ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

26 October 2010

ನಶಿಸುತ್ತಿರುವ ಸಾಮಾಜಿಕ ಪ್ರಜ್ನೆ...!!!

ನಾನು ಮೊದಲೇ ಹೇಳಿದಂತೆ ರೈಲಿನಲ್ಲಿ ಮೈಸೂರಿಗೆ ಹೋಗಿ ಬರುವುದು ವಾಡಿಕೆಯಾಗಿದೆ. ಅದರಂತೆಯೇ ನಿನ್ನೆಯೂ ಹೋಗಿದ್ದೆ. ಇತ್ತೀಚೆಗೆ ಬಸ್ಸಿನ ದರ ಹೆಚ್ಚಾಗಿರುವುದರಿಂದ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಮುಂಜಾನೆ ಐದು ಗಂಟೆಯ ರೈಲಿಗೂ ಬಹಳ ಜನರು ಬರುತ್ತಾರೆ. ಅದರಲ್ಲಿಯೂ ಕೆಂಗೇರಿ ರೈಲ್ವೇ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯಾದ ಮೇಲಂತೂ ಪ್ರಯಾಣಿಕರ ಸಂಖ್ಯೆ ಅತಿಯಾಗಿ ಹೋಗಿದೆ. ನಾನು ಕಾವೇರಿ ಎಕ್ಷಪ್ರೆಸ್ ನಲ್ಲಿ ಹತ್ತಿ, ಮೇಲಿನ ಬರ್ತನಲ್ಲಿ ಮಲಗಿದೆ. ಕೇವಲ ಅರ್ಧ ಗಂಟೆಯಾಗಿರಬಹುದು. ಕೆಳಗಡೆ ಮಲಗಿದ್ದ ಒಬ್ಬ ಮಧ್ಯ ವಯಸ್ಸಿನ ಮಹಿಳೆ ಮತ್ತು ಗಂಡಸು ಅವರ ಕುಶೋಲೊಪರಿ ಶುರು ಮಾಡಿದರು. ನಾನಂತೂ ಮನೆ ಮಂದಿ ಪ್ರಯಾಣಿಸುವಾಗ ಮಾಡುವ ಕಿರಿಕಿರಿಯನ್ನು ಅನುಭವಿಸಿ ಬೇಸತ್ತಿದ್ದೇನೆ. ಮನೆಯಲ್ಲಿರುವಾಗೆಲ್ಲ ಟಿವಿ ರಿಮೋಟ್ ಹಿಡಿದು ಸಮಯ ವ್ಯರ್ಥ ಮಾಡುತ್ತಾರೆ. ಹೊರಗಡೆ ಬಸ್ಸಿಗೋ, ರೈಲಿಗೋ ಬಂದಾಗ ಮಾತ್ರ ಅಪರೂಪಕ್ಕೆ ಭೇಟಿಯಾದವರಂತೆ ಮಾತನಾಡುತ್ತಾರೆ. ನಿನ್ನೆ ಆದದ್ದೂ ಅದೇ. ಐದು ಮುಕ್ಕಾಲರ ಸಮಯಕ್ಕೆ ಹೆಂಗಸು ಕಾಫಿ ಬೇಕೆಂದು ಕೇಳಿ, ಸೈಡಿನ ಸೀಟಿಗೆ ಹೋಗಿ ಕುಳಿತರು. ಅವರು ಕಿಟಕಿ ತೆಗೆದದ್ದು, ಗಾಳಿ ಹೆಚ್ಚಾದ್ದರಿಂದ ಚಳಿಯಾಗತೊಡಗಿತ್ತು. ಅವರು ಮೈತುಂಬಾ ಸ್ವೆಟರ್, ಹಾಕಿ ತಲೆಗೆಲ್ಲಾ ಮಂಫ್ಲರ್ ಸುತ್ತಿಕೊಂಡಿದ್ದರಿಂದ ಬೆಳಗಿನ ತಂಗಾಳಿಯನ್ನು ಸೈವಿಯುತ್ತಿದ್ದರು, ನಾನು ಹಾಗೆಯೇ ಹೋಗಿದ್ದರಿಂದ ಸವೆಯುತ್ತಿದ್ದೆ. ಗಂಡನಿಗೆ ಏನಾಯಿತೋ ಏನೋ, ದಿಡೀರನೇ ಎದ್ದು ಬಾ ಇಲ್ಲಿಯೇ ಕುಳಿತುಕೊಳ್ಳೋಣವೆಂದು ಎದುರಿನ ಸೀಟಿಗೆ ಕರೆದನು. ಅದರಿಂದಾಗಿ, ನನ್ನ ಕೆಳಗಿನ ಸೀಟಿನ ಕಿಟಕಿ ತೆಗೆದರು. ನಾನು ಮೇಲಿರುವುದು ಅವರ ಗಮನಕ್ಕೆ ಬರಲಿಲ್ಲ, ಅವರ ಮಾತುಕತೆ ಆರಂಭವಾಯಿತು, ಅದು ರಾಷ್ಟ್ರ‍ೀಯ ಮಟ್ಟದಿಂದ ಹಿಡಿದು, ಅವರ ಮನೆಯ ಶಯನ ಗೃಹದವರೆಗೂ ಹೋಯಿತು.
