ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

16 January 2009

ಆಟೋವಾಲ-ನನ್ನ ಆಪ್ತಶತ್ರು


ಆಟೋವಾಲ-ನನ್ನ ಆಪ್ತಶತ್ರು

ನೋಡಿದವರಿಗೆ ಅಥವಾ ನನ್ನ ಬರವಣಿಗೆಗಳನ್ನು ಓದಿದವರಿಗೆ ಅನಿಸಲೂ ಬಹುದು, ಇವನಿಗೆ ಬುದ್ದಿ ಸರಿಯಿಲ್ಲ ಪ್ರಪಂಚದ ಡೊಂಕನ್ನೆಲ್ಲಾ ಬರೆಯಲು ಹೊರಟವನಂತೆ ಆಡುತ್ತಾನೆಂದು. ಆದರೂ, ಇವೆಲ್ಲಾ ನನ್ನನ್ನು ಬಹಳ ವರ್ಷಗಳಿಂದ ಕಾಡಿದ ಪ್ರಶ್ನೆಗಳು, ಮತ್ತು ನೋವು ಕೂಡ. ಅಂದೆಂದೂ ಈ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ, ಅಂದು ಕೊಟ್ಟಿದ್ದರೇ, ಇಂದು ಇದರ ಬಗ್ಗೆ ಪ್ರಸ್ತಾಪಿಸುವ ಮಟ್ಟಕ್ಕೆ ಬರುತ್ತಲಿರಲಿಲ್ಲ. ನಾನು ಹೆಚ್ಚು ದ್ವೇಷಿಸುವ ವೃತ್ತಿಗಳಲ್ಲಿ, ಆಟೋ ಮತ್ತು ಪೋಲಿಸರು ಅಗ್ರಗಣ್ಯರು. ನಾನು ಸುಮ್ಮ ಸುಮ್ಮನೆ ಇವರುಗಳ ಮೇಲೆ ದೂರುತ್ತಿಲ್ಲ ಹಾಗೆಂದು ಬೇರೆಯವರೆಲ್ಲಾ ಸಾಚಾಗಳೆಂದು ಹೇಳುತ್ತಿಲ್ಲ. ಈ ಎರಡು ವೃತ್ತಿಯ ಜನ ಮಾತ್ರ ಹೆಣದ ಮೇಲಿನ ಕಾಸನ್ನು ಬಿಡದೆ ಕಿತ್ತುಕೊಳ್ಳುವವರು. ಅಲ್ಲಲ್ಲಿ ಒಬ್ಬಿಬ್ಬರೂ ಒಳ್ಳೆಯವರು ಸಿಗಬಹುದು ಆದರೇ ನನಗೆ ಸಿಕ್ಕ ಬಹುಪಾಲು, ಆಟೋ ಮತ್ತು ಪೋಲಿಸರು ದರೋಡೆಕೋರರೇ ಹೊರತು ವೃತ್ತಿಧರ್ಮವನ್ನು ನಂಬಿ ಬದುಕಿದವರಲ್ಲ. ಪೋಲಿಸರ ಬಗ್ಗೆ ಮತ್ತೊಮ್ಮೆ ಮಾತನಾಡೋಣ, ಸದ್ಯಕ್ಕೆ ನನ್ನ ಆಪ್ತಶತ್ರುಗಳಾದ ಆಟೋದವರ ಬಗ್ಗೆ ಸ್ವಲ್ಪ ಚರ್ಚೆ ನಡೆಯಲಿ. ನಾನು ಹೈದರಾಬಾದಿಗೆ ಬಂದು ೫ ತಿಂಗಳುಗಳು ಕಳೆದಿವೆ. ಅಂದಿನಿಂದ ಇಂದಿನವರೆಗೂ ಈ ಮಹಾನುಭವರ ಜೊತೆಯಲ್ಲಿ ನೆಮ್ಮದಿಯಾಗಿ ಪ್ರಯಣಿಸಿದ ದಿನಗಳು ಒಂದೆರಡಿರಬಹುದು. ಇವರ ಹತ್ತಿರ ದುಡ್ಡಿಗೆ ಬೆಲೆ ಇಲ್ವಾ ಅಥವಾ ತಮಾಷೆ ಮಾಡುತಿದ್ದಾರ ಅನ್ನೊದೇ ಅರ್ಥ ಆಗುವುದಿಲ್ಲ. ಮೊದಲನೇ ಬಾರಿ ಬಂದಾಗ, ಆಟೋದಲ್ಲಿ ಹೊರಟೆ ಅವನು ಮೊದಲು ಎಷ್ಟು ಏನು ಹೇಳಲಿಲ್ಲ ನಾನು ಕೇಳಲಿಲ್ಲ. ಇಳಿಯುವಾಗ ೨೫೦ ರುಪಾಯಿ ಎಂದಾಗ ನನ್ನೆದೆ ಸ್ವಲ್ಪ ತಡವರಿಸಿತು. ನಾನು ೨೫ ನಿಮಿಷಗಳಷ್ಟು ಪ್ರಯಾಣ ಮಾಡಿದ್ದೆ ಇವನು ೨೫೦ ಅಂದಾಗ ಅಯ್ಯೊ ಕರ್ಮವೇ, ನಾನು ಬೆಂಗಳೂರಿನಿಂದ ಇಲ್ಲಿಗೆ ೭೩೦ ಕಿ.ಮೀ. ನ ೨೭೦ ರುಪಾಯಿ ಕೊಟ್ಟು ಬಂದಿದೆ ಅದು ಅಷ್ಟುದ್ದದ ರೈಲಿನಲ್ಲಿ ಇವನು ಮೂರು ಚಕ್ರದ ಈ ಗಾಡಿಯಲ್ಲಿ ಅದು ಅರ್ಧ ಗಂಟೆ ಪ್ರಯಾಣಿಸಿದ್ದಕ್ಕೆ ಇಷ್ಟೊಂದಾ! ನಾನು ವಿವರಣೆ ನೀಡತೊಡಗಿದೆ, ಅವನು ವಾದ ಮಾಡತೊಡಗಿದ್ದ, ಬಹಳ ಚತುರ ಕೂಡ ಅನಿಸಿತ್ತು, ಅದರ ಜೊತೆಗೆ ನನಗೆ ಭಾಷೆ ಬೇರೆ ಅಡ್ಡಿ ಬರುತ್ತಿತ್ತು, ಹರುಕು ಮುರುಕು ತೆಲುಗಿನಲ್ಲಿ ವಾದಿಸಲು ಯತ್ನಿಸಿದೆ, ರಾಷ್ಟ್ರೀಯ ಭಾಷೆ ಹಿಂದಿಯೂ ಅಷ್ಟೇ ನನ್ನ ಮೇಲೆ ಮುಂಚಿನಿಂದಲೂ ಶತ್ರುತ್ವ ಸಾಧಿಸುತ್ತಿದೆ. ಹಿಂದಿ ಕಲಿಯಬೇಕೆಂದು ಪರದಾಡಿದರೂ ಅದನ್ನು ಕಲಿಯಲಾಗದೇ ಬಿಟ್ಟೇ ಬಿಟ್ಟಿದ್ದೆ. ಆದರೂ ಅಲ್ಲಿ ಇಲ್ಲಿ ಹಿಂದಿ ಸಿನೆಮಾ ನೋಡಿ ಕಲಿತ ಹಿಂದಿ ಸಹಾಯ ಮಾಡಿತ್ತು. ನಾನು ಅವನಿಗೆ ಹೇಳಿದ್ದು ಇಷ್ಟು, ನೋಡು ನಾನು ನಿನ್ನ ಆಟೋದಲ್ಲಿ ೨೫ ನಿಮಿಷ ಪ್ರಯಾಣ ಮಾಡಿದ್ದೇನೆ, ಅಬ್ಬಬ್ಬಾ ಎಂದರೇ, ೧೦ ಕಿ.