07 ಜೂನ್ 2012

ಪಿಯುಸಿ ಬದುಕಿನ ನಾಲ್ಕು ಪುಟಗಳು....!!!!!!!!

ಮೊನ್ನೆ ಭಾನುವಾರ ನಾನು ವಿಜಿ, ಸುನಿಲನ ಮದುವೆ ಬೀಗರ ಊಟ ಮುಗಿಸಿಕೊಂಡು ಕುಳಿತು ಹರಟುತ್ತಿರುವಾಗ ದಿಡೀರನೆ ಹೊಳೆದದ್ದು ನಮ್ಮ ಪಿಯುಸಿ ಹುಡುಗರೆಲ್ಲರನ್ನೂ ಮತ್ತೊಮ್ಮೆ ಸೇರಿಸಬಾರದೆಂಬ ಆಸೆ ಶುರುವಾಯಿತು. ನಾನು ಮತ್ತು ವಿಜಿ ಬಹಳಷ್ಟೂ ಸಲ ತುಂಬಾ ಯೋಜನೆಗಳನ್ನು ರೂಪಿಸಿರುವುದು ಕ್ಷಣ ಮಾತ್ರದಲ್ಲಿ. ಮುಂಚೆಯೂ ಅಷ್ಟೇ ಈಗಲೂ ಅಷ್ಟೇ, ಅದೆಷ್ಟೋ ಬಾರಿ ನಮ್ಮ ಲಾಂಗ್ ರೈಡ್ ಗಳು, ಮತ್ತು ದೂರದ ಟ್ರಿಪ್ ಗಳು ಕ್ಷಣ ಮಾತ್ರದಲ್ಲಿ ರೂಪುಗೊಂಡಿವೆ. ಕುಡಿಯುತ್ತ ಕುಳಿತಿದ್ದು, ಮರು ನಿಮಿಷವೇ, ಮಡೀಕೇರಿಗೆ ಹೋರಟಿದ್ದೇವೆ, ನಮ್ಮೂರಿಗೆ ಹೋಗಿದ್ದೇವೆ, ಚಿಕ್ಕಮಗಳೂರಿಗೆ, ಮೈಸೂರಿಗೆ, ಹೀಗೆ ಹತ್ತು ಹಲವು ಯಶಸ್ವಿ ಓಡಾಟಗಳು ನಮ್ಮ ನೆನಪಿನ ಹೊತ್ತಿಗೆಯಲ್ಲಿವೆ. ಅದರಂತೆಯೇ ಮೊನ್ನೆಯೂ ಶುರುವಾಗಿದ್ದು ಈ ನಮ್ಮ ಚಟುವಟಿಕೆ. ಜೂನ್ ಒಂದರಂದು ನಮ್ಮೂರಿನ ಊರ ಹಬ್ಬವಿದೆ. ಆದ್ದರಿಂದ ಆ ದಿನವೇ ಎಲ್ಲರನ್ನೂ ಸೇರಿಸುವ ಕೆಲಸ ಯಾಕೆ ಮಾಡಬಾರದೆಂದು ಯೋಚಿಸಿ, ನಿರ್ಧರಿಸಿದೆವು. ಅದಾದ ಹತ್ತೇ ನಿಮಿಷದಲ್ಲಿ ಎಲ್ಲರಿಗೂ ಫೋನ್ ಮಾಡಿದ್ದಾಯಿತು. ಎಲ್ಲರೂ ಒಪ್ಪಿದ್ದೂ ಆಯಿತು. ನಾನು ಅದಕ್ಕೆ ಒಂದು ಹಿನ್ನಲೆಯನ್ನು ಕಳೆದ ಬ್ಲಾಗ್ ನಲ್ಲಿ ಬರೆದಿದ್ದೆ. ಅದನ್ನು ನೀವು ಓದಿರಬಹುದು.

ನಾನು ನನ್ನ ಪಿಯುಸಿ ಜೀವನದ ಬಗ್ಗೆ ಅಲ್ಪ ಸ್ವಲ್ಪ ತಿಳಿಸಿಕೊಡಲು ಬಯಸುತ್ತೇನೆ. ಅದು ೧೯೯೮ ರ ಮೇ ತಿಂಗಳು, ನನ್ನ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶ ಬಂದಿತ್ತು. ನಮ್ಮ ಹೊಸ ಮನೆಯ ತಳಪಾಯ (foundation) ಹಾಕಿದ್ದೇವು. ಸಿಮೇಂಟಿಗೆ ನೀರು ಹಾಕುವುದು ನನ್ನ ಕಾರ್ಯವಾಗಿತ್ತು. ಅದು ಆರದಂತೆ ಕಟ್ಟೆ ಕಟ್ಟಿ ಸೈಕಲಿನಿಂದ ಹೇರಬೇಕಿತ್ತು. ಒಮ್ಮೊಮ್ಮೆ ನನಗೆ ಆಶ್ಚರ್ಯವಾಗುತ್ತದೆ, ನಾನು ಚಿಕ್ಕವನಿದ್ದಾಗ ಎಷ್ಟೆಲ್ಲಾ ಕೆಲಸ ಮಾಡುತ್ತಿದೆಯೆಂದು. ಈಗ ಕಾಫಿ ಕುಡಿದ ಲೋಟವನ್ನು ಎತ್ತಿಡುವುದಿಲ್ಲ ಇಂಥಹ ಸೋಮಾರಿತನವನ್ನು ನನಗೆ ಆ ಬ್ರಹ್ಮ ಅದು ಹೇಗೆ ಅನುಗ್ರಹಿಸಿದನೆಂಬುದೇ ಅಚ್ಚರಿ. ನಾನು ಸೈಕಲ್ ಹತ್ತಿ ಶಾಲೆಗೆ ಹೋಗಿ ನನ್ನ ಹಣೆಬರಹವನ್ನು ತಿಳಿಯಲು ಹೋದೆ. ತುಂಬಾ ಸತ್ಯ ಹೇಳಬೇಕೆಂದರೇ ನನ್ನ ಇಡೀ ಜೀವನದಲ್ಲಿಯೇ ಮೊದಲನೇ ಬಾರಿ ನಾನು ನನ್ನ ರಿಸಲ್ಟ್ ನೋಡಿದ್ದು! ಆ ಹಿಂದಿನ ಎಲ್ಲಾ ರಿಸಲ್ಟ್ ಅನ್ನು ನಮ್ಮಪ್ಪನೇ ನೋಡಿರುತ್ತಿದ್ದರು ಅಥವಾ ನನ್ನ ಯಾರಾದರೂ ಕ್ಲಾಸ್ ಮೇಟ್ಸ್ ಹೇಳುತ್ತಿದ್ದರು. ಮೊದಲನೇ ಬಾರಿಗೆ ನೋಡುವಾಗ ಅಲ್ಲಿ ಪಾಸಾಗಿರುವವರ ನಂಬರ್ ಹಾಕಿರುತ್ತಾರಾ? ಫೇಲ್ ಆಗಿರುವವರ ನಂಬರ? ಎನ್ನುವುದೇ ಅನುಮಾನವಾಯಿತು. ಅಂತೂ ಪಕ್ಕದಲ್ಲಿರುವ ನನ್ನ ಅನೇಕಾ ಪರಿಚಯಸ್ಥ ಮುಖಗಳನ್ನು ನೋಡಿದೆ. ಏನಾಯ್ತು ಎಂದು ಕೇಳಿದರೇ, ಮೂರು ಹೋಗಿದೆ, ಎರಡು ಹೋಗಿದೆ, ಎಲ್ಲಾ ಡಮಾರು, ಇಂಥಹ ಉತ್ತರಗಳು. ಯಾರೊಬ್ಬರ ಮುಖದಲ್ಲಿಯೂ ಆತಂಕವಿಲ್ಲ,. ನನಗೆ ಆಗಲೇ ಅನಿಸತೊಡಗಿತ್ತು, ಸೋತಾಗ ಯಾವತ್ತೂ ಹಿಂಜರಿಯಬಾರದು. ಸೋಲನ್ನು ಧೈರ್ಯದಿಂದ ಒಪ್ಪಿಕೊಳ್ಳಬೇಕು. ನಾನು ನಾಲ್ಕು ಕೀಮೀ ದೂರ ಸೈಕಲ್ ಹೊಡೆಯುವಾಗೆಲ್ಲ ನನ್ನ ಮುಂದಿನ ಯೋಜನೆಗಳ ಬಗ್ಗೆ ಯೋಚಿಸುತ್ತಿದ್ದೆ, ಮುಂದೆ ಏನು ಮಾಡಬೇಕೆಂಬುದನ್ನು ಯೋಜಿಸತೊಡಗಿದ್ದೆ. ಶಾಲೆಯಿಂದ ಕೊಣನೂರಿನಲ್ಲಿಯೇ ಸೈಕಲ್ ನಿಲ್ಲಿಸಿ, ಕುಶಾಲನಗರದ ಅಜ್ಜಿಯ ಮನೆಗೆ ಹೋಗುವುದು, ಅಲ್ಲಿಂದ ವಿರಾಜಪೇಟೆಯ ನಮ್ಮ ಚಿಕ್ಕಮ್ಮನ ಮನೆಗೆ ಹೋಗುವುದು, ಸ್ವಲ್ಪ ವರ್ಷ ಅವರ ಕಾಫಿ ವರ್ಕ್ಸ್ ನಲ್ಲಿ ಕೆಲಸ ಮಾಡುವುದು, ಅಮೇಲೆ ಒಂದು ವ್ಯಾನು ತೆಗೆಯುವುದು, ದೊಡ್ಡ ಸಾಹುಕಾರನಾಗುವುದು. ಹೀಗೆ ಏನೇನೋ ತಲೆಯಲ್ಲಿ ಓಡಾಡತೊಡಗಿತ್ತು. ಅಪ್ಪನಿಗೆ ಮುಖ ತೋರಿಸುವ ಧೈರ್ಯವಂತೂ ಇರಲಿಲ್ಲ. ಅವರಿಗೆ ನಮ್ಮ ಕಷ್ಟವು ತಿಳಿದಿರಲಿಲ್ಲ.

