ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

19 October 2010

ಅಜ್ಜಿಯಂದಿರಂಗಳದಲ್ಲಿ ಸುಂದರ ಹಬ್ಬ

ಕೆಲವೊಮ್ಮೆ ನೋವು ಕೊಡುವ ನೆನಪುಗಳನ್ನು ಹತ್ತಿಕ್ಕಿ ಜೀವನವನ್ನು ಮುನ್ನೆಡೆಸಲು ಸಾಕಷ್ಟು ಪ್ರಯತ್ನಿಸುತ್ತೇವೆ. ಆದರೂ ಅದೇ ನೆನಪುಗಳು ನಮ್ಮನ್ನು ಬೆಂಬಿಡದೇ ಕೊಲ್ಲುತ್ತವೆ. ನಾನು ಊರಿಗೆ ಹೋದಾಗೆಲ್ಲ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೆಲವೊಂದು ಕೊಲ್ಲುತ್ತವೆ. ಹೈಸ್ಕೂಲಿನಲ್ಲಿ ನಡೆದಾಡುತ್ತಿದ್ದ ಕಾಲುವೆ ಏರಿ, ನದಿ ದಂಡೆ. ಪಿಯುಸಿಯಲ್ಲಿ ಕದ್ದು ಮುಚ್ಚಿ ಸಿಗರೇಟು ಸೇದಲು ಕುಳಿತಿರುತ್ತಿದ್ದ ನಮ್ಮೂರಿನ ಕಟ್ಟೆ, ಅದರ ಮೇಲಿದ್ದ ನೀರು ಧುಮುಕುವಾಗ ಮಾಡುವ ಬೋರ್ಗರೆತ. ಇವೆಲ್ಲವೂ ಇಂದು ಇದ್ದರೂ ಅಂದಿನ ಆ ಸಂಚಲನವಿಲ್ಲ. ಆ ದಿನದ ಉತ್ಸಾಹ ನನಗಿಂದು ಬರುವುದಿಲ್ಲ. ನನ್ನ ಜೊತೆ ಬರುವ ನನ್ನೆಲ್ಲಾ ಸ್ನೇಹಿತರಿಗೂ ಹೇಳುತ್ತಿರುತ್ತೇನೆ, ವಿವರಿಸುತ್ತೇನೆ. ಅವರಲ್ಲಿ ಅನೇಕರು ನಾನು ಹೇಳಿದ್ದನ್ನೆ, ಕೇಳಿ ಕೇಳಿ ಬೇಸತ್ತು ಸಾಕು ನಿಲ್ಲಿಸು ತಂದೆ ಎಂದಿದ್ದಾರೆ. ವಿಜಿ ಮಂಜೇಶ್ ಅಂತೂ ನಾನು ಬಾಯಿ ತೆರೆಯುವ ಮುನ್ನವೇ, ಇದು ಹರೀಶ್ ಸಿಗರೇಟು ಹೊಡೆಯುತ್ತಿದ್ದ ಜಾಗ, ಇದು ಅವನು ಸಂಜೆ ಕುಳಿತು ಹರಟೆ ಹೊಡೆಯುತ್ತಿದ್ದ ಜಾಗವೆಂದು ಹೇಳುತ್ತಾರೆ. ಅವರು ಹೇಳುವುದು ನನ್ನಯ ಮೇಲಿನ ಅಭಿಮಾನದಿಂದಲ್ಲ, ನಾನು ಬಾಯಿ ತೆಗೆದರೆ ಅರ್ಧ ಗಂಟೆ ಅವರಿಗೆ ಬೋರು ಹೊಡೆಸುತ್ತೇನೆಂಬ ಭಯದಿಂದ. ಅದೇನೆ ಇರಲಿ, ಈ ಬಾರಿ ಹಬ್ಬಕ್ಕೆ ಹೋದಾಗ ಸಂತೋಷ ಅತಿಯಾಗಿತ್ತಾದರೂ, ಅದರ ಜೊತೆಗೆ ದೊಡ್ಡ ಮಟ್ಟದ ನೋವು ಆಯಿತು.
ಶನಿವಾರ ಬೆಳ್ಳಿಗ್ಗೆ ನಾನು ಕಿರಣ ಬೆಂಗಳೂರಿನಿಂದ ಹೊರಟು ಮೈಸೂರಿಗೆ ತಲುಪಿದೆವು. ಆಯುಧ ಪೂಜೆಯ ಸಂಜೆ ನಮ್ಮ ಮನೆಯಲ್ಲಿ ಹಬ್ಬ ಇರುತ್ತದೆ. ಮನೆಯಲ್ಲಿ ತೀರಿಹೋಗಿರುವ ಹಿರಿಯರಿಗೆ ಎಡೆ ಇಡುವುದು ನಮ್ಮ ಪದ್ದತಿ. ಕರ್ನಾಟಕದಾದ್ಯಂತ ಪ್ರತಿಯೊಬ್ಬರೂ ಇದನ್ನು ಮಾಡಿದರು ಒಬ್ಬೊಬ್ಬರು ಒಂದೊಂದು ಹಬ್ಬದಲ್ಲಿ ಒಂದೊಂದು ವಿಧವಾಗಿ ಮಾಡುತ್ತಾರೆ. ನಮ್ಮೂರಿನಲ್ಲಿ ಆಯುಧ ಪೂಜೆಯ ರಾತ್ರಿ ಮಾಡುವುದು ಪದ್ದತಿ. ಮೈಸೂರಿಗೆ ಹೋಗಿ ಅಲ್ಲಿ ನನ್ನ ಗೆಳತಿ ರೆಜಿನಾಳ ಮನೆಗೆ ಹೋಗಿ ಎರಡು ಕಪ್ ಕಾಫಿ ಕುಡಿದು, ಕಿರಣನ ಮನೆಯಲ್ಲಿ ಜ್ಯೂಸ್ ಕುಡಿದು ಹೊರಟೆನು. ಕೆಲವರು ಅಷ್ಟೇ, ಅದೆಷ್ಟು ನಮ್ಮನ್ನು ಖುಷಿ ಪಡಿಸುತ್ತಾರೆಂದರೆ, ಒಂದು ಸಣ್ಣ ವಿಚಾರಗಳು ಅವರೊಂದಿಗೆ ಬಹಳ ಮುದನೀಡುತ್ತವೆ. ಇದರ ಸಾಲಿನಲ್ಲಿ ಮೊದಲು ನಿಲ್ಲುವವಳು ರೆಜಿನಾ. ರೆಜಿನಾ ಮಾಡುವ ಕಾಫಿ ಕುಡಿದವನೇ ಧನ್ಯವೆಂದು ನಾನು ಹೇಳುತ್ತಿರುತ್ತೇನೆ. ಅದರಂತೆಯೇ ನನ್ನಜ್ಜಿ ಮಾಡುವ ರೊಟ್ಟಿ, ಅಮ್ಮ ಮಾಡುವ ಸೊಪ್ಪಿನ ಸಾರು, ಮುದ್ದೆ, ನನ್ನ ಮತ್ತೊಬ್ಬಳು ಗೆಳತಿ ಪವಿತ್ರಾ ಅವರ ಅಮ್ಮ ಮಾಡುವ ಮಾಂಸದೂಟ ಇವೆಲ್ಲವೂ ಅಷ್ಟೇ, ನಾಚಿಕೆ ಇಲ್ಲದೆ ಕೇಳಿ ಪಡೆಯೋಣವೆನಿಸುತ್ತದೆ. ಹೀಗೆ ಹೊರಟವನು ಕುಶಾಲನಗರಕ್ಕೆ ಬಂದು ರವಿ ಮನೆಯಿಂದ ಎರಡು ಫುಲ್ ಬಾಟಲು ತೆಗೆದುಕೊಂಡು ಹೊರಟೆನು. ಅವನು ಮಿಲ್ಟ್ರಿಯಲ್ಲಿರುವುದರಿಂದ ಅತ್ತ್ಯುತ್ತಮ ಹೆಂಡವು ಕಡಿಮೆ ದರದಲ್ಲಿ ಸಿಗುತ್ತದೆಂದು ಮನೆಯಲ್ಲಿ ಹಬ್ಬವಿರುವುದರಿಂದ ಬೇಕೆಂದು ಹೇಳಿದ್ದೆ. ಸೋಮಾರಿಯಾದ ಅವನು ಹೋಗದೇ ಅವನ ತಮ್ಮ ತಂದಿದ್ದರಿಂದಲೇ ಕೊಟ್ಟನು. ಮನೆ ತಲುಪುವಾಗ ಸಂಜೆ ನಾಲ್ಕಾಗಿತ್ತು.
ಸಂಜೆ ಮೊದಲ ಬಾರಿಗೆ ನಮ್ಮ ಮನೆಯಲ್ಲಿ ಯಾರೂ ಸ್ನೇಹಿತರಿಲ್ಲದೇ ಇದ್ದದ್ದು. ಅಂತೂ ಇಂತೂ ಪೂಜೆ ಮುಗಿಸಿ, ಎಡೆಯನ್ನು ಮನೆಯ ಮೇಲೆ ತೆಗೆದುಕೊಂಡು ಹೋಗಿ ಇಟ್ಟು ಬಂದು ಊಟ ಮಾಡುವ ಸಮಯಕ್ಕೆ, ಮನೆಗೆ ಬಂದಿದ್ದ ನನ್ನ ಅಜ್ಜಿ, ನನ್ನ ಅಜ್ಜಿಯ ಅಕ್ಕ, ಮತ್ತು ತಂಗಿ ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡಿದರು. ನನಗೆ ಎಂದರೇ ನನ್ನ ಅಜ್ಜಿಯ ಜೊತೆ ಒಡ ಹುಟ್ಟಿದವರು ಒಟ್ಟು ಒಂಬತ್ತು ಜನ ಹೆಣ್ಣು ಮಕ್ಕಳು ನಮ್ಮ ಮುತ್ತಾತನ ಹಿರಿಯ ಹೆಂಡತಿಗೆ, ಮತ್ತು ಐದು ಜನ ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು ಕಿರಿಯ ಹೆಂಡತಿಗೆ. ಹಾಗಾಗಿ ನಮ್ಮ ಅರಕಲಗೂಡು ತಾಲೂಕಿನ ಪ್ರತಿ ಹಳ್ಳಿಯಲ್ಲಿಯೂ ನಮಗೆ ನೆಂಟರಿದ್ದಾರೆ. ಒಬ್ಬೊಬ್ಬ ಅಜ್ಜಿಗೂ ಕಡಿಮೆಯೆಂದರೇ ಆರು ಜನ ಮಕ್ಕಳಿದ್ದಾರೆ. ಅವರ ಮದುವೆಯಾಗಿರುವುದರಿಂದ ಮಕ್ಕಳ್ಳು ಸೊಸೆಯಂದಿರೂ ಹೀಗೆ ಒಂದು ಯಾವುದೇ ಸಮಾರಂಬಕ್ಕೆ ಸೇರಿದರೂ ಸಾವಿರ ಜನ ನನ್ನ ಅಜ್ಜಿಯಂದಿರ ಕಡೆಯಿಂದಲೇ ಇರುತ್ತಾರೆ. ಅವರೆಲ್ಲರ ಒಂದೇ ಆಸೆ ನನ್ನ ಮದುವೆ ಮಾಡುವುದು. ಅಪ್ಪ ನನ್ನನ್ನು ಎಂದೂ ನೇರ ಕೇಳಿಲ್ಲ, ಆದರಂತೆಯೇ ಅಮ್ಮನಿಗೂ ಸ್ವಲ್ಪ ಭಯ ಏನಾದರೂ ಎಂದುಬಿಡುತ್ತಾನೆಂದು. ಇನ್ನೂ ಅಜ್ಜಿಯಂತೂ ಪ್ರತಿ ಸಲ ಊರಿಗೆ ಹೋದಾಗಲೂ ಯಾವುದಾದರೂ ಒಂದು ಹುಡುಗಿಯ ಬಗೆಗೆ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ನೀನು ನೋಡಿಕೊಂಡಿದ್ದರೇ ಹೇಳು ಎಂದು ಮೊದಲು ಕೇಳುತ್ತಿದ್ದರೂ ನಾನು ಒಮ್ಮೆ ಮದುವೆಯಾಗಿ ಗಂಡನಿಂದ ಬೇರ್ಪಟ್ಟವಳನ್ನು ಮದುವೆಯಾಗೋಣವೆಂದು ನಿರ್ಧರಿಸಿದ್ದೇನೆಂದು ಹೇಳಿದ ಮೇಲೆ ಆ ಬಗೆಗೆ ಹೇಳುವುದನ್ನು ನಿಲ್ಲಿಸಿಯೇ ಬಿಟ್ಟರು.
