25 ಮಾರ್ಚ್ 2010

ಭವ್ಯಭಾರತದಲ್ಲಿ ಬದುಕೆಂಬ ಮಾಯಜಿಂಕೆ!!!

ಬದುಕೆಂಬ ಮಾಯಜಿಂಕೆ ಎತ್ತ ಕಡೆಗೆ ನುಗ್ಗುತ್ತಿದೆ? ಇದು ಯಾರಿಗೂ ಅರಿಯದ ಮರ್ಮವೆಂದರೂ ಸರಿಯೇ. ನಾಳೆ ಎಂಬ ದೈತ್ಯ ಹೇಗಿರುತ್ತೆಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ,ನಿಜಕ್ಕೂ ಈ ಭೂಮಿಯ ಮೇಲೆ ನಡೆಯುತ್ತಿರುವುದೇನು?ಇದಕ್ಕೆ ನಾವು ಪ್ರತಿಕ್ರಿಯಿಸಬೇಕಾದ ಮಾರ್ಗ ಯಾವುದು? ಅಷ್ಟಕ್ಕೂ ಅಂಥಹದೊಂದು ಅವಶ್ಯಕತೆ ಇದೆಯಾ? ಹೀಗೆ ಪ್ರಶ್ನೆಗಳ ಬದುಕಲ್ಲಿ ಉತ್ತರವಿಲ್ಲದ ಅಥವಾ ಇದ್ದರೂ ಸಿಗದ ಸನ್ನಿವೇಶಗಳು ಸದಾ ಬರುತ್ತಿರುತ್ತವೆ.ಓದುವಾಗ ಓದಿನ ಬಗೆಗಿನ ಚಿಂತೆಯಲ್ಲಿ ಮುಳುಗಿರುತ್ತೇವೆ, ಓದಬೇಕೆಂಬುದು ನಮ್ಮಯ ಗುರಿ, ಅಂಕಗಳನ್ನು ಪಡೆಯುವುದೇ ನಮ್ಮಯ ಉದ್ದೇಶ ಅದಾದ ನಂತರ ಉದ್ಯೋಗ ಹುಡುಕುವುದು ಉದ್ಯೋಗ ನಡೆಸುವುದು. ಇವೆಲ್ಲದರ ನಡುವೇ ಕಾಡುವ ಪ್ರಶ್ನೆ ಜೀವನ ಇಷ್ಟೇನಾ? ಕಾಡುವ ಪ್ರಶ್ನೆ ಬಂದೊಡನೆ ಮನಸ್ಸು ಹಾತೊರೆಯತೊಡಗುತ್ತದೆ ಇಲ್ಲಾ ಜೀವನ ಇಷ್ಟೇ ಅಲ್ಲಾ ಮತ್ತೇನೋ ಇದೆ, ಏನದು? ಅದನ್ನು ಹುಡುಕುವುದು ಹೇಗೆ? ಆಗ ಮರುಕಳಿಸುವುದೇ ಆಸೆಗಳ ಹೆಬ್ಬುಲಿ.ದುಡಿಯಬೇಕು ಸಂಪಾದಿಸಬೇಕು, ಹಣಗಳಿಸಬೇಕು, ಹೆಸರು ಮಾಡಬೇಕು ಎನ್ನುವುದು ಒಂದು ಮನಸ್ಥಿತಿ. ದುಡಿಯಬೇಕು ದೇಶ ಸುತ್ತಬೇಕು, ತಿಳಿಯಬೇಕು ಇದು ಮತ್ತೊಂದು ಮನಸ್ಥಿತಿ. ಇದಕ್ಕೆ ಮೀರಿದ ಒಂದು ಮನಸ್ಥಿತಿಯೇ, ಜಗತ್ತನ್ನು ಆಳಬೇಕು, ನಾನೇಂಬುದನ್ನು ತೋರಿಸಬೇಕು, ಆಗ ಸಾಯುವುದೇ ನಮ್ಮ ಮಾನವೀಯತೆ.