ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

12 June 2012

ನಿನ್ನಯ ಅರ್ಥಪೂರ್ಣ ಬದುಕಿಗೆ ನನ್ನ ಅರ್ಥ ಪೂರ್ಣ ಶುಭಕಾಮನೆಗಳು...!!!

ನಾನು ಏನನ್ನೋ ಬರೆಯುತ್ತಿದ್ದವನು ದಿಡೀರನೇ, ಫೇಸ್ ಬುಕ್ ನೋಡಿದೆ, ಅಲ್ಲಿ ಮಂಜೇಸ್ ಹುಟ್ಟಿದ ದಿನವನ್ನು ತೋರಿಸುತ್ತಿತ್ತು. ಹದಿನೈದು ದಿನಗಳ ಹಿಂದೆ ನೆನಪು ಮಾಡಿಕೊಂಡಿದ್ದೇ, ನಾನು ಮಂಜೇಶ್ ಮತ್ತು ಅಭಿನಂದನ್ ಗೆ ತಪ್ಪದೇ ಶುಭಾಷಯಕೋರಬೇಕೆಂದು ಆದರೇ, ಬಹಳ ತಡವಾದೆ. ಇದು ಮೊದಲನೆಯ ಬಾರಿಯಲ್ಲ. ಜನ್ಮ ದಿನದಂದು ಶುಭಾಷಯ ಕೋರಲಿಲ್ಲವೆಂದು ಬಹಳಷ್ಟು ಜನರ ಜೊತೆಗೆ ಜಗಳಮಾಡಿಕೊಂಡಿದ್ದೇನೆ. ಮೊನ್ನೆಯೂ ಅದೇ ರೀತಿಯ ಘಟನೆ ನಡೆಯಿತು. ಜೂನ್ ಒಂದನೇಯ ತಾರಿಖಿನಂದು ನಮ್ಮೂರ ಹಬ್ಬವಿತ್ತು. ಊರಿನಲ್ಲಿ ಹುಡುಗರೆಲ್ಲರೂ ಸೇರುವುದು, ನಂದ ಮತ್ತು ಕುಮಾರನ ಹುಟ್ಟಿದ ದಿನ ಜೂನ್ ಎರಡಾಗಿರುವುದರಿಂದ ಜೂನ್ ಒಂದರ ರಾತ್ರಿ ಅವರ ಜನ್ಮ ದಿನವನ್ನು ಆಚರಿಸೋಣವೆಂದು ನಂದ ಮತ್ತು ಕುಮಾರ ಇಬ್ಬರಿಗೂ ಹೇಳಿದ್ದೆ. ನಂದ ಆ ದಿನ ಬರಲಿಲ್ಲ, ಕುಮಾರ ಬಂದಿದ್ದ. ಕುಮಾರನ ಪಕ್ಕದಲ್ಲಿಯೇ ಕುಳಿತಿದ್ದೆ, ರಾತ್ರಿ. ಅದೇ ಸಮಯಕ್ಕೆ ನಂದನೂ ಫೋನ್ ಮಾಡಿದ್ದ. ಇಬ್ಬರಿಗೂ ಶುಭಾಷಯ ಕೋರಲಿಲ್ಲ. ಬೆಳ್ಳಿಗ್ಗೆ ಎದ್ದು ಬಹಳ ಬೇಸರವಾಯಿತು. ಜೊತೆಯಲ್ಲಿಯೇ ಕುಳಿತ್ತಿದ್ದರೂ ಅವರ ಜನುಮದಿನವನ್ನು ಆಚರಿಸಲಿಲ್ಲವಲ್ಲ. ಅದೂ ಹತ್ತು ಹನ್ನೆರಡು ಹುಡುಗರಿದ್ದರು. ಅವರೆಲ್ಲರೂ ಶುಭಕೋರಿದಿದ್ದರೇ ಎಂಥಹ ರೋಮಾಂಚನ ವಾತಾವರಣವನ್ನು ನಿರ್ಮಿಸಬಹುದಿತ್ತು. ಇದು ನನ್ನ ಬೇಜವಬ್ದಾರಿತನವೆನಿಸುತ್ತದೆ.
