ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

22 March 2011

ಅನರ್ಥವೇ ಬದುಕು ಇನ್ನೂ ಈ ಬರಹಕ್ಕೆ ಅರ್ಥ ಬರಲು ಸಾದ್ಯವೇ?


ಬದುಕು ಜೀವನ ಬೇಸರಗೊಂಡು ಕಟ್ಟ ಕಡೆಯದಾಗಿ, ಹೆಂಡಕ್ಕೊ, ಸಿಗರೇಟಿಗೋ, ಅಥವಾ ಮತ್ತಾವುದೋ ಚಟಕ್ಕೆ ಬಲಿಯಾಗಿ, ಬದುಕಿನ ಕೊನೆಯ ದಿನಗಳು ಹತ್ತಿರ ಸಮೀಪಿಸುತ್ತಿದ್ದಾಗ, ಮನದಾಳದೊಳಗೆ ಯಾವುದೋ ತುಡಿತ, ಬಯಕೆ ಬುಗೆದ್ದು ಬರುತ್ತದೆ. ಅದೊಂದು ಮುಂಜಾವಿನಲ್ಲಿ ಕಾಣುವ ಕನಸಿನಂತೆ, ಯಾವುದು ತಿಳಿಯಾಗಿಲ್ಲ, ಅಲ್ಲೊಂದು, ಅಪಘಾತ, ರಕ್ತ, ಅಳು, ಆಕ್ರಂದನ, ನಗು, ಕುಹುಕತನ, ನನ್ನನ್ನೆ ನೋಡಿ ಹಂಗಿಸುತ್ತಿರುವ ಭಾವನೆ. ಭಾವನೆಯನ್ನು ಅರ್ಥೈಸಿಕೊಳ್ಳದ ಪರಿಸ್ಥಿತಿ ನನ್ನದು. ಯಾರನ್ನೋ ಹಳ್ಳಕ್ಕೆ ತಳ್ಳಿದ, ಯಾರನ್ನೊ ಕೊಲೆಗೈದ, ಅಪರಾಧ ಪ್ರಜ್ನೆ ನನ್ನನ್ನು ಕಾಡುತ್ತಿದೆ, ನೋಡು ನೋಡುತ್ತಲೇ ಯಾರೋ ನನ್ನನ್ನು ಪ್ರಪಾತಕ್ಕೆ, ತಳ್ಳುತ್ತಿದ್ದಾರೆ, ನಾನು ಸಂಪೂರ್ಣ ಮುಳುಗುತ್ತಿದ್ದೇನೆ, ಯಾರೂ ಅಳುತ್ತಿಲ್ಲ, ಯಾರ ಮೊಗದಲ್ಲಿಯೂ ಕರುಣೆಯಿಲ್ಲ, ಎಲ್ಲರ ಮೊಗದಲ್ಲಿ ಅದೇ ಭಾವನೇ, ಇವನಿಗೆ ಹೀಗೆ ಆಗಬೇಕಿತ್ತು ಅವನು ಮೆರೆದದ್ದು ಕಡಿಮೆಯೇ, ದೃಷ್ಟ, ಕಲ್ಲಲ್ಲಿ ಹೊಡೆದು ಸಾಯಿಸಿದರೂ ಕಡಿಮೆಯೇ, ಆದರೂ ಅವನು ತೋಡಿದ ಹಳ್ಳಕ್ಕೆ ಅವನೆ ಬಿದ್ದಿದ್ದಾನೆ. ಅವನೆಂದು ಮೇಲೇರಲಾರ, ಮೇಲೇಲುವುದಕ್ಕೆ ಶಕ್ತಿಯಿದ್ದರೇ ತಾನೇ, ಶಕ್ತಿ ಬರುವುದಕ್ಕೆ ಜೀವವಿದ್ದರೇ ತಾನೇ. ಹೀಗೆ ನನ್ನ ಸಾವನ್ನು ಹಂಗಿಸುವವರೆಲ್ಲರನ್ನೂ ನಾನು ದಿಟ್ಟಿಸುತ್ತಿದ್ದೇನೆ, ಅವರೆಲ್ಲರೂ ಇದ್ದಾರೆ.
