31 ಡಿಸೆಂಬರ್ 2008

ಮರೆಯಲಾರದ ದಿನ





ಹೊಸ ವರ್ಷ ಅಥವಾ ಹಳೆಯ ನೆನಪು


ಗೋಡೆಯ ಮೇಲಿನ ಕ್ಯಾಲೆಂಡರ್ ಬದಲಾಗುತ್ತಿದೆ,ಅಂದರೇ, ಅದರ ಸೂಚನೆ ಮತ್ತೊಂದು ವರ್ಷ ಮುಗಿದು ಹೋಯಿತೆಂಬುದನ್ನು ನಮಗೆ ಮನವರಿಕೆ ಮಾಡಿಕೊಡುವುದು. ಹೊಸವರ್ಷವೆಂದೊಡನೆ ಏನೋ ಒಂದು ಬಗೆಯ ಸಡಗರ, ಯಾವುದಕ್ಕೊ ಸಜ್ಜಾಗುತಿದ್ದೇವೆಂದೆನಿಸುತ್ತದೆ. ಇದು ಇಂದು ನಿನ್ನೆಯದಲ್ಲ. ನನಗೆ ತಿಳಿದಾಗಿನಿಂದಲೂ ಇದು ನಡೆಯುತ್ತಲೇ ಇದೆ ಮುಂದೆ ನಡೆದು ಹೋಗುತ್ತದೆ. ನಾನು ಚಿಕ್ಕವನಿದ್ದಾಗ ನನ್ನೂರು ಹಳ್ಳಿಯಾದ್ದರಿಂದ ಇಂಥಹ ಆಚರಣೆಗಳಿಗೆ ಅಂಥಹ ಮಹತ್ವವಿರಲಿಲ್ಲ. ನಮ್ಮಲ್ಲಿ ನಡೆಯುತಿದ್ದ ಕೆಲವು ಹಬ್ಬಗಳನ್ನು ಮಾತ್ರ ನಾವು ಸಂಭ್ರಮದಿಂದ ಮೆರೆಸುತಿದ್ದವೇ ಹೊರತು, ಇವೆಲ್ಲ ನಮಗೆ ಅವಶ್ಯಕ ಅನ್ನಿಸುತ್ತಿರಲಿಲ್ಲ, ಅವಶ್ಯಕತೆ ಅನ್ನುವುದಕ್ಕಿಂತ ತಿಳಿದೇ ಇರಲಿಲ್ಲವೆಂದರೂ ತಪ್ಪಿಲ್ಲ. ಕೆಲವೇ ಕೆಲವು ಮನೆಗಳಲ್ಲಿ ಹೊಸವರ್ಷದಂದು ಸ್ನಾನ ಮಡಿಗುಡಿ ಮಾಡಿ,ಮನೆಮುಂದೆ ರಂಗೋಲಿ ಹಚ್ಚಿ, ಸಿಹಿ ಮಾಡುತಿದ್ದರು. ಅದರಲ್ಲಿ ನಮ್ಮ ಮನೆಯೂ ಒಂದು, ನಾವು ಹಳ್ಳಿಯಲ್ಲಿದ್ದರೂ ಅಪ್ಪ ಸರ್ಕಾರಿ ಉದ್ಯೋಗದಲ್ಲಿದ್ದರಿಂದ ಮತ್ತು ಅಮ್ಮ ಪಟ್ಟಣದಿಂದ ಬಂದವಳಾದ್ದರಿಂದ ಈ ಬಗೆಯ ಆಚರಣೆಗಳಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸುತಿದ್ದರು. ನಾನು ಶಾಲೆಗೆ ಹೋಗುವ ಸಮಯದಲ್ಲಿ ವರ್ಷದ ಕೊನೆಯ ವಾರದಲ್ಲಿಯೇ ಗ್ರೀಟಿಂಗ್ ಕಾರ್ಡುಗಳನ್ನು ಅಪ್ಪ ಕೊಣನೂರಿನಿಂದ ತರುತಿದ್ದರು. ನಾನು ಕೊಣನೂರು ನೋಡುತಿದ್ದದ್ದು ಎಂದೋ ಒಮ್ಮೊಮ್ಮೆ ಅಷ್ಟೇ. ಗ್ರೀಟಿಂಗ್ ಕಾರ್ಡುಗಳನ್ನು ತಂದು ಕಳುಹಿಸುವುದೆಂದರೇ ನಮಗೆ ಎಲ್ಲಿಲ್ಲದ ಆನಂದ, ಯಾಕೆಂದರೇ ನಮ್ಮೂರಿನಲ್ಲಿ ಈ ಬಗೆಯ ಆಚರಣೆ ಮಾಡುತಿದ್ದವರೇ ಕಡಿಮೆಯಾದ್ದರಿಂದ ತಂದ ಗ್ರೀಟಿಂಗ್ ನೋಡಲು ನನ್ನ ಮಿತ್ರವೃಂದವೇ ಹಾಜರಿರುತಿತ್ತು.ನಮಗೆ ಹೊರ ಊರುಗಳಿಂದ ಕಳುಹಿಸಿದ ಗ್ರೀಟಿಂಗ್ ಗಳನ್ನು ಕಂಡರೂ ಅಷ್ಟೆ ಆನಂದವಾಗುತ್ತಿತ್ತು.ಒಂದೇ ಮಗುವಿನ ಚಿತ್ರವನ್ನು ಕಳುಹಿಸಿದರೆ ಅದು ನನಗೆ ಕಳುಹಿಸಿರುವುದೆಂದು ತೀರ್ಮಾನಿಸುತ್ತಿದ್ದೆ. ಕೆಲವರು ತಡವಾಗಿ ನಮಗೆ ಗ್ರೀಟಿಂಗ್ ಕಳುಹಿಸಿದರೇ, ಅವರಿಗೆ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕೋರಿ ಕಳುಹಿಸುತಿದ್ದೇವು.


ಹೀಗೆ ಆರಂಭವಾದ ಆಚರಣೆ ನಾನು ಹೈಸ್ಕೂಲ್ ಮುಗಿಸುವ ಹೊತ್ತಿಗೆ, ನಮ್ಮೂರಿನ ಅಂಗಡಿಗಳಲ್ಲಿಯೇ ಸಿನೆಮಾ ನಾಯಕ ನಾಯಕಿಯರ ಚಿತ್ರಗಳಿರುವ ಕಾರ್ಡುಗಳು ದೊರೆಯಲಾರಂಬಿಸಿದವು.ನಮ್ಮ ಬಳಿ ೫೦ ಪೈಸೆಯಿದ್ದರೇ ಸಾಕು ಅದನ್ನು ಕೊಂಡು ವಿನಿಮಯ ಮಾಡಿಕೊಳ್ಳುತ್ತಿದ್ದೆವು.ಕೆಲವೊಮ್ಮೆ ನಮಗೆ ಬೇಕಾದ ಹೀರೋಗಳ ಫೋಟೋವನ್ನೆ ಕೊಡಬೇಕೆಂದು ಕೇಳಿ ಪಡೆದುಕೊಳ್ಳುತಿದ್ದೆವು.ಆದರೇ, ಇಂದು ನಮ್ಮೂರಿಗೆ ಹೋದರೇ ಅದು ಯಾವ ನಗರ ಪ್ರದೇಶಗಳಿಗೂ ಕಡಿಮೆಯಿಲ್ಲವೆಂಬಂತೆ, ಹೊಸವರ್ಷದ ಮೊದಲ ದಿನದಂದು, ಮನೆಯ ಮುಂದೆ ರಂಗೋಲಿ ಇಟ್ಟು ಬಣ್ಣ ಬಣ್ಣಗಳಿಂದ ಶುಭಾಷಯಗಳನ್ನು ಕೋರುತ್ತಾರೆ. ವಿಚಿತ್ರವೆಂದರೇ, ನಮ್ಮ ಮನೆಯಲ್ಲಿ ಈ ಆಚರಣೆ ಅಂದು ಆರಂಭವಾದಂತೆಯೇ ಇಂದಿಗೂ ಇದೆ. ಆದರೇ ಗ್ರೀಟೀಂಗ್ ಎಂಬ ವಸ್ತು ನಮ್ಮ ಜಗತ್ತಿನಿಂದ ಮರೆಯಾಗಿ, ಫೋನ್ ಮಾಡಿ ಶುಭಾಷಯವನ್ನು ಕೋರುತ್ತಿದ್ದೇವೆ. ಆ ದಿನಗಳಲ್ಲಿದ್ದ ಆ ತಳಮಳ,ಗ್ರೀಟಿಂಗ್ ಗಾಗಿ ಕಾಯುವ ಕಾತುರತೆ ಕಡಿಮೆಯಾಗಿ, ಇದೊಂದು ಯಾಂತ್ರಿಕತೆ ಎನಿಸತೊಡಗಿದೆ. ವಿಪರ್ಯಾಸವೆಂದರೇ, ನನ್ನೂರಿನಲ್ಲಿಯೂ ರಾತ್ರಿ ಮೈಕಾ ಹಾಕಿಸಿ, ಕುಡಿದು ಕುಣೀಯುತ್ತಿರುವುದು ಇತ್ತೀಚೆಗೆ ನನ್ನನ್ನು ಬೆರಗುಗೊಳಿಸಿದೆ. ರಾತ್ರಿ ಕುಡಿದು ಕುಣಿದು, ನಮ್ಮನ್ನ್ಯಾರು ಕೇಳುವವರು, ಎನ್ನುವ ಮಟ್ಟಕ್ಕೆ ಮೆರೆಯುತ್ತಿರುವ ನನ್ನೂರಿನ ಯುವಶಕ್ತಿಯ ಮೇಲೆ ನನಗೆ ಅಭಿಮಾನವುಳಿದಿಲ್ಲ. ಅವರು ರಾತ್ರಿ ಕುಡಿದು ಅದು ಇಳಿಯದೇ ಹೊಸವರ್ಷದ ಹೊಸದಿನದಂದು ಅವರ ಮುಖವನ್ನು ನೊಡಿದರೇ ಇವನು ಈ ಶತಮಾನದವನಲ್ಲವೇ ಅಲ್ಲ ಎನಿಸುವಷ್ಟು ಘೋರವಾಗಿರುತ್ತದೆ.ನನ್ನ ಕಾಲೇಜು ದಿನಗಳಲ್ಲಿ, ಅದರಲ್ಲೂ ಪಿ.ಯು.ಸಿ. ದಿನಗಳಲ್ಲಿ, ಅದೆಷ್ಟು ಚಡಪಡಿಸುತ್ತಿದ್ದೆವೆಂದರೇ, ತಿಂಗಳು ಮುಂಚಿತವಾಗಿಯೇ ಯೋಜನೆಗಳನ್ನು ರೂಪಿಸತೊಡಗಿದ್ದೇವು.ನನಗಿದ್ದ ಒಂದು ದುರ್ಬುದ್ದಿಯೆಂದರೇ, ವರ್ಷವೆಲ್ಲಾ ಕುಡಿದು ಕುಣಿದಾಡಿದರೂ ಬೇರೆಯವರು ಹೆಚ್ಚು ಕುಡೀಯುವಾಗ ನಾನು ಹೆಚ್ಚು ಕುಡಿಯುತ್ತಿರಲಿಲ್ಲ. ಅವರ ಆಟಗಳನ್ನು ಮಾರನೇ ದಿನ ನೆನೆದು ಅವರನ್ನು ಗೋಳುಯ್ಯುತ್ತಿದ್ದೆ. ಅದೇ ಕೊನೆಯೆನಿಸುತ್ತದೆ, ಅದಾದ ಮೇಲೆ ಅಂಥಹ ಆಚರಣೆಗಳು ಕಡಿಮೆಯಾದವು. ಕೆಲವು ವರ್ಷಗಳು ಆವಿಷ್ಕಾರಗಳೊಂದಿಗೆ ಆಚರಿಸತೊಡಗಿದ್ದೆವು. ಈ ವರ್ಷ ಏನೆಲ್ಲಾ ಮಾಡಬೇಕೆಂದು ಮುಂಚಿತವಾಗಿ ಯೋಚಿಸತೊಡಗಿದೆವು, ಹಾಗೆ ಇರಬೇಕು, ಹೀಗೆ ಇರಬೇಕೆಂದು ಹತ್ತು ಹಲವನ್ನು ಪಟ್ಟಿ ಮಾಡಿ ನೋಡುತಿದ್ದೆ. ಅವುಗಳಲ್ಲಿ ಒಂದನ್ನು ನೆರವೇರಿಸಲಾಗದೇ, ಇವೆಲ್ಲಾ ಕೈಗೂಡೂವ ಕೆಲಸವಲ್ಲ ವೆನಿಸಿ ಕೈಚೆಲ್ಲುತ್ತಿದ್ದೆ. ಚಿಕ್ಕವನಿದ್ದಾಗ ಆ ದಿನಕ್ಕೆ ಕೊಡುತಿದ್ದ ಮಹತ್ವ ಅಷ್ಟಿಸ್ಟಲ್ಲ, ಸುಳ್ಳು ಹೇಳಿದರೇ ವರ್ಷವಿಡೀ ಸುಳ್ಳು ಹೇಳುತ್ತಿವಿ, ಹೊಡೆಸಿಕೊಂಡರೇ ವರ್ಷವಿಡಿ ಹೊದೆಸಿಕೊಳ್ಳುತ್ತೀವಿ.ಆದರೇ, ಒಮ್ಮೊಮ್ಮೆ ಅನಿಸುತಿತ್ತು ಹೊಸವರ್ಷದಲ್ಲಿ ಹುಟ್ಟಿದರೇ? ಹೊಸವರ್ಷದಲ್ಲಿ ಸತ್ತರೇ? ಇವೆಲ್ಲಾ ನನ್ನ ತಲೆ ಹರಟೆ ಎನಿಸಿ ಯಾರಿಗು ಹೇಳದೆ ಸುಮ್ಮನಾಗುತ್ತಿದ್ದೆ.