ಮೀ. ಬಂದಿರಬಹುದು, ಕೀ.ಮೀ.ಗೆ ೭ ರೂಪಾಯಿ ಎಂದರೂ, ೭೦ ರೂಪಾಯಿ ಕೊಡಬಹುದು, ನಿನಗೆ ಅಂತಾ ಹತ್ತು ರೂಪಾಯಿ ಹೆಚ್ಚಿಗೆ ಕೊಡುತ್ತೇನೆ ಅದಕಿಂತ ಹೆಚ್ಚು ಕೇಳಬೇಡ ಎಂದಾಗ, ಅವನು ಹೇಳಲೆತ್ನಿಸಿದ, ೩೦ ಕಿ.ಮೀ. ಬಂದಿದ್ದೇನೆ, ೩೦೦ ರುಪಾಯಿಯಾಗುತ್ತದೆ, ೫೦ ರೂ. ಕಮ್ಮಿ ಕೊಡಿ, ಜಗಳ ಯಾಕೆ ಆಡುತ್ತೀರಿ ಎಂದು. ನನಗೆ ಮಾತಾಡಿ ಮಾತಾಡಿ ಕೊನೆಗೆ ಏನು ಮಾಡುವುದು ಎನ್ನುವ ಸಮಯಕ್ಕೆ ಸರಿಯಾಗಿ, ಬಿಳಿ ಅಂಗಿ ಖಾಕಿ ಪ್ಯಾಂಟೂ ಕಂಡಿತು, ನನಗೆ ಒಲ್ಲದ ಮನಸಿನಿಂದ, ಅವನ ಸಹಾಯಕ್ಕೆ ಮುಂದಾಗಲೆತ್ನಿಸಿದೆ. ಹೈದರಾಬಾದೆಂದರೇ, ಹೈದರಾಬಾದು, ಟ್ರಾಫಿಕ್ ಪೋಲಿಸನಿಗೆ ಹೇಳುತ್ತೇನೆಂದರೇ, ಅವನು ಯಾರೋ ಎಂಬಂತೆ ವರ್ತಿಸತೊಡಗಿದ ಆಟೋ ಡ್ರೈವರ್. ಕರೆಯಿರಿ ಅವನೆ ಹೇಳಲಿ ಎಂದಾಗ ನಾನು ಮಾಡಿದ್ದು ತಪ್ಪು, ಎನಿಸತೊಡಗಿತು. ಪೋಲಿಸರಿಗೆ ಆಂಧ್ರದಲ್ಲಿ ಮರ್ಯಾದೆ ಕೊಡುವವರು ಒಬ್ಬರೂ ಇಲ್ಲವೆನಿಸುತ್ತದೆ. ಆದ್ದರಿಂದಲೇ, ಎಲ್ಲ ಸಿನೆಮಾಗಳಲ್ಲಿಯೂ ಅವರನ್ನು ಕಾಮೆಡಿ ಪಾತ್ರಕ್ಕೆ ಬಳಸುವುದು ಇದನ್ನು ನಮಗೆ ಚೆನ್ನಾಗಿಯೇ ಮನವರಿಕೆ ಮಾಡಿಕೊಡುತ್ತದೆ. ಪೋಲಿಸರೆಂದರೆ ನನಗೆ ಮೊದಲಿನಿಂದಲೂ ಅಲರ್ಜಿಯಿರುವುದರಿಂದ ಅವನನ್ನು ಕರೆದು ಮತ್ತೆ ಮರ್ಯಾದೆ ಹೋಗುವುದು ಬೇಡವೆಂದು ಅಂತೂ ಇಂತೂ ನೂರೈವತ್ತು ರೂಪಾಯಿಗಳಿಗೆ ಚೌಕಾಸಿ ಮಾಡಿ ಕೈ ತೊಳೆದುಕೊಂಡು ಹೋದೆ. ಅಲ್ಲಿಂದ ಆರಂಭವಾದ ನನ್ನ ಈ ಹೈದರಾಬಾದಿನ ಆಪ್ತ ಶತ್ರುಗಳೊಡನೆ ನಡೆಯುವ ಜಗಳ ಇನ್ನು ಮುಂದುವರೆಯುತ್ತಲೇ ಇದೆ.