ನಮ್ಮ ಅಜ್ಜಿ ಮರು ಮದುವೆಯ ಬಗೆಗೆ ಒಳ್ಳೆಯ ಅಭಿಪ್ರಾಯವಿಟ್ಟಿಕೊಂಡಿರುವುದು ಮೆಚ್ಚಲೇ ಬೇಕಾದ ವಿಷಯ, ಆದರೇ ತನ್ನ ಮೊಮ್ಮಗ ಆ ರೀತಿ ಆಗುವುದನ್ನು ಅವರು ಒಪ್ಪುವುದಿಲ್ಲ. ನಮ್ಮ ಮನೆಯಲ್ಲಿ ಮೊದಲೇ ನೋವುಂಡಿರುವುದರಿಂದ ಮತ್ತೊಮ್ಮೆ ನೋವುನ್ನಲು ಅವರು ಸಿದ್ದವಿಲ್ಲ. ಇದು ನನ್ನನ್ನು ಬಹಳಷ್ಟು ಗೊಂದಲಕ್ಕೆ ಈಡು ಮಾಡಿತ್ತು. ಅವರಿಗೆ ಹೇಳದೇ ಆದರೂ ಅದೆಷ್ಟು ದಿನ ಬಚ್ಚಿಡಬಹುದು. ನಾನು ಕುಡಿದರೂ, ಸೇದಿದರೂ, ಊರೂರು ಸುತ್ತಿದರೂ ಎಂದೂ ಯಾವ ದಿನಕ್ಕೂ ನಮ್ಮ ಅಪ್ಪ ಅಮ್ಮ ನನ್ನ ಬಗ್ಗೆ ಕೀಳಾಗಿ ಮಾತನಾಡಿಲ್ಲ. ನಮ್ಮಪ್ಪ ಒಂದೇ ಒಂದು ದೂರು ನಾನು ಸರ್ಕಾರಿ ಕೆಲಸಕ್ಕೆ ಸೇರದೇ ಇರುವುದು ಅನ್ನುವುದನ್ನು ಬಿಟ್ಟರೇ ಮತ್ತಾವ ತಕರಾರು ಬಂದಿಲ್ಲ. ಹೀಗೆ ಆ ವಿಷಯವೂ ಮುರಿದು ಬಿದ್ದ ಮೇಲೆ, ಸುಮ್ಮನಾಗಿಬಿಟ್ಟೆ. ನೀವು ತೋರಿಸುವ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ ಆದರೇ ಸ್ವಲ್ಪ ಸಮಯ ಕೊಡಿ ಎಂದೆ. ಅದಕ್ಕೆ ಅವರು ಆ ಸಮಯದಲ್ಲಿ ಒಪ್ಪಿದರೂ ನಂತರ ಪದೇ ಪದೇ ಅದನ್ನೇ ಕೇಳುತ್ತಿರುತ್ತಾರೆ. ಇದು ಪೋಷಕರ ಸಿದ್ದ ಹಕ್ಕು, ಹುಟ್ಟುಗುಣ ಕೂಡ ಹೌದು. ಅಂದು ರಾತ್ರಿ ಮೂರು ಜನ ಅಜ್ಜಿಯಂದಿರೂ ನನ್ನ ಮದುವೆ ವಿಷಯ ಪ್ರಸ್ತಾಪಿಸಿದರು. ನಾನು ಈಗ ಬೇಡವೆಂದರೂ ಪದೇ ಪದೇ ಅವರದ್ದೇ ಆದ ರೀತಿಯಲ್ಲಿ ವಿಷಯ ಮಂಡನೆ ಮಾಡಿದರು. ನಾನು ಇದುವರೆಗೂ, ನನ್ನ ಹಿರಿಯ ಅಜ್ಜಿ ಹೇಳಿದ್ದನ್ನು ಎಂದೂ ತೆಗೆದುಹಾಕಿಲ್ಲ, ಅದರಂತೆಯೇ ಅವರಿಗೂ ಅಷ್ಟೇ ನಾನು ಹೇಳುವ ಮಾತನ್ನು ಒಪ್ಪಿಕೊಳ್ಳುತ್ತಾರೆ. ಅವರು ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತಾರೆ. ನನಗೆ ಹೊರಗಡೆಯಲ್ಲಿನ ಭವಿಷ್ಯ, ಜ್ಯೋತಿಷಿಗಳಲ್ಲಿ ಅಷ್ಟು ನಂಬಿಕೆಯಿಲ್ಲದಿದ್ದರೂ ಅವರ ಮಾತಿನಲ್ಲಿ ಬಹಳ ನಂಬಿಕೆಯಿದೆ. ಅದಕ್ಕೆ ನಿದರ್ಶನ ನನ್ನ ಜೀವನ. ಅವರು ಹೇಳಿದ ಉಪಕಥೆಗಳು, ನೀತಿಪಾಠಗಳು, ನನ್ನ ಅನೇಕಾ ಆದರ್ಶಗಳಲ್ಲಿ ಬೆರೆತಿವೆ.
