01 ಮಾರ್ಚ್ 2012


ನನ್ನ ಮನಸ್ಸಿನೊಳಗಿರುವ ನಾಲ್ಕು ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಸಮಯ ಸಿಕ್ಕರೆ, ನಿಮಗೆ ನಾನು ಮಾತನಾಡುತ್ತಿರುವುದರಲ್ಲಿ ಅರ್ಥವಿದೆ ಎನಿಸಿದರೇ, ಅಥವಾ ತೀರಾ ತಪ್ಪಾಗಿ ಕಂಡರೇ ನನಗೆ ಸಲಹೆ ನೀಡಿ. ಚರ್ಚಿಸೋಣ. ನಮ್ಮ ಇಂದಿನ ಭಾರತದ ಅಥವಾ ಕರ್ನಾಟಕದ ಸಮಸ್ಯೆಗಳೇನು? ದಿನ ನಿತ್ಯ ನಮ್ಮ ಕಿವಿಯಲ್ಲಿ ಹರಿದಾಡುವ ಮಾತುಗಳನ್ನು ಸ್ವಲ್ಪ ಗಂಬೀರವಾಗಿ ಗಮನಿಸಿ. ನಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯಲ್ಲಿ ನೋಡಿ ನಮಗೆ ಅಂಥಹ ದೊಡ್ಡ ಸಮಸ್ಯೆಗಳಿವೆ ಎನಿಸುತ್ತಿಲ್ಲ, ಹತ್ತು ಹದಿನೈದು ವರ್ಷದ ಹಿಂದೆ ಇದ್ದಷ್ಟೂ ಸಮಸ್ಯೆಗಳು ನಮ್ಮನೆಯಲಿಲ್ಲ. ನನ್ನ ಅನೇಕ ಸ್ನೇಹಿತರ ಮನೆಯಲ್ಲಿಯೂ ಇಲ್ಲ. ಅಂದ ಮೇಲೆ ಸಮಾಜದಲ್ಲಿ ಸಮಸ್ಯೆಯಿದೆ ಎಂದು ಬೊಬ್ಬೆ ಹೊಡೆಯುತ್ತಿರುವುದು ಸುಳ್ಳಾ? ಮನೆಗೆ ಹೋದರೇ ಟಿವಿ ಹಾಕಿದ ಕೂಡಲೇ ಗಮನಿಸಿ, ಒಂದು ಗಂಟೆ ಸತತವಾಗಿ ನ್ಯೂಸ್ ಚಾನೆಲ್ ಗಳನ್ನು ನೋಡಿ, ಅಲ್ಲಿಂದ ನಿಮ್ಮ ಮನಸ್ಸಿಗೆ ಮುದ ನೀಡುವ ಅಥವಾ ಬೇಸರವಾಗದ ಒಂದೇ ಒಂದು ವಿಷಯವನ್ನು ಅವರು ಪ್ರಸಾರ ಮಾಡುವುದಿಲ್ಲ. ರಾಜಕೀಯ ದೊಂಬರಾಟ, ದ್ವೇಷ, ಹೋರಾಟ, ಕೊಲೆ, ಅತ್ಯಾಚಾರ, ಲಂಚ, ಸಿನೆಮಾ ತಾರೆಯರ ಸಂಭಂಧಗಳು, ಮುನಿಸು, ಕೇಸು, ಇಂಥವುಗಳೇ ಆಗಿರುತ್ತವೆ. ನಾನು ಇದನ್ನು ಸ್ವಲ್ಪ ಸಂಖ್ಯೆಯ ರೂಪದಲ್ಲಿಡುತ್ತೇನೆ.