ನನ್ನ ಮಿತ್ರರು, ಆಟೋ ಬಳಸುವುದು ಆಪತ್ಕಾಲದಲ್ಲಿ ಎನ್ನುವುದನ್ನು ಮರೆತಿದ್ದಾರೆ, ಅಥವ ಅದನ್ನೆ ಅವರು ಒಂದು ಧಂಧೆ ಮಾಡಿಕೊಂಡಿದ್ದಾರೆ. ಎರಡು ಕಿ.ಮೀ. ಇರುವ ಅಂತರಕ್ಕೂ ೪೦ ರೂಪಾಯಿ ಕೇಳುತ್ತಾರೆ, ಕೆಲವು ಪ್ರಜೆಗಳಂತೂ ಇಂತಹ ಕಡೆಗೆ ಎಂದರೇ ಬರುತ್ತೇನೆ ಅಥವಾ ಬರುವುದಿಲ್ಲ ಎಂದು ಹೇಳುವ ಸೌಜನ್ಯವನ್ನು ತೋರುವುದಿಲ್ಲ. ಮುಖ ತಿರುಗಿಸಿಕೊಂಡು ಹೊರಟೇ ಬಿಡುತ್ತಾರೆ. ಹೈದರಾಬಾದಿನಲ್ಲಂತೂ ನೀವು ಎಲ್ಲಿಗೆ ಹೋರಟು ನಿಂತರೂ ಕರೆದೊಡನೆ ಬರುತ್ತೇನೆಂದು ಬರುವ ಆಟೋದವನಿಗೆ ಮ್ಯಾಗೆಸ್ಸಿ ಬಹುಮಾನ ಕೊಟ್ಟರೂ ಕಡಿಮೆ ಎನಬೇಕು. ನಾನು ಬೆಂಗಳೂರಿನಲ್ಲಿದ್ದಾಗ ಆಟೋ ಬಳಸುತ್ತಿರಲಿಲ್ಲ, ಯಾಕೆಂದರೇ ಅಲ್ಲಿನ ಬಸ್ ವ್ಯವಸ್ಥೆ ಚೆನ್ನಾಗಿಯೇ ಇದೆ, ಸಮಯಕ್ಕೆ ತಕ್ಕಂತೆ ಸಿಗುತ್ತದೆ ಕೂಡ, ಅದರ ಜೊತೆಗೆ ಆಟೋದವರನ್ನು ಕರೆದರೇ ಬರುತ್ತೇನೆ ಅಥವಾ ಬರುವುದಿಲ್ಲವೆಂದು ಹೇಳೀ ಹೋಗುತ್ತಾರೆ. ಇಲ್ಲಿನ ಜನತೆ ಮುಗಿದೇ ಹೋಯಿತು, ಕೆಲವೊಮ್ಮೆ ಅಂತೂ ನಾವು ಅವರನ್ನು ಕೇಳಿದ್ದೆ ಮಹಾಪರಾಧವೆನ್ನುವಂತೆ ಥೂತ್ ಎಂದು ಹೋಗಿದ್ದಾರೆ. ನಾನು ಇದನ್ನೆಲ್ಲಾ ಗಮನಿಸಿ ಬೇಡ ಇನ್ನು ಮುಂದೆ ಬಸ್ ನಲ್ಲಿ ಹೋಗೋಣವೆಂದರೇ, ಇಲ್ಲಿನ ಬಸಗಳೊ ಅವು ಬಸ್ ಎನ್ನಲು ನನಗೆ ಮನಸ್ಸೇ ಬರುವುದಿಲ್ಲ. ಅವು ಎಲ್ಲೆಂದರೇ ನಿಲ್ಲುತ್ತವೇ ಹೇಗೆಂದರೇ ಹಾಗೆ ಓಡುತ್ತವೆ. ಆ ಡ್ರೈವರ್ ಮಹಾನುಭವರಂತೂ ಅಬ್ಬಾ ಬ್ರೇಕ್ ಹಾಕವುದು ಹೇಗೆಂಬುದನ್ನು ಕಲಿಸಬೇಕೋ ಅಥವಾ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡುತ್ತಾರೊ ಗೊತ್ತಿಲ್ಲ. ನಮ್ಮ ಹರಯದ ಹುಡುಗರು ಹುಡುಗಿಯರನ್ನು ಹಿಂದೆ ಕೂರಿಸಿಕೊಂಡು ಹೋಗುವಾಗಲೂ ಈ ಮಟ್ಟಕ್ಕೇ ಬ್ರೇಕ್ ಹಾಕುತ್ತಾರೋ ಇಲ್ಲವೋ ಆಂಧ್ರ ಬಸ್ ಡ್ರೈವರ್‍ಗಳು ಹಾಕುತ್ತಾರೆ. ಬಸ್ ನಲ್ಲಿ ನಿಲ್ಲಲೂ ಜಾಗವಿರುವುದಿಲ್ಲ ಇದ್ದರೂ ಒಳಗೆ ಹೋಗಲು ಅನುವು ಮಾಡಿಕೊಡುವುದಿಲ್ಲ. ಬಸ್ ನಿಲ್ದಾಣವೆಲ್ಲಿದೆಯೆಂಬುದೆ ಕೌತುಕದ ವಿಷಯ. ಅದನ್ನು ಪತ್ತೆ ಹಚ್ಚಲು ಹರಸಾಹಸ ಮಾಡಬೇಕು, ಅಲ್ಲಿ ಒಂದು ಬೋರ್ಡ್ ಇರುವುದಿಲ್ಲ, ಶೆಲ್ಟರ್ ಇರುವುದಿಲ್ಲ, ಜನಸಂದಣಿ ಮಾತ್ರ ತುಂಬಿತುಳುಕುತಿರುತ್ತದೆ. ಇವೆಲ್ಲದನ್ನು ಮನದಲ್ಲಿ ನೆನಪಿಸಿಕೊಂಡರೇ ನಮ್ಮ ಆಟೋದವರೇ ಯೋಗ್ಯವೆನಿಸಿ ಹಳೆ ಗಂಡನ ಪಾದವನ್ನರಸಿ ಅವರ ಬಳಿಗೆ ಬರುತ್ತೇನೆ.
ಆಟೋದವರನ್ನು ಕೇಳುವ ಹಲವಾರು ಪ್ರಶ್ನೆಗಳಿವೆ, ಅವಗಳಲ್ಲಿ ಮೊದಲನೆಯದು, ನೈತಿಕತೆ ಅಥವಾ ನೀತಿ ಸಿದ್ದಾಂತ ಇವುಗಳಲ್ಲಿ ನಂಬಿಕೆ ಇದೆಯೆ? ಇದು ಇಲ್ಲದಿದ್ದರೂ ಎಲ್ಲ ಆಟೋಗಳ ಒಳಗೆ, ಎಲ್ಲ ದೇವರ ಚಿತ್ರಗಳು ಇದ್ದೇ ಇರುತ್ತವೆ, ಅವರನ್ನಾದರೂ ನಂಬುತ್ತೀರಾ? ಆಟೋಗಳ ಹಿಂದೆ ದೇಶಾಭಿಮಾನ, ಭಾಷಾಭಿಮಾನದ ಹಲವಾರು ಸಂದೇಶಗಳನ್ನು ಹಾಕಿದ್ದೀರಲ್ಲ ಅವುಗಳ ಅರ್ಥವನ್ನು ಹುಡುಕುವ ಗೋಜಿಗೆ ಹೋಗಿದ್ದೀರಾ? ಅಮ್ಮನ ಬಗ್ಗೆ ಹೆಣ್ಣಿನ ಬಗ್ಗೆ ನೂರಾರು ಮಾತುಗಳನ್ನು ಬರೆದಿರುವ ನೀವು, ಅದೇ ಹೆಣ್ಣು ಆಟೋ ಕೇಳಿದಾಗ ವರ್ತಿಸುವ ಪರಿಯನ್ನು ಗಮನಿಸಿದ್ದೀರಾ?