ಜನರು ಎಲ್ಲಿ ಎಂಥಹ ವಿಷಯಗಳನ್ನು ಮಾತನಾಡಬೇಕೆಂಬುದನ್ನು ಅರಿಯುವುದಿಲ್ಲ. ಬಾಯಿಗೆ ಬಂದದ್ದನ್ನು ಇಚ್ಚಾಪೂರ್ವಕವಾಗಿ ಮಾತನಾಡುತ್ತಾರೆ. ಅದು ರಸಿಕತೆಯೇ ಆದರೂ ನನ್ನಂಥಹ ಪೋಲಿ ಹುಡುಗನಿಗೆ ಮುಂಜಾನೆಯ ಚಳಿಯೊಂದಿಗೆ ಇವರ ಮಾತುಗಳು ಏನನ್ನೋ ನೆನಪಿಸುತ್ತಿದ್ದೆವು. ಮದುವೆಯ ಅನಿವಾರ್ಯತೆ ಕಾಣಿಸುವುದು ಇಂಥಹ ಸಮಯದಲ್ಲಿಯೇ ಎನಿಸುತ್ತದೆ. ಅವರು ನಮ್ಮ ದೇಶದ ಬಗೆಗೆ, ಪಾಪ ಸರ್ಕಾರದ ಬಗೆಗೆ ಕೆಲವು ಅರ್ಥಪೂರ್ಣ ಬೈಗುಳಗಳನ್ನು ಹೇಳಿದರು. ಹಾಗೂ ಹೀಗೂ ಕಣ್ಮುಚ್ಚಿ ಮಲಗಿದೆ. ನನಗೆ ಸಂಜೆ ಪ್ಯಾಸೆಂಜರ್ ರೈಲಿಗೆ ಬರುವ ಮನಸ್ಸಿರಲಿಲ್ಲ. ಆದರೇ ವಿಧಿಯಿಲ್ಲದೇ ಪ್ಯಾಸೆಂಜರ್ ರೈಲಿನಲಿಯೇ ಬಂದು ಕುಳಿತೆ. ರೈಲಿನಲ್ಲಿಯೇ ಆಗಲೀ ಬಸ್ಸಿನಲ್ಲಿಯೇ ಆಗಲೀ ನಾನು ಕಂಡಂತೆ ಜನರು ಅದನ್ನು ಸಾರ್ವಜನಿಕ ವಸ್ತುವೆಂಬುದನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಅವರೆಂದೂ ಅದರ ಜವಬ್ದಾರಿ ತೆಗೆದುಕೊಳ್ಳಲು ಬಯಸುವುದಿಲ್ಲ. ಅವರ ಮನೆಯಲ್ಲಿಯೂ ಅಷ್ಟೇ ಕೆಟ್ಟದ್ದಾಗಿ ನಡೆದುಕೊಳ್ಳುತ್ತಾರಾ ಇದು ತರ್ಕಕ್ಕೆ ನಿಲುಕದ್ದು. ನಾನು ಸೀಟು ಹುಡುಕಿಕೊಂಡು ಹೋಗುವಾಗ ಖಾಲಿಯಿದ್ದರೂ ಪಕ್ಕದಲ್ಲಿ ಅವರ ಬ್ಯಾಗುಗಳನ್ನು ಇಟ್ಟುಕೊಳ್ಳುವುದು, ಕಾಲನ್ನು ಎದುರಿನ ಸೀಟಿನ ಮೇಲೆ ಹಾಕಿ ಕುಳಿತುಕೊಳ್ಳುವುದು ಅವರ ಮುಖ ಭಾವವನ್ನು ನೋಡಿದರೇ ಸಾಕು ಅಯ್ಯೋ ಮುಂದಿನ ಮೂರು ಗಂಟೆ ಇವರ ಮುಖ ನೋಡಿ ಪಯಣ ಮಾಡುವುದು ಬೇಡವೆನಿಸುತ್ತದೆ. ಅವರು ನಿಮ್ಮನ್ನು ಸಹ ಪ್ರಯಾಣಿಕರೆಂದು ಭಾವಿಸುವುದಿಲ್ಲ, ವೈರತ್ವವನ್ನು ಸಾಧಿಸುವವರಂತೆ ಕಾಣುತ್ತಾರೆ. ಹಾಗೇ ಮುಂದುವರೆದು ಖಾಲಿ ಸೀಟಿನಲ್ಲಿ ಕುಳಿತೆ. ಎದುರು ಬದುರಿನಲ್ಲಿ ನಾಲ್ಕು ಜನರು ಕುಳಿತಿದ್ದೆವು. ಅಲ್ಲಿಗೆ ಒಂದು ದೊಡ್ಡ ತಂಡವೇ ಬಂದಿತು. ನಾಲ್ಕು ಜನ ಹೆಂಗಸರು, ನಾಲ್ಕು ಮಕ್ಕಳು, ಇಬ್ಬರು ಗಂಡಸರು ಬಂದರು. ಅಷ್ಟು ಜನ ಕುಳಿತುಕೊಳ್ಳಲು ಅಲ್ಲಿ ಜಾಗವಿಲ್ಲವೆಂಬುದು ಅವರಿಗೆ ಅರಿವಾದರೂ ಕೂಡ ಅಲ್ಲಿಯೇ ಕುಳಿತುಕೊಳ್ಳಲು ತಿರ್ಮಾನಿಸಿದರು. ಅದರಲ್ಲಿ ಮಕ್ಕಳು ಮತ್ತು ಒಬ್ಬಳು ಹೆಂಗಸು ಮೇಲೆ ಕುಳಿತುಕೊಳ್ಳಲು ನಿರ್ಧರಿಸಿದರು.
ಪ್ಯಾಸೆಂಜರ್ ರೈಲಿನಲ್ಲಿ ಮೇಲೆ ಕುಳಿತುಕೊಳ್ಳುವ ಅವಕಾಶವಿರುವುದಿಲ್ಲ. ಅಲ್ಲಿ ಕೇವಲ ಲಗ್ಗೇಜು ಇರಿಸುವ ವ್ಯವಸ್ತೆಯಿರುತ್ತದೆ. ಮೇಲೆ ಹೋಗುವಾಗ ಕೆಳಗೆ ಕುಳಿತಿರುವವರ ಬಗೆಗೆ ಸ್ವಲ್ಪವೂ ಯೋಚಿಸದೇ ಹತ್ತಿದರು. ಕಾಲಿನಲ್ಲಿದ್ದ ಚಪ್ಪಲಿಗಳನ್ನು ತೆಗೆಯದೇ ಹತ್ತಿದ್ದರಿಂದ ಬದಿಯಲ್ಲಿ ಕುಳಿತಿದ್ದವರ ತಲೆಯ ಮೇಲೆ, ಮಣ್ಣು ಬಿದ್ದಿತು. ಪಾಪ ಕುಳಿತ ತಪ್ಪಿಗೆ ಅನುಭವಿಸಿದರು. ಅವರು ಮೇಲೆ ಹೋದ ನಂತರ ಗಂಡಸರು ಬಾಗಿಲ ಬಳಿಯಲ್ಲಿ ನಿಂತು ಪ್ರಯಾಣಿಸುವುದಾಗಿ ಹೋದರು. ಹೋದ ನಂತರ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಬಂದರು. ಕುಳಿತುಕೊಳ್ಳಲು ಜಾಗವೇ ಇಲ್ಲದಿದ್ದರೂ ಅಲ್ಲಿಯೇ ತಳ ಹೂಡಿದರು. ಬಂದ ಕೆಲವೇ ಕ್ಷಣಕ್ಕೆ, ಊಟ ಮಾಡಲು ಶುರುಮಾಡಿದರು. ಊಟ ಮಾಡಿದ ಮೇಲೆ ಮಗು ಮಲಗುತ್ತೇನೆಂದಿತು, ಮಲಗಲು ಬದಿಯಲ್ಲಿಯೋ ತೊಡೆಯಮೇಲೆಯೋ ಮಲಗಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಮಗುವನ್ನು ಓಡಾಡುವ ಕಾರಿಡಾರಿನಲ್ಲಿ ಮಲಗಿಸಿದರು. ಅಯ್ಯೋ ಹೆತ್ತವರೇ! ಎನಿಸಿತು. ಪ್ಯಾಸೆಂಜರ್ ರೈಲಿನಲ್ಲಿ ಓಡಾಡುವವರು ಹೆಚ್ಚಿರುತ್ತಾರೆ, ಕಾಫಿ, ವಡೆ, ದೋಸೆ, ಚುರುಮುರಿ, ಸೀಬೆ ಕಾಯಿ, ಸಪೋಟ ಹೀಗೆ ಎಲ್ಲರೂ ಬರುವುದು, ಮಗುವನ್ನು ದಾಟುವುದು ಅನಾಗರಿಕತೆಯೆನಿಸಿತು. ಅದಕ್ಕೂ ಮುಂಚೆ, ಅವರು ಬಂದ ಸ್ವಲ್ಪ ಹೊತ್ತಿಗೆ, ಪಕ್ಕದವರನ್ನು ಈ ನಂಬರಿಗೆ ಫೋನ್ ಮಾಡಿ, ಮಂಜನಿಗೆ ಹೇಳಿ, ನಾವು ರೈಲು ಹತ್ತಿದ್ದೇವೆ ಎಂದರು. ಒಬ್ಬರೂ ನಿರಾಕರಿಸಿದರೂ ಮತ್ತೊಬ್ಬರು ಕರೆ ಮಾಡಿಕೊಟ್ಟರು, ಮೂರ್ನಾಲ್ಕು ನಿಮಿಷ ಮಾತನಾಡಿದ್ದಲ್ಲದೆ, ಬೇರೆ ಯಾರೆಲ್ಲ ಬರುತ್ತಿದ್ದಾರೆ, ಯಾವುದರಲ್ಲಿ ಬರುತ್ತಿದ್ದಾರೆಂಬುದನ್ನು ವಿಚಾರಿಸಿ ಇದೇ ನಂಬರಿಗೆ ಫೋನ್ ಮಾಡಿ ಎಂದರು. ನನಗೆ ಇದನ್ನು ಕಂಡು ನಗಬೇಕಾ? ತಿಳಿಯಲಿಲ್ಲ. ಅವರು ಕೇಳಿದ ರೀತಿ ಕೂಡ ಕೋರಿಕೆಯಂತಾಗಿರಲಿಲ್ಲ.
ಪಾಂಡವಪುರ ಬರುವಾಗ ಪಕ್ಕದಲ್ಲಿ ಜಾಗವಿದ್ದಿದ್ದರಿಂದ ಮೇಲೆ ಕುಳಿತಿದ್ದವರು ಕೆಳಗಿಳಿದರು. ಆ ಗಂಡಸು ಮೇಲೆ ಹತ್ತಿ ಮಲಗುವುದಾಗಿ ಹೋದನು. ನಾನು ಆ ಹೆಂಗಸಿಗೆ ನಿಮ್ಮ ಮಗಳನ್ನು ಮೇಲೆ ನಿಮ್ಮ ಗಂಡನ ಜೊತೆಯಲ್ಲಿ ಮಲಗಿಸಿ ಎಂದೆ. ಇಲ್ಲಾ ಅವರು ಮಲಗಿದ್ದಾರೆ ಎಂದಳು. ದಾರಿಯಲ್ಲಿ ಈ ರೀತಿ ಮಲಗಿಸುತ್ತೀರಲ್ಲಾ ಓಡಾಡುವವರು ದಾಟುವುದಿಲ್ಲವೆ? ಎಂದೆ. ಅದಕ್ಕೆ ಆ ಹೆಂಗಸಿಗೆ ಏನನ್ನಿಸಿತೋ? ಅಲ್ಲಿಂದ ಮಗುವನ್ನು ಕರೆದು, ಎರಡು ಸೀಟಿನ ನಡುವೆ ನೆಲದಲ್ಲಿ ಮಲಗಿಸಿತು. ಅಯ್ಯೋ ದೇವರೇ, ಎಂದುಕೊಂಡೆ. ಕಾಲು ಕೆಳಕ್ಕೆ ಬಿಟ್ಟರೇ ಮಗುವಿನ ದೇಹಕ್ಕೆ ತಾಕುವುದಿಲ್ಲವೇ? ಅದರ ಜೊತೆಗೆ ಪಕ್ಕದಲ್ಲಿ ಕುಳಿತ ಮಹಾಮಣಿಯರು ಕಡ್ಲೆಕಾಯಿ ತಿನ್ನಲು ಶುರುಮಾಡಿದರು. ತಿಂದ ಕಡ್ಲೆಕಾಯಿ ಸಿಪ್ಪೆಯನ್ನು ಮಗುವಿನ ಮೇಲೆ ಹಾಕುತ್ತಿದ್ದರು. ನಾನು ಮಗು ಕೆಳಗೆ ಮಲಗಿದೆ, ಸಿಪ್ಪೆಯನ್ನು ಅಲ್ಲಿಗೆ ಹಾಕಬೇಡಿ ಎಂದೆ. ಅದೆಲ್ಲಿಗೆ ಹಾಕಿದರೂ ಮಗುವಿನ ಮೇಲಂತೂ ಬೀಳಲಿಲ್ಲ. ಮಕ್ಕಳನ್ನು ಹೆತ್ತವರಿಗೆ ಅವರ ಬಗೆಗೆ ಕಾಳಜಿಯಿಲ್ಲವೆಂದರೇ ಅದೇಕೆ ಜೊತೆಯಲ್ಲಿ ಕರೆದೊಯ್ಯಬೇಕು? ಹೆಂಗಸು ಮಗಳನ್ನು ಮಾತನಾಡಿಸುವಾಗ ಮಾತ ಚಿನ್ನಿ, ಚಿನ್ನಿ ಎನ್ನುತ್ತಿದ್ದಳು. ಅದು ಬರೀ ಮಾತಿನಲ್ಲಿಯೇ ಹೊರತು ಪ್ರೀತಿಯಿರಲಿಲ್ಲ. ಇನ್ನೇನೂ ಬಿಡದಿ ಬಂತು ಎನ್ನುವಾಗ, ಬಾಗಿಲ ಬಳಿಯಲ್ಲಿ ನಿಂತಿದ್ದ ಇಬ್ಬರು ಗಂಡಸರು ಬಂದು ಕುಳಿತರು. ಕುಳಿತುಕೊಳ್ಳಲು ಜಾಗವಿಲ್ಲದಿದ್ದರೂ, ಅದರಲ್ಲಿಯೇ, ಹೆಂಗಸರನ್ನು ಒತ್ತಿಕೊಂಡು ಕುಳಿತುಕೊಂಡರು. ನಾನು ನನ್ನ ಶೂಗಳನ್ನು ತೆಗೆದು ಧರಿಸಲು, ಯತ್ನಿಸುವಾಗ, ಅವರು ಅಲುಗಾಡಲೇ ಇಲ್ಲ. ನಾನು ಕೇಳಿದಮೇಲೆಯೇ ಅವರು ತಮ್ಮ ಕಾಲುಗಳನ್ನು ಮತ್ತೊಂದು ದಿಕ್ಕಿಗೆ ಬದಲಿಸಿದ್ದು.
