ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

08 July 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!


ಏನಪ್ಪಾ ಇತ್ತೀಚೆಗೆ ನಮ್ಮನ್ನ ಮರೆತೆ ಬಿಟ್ಟೆ, ಇಷ್ಟೆ ಅಲ್ವಾ ಜನ ತೀಟೆ ತೀರಿದ ಮೇಲೆ ಅವಳ ಸಂಘಯಾಕೆ? ಈ ಮಾತನ್ನು ನನಗೆ ಕಳೆದ ಒಂದು ವಾರದಲ್ಲಿ ಕಡಿಮೆಯೆಂದರೂ, ದಿನಕ್ಕೊಬ್ಬರಂತೆ ಕೇಳಿದ್ದಾರೆ. ನನ್ನ ಬಗ್ಗೆ ನನಗೆ ಸ್ವಲ್ಪ ಅನುಮಾನ ನಾನ್ ಯಾವಾಗ ಇವರ ಜೊತೆ ತೀಟೆ ತೀರಿಸಿಕೊಳ್ಳುವ ಆಟಕ್ಕೆ ಹೋಗಿದ್ದೆ ಅಂತಾ! ಅದರ ಜೊತೆಗೆ ಭಯ ಬೇರೆ ನಾಳೆ ದಿನ ನಾನು ಮದುವೆಯಾದ ಮೇಲೂ ಹೀಗೆ ಹೇಳಿದರೆ ಗತಿ ಏನು ಅಂತಾ? ಅದು ಅಲ್ಲದೇ ಈಗ ಸಲಿಂಗ ಕಾಮಿಗಳಿಗೆ ಬೇರೆ ಪೂರ್ತಿ ಹಕ್ಕು ಸಿಕ್ಕಿದೆ. ಗಂಡಸರ ಎಸ್.ಎಂ.ಎಸ್ ಬಂದರೂ ಕಷ್ಟ ತುಂಬಾ ಸರಳವಾಗಿ ನೀವೂ ಹಾಗೇನಾ? ಎಂದು ಬಿಡುತ್ತಾರೆ. ಹೋಗಲಿ ಬಿಡಿ ಆ ಬಗೆಯ ಆಸೆಗಳೆನೂ ನನಗಿಲ್ಲ. ಮೊದಲೇ ಹೇಳಿದಂತೆ ಇತ್ತೀಚೆಗೆ ಕನ್ನಡ ಸಾಹಿತ್ಯ ಓದುವುದು ಹೆಚ್ಚಾಗಿದ್ದರಿಂದಲೋ ಏನೋ, ನನ್ನ ಸಂಶೋಧನೆಯ ಬಗ್ಗೆ ಬರೆಯೋಣವೆಂದರೂ ಕನ್ನಡದ ಬಗ್ಗೆ, ಇಲ್ಲವೇ, ಕನ್ನಡದಲ್ಲಿ ಬರೆಯತೊಡಗುತ್ತಿದ್ದೇನೆ. ಅದೇನೂ ಮಹಾ ಅಂತ ಅನ್ನಬೇಡಿ, ಕನ್ನಡ ಅನ್ನೊದು, ಅಥವಾ ಮಾತೃಭಾಷೆ ಅನ್ನೋದು ಒಂದು ಬಗೆಯ ಕಾಡುಜೇನಿನ ಹಾಗೆ, ಅದನ್ನು ಸವಿದರೇ ಗೊತ್ತು, ಎಷ್ಟು ತಿಂದರೂ ಹೊಟ್ಟೆ ತುಂಬುವುದಿಲ್ಲ, ಹಾಗೆಯೇ ಕನ್ನಡದ ವಿಷಯದಲ್ಲಿಯೂ ಅಷ್ಟೆ ಆ ಪದಗಳು ಆ ಸರಳತೆ, ಇವೆಲ್ಲಾ ಅದೆಷ್ಟೂ ಮುದನೀಡುತ್ತವೆನಿಸುತ್ತದೆ. ನನ್ನ ಜೀವನದಲ್ಲಿ ನಡೆದ ಒಂದು ಊರಿನ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆತ್ನಿಸುತ್ತಿದ್ದೇನೆ. ನನಗೆ ನೇರ ಹೇಳುವುದನ್ನು ಬಿಟ್ಟರೇ ಈ ಕಥೆ ಹೇಳುವುದು ಸರಿಹೊಂದುವುದಿಲ್ಲ, ಆದರೂ ಹೇಳಲೇಬೇಕೆಂಬ ಹಟ ನನ್ನದು ಓದುವುದಿಲ್ಲವೆಂದು ಪಣತೊಟ್ಟರೇ ನಾನು ನಿಮ್ಮ ಶತ್ರುವಾಗಲಾರೆ.