ಈ ಮೇಲಿನ ಪ್ರಶ್ನೆಗಳನ್ನು ನಾನು ಹಲವಾರು ಆಟೋ ಡ್ರೈವರಗಳಿಗೆ ಹಾಕಿದ್ದೇನೆ, ನೇರವಾಗಿಯೇ ಉತ್ತರ ಹೇಳಿದ್ದಾರೆ ಕೂಡ. ಅವರೆಲ್ಲ ಹೇಳುವ ಒಂದೇ ಮಾತು ಬದುಕಬೇಕಲ್ಲ ಸಾರ್! ಜೀವನ ನಡೆಯಬೇಕಲ್ಲ ಸಾರ್! ಆದರೇ ಇವರೆಂದೂ ಗಮನಿಸದ ಕೆಲವು ಅಂಶಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ. ಅದನ್ನು ನಿಮ್ಮ ಮುಂದೆ ಇಡುತ್ತೇನೆ. ಆಟೋದಲ್ಲಿ ಹೋಗುವ ಎಲ್ಲರೂ ಮಧ್ಯಮ ವರ್ಗದವರು ಅವರು ಕಷ್ಟಪಟ್ಟು ದುಡಿದು ಪೈಸೆ ಪೈಸೆ ಕೂಡಿಟ್ಟವರೆಂಬುದನ್ನು ಮರೆಯಬಾರದು. ಅದರ ಜೊತೆಗೆ ನಾವೆಲ್ಲರೂ ತೀರ ಅನಿವಾರ್ಯತೆ ಬಿದ್ದಾಗ ಮಾತ್ರ ಆಟೋ ಬಳಸುತ್ತೇವೆ, ಇದನ್ನೇ ಆಟೋದವರು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕರೆದಲ್ಲಿಗೆ ಬರುವುದಿಲ್ಲ, ಡಬಲ್ ಮೀಟರ್, ಅಥವಾ ಮೀಟರ್ ಹಾಕುವುದೇ ಇಲ್ಲ, ಇವೆಲ್ಲಾ ನಮ್ಮನ್ನು ಲೂಟಿ ಹೊಡೆಯುವುದಲ್ಲದೇ ಮತ್ತೇನು? ಐದು ರೂಪಾಯಿಗೆ ಹತ್ತು ರೂಪಾಯಿಗೆ ಹೀಗೆ ಹೇಳ್ತಿರಲ್ಲ ಸಾರ್ ಎಂದರೇ ಆ ಹತ್ತು ರೂಪಾಯಿ ದುಡಿಯಲು ಎಷ್ಟು ಗಂಟೆ ಬೇಕೆಂಬುದರ ಬಗ್ಗೆ ನೀವ್ಯಾಕೆ ಚಿಂತಿಸುವುದಿಲ್ಲ. ಪ್ರಯಾಣ ಮಾಡಿ ದುಡ್ಡು ಕೊಡದೇ ಇರುವ ಪ್ರಯಾಣಿಕರೂ ಯಾರು ಇರುವುದಿಲ್ಲ. ಆದರೇ, ಒಂದಕ್ಕೆ ಎರಡು ಕೇಳುವ, ಸುತ್ತಿ ಬಳಸಿ ಕರೆದೊಯ್ಯುವ ಆಟೋದವರು ನೂರಾರು ಜನ ಇದ್ದಾರೆ. ನೀವು ನೇರವಾಗಿ ಕೇಳುವ ದುಡಿಯುವ ಹಣಕ್ಕೆ ಕುತ್ತು