ಶಾಲೆಯ ಆವರಣದೊಳಕ್ಕೆ ನುಂಗಿದೆ. ಸೈಕಲ್ ಸ್ಟಾಂಡಿನಲ್ಲಿ ಸೈಕಲ್ ನಿಲ್ಲಿಸಿ ರಿಸಲ್ಟ್ ಬೋರ್ಡಿನ ಕಡೆಗೆ ಹೊರಟೆ. ನನಗಿಂದಿಗೂ ನೆನಪಿದೆ, ಕಣ್ಣಿಗೆ ಕಟ್ಟಿದ ಹಾಗಿದೆ ಆ ದಿನ. ನಮ್ಮ ಶಾಲೆಯನ್ನು ನೋಡಿರುವ ಅನೇಕರಿಗೆ ಇದನ್ನು ವರ್ಣಿಸುವ ಅವಶ್ಯಕತೆಯಿಲ್ಲ. ತಿಳಿಯದಿದ್ದವರಿಗೆ ತಿಳಿಸಬೇಕು. ನನ್ನೆಲ್ಲಾ ಸ್ನೇಹಿತರಿಗೂ ನನ್ನ ಶಾಲೆಯನ್ನು ತೊರಿಸಿದ್ದೇನೆ! ಶಾಲೆಯ ಮುಂದೆ ಮೈದಾನವಿದೆ, ಅಲ್ಲೊಂದು ಸಿಮೇಂಟಿನಲ್ಲಿ ಕಟ್ಟಿಸಿರುವ ವೇದಿಕೆಯಿದೆ, ಅದಕ್ಕೆ ಒರಗಿಕೊಂಡಂತೆಯೇ, ಶಾಲೆಯ ಆಫೀಸ್ ರೂಂ ಮತ್ತು ಆ ದಿನಗಳ ಹತ್ತನೇಯ ಎ ಸೆಕ್ಷನ್ ಕೊಠಡಿಯಿದೆ. ಅದೇ ರೂಮಿನಲ್ಲಿ ನಾವು ಕುಳಿತುಕೊಳ್ಳುತ್ತಿದ್ದೇವು. ವರ್ಷವಿಡೀ ಪಾಠ ಕೇಳಿದ ಆ ರೂಮಿನಲ್ಲಿಯೇ ನಮ್ಮ ರಿಸಲ್ಟ್. ಅದು ಅದೃಷ್ಟದ ಕೊಠಡಿಯೋ? ಲತ್ತೆಯೋ? ತಿಳಿದಿಲ್ಲ. ಆ ರೂಮಿನಲ್ಲಿ ಮನ ಬಂದಂತೆ ಕುಣಿದಿದ್ದೆವು, ಆಡಿದ್ದೇವು, ಹೊಡೆಸಿಕೊಂಡಿದ್ದೇವು, ಕಿರು ಪರೀಕ್ಷೆಗಳಲ್ಲಿ ಧುಮುಕಿ ಹೊಡೆದಿದ್ದೇವು. ಅಂತೂ ಕಿಟಕಿಯ ಬಳಿಗೆ ಹೋದೆ, ರಿಸಲ್ಟ್ ಶೀಟುಗಳನ್ನು ಅಂಟಿಸಿಗ ಹಲಗೆ ದೂರದಲ್ಲಿಯೇ ಇತ್ತು. ಹೊರಗಡೆ ಹಾಕಿದರೇ ಹರಿದು ಹಾಕುತ್ತಾರೆಂಬ ಭಯ ಮಾಸ್ಟರುಗಳಿಗೆ, ಅಂಕೆಗಳು ಮಂಜಾಗಿ ಕಾಣುತ್ತಿದ್ದವು. ನಾನು ಕೆಳಗಡೆಯಿಂದಲೇ ನೋಡಿದೆ, ಜಸ್ಟ್ ಪಾಸಾಗಿರುವ ಪಟ್ಟಿ ಇತ್ತು. ನಂತರದ ಪಟ್ಟಿ ಮೂರನೇ ದರ್ಜೆ ಇದು ನನ್ನದೇ! ಆ ಸಾಲಿನಲ್ಲಿ ನಮ್ಮ ತರಗತಿಯ ಅನೇಕರ ಹೆಸರುಗಳಿದ್ದವು. ನನ್ನ ಕಣ್ಣು ನಾನೇ ನಂಬಲಿಲ್ಲ. ಖುಷಿಯಾಯಿತು, ಬಹಳ ಬೇಸರವಾಯಿತು. ನನಗೆ ಓದಲೂ ಏನೇನೂ ಇಷ್ಟವಿರಲಿಲ್ಲ. ಮತ್ತೇ ಓದಬೇಕು? ದೇವರೇ ನಾನು ನಿನ್ನನ್ನು ಪಾಸು ಮಾಡೆಂದು ಕೇಳಿರಲಿಲ್ಲ. ನನ್ನ ಕನಸುಗಳಿದ್ದದ್ದು, ನಾನು ನಾಲ್ಕಾರು ಲಾರಿಗಳ, ವ್ಯಾನುಗಳ ಮಾಲಿಕನಾಗಬೇಕೆಂಬುದು. ಅದು ನುಚ್ಚು ನೂರಾಗಿತ್ತು.

ನನಗೆ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಆಸ್ಥೆಯಿತ್ತು. ಇಂದಿಗೂ ಅಷ್ಟೇ, ಜಮೀನು, ಕೃಷಿ, ವ್ಯಾಪಾರದಲ್ಲಿರುವ ಆಸೆ ಈ ಪಟ್ಟಣದ ಕೂಲಿ ಕೆಲಸದಲಿಲ್ಲ. ಮನೆಗೆ ಬಂದೊಡನೆ ನನ್ನನ್ನು ನಮ್ಮಪ್ಪ ಕೇಳತೊಡಗಿದರು. ಏನು ಓದುತ್ತಿಯಾ ಎಂದು. ನನ್ನಾಣೆ ಹೇಳುತ್ತೀನಿ ನಾನು ಅಂದಿಗೆ ಶತ ಮೂರ್ಖ ಇಂದಿಗೂ ಮೂರ್ಖನೇ ಬಿಡಿ. ನಾನು ಎಲ್ಲಿಗೇ ಸೇರುತ್ತೇನೆ, ಏನನ್ನು ಓದುತ್ತೇನೆಂಬುದರ ಅರಿವೇ ಇರಲಿಲ್ಲ. ಹಾಸನದ ವೆಂಕಟೇಶ್ವರ ಕಾಲೇಜು ಎನ್ನುತ್ತಿದ್ದರು, ವಿರಾಜಪೇಟೆ, ಗೋಣಿಕೊಪ್ಪ, ಮೈಸೂರು, ಕುಶಾಲನಗರ ಹೀಗೆ ಎಲ್ಲಾ ಊರುಗಳ ಕಾಲೇಜುಗಳನ್ನು ಹೇಳಿದರು. ನನಗೆ ವಿರಾಜಪೇಟೆಗೆ ಸೇರಬೇಕೆಂಬುದೇ ಕನಸು, ಅಲ್ಲಿಗೆ ಸೇರಿದರೇ ಕಾಲೆಜಿಗೆ ಹೋಗುವುದರ ಜೊತೆಗೆ ವ್ಯಾಪಾರ ವ್ಯವಹಾರ ಕಲಿಯಬಹುದು ಎಂದು. ನಮ್ಮಪ್ಪನಿಗೆ ಓದುವವರು ಬರೀ ಓದಲೇ ಬೇಕು. ಇದರ ಮಧ್ಯೆ ಕುಶಾಲನಗರಕ್ಕೆ ಸೇರಿದರೇ ನಮ್ಮ ತಾತನ ಮುದ್ದಿನಿಂದ ಹಾಳಾಗುತ್ತಾನೆಂಬುದು ನಮ್ಮಪ್ಪನ ವಾದ. ಕುಶಾಲನಗರಕ್ಕೆ ಸೇರಲು ನನಗೂ ಆಸೆ, ಆದರೇ ಅಲ್ಲಿ ನಮ್ಮ ತಾತ ವ್ಯವಸಾಯಕ್ಕೆ ಹಾಕುತ್ತಾರೆ, ವ್ಯವಸಾಯ ಮನೆ ಮಕ್ಕಳೆಲ್ಲಾ ಸಾಯ ಅನ್ನುವ ಹಾಗೆ ಗದ್ದೆ ಉತ್ತು ಬರುವುದು ಅಷ್ಟೊಂದು ಹಣ ಕೊಡುವುದಿಲ್ಲ ಎನ್ನುವುದು ನನ್ನ ನಂಬಿಕೆ. ಇಷ್ಟೇಲ್ಲಾ ಒದ್ದಾಟದ ನಡುವೆ ಕೊನೆಯದಾಗಿ ಆಯ್ಕೆಯಾದದ್ದು ನಮ್ಮ ದಿ ಗ್ರೇಟ್ ಕನ್ನಡ ಭಾರತಿ ಕಾಲೇಜು, ಕುಶಾಲನಗರ.