ನಾನು ಇಂದಿನ ಈ ಮಟ್ಟಗಿನ ವ್ಯಕ್ತಿಯಾಗಿರಲು ಅವರೇ ನೇರ ಹೊಣೆ. ನನ್ನಲ್ಲಿರುವ ಒಳ್ಳೆಯ ಗುಣಗಳು ಅವರಿಂದ ಕಲಿತವು. ಕೆಟ್ಟವು ಹುಟ್ಟಿನಿಂದಲೇ ಬಂದವು. ನಾನು ಓದುತ್ತಿರುವುದೇನು? ಇದನ್ನು ಅವರಿಗೆ ವಿವರಿಸಲು ಸಾಕಾಗಿ ಹೋಗುತ್ತದೆ. ಆದರೇ ಅವರು ಎಂಥಹ ಹುಡುಗಿ ಬೇಕೆಂಬುದು ಸ್ವತಃ ನನಗೂ ತಿಳಿದಿಲ್ಲ, ನನ್ನ ತಂದೆ ತಾಯಂದರಿಗೂ ತಿಳಿದಿಲ್ಲ. ಆದ್ದರಿಂದ ನನ್ನನ್ನು ಮದುವೆಯಾಗು ಎಂದು ಪಿಯುಸಿ ಓದುತ್ತಿರುವ ಹುಡುಗಿಯನ್ನು ತೋರಿಸುತ್ತಾರೆ, ಪಿಯುಸಿ ಫೇಲಾಗಿರುವವಳನ್ನು ತೋರಿಸುತ್ತಾರೆ. ಒಬ್ಬರೂ ಗಂಟು ಕೊಡುವ ಆಸೆ ತೋರಿಸುತ್ತಾರೆ, ಕೆಲವರು ಮರ್ಯಾದಸ್ತ ಮನೆತನವೆನ್ನುತ್ತಾರೆ. ನಾನು ಕೇಳಿ, ಕೇಳಿ ಸಾಕಾಗಿ ಹೋಗುತ್ತೇನೆ. ಹೀಗೆ ಗಂಟೆಗಟ್ಟಲೇ ಮಾತನಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಅವರು ನನ್ನ ಮಾತಿಗೆ ಒಪ್ಪಲಿಲ್ಲ ನಾನು ಅವರ ಮಾತಿಗೆ ಸಮ್ಮತಿಸಲಿಲ್ಲ ಅದು ಮುರಿದು ಬಿದ್ದಂತೆ ಆಯಿತು. ಬೆಳ್ಳಿಗ್ಗೆ ಎದ್ದು, ನಮ್ಮೂರಿನ ಸುಬ್ಬಣ್ಣನ ಮನೆಗೆ ಹೋಗಿ ಮಾಂಸ ತೆಗೆದುಕೊಂಡುಬರಲು ಅಪ್ಪ ಹೇಳಿದ್ದರಿಂದ ನಾನು ವಿಜಿ ಸುಬ್ಬಣ್ಣನ ಮನೆಗೆ ಹೋದೆವು. ಅಲ್ಲಿ ಇನ್ನೂ ಚರ್ಮ ಸುಳಿಯುವ ಕೆಲಸ ನಡೆಯುತ್ತಿದ್ದರಿಂದ ಹಾಗೇಯೇ ಹೊರಗೆ ಬಂದು ನಿಂತಿರುವಾಗ ಗೋವಿಂದ ಬಂದನು. ಅವನು ಬೆಳ್ಳಿಗ್ಗೆ ಎಂಟುಗಂಟೆಗೆ ಟೈಟಾಗಿ ಗಮ್ಮೆನ್ನುತ್ತಿದ್ದನು. ಬಂದವನೇ ದೊಡ್ಡ ದೊಡ್ಡ ಮಾತನಾಡಿ ಇಪ್ಪತ್ತು ರೂಪಾಯಿ ಕೇಳಿದನು. ನೀವು ನನ್ನ ಹೃದಯದ್ದಲ್ಲಿದ್ದೀರಿ ಬುದ್ದಿ ಎಂದು ಅವನ ತಲೆಯ ಮೇಲೆ ಕೈಯಿಟ್ಟನು. ಹಣೆಬರಹವೇ ನಾನೇಷ್ಟು ಜನರ ಹೃದಯದಲ್ಲಿರಲಿ, ಆಗಲೇ ಬೇರೆಯವರು ನನ್ನನ್ನು ಬಲಿತೆಗೆದುಕೊಂಡಿದ್ದಾರೆ ಬಿಡು ಎಂದು ಹೇಳಿ ಕಳುಹಿಸಿದೆ.
