28 ಫೆಬ್ರವರಿ 2012

೨೦೧೨ ರ ಅವತಾರ ಪುರುಷರು!!!

ಬಹಳ ದಿನಗಳ ನಂತರ ನನ್ನೂರಿಗೆ ಹೋಗಿ ಬಂದೆ. ನನ್ನೂರಿಗೆ ಹೋದಾಗೆಲ್ಲ ನನ್ನದೇ ಜಗತ್ತಿಗೆ ಹೋದಂತೆನಿಸಿದರೂ ಒಮ್ಮೊಮ್ಮೆ ನಾನೊಬ್ಬ ಅಪರಿಚಿತನಾಗಿದ್ದೇನೆ ಎನಿಸುತ್ತದೆ. ನಾನು ಈ ಬಾರಿ ಹೋದಾಗಲೂ ಅಷ್ಟೇ ನಡೆದದ್ದು. ನನ್ನೂರಿನ ನದಿಯಲ್ಲಿ ನಾನು ಕಳೆದ ನನ್ನ ಬಾಲ್ಯವನ್ನು ನೆನಪಿಸಿಕೊಂಡರೇ ಮೈ ರೋಮಾಂಚನಗೊಳ್ಳುತ್ತದೆ. ಅಂಥಹ ನದಿ ದಂಡೆ, ನದಿಯೂ ಸೇರಿದಂತೆ ಇಂದು ಬೇಸರ ಮೂಡಿಸುತ್ತದೆ. ನಾನು ಇಂದಿನ ಪರಿಸ್ಥಿತಿಯ ಬಗ್ಗೆ ಹೇಳುವುದಕ್ಕೆ ಮುಂಚೆ, ಹಿಂದಿನ ಸ್ಥಿತಿಯನ್ನು ನಿಮಗೆ ಮನವರಿಗೆ ಮಾಡಿಕೊಡುತ್ತೇನೆ. ನಾನು ಚಿಕ್ಕವನಿದ್ದಾಗ ಎಂದರೇ, ಸರಿ ಸುಮಾರು ಐದಾರು ವರ್ಷದವನಾಗಿದ್ದಾಗಿನಿಂದಲೂ ಕಾವೇರಿ ನದಿಯಲ್ಲಿ ಆಡಿ ಬೆಳೆದಿದ್ದೇನೆ. ನಾನು ಈ ಮೊದಲೇ ನನ್ನೆಲ್ಲಾ ಬರವಣಿಗೆಗಳಲ್ಲಿ ಹೇಳಿರುವಂತೆ, ನನ್ನೂರು ಬಾನುಗೊಂದಿ ಸುತ್ತಲೂ ನೀರಿನಿಂದ ಆವರಿಸಿಕೊಂಡಿದೆ. ಮೂರು ದಿಕ್ಕುಗಳಿಂದಲೂ ಕಾವೇರಿ ಹರಿಯುತ್ತದೆ. ಕಾವೇರಿ ನದಿಗೆ ಒಂದು ಕಡೆಯಲ್ಲಿ ಸೋಪಾನಕಟ್ಟೆ ಕಟ್ಟಿದ್ದಾರೆ, ಆ ದಿನಗಳಲ್ಲಿ ಊರಿನ ಬಹುತೇಕ ಹೆಂಗಸರು ನದಿಗೆ ಹೋಗಿ ಬಟ್ಟೆ ತೊಳೆದು ಬರುತ್ತಿದ್ದರು. ಆ ಬದಿಯಲ್ಲಿ ಹೊಳೆ ಬಸವೇಶ್ವರ ಅಥವಾ ಹೊಳೆ ಬಸಪ್ಪನ ಗುಡಿ ಇದ್ದಿದ್ದರಿಂದ ಊರಿನವರಿಗೆ ಆ ಸ್ಥಳ ಪವಿತ್ರವೆನಿಸಿತ್ತು. ಅಲ್ಲಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತಿಸಿದ್ದವರೂ ಕೂಡ ಸತ್ತಿರಲಿಲ್ಲ. ದೇವರ ಪವಾಡವೋ ಅಥವಾ ಅಲ್ಲಿನ ಸ್ಥಳ ಮಹಾತ್ಮೆಯೋ ಅಂತೂ ಅಲ್ಲಿ ಈಜಾಡಲೂ ಈಜು ಕಲಿಯಲು ಅಡ್ಡಿ ಇರಲಿಲ್ಲ. ಆದರೇ ಹೆಂಗಸರು ಯೋಚಿಸುವ ರೀತಿಯೇ ಬೇರೆ, ನದಿಗೆ ಸೋಪಾನ ಕಟ್ಟೆ ಇದ್ದರೂ, ಕಲ್ಲಿನ ಮೇಲೆ ಬಟ್ಟೆ ತೊಳೆದಷ್ಟು ಖುಷಿ ಎನಿಸಿರಲಿಲ್ಲ. ಅದಲ್ಲದೇ, ಊರಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹೋಗುವುದು ಅವರಿಗೂ ಇಷ್ಟವಾಗಿರಲಿಲ್ಲ. ಆದ್ದರಿಂದ ಅವರವರ ಮನೆಗೆ ಹತ್ತಿರವಾಗುತ್ತಿದ್ದ ದಿಕ್ಕಿನಲ್ಲಿ ಮತ್ತು ಅವರ ಜಮೀನು ಇದ್ದ ಕಡೆಗೆ ಹೋಗಿ ಬಟ್ಟೆ ತೊಳೆದು ಬರುತ್ತಿದ್ದರು. ಕೆಲವರು ಅವರ ಜಮೀನಿನ ಕೆಲಸಕ್ಕೆ ಹೋದಾಗ ಬಟ್ಟೆಯನ್ನು ತೊಳೆದು ಬರುವುದು ವಾಡಿಕೆಯಾಗಿತ್ತು.
ನಾನು ಚಿಕ್ಕವನಿದ್ದಾಗ ನಾನು ಒಬ್ಬನೇ ಮಗನಾಗಿದ್ದರಿಂದ, ಅಮ್ಮನಿಗೆ ಮಗಳಂತೆಯೇ ಮನೆ ಕೆಲಸದಲ್ಲಿ ಸಹಾಯ ಮಾಡಬೇಕಿತ್ತು. ನಮ್ಮನಿಗೆ ಸ್ವಲ್ಪ ಆರೋಗ್ಯ ಸರಿ ಇಲ್ಲದಿದ್ದರಿಂದ ನಾನು ಅಲ್ಪ ಸ್ವಲ್ಪ ಕೆಲಸವನ್ನು ಮಾಡಿಕೊಡುತ್ತಿದೆ. ಹಳ್ಳಿಯಲ್ಲಿ ನೀರಿಗೆ ಸದಾ ಸಮಸ್ಯೆ ಇರುತ್ತದೆ. ನಲ್ಲಿಯಲ್ಲಿ ನೀರು ಬಾರದಿದ್ದಾಗ, ಬೋರ್ ವೆಲ್ ನಿಂದ, ನದಿಯಿಂದ, ಕಾಲುವೆಯಿಂದ ಸೈಕಲ್ಲಿನಲ್ಲಿ ನೀರು ಹೇರುತಿದ್ದೆ. ಇದು ನನ್ನೊಬ್ಬನಿಗೆ ಮಾತ್ರ ನನ್ನ ಸಹಪಾಠಿಗಳಿಗೆಲ್ಲ ಮಾಮೂಲಿಯಾಗಿತ್ತು. ನಾವೆಲ್ಲ ಖುಷಿಯಿಂದಲೇ ನೀರು ತರುತಿದ್ದೆವು. ಇದು ಸಹಾಯದ ದೃಷ್ಟಿಯಿಂದಲ್ಲ. ಓದುವುದನ್ನು ತಪ್ಪಿಸಿಕೊಳ್ಳುವುದರಿಂದ. ನಮ್ಮಮ್ಮ ಬಹಳ ಮುಗ್ದ ಮನಸ್ಸಿನವರು, ಮಗ ಬೆಳೆಯುತ್ತಿದ್ದಾನೆಂಬ ಅರಿವು ಅವರಿಗೆ ಬರಲೇ ಇಲ್ಲ. ಇಂದಿಗೂ ಅಷ್ಟೇ ಅವರು ಒಮ್ಮೊಮ್ಮೆ ಬಹಳ ಮುಗ್ದತೆಯಿಂದ ವರ್ತಿಸುತ್ತಾರೆ. ಪ್ರತಿ ಭಾನುವಾರ ಅಮ್ಮ ನದಿಗೆ ಹೋಗಿ ಬಟ್ಟೆ, ಪಾತ್ರೆ ಎಲ್ಲವನ್ನೂ ತೊಳೆದುಕೊಂಡು ಬರುವುದು ಪದ್ದತಿಯಾಯಿತು. ನಾನು ಚಿಕ್ಕಂದಿನಿಂದ ರೂಢಿಯಾದೆ. ಆದರೇ ಬರು ಬರುತ್ತಾ, ನಾನು ಹೈಸ್ಕೂಲಿಗೆ ಬಂದರೂ ನಮ್ಮಮ್ಮ ನನ್ನನು ಪಾತ್ರೆ ಹೊತ್ತೊಯ್ದು ಬಾ, ಎನ್ನತೊಡಗಿದರು. ಅದಲ್ಲದೇ, ಪಾತ್ರೆ ತೊಳೆದುಕೊಡು ಎನ್ನುತ್ತಿದ್ದರು. ನಗರಗಳಂತೆ ಮನೆಯೊಳಗೆ ಪಾತ್ರೆ ತೊಳೆಯುವುದಿಲ್ಲ, ಅದೂ ನದಿಯ ದಂಡೆಯಲ್ಲಿ ಊರಿನ ಹೆಂಗಸರ ಮುಂದೆ ಪಾತ್ರೆ ತೊಳೆಯಬೇಕೆಂದಾಗ ಆಗುತ್ತಿದ್ದ ಅವಮಾನ ಅಷ್ಟಿಷ್ಟಲ್ಲ. ಮುಂಜಾನೆ ಬೆಳಗಾಗುವ ಮುನ್ನಾ ಹೊಳೆಗೆ ಹೋಗುವಾಗ ಏನೂ ಎನಿಸುತ್ತಿರಲಿಲ್ಲ, ವಾಪಾಸ್ಸು ಬರುವಾಗ ಊರಿನ ಮಧ್ಯೆ, ಬಟ್ಟೆ, ಪಾತ್ರೆ ಹೊತ್ತು ಬರುವಾಗ ಎಲ್ಲಿಲ್ಲದ ಮುಜುಗರ. ಸೈಕಲ್ಲಿನಲ್ಲಿ ಹೋಗುತ್ತೇನೆಂದರೆ ಬೈಗುಲ. ನಾವು ಲೈನ್ ಹಾಕುತ್ತಿದ್ದ ಹುಡುಗಿಯರು ನಮ್ಮನ್ನು ನೋಡಿ ಹಲ್ಲು ಕಿಸಿಯುತ್ತಿದ್ದರು.
ಇಂಥಹ ದೃಶ್ಯಗಳು ಇಂದು ಸಿಗುವುದಿಲ್ಲ, ಕಾರಣ ಹೆಚ್ಚು ಕಡಿಮೆ ಎಲ್ಲರ ಮನೆಯಲ್ಲಿಯೂ ನಲ್ಲಿಗಳಿದ್ದು, ಜೊತೆಗೆ ನೀರಿಗೆ ಸಮಸ್ಯೆಯೂ ಅಷ್ಟಾಗಿಲ್ಲ ಮತ್ತೂ ಬಟ್ಟೆ ತೊಳೆಯುವುದಕ್ಕೆ ವಾಷಿಂಗ್ ಮೆಷಿನ್ ಬೇರೆ ಬಂದು ನಿಂತಿದೆ. ಆದರೂ ಈಗ ಬಟ್ಟೆ ತೊಳೆಯಬೇಕೆಂದರೆ, ಕಟ್ಟೆಯ ಕಡೆಗೆ ಹೋಗಲು ಸಾಧ್ಯವಿಲ್ಲ. ಅಲ್ಲಿ ವಿದ್ಯುತ್ ಉತ್ಪಾದನೆಗೆಂದು ಇಡೀ ಪ್ರದೇಶವನ್ನು ಹೆಚ್ಚು ಕಡಿಮೆ ನಿರ್ಣಾಮ ಮಾಡಿದ್ದಾರೆ. ದುರಂತವೆಂದರೇ, ಒಂದು ಕಡೆ ವಿದ್ಯುತ್ ಉತ್ಪಾದನೆಗೆಂದು ಕಾಮಗಾರಿ ನಡೆಯುತ್ತಿರುವುದರಿಂದ ನೀರು ಗಲೀಜು ಆಗುತ್ತಿದೆ, ಮತ್ತೊಂದೆಡೆ ಮರಳು ತೆಗೆಯುವುದರಿಂದ ಸಂಪೂರ್ಣ ನಾಶವಾಗಿದೆ. ನಾನು