು ಪರ್ಯಾಯ ಪಯಣ!!!




ಸೋಮಾರಿತನ ಅನ್ನೋದು ಎಷ್ಟರಮಟ್ಟಿಗೆ ಬೆನ್ನತ್ತಿದೆಯೆಂದರೇ, ಸದಾ ಮಲಗಿದಿದ್ದರೇ ಚೆನ್ನಾಗಿರುತಿತ್ತು ಅನ್ಸುತ್ತೆ. ಜಗತ್ತು ಬರಿ ರಾತ್ರಿಗಳಿಂದಲೇ ತುಂಬಿದಿದ್ದರೇ ಸೊಗಸಾಗಿರುತ್ತಿತ್ತು. ಮುಂಜಾನೆ ಏಳುವುದು, ಹತ್ತಾರು ಮೈಲಿ ತನಕ ಬೈಕ್ ಹತ್ತಿ ಹೊಗೆ ಕುಡಿದು ಆಫೀಸಿಗೆ ಹೋಗುವುದು,ಆಫೀಸಿಗೆ ಬಂದರೇ ಬೆಳ್ಳಿಗ್ಗೆಯಿಂದ ರಾತ್ರಿವರೆಗೆ ಬರೀ ಮೀಟೀಂಗೂ ಮೀಟೀಂಗೂ ಅಬ್ಬಬ್ಬಾ ಜೀವನದ ಬಗ್ಗೆ ತಾತ್ಸಾರ ಮೂಡುವುದಕ್ಕೆ ಇದಕ್ಕಿಂತ ಬೇರೇನೂ ಬೇಡವೆನಿಸುತ್ತದೆ. ಜಗತ್ತಿನ ಬಗ್ಗೆ ತಿಳಿಯುವುದಕ್ಕೆ ಅಂತ ಒಮ್ಮೊಮ್ಮೆ ಪ್ರಯತ್ನಿಸಿ ನೋಡಿ! ನಿಮ್ಮ ತಲೆ ಕೆಟ್ಟಿರುವುದು ಸಾಬಿತಾಗುತ್ತದೆ. ಕುಳಿತು ಮಲಗಿ ಸಾಕಾಗಿ ಕೊನೆಗೆ ಒಮ್ಮೆ ಅರಣ್ಯವಾಸ ಮಾಡಿಬರೋಣ ಅಂತಾ ಹೊರಟೆವು. ನಾನು ಮತ್ತೆ ನನ್ನ ಗೆಳೆಯರಾದ, ನಂದ, ಮಹೇಶ, ಯೋಗಿ ಮತ್ತು ವಿಜಿ ಚಾರಣ ಮಾಡೊಣವೆಂದು ನಿರ್ಧರಿಸಿದೆವು. ಬೆಂಗಳೂರಿನಿಂದ ಹೊರಡುವಾಗ ರಾತ್ರಿ ಸುಮಾರು ಹನ್ನೆರಡಾಗಿತ್ತು. ಬಸ್ಸಿನಲ್ಲಿ ಕುಳಿತು ಹೊರಟೆವು, ನಮ್ಮ ಮೊದಲನೆ ಪ್ಲಾನ್ ಪ್ರಕಾರ ನಾವು ಮುಂಜಾನೆ ೫-ಅಥವಾ ೬ ಗಂಟೆಗೆ ಸಕಲೇಶಪುರದಿಂದ ಚಾರಣ ಆರಂಭಿಸಬೇಕಿತ್ತು. ಆದರೇ ನಮ್ಮ ತಂಡದಲ್ಲಿದ್ದ ಬಕಾಸುರ ಭಕ್ತಾದಿಗಳು ಕೋಳಿ ತೆಗೆದುಕೊಳ್ಳದೇ ಹೋಗಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿ, ಕೋಳಿ ತೆಗೆದುಕೊಂಡು ಸಕಲೇಶಪುರ ಬಿಡುವಾಗ ಹತ್ತು ಗಂಟೆಯಾಯಿತು. ನಾನು ಭರ್ಜರಿಯಾಗಿ ಮೂರ್ನಾಲ್ಕು ಇಡ್ಲಿ ಮತ್ತು ಚಿತ್ರಾನ್ನ ತಿಂದು ನನ್ನ ದೇಹಕ್ಕೆ ಬೇಕಿದ್ದ ಇಂಧನವನ್ನು ಭರ್ತಿಮಾಡಿಕೊಂಡೆ. ಅಂತೇಯೇ ನಮ್ಮ ತಂಡದಲ್ಲಿದ್ದವರೆಲ್ಲರೂ ಬಕಾಸುರನಿಗೆ ಪ್ರತಿಸ್ಪರ್ಧಿಗಳಾಗಿದ್ದರಿಂದ ಅವರ ಇಂಧನದ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.