13 ಅಕ್ಟೋಬರ್ 2010

ನೋಡುವ ದೃಷ್ಟಿಯಂತೆ ಕಾಣುವ ವಸ್ತು!!!

ಮೊನ್ನೆ ನನ್ನ ಗೆಳತಿ ಬಿಬಿಎಂಪಿ ಯವರು ಬೆಂಗಳೂರಿನ ಗೋಡೆಯ ಮೇಲೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚಮಾಡಿ ಸುಂದರವಾದ ಚಿತ್ರಗಳನ್ನು ಬರೆಸಿದ್ದಾರೆ. ಆದರೇ, ಪ್ಯಾಂಟು ಭದ್ರವಿಲ್ಲದ ಗಂಡಸರು ಅಲ್ಲೇ ನಿಂತು ತಮ್ಮ ಮೂತ್ರವನ್ನು ಸುರಿಸುತ್ತಾರೆಂಬುದು ಅವರ ಆರೋಪ. ಅದಕ್ಕೆ ಹಲವಾರು ಮಿತ್ರರು ದನಿಗೂಡಿಸಿ, ನಾವು ಅದು ಮಾಡಬೇಕು ಇದು ಮಾಡಬೇಕೆಂದೆಲ್ಲಾ ಸಲಹೆ ನೀಡಿದ್ದಾರೆ ಮತ್ತು ನಮ್ಮ ಜನರನ್ನು ಬೈಯ್ದಿದ್ದಾರೆ. ಮೂತ್ರ ವಿಸರ್ಜನೆಯ ವಿಷಯದಲ್ಲಿರುವ ಕಷ್ಟವನ್ನು ಅನುಭವಿಸಿದವನು ಮಾತ್ರ ಹೇಳಬಲ್ಲ. ಹೆಂಗಸರಿಗೂ ಗಂಡಸರಿಗೂ ಈ ವಿಷಯದಲ್ಲಿ ಹೋಲಿಕೆ ಬೇಡ. ಗಂಡಸರು ಮೂತ್ರವನ್ನು ತಡೆಯುವುದು ಬಹಳ ಕಷ್ಟದ ಕೆಲಸ, ಮತ್ತು ಗೋಡೆಯ ಮೇಲೆ ಹೋಗಿ ಮಾತ್ರ ಮಾಡುವವನಾರೂ ಅಲ್ಲಿರುವ ಚಿತ್ರಗಳ ಬಗೆಗೆ ಚಿಂತಿಸುವುದಿಲ್ಲ ಅದನ್ನು ಒಪ್ಪುತ್ತೇನೆ. ಹಾಗೆಂದು ಮೂತ್ರವನ್ನು ತನ್ನ ಪ್ಯಾಂಟಿನೊಳಗೆ ಬಿಟ್ಟಿಕೊಳ್ಳಬೇಕೇ? ಅವರು ಅಪಾದಿಸುವಂತೇ, ಮೆಜೆಸ್ಟಿಕ್ ಬಿಟ್ಟರೇ, ಸುತ್ತಾ ಮುತ್ತಾ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ನನಗೆ ಕೆಲಸವಿದ್ದು, ಗಾಂಧಿನಗರದಲ್ಲಿದ್ದರೇ ಕೆಲಸ ಬಿಟ್ಟು ಮೆಜೆಸ್ಟಿಕ್ ಗೆ ಬಂದು ಹೋಗಬೇಕೇ? ಅಥವಾ ಅಲ್ಲಿಯೇ ರಸ್ತೆಯ ಬದಿಯಲ್ಲಿ ಮುಗಿಸಬೇಕೇ? ಇದು ನಿವೇ ನಿರ್ಧರಿಸಿ. ದಾರಿಯಲ್ಲಿ ಮನ ಬಂದಂತೆ ಒಂದನ್ನು ಮುಗಿಸುವುದು ತಪ್ಪೆಂದಾದರೇ, ಕಾರಿನಲ್ಲಿ ಕುಳಿತು ಕುಡಿಯುವುದು? ಪಾರ್ಕಿನಲ್ಲಿ ಕುಳಿತು ಮೈಯ್ಯಿಗೆ ಮೈಯ್ಯಿ ಉಜ್ಜುವುದು? ತುಟಿಗೆ ತುಟಿ ಒತ್ತುವುದು? ಇರುವ ಪಾರ್ಕ್ ಗಳೆಲ್ಲಾ ಲಾಡ್ಜ್ ಗಳಾಗಿವೆ. ಕಂಡ ಕಂಡ ಕಡೆಗೆ ನಿರೋಧ್ ಸಿಗುತ್ತವೆ, ಇವೆಲ್ಲದರಿಂದ ನಷ್ಟವಿಲ್ಲವೇ? ರಸ್ತೆ ಬದಿಯಲ್ಲಿ ಅವರು ಮಾಡುವುದು ಸರಿ ಎಂದು ಹೇಳುವುದಿಲ್ಲ, ಆದರೇ ಅದಕ್ಕೆ ಪರಿಹಾರಬೇಕಲ್ಲವೇ? ಪ್ರತಿಯೊಂದು ಏರಿಯಾಗಳಲ್ಲಿ ಒಂದು ಉಚಿತ ಶೌಚಾಲಯ ಕಟ್ಟಿಸಿದರೇ ತಪ್ಪಾಗುತ್ತದೆಯೇ? ವಾರ್ಡ್ ಗೆ ಎರಡರಂತೆ ಕಟ್ಟಿಸಿದರೂ ನಾಲ್ಕು ನೂರು ಶೌಚಾಲಯಗಳು ಸಾಕು. ಒಂದು ಶೌಚಾಲಯಕ್ಕೆ ಐವತ್ತು ಸಾವಿರದಂತೆ ಲೆಕ್ಕ ಹಾಕಿದರೂ, ಒಂದು ಕೋಟಿ ಅಥವಾ ಎರಡು ಕೋಟಿಗಳಲ್ಲಿ ಸಂಪೂರ್ಣ ಬೆಂಗಳೂರನ್ನು ಸುಂದರಗೊಳಿಸಬಹುದು. ಗೋಡೆಗಳಿಗೆ ಬಣ್ಣ ಹೊಡೆಸಿರುವುದು ಬಣ್ಣದ ಕಂಪನಿಯವನಿಗೆ ಲಾಭವಾಯಿತೇ ಹೊರತು, ಜನಕ್ಕಲ್ಲ.
