ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

14 September 2010

ಮೋಜಿನ ಬಲೆಯಲ್ಲಿ ಉಢಾಫೆತನವೇ ಅಧಿಪತಿ!!!!

ನಾನು ಮೊದಲೇ ಹೇಳಿದ ಹಾಗೆ, ನಾನು ಸ್ವಲ್ಪ ತಲೆಕೆಟ್ಟವನು, ನನ್ನ ಸ್ನೇಹಿತರು ನನಗಿಂತ ಹುಚ್ಚರು. ನಮ್ಮೆಲ್ಲರಲ್ಲಿ ಒಂದೇ ಮನಸ್ಸಿರುವುದು, ಓಲ್ಡ್ ಮಂಕ್ ಕುಡಿಯುವುದರಲ್ಲಿ, ಗಾಡಿ ಓಡಿಸುವುದರಲ್ಲಿ, ಸಿಕ್ಕ ಸಿಕ್ಕ ಹಾಗೆ ಸುತ್ತಾಡುವುದರಲ್ಲಿ. ನಾನೊಬ್ಬನು ಮಾತ್ರ ಸೋಮಾರಿ, ಮೈಗಳ್ಳ. ಮಿಕ್ಕಿದವರು ಕೆಲಸದ ವಿಷಯ ಬಂದಾಗ ನಿಪುಣರು ಮತ್ತು ಶ್ರಮಜೀವಿಗಳು. ಅದಕ್ಕೆ ಅವರೆಲ್ಲರೂ ಉದ್ದಾರವಾಗಿದ್ದಾರೆ. ನಾನು ಉದ್ದಾರವೂ ಇಲ್ಲ ಉದ್ದವೂ ಇಲ್ಲ ಇದ್ದ ಹಾಗೇ ಇದ್ದೇನೆ. ಬಹಳ ದಿನವಾಗಿದೆ, ಟ್ರೆಕಿಂಗ್ ಹೋಗುವುದಕ್ಕೆ ಈಗ ಮಳೆಗಾಲ, ನಾವೊಂದು ಲಾಂಗ್ ರೈಡ್ ಹೋದರೇ ಹೇಗೆಂದು ನಮ್ಮ ತಂಡದ ಏಕ ಮಾತ್ರ ನಾಯಕ ನಂದ ಹೇಳಿದ. ಅದಕ್ಕೆ ನಮ್ಮ ತಂಡದ ಪ್ರಧಾನ ಕಾರ್ಯದರ್ಶಿಯಾದ ವಿಜಿ ಒಡನೇಯೇ ಒಪ್ಪಿಗೆ ನೀಡಿದ. ಮುಂದಿನವಾರ ಹೊರಡುವುದೆಂದು ಎರಡೇ ನಿಮಿಷದಲ್ಲಿ ತೀರ್ಮಾನವಾಯಿತು. ಎಲ್ಲಿಗೆ ಎಂದು ಪ್ರಶ್ನೆ ಬಂದಾಗ ಕರ್ನಾಟಕ ತಮಿಳುನಾಡು ಎಲ್ಲಾ ರಾಜ್ಯದ ಭೂಪಟ ನೋಡಿ, ಕಡೆಗೆ ಸೋಮವಾರಪೇಟೆ ಸುತ್ತಾ ಮುತ್ತಾ ಎಂದರೇ ಪುಷ್ಪಗಿರಿ ಸುತ್ತಲಿನ ಜಲಪಾತಗಳನ್ನು ನೋಡುವುದೆಂದು ಆಯಿತು. ಕಡೆ ಕ್ಷಣದ ಬದಲಾವಣೆಯಲ್ಲಿ ವಿಜಿ ಊರಿಗೆ ಹೋಗಿ, ನಾನು ಮೈಸೂರಿನಿಂದ ಊರಿಗೆ ಬರುವುದಾಗಿ ಹೇಳಿದ್ದರಿಂದ, ನಂದ ಒಬ್ಬನೇ ಊರಿನ ತನಕ ಬರುವಂತೆ ಆಯಿತು. ಒಬ್ಬನೇ ನಂದ ಬರುವುದು