ಇಲ್ಲಿ ಎಲ್ಲವೂ ನಾನೆನೆದಂತೆ ಆಗಬೇಕು, ಸರ್ವವೂ ನನ್ನಿಂದಲೇ ಆಗಬೇಕು, ನಾನೇ ಸರ್ವಾಧಿಕಾರಿ, ನಾನು ಹೇಳಿದಂತೆ ನನ್ನ ಗೆಳೆಯರು ಕೇಳಬೇಕು, ನನ್ನ ಮನೆ ಮಂದಿಯಲ್ಲಾ ಹೀಗೆ ಇರಬೇಕು, ನನ್ನ ಜೀವದ ಗೆಳತಿ ನಾನು ಹಾಕಿದ ತಾಳಕ್ಕೆ ಕುಣಿಯಬೇಕು. ನಾನು ಎಂಬುದನ್ನು ಎಲ್ಲರ ಮೇಲೆ ಹೇರಲು ಹೋಗಿ ಎಲ್ಲವನ್ನು ಕಳೆದುಕೊಂಡು ಕೂರುತ್ತೇವೆ. ಕಳೆದು ಹೋದ ಮೇಲೆ ತಿಳಿಯುವುದು ಈ ಜಗತ್ತು ಸರಿ ಇಲ್ಲವೆಂಬ ಒಂದೇ ಒಂದು ಸಾಲಿನ ಸೂಕ್ತ ಉತ್ತರ.ನಾನೆಂಬ ಅಹಂಕಾರ ಎಲ್ಲವನ್ನು ಕ್ಷಣದಲ್ಲಿ ಕಳೆದು ಬಿಡುತ್ತದೆ. ನಾನು ಎಂಬುದನ್ನು ಬಿಟ್ಟರೇ ಜಗದಲ್ಲಿ ಬದುಕಲು ಸಾಧ್ಯವೇ? ಜಗತ್ತು ನಿಮ್ಮನ್ನು ನುಂಗಿ ಬಿಡುತ್ತದೆ, ಅತಿ ವಿನಯ ಒಮ್ಮೆ ನಿಮ್ಮ ಜೀವನಕ್ಕೆ ಕಾಲಿಟ್ಟರೇ ಮುಗಿದೇ ಹೋಯಿತು ಹಸಿದ ಹುಲಿಗಳಂತೆ ನಿಮ್ಮನ್ನು ತಿಂದು ಬಿಡುತ್ತದೆ ಸಮಾಜ. ಇದೆಂಥಹ ಬದುಕು ಇದೆಂಥಹ ವ್ಯವಸ್ಥೆ. ಜೀವನಕ್ಕೆ ಒಂದು ಸೂಕ್ತ ಮಾರ್ಗವೆಂಬುದು ಇಲ್ಲವೇ? ನಾನು ಒಮ್ಮೆ ನಿಧಾನಕ್ಕೆ ಮಾತನಾಡಿದರೇ ನನ್ನ ಜೊತೆಗಾರರು ನನ್ನನ್ನು ಹಿಯಾಳಿಸುವಂತೆ ಕಾಣುತ್ತಾರೆ. ನನ್ನಿಂದ ಸಾಲ ಪಡೆದ ಸ್ನೇಹಿತನಿಗೆ ಪರ್ವಾಗಿಲ್ಲ ಮುಂದಿನ ತಿಂಗಳು ಕೊಡು ಎಂದರೇ ಒಂದು ವರ್ಷವಾದರೂ ಹಿಂದಿರುಗಿಸುವ ಬಗೆಗೆ ಚಿಂತಿಸುವುದಿಲ್ಲ, ಚಿಂತಿಸುವುದಿರಲಿ ಹಿಂದಿರುಗಿಸುವುದೇ ಇಲ್ಲ. ನಮ್ಮ ಒಳ್ಳೆಯತನವನ್ನೋ ಅಥವಾ ಅತಿಯಾದ ಮಾನವೀಯತೆಯನ್ನೋ ಹೀಗೆ ದುರುಪಯೋಗ ಪಡಿಸಿಕೊಳ್ಳುವ ಜನತೆಯನ್ನು ಏನೆಂದು ಕರೆಯಬೇಕು? ಇಂಥಹ ಸಾವಿರಾರು ಅನುಭವಗಳು ನನಗೆ ಆಗಿವೆ. ಕೆಲಸವಿದ್ದಾಗ ಮಾತ್ರ ಸ್ನೇಹ ಸಂಪಾದನೆ ಮಾಡಿ ಕೆಲಸ ಮುಗಿದ ಮಾರನೆಯ ದಿನದಿಂದಲೇ ದೂರಾಗುವ ಬಹಳಷ್ಟು ಮಂದಿ ಗೆಳೆಯ ಗೆಳತಿಯರು ನನ್ನಿಂದ ದೂರಾಗಿದ್ದಾರೆ. ಇದು ಎಲ್ಲರ ಬದುಕಲ್ಲಿಯೂ ಬರುತ್ತದೆ. ಆದರೇ ಯಾರೋ ಒಬ್ಬರೂ ಇಬ್ಬರೂ ಮಾಡಿದ ಮೋಸಕ್ಕೆ ಇಡೀ ಸ್ನೇಹ ವರ್ಗವೇ ತಪ್ಪೆಂದು ದೂರಲಾರೆ.ಆದರೂ ಜಗತ್ತು ಇತ್ತೀಚೇಗೆ ದುಡ್ಡಿನ ಹಿಂದೆ ಓಡಾಡುತ್ತಿರುವುದು ವಿಷಾಧನೀಯ.ದುಡ್ಡಿದ್ದರೇ ಎಲ್ಲವೆಂಬಂತೆ ನಾವು ಒಮ್ಮೊಮ್ಮೆ ಬೀಗುವುದು ನನಗೆ ನಮ್ಮ ಬಗೆಗೆ ಜಿಗುಪ್ಸೆ ಬರುತ್ತದೆ. ಅರವತ್ತು ವರ್ಷ ಬದುಕುವ ಈ ಬದುಕಿನಲ್ಲಿ ದುಡ್ಡೇ ಎಲ್ಲವೆಂಬಂತೆ ಬದುಕಿ ದುಡ್ಡಿಗೆ ಸಾಯಬೇಕೆ?ಪ್ರೀತಿಸುವ ಹೃದಯದ ಜೊತೆಗೆ ಕುಳಿತು ಹತ್ತು ನಿಮಿಷ ಕಳೆಯುವಾಗ ಬರುವ ಆನಂದ ಲಕ್ಷ ರೂಪಾಯಿ ಸಂಪಾದನೆಯಲ್ಲಿ ಸಿಗುವುದಿಲ್ಲವೆಂಬುದು ನನ್ನ ನಂಬಿಕೆ. ಆದರೇ ದುಡ್ಡಿದ್ದರೇ ಅಂಥಹ ಸಾವಿರ ಸಾವಿರ ಸ್ನೇಹಿತರು ಸಿಗುತ್ತಾರೆಂಬ ಹುಚ್ಚು ಕಲ್ಪನೆಯಿರುವ ಗೆಳೆಯರಿಗೆ ನಿಜವಾದ ಗೆಳೆತನ ಅರ್ಥವಾಗುವುದಿಲ್ಲ. ಒಮ್ಮೊಮ್ಮೆ ನನಗೆ ಅನಿಸುವುದು ಈ ಹುಚ್ಚು ಭಾವನಾತ್ಮಕತೆ ನಮ್ಮನ್ನು ಅದೆಷ್ಟೂ ಹೀನರಾಗಿಸುತ್ತದೆಂದು, ಒಬ್ಬನೇ ಸಿನೆಮಾ ನೋಡಲು ಬಯಸುವುದಿಲ್ಲ, ಒಬ್ಬನೆ ಕುಳಿತು ಕಾಲಹರಣ ಮಾಡಲೂ ಬಯಸುವುದಿಲ್ಲ. ನಾಲ್ಕು ಸಾಲು ಬರೆದರೂ ಅದನ್ನು ನನ್ನ ಜನರೊಂದಿಗೆ ಹಂಚಿಕೊಳ್ಳಬೇಕೆಂಬ ತವಕವಿರುತ್ತದೆ. ರಾತ್ರಿ ಯಾದರೇ ಒಂಟಿತನ ಕಾಡುತ್ತದೆ, ಮುಂಜಾನೆಯ ಗೆಳೆಯರ ಸಂದೇಶಕ್ಕೆ ಕಾಯುತ್ತದೆ. ಗೆಳತಿಯ ನಗುವಿಗೆ ಹಂಬಲಿಸುತ್ತದೆ.