ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

18 July 2012

ಮೊಬೈಲ್ ಮಾಯೆ!!!

ನಾನು ಹಿಂದಿನ ಬ್ಲಾಗ್ ನಲ್ಲಿ ಬರೆದಿದ್ದೆ, ಮೊಬೈಲ್ ಮತ್ತು ನನ್ನ ಸಂಭಂಧವನ್ನು ಹೇಳುತ್ತೇನೆಂದು. ನಾನು ಮೊದಲ ಬಾರಿಗೆ ಮೊಬೈಲ್ ಎಂಬುದನ್ನು ಹಿಡಿದಿದ್ದು ಅಥವಾ ಕೊಂಡಿದ್ದು ಬಿಎಸ್ಸಿ ಮುಗಿದ ದಿನಗಳಲ್ಲಿ. ಬಿಎಸ್ಸಿ ಮುಗಿಸಿದ ನಂತರ ನಾನು ಬೆಂಗಳೂರಿಗೆ ಬಂದು ಇಲ್ಲಿ ಕೆಲಸಕ್ಕೆ ಸೇರುವುದೆಂದು ನಿರ್ಧರಿಸಿದೆ. ಆ ಸಮಯದಲ್ಲಿ ನಮ್ಮ ಭಾವನ ಮನೆಯಲ್ಲಿದ್ದು ಕೆಲಸ ಹುಡುಕುತ್ತಿದ್ದೆ. ನಮ್ಮ ಭಾವನ ಬಳಿಯಲ್ಲಿ ಹಳೆಯ ಸೀಮಾನ್ಸ್ ಮೊಬೈಲ್ ಇತ್ತು, ಅದು ರಿಂಗ್ ಆಗುವುದನ್ನು ಕೇಳಿದರೇ ಕಣ್ಣೀರು ಸುರಿಯುವಂತಿತ್ತು. ಕಿರೋ ಎನ್ನುವ ಕೀರಳು ಧ್ವನಿ. ಆ ಸಮಯಕ್ಕೆ ಭಾವನ ನಂಬರ್ ಅನ್ನು ನಾನು ಎಲ್ಲಾ ಕಡೆಯಲ್ಲಿಯೂ ಕೊಟ್ಟಿದ್ದೆ. ಬೆಂಗಳೂರೆಂಬ ದರಿದ್ರ ನಾಡಿಗೆ ಮೊದಲ ಬಾರಿ ಬಂದವನು ಬೇಗ ಬಹುಬೇಗ ಇಲ್ಲಿಂದ ದಾಟಬೇಕೆನಿಸುತ್ತದೆ. ನಾನು ಈಗ ಹೆಮ್ಮೆಯಿಂದ ಎಲ್ಲರಿಗೂ ಹೇಳುತ್ತೇನೆ, ನಮ್ಮ ಬೆಂಗಳೂರು ಎಂದು. ಸತ್ಯವಾಗಿಯೂ ಹೇಳುತ್ತೇನೆ, 2004ರಲ್ಲಿ ನಾನು ಬೆಂಗಳೂರನ್ನು ಬೈಯ್ದಷ್ಟನ್ನೂ ಇನ್ನಾರು ಬೈಯ್ದಿರಲಾರರು. ಬೆಂಗಳೂರು ನಮಗೆ ಬಹಳ ಭಯ ಹುಟ್ಟಿಸುತ್ತದೆ. ಎಂಟನೂರು ಜನರಿರುವ ಬಾನುಗೊಂದಿಯೆಂಬ ಸಣ್ಣ ಸುಂದರ ಹಳ್ಳಿಯಿಂದ ಬಂದ ನಾನು ದಿಡೀರನೇ ಅರವತ್ತು ಲಕ್ಷ ಜನರ ಈ ಸುಡುಗಾಡಿಗೆ ಬಂದರೇ, ಇಲ್ಲಿನ ಜನ, ಇಲ್ಲಿ ಏರಿಯಾಗಳು ಚೀ ಎನಿಸಿತ್ತು. ಬೆಂಗಳೂರನ್ನು ನೋಡುವುದಕ್ಕೆ ಬರುವುದಾದರೆ ಪರವಾಗಿಲ್ಲ, ಕೆಲಸ ಹುಡುಕಿಕೊಂಡು ಜೀವನ ಕಟ್ಟಿಕೊಳ್ಳಲು ಬರುವ ಹೊಸಬರು ಹುಚ್ಚಾಸ್ಪತ್ರೆ ಸೇರುವುದು ಗ್ಯಾರಂಟೀ.

