15 ಸೆಪ್ಟೆಂಬರ್ 2021

ಕೊಡಗಿನ ಕುಶಾಲನಗರದಲ್ಲಿ ಅರಿಶಿಣ ಗಣೇಶ ಮೂರ್ತಿ ಅಭಿಯಾನಕ್ಕೆ ಕೈಜೋಡಿಸಿದ ಶಾಲಾ ಮಕ್ಕಳು!!!



 ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಪರಿಸರ ಸ್ನೇಹಿ ಅರಿಶಿಣ ಗಣೇಶ ಅಭಿಯಾನಕ್ಕೆ ಸ್ಪಂದಿಸಿರುವ ಈ ಬಡಾವಣೆಯ ಶಾಲಾ ಮಕ್ಕಳು  ಗಣೇಶ ಚತುರ್ಥಿ ಸಂದರ್ಭದಲ್ಲಿ ಮಕ್ಕಳ ಪ್ರತಿಭೆ ಬಳಗ ರಚಿಸಿಕೊಂಡು ಮನೆಯಲ್ಲೇ ಸ್ವತಃ ಅರಿಶಿಣ ಗಣೇಶ ಮೂರ್ತಿಗಳನ್ನು ತಯಾರಿಸಿ ಖುಷಿ ಪಟ್ಟರು. 

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಇನ್ನೂ ಶಾಲೆ ಆರಂಭವಾಗದಿದ್ದರೂ ಮಕ್ಕಳು ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಾಯದಿಂದ ಸ್ವ ಕಲ್ಪನೆಯೊಂದಿಗೆ ಗೋಧಿ ಮತ್ತು ಅರಿಶಿಣ ಮಿಶ್ರಿತ ಗಣೇಶ ಮೂರ್ತಿಗಳನ್ನು  ಮನೆಯಲ್ಲೇ ತಯಾರಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ಈ ಮಕ್ಕಳ ಪರಿಸರ ಚಟುವಟಿಕೆ ಹಾಗೂ ಅವರ ಪ್ರತಿಭೆಗೆ ಪೋಷಕರು ಕೂಡ ಸಾಥ್ ನೀಡಿದ್ದಾರೆ.‌

ಆದಿಶಂಕರಾಚಾರ್ಯ ಬಡಾವಣೆಯ ಉದ್ಯಮಿಯಾದ ಟಿ.ಕೆ.ಮಧು ಅವರು ಮಕ್ಕಳ ಪ್ರತಿಭೆಗೆ ಪೋಷಣೆ ನೀಡುವ ಮೂಲಕ ಮಕ್ಕಳು ಒಂದೆಡೆ ಸೇರಿ ತಾವು ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರದರ್ಶಿಸಲು ಬಳಗದ ವತಿಯಿಂದ ಅವಕಾಶ ಕಲ್ಪಿಸಿದ್ದಾರೆ.

ಮಕ್ಕಳ ಈ ಪ್ರತಿಭೆಗೆ ಹೆಚ್ಚು ಉತ್ತೇಜನ ನೀಡಿದ ಮಧು,  ಅರಿಶಿಣ ಗಣೇಶ ಅಭಿಯಾನಕ್ಕೆ ಮಕ್ಕಳಿಗೆ ಬೇಕಾದ ಪೂರಕ ಸಾಮಾಗ್ರಿಗಳನ್ನು ಒದಗಿಸುವುದರೊಂದಿಗೆ ಅವರ ಪ್ರತಿಭೆಗೆ ಒಂದು ವೇದಿಕೆಯನ್ನು ಸೃಷ್ಟಿಸುವ ಮೂಲಕ ಮಕ್ಕಳ ಪರಿಸರ ಕಾಳಜಿಗೆ ಬೆಂಬಲ ನೀಡಿರುವುದು ಅನುಕರಣೆಯವಾದುದು.

ಮಕ್ಕಳು ಅರಿಶಿಣ ಗಣೇಶ ಅಭಿಯಾನಕ್ಕೆ ಸ್ವಯಂ ಪ್ರೇರಿತರಾಗಿ ಕೈಜೋಡಿಸಿದ್ದು, ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ಲಭಿಸಿದ್ದು ಮಕ್ಕಳು ಭವಿಷ್ಯದಲ್ಲಿ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಂತಹ ಪರಿಸರ ಜಾಗೃತಿ ಅಭಿಯಾನ ಸಹಕಾರಿಯಾಗಿದೆ ಎಂದು ಪರಿಸರ ಸ್ನೇಹಿ ಗಣೇಶ  ಅಭಿಯಾನದ ಸಂಚಾಲಕರೂ ಆದ ಕೂಡಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

  ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಅವರು ಉತ್ತಮ ಪರಿಸರ ಸಂರಕ್ಷಕರಾಗಿ ತೊಡಗಿಸಿಕೊಳ್ಳಲು ಸಾಧ್ಯ. ಈ ರೀತಿ ಈ ಬಾರಿ ಶಾಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಈ ಅಭಿಯಾನಕ್ಕೆ ಕೈಜೋಡಿಸುವ ಮೂಲಕ ರಾಜ್ಯದಲ್ಲಿ 10 ಲಕ್ಚ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್ ಗೆ ಅರಿಶಿಣ ಗಣೇಶ ಮೂರ್ತಿಯೊಂದಿಗೆ ತಮ್ಮ ಸೆಲ್ಫಿಯೊಂದಿಗೆ  ಫೋಟೋ ಅಪ್ ಲೋಡ್ ಮಾಡಿರುವುದು ಸಂತಸ ತಂದಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