ಕನಸಿನಲ್ಲಿಯೂ ಇಲ್ಲ, ಅವನು ಯಾವುದಾದರೂ ಒಂದು ಮಿಕವನ್ನು ಹುಡುಕಿ ಬರುತ್ತಾನೆಂಬುದು ನಮಗೆ ತಿಳಿದಿರುವ ವಿಷಯ. ಈ ಪ್ರವಾಸದ ಮಿಕ ನಮ್ಮ ಕುಮಾರ್. ರಾತ್ರಿ ಹತ್ತು ಗಂಟೆಗೆ ಕುಮಾರನನ್ನು ಕರೆದುಕೊಂಡು ಹೊರಟ ನಂದ ರಾತ್ರಿಯಿಡಿ ಗಾಡಿ ಓಡಿಸಿಕೊಂಡು ಎರಡು ಗಂಟೆಯ ವೇಳೆಗೆ ವಿಜಿ ಊರಿಗೆ ಬಂದ. ಅಲ್ಲಿಂದ ರಾಜು, ವಿಜಿ, ಕುಮಾರ್ ಮತ್ತು ನಂದ ಕೂಡಿಗೆಗೆ ಬಂದರು. ನಾನು ರಾತ್ರಿ ಊರಿಗೆ ಹೋಗಲು ಬಸ್ ಸಿಗದೇ ಮಂಜೇಶನ ಮನೆಯಲ್ಲಿ ಉಳಿದಿದ್ದೆ. ಮುಂಜಾನೆ ನಾಲ್ಕು ಗಂಟೆಗೆ ಫೋನ್ ಮಾಡಿ ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರುವುದಾಗಿ ಹೇಳಿದರು. ನಾನು ಆ ಸಮಯದಲ್ಲಿ ಎದ್ದು ತಯಾರಾಗಿ, ಮಂಜೇಶನ ಬೈಕ್ ತೆಗೆದುಕೊಂಡು ಮುಖ್ಯರಸ್ತೆಗೆ ಬಂದೆ. ಬಂದು ಹತ್ತು ನಿಮಿಷ ಕಳೆಯುವ ಹೊತ್ತಿಗೆ ಆ ಊರಿನ ನಾಯಿಗಳೆಲ್ಲಾ ನನ್ನ ವಿರುದ್ದ ಯುದ್ದ ಸಾರಿದವು.
ಪ್ರಾಂತೀಯ ಕಲಹ ಬೇಡ, ನಾನು ಹೊರಗಿನವನು ಅವರ ಊರಿನ ವಿಷಯಕ್ಕೆ ತಲೆ ಹಾಕುವುದು ಸರಿಯಿಲ್ಲವೆಂದು ನಾಯಿಗಳಿಗೆ ಶರಣಾಗದೇ ಗಾಡಿ ಮುನ್ನೆಡೆಸಿದೆ. ಗಾಡಿ ತೆಗೆಯುವಾಗಲೇ ಮಳೆ ಉದುರುತ್ತಿತ್ತು. ಅಲ್ಲಿಂದ ಇಪ್ಪತ್ತು ಕೀಮೀ ಸೋಮವಾರಪೇಟೆ ತಲುಪಿ ಕಾಫಿ ಕುಡಿಯುವಷ್ಟರಲ್ಲಿ ಬೆಳಗಾಯಿತು. ಕಾಫಿ ಕುಡಿದ ಮರುಕ್ಷಣವೇ, ಮಳೆ ಸುರಿಯಲಾರಂಬಿಸಿತು. ಜಲಪಾತ ಪ್ರವಾಸ ಅಥವಾ ವಾಟರ್ ಫಾಲ್ಸ್ ಟೂರಿಸಂ ಎಂದು ಹೆಸರಿಟ್ಟಿದ್ದರಿಂದ ಮಳೆಯಲ್ಲಿ ನೆನೆಯುವುದು ಅನಿವಾರ್ಯವಾಯಿತು. ಇದ್ದ ಐವರಲ್ಲಿ ಮೂವರು ಶುದ್ದ ದಂಡಪಿಂಡಗಳು ಎಲ್ಲಿ ಹೇಗೆ ಬೇಕಿದ್ದರೂ ಸರಿ ಎನ್ನುವ ಮನಸ್ಸಿನವರಿದ್ದರೂ, ರಾಜು ಮತ್ತು ಕುಮಾರನಿಗೆ ಇದು ಹೊಸದು. ನಂದನ ತಲೆಹರಟೆಯಿಂದಾಗಿ ಅವರು ಅನುಭವಿಸಲೇ ಬೇಕಾದ ಪರಿಸ್ಥಿತಿ ಬೇರೆ ಇತ್ತು. ನಾವು ಮಳೆಯಲ್ಲಿಯೇ ಹೋಗುವುದಾಗಿ ನಿರ್ಧರಿಸಿ ಹೋಗುವಾಗ ನಿಜಕ್ಕೂ ಆನಂದಮಯ ವಾತವರಣವಿತ್ತು. ಅಲ್ಲಿಂದ ೨೦ಕೀಮೀ ದೂರ ಕ್ರಮಿಸಿ ಭಟ್ಟರ ಮನೆಯಿಂದ ಬಲ ತಿರುಗಿ ಹೊರಟರೆ ಮುಂದಿನ ಆರು ಕೀಮೀ ಒಳಗೆ ಸಿಗುವುದೇ, ಮಳ್ಳಳ್ಳಿ ಜಲಪಾತ. ನಾವು ಬೈಕ್ ಗಳನ್ನು ನಿಲ್ಲಿಸಿ ಸ್ವಲ್ಪ್ ದೂರ ನಡೆದು ಹೋಗುವಾಗ ದೂರದಿಂದಲೇ ಅದ್ಬುತವಾದ ಜಲಪಾತ ನಮ್ಮ ಕಣ್ಮುಂದೆ ಧುಮ್ಮಿಕ್ಕುತ್ತಿತ್ತು. ನಿಜಕ್ಕೂ ನಾವೆಲ್ಲರೂ ಅಂದು ಬೆಳ್ಳಿಗ್ಗೆ ಹಿಂದಿನ ರಾತ್ರಿಯ ನೋವುಗಳನ್ನೆಲ್ಲಾ ಮರೆತೆವು. ಸ್ವಲ್ಪವೂ ಕಲುಷಿತಗೊಳ್ಳದೇ ಪ್ರವಾಸಿಗಳಿಂದ ಮಲೀನಗೊಳ್ಳದೇ ಸರಳ ಸುಂದರವಾಗಿ ನಿಸರ್ಗದ ಮಡಿಲಲ್ಲಿ ಧುಮ್ಮಿಕ್ಕುತ್ತಿದ್ದ ಜಲಪಾತ. ಹಾಲಿನಂತೆಯೇ ಕಾಣುತ್ತಿತ್ತು. ನಾವು ಅಲ್ಲಿನ ನೀರಿನ ಬಗೆಗೆ, ನಿಸರ್ಗದ ಬಗೆಗೆ ನೂರಾರು ಚರ್ಚೆಗಳನ್ನು ಮಾಡಿ ನಾವೇ ಇದೆಲ್ಲವನ್ನು ಉಳಿಸಲು ಬೆಳೆಸಲು ಜನ್ಮವೆತ್ತಿದ ವೀರರಂತೆ ಮಾತನಾಡಿ ಕೊನೆ ಜೇಬಿನಲ್ಲಿದ ಸಿಗರೇಟು ಹಚ್ಚಿಸಿದೆವು.ಜಲಪಾತದ ಅಡಿಯಲ್ಲಿ ಸುಮಾರು ಇನ್ನೂರು ಅಡಿಗಳಷ್ಟು ದೂರ ನಿಂತರೂ ನೀರಿನ ತುಂತುರು ನಮಗೆ ಎರಚಲು ಬೀಳುತ್ತಲೇ ಇತ್ತು. ಇಂಥಹ ಮಧುರ ಕ್ಷಣಗಳು ಕ್ಷಣಿಕವಾದರೂ ಆ ಕ್ಷಣದಲ್ಲಿ ನಮ್ಮನ್ನು ಅವು ಬಲು ದೂರ ಕರೆದೊಯ್ಯುತ್ತವೆ. ಸ್ವರ್ಗವೆಂಬುದರ ಕಲ್ಪನೆಯಿಲ್ಲದಿದ್ದರೂ ಇವೆಲ್ಲವೂ ಸ್ವರ್ಗದ ಪ್ರತಿರೂಪವೆನಿಸುತ್ತದೆ. ನಾವು ಕಳೆಯುವ ಒಂದೊಂದು ಕ್ಷಣವೂ, ಕಳೆದ ನಂತರವೂ ನಮ್ಮೊಳಗೆ ಆ ಕ್ಷಣಗಳು ಸುಮಧುರವೆನಿಸುತ್ತಿರುತ್ತವೆ. ಜಲಪಾತಗಳೆಲ್ಲವೂ ನೀರು ಧುಮುಕುತ್ತಿದ್ದರೂ, ಎಲ್ಲಾ ಜಲಪಾತಗಳು ನಮಗೆ ಒಂದೇ ರೀತಿಯ ಅನುಭವ ನೀಡುವುದಿಲ್ಲ. ಸನ್ನಿವೇಶಗಳು ಮತ್ತು ನಾವು ಹೋಗುವ ಕಾಲ ಬಹಳ ಪ್ರಮುಖವಾಗುತ್ತವೆ. ಮಳೆಗಾಲದಲ್ಲಿ ಯಾವುದೇ ಜಲಪಾತವೂ ಹೆಚ್ಚು ಸುಂದರವಾಗಿರುತ್ತವೆ. ಅದರಲ್ಲಿಯು ಜನಸಂದಣಿ ಇಲ್ಲದ ಸ್ಥಳಗಳಿಗೆ ನೀವು ಭೇಟಿ ನೀಡಿದ್ದೇ ಆದರೇ ಅದು ಕೊಡುವ ಖುಷಿಯೇ ಬೇರೆ ಇರುತ್ತದೆ. ನಾವು ಮಳ್ಳಳ್ಳಿಗೆ ಹೋದಾಗಲೂ ಅಷ್ಟೇ, ಅಲ್ಲಿ ಜನರೇ ಇಲ್ಲದೇ ಇದ್ದುದ್ದರಿಂದ ಇಡೀ ಜಲಪಾತವೇ ನಮ್ಮದೆನ್ನುವ ಭಾವನೆ ಮೂಡುತ್ತಿತ್ತು. ಇದು ನಮ್ಮನ್ನು ಮನಸಾರೆ ಆನಂದಿಸಲು ಉತ್ತೇಜಿಸಿತ್ತು. ಅಲ್ಲಿ ಸಲ್ಪ ಸಮಯ ಕಳೆದು ಮತ್ತೇ ಮೇಲಕ್ಕೆ ಬಂದೆವು. ಬೆಂಗಳೂರಿನಿಂದ ಅಲ್ಲಿಗೆ ಬಂದ ಒಂದು ಗುಂಪು ರಾತ್ರಿ ಇಡೀ ಅಲ್ಲಿಯೇ ಕುಡಿದು ಮಲಗಿದ್ದರು. ಹೊರ ಊರಿಗೆ ಅದು ಅರಿವಿಲ್ಲದ ಊರಿಗೆ ಮೊದಲ ಬಾರಿಗೆ ಹೋದಾಗ ಹೀಗೆ ಕುಡಿದು ಮಲಗುವುದರಿಂದಾಗುವ ಪರಿಣಾಮ ಅವರಿಗೆ ತಿಳಿದಿರಲಿಲ್ಲ. ಆ ಸ್ಥಳಕ್ಕೆ ರಾತ್ರಿ ಒಂದೇ ಒಂದು ಆನೆ ಬಂದಿದ್ದರೂ ಅವರ ಗತಿ ಹೇಗಿರುತ್ತಿತ್ತು?ಅಲ್ಲಿಯ ತನಕ ಪ್ರವಾಸ ಬಂದಿದ್ದ ಅವರುಗಳ ಬಳಿ ಒಂದೇ ಒಂದು ಕ್ಯಾಮೇರಾ ಇರಲಿಲ್ಲ.