ಅದೊಂದು ಪುಟ್ಟ ಹಳ್ಳಿ, ಇದೇನು ಯಾರು ಕಥೆ ಬರೆಯೋಕೆ ಶುರು ಮಾಡಿದರೂ ಬರೀ ಪುಟ್ಟ ಹಳ್ಳಿಯ ಬಗ್ಗೆಯೇ ಹೇಳುತ್ತಾರಲ್ಲವೆಂದುಕೊಳ್ಳಬೇಡಿ. ನನ್ನಂತ ಸಣ್ಣ ಮನುಷ್ಯ ಚಿಕ್ಕ ಊರಿನ ಬಗ್ಗೆ ಸಣ್ಣ ಕಥೆಗಳನ್ನು ಮೀರಿ ಇನ್ನೇನು ಬರೆಯಲಾದೀತು. ಅದೇನೆ ಇರಲಿ, ಆ ಊರಿನ ಹೆಸರೇ ನಿಮ್ಮನ್ನು ಆಕರ್ಷಿಸುವಂತಿದೆ, ಅದು ನಿಮ್ಮನ್ನು ಆಕರ್ಷಿಸದಿದ್ದರೂ ನನ್ನನ್ನು ತುಂಬಾ ಗಾಢ ಚಿಂತನೆಯಲ್ಲಿ ಮುಳುಗಿಸಿತ್ತು. ಆ ಊರಿನ ಹೆಸರು ಕಂಬಳಿ, ಆ ಊರಿನ ಹೆಸರು ಕೇಳಿದ ತಕ್ಷಣ ನನಗೆ ನೆನಪಾದ ಒಂದು ಚುಟುಕು ಹೇಳುತ್ತೇನೆ. ಪ್ರಿಯತಮೆ ಹೇಳಿದಳು ಪ್ರಿಯತಮನಿಗೆ,
ಪ್ರಿಯ ಈ ಊರಿನಲ್ಲಿ ಬಹಳ ಚಳಿ ಚಳಿ,
ಚೆನ್ನಾಗಿರುತ್ತಿತ್ತು ಇದ್ದಿದ್ದರೆ ಒಂದು ಕಂಬಳಿ,
ಅದಕ್ಕವನೆಂದ,
ಅದಕ್ಕೇನು ಪ್ರಿಯ ನಿನ್ನ ಚಳಿ ಹೋಗಲಾಡಿಸುವೆ ಇಲ್ಲದಿದ್ದರೂ ಕಂಬಳಿ,
ನೀನೊಮ್ಮೆ come ಬಳಿ.
ಎಂದನಂತೆ,