ಮೊದಲೇ ತಡವಾಗಿದ್ದರಿಂದ ರಾತ್ರಿಯ ನಮ್ಮ ತಂಗುವ ತಾಣಕ್ಕೆ ಹೋಗಲು ತಡವಾಗುತ್ತದೆಂದು ಬಸ್ಸು ಹಿಡಿದು ಕಾಡುಮನೆ ಎಸ್ಟೆಟ್ ಹತ್ತಿರಕ್ಕೆ ಹೋಗಿ ಅಲ್ಲಿದ್ದ ರೈಲಿನ ಹಳಿಯನ್ನು ತಲುಪಿದೆವು. ಬಸ್ಸು ಇಳಿದ ತಕ್ಷಣವೇ ನಾವು ಚಾರಣಕ್ಕೆ ಹೊರಟವರೆಂದು ಅಲ್ಲಿದ್ದ ತೋಟದವರೊಬ್ಬರು ನಮ್ಮೊಡನೆ ಸ್ವಲ್ಪ ದೂರ ಬಂದು ಚಾರಣದ ಬಗ್ಗೆ ಸ್ವಲ್ಪ ಹೇಳಿ ನಮ್ಮಯ ಬಗ್ಗೆ ಕೇಳಿ ತಿಳಿದು ಹೋದರು. ಅವರ ನನ್ನ ನಡುವೆ ನಡೆದ ಮಾತಿನ ಸಾರಾಂಶವಿಷ್ಟೆ, ಅಲ್ಲಿರುವ ಎಲ್ಲ ಸಣ್ಣಪುಟ್ಟ ತೊರೆಗಳಿಗೂ ಒಂದಲ್ಲ ಒಂದು ಡ್ಯಾಂ ಕಟ್ಟುತ್ತಿದ್ದಾರೆ, ಅದರಿಂದ ಆಗುವ ಅನೂಕಲ ಅನಾನೂಕೂಲತೆಯ ಬಗ್ಗೆ ಏನು ತಿಳಿಸಿಲ್ಲ.
ಇದು ಎಲ್ಲರ ಬದುಕಿನಲ್ಲಿಯೂ ಆಗುವಂತಹದ್ದೆ, ಹಳ್ಳಿಯಾದರೇನು, ಪಟ್ಟಣವಾದರೇನು? ಸರ್ಕಾರ ಮಾಡುವ ಕಾರ್ಯಗಳ ಬಗ್ಗೆ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಲುಪುವುದು ತೀರಾ ವಿರಳ. ನಮ್ಮ ಜನತೆಯೂ ಅಷ್ಟೆ ಅದರ ಬಗ್ಗೆ ತಿಳಿಯಲು ಹೋಗುವುದು ಅತಿ ವಿರಳ. ನಾನು ಇದನ್ನು ಹಲವಾರು ಬಗ್ಗೆ ಪರೀಕ್ಷಿಸಿದ್ದೇನೆ. ಯಾವ ಅಧಿಕಾರಿಗಳು ಜನತೆಗೆ ಬೇಕಿರುವ ಬಗ್ಗೆ ಮಾಹಿತಿ ಕೊಟ್ಟು ಸಹಕರಿಸುವಂತೆ ಕಾಣುವುದಿಲ್ಲ.ಅಂತೂ ಇಂತೂ ರೈಲ್ವೇ ಹಳಿಗಳ ಮೇಲೆ ಕಾಲಿರಿಸಿದ್ದೇ ತಡ ನನ್ನ ಮಿತ್ರರೂ ಕ್ಯಾಮೇರಾ ತೆಗೆದು ಫೋಟೋ ತೆಗೆಯಲು ಆರಂಭಿಸಿದರು. ಬನ್ನಿ ಬನ್ನಿ ನಾವು ಬಹಳ ದೂರ ಹೋಗಬೇಕು ನಾಳೆ ಸಂಜೆ ತನಕ ಫೋಟೋ ತೆಗೆಯಬಹುದು ಎಂದರೇ, ಅಯ್ಯೊ ಸುಮ್ಮನೆ ಇರಪ್ಪ ಮೊದಲನೆ ಸಾರಿ ಬಂದಿದ್ದೇವೆ ಆದಷ್ಟೂ ಫೋಟೋ ತೆಗಿಬೇಕು ಎಂದರು. ಏನೋ ಮಾಡಿಕೊಂಡು ಹಾಳಾಗಿ ಎಂದು ಮುನ್ನೆಡೆದೆ. ಹಳಿಯ ಕೆಲಸ ಮಾಡುತ್ತಿದ್ದವರೊಡನೆ ಮಾತನಾಡಲು ನೊಡಿದರೆ ಅಲ್ಲಿದ್ದವರೆಲ್ಲರೂ ತೆಲುಗು ನಾಡಿನವರು.