ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

02 June 2009


ತೋರಿಕೆಯ ಬದುಕಿಗೆ ಬುನಾದಿಯಾದ ಪರಿಸರ ಪ್ರೇಮವೆಂಬ ಸೋಗು!ಬಹಳ ದಿನಗಳಿಂದಲೂ ಭಾವನೆಗಳು, ಸಂಭಂಧಗಳು, ಪ್ರೀತಿ, ಪ್ರೇಮ, ಮೋಸ ಅದು ಇದು ಅಂತಾ ಅದೇ ಗುಂಗಿನಲ್ಲಿ ನನ್ನ ಬರಹವನ್ನು ನಿಮ್ಮನ್ನು ಸುತ್ತಾಡಿಸಿ ಬೇಸರ ಮಾಡಿಸಿದ್ದಕ್ಕಾಗಿ ಇಂದು ಬೇರೆಯ ವಿಷಯದ ಬಗ್ಗೆ ಬರೆಯುವುದಕ್ಕೆ ಕುಳಿತಿದ್ದೇನೆ. ಬೇರೆ ವಿಷಯ ಎಂದ ತಕ್ಷಣ ಗಾಬರಿಪಡುವಂತದ್ದೇನು ಇಲ್ಲ. ಶೀರ್ಷಿಕೆಯಲ್ಲಿಯೇ ಹೇಳಿರುವುದರಿಂದ ನಾನು ಹೇಳಹೊರಟಿರುವುದು ಪರಿಸರಪ್ರೇಮದ ಬಗ್ಗೆ ಎನ್ನುವುದು ನಿಮಗೆ ಮನವರಿಕೆಯಾಗಿದೆ. ಎಲ್ಲಿ ಹೋದರೂ ಈ ಪ್ರೀತಿಯೆಂಬ ಪದ ನನ್ನು ಬಿಡುವುದಿಲ್ಲವೆನಿಸುತ್ತದೆ. ಅದೇನೇ ಇರಲಿ, ಇಲ್ಲಸಲ್ಲದ ವಿಷಯದಲ್ಲಿ ನಿಮ್ಮನ್ನು ಮುಳುಗಿಸುವುದು ಬೇಡ. ನಾನು ಚಿಕ್ಕವನಿದ್ದಾಗ, ಸುಮಾರು ೧೫-೨೦ ವರ್ಷಗಳ ಹಿಂದೆ ನಿಮಗೂ ತಿಳಿದ ಹಾಗೆ ಪರಿಸರದ ಬಗ್ಗೆ, ಮಾಲಿನ್ಯದ ಬಗ್ಗೆ ಬರೆಯುವವರ, ಓದುವವರ ಅಥವಾ ಚರ್ಚಿಸುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಆದ್ದರಿಂದೂ, ಅದರ ಸಂಖ್ಯೆ ಗಣನೀಯವಾಗಿ ಮೇಲೆರಿದ್ದಲ್ಲದೆ, ಎಲ್ಲಿ ಕಂಡರೂ ಪರಿಸರ ಸ್ನೇಹಿ ಎಂಬ ಪದ ರಾರಾಜಿಸುತ್ತದೆ. ಕೆಲವೊಮ್ಮೆ ನನ್ನನ್ನು ಪ್ರಶ್ನಿಸಿದವರಿದ್ದಾರೆ, ಪರಿಸರ ವಿಜ್ನಾನಿಯಾಗಿ ನೀನು ಸಿಗರೇಟ್ ಸೇದುವುದು ಸರಿನಾ? ಎಂದು. ಇದಕ್ಕೆ ಉತ್ತರ ಕೊಡುವುದಕ್ಕೆ ಹೋದರೆ ಅದು ಸಮರ್ಥನೆಯೆನಿಸುವುದರಿಂದ ನಾನು ನನ್ನ ಸಿಗರೇಟಿನ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಅದಕ್ಕೂ ಹೆಚ್ಚಾಗಿ ನಾನು