ಅದು ಸರಿಯೇ, ಮೈ ಶಾಖ ಹೆಚ್ಚಿಸಲು ಕಂಬಳಿ ಏನು ಬೇಕಿಲ್ಲವಲ್ಲ. ಈ ಊರಿಗೆ ಕಂಬಳಿ ಹೆಸರು ಬಂದಿದ್ದು ಹೇಗೆ ಎಂದು ಎಲ್ಲರನ್ನೂ ಕೇಳಿದೆ, ಇಲ್ಲಿ ಕಂಬಳಿ ಮಾಡುವವರಿದ್ದರೆಂಬುದು ನನ್ನ ನಂಬಿಕೆಯಾಗಿತ್ತು, ಇಲ್ಲ ಇಲ್ಲಿ ಅಂಥವುದ್ಯಾವುದೂ ಇರಲಿಲ್ಲ. ಆ ಊರಿನ ಮೂರು ಕಡೆಯಿಂದಲೂ ಬೆಟ್ಟದ ತಪ್ಪಲಿನಿಂದ ಆವರಿಸಿದ್ದು, ಅಲ್ಲಿ ಮಂಜು ಕಂಬಳಿಯಂತೆ ಕವಿಯುತಿತ್ತು ಮತ್ತು ಕಾಡು ಕಂಬಳಿಯಂತಿತ್ತು ಎಂಬುದು ಅವರ ವಿವರಣೆ. ಆದರೇ, ನಾನು ಹೋದಾಗ ಆ ಊರಿನಲ್ಲಿ ಕಾಡಿತ್ತೆಂಬುದರ ಕುರುಹು ಉಳಿದಿರಲಿಲ್ಲ. ಬರೀ ಬೋಳಾದ ಗುಡ್ಡಗಳಿದ್ದವು. ಆದರೂ ಏನೋ ಒಂದು ಬಗೆಯ ಆಕರ್ಷಣೆ ಅಲ್ಲಿತ್ತು. ಹೋದ ಊರಿನ ಚರಿತ್ರೆ ಹಿಡಿದು ಆ ಊರಿನ ಬಗ್ಗೆ ಆದಷ್ಟೂ ವಿಷಯಗಳನ್ನು ಸಂಗ್ರಹಿಸುವುದು ನನ್ನ ಚಟಗಳಲ್ಲಿ ಒಂದು. ಬಂದಿದ್ದು ಬಂದಾಗಿದ್ದೆ, ಊರನ್ನು ಸಂಪೂರ್ಣ ಸುತ್ತಾಡೋಣವೆಂದು ನನ್ನ ನೆಂಟರನ್ನು ಕೇಳಿದೆ. ಈ ಊರಿನಲ್ಲೇನಿದೆ, ಸುತ್ತಾ ಗುಡ್ಡಗಳು, ಆ ನದಿ ಬಿಟ್ಟರೇ ಎಂದರು. ಸರಿಯೆಂದು, ಊರಿನ ಅಂಗಡಿಯ ಬಳಿಗೆ ಹೋದವನು, ಸಿಗರೇಟು ಕೊಂಡು ಹೊರಟೆ.