ನಾನು ಶಾಲೆಗೆ ಹೋಗುವುದಿಲ್ಲವೆಂದು ಹಟ ಹಿಡಿದಾಗ, ನನ್ನನ್ನು ಸಮಜಾಯಿಸಿ ಇಲ್ಲದ ಸುಳ್ಳು ಹೇಳಿ ಶಾಲೆಗೆ ಕರೆದುಕೊಂಡು ಹೋದ, ಮಾಸ್ಟರುಗಳು. ಮುದ್ದಿನ ಮಾತಾಡಿ ಶಾಲೆಗೆ ತಳ್ಳಿದ ನಮ್ಮಮ್ಮ, ಹೋಗದಿದ್ದಲ್ಲಿ ಕೊಂದುಬಿಡುವೆ ಎಂದ ನಮ್ಮಪ್ಪ, ಕಚ್ಚಾಡಿದ ಸ್ನೇಹಿತರು, ಒಂದು ಬುತ್ತಿಯಲ್ಲಿ ಹಂಚಿ ತಿಂದ ಗೆಳೆಯರು, ಒಂದೇ ಲೋಟದಲ್ಲಿ ಕುಡಿದ ನನ್ನ ಆತ್ಮೀಯರು, ನಾನೇ ಸರ್ವಸ್ವವೆಂದಿದ್ದ ನನ್ನ ಜೀವದ ಗೆಳತಿ, ನನ್ನ ಮಾತಿಗೆ ಸದಾ ನಗುತಿದ್ದ ನನ್ನ ಗೆಳೆಯ ಗೆಳತಿಯರು, ನನ್ನ ಮೇಲೆ ದ್ವೇಷ ತಿರಿಸಲೆಂದೆ ಹುಟ್ಟಿದ್ದೇವೆಂದು ಅಲೆದಾಡುತಿದ್ದ ನನ್ನ ಶತ್ರುಗಳು, ಇವರೆಲ್ಲರೂ ನನ್ನ ಸಾವಿನ ದಿನ ನಿಂತು ನನ್ನನ್ನು ನೋಡಿ ಹುಸಿನಗುತಿದ್ದದ್ದು ಏಕೆ? ಬದುಕಿದ್ದಾಗಲೂ ಅರ್ಥವಾಗದ ಬದುಕು ನನ್ನದು, ಸತ್ತ ಮೇಲೂ ಅರ್ಥವಾಗುತ್ತಿಲ್ಲವಲ್ಲ, ನಾನೆಂಬುದೇ ದುಗುಡವೇ? ನಾನೆಂಬುದೇ ಅನರ್ಥವೇ, ಈ ಬದುಕು ಅನರ್ಥವೋ? ಈ ಜೀವನ ಅನರ್ಥವೋ? ಯಾವುದು ಅರ್ಥ, ಯಾವುದು ಅನರ್ಥ? ಕ್ಷಣ ಕ್ಷಣ ಭೂಲೋಕದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯ ಸಾಲದೇ? ಹುಟ್ಟುವಾಗಲೇ ಅಳುತ್ತಾ ಹುಟ್ಟಿದ ನನಗೆ, ತಿನ್ನಿಸುವಾಗಲೂ ಹೊಡೆದು ಬಡಿದು ತಿನ್ನಿಸಿದರು, ಓದಲು ಹೋದಾಗಲೂ ಹೊಡೆತ ಬಡಿತಗಳು, ಸಹಪಾಠಿಗಳು ಹೊಡೆದಾಟಕ್ಕೆ ಮುನ್ನುಗ್ಗುತ್ತಿದ್ದರು, ನಾನು ಅವರಿಂದ ಏಟು ತಪ್ಪಿಸಿಕೊಳ್ಳುವುದಕ್ಕಾದರೂ ಅವರಿಗೆ ಹೊಡೆಯಬೇಕಿತ್ತು, ಅದು ಕೀಟಲೆಯೋ, ಪ್ರೀತಿಯೋ, ದ್ವೇಷವೋ ಅಂತೂ ಹೊಡೆದಾಡುವುದರಲ್ಲೊಂದು ಮಜ, ನಗು, ಬಿದ್ದವನನ್ನು ಎತ್ತುವುದಕ್ಕಿಂತ ಬಿದ್ದ ಎಂದು ನಗುವುದೇ ಹೆಚ್ಚು, ಬಾಲ್ಯದಲ್ಲಿ ಕಲಿತ ಆ ಗುಣ, ಸಾಯುವ ತನಕ ಮುಂದುವರೆಯಿತು. ನನ್ನ ಜೀವದ ಗೆಳೆತಿ ದೂರಾದಳೆಂದರೆ, ಅವಳು ಕೈಕೊಟ್ಟಳಾ? ಎಂದು ಹಂಗಿಸಿದರೇ ಹೊರತು ಸಮಧಾನ ಮಾಡಿ ನನ್ನೊಂದಿಗಿರಲಿಲ್ಲ.
ಇವೆಲ್ಲವೂ ಕೇವಲ ಹತ್ತು ಹದಿನಾರು ನನ್ನ ಬಳಗದವರ ಕಥೆಯಾದರೇ, ಇನ್ನೂ ಕೋಟ್ಯಾಂತರ ಮಂದಿ ಇರುವ ಸಮಾಜ ನನ್ನನ್ನು ನಡೆಸಿಕೊಂಡ ರೀತಿಯಂತೂ ಅತಿ ಘೋರವೆನಿಸುತ್ತದೆ. ನಾನು ಹುಟ್ಟಬೇಕೆಂದು ನಾನು ಬಯಸಿರಲಿಲ್ಲ, ಹುಟ್ಟಿದ್ದು ಯಾವುದೋ ಕಾರಣಕ್ಕೆ, ಜನಿಸಿದ ನಂತರ ನಾನು ಬಯಸಿದಂತೆ ಬದುಕಲು ಯಾರು ಬಿಟ್ಟಿಲ್ಲ, ಇಷ್ಟಪಟ್ಟಿದ್ದನ್ನು ಓದಿಲ್ಲ, ಇಷ್ಟಪಟ್ಟಂತೆ ಬದುಕಿಲ್ಲ, ಇಷ್ಟಬಂದತ್ತೆ ಏನೂ ಮಾಡಿಲ್ಲ, ಆದರೂ ನಾನು ಬದುಕಿದೆ, ಜೀವಿಸಿದೆ, ಯಾರಿಗೆ ಬದುಕಿದೆ, ಯಾವುದಕ್ಕಾಗಿ ಬದುಕಿದೆ, ಯಾವುದಕ್ಕೂ ಉತ್ತರವಿಲ್ಲ, ಪ್ರಶ್ನೆಗಳೇ ಬದುಕಾಗಿತ್ತು, ಸಾವಿನ ಹಿಂದೆಯೂ ಅಷ್ಟೇ ಉತ್ತರವಿಲ್ಲ, ಬರೀ ಪ್ರಶ್ನೆಗಳೇ. ಇವೆಲ್ಲವೂ ಏಕೆ ಹೀಗೆಂದು ಪ್ರಶ್ನಿಸುತ್ತಾ ಹೋದರೇ ಮತ್ತೆ ಮತ್ತೆ ಪ್ರಶ್ನೆಗಳ ಸರಮಾಲೆ ಸಿಗುವುದೇ ವಿನಾಃ ಉತ್ತರದ ಸುಳಿವಿಲ್ಲ. ಮೊದಲ ಬಾರಿಗೆ ಶಾಲೆಗೆ ಸೇರಿದ ದಿನದಿಂದಲೂ, ಜಾತಿಯ ಆಧಾರ ಮೇಲೆ, ಅಥವಾ ಅಪ್ಪ ಅಮ್ಮನ ಪ್ರತಿಷ್ಟೆಯನ್ನು ಮುಂದಿಟ್ಟುಕೊಂಡು ವಿಧ್ಯಾರ್ಥಿಗಳನ್ನು ನಡೆಸಿಕೊಂಡು ಭೇಧಭಾವ ಮೂಡಿಸುವ, ಓಡುವ ಕುದುರೆಯ ಬಾಲವನ್ನು ಹಿಡಿದು, ಕೇವಲ ಓದುವ ಮುಖಗಳನ್ನು ಮುಂದೆ ತಂದು ಒದಲು ಆಸಕ್ತಿಯಿಲ್ಲದ ನನ್ನಂಥ ದಡ್ಡ ಶಿಖಾಮಣಿಗಳನ್ನು ಉಗಿದು ಮನ ಬಂದಂತೆ ಬಡಿದು, ದಂಡಿಸಿದ ಮಹಾಮಣಿಯರು ನಗುತ್ತಾರೆ ನಾನು ಹಾಳಾಗಿ ಹಳ್ಳದಲ್ಲಿ ಮಲಗಿದ್ದಾಗ. ಒಂದೊಂದು ಹಂತದಲ್ಲಿಯೂ ಅಷ್ಟೇ, ಜಗತ್ತು ಆಚಾರ, ಅನಾಚಾರಗಳನ್ನು ತೋರಿಸಿ, ನಂತರ ಅನಾಚಾರದಿಂದ ಮಾತ್ರ ನೀನು ಬದುಕಲು ಸಾಧ್ಯ ನೀನು ಬದುಕಲೇ ಬೇಕೆಂದರೇ ಮತ್ತೊಬ್ಬನಿಗೆ ದ್ರೋಹ ಮಾಡಬೇಕು, ಅವನನ್ನು ಗೆಲ್ಲಬೇಕು, ಜೀವನವೆಂಬುದು ಒಂದು ಹೋರಾಟ, ರಾಜ ಮಹಾರಾಜರು ಯಾವ ತೆವಳಿಗಾಗಿ ಹೋರಾಡಿದರೋ ಗೊತ್ತಿಲ್ಲ, ಜಾತಿಗೆ, ಧರ್ಮಕ್ಕೆ, ಭಾಷೆಗೆ, ರಾಜ್ಯಕ್ಕೆ, ದೇಶಕ್ಕೆ, ಹೀಗೆ ಎಲ್ಲದಕ್ಕೂ ಹೋರಾಡಲೇಬೇಕು, ಅಣ್ಣತಮ್ಮಂದಿರು ದಾಯಾದಿಗಳಾಗಬೇಕು, ಒಂದು ಊರು ನುಚ್ಚಿ ನೂರಾಗಬೇಕು, ನೀನು ಪಕ್ಕದ ಮನೆಯವನ ಹಿತಕ್ಕೆ ತಲೆಗೆಡೆಸಿಕೊಳ್ಳಬಾರದು, ಅವನನ್ನು ತುಳಿಯಲು ಯತ್ನಿಸು, ಅವನ ಮನೆಗೆ ಬೆಂಕಿ ಬಿದ್ದಾಗ ಕೆಂಡದಿಂದ ಬೀಡಿ ಹಚ್ಚಿಕೋ, ಇವೆಲ್ಲವನ್ನು ಹೇಳಿಕೊಟ್ಟಿದ್ದು ನನ್ನ ಸಮಾಜ. ಕೆಲವು ಬಾರಿ ನೇರವಾಗಿ ಮತ್ತು ಕೆಲವು ಬಾರಿ ಹಿಂದುಗಡೆಯಿಂದ ಕಲಿಸಿದೆ. ಈಡಿ ಸಮುದಾಯ ಎದುರುಗಡೆ ಸಮಾಜವನ್ನು, ಸಮಾಜದ ಹಿತವನ್ನು ಬಯುಸುತ್ತಿರುವುದಾಗಿ, ಸಾಮಾನ್ಯ ಮನ್ನುಷ್ಯನಿಗೆ ಅರ್ಥವಾಗದ ಪದಗಳಾದ ನೈತಿಕತೆ, ಸಮಾಜ ಬದ್ದತೆ, ಮೌಲ್ಯಗಳು, ಎಂದೆಲ್ಲಾ ಬಿಂಬಿಸಿದರೂ ಇವೆಲ್ಲವೂ ವೇದಿಕೆಯ ಮೇಲೆ ಭಾಷಣ ಬಿಗಿಯುವುದಕ್ಕೆ ಯೋಗ್ಯ ಪದಗಳೇ ಹೊರತು, ಜೀವನ ಮಾಡುವುದಕ್ಕಲ್ಲವೆಂಬು ಕಟು ಸತ್ಯ.