ಚಿಕ್ಕವನಿದ್ದಾಗ ಮರಳು ತೆಗೆಯುವುದೆಂದರೇ ಬೇಸಿಗೆಯಲ್ಲಿ, ನದಿಯ ನೀರು ಕಡಿಮೆಯಾದಾಗ, ಕೆಲವೊಂದು ಸೀಮಿತ ಸ್ಥಳಗಳಲ್ಲಿ ಮರಳು ತೆಗೆಯುತಿದ್ದರು. ಆದರೇ ಈಗ, ನದಿಯ ಅಡಿಯಿಂದಲೇ ತೆಗೆಯುತ್ತಿದ್ದಾರೆ. ಅದಲ್ಲದೆ, ನದಿಯ ದಂಡೆಯಲ್ಲಿದ್ದ ಮಣ್ಣನ್ನು ಸಂಪೂರ್ಣ ಅಗೆದು ಅದರ ಅಡಿಯಿಂದ ಮರಳನ್ನು ತೆಗೆದಿದ್ದಾರೆ. ನೀವು ಯಾವುದೇ ನದಿಯನ್ನು ನೋಡಿದರೆ, ನದಿಯ ಅಂಚಿನಲ್ಲಿ ಮಣ್ಣು ಇರುತ್ತದೆ, ಅದು ಕೆಸರು ಮಣ್ಣು. ಅದರ ಅಡಿಯಲ್ಲಿ ಮರಳು ಇರುತ್ತದೆ. ಐತಿಹಾಸಿಕವಾಗಿ ಮರಳು ತೆಗೆಯುವುದೆಂದರೇ ನೀರು ಕಡಿಮೆಯಾದಾಗ ನೇರ ಮರಳನ್ನು ತೆಗೆಯುವುದು. ಮಣ್ಣನ್ನು ಅಗೆದು ಅದರ ಅಡಿಯಲ್ಲಿರುವ ಮರಳನ್ನು ತೆಗೆಯುವುದಲ್ಲ.
ಕೇವಲ ಎರಡು ವರ್ಷದ ಹಿಂದೆ ಹೀಗಿರಲಿಲ್ಲ. ಶತಮಾನಗಳಿಂದ ಉಳಿಸಿಕೊಂಡಿದ್ದ ಮರಳನ್ನು ಕೇವಲ ಒಂದು ವರ್ಷದಲ್ಲಿ ಈ ಮಟ್ಟಕ್ಕೆ ನಾಶ ಮಾಡಿದ್ದಾರೆಂದರೇ ಮನುಷ್ಯರ ಎನಿಸುತ್ತದೆ. ಮನುಷ್ಯವೆಂಬ ಮೃಗವನ್ನು ಬಿಟ್ಟರೇ ಮತ್ತಾರು ಇಂಥಹ ಕೃತ್ಯವನ್ನು ನಡೆಸಲಾರರು. ನದಿಯಂಚಿನಲ್ಲಿ ಕನಿಷ್ಟ ಐವತ್ತು ಮೀಟರಿನಷ್ಟು ಹೊಂಗೆ ತೋಪು ಇತ್ತು. ಇಂದಿಗೆ ದೂರಕ್ಕೊಂದು ಮರ ಸಿಗುವುದು ಹೆಚ್ಚು. ನಾವು ಚಿಕ್ಕವರಿದ್ದಾಗ ಬೇಸಿಗೆಯಲ್ಲಿ ಮರಳಲ್ಲಿ ಮಲಗಿ, ನಂತರ ಹೊಳೆಯಲ್ಲಿ ಮಿಂದು ಹೊಂಗೆಮರದ ತಂಪಿನಲ್ಲಿ ಆಟವಾಡುತ್ತಿದ್ದೆವು. ಇಡೀ ಊರಿನ ಜನರು ಹೊಂಗೆ ಕಾಯಿ ಆಯ್ದು ಬರುತ್ತಿದ್ದೆವು. ಹೊಂಗೆ ಕಾಯಿ ತಂದು ಅದನ್ನು ಬಿಡಿಸಲು ಮುಸ್ಸಂಜೆಯಲ್ಲಿ ಬೀದಿಯಲ್ಲಿ ಕುಳಿತು ಎಲ್ಲರ ಮನೆಯ ಯೋಗ ಕ್ಷೇಮಗಳು ಬರುತ್ತಿದ್ದವು. ಅಂಥಹ ಒಂದು ದಿನ ಮತ್ತೆಂದು