ಇಂದು ಅಷ್ಟೇ, ಯಾರಾದರೂ ಹೇಗೆ ಹೊಸವರ್ಷ ಅಂತಾ ಕೇಳಿದರೇ, ಏನು ಹೇಳುವುದು, ಅಂತಾ ಸುಮ್ಮನಾಗುತ್ತೇನೆ. ಕೆಲವು ಮೂಲಭೂತವಾದಿಗಳು, ಇವೆಲ್ಲಾ ನಮ್ಮ ಸಂಸ್ಕೃತಿಯಲ್ಲ, ನಮಗೆ ಯುಗಾದಿಯಂದು ಹೊಸವರ್ಷ, ಇವೆಲ್ಲಾ ನಾವು ಪಾಶ್ಚಿಮಾತ್ಯರಿಂದ ಕಲಿತಿರುವುದು, ನಮ್ಮ ಯುವಜನತೆ ಕುಡಿದು ಕುಣಿದಾಡಿ ಹಾಳಾಗುವುದಕೊಂದು ವೇದಿಕೆಯಷ್ಟೆ ಅಂತಾ ಎಲ್ಲಾ ಬೊಗಳೆ ಹೊಡೆಯುತ್ತಾರೆ. ನನಗೆ ಸುಮ್ಮನೆ ಒಂದು ಸಂಸ್ಕೃತಿಯನ್ನು ದೂರುವುದರಲ್ಲಿ ಅಥವ ಇನ್ಯಾರನ್ನೋ ಹಂಗಿಸುವುದರಲ್ಲಿ ಅಷ್ಟೇನೂ ಆಸಕ್ತಿಯಿಲ್ಲ. ಒಂದು ಆಚರಣೆಗೆ, ಕಾರಣ ಬೇಕಿಲ್ಲ, ಜನೆವರಿಯಂದು ಹೊಸವರ್ಷ ಆಚರಿಸಿದರೇ, ಯುಗಾದಿ ಆಚರಿಸಬೇಡವೆಂದು ಯಾರು ತಡೆದಿಲ್ಲ. ಹತ್ತಾರು ಜನ ಒಂದೆಡೆ, ಕಲೆತು ಬೆರೆಯಲಿ ಅದಕ್ಕೊಸ್ಕರ ಇದೊಂದು ವೇದಿಕೆಯಾಗುವುದಾದರೆ ಅದರಲ್ಲಿ ತಪ್ಪೇನು? ಹಲವು ವರ್ಷಗಳ ಹಿಂದೆ ನನ್ನೂರಿನಲ್ಲಿ ಸಂಕ್ರಾಂತಿ ಹಬ್ಬವೆನ್ನುವುದರ ಆಚರಣೆಯೇ ಇರಲಿಲ್ಲ. ಎಳ್ಳು ಬೆಲ್ಲ ಇವೆಲ್ಲ ನಮಗೆ ತಿಳಿದೇ ಇರಲಿಲ್ಲ. ನಮ್ಮಮ್ಮ, ಹದಿನೈದು ದಿನ ಮುಂಚಿತವಾಗಿಯೇ, ಎಳ್ಳು, ಬೆಲ್ಲ, ಕಡ್ಲೆ ಬೀಜ, ಕೊಬ್ಬರಿ ಯನ್ನು ತುಂಡುಮಾಡಿ ಒಣಗಿಸುವಾಗ ನನಗೆ ಅನ್ನಿಸುತಿತ್ತು, ೧೫ ದಿನ ಕಾಯಬೇಕಾ ಇದನ್ನ ತಿನ್ನಲ್ಲಿಕ್ಕೆ? ಅಂತೂ ಮುಂಚಿತವಾಗಿಯೇ ಕದ್ದು ನನ್ನ ಜೇಬು ತುಂಬಿಸಿಕೊಂಡು ಓಡಿ ಹೋಗಿ ತಿನ್ನುತಿದ್ದೆ. ಆದರೇ, ಈಗ ಪ್ರತಿ ಮನೆಯಲ್ಲಿಯೂ ಅದನ್ನು ಆಚರಿಸುತ್ತಾರೆ, ಪ್ರತಿ ವಸ್ತುವನ್ನು ಅಂಗಡಿಯಿಂದ ತಂದು ಆಚರಿಸುತ್ತಾರೆ, ಯಾವುದನ್ನು ಮನೆಯಿಂದ ಮಾಡುವ ಗೋಜಿಗೆ ಹೋಗುವುದಿಲ್ಲ. ಎಲ್ಲವೂ ಸಿದ್ದವಾಗಿ ಬಾಗಿಲಿಗೆ ಬಂದು ಬೀಳಬೇಕು ಇದು ಸೋಮಾರಿತವವೋ? ಅಥವಾ ಪ್ರಗತಿಯೋ? ನನಗಂತೂ ಗೊತ್ತಿಲ್ಲ. ಕೆಲವು ತಾಂತ್ರಿಕತೆಯಿಂದ ಸುಲಭವಾಗಿದೆಯೆನಿಸಿದರೂ ನಮ್ಮಲ್ಲಿ ಸೋಮಾರಿತನವನ್ನು ಹೆಚ್ಚಿಸಿದೆಯೆಂದೇ ಹೇಳಬೇಕು. ನಮ್ಮಮ್ಮ, ಒಮ್ಮೆ ಮೆಣಸಿನಪುಡಿ, ಧನಿಯಾ ಪುಡಿ ಮಾಡಿಸಬೇಕೆಂದರೆ, ಕನಿಷ್ಟ ೧೫ ದಿನಗಳಾಗುತಿತ್ತು. ಸಂತೆಗೆ ಹೋಗಿ ಅದನ್ನು ತಂದು, ಒಣಗಿಸಿ, ಹದಮಾಡಿ ನಂತರ ನಮ್ಮೂರಲ್ಲಿ ಮಿಲ್ ಇಲ್ಲದೇ ಇದ್ದುದರಿಂದ ಕೊಣನೂರಿಗೆ ಹೋಗಿ ಪುಡಿ ಮಾಡಿಸಿಕೊಂಡು ಬರುತ್ತಿದ್ದಳು. ಆದರೇ, ಇಂದು ಅವೆಲ್ಲದರ ತಕರಾರು ಇಲ್ಲವೇ ಇಲ್ಲ.ಅಂಗಡಿಯಿಂದ ನೇರವಾಗಿ ತಂದು ಒಲೆಯ ಮೇಲಿನ ಪಾತ್ರೆಗೆ ಹಾಕಿ ಧಾರವಾಹಿ ನೋಡುತ್ತಾ ಕೂರುವುದಷ್ಟೆ.

ಮೊನ್ನೆ ಅಮ್ಮನ ಜೊತೆ ನನ್ನ ಹೈದರಾಬಾದಿನ ಅಡುಗೆ ಅರಮನೆಯ ಬಗ್ಗೆ ಹರಟುತ್ತಾ ಕುಳಿತಾಗ, ಹೇಳುತಿದ್ದಳು. ಈಗಿನ ಕಾಲದಲ್ಲಿ ಗಂಡಸರು ಚೆನ್ನಾಗಿ ಅಡುಗೆ ಮಾಡಬಹುದು ಬಿಡು, ಹೆಂಗಸರ ಅವಶ್ಯಕತೆಯೇ ಇಲ್ಲ ಅಡುಗೆ ಮನೆಗೆ. ಎಲ್ಲವೂ ಸಿದ್ದವಾಗಿರುತ್ತದೆ, ಅದರ ಮೇಲಿನ ಕವರಿನಲ್ಲಿ ಬರೆದು ಇರುತ್ತಾರೆ, ಇನ್ನೇನು ಬೇಕು, ಅದನ್ನು ತಂದು ಹೆಂಗಸು ಮಾಡಿದರೂ ಅಷ್ಟೇ, ಗಂಡಸು ಮಾಡಿದರೂ ಅಷ್ಟೇ. ನನಗೂ ಹಾಗೆ ಅನ್ಸುತ್ತೆ, ಎಲ್ಲರ ಮನೆಯಲ್ಲಿಯೂ ಒಂದೇ ಬಗೆಯ ರುಚಿ ಇರುತ್ತದೆ. ಅಲ್ಲಿ ಹೇಗೆ ಮಾಡಿದ್ದಿರಿ ಅನ್ನುವ ಹಾಗೆಯೇ ಇಲ್ಲ ಯಾವ ಪುಡಿ ಹಾಕಿದ್ದೀರಿ ಎಂದಷ್ಟೇ ಕೇಳಬೇಕು. ಆದರೇ, ನಾನು ಭಾವಿಸಿದಂತೆ, ನಮ್ಮನೆ ಯಾವುದೇ ತಿಂಡಿ ತಿನಿಸುಗಳು, ಕೆಲವೊಮ್ಮೆ ಉಪ್ಪಿನಕಾಯಿ ಮಾಡಿದಾಗಲೂ ಬಂದವರೂ ಅಮ್ಮನನ್ನು ಕೇಳುತ್ತಿದ್ದರು, ಹೇಗೆ ಮಾಡಿದ್ರಿ? ಏನೇನು ಹಾಕಬೇಕು? ಹೀಗೆ ಎಲ್ಲವನ್ನು ಕೇಳಿ ತಿಳಿದುಕೊಂಡು ಹೋಗುತ್ತಿದ್ದಾಗ ನನಗೆ ಅಮ್ಮನ ಬಗ್ಗೆ ಬಹಳ ಹೆಮ್ಮೆಯೆನಿಸುತಿತ್ತು. ಇಂದಿಗೂ ಅಷ್ಟೇ ನಾನು ಊರಿಗೆ ಬರುತ್ತೇನೆಂದರೇ ಸಾಕು ನನಗೆ ಇಷ್ಟವಿರುವ ಅಡುಗೆ ಸಿದ್ದವಿರುತ್ತದೆ, ಮತ್ತು ಅಮ್ಮನ ಮತ್ತು ನನ್ನಜ್ಜಿಯ ಕೈರುಚಿಗೆ ಸಮಾನದ ರುಚಿಯನ್ನು ಈ ಪಟ್ಟಣಗಳಲ್ಲಿ ಕಂಡಿಲ್ಲ. ನಾನು ಅಲ್ಲಿಯವನು ಅಭಿವೃದ್ದಿಯನ್ನು ಬಯಸದೇ ಇರುವವನೆನಿಸಿದರೂ ಸರಿಯೇ, ಆದರೇ ಅಂಗಡಿಯಿಂದ ಎಲ್ಲವನ್ನು ಸಿದ್ದರೂಪದಲ್ಲಿ ಕೊಂಡು ತಂದು ಅಡುಗೆ ಮಾಡುವ ಹೆಂಗಸರನ್ನು ನಾನು ಒಪ್ಪುವುದಿಲ್ಲ. ಕಾರಣ ಸಾವಿರ ಕೊಡಲಿ, ಎಲ್ಲವೂ ಸಿದ್ದವಿರುವಾಗ ನಾವೇಕೆ ತೊಂದರೆ ತೆಗೆದುಕೊಳ್ಳಬೇಕು, ನಿಮಗೆ ನಾವು ಸದಾ ಕೆಲಸ ಮಾಡುತ್ತಿರಬೇಕೆಂದು ದೂರಿದರೂ ಸರಿಯೇ, ನಾನು ಇದನ್ನೆಲ್ಲ ಒಪ್ಪುವುದಿಲ್ಲ. ನಮ್ಮ ಹಿರಿಯರ ಅಡುಗೆ ರುಚಿಯ ಪ್ರಖ್ಯಾತಿ ಇವರಿಗೆಲ್ಲಾ ತಿಳಿದಿಲ್ಲವೆಂದಲ್ಲ ಗೊತ್ತಿದೆ ಆದರೂ ಅದನ್ನು ಒಪ್ಪಲು ಸಿದ್ದವಿಲ್ಲ.

