15 ಸೆಪ್ಟೆಂಬರ್ 2010

ಬದುಕಿನ ಅರ್ಥಕ್ಕೆ ಬಂದ ಪ್ರೀತಿಯ ರೂಪವಲ್ಲವೇ ನೀ............!!!!

ಇದು ಸಂಪೂರ್ಣ ನನ್ನ ವೈಯಕ್ತಿಕ ವಿಷಯವಾದ್ದರಿಂದ, ಇದನ್ನು ತಾವುಗಳು ಓದಿ ಸುಮ್ಮನೆ ತಲೆಗೆ ಇರುವೆ ಬಿಟ್ಟುಕೊಳ್ಳುವುದು ಬೇಡವೆಂಬ ಬಯಕೆ. ಇಂಥಹ ಒಂದು ಪ್ರಶ್ನೆ ಪ್ರೀತಿಸುವ ಪ್ರತಿಯೊಬ್ಬನನ್ನು ಕಾದಿರುತ್ತದೆ. ನೀನು ನನ್ನನ್ನು ಎಷ್ಟು ಪ್ರ‍ೀತಿಸುತ್ತೀಯಾ? ನಿನ್ನ ಪ್ರೀತಿಯನ್ನು ನಂಬಬಹುದೇ? ನಂಬಿಸಲು ನಾನು ಏನು ಮಾಡಬಹುದು? ಸಾಧರಣವಾಗಿ ಒಂದು ಹುಡುಗಿ ಕಷ್ಟದಲ್ಲಿದ್ದಾಗ ಅವರ ಬಗೆಗೆ ಕರುಣೆ ಬರುವುದು ಸಹಜ ಆದರೇ, ಪ್ರೀತಿ ಬರುವುದಿಲ್ಲ. ಪ್ರೀತಿಯೇ ಬೇರೆ, ಕರುಣೆಯೇ ಬೇರೆ. ನಾನು ನಿನ್ನನ್ನು ಇಷ್ಟಪಟ್ಟದ್ದು, ಕರುಣೆಯಿಂದಲ್ಲ. ಕರುಣೆ ಕ್ಷಣಿಕವಾದದ್ದು ಎಂಬುದು ನನಗೂ ಗೊತ್ತು ನಿನಗೂ ಗೊತ್ತು. ನೀನು ಯಾರಿಂದಲೂ ಕರುಣೆ ಬಯಸುವವಲಲ್ಲ. ನಾನು ಯಾರಿಗೂ ಕರುಣೆ ತೋರಿಸುವವನೂ ಅಲ್ಲ. ನನ್ನ ಪ್ರೀತಿಯ ಮಹತ್ವ ತಿಳಿಸುವುದು ಹೇಗೆ? ನನಗೆ ಸ್ನೇಹಿತರು, ಸ್ನೇಹಿತೆಯರು ಬಹಳ ಜನರಿದ್ದಾರೆ. ಇವರೆಲ್ಲರೂ ಇದ್ದು ಯಾರು ಇಲ್ಲದಂತಿದ್ದೆನಾ ನಾನು? ಇಲ್ಲ ಇಲ್ಲವೇ ಇಲ್ಲ, ನನಗೆ ಎಲ್ಲರೂ ಇದ್ದರೂ, ಎಲ್ಲವೂ ಇತ್ತು, ಮನಸ್ಸಿಗೆ ಹಿಡಿಸುವ ಪ್ರೀತಿಯ ಅವಶ್ಯಕತೆ ಇತ್ತು. ಇದಕ್ಕೆ ಸರಿಯಾದ ಸಮಯದಲ್ಲಿ ನನ್ನ ಬಾಳಿಗೆ ಬಂದವಳು ನೀನು. ನೀನು ನನಗೆ ನೇರ ಭೇಟಿಯಾದವಳಲ್ಲ, ನಿನ್ನ ಬಗೆಗೆ ಹೆಚ್ಚು ತಿಳಿದು ಇರಲಿಲ್ಲ. ಆದರೇ ಮೊದಲನೆಯ ಸೆಳೆತವೂ ಇರಲಿಲ್ಲ, ಮಾತು ಬೆಳೆದಂತೆ ಒಂದು ಬಗೆಯ ಆಕರ್ಷಣೆ ಬೆಳೆಯಿತು. ಮದುವೆಯಾದವಳೆಂದು ತಿಳಿದು ನಿನ್ನಿಂದ ನಾನು ದೂರವಿದ್ದೆ ಎನಿಸಿದರೂ, ನಾನು ನಿನ್ನನ್ನು ಇಷ್ಟಪಟ್ಟಿದ್ದು ಮನಸಾರೆ ಪ್ರೀತಿಸಿದ್ದು ಮಾತ್ರ ಸತ್ಯ. ಇದಕ್ಕೆ ಯಾವುದೇ ಪೂರ್ವಾಪರವಿಲ್ಲ. ಇದು ಕೇವಲ ಪ್ರೀತಿ, ನಿಷ್ಕಲ್ಮಶ ಪ್ರೀತಿ. ಮದುವೆಯಾದವಳನ್ನು ಪ್ರೀತಿಸುವುದು ತಪ್ಪಾ? ನೈತಿಕತೆ ಅನೈತಿಕತೆಯ ವಿವರಣೆ ನೀಡಬೇಕಿಲ್ಲ.
ಮದುವೆಯಾಗಿ ಇರುವ ಸಂಸಾರಿಕ ಗೃಹಿಣಿಯನ್ನು ಪ್ರೀತಿಸುವುದು ನಿಜಕ್ಕೂ ಅಪರಾಧ. ಆದರೇ, ಪ್ರೀತಿವಂಚಿತಳಾದವಳನ್ನು ಪ್ರೀತಿಸುವುದು ಯಾವ ತಪ್ಪು? ನಿನಗೆ ಅನ್ಯಾಯವಾಗಿದೆ ನಿನ್ನ ಪ್ರೀತಿಗೆ ಮೋಸವಾಗಿದೆ ಎಂಬ ಕರುಣೆಯಿಂದ ನಾನು ನಿನ್ನನ್ನು ಪ್ರೀತಿಸಿಲ್ಲ. ನಾನು ಪ್ರೀತಿಸಿದ್ದು, ನೀನಾಗಿರುವ ಕೇವಲ ನಿನ್ನನ್ನು ಮಾತ್ರ. ಅಲ್ಲಿ ಮದುವೆಯಾಗಿ ಬೇರ್ಪಟ್ಟವಳು ಅಲ್ಲಾ ಪ್ರ‍ೀತಿವಂಚಿತಳು ಅಲ್ಲಾ. ಎಲ್ಲರೂ ಸಮಾನರೇ ಜಗದಲ್ಲಿ, ಕರುಣೆಯೆಂಬುದು ಇಲ್ಲಾ, ಅಥವಾ ನೀನಿರುವ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಮನಸ್ಸು ಇಲ್ಲ. ನೀನು ನನಗೆ ಇಷ್ಟವಾಗಲೂ ಸಾವಿರ ಸಾವಿರ ಕಾರಣಗಳಿದ್ದವು. ಅವುಗಳೆಲ್ಲವೂ ನಿನಗೂ ತಿಳಿದಿದೆ, ನನಗೂ ಅರಿವಿದೆ. ಕೇವಲ ಬಾಹ್ಯ ಸೌಂದರ್ಯಕ್ಕೆ ಸೋತಿಲ್ಲ, ನಿನ್ನನ್ನು ಪ್ರೀತಿಯಿಂದ ನೋಡುವ ಮುಂಚೆಯೂ ನೀ ನನಗಿಷ್ಟವಾಗಿದ್ದೆ. ಸೌಂದರ್ಯದ ವಿಷಯ ಬಂದಾಗ ನಾನೇ ಹೇಳುವಂತೆ ನನ್ನ ಕಥೆಯ ಕಾದಂಬರಿಯ ನಾಯಕಿ ನೀನೆ ಆಗಿರುವೆ, ಅದು ಈ ಜನ್ಮಕ್ಕೂ ಮುಂದಿನ ಯಾವ ಜನ್ಮಕ್ಕೂ ಸರಿಯೇ. ನಾನು ನಿನ್ನನ್ನು ಕಂಡು ಎರಡು ವರುಷಗಳು ತುಂಬಿವೆ. ಮೊದಲ ದಿನಗಳಲ್ಲಿನ ಕಾತುರತೆ ಇನ್ನೂ ಹಾಗೆಯೇ ಇದೆ. ಅದಿನ್ನೂ ಮಾಸಿಲ್ಲ, ಮಾಸುವುದೂ ಇಲ್ಲ. ನಿನ್ನ ಒಂದು ಕರೆಗಾಗಿ, ಒಂದು ಕ್ಷಣದ ಚಾಟ್ ಗಾಗಿ ಕಾಯುತ್ತಿದ್ದ ದಿನಗಳಿವೆ. ಇದು ಕೇವಲ ನನ್ನ ಏಕಾತನದ ಕೊರಗನ್ನು ನೀಗಿಸಲು ಬೇಕಿದ್ದ ತಾವಲ್ಲ. ನನ್ನತನವನ್ನೆಲ್ಲಾ ನಿನಗೆ ದಾರೆಯೆರೆಯಲು ಕಾದಿದ್ದ ಇಷ್ಟು ವರ್ಷದ ಪುಣ್ಯ. ನಾನು ಎಲ್ಲಿಯೂ ಎಂದಿಗೂ ಯಾರನ್ನೂ ಯಾವುದಕ್ಕೂ ಬೇಡದೇ ಇದ್ದರೂ ನಿನ್ನ ಕಾಲಿಗೆ ಬಿದ್ದು ಅಂಗಲಾಚುವ ಮಟ್ಟಕ್ಕೆ ಪ್ರೀತಿಸಿದ್ದೀನಿ, ಪೀಡಿಸಿದ್ದೀನಿ. ನಿನ್ನನ್ನು ಮೆಚ್ಚಿಸಲು ಬರೆಯಬೇಕಿಲ್ಲ, ನನ್ನ ಪ್ರೀತಿಯ ತೀವ್ರತೆ ನಿನಗೂ ಅರಿವಿದೆ.
ಅಂದರೇ, ಇಲ್ಲಿಯ ತನಕ ನಾನು ಯಾರನ್ನೂ ಪ್ರೀತಿಸಬೇಕೆನಿಸಿರಲಿಲ್ಲವೇ, ನಿನಗಿಂತ ಸುಂದರಿಯರಿರಲಿಲ್ಲವೇ? ಇಂಥಹ ಕುಹುಕ ಪ್ರಶ್ನೆಗಳು ನನ್ನನ್ನು ಕೇಳಿದ್ದಾವೆ. ಇದಕ್ಕೆಲ್ಲಾ ಉತ್ತರ ಸಮಯ. ನಾನು ಬೆಳೆದು ಬಂದ ರೀತಿ, ಪರಿಸರ, ಪರಿಸ್ಥಿತಿ, ನನ್ನನ್ನು ಪ್ರೀತಿಯಿಂದ ಹೆಣ್ಣಿನ ಪ್ರೀತಿಯಿಂದ ಮೋಹದಿಂದ ಸ್ವಲ್ಪ ದೂರವೇ ಇಟ್ಟಿತ್ತು. ನಾನು ಕೆಲವು ಹುಡುಗಿಯರನ್ನು ಕಂಡರೂ ಪ್ರೀತಿಸುವ ಮಟ್ಟಕ್ಕೆ ಇಷ್ಟಪಡಲಿಲ್ಲ ಅದೆಲ್ಲವೂ ಆ ಕ್ಷಣದ ಆಕರ್ಷಣೆಯಂತಿತ್ತು. ನೀನು ಇದನ್ನೂ ಆಕರ್ಷಣೆ ಎಂದರೇ? ಆಕರ್ಷಣೆಯಲ್ಲಿ ಕೇವಲ ಬೇಕು ಇರುತ್ತದೆ, ಬಯಸಿದ್ದು ಬೇಕು ಎನ್ನುವುದೇ ಮೊದಲ ಗುರಿ. ಪ್ರೀತಿಯಲ್ಲಿ ಅದಕ್ಕಿಂತ ಹೆಚ್ಚಾಗಿ ಕೊಡುವುದಿರುತ್ತದೆ. ಹೆಚ್ಚು ಕೊಟ್ಟಷ್ಟು ಹೆಚ್ಚು ವೃದ್ದಿಸುತ್ತದೆ. ಕೊಡುವುದು ಮಾತ್ರ ಪ್ರೀತಿಯ ಕೆಲಸ, ನಾನು ಮಾಡುತ್ತಿರುವುದು, ಮಾಡಿದ್ದು ಇದನ್ನೇ. ಯಾರನ್ನೇ ಆದರೂ ಅತಿಯಾಗಿ ಪ್ರೀತಿಸಿದಾಗ ಪ್ರೀತಿಯ ತೀವ್ರತೆ ಅವರನ್ನು ಮೂಕರನ್ನಾಗಿಸಬೇಕು. ಕ್ಷಣವಲ್ಲಾ, ಪ್ರತಿ ಸೆಕೆಂಡು ಕೂಡ ಅವರನ್ನೇ ಕುರಿತು, ಜ್ನಾನಿಸಬೇಕು, ಪ್ರೀತಿಸಬೇಕು, ಅವರನ್ನು ಹರಸಬೇಕು, ಹಾರೈಸಬೇಕು. ಅದು ನಿಜವಾದ ಪ್ರೀತಿ. ಕೇವಲ ನನ್ನ ಹೆಂಡತಿಯಗುವುದಾದರೇ ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ಇಲ್ಲವೆಂದರೇ ಮರುಕ್ಷಣದಿಂದ ನಿನ್ನ ಬಗೆಗೆ ತಾತ್ಸಾರ ಮೂಡುತ್ತದೆ, ಇದೆಲ್ಲವೂ ಶುದ್ದ ಸುಳ್ಳು. ನಾನು ನಿನ್ನೊಡನೆ ಕೇವಲ ಗೆಳೆಯನಾಗಿರಲು ಅಸಾಧ್ಯವಾಗಿದ್ದೇ ಇಲ್ಲಿ. ನಾನು ನನ್ನ ಪ್ರಾಣಕಿಂತ ಹೆಚ್ಚು ಪ್ರೀತಿಸುವಾಗ ಕೇವಲ ನೂರರಲ್ಲಿ ಒಬ್ಬನಾದ ಸ್ನೇಹಿತನಾಗಿರುವುದು ಸಾಧ್ಯವಾಗುವುದಿಲ್ಲ.
ನಿನ್ನಲ್ಲಿ ನಾನು ಸೋತುಹೋಗಲು ಕಾರಣಗಳ ಪಟ್ಟಿಗಳನ್ನು ಬರೆಯಲೇ? ಬರೆಯುತ್ತಾ ಹೋದರೇ, ಓದುವ ಗೆಳೆಯರು ಮುಜುಗರ ಪಟ್ಟಾರು.ಆದರೂ ಬರೆಯುವುದು ನನ್ನ ಕರ್ತವ್ಯ, ಸ್ವಲ್ಪ ಮಟ್ಟಿಗೆ ಸೆನ್ಸಾರ್ ಹಾಕಿ ಬರೆಯಲೆತ್ನಿಸುತ್ತೇನೆ. ನಿನ್ನ ಮಾತಿನ ಶೈಲಿಗೆ ನಾನು ಮೊದಲು ಮಾರುಹೋದೆ ಎಂದರೇ ತಪ್ಪಾಗದು. ನಿನ್ನ ನೇರ ನಡೆನುಡಿ ಎಂಥವರನ್ನು ಆಕರ್ಷಿಸುತ್ತದೆ, ಅಂಥಹುದರಲ್ಲಿ ನಾನು ಸೋತಿದ್ದು ಅತಿರೇಕವೇನಲ್ಲ. ಎಂದೂ ಯಾವ ಕ್ಷಣಕ್ಕೂ ನೀನು ಸುಳ್ಳು ಹೇಳುವುದಿಲ್ಲ, ಇದ್ದಿದ್ದನ್ನು ಇದ್ದ ಹಾಗೇಯೇ ಹೇಳುವುದು, ನನ್ನನ್ನು ಬೈಯ್ಯುವುದು, ಬೈಯ್ಯುತ್ತಲೇ ಇರುವುದು ನನ್ನನ್ನು ನಿನ್ನ ಅತಿ ಹತ್ತಿರಕ್ಕೆ ಎಳೆದೊಯ್ದಿತು. ನೀನು ಎಲ್ಲವನ್ನು ನೇರ ದೃಷ್ಟಿಯಿಂದ ನೋಡುವುದು, ಮನರಂಜನೆ, ಅಭಿರುಚಿಗಳು ನನ್ನನ್ನು ನಿನ್ನ ಕಡೆಗೆ ಸೆಳೆದವು. ಸಾಧನೆಯೆಂಬುದರ ಬೆನ್ನ ಹತ್ತಿ ಅದನ್ನು ಸಾಧಿಸಲೇ ಬೇಕೆಂದು ಪಡುವ ಛಲ, ಪರರಿಗೆ ಸಹಾಯ ಮಾಡಲು ಹಾತೊರೆಯುವಿಕೆ. ಇವೆಲ್ಲವೂ ಇಷ್ಟವಾದರೇ, ನಾವು ಮಾಡುವುದೇ ಸರಿ, ಸಂಶೋಧನೆ ನಮ್ಮನ್ನು ಬಿಟ್ಟರೇ ಬೇರಾರು ಮಾಡುವುದೇ ಇಲ್ಲವೆನ್ನುವ ಅಹಂ ಮಾತ್ರ ಇಷ್ಟವಾಗಲಿಲ್ಲ. ಆದರೂ ಒಮ್ಮೊಮ್ಮೆ ಹೇಳುವ ನಾನಿರುವುದೇ ಹೀಗೆ, ಇದ್ದರೇ ಇರು ಇಲ್ಲದಿದ್ದರೇ ಹೋಗು ಎನ್ನುವ ರೀತಿಗಳು ಬಹಳ ಮೆಚ್ಚುಗೆಯಾದವು ಅನ್ನು. ಆದರೂ ನೀನು ನನ್ನನ್ನು ಸತಾಯಿಸಿದ್ದಷ್ಟು ಮತ್ತಾರು ಸತಾಯಿಸಿಲ್ಲವೆನ್ನುವುದು ಸತ್ಯ. ಸ್ವತಃ ನನ್ನ ತಂದೆಯೇ ನನ್ನನ್ನು ಇಷ್ಟು ತುಚ್ಚವಾಗಿ ಕಂಡಿಲ್ಲವೆನಿಸುತ್ತದೆ ಅಷ್ಟರ ಮಟ್ಟಿಗೆ ನೀನು ನನ್ನ ಸದರವಾಗಿ ಮಾತನಾಡುತ್ತೀಯಾ. ರೀತಿ ಮಾತನಾಡಲು ಸಾಧ್ಯ ಹೇಳು. ಕೆಲವೊಮ್ಮೆ ನಿನ್ನ ಸಣ್ಣ ಸಣ್ಣ ಮಾತುಗಳು ಕಣ್ಣೀರಿನ ಕದ ತಟ್ಟಿದರೂ, ನಿನ್ನ ಆಳವಾದ ಪ್ರೀತಿ ಅದನ್ನು ಮರುಕ್ಷನಕ್ಕೆ ಮರೆಸಿಬಿಡುತ್ತದೆ. ನಾನು ನಿನ್ನಿಂದಲೇ ಅದೆಷ್ಟೋ ಬಾರಿ ಕಂಠ ಪೂರ್ತಿ ಕುಡಿದ್ದಿದ್ದೇನೆ, ಆದರೇ ಕುಡಿತದಲ್ಲಿಯೂ ನಿನ್ನಯ ಮೇಲಿನ ಪ್ರೀತಿಯೇ ಕಾಣುತ್ತದೆ ಹೊರತು ಮಿಕ್ಕಾವ ಪ್ರಪಂಚವೂ ಇರುವುದಿಲ್ಲ. ಇದು ಕುರುಡು ಪ್ರೇಮವಾ? ಇಂಥಹ ಪ್ರಶ್ನೆ ನಿನಗೆ ಮೂಡಿದರೂ ನನಗೆ ಬರುವುದಿಲ್ಲ. ಯಾವುದು ಕುರುಡಲ್ಲ, ಮನುಷ್ಯತ್ವದ ಕಣ್ಣು ತೆರೆದು ಪ್ರೀತಿಯ ಅರ್ಥ ಹುಡುಕಿದರೇ, ಪ್ರೀತಿಯನ್ನು ಪ್ರೀತಿಯಂತೆಯೇ ಪ್ರೀತಿಸಿದರೇ ಅದು ಹಸಿರಾಗಿಯೇ ಕಾಣುವುದು. ಅರ್ಥಪೂರ್ಣ ಬದುಕಿಗೆ ಪ್ರೀತಿ ಬಲು ಪ್ರಮುಖವಾದದ್ದು.