ಬೆಂಗಳೂರಿಗೆ ಬಂದ ದಿನಗಳಲ್ಲಿ ನಮ್ಮ ಅಕ್ಕನ ಮನೆ ವಿಜಯನಗರದ ಪೈಪ್ ಲೈನ್ ನಲ್ಲಿತ್ತು. 87ನೇ ನಂಬರಿನ ಬಸ್ಸಿನಲ್ಲಿ ಮೆಜೆಸ್ಟಿಕ್ ಗೆ ಹೋಗುವುದು ಅಲ್ಲಿಂದ ಸುತ್ತಾಡಬೇಕಿತ್ತು. ಸತ್ಯವಾಗಿಯೂ ಹೇಳುತ್ತೇನೆ, ನಮ್ಮ ಭಾವನಿಗೆ ಇದ್ದ ತಾಳ್ಮೆ, ಸಹನೆ ನನಗೆ ಇಲ್ಲ, ಅದು ಬರುವುದೂ ಇಲ್ಲ. ನಾನು ಎಲ್ಲಿಗೆ ಹೋಗಬೇಕೆಂದರೂ ಅವರಿಗೆ ಒಂದು ರೂಪಾಯಿ ಕಾಯಿನ್ ಹಾಕಿ ಫೋನ್ ಮಾಡಿ ಕೇಳುತ್ತಿದ್ದೆ. ಬಹಳ ತಾಳ್ಮೆಯಿಂದ ವಿಳಾಸವನ್ನು ಹೇಳುತ್ತಿದ್ದರು. ಕೆಲವೊಮ್ಮೆ ಬೈಕ್ ಅನ್ನು ಕೊಟ್ಟು ಕಳುಹಿಸುತ್ತಿದ್ದರು. ಹತ್ತು ಹಲವು ಕಂಪನಿಗಳಿಗೆ ಅರ್ಜಿ ಹಾಕಿ ಇಂಟರ್ವ್ಯೂಗೆ ಹೋಗಿ ಬಂದು ಬೇಸತ್ತಿದೆ. ಅದೇ ಸಮಯಕ್ಕೆ ಬೆಂಗಳೂರು ವಿವಿಗೆ ಸೇರುವ ತೀರ್ಮಾನ ಮಾಡಿ ಕೆಲಸದ ವಿಷಯ ಕೈಬಿಟ್ಟೆ, ಅದು ಮುಂದೆ ಯಾವಾಗದರೂ ಹೇಳುತ್ತೇನೆ. ಈಗ ಮೊಬೈಲ್ ವಿಷಯವನ್ನು ಮಾತನಾಡೋಣ. ನನಗೆ ಬೆಂಗಳೂರಿಗೆ ಬಂದ ದಿನಗಳಲ್ಲಿ ಸುನೀಲ್ ಸಿಕ್ಕಿದ. ಸುನೀಲ್ ನಾನು ಮೈಸೂರಿನಲ್ಲಿ ಜೊತೆಯಲ್ಲಿಯೇ ಓದಿದ್ದೇವು. ಇಲ್ಲಿಗೆ ಬಂದಾಗ ಅವನ ಸ್ನೇಹಿತ ಶ್ರೀಕಂಠನನ್ನು ಪರಿಚಯಿಸಿದ. ಶ್ರೀಕಂಠ ಆ ಸಮಯಕ್ಕೆ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದ. ಅವನು ಸಂಜೆ ಕಾಲೇಜಿಗೆ ಹೋಗುತ್ತಿದ್ದರಿಂದ ಬೆಳ್ಳಿಗ್ಗೆ ಆರಾಮಾಗಿರುತ್ತಿದ್ದ. ಹೊಸಕೆರೆ ಹಳ್ಳಿಯಲ್ಲಿನ ಸಾಂಕೇತಿ ಹಾಸ್ಟೇಲ್ ನಮ್ಮ ಮೀಟೀಂಗ್ ಪಾಯಿಂಟ್ ಆಯ್ತು. ಅವನು ನಮಗೆ ಗೈಡ್ ಮಾಡುತ್ತಿದ್ದ. ಅವನ ಬಳಿಯಲ್ಲಿಯೂ ಮೊಬೈಲ್ ಇಲ್ಲದಿದ್ದರಿಂದ ಅವನ ಹಾಸ್ಟೇಲ್ ಗೆ ಫೋನ್ ಮಾಡಿ ಹೋಗುತ್ತಿದ್ದೆ.

