08 ಅಕ್ಟೋಬರ್ 2010

ನೀ ಹೋದರೂ ನಿನ್ನಯ ನೆನಪು ಮಾಸದು!!!!!!!!

ಈ ಪ್ರೀತಿಸುವ ಹುಡುಗಿಯರಿಗೂ ನಾವು ಕುಡಿಯುವ ಹೆಂಡಕ್ಕೂ ಭಾರಿ ಮಟ್ಟದ ಹೋಳಿಕೆಯಿದೆಯೆನಿಸುತ್ತದೆ. ನಾನು ಬೇಡವೆಂದು ಕುಳಿತಿದ್ದಾಗ ಯಾರಾದರೂ ಬಂದು ನಡಿಯೋ ಕುಡಿಯೋಣವೆನ್ನುತ್ತಾರೆ ಮತ್ತೆ ಕುಡಿಯೋಣವೆನಿಸುತ್ತದೆ. ಒಂದು ಸಲಕ್ಕೆ ನಿಲ್ಲಿಸಲಾಗುವುದಿಲ್ಲವಲ್ಲ ಪದೇ ಪದೇ ಕುಡಿದು ಹಗಲು ರಾತ್ರಿಯೆನ್ನದೇ ಕುಡುಕನಾಗಿಯೇ ಬಿಡುತ್ತೇನೆ. ನನ್ನ ಹುಡುಗಿಯ ವಿಷಯವೂ ಅಷ್ಟೇ, ನಾನು ನಿನ್ನನ್ನು ಪ್ರಾಣಕಿಂತ, ಜೀವಕ್ಕಿಂತವೆಂದು ಪ್ರೀತಿಸಿದರೂ ಕೂಡ, ನಾಳೆ ಬೆಳ್ಳಿಗ್ಗೆಯೇ ಎದ್ದು, ನಾನು ನಿನ್ನ ಜೀವನವನ್ನು ಹಾಳು ಮಾಡುತ್ತಿದ್ದೇನೆಂದು, ಅಥವಾ ನನ್ನಯ ಬಗೆಗೆ ಒಡನೆಯೇ, ತಾತ್ಸಾರ ತೋರಿಸಿದಾಗ, ನನಗೆ ಸಹಿಸಲಾರದಷ್ಟು ನೋವು ಬರುತ್ತದೆ. ಕೆಲವು ದಿನಗಳು ಅವಳನನ್ನು ಮರೆತು ಸುಮ್ಮನೆ ಇರೋಣವೆನಿಸಿದರೂ ಕೂಡ ಮತ್ತೆ ಮತ್ತೇ ಅದೇ ಹಳೆಯ ನೆನಪುಗಳು, ಹಂಗಿಸಿದ ಮಾತುಗಳು, ಹೊಗಳಿದ ಪದಗಳು, ಪ್ರತಿಯೊಂದು ಕೂಡ ನೆನಪಾಗಿ ಕಾಡುತ್ತದೆ, ಕೆಲವೊಮ್ಮೆ ಕೊಲ್ಲುತ್ತದೆ. ಪ್ರೀತಿಯಲ್ಲಿಯ ನೋವು ನನಗೆ ತಿಳಿದಿತ್ತು, ಆದರೇ ಪ್ರೀತಿಸಿದ ಹುಡುಗಿ ದೂರಾದಾಗ ಆಗುವ ಹೊಡೆತದ ವಿಪರೀತ ಈ ಮಟ್ಟಕ್ಕೆ ಇರುತ್ತದೆನಿಸಿರಲಿಲ್ಲ. ಇತ್ತೀಚೆಗೆ ಅದರಲ್ಲಿಯೂ ನಾನು ಪಿಎಚ್ ಡಿ ಎಂಬ ಜೇಡರ ಬಲೆಯಲ್ಲಿ ಬಿದ್ದು, ಥಿಸೀಸ್ ಬರೆಯಲು ಕುಳಿತ ದಿನದಿಂದ ಇಂದಿನ ತನಕವೂ ಕುಳಿತ ಒಂದೆರಡು ದಿನಗಳಲ್ಲಿ, ಏನಾದರೊಂದು ಪಜೀತಿ ಬಂದು ಸಿಕ್ಕಿ ಹಾಕಿಕೊಳ್ಳುತ್ತಿರುತ್ತದೆ. ಅದರಲ್ಲಿ ಮೊದಲನೆಯದು ನನ್ನ ಜೀವದ ಗೆಳತಿಯದೆಂದರೂ ತಪ್ಪಿಲ್ಲ. ನಾನು ಸಂತೋಷವಾಗಿರಲು ಕಾರಣವಿರುವ ಏಕೈಕ ಕಾರಣವೆಂದರೇ ನೀನು, ಅದರಂತೆಯೇ ನಾನು ಅತಿ ಹೆಚ್ಚು ನೊಂದಿರುವುದು ನಿನ್ನಿಂದಲೇ ಎನಿಸುತ್ತದೆ. ಅದರಲ್ಲಿಯೂ ತಾತ್ಸಾರ ತಿರಸ್ಕಾರವೆನ್ನುವ ಪದಗಳು ಮಾತ್ರ ಜೀವಕ್ಕೆ ಬಹಳಷ್ಟು ನೋವುಂಟುಮಾಡುತ್ತವೆ.
ನಮ್ಮ ಮನಸ್ಸು ಅದೆಂಥಹ ದುರಾಸೆಗೊಳ್ಳುತ್ತದೆಯೆಂದರೇ ಹೇಳತೀರದು, ಒಮ್ಮೊಮ್ಮೆ ನಾವು ಪ್ರೀತಿಸಿದವರು ನಮಗೆ ನಮ್ಮ ಸ್ವಂತದವರೆಂದು ಭಾವಿಸಿ ಸುಮ್ಮನಿರುವುದಿಲ್ಲ. ಅವರು ನಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕೆನ್ನುವ ಮಟ್ಟಕ್ಕೆ ಹೋಗುತ್ತದೆ. ನಾನು ಅಷ್ಟೇ, ಹಲವಾರು ಬಾರಿ ನೀನು ನಿನಗೆ ಇಷ್ಟಬಂದಂತೆ ಇರು ನಾನು ನಿನಗೆ ಯಾವುದಕ್ಕೂ ಒತ್ತಾಯಿಸುವುದಿಲ್ಲವೆಂದರೂ, ಒಮ್ಮೊಮ್ಮೆ ನೀನು ನನ್ನೊಂದಿಗೆ ಇಷ್ಟವಿದ್ದರೂ ಇಲ್ಲದಿದ್ದರೂ ಬೈಕಿನಲ್ಲಿ ಬರುವಂತೆ ಒತ್ತಾಯಿಸುವುದು, ಸಿನೆಮಾಗೆ ಹೋಗೋಣವೆನ್ನುವುದು, ನಿನಗೆ ಅದು ಕೊಡುತ್ತೇನೆ, ಇದು ಕೊಡುತ್ತೇನೆಂದು ಕಡೆಗೆ ಏನನ್ನು ಕೊಡದೇ ಕೈಯೆತ್ತಿಬಿಡುವುದು. ನಾನು ಕಂಡಂತೆ ನನಗೆ ಸಮಸ್ಯೆ ಇರುವಾಗಲೇ ಅಂತಹ ಸಮಸ್ಯೆಗಳು ಪದೆಪದೇ ಬರುತ್ತಿರುತವೆ. ನಾನು ಹಣವಿಲ್ಲದ ಸಮಯದಲ್ಲಿ, ಒಂದು ರೂಪಾಯಿ ಉಳಿಸಲು ಮೂರು ಕೀಮಿ ನಡೆದ ದಿನಗಳಿವೆ. ದುಡ್ಡಿರುವಾಗ ಬ್ಲಾಕ್ ಡಾಗ್ ಕುಡಿದ, ಸ್ಕಾಚ್ ಕುಡಿದ ದಿನಗಳೂ ಇವೆ. ಇದರಿಂದ ನಾನು ಕಲಿತ ಪಾಠವೆಂದರೇ, ಯಾವುದು ಶಾಶ್ವತವಲ್ಲ ಇವೆಲ್ಲವೂ ಕ್ಷಣಿಕ. ಇರುವಾಗ ಅನುಭವಿಸಿದವನು ಇಲ್ಲದಿದ್ದಾಗಲೂ ಇರುವುದಕ್ಕೆ ತಕ್ಕಂತೆ ಇರಬೇಕು. ಮೊನ್ನೆ ನಿನಗೆ ಹಣದ ಅಗತ್ಯವಿತ್ತೆಂಬುದು ನನಗೆ ತಿಳಿದಿದೆ, ಆದರೇ, ಸುದರ್ಶನ್ ಅಪಘಾತ ಮಾಡಿಕೊಂಡು ಆಸ್ಪತ್ರೆ ಸೇರಿದಾಗ ಎರಡು ದಿನ ಹಣ ಒದಗಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಧ್ಯಮ ವರ್ಗದವರಿಗೆ ಹಣವೆಂಬುದು ಸದಾ ಚಿವುಟಿ ಖುಷಿ ಪಡೆಯುವ ವಸ್ತು. ಇದು ಯಾವಾಗಲೂ ಅಷ್ಟೇ, ನಿಮ್ಮಲ್ಲಿ ಇರುವ ತನಕ ಏನೂ ಮಾಡುವುದಿಲ್ಲ. ನಿಮ್ಮಲ್ಲಿ ಇಲ್ಲವೆಂದರೇ ಶುರುವಾಗುತ್ತದೆ, ಅದರ ದೊಂಬರಾಟ. ಅದು ಯಾವ ಪರಿಯಾಗುತ್ತದೆಯೆಂದರೇ ನಿಮ್ಮನ್ನು ಭೂಗರ್ಭದೊಳಕ್ಕೂ ತಳ್ಳಿ ಬಿಡುತ್ತದೆ. ಮೊನ್ನೆ ಸುದರ್ಶನನ ವಿಷಯಕ್ಕಾಗಿ ಕೇಳಬಾರದವರನ್ನೆಲ್ಲಾ ಕೇಳಿ ಹಣ ಒದಗಿಸಿದೆವು. ಅದೇನೆ ಇರಲಿ, ನಾನು ನನ್ನ ನಿನ್ನಯ ವಿಷಯ ಮಾತನಾಡುವಾಗ ಹಣದ ವಿಷಯ ಬೇಡವೆಂದರೂ ಪದೇ ಪದೇ ಕಾಡುತ್ತದೆ.
ನಿನ್ನ ಒಂದು ಎಸ್ ಎಂಎಸ್ ಗೋಸ್ಕರ, ಒಂದು ಕರೆಗೊಸ್ಕರ ದಿನಗಟ್ಟಲೇ ಕಾಯ್ದ ದಿನಗಳಿವೆ. ಈಗಲೂ ಕಾಯುತ್ತಿರುತ್ತೇನೆ, ನಿನ್ನಿಂದ ತಿರಸ್ಕಾರಗೊಂಡ ಭಾವನೆ ನನ್ನಲ್ಲಿ ಸದಾ ನನ್ನನ್ನು ಕರಗಿಸುತ್ತದೆ, ಕೊರಗುವಂತೆ ಮಾಡುತ್ತದೆ. ನೀನು ನನ್ನನ್ನು ಹಂಗಿಸಿದೆಯಾ? ತಿರಸ್ಕರಿಸಿದೆಯಾ?ಚೇಡಿಸಿದೆಯಾ?ರೇಗಿಸಿದೇಯಾ?ನಾನು ನಿನಗೆ ಇಷ್ಟವಿಲ್ಲವೆಂದು ಹೋದೇಯಾ?ಇಷ್ಟವಿದ್ದು ದೂರಾದೆಯಾ?ಪ್ರಶ್ನೆಗಳೆ ಜೀವನವಾಗಿಬಿಟ್ಟಿದೆ ಎನಿಸುತ್ತದೆ. ನೀನು ನನ್ನ ನಡೆಯಿಂದ ಹಿಡಿದು,, ನಡುವಳಿಕೆಯ ವರೆಗೂ ನನ್ನನ್ನು ಹಂಗಿಸಿದ್ದು, ನಿನಗೆ ಖುಷಿಕೊಟ್ಟಿ ಆ ಕ್ಷಣಕ್ಕಾದರೂ ನೀನು ನಕ್ಕಿರುವುದು ನನಗೂ ಸಮಧಾನವಿದೆ. ಆದರೇ, ನೀನು ನನ್ನ ಪ್ರೀತಿಯ ಬಗೆಗೆ ಆಡಿದ ಮಾತುಗಳು ಮಾತ್ರ ನನ್ನನ್ನು ದಿಗ್ಬ್ರಮೆ ಮೂಡಿಸಿದೆ. ನಾನು ನಿನ್ನನ್ನು ಪ್ರೀತಿಸಿದ್ದು , ಸತ್ಯ. ಅಲ್ಲಿ ಕೇವಲ ನಿನ್ನಯ ಅನಿವಾರ್ಯತೆಯಿತ್ತು. ಅವಶ್ಯಕತೆಯೂ ಇತ್ತು. ನೀನು ಹೇಳುವಂತೆ, ನಾನು ಕೂಡ ಸ್ವಹಿತವನ್ನು ಬೆಂಬಲಿಸುತ್ತೇನೆ. ನಿನ್ನಯ ಜೀವನ ಸುಂದರವಾಗಿರಬೇಕು, ನಿನ್ನಯ ಆಸೆಗಳು ಕನಸುಗಳು ಸದಾ ಹಸಿರಾಗಿರಬೇಕು, ಅವುಗಳೆಲ್ಲವೂ ಈಡೇರಿ, ನೀನೊಬ್ಬಳು ಪ್ರಖ್ಯಾತಿಯಾಗಬೇಕು, ಅದನ್ನು ನಾನು ಇಷ್ಟಪಡುತ್ತೇನೆ, ಆನಂದಿಸುತೇನೆ. ಆದರೇ ಸ್ವಾರ್ಥದ ಮನಸ್ಸು ನನ್ನದು, ಆ ಸಡಗರ ಸಂಭ್ರಮವನ್ನು ನೀನು ನನ್ನೊಂದಿಗೆ ಆಚರಿಸಬೇಕು, ನಿನ್ನಯ ಪ್ರತಿಯೊಂದು ಏಳಿಗೆಯಲ್ಲಿಯೂ ನಾನಿರಬೇಕೆಂಬುದು ನನ್ನಂತರಾಳದ ಬಯಕೆ. ಕೆಲವು ದಿನಗಳು ಮುಂಜಾನೆ ನಿನ್ನಯ ಎಸ್ ಎಂಎಸ್ ಬರುತ್ತಿತ್ತು, ನಾನು ಕಳುಹಿಸದೇ ಇದ್ದರೂ ಅದನ್ನು ಓದಿ ನಾನು ಖುಷಿಪಡುತ್ತಿದೆ, ರಾತ್ರಿ ಮಲಗುವ ಮುನ್ನ ಬರುತ್ತಿದ್ದ ನಿನ್ನ್ಯ ಎಸ್ ಎಂಎಸ್ ಗಳು ಅಷ್ಟೇ ಮಲಗಲು ನೆಮ್ಮದಿ ನೀಡುತ್ತಿತ್ತು. ಆದರೀಗ ಒಂದೇ ಒಂದು ಎಸ್ ಎಂಎಸ್ ಇಲ್ಲ, ಫೋನ್ ಕೂಡ ಮಾಡುವುದು ಅಪರೂಪ, ಮಾಡಿದರೂ, ಮಾಡದೇ ಇದ್ದರೂ, ನಾನು ಕೇಳಿದರೇ, ನಾನು ಮಾಡಿದ್ದೇನೆ, ನೀನೇ ಮಾಡುತ್ತಿಲ್ಲವೆನ್ನುತ್ತೀಯಾ? ಇದರರ್ಥ ಕಾಲಕ್ರಮೇಣ ಪ್ರೀತಿ ಕುಗ್ಗಿತಾ?ಇಂಗಿ ಹೋಯಿತಾ?ಬೇಸತ್ತಿ ಹೋಯಿತಾ?ತಿಂಗಳುಗಳಿಗೆ ಬೇಸರವಾದರೇ, ಇನ್ನೂ ವರ್ಷಗಟ್ಟಲೇ?
