ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

04 June 2012

ವಿಶ್ವ ಪರಿಸರದಿನದ ಸವಾಲುಗಳು....!!!!

ಸುಮ್ಮನೆ ಕುಳಿತು ಏನೇನೋ ಗೀಚುತ್ತಿದ್ದ ನನಗೆ ದಿಡೀರನೇ ನೆನಪಾದದ್ದು, ನಾಳಿನ ವಿಶ್ವ ಪರಿಸರ ದಿನ. ನಾನು ಬಹಳಷ್ಟು ಬಾರಿ ಇದೇ ತಪ್ಪನ್ನು ಮಾಡಿದ್ದೇನೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಭಾವಿ ತೋಡುವುದು. ನನ್ನ ಜೀವನದ ಪದ್ದತಿಯೇ ಹಾಗೆ ಎನಿಸುತ್ತದೆ, ನಾನು ಅದನ್ನು ಸಮರ್ಥಿಸಿಕೊಳ್ಳುತ್ತೇನೆ ಕೂಡ. ಜೀವನ ಎಂದಿಗೂ ಒಂದು ಯೋಜಿತ ಕಾರ್ಯಕ್ರಮವಾಗಬಾರದು. ಅದು ಅನಿರೀಕ್ಷಿತದ ತಾಣವಾಗಿರಬೇಕು. ಎಲ್ಲವೂ ನಾವು ಎಂದುಕೊಂಡಂತೆ ಆದರೇ ಅದರಲ್ಲಿ ತಿರುಳಿರುವುದಿಲ್ಲ. ಎಲ್ಲವೂ ಸಮರ್ಪಕವಾಗಿದ್ದರೇ ಅದರಲ್ಲೇನೂ ಖುಷಿ ಹೇಳಿ? ಎಸಿ ಕಾರಿನಲ್ಲಿ ಕುಳಿತು ದೇಶ ಸುತ್ತಿದರೇನೂ ಬಂತು ಮಜಾ? ಸಾರಿಗೆಯಲ್ಲಿ ಹೋಗಿ, ಜನ ಸಾಮಾನ್ಯರ ಮಧ್ಯೆ ಕುಳಿತು ಅನುಭವಿಸಬೇಕು? ನಾನು ಈ ವರೆಗೆ ಮಾಡಿರುವದೆಲ್ಲವೂ ಹಾಗೆಯೇ! ಬಹಳಷ್ಟೂ ಜನ ನನ್ನನ್ನು ಮೆಂಟಲ್ ಎಂದಿದ್ದಾರೆ. ಸುಮ್ಮನೆ ಇದ್ದವನು ನಾಳೆ ಬೆಳ್ಳಿಗ್ಗೆ ಮತ್ತಾವುದೋ ಊರಿಗೆ ಹೋಗಿರುತ್ತೇನೆ. ಸುಮ್ಮನೆ ಇದ್ದವನು ಇನ್ನಾರನ್ನೋ ಮನೆಗೆ ಕರೆದಿರುತ್ತೇನೆ. ನಾನು ಪರಿಸರ ವಿಜ್ನಾನಕ್ಕೆ ಬಂದದ್ದು ಅನೀರೀಕ್ಷಿತವೋ ನನಗೆ ತಿಳಿದಿಲ್ಲ. ಆದರೇ ನಾನು ಪರಿಸರದ ಬಗ್ಗೆ ಒಲವು ಬಂದದ್ದು ಮಾತ್ರ ಹುಟ್ಟಿನಿಂದಲೇ.

