16 ಆಗಸ್ಟ್ 2020

ನಾ ಕಂಡ ಅಪರೂಪದ ವ್ಯಕ್ತಿ: ಆರ್ ಕೆ ಮೇಷ್ಟ್ರು ಎಂಬ ಬತ್ತದ ಚಿಲುಮೆ!!!



ಬತ್ತದ ಚಿಲುಮೆ ಎಂದಾಗಲೇ ಅರಿಯಬೇಕು. ಆರ್. ಕೆ. ಮೇಷ್ಟ್ರು ಅಥವಾ ಆರ್.ಕೆ. ಎಂಥಲೇ ಹೆಸರುವಾಸಿಯಾದವರ ಕುರಿತು ಈ ಲೇಖನ. ನಾನು ಈ ಹಿಂದೆಯೇ ಹೇಳಿದ ಹಾಗೆ, ಹಿರಿಯರ ಬಗ್ಗೆ ಬರೆಯುವಾಗ ಬಹಳ ಎಚ್ಚರವಹಿಸಬೇಕು. ಅವರ ಸಾಧನೆ ಮತ್ತು ಅವರು ಜೀವಿಸಿದ ಮಾದರಿಯ ಹತ್ತಿರಕ್ಕೂ ಹೋಗದಷ್ಟಿರುತ್ತೇವೆ. ಅಂತಹ ಒಬ್ಬರನ್ನು ನಾನು ಇಂದು ತಮ್ಮ ಮುಂದಿಡುತ್ತಿದ್ದೇನೆ. ಮತ್ತೊಮ್ಮೆ ಹೇಳುತ್ತೇನೆ, ಪರಿಚಯಿಸುತ್ತಿದ್ದೇನೆಂದರೆ ನನ್ನಂತಹ ಮತ್ತೊಬ್ಬ ಮೂಢ ಇರುವುದಿಲ್ಲ ಈ ಜಗದಲ್ಲಿ. ನಾನು ಇಲ್ಲಿ ಹಂಚಿಕೊಳ್ಳುತ್ತಿರುವುದೆಲ್ಲವೂ ನನ್ನ ಅನುಭವ ಮತ್ತು ಅನಿಸಿಕೆಯಷ್ಟೆ. 


ಮೊದಲಿಗೆ ನಾನು ಆರ್.ಕೆ.ಮೇಷ್ಟ್ರ ಬಗ್ಗೆ ಕೇಳಿದ್ದು ನನ್ನ ಎಂಎಸ್ಸಿ ಸಮಯದಲ್ಲಿ ಸ್ನೇಹಿತರಾದ ದ್ವಾರಕೇಶ್ ಮತ್ತು ಲಿಂಗರಾಜುರವರ ಬಗ್ಗೆ. ಪರಿಸರ ನ್ಯಾಯದ ತಕ್ಕಡಿಯಲ್ಲಿ ಎಂಬ ಮಾಧವ ಗಾಡ್ಗೀಲ್ ರವರ ಪುಸ್ತಕವನ್ನು ಓದುವ ಸಮಯದಲ್ಲಿ. ನಾನು ಗಾಡ್ಗೀಲ್ ರವರ ಕುರಿತು ಮಾತನಾಡುವಾಗ ಆರ್.ಕೆ. ಮಾಸ್ಟರ್ ಅಂತಾ ಇದ್ದಾರೆ, ಅವರು ಗಾಡ್ಗೀಲ್ ಜೊತೆಗೆಲ್ಲಾ ಕೆಲಸ ಮಾಡಿದ್ದಾರೆ ಎಂದರು. ಏನು ಕೆಲಸವೆಂದೆ. ಅವರ ಬೋಧನಾ ವಿಧಾನವೇ ಬೇರೆ. ಅದನ್ನು ನೀನು ಹೋಗಿ ನೋಡಬೇಕು ಎಂದರು. ವಿವರಿಸಿ ಎಂದೆ. 