ಬರಲಿ ಎನ್ನುವುದಿಲ್ಲ. ಆದರೇ, ಪ್ರಯಾಣಿಕರಿರುವ ಸನ್ನಿವೇಶವನ್ನು ಅರಿತು ಅವರೊಡನೆ ವರ್ತಿಸುವುದನ್ನು ಕಲಿತುಕೊಳ್ಳಿ. ಕರೆದಲ್ಲಿಗೆ ಬರುವುದಿಲ್ಲವೆನ್ನುವುದನ್ನಾದರೂ ಹೇಳಿ ಹೋಗಿ ಅದನ್ನು ಬಿಟ್ಟು ಮುಖ ತಿರುಗಿಸಿಕೊಂಡು ಹೋಗುವುದು ನಾಗರೀಕತೆಗೆ ಮಾಡಿದ ಅವಮಾನ. ನಾನು ತಿಳಿದ ಮಟ್ಟಿಗೆ ಯಾವ ಪ್ರಯಾಣಿಕನ ಬಿಡುವಿದ್ದು ಸಮಯ ಇದೆ ಎನ್ನುವಾಗ ಆಟೋ ಬಯಸುವುದಿಲ್ಲ, ಆಟೋ ಎಂಬುದನ್ನು ನಂಬಿರುವುದೇ ಆಪತ್ಕಾಲಕ್ಕೆಂದು, ಅಂತಹ ಸಮಯವನ್ನು ತಾವು ದುರುಪಯೋಗಪಡಿಸಿಕೊಂಡರೇ ಮಾನವೀಯತೆ ಉಳಿವೆಲ್ಲಿ ಮಿತ್ರರೇ? ಮಾತೆತ್ತೆದರೇ, ಶಂಕರ್‍ನಾಗ್ ಹೆಸರಿನಲ್ಲಿ ಆಟೊರಾಜ ಎನ್ನುವ ನೀವು ಶಂಕರ್ ನಾಗ್ ಗಿದ್ದ ಸಮಾಜದ ಬಗೆಗಿನ ಕಾಲಜಿಯನ್ನೇಕೆ ಪಾಲಿಸುವುದಿಲ್ಲ. ತೊಂಬತ್ತರ ದಶಕದಲ್ಲಿಯೇ ಬೆಂಗಳೂರಿಗೆ ಮೆಟ್ರೋ ರೈಲು ಕನಸು ಕಂಡ ಧೀಮಂತನ ಹೆಸರನ್ನು ಬರೆಸಿಕೊಂಡಿರುವುದಕ್ಕಾದರೂ ಮರ್ಯಾದೆ ಕೊಡಿ. ನಿಮ್ಮ ಬಳಿಗೆ ಬರುತ್ತೀರುವುದು ಸಮಯದಲ್ಲಿ ಸಹಾಯಕ್ಕಾಗಿ, ನಿಮ್ಮ ರಥದಲಿ ಕುಳಿತು ವಾಯುವಿಹಾರಕ್ಕಾಗಲೀ ಪ್ರವಾಸಕ್ಕಾಗಲೀ ಅಲ್ಲ ಎಂಬುದನ್ನು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಿ. ಬರವಣಿಗೆಯಲ್ಲಿ ದೊಡ್ಡದಾಗಿ ಬರೆಸಿ ಕುಣೀದಾಡುವುದಲ್ಲ, ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಪ್ರಯತ್ನಿಸಿ.


No comments:

Post a Comment