ನಾನು ಪಿಯುಸಿ ಫೇಲಾದ ಮೇಲೆ, ಕೆಮಿಸ್ಟ್ರ‍ೀ ಓದಬೇಕೆಂಬ ಹಂಬಲವಿತ್ತು. ಯುವರಾಜ ಕಾಲೇಜಿಗೆ ಸೇರುವಾಗ ನಾನು ಸುಲಭವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಅದರಂತೆ ನನ್ನ ಕಣ್ಣಿಗೆ ಬಿದ್ದದ್ದು, ಪರಿಸರ ವಿಜ್ನಾನ, ಅರ್ಜಿ ತುಂಬುವ ಸಮಯದಲ್ಲಿ ನನಗೆ ಒಂದಿಬ್ಬರೂ ಸಲಹೆ ನೀಡಿದರು, ಪರಿಸರ ವಿಜ್ನಾನ ಮುಂದಿನ ದಿನಗಳಲ್ಲಿ ಬಹಳ ಬೇಡಿಕೆಯ ವಿಷಯವಾಗುತ್ತದೆ ತೆಗೆದುಕೊಂಡು ಓದು ಎಂದು. ಅವರಿಗೆ ನಾನು ನನ್ನ ಮನಸಾರೆ ನಮಸ್ಕರಿಸುತ್ತೇನೆ. ಅದಾದ ಮೇಲೆ ಯುವರಾಜ ಕಾಲೇಜಿಗೆ ಸೇರಿದರೂ ಅದು ಅಂಥಹ ಆಸಕ್ತದಾಯಕವಾಗಿ ಕಾಣುತ್ತಿರಲಿಲ್ಲ. ಪಾಠ ಮಾಡುತ್ತಿದ್ದವರು ಆಸಕ್ತಿ ಮೂಡಿಸುವಲ್ಲಿ ವಿಫಲರಾದರು. ಅಂತೂ ಇಂತೂ ಬಿಎಸ್ಸಿಯನ್ನು ಪಾಸು ಮಾಡಿದ್ದು ಆಯಿತು. ಮೆಡಿಕಲ್ ರೆಪ್ ಆಗುತ್ತೇನೆ, ಓದಿದ್ದು ಸಾಕೆಂದು ಬೆಂಗಳೂರಿಗೆ ಬಂದೆ. ಆ ಸಮಯದಲ್ಲಿ ಸುನಿಲ್ ಮತ್ತು ಅವನ ಸ್ನೇಹಿತ ಶ್ರಿಕಾಂತ್ ಬಹಳ ಸಹಾಯ ಮಾಡಿದ. ಅದೇಕೆ ನಾನು ಆ ಕೆಲಸದಿಂದ ಹಿಂಜರಿದೆ ಎಂಬುದು ನನಗೆ ಇಂದಿಗೂ ಅರ್ಥವಾಗಿಲ್ಲ. ಮೈಸೂರಿನಲ್ಲಿ ಆ ಸಮಯಕ್ಕೆ ನನ್ನ ಬಿಎಸ್ಸಿ ರಿಸಲ್ಟ್ ಬಂದಿತ್ತು. ಮೈಸೂರು ವಿವಿಗೆ ಸೇರುವ ಮನಸ್ಸು ಮಾಡಿದೆ ಆದರೇ ಮನಸ್ಸು ಒಪ್ಪುತ್ತಿರಲಿಲ್ಲ. ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡೆ. ಬೆಂಗಳೂರಿನಲ್ಲಿ ಕೆಲಸ ಮಾಡುವುದು ಖಾಯಂ ಎಂದು ನಿರ್ಧರಿಸಿದೆ. ಆ ಸಮಯದಲ್ಲಿ ನನ್ನ ಭಾವ ನನಗೆ ಬಹಳ ಪ್ರೋತ್ಸಾಹ ನೀಡಿದರು. ಬೆಂಗಳೂರು ವಿವಿಗೆ ಬಂದು ಪರಿಸರ ವಿಜ್ನಾನ ವಿಭಾಗಕ್ಕೆ ಸೇರಿಕೊಂಡೆ. ನನಗೆ ಪರಿಸರವೆಂಬುದರ ಬಗ್ಗೆ ಹಿಂದೆ ಇದ್ದ ಆಸಕ್ತಿ ಹೆಮ್ಮರವಾಗಿ ಬೆಳೆಯತೊಡಗಿತ್ತು. ಮೈಸೂರು ವಿವಿಯಲ್ಲಿ ಓದಿ ಬಂದ ನಾನು ಬೆಂಗಳೂರಿಗೆ ಬಂದು ಅಲ್ಪ ಸ್ವಲ್ಪ ಕಲಿತೆಯೆಂದರೇ ತಪ್ಪಾಗುವುದಿಲ್ಲ.