ಎರಡನೇಯ ಎಂಎಸ್ಸಿ ಸಮಯಕ್ಕೆ ಮೊದಲ ಬಾರಿಗೆ ಮೊಬೈಲ್ ತೆಗೆದುಕೊಂಡೆ. ಎರಡು ವರ್ಷ ಕಷ್ಟಪಟ್ಟು ಹಣ ಉಳಿಸಿ, ನೋಕಿಯಾ 3315 ಮೊಬೈಲ್ ತೆಗೆದುಕೊಂಡೆ. ಅದನ್ನು geometry box ಎಂದೇ ಕರೆಯುತ್ತಿದ್ದೆವು. ನಮ್ಮೂರಿಗೆ ನನ್ನದೇ ಮೊದಲನೆಯ ಮೊಬೈಲ್ ಎಂಬ ಹೆಮ್ಮೆ. AIRTEL ಊರಿನಲ್ಲಿರಲಿಲ್ಲ. ಊರಿಗೆ ಹೋದರೇ, ಊರಿಂದ ಆಚೆಗೆ, ನಮ್ಮ ಗದ್ದೆಯ ಬಳಿಗೆಹೋಗಿ ಫೋನ್ ಬಳಸಬೇಕಿತ್ತು. ಫೋನ್ ಕರೆಗಳೇನು ಬರುತ್ತಿರಲಿಲ್ಲ, ಆದರೂ ನೆಟವರ್ಕ್ ಹುಡುಕಿಕೊಂಡು, ನಾನು, ಪಾಂಡು, ಪುರುಷೋತ್ತಮ ಹೋಗುತ್ತಿದ್ದೆವು. ಸಿಗರೇಟು ಸೇದುವ ಕಾರ್ಯವೂ ಜೊತೆಯಲ್ಲಿಯೇ ಮುಗಿಯುತ್ತಿತ್ತು. ನನಗೆ ಬಹಳ ನಗು ತರಿಸುತ್ತದೆ, ಆ ಸಮಯದಲ್ಲಿ ನನಗೆ ಮೊಬೈಲ್ ಅವಶ್ಯಕತೆಯಿಲ್ಲದಿದ್ದರೂ ಕೊಂಡುಕೊಂಡಿದ್ದೆ. ಅದೇ ಸಮಯದಲ್ಲಿ ನಮ್ಮ ಭಾವ ಮೊಬೈಲ್ ಬದಲಾಯಿಸುವುದಕ್ಕೆ ನಿರ್ಧರಿಸಿದ್ದರು. ಒಂದು ಮೊಬೈಲ್ ತೆಗೆದುಕೊಳ್ಳುವುದಕ್ಕೆ ಕನಿಷ್ಟ ಒಂದೆರಡು ತಿಂಗಳಾದರೂ ಚರ್ಚೆ ಮಾಡಿದ್ದೇವೆ. ಗಾಂಧೀನಗರವನ್ನೆಲ್ಲಾ ಸುತ್ತಾಡಿ ಕಡೆಗೆ, ಐದು ಸಾವಿರ ಕೊಟ್ಟು ಸಾಮ್ಸಂಗ್ ತೆಗೆದುಕೊಂಡರು. ಕಲರ್ ಸೆಟ್ ಚೆನ್ನಾಗಿತ್ತು, ಆದರೇ ಜೋರಾಗಿ ಕೇಳುತ್ತಿರಲಿಲ್ಲ. ನನ್ನ ಮೊಬೈಲ್ ಸ್ವಲ್ಪ ಸಮಸ್ಯೆ ಕೊಡುವುದಕ್ಕೆ ಶುರುವಾಯಿತು. ಅದಲ್ಲದೇ, ಆ ಸಮಯದಲ್ಲಿ ನಾನು ನನ್ನ ಕ್ಲಾಸ್ ಮೇಟ್ಸ್ ಗಳ ಹತ್ತಿರ ಜಗಳವಾಡಿದ್ದೆ. ಹುಡುಗಿಯರೆಲ್ಲಾ, ನೋಕಿಯಾ 1100, 1108, ಹಿಡಿದು ಬರುವಾಗ ನಾನು ಹಳೇ ಮೊಬೈಲ್ ಹಿಡಿಯುವುದು ನಾಚಿಕೆ ಎನಿಸಿತ್ತು. ಅದಲ್ಲದೇ, ಪೋಸ್ಟ್ ಪೈಡ್ ಹಚ್ ನಂಬರು ತೆಗೆದುಕೊಂಡು ಸಾವಿರಾರು ರೂಪಾಯಿ ಬಿಲ್ ಬಂದಿತ್ತು. ಆ ಸಮಯದಲ್ಲಿ ಕಿರಣ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ, ಕೈತುಂಬಾ ಸಂಪಾದನೆಯಿತ್ತು. ಮೊಬೈಲ್ ತೆಗೆದುಕೊಳ್ಳುವುದಕ್ಕೆ ಸಾಲ ಕೇಳಿದೆ. ಅವನು ಮೂರು ಸಾವಿರ ಕೊಟ್ಟ.