ಕರ್ನಾಟಕದ ಜನಸಂಖ್ಯೆ (6,11,30,704) ಆರು ಕೋಟಿ ದಾಟಿದೆ, ಸುಮಾರು ತೊಂಬತ್ತು ಸಾವಿರ ಹಳ್ಳಿಗಳಿವೆ. ಊರಿಗೊಬ್ಬ ರಾಜಕಾರಣಿ ಎಂದರೂ ಒಂದು ಲಕ್ಷ ರಾಜಕಾರಣಿಗಳಿದ್ದಾರೆಂಬುದು ನನ್ನ ನಂಬಿಕೆ. ಆರು ಕೋಟಿಯಲ್ಲಿ ಶೇಕಡವಾರು ವಿಂಗಡಿಸಿದರೇ, 0.1% ಆಗುತ್ತದೆ. ನನ್ನೂರು ಬಾನುಗೊಂದಿಯಲ್ಲಿ ನಾನು ಹುಟ್ಟಿದಾಗಿನಿಂದ ಇಲ್ಲಿಯ ತನಕವೂ ಒಂದೇ ಒಂದು ಕೊಲೆಯನ್ನು ನೋಡಿಲ್ಲ, ಕೇಳಿಲ್ಲ. ಹಾದಿಯಲ್ಲಿ ಹೋಗುತ್ತಿದ್ದ ಅಪರಿಚಿತನಿಗೆ ಥಳಿಸಿ ದೋಚಿರುವುದನ್ನು ಕೇಳಿಲ್ಲ. ಇದು ಕೇವಲ ನನ್ನೂರಿನ ಕಥೆಯಲ್ಲ, ನಮ್ಮೆಲ್ಲರ ಊರುಗಳಲ್ಲಿಯೂ ಅಷ್ಟೇ. ಶೇಕಡ ೯೯.೯೯ ರಷ್ಟು ಜನರು ನೆಮ್ಮದಿಯಿಂದ ಅವರವರ ಜೀವನ ನಡೆಸುತ್ತಿದ್ದಾರೆ. ನಂತರದ ವಿಷಯ ಮಾಧ್ಯಮದವರು ತೋರಿಸುವುದು, ಕರ್ನಾಟಕದಲ್ಲಿರುವುದು ಇಪ್ಪತ್ತು ಚಾನೆಲ್ ಎಂದರೂ ಸುಮಾರು ಎರಡು ಸಾವಿರ ಮಾಧ್ಯಮದವರಿರಬಹುದೆಂಬುದು ನನ್ನ ಲೆಕ್ಕಚಾರ. ಈ ಎರಡು ಸಾವಿರ ಜನರು ಇಡೀ ರಾಜ್ಯದ ಆರು ಕೋಟಿ ಜನರ ಉಸಿರು ಎನ್ನುವ ಮಟ್ಟಕ್ಕೆ ಮಾತನಾಡುವುದು ಎಷ್ಟು ಸರಿ. ನನ್ನ ಒಬ್ಬನ ಜೀವನದಲ್ಲಿ ಇದುವರೆಗೆ ಹೆಚ್ಚೆಂದರೆ ಎರಡು ಸಾವಿರ ಜನರ ಜೊತೆ ಮಾತನಾಡಿರಬಹುದು, ಅತಿ ಹೆಚ್ಚು ಎಂದರೂ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಪಾಠ ಮಾಡುವ ಮೇಷ್ಟ್ರು ಬಿಟ್ಟರೆ ಮತ್ತಾರು ಒಂದು ಲಕ್ಷ ಜನರ ಜೊತೆಗೆ ಕೂಡ ಮಾತನಾಡಿರುವುದಿಲ್ಲ. ಹಾಗಿದ್ದ ಮೇಲೆ ಇಡೀ ಸಮಾಜವೇ ಹೀಗೆ ಎನ್ನುವುದು ಎಷ್ಟು ಸರಿ? ಅನೈತಿಕ ಸಂಭಂಧಗಳ ಬಗೆಗೆ ನಾಗರೀಕ ಸಮಾಜ ಬಾರಿ ತಲೆ ಕೆಡಿಸಿಕೊಳ್ಳುತ್ತದೆ, ನಾನು ನನ್ನೂರಿನಲ್ಲಿ ಕಂಡಿರುವ ಮಟ್ಟಕ್ಕೆ ಹೇಳುವುದಾದರೇ ಅದನ್ನೇಲ್ಲ ಅಲ್ಲಿನ ಜನರು ಸಮಸ್ಯೆ ಅಂಥಾಗಲೀ, ಕೆಟ್ಟದ್ದು ಅಂತಾಗಲೀ, ದ್ರೋಹವೆಂದಾಗಲೀ ತಿಳಿದೇ ಇರಲಿಲ್ಲ. ಅವರೇನೂ ಮಾನ ಮರ್ಯಾದೆ ಬಿಟ್ಟು ನಿಂತಿರುವವರಾ? ದಿನಕ್ಕೊಂದು ಎಪಿಸೋಡ್ ಹಿಡಿದುಕೊಂಡು ಬರುವುದಕ್ಕಾಗಿ ನೀವು ಈ ರೀತಿ ವರ್ತಿಸಿವುದು ಎಷ್ಟು ಸರಿ. ಜನರ ಮನಸ್ಸಿನಲ್ಲಿ ಕ್ರೌರ್ಯ ಇರುವುದಿಲ್ಲ ಅದು ಬರುತ್ತಿರುವುದು, ಈ ಮಾಧ್ಯಮಗಳಿಂದ ಅಷ್ಟೇ. ಒಂದೇ ಒಂದು ಚಾನೆಲ್ ಕೂಡ ಸಮಾಜದ ಏಳಿಗೆಗೆ ಅಂಥ ಕಾರ್ಯಕ್ರಮಗಳನ್ನು ತೋರಿಸುವುದಿಲ್ಲ.
