15 ಡಿಸೆಂಬರ್ 2010

ಹೊಲಸು ಸಂಗತಿಗೆ ಹೊಲಸು ಮಾಡಿಕೊಳ್ಳಲೇ ಬೇಕು!!

ಕಳೆದ ಒಂದೆರಡು ತಿಂಗಳಿನಿಂದ ಥೀಸೀಸ್ ಥೀಸೀಸ್ ಅಂತಾ ಎಲ್ಲರಿಗೂ ಹೇಳಿಕೊಂಡು, ಬರೆಯುವುದನ್ನು, ಹೆಚ್ಚು ಮಾತನಾಡುವುದನ್ನು ನಿಲ್ಲಿಸಿಬಿಟ್ಟಿದ್ದೆ. ಆದರೂ ಆಗೊಮ್ಮೆ ಈಗೊಮ್ಮೆ ಬಾಯಿ ಚಪಲಕ್ಕೆ ಮಾತನಾಡಿ ಥೂ ಈ ವ್ಯವಸ್ಥೆಯ ಬಗ್ಗೆ ಎಷ್ಟು ಮಾತನಾಡಿದರೂ ಉಪಯೋಗವಿಲ್ಲವೆಂದು ಬಾಯಿ ತೊಳೆದುಕೊಂಡು ಮಲಗುತ್ತಿದ್ದೆ. ಎಲ್ಲರ ಬಾಯಿಯಲ್ಲಿಯೂ ನಮ್ಮ ವ್ಯವಸ್ಥೆ ನಮ್ಮ ರಾಜಕಾರಣಿಗಳ ಬಗ್ಗೆ ಮಾತನಾಡುವುದನ್ನು ಬಿಟ್ಟರೇ ಮಿಕ್ಕಾವ ವಿಷಯಗಳು ಸಿಗಲೇ ಇಲ್ಲ. ಆದರೂ, ರಾಜಕಾರಣಿಗಳಿಗಿಂತ ನಾವೇನು ಕಮ್ಮಿಯಿಲ್ಲ ಬಿಡಿ. ಅವರಂತೂ ತೀರ್ಮಾನಿಸಿ ಬಿಟ್ಟಿದ್ದಾರೆ ನಾವಿರುವುದೇ ಹೀಗೆ ಎಂದು, ಆದರೇ ಮತದಾರ ಪ್ರಭು ಏನು ಮಾಡುತಿದ್ದಾನೆ. ಉಪೇಂದ್ರ ಸೂಪರ್ ಸಿನೆಮಾದಲ್ಲಿ ಹೇಳುವಂತೆ ನಾವು ಸತ್ತ ಪ್ರಜೆಗಳಾಗಿದ್ದೇವೆ ಎನಿಸುತ್ತದೆ. ಇದರ ವಿರುದ್ದ ದನಿಯೆತ್ತಲಾರದೇ? ಒಬ್ಬ ಮತದಾರನಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಏನು ಮಾಡಬಹುದೆಂಬುದು ನಮ್ಮೆಲ್ಲರ ಪ್ರಶ್ನೆ. ಆದರೇ, ಈ ಬುದ್ದಿಜೀವಿಗಳೆನಿಸಿಕೊಂಡವರು, ಧಾರ್ಮಿಕ ಗುರುವೆನಿಸಿಕೊಂಡು ಉಂಡು ಹೊಟ್ಟೆ ಬೆಳೆಸಿಕೊಂಡಿರುವ ಸ್ವಾಮೀಜಿಗಳು ಬೀದಿಗಿಳಿದು ರಂಪಾಟಮಾಡಿಬಿಟ್ಟರಲ್ಲ. ಅದು ನಮ್ಮ ವ್ಯವಸ್ಥೆಯ ಅಧೋಗತಿಗೆ ಹಿಡಿದ ಕನ್ನಡಿ. ಆರು ಕೊಟ್ಟರೆ ಅತ್ತೆಯ ಕಡೆಗೆ ಮೂರು ಕೊಟ್ಟರೆ ಮಾವನ ಕಡೆಗೆ ಎನ್ನುವ ಜಾತಿಯವರೆಂದರೂ ತಪ್ಪಿಲ್ಲ. ರಾಜ್ಯವನ್ನೇ ಲೂಟಿ ಮಾಡಿದರೂ ಸರಿಯೇ ನಮಗೆ ನಮ್ಮ ಮಠಕ್ಕೆ ಹಣಕೊಡುವವರು ಅಧಿಕಾರದಲ್ಲಿದ್ದರೇ ಸಾಕೆಂಬುದು ಇವರ ಅನಿಸಿಕೆ ಮತ್ತು ಕಡ್ಡಾಯವೆನಿಸಿದ ತಿರ್ಮಾನ.

