ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

04 September 2010

ದೂರಾಗುವ ಮುನ್ನಾ.......!!!

ಜೀವನದಲ್ಲಿ ಯಾವುದೂ ಶಾಶ್ವತವಲ್ಲವೆಂದು ಸದಾ ನಾವು ಬೊಬ್ಬೆ ವಾಸ್ತವದಲ್ಲಿ ಅದನ್ನು ಒಪ್ಪಲ್ಲು ಸಿದ್ದವಿರುವುದಿಲ್ಲ. ಸೋಲು ಗೆಲುವೆಂಬುದು ಅಷ್ಟೇ, ಶಾಶ್ವತವಲ್ಲ. ಆದರೇ ಅದನ್ನು ಓಪ್ಪುವುದಿಲ್ಲ. ಒಂದು ವಿಷಯದಲ್ಲಿ ಸೋತ ಕ್ಷಣದಲ್ಲಿ ಜೀವನವೇ ಸೋತಂತೆ ಅಥವಾ ಸತ್ತಂತೆ ಆಡುವುದರಿಂದ ಬರುವುದೇನು? ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬದುಕುವುದು ಮತ್ತು ಬದುಕನ್ನು ರೂಪಿಸಿಕೊಳ್ಳುವುದು ಬಹುಮುಖ್ಯವಾಗುತ್ತದೆ.ಹಾಗೆಯೇ ನಿನ್ನೆಯ ತನಕ ಇದ್ದ ನೌಕರಿ ಇಂದು ಬೆಳ್ಳಿಗ್ಗೆ ಏಳುವ ವೇಳೆಗೆ ಇಲ್ಲದಾದಾಗ ಅದನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ನಿನ್ನೆಯ ತನಕವಿದ್ದ ಜೀವದ ಗೆಳತಿ/ಗೆಳೆಯ ಇಂದು ನಮ್ಮಿಂದ ದಿಡೀರನೆ ದೂರಾದರೆ ಅದನ್ನು ಅರಗಿಸಿಕೊಳ್ಳಬೇಕಾಗುತ್ತದೆ. ದೂರಾಗುವ ವೇಳೆ ಬಹುಮುಖ್ಯ ಕುತೂಹಲ ತಲೆದೋರುತ್ತದೆ. ಅವನು ನನ್ನಿಂದ ದೂರಾಗಲು ಕಾರಣವೇನು? ಅಥವಾ ಅವಳು ನನ್ನನ್ನು ತಿರಸ್ಕರಿಸಲು ಕಾರಣವೇನು? ನಾವು ನಮ್ಮ ದೃಷ್ಟಿಯಲ್ಲಿ ನಾವು ಅವರನ್ನು ನಮಗಿಂತಲೂ ಹೆಚ್ಚು ಪ್ರೀತಿಸಿದ್ದೂ ಕೂಡ ಅವರು ನಮ್ಮನ್ನು ಬಿಟ್ಟು ಹೋಗುವ ಅನಿವಾರ್ಯತೆ ಇದ್ದದ್ದು ಹೇಗೆ. ಇದು ಕೇವಲ ಪ್ರೀತಿಸಿದವರಿಗೆ ಸಲ್ಲುವ ಪ್ರಶ್ನೆಯಲ್ಲ, ಮದುವೆಯಾದವರಿಗೂ, ಮದುವೆಯಾಗಿ ವರ್ಷಾನುಗಟ್ಟಲೇ ಸಂಸಾರ ಮಾಡಿದವರಿಗೂ ಕಾಡುವ ಪ್ರಶ್ನೆ.