ನನ್ನ ಹರುಕು ಮುರುಕು ತೆಲುಗು ಬಳಸಿ ಮಾತನಾಡುತ್ತ ಮುನ್ನೆಡೆದೆ. ನಿಜವಾಗಿಯೂ ಶ್ರಮಜೀವಿಗಳು ತೆಲುಗು ನಾಡೀನವರು.ರಾಜ್ಯ ಬಿಟ್ಟು ರಾಜ್ಯಕ್ಕೆ ಕೇವಲ ಕೂಲಿ ಕೆಲಸಕ್ಕೆ ಬರುವುದು ಸಾಮಾನ್ಯ ಸಂಗತಿಯಲ್ಲ. ಅನಿವಾರ್ಯತೆ ಅನ್ನದ ಮಹಿಮೆಯೆಂದರೇ ಇದು ಎನ್ನುವುದಕ್ಕೆ ಇದೊಂದು ಉದಾಹರಣೆ. ಗದ್ದೆ ಕೆಲಸಕ್ಕೂ ಸೋಮಾರಿತನ ಬಂದು ನಮ್ಮ ಜನರನ್ನು ಗದ್ದೆಗೆ ಕರೆದು ಹೋಗಬೇಕೆಂದರೆ ಎರಡು ಬಾಟಲ್ ಓ ಸಿ ತೋರಿಸಲೇಬೇಕು. ಎಷ್ಟು ನಡೆದರೂ ಉದ್ದಕ್ಕೂ ಬರೀ ರೈಲ್ವೆ ಹಳಿಗಳೇ ಕಾಣುತಿದ್ದವು. ಆದರೂ ರಲ್ವೇ ಅನ್ನೋದು ನಿಜಕ್ಕೂ ಶ್ಲಾಘನೀಯ. ಅಂಥಹ ಕಾಡಿನ ಮಧ್ಯೆಯಲ್ಲಿಯೂ ಕೂಡ ರೈಲ್ವೇ ತೆಗೆದುಕೊಂಡು ಹೋಗಿರುವುದು ಹೆಮ್ಮೆಯ ವಿಚಾರ. ಬಹಳಷ್ಟೂ ಕೆಲಸಗಳು, ರೈಲ್ವೆ ಕಾಮಗಾರಿ, ರಸ್ತೆಗಳು ಅಂದಿನ ಕಾಲದಲ್ಲಿ ಮರ ಸಾಗಣೆ ಮಾಡಲು ಇಂಗ್ಲೀಷರು ಬಳಸಿರುವುದು ಸತ್ಯವಾದರೂ ನಮ್ಮ ಈಗಿನ ಪರಿಸ್ತಿಯಲ್ಲಿ ಕೇವಲ ಅವುಗಳನ್ನು ಸುಸ್ಥಿತಿಗೆ ತರಲು ಪರದಾಡಬೇಕಿದೆ. ನಾವು ಅದರಲ್ಲಿ ಮುಂದೆ ಇದ್ದಿವಿ, ಇದರಲ್ಲಿ ಮುಂದೆ ಇದ್ದಿವಿ, ಎಂದು ನಮ್ಮ ಬೆನ್ನನ್ನು ನಾವೇ ಚಪ್ಪರಿಸುತ್ತಾ ಓಡಾಡುವುದು ನಮ್ಮನ್ನು ನಮ್ಮ ನೈಜ ಸ್ಥಿತಿಯ ಬಗ್ಗೆ ಕಣ್ಣು ಮುಚ್ಚುವಂತಾಗಿಸಿದೆ. ನಮ್ಮ ಅಹಂ ನಿಂದಾಗಿ ಅಂಧತೆಯಲ್ಲಿ ಮುಳುಗಿರುವುದು ಸತ್ಯವಾದರೂ, ಅವುಗಳೆಲ್ಲವನ್ನು ನಾವು ಒಪ್ಪುವುದಿಲ್ಲ. ಕೇವಲ ಮಂಗಳೂರು ಬೆಂಗಳೂರು ನಡುವೆ ರೈಲು ಓಡಾಡಿದರೇ ಆಗಬುಹುದಾದ ಅನೂಕೂಲತೆಯ ಬಗ್ಗೆ ನಮ್ಮ ರಾಜ ದೊರೆಗಳು ಪ್ರಸ್ತಾಪಿಸುವುದಿಲ್ಲ.
