ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

14 July 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!---2


ದೊಡ್ಡೇಗೌಡ ಊರಿನ ಹಿರಿಯರಲ್ಲಿ ಒಬ್ಬರು. ಅವರಿಗೆ ಈಗ ವಯಸ್ಸು ಸುಮಾರು ನೂರು ದಾಟಿದೆಯೆಂದು, ಅವರ ವಯಸ್ಕರೆಲ್ಲರೂ ಬಹುಬೇಗ ಶಿವನ ಪಾದ ಸೇರಿದರು. ಬೇಗ ಎಂದರೇ ಯಾರೊಬ್ಬರೂ ಮರಿ ಮಕ್ಕಳನ್ನು ಕಾಣದೇ ಹೋದವರಿಲ್ಲ ಆದರೂ ಅದೆಲ್ಲಾ ದೊಡ್ಡೇಗೌಡರ ಲೆಕ್ಕದಲ್ಲಿ ಬಹಳ ಚಿಕ್ಕ ವಯಸ್ಸು. ಅವರ ವಯಸ್ಸಿನ ಲೆಕ್ಕಾಚಾರವೆಂದರೇ, ನಮ್ಮೂರ ಕೆರೆ ಕಟ್ಟಿಸಿದ ವರ್ಷ, ನಮ್ಮೂರ ಹೊಳೆಗೆ ಒಡ್ಡು ಕಟ್ಟಿಸಿದ ವರ್ಷ, ಅಡಿಕೆ ತೋಟ ಮಾಡಿದ ವರ್ಷ ಅಥವಾ ನಮ್ಮ ಸಣ್ಣಣ್ಣನ ಮದುವೆಯಾದ ವರ್ಷ. ಇವುಗಳ ಲೆಕ್ಕಾಚಾರ ಹಾಕಲು ನಾನು ಮತ್ತೊಂದು ಗೆಜೆಟರ್ ನನ್ನೇ ಹುಡುಕಬೇಕಾಯಿತು. ಅವರಲ್ಲಿ ಕ್ಯಾಲೆಂಡರ್ ಎಂಬುದರ ಗುರುತೇ ಇರಲಿಲ್ಲ. ಇದ್ದಿದ್ದರೂ ಅದನ್ನು ಉಪಯೋಗಿಸುವ ಮನಸ್ಸು ಮಾಡುತ್ತಿರಲಿಲ್ಲ. ಅವರಿಗೆ ನಮ್ಮ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ಗಳ ಬಗ್ಗೆ ಅಷ್ಟೂ ಭರವಸೆಯಿರಲಿಲ್ಲ. ಒಂಟಿಕೊಪ್ಪಲ್ ಪಂಚಾಂಗ ನೋಡಿಸಬೇಕು ಇಲ್ಲವೇ ದೊಡ್ಡಯ್ಯನವರ ಬಳಿಗೆ ಹೋಗಬೇಕು. ದೊಡ್ಡಯ್ಯನವರೆಂದರೇ ಸುತ್ತಾ ಹಳ್ಳಿಗೆ ಶಂಕರಾಚಾರ್ಯರೆಂದು. ಆದರೂ, ಅವರ ಭಾಷೆಗಳು ಇವರಿಗೆ ಅರ್ಥವಾಗುವುದಷ್ಟರಲ್ಲಿಯೇ ಇತ್ತು. ದೊಡ್ಡೇಗೌಡರೆಂದರೇ, ಕೆಲವರಿಗೆ ಬಹಳ ಮರ್ಯಾದೆ ಇನ್ನೂ ಕೆಲವರಿಗೆ ಅದೊಂದು ಪಿಠೀಲು. ಎಂದರೇ, ಅವರು ಕಂಡವರನ್ನು ಮುಗ್ದವಾಗಿ ಕೂರಿಸಿ ಮಾತನಾಡಿಸುವುದು ಇಂದಿನ ನಮ್ಮ ಪೀಳಿಗೆಯವರಿಗೆ ಕೊರೆಯುವುದೆನಿಸುತಿತ್ತು. ನಾನು ಹೋದಾಗ ಮೊದಲೆರಡು ದಿನಗಳು ಅವರ ಹತ್ತಿರಕ್ಕೆ ಸುಳಿಯಬೇಡವೆಂದು ನನ್ನ ವಯಸ್ಸಿನ ಹುಡುಗರಾದ, ರಮೇಶ ಮತ್ತು ರವಿ. ಆದರೂ ನನ್ನ ಕುತೂಹಲಕ್ಕಾಗಿ ಒಂದು ಮಧ್ಯಾಹ್ನ ಅವರ ಬಳಿ ಕುಳಿತು ಕೇಳತೊಡಗಿದೆ. ಅವರು ನನ್ನ ಓದಿನ ಬಗ್ಗೆ ಮತ್ತು ನನ್ನ ಕೆಲಸದ ಬಗ್ಗೆ ಕೇಳಿದಾಗ ಅವರಿಗೆ ಅರ್ಥೈಸುವ ಸಾಮರ್ಥ ನನ್ನಲಿಲ್ಲವೆಂಬುದು ಸಾಬಿತಾಯಿತು. ಒಬ್ಬ ವಿಜ್ನಾನಿ ಅಥವಾ ಒಬ್ಬ ವಿದ್ಯಾವಂತನೆನೆಸಿಕೊಂಡವನು, ತನ್ನ ಸರಳ ಭಾಷೆಯಲ್ಲಿ ತನ್ನ ಜನರಿಗೆ ಹೇಳಲಾಗದ ನನ್ನ ವಿದ್ಯಾಬ್ಯಾಸ ಕುರಿತು ನನಗೆ ಒಂದು ಬಗೆಯ ಜಿಗುಪ್ಸೆ ಮೂಡಿತು. ಪರಿಸರ ವಿಜ್ನಾನವನ್ನು ನಾನು ಓದುತಿದ್ದೇನೆಂದಾಗ, ಅದರ ವಿವರಣೆ ಕೇಳಬಯಸಿದಾಗ, ಅವರಲ್ಲಿದ್ದ ಕಾಳಜಿ, ಕುತೂಹಲ ನನ್ನನು ಮೂಕನಾಗಿಸಿದವು. ನನ್ನ ಹರುಕು ಮುರುಕು ಕನ್ನಡ ಮಿಶ್ರಿತ, ಗ್ರಾಮೀಣ ಮತ್ತು ಪಟ್ಟಣ ಮಿಶ್ರಿತ ಭಾಷೆಯಲ್ಲಿ ಅವರಿಗೆ ಸಮಾಧಾನಪಡಿಸತೊಡಗಿದೆ. ಅವರು ನಮ್ಮ ಓದುಗ, ವಯಸ್ಕರಂತೆ, ಅದರಿಂದ ಲಾಭ ನೀರೀಕ್ಷಿಸುವ ಪ್ರಶ್ನೆಗಳನ್ನು ಹಾಕಲಿಲ್ಲ.