ಸಲ್ಪ ಹೊತ್ತು ಕಳೆದು ಮತ್ತೆ ಸುಬ್ಬಣ್ಣನ ಮನೆಗೆ ಹೋದಾಗ, ಮಾಂಸ ಕತ್ತರಿಸುತ್ತಿದ್ದರು. ನಾನು ವಿಜಿ ಹೋಗಿ ಸ್ವಲ್ಪ ಹೊತ್ತು ನಿಂತಿರುವಾಗ ಸುಬ್ಬಣ್ಣ, ಮನೆಯವರಿಗೆ ಕುರ್ಚಿ ಹಾಕಲು ಹೇಳಿದರು. ನಾನು ಪರ್ವಾಗಿಲ್ಲ ಬಿಡು ಎಂದು, ಅಲ್ಲಿಯೇ ದನ ಕಟ್ಟಿ ಹಾಕುವ ಗೊಜಲಿಕೆಯ ಬಳಿ ಕುಳಿತೆನು. ಕುರ್ಚಿಯಲ್ಲಿ ಕುಳಿತುಕೊಳ್ಳಿ ಎಂದು ಒತ್ತಾಯಿಸುವಾಗ ಬಿಡು ಬೇಡ ಎಂದದ್ದಕ್ಕೆ, ಸುಬ್ಬಣ್ಣ, ಮರ್ಯಾದೆ ನಿನಗಲ್ಲ ಕನಪ್ಪಾ ನಿನ್ನ ವಿದ್ಯಾಭ್ಯಾಸಕ್ಕೆಂದರು. ನಾನು ಅಬ್ಬಾ ಶಿವನೇ ಅಂತೂ ನಾನು ಓದಿದ್ದು ಸಾರ್ಥಕವಾಯಿತು ಎಂದುಕೊಂಡೆ. ಅಲ್ಲೇ ಇದ್ದ ಕರಿಯಣ್ಣ ಓದಿದ ಮೇಲೆ ಹಳ್ಳಿ ಹೆಸರನ್ನೇ ಹೇಳುವುದಿಲ್ಲ ಜನರು ಎಂದ. ಅದಕ್ಕೆ ನಾನು ಅಯ್ಯೋ ಕರಿಯಣ್ಣ ನಾನು ಎಲ್ಲಿಗೇ ಹೋದರೂ ಹುಟ್ಟೂರು ಬಿಡಲು ಸಾಧ್ಯವೇ, ಎಂದೆ. ಅಲ್ಲಿಯೇ ಇದ್ದ ಬೋರಣ್ಣ, ಕರಿಯಣ್ಣ ನೀನು ಹೈದ್ರಾಬಾದಿಗೆ ಹೋದರೂ ನೀನು ಹೀರೇಗೌಡ್ರ ಕರಿಯಣ್ಣ ಅಂತಾನೆ ಅನ್ನೋದು ಕಣೋ, ಬೇರೆ ಇನ್ನೇನಾದ್ರೂ ಅಂತಾರಾ ಜನ ಎಂದ. ನಾನು ಆ ಅಭಿಮಾನ, ಒಡನೆಯೇ ಬಂದ ಸಮಯ ಪ್ರಜ್ನೆಯನ್ನು ಕಂಡೂ ನಿಜಕ್ಕೂ ಆನಂದಿಸಿದೆ. ನಿಮಗೆ ಹಾಸ್ಯೆಪ್ರಜ್ನೆಯಿದ್ದರೇ ಹಳ್ಳಿಗಳಲ್ಲಿ, ಕ್ಷಣ ಕ್ಷಣಕ್ಕೂ ಆನಂದಿಸಬಹುದೆಂಬುದಕ್ಕೆ ಇದೊಂದು ಉದಾಹರಣೆ. ಕರಿಯಣ್ಣ ಅಲ್ಲಿಗೆ ಬಂದದ್ದು, ತಕ್ಕಡಿ ತೆಗೆದುಕೊಂಡು ಹೋಗಲು, ಆದರೇ ಸುಬ್ಬಣ್ಣ ತನ್ನ ಕೆಲಸ ಆಗುವ ತನಕ ತಕ್ಕಡಿ ಕೊಡುವ ಮಾತೇ ಇರಲಿಲ್ಲ ಬಿಡಿ. ಕರಿಯಣ್ಣ ಏನೆಲ್ಲಾ ಉಪಾಯ ಮಾಡಿದರೂ ಸುಬ್ಬಣ್ಣ ತಕ್ಕಡಿಯನ್ನು ಕೊಡಲೇ ಇಲ್ಲ.
ಮೂರು ಗಂಟೆಯ ಹೊತ್ತಿಗೆ, ಕಿರಣ ಕೊಣನೂರಿಗೆ ಬಂದ. ಅವನು ನಾನು ಜೊತೆಯಲ್ಲಿಯೇ ಹೈಸ್ಕೂಲು ಓದಿದ್ದೆವು. ನಂತರ ಅವರು ಮೈಸೂರಿನಲ್ಲಿ ಮನೆ ಮಾಡಿಕೊಂಡು, ಅವನು ಬಿಎ ಓದಿ, ಬೆಂಗಳೂರಿಗೆ ಬಂದು ಇಲ್ಲಿ ಕೆಲಸಮಾಡುತ್ತಿದ್ದಾನೆ. ಅವನು ನಾನು ಕಂಡ ಅನೇಕಾ ಒಳ್ಳೆಯ ಸ್ನೇಹಿತರಲ್ಲಿ ಮೊದಲನೆಯವನು. ಒಬ್ಬರಿಗೆ ಕೆಡುಕು ಮಾಡಬೇಕೆಂಬುದನ್ನು ಕನಸಿನಲ್ಲಿಯೂ ಎಣಿಸುವುದಿಲ್ಲ. ಅಪರಿಚಿತರಿಗೂ ಸಹಾಯಮಾಡುತ್ತಾನೆ. ಶಿಸ್ತಿನ ವ್ಯಕ್ತಿ, ಸದಾ ನಗುತ್ತಿರುತ್ತಾನೆ. ಬಂದವನು ಬಸ್ಸಿನಲ್ಲಿ ಇಳಿದೊಡನೆಯೇ ನನಗೆ ಹೇಳಿದ, ಹರಿ ನಾನಿದ್ದಾಗ ರೋಡಿಗೆ ತಾರು ಹಾಕಿದ್ದು ಇನ್ನೂ ಹಾಕಿಲ್ಲ? ನೀನು ನಿಮ್ಮಪ್ಪ ಊರು ಬಿಟ್ಟು ಹೋದ್ರಲ್ಲ ನೀವೆ ಇಲ್ಲದ ಮೇಲೆ ತಾರು ಯಾಕೆ ಅಂತಾ ಹಾಕಿಸಿಲ್ಲ ಎಂದೆ. ಮನೆಗೆ ಬಂದು ಊಟ ಮಾಡಿದೆವು. ಊಟ ಮಾಡಿದ ಮೇಲೆ, ಸಿಗರೇಟು ತೆಗೆದುಕೊಂಡು ಕಟ್ಟೆಕಡೆಗೆ ಹೋಗುವಾಗ ನಮ್ಮ ಮಾವನ ಮಗ ಮಂಜ ಕೂಡ ಬಂದನು. ಅವನು ಆ ಸಮಯಕ್ಕೆ ಪೂರ್ತಿ ಟೈಟಾಗಿದ್ದ. ಕಟ್ಟೆಯಲ್ಲಿಗೆ ಬಂದು ಸ್ವಲ್ಪ ಹೊತ್ತು ಕಳೆದು ಅಲ್ಲಿ ಮೀನು, ಹಿಡಿಯುತ್ತಿದ್ದವರ ಜೊತೆ ಹರಟಿ ಮನೆಗೆ ಬರುವಾಗ ನಂಜೇಶನ ನೆನಪಾಗಿ, ಅವನಿಗೆ ಕರೆ ಮಾಡಿದೆನು. ನಂಜೇಶ ನನ್ನ ಜೊತೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಜೊತೆಯಲ್ಲಿಯೇ ಓದಿ, ಈಗ ಪಶು ವೈದ್ಯನಾಗಿ ಮೈಸೂರಿನಲ್ಲಿದ್ದಾನೆ. ಅವನು ಮೈಸೂರಿಗೆ ಹೊರಟಿದ್ದು, ಕೊಣನೂರಿಗೆ ಬೈಕಿನಲ್ಲಿ ಬಿಡುವಂತೆ ಕೇಳಿದ, ಕಿರಣ ಕೂಡ ಸ್ನೇಹಿತನಾಗಿದ್ದರಿಂದ ಅವನ ಮನೆಗೆ ಹೋದೆವು. ಹೋಗಿ ಯೋಗ ಕ್ಷೇಮ ವಿಚಾರಿಸುತ್ತಿದ್ದ ಸಮಯಕ್ಕೆ ಮನೆಯೊಳಕ್ಕೆ ಯಾರೋ ಬಂದ ಹಾಗೆ ಆಯಿತು. ನಾನು ಟೀ ಕುಡೀಯುತ್ತಿದ್ದೆ, ನನ್ನೆದುರು ಕುರ್ಚಿಯಲ್ಲಿ ಒಂದು ಮದುವೆಯಾದ ಹುಡುಗಿ ಬಂದು ಕುಳಿತಳು, ಅವಳ ಜೊತೆಯಲ್ಲಿ ಬಂದ ಗಂಡಸು, ನಂಜೇಶನ ಪಕ್ಕದಲ್ಲಿ ಕುಳಿತರು. ನಾನು ಅದೆಷ್ಟೇ ಕಷ್ಟಪಟ್ಟರೂ ನನ್ನ ಮುಖದಲ್ಲಾದ ಬದಲಾವಣೆಯನ್ನು ನಿಯಂತ್ರಿಸಲಾಗಲಿಲ್ಲ. ಎರಡು ಗುಟುಕು ಟೀ ಕುಡಿಯಲು ಯುಗವೇ ಕಳೆದಂತಾಯಿತು. ನನ್ನಲ್ಲಾದ ಬದಲಾವಣೆಯನ್ನು ವಿಜಿ ಗಮನಿಸಿದ ಎಂಬುದು ನನಗೆ ತಿಳಿಯಿತು. ನನ್ನ ಮುಂದೆ ಬಂದು ಕುಳಿತ ಆ ಹುಡುಗಿ ಮತ್ತಾರು ಅಲ್ಲಾ, ನನ್ನ ಮೊದಲ ಜೀವದ ಗೆಳತಿ, ಎಂದೆಂದಿಗೂ ಮಾಸದೇ ಉಳಿದಿರುವ ನೆನಪು ,,,,,,,,,,,.
ಅವಳನ್ನು ನೋಡುವ ಮನಸ್ಸು ಆಗದೇ, ನನ್ನ ಬೈಕಿನ ಕೀಯನ್ನು ನಂಜೇಶನಿಗೆ ಕೊಟ್ಟು ಕೊಣನೂರಿಗೆ ಬರುವಂತೆ ಹೇಳಿ ಬಂದೆ. ಅವರ ಮನೆಯಿಂದ ಬರುವಾಗ ಅವರ ಅಮ್ಮನಿಗೂ ಹೇಳದೇ ಬಂದದ್ದು, ಮತ್ತು ನಾನು ಅಷ್ಟೋಂದು ಬೇಸರಗೊಂಡದ್ದು ನನಗೆ ಬಹಳ ಕ್ಷುಲ್ಲಕವೆನಿಸಿತ್ತು. ಅವಳು ಬಂದರೇನಂತೆ, ಅವಳು ನನ್ನ ಜೀವನದಲ್ಲಿ ಎಂದೋ ಮಾಸಿ ಹೋದ ಪುಟವಲ್ಲವೇ ಎಂದರೂ ಒಬ್ಬಳೇ ಇದ್ದಿದ್ದರೇ ಅಷ್ಟು ಆಗುತ್ತಿರಲಿಲ್ಲವೇನೋ? ಜೊತೆಗಿದ್ದ ಗಂಡ, ಅವನು ಬೇಡವೆಂದರೂ ನನ್ನನ್ನು ಅವನೊಂದಿಗೆ ಹೋಲಿಸಿನೋಡತೊಡಗಿತು ನನ್ನ ಮನಸ್ಸು. ಅವನ ಮಾತಲ್ಲಿ ಒಂದು ನೈಸರ್ಗಿಕತೆಯಿಲ್ಲ, ಕಾಟಾಚಾರಕ್ಕೆ ಕರೆದಂತೇ, ಕಷ್ಟಪಟ್ಟು ಮಾತನಾಡುವುಂತೆ. ಭಾವುಕತೆಯಿಲ್ಲ, ಭಾವನೆಗಳಿಲ್ಲ. ದುಡ್ಡಿದೆ, ಸಂಪಾದನೆಯಿದೆ, ಆದರೇ ಅಷ್ಟೇನಾ ಬದುಕು? ನಿನ್ನ ಕಾಲ್ಗೆಜ್ಜೆಯ ಒಂದೇ ಒಂದು ಸಣ್ಣ ಗೆಜ್ಜೆ ತುಂಡು ಮೊನ್ನೆ ಮೊನ್ನೆವರೆಗೂ ನನ್ನ ಬಳಿಯಿತ್ತು. ಅಚಲ ಹಟಹಿಡಿದು ಎಸೆಯುವ ತನಕವೂ ನನ್ನ ಪರ್ಸಿನಲ್ಲಿಯೇ ಇತ್ತು, ನಿನಗೆಂದು ಬರೆದ ಪತ್ರವೂ ಅಷ್ಟೇ, ನನ್ನೊಡನೆಯೇ ಇದೇ ಹನ್ನೆರಡು ವರ್ಷದ ಹಿಂದೆ ಬರೆದದ್ದು, ಇವೆಲ್ಲವೂ ಹುಚ್ಚು ಭಾವುಕತೆ ಎನಿಸುತ್ತದೆ. ಆದರೇನು ಮಾಡಲಿ ನಾನು ಭಾವಾನಾಜೀವಿ. ನೀನು ಭಾವುಕಳೇ, ಅದು ನನಗೆ ತಿಳಿದಿದೆ. ಆದರೇ ನಿನ್ನಯ ಭಾವುಕತೆ ಮಣ್ಣಾಗಿದೆಂಬುದು ನೀ ಆಡಿದ ನಾಲ್ಕು ಮಾತುಗಳಲ್ಲಿಯೇ ತಿಳಿಯಿತು. ನಂತರ ಅಲ್ಲಿಂದ ಹೊರಟು ಬಂದಮೇಲೆ ನನಗೆ ನಾನೇ ಸಮಾಧಾನಪಡಿಸಿಕೊಂಡೆ. ಸಮಾಧಾನ ಪಡಿಸಿಕೊಳ್ಳುವಂತದ್ದೇನೂ ಆಗಲೇಯಿಲ್ಲವೆನ್ನುತ್ತದೆ.
