ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

01 June 2009
ನಾನು ನನ್ನದೆಂಬುದರಲ್ಲಿ ಕಳೆದು ಹೋಗುತ್ತಿರುವ ನಮ್ಮ ಸುದಿನ


ನಾನು ಎಂದಿನಿಂದಲೋ ಹೇಳುತ್ತಾ ಬಂದಿದ್ದೇನೆ, ನನ್ನದು ಹುಚ್ಚು ಮನಸ್ಸು ಎಂದು. ನನ್ನದು ಮಾತ್ರವಲ್ಲ ಎಲ್ಲರದ್ದೂ ಹುಚ್ಚು ಮನಸ್ಸು ಎನಿಸುತ್ತದೆ. ಇದು ಎಂಥಹ ಅತಿರೇಕಕ್ಕೆ ಹೋಗುತ್ತದೆಂದರೇ ಒಮ್ಮೊಮ್ಮೆ ನಮ್ಮ ಬಗ್ಗೆ ನಮಗೆ ಅಸಹ್ಯ ಹುಟ್ಟಿ ಇನ್ನು ಬದುಕಿ ಮಾಡಬೇಕಿರುವುದೇನು ಎನಿಸುವುದುಂಟು. ಬಹಳ ಸಾರಿ ನಾನು ಯೋಚಿಸಿದಂತೆ ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಕೆಡುಕುಗಳಿಗೂ ನಾವು ನೇರ ಕಾರಣಿಗಳಲ್ಲ. ಯಾರಿಂದಲೋ ಆದ ನೋವು, ಸಂಕಟ, ಮೋಸ ಹೆಚ್ಚಿರುತ್ತದೆ. ಅದು ಯಾವುದೇ ರೂಪದಲ್ಲಿಯಾಸರೂ ಸರಿ, ಯಾರಿಂದಲಾದರೂ ಸರಿಯೇ. ಬಹಳ ಮಂದಿ ಹೇಳುವಂತೆ ಹೆಚ್ಚಿನ ಜೀವನ ಬರೀ ಹೆಣ್ಣಿಂದಲೇ ಹಾಳಾಗುತ್ತದೇ ಎಂದರೇ ಮಹಿಳಾಮಂಡಳಿಯವರು ನಾಳೆ ನಮ್ಮ ಮನೆ ಮುಂದೆ ಧರಣಿ ಕೂರಬಹುದು.
ಪ್ರೀತಿಯೆಂಬುದು ಅಥವಾ ಪ್ರೇಮ ಅನ್ನೋದು ಏನು? ಅಷ್ಟಕ್ಕೋ ನಾವು ಪ್ರತಿ ಮಾತಿಗೂ ಒಂದು ವರ್ಗವನ್ನೊ ಒಂದು ಗುಂಪನ್ನೋ ಒಂದು ಸಮೂಹವನ್ನೂ ದೂಷಿಸುತ್ತಾ ಬಂದಿರುವುದಾದರೂ ಯಾಕೆ? ನಮ್ಮ ಅಪ್ಪನ ಮಾತಿನಲ್ಲೇ ಹೇಳುವುದಾದರೇ ಈ ಬಾನುಗೊಂದಿ ಕ್ರಿಕೇಟ್ ಅಂತಾ ಓಡಾಡ್ತಾ ಇದ್ದಾರಲ್ಲ ಈ ಬಡ್ಡೀ ಮಕ್ಕಳು ಇವರು ಅಪ್ಪನ ಹೆಸರು ಉಳಿಸಲ್ಲ ಊರ ಮಾನನೂ ಉಳಿಸಲ್ಲ. ಇದು ಇಂದಿಗೆ ಸರಿ ಸುಮಾರು ಹದಿಮೂರು ವರ್ಷದ ಕೆಳಗೆ ಹೇಳಿದ್ದು. ಅವರು ಹೇಳಿದಂತೆ ನಮ್ಮ ಇಡೀ ಟೀಮ್ ಏನೂ ಕಳಪೆಯಾಗಿರಲಿಲ್ಲ, ಅಪ್ಪನ ಮಾತೇ ಸರ್ವಸ್ವವೆಂದು ಬಗೆದು ಅಪ್ಪನ ಮಾತಿಗೆ ತಲೆಬಾಗಿ ನಾಲ್ಕಾರು ವರ್ಷಗಳು ಪ್ರೀತಿ ಪ್ರೇಮ ಅಂತ ಅಲೆದಾಡಿದ ಸ್ನೇಹಿತರೂ ಅವರ ಗೆಳತಿಯರನ್ನು ಮರೆತು ವರದಕ್ಷಿಣೆಗೆಂದು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಆದರೂ ನಮ್ಮಪ್ಪನಂತವರು ತಮ್ಮ ಮಕ್ಕಳ ಯೋಗ್ಯತೆಯನ್ನು ಕಂಡವರ ಮುಂದೆ ಹಾರಾಜು ಹಾಕುವುದನ್ನು ನಿಲ್ಲಿಸಿಲ್ಲ.