ಅವರು ಮಕ್ಕಳನ್ನು ಹೊರಗಡೆಗೆ ಅಂದರೇ, ಸುತ್ತಮುತ್ತಲಿನ ಗುಡ್ಡಕ್ಕೋ, ಬೆಟ್ಟಕ್ಕೋ ಕರೆದೊಯ್ಯುತ್ತಾರೆ. ಕೈಯ್ಯಿಗೆ ಸಿಕ್ಕಿದ ವಸ್ತುವನ್ನು ವಿವರಿಸುತ್ತಾರೆ, ಯಾವುದೇ ಗಿಡವಿರಬಹುದು, ಮರವಿರಬಹದು ಎಲ್ಲವನ್ನು ಹಾಗೆಯೇ, ಎಂದರು. ಅದರ ಜೊತೆಗೆ ತುಮಕೂರಿನಲ್ಲಿ ಪ್ರತಿ ತಿಂಗಳು ನಕ್ಷತ್ರ ವಿಕ್ಷಣೆ, ಚರ್ಚೆ, ಕಾರ್ಯಾಗರಗಳನ್ನು ಹಮ್ಮಿಕೊಳ್ಳುತ್ತಾರೆ. ಸದಾ ಬಿಡುವಿಲ್ಲದೆ ಓಡಾಡುತ್ತಾರೆ ಎಂದರು. ನನಗೆ ಸೂಕ್ತ ಮಾರ್ಗದರ್ಶಕರು ಎಂದುಕೊಂಡೆ ಅಥವಾ ನನ್ನಂಥಯೇ ಇವರು ಎಂದೂಕೊಂಡಿರಬಹುದು. ಅವರೊನ್ನೊಮ್ಮೆ ಭೇಟಿ ಮಾಡಬೇಕೆಂದು ನಿರ್ಧರಿಸಿದೆ. ಹೋಗುವುದಕ್ಕೊಂದು ಕಾರಣ ಬೇಕಲ್ಲವೇ? ಅದರ, ನಡುವೆ ಒಮ್ಮೆ ಕರೆ ಮಾಡಿ ಪರಿಚಯ ಮಾಡಿಕೊಂಡೆ. ಒಮ್ಮೆ ಬನ್ನಿ ಎಂದರು. ಅವರ ವಿಶೇಷತೆಯಿರುವುದಿಲ್ಲಿ. ನಿಮಗೆ ಈ ಕಡೆಗೆ ಕೆಲಸವಿದ್ದಾಗ ಮಾತ್ರ ಬನ್ನಿ ನನ್ನನ್ನು ಮಾತ್ರ ಭೇಟಿ ಮಾಡಲು ಬರಬೇಡಿ ಎಂದರು. ಇಷ್ಟೊಂದು ನೇರವಾಗಿ ಹೇಳುವುದು, ಯಾವುದೋ ಒಂದು ಬಗೆಯ ಕುತೂಹಲ ಶುರುವಾಯಿತು. ಅವರೇ, ಹೇಳಿದಂತೆ, ಆ ಕಡೆಗೆ ಕೆಲಸವಿರುವಾಗ ಹೋಗುವುದೇ ಒಳಿತು ಎನಿಸಿತು. ಸಕಾರಣವೆಂಬಂತೆ, ಸ್ನೇಹಿತ ಲಿಂಗರಾಜುವಿನ ಅಣ್ಣನ ಮದುವೆ ಸಿಕ್ಕಿತು. 