ನಾನು ನಿನಗೆ ಹೇಳಿದಂತೆಯೇ ನಿನ್ನ ಬಗೆಗೆ ನನ್ನ ಪ್ರೀತಿಯ ಬಗೆಗೆ ನಿನ್ನಯ ಸೌಂದರ್ಯದ ಬಗೆಗೆ ಎಷ್ಟೇಷ್ಟೇ ಬರೆದರೂ ಅಧಿಕವೆನಿಸುತ್ತದೆ. ನಿನ್ನಯ ಸೌಂದರ್ಯವೂ ಅಷ್ಟೇ, ಹೆಚ್ಚೆಚ್ಚೂ ಬಣ್ಣಿಸಿದಷ್ಟೂ ಅದು ಹೆಚ್ಚಿದೆ ಎನಿಸುತ್ತದೆ. ನಿನ್ನನ್ನು ಪ್ರತಿ ಬಾರಿ ಕಂಡಾಗಲೂ ಅಷ್ಟೇ, ನಿನ್ನನ್ನು ಪ್ರಥಮ ಬಾರಿಗೆ ಕಾಣುತಿದ್ದೇನೆ ಎನ್ನುವಂತೆ, ಹಸಿದವನು, ಅನ್ನ ಕಂಡಾಗ ಮೃಷ್ಟಾನ್ನ ಕಂಡಾಗ ಆಡುವವನಂತೆ, ಭಿಕ್ಷುಕ ವಜ್ರಾಭರಣವನ್ನು ಕಂಡಾಗ ಬೆರಗಾಗುವಂತೆಯೇ ನಿನ್ನನ್ನು ನಾನು ಕಾಣುತ್ತಿದ್ದೇನೆ. ಇದೆಲ್ಲವೂ ನಿನಗೆ ಅತಿರೇಕವೆನಿಸಿದರೂ, ನಾನು ನಿನ್ನಯ ಸೌಂದರ್ಯಕ್ಕೆ ದಾಸನಾಗಿರುವುದಂತೂ ಸತ್ಯ. ದಾಸ್ಯೆತೆ ನನಗೆನೂ ಹೊಸತಲ್ಲ, ನಿನಗೆ ದಾಸ್ಯನಾಗಿರುವುದು ಹೊಸತು, ಆದರೇ ಅದೇನೂ ತಪ್ಪೆನಿಸುತ್ತಿಲ್ಲ. ನಿನ್ನೊಂದಿಗೆ ಕುಳಿತು ಕನಸು ಕಟ್ಟಲು ಮನಸ್ಸು ಹಾತೊರೆಯುತ್ತದೆ. ನಿನ್ನೊಡನೇ ದೂರದೂರಿಗೆ ಮಳೆ ಸುರಿವಾಗ ಬೈಕಿನಲ್ಲಿ ಹೋಗುವಾಸೆ. ದಟ್ಟಕಾಡಿನ ರಸ್ತೆಯಲ್ಲಿ, ನಾವಿಬ್ಬರೇ ಸುರಿವ ಮಳೆಯಲ್ಲಿ ಬೆಟ್ಟಗಳ ನಡುವೆ ಬೈಕಿನ್ನಲ್ಲಿ ಹೋಗುವಾಸೆ. ಮಳೆ ನಿಂತು ಹೋದ ಮೇಲೆ, ನಿನ್ನ ಕೈ ಕೈ ಹಿಡಿದು ನಡೆವಾಸೆ, ನಡು ರಾತ್ರಿಯಲ್ಲಿ ರಸ್ತೆ ಮಧ್ಯೆದಲ್ಲಿ, ಜೂಟಾಟವಾಡುವಾಸೆ. ನಿನ್ನನ್ನು ರೇಗಿಸಿ, ರೇಗಿಸಿ ಮತ್ತೆ ತಬ್ಬಿ ಹಿಡಿದು ಹೆಗಲ ಮೇಲೆ ಕೈಹಾಗಿ, ಸಮಾಧಾನ ಮಾಡಿಸಿಕೊಂಡು ಹೋಗುವಾಸೆ. ನನ್ನ ತುಂಟತನದಿಂದಲೇ ನಿನ್ನನ್ನು ರೇಗಿಸಿ ಮುದ್ದಿಸುವಾಸೆ.
ನೀನು ನನಗೆಂದಿಗೂ ಮಗುವಿನಂತೆ, ನೀನು ರೇಗಿದರು, ಬೈದರೂ ನಾನು ಕೋಪಿಸಿಕೊಂಡರೂ ಅದು ಆ ಕ್ಷಣಕ್ಕೆ, ಮತ್ತೆ ಮರಳಿ ನಿನ್ನಲ್ಲಿಗೆ ಬರುತ್ತೇನೆ. ಆದದ್ದನು ಮರೆತಿರುತ್ತೇನೆ. ನೀನು ಹೇಳುವಂತೆ ನಾನು ಸದಾ ನನ್ನಯ ಬಗೆಗೆ ಹೇಳುತ್ತಿರುತ್ತೇನೆಂದರೇ, ನನಗೆ ನನ್ನ ಬಗ್ಗೆ ಹೆಚ್ಚಾಗಿ ಗೊತ್ತಿರುವುದರಿಂದ ನನ್ನ ಬಗ್ಗೆ ನಿನಗೆ ತಿಳಿಸಿಕೊಡಲೆತ್ನಿಸುತ್ತೇನೆ. ಅದು ಬಿಟ್ಟು ನನ್ನನ್ನು ನಾನು ಬಣ್ಣಿಸಲಲ್ಲ. ನಿನ್ನ ಸರ್ವವನ್ನು ಚಿಕ್ಕ ಮಗುವಿನಂತೆ ಶೃಷ್ರೂಶೆ ಮಾಡಬೇಕೆನ್ನುವುದು ನನ್ನಯ ಆಸೆ. ಇದು ಅತಿ ಎನಿಸಿದರೂ, ನಿನ್ನನ್ನು ನಾನು ನನ್ನ ಸರ್ವಸ್ವವಂತೆ ತಿಳಿದಿದ್ದೇನೆ, ಅದರಂತೆಯೇ ನಡೆದುಕೊಳ್ಳುತ್ತೇನೆ. ನೀನು ನನಗೆ ಹೇಳುವಂತೆ, ನಾನು ನಿನ್ನನ್ನು ದುರುಗುಟ್ಟಿ ಗಂಟೆಗಂಟೇಗಟ್ಟಲೇ ನೋಡುವುದು ನನ್ನ ಮನಸ್ಸಿನ ಸಮಧಾನಕ್ಕೇ ಹೊರತು, ಕಾಮಕೇಳಿಗಲ್ಲ. ಕಾಮುಕ ದೃಷ್ಟಿ ನನ್ನಲ್ಲಿಲ್ಲದೇ ಇದ್ದರೂ, ನಿನ್ನೆಡೆಗೆ ನಿನ್ನ ಸೌಂದರ್ಯದೆಡೆಗೆ ಸೆಳೆತವಿದೆ, ಅದನ್ನು ಅತಿಯಾಗಿ ಪ್ರೀತಿಸುವ, ಅದನ್ನು ಮೆಚ್ಚುವ, ಅದನ್ನೇ ಜಪಿಸುವ ಮನಸ್ಸಿದೆ. ನೀನು ನನಗೆ ಹೇಳಬಹುದು, ಮಾಡುವ ಕೆಲಸ ಬಿಟ್ಟು ಹೀಗೆ ಕುಳಿತು, ಕಥೆ ಬರೆದು, ಕಾದಂಬರಿ ಬರೆಯುತ್ತೇನೆಂದರೇ ನಿನ್ನಯ ಮುಂದಿನ ಬದುಕೇನು? ನಿನ್ನನ್ನು ನಂಬಿ ನಾನು ಬಂದರೇ ನಾಳೆ ನನ್ನ ಹೊಟ್ಟೆಗೆ ತಣ್ಣೀರು ಬಟ್ಟೇಯೇ ಗತಿಯೆಂದು. ನನಗೆ ನನ್ನಯ ಬಗೆಗೆ ಸಾಕಷ್ಟು ಭರವಸೆಯಿದೆ, ಭರವಸೆ ಎನ್ನುವುದಕ್ಕಿಂತ ಆತ್ಮವಿಶ್ವಾಸವಿದೆ, ನೀನು ನಿನ್ನನ್ನು ನಂಬಿದರೇ ಸಾಕು, ನನ್ನನ್ನು ನಂಬಿದಂತೆ. ನಾನು ನನ್ನನ್ನು ನಂಬುವುದಕ್ಕಿಂತ ನಿನ್ನನ್ನು ನಿನ್ನ ಆತ್ಮವಿಶ್ವಾಸವನ್ನು ನಂಬುತ್ತೇನೆ. ನಿನ್ನಲ್ಲಿರುವ ದೃಢವಿಶ್ವಾಸ ನನ್ನ ಆತ್ಮವಿಶ್ವಾಸವನ್ನು ಸಾವಿರ ಪಾಲು ಹಿಗ್ಗಿಸುತ್ತದೆ. ಮಿತಿ ಮೀರಿ ವರ್ತಿಸಬೇಡ, ಎಂದು ಹೇಳುವ ಒಂದು ಸಾಲು ನನ್ನನ್ನು ಅನೇಕಾ ಬಾರಿ ಹಿಡಿದು ಕಟ್ಟಿಸಿದೆ.