ವಿದ್ಯಾವಂತ ವಯಸ್ಕರು ನಮ್ಮ ವಿದ್ಯಾಬ್ಯಾಸದ ಬಗ್ಗೆ ಕೇಳುವ ಸಾಮಾನ್ಯ ಪ್ರಶ್ನೆಗಳು, ಇದನ್ನು ಓದಿದರೇ, ಹೇಗೆ ಪರ್ವಾಗಿಲ್ವಾ? ಉದ್ಯೋಗಾವಕಾಶಗಳು ಹೇಗಿವೆ? ಪರಿಸರ ವಿಜ್ನಾನ ವಿದೇಶದಲ್ಲಿ ಬಹಳ ಬೇಡಿಕೆಯಿದೆಯಂತೆ? ನೀವು ಕಂಪನಿಗಳಲ್ಲಿ ಯಾಕೆ ಕೆಲಸಕ್ಕೆ ಸೇರಿಲ್ಲ? ಒಳ್ಳೆ ಸಂಭಳ ಸಿಗುತ್ತಿತ್ತಲ್ಲವೇ? ನಿಮ್ಮ ಓಡಾಟಕ್ಕೆಲ್ಲಾ ನಿಮ್ಮ ಕಂಪನಿಯೇ ಕೊಡುತ್ತದೇಯೇ? ಇಂಥಹ ಒಂದೇ ಒಂದು ಪ್ರಶ್ನೆ ಬಾರದೇ, ಅದರ ಬಗ್ಗೆ ಕುತೂಹಲವನ್ನು ತೋರದೇ, ಪರಿಸರ ಅನ್ನೋದು ದೇವರ ಇನ್ನೊಂದು ರೂಪವೆಂದರು. ನನಗೆ ಇವರು ಹೇಳುತ್ತಿರುವುದೇನೆಂಬುದು ಅರ್ಥವಾಗಲಿಲ್ಲ. ದೇವರೆಂದರೇ, ಇವರು ವಾರಕ್ಕೊಮ್ಮೆ ಸ್ನಾನ ಮಾಡಿ ಹಣೆಗೆ ವಿಭೂತಿ ಬಳಿದುಕೊಂಡು ಮಾಡುವ ದೇವರ? ಹರಕೆ ಕಟ್ಟಿ ಹಂದಿ ಕೊಡುವ ದೇವರ ಇದ್ಯಾರು? ಆದರೂ ಅವರ ಮಾತುಗಳು ನನಗೆ ಏನೋ ಒಂದು ಬಗೆಯ ಒಗಟಾಗಿ ಕಾಣತೊಡಗಿತು. ತಾತ ದೇವರು ಅಂದರೇ, ಹೇಗೆ ಎಂದೆ? ದೇವರೆಂದರೇ ಹೇಗೆಂದರೇ ನಾನು ಏನು ಹೇಳಲಿ ಮಗಾ? ನಾನು ನೀನು ಇಬ್ಬರೂ ಮನುಷ್ಯರೇ ಅಲ್ಲವಾ? ನಾನು ನಿನಗಿಂತ ಮುಂಚಿತವಾಗಿ ಹುಟ್ಟಿದ್ದೇನೆ ಹೊರತು ಜಗತ್ತನ್ನೆಲ್ಲಾ ಅರೆದು ಕುಡಿದಿದ್ದೇನಾ? ಈ ಒಂದು ಮಾತು ಅವರ ಬಗೆಗೆ ನನ್ನೊಳಗೆ ಒಂದು ಅತ್ತ್ಯುನ್ನತ ಗೌರವ ಸ್ಥಾನವನ್ನು ಅಲಂಕರಿಸಿತು.


ಏನನ್ನೋ ನೆನೆದವರಂತೆ ಸ್ವಲ್ಪ ಸಮಯ ಸುಮ್ಮನಿದ್ದು, ಮತ್ತೆ ಮುಂದುವರೆಸಿದರು. ಪರಿಸರ, ನಿಸರ್ಗ, ನೆಲ,ಜಲ, ಕಾಡು, ಮರ ಗಿಡ ಇವೆಲ್ಲಾವೂ ಕೆಲವೊಮ್ಮೆ ದೇವರುಗಳಾಗಿ ನಮ್ಮನ್ನು ಕಾಪಾಡುತ್ತವೆ, ಕೆಲವೊಮ್ಮೆ ಅವುಗಳು ನಮ್ಮ ರಕ್ಕಸರಂತೆ ನಮ್ಮನ್ನು ದಹಿಸುತ್ತವೆ. ಅದು, ಬರಗಾಲವಾಗಿರಬಹುದು, ಪ್ರವಾಹವಾಗಿರಬಹುದು, ಅದರ ಜೊತೆ ಹೊಡೆದಾಡಲೂ ಬಂದೀತೆ? ಹಾಗೆಂದವರೇ, ಒಮ್ಮೆ ಕಣ್ಣು ಮುಚ್ಚಿ ಮೈಮರೆತವರಂತೆ ಕಾಣುತ್ತಾರೆ. ಇದೇನು