ಕಾಲೇಜಿನ ಬಹುತೇಕ ಮಾಸ್ಟರುಗಳು ನಮ್ಮ ಮಾವನಿಗೆ ಪರಿಚಯವಿದ್ದರು. ಅವರೆಲ್ಲರೂ ಬೆಟ್ಟದಪುರ ಕಡೆಯವರಾಗಿದ್ದರಿಂದ ನಮ್ಮ ಅತ್ತೆ ಹೊಸೂರಿನವರಗಾಗಿದ್ದರಿಂದ ಹೆಚ್ಚು ಕಡಿಮೆ ನೆಂಟರೇ ಆಗಿದ್ದರು. ಆ ದಿನಗಳಲ್ಲಿ ಕೆಬಿ ಕಾಲೇಜು ದೊಡ್ದ ಮಟ್ಟದ ಹೆಸರು ಮಾಡಿತ್ತು. ಅಲ್ಲಿ ಸೀಟು ಸಿಗುವುದೇ ಕಷ್ಟವೆನ್ನುವ ಮಟ್ಟಕ್ಕಿತ್ತು. ಆದ್ದರಿಂದ, ನಮ್ಮ ತಾತ ನನ್ನನ್ನು ಕಾಲೇಜಿನ ಬೋರ್ಡ್ ಮೆಂಬರು ಮತ್ತು ಆ ದಿನದಲ್ಲಿ ಕಾಂಗ್ರೇಸ್ಸಿನ ಮುಖ್ಯ ಪುಟದಲ್ಲಿದ್ದ ಚಂದ್ರಕಲಾ ಅವರ ಮನೆಗೆ ಕರೆದೊಯ್ದರು. ಅವರ ಮನೆಗೆ ಹೋದಾಗ ಅವರು ನಮ್ಮ ತಾತನಿಗೆ ನೀಡಿದ ಗೌರವ ನೀಡಿ ಬೆರಗಾಗಿ ಹೋದೆ. ನಮ್ಮ ತಾತನ ಜೊತೆ ಮಾತನಾಡುವಾಗ ಅವರು ನಿಂತೆ ಇದ್ದರು. ಸೋಮವಾರಪೇಟೆ ತಾಲ್ಲೂಕಿಗೆ ಶಾಸಕರಾಗಲಿರುವ ಚಂದ್ರಕಲಾ ನಮ್ಮ ತಾತನಿಗೆ ಇಷ್ಟೊಂದು ಗೌರವ ಕೊಡುವುದೇ? ಆ ದಿನ ನಮ್ಮ ತಾತ ಮಾತನಾಡಿದ ಇಂಗ್ಲೀಷ್ ನನ್ನನ್ನೇ ಬೆಚ್ಚಿ ಬೀಳಿಸಿತು. ಆ ಮಟ್ಟಗಿನ ಇಂಗ್ಲೀಷ್ ಅನ್ನು ನಾನು ನಂತರ ಕೇಳಿದ್ದು ನನ್ನ ಬಿಎಸ್ಸಿ ಸಮಯದಲ್ಲಿ ಗ್ಯಾಲ್ವಿನ್ ವಿಲ್ಸನ್ ಬಾಯಿಂದ. ನಮ್ಮ ತಾತನಲ್ಲಿದ್ದ ಅನೇಕಾ ಗುಣಗಳನ್ನು, ನಾವಾರು ಗುರುತಿಸಲೇ ಇಲ್ಲ. ಅದೊಂದು ಅದ್ಬುತಾ ವ್ಯಕ್ತಿತ್ವ. ಅವರ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ.

ಚಂದ್ರಕಲಾ ಅವರು, ಅವರ ನೆಂಟರೇ ಆದ ಅಖಿಲಾ ಎಂಬ ಹುಡುಗಿಯನ್ನು ಕರೆದರು. ಅವಳು ಕೆಬಿ ಕಾಲೇಜಿನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದಳು. ಇವರಿಗೆ ಒಂದು ಸೀಟನ್ನು ಮಾಡಿಕೊಡು ಎಂದರು. ಅವಳು ನನ್ನ ಅಂಕಪಟ್ಟಿ ನೋಡಿ ಆಗುವುದಿಲ್ಲವೆಂದಳು. ವಿಜ್ನಾನ ವಿಭಾಗವೆನ್ನುವಾಗ ಪ್ರಯತಿಸೋಣವೆಂದಳು. ಡೋನೆಶನ್ ಕಡಿಮೆ ಮಾಡಿಸಲು ನಮ್ಮ ತಾತ ಪ್ರಯತ್ನಿಸಿ ಅರ್ಧ ಕಟ್ಟುವಂತೆ ಒಪ್ಪಿಸಿದರು. ನಾನು ಮೊದಲನೆಯ ದಿನ ಅಲ್ಲಿ ಅರ್ಜಿ ತರಲು ಹೋಗಿದ್ದೆ. ಹೋದವನೇ, ನಮ್ಮ ಮಾವನ ಹೆಸರು ಹೇಳಿದಾಗ ಅಲ್ಲಿಯೇ ಅಖಿಲಾ ಅರ್ಜಿಯನ್ನು ನೀಡಿ ಅದನ್ನು ಭರ್ತಿಮಾಡಿದ ನಂತರ ಹಿಂದಿರುಗಿಸಲು ಹೇಳಿದಳು. ನನಗೆ ಅರ್ಜಿ ತುಂಬಿಸಲು ಸರಿಯಾಗಿ ಅರ್ಥವಾಗಲಿಲ್ಲ. ಪಕ್ಕದಲ್ಲಿಯೇ ಕುಳಿತಿದ್ದ ಒಬ್ಬಾತನನ್ನು ಕೇಳಿದೆ. ಅವನೋ, ಕಪ್ಪಗೆ ದಡೂತಿಯಂತಿದ್ದ. ಅವನು ನನ್ನನ್ನು ವಿಚಾರಿಸತೊಡಗಿದ. ನನ್ನೂರನ್ನು ಹೇಳುತ್ತಲೇ, ನಮ್ಮೂರ ಪುಟ್ಟೇಗೌಡರ ಮಗ ಕುಮಾರ ಅವನಿಗೆ ಸ್ನೇಹಿತನಂತೆ. ಅವನು ಬಿಇ ಓದಿದ್ದಾನೆಂದು ಕೆಲವರು ಹೇಳುತ್ತಿದ್ದರು, ಕೆಲವರು ಅವನು ಓದೇ ಇಲ್ಲವೆನ್ನುತ್ತಿದ್ದರು. ನನಗೆ ಅವನ ಬಗ್ಗೆ ಹೆಚ್ಚೇನೂ ತಿಳಿಯದಿದ್ದರೂ ಬಹಳ ತಿಳಿದವನಂತೆ ನಟಿಸಿದೆ. ಅವನು ನನ್ನನ್ನು ಕೇಳಿದ, science ? Arts? ನಾನು science ಎಂದೆ. ಮಿಕ್ಕಿದ್ದೆಲ್ಲವನ್ನೂ ಅವನೇ ಭರ್ತಿ ಮಾಡಿದ. ಅದರಲ್ಲಿದ್ದ, Physcis, Chemistry....ಇದಾವುದು ಅರ್ಥವಾಗಿರಲಿಲ್ಲ. ಭರ್ತಿ ಮಾಡಿದವನ ಹೆಸರು ಚನ್ನಕೇಶವ ಮೂರ್ತಿ, ಕೆಬಿ ಕಾಲೇಜಿನ ಪಿಟಿ ಮಾಸ್ಟರು.