ಶಂಕರ ಬಂದಮೇಲೆ, ಇನ್ನೊಂದು ಬಾಟಲಿ, ಸಿಗರೇಟು, ಸ್ಪೈಟು, ಎಲ್ಲವನ್ನು ತೆಗೆದುಕೊಂಡು ಮನೆಗೆ ಹೋದೆವು. ಮನೆಗೆ ಹೋಗಿದ ನಂತರ ನಮ್ಮ ಮಿಲ್ಟ್ರಿ ಮ್ಯಾನ್ ರವಿಗೆಂದು ಕಾಯ್ದೆವು. ಅವನು ಬರುವಷ್ಟರಲ್ಲಿ, ಗಂಟೆ ಎಂಟಾಗಿತ್ತು. ನಮ್ಮ ಮನೆಯಲ್ಲಿ, ಕ್ಯಾಂಪ್ ಫೈರ್, ಕುಣಿತ ಇವಲ್ಲವೂ ಸರಿಯೇ, ಆದರೇ ಮನೆಯ ಹತ್ತಿರದಲ್ಲಿಯೇ ಹಾಕಿ ಎನ್ನುತ್ತಾರೆ. ಬೇಡವೆಂದು ತೋಟದ ಕಡೆಗೆ ಹೊರಟೆವು. ಅಜ್ಜಿಗೆ, ಹೇಳಿ, ಮಟನ್, ಚಿಕನ್, ಉಪ್ಪಿನಕಾಯಿ, ನೀರು, ಮೊಟ್ಟೆ, ಬೋಟಿ ಹೀಗೆ ಎಲ್ಲವನ್ನು ತೆಗೆದುಕೊಂಡು ಹೊರಡಲು ಅಣಿಯಾದೆವು. ಕಿರಣನಿಗೆ, ಪಂಚೆಯ ಮರೆಯಲ್ಲಿ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ತೆಗೆದುಕೊಂಡು ಬ್ಯಾಗಿಗೆ ಹಾಕು ಎಂದೆ. ಅವನು ಸರಿಯಾಗಿ ನಮ್ಮ ಅಪ್ಪನ ಎದುರಿನಲ್ಲಿಯೇ ಬೀಳಿಸಿದನು. ಅಪ್ಪನ ಜೊತೆಗೆ ಅವರ ಸ್ನೇಹಿತರು ಕುಳಿತಿದ್ದರು. ನಾವು ಹೊರಟ ಕಾರ್ಯ ಅವರಿಗೆ ಸಂಪೂರ್ಣವಾಗಿ ತಿಳಿಯಿತು. ಇದೆಲ್ಲದರ ನಡುವೆ ಚಿಂತನ್ ನಮ್ಮುರಿನ ಸಭ್ಯಾವಂತ ಯುವಕ ಮತ್ತು ಅತಿ ಹೆಚ್ಚು ಓದಿರುವ ಬಸವರಾಜು ಬಂದಿದ್ದರು,. ನಾವು ನದಿ ಹತ್ತಿರದಲ್ಲಿ ಎಂದ ತಕ್ಷಣ, ಅವರು ಉಡುಗಿಹೋದರು. ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಹೆಚ್ಚು ಓದಿದ ಅವನು ದೆವ್ವವಿದೆಯೆಂದು ಪಲಾಯಣ ಮಾಡಿದ್ದು ನನಗೆ ಬಹಳ ಅಚ್ಚರಿ ತಂದಿತು. ಅದಲ್ಲದೇ, ಊರಿನವರು ಕಂಡರೇ ಏನೆಂದಾರೆಂಬುದು ಅವನ ಇನ್ನೊಂದು ಭಯವಾಗಿತ್ತು. ನಾವು ಹೋದ ಸಮಯಕ್ಕೆ ಮಂಜ ಕೂಡ ಜಮಾಯಿಸಿದನು. ಅವನು ಬಂದದ್ದು ಬೆಂಕಿ ಹೊತ್ತಿಸಲು ಅನುಕೂಲವಾಯಿತು. ಕುಡಿದ ನಂತರ ಶುರುವಾಗಿದ್ದು, ಮಂಜನ ಆರ್ಭಟ, ಮೂರ್ನಾಲ್ಕು ಗಂಟೆಗಳು ಸತತವಾಗಿ, ಕಾಮ ಕೇಳಿಯ ಬಗೆಗೆ ಬಾಯಿಗೆ ಬಂದಂತೆ ಮಾತನಾಡಿದನು. ಅದೆಲ್ಲಾ ಮಾತನಾಡಿದ ಮೇಲೆ ಅವನು ಹೇಳಿದ ಮಾತು ನಮ್ಮ ಭಾವ ಇದಾನೆ, ಅದಕ್ಕೆ ನಾನು ಹೆಚ್ಚಿಗೆ ಮಾತನಾಡಲಿಲ್ಲ! ವಿಜಿ ನಾನು ಶಂಕರ ಕುಣಿದು ಕುಪ್ಪಳಿಸುವಾಗ ರವಿ ಮತ್ತು ಕಿರಣ ಗಡಿಯಾರ ನೋಡುತ್ತಿದ್ದರು. ಮನೆಗೆ ಬಂದು ಮತ್ತೆ ಊಟ ಮಾಡಿ ಮಲಗುವಾಗ ರಾತ್ರಿ ಮೂರುವರೆಯಾಗಿತ್ತು.