ಅದೇ ಸಮಯಕ್ಕೆ, ನಾನು ಸೇರಿದ ದಿನದಿಂದ ನನ್ನ ವೈಯಕ್ತಿಕ ಬೆಳವಣಿಗೆಗೆ ಕಾರಣರಾದವರು ನನ್ನ ರೂಮ್ ಮೇಟ್ ದ್ವಾರಕೀಶ್, ನನ್ನ ನೀತಿ ನಿಯಮಗಳು, ಪದ್ದತಿಗಳು, ಆಲೋಚನ ರೀತಿ, ಎಲ್ಲವನ್ನು ತಿದ್ದಿಕೊಳ್ಳಲು ಸಹಾಯ ಮಾಡಿದ ವ್ಯಕ್ತಿ. ನಾನು ಅತಿ ಹೆಚ್ಚು ಇಷ್ಟ ಪಡುವ ಮತ್ತು ಹೆಮ್ಮೆ ಪಡುವು ವ್ಯಕ್ತಿಗಳಲ್ಲಿ ಅಗ್ರ ಸ್ಥಾನ ಆತನಿಗೆ ಎಂದರೂ ತಪ್ಪಾಗುವುದಿಲ್ಲ. ನನ್ನ ಮೊದಲನೆಯ ಎಂಎಸ್ಸಿಯ ಮೊದಲ ದಿನಗಳನ್ನು ಮೆಲುಕು ಹಾಕಿದರೇ, ಹಾಸ್ಟೇಲ್ ನಲ್ಲಿ ಕೊಠಡಿ ಸಿಗುವುದು ಕಷ್ಟವಿದ್ದ ದಿನಗಳಲ್ಲಿ ನನಗೆ ಮಂಚವನ್ನು ಕೊಟ್ಟು ಕೆಳಗೆ ಮಲಗುತ್ತಿದ್ದ ಏಕೈಕ್ ಸೀನಿಯರ್ ಎಂದರೂ ತಪ್ಪಿಲ್ಲ. ಮುಂಚಿನಿಂದಲೂ ಕಥೆ ಕಾದಂಬರಿ ಓದುತ್ತಿದ್ದ ನನಗೆ ಅವನ ಸಹವಾಸ ಮಾಡಿದ ಮೇಲೆ ಕಾದಂಬರಿಗಳನ್ನು ಓದುವುದರ ಜೊತೆಗೆ ಚರ್ಚೆ ಮಾಡುವುದು, ಸೈದ್ದಾಂತಿಕವಾಗಿ ವಿಮರ್ಶೆ ಮಾಡುವುದನ್ನು ಕಲಿತೆ. ಅಂತಿಮ ಘಟ್ಟದಲ್ಲಿ ನನ್ನ ವ್ಯಕ್ತಿಗತ ಬೆಳವಣಿಗೆಗೆ ಸಹಾಯ ಮಾಡಿದ್ದು ಕೆವಿ ರಾಜುರವರ ಆಲೋಚನ ಲಹರಿ. ಅವರು ಚಿಂತನೆ ಮಾಡುವ ರೀತಿ ನನ್ನ ಆಲೋಚನಾ ದಿಕ್ಕನ್ನೇ ಬದಲಾಯಿಸಿತು.