ಪರಿಸರ ವಿಜ್ನಾನಿಯಲ್ಲವೆನ್ನುವುದನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಪರಿಸರ ವಿಜ್ನಾನ ಓದಿದವ್ರೆಲ್ಲರೂ ಪರಿಸರ ವಿಜ್ನಾನಿಗಳಾಗುತ್ತಾರೆಂಬುದು ನಿಮ್ಮ ನಮ್ಮ ಭ್ರಮೆಯಷ್ಟೆ. ಆ ಪದಕ್ಕೆ ಮಸಿ ಬಲಿಯುವುದಕ್ಕೆಂದು ಹುಟ್ಟಿದವರು ನನ್ನಂಥವರು. ಆದರೂ ಬಿಡಿ, ನಾಲ್ಕು ಜನರು ತಲೆದೂಗುವಂತೆ ಮಾತನಾಡಿದರೇ ಸಾಕು ಎಂಥಹ ಬಿರುದನ್ನು ಕೊಡಲು ನಮ್ಮ ಜನ ಸಿದ್ದರಿರುತ್ತಾರೆ. ಅದು ಎಷ್ಟು ಆರೋಗ್ಯಕರವೆಂಬುದನ್ನು ಚಿಂತಿಸುವುದಿಲ್ಲ. ಅಬ್ಬಾ ಏನು ಹೇಳಿದ್ದಾನೆ ಅಲ್ವಾ? ಈ ಉದ್ವೇಗ ಭರಿತ ನಮ್ಮ ಹಲವಾರು ಪತ್ರಕರ್ತರಲ್ಲೂ ಕಾಣಬಹುದು. ಅಂತರ್ಜಾಲದ ಮುಂದೆ ಅರ್ಧ ತಾಸು ಕಳೆದು ಅರ್ಧಂಭರ್ಧ ಓದಿ, ತಿಳಿದು ತೀಡಿ ಬರೆದು ಹೆಸರು ಗಿಟ್ಟಿಸಿದವರೂ ಇದ್ದಾರೆ. ಪರಿಸರದ ಬಗ್ಗೆ, ವಿಜ್ನಾನದ ಬಗ್ಗೆ ಸೇಡು ತೀರಿಸಲೂ ಬರೆಯುತಾರೇನೋ ಎಂಬಂತೆ ಬರೆದವರೂ ಇದ್ದಾರೆ. ಪರಿಸರವೆಂಬುದು ಕೇವಲ ವೈಜ್ನಾನಿಕ ವಸ್ತುವಲ್ಲ. ಅದೊಂದು ನಮ್ಮ ಜೀವನದ ಮಾರ್ಗ, ಮಾರ್ಗವೆನ್ನುವುದಕ್ಕಿಂತ ಅದೇ ಜೀವನ. ಮಾತುಮಾತಿಗೂ ಪರಿಸರವೆಂಬುದು ಬರುತ್ತಲೇ ಇರುತ್ತದೆ.ಈ ಪರಿಸರ ಸರಿಯಿಲ್ಲ, ಅಲ್ಲಿನ ಪರಿಸರ ಕೊಳಕು, ಅದು ಇದು ಎಂದು. ಅಂದರೇ, ಪರಿಸರವೆನ್ನುವುದು ಒಂದು ವಸ್ತುವಿಗೆ ಮೀಸಲಿಟ್ಟದ್ದಲ್ಲ.ಆದರೇ, ಇಂದು, ಪರಿಸರದಿನವೆಂದು ಒಂದನ್ನು ಆಚರಿಸಿ, ಅದನ್ನು ಸಂಭ್ರಮಕ್ಕೆ ತಂದಿದ್ದೇವೆ. ಅದರ ಅವಶ್ಯಕತೆಯ ಬಗ್ಗೆ ಮಾತನಾಡುವುದಿಲ್ಲ. ನನಗೆ ಆಚರಣೆಯೆಂದರೇ, ಎಲ್ಲಿಲ್ಲದ ಆಸಕ್ತಿ, ಮತ್ತು ಕುತೂಹಲ. ನಾನು ಎಂದಿನಿಂದಲೂ ಊರುಗಳಲ್ಲಿ, ಜಾತ್ರೆ, ಸಂತೆ ಹಬ್ಬ, ನಾಟಕಗಳನ್ನು ಆನಂದಿಸುತ್ತಾ ಬೆಳೆದವನು.