ಅವಿದ್ಯಾವಂತ ಪ್ರಜೆಗಳು ಸುಮ್ಮನಿರಲಿ, ಕೆಲಸಕ್ಕೆ ಬಾರದ ನನ್ನಂಥವರು ಸುಮ್ಮನಿರಲಿ, ಆದರೇ ರಾಜ್ಯಕ್ಕೆ ನ್ಯಾಯ ಕೊಡುವ, ಕೊಡಿಸುವ, ನ್ಯಾಯಾಧೀಶರು, ವಕೀಲರು, ನ್ಯಾಯಮೂರ್ತಿಗಳು ಜನರಿಗೆ ಸೂಕ್ತ ಪರಿಹಾರ ಕೊಡಬಾರದೇ? ಸಂವಿಧಾನದಲ್ಲಿರುವ ಸಲಹೆಗಳನ್ನು ಜನರ ಮುಂದಿಡಬಾರದೇ? ಜನ ಹಿತಾಸಕ್ತಿ ಅರ್ಜಿಯನ್ನಾದರೂ ಹಾಕಬಾರದೇ? ಬೀದಿ ನಾಯಿಗಳ ಉಳಿವಿಗೆ ಹೋರಾಡುವ ಸಂಘಸಂಸ್ಥೆಗಳು, ಪ್ಲಾಸ್ಟಿಕ್ ಬಳಕೆಯ ವಿರುದ್ದ ಹೋರಾಡಲು ಬರುವ ಸಂಸ್ಥೆಗಳು, ಹಿಜಡಗಳ ನ್ಯಾಯಕ್ಕೆ, ಸಲಿಂಗ ಕಾಮಕ್ಕೆ ಒತ್ತುಕೊಡಲು ಬೀದಿಗಿಳಿಯುವ ನಾಯಕರುಗಳು, ಮದುವೆಗೆ ಮುನ್ನಾ ಲಿವಿಂಗ್ ಟುಗೆದರ್ ಬಗ್ಗೆ ಬೀದಿಗಿಳಿಯುವ ನಟೀ ಮಣಿಗಳು, ಕನ್ನಡ ಉಚ್ಚಾರಣೆ ಬಾರದೇ ಇದ್ದರೂ ಕನ್ನಡ ಸಂಘ ಕಟ್ಟಿ ಹೋರಾಡುವ ಸಂಘಗಳು, ಹತ್ತು ರೂಪಾಯಿ ಶುಲ್ಕ ಹೆಚ್ಚಿಸಿದಾಗ ಬಂದ್ ನಡೆಸುವ, ನಡೆಸಿ ಬಸ್ ಗೆ ಬೆಂಕಿ ಹಚ್ಚುವ ವಿದ್ಯಾರ್ಥಿ ಸಂಘಗಳು, ಭೈರಪ್ಪ ಕನ್ನಡಿಗರ ವಿರುದ್ದ ಮಾತನಾಡಿದಾಗ ಹೋರಾಡುವ ಸಂಘಸಂಸ್ಥೆಗಳು, ಉಪೇಂದ್ರನ ಸಿನೆಮಾ ರಿಲೀಸ್ ಆದಾಗ ದಿನ ಮುಂಚಿತವಾಗಿ ನಿಂತು ಟಿಕೇಟ್ ತೆಗೆಯಲು ಬಟ್ಟೆ ಹರಿದುಕೊಳ್ಳುವ ಯುವಶಕ್ತಿ, ಕುವೆಂಪು ಯಾರೆಂಬುದು ಗೊತ್ತಿಲ್ಲದೇ ಇದ್ದರೂ ಅವರ ಫೋಟೋ ಹಿಂದಿಟ್ಟುಕೊಂಡು ಆರ್ಕೇಷ್ಟ್ರಾ ನಡೆಸುವ ಯುವಕ ಮಂಡಳಿಗಳು, ಸಂಬಳ ಹೆಚ್ಚಿಸಲು ಬಂದ್ ಮಾಡುವ ಸರ್ಕಾರಿ ನೌಕರರು, ನಾವು ದೇಶದವರೇ ಅಲ್ಲಾ ಎಂದು ತೀರ್ಮಾನಿಸಿರುವ ಐಟಿ ಬಿಟಿಯವರ ಬಗ್ಗೆ ಮಾತನಾಡಬೇಕಾದ್ದದ್ದು ಇಲ್ಲ ಬಿಡಿ. ಅವರು ಮತ ಹಾಕುವುದು ಇಲ್ಲ ಕೇಳುವ ಗೋಜಿಗೂ ಹೋಗುವುದಿಲ್ಲ.