ನಾನು ಇಂದು ಆಲೋಚಿಸುವ ರೀತಿ ಅನೇಕರಿಗೆ ಇಷ್ಟವಾಗುವುದಿಲ್ಲ, ನಾಳೆ ಪರಿಸರ ದಿನವಿದೆ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆಚರಿಸಲು ಯತ್ನಿಸುತ್ತಾರೆ. ತಾವು ಮಾಡಿದ ಸೇವೆಗೆ ಯಾರಾದರೂ ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಬಯಸುತ್ತಾರೆ. ಹಣ ಕೊಟ್ಟು ಪ್ರಶಸ್ತಿಯನ್ನು ಪಡೆಯುತ್ತಾರೆ. ನನಗೆ ಅವರ ಬಗ್ಗೆ ಮಾತನಾಡುವ ಬಯಕೆಯಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆದ ಬದಲಾವಣೆಗಳನ್ನು ಗಮನಿಸಿ, ಕಳೆದ ಐದು ವರ್ಷಗಳಲ್ಲಿ ಬದಲಾದ ರೀತಿಯನ್ನು ಗಮನಿಸಿ, ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಜನರು, ಸರ್ಕಾರ ಎರಡೂ ಕಡೆಯಿಂದ ಪರಿಸರವನ್ನು ತಿಂದು ಹಾಕಿದ್ದಾರೆ. ಪರಿಸರದ ಬಗ್ಗೆ ಸ್ವಲ್ಪವೂ ಭಾವನಾತ್ಮಕವಾದ ಸಂಬಂಧವಿಲ್ಲ. ಇರುವುದೆಲ್ಲವನ್ನೂ ದೋಚಬೇಕು, ಅನುಭವಿಸಬೇಕು, ಆಡಂಬರದ ಜೀವನವನ್ನು ಸವಿಯಬೇಕೆಂಬುದನ್ನು ಬಿಟ್ಟರೇ ಮುಂದಿನ ಪೀಳಿಗೆಗೆಂದು ನಾವು ಪರಿಸರವನ್ನು ಕಾಪಾಡಬೇಕೆಂಬ ಮನಸ್ಸು ಇಲ್ಲ. ಜನರು ನಿಜಕ್ಕೂ ಎಲ್ಲಿ ದಾರಿ ತಪ್ಪಿದ್ದಾರೆಂಬುದನ್ನು ಅರ್ಥೈಸಿಕೊಳ್ಳಬೇಕಿರುವುದು ಈ ದಿನದ ಅನಿವಾರ‍್ಯತೆ. ಮಾತಿನಲ್ಲಿ ಭಾಷಣ ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಇದು ಹೀಗೆಯೇ ಮುಂದುವರೆದರೇ ಇನ್ನೂ ಕೇವಲ ಕೆಲವು ವರ್ಷಗಳಲ್ಲಿ ನಾವು ಸರ್ವನಾಶವಾಗುತ್ತೇವೆ. ಇಂದಿನ ದರಿದ್ರ ಜೋತಿಷಿಗಳು ಎಂಜಲು ಕಾಸು ಮಾಡಲು ಜನರಿಗೆ ಭಯ ಹುಟ್ಟಿಸುತ್ತಿದ್ದಾರೆ. ಇರುವುದು ಇನ್ನು ಕೆಲವೇ ವರ್ಷಗಳು, ಆದಷ್ಟೂ ಮಜಾ ಮಾಡಿ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆಗುತ್ತಿರುವ ತಪ್ಪನ್ನು ತಿದ್ದುವ ಬದಲು ಮತ್ತೂ ಹೆಚ್ಚು ತಪ್ಪು ಮಾಡಲು ಪ್ರಚೋದಿಸುತ್ತಿದ್ದಾರೆ.

ನನ್ನ ಮನಸ್ಸಿನಲ್ಲಿರುವ ನಾಲ್ಕಾರು ಪ್ರಶ್ನೆಗಳಿಗೆ ಈ ಒಂದು ವರ್ಷದಲ್ಲಿ ಉತ್ತರ ಹುಡುಕುವ ಪ್ರಯತ್ನವನ್ನು ಮಾಡುತ್ತೇನೆ. ಮೊದಲನೆಯದಾಗಿ, ಜನರು ಪರಿಸರದ ಬಗ್ಗೆ ಯಾವ ರೀತಿಯ ಭಾವನೆಯನ್ನು ಇಟ್ಟುಕೊಂಡಿದ್ದಾರೆ? ಅಧಿಕಾರಿಗಳು ಸರ್ಕಾರ ಯಾವ ಅನಿಸಿಕೆಯನ್ನು ಇಟ್ಟುಕೊಂಡಿದೆ? ಬದಲಾಗುತ್ತಿರುವ ವಿದ್ಯಮಾನಗಳ ಬಗ್ಗೆ ಜನರ ಅಭಿಪ್ರಾಯವೇನು? ಇದು ಹಿಂದಿನಿಂದಲೂ ಇತ್ತಾ? ಅಥವಾ ಈಗ ಆಗಿದ್ದಾ? ಈ ಬದಲಾವಣೆಗೆ ಉತ್ತರ ಏನು? ಪರಿಹಾರವೇನು? ಒಬ್ಬ ಪರಿಸರ ವಿಜ್ನಾನಿ ಆಗಿ ನಾನು ಏನನ್ನು ಮಾಡಬಹುದು?

No comments:

Post a Comment