09 ಜೂನ್ 2010

ಉಢಾಫೆತನವೆಂಬುದು ನನ್ನೊಳಗಿರುವ ನನ್ನದೇ ಆಸ್ತಿ????


ಬರಗಾಲದಲ್ಲಿ ಅಧಿಕ ಮಾಸವೆಂಬುದೊಂದು ಮಾತು ಅಂತೆಯೇ, ನಂಬಿದವನು ಕೈ ಬಿಡುವುದಿಲ್ಲವೆನ್ನುವುದೊಂದು ನಂಬಿಕೆ. ಇವೆರಡರಲ್ಲಿ ಯಾವುದು ಸರಿ, ಅಥವಾ ಯಾವುದು ಅತಿ ಹೆಚ್ಚು ಸರಿ ಎನ್ನುವ ಪ್ರಶ್ನೆ ನಮ್ಮನ್ನು ಬಹಳಷ್ಟೂ ಕಾಡುತ್ತದೆ. ಇದಕ್ಕೊಂದು ನಿದರ್ಶನ, ನಿನ್ನೆ ನಡೆದ ಘಟನೆ. ನಾನು ನನ್ನೂರಿಗೆ ಹೋಗಿದ್ದೆ, ಅಲ್ಲಿದ್ದ ಒಂದು ಹೋಂಡಾ ಆಕ್ಟಿವಾ ವನ್ನು ಬೆಂಗಳೂರಿಗೆ ತರಬೇಕಿತ್ತು, ಪಟ್ಟಣಕ್ಕೆಂದು ಮಾಡಿಟ್ಟ ಬೈಕು ನಮ್ಮಪ್ಪನ ಕೈಯ್ಯಿಗೆ ಸಿಕ್ಕಿ, ಹಳ್ಳಿಗಾಡಿನ ರಸ್ತೆಯಲ್ಲಿ ಸದ್ದು ಗದ್ದಲವೆಂಬಿಸಿಕೊಂಡು ಸುಸ್ತಾಗಿ ಹೈರಾಣವಾಗಿತ್ತು.ಅದನ್ನು ಇಲ್ಲಿಗೆ ತರುವುದು ದುಸ್ತರವೆಂದು ತಿಳಿದಿದ್ದರೂ ತರಲೇಬೇಕೆಂಬ ಅನಿವಾರ್ಯತೆಗೆ ಗಂಟು ಬಿದ್ದು, ವಿಜಿ ಯೊಂದಿಗೆ ಬರುವುದಾಗಿ ತೀರ್ಮಾನವಾಯಿತು. ಮನೆಯಿಂದ ಹೊರಟವನು ದುರ್ಗೇಶ್ ಮದುವೆ ಮುಗಿಸಿಕೊಂಡು ಹೊರಡುವ ನಿರ್ಧಾರ ಮಾಡಿದೆ.ಅತಿ ಸಂತೋಷದಿಂದ ಬೀಗುತ್ತಿದ್ದ, ದುರ್ಗೇಶ್ ನನ್ನು ಕಂಡು, ಈ ಸಂತೋಷಕ್ಕಾದರೂ ಒಂದು ನೂರು ರೂಪಾಯಿ ಮುಯ್ಯಿ ಹಾಕೋಣವೆಂದು ಹಾಕಿದೆ, ಆದರೇ ಆ ನೂರು ರೂಪಾಯಿ ನನ್ನ ಪಾಲಿಗೆ ಅಷ್ಟೋಂದು ಮಹತ್ವ ವಹಿಸುತ್ತದೆಂಬ ಸಣ್ಣ ಕಲ್ಪನೆಯೂ ಇರಲಿಲ್ಲ.ಮದುವೆ ಮುಗಿಯುವುದು ತಡವಾದ್ದರಿಂದ, ಮಳೆಗೆ ಸಿಕ್ಕಿಕೊಳ್ಳುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿದವು. ಅರಕಲಗೂಡಿಗೆ ಬಂದವನು ಪೆಟ್ರೋಲ್ ಹಾಕಿಸಲು ನೋಡಿದೆ, ಜೇಬಿನಲ್ಲಿ ೧೪೦ ರೂಪಾಯಿ ಮಾತ್ರವಿದ್ದರಿಂದು ಮುಂದೆ, ಹೊನ ಪುರದಲ್ಲಿ, ಎಟಿಎಂ ನಿಂದ ತೆಗೆದು ಹಾಕಿಸುವ ನಿರ್ಧಾರ ಮಾಡಿ ಮುನ್ನೆಡೆದೆ.ನಮ್ಮ ಜೊತೆಯಲ್ಲಿ ಮದುವೆಗೆ ಬಂದಿದ್ದ ಸ್ನೇಹಿತರಿಗೆ ದಾರಿ ತೋರಿಸುವು ಭರದಲ್ಲಿ, ನಾನು ಎಟಿಎಂ ನಿಂದ ಹಣ ತೆಗೆಯುವುದನ್ನು ಮರೆತು ಬಿಟ್ಟೆ.