ನಾನು ಉಮೇಶನಿಗೆ ಹೇಳಿದ್ದೆ, ಒಂದು ಮೊಬೈಲ್ ಕೊಡಿಸು ಎಂದು. ಅವನು ಯಾರ ಬಳಿಯಲ್ಲಿಯೂ ಕಡಿಮೆ ದುಡ್ಡಿಗೆ ಕೊಡಿಸುವುದಾಗಿ ಹೇಳಿ ಶಾಂತಿನಗರಕ್ಕೆ ಕರೆದೊಯ್ದ. ನಾನು ನೋಕಿಯಾ 1100 ತೆಗೆದುಕೊಂಡು ಖುಷಿಯಲ್ಲಿ ಬಂದೆ. ಬಂದವನು, ಕಿರಣನಿಗೆ ಮೆಜೆಸ್ಟಿಕ್ ನಲ್ಲಿ ತೋರಿಸಿದೆ. ಅವನು ನೋಡಿದ ತಕ್ಷಣ ಈ ಮೊಬೈಲ್ ಗೆ ಮೂರು ಸಾವಿರ ಕೊಟ್ಟ, ವೇಸ್ಟ್ ಎಂದ. ನನ್ನೆದೆ ಕುಸಿಯಿತು. ಯಾಕೋ? ಎಂದೆ. ಮಗಾ ಇದು ಹಳೆದು ಕನೋ? ಬೇಡ ವಾಪಸ್ಸು ಕೊಟ್ಟು ಬಿಡು ಎಂದ. ಕಿರಣನಲ್ಲಿ ನನಗೆ ಇಂದಿಗೂ ಬಹಳ ಖುಷಿ ಆಗುವ ವಿಷಯವೇ ಇದು. ಇಷ್ಟವಿಲ್ಲವೆಂದರೇ ನೇರವಾಗಿ ಹೇಳುತ್ತಾನೆ. ಯಾವತ್ತೂ ಮುಚ್ಚು ಮರೆ ಮಾಡುವುದಿಲ್ಲ, ಕಳ್ಳಾಟವಿಲ್ಲ. ಮತ್ತೇ ಉಮೇಶನಿಗೆ ಫೋನ್ ಮಾಡಿ, ನನಗೆ ಬೇಡವೆಂದೆ. ಅವನು ಸಾಕಷ್ಟು ಬೈದ. ಅವನೂ ಅಷ್ಟೇ, ಅಂದಿನಿಂದ ಇಂದಿನ ತನಕವೂ ಅದೇ ಡೈಲಾಗ್. ವಾಪಾಸ್ಸು ಹೋಗಿ ಕೊಟ್ಟವನು, ಮೆಜೆಸ್ಟಿಕ್ ನಲ್ಲಿ ರಿಲಾಯನ್ಸ್ ಜಾಹಿರಾತು ನೋಡಿದೆ. 2500 ರೂಪಾಯಿಗೆ ಹ್ಯಾಂಡ್ ಸೆಟ್ ಮತ್ತು ಕರೆ ದರಗಳು 50ಪೈಸೆ ಮಾತ್ರ. ನಿರ್ಧಾರ ಮಾಡಿಬಿಟ್ಟೇ, ನನ್ನ ಕಾಟ ತಡೆಯಲಾರದೇ, ಕಿರಣ ಮತ್ತು ಉಮೇಶ ಇಬ್ಬರೂ ನಿನಗೆ ರಿಲಾಯನ್ಸ್ ಸರಿ ಅದನ್ನೇ ತೆಗೆದುಕೋ ಎಂದರು. 2006 ಏಪ್ರಿಲ್ ಹದಿನೇಳನೇ ತಾರೀಖಿನಂದು ಕೊಂಡದ್ದು ನಾನು ಈಗ ಬಳಸುತ್ತಿರುವ ನಂಬರು. ಬಹಳ ಬಾರಿ ಬದಲಾಯಿಸುವ ಪ್ರಯತ್ನ ಪಟ್ಟರೂ ಆಗಿಲ್ಲ.