ಹಳ್ಳಿಗಳಲ್ಲಿ, ನನಗೆ ಖುಷಿಯಾಗುವ ವಿಷಯವೆಂದರೇ, ಅಲ್ಲಿ ಅಪರಿಚಿತರೆನಿಸಿದವರ ಸಂಪೂರ್ಣ ವಿವರಣೆ ಪಡೆಯುವುದು. ನಾನು ಅಂಗಡಿಯ ಬಳಿಗೆ ಹೋದಾಗ, ನಾನು ಕೇಳಿದ ಸಿಗರೇಟ್ ಇರಲಿಲ್ಲ, ಯಾವೂರೋ ತಮ್ಮದು? ನಾನು ಹಿಂತಿರುಗಿ ನೋಡಿದೇ ಆಕಾಶವಾಣಿಯಲ್ಲ ಇದು, ಅಲ್ಲಿಯೇ ಇದ್ದ ಒಂದು ಮಧ್ಯಮ ವಯಸ್ಕನ ದ್ವನಿ. ನನ್ನೂರು ಬಾನುಗೊಂದಿ ಎಂದೆ, ಹಳ್ಳಿಗರ ಜಾಣ್ಮೆ ಮೆಚ್ಚಲೇ ಬೇಕು. ಊರಿನ ಹೆಸರು ಕೇಳಿದ ತಕ್ಷಣವೇ, ಹೋ ನೀವು ದೊಡ್ಡೇಗೌಡರ ಮನಗೆ ಬಂದಿರೋದಾ? ಏನ್ ಆಗ್ಬೇಕು ಅವರು ನಿಮಗೆ ಅದು ಇದು ಅಂತಾ ಶುರು ಆಗಿ ಕಡೆಗೆ, ನಮ್ಮಪ್ಪ, ಅಮ್ಮ ಅಜ್ಜ ಅಜ್ಜಿಯ ಬಗ್ಗೆ ಮಾತು ಮುಂದುವರೆಸುವ ಸಾಹಸ ಮಾಡಿದರು. ನಾನು ಈ ಪುಣ್ಯಾತ್ಮನ ಕೈಯ್ಯಿಗೆ ಸಿಕ್ಕರೆ ಎಲ್ಲರ ತಲೆಯನ್ನು ಕೆಡಿಸುವ ನನ್ನ ತಲೆಗೆ ಹುಳು ಸೇರುತ್ತದೆಂದು ಹೊರಟೆ.
ಆ ಊರಿನ ಗುಡ್ಡ ಹತ್ತಿ ನೋಡಿದಾಗಲೇ ಅಲ್ಲಿನ ವಿಸ್ಮಯ ನನಗೆ ಅರಿವಾಗಿದ್ದು, ಅದೊಂದು ಸುಂದರ ತಾಣ. ನಿಜಕ್ಕೂ ಆ ಬೆಟ್ಟದ ಮೇಲೆ ನಿಂತು ನೋಡಿದರೇ, ಹರಿಯುವ ನದಿ, ಅಲ್ಲಿನ ಮರಗಳ ತೋಪು, ಮನಮೋಹಕವಾಗಿತ್ತು. ಅಲ್ಲಿ ಹಿಂದೆ ಗಂಧದ ಮರಗಳಿದ್ದವೆಂಬುದಕ್ಕೇ ಸಾಕ್ಷಿಯಾಗಿ ಅದನ್ನು ಕಡಿದ ಜಾಗದಲ್ಲಿ ಮತ್ತೆ ಮೊಳೆತ ಗಿಡಗಳಿದ್ದವು. ಊರು ಬದಲಾಗಿದ್ದು ಕೇಲವೇ ವರ್ಷಗಳಲ್ಲಿ, ಅಂದರೇ, ಎಂಬತ್ತೈದರಿಂದ ಸುಮಾರು ತೊಂಬತ್ತೈದರ ವರೆಗೆ ಕೇವಲ ಹತ್ತು ವರ್ಷಗಳಲ್ಲಿ, ನಿಸರ್ಗದ ಮಡಿಲಾಗಿದ್ದ ಕಂಬಳಿ, ಮಂಜಿನಿಂದ ತಂಪಾಗಿರುತ್ತಿದ್ದ ಕಂಬಳಿ, ಬೇಸಿಗೆಯ ದಳಕ್ಕೆ ಕುಸಿದು, ಕಂಬಳಿ ಹುಳುಗಳ ಗೂಡಾಯಿತು. ಈ ಮಟ್ಟಿಗಿನ ಬದಲಾವಣೆ ಆಗಲೂ ಸಾಧ್ಯವೇ?