ಪ್ರೀತಿಯ ವಿಷಯದಲ್ಲಿ, ಪ್ರೇಮಕ್ಕೂ ಕಾಮಕ್ಕೂ ತೆಳ್ಳನೆಯ ವ್ಯತ್ಯಾಸವಿರುತ್ತದೆ. ಅದನ್ನು ಅರಿಯುವುದು ಅದಕ್ಕೆ ತಕ್ಕನಾಗಿ ವರ್ತಿಸುವುದು, ಬಹಳ ಕಷ್ಟವೆನಿಸುತ್ತವೆ. ಇದು ದೈನಂದಿನ ಚಟುವಟಿಕೆಗಳಲ್ಲಿಯೂ ಅಷ್ಟೇ, ಒಂದಕ್ಕೊಂದು ಇರುವ ಸಂಬಂಧಗಳನ್ನು ಅನೇಕ ಬಾರಿ ತಪ್ಪು ಗ್ರಹಿಸಿ, ಸಂಬಂಧಗಳು ಹಾಳಾಗಿಬಿಡುತ್ತವೆ. ಎಚ್ಚರಿಕೆ ಇದ್ದರೇ ಒಳ್ಳೆಯದು ಅಷ್ಟೇ. ನೀನು ನನಗೆ ಹೇಳುವ ಮಿತಿ ಮೀರಿ ವರ್ತಿಸಬೇಡವೆನ್ನುವುದರಲ್ಲಿ ಅರ್ಥವಿದೆ. ಪ್ರೀತಿಸುವವಳಿಗೆ ಮುತ್ತಿಕ್ಕುವುದು ಅತಿ ಎನಿಸುವುದಿಲ್ಲ, ಆದರೇ, ನಮ್ಮ ಕಣ್ಣುಗಳು ಮುಖವನ್ನು ಬಿಟ್ಟು ಸ್ವಲ್ಪ ಕೆಳಕ್ಕೆ ಬಿದ್ದರೇ ಅದು ಕೆಟ್ಟ ದೃಷ್ಟಿಯಾಗಿ ನಿನ್ನ ವಕ್ರ ದೃಷ್ಟಿಗೆ ಗುರಿಯಾಗಿ ನಾಲ್ಕಾರು ದಿನ ಮಾತುಕತೆ ನಿಂತು ಬಿಡುತ್ತದೆ. ಹರ್ಷದ ಕೂಳಿಗಾಗಿ ವರ್ಷದ ಕೂಳು ಕಳೆದುಕೊಂಡರು ಎನ್ನುವಂತೆ ನಾನು ನಿನ್ನಯ ಕಡೆಗೆ ಅದರಲ್ಲಿಯೂ ನಿನಗಿಷ್ಟವಿಲ್ಲದ ಕಡೆಗೆ ನಾನು ದಿಟ್ಟಿಸಿ ನೋಡಿ ಇನ್ನೂ ಯಾವತ್ತು ನೀನು ನನ್ನೊಡನೆ ಬರುವುದಿಲ್ಲವೆಂದರೇ ಆ ನೋವನ್ನು ತಡೆಯಲಾಗದು. ಮುನಿಸಿಕೊಂಡು ಹೋದ ಕ್ಷಣದಲ್ಲಿಯೇ ತತ್ತರಿಸಿದಂತಾಗುತ್ತದೆ. ಇವೆಲ್ಲವೂ ನನ್ನಯ ಜೀವನದಲ್ಲಿಯೂ ಆಗುತ್ತದೆಂದು ಮೊದಲು ಎನಿಸುತ್ತಿರಲಿಲ್ಲ, ಈಗ ಇದೆಲ್ಲವೂ ಆಗಿ ನಾನು ಒಪ್ಪಲೇಬೇಕಾಗಿದೆ. ಪ್ರೀತಿಯ ತೀವ್ರತೆ, ಪ್ರೀತಿಸುವ ಮನಸ್ಸು ಏನು ಮಾಡಿದರೂ ನಮಗೆ ಇಷ್ಟವಾಗುತ್ತದೆ. ಅದು ಯಾವ ಪರಿ ಇಷ್ಟವಾಗುತ್ತದೆಯೆಂದರೇ, ಪ್ರೀತಿಸುವ ಮನಸ್ಸು ಬಳಸುವ ಒಂದೊಂದು ಪದವೂ ನಮ್ಮ ಕಿವಿಯಲ್ಲಿ ಗುಂಯ್ ಎನ್ನುತ್ತದೆ. ಯಾರದರೂ, ಇಡಿಯಟ್ ಎಂದರೇ, ಲೋಫರ್, ಎಂದರೇ, ಚಪ್ಪರ್ ಎಂದರೇ ಪ್ರೀತಿ ಎನ್ನುವುದೆಲ್ಲ ಬರೀ ಟೈಂ ಪಾಸ್ ಎಂದರೇ ದಿಡೀರನೇ ನೀನೇ ನೆನಪಾಗುತ್ತೀಯ. ಕೆಲವೊಮ್ಮೆ, ತಿನ್ನುವ ಪದಾರ್ಥಗಳು, ಲೇಸ್, ಕುರ್ ಕುರ್ರೆ, ಕುಡಿಯುವ ಮಾಜ಼ಾ, ಕುಡಿಯುವ ನೀರಲ್ಲಿ ಕೂಡ ನಿನ್ನ ನೆನಪು ಕಾಡುತ್ತದೆ. ಒಮ್ಮೊಮ್ಮೆ ನೀ ಒಬ್ಬಳೇ ಕುಡಿಯುವುದು ಕೆಲವೊಮ್ಮೆ ನಾನು ನನ್ನ ಬಾಯಿಯಿಂದ ನಿನಗೆ ಕುಡಿಸುವುದು. ಇದು ಸ್ವಲ್ಪ ಅತಿಯಾಯಿತೆನಿಸಿದರೂ ಸತ್ಯವಲ್ಲವೇ?