ಮೇಲಿನದು ಒಂದು ಸರಳ ಉದಾಹರಣೆಯಷ್ಟೇ! ಅದರಂತೆಯೇ ಒಂದು ವರ್ಗದವರನ್ನೊ ಒಂದು ಊರವರನ್ನೊ, ಒಂದು ರಾಜ್ಯದವರನ್ನೊ ಸಾಮೂಹಿಕವಾಗಿ ಪರಿಗಣಿಸುವುದು ಅಷ್ಟೂ ಸಮಂಜಸವೆನಿಸುವುದಿಲ್ಲ. ಕೇರಳದವರೆಲ್ಲಾ ಹೀಗೆಯೇ, ಅವರೆಂದು ನಂಬಿಕೆಗೆ ಯೋಗ್ಯರಲ್ಲ, ತಮಿಳಿಗರೆಲ್ಲಾ ಹಾಗೇಯೇ ಅವರೆಂದು ಬದಲಾಗುವುದಿಲ್ಲ. ಹೆಂಗಸರೆಲ್ಲಾ ಹೀಗೆಯೇ, ಗಂಡಸರೆಲ್ಲಾ ಹೀಗೆಯೇ! ಹುಡುಗಿಯರ ಬಾಯಿಂದ ಬರುವ ಸಹಜ ಮಾತೊಂದೆಂದರೇ ಈ ಹುಡುಗರೆಲ್ಲಾ ಇಷ್ಟೇ ಎಲ್ಲಿಗೆ ಹೋದರೂ ಅಲ್ಲಿಗೆ ಬರುತ್ತಾರೆ. ಅಲ್ಲಿಗೆಯೆಂದರೇ ಎಲ್ಲಿಗೆ ಎಂದು ಹೇಳುವುದಿಲ್ಲ, ಹೇಳುವ ಸಂಯಮವೂ ಇರುವುದಿಲ್ಲ. ಹುಡುಗರನ್ನು ಕೇಳಿನೋಡಿ, ಈ ಹುಡುಗಿಯರೆಲ್ಲರೂ ಅಷ್ಟೇ ಅವರೆಂದೂ ನಂಬಿಕೆಗೆ ಯೋಗ್ಯರಲ್ಲ, ಮೋಸವೇ ಹುಡುಗಿಯರ ಇನ್ನೊಂದು ಮುಖ. ಇದೇನಪ್ಪ ಹೀಗೆಲ್ಲಾ ಹೇಳ್ತಾರಲ್ಲ ಅಂತಾ ನಾನು ಸಂಶೊಧನೆ ಮಾಡಲಾಗುವುದಿಲ್ಲ. ಮಾಡಲು ಹೋದರೇ ಉತ್ತರ ಸಿಕ್ಕಿತೆಂಬ ನಂಬಿಕೆ ನನಗಿಲ್ಲ. ನನಗೆ ತೋಚಿದಂತೆ ಮೈ ಪರಚಿ ಮೈಯೆಲ್ಲಾ ಹುಣ್ಣು ಮಾಡಿಕೊಂಡವರೇ ಬಹಳ ಜನ. ಇವೆಲ್ಲಾ ನನಗೆ ಬೇಕಿತ್ತಾ ಎನ್ನುವವರೆ ಸಾಕಷ್ಟು ಮಂದಿ. ಯಾಕೆ ಹೀಗಾಯಿತೆಂದು ಕುಳಿತು ಚಿಂತನೆ ಮಾಡುವವರು ಕಡಿಮೆ ಜನ ಇದ್ದರೂ ಚಿಂತೆ ಮಾಡುವವರು ಸಾಕಷ್ಟು ಮಂದಿ ಸಿಗುತ್ತಾರೆ. ನಾನು ಪಿಯುನಲ್ಲಿ ಆರ್ಟ್ಸ್ ಓದಿದಿದ್ದರೇ, ವಿಜ್ನಾನ ಓದಿದ್ದರೇ, ನಾನು ಅದನ್ನು ಮಾಡಿದಿದ್ದರೇ ಹೀಗೆ ಕಳೆದ ಮೂವತ್ತು ವರ್ಷದ ಹಿಂದಿನ ತಪ್ಪನ್ನು ತಮ್ಮ ಅರವತ್ತರ ಅಂಚಿನಲ್ಲಿ ನೆನೆದು ಕೊರಗುವರ ಸಂಖ್ಯೆ ಕಡಿಮೆಯಿಲ್ಲ. ಇದರಿಂದ ಏನೂ ಸಿಗುವುದಿಲ್ಲವೆಂಬುದು ಅವರಿಗೂ ಅರಿವಾಗಿರುತ್ತದೆ, ಇದರಿಂದ ಏನೂ ಬರಲಾರದು. ಆದರು ನಾವು ಚಿಂತಿಸುವುದನ್ನು ಬಿಡುವುದಿಲ್ಲ ಇರುವ ವಾಸ್ತವಿಕತೆಗೆ ಬರುವುದೇಯಿಲ್ಲ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯೇ ತಪ್ಪೇ, ಎಲ್ಲದಕ್ಕೂ ಯಾವುದೋ ಒಂದು ಉದಾಹರಣೆಯನ್ನು ಕೊಟ್ಟು ಬಣ್ಣಿಸುತ್ತಾ ನಾನು ನೋಡಿದ್ದಿನಿ, ನನ್ನ ಜಗತ್ತೇ ಸರಿ ನಾನು ನಡೆದದ್ದೇ ಸರಿ ಎಂಬ ನಮ್ಮೊಳಗೆ ಅಡಗಿರುವ ಅಹಂ ತೊಳಗುವುದೆಂದು?