ಅಮ್ಮ ನಾನು ಊರಿನಲ್ಲಿದ್ದಾಗ ಆಗ್ಗಾಗ್ಗೆ ಹೇಳುತ್ತಿದ್ದಳು, ಚಿಕ್ಕ ಹುಡುಗಿಯರು ಹೇಗೆ ಅಡುಗೆ ಮಾಡುತ್ತಾರೆ ಮತ್ತು ಅವರು ಅಡುಗೆ ಮನೆಯನ್ನು ಎಷ್ಟು ಚೊಕ್ಕವಾಗಿಡುತ್ತಾರೆಂದು. ಇಂದಿಗೂ ಅಮ್ಮನನ್ನು ಅಪ್ಪ ಬೈಯುತ್ತಲೇ ಇರುತ್ತಾರೆ. ದಿನಕ್ಕೆರಡು ಬಾರಿ ಮನೆ ಸಾರಿಸುವುದು, ತೊಳೆಯುವುದು, ಪಾತ್ರೆಗಳು ಚೂರು ಮಸಿಯಾಗದ ರೀತಿ ಇಡುವುದು ಇದರಲ್ಲಿಯೇ ನಿನ್ನ ಜೀವನ ಕಳೆದು ಹೋಯಿತು. ಅದರಿಂದ ಏನು ಬರುತ್ತೇ ಅಂತಾ ನಾನು ಇದನ್ನು ಸುತರಾಂ ಒಪ್ಪುವುದಿಲ್ಲ. ನಾನು ಹೊರಗಡೆ ಎಲ್ಲೆಲ್ಲಿಯೂ ಸುತ್ತಾಡಿ ಮನೆಗೆ ಬಂದ ತಕ್ಷಣ ನಾನು ಯಾವುದೋ ಪುಣ್ಯಸ್ಥಳಕ್ಕೆ ಬಂದೆ ಎನಿಸುತ್ತದೆ, ಅದಕ್ಕೆ ಕಾರಣ ಅಮ್ಮ ಮನೆಯನ್ನು ಆ ಮಟ್ಟಕ್ಕೆ ಚೊಕ್ಕವಾಗಿಟ್ಟಿರುವುದು. ಇದನ್ನು ಮನೆಕೆಲಸದಾಕೆಯೋ ಅಥವಾ ಇನ್ನಾರೋ ಮಾಡಿದಾಗ ಅಲ್ಲಿ ಕೆಲಸ ಆಗಿರುತ್ತದೆಯೋ ಹೊರತು ಅದೊಂದು ಕಸೂತಿಯಾಗಿರುವುದಿಲ್ಲವೆಂಬುದು ನನ್ನ ಅನಿಸಿಕೆ. ಆದರೇ ನನ್ನ ಎಷ್ಟೋ ಗೆಳತಿಯರಿಗೆ ಕಾಫಿ, ಟೀ ಕೂಡ ಮಾಡಲು ಬರುತ್ತಿರಲಿಲ್ಲ. ಹಕ್ಕು ಸ್ವಾತಂತ್ರ್ಯ ಅಂತಾ ಎಲ್ಲ ಬೊಬ್ಬೆ ಹೊಡೆಯುವ ಮಹಾಮಣಿಯರು, ನಾವು ಹೆಣ್ಣಿಗೆ ಕೊಟ್ಟಿರುವ ಗೌರವವನ್ನು ಮರೆಯುವುದು ಸರಿ ಕಾಣುವುದಿಲ್ಲ. ನಾನು ಹೆಣ್ಣು ಅಡುಗೆ ಮನೆಯಲ್ಲಿಯೇ ಕೂರಬೇಕೆನ್ನುವುದಿಲ್ಲ, ಆದರೇ, ಅಡುಗೆ ಮನೆಯ ಬಗ್ಗೆ ಒಲವಿರಬೇಕು ಅದನ್ನು ಮರೆಯಬಾರದು ಮತ್ತು ಅಡುಗೆಯ ಬಗ್ಗೆ ಕೀಳರಿಮೆ ಒಲಿತಲ್ಲ. ನಾನು ಅಮ್ಮನಿಗೆ ನನ್ನ ಸ್ನೇಹಿತ ಒಬ್ಬನನ್ನು ಪರಿಚಯಿಸಿ ಇವನು ಫುಡ್ ಸೈನ್ಸ್ ಎಂದಾಗ ಅವಳಿಗೆ ಅರ್ಥವಾಗಿರಲಿಲ್ಲ. ಅವನು ಹೋದ ನಂತರ ಅವನು ಅಡುಗೆಯ ಬಗ್ಗೆ ಆಹಾರದ ಬಗ್ಗೆ ಕಲಿಯುತ್ತಾನೆ ಮತ್ತು ಒಳ್ಳೊಳ್ಳೆ ಅಡುಗೆ ಮಾಡುತ್ತಾನೆಂದಾಗ ಗಾಬರಿಯಾದಳು. ಅಯ್ಯೊ ಅಡುಗೆ ಮಾಡುವುದನ್ನು ಕಲಿಯಲು ಕಾಲೇಜಿಗೆ ಹೋಗಬೇಕಾ? ಮನೆ ಚೊಕ್ಕವಾಗಿಡುವುದು ತಮ್ಮ ಬೆಳವಣಿಗೆಯಿಂದ ಬರಬೇಕೆಂದು ಹೇಳಿದಳು. ನನಗೂ ಅದು ಸರಿಯೆನಿಸಿತು, ಇಂದು ನಾವು ಕಾಣುವ ಹೋಟೆಲ್ ಮ್ಯಾನೇಜ್ ಮೆಂಟ್, ಅಷ್ಟೇ, ಒಮ್ಮೆ ಅಮ್ಮನ ಜೊತೆ ಹೋಟೆಲ್ ಗೆ ಹೋಗಿದ್ದೆ, ಅವಳಿಗೆ ಊಟಬಡಿಸಲು, ಎಂ.ಬಿ.ಎ. ಮಾಡಿರುತ್ತಾರೆ, ಮತ್ತು ಅದಕ್ಕೆ ೩-೪ ಲಕ್ಷ ಖರ್ಚುಮಾಡಿರುತ್ತಾರೆಂದಾಗ ಆದ ಆಶ್ಚರ್ಯ ನೋಡಿದರೆ ಅಮ್ಮ ಈ ಕಾಲೇಜಿಗೆ ಹೋಗಿ ಓದುತ್ತಿರುವುದೇನು ಎನ್ನುವಂತೆ ನನ್ನನ್ನು ನೊಡಿದ್ದಳು. ನನಗೂ ಅಮ್ಮನ ಮಾತಿನಲ್ಲಿ ಬಹಳ ಸತ್ಯವಿದೆಯೆನಿಸುತ್ತದೆ, ನಮ್ಮ ಮನೆಯ ಅಡುಗೆ ಮನೆಗೆ ಒಮ್ಮೆಯೂ ತಿರುಗಿ ನೋಡದಿದ್ದರೂ, ಹೋಂ ಸೈನ್ಸ್ ತೆಗೆದುಕೊಂಡು ಅಭ್ಯಸಿಸುತ್ತೇವೆ. ನನ್ನೂರಿನಲ್ಲಂತೂ ಹಿಂದೆ, ೮-೧೦ ವರ್ಷದ ಹುಡುಗಿಯರು ಅಡುಗೆ ಮಾಡುತಿದ್ದರು, ಆಗೆಲ್ಲಾ, ಅಮ್ಮನ ಜೊತೆ ಹರಟಲು ಬರುತ್ತಿದ್ದ ಕೆಲವು ಹೆಂಗಸರಿಗೆ ಹೇಳುತಿದ್ದಳು, ಪರ್ವಾಗಿಲ್ಲ ಮಗಳು ಕೈಯ್ಯಿಗೆ ಬಂದಳು ಅಂತಾ. ನನ್ನ ಕಡೆಗೂ ಒಮ್ಮೆ ನೋಡುತಿದ್ದಳು, ನೋಡು ಮಗನೇ, ನೀನು ಹುಡುಗಿಯಾಗಿದಿದ್ದರೇ, ನಾನು ಆರಾಮಾಗಿ ಇರಬಹುದಿತ್ತು ಅಂತಾ. ಹೆಣ್ಣು ಹೆತ್ತವರು ಪಡುವ ಕಷ್ಟ ಗೊತ್ತಾದದ್ದು ನನ್ನ ಎಂ.ಎಸ್ಸಿಯಲ್ಲಿ ನನ್ನ ಗೆಳತಿಯರ ಮನೆಗೆ ಹೋದಾಗ, ಅವರ ಅಮ್ಮಂದಿರು ಎದ್ದು ಅಡುಗೆ ಮಾಡಿ, ಬಾಕ್ಸ್ ತುಂಬಿಸಿ, ಕಳುಹಿಸುತಿದ್ದರು. ಅವರು ತಿಂದುಂಡು ನನ್ನ ರೀತಿಯಲ್ಲಿಯೇ ಬೆಳೆದಿದ್ದರು. ಈ ವಿಷಯದಲ್ಲಿಯೂ ಅಷ್ಟೇ ೨೦-೨೨ ವರ್ಷ ಓದಿ, ಮದುವೆಯಾದ ನಂತರ ಆ ಓದಿಗೂ ತಮಗೂ ಸಂಬಂದವೇ ಇಲ್ಲವೆನ್ನುವಂತೆ ಗಂಡನ ಮೇಲೆ ಎಲ್ಲಾ ಜವಬ್ದಾರಿ ಹಾಕಿ ಎಕ್ತಾ ಕಪೂರ್ ಅಭಿಮಾನಿಯಾಗಿ ಟಿ.ವಿ.ಮುಂದೆ ಕೂರುವುದಾದರೂ ಏಕೆ ಅಂತಾ?