ಅದೇನೆ ಇರಲಿ, ನಮ್ಮ ಹಲವಾರು ಜನಕ್ಕೆ ನಮ್ಮ ದೇಶದ ಬಗೆಗೆ ನಮ್ಮ ಜನರ ಬಗೆಗೆ ಅದರಲ್ಲಿಯೂ ಬಡವರ ಬಗೆಗೆ ಒಂದು ಬಗೆಯ ಅಸಡ್ಡೆ. ಇದು ವ್ಯಕ್ತಿಗತ ಅಭಿಪ್ರಾಯ. ಆದರೇ ನಾವು ಒಂದನ್ನು ಗಮನಿಸಬೇಕು. ನಾನೊಬ್ಬ ವಿದ್ಯಾವಂತ ಸಮಾಜದಲ್ಲಿರುವಾಗ ನಾನು ಹೆಚ್ಚು ಯೋಚಿಸಬೇಕಿರುವುದು ಅವಿದ್ಯಾವಂತ ಸಮಾಜದ ಬಗೆಗೆ, ಯಾಕೆಂದರೇ ಅವರನ್ನು ನನ್ನಂತೆಯೇ ಮಾಡಿ ನನಗಿರುವ ಸೌಕರ್ಯಗಳೆಲ್ಲವೂ ಅವನಿಗೆ ಸಿಗುವಂತೇ ಮಾಡಬೇಕಾಗುತ್ತದೆ. ನಿಮಗೊಂದು ಉದಾಹರಣೆ ನೀಡುತ್ತೇನೆ. ನಾವು ತಿಂಗಳಿಗೆ ಶೌಚಾಲಯಕ್ಕೆಂದು ಕಟ್ಟುವ ತೆರಿಗೆಯನ್ನು ನೀವೆಂದಾದರೂ ಗಮನಿಸಿದ್ದೀರಾ? ಸ್ವಂತ ಮನೆಯಲ್ಲಿರುವ ಶೌಚಾಲಯಕ್ಕೆ ಕಟ್ಟುವ ತೆರಿಗೆ ೨೫ ರೂಪಾಯಿಗಳು. ಒಟ್ಟು ನಾಲ್ಕು ಅಥವಾ ಐದು ಜನರಿಂದರೇ ಪ್ರತಿ ತಲೆಗೆ ೫ರೂಪಾಯಿ ಒಂದು ತಿಂಗಳಿಗೆ. ಆದರೇ, ಶೌಚಾಲಯವಿಲ್ಲದವರು ವೆಚ್ಚಿಸುವುದು ನಿಮಗೆ ತಿಳಿದಿದೆಯಾ? ಪ್ರತಿ ಸಲಕ್ಕೆ ಎರಡು ರೂಗಳು ಒಬ್ಬನಿಗೆ. ಎಂದರೇ, ಒಂದು ಮನೆಗೆ ದಿನಕ್ಕೆ ೨೫ರಿಂದ ಮೂವತ್ತು ರೂಪಾಯಿಗಳು. ತಿಂಗಳಿಗೆ ೯೦೦-೧೦೦೦ರೂಪಾಯಿಗಳನ್ನು ಶೌಚಾಲಯಕ್ಕೆ ಬಳಸಿದರೇ, ಅವನ ತಿಂಗಳ ವರಮಾನ ಹತ್ತು ಸಾವಿರವಿದ್ದರೂ ಶೇಕಡ ಹತ್ತರಷ್ಟು ಅಲ್ಲಿಗೆ ವ್ಯಯಿಸಲಾಗುತ್ತಿದೆ. ಒಬ್ಬ ಸರ್ಕಾರಿ ನೌಕರನ ಅಥವಾ ಯಾವುದೇ ಉದ್ಯೋಗಿಯ ಮನೆಬಾಡಿಗೆ ಭತ್ಯೆಯನ್ನು ಬಡವನೆನಿಸಿಕೊಂಡವನು ಶೌಚಾಲಯಕ್ಕೆಂದು ವ್ಯಯಿಸಬೇಕು ಇದಲ್ಲವೇ ಭವ್ಯಭಾರತದ ನಿಯಮಗಳು. ಇದರಲ್ಲಿ ಎಲ್ಲರನ್ನು ಸೇರಿಸಲಾಗುವುದಿಲ್ಲ ಅನೇಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವಾರು ಜನರು ಸೌಲಭ್ಯ ಕೊಟ್ಟರೂ ಬಳಸದೇ ಅಥವಾ ದುರ್ಬಳಕೆ ಮಾಡಿಕೊಂಡಿದ್ದಾರೆ ಇದಕ್ಕೊಂದು ಉದಾಹರಣೆ, ಶೌಚಾಲಯ ಕಟ್ಟಲು ಮತ್ತು ಗೋಬರ್ ಗ್ಯಾಸ್ ಕಟ್ಟಿಸಲು ಸರ್ಕಾರ ಕೊಟ್ಟ ಧನಸಹಾಯ.