ಮಾತೆತ್ತಿದರೇ, ಸ್ವಾಭಿಮಾನವೆಂದು ಬೀಗುವ ಬಹಳ ಮಂದಿಯನ್ನು ಕಂಡಿದ್ದೇನೆ. ಸ್ವಾಭಿಮಾನವೆಂದರೇನು? ಅದನ್ನು ಎಲ್ಲಿ ತೋರಿಸುವುದು, ಎಂಬ ಸಾಮಾನ್ಯಜ್ನಾನವೂ ಇಲ್ಲದ್ದೇ, ಎಲ್ಲೆಂದರಲ್ಲಿ ಪದವನ್ನು ಬಳಸಿ ಅದಕ್ಕೆ ಮಸಿ ಬಳೆದಿದ್ದಾರೆ. ಮೊನ್ನೆ ಹೀಗೆ ಮಾತಾಡುತ್ತಿರುವಾಗ ಸ್ನೇಹಿತ ಹೇಳುತ್ತಿದ್ದ, ಈ ಹೆಂಗಸರಿಗೆ ಸ್ವಾಭಿಮಾನ ಅನ್ನೊದೇ ಇಲ್ಲ ಕಣೋ, ಎಲ್ಲರ ಹತ್ತಿರಾನೂ ಕೈಚಾಚೋದಾ? ಯಾರೇ ಸಿಕ್ಕರೂ ಸರಿಯೇ, ತುಂಬಾ ಸಮಸ್ಯೆ ದುಡ್ಡೇ ಇಲ್ಲ, ಸಾಯೋನ ಅನ್ಸುತ್ತೇ ಅಂತಾ ಕಾವೇರಿ ಹರಿಸಿಬಿಡ್ತಾರೆ. ಇದೇ ಕಥೇನಾ ಹೇಳಿ ಹೇಳಿ ಐದಾರು ಜನರ ಹತ್ತಿರ ನಲ್ವತ್ತು ಸಾವಿರ ಕಿತ್ತವಳೆ ಕಣೋ ಅವಳು, ಎಂದ. ನಿನ್ನದೇನು ಸಮಸ್ಯೆ ಮಾರಾಯಾ? ಎಂದರೇ, ಅಲ್ಲಾ ಮಗಾ ಹಾಗೇ ಯೋಚನೆ ಮಾಡು, ನಾನು ನೀನು ಕೇಳಿದರೇ ಹೀಗೆ ದುಡ್ಡೂ ಕೊಡ್ತಾರಾ ಈ ಗಂಡಸರು ಎಂದಾ. ನನಗೆ ನನ್ನ ಗಂಡಸುತನದ ಮೇಲೆ ಅನುಮಾನ ಬಂತು. ಲೋ ನಾವು ಗಂಡಸರಲ್ವೇನೋ ಎಂದೆ. ನಾವು ಗಂಡಸರೇ ಆದರೇ ನಿನಗೆ ನೀನೇ ಪ್ರಶ್ನೆ ಹಾಕಿ ಕೇಳಿಕೋ. ಒಂದು ದಿನದಲ್ಲಿ ನೂರು ಜನ ಕೆಲಸ ಮಾಡೋ ಹೆಂಗಸರ ಹತ್ತಿರ ದುಡ್ಡು ಕೇಳು, ಒಬ್ಬಳೇ ಒಬ್ಬಳೂ ಕೊಡಲ್ಲ, ಅದೇ, ಗಂಡಸನ್ನ ಬಂದು ಒಂದು ಹೆಂಗಸು ಕೇಳಲಿ ಅವನು ರಕ್ತ ಮಾರಿಯಾದರೂ ಕೊಟ್ಟೆ ಕೊಡ್ತಾನೆಯೆಂದ. ಇದು ಒಳ್ಳೆ ಸಂಕಟಕ್ಕೆ ಸಿಕ್ಕಿದನಲ್ಲ ಎಣಿಸಿ, ನಮಗ್ಯಾಕೆ ಬಿಡಪ್ಪ ಎಂದೇ, ಆದರೂ ನಾವು ಕುಡಿದು ಅದರ ಅಮಲು ಇಳಿಯುವ ತನಕ ಈ ವಿಷಯ ಅವನ ಬಾಯಲ್ಲಿ ಇತ್ತು. ಆದರೇ, ಆಮೇಲೆ ಅದು ನನ್ನ ತಲೆಯೊಳಕ್ಕೆ ಸೇರಿಕೊಂಡು ನನ್ನ ತಲೆಗೆ ನಿದ್ದೆಗೆಡುವಂತೆ ಮಾಡಿ, ಇದನ್ನು ಬರೆಯಲು ಒತ್ತಾಯಿಸಿತು.