ಭಾವಪರಾವಶತೆ? ಆಶ್ಚರ್ಯವಾಯಿತು, ದುಗುಡವೂ ಆಯಿತು. ಕಣ್ಣಲ್ಲಿ ನೀರಿದೆ, ಯಾವುದೋ ಗಾಢ ಧ್ಯಾನದಿಂದ ಎದ್ದವರಂತೆ, ಇಲ್ಲ ಯಾರೋ ಅವರ ಮನಸ್ಸನ್ನು ಕಲಕಿದಂತೆನಿಸಿತು. ನನ್ನಿಂದ ಏನಾದರೂ ತಪ್ಪಾಯಿತಾ? ಅಥವಾ ಯಾರದರೂ ಬಂದರಾ? ಸುತ್ತಲೂ ನೋಡಿದೆ, ಬೀದಿಯಲ್ಲಿ ಎದುರು ಮನೆಯವರ ಮಗುವೊಂದು ಮಣ್ಣಿನಲ್ಲಿ ಆಡುತ್ತಿತ್ತು. ಅದರ ವೇಷ ಭೂಷಣದಿಂದಲೇ ಭಾರತದ ಚಿತ್ರಣವನ್ನು ಅರಿಯಬಹುದಿತ್ತು. ಗಂಗಾ ನದಿಯಂತೆ ಹರಿಯುತ್ತಿರುವ ಅವನ ಮೂಗಿನನಿಂದ ಸುರಿದ ಸಿಂಬಳದ ಕುರುಹು ಕೆನ್ನೆಯ ಮೇಲೆಲ್ಲ ಇತ್ತು. ಯಾರೂ ಹೊಡೆದದ್ದಕ್ಕೋ ಅಥವಾ ಅವನಿಂದ ಯಾರು ಏನನ್ನು ದೋಚಿದರೋ, ಕಣ್ಣಿನಿಂದ ಹರಿದ ಬ್ರಹ್ಮಪುತ್ರನ ಗುರುತು ಕೆನ್ನೆಯ ಮೇಲೆಲ್ಲ ಹರಿದಾಡಿತ್ತು.ಕೆನ್ನೆಯ ಮೇಲೆ ಎಂದು ನಿಮಗೆ ಹೇಳಿದೆ, ಅಲ್ಲಿ ಕೆನ್ನೆಯೊಂದಿತ್ತು ಎನಿಸಲಿಲ್ಲ ನನಗೆ. ಕೆನ್ನೆಯಂತಿದ್ದ ಜಾಗವಿತ್ತು.ಅದು ದೇಶ ಕಂಡ ಬಡತನವೆಲ್ಲಾ ಮುದ್ದಾಗಿ ಸೊಂಪಾಗಿ ಬೆಳೆಯಬೇಕಿದ್ದ ಎಳೆ ಕಂದಮ್ಮನಲ್ಲಿದ್ದಂತಿತ್ತು. ಮೈ ಮೇಲೆ ಗಾಂಧಿವಾದಿಯಂತೆ ಅಲ್ಲದಿದ್ದರೂ ಬಟ್ಟೆಯನ್ನು ತ್ಯಜಿಸಲು ಸಿದ್ದನಿದ್ದೇನೆ, ಎನ್ನುವಂತೆ ಮೇಲಂಗಿ ಮಾತ್ರವಿತ್ತು. ಚಡ್ಡಿಯೆಂಬುದನ್ನು ಹಾಕಿದ ನೆನಪು ಅವನಿಗೆ ಇದ್ದಂತೆ ಕಾಣಲಿಲ್ಲ. ಸ್ನಾನವೆಂಬುದನ್ನು ತೊರೆದಿದ್ದ ಮಗುವೋ? ಅಥವ ಅದನ್ನು ಹೆತ್ತವರು ಅವನನ್ನು ಮಡಿಗುಡಿಯೆಲ್ಲಾ ವೈದಿಕ ಧರ್ಮದ ಪಾಲಿಸುವವರಿಗೆ ಮಾತ್ರ, ನಮಗೆ ಅವುಗಳೆಲ್ಲಾ ಬೇಡವೆನ್ನುವಂತೆ, ಮಗುವಿನ ಕಾಲುಗಳು ಮಣ್ಣಿಗೆ ಸವಾಲೆಸಿಯುವ ಬಣ್ಣಕ್ಕೆ ತಿರುಗಿದ್ದವು. ಇದು ಈ ಒಂದು ಮಗುವಿನ ಪರಿಸ್ಥಿತಿಯಲ್ಲ. ಕರ್ನಾಟಕದ ಬಹುತೇಕ ಹಳ್ಳಿಗಳ ಮಕ್ಕಳ ಸನ್ನಿವೇಶಗಳು ಹೀಗೆ ಇರುತ್ತಿದ್ದವು. ಆಂಧ್ರ, ತಮಿಳುನಾಡಿನಲ್ಲಿಯೂ ಇದು ಸಾಮಾನ್ಯ ಸಂಗತಿ. ಆದರೇ, ಕೇರ‍ಳದಲ್ಲಿ ಇಂಥಹ ದೃಶ್ಯಗಳು ಅಪರೂಪವಾಗುತ್ತವೆ.