ಇವೆಲ್ಲವೂ ಒಂದು ಕಡೆಗಿರಲಿ, ನಾನು ವಾರಕ್ಕೊಮ್ಮೆಯಾದರೂ, ಮೈಸೂರಿಗೆ ಹೋಗುತ್ತಿರುತ್ತೇನೆ. ಹೆಚ್ಚಿನ ಸಲ ಹೋಗುವುದು ಬರುವುದು ರೈಲಿನಲ್ಲಿಯೇ. ಸಾಧಾರಣವಾಗಿ ಎ಼ಕ್ಷಪ್ರೆಸ್ ರೈಲನ್ನು ಬಳಸುತ್ತೇನೆ. ಒಮ್ಮೊಮ್ಮೆ ತಡವಾದರೇ ಪ್ಯಾಸೆಂಜರ್ ನಲ್ಲಿ. ನಮ್ಮ ಜನರ ನಡುವಳಿಕೆಯ ಬಗೆಗೆ ನಿಜಕ್ಕೂ ಬರೆಯಬೇಕೆಂದರೇ ಬರೆಯಲೇಬೇಕಾದದ್ದು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುವ ಕುಟುಂಬಗಳ ಬಗೆಗೆ. ಇಲ್ಲಿ ನಾನು ಯಾವುದೇ ಜಾತಿ ಅಥವಾ ಧರ್ಮವನ್ನು ಅಲ್ಲಗೆಲೆಯುತ್ತಿಲ್ಲ. ಆದರೂ ಸಾಮಾನ್ಯ ಪ್ರಜ್ನೆಯೂ ಇಲ್ಲದಂತೆ ವರ್ತಿಸುವುದು ಇಲ್ಲಿಯೇ. ರೈಲಿನಲ್ಲಿ ಪ್ರಯಾಣಿಸುವುದು ಕೇವಲ ಮೂರು ಘಂಟೆಗಳು, ತಿನ್ನುವುದು, ಕುಡಿಯುವುದು ಸಾಮಾನ್ಯವೆನ್ನಲೂ ಬಹುದು. ಆದರೇ, ಅದಕ್ಕೊಂದು ನೀತಿ ನಿಯಮ ಬೇಡವೇ? ನಾನು ಕಂಡಂತೆ, ಪ್ಯಾಸೆಂಜರ್ ರೈಲನ್ನು ಹೆಚ್ಚು ಬಳಸುವುದು ಮುಸ್ಲಿಂ ಭಾಂಧವರು. ಮನೆಯಲ್ಲಿರುವ ಅಷ್ಟೂ ಜನರನ್ನೂ ಎರಡೂ ಸೀಟಿನಲ್ಲಿ ಕುಳ್ಳಿರಿಸಿದರೇ ಅಲ್ಲಿಯೇ ಒಂದು ಮಸೀದಿ ಮಾಡಿ ನಮಾಝ್ ಮಾಡಿಸಲೂಬಹುದು ಅಷ್ಟು ಜನರಿರುತ್ತಾರೆ. ಅದು ಬಿಟ್ಟರೇ, ಎ಼಼ಕ್ಷಪ್ರೆಸ್ ರೈಲನ್ನು ಕೂಡ ತಲ್ಲುವ ಗಾಡಿ ಮಟ್ಟಕ್ಕೆ ಮಾಡುವುದು ನಮ್ಮ ಸೇಠುಗಳು ಅಥವಾ ಮಾರವಾಡಿಗಳು. ಇವರು ಅಷ್ಟೇ ಒಂಟಿ ಸೇಠುಗಳು ಹೋಗುವುದೇ ಇಲ್ಲ ಇಡೀ ಊರಿಗೆ ಊರೇ ಇವರ ಜೊತೆಯಲ್ಲಿ ಹೊರಡುತ್ತದೆ. ಹೋಗುವಾಗ ಬರುವಾಗ ಇವರನ್ನು ಕಳುಹಿಸಲು ಸ್ವಾಗತಿಸಲು ತಂಡವೇ ಇರುತ್ತದೆ. ಅಲ್ಲಿ ಹಬ್ಬದ ವಾತವಾರಣಕ್ಕಿಂತ ಸಂತೆಯಂತೆಯೇ ಕಾಣುತ್ತದೆ. ಆಚರಣೆಯಿರಬೇಕು ಆದರೇ ಇವರದ್ದು ಆಚರಣೆಯಂತೆ ಕಾಣುವುದಿಲ್ಲ ಗದ್ದಲದಂತೆ ಕಾಣುತ್ತದೆ.