ಕೆಲವೊಂದು ವಿಷಯಗಳಲ್ಲಿ, ನಾವು ಸ್ವಲ್ಪ ಧಾರಾಳ ಮನಸ್ಸಿನಿಂದ ಯೋಚಿಸಬೇಕಾಗುತ್ತದೆ. ಬರೆಯುವ ಮುಟ್ಠಾಳ ನಾನು, ಏನೇ ಬರೆದರೂ, ಓದುವ ಮಹಾಶಯರು ನೀವುಗಳು ಅದನ್ನು ಒಪ್ಪಲೇಬೇಕೆಂದೇನೂ ಇಲ್ಲ. ಅದು ವೈಯಕ್ತಿಕ ವಿಚಾರವಂತಿಕೆಗೆ ಸಂಭಂಧಪಟ್ಟದ್ದು. ಒಂದು ಹುಡುಗಿ ಹುಡುಗರನ್ನ ನಂಬುವುದಿಲ್ಲವೆಂದ ತಕ್ಷಣ ಹುಡುಗ ಕೆರಳಿ, ಹೋ ಹೋ, ಅಂದರೇ ಇವಳೇನೂ ಗಂಡಸಿಲ್ಲದೇ ಭೂಮಿಗೆ ಬಂದಳಾ? ಅವಳ ಅಣ್ಣ, ತಮ್ಮ, ತಂದೆ ಗಂಡಸರಲ್ಲವಾ ಎನ್ನುತ್ತಾನೆ. ನಾಳೆ ಮದುವೆಯಾಗುವುದು ಗಂಡಸನ್ನಲ್ಲದೇ ಹೆಂಗಸನ್ನು ಆಗಲೂ ಆದೀತೇಯೆಂಬ ಪ್ರಶ್ನೆಯನ್ನು ಹಾಕುತ್ತಾನೆ. ಅವಳು ಅದಕ್ಕೆ ಉತ್ತರಕೊಡಲು ಸಿದ್ದಲಿರಬೇಕಲ್ಲ, ಹೋಗು ನಾಯಿ ಬೊಗಲಿದರೇ ದೇವಲೋಕಕ್ಕೇನಾದೀತು ಎಂದು ಹೊರಡಬಹುದು. ಹೌದು ಅವನು ಕೇಳಿದ ಪ್ರಶ್ನೆಯೂ ಸರಿಯೆನಿಸುವುದಿಲ್ಲವೇ? ಏನು ಆಟ ಆಡ್ತಾಯಿದ್ದಿಯಾ? ನೀನು ಗಂಡಸು ತಾನೆ ಎಲ್ಲಿ ಬಿಟ್ಟಿ ಹೋಗುತ್ತೇ ನಿನ್ನ ಬುದ್ದಿ ಎನ್ನಬೇಡಿ. ಅವಳು ಮಾತನಾಡಿದ್ದು, ಒಬ್ಬ ಗಂಡಸಿನ ಬಗ್ಗೆಯೇ ಹೊರತು ಅಣ್ಣನ ಬಗ್ಗೆಯಾಗಲೀ, ಅಪ್ಪನ ಬಗ್ಗೆಯಾಗಲೀ ಅಲ್ಲ. ಅಪ್ಪನ ಸ್ಥಾನದಲ್ಲಿ, ಅಣ್ಣನ ಸ್ಥಾನದಲ್ಲಿ ಗಂಡಸೆಂದೂ ತಪ್ಪಾಗಿ ನಡೆದುಕೊಂಡಿಲ್ಲ. ಗಂಡನ ಸ್ಥಾನದಲ್ಲಿಯೂ ಅಷ್ಟೇ, ಅವನ ಸ್ಥಾನಕ್ಕೆ ಮರ್ಯದೆ ಒದಗಿಸಿಕೊಟ್ಟಿದ್ದಾನೆ. ಜೀವನದಲ್ಲಿ ತಾಯಿ ಎಷ್ಟು ಮುಖ್ಯವಾದವಳೋ ಅಷ್ಯ್ಟೇ ಪ್ರಾಮುಖ್ಯತೆ ತಂದೆಯ ಸ್ಥಾನಕ್ಕೂ ಇದೆ. ಅವನು ಕೋಪಿಷ್ಟನಿರಬಹುದು, ಜಂಬವಂತನೆನಿಸಬಹುದು, ಸರ್ವಾಧಿಕಾರಿಯೆನಿಸಬಹುದು, ಕೆಲವೂಮ್ಮೆ ದುರಹಂಕಾರಿ, ಕಟುಕನೆನಿಸಲೂ ಬಹುದು. ಆದರೇ ಅವೆಲ್ಲವೂ ಪ್ರೀತಿಯ ಬಹುಮುಖ್ಯ ಅಂಗಗಳು. ಅವನಲ್ಲಿ ಜವಬ್ದಾರಿಯೆಂಬುದರ ಭಯವಿದೆ, ನಾಳೆ ನನ್ನ ಮಕ್ಕಳು ಏನಾದರೆಂಬ ಅಳುಕಿದೆ. ಜವಬ್ದಾರಿ ಹೆಚ್ಚಾದಾಗ, ಭಯ ಹೆಚ್ಚಾಗುತ್ತದೆ, ಭಯದೊಂದಿಗೆ ಅನುಮಾನ, ಅಭದ್ರತೆ ಉಂಟಾಗುತ್ತದೆ. ಎಲ್ಲಿ ಮಕ್ಕಳನ್ನು ಕಳೆದುಕೊಂಡಾನೆಂಬ ಭಯ ಅವನನ್ನು ಆವರಿಸಿರುತ್ತದೆ. ತಾಯಿಗಿಂತ ಹೆಚ್ಚು ಮರುಕಪಡುವ ಜೀವವೇ ತಂದೆ ಆದರೇ ಗಂಡಸಿಗೆ ಅದನ್ನು ತೋರಿಸುವ ಮಾರ್ಗ ಗೊತ್ತಿಲ್ಲ. ಹೆಣ್ಣು ಅತ್ತು ಅವಳೊಳಗಡಗಿರುವುದನ್ನು ಹೊರದಬ್ಬಬಹುದು. ಆದರೇ ಗಂಡಸು? ಅವನಿಗೆ ಇಂಥಹ ಹಲವಾರೂ ಭಾವನೆಗಳನ್ನು ಅದುಮಿಕೊಳ್ಳುವ ಅನಿವಾರ್ಯತೆಯನ್ನು ನಮ್ಮ ಸಮಾಜ ಹುಟ್ಟಿನಿಂದಲೇ ತುಂಬಿಬಿಡುತ್ತದೆ. ಈ ಮಾತನ್ನು ಹೇಳುವಾಗ ಜವಬ್ದಾರಿಯೆಂಬುದು ಬರೀ ಗಂಡಸರಿಗೇನೇನಾ? ಹೆಂಗಸರಿಗೆ ಅದು ಇರುವುದಿಲ್ಲವಾ ಹೀಗೆ ಅನುಚಿತ ಪ್ರಶ್ನೆಗಳು ಹುಟ್ಟಿ ನಮ್ಮನ್ನು ನರಕಕ್ಕೆ ತಲ್ಲುತ್ತವೆ.
