ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

07 March 2012

ನಾನು ಬರವಣಿಗೆಯನ್ನು ಹವ್ಯಾಸಕ್ಕಾಗಲೀ ಮನರಂಜನೆಗಾಗಲೀ ಶುರು ಮಾಡಲಿಲ್ಲ. ಬರವಣಿಗೆಯಿಂದ ಅನ್ನ ಸಂಪಾದನೆಯ ಕನಸನ್ನೂ ಕಂಡಿಲ್ಲ. ಬರೆಯಲು ಶುರು ಮಾಡಿದ್ದು, ಸುಮ್ಮನೆ ಬರೆಯುವುದೇ ಒಂದು ಬಗೆಯ ಕಲೆಯಾಯಿತು. ಮನಕ್ಕೊಪ್ಪುವ ಬರವಣಿಗೆಯಾಯಿತು. ಅದೆಷ್ಟರ ಮಟ್ಟಿಗೆ ನಾನು ಅದಕ್ಕೆ ದಾಸನಾದನೆಂದರೇ ರಾತ್ರೋ ರಾತ್ರಿ ಎದ್ದು ಬರೆಯತೊಡಗಿದೆ, ನಾನು ಬರೆದಿದ್ದನ್ನು ಮತ್ತೊಮ್ಮೆ ನಾನೇ ಓದಲು ಆಗುವುದಿಲ್ಲ, ಅಷ್ಟೂ ಕೆಟ್ಟದ್ದಾಗಿರುತ್ತದೆ ನನ್ನ ಬರವಣಿಗೆಗಳು, ನಾನು ಸದಾ ಹೇಳುವಂತೆ ನನ್ನ ಮನಸ್ಸಿನೊಳಗಿರುವುದನ್ನು ನಿಮ್ಮ ಮುಂದಿಡುತ್ತೇನೆ, ಮುಚ್ಚು ಮರೆಯಿಲ್ಲದೇ. ನನ್ನ ಮನಸ್ಸು ಅಷ್ಟೇ ವಿಕಾರವಾಗಿರಬಹುದೇ? ನೀವೇ ಹೇಳುವಂತೆ ನಾನು ಹೇಳಿದ್ದನ್ನು ಮಾಡುವುದೇ ಇಲ್ಲಾ, ನಾನೊಬ್ಬ ಸುಳ್ಳನಾ ಎಂದರೇ ನಾನು ನಿರುತ್ತರ. ಮೋಸಗಾರನಾ? ಮಾತಿಗೆ ತಪ್ಪುವವನಾ? ಎಲ್ಲದ್ದಕ್ಕೂ ನಿರುತ್ತರ. ಮತ್ತೇ ದೇಶದ ಅಂಕು ಡೊಂಕುಗಳನ್ನು ತಿದ್ದಲೂ ಹೋಗುವ ನೀನು ನಿಮ್ಮ ಮನೆಯ ಅಡುಗೆಮನೆಯಲ್ಲಿನ ಹುಳುಕನ್ನು ಮುಚ್ಚಬೇಕೆನಿಸುವುದಿಲ್ಲವೇ? ನಿನ್ನ ತೆವಳಿಗೆ ದೇಶದವರನ್ನೆಲ್ಲಾ ಬೈಯ್ಯುತ್ತೀಯಲ್ಲ, ನೀನು ಕಡೆದು ಹಾಕಿರುವುದಾದರೂ ಏನು? ಒಂದು ಚಿಲ್ಲರೆ ಡಿಗ್ರೀ ಅನ್ನೋದನ್ನ ಬಿಟ್ಟರೇ ಬೇರೇನೂ ಇಲ್ಲ. ನಿನ್ನ ಥೀಸಿಸಿ ನೀನೆ ಬರೆದೆಯೋ ಅಥವಾ ಮತ್ತಾರ ಕೈಯಿಂದ ಬರೆಸಿದ್ದಿಯೋ ಯಾವನಿಗೆ ಗೊತ್ತು? ಕಾಸು ಕೊಟ್ಟರೇ ಬಕೇಟ್ ಹಿಡಿದರೇ ಏನು ಸಿಗುವುದಿಲ್ಲ ಈ ಲೋಕದಲ್ಲಿ? ನಿನ್ನದೇನು ಹೊರತಲ್ಲ ಬಿಡು.
ಎದೆ ಮುಟ್ಟಿಕೊಂಡು ಹೇಳು ನಿನ್ನದು ಒಂದು ಸಾರ್ಥಕತೆಯ ಬದುಕೆಂದು? ಇಂಥಹ ಪ್ರಶ್ನೆ ದಿಡೀರನೇ ಕನಸಿನಲ್ಲಿ ಕಾಡಿದರೇ ಏನಾಗಬೇಕು? ಕನಸಿನಲ್ಲಿ ಬಂದದ್ದು ನಾಳೆ ನೇರವಾಗಿ ಬಂದರೇ? ಉತ್ತರಿಸುವ ಧೈರ್ಯ ನನಗಿಲ್ಲ. ಉತ್ತರವಿದ್ದರೇ ತಾನೇ ಧೈರ್ಯ ಬರುವುದು? ತಾನು ಬದುಕಬೇಕು, ತಾನು ತನ್ನ ನೆಚ್ಚಿನ ಜೀವನವನ್ನು ಕಟ್ಟಿಕೊಳ್ಳಬೇಕು, ಬರೀ ಬೊಬ್ಬೆ ಇಕ್ಕಿದರೇ ಏನೂ ಸಿಗುವುದಿಲ್ಲ. ನಾನು ಇದುವರೆಗೂ ಮಾಡಿರುವುದು ಅದನ್ನೇ ನನ್ನ ಕೈಯ್ಯಾರೆ ನಾನು ಕಿಸಿದಿರುವುದು ಏನೇನೂ ಇಲ್ಲ. ದಂಡ ಪಿಂಡದ ಹಾಗೆ ಕುಳಿತು ಅನ್ನ ತಿಂದಿರುವುದನ್ನು ಬಿಟ್ಟರೇ ಹೇಳಿಕೊಳ್ಳುವ ಒಂದೇ ಒಂದು ಸಾಲು ಉಪಯುಕ್ತ ಜೀವನವಿಲ್ಲ. ಇಲ್ಲಿ ಸುಮ್ಮ ಸುಮ್ಮನೆ ಗೀಚುವುದು, ಅವರಿವರನ್ನು ಹಂಗಿಸುವುದು, ಚೇಡಿಸುವುದು ಇವೆಲ್ಲವೂ ಅರ್ಥಹೀನಾ ಆದ್ದರಿಂದ ನಾನು ನನ್ನ ಬರವಣಿಗೆಯನ್ನು ನಿಲ್ಲಿಸುತ್ತಿದ್ದೇನೆ. ಇಲ್ಲಿಯ ತನಕ ಓದಿ ಸಹಕರಿಸಿದ ನಿಮ್ಮೆಲ್ಲರಿಗೂ ನನ್ನ ನಮನಗಳು. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.

No comments:

Post a Comment