ಇದಾದ ನಂತರ ಅಲ್ಲಿ ಇಲ್ಲಿ ಚಂಗಲು ಎತ್ತಿದೆ. ಕಾಲೇಜಿಗೆ ಸೇರುವ ದಿನ ಬಂದೇ ಬಿಟ್ಟಿತು. ನಾನು ನಮ್ಮ ಮಾವನನ್ನು ಕರೆದುಕೊಂಡು ಹೋದೆ. ನಮ್ಮ ಮಾವ ಓದಿರುವುದು ನಾಲ್ಕನೇಯ ಕ್ಲಾಸು. ಆ ಸತ್ಯ ಯಾರಿಗೂ ಗೊತ್ತಿಲ್ಲ. ಡಿಗ್ರೀ ಓದಿರಬಹುದು ಎನ್ನಬೇಕು ಆ ಮಟ್ಟಕ್ಕೆ ಅವನು ನಡೆದುಕೊಳ್ಳುತ್ತಾನೆ. ಕಾಲೇಜಿನ ಬಳಿಗೆ ಹೋದ ತಕ್ಷಣವೇ, ಅವನು ನನ್ನನ್ನು ಒಬ್ಬರ ಬಳಿಗೆ ಕರೆದುಕೊಂಡು ಹೋದ. ಅವನು ನೋಡಲು ಕಪ್ಪಿದ್ದರೂ ಲಕ್ಷಣವಾಗಿದ್ದ. ನಮ್ಮ ಮಾವ ಅವನಿಗೆ ನನ್ನ ಪರಿಚಯ ಮಾಡಿಸಿದ, ಅವನು ರಾಗ ಎಳೆದು, ಹೇಳಿದ ನಾನು ನಿಮಗೆ ತರಗತಿ ತೆಗೆದುಕೊಳ್ಳುತ್ತೇನೆ, ಚೆನ್ನಾಗಿ ಓದಬೇಕು ಎಂದು. ಪ್ರವೇಶ ಪಡೆಯುವ ಸಮಯಕ್ಕೆ ಫೋಟೋ ಬೇಕು ಎಂದರು. ನನ್ನಲ್ಲಿ ಫೋಟೋ ಇರಲಿಲ್ಲ. ಬಡ್ಡೀ ಮಕ್ಕಳು ನನ್ನನ್ನು ಓಡಿಸಿದರು. ನಾನು ಅಲ್ಲಿಂದ ಓಡಿಹೋಗಿ ಓಡಿಸ್ಸಿ ಕಲರ್ ಲ್ಯಾಬ್ ನಲ್ಲಿ ಫೋಟೋ ತೆಗೆಸಿಕೊಂಡು ಬಂದೆ. ಬಂದ ನಂತರ ಗೊತ್ತಾದದ್ದು ಫೋಟೋ ಇಲ್ಲದಿದ್ದರೂ ನಡೆಯುತಿತ್ತು ಎಂದು. ಆಗಲಿ ನನ್ನ ಫೋಟೋ ಕಾಲೇಜಿನ ರಿಜಿಸ್ಟರಿಗೆ ಅಂಟಿಸಲಾಯಿತು. ಗುರುತಿನ ಚೀಟಿಯನ್ನು ಕೊಟ್ಟರು. ಅಲ್ಲಿಗೆ ಮೊದಲ ಹಂತದ ಚುನಾವಣೆ ಮುಗಿಯಿತು.

ನಂತರ ಶುರುವಾಗಿದ್ದೇ ಕಥೆ, ನಾನು ನನ್ನೂರಿನಿಂದ ಒಡಾಡುವುದೋ? ಕುಶಾಲನಗರದಿಂದ ಎರಡು ಕೀಮೀ ದೂರವಿದ್ದ ಗುಮ್ಮನಕೊಲ್ಲಿಯಿಂದ ಓಡಾಡುವುದೋ? ಎಂಬುದು ಸಮಸ್ಯೆಗೆ ಬಂತು.ಸ್ವಲ್ಪ ದಿನ ಬಾನುಗೊಂದಿಯಿಂದ ಓಡಾಡತೊಡಗಿದೆ. ಶನಿವಾರ ಮಾತ್ರ ಬೆಳ್ಳಿಗ್ಗೆ ಒಂಬತ್ತು ಗಂಟೆಗೆ ಕಾಲೇಜು ಇರುತ್ತಿತ್ತು. ಮಿಕ್ಕಿದ ದಿನಗಳು ಹತ್ತು ಗಂಟೆಗೆ ಶುರುವಾಗುತ್ತಿತ್ತು. ಮೂರು ದಿನಗಳು ಲ್ಯಾಬೊರೇಟರಿ ಇರುತ್ತಿತ್ತು. ಆ ದಿನಗಳಲ್ಲಿ ಸ್ವಲ್ಪ ತಡವಾಗುತ್ತಿತ್ತು. ನಾನು ಬಸ್ ಹಿಡಿದು ಕೊಣನೂರು ತಲುಪಿ ಅಲ್ಲಿಂದ ಮತ್ತೆ ನನ್ನೂರಿಗೆ ಹೋಗುವಷ್ಟರಲ್ಲಿ ಕತ್ತಲಾಗುತ್ತಿತ್ತು. ಆಗ ಕುಶಾಲನಗರ ಮತ್ತು ಕೊಣನೂರಿಗೆ ಸಾಕಷ್ಟೂ ಬಸ್ಸುಗಳಿರಲಿಲ್ಲ. ಸಂಜೆ ನಾಲ್ಕು ಗಂಟೆಗೆ ಬಸ್ ಹೋದರೇ ಆರು ಗಂಟೆಯ ತನಕ ಕಾಯಬೇಕಿತ್ತು. ನಾನು ಕಾಲೇಜಿಗೆ ಬಂದ ಮೊದಲನೆಯ ದಿನ ನನ್ನ ಪಕ್ಕದಲ್ಲಿ ಅಕ್ಬರ್ ಆಲಿ ಎಂಬ ಮಹಾ ಪ್ರಜೆ ಕುಳಿತಿದ್ದ. ನಾನು ಕಂಡ ಅಮಾಯಕ ಪ್ರಜೆಗಳಲ್ಲಿ ಅಕ್ಬರ್ ಆಲಿಯೂ ಒಬ್ಬ. ಅದೆಷ್ಟೂ ಮುಗ್ದತೆಯಿತ್ತು ಎಂದರೇ, ಅವನು ಕನ್ನಡ ಮಾಧ್ಯಮದಲ್ಲಿ ಮತ್ತು ಅಲ್ಪ ಸ್ವಲ್ಪ ಉರ್ದು ಓದಿಕೊಂಡಿದ್ದವನನ್ನು ಇಲ್ಲಿ ವಿಜ್ನಾನ ವಿಭಾಗಕ್ಕೆ ಸೇರಿಸಿದ್ದರು. ಅವನಿಗೆ ಆಸೆಯಿತ್ತು ಆದರೇ ಬಹಳ ಹಿಂಜರಿಗೆ, ಕೀಳರಿಮೆ, ಭಯವಿತ್ತು. ಹೀಗೆ ಒಂದೆರಡು ದಿನಗಳಲ್ಲಿ ನನಗೆ ಲೋಕೇಶನ ಪರಿಚಯವಾಯಿತು. ನಾವಿಬ್ಬರೂ ಒಂದೇ ಬಸ್ಸಿನಲ್ಲಿ ಓಡಾಡಬೇಕಿದ್ದರಿಂದ ಬೇಗ ಪರಿಚಯವಾಗಿದ್ದಲ್ಲದೇ, ಬಹುತೇಕ ಸಮಾನ ಮನಸ್ಕರಾಗಿದ್ದೇವು. ಒಳ್ಳೆಯ ಸ್ನೇಹಿತರಾಗುವುದರಲ್ಲಿ ಅನುಮಾನವಿರಲಿಲ್ಲ. ಅಂತೇಯೇ ಒಳ್ಳೆಯ ಸ್ನೇಹಿತರೂ ಆದೆವು. ಪಿಯುಸಿಯ ಸ್ನೇಹ ನನಗೆ ಬಹಳ ಮೆಚ್ಚುಗೆಯಾಗುತ್ತದೆ. ನಾನು ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ನಮ್ಮ ಮನೆಯವರ ವಿಷಯವನ್ನು ಮಾತನಾಡಿಲ್ಲ. ಯಾರ ಮಗಾ, ಹಿನ್ನಲೆ ಏನು? ಯಾವುದೂ ಬೇಕಿಲ್ಲ. ಅಲ್ಲಿ ಬೇಕಿರುವುದು ಕೇವಲ ಸ್ನೇಹ. ನೀನು ಎಂಥವನು? ನೀನು ನನ್ನ ಭಾವನೆಗಳಿಗೆ ಹೇಗೆ ಸ್ಪಂದಿಸುತ್ತೀಯಾ? ಇಷ್ಟೇ ನಮ್ಮ ಸ್ನೇಹದ ಬುನಾದಿ.

