ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

06 June 2012

ನಾಲ್ಕು ಕೋಟಿ ಸಂಪಾದನೆಗಿಂತ ನಾಲ್ಕು ಜನರ ಸ್ನೇಹ ಸಂಪಾದನೆ ದೊಡ್ಡದು!!!!

ನಾನು ಬರೆಯುತ್ತಲೇ ಇದ್ದೀನಿ, ನನ್ನ ಬರವಣಿಗೆಯನ್ನು ಯಾರು ಓದುವುದೂ ಇಲ್ಲ, ಯಾರು ಕಣ್ಮುಚ್ಚಿದರೂ ನಾನು ಎದೆ ತುಂಬಿ ಬರೆಯುವೆನು. ಅದೇನೇ ಇರಲಿ, ನಾನು ನನ್ನ ಬ್ಲಾಗ್ ಬರೆಯುವುದು ನನ್ನ ದಿನಚರಿ ಬರೆದ ಹಾಗೆಯೇ ಎಂದರೂ ತಪ್ಪಿಲ್ಲ. ನಾನು ಮೊನ್ನೆ ಊರಿಗೆ ಹಬ್ಬಕ್ಕೆಂದು ಹೋದಾಗ ನಡೆದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಾನು ಇತ್ತೀಚೆಗೆ ಹಿಂದಿನಷ್ಟು ನೆಮ್ಮದಿಯಾಗಿಲ್ಲ. ಏನೋ ಒಂದು ಬಗೆಯ ತಳಮಳ ಬೇಸರ ಅದೇನೆಂಬುದು ನನಗೂ ತಿಳಿದಿಲ್ಲ. ನನಗೆ ಪಿಎಚ್ ಡಿ ಬಂದ ಮೇಲೆ ನನ್ನ ಮನಸ್ಥಿತಿ ಹದ ತಪ್ಪಿದೆಯೆಂಬುದು ನನ್ನ ಅನಿಸಿಕೆ. ಇದನ್ನು ಕೆಲವರು ಗುರುತಿಸಿದ್ದಾರೆ ಮತ್ತು ಹಲವರು ಗುರುತಿಸಿಲ್ಲ. ನಾನು ಮೊದಲಿನಿಂದಲೂ ದುರಹಂಕಾರದ ಪ್ರಾಣಿ. ಸದಾ ಮಲಗಿ ನಿದ್ರಿಸುತ್ತಿದ್ದರೂ ನಾನೇ ಎಲ್ಲವನ್ನೂ ಮಾಡಿದ್ದು, ಎಲ್ಲವನ್ನೂ ಸಾಧಿಸಿಬಿಟ್ಟೆ ಎಂಬುದು ನನ್ನ ತಲೆಯಲ್ಲಿದೆ. ನಾನು ಎಂಬ ಆ ಅಹಂ ಹೋಗುವ ತನಕ ನಾನು ಉದ್ದಾರವಾಗುವುದಿಲ್ಲ. ನಮ್ಮ ಪಿಯುಸಿ ಗೆಳೆಯರೆಲ್ಲ ಒಟ್ಟಿಗೆ ಸೇರೋಣವೆಂದಾಗ ನನಗೆ ಬಹಳ ಖುಷಿಯಾಯಿತು. ಸತ್ಯ ಹೇಳಬೇಕೆಂದರೇ ನನಗೆ ಅತ್ಯುತ್ತಮ ಗೆಳೆಯರಿದ್ದಾರೆ. ಇತ್ತೀಚೆಗೆ ದ್ವಾರಕೀಶ್ ಟೀಮ್ ಜೊತೆಗೆ ನಾನು ಸ್ವಲ್ಪ ಜಗಳವಾಡಿರುವುದನ್ನು ಬಿಟ್ಟರೇ ನನ್ನ ಇಡೀ ಜಾಯಮಾನದಲ್ಲಿಯೇ ನನ್ನ ಸ್ನೇಹಿತರನ್ನು ಬಿಟ್ಟು ಕೊಟ್ಟಿಲ್ಲ. ನನಗೆ ಇದು ಮರುಳಾ ಎನಿಸುತ್ತದೆ.