ನೀನು ನನ್ನನ್ನು ಪ್ರೀತಿಸಿದ್ದು, ಸತ್ಯವೇ ಅದು ನನಗೂ ತಿಳಿದಿದೆ. ಪರಿಸ್ಥಿತಿ ಒತ್ತಡಕ್ಕೋ ಸನ್ನಿವೇಶಕ್ಕೋ ನೀನು ನನ್ನಿಂದ ದೂರಾಗುತ್ತಿರುವುದು, ಅಥವಾ ದೂರಾಗಿದ್ದು ನನಗೆ ಅಲ್ಪ ಮಟ್ಟದ ನೋವನ್ನು ಕೊಡುತ್ತದೆ. ಆದರೇ, ನೀನು ನನ್ನನ್ನು ಪ್ರೀತಿಸಿಯೇ ಇರಲಿಲ್ಲವೆಂದರೇ ಅಥವಾ ಪ್ರೀತಿಸಿ ತಪ್ಪು ಮಾಡಿದೇ ಎಂದರೇ ಆಗುವ ಆಘಾತ ಅಷ್ಟಿಷ್ಟಲ್ಲ. ಏನೋ ಬಲವಂತಕ್ಕೆ ಪ್ರೀತಿಸಿದೇ, ನೀನು ಪೀಡಿಸಿದ್ದಕ್ಕೆ ನಿನ್ನನ್ನು ಪ್ರೀತಿಸಿದೇ ಎಂದರೇ, ಅಥವಾ ಅಂದು ಹೇಳಿ ಇಂದು ಹೋದೆ ಎಂದರೇ ನಾನು ಸಹಿಸಲಾರೆ. ಸದಾ ನಾನು ನಿನ್ನನ್ನು ಸತ್ಯ ಹೇಳು ಎಂದು ಕೇಳುತ್ತಿದ್ದೆ. ಇದೊಂದು ಬಾರಿ ಸುಳ್ಳು ಹೇಳು, ನೀನು ನನ್ನನ್ನು ಪ್ರೀತಿಸಿದ್ದೆ ಎಂದು ಹೇಳು.