ಕಾಲೇಜು ಶುರುವಾದ ಕೆಲವೇ ದಿನಗಳಲ್ಲಿ ಕೊನೆಯ ಬೆಂಚಿಗೆ ಲಗ್ಗೆ ಹಾಕಿದೆ. ನಾನು ಎತ್ತರದಲ್ಲಿ ಬಹಳ ಕುಳ್ಳನಾಗಿದ್ದರೂ ಅದನ್ನು ಒಪ್ಪುವ ಮನಸ್ಥಿತಿ ಇರಲಿಲ್ಲ. ನನ್ನ ಹೈಸ್ಕೂಲು ದಿನಗಳಲ್ಲಿಯೂ ಅಷ್ಟೇ ಹಿಂದಿನ ಸಾಲೇ ಬೇಕು ನನಗೆ. ಮಾಸ್ಟರುಗಳು ದಿನ ನನ್ನನ್ನು ಕರೆದು ಮುಂದಕ್ಕೆ ಕೂರಿಸಿದ್ದರೂ ಮತ್ತೆ ಹಿಂದಿನ ಸಾಲಿಗೆ ಹೋಗುತ್ತಿದ್ದೆ. ಅಂತೂ ಇಂತೂ ಕೊನೆಯ ಸಾಲಿನಲ್ಲಿ ಕೂರುವ ನನ್ನ ಹಕ್ಕನ್ನು ನಾನು ಉಳಿಸಿಕೊಂಡೆ. ಅಲ್ಲಿಂದ ಶುರುವಾಗಿದ್ದು ನಮ್ಮ ಆಟಗಳು. ಎಲ್ಲರನ್ನೂ ರೇಗಿಸುವುದು, ಚೇಡಿಸುವುದು. ಮಾಸ್ಟರುಗಳಿಗೆ ಬೆಲೆಯಿಲ್ಲ. ಪಾಠ ಮಾಡುತ್ತಿದ್ದರೇ ಹರಟೆ ಹೊಡೆಯುವುದು. ಇದು ಎಷ್ಟರ ಮಟ್ಟಿಗೆ ಹೋಯಿತೆಂದರೇ, ಕ್ಲಾಸಿನಲ್ಲಿ ನಾಳೆ ನಡೆಯುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ವಿಚಾರ ಮಾತನಾಡುತ್ತಿದ್ದರೂ ಕೂಡ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆ ಮಟ್ಟಗಿನ ಉಢಾಫೆತನ, ಉದ್ದಡತನ ಅದೆಲ್ಲಿಂದ ನಮಗೆ ಬಂತೆಂಬುದೇ ತಿಳಿಯಲಿಲ್ಲ. ನಾನಂತೂ ಪಿಯುಸಿಯೇ ನನ್ನ ಕೊನೆಯ ಅಧ್ಯಾಯವೆಂಬುದು ನನ್ನ ತೀರ್ಮಾನವಾಗಿತ್ತು. ಸಾಧ್ಯವಾದಷ್ಟೂ ಖುಷಿಯಾಗಿರಬೇಕೆಂಬುದು ನನ್ನ ಅನಿಸಿಕೆಯಾಗಿತ್ತು. ನನ್ನ ಪಿಯುಸಿ ಜೀವನದಲ್ಲಿ ಮೂರ್ನಾಲ್ಕು ಅಧ್ಯಾಯಗಳಿವೆ. ಮೊದಲನೆಯದು ನಾನು ಊರಿನಿಂದ ಬಸ್ಸಿನಲ್ಲಿ ಓಡಾಡುವುದು. ಎರಡನೆಯದು, ಕ್ಲಾಸಿನಲ್ಲಿ ನಡೆಯುತ್ತಿದ್ದ ನಮ್ಮ ಆಟೋಟಗಳು, ತಲೆ ಹರಟೆಗಳು, ಮೂರನೆಯದು ಕ್ಲಾಸಿನಿಂದ ಹೊರಗೆ ಕುಶಾಲನಗರದಲ್ಲಿ ನಡೆಸುತ್ತಿದ್ದ ದರ್ಬಾರುಗಳು, ನಾಲ್ಕನೆಯದು ನಮ್ಮ ಅಜ್ಜಿ ಮನೆಯಲ್ಲಿದ್ದು ನಡೆಸುತ್ತಿದ್ದ ಪರಾಕ್ರಮಗಳು, ಐದನೆಯದು ನಾನು ಪಿಯುಸಿಯಲ್ಲಿ ಫೇಲಾದ ಮೇಲೆ ನಡೆದ ಘಟನೆಗಳು.

ಮೊದಲನೆಯ ಅಧ್ಯಾಯಯದ ತುಣುಕುಗಳನ್ನು ನಿಮ್ಮ ಮುಂದಿಡುತ್ತೇನೆ. ನಾನು ಊರಿನಿಂದ ಓಡಾಡುವಾಗ ನನಗೆ ಓದಲು ಸಮಯ ಸಿಗುತ್ತಿರಲಿಲ್ಲ. ನಾನು ಅದೇಕೆ ಅದನ್ನು ಆಯ್ಕೆ ಮಾಡಿಕೊಂಡೆನೆಂಬುದು ತಿಳಿಯಲಿಲ್ಲ. ಆರು ಗಂಟೆಗೆ ಏಳುವುದು ಸ್ನಾನ ಮಾಡಿ ಊಟ ತಿಂಡಿ ಇಲ್ಲದೆಯೇ ಹೋಗುವುದು ಕೆಲವು ದಿನಗಳು ಏನನ್ನೋ ತಿಂದು ಹೋಗುವುದು. ನಾನು ಸರಿಯಾಗಿ ತಿಂದ ನೆನಪೇ ಇಲ್ಲ. ಜೇಬಿನಲ್ಲಿ ಕಾಸು ಇರುತ್ತಿರಲಿಲ್ಲ. ಅದರ ಜೊತೆಗೆ ಸೇದುವುದು, ಕುಡಿಯುವುದು ಪರಿಚಯವಾಗಿತ್ತು. ನಿಜಕ್ಕೂ ಹೇಳುತ್ತೇನೆ, ವಯಸ್ಸಿನ ಮಕ್ಕಳಿಗೆ ಹಣದ ಅನಿವಾರ್ಯತೆ ಅದೆಷ್ಟೂ ಬೇಕೆನಿಸುತ್ತದೆಯೆಂದರೇ ಹೇಳತೀರದು. ಮತ್ತು ಆ ಸಮಯದಲ್ಲಿರುವ ಕೀಳರಿಮೆ ಅಷ್ಟಿಷ್ಟಲ್ಲ. ನಾನು ನನ್ನ ಬಗ್ಗೆ ನಿಜಕ್ಕೂ ಹೆಮ್ಮೆ ಪಡುವುದು ನನ್ನ ಪಿಯುಸಿ ಜೀವನದ ಬಗ್ಗೆ ಮಾತ್ರ. ನನಗೆ ಈಗ ಬಹಳ ಉಢಾಫೆತನ, ಹಣದ ಬೆಲೆ ನಿಜಕ್ಕೂ ಗೊತ್ತಿಲ್ಲ, ವಸ್ತುಗಳ ಬಗ್ಗೆ ಅಂತೂ ಕಾಳಜಿ ಇಲ್ಲವೇ ಇಲ್ಲ. ಆ ದಿನಗಳಲ್ಲಿ ನನ್ನ ಬಳಿಯಿದ್ದ ಕೆಲವೇ ಕೆಲವು ಬಟ್ಟೆಗಳನ್ನು ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡೂ ಐರಾನ್ ಮಾಡುತ್ತಿದ್ದೆ. ಒಂದೇ ಒಂದು ಡಬ್ಬಲ್ ಲೈನ್ ಇರುತ್ತಿರಲಿಲ್ಲ. ನಾನ್ನು ಮತ್ತು ಲೋಕೇಶ ಇಬ್ಬರೂ ಪೈಪೋಟಿಯಲ್ಲಿ ಐರಾನ್ ಮಾಡಿ ಬರುತ್ತಿದ್ದೇವು. ಬಸ್ಸಿನ್ನಲ್ಲಿ ಓಡಾಡುವಾಗ ಬಸ್ಸಿನ ಕಂಡಕ್ಟರ್ ಗಳಿಗೆ ಬಹಳ ಕಾಡಿಸುತ್ತಿದ್ದೇವು. ನಮ್ಮ ಬಸ್ಸಿನಲ್ಲಿ ಬರುತ್ತಿದ್ದ ಎಲ್ಲಾ ಹುಡುಗ ಹುಡುಗಿಯರಿಗೂ ನಮ್ಮ ಪರಿಚಯವಿತ್ತು. ಡಿಗ್ರೀ ಕಾಲೇಜು, ಸರ್ಕಾರಿ ಕಾಲೇಜು, ಪಾಲಿಟೆಕ್ನಿಕ್ ಗೆ ಬರುತ್ತಿದ್ದವರೆಲ್ಲರು ನಮಗೆ ಪರಿಚಯವಿದ್ದರು.