ಅದೇನೆ ಇರಲಿ, ನಮ್ಮ ಚಾರಣದ ಬಗ್ಗೆ ತಮಗೆ ಹೆಚ್ಚು ತಿಳಿಸೋಣ, ಅಲ್ಲಿಂದ ಹೋಗುವಾಗ ಹಲವಾರು ಬಾರಿ ರೈಲನ್ನು ಕಂಡೆವು. ಎರಡು ರೈಲು ಪ್ರಯಾಣಿಕರನ್ನು ಕರೆದೋಯ್ದದ್ದನ್ನು ಬಿಟ್ಟರೆ ಮಿಕ್ಕೆಲ್ಲಾ ರೈಲುಗಳು ಗೂಡ್ಸ್ ರೈಲುಗಳು.ಕಬ್ಬಿಣದ ಅದಿರನ್ನು ತುಂಬಿಕೊಂಡು ಹೋಗುವ ರೈಲನ್ನು ಕಂಡಾಗ ನನಗೆ ನೆನಪಾದದ್ದು, ನಮ್ಮ ಹಾಸನ ಮಂಗಳೂರು ರಾಷ್ಟ್ರೀಯ ಹೆದ್ದಾರಿ. ಅದೆಷ್ಟೂ ಬಾರಿ ಅದನ್ನು ದುರಸ್ತಿಗೊಳಿಸಿದರೂ ಅದು ಸರಿಯಾಗುತ್ತಲೇ ಇಲ್ಲ, ಅಂಥಹ ಸಮಯದಲ್ಲಿ ನಮ್ಮ ರೈಲಿನಲ್ಲಿ ಸಾಗಿಸಿದರೇ, ವಾಯು ಮಾಲಿನ್ಯ, ಮತ್ತು ಆರ್ಥಿಕ ತೊಂದರೆಯನ್ನು ತಪ್ಪಿಸಬಹುದು. ವರ್ಷಕ್ಕೆ ನಾಲ್ಕಾರು ಬಾರಿ ರಸ್ತೆಗೆ ತಾರು ಬಳಿಯುವುದನ್ನಾದರೂ ತಪ್ಪಿಸಬಹುದೇನೋ!! ರಸ್ತೆಯುದ್ದಕ್ಕೂ ನಾವು ಸಕಲೇಶಪುರದಿಂದ ಫ್ಲಾಸ್ಕ್ ಗೆ ತುಂಬಿಸಿದ್ದ ಓಂದು ಲೀಟರ್ ಟೀ ಸವಿಯುವುದು ಜೊತೆಗೊಂದು ಸಿಗರೇಟು ಸೇದಿ ವಾಯುಮಾಲಿನ್ಯದ ಬಗ್ಗೆ ಭಾಷಣ ಬಾರಿಸುತ್ತಾ ಹೊರಟೆವು. ಅಂತೂ ಇಂತೂ ನಡೆದು ಓಡೋಡಿ ಮಳೆ ಬರುವ ಮುನ್ನಾ ಎಡುಕುಮೇರಿ ಎಂಬ ರೈಲ್ವೆ ನಿಲ್ದಾಣ ತಲುಪಿದೆವು. ಉದ್ದುದ್ದ ಸೇತುವೆಗಳು ೧೦೦ರಿಂದ ೨೦೦ ಅಡಿಗಳಷ್ಟೂ ಆಳವಾಗಿದ್ದವು, ಒಂದೊಂದು ಸೇತುವೆಗಳು ಅರ್ಧ ಕೀಮೀ ಅಷ್ಟೂ ಉದ್ದವಿದ್ದವು. ಮಧ್ಯದಲ್ಲಿ ರೈಲು ಬಂದರೇ ನಮ್ಮ ಗತಿ ಏನು? ಎನ್ನುವ ಪ್ರಶ್ನೆಯೂ ಬಹಳ ಸಾರಿ ನಮ್ಮ ಮುಂದೆ ಬಂದಿತ್ತು. ಆದರೂ ಆರು ವರ್ಷದಿಂದ ಹಿಂದೆ ನಾನು ಹೋಗಿದ್ದಾಗ ಇದ್ದ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ.ಹಿಂದೆ ನಾವು ಹೋದಾಗ ಹೆಚ್ಚೆಂದರೆ, ಹತ್ತು ಜನರನ್ನು ಕಂಡಿರಲಿಲ್ಲ. ಆದರೇ ಈ ಬಾರಿ ದಾರಿ ಉದ್ದಕ್ಕೂ ಜನರೇ ತುಂಬಿದ್ದರು. ನಾವು ಕಾಡಿನ ಮಧ್ಯೆ ಇದ್ದಿವೆಂಬ ಅರಿವು ಇಡೀ ದಿನ ಬರಲೇ ಇಲ್ಲ.ಒಂದು ಮಂಡಲದ ಹಾವನ್ನು ಬಿಟ್ಟರೇ ಮಿಕ್ಕಿದ್ದೇನೂ ಕಾಣಲಿಲ್ಲ. ರಾತ್ರಿ ನಾವು ತೆಗೆದುಕೊಂಡು ಹೋಗಿದ್ದ ಕೋಳೀ ಮಾಂಸವನ್ನು ಮಾಡಲು ಸಿದ್ದತೆ ಮಾಡುವಾಗ ಬರೋ ಅಂತಾ ಮಳೆ ಶುರುವಾಯಿತು.ಕುಮಾರಣ್ಣ ಅನ್ನೋ ಒಬ್ಬ ಮಹಾಸ್ವಾಮಿ ನಮ್ಮ ಕಡೆಗೆ ಕರುಣೆ ತೋರಿಸಿ, ನಮಗೆ ಅನ್ನದಾನ ನೀಡಿ, ಜೊತೆಗೆ ರಾತ್ರಿ ಇಡಿ ನಮ್ಮ ಜೊತೆ ಹರಟೆ ಹೊಡೆದು ನಮಗೆ ಜೊತೆಗಾರನಾಗಿದ್ದ.ಕುಡಿತ ಎಂತವನನ್ನು ಮೂಢನಾಗಿಸುತ್ತೆ ಅನ್ನೋದಕ್ಕೆ ನಮ್ಮ ಕುಮಾರನ್ನ ಒಂದು ಸೂಕ್ತ ಉದಾಹರಣೆ, ನಮ್ಮ ಜೊತೆ ಕುಡಿದು ಅವರ ಬಾಸ್ ಬಗ್ಗೆ ಕೆಟ್ಟದ್ದಾಗಿ ಮಾತನಾಡಿ ಕಡೆಗೆ ಉಗಿಸಿಕೊಂಡು ಹೋದ. ಕುಡಿದಾಗ ಜಗತ್ತಿಗೆ ನಾನೇ ದೊಡ್ಡವನೆಂಬ ಭಾವನೆ ಮೂಡುವುದು ನಿಜಕ್ಕೂ ಹೆಮ್ಮೆಯ ವಿಷಯ.ಅಂಥಹ ಆತ್ಮವಿಶ್ವಾಸ ಬರುವುದಾದರೂ ಹೇಗೆಂಬುದು ನನಗೆ ಅರಿಯದ ವಿಷಯ.
ದಿನವಿಡಿ ನಡೆದು ಹೋದದ್ದಕ್ಕೆ ನಿದ್ದೆ ಬಂದಿರುವುದು ಅರಿವಾಗಲಿಲ್ಲ. ಮುಂಜಾನೆ ನಾಲ್ಕು ಗಂಟೆಗೆ ರೈಲಿನಲ್ಲಿ ಹೋಗೋಣವೆಂದು ಎದ್ದೆವು ರೈಲು ಅಲ್ಲಿ ನಿಲ್ಲಿಸುವುದಿಲ್ಲವಾದರೂ ಅಲ್ಲಿನ ರೈಲ್ವೆ ಸಿಬ್ಬಂದಿ ನಿಲ್ಲಿಸಿಕೊಡುವ ಭರವಸೆಯಿತ್ತರು. ಹತ್ತಲು ಪರದಾಡಿದಾಗ ರೈಲಿನಲ್ಲಿದ್ದವರೆಲ್ಲರೂ ಗಾಬರಿಗೊಂಡು ರೈಲಿನ ಬಾಗಿಲು ತೆಗೆಯಲೇ ಇಲ್ಲ.ಅಂತೂ ಐದು ನಿಮಿಷ ನಿಂತಿದ್ದ ರೈಲು ಹೊರಟು ಹೊಯಿತು. ಮುಂದೆನೂ ಎಂದು ಅಲ್ಪ ಸ್ವಲ್ಪ ದೂರ ನಡೆದು ಕುಳಿತೆವು. ಸುತ್ತಲೂ ಕತ್ತಲಾಗಿತ್ತು, ಕುಳಿತ ಸ್ವಲ್ಪ ಸಮಯದಲ್ಲಿಯೇ ಸುತ್ತಣ ಮೋಡದ ಬಣ್ಣ ಬದಲಾಗತೊಡಗಿತ್ತು, ಆ ಸುಂದರ ತಾಣದ ಬಗ್ಗೆ ಹೊಗಳುವ ಅವಶ್ಯಕತೆಯಿಲ್ಲ ಅದನ್ನು ಅನುಭವಿಸಿಯೇ ತೀರಬೇಕು.ಊರು ಬಿಟ್ಟು ಮುಂಜಾನೆ ಸಮಯದಲ್ಲಿ ಅಥವಾ ಮುಸ್ಸಂಜೆಯಲ್ಲಿ ಕಾಡಿನಲ್ಲಿ, ಬೆಟ್ಟದ ಮೇಲೆ, ನದಿ ದಂಡೆಯಲ್ಲಿ, ಸೇತುವೆಯ ಮೇಲೆ, ಮಳೆಯಲ್ಲಿ, ಮಂಜಿನಲ್ಲಿ, ಇವುಗಳ ಅನುಭವಗಳು ಬೆಂಗಾಡಿನ ಬದುಕಿಗೆ ಹಸಿರು ಛಾವಣಿಯಿದ್ದ ಹಾಗೆ.