ಅದರಂತೆಯೇ, ಹೆಣ್ಣಿನ ಬಗ್ಗೆ ಮಾತನಾಡುವಾಗಲೂ ಸಹ ಇಂತಹ ನೂರಾರು ಪ್ರಶ್ನೆಗಳು ಬರುತ್ತವೆ. ನನ್ನ ಕೆಲವು ಸ್ನೇಹಿತರಂತೂ ಕೆಲವೊಮ್ಮೆ ಅದೆಷ್ಟೂ ಹಗುರವಾಗಿ ಮಾತನಾಡುತಾರೆಂದರೇ, ಎಟಿಎಂ ಗೆ ಹೋಗುವ ಹುಡುಗಿಯರನ್ನು ಕಂಡರೇ,ಇದೇ ಮೊದಲನೇ ಬಾರಿ ನಾನು ಒಬ್ಬ ಹುಡುಗಿ ಎಟಿಎಂ ಗೆ ಹೊಗುತ್ತಾ ಇರೊದನ್ನ ಕಂಡದ್ದು ಅಂತಾ ಒಬ್ಬ ಹೇಳಿದ, ಅದಕ್ಕೆ ಮತ್ತೊಬ್ಬ ಅವಳು ಹೋಗಿದ್ದು ಬ್ಯಾಲೆನ್ಸ್ ನೋಡಲಿಕ್ಕೆ ಎಂದ. ನಾನು ನಕ್ಕಿ ನಂತರ ಕೇಳಿದರೆ, ಹುಡುಗಿಯರೆಂದು ತಮ್ಮ ಬಾಯ್ ಫ್ರೆಂಡ್ಸ್ ಇರುವ ತನಕ ತಮ್ಮ ಖಾತೆಯಲ್ಲಿ ನೂರು ರೂ ಕೂಡ ಹೊರಕ್ಕೆ ತೆಗೆಯುವುದಿಲ್ಲ ಎಂದರು. ಅದೇನೇ ಇರಲಿ ಅವೆಲ್ಲಾ ವ್ಯಕ್ತಿಗತ ಅಭಿಪ್ರಾಯಗಳು ಅದನ್ನೆಲ್ಲಾ ಸಾರ್ವಜನಿಕವಾಗಿ ಖಂಡಿಸುವುದು ಸುತರಾಂ ತಪ್ಪು. ಇಲ್ಲಿ ನಾವು ಗಮನಿಸಲೇಬೇಕಾದ ಕೆಲವು ಅಂಶಗಳೆಂದರೇ, ಇವು ಹಗುರದ ಮಾತೆನಿಸಬಹುದು, ಆದರೂ ನನಗೆ ಗಟ್ಟಿಮಾತುಗಳೆನಿಸುತ್ತವೆ. ಎಲ್ಲರೂ ಮಾತೆತ್ತಿದರೇ ಉಪಯೋಗಿಸುವ ಸ್ವಾಭಿಮಾನ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂತು. ಅದು ನನ್ನತನಕ್ಕೆ ಪೆಟ್ಟು ತಂತು, ಅದು ಇದು ಅಂತಾ. ಈ ಸ್ವಾಬಿಮಾನ ಅನ್ನೋದು ಹೇಗಿರುತ್ತೆ ಅಂತ ನಾನು ಬಹಳ ಸಲ ಯೋಚಿಸಿದ್ದುಂಟೂ. ಅಪ್ಪನ ಕೈಯಲ್ಲಿ ಹಣ ಪಡೆದು ಶೋಕಿ ಮಾಡಿ ಹುಡುಗಿಯ ಹಿಂದೆ ಅಲೆದಾಡಿದವನು, ಅಪ್ಪನ ದುಂಡಿನಿಂದ ಮೆರೆಯುವ ಹುಡುಗಿಯರೂ ಕೂಡ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಾರೆ. ಅಪ್ಪನ ದುಡ್ಡು ನಮಗಲ್ಲದೇ ಬೇರಾರಿಗೆ ಎಂದರೇ ನನ್ನಲ್ಲಿ ಉತ್ತರವಿಲ್ಲ. ಅಪ್ಪನ ದುಡ್ಡು ಅಪ್ಪನ ನಿಧನದ ನಂತರ ಮಕ್ಕಳಿಗೆಂದೂ, ಅಪ್ಪನ ಸ್ವಂತಕ್ಕೆ ದುಡಿದ ಹಣವನ್ನು ಇಚ್ಚೆಗೆ ತಕ್ಕಂತೆ ಮಾಡಬಹುದೆಂದು ಕಾನೂನೇ ಇರುವಾಗ ನಮಗೆ ಚೆನ್ನಾಗಿ ತಿಳಿಯುತ್ತದೆ. ಅಪ್ಪನ ದುಡ್ಡೂ ನಮ್ಮದಲ್ಲ. ತನ್ನ ಕೈಯಿಂದ ನಾಲ್ಕೂ ಕಾಸು ಸಂಪಾದಿಸದೇ ಇದ್ದರೂ, ಸ್ವಾಭಿಮಾನಿಗಳೆಂದು ಬೀಗುವವರಿಗೇನು ಕಡಿಮೆಯಿಲ್ಲ. ದುಡಿಯುವವರಿಗೆ ಮಾತ್ರವೇ ಸ್ವಾಭಿಮಾನವಿರಬೇಕೇ? ಹಾಗೆನೂ ಇಲ್ಲ ಆದರೇ, ಸ್ವಾಭಿಮಾನಕ್ಕಿಂತ ದೊಡ್ಡದು ಸ್ವಾವಲಂಬಿ ಬದುಕು. ಇನ್ನೊಬ್ಬರ ಹಣದಲ್ಲಿ ಮೆರೆದು ಕುಣಿದಾಡಿ ಸ್ವಾಭಿಮಾನ ಆತ್ಮ ಪ್ರತಿಷ್ಠೆ ಅನ್ನುವವರ ಮೇಲೆ ನನಗೆ ಎಷ್ಟೂ ಗೌರವವಿಲ್ಲ.
ಮನುಷ್ಯ ತಾನು ಕಳಿತಿರುವುದೆಲ್ಲವೂ ಅತಿರೇಕಕ್ಕೆ ಹೋಗುವಂತದ್ದೇ, ಏನು ಮಾಡಿದರೂ ಸರಿ ಅದು ಅತಿಯಾಗುವವರೆಗೂ ಅವನಿಗೆ ಸಮಧಾನವಿಲ್ಲ. ಎಲ್ಲ ನಮ್ಮ ಕನ್ನಡ ಸಿನೆಮಾಗಳ ರೀತಿ. ಇಲ್ಲ ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳ ರೀತಿ. ಎಲ್ಲವನ್ನೂ ಅತಿರಂಜಕವಾಗಿಸುತ್ತಾರೆ.ಎನೋ ಹೇಳೋಕೆ ಶುರು ಮಾಡಿ ಮತ್ತೇನನ್ನೋ ಹೇಳುತಿದ್ದಾನೆ ಎನ್ನಬೇಡಿ. ಇದು ಅವಶ್ಯಕತೆಯ ವಿಷಯ. ಹೆಣ್ಣು ಗಂಡಿನ ಅಥವಾ ಒಂದು ಗುಂಪಿನ ಬಗ್ಗೆ ಹೇಳುವಾಗ ಎಲ್ಲವೂ ವೈಪರಿತ್ಯಕ್ಕೆ ಹೋಗಿರುವುದೇ ಕಾರಣ. ಹೆಣ್ಣನ್ನು ಶೋಷಿಸಿದ ಸಮಾಜ ಹಲವಾರು ಶತಮಾನಗಳು ಅವರ ಕೈಕೆಳಗೆ ಅದುಮಿಟ್ಟಿತ್ತು. ಆದರೇ ಇಂದಿನ ಜಾಗತಿಕ ಯುಗದಲ್ಲಿ ಅದು ಸ್ವಲ್ಪ ಸಡಿಲುಗೊಂಡಿದೆ. ಅವಳು ನಾನು ನಿನ್ನಷ್ಟೆ ಸಮ ಎಂದು ನಿಂತಿದ್ದಾಳೆ. ಅದನ್ನು ಸಹಿಸಲು ನಮ್ಮ ಸಮಾಜ ಸಿದ್ದವಿಲ್ಲ. ಇದು ಎಲ್ಲಿಯವರೆಗೆಂದರೇ, ಗಂಡು ಅನಾದಿ ಕಾಲದಿಂದಲೂ ಹೆಣ್ಣನ್ನು ಒಂದು ವಸ್ತುವೆಂದು ತಿಳಿಯುತ್ತಾ ಅವಳ ಹೊರಗಿನ ಆಕರ್ಷಣೆ ಬೆಲೆಕೊಡುತ್ತಾ ಬಂದನೆನಿಸುತ್ತದೆ. ಅದಕ್ಕಾಗಿಯೇ, ಹಿಂದಿನ ಎಲ್ಲ ಕಥ ಕಾದಂಬರಿಗಳಲ್ಲಿಯೂ ಅವಳ ಸೌಂದರ್ಯ ವರ್ಣನೆ ಇರುತ್ತಿತ್ತೆ ವಿನಾಃ ಮತ್ತೆನೂ ಇರುತ್ತಿರಲಿಲ್ಲ. ಅವಳ ಮನಸ್ಸನ್ನು ಅರಿತು ಬಣ್ಣಿಸಿದವು ಕೆಲವೇ ಕೆಲವು. ಇದಕ್ಕೆಲ್ಲಾ ಆಗಿನ ಕಾಲದ ಅವರ ಸದಭಿರುಚಿಗಳು ಅಥವಾ ಅವರ ಜೀವನ ವ್ಯವಸ್ಥೆ ಹಾಗಿದ್ದಿದ್ದು ಒಂದು ಮುಖ್ಯ ಅಂಶ. ಆದರೇ, ಅದನ್ನೆ ನಾವು ಇಲ್ಲಿಯ ತನಕವೂ ಮುಂದುವರೆಸುತ್ತಾ ಅದೇ ಜಪ ಮಾಡುತ್ತಾ ಎಷ್ಟು ದಿನ ಮುಂದುವರೆಯಲೂ ಆದೀತು. ಶೋಷಿತ ವರ್ಗ, ಶೋಷಿಕ ವರ್ಗಗಳ ಕಥೆಯೂ ಇದಕ್ಕೆ ಹೊರತಲ್ಲ.