ನಾನು ಗುರುತು ಪರಿಚಯವಿರದವರಿಗೆ ಮರುಗಿ, ಕರಗುವವನು, ಇನ್ನೂ ಸಾವಿರಾರು ಕನಸು ಕಟ್ಟಿದ ನಿನಗೆ ಬೆಂಬಲವಾಗಿ ನಿಲ್ಲಲ್ಲು ಹೆದರುವುದಿಲ್ಲ. ನೀನು ಭಾವಿಸಿದಂತೆ, ನೀನು ನನಗೆ ಹೊರೆಯಾಗುತ್ತೀಯಾ ಎಂದಾಗಲೀ, ಅಥವಾ ನನಗೆ ದುಡ್ಡು ಕೇಳಿ ಅದನ್ನು ನಾನು ತೀರಿಸಲಾಗುವುದಿಲ್ಲವೆಂದಾಗಲೀ ಹೆದರುವ ವ್ಯಕ್ತಿಯಲ್ಲ. ನನ್ನ ಎಲ್ಲವೂ ನೀನೆ ಆಗಿರುವಾಗ ಆದನ್ನು ನಿನಗೆಂದು ಮಾಡುವುದರಲ್ಲಿ ತಪ್ಪೇನು. ಆದರೂ ನೀನು ನನ್ನನ್ನು ರೇಗಿಸಿದ, ಹಂಗಿಸಿದ ಮಾತುಗಳು ನೆನಪಾಗಿ ಕಣ್ಣೀರು ಸುರಿಸುತ್ತವೆ. ನನ್ನ ಓದಿನ ಬಗೆಗೆ ನನ್ನ ಸಂಶೋಧನೆಯ ಬಗೆಗೆ, ನನ್ನ ಕೆಲಸದ ಬಗೆಗೆ, ಕೆಲಸಕ್ಕೆ ಬಾರದ ಸೋಮಾರಿತನದ ಬಗೆಗೆ ನೀನು ಹೇಳಿದ ಬುದ್ದಿಮಾತುಗಳು, ಅಥವಾ ಚೇಡಿಸಿದ ಮಾತುಗಳು ನನ್ನ ಕಿವಿಯಲ್ಲಿಯೇ ಗುಯ್ಯ್ ಎನ್ನುತ್ತಿವೆ. ನೀನು ಮತ್ತದೇ ಪ್ರಶ್ನೆ ಕೇಳಬಹುದು, ನಾನು ಎಷ್ಟನೆಯವಳು? ಹದಿನಾರನೆಯವಳಾ? ಹದಿನೆಂಟನೆಯವಳಾ? ಜೊತೆಯಲ್ಲಿರುವಾಗಲೇ ಮೂರು ನಾಲ್ಕು ಜನರ ಜೊತೆ ಓಡಾಡುವ ಹುಡುಗರು, ಇನ್ನೂ ನೀವು ಮಾತನಾಡುವ ಸ್ಪೀಡ್ ನೋಡಿದರೇ ಇಷ್ಟೊತ್ತಿಗೆ ಅದೆಷ್ಟು ಹುಡುಗಿಯರ ಜೀವನ ಹಾಳು ಮಾಡಿಲ್ಲವೆನ್ನಲೂಬಹುದು. ನಾನು ಮನಸಲ್ಲಿರುವುದನ್ನು ನೇರ ಹೇಳುವವನು. ನೀನು ತಿಳಿದಂತೆ ನೀನಿರುವ ಪರಿಸ್ತಿತಿಯನ್ನು ದುರುಪಯೋಗಪಡಿಸಿಕೊಳ್ಳಲು ನಾನೆಂದು ಯತ್ನಿಸಿಲ್ಲ. ಆದರೂ ನಿನ್ನಯ ಮನಸಿನಲ್ಲಿ ಆ ಅನುಮಾನವಿದೆಯೆನ್ನುವುದು ನನಗೆ ತಿಳಿದಿದೆ. ನಾನು ನಿನ್ನಯ ಬಗೆಗೆ ಅನುಕಂಪ ತೋರಿಸಿ ನಿನ್ನಯ ದಾರಿತಪ್ಪಿಸಿ, ಬಳಸಿಕೊಳ್ಳಲು ಆಲೋಚಿಸಿದ್ದೆ. ನೀನು ಬೇಗ ಎಚ್ಚೆತ್ತುಕೊಂಡೆ. ನಾನು ಎಚ್ಚೆತ್ತುಕೊಳ್ಳಲು ಆಗದೇ ಅಲ್ಲಿಯೇ ಕೊರಗಿ ಕೊರಗಿ ಕರಗಿ ನರುಳುತಿದ್ದೇನೆ. ಅದೇನೆ ಇದ್ದರೂ ನೀನು ನನ್ನ ಜೀವದ ಗೆಳತಿಯೆನ್ನುವುದು ನನ್ನ ಮಾತ್ರಕ್ಕೆ ಆನಂದವೆನಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...