ಮಕ್ಕಳೆಂದರೇ, ಬರೀ ಸಮವಸ್ತ್ರ ಧರಿಸಿ ಶಾಲೆಗೆ ಹೋಗುತ್ತಿರುವ, ಅಮ್ಮನ ಎದೆಹಾಲು ಕುಡಿಯುತ್ತಿರುವ, ಮಕ್ಕಳೆಲ್ಲರೂ ಒಟ್ಟಿಗೆ ಸೇರಿ ಆನಂದಿಸುತ್ತಿರುವ ದೃಶ್ಯವನ್ನೇ ಸದಾ ನೋಡುವ ಪಟ್ಟಣಿಗರಿಗೆ ಇಂಥವುಗಳು ಕಾಣಿಸುವುದಿಲ್ಲ. ನಾನು ನನ್ನ ಜೊತೆಗಾರ ಸಿಂಬ್ಬಂದಿಯವರೊಂದಿಗೆ ಹಳ್ಳಿಗಳಿಗೆ ಹೋದಾಗ ಅವರೆಲ್ಲರೂ ವ್ಯಥೆಪಟ್ಟು ಅಯ್ಯೋ ಪಾಪವೆಂದು, ಮರುಗಿ ಮಗುವಿನ ಫೋಟೋ ತೆಗೆದುಕೊಳ್ಳುವಾಗ ನಾನು ನನ್ನ ಪಾಡಿಗೆ ಇರುತ್ತಿದ್ದೆ. ಅದನ್ನು ಕಂಡ ಕೆಲವರು ಹರೀಶ್ ನಿಮಗೆ ಏನೂ ಅನ್ನಿಸುವುದಿಲ್ಲವಾ ಎನ್ನುತ್ತಿದ್ದರು.ಅದು ಸರಿಯೇ, ಅನ್ನಿಸಿದರೇ ಏನು ಮಾಡಲಿ ನನ್ನಿಂದ ಏನು ಸಾಧ್ಯವಾಗುತ್ತದೆ? ಮರುಗಬಹುದು, ಕೊರಗಬಹುದು ಅದನ್ನು ಬಿಟ್ಟರೇ? ಮರುಕ್ಷಣವೇ ಎನಿಸುತ್ತಿತ್ತು, ಏನಾದರೂ ಮಾಡಲೇಬೇಕೆಂದು.ಅದರ ಪ್ರತಿಕ್ರಿಯೆಯೇ ಸಿಇಇಕೊ ಆರಂಭಿಸಿದ್ದು.ಆದರೂ ನಾನು ಬೆಳೆದದ್ದು ಹಳ್ಳಿಯಲ್ಲಿ, ನನ್ನ ಬಾಲ್ಯದ ನೆನಪುಗಳು ಚೆನ್ನಾಗಿ ನೆನಪಿವೆ. ನನ್ನ ಜೊತೆಗಾರರೂ ಕೆಲವರು ಹೀಗೆ ಇರುತಿದ್ದರು. ಅವರಲ್ಲಿ ಬಡತನವಿರಲಿಲ್ಲ, ಆದರೇ,ಅದೇನೋ ಒಂದು ಬಗೆಯ ತಾತ್ಸಾರ, ಜೀವನದ ಬಗ್ಗೆಯ ನಿರ್ಲಕ್ಷತನ ತುಂಬಿ ತುಳುಕಾಡುತಿತ್ತು. ಅದಕ್ಕೆ ಕಾರಣ ಹುಡುಕುವ ಸ್ಥಿತಿ ನನ್ನದಲ್ಲ, ಅದನ್ನು ನಾನು ಬೇರೆಯಾಗಿಯೂ ನೋಡಿರಲಿಲ್ಲ. ನಮ್ಮ ಮನೆಯಲ್ಲಿನ ಶಿಕ್ಷಣ ಮತ್ತು ಜೀವನ ಶೈಲಿ ಮಿಕ್ಕ ಸ್ನೇಹಿತರ ಮನೆಗಿಂತ ಭಿನ್ನವಾಗಿತ್ತು. ಅದಕ್ಕೆ ಕಾರಣ ಅಪ್ಪ ವಿದ್ಯಾವಂತೆರೆಂದರೇ ತಪ್ಪಿಲ್ಲ. ನಾನು ಮಣ್ಣಿಗೆ ಆಡಲು ಹೋಗುವುದು ಬಂದು ಅಪ್ಪ ಅಮ್ಮ ಇಬ್ಬರ ಕೈಯಿಂದಲೂ ಗೂಸಾ ತಿನ್ನುವುದು ನನ್ನ ದಿನಚರಿಯಾಗಿತ್ತು. ಆದರೇ, ನಾನು ಕೈ ಕಾಲು ತೊಳೆಯದೇ ಮನೆ ಒಳಕ್ಕೆ ಕಾಲಿಡುವುದು ಅಸಾಧ್ಯವಾಗಿತ್ತು, ಒಂದು ಅಮ್ಮ ಹೊಡೆಯುತ್ತಾಳೆಂಬ ಭಯ ಮತ್ತೊಂದು ಅಮ್ಮ ಮನೆಯನ್ನು ಇಡುತ್ತಿದ್ದ ರೀತಿ. ನಮ್ಮೂರಿನಲ್ಲಿ ನಾನು ಕಂಡಿದ್ದ ಕೇಲವೇ ಕೆಲವು ಮನೆಗಳು ಬಹಳ ಚೊಕ್ಕಟವಾಗಿದ್ದವು. ಅವುಗಳಲ್ಲಿ ನಮ್ಮ ಮನೆಯೂ ಒಂದು. ಆದರೇ, ಕೊಳಕಾಗಿ ಬೆಳೆಯಲು ಆಶಿಸಿಸದವನು ನಾನೆಂದರೂ ಸರಿಯೇ. ಇಡೀ ಊರಿನ ಹುಡುಗರೆಲ್ಲರೂ ಮಣ್ಣಿನಲ್ಲಿ ಆಡಿ, ನದಿ ದಂಡೆಯಲ್ಲಿ ಕುಣಿದು, ಕುಪ್ಪಳಿಸಿ, ಮರಕೋತಿ ಆಡಲೂ ಹೋಗಿ ಕೈ ಮುರಿದುಕೊಂಡು ಮನೆಯಲ್ಲಿ ಪರಿಕ್ಷೆ, ಶಾಲೆಯೆಂಬ ಕೊರಗಿಲ್ಲದಿರುವಾಗ ನಾನು ಮಾತ್ರ ಮನೆಯಲ್ಲಿ ಕುಳಿತಿರುವುದು ಸಾಧ್ಯವಾಗಲಿಲ್ಲ.