ನಿನ್ನೆ ಮುಂಜಾನೆ ಐದು ಗಂಟೆಯ ರೈಲಿಗೆಂದು ಹೊರಟೆ, ಹೊರಟವನು ಕಾವೇರಿ ಎ಼ಕ್ಷಪ್ರೆಸ್ ಹತ್ತು ಮೇಲಿನ ಬರ್ತಿನಲ್ಲಿ ಮಲಗಿದೆ. ಮುಂಜಾನೆ ಆರು ಮೂವತ್ತಾಗಿರಬಹುದು, ಇಡೀ ರೈಲಿನಲ್ಲಿ ಸಂತೆಯಲ್ಲಿದ್ದಂತೆ ಗದ್ದಲ ಶುರುವಾಯಿತು. ಅವರನ್ನು ಕರೆಯುವುದು ಇವರನ್ನು ಕರೆಯುವುದು. ನಾನು ದಿಡೀರನೇ ಗಾಬರಿಯಿಂದ ಕಣ್ಣು ತೆರೆದೆ, ಇದೊಲ್ಲೆ ಕಥೆಯಾಯಿತಲ್ಲಪ್ಪ ಎಂದು ಪ್ರಯತ್ನದಿಂದ ಕಣ್ಣು ಮುಚಿದೆ. ಆದರೂ ಕಣ್ಣಿಗೆ ನಿದ್ದೆ ಹತ್ತಲು ಬಿಡುತ್ತಿಲ್ಲ. ಕೋಪ ಬರಲಾರಂಬಿಸಿತು. ನನ್ನ ಕೋಪ ಅದು ಉಪಯೋಗಕ್ಕೆ ಬರುವುದಿಲ್ಲ. ಸರಿ ಮೊಬೈಲ್ ತೆಗೆದು ಹಾಡು ಕೇಳೋಣವೆಂದರೂ ಇವರ ಮಾತಿನ ಶಬ್ದದ ಮುಂದೆ ಅಶ್ವತ್ ಅವರ ಹಾಡೂ ಕೇಳಿಸುತ್ತಿರಲಿಲ್ಲ. ನನ್ನ ಹಣೆಬರಹವೇ, ಎಂದು ಅವರ ಮುಖವನ್ನಾದರೂ ನೋಡೋಣವೆಂದು ಕೆಳಗೆ ಬಾಗಿದೆ. ಬೆಳ್ಳಿಗ್ಗೆ ಏಳು ಘಂಟೆಗೆ ಪುಣ್ಯಾತ್ಗಿತ್ತಿಯರು ಖಾರಸೋಗೆ (mixtures), ತಿನ್ನುತ್ತಿದ್ದಾರೆ. ಇವರೆಲ್ಲರೂ ನಾಗರೀಕ ಸಮಾಜದ ಮಹಾಮಣಿಯರು, ಅಯ್ಯೋ ಹೆಂಗಸರೇ ಎಂದು ಕುಳಿತರು, ಮಲಗಿದರು, ಮಗ್ಗಲು ಬದಲಾಯಿಸಿದರೂ ನನ್ನ ನಿದ್ದೆಯೆಂಬುದು ಬರಲೇ ಇಲ್ಲ. ನಾನು ಬೆಳಗಿನ ರೈಲಿಗೆ ಹತ್ತುವುದು, ರೈಲು ಖಾಲಿ ಇರುತ್ತದೆ, ಕನಿಷ್ಟವೆಂದರೂ ಎರಡು ಗಂಟೆ ನಿದ್ದೆ ಮಾಡಬಹುದೆಂದು ಇವರು ನನ್ನ ನಿದ್ದೆಯನ್ನು ಕದ್ದರು, ಕದ್ದರೋ ದೋಚಿದರೋ ಅಂತು ನನ್ನ ನೆಮ್ಮದಿಗೆ ಭಂಗ ಮಾಡಿದರು. ಬೆಳ್ಳಿಗ್ಗೆ ಬೆಳ್ಳಿಗ್ಗೆ ಕಾಟವಿರುವುದು ಬೆಂಗಳೂರಿನಿಂದ ಹೈದರಾಬಾದಿಗೆ ಹೋಗುವ ಸಂಪರ್ಕ ಕ್ರಾಂತಿ ರೈಲಿನ್ನಲಿ, ಅದು ಹೈದರಾಬಾದಿನ ಮೂಲಕ ದೆಹಲಿಗೆ ಹೋಗುತ್ತದೆ. ಅದರಲ್ಲಿ ಮುಂಜಾನೆ ಆರು ಗಂಟೆಗೆ ಚಕ್ಕಗಳು, ಒಂಬತ್ತುಗಳು, ಮಾಮಾಗಳು ನೀವು ಯಾವುದನ್ನು ಬೇಕಾದರೂ ಬಳಸಿ ಅವರು ಬಂದು ವಸೂಲಿಗೆ ನಿಲ್ಲುತ್ತಾರೆ. ಮುಂಜಾನೆ ಎದ್ದು ದೇವರನ್ನು ಬೇಡುವ ಮಂದಿ ಇಲ್ಲಿ ಪ್ರಯಾಣಿಸಿದರೇ ಅವರಿಗೆ ಇವರ ದರ್ಶನ, ಇವರ ಚಪ್ಪಾಲೆ, ಇವರು ಇರಿಸು ಮುರಿಸು ವರವಾಗಿ ಸಿಗುತ್ತದೆ.
ಅದು ಸಾಯಲಿ ಎಂದು ಬೈದುಕೊಂಡು ಇಳಿದು ಹೋದೆ. ಸಂಜೆಯಾದರೂ ನಿಶಬ್ದವಾಗಿರುವ ಎಕ್ಷಪ್ರೆಸ್ಸಿನಲ್ಲಿ ಹೋಗೋಣವೆಂದರೇ ಅದು ಆಗಲಿಲ್ಲ. ಸರಿ ಎಂದು ಪ್ಯಾಸೆಂಜರಿಗೆ ಹತ್ತಿದೆ. ಬಂದು ಕುಳಿತರೆ, ರೈಲು ಹೊರಡುವ ಮುನ್ನವೇ ಶುರುವಾಯಿತು ಗದ್ದಲ. ರೈಲು ಹೊರಟಿತು ಸೀಟು ಬಿಟ್ಟರೆ ಮತ್ತೆ ಸಿಗುವುದು ಗ್ಯಾರಂಟಿಯಿಲ್ಲ. ಹಣೆಬರಹವೇ! ಇರುವ ತಂಡವೆಲ್ಲಾ ಮುಸ್ಲೀಮರದ್ದು. ರೈಲು ಹೊರಡುವ ಮುನ್ನಾವೇ ಪಾರ್ಸಲ್ ತಂದಿದ್ದ, ಇಡ್ಲಿ, ವಡೆ, ಪಲಾವ್ ತಿನ್ನತೊಡಗಿದರು. ಇದನ್ನು ರೈಲು ಎಂದು ಅವರು ಭಾವಿಸಿದಂತಿರಲಿಲ್ಲ. ತಿನ್ನುವಾ ಕೆಳಕ್ಕೆ ಬೀಳಿಸದೇ ತಿನ್ನಬೇಕು ಅಥವಾ ಬೀಳಿಸಿದ್ದನ್ನು ಬಾಚಿ ಹೊರಕ್ಕೆ ಹಾಕುವ ಸಂಯಮ ಅವರಿಗಿದ್ದಂತೆ ಕಾಣಲಿಲ್ಲ. ನನ್ನ ಒಂದೇ ಒಂದು ಅದೃಷ್ಟ ಅವರು ತಿಂದ ಪ್ಲೇಟುಗಳನ್ನು ಹೊರಕ್ಕೆ ಎಸೆದದ್ದು. ಅದನ್ನು ಅಲ್ಲಿಯೇ ಬಿಟ್ಟರೂ ಅಚ್ಚರಿಯಿರಲಿಲ್ಲ. ಅವರು ತಿನ್ನುತ್ತಿದ್ದ ರೀತಿಯನ್ನು ಯಾವೊಬ್ಬ ನಾಗರೀಕ ನೋಡಿದ್ದರೂ ಮುಂದಿನ ಒಂದ ವಾರ ಅನ್ನವನ್ನು ಮುಟ್ಟುತ್ತಿರಲಿಲ್ಲ. ಇದೆಂಥಹ ಅನಾಗರೀಕತನ! ಅದರಲ್ಲಿದ್ದವರು ಮಳೆ ಬಂದದ್ದರಿಂದಳೋ ಏನೋ ಅವರ ಅಂಗಿಗಳು ಒದ್ದೆಯಾಗಿದ್ದವು. ಅದನ್ನು ಬಿಚ್ಚಿ, ರೈಲಿನಲ್ಲಿದ್ದ ಗೂಟಕ್ಕೆ ನೇತು ಹಾಕಿದರು. ಅದು ರೈಲು, ಸಾರ್ವಜನಿಕ ಸ್ಥಳವೆಂಬುದರ ಕಲ್ಪನೆ ಕೂಡ ಇರಲಿಲ್ಲ. ಆ ಮಳೆಯಲ್ಲಿ ನೆನೆದು ಬಂದು, ಅವರ ಮೈಯಲ್ಲಿದ್ದ ಮಾರ್ಕೆಟ್ ಸೆಂಟು ಮಳೆ ನೀರು ಅಲ್ಲಿ ಕುಳಿತಿದ್ದವರನ್ನು ಅದೆಷ್ಟು ಬೇಗ ಇಳಿದಾವು ಎನ್ನುವಂತೆ ಗಬ್ಬು ಮೂಡಿಸಿತು. ತಿಂದ ಮೇಲೆ ಸುಮ್ಮನಿರಲೂ ಸಾಧ್ಯವೇ ಒಂದು ಮಲ ವಿಸರ್ಜನೆಯಾಗಬೇಕು, ಇಲ್ಲವೆಂದರೇ ವಾಯು ವಿಸರ್ಜನೆಯಾಗಬೇಕು, ಆಗ ಶುರುವಾಯಿದು ಅಶ್ರುವಾಯು ಪ್ರಯೋಗ ಅಲ್ಲಿ ಕುಳಿತರೆ ನಾನು ಆಮ್ಲಜನಕವನ್ನು ಕುಡಿಯುವುದು ಅಸಾಧ್ಯವೆಂದು ಸೀಟು ಬದಲಾಯಿಸಿದೆ. ನಾನು ಹಲವಾರು ಬಾರಿ ಹೇಳಿದ್ದೇನೆ, ಮಾಡುತ್ತಲೂ ಇದ್ದೇನೆ. ಜನರನ್ನು ತಿದ್ದುವುದು, ಅವರಲ್ಲಿ ಜ್ನಾನ ಮೂಡಿಸುವುದು ಅವಶ್ಯಕ ಅದಕ್ಕಿಂತ ಮಿಗಿಲಾಗಿ ಅವರು ಸಾರ್ವಜನಿಕ ವಸ್ತುಗಳನ್ನು ಜವಬ್ದಾರಿಯಿಂದ ನೋಡುವಂತಾಗುವ ಮನೋಭಾವ ಅವರಲ್ಲಿ ಮೂಡಬೇಕು.