ಇದ್ದ ಹಾಗೇಯೇ ಇರಬೇಕು ಬದಲಾವಣೆ ಆಗಕೂಡದೆಂದು ಕುಳಿತರೇ ಅಲ್ಲೆನೂ ಆಗದು, ಕಾಲಮಾನಕ್ಕೆ ತಕ್ಕಂತೆ ಜೀವನವನ್ನು ರೂಪಿಸುತ್ತಾ ಹೋಗಬೇಕಾಗುತ್ತದೆ. ಕುಂಟ, ಕುರುಡ, ಹುಟ್ಟು ಸೋಮಾರಿಯಾದವನನ್ನೇ ನಂಬಿ ಅವನೇ ನನ್ನ ದೇವರೆಂದು ಪೂಜಿಸೆಂದು ಹೇಳಿದರೇ ಹೇಗೆ ಕೇಳುವುದು. ತನ್ನ ಆಕಾಕ್ಷೆ ಆಸೆಗಳಿಗೆ ಬೆಲೆಕೊಡದ ಗಂಡನ ಜೊತೆಯಲ್ಲಿ, ದೇಹವನ್ನು ಮಾತ್ರ ಹಂಚಿಕೊಂಡು ಬದುಕುವುದಾದರೇ ಅವಳಿಗೆ ಹೆಂಡತಿಯೆಂಬ ನಾಮಕರಣವೇಕೆ? ಲೈಂಗಿಕ ಕಾರ್ಯಕರ್ತೆಯರಿಗೂ ಅವಳಿಗೂ ವ್ಯತ್ಯಾಸವೇನೂ ಬಂತು? ಅನ್ನ ಬಟ್ಟೆ ಬರಿ ಚಿನ್ನಾ ಇಷ್ಟನ್ನು ಕೊಟ್ಟ ಮಾತ್ರಕ್ಕೆ ಗಂಡನೆನಿಸಿಕೊಳ್ಳುವುದಿಲ್ಲ. ಅದರಂತೆಯೇ, ಹೆಂಡತಿಯ ವಿಚಾರದಲ್ಲಿಯೂ ಅಷ್ಟೇ ಗಂಡ ಹೆಂಡಿರ ವಿಷಯದಲ್ಲಿಯೂ ಎಲ್ಲಿಲ್ಲದ ಸ್ವಾಭಿಮಾನ ತಂದು ಅವನನ್ನು ಮಾತು ಮಾತಿಗೂ ನಿಂದಿಸಿ ಅವನಲ್ಲಿ ಹುಟ್ಟು ಊನವಿದೆ ಎನಿಸಬಾರದು.
ಇವೆಲ್ಲವೂ ವೈಯಕ್ತಿಕ ಅಭಿಪ್ರಾಯ ಅನಿಸಿಕೆಗಳಿಗೆ ಸಂಭಂಧಪಟ್ಟವು. ಅವಗಳನ್ನು ನಿಮ್ಮ ಗೊಡ್ಡು ಪುರಾಣಗಳಿಗೆ ಹೋಲಿಸಿ ನೋಡುವುದನ್ನು ನಿಲ್ಲಿಸಿ. ರಾಮನಂತೆ ಕೃಷ್ಣನಂತೆ ಎನ್ನುವುದು ನಿಲ್ಲಲಿ. ಅದು ಅಂದಿನ ಕಾಲ ಇದು ಇಂದಿನ ಕಾಲ. ನಿಮ್ಮ ಭಾವನೆಗಳಿಗೆ, ನಿಮ್ಮ ಮನಸ್ಸುಗಳಿಗೆ, ಆತ್ಮ ತೃಪ್ತಿಗಾಗಿ ಬದುಕುವುದನ್ನು ಕಲಿಯಬೇಕಿದೆ. ಅದನ್ನು ಬಿಟ್ಟು ಸದಾ ಬೇರೆಯವರನ್ನು ಬೈಯ್ಯುತ್ತಾ ಅಥವಾ ಹೊಂದದ ಪರಿಸರದಲ್ಲಿ ಕೊರಗುತ್ತಾ ಕಾಲ ಕಳೆಯುವುದೇಕೆ. ಜೀವನವನ್ನು ಸರಳ ಮತ್ತು ಸುಂದರವಾಗಿರಿಸಿಕೊಳ್ಳುವುದು ಮುಖ್ಯ. ಇವೆಲ್ಲವೂ ನಮ್ಮ ಕೈಯ್ಯಲ್ಲಿಯೇ ಇದೆ. ಕುಳಿತು ಚಿಂತನೆ ಮಾಡಿ ಕಾರ್ಯರೂಪಕ್ಕೆ ತರಬೇಕು. ಮಾನಸಿಕ ಸುಖ ಎಲ್ಲದಕ್ಕಿಂತಲೂ ಮುಖ್ಯ.

No comments:

Post a Comment