ಮುಂದೆ ಚರಾ ಪಟ್ನದಲ್ಲಿ ತೆಗೆದರಾಯಿತೆಂಬ ವಿಜಿಯ ಸಲಹೆಗೆ ಬೆಲೆ ಕೊಟ್ಟು ನೂರು ರೂಗಳಿಗೆ ಪೆಟ್ರೋಲ್ ಹಾಕಿಸಿದೆವು.ಅಲ್ಲಿಂದ ಹೊರಟು, ಕೇವಲ ಹೈದಿನೈದು ನಿಮಿಷಗಳಿಗೆ ನೋಡಿದ ಸನ್ನಿವೇಶಗಳು ನಮ್ಮನ್ನು ಮೈ ರೋಮಾಂಚನಗೊಳಿಸಿದೆವು.ನೇರ ಸುಡುತಿದ್ದ ಸೂರ್ಯ, ದಿಡೀರನೆ ಅವನ ಬಣ್ಣ ಬದಲಾಯಿಸತೊಡಗಿದ. ನಾವು ಕಾಣುತ್ತಿರುವುದು ನಿಜವೂ, ಸುಳ್ಳೋ, ಕನಸೋ, ಯಾರೋ ಬರೆದಿರುವ ಚಿತ್ರವೋ, ಫೋಟೋವೋ? ಹೀಗೆ ಹತ್ತು ಹಲವು ಅನುಮಾನಗಳು ಒಟ್ಟೋಟ್ಟಿಗೆ ಬಂದವು. ಬೆಳ್ಳನೆಯ ಮೋಡ, ನೀಲಿಗೆ ತಿರುಗಿ, ನಂತರ ಕಡುಗಪ್ಪಾಗತೊಡಗಿತು. ಸಣ್ಣ ಮಗುವು ಕೂಡ ಆ ಬದಲಾವಣೆಯನ್ನು ಗಮನಿಸಬಹುದಾಗಿತ್ತು. ಸ್ವಲ್ಪವೂ ಗಾಳಿಯಿಲ್ಲದೇ ಬರಿ ಮೋಡ ಚಲಿಸುವುದು ಬದಲಾಗುವುದು, ಅದರಡಿಯಲ್ಲಿ ದೂರದ ಗುಡ್ಡಗಳು, ನಿಜಕ್ಕೂ ನಮ್ಮನ್ನು ಆನಂದದ ಪರಮಾವಧಿಗೆ ಕರೆದೊಯ್ದವು.ಆದರೇ ಆ ನಗು ಕೆಲವೇ ಕ್ಷಣಗಳಲ್ಲಿ ಮರೆಯಾಗುವುದೆಂಬ ಸುಳಿವು ನಮಗಿರಲಿಲ್ಲ.