ಬೆಂಗಳೂರು ಟ್ರಾಫಿಕ್ ನಲ್ಲಿ ಬೇಸತ್ತಿದ್ದ ನನಗಂತೂ ಎಲ್ಲಿಲ್ಲದ ಆನಂದ ಉಕ್ಕಿ ಬಂತು. ಅಲ್ಲೇ ಇರೋಣವೆನ್ನುವಷ್ಟು.ಆದರೂ ಹೊರಡಬೇಕಿತ್ತಲ್ಲ ರೈಲಿನ ಹಳಿಯ ಮೇಲೆ ನಡೆಯಲು ಯಾರಿಗೂ ಇಷ್ಟವಿರಲಿಲ್ಲ, ಅಲ್ಲಿಂದ ದೂರದ ಒಂದು ಹಾದಿಯನ್ನು ಗುರಿಯಾಗಿಟ್ಟುಕೊಂಡು ನಡೆದೆವು. ರೈಲಿನ ಹಳಿಯಿಂದ ದಿಡೀರನೆ, ಕೆಳಕ್ಕೆ ಹೆಚ್ಚು ಕಡಿಮೆ ನೂರು ಅಡಿಗಳಷ್ಟು ಆಳಕ್ಕೆ ಒಮ್ಮೆಗೆ ಜಾರಿ ಇಳಿದೆವು. ನಾವಿದ್ದ ವೇಷ ಭೂಷಣಗಳು ಬಣ್ಣ ಬದಲಾದವು.ಕೆಳಗೆ ದಣಿವು ತಣಿಸಲು ಕುಳೀತು ಟೀ ಕಾಯಿಸಿ ಕುಡಿದು, ಹೊರಡಲು ಸಿದ್ದರಿದ್ದಾಗ ಮೇಲಿನಿಂದ ಯಾರೋ ಅಪರಿಚಿತರ ಆ ದಾರಿಯಲ್ಲಿ ಹೋಗಬೇಡಿ, ನದಿ ತುಂಬಿ ಹರಿಯುತ್ತಿದೆ, ದಾಟಲಾಗುವುದಿಲ್ಲವೆಂದರು. ನಮ್ಮ ನಮ್ಮಲ್ಲೇ ವಾದ ವಿವಾದಗಳು ಆಗಿ, ಕಡೆಗೆ ಒಮ್ಮೆ ನದಿ ದಂಡೆಗೆ ಹೋಗಿ ನೋಡುವ ತೀರ್ಮಾನವಾಯಿತು. ಹೊರಟ ಐದಾರು ನಿಮಿಷದಲ್ಲಿಯೇ, ಅದೇ ದಾರಿಯಲ್ಲಿ ಒಂದು ಕಾಡೆಮ್ಮೆ ನಡೆದ ಹೆಜ್ಜೆ ಗುರುತು ಕಂಡಿತು. ಅದು ಒಂದೇ ಹೋಗಿರುವುದರಿಂದ ಕಾಡುಕೋಣವಿರಬಹುದೆಂಬುದನ್ನು ಊಹಿಸಿ ಬಹಳ ಹೆಚ್ಚರವಾಗಿ ಮುನ್ನೆಡೆದೆವು. ದಾರಿ ಉದ್ದಕ್ಕೂ ಕಾಲಿಗೆ ನೂರಾರು ಜಿಗಣೆಗಳು ಹತ್ತುತ್ತಿದ್ದವು, ಅವುಗಳನ್ನು ಕೀಳುವುದಕ್ಕೆ ಅಂತಾ ನಿಂತರೂ ಮುಗಿದೇ ಹೋಯಿತು, ಕೈಗಳಿಗೆ ಹತ್ತಿ ಬಿಡುತ್ತಿದ್ದವು. ಮುಂದುವರೆದು ಹೋದರೇ, ದಾರಿಯಲ್ಲಿ ಆನೆಯ ಲದ್ದಿಯ ಸಾಲು ಸಾಲು, ಒಂದೆಡೆಗೆ ಭಯ ಶುರುವಾಯಿತು. ಬಲಗಡೆಗೆ ಎತ್ತರದ ಬೆಟ್ಟವಿದೆ, ಎಡಕ್ಕೆ ಪ್ರಪಾತವಿದೆ, ಹಿಂದೆ ಓಡಲು ಆಗುವುದಿಲ್ಲ, ಆನೆ ಬಂದರೇ ಅಥವಾ ಯಾವುದೇ ಮೃಗ ಸಿಕ್ಕರೂ ನಮ್ಮ ಅಂದಿನ ಅಥವಾ ಈ ಜನ್ಮದಿನವನ್ನು ಕಾಣುವುದು ನಿಶ್ಚಯವೆನಿಸಿತು.