ಆದರೇ, ಪರಿಸರವೆನ್ನುವುದು ವೈಜ್ನಾನಿಕ ವಸ್ತುವಲ್ಲವೆಂದ ಮೇಲೆ ನಮ್ಮ ವಿಜ್ನಾನಿಗಳು ಅದನ್ನು ಆಡುಭಾಷೆಯಲ್ಲಿ ಬರೆಯಲು ಎಷ್ಟು ಸಮರ್ಥರು ಎಂಬುದಕ್ಕೆ ಕನ್ನಡದಲ್ಲಿರುವ ಪರಿಸರ ಅಥವಾ ಯಾವುದೇ ವೈಜ್ನಾನಿಕ ಪುಸ್ತಕಗಳೆನ್ನು ಓದಿದರೇ ತಿಳಿಯುತ್ತದೆ. ಅದರಂತೆಯೇ, ದೈನಿಕಗಳಲ್ಲಿ ಬರುವ ವಿಜ್ನಾನದ ವಿಷಗಳನ್ನು ಗಮನಿಸಿ ನೋಡಿ. ಒಂದು ಅಲ್ಲಿ ಅಂತರ್ಜಾಲದಿಂದ ಕದ್ದು ಬರೆದವು, ಇಲ್ಲ ಅರ್ಥವೇ ಆಗದ ವಿಷಯಗಳು.

ಇಂಥಹ ಸನ್ನಿವೇಶದಲ್ಲಿ, ನನ್ನ ಈ ಬರವಣಿಗೆಗಳಿಗೆ ಒಂದು ಪ್ರೋತ್ಸಾಹ ಕೊಟ್ಟವುಗಳೆಂದರೇ, ತೇಜಸ್ವಿ ಮತ್ತು ಕಾರಂತರ ಬರವಣಿಗೆಗಳು. ಪರಿಸರವೆಂಬುದು ನಮ್ಮಿಂದ ಬೇರೆಯಲ್ಲ. ಅದು ನಮ್ಮೊಳಗೆ, ನಮ್ಮೊಂದಿಗೆ ಇರುವುದೆನ್ನುವುದನ್ನು ಅವರ ಬರವಣಿಗೆಗಳಿಂದ ಕಲಿತಿದ್ದೇನೆ. ಅಂತೆಯೇ, ನನ್ನ ವೈಜ್ನಾನಿಕ ಸಂಶೊಧನೆಗಳ ಫಲದಿಂದಾಗಿ ಆದಷ್ಟೂ ಸರಳತೆಯಿಂದ ಇದನ್ನು ಓದುಗರ ಮುಂದೆ ಮಂಡಿಸಲು ಪ್ರಯತ್ನಿಸುತ್ತೇನೆ.ನನ್ನ ಬರವಣಿಗೆ ಯಾವುದೇ ಕಾರಣಕ್ಕೂ ಓದಿಗರಿಗೆ ಇದೊಂದು ಪಠ್ಯವೆನಿಸದೇ, ಇದೊಂದು ಸಾಮಾಜಿಕ ಕಥೆ ಅಥವಾ ಇನ್ನೊಂದು ಕಾದಂಬರಿಯ ರೂಪವೆನಿಸಲೆಂದು ಬಯಸುತ್ತೇನೆ. ನನಗೆ ಏನೇ ಬಯಕೆ ಮೂಡಿದರೂ ಅದನ್ನು ಅನುಭವಿಸಬೇಕಾದವರು ನೀವುಗಳು. ಪರಿಸರವೆಂದರೇ, ಬರೀ ಮರ, ಗಿಡ, ಹಚ್ಚ ಹಸಿರು, ವನರಾಶಿ ಎಂಬ ನಮ್ಮ ಊಹೆಗಳು ಬದಿಗೆ ಸರಿದು ಅದೊಂದು ಬದುಕಿನ ಮುಖವಷ್ಟೆ ಅದು ನಮ್ಮಿಂದ ಬೇರೆಯಾದುದಲ್ಲ. ಅದು ನಮ್ಮೊಳಗೆ ಇರುವ ಆತ್ಮದಂತೆ ಅಥವಾ ನಮ್ಮ ಜೀವನ ನಡೆಸಲು ಅನುವಾಗುವ ಒಂದು ಮಾರ್ಗವೆನಿಸಿದರೆ ಈ ಬರವಣಿಗೆ ಸಾರ್ಥಕ.