ಒಬ್ಬರನ್ನು ಒಬ್ಬರು ಪ್ರೀತಿಸಿದರೇ ಸಾಯುವ ತನಕ ಅಥವ ಈ ಜನ್ಮ ಇರುವ ತನಕ ಜೊತೆಯಲ್ಲಿರಬೇಕೆಂಬುದು ಸಹಜವೆನಿಸಿದರೂ ಕೂಡ, ಅದು ಆಗಲೇ ಬೇಕೆಂಬುದು ಯಾವ ನ್ಯಾಯ. ಪ್ರೀತಿಸಿ ಮದುವೆಯಾದವನು, ಅಥವಾ ಅವಳು ಮದುವೆಯಾದ ಮರುದಿನವೇ, ಅಪಘಾತದಲ್ಲಿ ಕೈ ಕಾಲು ಕಳೆದು ಕೊಂಡರೇ, ಊನವಾದರೇ, ವಾಸಿ ಆಗದ ಖಾಯಿಲೆ ಬಿದ್ದರೇ ಅವರ ಜೊತೆಯಲ್ಲಿ ಇವರ ಜೀವನವೂ ಹಾಳಾಗಬೇಕೆ? ಇಬ್ಬರೂ ನೋವು ಪಡೆಯುವುದಕ್ಕಿಂತ ಒಬ್ಬರು ಸಂತೋಷದಿಂದಿರುವುದು ಮಾನವೀಯತೆಯಲ್ಲವೇ? ಅವರು ಬೇರೆ ಆಗಿ, ಜೀವನ ಸಾಗಿಸುವುದು ಉತ್ತಮವಲ್ಲವೇ? ಪ್ರಿತಿಸಿದ ತಕ್ಷಣ ಆ ವ್ಯಕ್ತಿ ನಮ್ಮವನು, ನನ್ನವನು ಎಂದು ಅಧಿಕಾರ ಸಾಧಿಸುವುದರ ಹಿಂದಿನ ಮರ್ಮವೇನು? ನಾವೆಷ್ಟೇ ಪ್ರೀತಿಸಿದರೂ ಅದು ಇನ್ನೊಬ್ಬರ ಉಸಿರು ಕಟ್ಟಿಸುವ ಪ್ರೀತಿ ಆಗಬಾರದಲ್ಲವೇ? ನಾವು ಹೆಳಿದನ್ನೇ ಕೇಳಬೇಕು, ಕರೆದೆಡೆಗೆ ಬರಬೇಕು? ಮಧ್ಯರಾತ್ರಿ, ಮುಂಜಾನೆ, ಮುಸ್ಸಂಜೆ ಎಷ್ಟೊತ್ತೆಂದರೇ ಅಷ್ಟೊತ್ತಿನ್ನಲ್ಲಿ ಸೆಕ್ಸ್ ಬೇಕು, ಮುದ್ದಾಡಬೇಕು, ಆರೋಗ್ಯ ಕೆಟ್ಟಿ ಬಿದ್ದಿದ್ದರೂ ಅವಳು ನನ್ನೊಡನೆ ತನ್ನನ್ನು ತೊಡಗಿಸಿಕೊಳ್ಳಬೇಕು. ಇದೆಂಥಹ ವಿಕೃತ ಮನಸ್ಸು ನಮ್ಮದು. ಪ್ರೀತಿಸುವ ಹುಡುಗಿಯಾದ ನೀನು ಅಷ್ಟೇ, ಅವನನ್ನು ಅರ್ಥೈಸಿಕೊಳ್ಳುವ ಮನಸ್ಸು ಮಾಡಬಾರದೇ? ಪ್ರೀತಿಸುವ ಎರಡು ಮನಸ್ಸುಗಳಲ್ಲಿ ಒಂದರಲ್ಲಿ ಪ್ರೀತಿ ಕುಗ್ಗುತ್ತಾ ಬರುತ್ತಿದ್ದೆ, ಅಥವಾ ಆಸಕ್ತಿ ಕಡಿಮೆಯಾಗುವುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರೀತಿ ಕ್ಷೀಣಿಸುವುದು ಅಪರಾಧವೇನಲ್ಲ. ಅದು ಸದಾ ಒಂದೇ ಬಗೆಯಾಗಿರುವುದಿಲ್ಲ, ಒಬ್ಬರೂ ಆಸಕ್ತಿ ಕಳೆದುಕೊಂಡಲ್ಲಿ, ಮತ್ತೊಬ್ಬರೂ ಕಳೆದುಕೊಳ್ಳುತ್ತಾರೆ, ತಕ್ಕ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರೀತಿ ಬರುವುದು ನಿಮಗೆ ಎಲ್ಲವೂ ಸಮರ್ಪಕವಾಗಿದ್ದಾಗ ಎನ್ನುವುದು ಕಟು ಸತ್ಯ, ಉದ್ಯೋಗ, ಸ್ವಂತ ಸಂಪಾದನೆ, ವಿದ್ಯಾಬ್ಯಾಸ, ಇದೆಲ್ಲವೂ ಇಲ್ಲದೇ ಇದ್ದಿದ್ದರೇ ಪ್ರೀತಿ ಸಿಗುವುದೇ? ಸೌಂದರ್ಯವಿಲ್ಲದ ಹುಡುಗಿಯನ್ನು ಪ್ರೀತಿಸಲು ಮುಂದೆ ಬರುವ ಗಂಡಸರು ಬಹಳ ಕಡಿಮೆ ಅಲ್ಲವೇ? ಆಂತರಿಕ ಪ್ರೀತಿ ಎಂದು ನಾವು ಎಷ್ಟೇ ಬೊಬ್ಬೆ ಹೊಡೆದರು, ವಾಸ್ತವಿಕತೆ ಬಹು ಮುಖ್ಯವೆನಿಸುತ್ತದೆ. ನೈಜತೆಗೆ ಹತ್ತಿರ ನಿಂತು ಚಿಂತನೆ ಮಾಡಬೇಕಾಗುತ್ತದೆ. ನಿಜವಾದ ಪ್ರೀತಿ ಏನು? ನಾವು ಪ್ರೀತಿಸುವವರನ್ನು ಸಂತೋಷದಿಂದಿಡುವುದು. ನಾವು ಇದ್ದರೂ ಇಲ್ಲದಿದ್ದರೂ ಅವರು ಸಂತೋಷದಿಂದಿರುವಂತೆ ನಾವು ಮಾಡಬೇಕು. ಅದಕ್ಕಾಗೆ ಪ್ರಯತ್ನಿಸಬೇಕು, ನನ್ನೊಡನೆ ಇರುವಾಗ ಮಾತ್ರ ಖುಷಿ ಆಗಿರು, ನಾನಿಲ್ಲದ ಮರು ಕ್ಷಣ ನೀನು ಸತ್ತು ಹೋಗು, ಹಾಳಾಗು ಎಂದು ಬಯಸಿದರೇ ಅದು ಪ್ರೀತಿ ಆಗುವುದೇ? ನಾನು ಹೇಳಿದ್ದನ್ನು ಕೇಳಿದರೇ ಮಾತ್ರ ಪ್ರ‍ೀತಿ ನನ್ನೊಡನೆ ಇದ್ದರೇ ಮಾತ್ರ ಪ್ರಿತಿ ಇಲ್ಲದಿದ್ದರೇ ನಿನ್ನನ್ನು ಸಾಯಿಸುತ್ತೇನೆ, ಆಸಿಡ್ ಹಾಕುತ್ತೇನೆ ಎನ್ನುವ ಕ್ರೌರ್ಯವನ್ನು ಪ್ರೀತಿ ಎನ್ನವುದೇಗೆ? ಅದು ಪ್ರೀತಿಯಾ? ಪ್ರೀತಿಯಲ್ಲಿ ದೈವಿಕತೆಯನ್ನು ಕಾಣಬೇಕು, ಪ್ರೀತಿ ಇರುವುದು ದೇವರನ್ನು ಕಾಣಲು, ನಮ್ಮನ್ನು ಪ್ರೀತಿಸಿದವನ/ಳ ಸಂತೋಷವನ್ನು ಬಯಸದ ನಾವು ನಮ್ಮ ಸ್ವಾರ್ಥಕ್ಕೆ ಅವರನ್ನು ಬಲಿ ಪಶು ಮಾಡುವುದು ನ್ಯಾಯವೇ?