ಕೆಲವೊಮ್ಮೆ ಒಂದಕ್ಕೊಂದು ಸಂಬಂಧಗಳು ಅರ್ಥವೇ ಆಗುವುದಿಲ್ಲ, ಇಡ್ಲಿ ಎಂದರೇ, ನನಗೆ ಅಂಗಡಿ ನೆನಪಾಗುವುದಿಲ್ಲ, ನಿನ್ನೊಡನೆ ತಿಂದು ಇಲ್ಲ. ಇಡ್ಲಿ ಎಂದರೇ, ಹೆಬ್ಬಾಳದ ರಸ್ತೆ ಬದಿಯಲ್ಲಿ ಮಾರುವವನ ಬಳಿಯಲ್ಲಿ ನಿಂತು ಇಡ್ಲಿಗಿಂತ ಹೆಚ್ಚು ಚಟ್ನಿ ತಿನ್ನುವಾಸೆ ಬರುತ್ತದೆ. ನಿನ್ನೊಂದಿಗೆ ಆಡಿದ ಪ್ರತಿ ಪದಗಳು ಹೀಗೆ, ನನ್ನೊಡನಿರುವಾಗ ಮರೆಯುವುದು ಕಷ್ಟವೆನಿಸುತ್ತದೆ. ನೀನು ಪ್ರತಿ ಬಾರಿ ಕೇಳುವಂತೆ ನಿನಗೆ ಬೇರೆ ಹುಡುಗಿಯರು ಇಷ್ಟವಿರಲಿಲ್ಲವೇ? ನಾನೇ ಮೊದಲನೆಯವಳೇ? ನನ್ನ ಕಿವಿಗೆ ಹೂವು ಇಡುವುದು ಬೇಡ. ನಾನು ಹೇಳಿದರೂ ಹೇಳದೇ ಇದ್ದರೂ, ಸತ್ಯ ಎಂದಿಗೂ ಸತ್ಯವಾಗಿರುತ್ತದೆ. ಬಹಳ ಚಿಕ್ಕ ವಯಸ್ಸಿನಿಂದಲೂ, ನಾನು ಸ್ವಲ್ಪ ಹುಚ್ಚುತನದ ಹುಡುಗ. ನನ್ನ ಸಮಯವನ್ನೆಲ್ಲಾ ನನಗೇ ಇಷ್ಟವಾಗುವ ವಿಷಯಕ್ಕೆ ಮೀಸಲಿಟ್ಟು ಬೆಳೆದವನು ನಾನು. ಇದರ ಪರಿಣಾಮ ನನ್ನ ತಂದೆಯೇ ನನ್ನ ಮೊದಲ ಶತ್ರು ಆಗಿದ್ದು. ಹುಡುಗಿಯರೆಡೆಗೆ ಆಕರ್ಷಿಸುವ ವಯಸ್ಸು ಹದಿನೇಳು ಇದ್ದಾಗ ಕೆಲವು ದಿನಗಳ ಮಟ್ಟಿಗೆ ನಮ್ಮೂರಿನ ಹುಡುಗಿಯೇ ಆದ, ಸ್ಮಿತಾಳೆಡೆಗೆ ಆಕರ್ಷಣೆ ಮೂಡಿದ್ದು ಸಹಜವೆನಿಸಿದರೂ, ಅದು ಹೆಚ್ಚು ದಿನ ಉಳಿಯಲಿಲ್ಲ. ಮತ್ತೂ ನಾನು ಅವಳಿಗೆ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲಾಗಲಿಲ್ಲ. ಅದೇ ಸಮಯಕ್ಕೆ ನಾನು ನನ್ನ ಪಿಯುಸಿಯಲ್ಲಿ ಡುಮುಕಿ ಹೊಡೆದಿದ್ದರಿಂದ ಇನ್ನು ಹೆಣ್ಣು ಮಕ್ಕಳೆಡೆಗೆ ಹೋಗಬೇಕಿದ್ದ ಮನಸ್ಸು ಖೋಡೇಸ್ ರಮ್ಮಿನೆಡೆಗೆ ಸೆಳೆಯಿತು. ನಾನೊಬ್ಬ ಅತ್ಯುತ್ತಮ ಕುಡುಕನಾದೆ. ಕುಡಿತದ ದೆಸೆಯಿಂದಲೋ ಅಥವಾ ದೇವರ ಅವಕೃಪೆಯಿಂದಲೋ ಪಿಯುಸಿ ಪಾಸಾಗಿ, ಮೈಸೂರಿಗೆ ಸೇರಿದವನು. ಹಗಲೆಲ್ಲಾ ರೂಮಿನಲ್ಲಿ ಕುಳಿತು ಓದುತ್ತಿದ್ದೆ, ಕಾಲೇಜಿಗೆ ಹೋದ ನೆನಪು ಬಹಳ ಕಡಿಮೆ. ಸಂಜೆಯಾಯಿತೆಂದರೇ ಕುಡಿತದ ಅಮಲಿನಲ್ಲಿ ಕಳೆಯುತ್ತಿದ್ದೆ. ಅದರ ನಡುವೆ ನನಗೆ ಪರಿಚಯವಾಗಿ ಆತ್ಮೀಯರಾದ, ಫಣೀಶ್ ಮತ್ತು ಚಂದನ್ ನಿಂದಾಗಿ ಪುಸ್ತಕದ ಕಡೆಗೆ ಮನಸ್ಸು ಬಾಗಿತು. ಪುಸ್ತಕಗಳ ಕಡೆಗೆ ಮನಸ್ಸು ಅದೆಷ್ಟು ಬದಲಾಯಿತೆಂದರೇ, ಪರಿಕ್ಷಾ ಸಮಯದಲ್ಲಿ ಕೂಡ ನಾನು ಇತರೆ ಪುಸ್ತಕಗಳನ್ನು ಓದುತ್ತಿದ್ದೆ. ಆದರೇ ಎಂದೂ ಸಮಯ ಹರಣಕ್ಕಾಗಿ ನಾನು ಓದಲಿಲ್ಲ, ಯಾವುದೋ ಹಿತಕ್ಕಾಗಿ ಓದತೊಡಗಿದೆ. ಅದರಲ್ಲೊಂದು ಸುಖ ಸಿಗತೊಡಗಿತು, ಈಗಲೂ ಅಷ್ಟೇ ನನಗೆ ಖುಷಿ ಆದರೂ, ದುಃಖವಾದರೂ ನಾನು ಪುಸ್ತಕದ ಮೊರೆಗೆ ಹೋಗುತ್ತೇನೆ.
ನನ್ನ ಬಿಎಸ್ಸಿ ವೇಳೆಯಲ್ಲಿ ನಾನು ಕಾಲೇಜಿಗೆ ಹೋದದ್ದು ಬಹಳ ಕಡಿಮೆ ದಿನವೆಂದರೂ ಸರಿಯೇ, ಕೇವಲ ಪ್ರಾಯೋಗಿಕ ತರಗತಿಗಳಿಗೆ ಮಾತ್ರ ಹೋಗುತ್ತಿದ್ದೆ, ಮಿಕ್ಕ ಸಮಯವೆಲ್ಲಾ, ನಾನು ನನ್ನ ರೂಮಿನಲ್ಲಿ, ಇಲ್ಲದಿದ್ದಲ್ಲಿ, ಸುತ್ತಾಡುವುದರಲ್ಲಿ, ಸಿನೆಮಾ ನೋಡುವುದರಲ್ಲಿ ಕಳೆಯುತ್ತಿದ್ದೆ. ನಾನು ಹಗಲು ಹೊತ್ತಿನಲ್ಲಿ ಕುಡಿದಿರುವುದು ತೀರಾ ಅಪರೂಪ. ಅಂತಹ ಸಮಯದಲ್ಲಿ ನನಗೆ ಒಂದು ಹುಡುಗಿ ಬಹಳ ಇಷ್ಟವಾಗಿದ್ದಳು. ಅವಳು ನನಗಿಂತ ಹಿಂದಿನ ತರಗತಿಯಲ್ಲಿದ್ದು, ನಮ್ಮ ಹಾಸನದ ಲೋಕೇಶ್ ಅವಳಿಗೆ ಸಿನಿಯರ್ ಆಗಿದ್ದ, ಒಂದು ದಿನ ಬರುತ್ತಿರುವಾಗ ಯಾರೋ ಇದು ಹುಡುಗಿ ಚೆನ್ನಾಗಿದ್ದಾಳೆ ಎಂದೆ. ಮುಗಿದೇ ಹೋಯಿತು, ಎರಡೇ ದಿನದಲ್ಲಿ ಅವಳ ಸಂಪೂರ್ಣ ಮಾಹಿತಿ ಅವಳ ಬಗೆಗಿನ ಚರ್ಚೆ ನಮ್ಮ ರೂಮಿನಲ್ಲಿ ನಡೆಯತೊಡಗಿತ್ತು. ಹುಡುಗರು ಅವಳನ್ನು ನೋಡುವುದಕ್ಕಾದರೂ ಬಾ ಕಾಲೇಜಿಗೆ ಎನ್ನುತ್ತಿದ್ದರು. ನಾನು ಕೆಲವು ದಿನ ಅವಳನ್ನು ಕಂಡು ಖುಷಿಪಟ್ಟರೂ ಅದೆಲ್ಲವೂ ಯಾಕೋ ನನಗೆ ಹಿಡಿಸಲಿಲ್ಲ. ಹಿಡಿಸಲಿಲ್ಲವೆನ್ನುವುದಕ್ಕಿಂತ ನಾನು ಕಾಲೇಜಿಗೆ ಹೋಗಿದ್ದ ದಿನಗಳು ಕೇವಲ ಬಂದ್ ಆಗಿದ್ದ ದಿನಗಳು ಅಷ್ಟೇ, ಆ ಹುಡುಗಿ ನನ್ನನ್ನು ನೋಡಿರುವುದು ಬಂದ್ ದಿನಗಳಲ್ಲಿ ಕ್ಲಾಸ್ ನಡೆಯುತ್ತಿರುವ ರೂಮಿಗೆ ಹೋಗಿ ಹುಡುಗರನ್ನು ಹೊರಕ್ಕೆ ಬರಲು ಹೇಳಿ ಕಾಲೇಜಿಗೆ ರಜೆ ಕೊಡಿಸುತಿದ್ದಾಗ ಮಾತ್ರ.ಅಂಥಹ ಅದ್ಬುತಾವಾದ ಪ್ರೋಫೈಲ್ ಇಟ್ಟುಕೊಂಡು ಪ್ರೀತಿ ಬೇಡುವುದಕ್ಕೆ ನನಗೆ ಮನಸ್ಸು ಬರಲಿಲ್ಲ. ಅದಾದ ಮೇಲೆ, ನಂತರ ನನ್ನ ಎಂಎಸ್ಸಿಗೆಂದು ಬೆಂಗಳೂರಿಗೆ ಬಂದ ಮೇಲೆ ನನಗೆ ಸಿಕ್ಕ ಸ್ನೇಹಿತವರ್ಗದಿಂದಾಗಿ ಓದುವ ನನ್ನ ಚಪಲಕ್ಕೆ ಇನ್ನೂ ಪ್ರೋತ್ಸಾಹ ಸಿಕ್ಕಹಾಗಯಿತು. ನಾನು ನನ್ನ ಕಥೆ ಕಾದಂಬರಿ, ಹೀಗೆ ಆಯಿತು ನನ್ನ ಜೀವನ. ಪ್ರೀತಿಸುವಂಥಹ ಹೆಣ್ಣುಮಕ್ಕಳು ನಮ್ಮ ಯುನಿವರ್ಸಿಟಿಯಲ್ಲಿ ಕಣ್ಣಿಗೇ ಕಾಣಲು ಇಲ್ಲ ಎನ್ನುವುದು ಸತ್ಯ. ಅದಾದ ನಂತರ, ಕೆಲಸ, ಬಹಳಷ್ಟು ದಿನದಿಂದ ಕಾದು ಕುಳಿತಿದ್ದ ನನ್ನ ಆಸೆಗಳು ಸಂಪೂರ್ಣ ಗರಿಬಿಚ್ಚಿದವು.