ಇದರ ನಡುವೆ ಕಾಡುವ ಪ್ರಶ್ನೆ ದುಡ್ಡಿಲ್ಲದೇ ಬದುಕಲು ಬಂದೀತೆ?ಪ್ರೀತಿ ಹಸಿವನ್ನು ತುಂಬಿಸಲು ಬಂದೀತೆ?ಒಮ್ಮೆ ಖಾಯಿಲೆ ಬಿದ್ದರೇ ಸಾವಿರಾರು ರೂಪಾಯಿಗಳು ಬೇಕು ಇದೆಂಥಹ ಬದುಕು, ಒಳ್ಳೆಯ ಆಸ್ಪತ್ರೆಯ ಸೌಕರ್ಯವಿಲ್ಲದ ದೇಶವೂ ಅದರಲ್ಲಿ ಬದುಕುವ ನಾವು ದೇಶಪ್ರೇಮಿಗಳಾಗಬೇಕು?ಕನಿಷ್ಟ ಐದು ಕೀಲೋಮೀಟರ್ ಬಸ್ಸಿನಲ್ಲಿ ಹೋಗಲು ಹತ್ತು ರೂಪಾಯಿ ಬೇಕು, ನೂರು ರೂಪಾಯಿ ಇದ್ದರೇ ಇಬ್ಬರಿಗೆ ಹೊಟ್ಟೆ ತುಂಬಾ ಊಟ ಸಿಗುವುದಿಲ್ಲ, ಇಂಥಹ ಸಮಾಜ ಕಟ್ಟಿದ ನಮ್ಮ ದೃಷ್ಟ ರಾಜಕಾರಣಿಗಳಿಗೆ ಅದನ್ನು ಬೆಂಬಲಿಸುವ ನೀಚ ಜನತೆಗೆ ಏನು ಹೇಳಬೇಕು?ಒಂದು ದೇಶದ ಅಭಿವೃದ್ದಿ ನಿಂತಿರುವುದು ಹಣದಿಂದ ಮಾತ್ರವೇ ಅಲ್ಲ, ಅದರ ನೈಸರ್ಗಿಕ ಸಂಪತ್ತಿನಿಂದ ಜನತೆಯ ಆನಂದದಿಂದ. ಜನ ಹೆಚ್ಚು ದುಡಿದ ಮಾತ್ರಕ್ಕೆ, ಕಾರು ಜೀಪಿನಲ್ಲಿ ಓಡಾಡಿದ ಮಾತ್ರಕ್ಕೆ ಅವರು ಸಂತೋಷದಿಂದಿದ್ದಾರೆಂದರೆ ಹುಚ್ಚುತನವೆನಿಸುತ್ತದೆ. ಬದುಕಿನ ಸಂತೋಷವಿರುವುದು ನೆಮ್ಮದಿಯ ಉಸಿರಿನಲ್ಲಿ, ಅದು ಎಲ್ಲರ ಸ್ವತ್ತಾಗಬೇಕು. ಆತಂಕವೆಂಬುದು ದೂರಾಗಬೇಕು, ಒಂದು ಸಾಮಾನ್ಯ ಅರ್ಜಿ ಪಡೆಯಲು ಒಂದು ಕಛೇರಿಯ ಮುಂದೆ ದಿನಗಟ್ಟಲೇ ಬೇಡುವುದು ನಿಲ್ಲಬೇಕು.ಒಪ್ಪತ್ತು ಗಂಜಿ ಉಂಡರೂ ನಗು ನಗುತ್ತಾ ಇರು ಎನ್ನುವ ನಮ್ಮ ಹಿರಿಯರ ಮಾತು ಸತ್ಯ.