ಒಂದು ದೇಶ ಚೆನ್ನಾಗಿದ್ದರೇ ನಾವೆಲ್ಲರೂ ಚೆನ್ನಾಗಿರುತ್ತೇವೆಂಬ ಸಾಮಾನ್ಯ ಕಾಳಜಿ ನಮ್ಮಲ್ಲಿ ಇಲ್ಲದ್ದಾಯಿತು. ವಿಧಾನಸೌಧದಲ್ಲಿ, ಬಟ್ಟೆ ಹರಿದುಕೊಂಡು ಕೂಗಾಡುವವರನ್ನು, ಅಮ್ಮನ್ ಅವ್ವನ್ ಎಂದು ಬೈಯ್ದಾಡುವವರನ್ನು ಪದೇ ಪದೇ ತೋರಿಸುವ ಟಿವಿ ಚಾನೆಲ್ ಗಳು, ದೇಶ ಎತ್ತ ಹೋದರೇನು ಎಂದು ತಮ್ಮ ಪಾಡಿಗೆ ತಾವು ಕಂಗ್ಲೀಶ್ ಆಡುವ ಟಿವಿ, ರೇಡಿಯೋ ನಿರೂಪಕರು, ಆಗಿದ್ದನ್ನು ಚರ್ಚಿಸಲು ಪದೇ ಪದೇ ಅದೇ ಹಳೇ ಹಳಸಲು ಮೊಗದ ರಾಜಕಾರಣಿಗಳನ್ನು ತಂದು ಚರ್ಚೆ ಮಾಡುವ ಟಿವಿ ಚಾನೆಲ್ ಗಳು, ದಿನ ಪತ್ರಿಕೆಗಳು. ಒಂದು ಪ್ರಗತಿಪರ ವೇದಿಕೆ ಬಿಟ್ಟರೇ ಮಿಕ್ಕಾವ ಪತ್ರಕರ್ತರಾಗಲೀ, ಸಾಮಾನ್ಯ ಮನುಷ್ಯನಾಗಲೀ ಉಸಿರೆತ್ತಾಲಿಲ್ಲ. ಎಲ್ಲರೂ ನಮ್ಮ ರಾಜ್ಯವನ್ನು ಹಾಳು ಮಾಡುತ್ತಿರುವುದನ್ನು ಮನೋರಂಜನೆಯೆಂಬಂತೆ ಆನಂದಿಸಿದರು. ಯಡ್ಯೂರಪ್ಪ ಕದ್ದಿರುವುದು, ದೋಚಿರುವುದು ನಮ್ಮ ಹಣ, ನಮ್ಮ ಆಸ್ತಿಯೆಂಬುದು ಯಾರೊಬ್ಬನ ಬಾಯಿಯಲ್ಲಿಯೂ ಬರಲಿಲ್ಲ.

ಕುಮಾರಸ್ವಾಮಿ ಹೀರೋ ಎಂಬಂತೆ, ವರ್ತಿಸಿದ್ದರೂ, ನ್ಯಾಯಾಂಗ ಹೋರಾಟಕ್ಕೆ ಮುಂದುವರೆಯಲಿಲ್ಲ. ಜನರ ಮುಂದೆ, ಟಿವಿಗಳ ಮುಂದೆ ಆಧಾರಗಳು ಕೊಟ್ಟರೇ ನ್ಯಾಯಾಂಗ ವ್ಯವಸ್ಥೆಯೆಂಬುದಕ್ಕೆ ಅರ್ಥವಿಲ್ಲವೇ? ಅವರು ನಿಜವಾದ ನಾಯಕನೇ ಆಗಿದ್ದರೇ, ಕೊರ್ಟ್ ಗೆ ಅರ್ಜಿ ಹಾಕಿ ಇದರ ವಿರುದ್ದ ಹೋರಾಡಬಹುದಿತ್ತಲ್ಲವೆ? ಜನರು ಸರ್ಕಾರ ನಮ್ಮದು ಎಂದು ಭಾವಿಸಿಲ್ಲ, ಸರ್ಕಾರವೂ, ತಾನಿರುವುದು ಜನರಿಗೆಂದು ಭಾವಿಸುವುದಿಲ್ಲ. ಚುನಾವಣೆಯೆಂಬುದು ಒಂದು ಕ್ರಿಯೆಯಾಗಿದೆ. ಮಳೆಗಾಲ, ಚಳಿಗಾಲ, ಬೇಸಿಗೆಯಂತೆಯೇ, ಚುನಾವಣೆ ಬಿಸಿ ಬರುತ್ತದೆ, ಪುಂಡ ಪೋಕರಿಗಳು, ಕುಡಿದು ಹಣ ತೆಗೆದುಕೊಂಡು ತಮ್ಮನ್ನು ತಾವು ಮಾರಿಕೊಳ್ಳುತ್ತಾರೆ. ಸಭ್ಯ ಜನತೆ ಮತ ಹಾಕುವುದರಿಂದ ಹಿಂದುಳಿಯುತ್ತಾರೆ. ಮತ್ತೆ ಅದೇ ಹೊಲಸು ಮುಖಗಳು ಕುರ್ಚಿ ಎಸೆದು ಗುದ್ದಾಡುತ್ತವೆ. ದೇವ ಮಂದಿರದಂತಹ ವಿಧಾನಸೌಧದ ಹೆಬ್ಬಾಗಿಳಿಗೆ ಒದೆಯುತ್ತಾರೆ, ಜನರನ್ನು ಕುರಿಗಳಂತೆ ಬಲಿಕೊಡುತ್ತಾರೆ. ಇದು ಹೀಗೆ ಮುಂದುವರೆಯಲಿ. ಜೈ ಕರ್ನಾಟಕ ಮಾತೆ.

1 ಕಾಮೆಂಟ್‌:

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...