ಆ ದಿನಗಳಲ್ಲಿ ಕ್ರಿಕೇಟ್ ಹುಚ್ಚು ಅಷ್ಟಿಷ್ಟಿರಲಿಲ್ಲ, ನಾನು ಹೆಚ್ಚಿನ ಕಾಲ ಲೋಕೇಶನ ಊರಾದ ಶಿರಂಗಾಲದಲ್ಲಿಯೇ ಕಳೆಯುತ್ತಿದ್ದೆ. ನಾವು ಕೆಲವೊಮ್ಮೆ ಓದುವುದಕ್ಕೆಂದು ಸಿದ್ದತೆಯನ್ನು ಮಾಡಿದ್ದೇವು, ಆದರೇ ಹೆಚ್ಚಿನ ಕಾಲ ಕ್ರಿಕೇಟ್ ಆಡುವುದರಲ್ಲಿಯೇ ಕಳೆದೆವು. ನಮ್ಮೂರಿನ ಹಲವಾರು ಜನರಿಗೆ ಅವನು ಗೊತ್ತಿತ್ತು ಮತ್ತು ಅವರೂರಿನ ಅನೇಕರಿಗೆ ನಾನು ತಿಳಿದಿತ್ತು. ನನ್ನನ್ನು ಬಹುತೇಕ ಹುಡುಗರು ಶಿರಂಗಾಲದವನೆಂದು ತಿಳಿದಿದ್ದರು. ಆ ದಿನಗಳಲ್ಲಿ ಮೊಬೈಲ್ ಇರಲಿಲ್ಲ. ನಾವು ಹಿಂದಿನ ದಿನವೇ ತಿರ್ಮಾನ ಕೈಗೊಂಡು ನಾಳೆ ಯಾವ ಬಸ್ಸಿಗೆ ಬರಬೇಕೆಂದು ತೀರ್ಮಾನಿಸುತ್ತಿದ್ದೆವು. ಅದರಂತೆಯೇ ಅವನು ಆ ಬಸ್ಸಿನ ವೇಳೆಗೆ ಅಲ್ಲಿ ಇರದಿದ್ದರೇ ನಾನು ಇಳಿದು ಅವನಿಗೆ ಕಾಯುತ್ತಿದ್ದೆ. ಶೆಟ್ಟಿ ಬಹಳ ಬುದ್ದಿವಂತ, ಅವನಿಗೆ ವ್ಯವಹಾರ ವ್ಯಾಪಾರ ಹೇಳಿ ಮಾಡಿಸುತ್ತಿತ್ತು. ನಾನು ಈಗಲೂ ಹೇಳುತ್ತೇನೆ ನಿನಗೆ ಎಂಬಿಎ ಸರಿ ಹೋಗುತ್ತಿತ್ತು ಎಂದು. ಆದರೇ ಅವನ ಲೆಕ್ಕಚಾರಗಳೇ ಬೇರೆ ಇರುತ್ತಿದ್ದವು ನೀವು ಅವಗಳನ್ನು ಕೇಳಿದರೇ ಅವನ ಮುಖವನ್ನು ನೋಡುವುದಿಲ್ಲ ಅಂಥಹ ವ್ಯಕ್ತಿ. ಅವನು ಯಾರ‍್ಯಾರ ಮೇಲೋ ಪೈಪೋಟಿ ನಡೆಸುತ್ತಿದ್ದ. ಅವರ ನೆಂಟರೆಲ್ಲರಿಗಿಂತ ಹೆಚ್ಚೂ ಓದಬೇಕು ಸಾಧಿಸಬೇಕೆಂಬುದು ಅವನ ಕನಸಾಗಿತ್ತು. ನಮ್ಮೂರಿನಲ್ಲಿ ಆಯೋಜಿಸಿದ್ದ ಕ್ರಿಕೇಟ್ ಟೂರ್ನಿಯಲ್ಲಿ ಆಡಿ ಬಹುಮಾನವನ್ನು ಗೆದ್ದ.

ನಾನು ಲೋಕಿ ಕೊಣನೂರಿನ ಮಾರುತಿ ಮಿನಿ ಟಾಕೀಸ್ ಹಲವಾರು ಬ್ಲೂ ಸಿನೆಮಾಗಳನ್ನು ನೋಡಿದ್ದೇವೆ. ಆ ದಿನಗಳಲ್ಲಿ ಅದು ಮಹಾ ಪಾಪ ಈಗಲೂ ಮಹಾ ಪಾಪ ಬಿಡಿ. ಕೊಣನೂರಿನ ಬಸ್ ಸ್ಟಾಂಡ್ ಎದುರುಗಡೆಯಲ್ಲಿಯೇ ಇತ್ತು ಮಾರುತಿ ಟಾಕೀಸ್ ಅದು ಮಹಡಿಯ ಮೇಲೆ, ಇಡೀ ಜಗತ್ತಿಗೆ ಕಾಣುತ್ತಿತ್ತು. ಅದರ ಪಕ್ಕದಲ್ಲಿಯೇ ಇದ್ದ ಎಳನೀರು ಅಂಗಡಿಯ ಅರವಿಂದ ನನಗೆ ಸ್ನೇಹಿತ. ಅವನು ಹತ್ತನೆಯ ತರಗತಿಯಲ್ಲಿ ಧುಮಕಿ ಹೊಡೆದು ಅಂಗಡಿಯ ಸಾಹುಕಾರನಾಗಿದ್ದ. ಅವನು ನಮಗೆ ಎಲ್ಲಾ ಚಿತ್ರಗಳ ವಿಮರ್ಶೆ ನೀಡುತ್ತಿದ್ದ. ಅವನು ಹೇಳಿದರೇ ಮಾತ್ರ ಹೋಗುತ್ತಿದ್ದೆವು. ಅವನ ಅಂಗಡಿಯ ಹತ್ತಿರ ನಿಂತಿದ್ದು ಹತ್ತೇ ಸೆಕಂಡುಗಳಲ್ಲಿ ಮೇಲೇರುತ್ತಿದ್ದೆವು. ಇಳಿಯುವಾಗಲೂ ಅಷ್ಟೇ ಅದೆಷ್ಟು ಬೇಗ ಇಳಿಯುತ್ತಿದ್ದೆವೆಂದರೇ ಹೇಳತೀರದು. ಕುಶಾಲನಗರದಲ್ಲಿ ಕಾವೇರಿ ವಿಡಿಯೋ ಕೂಡ ಆ ಹೊತ್ತಿಗೆ ಬಹಳ ಪ್ರಸಿದ್ದಿ ಹೊಂದಿತ್ತು. ಆದರೇ ನಾವೇಕೆ ಒಂದು ದಿನವೂ ಅಲ್ಲಿಗೆ ಹೋಗಲಿಲ್ಲವೆಂಬುದು ನಿಗೂಢ. ಅಲ್ಲಿಗೆ ಹೋಗುವುದು ಬಹಳ ಸುಲಭವಗಿತ್ತು ಆದರೂ ನಾವು ಕೊಣನೂರಿನಲ್ಲಿಯೇ ನೋಡಿದೆವು. ಒಮ್ಮೆ ವಿಜಿಯನ್ನು ಕರೆದುಕೊಂಡು ಹೋಗಿದ್ದೆ. ನನ್ನೂರಿನ ಅನೇಕ ಹುಡುಗರು ನನ್ನನ್ನು ಕೇಳಿದ್ದರೂ ಕೂಡ. ಅಲ್ಲಿ ಹೋಗಿ ಸಿನೆಮಾ ನೋಡುವುದು ಪೋಲಿತನದ ಕೆಲಸವಾಗಿತ್ತು. ನಾನು ಪೋಲಿಯೆಂಬುದು ಎಂದೋ ತೀರ್ಮಾನವಾಗಿತ್ತು.