ಹಾಗೆಯೇ ಮುಂಬರುವಾಗ ನಿರೀಕ್ಷೆಗೂ ಮೀರಿ ಮಳೆ ಸುರಿಯಲಾರಂಬಿಸಿತು. ಮುಂದಕ್ಕೆ ಚಲಿಸಲಾರದೇ, ಅಲ್ಲಿಯೇ ನಿಂತು ಹೋಗುವುದಾಗಿ ತೀರ್ಮಾನಿಸಿ, ಒಂದು ಮನೆಯ ಕೊಟ್ಟಿಗೆ ಸೇರಿದೆವು.ನಿಂತು ಹಾಡು ಕೇಳಿ ಬೇಸರವಾದಗ ಮಳೆಯಲ್ಲಿಯೇ ನೆನೆದು ಹೋಗೋಣವೆಂದು ಮುನ್ನೆಡೆದೆವು. ಚರಾ ಪಟ್ನ ಸೇರುವಷ್ಟಕ್ಕೆ ನಮ್ಮ ಅಂಗಾಂಗವೆಲ್ಲಾ ಮಳೆಯೊಂದಿಗೆ ಮಿಲನ ಸಾಧಿಸಿದ್ದವು.ಅಲ್ಲಿ ಬಂದ ತಕ್ಷಣ ಎಟಿಎಂ ಕಂಡರೂ ಅದು ರಸ್ತೆ ದಾಟೀ ಹೋಗಬೇಕೆಂಬ ಕಾರಣಕ್ಕೆ ಮುಂದೆ ನೋಡಲು ಬಂದೆವು. ನಾವು ತೀರ್ಮಾನಿಸಿದ್ದರ ವಿರುದ್ದ ತೀರ್ಪು ತಯಾರಾಗಿತ್ತು. ಮುಂದೆ ಎಟಿಎಂ ಸಿಗಲೇ ಇಲ್ಲ, ಮಳೆ ಮತ್ತೂ ಜೋರಾಗಿ ಸುರಿಯಲಾರಂಬಿಸಿತು. ವಿಧಿಯಿಲ್ಲದೇ ಅಲ್ಲೇ ಒಂದು ಮನೆಯ ಬಳಿಯಲ್ಲಿ ಟಿಕಾಣಿ ಹಾಕಿದೆವು. ಸತತ ಒಂದು ಗಂಟೆಗೂ ಹೆಚ್ಚು ಸಮಯ ಸುರಿದು ಜೀವನವನ್ನು ಮಂಕಾಗಿಸಿ ಬಿಟ್ಟಿತು. ಅಲ್ಲಿಂದ ಮುಂದೆ ಬರುವಾಗ, ಹಿರಿಸಾವೆಯಲ್ಲಿಯೂ ಇರಲಿಲ್ಲ, ಬೆಳ್ಳೂರಿನಲ್ಲಿಯು ಎಟಿಎಂ ಸಿಗಲೇ ಇಲ್ಲ, ಪೆಟ್ರೋಲ್ ಹಾಗಲೇ ತಳ ಮುಟ್ಟಿತ್ತು, ಮುಂದಕ್ಕೇ ಹೋಗುವ ಭರವಸೆ ಕಾಣದೆ ಕಂಗಳಾಗಿದ್ದಾಗಲೇ, ನನ್ನ ಸ್ನೇಹಿತ ಪ್ರಿಯ ವಿಜಿ, ಗಾಡಿಯ ಆಕ್ಷಿಲರೇಟರ್ ಅನ್ನು ಹೆಚ್ಚು ನುಳಿದು ನುಳಿದು, ಅದು ಜಾಮ್ ಆಗಿ ಹೋಯಿತು.ಗಾಡಿ ನಿಲ್ಲದೇ ಸುಮನೇ ಓಡುತ್ತಿತ್ತು, ಇದರಿಂದಾಗಿ ಹೆಚ್ಚು ಹೆಚ್ಚು ಪೆಟ್ರೋಲ್ ಕುಡಿದು ನಮ್ಮನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡುವುದು ನಿಶ್ಚಯವಾಯಿತು.ಅದೂ ಅಲ್ಲದೇ, ನಮ್ಮ ಕಣ್ಣೆದುರು ನಡೆದ ಅಪಘಾತಗಳು ನಮ್ಮನ್ನು ಬೆಚ್ಚಿ ಬೀಳುವಂತೆ ಮಾಡಿದವು. ನಮ್ಮ ಮುಂದೆ ಕೇವಲ ನೂರು ಅಡಿ ಅಂತರದಲ್ಲಿ, ಇಬ್ಬರು ಯುವಕರು ಬೈಕ್ ನಿಂದ ಬಿದ್ದು ಹೋದರು, ನೋಡಿದ ತಕ್ಷಣ ನಾವು ಮುಂದೊಂದು ಜಾಗದಲ್ಲಿ ಹೀಗೆ ಬೀಳುತ್ತೆವೆನ್ನಿಸಿತು. ಜೇಬಿನಲ್ಲಿದ್ದ ಇನ್ನು ಮೂವತ್ತು ರೂಪಾಯಿಗೆ, ಪೆಟ್ರೋಲ್ ಹಾಕಿಸಿ ಎಡಿಯೂರು ತಲುಪಿದರೇ ಅಲ್ಲಿ ಎಟಿಎಂ ಸಿಗುಬಹುದೆಂದು ನಡೆದೆವು.