ಇದಾದ ಮೇಲೆ, ಮೂರ್ನಾಲ್ಕು ಬಾರಿ ರಿಲಾಯನ್ಸ್ ಮೊಬೈಲ್ ಕಳೆದು ಹೋಯಿತು. ಹೈದರಾಬಾದಿಗೆ ಹೋದಾಗ ಅಲ್ಲಿ ಮೂರು ಮೊಬೈಲ್ ಕಳೆದು ಹೋಯಿತು. ಕಳೆದ ವರ್ಷ ಫೀಲ್ಡ್ ಗೆ ಹೋಗಿದ್ದಾಗ, ಹೊನ್ನಾಳಿಯಲ್ಲಿ ಮೊಬೈಲ್ ಕಳೆದು ಹೋಯ್ತು, ವರ್ಷದ ಆರಂಬದ ದಿನಗಳಲ್ಲಿ, ಮತ್ತೊಂದು ಮೊಬೈಲ್ ಬಿದ್ದು ಚೂರಾಯಿತು, ಕಡೆಗೆ ಈಗಿರುವ ದರಿದ್ರ ಮೊಬೈಲ್ ಬಂದಿದೆ. ಈ ಮೊಬೈಲ್ ಬಂದಾದ ಮೇಲೆ, ಅದ್ಯಾಕೋ ದಿನವೇ ಸರಿಯಿಲ್ಲವೆನಿಸಿದೆ. ಯಾರಾದರು ಕದ್ದರೂ ಸರಿ, ಇಲ್ಲದಿದ್ದಲ್ಲಿ ತೆಗೆದು ಎಸೆಯುವ ದಿನಗಳು ದೂರವಿಲ್ಲ.

No comments:

Post a Comment