ಎಂಬತ್ತರ ಸುಮಾರಿಗೆ ಊರಿನಲ್ಲಿ ಇದ್ದದ್ದು, ೭೦ ಮನೆಗಳು ಈಗ ದುಪ್ಪಟ್ಟಾಗಿವೆ, ೧೪೦ ಮನೆಗಳಿವೆ. ಮೊದಲು ಒಂದು ಭಾಗದಲ್ಲಿ ನದಿ ಹರಿಯುತ್ತಿದ್ದು, ಆ ನದಿ ನೀರನ್ನು ಏತಗಳ ಮೂಲಕ ನೀರಾವರಿಗೆ ಬಳಸುತಿದ್ದರು. ಏತ ನೀರಾವರಿಯೆಂದರೇ ಕೆಲವರಿಗೆ ತಿಳಿದಿರುವುದಿಲ್ಲ. ಭಾವಿಯಿಂದ ನೀರೆತ್ತುವ ಸಾಧನ. ಕೆಲವೊಮ್ಮೆ ಎತ್ತುಗಳನ್ನು ಕಟ್ಟಿ, ಅನೂಕೂಲತೆಯಿಲ್ಲದವರು ಮನೆ ಮಂದಿ ಸೇರಿ ನೀರೆತ್ತಲೂ ತೊಡಗುತ್ತಿದ್ದರು. ಇಂಥಹ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆಗಮಿಸಿದ್ದು, ಹಾರಂಗಿ ಜಲಾಶಯದ ನೀರು. ಕಾಲುವೆ ತೋಡಿ, ಇದ್ದ ಹೊಲವನ್ನು ಗದ್ದೆಗಳಾಗಿ ಪರಿವರ್ತಿಸುವ ಕೆಲಸ ರಭಸವಾಗಿ ನಡೆಯಿತು. ಆರಂಭದ ದಿನಗಳಲ್ಲಿ, ಹೊಲ ಭತ್ತ ಬೆಳೆಯುತ್ತಿದ್ದ ರೈತರು ಕ್ರಮೇಣ ತಮ್ಮ ಜಮೀನಿನ್ನಲಿದ್ದ ಮರಗಳನ್ನು ಕಡಿದು ಗದ್ದೆಯಾಗಿಸತೊಡಗಿದರು. ಅವರ ಕಣ್ಣುಗಳಲ್ಲಿ ದುಡ್ಡು ಸಂಪಾದನೆಯ ಕನಸು ಅವರನ್ನು ಮೀರಿ ಬೆಳೆಯತೊಡಗಿತ್ತು. ಮರ ಕಡಿದು ಮಾಡುವುದೇನು, ಮರ ಇದ್ದರೂ ಅದನ್ನು ಕಡಿಸಿ, ಮಂಚ ಕುರ್ಚಿ ಮಾಡಿಸಲು ಹಣ ಕೊಡುವವರಾರು? ಅಲ್ಲಿದ್ದ, ಹೊನ್ನೆ, ಬೀಟೆ, ತೇಗದ ಮರಗಳು, ಹೇಳ ಹೆಸರಿಲ್ಲದಂತೆ, ಬಿಟ್ಟಿಯಾಗಿಯೇ ದೋಚಲಾಯಿತು. ಹೊರಗಿನ ಪ್ರಪಂಚವನ್ನೇ ಕಾಣದ, ಕಂಬಳಿ ಎಂಬ ಊರಿಗೆ ದೂರದ ಊರಿನವರೆಲ್ಲಾ ಬಂದು ಅಲ್ಲಿದ್ದ ಸಂಪತ್ತನ್ನು ದೋಚುವುದರಲ್ಲಿ ಸಿರಿವಂತರಾಗತೊಡಗಿದರು.ಆದರೇ, ಊರಿಗೆ ನೀರು ಬಂದರೇ, ನಾವೆಲ್ಲಾ ರಾತ್ರೋ ರಾತ್ರಿ ಶ್ರೀಮಂತರಾಗುವೆಂಬ ಭ್ರಮೆಯಲ್ಲಿ ಕಂಬಳಿ ಹೊದ್ದು ಮಲಗಿದವರು ಕಂಬಳಿಯ ಜನರು.