ನನ್ನ ಹೈಸ್ಕೂಲಿನಲ್ಲಿಯೂ ಅಷ್ಟೇ ಸೈಕಲ್ ಹಾಕಿಕೊಂಡು, ಕಿರಣ, ಶಾಂತ, ಸಂತೋಷ ಹೀಗೆ ಎಲ್ಲರ ಮನೆಗಳಿಗೂ ಹೋಗಿಬರುತ್ತಿದ್ದೆ. ಅವರು ಕೆಲವು ದಿನಗಳು ಕಂಡಿಲ್ಲವೆಂದರೇ ನನ್ನ ಮನಸ್ಸು ಕಸಿವಿಸಿಗೊಳ್ಳುತ್ತಿತ್ತು. ಇದಾದ ನಂತರ ನನ್ನ ಪಿಯುಸಿ ಜೀವನದಲ್ಲಿ ಶಂಕರನನ್ನು, ಲೋಕೇಶನನ್ನು, ವಿಜಿಯನ್ನು ಹಲವಾರು ಬಾರಿ ಅವರ ಮನೆಗಳಿಗೆ ಹೋಗಿ ಹುಡುಕಿದ್ದೇನೆ. ಅವರೆಲ್ಲರಿಗೂ ನಾನೆಷ್ಟು ಮುಖ್ಯವಾಗಿದ್ದೆ ಎಂಬುದನ್ನು ನಾನು ತಿಳಿದಿಲ್ಲ. ಆದರೇ, ನನಗೆ ಸ್ನೇಹವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಸ್ನೇಹ ಮಾತ್ರವಲ್ಲ ಏನನ್ನೂ ಅದರಲ್ಲಿಯೂ ಯಾವ ವ್ಯಕ್ತಿಯನ್ನು ಕಳೆದುಕೊಳ್ಳಲು ತಯಾರಿಲ್ಲ. ನನ್ನತನವನ್ನು ಬಿಟ್ಟು ನಿಲ್ಲುತ್ತೇನೆ. ಸ್ನೇಹದಲ್ಲಿ ನನಗೆ ಅಹಂ ಎನ್ನುವುದು ಇಲ್ಲ, ಆದರೇ ಪ್ರೀತಿಯಲ್ಲಿದೆ. ಹುಡುಗಿಯರ ಮುಂದೆ ನಾನು ತಲೆಬಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಹುಡುಗಿಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಆದರೂ ಏಕೋ ತಿಳಿದಿಲ್ಲ ಹುಡುಗಿಯರ ವಿಷಯದಲ್ಲಿ ಬಹಳ ನಿಷ್ಠುರನಾಗುತ್ತೇನೆ. ನನ್ನ ಎಂಎಸ್ಸಿ ಜೀವನದಲ್ಲಿಯಂತೂ ನನ್ನ ಹೆಸರು ಕೇಳಿದರೇ ಸಾಕು ಉರಿದು ಬೀಳುತ್ತಿದ್ದರು. ಆದರೂ ಅವರೆಲ್ಲಾ ಇಂದಿಗೂ ನನ್ನ ಫೇಸ್ ಬುಕ್ಕಿನಲ್ಲಿದ್ದಾರೆ. ನಾನು ಏನನ್ನೋ ಹೇಳಲು ಹೋಗಿ ಮತ್ತೆನನ್ನೋ ಹೇಳುತ್ತಿದ್ದೇನೆ.