ನಾನು ನನ್ನ ನೆನಪಿನ ಪುಟಗಳಿಂದ ಹೊರಬರುವುದನ್ನೇ ಕಾಯುತಿದ್ದ ಗೌಡ್ರು ಕೇಳಿದರೂ, "ಏನು ಕನಸಾ, ಹಳೆಯ ನೆನಪುಗಳಾ?". "ಇಲ್ಲ ತಾತ, ಆ ಮಗುವನ್ನು ನೋಡಿದೆ ಅಲ್ವಾ ಹಾಗೆ ನನ್ನ ಬಾಲ್ಯ ನೆನಪಾಯಿತು" ಎಂದೆ. "ಹೌದು ಮಗಾ, ನಮ್ಮ ಮನಸ್ಸು ವಿಚಿತ್ರ ಅನ್ಸುತ್ತೇ ಅಲ್ವಾ?" ಉತ್ತರ ಹೇಳುವ ತಾಕತ್ತು ನನಗಿದೆಯಾ? ವಿಚಿತ್ರವೆನ್ನಿಸುವುದು ಸತ್ಯ, ಆದರೇ ಅದಕ್ಕೆ ಕಾರಣ? "ಹೌದು ತಾತ" ಎಂದೆ. ತಾತ ಮುಂದುವರೆಸಿದರು, "ಮಗಾ, ನನಗೀಗ ನೂರು ದಾಟಿರಬಹುದು. ಬಿಳಿಯ ದೊರೆಗಳ ಕಾಲವನ್ನು ಕಂಡಿದ್ದೇನೆ, ರಾಜರನ್ನು ಕಂಡಿದ್ದೇನೆ, ರಾಜರೇ ನಾವೆಂದು ಬೀಗುತ್ತಿರುವ ಹೊಲಸು ರಾಜಕಾರಣಿಗಳನ್ನು ಕಂಡಿದ್ದೇನೆ. ಆದರೂ, ನನಗೆ ನಾನೇನೆಂಬುದು ಅರ್ಥವಾಗದೇ ಉಳಿದಿದೆ. ನನ್ನ ಬಳಿಗೆ ಕುಳಿತು ಮಾತನಾಡಲು ಹಿಂಜರಿಯುತಿದ್ದ ಕಾಲವೊಂದಿತ್ತು. ಅಂದು ನಾನು ಬಹಳ ಬುದ್ದಿವಂತನೆನಿಸಿಕೊಂಡಿದ್ದೆ ಅನ್ನುವುದಕ್ಕಿಂತ ನಾನು ಯಾರಿಗೂ ಎಂದಿಗೂ ತಲೆಬಾಗಿದವನಲ್ಲ. ಯಾರನ್ನು ನನಗೆ ತಲೆಬಾಗಿ ಎಂದು ಕೇಳಿದವನಲ್ಲ. ಆದ್ದರಿಂದ ಈ ಹುಚ್ಚನ ಸಹವಾಸವೇ ಬೇಡವೆನ್ನುತ್ತಿದ್ದರು. ನಾನು ಹಾಗೆಯೇ ಬದುಕಿದವನು. ಈಗಲೂ ಅಷ್ಟೇ ನನ್ನೊಂದಿಗೆ ಮಾತನಾಡಲು ಅಂಜುತ್ತಾರೆ ನನ್ನ ಮಾತುಗಳು ಅರ್ಥವಾಗುವುದಿಲ್ಲವೆನ್ನುತ್ತಾರೆ. ಕೆಲವರು ತಲೆ ತಿನ್ನುವ ಮುದುಕನೆನ್ನುತ್ತಾರೆ. ಮತ್ತೆ ಕೆಲವರು ಅವನಿಗೆ ದೈವಕೃಪೆಯಿದೆ, ಯಾವುದೋ ಕಾಣದ ಶಕ್ತಿಯೊಂದಿಗೆ ಮಾತನಾಡುತ್ತಾನೆಂಬುದನ್ನು ನಂಬಿದ್ದಾರೆ.............................................................................................................................. ಮುಂದಿನ ಸಂಚಿಕೆಗೆ,

No comments:

Post a Comment