ಈ ರೀತಿಯ ಬದಲಾವಣೆಗಳು ಆಗ್ಗಾಗ್ಗೆ ಆಗುತ್ತಲೇ ಇರುತ್ತವೆ, ನನ್ನ ಪ್ರಾರ್ಥಮಿಕ ಶಾಲೆಯಲ್ಲಿ ಆಚರಿಸುತಿದ್ದ ಹೊಸವರ್ಷಕ್ಕೂ ಇಂದಿಗೂ ಇಷ್ಟೊಂದು ವ್ಯತ್ಯಾಸವಾಗಿದ್ದನ್ನು ಕಂಡು ನನಗನಿಸುವುದಿಷ್ಟೆ, ಕೇವಲ ಹದಿನೈದು ವರ್ಷಗಳಲ್ಲಿ, ನಮ್ಮ ಆಚರಣೆಗಳು ಇಷ್ಟೇಲಾ ಬದಲಾದರೂ ನಮ್ಮ ಜಾತೀಯತೆ, ಮತೀಯತೆ, ಯಾಕೆ ಶತಮಾನದಿಂದಲೂ ಬದಲಾಗಲಿಲ್ಲ. ಹಳ್ಳಿಯಲ್ಲಿ ನಡೆಯುತ್ತಿದ್ದ ಹಲವಾರು ಹಬ್ಬಗಳು, ಆಚರಣೆಗಳು ಬದಲಾಗುತ್ತ ಬಂದವು. ಕೆಲವಂತು ನಿಂತೆ ಹೋದವು. ಆದರೇ, ಹೊಸವರ್ಷಾಚರಣೆ, ವ್ಯಾಲೆಂಟೈನ್ಸ್ ದಿನ, ಸ್ನೇಹಿತರ ದಿನ, ಹೀಗೆ ಹತ್ತು ಹಲವು ದಿನಗಳು ಆಚರಣೆಗೆ ಬಂದರೂ ನಮ್ಮ ಹಲವಾರು ಹಬ್ಬ ಹರಿ ದಿನಗಳು ಕಡಿಮೆಯಾಗುತ್ತ ಮರೆಯಾದವು. ಅವುಗಳೆಲ್ಲವುದರಲ್ಲಿಯೂ ಯಾವುದೋ ಒಂದು ಬಗೆಯ ಆಧುನಿಕರಣ ಹೆಚ್ಚತೊಡಗಿತು. ನಮ್ಮ ಜಾತ್ರೆಗಳಲ್ಲಿ ಮೊದಲಿದ್ದ ಚಿಕ್ಕ ಪುಟ್ಟ ಕುದುರೆಗಳು ಮರೆಯಾಗಿ ದೊಡ್ಡ ದೊಡ್ಡ ಜಾಯಿಂಟ್ ವ್ಹೀಲ್ ಗಳು, ಕೊಲೊಂಬಸ್, ಹೀಗೆ ಎಲ್ಲೆಂದರಲ್ಲಿ ಆಧಿನಿಕರಣದ ಹೊದಿಕೆ ಹೆಚ್ಚಾಯಿತು. ನಮ್ಮ ವರ್ಷಾಚರಣೆಯಲ್ಲಿಯೂ ಅಷ್ಟೆ, ಪೂಜೆ ಪುರಸ್ಕಾರಗಳಿಂದ ನಡೆಯುತಿದ್ದ ಕಾರ್ಯಕ್ರಮಗಳು, ನಂತರ ಆರ್ಕೇಶ್ಟ್ರಾಗಳೊಂದಿಗೆ ನಡೆಯುತಿದ್ದವು. ಈಗ ಇವುಗಳಲ್ಲೆಲ್ಲಾ, ಡಿಸ್ಕೊ, ರೈನಿ ಡ್ಯಾನ್ಸ್, ಹೀಗೆ ಆಚರಣೆ ಯಾವ ಮಟ್ಟಕ್ಕಿಳಿದಿದೆಯೆಂದರೇ, ಅಬ್ಬಬ್ಬಾ ಎನಿಸುತ್ತದೆ. ಇವೆಲ್ಲಾ ವ್ಯಶ್ಯವಾತಿಕಾ ಗೃಹಗಳಾಗಿವೆ. ದೊಡ್ಡ ಮೈದಾನದಲ್ಲಿ ಕೂಗಾಡಿ ಕುಣೀದಾಡಿ, ಹೆಣ್ಣು ಗಂಡು ತಬ್ಬಾಡಿ ಆಚರಿಸಬೇಕು ಅದಕ್ಕೆ ಪೋಲಿಸರು ಕಾವಲು ಬೇಕು. ಕೆಲವಂತೂ ಜೋಡಿಯಲ್ಲಿಯೇ ಬರಬೇಕು ಅದು ಅವರು ಇವರನ್ನು ಮಧುಚಂದ್ರಕ್ಕೆ ಕರೆದೊಯ್ಯುತಿದ್ದಾರೆಂಬ ಗುಮಾನಿ ಹುಟ್ಟಿಸುತದೆ.