ನನಗೆ ಆಶ್ಚರ್ಯವಾದ ವಿಷಯಗಳಲ್ಲಿ ಒಂದನ್ನು ನಾನು ನಿಮಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಅದೆಂದರೇ, ಆ ಊರಿನ ಹಬ್ಬಗಳು, ಮತ್ತು ಆಚರಣೆಗಳು. ಊರಿನ ಇತಿಹಾಸವನ್ನು ಬಣ್ಣಿಸುವಾಗ ಅವರ ಕಣ್ಣುಗಳಲ್ಲಿ ಕಾಣುವ ಸಂತೋಷಕ್ಕೆ ಮಿತಿಯಿಲ್ಲ ಅದರಂತೆಯೇ ಅವರು ಕಳೆದು ಹೋದ ದಿನಗಳಿಗೆ ಚಿಂತಿಸುವುದಿಲ್ಲ ಆದರೇ ಅದರ ನೆನಪು ಅವರನ್ನು ಕಾಡದೇ ಬಿಡುವುದಿಲ್ಲ. ನಮ್ಮ ಕೈಯ್ಯಲ್ಲಿ ಏನೂ ಇಲ್ಲವೆನ್ನುವುದನ್ನು ಅವರು ಒಪ್ಪಿದರೂ, ಇವೆಲ್ಲಾ ನಾವು ಬಯಸಿದ್ದಲ್ಲವೆನ್ನುತ್ತಾರೆ. ಕಾಣದ ದೇವರ ಕಡೆಗೆ ಕೈತೋರಿ ಎಲ್ಲ ಅವನು ಬಯಸಿದಂತೆ ನಡೆಯಿತೆನ್ನುತ್ತಾರೆ. ಮರುಗಳಿಗೆಗೆ, ಇವೆಲ್ಲಾ ನಾವೇ ನಮಗೆ ಮಾಡಿಕೊಂಡ ದ್ರೋಹವೆಂದು ಮರುಗುತ್ತಾರೆ. ಎಲ್ಲವನ್ನೂ ಒಗಟಾಗಿ ಆಡುತ್ತಾರೆನಿಸಿದರೂ ಅವರೊಳಗಿರುವ ನೋವನ್ನು ಹೊರಹಾಕಲು ಪದಗಳು ಸಿಗುತ್ತಿಲ್ಲವೆಂಬುದು ನನಗೆ ಅರ್ಥವಾಯಿತು. ಅಂಥಹ ನೋವುಂಟು ಮಾಡಿದ್ದೇನೆಂದು ನಾನು ಮರುಪ್ರಶ್ನೆ ಹಾಕಲಿಲ್ಲ, ಹಾಕಿದಿದ್ದರೇ ಇಂದು ನೀವು ನನ್ನನ್ನು ನೋಡಲಾಗುತ್ತಿರಲಿಲ್ಲವೆಂಬುದು ನನ್ನ ಅಭಿಪ್ರಾಯ.