ಯಾರು ಇಲ್ಲಿ ಯಾರಿಗೆ ಬದುಕುತ್ತಿದ್ದಾರೆ, ಗೊಂದಲದ ಬದುಕು, ಗೊಂದಲಮಯ ಮನಸ್ಥಿತಿ, ಎಲ್ಲವನ್ನು ತಿಳಿದಿರುವಂತೆ ಬೀಗುವವರೇ ಹೆಚ್ಚು, ಅರ್ಥವಾಗಲಿಲ್ಲವೆಂದರೇ ಅವನನ್ನು ಶತಮೂರ್ಖನೆಂದು, ದಡ್ಡನೆಂದು ಬಿಂಬಿಸಲಾಗುತ್ತದೆ. ಒಬ್ಬ ಮತ್ತೊಬ್ಬನಿಗೆ ನಡುಬೀದಿಯಲ್ಲಿ ಬೈಯ್ದರೇ ಅವನು ನಾಯಕನಾಗುತ್ತಾನೆ. ನೂರಾರು ಕೋಟಿ ನುಂಗಿದ ರಾಜಕಾರಣಿಗೆ ಅಭಿಮಾನಿಗಳು ಹುಟ್ಟುತ್ತಾರೆ, ಭ್ರಷ್ಟ ಅಧಿಕಾರಿಗಳಿಗೆ ಬೆಂಬಲಿಗರಿರುತ್ತಾರೆ, ಆಡಳಿತವಿದ್ದರೇ ಏನು ಬೇಕಾದರು ಮಾಡಬಹುದೆಂಬುದು ಅರಿವಾಗಿ ಎಲ್ಲರೂ ಅಧಿಕಾರ ಹಿಡಿಯುವ ರೇಸಿನಲ್ಲಿ ಓಡಾಡುತ್ತಾರೆ. ಲಂಚ ಕೊಟ್ಟು ಕೆಲಸ ಕೇಳುವ ಅಭ್ಯರ್ಥಿ ಲಂಚ ಹುಡುಕುವುದೇ ಜೀವನವಾಗಿಸಿಕೊಳ್ಳುತ್ತಾನೆ. ಹಣದ ಆಸೆಯಿಂದಾಗಿ, ವ್ಯವಸಾಯ ಬಿಟ್ಟು ವ್ಯಾಪಾರಕ್ಕಿಳಿಯುತ್ತಾನೆ, ತಲೆಮಾರುಗಳಿಂದ ಬಂದ ವೃತ್ತಿ ಜೀವನ ಬೇಸರವಾಗುತ್ತದೆ, ಸುಂದರವಾದ ಹಳ್ಳಿ ಏನೇನು ಇಲ್ಲದ ಮರುಗಾಡಾಗತೊಡಗುತ್ತದೆ. ಮರುಗಾಡಿನಲ್ಲಿಯೂ ಚಿತ್ರೀಕರಣ ನಡೆಯುತ್ತಿರುತ್ತದೆ. ಇವೆಲ್ಲವು ಬಂದು ಹೋಗುವ ನಡುವೆ ಎಚ್ಚರವಾಗುತ್ತದೆ, ಸ್ನಾನ ಮಾಡಿ ಆಫೀಸಿಗೆ ಲಗ್ಗೆಯಿಟ್ಟು ದುಡಿಯಬೇಕು ಅಷ್ಟೇ.

No comments:

Post a Comment