ನಾವು ನಿರೀಕ್ಷಿಸಿದಂತೆ ಎಟಿಎಂ ಇತ್ತು, ಒಳಕ್ಕೆ ಹೋಗಿ ನನ್ನಲ್ಲಿದ್ದ ಎಲ್ಲಾ ಎಟಿಎಂ ಕಾರ್ಡುಗಳನ್ನು ಹಾಕಿ ನೋಡಿದರೂ ಅದು ಕಾರ್ಯ ನಿರ್ವಹಿಸುತ್ತಿರಲಿಲ್ಲ.ಇಂಥಹ ಚಿಂತಾಜನಕ ಸ್ತಿತಿಯಲ್ಲಿ ಜೇಬಿನಲ್ಲಿ ಒಂದೇ ಒಂದು ರೂಪಾಯಿ ಇಲ್ಲದೇ ಗುರುತಿಲ್ಲದ ಊರಿನಲ್ಲಿ ಅನಾಥ ಪ್ರಜ್ನೆ ಕಾಡುವಂತಾಯಿತು. ಇರುವ ಪೆಟ್ರೋಲ್ ನಲ್ಲಿ, ಕುಣಿಗಲ್ ತಲುಪಿ ಅಲ್ಲಿ ಸಿಕ್ಕೇ ಸಿಗುತ್ತದೆಂಬ ಭರವಸೆಯಿಂದ ಹೊರಟೆವು. ಕುಣಿಗಲ್ ತಲುಪುವ ವೇಳೆಗೆ ಸಂಪೂರ್ಣ ಒದ್ದೆಯಾಗಿದ್ದೇವು.ಬಂದು ನೋಡಿದರೇ, ಅಲ್ಲಿದ್ದ ಮೂರು ಎಟಿಎಂ ಗಳು ಬಾಗಿಲು ಹಾಕಿ ನಮ್ಮನ್ನು ಅಣಕಿಸಿದವು. ಒಂದು ಸಣ್ಣ ತಪ್ಪು ಒಂದು ಸಣ್ಣ ಉಢಾಫೆತನ ನನ್ನನ್ನು ಇಂಥಹ ಸ್ಥಿತಿಗೆ ತಂದಿತಲ್ಲ ಎಂದು ಮುಖ ಬಾಡಿಸಿದೆ.ಇದ್ದ ಪೆಟ್ರೋಲ್ ಬಂಕುಗಳಿಗೆ ಹೋಗಿ, ಕಾರ್ಡು ಉಜ್ಜಬಹುದಾ ಎಂದು ಕೇಳಿದೆ, ಎಲ್ಲಿಂದಲೂ ಸಕರಾತ್ಮಕ ಉತ್ತರ ಸಿಗಲಿಲ್ಲ. ಆ ಊರಿನಲ್ಲಿ ಯಾವೊಬ್ಬನೂ ಪರಿಚಯವಿಲ್ಲ. ಹಿಂದೆ ಅಗಸ್ತ್ಯ ಸಂಸ್ಥೆಯ ಕೆಲಸಕ್ಕೆಂದು ಹೋದಾಗ ಒಬ್ಬರ ಪರಿಚಯವಿತ್ತು, ಅವರ ನಂಬರ್ ಇಲ್ಲದೇ, ಲೆನಿನ್ ಅವರಿಗೆ ಕರೆ ಮಾಡಿ ಕೇಳಿದೆ ಅವರ ಬಳಿ ನಂಬರ್ ಇರಲಿಲ್ಲ.