ಸೀಟು ಬದಲಾಯಿಸಿ ಕುಳಿತ ನಂತರ ಎದುರಿನ ಸೀಟಿನಲ್ಲಿ ಒಂದು ಮಧ್ಯಮ ವಯಸ್ಸಿನ ಮಹಿಳೆ ಮತ್ತು ವೃದ್ದೆ ಕುಳಿತರು. ಅವರು ನನ್ನನ್ನು ಎಳಿಯೂರು ಬಂದಾಗ ಹೇಳಿ ಎಂದು ಕೇಳಿದರು. ನಾನೋ ಆಗಬಹುದು ಆಗಬಹುದು ಎಂದೆ. ರೈಲಿನಲ್ಲಿ ಪ್ರಯಾಣಿಸುವುದೇ ಮುಂಜಾನೆ, ಮುಸ್ಸಂಜೆ ಅದರಲ್ಲಿಯೂ ಹೆಚ್ಚಿನ ಸಲ ನಿದ್ದೆ ಮಾಡುತ್ತೇನೆ. ಈ ಹೆಂಗಸು ಊರು ಬಂದಾಗ ಹೇಳಿ ಎಂದದ್ದು ನನ್ನನ್ನು ಎ಼ಚ್ಚರದಿಂದ ಸ್ಟೇಷನ್ ಗಳನ್ನು ಗಮನಿಸುವಂತೆ ಮಾಡಿತು. ನಾನು ಎಲ್ಲಾ ಸ್ಟೇಷನ್ ಬಂದಾಗಲೂ ಕತ್ತಲಿದ್ದರೂ ಇದು ಯಾವುದು ಹೋ ಇದು ಬ್ಯಾಡರಹಳ್ಳಿ, ಅದು ಇನ್ನೊಂದು ಇದು ಕ್ರಾಸಿಂಗ್ ಎಂದೆಲ್ಲಾ ಎಣಿಸಿ ಎಣಿಸಿ, ನೆಮ್ಮದಿ ಹಾಳುಮಾಡಿಕೊಂಡು ಕಡೆಗೆ ಎಳಿಯೂರು ಬಂತು ಎಂದೆ. ಇದು ಆದ್ಮೇಲೆ ಮಂಡ್ಯ ಅಲ್ವಾ ಎಂದರು. ಹೌದು ಎಂದೆ. ನೀವು ಇಲ್ಲಿ ಇಳಿಯಲ್ವಾ ಎಂದೆ. ಇಲ್ಲ ಎಂದರು. ಅಯ್ಯೊ ಹೆಂಗಸೇ, ಮಂಡ್ಯ ಹತ್ತಿರ ಬರುವಾಗ ಹೇಳಿ ಎಂದಿದ್ದರೇ ಹೇಳುತ್ತಿರಲಿಲ್ಲವೇ, ಎಂದು ಶಪಿಸಿ ಸುಮ್ಮನಾದೆ. ಅವರು ಇಳಿದ ಮೇಲೆ, ನನ್ನ ಲ್ಯಾಪ್ ಟಾಪ್ ತೆಗೆದು ರಾಜ್ಯ ರಾಜಕಾರಣದ ಅರಾಜಕತೆಯನ್ನು ಬರೆಯಲೆತ್ನಿಸಿದೆ. ಚನ್ನ ಪಟ್ಟಣ ಬರುವಾಗ ಮತ್ತೊಂದು ತಂಡ ಬಂದು ಕುಳಿತಿತು. ಇವರು ಅಷ್ಟೇ, ರೈಲಿಗೆ ಪಾರ್ಸೆಲ್ ಕಟ್ಟಿಸಿಕೊಂಡು ಇಡ್ಲಿ, ವಡೆ ತಂದಿದ್ದರು. ಅವರು ತಂದಿರುವುದು