ಅಲ್ಲಿಂದ ಬಿಟ್ಟು, ಪುಷ್ಪಗಿರಿಯೆಡೆಗೆ ನಡೆದೆವು, ಭಟ್ಟರ ಮನೆಯಿಂದ ಮುಂದಕ್ಕೆ ಹತ್ತು ಕೀಮೀ ಹೋಗುವಾಗ, ಬೆಟ್ಟದ ಮೇಲೆ, ಇತ್ತೀಚೆಗಷ್ಟೇ ನಿರ್ಮಿಸಿರುವ ಮಲ್ಲಿಕಾರ್ಜುನ ದೇವಸ್ಥಾನ ಕಾಣಸಿಗುತ್ತದೆ. ದೇವಸ್ಥಾನ ಹಿಂದೆ ಇದ್ದು, ಇತ್ತೀಚೆಗೆ ಅದನ್ನು ಜೀರ್ಣೋದ್ದಾರ ಮಾಡಿದ್ದಾರೆ. ಬಹಳ ವಿಸ್ತಾರವಾಗಿ ಕಟ್ಟಿದ್ದಾರೆ. ಭಕ್ತಾದಿಗಳು ತಂಗುವುದಕ್ಕೆ ಸ್ಥಳಾವಕಾಶ ಮಾಡಲಾಗಿದೆ. ದೇಣಿಗೆ ನೀಡಿದವರ ಪಟ್ಟಿ ನೋಡುತ್ತಿರುವಾಗ ನನಗೆ ಮೊದಲು ಅಚ್ಚರಿಯೆನಿಸಿತು. ಅಲ್ಲಿ ಬಹಳಷ್ಟು ಮಂದಿ ಮುಸ್ಲಿಮರು ದೇಣಿಗೆ ನೀಡಿದ್ದರು. ಅದು ಇಪ್ಪತ್ತೈದು ಸಾವಿರ ರೂಗಳಿಗಿಂತ ಹೆಚ್ಚು ನೀಡಿದ್ದರು. ಕಾರಣ ಹುಡುಕುತ್ತಿರುವಾಗ ಅದು ದೇವ ಭಕ್ತಿಯಿಂದಲ್ಲದೇ, ಆ ಹೆಸರಿನವರೆಲ್ಲರೂ ಟಿಂಬರ್ ವ್ಯಾಪಾರಿಗಳು. ಅವರು ಆ ಅರಣ್ಯ ನಾಶಕ್ಕೆ ನೇರ ಹೊಣೆಯಾಗಿದ್ದರಿಂದ ಈ ರೀತಿಯ ಸಹಾಯಾರ್ಥ ಮಾಡಿದ್ದರು. ಆ ದೇವಸ್ಥಾನದಲ್ಲಿ ಒಂದು ಅಜ್ಜಿ ಇದ್ದರು, ಅವರು ಅದನ್ನು ಗುಡಿಸುವುದು ತೊಳೆಯುವುದು ಅವರ ಕೆಲಸ. ಇಂಥಹ ದಟ್ಟ ಕಾಡಿನಲ್ಲಿ ಅವರೊಬ್ಬರೇ ಇರುವುದು ನನಗೆ ಒಂದು ಬಗೆಯ ಕರುಣೆ ತರಿಸಿದರೇ ಮತ್ತೊಂದೆಡೆಗೆ ಅವರ ಬಗ್ಗೆ ಹೆಮ್ಮೆ ಎನಿಸಿತು. ವಯಸ್ಸಾದ ಅದೆಷ್ಟೊ ಜನರು ಕಾಡಿನಲ್ಲಿ, ಕುಗ್ರಾಮಗಳಲ್ಲಿ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿದ್ದಾರೆ. ಎಲ್ಲವೂ ಇದ್ದು ನಾವು ಬದುಕಲು ಹೆಣಗುತ್ತಿರುವಾಗ ಇಂಥವರ ಕಷ್ಟ ಅದನ್ನೆಲ್ಲಾ ಮೀರಿ ನಿಲ್ಲುತ್ತದೆ. ಅಪರಿಚಿತರನ್ನು ಅವರು ಕಂಡು ಮಾತನಾಡಿಸುವ ರೀತಿ ನನಗಂತೂ ಬಹಳ ಮೆಚ್ಚುಗೆಯಾಯಿತು. ಅವರು ನಮಗೆ ಹಲವಾರು ಉತ್ತಮ ಸಲಹೆ ನೀಡಿ, ನಾವು ಹೇಗೆ ಹೋಗಬಹುದು, ಎಲ್ಲಿಗೆ ಹೋಗಬಹುದು ಏನೆಲ್ಲಾ ನೋಡಬಹುದು ಎಂದೆಲ್ಲಾ ತಿಳಿಸಿದರು. ನಾವು ಪುಷ್ಪಗಿರಿ ಬೆಟ್ಟ ಇಳಿದು, ಬಿಸಿಲೆ ಮಾರ್ಗವಾಗಿ ಹೋಗುವುದೆಂದು ತೀರ್ಮಾನಿಸಿದೆವು. ಅರ್ಧ ಗಂಟೆಯ ಬಳಿಕ ಜಡಿ ಮಳೆ ಶುರುವಾಯಿತು, ನಿಲ್ಲುವುದಕ್ಕೆ ಒಂದೇ ಒಂದು ಮನೆಯೂ ಇಲ್ಲ, ಮಳೆಯಲ್ಲಿಯೇ ಗಾಡಿ ಓಡಿಸಿದೆವು. ಮಳೆ ತಡೆಯಲಾರದೇ, ಒಂದು ದನ ಕಟ್ಟುವ ಕೊಟ್ಟಿಗೆ ಬಳಿಗೆ ಬಂದಾಗ ಅದರೊಳಗಿದ್ದ ಸೊಳ್ಳೆಗಳು, ಜಿಗಣೆಗಳು ನಮ್ಮನ್ನು ಅಲ್ಲಿಂದಲೂ ಓಡಿಸಿ, ಮಳೆಯಲ್ಲಿಯೇ ಹೋಗುವಂತಾಯಿತು. ಬಿಸಿಲೆ ಊರನ್ನು ತಲುಪುವ ವೇಳೆಗೆ ನಾವು ಸಂಪೂರ್ಣ ಒದ್ದೆಯಾಗಿದ್ದೆವು. ಮಳೆಯಲ್ಲಿ ನೆನೆದ ನಂತರ ಕೈಕಾಲುಗಳು ಮರಗಟ್ಟಿ ಹೋಗಿದ್ದವು. ಬಿಸಿಲೆಯಲ್ಲಿ, ಊಟ ಮಾಡಿ ಆಳಿಗೊಂದು ನಾಲ್ಕು ಸಿಗರೇಟು ಸೇದಿ, ಕಾಫಿ ಕುಡಿದು ಹೊರಟೆವು. ಊಟಕ್ಕೆಂದು ಬಿಸಿಲೆಯಲ್ಲಿ ನಿಂತಾಗ, ನಾವು ಹೋಗಬೇಕಿದ್ದ ಸುಬ್ರಹ್ಮಣ್ಯ ಕಡೆಯಿಂದ ಆರು ಜನರು ಬೈಕಿನಲ್ಲಿ ನಾವಿದ್ದ ಹೋಟೆಲಿನಲ್ಲಿ ಊಟ ಮಾಡಲು ನಿಲ್ಲಿಸಿದ್ದರು. ಅವರು ನಾವು ಆಕಡೆಗೆ ಹೊರಟಿದ್ದೇವೆ ಎಂದಾಗ, ಆ ರಸ್ತೆಯಲ್ಲಿ ಹೋಗಲು ಸಾಧ್ಯವೇ ಇಲ್ಲ, ದೊಡ್ಡ ಗುಂಡಿಗಳಿವೆ, ಬಂಡೆಗಳೇ ರಸ್ತೆಯಲ್ಲಿ ಬಿದ್ದಿವೆ, ರಸ್ತೆ ತುಂಬಾ ನೀರು ತುಂಬಿದೆ ಎಂದರು. ಮತ್ತೊಬ್ಬರು, ಸುಂದರ ತಾಣಗಳಿವೆ, ಝರಿಗಳಿವೆ, ತುಂಬಾ ಆನಂದಿಸುವಿರಿ ಎಂದರು. ಇಂಥಹ ಮಾತುಗಳು ಸರ್ವೇ ಸಾಮಾನ್ಯ ನಮಗೆ ಕೆಮ್ಮಣ್ಣುಗುಂಡಿಗೆ ಹೋದಾಗಲೂ ಬಂದಿದ್ದ ರಸ್ತೆಗಿಂತ ಎಷ್ಟೋ ಉತ್ತಮವಾಗಿದ್ದ ರಸ್ತೆಯನ್ನು ಘೋರವೆಂದಿದ್ದರು. ಅಪರೂಪಕ್ಕೊಮ್ಮೆ ಹೊರಕ್ಕೆ ಬಂದರೇ ಆಗುವ ಸನ್ನಿವೇಶಗಳು ಹೀಗೆಯೆ.