ಹಿಂದಿನ ಜೀವನ ಇಂದಿನಷ್ಟು ದುಸ್ತರವಾಗಿರಲಿಲ್ಲ, ಊರಿಗೆ ಬಸ್ಸು, ಕಾರು ಇರಲಿಲ್ಲ, ಅದಕ್ಕೂ ಮಿಗಿಲಾಗಿ, ರಸ್ತೆಯೆಂಬುದೇ ಇರಲಿಲ್ಲ, ಕಾಡು ರಸ್ತೆಯೇ ಅವರಿಗೆ ಆಧಾರ. ಎತ್ತಿನ ಗಾಡಿಯ ಓಡಾಟ ಸಾಮಾನ್ಯವಾಗಿದ್ದರೂ, ಬಹಳ ಮಂದಿ ಬರಿಗಾಲಲ್ಲಿ ನಡೆದು ಹೋಗುತ್ತಿದ್ದರು. ಒಕ್ಕಲಿಗರೇ ಹೆಚ್ಚಿದ್ದ ಊರಿನಲ್ಲಿ, ಹರಿಜನರ ಕಾಲೋನಿ ಊರಿನಿಂದ ಹೊರಕ್ಕಿದ್ದದ್ದು ಬಿಟ್ಟರೇ ಮಿಕ್ಕ, ಮಡಿವಾಳರು, ನಾಯಕರು, ಆಚಾರರು, ಊರಿನ ಮಧ್ಯೆಯೇ ಇದ್ದರು. ಜಾತಿ ವ್ಯವಸ್ತೆಯೆಂಬುದು ಅವರೊಂದಿಗೆ ಬೆಳೆದು ಬಂದ ಒಂದು ಪದ್ದತಿಯಾಗಿತ್ತೆ ಹೊರತು ಅದನ್ನು ಬೆಳೆಸಿಕೊಂಡು ಹೋಗುವುದೇ ಅವರ ಗುರಿಯಾಗಿರಲಿಲ್ಲ.ಷಷ್ಠಿ ಶುರುವಾದರೇ ಮುಗಿಯಿತು, ಊರಿನ ಗಂಡಸರು ದನಗಳ ಜಾತ್ರೆಯ ನೆಪದಲ್ಲಿ, ಮೊದಲ ತಿಂಗಳು ರಾಮನಾಥಪುರ ನಂತರ, ಚುಂಚನಕಟ್ಟೆ, ಅನಂತರ ಹಾಸನದ ಜಾತ್ರೆ ಮುಗಿಸಿಯೇ ಮನೆ ಸೇರುತ್ತಿದ್ದದ್ದು. ಅದರಿಂದ ಅವರೇನೂ ಸಾವಿರಾರು ರೂಪಾಯಿ ಲಾಭ ಗಳಿಸುತ್ತಿರಲಿಲ್ಲ. ಆದರೂ, ಅದೊಂದು ಮೋಜೆನಿಸಿತ್ತು. ಅಲ್ಲಿಂದ ಬರುವ ವೇಳೆಗೆ ಮನೆಯಲ್ಲಿ ಬೆಳೆದ ಮಕ್ಕಳು, ಸುಗ್ಗಿಯ ಸ್ವಾಗತಕ್ಕಿರುತ್ತಿದ್ದರು. ಬಂದವರೇ, ಕಾಲಿಗೆ ಗೆಜ್ಜೆ ಕಟ್ಟಿ, ಕೋಲಾಟವಾಡುತ್ತಿದ್ದರು. ಊರಿನ ಮಧ್ಯಭಾಗದಲ್ಲಿ, ಅರಳಿಮರವಿತ್ತು, ಅದಕ್ಕೆ ಕಟ್ಟೇಯೇನೂ ಇರಲಿಲ್ಲ. ಆದರೂ ಮಾಗಿ ಚಳಿ ಮುಗಿದ ಮೇಲೆ, ಭರಣಿ ಮಳೆ ಬೀಳುವ ತನಕವೂ ಊರಿನ ಜನರೆಲ್ಲಾ ಅಲ್ಲೇಯೇ ಮಲಗುತ್ತಿದ್ದರು. ಅಂದರೇ, ದಂಪತಿಗಳ ನಡುವಿನ ರಾತ್ರಿ ಕಾರ್ಯಚಟುವಟಿಕೆಗಳು? ಇಂಥಹ ಮರುಳು ಮರುಳು ಪ್ರಶ್ನೆ ಯಾಕಾದರೂ ಬರುತ್ತದೆ ನಿಮ್ಮ ತಲೆಯಲ್ಲಿ?......................................................................................................................ಮುಂದಿನ ಸಂಚಿಕೆಗೆ

4 comments:

 1. oh realy suparb,indina stitige hidida kannadi.heege barita iri.chippinolagina ame agodu beda.

  ReplyDelete
 2. tumba dhanyavaadagaLu...Sari mam, tamma maatannu paalisuvevu

  ReplyDelete
 3. Aaaah wow.....
  A wonderful and brief presentation about Come bali.... ha ha....

  I loved the small illustration. Its a treat to any one who reads your blog.. Interesting piece of information about the village, people and their way of life... With a touch about the lost glory of Kambali....

  Continue to write and enthrall many more readers.....

  Regards
  ReGiNa

  ReplyDelete
 4. Tumba thnx Regi, but adu nan creativ alla, hinde yaaro heliddu naan kelida nenapu maatra ittu, keep supporting me by reading and commenting

  ReplyDelete