ಹತ್ತು ಹದಿನೈದು ವಿವಿಗಳಿವೆ, ಆ ವಿವಿಗಳಲ್ಲಿ ನಡೆಯುತ್ತಿರುವ ಸಂಶೋಧನೆಯ ಬಗ್ಗೆ ಜನರಿಗೆ ಯಾಕೆ ತಿಳಿಸಿಕೊಡುವುದಿಲ್ಲ. ಒಂದು ಕಾಲೇಜಿನಲ್ಲಿ ನಡೆಯುವ ಫ್ಯಾಷನ್ ಶೋ ತೊರಿಸುವ ಚಾನೆಲ್ ಗಳು, ಅಲ್ಲಿನ ಲೈಂಗಿಕ ದೌರ್ಜನ್ಯ ತೋರಿಸುವ ನೀವು ಅವರ ಸಾಧನೆಗಳನ್ನು ತೋರಿಸಿ. ಲಂಚದ ವಿಷಯಕ್ಕೆ ಬರೋಣ, ನಾನು ಜಾತಿ ಪ್ರಮಾಣ ಪತ್ರ ಪಡೆಯುವುದಕ್ಕೆ ದುಡ್ಡು ಕೊಟ್ಟಿದ್ದೇನೆ, ನನಗೆ ಅದು ಸಮಸ್ಯೆ ಅನಿಸಿಲ್ಲ, ಪಿಡುಗು ಅನಿಸಿಲ್ಲ. ನನ್ನೂರಿನ ಎಲ್ಲರೂ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ ಅವರ‍್ಯಾರು ಅದನ್ನು ಪಿಡುಗು ಎಂದು ತಿಳಿದಿಲ್ಲ, ಜನರೇನು ಹುಚ್ಚರೇ? ಸಾಲ ಮಾಡಿ ಲಂಚ ಕೊಡುವುದಕ್ಕೆ? ಜನರು ದಡ್ಡರು ಅವರಿಗೆ ಅವರ ಹಕ್ಕುಗಳ ಬಗ್ಗೆ ತಿಳಿದಿಲ್ಲ, ಅವರನ್ನು ಜಾಗೃತಗೊಳಿಸಬೇಕೆಂಬುದು ಬುದ್ದಿವಂತ ಸಮಾಜದ ಆಜನ್ಮ ವಾದ. ನೇರ ವಿಷಯವನ್ನೇ ಗಮನಿಸೋಣ, ನಾನು ನೀವು ಸೇರಿದಂತೆ ಅದೆಷ್ಟು ಜನರು ಸರ್ಕಾರದ ಮೇಲೆ ಅವಲಂಬಿತರಾಗಿದ್ದೇವೆ. ನನ್ನ ಇಡೀ ಜೀವನದಲ್ಲಿ ಎರಡೇ ಎರಡು ಬಾರಿ ನಮ್ಮ ಕ್ಷೇತ್ರದ ಶಾಸಕನನ್ನು ಭೇಟಿಯಾಗಿರುವುದು. ಪ್ರತಿ ಚುನಾವಣೆಯಲ್ಲಿಯೂ ಓಟು ಹಾಕಿದ್ದೇನೆ. ಆದರೇ ಅವರಿಂದ ನನಗೆ ಕೆಲಸ ಆಗಬೇಕಿರುವುದು ಏನೂ ಇಲ್ಲ. ಇದರಂತೆಯೇ ನಮ್ಮೂರಿನ ಶೇಕಡ ೯೫ ಜನರು ಅವರನ್ನು ಭೇಟಿಯಾಗಿಲ್ಲ, ಆಗುವುದೂ ಇಲ್ಲ. ಅಷ್ಟೂ ಜನರು ದುಡಿಯುತ್ತಿದ್ದಾರೆ, ಮನೆಗೆ ಕನಿಷ್ಟವೆಂದರೂ ಐದು ಲಕ್ಷಗಳನ್ನು ದುಡಿಯುತ್ತಾರೆ. ಸರಿ ಸುಮಾರು ಮೂರು ಕೋಟಿಯಷ್ಟು ಕುಟುಂಬಗಳಿವೆ ಅವರೆಲ್ಲರೂ ಸ್ವಂತ ದುಡಿಮೆಯಿಂದಲೇ ಬದುಕುತ್ತಿದ್ದಾರೆ. ಅವರ‍್ಯಾರು ಸರ್ಕಾರ ಬಂದು ನಮ್ಮ ಮನೆಯನ್ನು ಉದ್ದಾರ ಮಾಡಲೆಂದು ಕೇಳುತ್ತಿಲ್ಲ. ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು, ಜನರಿಗೆ ಅವರ ಕರ್ತವ್ಯದ ಅರಿವಿದೆ. ಮಾಧ್ಯಮದವರು ಜನರಿಗೆ ಅದು ಬೇಕು ಇದು ಬೇಕೆಂದು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ಮಾಧ್ಯಮದವರ ದೃಷ್ಟಿಯಲ್ಲಿ ಜನತೆ ಮನೆ ಬಿಟ್ಟು, ಅವರ ಜವಬ್ದಾರಿಯುತ ಕೆಲಸಗಳನ್ನು ಬಿಟ್ಟು ಬೀದಿಗಿಳಿಯಬೇಕು, ಜನರು ನೆಮ್ಮದಿಯಿಂದಿರುವುದನ್ನು ಇವರು ಇಷ್ಟಪಡುವುದಿಲ್ಲ, ಅದರಿಂದ ಸುದ್ದಿ ಸಿಗುವುದಿಲ್ಲ.
ಅದರಂತೆಯೇ ರಾಜಕಾರಣಿಗಳು ಅಷ್ಟೇ ಸರ್ಕಾರ ಹಾಕುವ ಯೋಜನೆಗಳಿಂದ ಎಲ್ಲರ ಬದುಕನ್ನು ಹಸನಾಗಿಸುತ್ತೇವೆಂಬ ಭ್ರಮೆಯನ್ನು ಬಿಡಬೇಕು. ಅದೆಷ್ಟು ಜನರು ರಾಜಕಾರಣಿಗಳನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ ಹೇಳಿ? ನಾನು ನೀವು ಇವರನ್ನು ಗಂಬೀರವಾಗಿ ಪರಿಗಣಿಸಿದ್ದೇವಾ? ಅಥವಾ ನಮ್ಮ ಅಕ್ಕಪಕ್ಕದ ಮನೆಯರು ಪರಿಗಣಿಸಿದ್ದಾರಾ ಇಲ್ಲ ತಾನೇ? ಮತ್ತೇಕೆ ಮಾಧ್ಯಮದವರು ಹೀಗೆ ಬೂಟಾಟಿಕೆ ನಡೆಸುವುದು. ನಮ್ಮನ್ನು ದಾರಿ ತಪ್ಪಿಸಿರುವುದು ಈ ದರಿದ್ರ ಮಾಧ್ಯಮದವರು ಮಾತ್ರ. ಬ್ರಿಟೀಷರು ಭಾರತಕ್ಕೆ ಬಂದಾಗ ಅವರಿಗೆ ಇದೆಲ್ಲ ಕೆಟ್ಟದ್ದಾಗಿ ಕಂಡೀತು. ಯಾಕೆಂದರೇ ಭಾರತಕ್ಕೆ ಅವರು ಹೊಸಬರು ನಮ್ಮ ಜನ ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆಂಬುದನ್ನು ಅವರಿಂದ ಅರ್ಥ ಮಾಡಿಕೊಳ್ಳಲಾಗಲಿಲ್ಲ ಆದ್ದರಿಂದ ಇಲ್ಲಿರುವುದೆಲ್ಲ ಮೂಢನಂಬಿಕೆ ಎಂದರು. ಅದರಂತೆಯೇ ಸ್ವಾತಂತ್ರ್ಯ ಬಂದಮೇಲೇ ನಮ್ಮ ಜನ ನಾಯಕರೆನಿಸಿಕೊಂಡವರು, ನಮ್ಮ ದೇಶವನ್ನು ಬ್ರಿಟೀಷರು ಕೊಳ್ಳೆಹೊಡೆದು ಹೋಗಿದ್ದಾರೆ ಇದನ್ನು ನಾವೇ ಉದ್ದಾರ ಮಾಡಬೇಕು, ನಾವೆಲ್ಲ ಅವತಾರ ಪುರುಷರು ಎಂಬ ಭ್ರಮೆಯಿಂದ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರು. ಮುಂದುವರೆಯಬೇಕು, ಉದ್ದಾರ, ಅಬಿವೃದ್ದಿಮಾಡಬೇಕು, ಭಾರತವನ್ನು ಅಮೇರಿಕಾದಂತೆ ಮಾಡಬೇಕೆಂಬುದು ಇವರ ಆಶಯವಾಗಿತ್ತು. ಭಾರತವನ್ನು ಭಾರತವನ್ನಾಗಿರಲು ಬಿಡಿ, ಮುಠಾಳ ದೊರೆಗಳು ಇವರು, ನಾನು ನಾನಾಗಿಯೇ ಇರಬೇಕೆ ಹೊರತು, ನಾನು ಬೇರೆಯವನಾಗಲು ಸಾಧ್ಯವಿಲ್ಲ, ಕಾಗೆಯನ್ನು ಕೋಗಿಲೆ ಮಾಡಬೇಕೆಂದರೇ? ಈಡೀ ಭೂಮಂಡಲವೆಲ್ಲಾ ಬರೀ ಕೋಗಿಲೆಗಳಿಂದಲೇ ತುಂಬಿದ್ದರೇ ಅಲ್ಲಿ ವೈವಿದ್ಯ ಇರುತ್ತಿತ್ತಾ? ಹೊಸ ನಿಟ್ಟಿನಲ್ಲಿ ಅರ್ಥ ಮಾಡಿಕೊಳ್ಳೋಣ. ಜನರು ಏನನ್ನು ಬಯಸುತ್ತಾರೆಂಬುದನ್ನು ಜನರ ಮಧ್ಯೆ ಇದ್ದು ಅರಿತುಕೊಳ್ಳಬೇಕೇ ಹೊರತು ಹೊರಗಿನಿಂದಲ್ಲ.
ನನ್ನ ಅಳತೆಯ ಅಂಗಿಯನ್ನು ನಾನೇ ತೊಡಬೇಕು, ಇಡೀ ಸಮಾಜಕ್ಕೆ ಒಂದೇ ಬಗೆಯ ಅಂಗಿ ಹೊಂದುವುದಿಲ್ಲ. ಒಬ್ಬೊನ ಜೀವನ ಶೈಲಿ ಬೇರೆ ಇರುತ್ತದೆ. ಯಾರೂ ದಡ್ಡರಲ್ಲ, ಯಾರೂ ಜವಬ್ದಾರಿಯಿಂದ ದೂರ ಸರಿದಿಲ್ಲ. ಬುದ್ದಿವಂತರೆಂದು ಬಿಂಬಿಸಿಕೊಂಡಿರುವ ಒಂದು ಪರ್ಸೆಂಟ್ ಜನರನ್ನು ೯೯ ಪರ್ಸೆಂಟ್ ಜನರು ಸೀರಿಯಸ್ಸಾಗಿ ಸ್ವೀಕರಿಸಿಲ್ಲ.

2 ಕಾಮೆಂಟ್‌ಗಳು:

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...