ಕೇವಲ ದೇಶದ ಹಿತಕ್ಕಾಗಿ, ಪ್ರಾಣ ಕೊಡುವ ತಮ್ಮ ಸರ್ವ ಸಂತೋಷವನ್ನೇ ಮುಡುಪಾಗುವ ಸೈನಿಕರು ನಮಗೆ ನೆನಪೇ ಆಗುವುದಿಲ್ಲವಲ್ಲವೇ? ಲಾಟಿನ್ ಅಮೇರಿಕಾಕ್ಕೆ ಮೊದಲಿನಲ್ಲಿ ಹೋದ ಕ್ರೈಸ್ತ ಮತ ಪ್ರಚಾರಕರನ್ನು ಅಲ್ಲಿನ ಬುಡಕಟ್ಟು ಜನರು ಹೊತ್ತುಕೊಂಡು ಹೋಗಿ ತಿನ್ನುತ್ತಿದ್ದರೂ, ಆದರೂ ಎದೆಗುಂದದೇ ಹೋಗಿ ಅವರನ್ನು ನಾಗರೀಕರನ್ನಾಗಿಸಿದರು. ಅವರಲ್ಲಿ ಯಾವ ಸ್ವಾರ್ಥವಿತ್ತು, ಇಡೀ ಜನಾಂಗವನ್ನೆ ಅಲ್ಲ ಮನುಕುಲವನ್ನೇ ಪ್ರೀತಿಸಿದವರು, ಅವರೆಂದು ಸ್ವಾರ್ಥ ಈಡೇರಿಸಿಕೊಳ್ಳಲಿಲ್ಲ. ಮತ್ತೆ ನಾವೇಕೆ, ಸ್ವಾರ್ಥದ ಪ್ರೀತಿಯ ಗುಲಾಮರಾಗಬೇಕು?ಒಬ್ಬ ವ್ಯಕ್ತಿಯನ್ನು ಪ್ರೀತಿಸಿದ ಒಂದು ಮನಸ್ಸನ್ನು ವಶ ಪಡಿಸಿಕೊಳ್ಳಲು ಸಾಯುವವರೆಗೂ ಚಿಂತಿಸುವ ನಾವು, ನಮ್ಮನ್ನು ಸಾಕಿ ಸಲಹಿದ ತಂದೆ ತಾಯಿಯರ ಬಗೆಗೆ ಏಕೆ ಅಂಥಹ ನಿಲುವು ಬರುವುದಿಲ್ಲ. ವಿದ್ಯಾವಂತರಾಗಿ ವ್ಯವಸ್ಥೆ, ಈ ದರಿದ್ರ ಸಮಾಜ ನಮಗೆ ಕೊಟ್ಟ ಕಷ್ಟಗಳಿಗಿಂತ ಹೆಚ್ಚು ಕಷ್ಟವನ್ನು ನಾವು ಪ್ರೀತಿಸಿದವರು ಕೊಟ್ಟಿದ್ದಾರೆಯೇ? ನಾನು ನಾಲ್ಕಾರು ವರ್ಷ ಪ್ರೀತಿಸಿದ ಹುಡುಗಯನ್ನು ನಮ್ಮ ತಂದೆ ತಿರಸ್ಕರಿಸಿದರೇ, ಇವಳು ನನ್ನನ್ನು ತಿರಸ್ಕರಿಸಿ ಹೊರಟರೇ, ತಂದೆಗೂ ಇವಳಿಗೂ ವ್ಯತ್ಯಾಸವೇನು? ಇಬ್ಬರೂ ಸ್ವಾರ್ಥಿಗಳೇ ತಾನೆ? ನಾನು ಹುಟ್ಟಿಸಿ ಬೆಳೆಸಿದ ಮಗ ನಾನು ಹೇಳಿದಂತೆ ಕೇಳಬೇಕು, ಅವನು ನನ್ನ ಗುಲಾಮವೆನ್ನುವಂತೆ ತಂದೆ ಹೇಳಿದರೇ, ಜೀವದ ಗೆಳತಿಯಾದವಳು, ನೀನು ನನ್ನ ಜೀತದಾಳು ನಾನು ಹೇಳಿದಂತೆ ನೀನು ಕೇಳಬೇಕೆಂದರೇ, ಇಬ್ಬರೂ ಸ್ವಾರ್ಥದ ಮತ್ತೊಂದು ಮುಖವೆನಿಸುವುದಿಲ್ಲವೇ. ಪ್ರೀತಿಸಿದವನ ಸುಖವನ್ನು ಬಯಸುವುದೆಂದರೇ ಇದೇನಾ? ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅವನದೇ ಆದ ಅವನು ಇರುತ್ತಾನೆ. ಅದನ್ನು ಯಾರು ಬಲವಂತದಿಂದ ಬದಲಾಯಿಸಬಾರದು. ಯಾವುದು ಶಾಶ್ವತವಲ್ಲದ ಬದುಕಿನ್ನಲ್ಲಿ ನಮ್ಮ ಪ್ರೀತಿ ನಾವು ಪ್ರೀತಿಸಿದವರು ಶಾಶ್ವತವೆಂದರೇ ಮೂರ್ಖತನದ ಪರಮಾವಧಿ ಎನಿಸುವುದಲ್ಲವೇ? ಕೊಡುವುದರಲ್ಲಿ ಇರುವ ಸುಖ ಗುಲಾಮಗಿರಿಯಲ್ಲಿ ಇರುವುದಿಲ್ಲ, ಕೊಟ್ಟಷ್ಟು ಸಿರಿವಂತರಾಗುತ್ತೇವೆ. ಕೊರಗಿದಷ್ಟು ಚಿಕ್ಕವರಾಗುತ್ತೇವೆ.