ಬೇಸರವೆನಿಸಲಿಲ್ಲ ಸ್ವಲ್ಪ ನಾಗರೀಕತೆಯಂತೆಯೇ ವರ್ತಿಸಿದರು. ಆದರೇ, ಪಕ್ಕದಲ್ಲಿದ್ದವನು ಕುಡಿದಿದ್ದರಿಂದ ಅದರ ವಾಸನೆಯೊಂದೇ ಅಲ್ಲಾ ಅವನ ಮಾತುಗಳು ನನ್ನನ್ನು ಹಿಂಸಿಸಿದವು. ಅವರ ಮನೆಯ ಹೆಣ್ಣುಮಗಳನ್ನು ಚನ್ನಪಟ್ಟಣಕ್ಕೆ ಮದುವೆ ಮಾಡಿದ್ದರು. ಗಂಡ ನನ್ನ ಹಾಗೇಯೇ ಮಹಾನ್ ಕುಡುಕ ಮತ್ತು ಸೋಮಾರಿ ಕುಡಿಯುವುದೇ ಮಹಾಧರ್ಮವೆಂದು ಭಾವಿಸಿದ್ದನಂತೆ. ಹೊಡೆಯುವುದು, ಬೆದರಿಸುವುದು ಆ ಹುಡುಗಿಯೂ ಐದು ವರ್ಷದಿಂದ ನೋಡಿ ಸಾಕಾಗಿ ಕಡೆಗೆ ಇಲ್ಲಿರಲಾಗುವುದಿಲ್ಲ ನಾನು ಸಾಯುವ ಮುನ್ನಾ ಬಂದು ನೋಡಿ ಎಂದು ಹೇಳಿದ್ದಳಂತೆ. ಅದನ್ನು ತೀರ್ಮಾನಿಸಲು, ಅಮ್ಮ, ಅಪ್ಪಾ, ಅಣ್ಣ ಅವರ ಜೊತೆಗಿಬ್ಬರೂ ಸಂಬಂಧಿಕರು ಹೋಗಿದ್ದರು. ಆ ಹುಡುಗಿಯನ್ನು ನೋಡಿ ನನಗೆ ಬಹಳ ಅನುಕಂಪ ಮೂಡಿತು. ನಾನು ಬಹಳಷ್ಟು ಬಾರಿ ಹೆಣ್ಣು ಮಕ್ಕಳನ್ನು ಅವರು ಮಾಡುವ ಫ್ಲರ್ಟ್ ಬಗೆಗೆ, ಅವಕಾಶವಾದದ ಬಗೆಗೆ ಬರೆದಿದ್ದೇನೆ, ಉಗಿದಿದ್ದೇನೆ. ಆದರೇ ಮದುವೆಯಾದ ಮೇಲೆ ಹೆಂಡತಿಯನ್ನು ನೋಯಿಸುವ ಗಂಡಸರನ್ನು ನಾನು ಗಂಡಸು ಎಂದು ಭಾವಿಸುವುದಿಲ್ಲ. ಪ್ರಪಂಚ ಜಾಗತೀಕರಣದಿಂದಾಗಿ ಬದಲಾಗಿರಬಹುದು ಹೆಣ್ಣು ಗಂಡು ಎನ್ನುವುದು, ಅವರ ಅಸ್ತಿತ್ವ ಸಾಮಾಜಿಕ ಜೀವನದಲ್ಲಿ ಬದಲಾಗಿರಬಹುದು ಆದರೇ ಮದುವೆಯಾದ ಹೆಂಡತಿಗೆ ಹೊಡೆದು ಬಡಿದು ನಿಂದಿಸಿ ನೋಯಿಸುವುದು ಅಕ್ಷಮ್ಯ ಅಪರಾಧ.