ಇರುವುದು ಐದು ಜನ ವನ್ಯಮೃಗಗಳು ನಮಗೆ ಹಾನಿ ಮಾಡಲೇಬೇಕೆಂದು ಮಾಡದಿದ್ದರೂ ಅವುಗಳ ಕ್ಷೇಮಕ್ಕಾಗಿಯಾದರೂ ನಮ್ಮ ಮೇಲೆ ಧಾಳಿ ಮಾಡಬಹುದಲ್ಲವೇ?ಏನಾದರೊಂದು ಆಗಲಿ ಎಂದು ಬಹಳ ಎಚ್ಚರದಿಂದ ಮುನ್ನೆಡೆದೆವು ಅದೆಷ್ಟೂ ದೂರ ನಡೆದೆವೂ ಅತೀ ವೇಗದಿಂದ ನಡೆದೆವು. ಕನಿಷ್ಟ ಹದಿನೈದು ಕೀಲೋಮೀಟರ್ ನಷ್ಟಾದರೂ ನಡೆದಿದ್ದೇವೆಂಬುದು ನಮ್ಮ ಅನಿಸಿಕೆ. ನದಿಯ ಸದ್ದು ಕೇಳುತ್ತಿತ್ತೇ ವಿನಾಃ ಅದರ ಸುಳಿವು ಸಿಗುತ್ತಲೇ ಇರಲಿಲ್ಲ, ನಮಗೆ ಒಂದೆಡೆಗೆ ಆನೆಯ ಭಯ ಮತ್ತೊಂದೆಡೆಗೆ ನದಿ ತುಂಬಿ ಹರಿಯುತ್ತಿದ್ದರೇ ಮತ್ತೆ ಇದೇ ದಾರಿಯಲ್ಲಿ ನಡೆಯುವುದು ಅಸಾಧ್ಯ.ನಾವು ನಡೆಯುತ್ತಿದ್ದ ದಾರಿಯೂ ಆನೆ ದಿನ ನಿತ್ಯ ನದಿಗೆ ಹೋಗುವ ಹಾದಿ, ಆನೆ ಕೆಳಗೆ ನಮಗೆ ಸಿಗದಿದ್ದರೇ ಮೇಲಿನಿಂದ ಅಲ್ಲಿಗೆ ಮತ್ತೆ ಬಂದೇ ಬರುತ್ತದೆ. ಕೇಳಗೆ ಇದ್ದರೇ ಮೇಲಕ್ಕೆ ಹೋಗಲೇ ಬೇಕು, ಇದೆಂಥಹ ಹಣೆಬರಹವಾಯಿತ್ತಲ್ಲ. ಕಾಡು, ನೋಡುವುದಕ್ಕೆ ಸೊಗಸು, ಅಲ್ಲಿನ ಮೃಗಗಳ ನೆನಪಾದರೇ, ಜೀವದ ಜೊತೆಗೆ ಆಡುವ ಸೆಣಸಾಟ ಯಾರಿಗೂ ಬೇಡದ ವಸ್ತು.ಕಾಡಿಗೆ ಹೋಗುವವರು ಪ್ರಾಣಿಗಳನ್ನು ಎದುರಿಸಲು ಎಲ್ಲ ಸಿದ್ದತೆ ಮಾಡಿ ಹೋದರೆ ಅದು ಸಾರ್ಥಕ ಇಲ್ಲದೇ ಇದ್ದರೆ ಒಂದು ಭಯ ಇಲ್ಲವೇ ನಮ್ಮ ಶವವೂ ಸಿಗುವುದಿಲ್ಲ. ಅಂತೂ ಇಂತೂ ನದಿಯ ದಂಡೆಗೆ ಬಂದೆವು, ಇತ್ತ ಕಡೆಯಿಂದ ನೋಡಿದರೇ ಆ ಬದಿಯಲ್ಲಿ, ರಾಷ್ಟ್ರೀಯ ಹೆದ್ದಾರಿ ೪೮ ಇದೆ, ಅಬ್ಬಾ ಎನಿಸಿತು. ನದಿ ಅಂಥ ವೇಗದಲ್ಲೇನೂ ಹರಿಯುತ್ತಿಲ್ಲವೆಂದು ತೀರ್ಮಾನಿಸಿ ಕುಳಿತೆವು.ಇಲ್ಲಿ ಕೂರುವುದು ಬೇಡ ಬಂದ ವೇಗದಲ್ಲಿಯೇ ನದಿಯನ್ನು ದಾಟಿ ಬಿಡುವುದು ಉತ್ತಮವೆಂದು ತೀರ್ಮಾನಿಸಿ ನದಿ ದಾಟಲು ಸಿದ್ದರಾದೆವು. ನದಿಗೆ ಇಳಿದು ಸ್ವಲ್ಪ ದೂರ ನಡೆದಾಕ್ಷಣ ತಿಳಿಯುತು ನದಿಯ ವೇಗ ಬಹಳ ಹೆಚ್ಚಿತ್ತು. ನಮಗೆ ಎಲ್ಲಿಲ್ಲದ ನಿರಾಶೆ ಮೂಡಿತು. ಮಾಡುವುದೇನು?ಯಾರೊಬ್ಬರೂ ಹಿನ್ನೆಡೆಯಲು ಸಿದ್ದರಿರಲಿಲ್ಲ.