ಆದರೇಕೋ ಇಂದಿಗೆ ಈ ಮಾತು ಸಂಪೂರ್ಣವಾಗಿ ಅನ್ವಯಿಸುತ್ತಿಲ್ಲ.ಗಂಜಿ ಉಂಡು ಮಲಗಬಹುದು, ಇಂದಿನ ಈ ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ಸುರಕ್ಷೆ ಇದೆಯಾ? ಬೇಕಿದ್ದಷ್ಟೂ ನೀರು ಸಿಗುವುದೇ?ಒಂದು ದಿನ ನೀರು ನಿಂತರೂ ಎಲ್ಲಿಂದ ತರುವುದೆಂಬ ಭಯ ಕಾಡುತ್ತದೆ.ದಿನ ದಿನಕ್ಕೆ ಹೆಚ್ಚುತ್ತಿರುವ ಹಣದುಬ್ಬರ ನಮ್ಮ ಜೀವಂತ ಸಮಾಧಿಯಾಗಿಸುವಂತೆ ಕಾಣುತ್ತದೆ.ಅಚ್ಚರಿಯೆಂದರೇ, ಐವತ್ತು ರೂಪಾಯಿಗೆ ನಾಲ್ಕು ಹಿಡಿ ತರಕಾರಿಯೂ ಬರುವುದಿಲ್ಲ, ಬೆಳೆದ ರೈತ ಸಾಲ ಮಾಡಿ ಸಾಯುವುದು ತಪ್ಪಿಲ್ಲ ಕೊಂಡು ತಿನ್ನುವವ ಬದುಕಲು ಆಗುತ್ತಿಲ್ಲ ಆದರೂ ಹಣವೆಲ್ಲಿ ಕೊಳೆಯುತ್ತಿದೆ?ಒಮ್ಮೆ ಆಲೋಚಿಸಿ ನೋಡಿ, ಸಕರಾತ್ಮಕತೆ ಬೇಡ ಸತ್ಯಕ್ಕೆ ಒರೆ ಹಚ್ಚಿ ನೋಡಿ, ಸಾಮಾನ್ಯ ಮನುಷ್ಯ ನಿಯತ್ತಿನಿಂದ ಬದುಕುವ ಒಂದೇ ಒಂದು ಮಾರ್ಗವೂ ನಮ್ಮ ಸಮಾಜದಲ್ಲಿ ಉಳಿದಂತೆ ಕಾಣುವುದಿಲ್ಲ. ಇಲ್ಲಿ ಬದುಕಬೇಕೆಂದರೇ ಮೋಸದ ದೊರೆಯಾಗಿರಬೇಕು, ಇನ್ನೊಬ್ಬನ ತಲೆಯ ಮೇಲೆ ಕೈ ಇಟ್ಟರೇ ಮಾತ್ರ ಬದುಕಲಾಗುವುದು. ಹಣ ಅಧಿಕಾರ ಬರುವುದು, ಕೇವಲ ಮೋಸಗಾರರಿಗೆ ಅತಿ ಹೆಚ್ಚು ಓದಿದವರು ಮಾತ್ರ ಜಾತಿ ಧರ್ಮ ಹಣದ ಸುಳಿಗೆ ಮಾಡಿ ಅಧಿಕಾರ ಗಿಟ್ಟಿಸುವುದು. ಆದರೂ ನಮ್ಮ ದೇಶ ಮಹಾನ್ ಎಂದು ಬೊಬ್ಬೆ ಹೊಡೆಯುವ ಮೋಸದ ದೇಶಭಕ್ತರಿಗೆ ಜಯವಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...