ಮುಂದೇನು? ಆ ದುರ್ಗೇಶ್ ಗೆ ಮುಯ್ಯಿ ಹಾಕದೇ ಇದ್ದಿದ್ದರೇ ಆ ನೂರು ರೂಪಾಯಿ ಇದ್ದಿದ್ದರೇ ಅದು ಈ ಸಮಯಕ್ಕೆ ಉಪಯೋಗಕ್ಕೆ ಬರುತ್ತಿತ್ತು. ಎಂದೂ ಮುಯ್ಯಿ ಹಾಕದ ನಾನು ಮೊದಲ ಬಾರಿಗೆ ಮಾಡಬಾರದು ಮಾಡಿದಂತಾಯಿತೆನ್ನುವಾಗ, ನೆನಪಿಗೆ ಬಂದವನು ಸ್ನೇಹಿತ ಮೋಹನ್, ಅವನಿಗೆ ಕರೆ ಮಾಡಿ ವಿಚಾರಿಸಿದೆ, ಅವನು ಅವನ ಸ್ನೇಹಿತನಿಗೆ ಕರೆ ಮಾಡಿ, ವಿಷಯ ತಿಳಿಸಿ ಎಲ್ಲ ಆಗಲು ಅರ್ಧ ಗಂಟೆ ಹಿಡಿಯಿತು. ಆ ಸಮಯದಲ್ಲಿ ನನ್ನೊಳಗೆ ಆಗುತ್ತಿದ್ದ ಸಂಚಲನವೇ ಬೇರೆ ಇತ್ತು, ದುಡ್ಡೂ ಸಿಗುವುದೋ ಇಲ್ಲವೋ, ಇಲ್ಲದಿದ್ದರೇ ಮಾಡುವುದೇನು?ಆಗಲೇ ಊರೆಲ್ಲಾ ಮಲಗುತಿತ್ತು. ಎಲ್ಲವೂ ಸುಸೂತ್ರವಾಗಿ, ಅವನ ಸ್ನೇಹಿತನ ಸ್ನೇಹಿತ ನೂರು ರೂಪಾಯಿ ಕೊಟ್ಟನು. ಅವನು ಬಂದು ನನ್ನನ್ನು ದಿಟ್ಟಿಸಿದಾಗ ನನಗೆ ನಿಜಕ್ಕೂ ಅವಮಾನವಾಯಿತು. ಪೆಟ್ರೋಲ್ ಗೆ ಕಾಸಿಲ್ಲ ಅಂತ ಅಂದರೇ, ಗಾಡಿ ಯಾಕೋ ಓಡಿಸಬೇಕು ಲೋಫರ್? ಎನ್ನುವಂತಿತ್ತು ಅವನ ನೋಟ. ನೀನು ಏನು ಹೇಳಿಕೊಂಡರೂ ನಾನವನಲ್ಲ ನಾನವನಲ್ಲ ಎಂದು ೭೦ ರೂಪಾಯಿಗಳಿಗೆ ಪೆಟ್ರೋಲ್ ಹಾಕಿಸಿ ಹೊರಟೆವು. ಅಲ್ಲಿಂದ ತಾವರೆಕೆರೆಗೆ ಬಂದು, ಎಟಿಎಂ ನಿಂದ ದುಡ್ಡು ತೆಗೆದು, ಮುಂಬರುವಾಗ ಸರಿಯಾಗಿ ಪೆಟ್ರೋಲ್ ಬಂಕ್ ಮುಂದಕ್ಕೆ ಬಂದು ಗಾಡಿ ನಿಂತಿತು. ಇದೊಂದು ಅದೃಷ್ಟವಾ? ಕಗ್ಗತ್ತಲಿನಿಲ್ಲಿ ಅರ್ಧ ಕಿಮೀ ಕೂಡ ನಡೆಯಲಾಗುತ್ತಿರಲಿಲ್ಲ, ಮೊದಲೇ ಕಳ್ಳ ಕಾಕರ ಭಯವಿರುವ ರಸ್ತೆ.