ಬೆಳ್ಳಿಗ್ಗೆ ಎದ್ದು ಎಲ್ಲರೂ ಒಬ್ಬೊಬ್ಬರಾಗಿ ಊರು ಬಿಟ್ಟರು. ರಾತ್ರಿ ಮೂವರಿದ್ದ ಅಜ್ಜಿಯರ ಜೊತೆಗೆ ಮತ್ತೊಬ್ಬ ಅಜ್ಜಿ ಸೇರ್ಪಡೆಯಾಗಿದ್ದರು. ಅವರು ನಿನ್ನೆ ರಾತ್ರಿ ಹಾಕಿದ ರೆಕಾರ್ಡನ್ನೇ ಮತ್ತೆ ಹಾಕಿದರು. ಹೊಸದಾಗಿ ಮತ್ತೊಂದು ಸೇರ್ಪಡೆಯಾಗಿತ್ತು. ಹುಡುಗಿ ನನ್ನನ್ನು ನೋಡಿದ್ದಾಳೆ, ನಾನು ಹುಡುಗಿಯನ್ನು ನೋಡಿದ್ದೇನೆಂದು. ವಿಜಿ ಮದುವೆಗೆ ಹೋದಾಗ ಅದು ಆಗಿರುವುದು ವರ್ಷದ ಹಿಂದೆ ಆಗ ನನ್ನನ್ನು ನೋಡಿ, ಹುಡುಗಿಯ ಅಣ್ಣ ವಿಚಾರಿಸಿದ್ದಾನೆ. ಅವರು ನಮ್ಮ ಅಜ್ಜಿಯಂದಿರ ಸಂಬಂಧಿಕರೇ ಆದ್ದರಿಂದ ಅಜ್ಜಿಯಂದಿರೆಲ್ಲರೂ ಹೇಳುತ್ತಿದ್ದರು. ಅವರು ಹೇಳುವ ಪ್ರಕಾರ ಹುಡುಗಿಯೂ ನೋಡಿದ್ದಾಳೆಂದು. ನಮ್ಮ ಎರಡನೆಯ ಅಜ್ಜಿ ನೀನು ನೋಡಿದ್ದೀಯಂತೆ ಎಂದರು. ಹಣೆಬರಹಕ್ಕೆ ಹೊಣೆಯಾರೆಂದು ಪದೇ ಪದೇ ಆ ಮಾತುಗಳು ಬೇಡವೆಂದೆ. ನಾವು ರಾತ್ರಿ ಅಲ್ಲಿ ಹೋಗಿ ಕುಣಿದು, ಕುಪ್ಪಳಿಸುವಾಗ ನಮ್ಮಪ್ಪ ನಾವು ಒಂಬತ್ತು ಗುಡ್ಡದಲ್ಲಿ ಕಳವಾಗಿದ್ದ ಕಥೆಯನ್ನು ಅಜ್ಜಿಯಂದಿರಿಗೆ ಹೇಳಿದ್ದರು. ಅದು ನನಗೆ ಒಲಿತೆ ಆಯಿತು. ನಾನು ಆಗ್ಗಾಗ್ಗೆ ಕಾಡು ಮೇಡು ಅಲೆಯುತ್ತಿರುತ್ತೇನೆ, ಮದುವೆ ಈಗಲೇ ಬೇಡ, ಅದೆಲ್ಲವೂ ಅರ್ಥ ಮಾಡಿಕೊಳ್ಳುವವಳು ಬೇಕೆಂದು ಸಮಜಾಯಿಸಿದೆ. ಅಜ್ಜಿಯಂದಿರೂ ಆ ಮಾತುಗಳನ್ನೆಲ್ಲಾ ಒಪ್ಪುವವರಲ್ಲ. ನಾನು ನನ್ನ ಚಾರಣಗಳ ಸುದ್ದಿಯೆಲ್ಲಾ ಹೇಳುವಾಗ ಅವರು ಅವರ ಕಥೆಗಳನ್ನು ಬಿಡಿಸಿಟ್ಟರು. ನನ್ನ ದೊಡ್ಡಜ್ಜಿ, ಇಪ್ಪತ್ತ್ಮೂರು ದಿನ ಕಾಡಿನಲ್ಲಿದ್ದು ಬಂದಿದ್ದರು. ಯಾರೋ ಜ್ಯೋತಿಷಿ ಹೇಳಿದ ಮಾತನ್ನು ನಂಬಿ ಕಾಡಿನಲ್ಲಿದ್ದು ಬಂದಿದ್ದರು. ಆಗ ಅವರ ಮಗನಿಗೆ ಹದಿನೈದು ದಿವಸ. ಹದಿನೈದು ದಿನದ ಬಾಣಂತಿ ದಟ್ಟ ಕಾಡಿನಲ್ಲಿ ಇಪ್ಪತ್ಮೂರು ದಿನ ಯಾರ ಸಂಪರ್ಕಕ್ಕೂ ಬಾರದೇ ಇದ್ದು ಬಂದಿದ್ದು ಕಡಿಮೆಯೇ?

No comments:

Post a Comment