ಎರಡನೇಯ ಆವೃತ್ತಿಯಲ್ಲಿ ನಾನು ನನ್ನಜ್ಜಿಯ ಮನೆಯಲ್ಲಿದ್ದೆ. ನಮ್ಮ ಮಾವ ಬೇಡವೆಂದರೂ ನಮ್ಮ ಕಾಲೇಜಿಗೆ ಬರುತ್ತಿದ್ದ ಕೆಲವು ಸೀನಿಯರ‍್ಸ್ ಗಳನ್ನು ಪರಿಚಯ ಮಾಡಿಸಿದ್ದ. ಅವರ ಬೆಂಬಲವೂ ಚೆನ್ನಾಗಿತ್ತು. ನನ್ನ ತಲೆ ಆ ಸಮಯದಲ್ಲಿ ನಿಲ್ಲುತ್ತಿರಲಿಲ್ಲ. ಕಾಲು ಕೆರೆದು ಜಗಳವಾಡುವುದೂ ರೂಢಿಯಾಗಿಬಿಟ್ಟಿತ್ತು. ಕ್ರೀಕೇಟ್ ಆಡುವಾಗಂತೂ ಜಗಳವಾಡದ ದಿನವೇ ಇರುತ್ತಿರಲಿಲ್ಲ. ಈಗ ನೆನಪಿಸಿಕೊಂಡರೇ ಬಹಳ ಬೇಸರವೆನಿಸುತ್ತದೆ. ಕ್ಲಾಸಿನಲ್ಲಿಯೂ ಅಷ್ಟೇ ಜಗಳವಾಡುವುದು, ಹುಡುಗರನ್ನು ರೇಗಿಸುವುದು, ಹೆದರಿಸುವುದು ಇವೆಲ್ಲವನ್ನೂ ಏಕೆ ಮಾಡಿದೆ? ನನ್ನೆಲ್ಲಾ ಚಟಗಳು ಬಲವಾಗಿದ್ದು ಆ ದಿನಗಳಲ್ಲಿ, ನಾನು ಹೆಚ್ಚೆಚ್ಚು ಕುಡಿಯತೊಡಗಿದೆ, ವಿಪರೀತ ಸಿಗರೇಟು ಸೇದತೊಡಗಿದೆ. ಅದೆಲ್ಲವನ್ನು ಅದೇಕೆ ಮಾಡಿದೆನೆಂದರೆ ಉತ್ತರವಿಲ್ಲ. ಶಿವರಾತ್ರಿಯಂದು ಕುಡಿದು ಗಲಾಟೆ ಮಾಡಿಕೊಂಡೆ, ಕುಡಿದು ಕುಶಾಲನಗಾರದ ಸರ್ಕಾರಿ ಶಾಲೆ ಮೈದಾನದಲ್ಲಿ ಬಿದ್ದಿದ್ದೆ. ಕುಡುಕನೆಂಬ ಹೆಸರು ಬಳುವಳಿಯಾಗಿ ಬಂದದ್ದು ಅಂದೆ. ನನಗಿಂದಿಗೂ ಸ್ಪಷ್ಟವಾಗಿ ನೆನಪಿದೆ, ಅಂದು ಮಾರ್ಚ್ ತಿಂಗಳ 20ನೇ ತಾರಿಖು 2000ದ ಇಸವಿ, ಶಿವರಾತ್ರಿಯ ದಿನ. ನನಗೆ ಆಗ, ನಮ್ಮ ಕ್ಲಾಸಿನವರಲ್ಲದೇ ಆರ್ಟ್ಸ್ ಮತ್ತು ಕಾಮರ್ಸ್ ಹುಡುಗರೂ ಸ್ನೇಹಿತರಾಗಿದ್ದರು. ನಮ್ಮ ಕ್ಲಾಸಿನಲ್ಲಿ ಕುಡಿಯುವವರ ಸಂಖ್ಯೆ ಬಹಳ ಕಡಿಮೆಯಿತ್ತು, ಅದೇ ವರ್ಷದ ಹೊಸ ವರ್ಷದ ದಿನ ಅವರೆಲ್ಲರೂ ಪರಿಚಯವಾಗಿದ್ದರು. ಅವರೊಂದಿಗೆ ಶಿವರಾತ್ರಿಯಂದು ಸಂಜೆ ಒಂಬತ್ತರ ಸುಮಾರಿಗೆ ಕಾಳೇಘಾಟ್ ಬಾರಿನಲ್ಲಿ ಕುಡಿಯುವುದಕ್ಕೆ ಕುಳಿತು ಮುಗಿಯುವಾಗ ರಾತ್ರಿ ಒಂದು ಗಂಟೆಯಾಗಿತ್ತು. ಅಲ್ಲಿಂದ ಬಂದವರು ಕುಣಿಯುತ್ತಾ, ಸರ್ಕಾರಿ ಶಾಲೆ ಮೈದಾನವನ್ನು ತಲುಪಿದೆವು. ಬರುವ ಮಧ್ಯದಲ್ಲಿ ಯಾರೋ ಒಬ್ಬ ನಮ್ಮನ್ನು ದುರುಗುಟ್ಟಿ ನೋಡಿದನೆಂದು ಅವನೊಂದಿಗೆ ಜಗಳವಾಡಿ ಬಂದೆವು. ಮೈದಾನಕ್ಕೆ ಬಂದವನು, ಯತೀಶ ಕುಡಿಯುತ್ತಿದ್ದ ಒಂದು ಫುಲ್ ಬಾಟಲಿ ರಮ್ ಅನ್ನು ಕಿತ್ತುಕೊಂಡು ಗಟ ಗಟ ಎಂದು ಕುಡಿದುಬಿಟ್ಟೆ, ಕುಡಿದನ್ನು ಬಿಟ್ಟರೇ ಮತ್ತೇನೂ ನೆನಪಿಲ್ಲ ನನಗೆ. ಮುಂಜಾನೆ ಎದ್ದು ನೋಡಿದರೇ, ಮೈಮೇಲೆಲ್ಲ ವಾಂತಿಯ ಗುರುತುಗಳು, ನನಗೆ ನನ್ನ ಮೇಲೆ ಅಸಹ್ಯವೆನಿಸತೊಡಗಿತ್ತು, ಅಲ್ಲಿಂದ ಬರಿಗಾಲಲ್ಲಿ ನಡೆದು ಹಾಸ್ಟೇಲ್ ತಲುಪಿದೆ, ಸ್ವಲ್ಪ ಹೊತ್ತು ಕುಳಿತು ನಂತರ ನದಿಯ ದಂಡೆಗೆ ಹೋದೆ. ಸ್ನಾನ ಮಾಡಲೂ ತ್ರಾಣವಿರಲಿಲ್ಲ. ಅದು ಹೇಗೆ ನಡೆದುಕೊಂಡು ಮನೆ ಸೇರಿದೇನೋ ನೆನಪಿಲ್ಲ, ಬಂದವನ ರೂಮಿನಲ್ಲಿ ಮಲಗಿದೆ. ಮನೆಯಲ್ಲಿ ಆ ವೇಳೆಗೆ ನಾನು ಕುಡಿದು ಜಗಳ ಮಾಡಿಕೊಂಡಿರುವ ವಿಷಯ ತಲುಪಿತ್ತು. ಅಜ್ಜಿ ಮತ್ತು ಅಮ್ಮಾ ಕ್ಲಾಸು ತೆಗೆದುಕೊಂಡರು.