ದರೋಡೆಕೋರರು ಬಹಳಷ್ಟು ಜನ ಇರುವಲ್ಲಿ ನಾವು ನೇರ ಬಂಕಿನ ಹತ್ತಿರ ಬಂದು ನಿಂತಿದ್ದು ಸಮಧಾನವೆನಿಸಿತು.ಅಲ್ಲಿಂದ ಜ್ನಾನ ಭಾರತಿ ಆವರಣದೊಳಕ್ಕೆ ಬರುವ ವೇಳೆಗೆ, ಗಾಡಿ ಸರಿ ಹೋಯಿತು, ಆಕ್ಷಿಲರೇಟರ್ ಸಮಸ್ಯೆ ಪರಿಹಾರವಾಯಿತು.

ಬಂದ ಮೇಲೆ ಎನಿಸಿದ್ದು, ಇದು ಸಮಸ್ಯೆಯ ಮೇಲೆ ಸಮಸ್ಯೆ ಕೊಡುವುದು, ಬರಗಾಲದಲ್ಲಿ ಅಧಿಕ ಮಾಸವೆಂಬಂತೆ ಅಲ್ಲವೇ? ಅಥವಾ ನಾವು ಅಂಥಹ ಸಮಸ್ಯೆಯಲ್ಲಿದ್ದರೂ ಸ್ವಲ್ಪವೂ ಅಡಚನೆಯಾಗದೇ, ತೊಂದರೇ ಆಗದೇ, ತಲುಪಿದೆವಲ್ಲ? ಇದಲ್ಲವೇ ಸಮಸ್ಯೆ ಬಂದಾಗ ಅದಕ್ಕೆ ಪರಿಹಾರವಿರುತ್ತದೆ ಎನ್ನುವುದು.ಇದಕ್ಕೂ ಮೀರಿ ನನಗೆ ಬೇಸರ ತರಿಸಿದ್ದು, ಎಲ್ಲದ್ದಕ್ಕೂ ದುಡ್ಡು ಮುಖ್ಯವಲ್ಲ, ಎಟಿಎಂ ಕಾರ್ಡುಗಳು ಸಾಕು ಎಂದು ಯಾವನೋ ಮುಟ್ಠಾಳ ಕಳುಹಿಸಿದ್ದ ಎಸ್ ಎಂ ಎಸ್. ಕಾರ್ಡುಗಳಿದ್ದರೂ, ಒಂದು ಲೀಟರ್ ಪೆಟ್ರೋಲ್ ಹಾಕಿಸಲಾಗಲಿಲ್ಲ, ಮೂರು ತಾಲೂಕು ಕೇಂದ್ರಗಳನ್ನು ದಾಟಿ ಬಂದರೂ, ಸರಿ ಸುಮಾರು ೧೫೦ ಕಿಮೀ ಪಯಣ ಮಾಡಿದರೂ ಒಂದೇ ಒಂದೂ ಎಟಿಎಂ ಸಿಗಲಿಲ್ಲವೆಂದರೇ? ನಾವು ಬದುಕಿರುವುದು ಎಲ್ಲಿ? ಸಾವಿರಾರು ಜನರು ಈ ಎಟಿಎಂ ಗಳನ್ನು ನಂಬಿ ಬರುತ್ತಾರೆ ಅವರಿಗೆಲ್ಲಾ ನಮ್ಮ ಗತಿಯೇ??

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...