ಅಲ್ಲಿಂದಲೇ ಕರೆ ಮಾಡಿದೆ. ಬರಬಹುದೇ, ಭೇಟಿ ಮಾಡಬಹುದೇ ಸರ್, ಎಂದೆ. ಏನಾದರೂ ಚರ್ಚಿಸುವ ವಿಷಯವಿದ್ದರೆ ಬನ್ನಿ ಎಂದರು. ಕುಶಲೋಪರಿ ಭೇಟಿಯಾದರೇ ಬೇಡವೆಂದರು. ನನಗೆ ಸಾಕಷ್ಟು ವಿಚಾರಗಳಿಗೆ ಅವರ ಸಲಹೆಗಳು ಬೇಕಿತ್ತು. ನಾನು ಆಗ ತಾನೇ, ನನ್ನ ಸಂಸ್ಥೆ ಕಟ್ಟಿಕೊಂಡು ಅಂಬೆಗಾಲಿಡುತ್ತಿದ್ದೆ. ಸರ್, ಚರ್ಚಿಸುವ ಸಾಕಷ್ಟು ವಿಚಾರಗಳಿವೆ ಎಂದೆ. ನಾನು ಹತ್ತು ಗಂಟೆಗೆ ಚಿಕ್ಕನಾಯಕನಹಳ್ಳಿಗೆ ಹೋಗಬೇಕು, ಬೇಗ ಬಂದರೆ ಅಲ್ಪ ಸಮಯ ಕೊಡಬಲ್ಲೆ ಎಂದರು. ನಾನು ದಿಡೀರನೇ ಹೊರಟೆ. ಪಕ್ಕದ ಹಳ್ಳಿಯೇ, ಸುಮಾರು ನಾಲ್ಕು ಕಿಲೋಮೀಟರ್ ಆದೀತು. ಹೋದಂತೆಯೇ, ಅವರ ಸರಳತೆಗೆ ಮಾರುಹೋದೆ ಎಂದರೆ ಉತ್ಪ್ರೇಕ್ಷೆಯಾಗದು. ನಾನು ಹೋದಾಗ ಮುಂಜಾನೆ ಏಳೆಂಟಿರಬಹುದು. ಅವರು ಹಾಲು ಕರೆಯುತ್ತಿದ್ದರು. ಎಲ್ಲಾ ಹಸುಗಳೊಂದಿಗೂ ಹೆಸರಿಡಿದು ಸ್ನೇಹಿತರಂತೆ ಮಾತನಾಡಿಸುತ್ತಿದ್ದರು. ಮನೆಯ ನಾಯಿಗಳನ್ನು ಅಷ್ಟೆ. ಪ್ರತಿಯೊಬ್ಬರಿಗೂ ಹೆಸರು, ಯಾರನ್ನು ಹೇ ಚೀ ಎನ್ನುವುದಿಲ್ಲ. ಸಂಪೂರ್ಣ ಮರ್ಯಾದೆ. ಒಟ್ಟಿಗೆ ತಿಂಡಿ ತಿಂದೆವು. ತಿನ್ನುವ ಸಮಯದಲ್ಲಿ ಅವರಿಗೆ ನನ್ನ ಬಗ್ಗೆ ನಮ್ಮ ಕೆಲಸದ ಬಗ್ಗೆ ತಿಳಿಯುವ ಕುತೂಹಲ. 


ಹುಣಸೆಕಾಯಿ ಚಿತ್ರಾನ್ನ ತಿನ್ನಿ ಎಂದು ಜೊತೆಯಲ್ಲಿ ಮಾತುಕತೆ ನಡೆಸಿದೆವು. ಬಹಳ ಸಂತೋಷಪಟ್ಟರು. ನಮ್ಮ ಪರಿಸರ ಸ್ನೇಹಿ ಶಾಲೆ ನಿರ್ಮಾಣದ ವಿಚಾರದಲ್ಲಿ. ನಾನು  ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ ಅಲ್ಲಿಂದ ನಡೆದೆವು. ಅದಾದ ನಂತರ ನನ್ನದೇ ಕೆಲಸದಲ್ಲಿ ಮುಳುಗಿಹೋಗಿ, ಕೆಲಸ ಎನ್ನುವುದಕ್ಕಿಂತ ದುಡಿಮೆ ಎಂದರೇ ಸರಿ. ಅವರೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. ಆದರೂ, ಯಾವುದೋ ಮೂಲೆಯಲ್ಲಿ ಮಾತನಾಡುವ ಬಯಕೆಯಿಂದ ಕರೆ ಮಾಡಿದೆ, ಸರ್, ಸ್ಸಾರಿ, ಕ್ಷಮಿಸಿ, ಕೆಲಸದ ನಿಮಿತ್ತ ತಮಗೆ ಕರೆ ಮಾಡುವುದಕ್ಕೆ ಆಗಲಿಲ್ಲ, ತಮ್ಮನ್ನು ಭೇಟಿ ಮಾಡಿ ಚರ್ಚಿಸಬೇಕೆಂದೆ. ಖಂಡಿತ ಬನ್ನಿ ಎಂದರು. 