ಈ ಬಡಾವಣೆಯ ಎಲ್ಲಾ ಮಕ್ಕಳು ತಮ್ಮ ಮನೆಯಲ್ಲೇ ಅರಿಶಿಣ ಗಣೇಶ ಮೂರ್ತಿ ತಯಾರಿಸುವ ಮೂಲಕ ಜನರಿಗೆ ರಾಸಾಯನಿಕ ಬಣ್ಣ ರಹಿತ ಹಾಗೂ ಪಿ.ಓ.ಪಿ.ಮುಕ್ತ  ಗಣೇಶ ಮೂರ್ತಿ ತಯಾರಿಸುವ ಮೂಲಕ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಉಂಟಾಗುವ ಜಲಮಾಲಿನ್ಯ ತಡೆಗೆ ಈ ಅಭಿಯಾನ ಸಹಕಾರಿಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅಭಿಪ್ರಾಯಪಟ್ಟರು.

  ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಮಧು ಅವರೊಂದಿಗೆ ಬಡಾವಣೆಯ ಟಿ.ಕೆ.ಪ್ರಸಾದ್, ಪ್ರದೀಪ್, ಟಿ.ಎಂ.ಅನಿತ,ಅಂಬಿಕಾ ಅವರು ಕೂಡ ಹೆಚ್ಚಿನ ಬೆಂಬಲ ನೀಡಿದ್ದಾರೆ .

 ಮಕ್ಕಳ ಪ್ರತಿಭೆ ಬಳಗದ 8 ನೇ ತರಗತಿ ವಿದ್ಯಾರ್ಥಿನಿ ತಂಡದ ನಾಯಕಿ ಬಿ.ವಿ.ಪ್ರತಿಕ್ಷಾ, ನಾವು ಸ್ವತಃ ಅರಿಶಿಣ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು ತುಂಬಾ ಖುಷಿ ತಂದಿದೆ ಎಂದು ಅಭಿಪ್ರಾಯಪಟ್ಟರೆ,  ನಾವು ಅರಿಶಿಣ ಗಣೇಶ ಮೂರ್ತಿ ತಯಾರಿಸುವ ಮೂಲಕ ನಾವು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಲು ಸಹಕಾರಿಯಾಗಿದೆ.ಎಲ್ಲರೂ ಇದೇ ರೀತಿಯಲ್ಲಿ ಪರಿಸರ ಪೂರಕ ಅರಿಶಿಣ ಗಣೇಶ ಮೂರ್ತಿ ತಯಾರಿಸಿದರೆ ನಾವು ಪರಿಸರ ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದು 7 ನೇ ತರಗತಿಯ ತಂಡದ ಉಪ ನಾಯಕಿ ಕೆ.ಯು.ಶ್ರಾವಣಿ 

ಅಭಿಪ್ರಾಯ ಪಟ್ಟಿದ್ದಾಳೆ.

ಈ ಅಭಿಯಾನಕ್ಕೆ ಬಡಾವಣೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಸ್ವಯಂಪ್ರೇರಿತರಾಗಿ ತೊಡಗಿದ್ದು, ಜಿಲ್ಲೆ & ರಾಜ್ಯಕ್ಕೆ ಮಾದರಿಯಾದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿದ್ದು ಪೋಷಕ ಸಮುದಾಯಕ್ಕೆ ಖುಷಿ ತಂದಿದೆ ಎಂದು ಅಭಿಯಾನಕ್ಕೆ ಕೈಜೋಡಿಸಿದ ಉದ್ಯಮಿ ಟಿ.ಕೆ.ಮಧು ಸಂತಸ ವ್ಯಕ್ತಪಡಿಸಿದರು.  ಈ ಅಭಿಯಾನಕ್ಕೆ ಬಡಾವಣೆಯ ಶಾಲಾ ವಿದ್ಯಾರ್ಥಿಗಳಾದ ಪ್ರತಿಕ್ಷಾ, ಶ್ರಾವಣಿ, ಟಿ.ಎಂ.ನಿವೇದಿತಾ, ಕೆ.ಎಸ್.ನಿತ್ಯ, ಟಿ.ಎಂ.ನಿತಿನ್, ಕೆ.ಮೋಹಿತ್, ಮಹಾತ್ಮ ರವೀಂದ್ರ, ಹರ್ಷಿತ್ ಮೊದಲಾದ ಮಕ್ಕಳು ಖುಷಿಯಿಂದ ಅರಿಶಿಣ ಗಣೇಧ ಮೂರ್ತಿ ತಯಾರಿಸಿ ಕುಶಾಲನಗರ ಪಟ್ಟಣದ ನಾಗರಿಕರಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವದ ಮಹತ್ವ ಸಾರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಕ್ಕಳ ಅಭಿಯಾನಕ್ಕೆ ಶಿಕ್ಷಕರಾದ ವೆಂಕಟೇಶ್, ಉಷಾ, ಆರೋಗ್ಯ ಇಲಾಖೆಯ ಉಮೇಶ್, ರವೀಂದ್ರ ಇತರರು ಸಹಕರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...