ಆದರೂ ಇತ್ತೀಚಿನ ದಿನಗಳಲ್ಲಿ, ಪರಿಸರ ಮಾಲಿನ್ಯ, ಕಲುಷಿತ, ಅರಣ್ಯಗಳ ನಾಶ ಇವೆಲ್ಲವೂ ಹೆಚ್ಚಾಗಿರುವುದು ಸಹಜ. ಇದನ್ನು ಪ್ರಶ್ನಿಸುತ್ತಾ ಹೋದರೇ, ನಗರೀಕರಣ ಬೇಡವೇ? ಇನ್ನು ಕಾಡಿನಲ್ಲಿ ಎಲೆ ಸುತ್ತಿಕೊಂಡು ಬದುಕಲಾದೀತೆ ಎನ್ನುವವರು ಸಿಗುತ್ತಾರೆ. ಅದೂ ಸಹಜವೇ. ಆದರೇ, ನನಗೆ ಇಂದಿಗೂ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಇದುವರೆಗೂ ಪಟ್ಟಣವಾಸಿಗಳು, ವಾಹನಗಳನ್ನು ಬಳಸುತ್ತಿದ್ದರೂ, ಈಗ, ಹಳ್ಳಿಗಾಡಿನಲ್ಲಿಯೂ, ಟಿವಿ, ಫ್ರಿಡ್ಜ್ ಇರುವದನ್ನು ಬಹಳ ಮಂದಿ ಈಗ ಬಿಡಪ್ಪ, ಭಿಕ್ಷುಕನೂ ಮೊಬೈಲ್ ಹಿಡಿದಿರುತ್ತಾನೆ. ಇದೆಂತಹ ವರಸೆ? ಅವನಿಗೆ ಅದನ್ನು ಪಡೆಯುವ ಹಕ್ಕಿಲ್ಲವೇ? ಅದೇ ರೀತಿ, ಪರಿಸರಪ್ರೇಮದ ಸೋಗು ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೇ, ಹಾದಿಯಲ್ಲಿ ಬೀದಿಯಲ್ಲಿಯಲ್ಲೂ, ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಪರಿಚಯಸತೊಡಗಿದ್ದಾರೆ. ಒಮ್ಮೆ ಆಲೋಚಿಸಿ ನೋಡಿ, ಒಬ್ಬ ಬಡವನ ಮೇಲೆ, ನಿಮ್ಮ ಪರಿಸರ ಸ್ನೇಹಿ, ಬ್ಯಾಗ್ ಗಳ ಬೆಲೆಯೆಷ್ಟು ಅವನು ಸದ್ಯದಲ್ಲಿ ಬಳಸುತ್ತಿರುವ ಬ್ಯಾಗ್ ನ ಬೆಲೆಯೆಷ್ಟು. ಕನಿಷ್ಠ ಇಪ್ಪತ್ತು ಪಟ್ಟು ಹೆಚ್ಚಿರುತ್ತದೆ. ಆಟೋದವನ ಬಳೆಯಲ್ಲಿ, ೨ ರೂಗಳಿಗೆ ಜಗಳವಾಡುವ ನಾವು, ೨ರೂಪಾಯಿ ಇದ್ದರೇ ೪ ಕಿ.ಮೀ, ದೂರ ಬಸ್ಸಿನಲ್ಲಿ ಹೋಗುವ ಅಥವಾ ೨ ರೂಗಳನ್ನು ಖರ್ಚುಮಾಡದೇ ನಡೆದ್ಉ ಹೋಗುವವನ ಮೇಲೆ ಹೇರುವುದು ಎಷ್ಟು ಸರಿ? ಇಂಥಹ ನನ್ನ ಮಾತುಗಳು ನಿಮಗೆ ವಿಚಿತ್ರವೆನಿಸುತ್ತವೆ. ಆದರೇ ನಾವು ಎಲ್ಲರನ್ನೂ ಪರಿಗಣಿಸಬೇಕಾಗುತ್ತದೆ. ಬರೀ ಒಂದೇ ದೃಷ್ಟಿಯಿಂದ ನೋಡುತ್ತಾ ಕುಳಿತರೇ ಅದು ಪ್ರಜಾಪ್ರಭುತ್ವವೆನಿಸುವುದಿಲ್ಲ.