ಇತ್ತೀಚೆಗೆ ನಾವು ಗಾಂಧೀಯನ್ ಕಲೆಕ್ಟಿವ್ ಎಂಬ ಒಂದು ಗುಂಪನ್ನು ಸಂಘಟಿಸುವ ಸಮಯದಲ್ಲಿ, ಮೊದಲಿಗೆ ನೆನಪಾದವರು ಆರ್.ಕೆ. ಸರ್. ನಾನು ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾತನಾಡಿದೆ. ಹಲವಾರು ಗೊಂದಲಗೊಳೊಂದಿಗೆ ನಾನಿದ್ದೆ. ಅವರೊಂದಿಗೆ ಹಂಚಿಕೊಂಡೆ. ಅವರು ದಿಡೀರನೇ ಸ್ಪಂದಿಸಿ ಒಂದು ಚಿಕ್ಕದಾದ ಚೊಕ್ಕದಾದ ಸಮಾನ ಮನಸ್ಕರ ಸಭೆ ಕರೆದು ನನಗೆ ಆತ್ಮ ಸ್ಥೈರ್ಯ ತುಂಬಿದರು. ಅವರು ಮತ್ತು ಅವರ ತಂಡ ನಮ್ಮ ಸರಣಿ ಉಪವಾಸದ ಸಮಯದಲ್ಲಿ ಭಾಗವಹಿಸಿದ್ದು ನೋಡಿ ಅಚ್ಚರಿಯಾಯಿತು. ನನಗೆ ಯಾವುದೇ ಮುಜುಗರವಿಲ್ಲದೇ ಹೇಳುತ್ತೇನೆ, ಈ ಹಂತದ ಹುಮ್ಮಸ್ಸು ಬರಲು ಹೇಗೆ ಸಾಧ್ಯ. ನಾನು ಹುಟ್ಟು ಸೋಮಾರಿ ಎನಿಸುತ್ತದೆ ಅವರನ್ನು ಕಂಡಾಗ. ನಾನು ಅನೇಕ ಬಾರಿ ನನ್ನ ಸ್ನೇಹಿತರ ಜೊತೆಗೆ ಹೇಳಿದ್ದು ಇದೆ. 