ಐಸೆಕ್ ನಲ್ಲಿ ಕೆಲಸಕ್ಕೆ ಸೇರಿದ ಮೇಲೆ ನನ್ನ ಕಾಲಿಗೆ ಚಕ್ರ ಬಂದವೆಂದರೂ ತಪ್ಪಿಲ್ಲ. ವಾರದ ಕೊನೆ ಸಿಕ್ಕರೇ ಸುತ್ತಾಡಲು ಹೊರಡುವುದು. ರಜೆ ಸಿಕ್ಕರೇ ಸಾಕು ಅಂತರ್ಜಾಲದಲ್ಲಿ ಹುಡುಕಿ ಎಲ್ಲ ಜಾಗವನ್ನು ಸುತ್ತಾಡತೊಡಗಿದೆ. ರಾಜ್ಯದ ಮೂಲೆ ಮೂಲೆಯನ್ನು ಸುತ್ತಾಡುವ, ಸಮಯ ಸಿಕ್ಕರೇ, ಕಥೆ ಕಾದಂಬರಿ, ಬರವಣಿಗೆಯಲ್ಲಿ ಮುಳುಗಿದ್ದ ನನಗೆ ಪ್ರೀತಿ ಆಗಲಿ, ಪ್ರೇಮವಾಗಲೀ ಬೇಕೆನಿಸಲಿಲ್ಲ. ಮದುವೆಯಾಗುವ ಹುಡುಗಿಯೇ ನನ್ನ ಪ್ರೇಯಸಿಯಾಗಿರಲೆಂದು ಬಯಸಿದೆ. ಅದರಂತೆ ಒಂದೆರಡು ಹುಡುಗಿಯರನ್ನು ನೋಡಿದೆ, ಕಾರಣಾಂತರಗಳಿಂದ ಅವು ಮುರಿದುಬಿದ್ದವು. ಅದರಿಂದ ನಾನು ಅಷ್ಟೇನೂ ವಿಚಲಿತನಾಗಲಿಲ್ಲ. ಕಾರಣ ಒಂದು ಹುಡುಗಿ ಅವರ ಮನೆಯವರು ಒಪ್ಪಲಿಲ್ಲ, ಇದು ಪ್ರೀತಿಯ ಪ್ರಸ್ತಾಪವಲ್ಲ, ಮನೆಯವರ ಕಡೆಯಿಂದ ಕೇಳಲು ಹೋದ ಮದುವೆ. ಮತ್ತೊಂದು ಕೂಡ ಹುಡುಗಿಯ ಮನೆಯವರು ಬಂದು ನಮ್ಮನ್ನು ಕೇಳಿದರು, ಹುಡುಗಿಯ ವಯಸ್ಸು ಬಹಳ ಚಿಕ್ಕದ್ದಾದ್ದರಿಂದ ನಾವು ಒಪ್ಪಲಿಲ್ಲ. ಅದು ಬಿಟ್ಟರೇ, ನನ್ನ ಸ್ನೇಹಿತೆಯೊಬ್ಬಳು ಲಿಂಗಾಯತ ಹುಡುಗಿಯೆಡೆಗೆ ನನಗೆ ಆಸೆ ಇತ್ತಾದರೂ, ಅವಳು ಅದನ್ನು ಒಪ್ಪಲಿಲ್ಲ, ಒಪ್ಪಲಿಲ್ಲವೆನ್ನುವುದಕ್ಕಿಂತ ಹೆಚ್ಚಾಗಿ ಆ ವೇಳೆಗೆ ಅವಳಿಗೆ ಮದುವೆ ನಿಶ್ಚಯವಾಗಿತ್ತು. ಆದ್ದರಿಂದ ನಾನು ಇಷ್ಟಪಡುವ ಹುಡುಗಿಯರು ನನಗೆ ಸಿಗುವುದಿಲ್ಲವೆಂದು, ಮದುವೆಯ ಯೋಗವಿದ್ದರೇ ಆಗಲೆಂದು ಸುಮ್ಮನಾಗಿದ್ದೆ. ಆ ಸಮಯದಲ್ಲಿ ನಾನೇನು ದುಃಖದಿಂದಿರಲಿಲ್ಲ. ಕುಡಿಯುವುದು, ಸೇದುವುದು, ವಾರಕ್ಕೊಂದು ಸಿನೆಮಾ, ಸುತ್ತಾಟ, ಓದುವುದು, ಬರೆಯುವುದು, ಸ್ವಲ್ಪ ದಿವಸ ಫೋಟೋಗ್ರಾಫಿ ಎಂದು ಸುತ್ತಾಡಿದೆ ಆದರೇ ಯಾವುದು ಕೈಗೂಡಲಿಲ್ಲ.
ಕೆಲವೇ ದಿನಗಳು ಮಾತ್ರ ನಾನು ದುಃಖಕ್ಕಾಗಿ ಕುಡಿದಿರುವುದು. ನನ್ನ ಇಡೀ ಜೀವನದಲ್ಲಿ ಎರಡು ಬಾರಿ ನಾನು ಅಧಿಕವಾಗಿ ಕುಡಿದು ನನ್ನ ಬಗೆಗೆ ನನಗೆ ಅಸಹ್ಯವಾಗಿದ್ದು. ಒಂದು ನನ್ನ ಪಿಯುಸಿಯಲ್ಲಿ ಶಿವರಾತ್ರಿ ರಾತ್ರಿಯಂದು ಅಂದಿನಿಂದ ಇಂದಿನ ತನಕ, ಹತ್ತು ವರ್ಷದಲ್ಲಿ ಒಂದೇ ಒಂದು ಶಿವರಾತ್ರಿಯಂದು ಕುಡಿಯಲಿಲ್ಲ. ಮೊನ್ನೆ ಮೊನ್ನೆ ನಿನಗಾಗಿ ಕುಡಿದೆ. ಆದರೂ ಕುಡಿದ ಮೇಲೆ ಬಹಳ ದುಃಖ, ಬೇಸರವಾಯಿತು. ಕುಡಿಯುವುದು ನನಗೆ ಮಾಮೂಲಿಯಾದರೂ ಕುಡಿಯುವುದಕ್ಕೆ ಕಾರಣ ನೀನಾಗಿದ್ದೆ, ನನ್ನ ಮೋಜಿಗೆ ಕುಡಿದು ಅದರ ಹೊರೆಯನ್ನು ಹೊಣೆಗಾರಿಕೆಯನ್ನು ನಿನ್ನ ಮೇಲಕ್ಕೆ ಹಾಕಿದ್ದು ನನ್ನಗೆ ಅನಾಗರಿಕತೆಯೆನಿಸಿತು. ನನ್ನಿಂದ ನನ್ನ ನಡುವಳಿಕೆಯಿಂದ ನಿನಗೆ ಯಾವುದೇ ರೀತಿಯ ಮುಜುಗರವೆನಿಸಬಾರದು. ಇಷ್ಟಕ್ಕೂ ನಾವು ಪ್ರೀತಿಸುವ ಜೀವಕ್ಕೆ ಕೊಡುವುದೇನು? ಇರುವಷ್ಟು ದಿನಗಳ ನಗು, ಎಲ್ಲದಕ್ಕೂ ನನ್ನ ಜೀವದ ಗೆಳೆಯನಿದ್ದಾನೆಂಬ ಭರವಸೆ, ವಿಶ್ವಾಸ. ಅದನ್ನು ನೀಡುವುದೇ ನನ್ನ ಪ್ರೀತಿಯ ಧ್ಯೇಯವಾಗಿರುವಾಗ, ನಾನು ಕುಡಿದು ನಿನ್ನನ್ನು ನೋಯಿಸುವುದು, ನನ್ನ ಸಣ್ಣ ಪುಟ್ಟ ಮಾತುಗಳಿಂದ ನಿನಗೆ ಮುಜುಗರವೆನಿಸುವುದು, ನನ್ನ ಸಣ್ಣ ಸಣ್ಣ ಕೋಪ ನಿನಗೆ ಬೇಸರ ತರುವುದು, ಇವೆಲ್ಲವೂ ಸಣ್ಣವೇ ಆದರೂ ಅದು ನಿರಂತರವಾದರೇ, ಎಲ್ಲಿಂದ ಎಲ್ಲಿಗೆ ಬಂದರೂ ನೆಮ್ಮದಿಯಿಲ್ಲದ ಬದುಕು ನನ್ನದೆನಿಸುವುದಿಲ್ಲವೇ ನಿನಗೆ. ನಾವು ನಮಗಾಗಿ ಬದುಕುವುದರಲ್ಲಿರುವ ಸಂತೋಷಕ್ಕಿಂದ ನಮ್ಮನ್ನು ಪ್ರೀತಿಸುವವರ ಅಥವಾ ಪ್ರೀತಿಸುವ ಮನಸ್ಸಿನವರಿಗಾಗಿ ಬದುಕಿ ನಿರಂತರ ಅವರಿಗಾಗಿ ಹಾರೈಸುವಲ್ಲಿರುವ ಖುಷಿಯೇ ಬೇರೆ. ಇಂಥಹುದೆಲ್ಲವೂ ಕಥೆಯಲ್ಲಿ ಕಾದಂಬರಿಯಲ್ಲಿ ಕಾಣುವುದಕ್ಕೇ ಮಾತ್ರ ಸರಿ ಎಂದು ಓದುವ ಪ್ರತಿಯೊಬ್ಬರೂ ಹೇಳಬಹುದು. ಜೀವನ ಪ್ರತಿಯೊಬ್ಬನಿಗೂ ವ್ಯಕ್ತಿಗತ ವಸ್ತು, ಇದು ಕೇವಲ ನನ್ನ ಜೀವನ ಅಲ್ಲಿನ ಪ್ರತಿಯೊಂದು ಕನಸು ಕೂಡ ನಾನು ಕಾಣುವ ಕಣ್ಣು ಮತ್ತು ಮನಸ್ಸಿಗೆ ಸೇರಿದ್ದು. ನನ್ನ ಕನಸೊಳಗೆ ಕೋಟಿ ಕೊಟ್ಟರೂ ನಿನ್ನನ್ನು ಬಿಟ್ಟು ಮತ್ತಾರೂ ಬರಲಾರರು. ಆದರೇ ನೀನೇ ನೀನಾಗೇ ನನ್ನಿಂದ ನನ್ನ ಕನಸಿನಿಂದ ದೂರಾಗಬೇಕೆಂದರೇ, ಬಹಳಷ್ಟು ಸಾರಿ ಎನಿಸುವಂತೇ, ಒಂದು ಮೊಬೈಲ್, ಒಂದು ಇಂಟರ್ನೆಟ್ ಚಾಟಿಂಗ್ ನಮ್ಮ ಪ್ರೀತಿಯ ಮೇಲೆ ಹಿಡಿತ ಸಾಗಿಸುತ್ತಾ? ನಿನ್ನ ನಂಬರ್ ಬದಲಾದರೇ ನೀನು ನನ್ನಿಂದ ದೂರಾದ ಹಾಗೇಯೇ? ಹೌದಾ, ನೀನು