ಬರುವುದಿಲ್ಲವೆಂಬುದು ನೋವಿನ ಸಂಗತಿ. ಇಷ್ಟು ಪರಿಸರ ನಾಶ ಮಾಡಿದ ಮೇಲೆ ಅವರು ಸಿರಿವಂತರಾಗಿರಬೇಕಿತ್ತು, nature has no mercy ಅನ್ನೋ ನನ್ನ ನೆಚ್ಚಿನ ಸಾಲುಗಳು ಅವರನ್ನು ಭಾಧಿಸುತ್ತಿವೆ. ಕನಿಷ್ಟವೆಂದರೂ ಹತ್ತಾರು ಕೋಟಿಗಳ ಮರಳನ್ನು ಸಾಗಿಸಿದ್ದಾರೆ, ಆದರೇ ನಮ್ಮೂರಿನ ಒಬ್ಬನ ಬಳಿಯಲ್ಲಿಯೂ ಹಣವಿಲ್ಲ, ಇನ್ನೂ ಸಾಲದ ಕೂಪದಲ್ಲಿ ಮುಳುಗಿದ್ದಾರೆ. ದುಡಿದ ಹಣವನ್ನೆಲ್ಲಾ ಮಜಾ ಮಾಡಿದ್ದಾರೆ. ನನ್ನೂರಿನಿಂದ ನೂರು ಕೀಮಿ ಇರುವ ಮೈಸೂರಿಗೆ ಹೋಗಿ ಸಿನೆಮಾ ನೋಡಿ ಬರುವುದು, ಹಾಸನಕ್ಕೆ ಹೋಗಿ ಕುಡಿದು ಬರುವುದು, ಹೀಗೆ ಎಲ್ಲರ ಕೈ ನೋಡಿದರೂ ಮೊಬೈಲ್ ಗಳು, ಬೈಕ್ ಗಳು. ಬೈಕ್ ರಿಪೇರಿ ಮಾಡಿಸಲಾಗದೆ ಮನೆಯಲ್ಲಿಯೇ ನಿಲ್ಲಿಸಿರುವವರ ಸಂಖ್ಯೆ ಏನು ಕಡಿಮೆಯಿಲ್ಲ.
ಮನುಷ್ಯ ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾನೆಂಬುದನ್ನು ನಾನು ಒಪ್ಪುತ್ತೇನೆ. ಆದರೇ ಯಾರೋ ಹತ್ತು ಜನರು ಮಾಡಿದ ಮರಳಿನ ಧಂಧೆಯಿಂದ ಇಡೀ ಊರಿನವರು ಕಷ್ಟ ಅನುಭವಿಸಬೇಕಾ? ನಾನೊಬ್ಬ ಸೇದುವ ಸಿಗರೇಟಿನಿಂದ ಇಡೀ ಜಗತ್ತು ಹೊಗೆಯನ್ನು ಕುಡಿಯಬೇಕಾ? ಸುಖ ಅನುಭವಿಸುತ್ತಿರುವವರು ಕೇವಲ ಒಂದು ಪರ್ಸೆಂಟ್ ಜನರು. ಅದರಿಂದಾಗುವ ನೋವನ್ನು ಉನ್ನಬೇಕಿರುವುದು ಉಳಿದ ೯೯ ಪರ್ಸೆಂಟ್. ಇದು ಎಲ್ಲೆಡೆಯಲ್ಲಿಯೂ ಅನ್ವಯಿಸುತ್ತದೆ. ರಾಜಕೀಯವನ್ನೇ ತೆಗೆದುಕೊಳ್ಳೋಣ, ರಾಜಕಾರಣಿಗಳಿರುವುದು ಬೆರಳೆಣಿಕೆಯಷ್ಟು. ಅಬ್ಬಬ್ಬಾ ಎಂದರೇ ಹತ್ತು ಸಾವಿರ ಜನರು ನಮ್ಮ ರಾಜ್ಯದಲ್ಲಿ. ಟಿವಿ ಚಾನೆಲ್ ಗಳಿರುವುದು ಇಪ್ಪತ್ತು ಮುವತ್ತು, ಅದರಲ್ಲಿ ಕೆಲಸ ಮಾಡುವವರು ಒಂದೈದು ಸಾವಿರ ಜನರು. ಈ ಹದಿನೈದು ಸಾವಿರ ಜನರು ಮಾಡುವ ಅನಾಹುತಗಳನ್ನು ಅನುಭವಿಸುವವರು ಆರು ಕೋಟಿ ಜನರು. ನೀವು ಇದನ್ನು ಗಂಬೀರವಾಗಿ ಆಲೋಚಿಸಿ ನೋಡಿ, ನಮ್ಮ ನೆಮ್ಮದಿ ಹಾಳು ಮಾಡುತ್ತಿರುವುದು ನಿಜಕ್ಕೂ ಸಮಾಜವಲ್ಲ, ಕೇವಲ ಬೆರಳೆಣಿಕೆಯಷ್ಟು ಕ್ರೂರ ಮೃಗಗಳು. ನೆಮ್ಮದಿಯಿಂದ ಕುಳಿತು ಆಲೋಚಿಸಿ, ನಮ್ಮ ಮನೆಯವರ ಮೇಲೆ ನಮಗೆ ಕೋಪವಿಲ್ಲ, ಪಕ್ಕದ ಮನೆಯವರ ಮೇಲೆ ಶತ್ರುತ್ವವಿಲ್ಲ. ನಾವು ನಮ್ಮ ರಾಜಕಾರಣಿಯನ್ನು ಸಿರಿಯಸ್ ಆಗಿ ತೆಗೆದುಕೊಂಡಿರುವುದಿಲ್ಲ. ನಮ್ಮ ಕೆಲಸ ನಾವು ಮಾಡಿಕೊಂಡು ನೆಮ್ಮದಿಯ ಉಸಿರು ಬಿಡುವುದಕ್ಕೆ, ಈ ಮಾಧ್ಯಮದವರು ಬಿಡುವುದಿಲ್ಲ.
ಮುಂಜಾನೆಯಿಂದ ರಾತ್ರಿಯವರೆಗೆ ಯಾವುದೇ ಚಾನೆಲ್ ನೋಡಿದರೂ ನೆಮ್ಮದಿ ಸಿಗುತ್ತದೆಯೆಂಬ ಭರವಸೆ ನನಗೆ ಹೋಗಿದೆ. ಕರ್ನಾಟಕದಲ್ಲಿ ಆರು ಕೋಟಿ ಜನರು ಇದ್ದಾರೆಂದ ಮೇಲೆ, ಈ ಮುಠಾಳರು ಯಾಕೆ ಬರೀ ನೂರು ಇನ್ನೂರು ಮುಖಗಳನ್ನು ತೋರಿಸಿ ಜನರ ನೆಮ್ಮದಿ ಕೆಡಿಸುತ್ತಾರೆ. ನೀವು ಒಂದೇ ಚಾನೆಲ್ ಅನ್ನು ಒಂದು ತಿಂಗಳು ನೋಡಿ, ಬಂದ ಮುಖಗಳೇ ಬರುತ್ತವೆ. ಬಿಜೆಪಿ ಎಂದರೇ ಇಪ್ಪತ್ತು ಮುಖಗಳು, ಕಾಂಗ್ರೇಸ್ ಹತ್ತು ಮುಖಗಳು, ಜೆಡಿಎಸ್ ಐದು ಮುಖಗಳು, ಇದನ್ನು ಹೊರತುಪಡಿಸಿದ ಒಂದು ಸಮಾಜವಿದೆ. ಅದನ್ನು ಒಮ್ಮೆ ಗಮನಿಸಿ. ನಗರ ಬಿಟ್ಟು ಹೊರಕ್ಕೆ ಹೋಗಿ ಒಮ್ಮೆ ನೋಡಿ. ಸಮಾಜದ ಒಳಗೆ ಅಡಗಿರುವ ಹಲವಾರು ಒಳ್ಳೆತನಗಳನ್ನು ತೋರಿಸಿ ಇಲ್ಲದಿದ್ದಲ್ಲಿ ಸುಮ್ಮನೆ ಇರಿ. ನೀವು ಅವತಾರ ಪುರುಷರಂತೆ ಬಿಂಬಿಸಿಕೊಳ್ಳಬೇಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...