ಅಂತೆಯೇ ಮುನ್ನೆಡೆಯಲು ಆಗುತ್ತಿರಲಿಲ್ಲ. ಬದಿಯಲ್ಲಿ ಇಪ್ಪತ್ತು ಅಡಿಗಳಷ್ಟು ಉದ್ದದು ಒಂದು ಮರದ ಬಡಿ ಬಿದ್ದಿತ್ತು, ಅದನ್ನು ಹಿಡಿದು ದಾಟಲು ಯತ್ನಿಸಿದೆವು, ಬಡಿಯು ಹಸಿವಾಗಿತ್ತು, ಕನಿಷ್ಟ ಮುವತ್ತು ಕೆಜಿಯಷ್ಟಾದರೂ ಇದ್ದಿರಬೇಕು. ಅದನ್ನು ಬಳಸಿ ಎದ್ದು ಬಿದ್ದು ಎರಡು ಗಂಟೆಗಳ ಸತತ ಪ್ರಯತ್ನದಿಂದ ನದಿ ದಂಡೆಯನ್ನು ತಲುಪಿದೆವು.ತಲುಪಿದ ಕೂಡಲೇ ಪೂರ್ತಿ ಒದ್ದೆಯಾಗಿದ್ದ ನಮ್ಮ ಬ್ಯಾಗುಗಳನ್ನು ಬಿಸಿಲಿಗೆ ಇಟ್ಟು ನೀರಿನಲ್ಲಿ ಕಾಲು ಬಿಟ್ಟು ಮಲಗಿದೆವು.

2 ಕಾಮೆಂಟ್‌ಗಳು:

  1. Dear Hari,
    Of all your blogs that I have raed till date, this is the most fearful one. Nevertheless I feel like visiting Sakleshpur for a trek. There is some humour in the beginning and it sounds scary to me as we proceed further.. anyways an experience well potrayed...

    Keep writing

    Regards
    Regina

    ಪ್ರತ್ಯುತ್ತರಅಳಿಸಿ
  2. Thank you Regina,
    nanagu haage ansutte, kaadu annodu horaginda super aagirutte, olage hodaaga allina janara novu, ondu hospital andru 20-30km nadedu hogbeku, road illa, animals irutte, bhaya, belakilla, basic needs illa, bhayada neralalle jeevana, kaayile biddare en kathe annodu gottiralla, sahayakke jana illa, namage ella iddu yaaroo illa avarige yaarooo illa...

    ಪ್ರತ್ಯುತ್ತರಅಳಿಸಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...