ನಾನು ಕುಡಿದು ಜಗಳ ಮಾಡಿಕೊಂಡಿದ್ದ ವಿಷಯವನ್ನು ಮನೆಗೆ ತಲುಪಿಸಿದ್ದು, ಅಂಗಡೀ ಕಿರಣನ ತಾಯಿ. ಸ್ವಲ್ಪ ದಿನಗಳ ಹಿಂದೆ ಕಿರಣನಿಗೆ ಹೊಡೆದಿದ್ದೆವು. ಅವನು ನಮ್ಮ ನೆಂಟರ ಹುಡುಗಿಯ ಹಿಂದೆ ಸುತ್ತಾಡುತ್ತಿದ್ದಾನೆಂದು ತಿಳಿದು, ಕೂಡ್ಲೂರಿನ ಸೋಮಾ ಬಂದು ನನ್ನನ್ನು ಕೇಳಿದ, ನಿಮ್ಮೂರಿನ ಹುಡುಗ ಹೀಗೆ ಮಾಡುತ್ತಿದ್ದಾನೆ, ಏನು ಮಾಡಲಿ ಎಂದು. ಅದಕ್ಕೆ ನಾನು, ನಾನು ಸೇರುತ್ತೇನೆಂದು ಹೇಳಿ ಜೊತೆಯಲ್ಲಿ ಹೊಡೆದಿದ್ದೆವು. ಇದನ್ನೇ ಬಳಸಿಕೊಂಡ ಅವನು ನನ್ನ ಬಗ್ಗೆ ಮನೆಯಲ್ಲಿ ಚೆನ್ನಾಗಿಯೇ ಪುಂಗಿ ಊದಿಸಿದ್ದ. ನಮ್ಮಮ್ಮ ಬಂದವರು, ನನ್ನನ್ನು ದೇವರ ಮನೆಗೆ ಕರೆದೊಯ್ದು, ಆಣೆ ಪ್ರಮಾಣ ಮಾಡಿಸತೊಡಗಿದರು. ಆ ಸಮಯದಲ್ಲಿ ನಮ್ಮಜ್ಜಿ ಹೇಳಿದ ಮಾತು ಮತ್ತು ಅವರು ಅದನ್ನು ನಿಭಾಯಿಸಿದ ರೀತಿ ಅದ್ಬುತವೆನಿಸುತ್ತದೆ. ನಾನು ಹಿಂದೆ ಮುಂದೆ ಯೋಚಿಸುತ್ತಿದ್ದೆ, ಸುಮ್ಮನೆ ಪ್ರಮಾಣ ಮಾಡಿ ನಾಳೆ ದಿನ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ನಾನು ಸುಮ್ಮನೆ ಮಾತು ಕೊಟ್ಟು ಪಜೀತಿಗೆ ಸಿಕ್ಕಿ ಹಾಕಿಕೊಂಡಿರುವುದು ಕೇವಲ ಒಂದು ವಿಷಯದಲ್ಲಿ, ಅದು ಪ್ರೀತಿಯ ವಿಷಯದಲ್ಲಿ ಮಾತ್ರ. ಬೇರೆಯವರಿಗೆ ಆಗುವುದಿಲ್ಲವೆನ್ನಬಹುದು, ಆದರೇ ಹುಡುಗಿಯರ ವಿಷಯದಲ್ಲಿ ಮಾತ್ರ ನಾನು ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದೇನೆ. ನಾವು ಒಂದನ್ನು ಹೇಳಿದರೇ ಈ ಹುಡುಗಿಯರ ಮತ್ತೊಂದಾಗಿ ಅರ್ಥೈಸಿಕೊಳ್ಳುತ್ತಾರೆ. ಮದುವೆಯ ವಿಷಯದಲ್ಲಿಯಾದರೂ ಸರಿ ಪ್ರೇಮೆ ಸಲ್ಲಾಪವಾದರೂ ಸರಿ. ನೇರವಾಗಿ ನಾನು ನಿನ್ನನ್ನು ಮದುವೆಯಾಗುವುದಿಲ್ಲವೆಂದು ಯಾವ ಹುಡುಗಿಯ ಎದುರುಗಡೆಯಲ್ಲಿಯೂ ಹೇಳಲಾಗುವುದಿಲ್ಲ. ಅದರಂತೆಯೇ ಅವರಲ್ಲಿ ಏನಾದರೂ ಕೊಂಕಿದ್ದರೂ ಹೇಳಲಾಗುವುದಿಲ್ಲ. ಸ್ವಲ್ಪ ರೇಗಿದರೂ ಅಲ್ಲಿ ಮಹಬಾರತವಾಗುತ್ತದೆ. ಹೋಗಲಿ ಬಿಡಿ. ಅಜ್ಜಿ ಬಂದು ಅಮ್ಮನಿಗೆ ಹೇಳಿದರು, ನೋಡು ನೀನು ಆಣೆ ಪ್ರಮಾಣ ಮಾಡಿದ ಮಾತ್ರಕ್ಕೆ ಅವನು ಅದನ್ನೆಲ್ಲಾ ನಿಲ್ಲಿಸುವುದಿಲ್ಲ. ಒಳ್ಳೆಯ ಮಾತಿನಿಂದ ಹೇಳು, ಹೀಗೆಲ್ಲಾ ಮಾಡಬೇಡ, ಅಪ್ಪನ ಮರ‍್ಯಾದೆ ವಿಷಯ ಹಾಗೇ ಹೀಗೆ ಎಂದು ಒಂದತ್ತು ನಿಮಿಷ ಕಥೆ ಹೇಳಿದರು. ಆ ವಯಸ್ಸಿನಲ್ಲಿ, ಅದನ್ನೆಲ್ಲ ಕೇಳುವ ತಾಳ್ಮೆಯಾರಿಗಿತ್ತು. ನಾನು ಯೋಚನೆ ಮಾಡಿದೆ, ನನಗೆ ಚಿಂತೆ ಇದ್ದದ್ದು ಅಪ್ಪನದ್ದಲ್ಲ, ನಮ್ಮಮ್ಮನದ್ದು, ಅವರಿಗೆ ಮೊದಲೇ ಉಷಾರಿರಲಿಲ್ಲ. ನನ್ನ ಬಗ್ಗೆ ಯೋಚನೆ ಮಾಡಿ ಹಾಸಿಗೆ ಹಿಡಿದರೆಂಬ ಭಯವಾಯಿತು. ನನಗೆ ಇಂದಿಗೂ ಅಷ್ಟೇ ನಮ್ಮಮ್ಮನದ್ದೇ ಚಿಂತೆ, ಅವರು ಒಬ್ಬರೇ ಕುಳಿತು ಯೋಚನೆ ಮಾಡುತ್ತಾರೆ. ತಿಂಗಳಲ್ಲಿ ಹದಿನೈದು ದಿವಸ ಹಾಸಿಗೆ ಹಿಡಿದಿರುತ್ತಾರೆ. ಅಂತೂ ಅಲ್ಲಿಂದ ತಪ್ಪಿಸಿಕೊಂಡೆ ಎನಿಸಿತು. ಕುಡಿಯುವುದನ್ನು ನಿಲ್ಲಿಸಲಿಲ್ಲ, ಆದರೆ ಎಚ್ಚರಿಕೆ ವಹಿಸಿದೆ. ಜಗಳವಾಡುವುದನ್ನು ಕಡಿಮೆಮಾಡಿದೆ.

ಆ ದಿನಗಳಲ್ಲಿ ಅನುಭವಿಸಿದ ನರಕಯಾತನೆ ಹೇಳತೀರದು. ಜನರು ಕುಡಿಯುತ್ತಾರೆ, ಆದರೇ ನನ್ನನ್ನು ಕುಡುಕನೆಂದು ಕರೆಯುತ್ತಾರೆ. ಇದೆಂಥಹ ವಿಚಿತ್ರವೆನಿಸಿತ್ತು. ನನ್ನೊಂದಿಗೆ ಕುಡಿದ ಹತ್ತು ಹದಿನೈದು ಹುಡುಗರೆಲ್ಲರೂ ಸಾಚಾಗಳು, ನಾನು ಮಾತ್ರ ಕುಡುಕನಾದೆ. ಜನರ ಬಗ್ಗೆ ಬಹಳ ಅಸಹ್ಯವೆನಿಸಿತ್ತು. ಅದಾದ ಮೇಲೆ ಹನ್ನೆರಡು ಶಿವರಾತ್ರಿ ನಡೆದಿದೆ, ಇಲ್ಲಿಯ ತನಕವೂ ಒಂದೇ ಒಂದು ಶಿವರಾತ್ರಿಯ ದಿನ ಕುಡಿದಿಲ್ಲ ನಾನು. ನಾನು ಆ ಒಂದು ದಿನ ನಡೆದುಕೊಂಡ ರೀತಿಗೆ ಇಂದಿಗೂ ಮರುಗುತ್ತೇನೆ, ಇಂದಿಗೂ ಅಷ್ಟೇ ಬಹಳ ಎಚ್ಚರಿಕೆಯಿಂದ ಇದ್ದೇನೆ. ಜನರು ನಾವು ಕೆಳಗೆ ಬಿದ್ದಾಗ ಬಹಳ ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಾರೆ, ಅವರಿಗೆ ಮಾತ್ರವೇ ಮಾನ, ಮರ‍್ಯಾದೆ, ಗೌರವ, ಸ್ವಾಭಿಮಾನವಿರುವುದೆಂದು ಬಿಂಬಿಸಿಕೊಳ್ಳುತ್ತಾರೆ. ನಾನು ಅಂದು ಅವರಾರಿಗೂ ಬೈಯ್ಯಲಿಲ್ಲ, ಆದರೇ ದೇವರಲ್ಲಿ ಕ್ಷಮೆ ಕೇಳಿದೆ, ಯಾಕೆ ನನ್ನನ್ನು ಹೀಗೆ ಮಾಡಿದೆ ಎಂದೆ. ನನ್ನದು ತಪ್ಪಿತ್ತು. ಯಾವುದೇ ಆಗಲೀ ಇತಿ ಮಿತಿಯಲ್ಲಿದ್ದರೇ ಮರ‍್ಯಾದೆ. ನಾನು ಮಿತಿ ಮೀರಿದ್ದೆ, ನನ್ನ ಅಹಂಗೆ ಕೊನೆಯಿರಲಿಲ್ಲ. ನಾನು ಬದಲಾದೆ, ಬುದ್ದಿ ಕಲಿತೆ, ಬುದ್ದಿ ಕಲಿತೆ ಎನ್ನುವುದಕ್ಕಿಂತ ಪರಿಸ್ಥಿತಿ ಕಲಿಸಿತೆಂದರೂ ಸರಿಯೇ...ಒಮ್ಮೊಮ್ಮೆ ನನಗೆ ಎನಿಸುತ್ತದೆ, ಆ ದಿನ ನನ್ನ ಜೊತೆ ಕುಡಿದವರು, ನನ್ನನ್ನು ಕುಡುಕನೆಂದು ಗೇಲಿ ಮಾಡಿದವರೆಲ್ಲಾ ಸುದ್ದಿಯೇ ಇಲ್ಲದಂತಿದ್ದಾರೆ. ನನ್ನನ್ನು ಕಂಡರೇ ಮಾತನಾಡಲು ಹಿಂಜರಿಯುತ್ತಾರೆ, ಅನುಮಾನವೂ ಇದೆ, ಒಂದು ಇವನು ನಿಜಕ್ಕೂ ಬದಲಾದನಾ? ಎಂದು, ಮತ್ತೊಂದು ಇದೆಲ್ಲಾ ಹಣೆಬರಹವಾ ಎಂದು..ಅವಮಾನವಾದಾಗ ಮಾತ್ರ ಬೆಳೆಯುತ್ತೇವೆ, ಅದನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಳ್ಳಬೇಕು, ಸೇಡಾಗಿ ಬೆಳಸಬಾರದು. ಸೋಲಿಗೆ ಕೊನೆಯಿಲ್ಲ, ಗೆಲುವಿಗೂ ಕೊನೆಯಿಲ್ಲ. ನಂಬಿಕೆಯ ಮೇಲೆ ನಿಂತಿರುತ್ತದೆ, ಬದುಕು, ನಮ್ಮ ಬದುಕಿನ ಎಲ್ಲಾ ಆಗು ಹೋಗುಗಳಿಗೆ ಕಾರಣ ಮೂವರು. ಒಂದು ನಾವು, ಮತ್ತೊಂದು ಪರಿಸ್ಥಿತಿ ಮಗದೊಂದು ಕಾಣದ ಕೈ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...