1 comment:

  1. ಹರೀಶ್ ಅವರೇ ನಿಜವಾಗಿಯೂ ಅದ್ಭುತ ಲೇಖನ....

    ನೀವು ಹೇಳಿದ ಕೆಲವು ಸಾಲುಗಳು ನನಗೆ ಒಪ್ಪಲು ಏಕೋ ಸಾಧ್ಯವಾಗುತ್ತಿಲ್ಲ.... ನನ್ನ ಪ್ರಕಾರ ಪ್ರೀತಿಸಿದ ಮಾತ್ರಕ್ಕೆ ಯಾವಾಗಲು ತಾನು ಕರೆದಾಗ ಬರಬೇಕು, ಗುಲಾಮರಂತೆ ಇರಬೇಕೆಂದು ಯಾವ ನಿಜವಾದ ಪ್ರೇಮಿಯು ಬಯಸುವುದಿಲ್ಲ....ನನಗೆ ಅನಿಸಿದ್ದು ನಿಜವಾಗಿ ಪ್ರೀತಿಸುವ ಹುಡುಗ/ಹುಡುಗಿ ಎಂದು ಕೂಡ ತನ್ನ ಪ್ರೇಮಿ ಯಾವಾಗಲು ತನ್ನ ಜೊತೆ ಇರಬೇಕೆಂದು ಬಯಸುತ್ತಾರೆ ಅದನ್ನು ಗುಲಾಮಗಿರಿ ಎಂದು ಕರೆಯಲಾಗದು.....ಹಾಗೆಯೆ ಆತನ/ಅವಳ ಪ್ರೇಮ ನಿಜವಗಿದ್ದಾಗ ಮಾತ್ರ ಅವರ ಪ್ರೀತಿಗೆ ಯಾವುದೇ ಪರೀಕ್ಷೆಗಳು ಎದುರಾಗುವುದಿಲ್ಲ, ಒಂದು ವೇಳೆ ಎದುರಾದರು ಜೊತೆಯಾಗಿ ಎದುರಿಸುವ ಸಾಮರ್ಥ್ಯ ನಿಜವಾದ ಪ್ರೀತಿಗಿರುತ್ತದೆ ಎಂಬುದು ನನ್ನ ಅನಿಸಿಕೆ ...ಪ್ರೀತಿಯ ವಿಷಯದಲ್ಲಿ ಎರಡು ಕಡೆಯಿಂದ ಸಮತೋಲನ ಅಗತ್ಯವಾಗುತ್ತದೆ ಕೇವಲ ಒಂದು ಕಡೆ ಇಂದ ನಿಜವಾಗಿ ಪ್ರೀತಿಸಿ ಮತ್ತೊಂದು ಕಡೆ ಇಂದ ಕೇವಲ ಸಮಯಕ್ಕೆ ತಕ್ಕಂತೆ ವರ್ತಿಸಿ, ಪ್ರೀತಿಸುವ ಜೋಡಿಗಳ ವಿಷಯಕ್ಕೆ ಮಾತ್ರ ನೀವು ಹೇಳಿದ ಗುಲಾಮಗಿರಿ ಎಂಬ ಮಾತು ಸತ್ಯವಾಗುತ್ತದೆ ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ ....    ನಿಮ್ಮ ಅದ್ಭುತ ಲೇಖನಕ್ಕೆ ಧನ್ಯವಾದಗಳು.....

    ReplyDelete