ನಾನು ಹೇಳ ಹೊರಟದ್ದು ಮೊನ್ನೆ ಮನೆಯಲ್ಲಿ ಹೋದಾಗ ನನ್ನ ನೆಂಟರು ಇಷ್ಟರೆಲ್ಲರೂ ಬಂದಿದ್ದರು. ಅವರೆಲ್ಲರಿಗೂ ಒಂದೇ ಚಿಂತೆ ನನ್ನ ಮದುವೆಯದ್ದು. ಹರಿ ಮದುವೆಯಾಗು, ಮದುವೆಯಾಗು ಎಂದು. ನಾನು ಸೂಕ್ಷತೆಯಿಂದ ಗಮನಿಸಿದಾಗ ನನಗೆ ತಿಳಿದ ವಿಷಯ, ನನ್ನ ಬಗ್ಗೆ ನನಗೆ ಅರಿವಾಗದಂತೆ ಅವರುಗಳು ಅದ್ಬುತವಾದ ಗೌರವವನ್ನು ಇಟ್ಟುಕೊಂಡಿದ್ದಾರೆ. ನಾನು ಇದನ್ನು ವಿಜಿಯ ಜೊತೆಗೆ ಚರ್ಚಿಸಿದೆ, ಮಗಾ ನನ್ನ ಬಗ್ಗೆ ಇಷ್ಟೊಂದು ದೊಡ್ಡ ಇಮೇಜ್ ಬೆಳೆಯುವುದಕ್ಕೆ ಕಾರಣ ಏನು? ಅವರು ನನ್ನ ವಿದ್ಯಬ್ಯಾಸದ ಬಗ್ಗೆ ಮಾತನಾಡಿದ್ದರೇ ನನಗೆ ಅಂಥಹದ್ದು ಎನಿಸುತ್ತಿರಲಿಲ್ಲ. ಅವರು ಮಾತನಾಡುತ್ತಿರುವುದು ನನ್ನ ನಡತೆಯ ಬಗ್ಗೆ. ಸತ್ಯವಾಗಿಯೂ ಹೇಳುತ್ತೇನೆ ನನಗೆ ಬಹಳ ಕಸಿವಿಸಿಯಾಯಿತು, ಬೇಸರವೂ ಆಯಿತು. ನಾನು ಅವರ ಆ ಮಟ್ಟಗಿನ ಪ್ರೀತಿ ವಿಶ್ವಾಸಕ್ಕೆ ಅರ್ಹನಲ್ಲ. ನಾನು ಅದನ್ನು ಪಡೆಯಲು ಯೋಗ್ಯನಲ್ಲ. ನಾನು ಮುಂಗೋಪಿ, ಕೋಪಿಷ್ಠ, ದುರಹಂಕಾರದ ಪರಮಾವಧಿ, ಅಹಂಕಾರಿ, ಸರಳತೆಯಿಂದ ದೂರವಿರುವ ಮನುಷ್ಯ. ಆದರೇ ಅವರ ದೃಷ್ಠಿಯಲ್ಲಿ ನಾನು ಬಹಳ ಸರಳತೆಯ ಮನುಷ್ಯ, ಆಡಂಬರವಿಲ್ಲದವನು, ಕೋಪ ಮಾಡಿಕೊಳ್ಳದವನು, ಅತಿಯಾಗಿ ಜನವನ್ನು ಪ್ರೀತಿಸುವವನು. ಇದೆಲ್ಲದ್ದಕ್ಕೂ ಕಾರಣ ಈ ನನ್ನ ಸ್ನೇಹಿತರು. ನನ್ನ ಜೊತೆಯಲ್ಲಿ ನಮ್ಮ ಮನೆಗೆ ಬರುವ ಸ್ನೇಹಿತರನ್ನು ಗಮನಿಸಿದ್ದಾರೆ, ಬರುವವರೆಲ್ಲ ಒಳ್ಳೆಯವರು, ಒಳ್ಳೆಯ ಮನಸ್ಸಿನವರು, ಸ್ವಲ್ಪವೂ ಅಹಂಕಾರವಿಲ್ಲದೆ ನಮ್ಮ ಮನೆಯಲ್ಲಿ ಬಂದು ನಮ್ಮೊಂದಿಗೆ ಹೊಂದಿಕೊಳ್ಳುತ್ತಾರೆ.

ನನಗೆ ನಿಜಕ್ಕೂ ಎನಿಸುವುದು ಒಬ್ಬ ಮನುಷ್ಯನನ್ನು ಅಳೆಯುವುದು ಕೇವಲ ಅವನ ಹಣಬಲದಿಂದ ಅಲ್ಲ, ಅವನಿಗಿರುವ ಒಳ್ಳೆಯ ಸ್ನೇಹಿತರಿಂದ. ಅಂಥಹ ಒಳ್ಳೆಯ ಸ್ನೇಹಿತರು ನನಗಿದ್ದಾರೆಂಬುದು ಹೆಮ್ಮೆಯ ವಿಷಯ. ಅಲ್ಲಿ ಇಲ್ಲಿ ಅಲ್ಪ ಸ್ವಲ್ಪ ಜೊಲ್ಲುಗಳಿದ್ದವು ಅವೆಲ್ಲಾ ದೂರಾಗಿದ್ದಾವೆ. ಕೇವಲ ಗಟ್ಟಿಯಾದ ಸ್ನೇಹಿತರು ಉಳಿದಿದ್ದಾರೆ. ನಾಲ್ಕು ಜನ ಒಳ್ಳೆಯವರಿದ್ದರೇ ಸಾಕು, ನಾಲ್ಕು ನೂರು ಜನರನ್ನು ಇಟ್ಟುಕೊಂಡು ರಾಜ್ಯ ಕಟ್ಟಬೇಕಿಲ್ಲ. ಮನಸ್ಸಿಗೆ ಬೇಸರವಾದಗ ಭುಜಕೊಡಲು, ಜೊತೆಯಲ್ಲಿ ಒಂದೇ ಸಿಗರೇಟ್ ಹಚ್ಚಲು, ಕೂತು ಅರ್ಧ ಲೋಟ ಬಿಯರ್ ಕುಡಿಯಲು ಸಿಕ್ಕರೇ ಸಾಕು.

No comments:

Post a Comment