ಭೌತಿಕವಾಗಿ, ದೈಹಿಕವಾಗಿ ದೂರಾಗಬಹುದೇ ಹೊರತು ನಿನ್ನಯ ಮೇಲಿನ ಪ್ರೀತಿ ಮರೆಯಾಗಲು ಸಾಧ್ಯವೇ? ಒಮ್ಮೊಮ್ಮೆ ನಮಗೆ ಎನಿಸಲೂ ಬಹುದು, ಪ್ರೀತಿಯ ಆಳವನ್ನು ಪರೀಕ್ಷಿಸಲೂ, ಆಳವನ್ನು ಅಳೆಯಲು ಸಾಧ್ಯವೇ? ಪ್ರೀತಿ ಆಂತರಿಕವಾಗಿ ಸವಿಯಬೇಕು, ಅನುಭವಿಸಬೇಕು. ಪ್ರೀತಿಯೆಂಬುದರ ಬಗೆಗೆ ಪ್ರತಿಯೊಬ್ಬನೂ ಒಂದೊಂದು ಬಗೆಯಾಗಿ ವ್ಯಕ್ತಪಡಿಸುತ್ತಾನೆ. ಪ್ರೀತಿ ಹೀಗೆ ಇರಬೇಕೆಂಬುದು ಸರಿ ಇಲ್ಲವಾದರೂ ಅದು ಪ್ರೀತಿಸುವ ಮನಸ್ಸಿಗೆ ನೋವುಂಟುಮಾಡಬಾರದು, ಸ್ವಾರ್ಥಕ್ಕೆ ಪ್ರೀತಿ ಬಲಿಯಾಗಬಾರದು.
ನಾನು ನಿನ್ನನ್ನು ಅತಿಯಾಗಿ ಪ್ರೀತಿಸುತ್ತೇನೆಂಬುದಕ್ಕೆ ಅನುಮಾನವಿಲ್ಲ.ಇದಕ್ಕೆ ಕಾರಣಗಳು? ಸದಾ ಕಾರಣವೇ ಇರುವುದಿಲ್ಲ. ಕೆಲವೊಂದು ವ್ಯಕ್ತಿಗಳು ಮಾತ್ರ ಅವರೊಂದಿಗೆ ಇರುವಾಗ ಒಂದು ಬಗೆಯ ನೆಮ್ಮದಿ ಸಿಗುತ್ತದೆ. ಅದು ನಿನ್ನೊಂದಿಗೆ ನನಗಿರುವುದು ಎನ್ನಬಹುದು.ನಾನು ನೀನು ಕಳೆದಿರುವ ಸಮಯವೆಲ್ಲಾ ಫೋನಿನಲ್ಲೇ ಎನ್ನಬೇಕು. ಅಥವಾ ಚಾಟಿನಲ್ಲಿರಬಹುದು. ನೀನೇ ಹೇಳುವ ಹಾಗೆ ನೀನು ಎಲ್ಲರೊಂದಿಗೂ ಹೀಗೆ ಮಾತನಾಡುತ್ತೀಯಾ? ಇಷ್ಟೊತ್ತು ಚಾಟ್ ಮಾಡುತ್ತೀಯಾ? ಇಷ್ಟೊತ್ತು ಫೋನಿನಲ್ಲಿ ಮಾತನಾಡುತ್ತೀಯಾ? ನಾನು ಫೋನಿನಲ್ಲಿ ಅತಿ ಹೆಚ್ಚು ಮಾತನಾಡತೊಡಗಿದ್ದು ನಿನ್ನೊಂದಿಗೆ ಸೇರಿದ ಮೇಲೆ ಎನಿಸುತ್ತದೆ. ನಾನು ಹೆಚ್ಚು ಮಾತನಾಡಿದರೂ, ಫೋನಿನಲ್ಲಿ ಆಗಲೀ, ಚಾಟಿನಲ್ಲಿಯೇ ಆಗಲಿ ಅಷ್ಟೊಂದು ಮಾತನಾಡುವುದಿಲ್ಲ. ನನ್ನ ಇಡೀ ಸಮಯ ಒಂದೋ ಬರವಣಿಗೆಗೆ ಇಲ್ಲವೇ ನಿದ್ದೆಗೆ ಮೀಸಲಿರುತ್ತದೆ. ನಾನು ಬೇರೆಯವರ ಪ್ರತಿಯೊಂದು ವಿಷಯಕ್ಕೆ ಸ್ಪಂದಿಸುವಂತೆಯೇ ನಿನಗೂ ಸ್ಪಂದಿಸಿದೆ. ಅದರಲ್ಲಿ ವಿಶೇಷತೆ ಏನೂ ಇರಲಿಲ್ಲ. ಆದರೇ ಬರಬರುತ್ತಾ ನಾನು ಸ್ವಲ್ಪ ಟ್ರ‍ಾಕ್ ಬದಲಾಯಿಸಿದೆ. ನಿನ್ನ ಪ್ರೀತಿಗೆ ಭಿಕ್ಷುಕನಾದೆ.ನಿನ್ನನ್ನು ನಾನು ಕಣ್ಣಾರೆ ಕಂಡ ದಿನವಂತೂ ನಾನು ನನ್ನನ್ನೇ ಮರೆತು ಹೋದೆ. ಇದು ಕೇವಲ ನಿನ್ನ ಚೆಲುವಿಗಾಗಿ ಅಲ್ಲ, ನಿನ್ನಲ್ಲಿರುವ ಪದಗಳೇ ಸಿಗದ ಸೌಂದರ್ಯ ಸಿರಿಗೆ. ಬಣ್ಣಿಸ ಹೊರಟಾಗ ನಾನು ನಿನ್ನನ್ನು ಅದೆಷ್ಟು ಬಣ್ಣಿಸಲಿ ಎನಿಸುತ್ತದೆ. ನಾನು ಪದೇ ಪದೇ ಅದನ್ನೇ ಹೇಳುತ್ತಾ ಹೋದರೇ ನಿನಗೆ ಮುಜುಗರವೆನಿಸಬಹುದು ಅಥವಾ ಇದು ಇವನ ಮಾಮೂಲಿ ಎನಿಸಲುಬಹುದು.ನಾನು ನಿನಗೆ ನಿನ್ನಯ ಬಗೆಗೆ ಎಷ್ಟೇಷ್ಟೋ ಕಾದಂಬರಿ, ಕಥೆಗಳನ್ನು ಬರೆಯಲಿಚ್ಚಿಸುತ್ತೇನೆ. ಆದರೇ ಎಲ್ಲಿಯೂ ಒಂದು ಮಿತಿಮೀರಿ ಬರೆಯಬಾರದಲ್ಲವೇ? ನಿನ್ನ ಸೌಂದರ್ಯದ ಮೌಲ್ಯ ನನಗೆ ತಿಳಿದಿದೆ. ಅದನ್ನೆಲ್ಲಾ ಇಲ್ಲಿ ಬರೆಯಲೇ? ಬರೆದರೂ ತಪ್ಪಿಲ್ಲ, ಬರೆಯದೇ ಇದ್ದರು ತಪ್ಪಿಲ್ಲ ಏಕೆಂದರೇ ನಾನು ನಿನಗೆ ಹಲವಾರು ಸರಿ ವಿವರಿಸಿದ್ದೇನೆ, ಬಣ್ಣಿಸಿದ್ದೇನೆ, ಹೊಗಳಿದ್ದೇನೆ, ಕೆಲವೊಮ್ಮೆ ಬೈಯ್ದಿದ್ದೇನೆ. ಬೈದಿರುವುದು ನಿನ್ನ ದೇಹದ ತೂಕದ ವಿಷಯ ಬಂದಾಗ ಮಾತ್ರ. ನಿನ್ನನ್ನು ನಾನು ನಿನ್ನ ನೈಸರ್ಗಿಕ ಸೌಂದರ್ಯದಿಂದ ನೋಡಲು ಬಯಸುತ್ತೇನೆ. ನಿನ್ನ ಸೌಂದರ್ಯಕ್ಕೆ ಯಾವುದೇ, ಅಲಂಕಾರತೆ ಅವಶ್ಯಕತೆಯಿಲ್ಲ. ಹಾಗೆಂದೂ ನೀನು ಬ್ಯೂಟಿ ಪಾರ್ಲರ್ ಗೆ ಹೋಗುವುದು ಬೇಡವೆಂದಲ್ಲ. ಮೂಲಭೂತವಾದ ಸೌಂದರ್ಯ ಪ್ರಜ್ನೆ ಇರಲೇಬೇಕು. ಕಣ್ಣಿನ ಉಬ್ಬು ತೆಗೆಸುವುದು ಬೇಡವೆಂದರೇ, ಕಾಡಿನ ರಾಣಿಯರಂತಾಗುವುದಿಲ್ಲವೇ ಹೆಣ್ಣು ಮಕ್ಕಳು. ಹಾಗೆಂದು, ಅತಿಯಾದ ಮೇಕ್ ಓವರ್ ಬೇಕೇ? ಅದು ಅವಶ್ಯಕತೆಯಿಲ್ಲ.