ಹೆಣ್ಣು ಮಕ್ಕಳು ಅಷ್ಟೇ ಅವರಲ್ಲಿ ಒಳ್ಳೆಯವರು ಹಾಲಿನಂತೆಯೇ ಇರುತ್ತಾರೆ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಅವರ ಜೀವನ ಮಣ್ಣುಪಾಲಾಗುತ್ತದೆ. ಸಮಾಜಕ್ಕೆ, ಮರ್ಯಾದೆಗೆ, ಘನತೆಗೆ, ಗಾಂಬೀರ್ಯಕ್ಕೆ, ಭಾವನೆಗಳಿಗೆ ಹೆದರುತ್ತಾರೆ. ಇನ್ನೂ ಕೆಲವರು ಕೊಳಚೆ ನೀರಿನಂತೆ, ಅವರು ಎಲ್ಲಿದ್ದರೂ ಏನು ಮಾಡಿದರೂ ಅವರಷ್ಟೇ ಅಲ್ಲದೇ ಮತ್ತೊಬ್ಬರ ಜೀವನವನ್ನು ಹಾಳು ಮಾಡುತ್ತಾರೆ. ಇವರೆಲ್ಲರೂ ಸೇರಿ ಗಂಡನ ಮತ್ತು ಗಂಡನ ಮನೆಯವರನ್ನು ಬೈಯ್ಯುತ್ತಿರುವಾಗಲೂ ಪಾಪ ಆ ಹುಡುಗಿ, ಇಲ್ಲಾ ಅತ್ತೆಯದ್ದು ಏನೂ ತಪ್ಪಿಲ್ಲ ಅವರಿಗೂ ಬೇಸರವಾಗಿದೆ. ನೀನು ಹಾಗೆ ಮಾತನಾಡಬಾರದಿತ್ತು ಎಂದು ಸಮಜಾಯಿಸುತ್ತಿತ್ತು. ಇವೆಲ್ಲವೂ ಹೆಣ್ಣಿನ ಹುಟ್ಟಿನಿಂದಲೇ ಬಂದಿರುವಂತವು. ಅವಳಿಗೆ ಸೇಡು, ಇನ್ನೊಬ್ಬರನ್ನು ಹಾಳು ಮಾಡುವುದು, ಅನ್ಯಾಯ ಮಾಡುವುದು ಯಾವುದೂ ತಿಳಿದಿಲ್ಲ. ಅವಳ ಮನಸ್ಸಿನಲ್ಲಿ ಗಟ್ಟಿಯಾಗಿರುವುದು ಒಂದೇ ನಾನು ಹೆಣ್ಣು, ನಾನು ಹುಟ್ಟಿರುವುದೇ ಇದನ್ನೆಲ್ಲಾ ಅನುಭವಿಸಲು. ಇದೆಲ್ಲವೂ ನನ್ನ ತಾಯಿಯೂ ಅನುಭವಿಸಿದ್ದಾಳೆ. ಚಿಕ್ಕಂದಿನಲ್ಲಿ ಅವಳ ಕಣ್ಣೀರು ಒರೆಸುತ್ತಾ ನಾನು ಕೇಳಿದ್ದೆ, ಅಮ್ಮಾ ಯಾಕಮ್ಮಾ ನೀನು ಅಪ್ಪಾ ಹೋಡೆಯೋಕೆ ಬಂದರೂ ಬೈಯ್ಯೋಕೆ ಬಂದರೂ ಸುಮ್ಮನಿರುತ್ತೀಯಾ? ನನಗೆ ಹೋಡೆಯೋಕೆ ಬಂದಾಗ ನೀನು ಅಡ್ಡ ಬಂದು ಬೈಗುಳ ತಿನ್ನುತೀಯಾ ಎಂದು. ನನ್ನನ್ನು ಅಂದು ಆ ರೀತಿ ಪ್ರೀತಸಿದ್ದಕ್ಕೆ ಎನಿಸುತ್ತದೆ ನಾನು ಇಂದು ಹೆಣ್ಣು ಮಕ್ಕಳನ್ನು, ಹೆಣ್ಣಿನ ಸಮಸ್ಯೆಯನ್ನು ಹತ್ತಿರದಿಂದ ನೋಡಿ ಅವರಲ್ಲಿ ಸ್ನೇಹಿತನಾಗಿದ್ದು. ಇಡೀ ದಿನ ಕೆಟ್ಟದೆಂದು ಭಾವಿಸಿದ್ದ ನನಗೆ ರಾತ್ರಿ ವೇಳೆಗೆ ಅಮ್ಮನ ನೆನಪು ಮಾಡಿಕೊಟ್ಟ ಆ ಹುಡುಗಿಯ ಜೀವನ ಹಸನಾಗಲಿ, ಅವಳಿಗೆ ಧೈರ್ಯ ಬರಲಿ ಎಂದು ಹಾರೈಸುತ್ತೇನೆ. ಇಷ್ಟೆಲ್ಲಾ ಹೇಳಿದರ ಉದ್ದೇಶವಿಷ್ಟೇ, ಯಾರು ಉದ್ದೇಶಪೂರ್ವಕವಾಗಿ ಪರಿಸರ ನಾಶಮಾಡುವುದಿಲ್ಲ, ಸಮಾಜವನ್ನು ಹಾಳು ಮಾಡುವುದಿಲ್ಲ. ಇವೆಲ್ಲವೂ ಸನ್ನಿವೇಶ ಅನಿವಾರ್ಯತೆ. ಅದರಲ್ಲಿಯೂ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದವರು ಎಂದಿಗೂ ಮತ್ತೊಬ್ಬರಿಗೆ ಕೆಡಕು ಮಾಡಲು ಮುನ್ನುಗ್ಗುವುದಿಲ್ಲ. ಒಂದೇ ರೈಲಿನ್ನಲಿ ಸಂಬ್ರಮಿಸಲು ತಿಂದು ಕುಣಿದು ಕುಪ್ಪಳಿಸುವವರು ಸಿಗುತ್ತಾರೆ, ಅಳುತ್ತಾ ಹೊಟ್ಟೆಗಾಗಿ ತಿನ್ನುವವರು ಇರುತ್ತಾರೆ. ಆದ್ದರಿಂದ ರಸ್ತೆಯಲ್ಲಿ ಗಲೀಜು ಮಾಡಿದವನು ಉದ್ದೇಶ ಪೂರ್ವಕವಲ್ಲ ಹಾಗೆಂದು ಅದನ್ನು ಮುಂದುವರೆಸುವುದು ಸರಿಯಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...