ಪರಿಸರ ದಿನ ಬಂತೆಂತರೆ, ನಾಲ್ಕು ಗಿಡಗಳನ್ನು ನೆಡುವುದು ನಂತರ ಅವುಗಳನ್ನು ಮರೆತು ಕೂಡುವುದು ಇದಷ್ಟಕ್ಕೆ ಸೀಮಿತವಾದುದ್ದಲ್ಲ. ಅದೊಂದು ಜೀವನದ ಅಂಗ.ಅದೊಂದು ನಿರಂತರ ನಡಿಗೆ. ಅದರ ಬಗ್ಗೆ ಜಾಗೃತೆ ಮೂಡಿಸುವುದೆಂದರೇ, ನಾಲ್ಕು ಪತ್ರಿಕೆಗಳಲ್ಲಿ ಪ್ರಕಟಿಸಿ ಮೆರೆಯುವುದಕ್ಕೇ ಸೀಮಿತವಾಗಬಾರದು. ತಲತಲಾಂತರಗಳಿಂದ ಅರಣ್ಯದೊಂದಿಗೆ ಬದುಕಿ ಬಂದ ನಮ್ಮ ಪೂರ್ವಿಕರನ್ನು ಗಮನಿಸಿ ನೋಡಿದಾಗ ತಿಳಿಯುತ್ತದೆ. ಅರಣ್ಯದೊಂದಿಗೆ ನಂಟುತನವಿಟ್ಟು ಬದುಕುತಿದ್ದ ಜನರನ್ನು ಅಲ್ಲಿಂದ ಹೊರದಬ್ಬಿ, ಅಲ್ಲಿಗೆ ಮತ್ತೆ ಅಧ್ಯಯನ ನಡೆಸುವ ಸಲುವಾಗಿ ಅದಕ್ಕೊಂದು ಹೊಸ ಹೆಸರು ಇಕಾಲಜಿ ಎನಿಸಿ ಮೊದಲಿನಿಂದ ಕಲಿಯಲು ಹೊರಟದ್ದು ನಮ್ಮ ಬುದ್ದಿವಂತಿಕೆಯ ಅರಿವನ್ನು ತಿಳಿಸುತ್ತದೆ. ಪರಿಸರ ವಿಜ್ನಾನಿಗಳೆಂದು ಮೆರೆಯುತ್ತಿರುವ ನಮ್ಮ ಸಹದ್ಯೋಗಿಗಳಿಗೆ ನನ್ನ ಮಾತುಗಳು ಸ್ವಲ್ಪ ಇರಿಸು ಮುರಿಸು ಮಾಡಬಹುದು. ಆದರೇ, ನಮ್ಮ ಪೂರಿವಕರಿಗಿಂದ ಪರಿಸರ ಕಾಲಜಿ ನಮ್ಮಲಿಲ್ಲವೆನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಇದಕ್ಕೊಂದು ಸರಳ ಉದಾಹರಣೆ, ಮನೆ ಮದ್ದು, ಅಥವಾ ಅಜ್ಜಿ ಮದ್ದು ಇಲ್ಲವೇ ಸಾಂಪ್ರದಾಯಿಕ ಔಷಧಿ, ಹೀಗೆಂದರೇನು? ಹತ್ತು ವರ್ಷಗಳ ಹಿಂದೆ ಹಳ್ಳಿಗಳಲ್ಲಿ, ಅನಾಸಿನ್, ವಿಕ್ಸ್ ಅಷ್ಟು ಪ್ರಾಬಲ್ಯವಿರಲಿಲ್ಲ. ಆದಿನಗಳಲ್ಲಿ, ಇದ್ದದ್ದು, ಮೆಣಸಿನ ಕಷಾಯ, ಜೀರಿಗೆ ಕಷಾಯ, ತುಳುಸಿ, ನರ್ವೀಸಾ, ಹೀಗೆ ಹತ್ತು ಹಲವು ಮೂಲಿಕೆಗಳ ಔಷಧಿಗಳು ಸಿದ್ದವಿರುತ್ತಿದ್ದವು. ಆದರಿಂದ, ಅದರ ಬದಲಿಗೆ ಎಲ್ಲವೂ ರಾಸಾಯನಿಕ ಔಷಧಿಗಳು ನುಗ್ಗಿ ಧಾಂಧಳೆ ನಡೆಸಿವೆ. ನೀವು ಯಾವುದೇ ಸಸ್ಯಶಾಸ್ತ್ರ, ಪರಿಸರ ವಿಜ್ನಾನ ವಿಭಾಗಕ್ಕೆ ಹೋಗಿ ನೋಡಿ, ಕನಿಷ್ಟ ವರ್ಷಕ್ಕೆ ೧೦-೧೫ ವಿಧ್ಯಾರ್ಥಿಗಳು ಈ ನಮ್ಮ ಸಂಪ್ರದಾಯಿಕ ಔಷದಿಗಳ ಬಗ್ಗೆ ಅಧ್ಯಯನ ನಡೆಸುತ್ತಿರುತ್ತಾರೆ. ಕಳೆದು ಹೋದದ್ದನ್ನು ಮತ್ತೆ ಹುಡುಕುವುದಷ್ಟೆ. ಯಾವ ಗಿಡ ಎಲ್ಲಿಗೆ ಒಗ್ಗಿತೆಂಬ ಸಾಮನ್ಯ ಜ್ನಾನವೂ ಇಲ್ಲದೇ ಇರುವವರೂ ಪರಿಸರ ದಿನಕ್ಕಾಗಿ ಸಾವಿರ ಸಾವಿರ ಗಿಡಗಳನ್ನು ನೆಡುತ್ತಾರೆ. ನಿಲಗಿರಿ, ಸಿಲ್ವರ್, ಅಕೇಷಿಯಾ, ಹೀಗೆ ಹೊರಗಡೆಯಿಂದ ಬಂದ ತಳಿಗಳು ನಮ್ಮ ಸ್ಥಳಿಯ ತಳಿಗಳನ್ನು ನುಂಗಿರುವುದರ ಬಗ್ಗೆ ಉಸಿರೆತ್ತುವುದಿಲ್ಲ.

ಇಂದು ಎಲ್ಲೆಡೆಯೆಲ್ಲಿಯೂ ಕೇಳಿಬರುತ್ತಿರುವ ಮತ್ತೊಂದು ವಿಷಯವೇ, ಹವಮಾನ ವೈಪರೀತ್ಯ? ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎನ್ನುವುದು ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದರೂ, ಎಲ್ಲದ್ದಕ್ಕೂ ಶನೀಶ್ವರನೇ ಎನ್ನುವ ಹಾಗೆ, ಎಲ್ಲದ್ದನೂ ಜಾಗತಿಕ ತಾಪಮಾನ ಏರಿಕೆಗೆ ಸಂಭಂಧಕಲ್ಪಿಸಿಕೊಳ್ಳುತ್ತಿದ್ದೇವೆ. ಇದರ ಕುರಿತಂತೆ, ಜಾಗತಿಕ ಮಟ್ಟದ್ದಲ್ಲಿ, ಅದರ ರೂಪುರೇಷೆಗಳು ಕಂಡರೂ, ಸ್ಥಳಿಯ ಮಟ್ಟದಲ್ಲಿ ಅದೂ ತೀರ್ಮಾನವಾಗಿಲ್ಲ, ಇದಕ್ಕೆ ಮುಖ್ಯ ಕಾರಣವೆಂದರೇ ಅದನ್ನು ತಿಳಿಯಲು ಬೇಕಾದ ಸಂಗತಿಗಳು ಸಾರ್ವಜನಿಕರಿಗೆ ದೊರೆಯುವುದಿಲ್ಲ. ಕಳೆದ ನೂರು ವರ್ಷಗಳ ಮಳೆ, ಉಷ್ಣಾಂಶ, ತಾಪಮಾನ ಇತ್ಯಾದಿಗಳು, ಹವಮಾನ ಇಲಾಖೆಯಲ್ಲಿದ್ದರೂ ಅದನ್ನು ಪಡೆಯಬೇಕೆಂದರೆ ಅದು ಬಹಳ ದುಬಾರಿಯಾಗಿರುವುದರಿಂದ, ಎಲ್ಲರೂ ತಮ್ಮ ಊಹೆಗೆ ನಿಲುಕಿದಂತೆ, ಆನೆಯ ಗಾತ್ರವನ್ನು ಬಣ್ಣಿಸಿದ್ದಾರೆ. ನಮ್ಮ ಆಳುವ ದೊರೆಗಳು, ಪರಿಸರವೆಂದರೇ, ಬರಿ ಮರಗಿಡಗಳೆಂದು ನಂಬಿರುವುದರಿಂದ ಅವರು ಅದರಿಂದ ಇನ್ನು ಹೊರಬಂದಿಲ್ಲ. ಮುಂದುವರೆದ ದೇಶಗಳಲ್ಲಿ, ಪರಿಸರದಿಂದಾಗುವ ಪ್ರತಿಯೊಂದು ಉಪಯೋಗಗಳನ್ನು, ಆಮ್ಲಜನಕ, ಇಂಗಾಲವನ್ನು ಹೀರುವುದು, ಹೀಗೆ ಎಲ್ಲವನ್ನು ಗಣನೆಗೆ ತೆಗೆದು ಕೊಂಡಿದ್ದರು ನಮ್ಮಲ್ಲಿ ಅವಕ್ಕೆಲ್ಲಾ ಬೆಲೆಯಿಲ್ಲ.