ನಾವು ಮುಂದಕ್ಕೆ ಬಂದಾಗ ಮಳೆಯಿಂದಾಗಿ ಮೋಡ ಮುಚ್ಚಿದ್ದರಿಂದ, ಏನೂ ಕಾಣಿಸುತ್ತಿರಲಿಲ್ಲ, ರಸ್ತೆ ಕೆಟ್ಟದ್ದಾಗಿದ್ದರೂ ಅವರು ಹೇಳಿದ್ದಷ್ಟು ಮಟ್ಟಕ್ಕೇನೂ ಇರಲಿಲ್ಲ. ಅಂತೂ ಇಂತೂ ಕಷ್ಟಪಟ್ಟು ದೇವರನ್ನು ಬೇಡಿಕೊಂಡು ಸುಬ್ರಹ್ಮಣ್ಯ ತಲುಪಿದೆವು. ನಾನು ಓಡಿಸುತ್ತಿದ್ದ ಬೈಕಿನ ಟೈರ್ ಸಂಪೂರ್ಣ ಫ್ಲಾಟ್ ಆಗಿತ್ತು ಯಾವುದೇ ಕ್ಷಣದಲ್ಲಿಯೂ ಪಂಚರ್ ಆಗಬಹುದಿತ್ತು ಅದು ಅಲ್ಲದೇ, ಗಾಡಿ ಕಂಡಿಷನ್ ಕೂಡ ಇರಲಿಲ್ಲ. ಕಷ್ಟಪಟ್ಟು ಓಡಿಸಬೇಕಾಗಿತ್ತು. ಸುಬ್ರಹ್ಮಣ್ಯಕ್ಕೆ ಬಂದಾಗ ಮಳೆ ಇನ್ನೂ ಜೋರಾಯಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಸುಳ್ಯಾ ಕಡೆಗೆ ಹೊರಟೆವು. ಸುಬ್ರಹ್ಮಣ್ಯದಿಂದ ಸುಳ್ಯಾ ಹೋಗುವಾಗ, ಇಳಿಮಲೈ ಎಂಬ ಸ್ಥಳದಲ್ಲಿ ಎಡಕ್ಕೆ ಹೋಗಬೇಕು. ಅಲ್ಲಿಂದ ಮಂಗಳೂರು ಮಡಿಕೇರಿ ರಸ್ತೆಯವರೆಗೆ ನಾನು ಇದುವರೆಗೆ ಹೋಗಿರುವ ರಸ್ತೆಗಳಲ್ಲಿಯೇ ಅದ್ಬುತವೆಂದು ಹೇಳಬೇಕು. ಕಾಡಿನ ನಡುವೆ ಬಹಳ ಸುಂದರವಾದ ರಸ್ತೆ. ನಾವು ಮುಖ್ಯ ರಸ್ತೆಯಿಂದ ಬಲಕ್ಕೆ ಹೊರಟು ಎರಡು ಕೀಮಿ ಹೋದಾಗ ನಮಗೆ ತೋಡಿಕಾನ ಎನ್ನುವ ಊರು ಸಿಗುತ್ತದೆ. ಅಲ್ಲಿಂದ ಎಡಕ್ಕೆ ಎಂಟು ಕೀಮೀ ಹೋದರೇ, ದೇವರಗುಂಡಿ ಜಲಪಾತ. ನಾವು ಹೋಗುವಾಗಲೇ ಕತ್ತಲಾಗುತ್ತಿದ್ದರಿಂದ ದಾರಿ ಕೇಳಿದವರು ಹೋಗುವುದು ಬೇಡವೆಂದರೂ ಕೇಳದೆ ನಾವು ಹೋದೆವು. ಅವರ ಮಾತನ್ನು ಕೇಳಿದರೆ ಎಂಟು ಗಂಟೆ ಹೊತ್ತಿಗೆ ನಾವು ಮನೆಯಲ್ಲಿರುತ್ತಿದ್ದೆವು. ನಾವು ಕೆಲವೊಮ್ಮೆ ತೆಗೆದುಕೊಳ್ಳುವ ಸಣ್ಣಪುಟ್ಟ ನಿರ್ಧಾರಗಳು ಇಡೀ ಯೋಜನೆಯನ್ನೇ ತಲೆಕೆಳಗೆ ಮಾಡಿಬಿಡುತ್ತವೆ. ಈ ಬಾರಿ ಅದಕ್ಕೊಂದು ಉತ್ತಮ ಉದಾಹರಣೆಯಾಯಿತು. ನಾವು ದಾರಿಯಲ್ಲಿ ಹೋಗಹೋಗುತ್ತಲೇ ಕತ್ತಲಾಯಿತು, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹತ್ತಿರ ಹೋಗುತ್ತಿದಂತೆ ಮಳೆ ಅಬ್ಬರಿಸಿತು. ಎರಡು ಕೀಮೀ ನಷ್ಟು ದೂರ ನಡೆದುಹೋಗಬೇಕಿತ್ತು, ಹೋಗಲು ಕಾಫಿ ತೋಟದವರು