ಇಷ್ಟೇಲ್ಲಾ ನನ್ನ ಸುತ್ತಾ ಮುತ್ತಾ ನಡೆಯುತ್ತಿರುವಾಗ ನನ್ನನ್ನು ಹೊಸವರ್ಷದ ಯೋಜನೆಯೆಂದರೇ, ಕಂಗಾಲಾಗುತ್ತೀನಿ. ಆದರೂ, ವರ್ಷಕ್ಕೊಮ್ಮೆ ನಮ್ಮ ಹಿಂದಿನ ವರ್ಷದ ಆಗು ಹೋಗುಗಳನ್ನು ನೆನೆದು ಮುಂದಿನ ವರ್ಷದ ಯೋಜನೆಗಳಿಗೆ ರೂಪುರೇಷೆ ಕೊಡುವ ಈ ದಿವಸವನ್ನು ನಾನು ಬಹಳ ಆನಂದದಿಂದ ಸ್ವೀಕರಿಸುತ್ತೆನೆ. ಮುಂದಿನ ವರ್ಷದ ಬಗ್ಗೆ ಹೆಚ್ಚು ಗಮನಕೊಡುವುದಿಲ್ಲ. ಮತ್ತು ಅವಿಷ್ಕಾರಗಳು ಯೋಜನೆಗಳು ಇಂಥವುದರಲ್ಲಿ ನನಗೆ ಅಷ್ಟೇನು ನಂಬಿಕೆಯೂ ಇಲ್ಲ. ಇಂಥಹ ೨೬ ವರ್ಷಗಳನ್ನು ಹಿಮ್ಮೆಟ್ಟಿದ್ದಿನಿ. ನಾನು ಆ ದಿನದಂದು ಅಂದುಕೊಂಡದ್ದನ್ನು ಎಂದು ಸಾಧಿಸಿಲ್ಲ, ಸಾಧಿಸುವುದಿರಲಿ, ಅದನ್ನು ನೆನಪಿಸಿಕೊಳ್ಳುವುದು ಇಲ್ಲ. ಇಂದಿನವರೆಗೂ ೮ಗಂಟೆಗೆ ಏಳುತ್ತಿದ್ದವನು ದಿಡಿರ್ ನೇ ೫ ಗಂಟೆಗೆ ಏಳಬೇಕೆಂದು ನಿರ್ದರಿಸುವುದು, ಸಿಗರೇಟ್ ಬಿಡಬೇಕು, ಕುಡಿಯುವುದನ್ನು ಬಿಡಬೇಕು, ಇವೆಲ್ಲಾ ಬರಿ ಮಾತುಗಳಾಗೆ ಉಳಿಯುವುದರಿಂದ ಅದಕ್ಕೆಲ್ಲ ನನ್ನಲ್ಲಿ ಮಹತ್ವವಿಲ್ಲ. ಆದರೇ, ಕಳೆದ ವರ್ಷದಲ್ಲಿ ನಡೆದ ಘಟನೆಗಳನ್ನೆಲ್ಲಾ ಒಗ್ಗೂಡಿಸಿ ಅದಕ್ಕೆ ನನ್ನಿಂದ ಆದ ತಪ್ಪುಗಳನ್ನು ತಿದ್ದಿ ನಡೆಯುವುದನ್ನು ಕಳೆದ ನಾಲ್ಕಾರು ವರ್ಷಗಳಿಂದ ಮಾಡುತಿದ್ದೇನೆ. ಅದೇ ಸಮಯದಲ್ಲಿ ನನಗೆ ನೆರವಾದ ಮತ್ತು ನನಗೆ ಬೇಸರ ತರಿಸಿದ ಎಲ್ಲರನ್ನೂ ನೆನೆದು ಮುನ್ನೆಡೆಯುತಿದ್ದೇನೆ.