ಜನರಿಗೆ ಸಾಮಾನ್ಯ ಪ್ರಜ್ನೆಯೇ ಇರುವುದಿಲ್ಲವೇ? ಇವರು ಹಳ್ಳಿಯವರೂ ಅಲ್ಲಾ, ಬೆಂಗಳೂರಿನವರಂತೇಯೇ, ಜೀನ್ಸ್, ಟೀ-ಶರ್ಟ್ ಎಲ್ಲಾ ತೊಟ್ಟಿದ್ದಾರೆ. ಜೋರಾಗಿ ಹಾಡು ಬರುವ ಮೊಬೈಲ್ ಇದೆ. ಪಟ್ಟಣದವರಂತೆ ಇರಬೇಕೆಂದು ಬಯಸುವ ಇವರು ಹೋಯ್ತದೆ, ಬತ್ತದೆ, ಅನ್ನುವುದನ್ನು ಮರೆತು ಹೋಗುತ್ತದೆ, ಬರುತ್ತದೆ ಎಂದು ಕನ್ನಡ ಭಾಷೆಯನ್ನು ತಿದ್ದುಕೊಂಡಿದ್ದಾರೆ, ಆದರೇ ನಾಗರೀಕತೆಯ ವಿಷಯಕ್ಕೆ ಬಂದಾಗ ಮಾತ್ರ ಶೂನ್ಯ. ಇನ್ನೂ ಕೆಲವರು ಗದ್ದಲವೆಬ್ಬಿಸುವುದು ವೀರತನವೆಂದು ಭಾವಿಸಿದ್ದಾರೆ. ಬಸ್ಸಿನಲ್ಲಿ, ರೈಲಿನ್ನಲ್ಲಿ ಪ್ರಯಾಣಿಸುವಾಗ ಕಿರುಚುವುದು, ಯಾರಾದರೂ ಸುಮ್ಮನಿರಿ ಎಂದಾಗ ಅವರಿಗೆ ತಿರುಗಿ ಹೇಳಿ ಅವರನ್ನು ಅವಮಾನಿಸುವುದನ್ನೇ ವೀರ ಪೌರುಷವೆಂದು ಭಾವಿಸಿದ್ದಾರೆ. ಹಿರಿಯರಿಗೆ, ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮರ್ಯಾದೆ ನೀಡದೇ, ಹೆಂಗಸರಿದ್ದರೇ ಡಬ್ಬಲ್ ಮೀನಿಂಗ್ ಪದಗಳನ್ನು ಬಳಸಿ ರೇಗಿಸುವುದು, ಪಕ್ಕದಲ್ಲಿ ಕುಳಿತ ಅಪರಿಚಿತ ಹೆಂಗಸರ ಮೈಮುಟ್ಟುವುದು. ಇನ್ನೂ ಕೆಲವರು ರಸ್ತೆಯಲ್ಲಿ ನಡೆಯುವಾಗ ಡಿಕ್ಕಿ ಹೊಡೆದು ಹೋಗುವುದನ್ನು ರಸಿಕತೆಯೆಂದು ಭಾವಿಸಿದ್ದಾರೆ. ಅನಾಕರಿಕತೆ, ಅನೈತಿಕತೆ, ಅಸಂಸ್ಕೃತಿಯನ್ನು ಅರಿಯದ ಜನರು ಕೋಟಿ ಕೋಟಿ ಸಂಪಾದನೆ ಮಾಡಿದರೂ ಅವರಿಂದ ಸಮಾಜಕ್ಕೆ ಆಗುವ ಅನುಕೂಲತೆ ಅಷ್ಟಕ್ಕಷ್ಟೆ.

No comments:

Post a Comment