ಪರಿಸರವೆಂದರೇ, ಕಡಿಮೆ ಬಣ್ಣದ ಬಟ್ಟೆ, ಬ್ಯಾಗ್, ಗಿಡನೆಡುವುದು, ಇಲ್ಲಿಗೆ ನಿಂತಿವೆಯೆ ಹೊರತು. ಆಧುನಿಕವಾಗಿ, ವೈಜ್ನಾನಿಕವಾಗಿ ಮುಂದುವರೆದಿಲ್ಲ. ವಿಜ್ನಾನವೆಂಬುದು ಸಾಮಾನ್ಯ ಜನತೆಗೆ ತಲುಪಿಲ್ಲ. ನೈಸರ್ಗಿಕ ಕೃಷಿ, ಸಾವಯವ ಕೃಷಿ, ನೀರಿನ ಮಿತಬಳಕೆ, ಇಂತವುಗಳು ಇನ್ನು ಅವರಿಂದ ಬಲು ದೂರ ಉಳಿದಿವೆ. ಅವರಿಗೆ ಅದರ ಮೌಲ್ಯಗಳನ್ನು ಅರ್ಥಹಿಸಬೇಕೆ ಹೊರತು, ನೀವು ಇದನ್ನು ಬಿಟ್ಟು ಅದನ್ನು ಮಾಡಿ ಎಂದರೇ ಹೇಗೆ ಮಾಡಿಯಾನು? ನಿಮ್ಮನ್ನು ಹೇಗೆ ನಂಬಿಯಾನು? ಮಳೆ ನೀರು ಕೊಯ್ಯಲು ಹಣ ವ್ಯಯಿಸು ಎಂದರೇ, ಅವನೇಕೆ ಮಾಡಿಯಾನು ಅದರಿಂದ ಅವನಿಗಿರುವ ಲಾಭವನ್ನು ತೋರಿಸಬೇಕಲ್ಲವೇ?

3 comments:

  1. Dear Harish
    i found myself reading through an interesting and humorous post... I am sure that your message will reach people.... i like the way you ended the post highlighting about sustainable systems..Good one Hari, especially when the World Environment Day is approaching....

    ReplyDelete
  2. humorous illandre life ide ansode illa alvaa? nanage gottilla adestu humorous aagide anta nimge ista aagide antaa aadre adu humorous antaane bidi he he

    ReplyDelete