ಕಳೆದ ಬಾರಿ ಅಂದರೇ, ೨೦೦೭ ರ ಡಿಸೇಂಬರ್ ೩೧ ರ ಮಧ್ಯರಾತ್ರಿಯಂದು, ಹೊಸವರ್ಷಚಾರಣೆಯ ನೆಪದಲ್ಲಿ ಕುಡಿದು ಮಲಗಿ ಮಾರನೇ ಬೆಳಗ್ಗೆ ಮಾಮೂಲಿಯಾಗಿ ಆರಂಭವಾದ್ದದ್ದು ನಿನ್ನೆಯೋ ಮೊನ್ನೆಯೋ ಎಂಬಂತಿದೆ. ನನ್ನ ಬದುಕಿನ ೩೬೫ ದಿನಗಳನ್ನ ಇಷ್ಟು ಸರಾಗವಾಗಿ ನೀರು ಕುಡಿದು ನೀಗಿದೆನೆಂದರೆ ನನಗೆ ಅಯ್ಯೊ ಎನಿಸುತ್ತದೆ. ಪ್ರತಿ ವರ್ಷ ಹುಟ್ಟಿದ ದಿನಾಂಕ ನೆನೆದಾಗಲೂ ಅಷ್ಟೆ ನನಗೆ ಬಹಳ ಭಯವಾಗುತ್ತದೆ. ಆಯಸ್ಸಿನ ಕೊನೆದಿನಗಳು ಸಮೀಪಿಸುತ್ತಿವೆನಿಸುತ್ತದೆ. ಆದರೂ ಈ ವರ್ಷದಲ್ಲಿ ಏರು ಪೇರುಗಳಿದ್ದರೂ ನನಗೆ ಏರಿಕೆ ಹೆಚ್ಚೆನಿಸುತ್ತದೆ. ಬರವಣಿಗೆಯ ಮಟ್ಟಿಗೆ ನಾನು ಸ್ವಲ್ಪ ಯೋಗ್ಯನೆನಿಸುವಂತೆ ಬರೆಯುತಿದ್ದೇನೆಂಬ ಆಶಯ ಮೂಡಿದೆ. ಈ ವರ್ಷದಲ್ಲಿ ಹೆಚ್ಚು ಪುಸ್ತಕಗಳನ್ನು ಓದಿದೆನೆಂಬ ನೆಮ್ಮದಿಯಿದ್ದರೂ ಅಂದುಕೊಂಡಷ್ಟನ್ನು ಓದಲಿಲ್ಲವೆಂಅಬ್ ಕೊರಗು ಇದೆ. ಹೈದರಾಬಾದಿಗೆ ಬಂದು ನೆಲೆಸಿ ನನ್ನ ಜೀವನದ ತಿರುವುಗಳನ್ನು ನೋಡುತ್ತಿದ್ದೆನೆನಿಸುತ್ತಿದೆ. ವೈಚಾರಿಕತೆಯ ನಿಟ್ಟಿನಲ್ಲಿ ಹೇಳುವುದಾದರೇ, ನನಗೆ ಅದರಲ್ಲಿಯೂ ಆರ್ಕುಟ್ ನಿಂದ ಮಿತ್ರರಾದ ಬಹಳ ಗೆಳೆಯ ಗೆಳತಿಯರಿಗೆ ನಾನು ಋಣಿ. ಅವರಿಂದ ನಾನು ಕಲಿತಿರುವುದು ಬಹಳವೆಂದರೂ ಸರಿ. ಉದ್ಯೋಗದ ದಾರಿಯಲ್ಲಿ ಕೆಲಸ ಬದಲಾದದ್ದು, ಇವೆಲ್ಲಾ ಸಾಮಾನ್ಯಾವಗಿರುವುದರಿಂದ ಅಂಥಹ ಯಾವುದು ಗಮನಾರ್ಹವಲ್ಲ. ಸಾಮಾಜಿಕ ನೆಲೆಕಟ್ಟಿನಲ್ಲಿ ನಡೆದ ಘಟನೆಗಳು ಬಹಳ ನೋವನ್ನುಂಟು ಮಾಡಿದೆ. ದೇಶದ ಹಣದುಬ್ಬರ, ರಸಗೊಬ್ಬರಕ್ಕಾಗಿ ನಡೆದ ಗೋಲಿಬಾರ್, ವೈಯಕ್ತಿಕ ರಾಜಕೀಯ, ಸಾಮಾಜಿಕ ಕಾಳಜಿಯಿಲ್ಲದ, ನಾಲ್ಕನೇ ದರ್ಜೆ ರಾಜಕೀಯ, ಇವೆಲ್ಲ ಬಹಳ ಸೋಜಿಗವೆನಿಸಿದೆ. ಈ ಕೊಳೆಯು ನಾರುತ್ತಿರುವ ಸಮಾಜದಲ್ಲು ನನ್ನ ಕೆಲವು ಮಿತ್ರರ ಸಾಮಾಜಿಕ ಹೋರಾಟ, ಜೀವನ ಬದಲಾವಣೆ ಇವೆಲ್ಲವೂ ನನ್ನೊಳಗೆ ನನ್ನ ದೇಶ ಮುಂದೊಮ್ಮೆ ಬಲಿಷ್ಠ ರಾಷ್ಟ್ರವಾಗಿ ಮೆರೆಯುತ್ತದೆಂಬ ವಿಶ್ವಾಸ ಇಮ್ಮಡಿಯಾಗಿದೆ. ಅಂಥಹ ರಾಷ್ಟ್ರ ನಿರ್ಮಾಣದಲ್ಲಿ ನಮ್ಮೊಡನೆ ನೀವು ಇರುತ್ತೀರೆಂಬ ಆಶ್ವಾಸನೆ ನನಗಿದೆ. ಒಂದು ವರ್ಷದಲ್ಲಿ ನನ್ನೊಡನಿದ್ದ ನನ್ನ ನಾಡಿಗಳಾದ ನನ್ನ ಮಿತ್ರರಿಗೆ ನನ್ನ ಧನ್ಯವಾದಗಳು.

ಅದೇ ಸಮಯದಲ್ಲಿ ನನ್ನ ಮನ ನೋಯಿಸಿದ ಕೆಲವು ಯುನಿವರ್ಸಿಟಿ ಪ್ರೋಫೆಸರ್ ಗಳು, ಕೊಳೆತ ವ್ಯವಸ್ಥೆ, ಸ್ವಾರ್ಥ ಬರವಣಿಗೆಗಾರರು, ಮತೀಯ ಗಲಭೆ ಮಾಡಿದ ಪಾಪಿಗಳು ಆದಷ್ಟು ಬೇಗ ಸರ್ವನಾಶವಾಗಲಿ ಎಂದು ಬಯಸುತ್ತೇನೆ.



ಹೊಸ ವರ್ಷದ ಶುಭಾಷಯಗಳು
ನಿಮ್ಮವ
ಹರೀಶ್ ಬಾನುಗೊಂದಿ

1 ಕಾಮೆಂಟ್‌:

  1. HOSA VARSHADA SHUBHASHAYAGALU.... HOSA VARSHADA EE BARAVANIGEGE NANNA ABHINANDANEGALU.....

    nimma e baravanigeyanna nodida mele nanage annisiddu yeshto janara manasannu nimma e baravanege poorakavagi bimbiside antha. Yenu ariyada a vayasina aacharanegalu, sambramagalu e dinagalali illa.... yeshto janarige hosa varshada arthane gothirodilla adu bari enjoy madodakke mathra antha ankondirtare adu kuda chennagi varnisiddira...

    adunikathe munduvaredante navu kuda adra jothe jotheyalle hodikolbeku alva... adu namma deshada pragatiyanna soochisute.

    nimma baravanigegalu hige chennagi saagali...

    ಪ್ರತ್ಯುತ್ತರಅಳಿಸಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...