ಅನುಮತಿ ನೀಡಬೇಕಿತ್ತು, ಬಂದ ದಾರಿಗೆ ಶುಂಕವಿಲ್ಲವೆಂದು ತಿಳಿದು ಹಿಂದಿರುಗಲು ನೋಡುತ್ತಿರುವಾಗ ನಮ್ಮ ತಂಡ ಬುದ್ದಿವಂತ ಪ್ರಜೆ ನಂದ ದೇವಸ್ಥಾನ ನೋಡಲು ಹೋಗಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದು ಬಂದ. ಅಷ್ಟೊತ್ತಿಗೆ ಗಂಟೆ ಎಂಟಾಗಿತ್ತು. ಮಳೆ ಸುರಿಯುತ್ತಿದ್ದ ರೀತಿ ಎಂತಹವನನ್ನು ಬೆಚ್ಚಿ ಬೀಳಿಸುತ್ತಿತ್ತು. ಜೋರು ಮಳೆ ಸುರಿಯುತ್ತಿತ್ತು, ಅಲ್ಲಿಯೇ ನಿಲ್ಲುವ ಹಾಗಿಲ್ಲ, ಮುಂದೆ ಹೋಗಲು ದಾರಿ ಕಾಣುತ್ತಿಲ್ಲ, ಮಳೆ ಹಣಿಗಳು ಕಲ್ಲಿನಂತೆ ಮುಖಕ್ಕೆ ರಾಚುತಿತ್ತು. ನಾವು ವೇಗದಿಂದ ಹೋಗೋಣವೆಂದರೇ ಅಪ್ಪಿತಪ್ಪಿದರೆ ನಮ್ಮ ಜೀವ ವಿಮೆ ಹಣ ಮನೆಗೆ ತಲುಪುತ್ತಿತ್ತು. ನಿಧಾನ ಹೋಗೋಣವೆಂದರೇ ಇನ್ನೂ ಎಷ್ಟು ಹೊತ್ತು ಹೀಗೆ ಹೋಗುವುದೆನಿಸುತ್ತಿತ್ತು. ದಾರಿಯೇ ಸಾಗುತ್ತಿರಲಿಲ್ಲ. ಮಧ್ಯೆದಲ್ಲಿ ಒಮ್ಮೆ ನಿಲ್ಲಿಸಿದಾಗ ನಮ್ಮ ಕೈಕಾಲುಗಳು ನಡುಗುತ್ತಿದ್ದು, ಮುಂದೆ ಹೋಗುವುದೇ ಅಸಾಧ್ಯವೆನಿಸಿತ್ತು ಆದರೂ ಇನ್ನೂ ೭೦-೮೦ಕೀಮೀ ಹೋಗಲೇಬೇಕಿತ್ತು. ಮಡಿಕೇರಿಗೆ ಬಂದು ನಿಂತಾಗ ಮಳೆ ಸ್ವಲ್ಪ ಕಡಿಮೆಯಾಗಿದ್ದರೂ ನಾವು ಸಂಪೂರ್ಣ ಒದ್ದೆಯಾಗಿದ್ದರಿಂದ ಮೈಯೆಲ್ಲಾ ಒಂದು ಬಗೆಯ ಮುಜುಗರವೆನಿಸುತ್ತಿತ್ತು.
ಇದೆಲ್ಲವೂ ನಮ್ಮಿಂದ ನಾವೇ ಮಾಡಿಕೊಂಡಿದ್ದು, ಯಾರನ್ನೂ ದೂಷಿಸಿ ಉಪಯೋಗವಿರಲಿಲ್ಲ, ಮೊದಲಿಗೆ ಮಳೆಯಲ್ಲಿ ಬೈಕು ಸವಾರಿ ಇದೊಂದು ಉಢಾಫೆತನ. ಕಂಡಿಷನ್ ಇಲ್ಲದ ಬೈಕು, ನಾವು ಹೋಗಬೇಕಿದ್ದ ಸ್ಥಳಗಳ ಬಗೆಗೆ ಸರಿಯಾದ ಮಾಹಿತಿಯಿಲ್ಲದೇ ಹೋದದ್ದು. ಏನೇ ಆದರೂ ಅದೆಲ್ಲವೂ ಒಂದು ಪಾಠ ಅನುಭವವೆನ್ನುವ ಅಥವಾ ಅದನ್ನು ಸಮರ್ಥಿಸಿಕೊಳ್ಳುವ ಕೆಟ್ಟ ಮನಸ್ಸು. ವಾಪಸ್ಸು ಬಾನುಗೊಂದಿಗೆ ಬಂದು ತಲುಪಿದಾಗ ರಾತ್ರಿ ಒಂದು ಗಂಟೆಯಾಗಿತ್ತು. ನಾನು ಎಷ್ಟೊತ್ತಿಗೆ ಮನೆಗೆ ಹೋದರೂ ಮನೆಯವರು ಆ ಬಗೆಗೆ ನಮ್ಮನ್ನು ಕೇಳದೆ ಇರುವುದು ಏಕೆಂಬುದು ನನಗೆ ಅರಿವಾಗಿಲ್ಲ.

No comments:

Post a Comment