21 ಮೇ 2012

ಹನ್ನೆರಡು ವರುಷಗಳ ನಂತರ ಜೊತೆಯಲ್ಲಿ ಕೂರುವಾಸೆ!!!




ಪ್ರಿಯ ಗೆಳೆಯರೇ/ಗೆಳತಿಯರೇ,


ರಾಕೇಟ್ ಸ್ಪೀಡಿನಲ್ಲಿ ಓಡುತ್ತಿರುವ ನಮ್ಮೆಲ್ಲರ ಜೀವನವನ್ನು ಒಂದೆರಡು ಕ್ಷಣಕ್ಕೆ ನಿಲ್ಲಿಸಿ, ಹನ್ನೆರಡು ವರುಷಗಳ ಹಿಂದಿನ ಎರಡು ವರ್ಷದ ಇಪ್ಪತ್ತು ತಿಂಗಳ ಪುಟವನ್ನು ಬಲವಂತವಾಗಿ ತಿರುಗಿಸಿ ನೋಡೋಣ. 1998 ರ ಜೂನ್ ತಿಂಗಳಿನ ಎರಡನೇ ವಾರದಲ್ಲಿ ಹತ್ತನೇಯ ತರಗತಿ ಪಾಸಾದ ಖುಷಿ ಒಂದುಕಡೆಯಿದ್ದರೇ, ಮತ್ತೆ ಪಿಯುಸಿ ಓದುವುದು ಮತ್ತೆ ಪರೀಕ್ಷೇ ಅಯ್ಯೋ ದೇವರೇ ಎಂಬ ಬೇಸರವೂ ಇತ್ತು. ಆದರೂ, ಶಾಲಾ ಯೂನಿಫಾರಂ ಇರುವುದಿಲ್ಲ, ನಿಗದಿತ ಹೋಂ ವರ್ಕ್ ಇರುವುದಿಲ್ಲ, ಸ್ವಲ್ಪ ಸ್ವಾತಂತ್ರ್ಯ ಸಿಗುತ್ತದೆಂಬು ಆಶಾಕುದುರೆಯು ನಮ್ಮ ಮುಂದೆ ಓಡುತ್ತಿತ್ತು. ಇಂಥಹ ಸಂಧರ್ಭದಲ್ಲಿ ಬಯಸಿ ಬಯಸಿ ಹಳ್ಳಕ್ಕೆ ಬಿದ್ದದ್ದು ಕನ್ನಡ ಭಾರತಿ ಎಂಬ ಕಾಲೇಜಿಗೆ. 1998 ರಿಂದ 2000 ಜೂನ್ 5 ರ ತನಕ ನಡೆದ ಹಲವಾರು ಘಟನಾವಳಿಗಳು ಕೆಲವರಿಗೆ ಖುಷಿ ತಂದಿರಬಹುದು, ಕೆಲವರಿಗೆ ದುಃಖ ಮತ್ತು ಹಲವರಿಗೆ ಅದೊಂದು ಸರ್ವೇ ಸಾಮಾನ್ಯವಾದ ಸಂಗತಿ ಮತ್ತು ಹಲವರಿಗೆ ಅದೇನೂ ಅಂಥಹ ಮಹತ್ತರ ವಿಷಯವಲ್ಲದಿರಬಹುದು. ಕೆಲವರಿಗೆ ಪಿಯುಸಿಯಲ್ಲಿ ಓದಿದವರು ಆತ್ಮೀಯ ಗೆಳೆಯರೆನಿಸಿರಬಹುದು, ಕೆಲವರಿಗೆ ಸ್ನೇಹಿತರೆಂಬವರೇ ಇಲ್ಲದಿದ್ದಿರಬಹುದು, ಕೆಲವರಿಗೆ ಎಲ್ಲರೂ ಶತ್ರುಗಳಂತೆ ಎನಿಸಿರಬಹುದು, ಮತ್ತೂ ಕೆಲವರಿಗೆ ಅಂದಿದ್ದ ಎಲ್ಲರೂ ಮೂರ್ಖರೆನಿಸಿರಬಹುದು. ಕೆಲವರು ಜೀವನದ ಹೋರಾಟದಲ್ಲಿ ಒದ್ದಾಡಿ ಅಂದಿದ್ದ ಕೀಳರಿಮೆಯಿಂದ ಉನ್ನತ ಮಟ್ಟಕ್ಕೆ ಬೆಳೆದಿರಬಹುದು, ಕೆಲವರ ಜೀವನ ದುಸ್ತರವೆನಿಸುವ ಮಟ್ಟಕ್ಕೆ ಹೋಗಿರಲೂಬಹುದು. ಆದರೇ, ಯಾರ ವೈಯಕ್ತಿಕ ಜೀವನದ ಬಗ್ಗೆ ನಾವು ಮಾತನಾಡಬಯಸುವುದಿಲ್ಲ. ಆನೆಯ ತೂಕ ಆನೆಗೆ ಇರುವೆಯ ತೂಕ ಇರುವೆಗೆ. ನಾವಿಲ್ಲಿ ಮಾತನಾಡುವುದು ಕೇವಲ ಸ್ನೇಹಿತರಾಗಿ!!! ಇಲ್ಲಿ ಮೇಳರಿಮೆ ಕೀಳರಿಮೆಗೆ ಜಾಗವಿಲ್ಲ. ಎಲ್ಲರೂ ಸಮಾನ ಮನಸ್ಕರು ಮತ್ತು ಸಹೃದಯರೆಂಬುದು ನಮ್ಮ ನಂಬಿಕೆ.

ಎರಡು ವರ್ಷಗಳು ನನ್ನ ಬದುಕಿನಲ್ಲಿ ಏನೇನೂ ಅಲ್ಲಾ, ಎಂಬುವರ ಜೊತೆಗೆ ನಾನು ಚರ್ಚೆ ಮಾಡಲು ಬಯಸುವುದಿಲ್ಲ. ಎರಡು ವರ್ಷಗಳನ್ನು ತಮ್ಮ ತಮ್ಮ ರೀತಿಯಲ್ಲಿ ಆನಂದಿಸಿದ, ನೆನಪುಗಳು ಕಾಡುತ್ತಿರುವ ನನ್ನಂಥಹ ಹಲವಾರು ಸ್ನೇಹಿತರ ಪರವಾಗಿ ವಾದಿಸುತ್ತೇನೆ. ಆ ಎರಡು ವರ್ಷಗಳನ್ನೊಮ್ಮೆ ಮೆಲುಕು ಹಾಕಿ ನೋಡಿ, ಅದೆಂಥಹ ದಿನಗಳವು, ಇಂದು ನೆನಪಿಸಿಕೊಂಡರೇ, ನಗು ಬರುತ್ತದೆ, ಅಳು ಬರುತ್ತದೆ, ಹೆಮ್ಮೆ ಎನಿಸುತ್ತದೆ, ಥೂ ಅಸಹ್ಯವೆನಿಸುತ್ತದೆ. ನಾವಾರು ಕೆಟ್ಟವರಲ್ಲ ಆ ದಿನಗಳಲ್ಲಿ, ನಾವಾರು ಸಭ್ಯರೂ ಅಲ್ಲಾ! ಅಂದರೇ ನಾವು ಏನಾಗಿದ್ದೇವು? ಇಂಥಹ ಪ್ರಶ್ನೆಗಳು ಹಲವಾರು ಬಾರಿ ಬಂದು ಹೋಗುತ್ತವೆ. ಆ ದಿನಗಳಲ್ಲಿ ಎಲ್ಲರನ್ನೂ ರೇಗಿಸಿದ್ದೇವೆ, ಚುಡಾಯಿಸಿದ್ದೇವೆ, ಅಳಿಸಿದ್ದೇವೆ, ಗೋಳಾಡಿಸಿದ್ದೇವೆ, ಎಲ್ಲಿಯೂ ದ್ವೇಷ ಸಾಧಿಸಿಲ್ಲ, ಎಲ್ಲಿಯೂ ಕೈ ಕೈ ಮಿಲಾಯಿಸಿ ಜಗಳವಾಡಿಲ್ಲ. ನಮ್ಮೆಲ್ಲರ ಜಗಳ ಲ್ಯಾಬ್ ಮುಗಿಯುವ ತನಕ, ಮುಗಿದ ನಂತರ ಎಲ್ಲರೂ ಒಂದೇ!!!!

ಹನ್ನೆರಡು ವರ್ಷಗಳ ಬಳಿಕ ನಾವೆಲ್ಲರೂ ಯಾಕೆ ಒಂದೆಡೆ ಸೇರಿ ನಾಲ್ಕು ಗಂಟೆಗಳ ಕಾಲ ಸ್ವಲ್ಪ ಹರಟಬಾರದೆಂಬುದು ನನ್ನ ಬಯಕೆ. ಆದ್ದರಿಂದ ಜೂನ್ ಒಂದು 2012 ರಂದು ಕೊಣನೂರಿನ ಬಳಿಯಿರುವ ಬಾನುಗೊಂದಿಯೆಂಬ ಒಂದು ಸುಂದರ ಹಳ್ಳಿಯ, ಕಾವೇರಿ ನದಿ ದಂಡೆಯಲ್ಲಿ, ತಂಪಗಿನ ವಾತಾವರಣದಲ್ಲಿ, ಬೆಚ್ಚನೆಯ ಬೆಂಕಿ ಉರಿಸುತ್ತಾ, ಒಬ್ಬರಿಗೊಬ್ಬರು ಉರಿಸಿದ ಆ ದಿನಗಳ ಮೆಲಕು ಹಾಕೋಣ ಬನ್ನಿ.

ತಮ್ಮ ಸಮಯ ಅಮೂಲ್ಯವೆಂಬುದು ನಮ್ಮೆಲ್ಲರಿಗೂ ತಿಳಿದಿದೆ, ಪಿಯುಸಿಯೆಂಬ ಎರಡು ವರ್ಷ ನಿಮ್ಮ ಜೀವನದಲ್ಲಿ ಅತ್ಯಮೂಲ್ಯವಲ್ಲದಿದ್ದರೂ ಇರಬಹುದು, ಆದರೇ ಆ ಎರಡು ವರುಷಗಳು ಅಮೂಲ್ಯವೆಂದು ತೀರ್ಮಾನಿಸಿರುವ ನಮ್ಮೆಲ್ಲರಿಗೂ, ನಮ್ಮೆಲ್ಲಾ ಸ್ನೇಹಿತರನ್ನು ನೋಡುವುದು, ಮಾತನಾಡಿಸುವುದು ಬಹಳ ಸಂತಸದ ವಿಷಯ.

ಆದ್ದರಿಂದ 2012ರ ಜೂನ್ ತಿಂಗಳ 1, 2 ಅಥವಾ 3 ರಂದು ನಮ್ಮ ಜೊತೆ ಸೇರಿ ನಮ್ಮ ಎರಡು ಕ್ಷಣದ ನಗುವಿಗೆ ಪಾತ್ರರಾಗಿ.


ನಿಮ್ಮವರು,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...