ತಲೆ ಕೂದಲು ಈಗ ಇರುವುದೇ ಚೆನ್ನಾಗಿರುವಾಗ, ಅದನ್ನು ಉದ್ದ ತುಂಡ ಮಾಡಲೆತ್ನಿಸುವುದು ಬೇಡ. ನಿನ್ನ ಬಣ್ಣಕ್ಕೆ ಮೆಚ್ಚುವಂತೆ ಕೂದಲಿನ ಬಣ್ಣವನ್ನು ಹಾಕಿಸಿಕೊಂಡರೂ ತಪ್ಪಿಲ್ಲ ಆದರೇ ಇರುವುದೇ ಚೆನಾಗಿರುವಾಗ ಅದೆಲ್ಲವೂ ಏಕೆ? ಹುಡುಗಿಯರ ಸೌಂದರ್ಯದ ಬಗೆಗೆ ಯಾರದರೂ ತಲೆ ಹಾಕಿದರೇ ಕೋಪ ಬರುತ್ತದೆ. ಆದರೂ ಅಲ್ಲಿರುವ ಆಕರ್ಷಣೆಯನ್ನು ನಾವು ಮೆಚ್ಚಿ ಅದನ್ನು ಹೇಳಬೇಕು ಅದು ನಮ್ಮ ಅಭಿರುಚಿಯಲ್ಲವೇ?ನಿನ್ನ ಕಣ್ಣುಗಳು, ಅಲ್ಲಿರುವ ಸೆಳೆತ, ಕಣ್ಣು ಉಬ್ಬಿನ ಎಳೆಗಳು, ಅದಕ್ಕೆ ತಕ್ಕಂತಿರುವ, ನಿನ್ನಯ ಸುಂದರ ಹಣೆ, ಮುಖಕ್ಕೆ ಮೆರಗು ತರುವ ಕೆನ್ನೆ, ಮುತ್ತಿಕ್ಕಬೇಕೆನ್ನುವ ಗದ್ದ, ಚೆಲುವಿಗೆ ಚೆಲುವೇ ನಾಚುವಂತಹ ನಿನ್ನಯ ತುಟಿಗಳು, ತುಟಿಗಳಲ್ಲಿ ಒಂದಕ್ಕೊಂದು ಪೈಪೋಟಿ. ನನಗೂ ಎನಿಸುವುದು ಹಾಗೇಯೇ, ನಿನ್ನ ಎರಡು ತುಟಿಗಳಲ್ಲಿ ಅತಿ ಹೆಚ್ಚು ಸುಂದರವಾಗಿರುವುದು ಯಾವುದು. ಎರಡು ತುಟಿಗಳು ಒಂದಕ್ಕೊಂದು ಮಧುರವಾಗಿದೆಯಲವೇ? ಬಲು ಅಪರೂಪದ ನಿನ್ನಯ ಕುತ್ತಿಗೆಯಂತೂ ನಾನು ಅದೆಷ್ಟೂ ಭಾರಿ ಬಳಸಿ ಬಳಸಿ ಮುತ್ತಿಕ್ಕುವ ಹಿಂದೆಯಿಂದ ಬರದಪ್ಪಿ ಸೆಳೆಯುವಾಸೆಯೂ ಮೂಡುತ್ತದೆ. ಇದೆಲ್ಲವೂ ಬಹಿರಂಗವಾಗಿ ಹೇಳುವುದಲ್ಲ, ಆದರೂ ಭಾವನೆಗಳನ್ನು ತಡೆಯುವುದು ಸರಿಯಿಲ್ಲ. ನಿನ್ನಯ ಉದ್ದನೆಯ ಕೈಗಳು, ಮಿಂಚಿನಂತಹ ಕೈಬೆರಳುಗಳು ನನ್ನನ್ನು ನನ್ನ ಕಣ್ಣನ್ನು ಆಗ್ಗಾಗ್ಗೆ ಕುಕ್ಕುತ್ತಿರುತ್ತವೆ. ಉದ್ದನೆಯ ಕೈಗಳು ಬುದ್ದಿವಂತಿಕೆಯ ಲಕ್ಷಣವಂತೆ, ನೀನು ಬಹಳ ಬುದ್ದಿವಂತೆ ಅದರಲ್ಲಿ ಅನುಮಾನವಿಲ್ಲ. ಅದರಂತೆಯೇ ಉದ್ದನೆಯ ಬೆರಳುಗಳು ಒಳ್ಳೆಯತನದ ಉದಾರತನದ ಸಂಕೇತ. ನಿನ್ನಲ್ಲಿರುವ ಒಳ್ಳೆಯತನಕ್ಕೆ, ಪರರಿಗೆ ಸ್ಪಂದಿಸುವ ಮನಸ್ಸಿಗೆ ಇದು ಸಾಕ್ಷಿ. ನಿನ್ನಯ ಕಾಲ್ಬೆರಳುಗಳು ಅಷ್ಟೇ, ಅವು ನನ್ನ ಕಂಗಳನ್ನು ಆಗ್ಗಾಗ್ಗೆ ಸೆಳೆಯುತ್ತಲೇ ಇರುತ್ತದೆ. ನಿನ್ನಯ ಸೌಂದರ್ಯದ ಸೆಳೆತ ಹೇಗಿದೆಯೆಂದರೇ, ನಾನು ಅತಿ ಹೆಚ್ಚು ಇಷ್ಟ ಪಡುವ, ಮಳೆಯ ಸಂಜೆಗಳು,ನದಿ ದಂಡೆಯ ಬದಿಯಲ್ಲಿನ ಸಂಜೆ, ಕಡಲ ತೀರದಲ್ಲಿನ ಸಣ್ಣ ನಡೆ, ರಾತ್ರಿಯ ಒಂದು ಲಾಂಗ್ ರೈಡ್, ಅತಿ ಎತ್ತರ ಮೇಲೆ ಕುಳಿತು ಕಳೆಯುವ ಚಳಿಯ ಒಂದು ದಿನ ಇವೆಲ್ಲವೂ ನಿನ್ನಯ ಮೂರು ಪದಗಳಿಗೆ ಸಮನಾಗುವುದಿಲ್ಲ. ನಿನ್ನ ಬಾಯಿಂದ ಬರುವ, ಐ ಲವ್ ಯೂ ಎಂಬ ಪದಗಳು ನನ್ನ ಸಂತೋಷವನ್ನು ನೂರು ಪಟ್ಟು ಹೆಚ್ಚಿಸುತ್ತವೆ. ಇದಕ್ಕಿಂದ ಖುಷಿ ಮತ್ತೊದಿದೆಯೇ? ಸದ್ಯಕ್ಕೆ ಇಷ್ಟು ಸಾಕಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...