ಗಾಢ್ಗಿಲ್ ಅವರ ಜೊತೆಗೆ ಜೀವ ವೈವಿದ್ಯಮಯ ದಾಖಲಾತಿಯಲ್ಲಿ ಇವರ ಪಾತ್ರ ಅವೀಸ್ಮರಣೀಯ. ಅದೆಷ್ಟೋ ಸಮ್ಮೇಳನಗಳನ್ನ ಆಯೋಜಿಸಿದ್ದಾರೆ, ತರಬೇತಿಗಳನ್ನು ನೀಡಿದ್ದಾರೆ. ಸದ್ಯದಲ್ಲಿ ಸಹಜ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಅಬಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲವೆನ್ನುವಂತೆ, ಆರ್. ಕೆ. ಅರಿಯದ/ಮಾಡದ ಕ್ಷೇತ್ರವಿಲ್ಲವೆಂಬಂತ್ತಿದ್ದಾರೆ. ಅವರೊಂದಿಗೆ ಕಾರ್ಯನಿರ್ವಹಿಸುವುದೆ ಭಾಗ್ಯ. ಮುಖ್ಯ ವಿಷಯ, ವಿಚಾರ ಬಿಟ್ಟು ಮತ್ತೊಂದನ್ನು ಆಡುವುದಿಲ್ಲ. ನಿನ್ನೆಯೂ ಕೂಡ, ಕರೆ ಮಾಡಿದಾಗ, ಸರ್ ತಮ್ಮ ವಿಚಾರ ಕುರಿತು ಬರೆಯುತ್ತೇನೆಂದೆ. ಸರ್, ಬೇರೆ ಏನಾದರೂ ಉಪಯುಕ್ತ ಕೆಲಸ ಮಾಡಿ ಎಂದರು. ಆ ಮಾತು ಬರೆಯಲೇ ಬೇಕೆಂದು ನಿರ್ಧರಿಸಿದ್ದ ನನಗೆ ಮತ್ತಷ್ಟೂ ಉತ್ತೇಜನಕೊಟ್ಟಿತ್ತು. ಈ ದಿನಕ್ಕೂ ಸಾಕಷ್ಟು ವಿಚಾರಗಳಲ್ಲಿ ಸಂಪೂರ್ಣ ತೊಡಗಿಸಿಗೊಂಡಿದ್ದಾರೆ. ನನಗೆ ಅವರ ಜೊತೆಗೆ ಕೈಗೂಡಿಸುವ ಭಾಗ್ಯ ಸಿಕ್ಕಿರುವುದು ಪೂರ್ವ ಜನ್ಮದ್ದು ಎನಿಸುತ್ತದೆ. ಪರಿಸರ ಸಂರಕ್ಷಣೆಯ ಕೆಲಸಗಳು, ಗಾಂಧಿ ತತ್ವ ಸಿದ್ದಾಂತಗಳ ಕಾರ್ಯಕ್ರಮಗಳು, ರೈತರ ಬದುಕು, ಕನ್ನಡ, ಸರ್ಕಾರಿ ಶಾಲೆಗಳು, ಕೂಲಿ ಕಾರ್ಮಿಕರು, ಎಲ್ಲಾ ವರ್ಗದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಸಮುದಾಯದತ್ತ ವಿಜ್ಞಾನವನ್ನು ಕರೆದೊಯ್ಯುವ ಮತ್ತು ಮೌಢ್ಯತೆಯನ್ನು ಹೊಡೆದೋಡಿಸುವ ಹಾದಿಯಲ್ಲಿ ಸಕ್ರೀಯರಾಗಿದ್ದಾರೆ. 


ಕೊನೆಯ ಹನಿ: ಸರಳತೆ ಮನುಷ್ಯನನ್ನು ಉತ್ತುಂಗದ ಖುಷಿಗೆ ಕರೆದೊಯ್ಯುತ್ತದೆ. ಕೆಲವು ಅತ್ಯುತ್ತಮ ವ್ಯಕ್ತಿಗಳ ಒಡನಾಟ ನಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯುತ್ತದೆ. ಸ್ವರ್ಗವೆಂಬುದು ಕಲ್ಪನೆಯೂ ಸಹಜ. ಅಂತಹ ಅನುಭವ ನೀಡಿದವರು, ಆರ್. ಕೆ. ಮೇಷ್ಟ್ರು. ಅವರ ಅಪಾರ ಸಮಯ ಕಾಳಜಿ, ನಿಷ್ಠೆ, ಹೀಗೆ ಮುಂದುವರೆಯಲಿ. ನಿಜವಾಗಿಯೂ ಹೇಳುತ್ತೇನೆ, ಕಳೆದ ಆರೆಂಟು ತಿಂಗಳಿನಿಂದ ನನ್ನನ್ನು ಬಡಿದೆಬ್ಬಿಸುತ್ತಿರುವ ಸ್ಪೂರ್ತಿಯ ಚಿಲುಮೆ ಆರ್.ಕೆ.ಸರ್ ಮತ್ತು ಸಿಬಿ ಕೆ ಜೋಸೆಫ್ ಸರ್. ಅವರಿಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ. 


ಲೇಖನ ಅಪೂರ್ಣವೆನಿಸತ್ತಿದೆ. ಬರೆಯಬಹುದು ಸಾಕಷ್ಟು, ಆದರೆಲ್ಲೋ ಭಯ, ಆರ್.ಕೆ.ಸರ್ ಬೇಸರಗೊಂಡಾರೆಂದು. ಅವರ ಅನುಮತಿಯೊಂದಿಗೆ ವಿಸ್ತರಿಸುವೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...