ಆದ್ದರಿಂದ ಇದೇ ಸಮಯವನ್ನು ಬಳಸಿಕೊಂಡು ಮಂಜೇಶನ ಬಗ್ಗೆ ನಾಲ್ಕು ಸಾಲುಗಳನ್ನು ಗೀಚುತ್ತೇನೆ. ಮಂಜೇಶನನ್ನು ನಾನು ಮೊದಲಿಗೆ ಕಂಡದ್ದು, ನನ್ನ ಪಿಯು ಬದುಕಿನ ಮೊದಲ ದಿನಗಳಲ್ಲಿ. ಅವನು ಅಂದಿಗೇ ಒಬ್ಬ ಬುದ್ದಿವಂತೆ ಮತ್ತು ಕೇವಲ ನನ್ನ ಕ್ಲಾಸ್ ಮೇಟ್. ನಾನು ಮೊದಲ ಸ್ವಲ್ಪ ದಿನಗಳು, ಮನೆಯಿಂದ ಬಾಕ್ಸ್ ತೆಗೆದುಕೊಂಡು ಹೋಗುತ್ತಿದ್ದೆ. ಸರ್ಕಾರಿ ಶಾಲಾ ಮೈದಾನದಲ್ಲಿ ಕುಳಿತು ಎಲ್ಲರೂ ಒಟ್ಟಿಗೆ ತಿಂಡಿ ತಿನ್ನುತ್ತಿದ್ದೆವು. ಬಾಕ್ಸ್ ತರುತ್ತಿದ್ದವರು ಮುಂದಿನ ಸಾಲಿನವರು, ಹೆಚ್ಚಿನ ಮಟ್ಟಿಗೆ ಗಾಂಧಿಗಳು ಎನ್ನಬಹುದು. ಅವರ ವಿರೋಧವೇನೇ ಇದ್ದರೂ ನಾನು ಅವರನ್ನು ಹಾಗೇಯೇ ಕರೆಯುತ್ತಿದ್ದೇನೆ. ನಿಮಗೆ ಬೇಸರವೆನಿಸಬಹುದು, ಆ ದಿನಗಳಲ್ಲಿ ನಾನು ಸ್ವಲ್ಪ ಮುಂದುವರೆದಿದ್ದೆ, ಅಂದರೇ, ಪ್ರಬುದ್ದತೆಯ ಕಡೆಗೆ ದಾಪುಗಾಲು ಹಾಕಿದ್ದೆ. ಪಿಯುಸಿಯಲ್ಲಿದ್ದಾಗ ನನ್ನೆಲ್ಲಾ ಯೋಚನೆಗಳು ಸಾಕಷ್ಟು ಮಟ್ಟಿಗೆ ಕುಡಿಯುವುದು, ಸೇದುವುದು, ಪಿಯುಸಿ ಫೇಲಾಗಿ ದುಡ್ಡು ಮಾಡುವುದರ ಬಗ್ಗೆಯೇ ಯೋಚಿಸುತ್ತಿದ್ದೆ. ಆಗ, ಊಟದಲ್ಲಿದ್ದ ಸಮಯದ್ದಲ್ಲಿ, ಬೆಳ್ಳಿಗ್ಗೆ ನಡೆದಿರುತ್ತಿದ್ದ ಎರಡು ಕ್ಲಾಸುಗಳ ಬಗ್ಗೆ, ಅಥವಾ ನಿನ್ನೆ ಲ್ಯಾಬಿನಲ್ಲಿ ನಡೆದಿರುವ ಘಟನೆಗಳ ಬಗ್ಗೆ, ಪ್ರಭದೇವ, ಪುರುಷೋತ್ತಮ ಹೇಳಿರುವ ಡೈಲಾಗುಗಳನ್ನು ಹಾಗೆಯೇ ಹೇಳುತ್ತಿದ್ದ ಒಬ್ಬ ವ್ಯಕ್ತಿಯೇ ಈ ಮಂಜೇಶ್ ಎಂಬುವನು. ಅವನು ಬಹಳ ಬುದ್ದಿವಂತ ಕನ್ನಡ ಮಾಧ್ಯಮದಿಂದ ಬಂದಿದ್ದರೂ ಬಹಳ ಶ್ರಮ ಹಾಕಿ ಓದುತ್ತಿದ್ದ, ಬಹಳ ಚುರುಕಾಗಿದ್ದ. ಅವನು ವಿಜ್ನಾನವಲ್ಲದೇ ಕಲಾ ವಿಭಾಗಕ್ಕೆ ಸೇರಿದಿದ್ದರೇ ನಿಜಕ್ಕೂ ಐಎಎಸ್ ಮಾಡುತ್ತಿದ್ದನೆಂಬುದು ನನ್ನ ಅಭಿಪ್ರಾಯ. ಪಿಯುಸಿಯಲ್ಲಿ ಆಗೊಮ್ಮೆ ಈಗೊಮ್ಮೆ ನಮ್ಮ ರೂಟಿನ ಬಸ್ಸಿನಲ್ಲಿ ಬರುತ್ತಿದ್ದ. ಇಲ್ಲದಿದ್ದರೇ ಅವನು ಸೋಮವಾರಪೇಟೆಯ ಬಸ್ಸಿನಲ್ಲಿ ಹೋಗುತ್ತಿದ್ದ.
ನನಗೂ ಓದುವ ಹುಡುಗರಿಗೂ ಆಗಿಬರುತ್ತಿರಲಿಲ್ಲ. ಆದ್ದರಿಂದ ನಾನು ಹೆಚ್ಚೇನೂ ಮಾತನಾಡಿಸುತ್ತಿರಲಿಲ್ಲ. ನಗು ಮುಖದಿಂದ ಅವನು ಎಲ್ಲರನ್ನು ಮಾತನಾಡಿಸಿದರು, ನಾನು ಅವನನ್ನು ಅಷ್ಟೇ ನಗು ಮುಖದಿಂದ ಮಾತನಾಡಿಸಿರುವುದು ಕಣ್ಣಿಗೆ ಸಿಗುತ್ತಿಲ್ಲ. ಎರಡನೆಯ ಪಿಯುಸಿಯ ಸಮಯದಲ್ಲಿ, ಟ್ಯೂಷನ್ನಿಗೆ ಹೋಗುವ ಸಮಯದಲ್ಲಿ, ಆಗ್ಗಾಗ್ಗೆ ಮಾತಿಗೆ ಸಿಗುತ್ತಿದ್ದ. ಅವನೊಂದಿಗೆ ನಮ್ಮ ಬ್ಯಾಚಿನ ಲ್ಯಾಬಿಗೆ ಬರುತ್ತಿದ್ದರಿಂದ, ಲ್ಯಾಬರೇಟರಿ, ರೆಕಾರ್ಡು, ನೋಟ್ಸ್ ಬಿಟ್ಟರೇ ಮತ್ತೇನೂ ಇರಲಿಲ್ಲ. ಅದೇ ಸಮಯಕ್ಕೆ ನನಗೆ ಬಿಂಧ್ಯಾ ಮತ್ತು ಸೌಮ್ಯಳ ಮೇಲೆ ನನಗೆ ತಿಳಿಯದ ಒಂದು ಶತ್ರುತ್ವ ಬೆಳೆದಿತ್ತು. ಮಂಜೇಶ ಅವರ ಜೊತೆಯಲ್ಲಿ ಚೆನ್ನಾಗಿದ್ದ ಕಾರಣ, ಮಂಜೇಶ, ವಿನೇಶನನ್ನು ಮಾತನಾಡಿಸುವುದನ್ನು ಕಡಿಮೆ ಮಾಡಿದ್ದೆ. ಮನುಷ್ಯನ ಸ್ವಭಾವವೇ ಹಾಗೆ, ನಾವು ಇಷ್ಟಪಟ್ಟವರು ಹೇಗಿದ್ದರೂ ಒಪ್ಪಿಕೊಳ್ಳುತ್ತೇವೆ, ಇಷ್ಟವಿಲ್ಲದೇ ಇದ್ದರೇ ಅಮೃತವೂ ಪಾಶಾನದಂತೆನಿಸುತ್ತದೆ. ಅದಾದ ಮೇಲೆ ಅವನನ್ನು ಒಂದು ದಿನ ಮೈಸೂರಿನಲ್ಲಿ ಕಂಡಿದ್ದೆ. ರಾಮಸ್ವಾಮಿ ಸರ್ಕಲ್ ನಿಂದ ಕೆಳಕ್ಕೆ ನಡೆದುಬರುವಾಗ ಸಿಕ್ಕಿದ್ದ, ಬಿಎಡ್ ಮಾಡುತ್ತಿದ್ದೇನೆಂದು ಹೇಳಿದ ನೆನಪನ್ನು ಬಿಟ್ಟರೇ ಮತ್ತಾವ ನಂಟು ಉಳಿದಿರಲಿಲ್ಲ.
ಇದಾದ ಬಹಳ ವರ್ಷಗಳ ತರುವಾತ ನಮ್ಮ ಭೇಟಿಯಾದದ್ದು, 2007ರಲ್ಲಿ. ಆ ಸಮಯದಲ್ಲಿ ನಮ್ಮೆಲ್ಲಾ ಪಿಯುಸಿ ಹುಡುಗರನ್ನು ಮತ್ತೆ ಸೇರಿಸಲು ಪ್ರಯತ್ನಿಸತೊಡಗಿದೆವು. ನನಗಿಂದಿಗೂ ನೆನಪಿದೆ, ಆ ದಿನಗಳು ನನಗೆ ಬಹಳ ಮುದ ನೀಡಿದ ಕ್ಷಣಗಳು. ನಾನು ನಂದಗೋಪಾಲ, ಬಿಸಿಲೆ ಘಾಟಿನಲ್ಲಿ ನಿಂತಿದ್ದೇವು, ಅಲ್ಲಿಗೆ ಒಂದು ಐದಾರು ಹುಡುಗರು ಕೂಗಾಡುತ್ತ ಬಂದರು. ಅವರು ಬರುವುದನ್ನು ಕಂಡು ನಾನು ನಂದನಿಗೆ ಹೇಳಿದೆ, ಇಂಥಹ ರೋಮಾಂಚಕ ಸ್ಥಳ ದರಿದ್ರ ಜನರು ನೆಮ್ಮದಿಯಾಗಿ ನಿಲ್ಲುವುದಕ್ಕೂ ಬಿಡುವುದಿಲ್ಲವೆಂದು. ಅಲ್ಲಿಂದ ಹೊರಡುವಾಗ ಒಬ್ಬನನ್ನು ಕಂಡೆ, ಎಲ್ಲೋ ಕಂಡ ನೆನಪು, ವಿಜಯ್ ಕುಮಾರ್ ಎಂದೆ. ಅವನೇ, ನಮ್ಮ ಬಜಾರ್ ಭೀಮಾ, ವಿಜಯ್ ಕುಮಾರ. ಅದಾದ ಸ್ವಲ್ಪ ದಿನದಲ್ಲಿಯೇ ಎಲ್ಲರೂ ಒಬ್ಬರಾದ ಮೇಲೊಬ್ಬರಂತೆ ಸಿಕ್ಕಿದರು. ನೇರವಾಗಿಯಲ್ಲದೇ ಇದ್ದರೂ, ಫೋನಿನಲ್ಲಿ ಮಾತನಾಡತೊಡಗಿದೆವು. ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸೇರಿದೆವು ಕೂಡ. ಅದಕ್ಕೂ ಮುಂಚೆ, ಒಮ್ಮೆ ಊರಿಗೆ ಹೋಗಿದ್ದಾಗ ಮಂಜೇಶನಿಗೆ ಫೋನ್ ಮಾಡಿ ಊರಿಗೆ ಬರುವಂತೆ ಹೇಳಿದೆ. ಅವನಿಗೆ ನಮ್ಮೂರ ದಾರಿ ತಿಳಿದಿರಲಿಲ್ಲ, ಆದ್ದರಿಂದ ಶಿರಂಗಾಲ ದಾಟಿ ಮುಂದಕ್ಕೆ ಬರುತ್ತಿರು, ನಾನು ಬರುತ್ತೇನೆಂದು ಹೇಳಿ ಹೊರಟೆ. ನಾನು ಗಾಡಿಯಲ್ಲಿ ಹೋಗುತ್ತಿರುವಾಗ, ಯಾರೋ ಒಬ್ಬ ಆ ಕಡೆಯಿಂದ ಸುಜ಼ುಕಿ ಸಮುರಾಯಿಯಲ್ಲಿ ಬರಲೋ ಬೇಡವೋ ಎನ್ನುವ ವೇಗದಲ್ಲಿ ಬರುತ್ತಿದ್ದ. ಜೊತೆಯಲ್ಲೊಂದು ಬ್ಯಾಗು, ಬೆಂಗಳೂರಿನಲ್ಲಿಯಾದರೇ ಸೇಲ್ಸ್ ಎ಼ಕ್ಸಿಕುಟಿವ್ ಅಲ್ಲಿಯಾದರೇ ಒಂದು ಸ್ಕೂಲ್ ಮಾಸ್ಟರು ಅಥವಾ ಎಲ್ ಐಸಿಯವನು. ಇವನು ಮುಂದಕ್ಕೆ ಹೋದಮೇಲೆ ನೆನಪಾಯಿತು, ಅಯ್ಯೋ ಇದು ನಮ್ಮ ಮಂಜೇಶ ಎಂದು. ಅಂದು ಜೊತಯಲ್ಲಿ ಕುಳಿತು ಸಿಗರೇಟು ಸೇದಿದೆವು. ಅವನ ಇತಿಹಾಸವನ್ನೆಲ್ಲ ಹೇಳಿದ, ಅವನು ಚಿಂತನೆ ಮಾಡುವ ರೀತಿ ಬಹಳ ಮೆಚ್ಚುಗೆಯಾಯಿತು.
ವಿಚಿತ್ರವೆಂದರೇ ಅವನು ನನಗಿಂತ ನಮ್ಮಪ್ಪನಿಗೆ ಒಳ್ಳೆಯ ಸ್ನೇಹಿತನಾದ. ಅವರಿಬ್ಬರ ಆಲೋಚನ ಕ್ರಮಗಳು ಒಂದೇ ರಿತಿಯದ್ದಾಗಿದೆ. ನಮ್ಮಪ್ಪನಿಗೆ ಸರ್ಕಾರಿ ಕೆಲಸವೆಂದರೇ ಪ್ರಾಣ. ಸರ್ಕಾರಿ ಕೆಲಸದಲ್ಲಿರುವವರು ಬಹುಬೇಗ ಸ್ನೇಹಿತರಾಗುತ್ತಾರೆ. ಅದಕ್ಕೋ ಏನೋ ಅವರಿಬ್ಬರು ಒಳ್ಳೆಯ ಸ್ನೇಹಿತರಾದರು. ಇನ್ನೊಂದು ವಿಚಿತ್ರವೆಂದರೇ, ಮಂಜೆಶನ ತಂದೆ ಯೋಚಿಸುವುದು ನನ್ನ ರೀತಿಯಲ್ಲಿ. ಅವರು ಅದ್ಬುತಾ ಸ್ನೇಹಿತರಾಗುವ ಗುಣಗಳನ್ನು ಹೊಂದಿದ್ದಾರೆ. ಅದಾದ ಮೇಲೆ ನನ್ನ ಹಲವಾರು ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾನೆ, ಸಹಾಯ ಮಾಡಿದ್ದಾನೆ. ಹಣಕಾಸಿನಲ್ಲಿಯೂ ಸಹಾಯ ಮಾಡಿದ್ದಾನೆ. ನಾನು ಅವರ ಮನೆಯಲ್ಲಿ ಬಹಳ ದಿನ ಉಳಿದಿದ್ದೇನೆ, ಅಥಿತಿ ಸತ್ಕಾರವೆಂದರೇ ನಿಜಕ್ಕೂ ಅದು. ಅದೆಷ್ಟು ಪ್ರೀತಿಯಿಂದ ಕಾಣುತ್ತಾರೆಂದರೇ ನೀವು ಅನುಭವಿಸಿಯೇ ತೀರಬೇಕು. ಅವನ ಬಗ್ಗೆ ನನಗಿಂತ ವಿಜಿಗೆ ಬಹಳ ಹೆಮ್ಮೆ. ಅವನು ಹೇಳುತ್ತಿರುತ್ತಾನೆ, ಮಂಜೇಶನದ್ದು ಬಹಳ ಅಚ್ಚುಕಟ್ಟಿನ ಬದುಕು, ಚೆನ್ನಾಗಿ ಕಟ್ಟಿಕೊಂಡಿದ್ದಾನೆ. ಸ್ವಲ್ಪವೂ ಏರು ಪೇರಾಗದಂತೆ ಬಹಳ ಎಚ್ಚರಿಕೆ ವಹಿಸುತ್ತಾನೆಂದು. ನನ್ನದು ತದ್ವಿರುದ್ದ ಜೀವನ ಶೈಲಿಯಾಗಿರುವುದರಿಂದ ನಾನು ಒಮ್ಮೊಮ್ಮೆ ಹಿಯಾಳಿಸುತ್ತೇನೆ.
ಮಂಜೇಶನದ್ದು ಸುಖ ಸಾಂಸಾರಿಕ ಚಿತ್ರ. ಹಳೇ ಸಿನೆಮಾದಲ್ಲಿ ಬರುತ್ತಿದ್ದ ಹೀರೋ ತರಹ, ಸ್ವಲ್ಪ ಆರೋಗ್ಯದ ಸಮಸ್ಯೆ ಇರೋ ಅಪ್ಪಾ, ಮುಗ್ದ ಅಮ್ಮಾ, ಮುತ್ತಿನಂಥಹ ಹೆಂಡತಿ, ಚಿನ್ನದಂಥಹ ಮಗು. ಕೈತುಂಬಾ ಸಂಬಳ. ಬೆಳ್ಳಿಗ್ಗೆ ಆರು ಮೂವತ್ತಕ್ಕೆ ಏಳು, ನಿತ್ಯಕರ್ಮಗಳನ್ನು ಮುಗಿಸು, ಪೇಪರ್ ಓದು, ಹೊಟ್ಟೆ ಮುಂದೆ ಬಂದಿರುವುದಕ್ಕೆ ಹೋಗಿ ಬ್ಯಾಡ್ಮಿಟನ್ ಆಡು, ಬಂದು ಹೊಟ್ಟೆ ತುಂಬಾ ತಿನ್ನು, ಸ್ಕೂಲಿಗೆ ಹೋಗು, ಹೊಟ್ಟೆ ಮಾಸ್ಟರು ಬಂದರು, ಕುಳ್ಳ ಮಾಸ್ಟರು ಬಂದರು ಎಂದು ಮಕ್ಕಳು ಅರುಚುತ್ತಾವೆ. ಬಿಸಿ ಊಟ, ಮಣ್ಣು ಮಸಿ ಅಂತಾ ಪಾಠ ಮಾಡು, ಐದು ಗಂಟೆಗೆ ಮನೆ ಸೇರು, ಹೆಂಡತಿ ಕೈ ಕಾಫಿ ಕುಡಿ, ಮಗಳೊಂದಿಗೆ ಆಟವಾಡು, ಹೊಟ್ಟೆ ತುಂಬಾ ಉಂಡು ಮಲಗು. ಸಿಗರೇಟು ಸೇದುವುದಿಲ್ಲ, ಕುಡಿಯುದಿಲ್ಲ, ಯಾವುದೇ ಕೆಟ್ಟ ಚಟವೂ ಇಲ್ಲ ಕೆಟ್ಟ ಬುದ್ದಿಯೂ ಇಲ್ಲ. ತನ್ನದೇ ಸಾಂಸಾರಿಕ ಕೋಟೆಯೋಳಗೆ ತಿಂದು ಹೊಟ್ಟೆ ಬೆಳಸುವುದನ್ನು ಮಾಡುತ್ತಿದ್ದಾನೆ. ಯಾರದ್ದೇ ಮನೆಯ ಕಾರ್ಯಕ್ರಮಗಳಿಗೂ ತಪ್ಪದೇ ಹೋಗುತ್ತಾನೆ. ಕಷ್ಟಪಟ್ಟು ಕೆಇಎಸ್ ಮಾಡಿದ್ದಾನೆ. ದೇವರು ಅವನನ್ನು ಮತ್ತು ಅವನ ಕುಟುಂಬವನ್ನು ಚೆನ್ನಾಗಿಡಲೆಂದು ಹಾರೈಸುತ್ತೇನೆ. ಮಂಜೇಶನ ಬಗ್ಗೆ ಬರೆಯುತ್ತೇನೆಂದು ಹೊರಟು ನನ್ನಯ ಬಗ್ಗೇಯೇ

2 comments:

  1. ಬಹಳ ಒಳ್ಳೆಯ ಲೇಖನ...ಲೇಖನ ಚೆನ್ನಾಗಿ ಮೂಡಿಬಂದಿರುವದಕ್ಕೆ ಕಾರಣ ನಿಮ್ಮ ಲೇಖನದ ವಿಷಯವಸ್ತು ಮಜೇಶ್ ಅವರು...ನಾನು ಕಂಡ ಅತ್ಯಂತ ಭಾವಜೀವಿಗಳಲ್ಲಿ ಇವರು ಕೂಡ ಒಬ್ಬರು...ಅವರ ಸಹಾಯ ಮಾಡುವ ಗುಣ ನಿಜಕ್ಕೂ ಮೆಚ್ಚುವಂತಹದ್ದು ಮತ್ತು ಅವರಿಂದ ಕಲಿಯಬೇಕಾದ ಗುಣಗಳು ಬಹಳಷ್ಟಿವೆ...ದೇವರು ಅವರನ್ನು ಮತ್ತು ಅವರ ಸುಖಿ ಸಂಸಾರವನ್ನು ಚೆನಾಗಿ ಇಡಲೆಂದು ಹಾರೈಸುತ್ತೇನೆ...

    ReplyDelete
  2. ನಮ್ಮ ಬರವಣಿಗೆ ಚೆನ್ನಾಗಿಲ್ಲ ಎಂದ ಹಾಗಾಯ್ತು??? ಇರಲಿ, ಮಂಜೇಶ್ ನನ್ನ ಒಳ್ಳೆಯ ಸ್ನೇಹಿತ ಮತ್ತು ಒಳ್ಳೆಯ ವ್ಯಕ್ತಿ ಕೂಡ...

    ReplyDelete